ಪರ್ಕಳದ ಕೃಷಿ ಕುಟುಂಬದ ಶೇಷಗಿರಿರಾವ್ ಮತ್ತು ಲಕ್ಷ್ಮಿ ದಂಪತಿಗಳಿಗೆ ಇಬ್ಬರು ಮಕ್ಕಳು, ದೊಡ್ಡ ಮಗ ಗಿರಿಧರ, ಅವನಿಗಿಂತ ಎರಡು ವರ್ಷ ಸಣ್ಣವ ಗಿರೀಶ. ಒಂದೇ ತಾಯಿಯ ಮಕ್ಕಳಾದರೂ ಸ್ವಭಾವಗಳಲ್ಲಿ ಭಿನ್ನತೆ…
ಅಲ್ಲಾ… ಅದೇ ನಿಮ್ಮ ತಮ್ಮ, ದುಬೈ ಪಾರ್ಟಿ, ಮದ್ವೆಗೆ ಕರಿಮಣಿನ ನಮ್ಮ ಹತ್ರ ತರಿಸುವುದೇಕೆ? ದುಬೈಯಲ್ಲಿ ಚಿನ್ನ ಚೀಪ್ ಅಂತೆ. ಅಲ್ಲದೆ ದುಬೈಯ ಚಿನ್ನ ಪಳಪಳ ಹೊಳೆಯುತ್ತದೆ. ಅಂತವರಿಗೆ ನಮ್ಮ ಪರ್ಕಳದ ಚಿನ್ನವೇ ಏಕೆ ಬೇಕು?’’ ಹೆಂಡತಿ ಶಾಂಭವಿ ಮಳೆಗಾಲದ ಕಪ್ಪೆಯಂತೆ ನಾನ್ಸ್ಟಾಪ್ ವಟಗುಟ್ಟಿದಾಗ ಕಾರು ಬಿಡುತ್ತಿದ್ದ ಗಿರಿಧರ ಮಾತನಾಡಲಿಲ್ಲ. ಶಾಂತಿ ಬೇಕೆಂದರೆ ಹೆಂಡತಿ ಹೇಳಿದ್ದಕ್ಕೆಲ್ಲ ಉತ್ತರ ಕೊಡದೆ ಸುಮ್ಮನೆ ಗೋಣಾಡಿಸಿದರೆ ಹೆಚ್ಚು ಸೂಕ್ತವೆಂದು ಇತ್ತೀಚೆಗೆ ಕಂಡುಕೊಂಡಿದ್ದರು. ಕಾರಿನಲ್ಲಿ ಹಿಂದೆ ಕೂತಿದ್ದ ಮಗಳು ಗ್ರೀಷ್ಮ ಹೊರಗೆ ನೋಡುತ್ತಿದ್ದಳು. ೧೩ ವರ್ಷದ ಹುಡುಗಿ ಊರು ಬಿಟ್ಟು ಬೆಂಗಳೂರಿಗೆ ಅಪ್ಪಯ್ಯನ ಕಾರಿನಲ್ಲಿ ಹೊರಟಿದ್ದು ಇದೇ ಮೊದಲು. ಸಂತೋಷದಿAದ ಕಣ್ಣು ಬಿಟ್ಟುಕೊಂಡು ಅತ್ತಿತ್ತ ನೋಡುತ್ತಿದ್ದಳು.
“ಅಲ್ಲಾ…. ನಿಮ್ಮ ತಮ್ಮ ಗಿರೀಶನ ಹೆಂಡತಿ ರಾಧಿಕಾ ಕಳೆದ ಸಲ ಊರಿಗೆ ಬಂದಾಗ ಮೈತುಂಬಾ ಚಿನ್ನ ಹೇರಿಕೊಂಡು ಬಂದದ್ದನ್ನು ನೋಡಿದ್ರಾ? ನೀವು ಕಾಣುವುದಾದ್ರೂ ಹ್ಯಾಂಗೆ! ನೀವಾಯಿತು, ನಿಮ್ಮ ಪೇಪರಾಯಿತು ಎಂದುಕೊಂಡವರು. ಯಾರನ್ನು ಮದ್ವೆ ಆದ್ರೂ ದಿನಪತ್ರಿಕೆಯವರನ್ನು ಮಾತ್ರ ಮದ್ವೆ ಮಾಡ್ಕೊಳ್ಳಬಾರದು, ಅದೂ ಸಣ್ಣ ಮಟ್ಟದಲ್ಲಿರುವ ಅಂತವರಿಗೆ ಅರ್ಧ ಹೊಟ್ಟೆ ಊಟವೇ ಗತಿ” ಗಿರಿಧರನಿಗೆ ಮೈ ಉರಿದುಹೋಯಿತು. ಅಲ್ಲ, ಇವಳಿಗೆ ಏನು ಕಡ್ಮೆ ಆಗಿದೆ ಅಂತ ಕೂಗಾಡುತ್ತಿದ್ದಾಳೆ? ಗಿರಿಧರನ ಮುಖ ಕೆಂಪಾಯಿತು “ಯಾವತ್ತು ನೀನು ಅರ್ಧ ಹೊಟ್ಟೆ ಊಟ ಉಂಡಿರುವುದು? ಹಾಂ…. ದೊಡ್ಡ ಬ್ಯಾಂಕ್ ಬ್ಯಾಲೆನ್ಸ್, ಚಿನ್ನ ಬಣ್ಣ ಇಲ್ಲದಿರಬಹುದು, ಆದರೆ ನನಗೆ ಬಿಡು ನಿನಗೂ ಊರಿನಲ್ಲಿ ಎಷ್ಟೊಂದು ಗೌರವವಿದೆ. ‘ಅಗ್ಗಿಷ್ಟಿಕೆ’ ಪೇಪರಿನ ಎಡಿಟರ್ ಹೆಂಡತಿ ಎಂದು ಎಲ್ಲರೂ ನಿನ್ನನ್ನು ಗೌರವಿಸುವವರೇ. ಕೇಳು ರಾಧಿಕಾಳ ಹತ್ರ, ದುಬೈ ಪೇಟೆಯಲ್ಲಿ ಎಷ್ಟು ಜನರಿಗೆ ಅವಳ ಮತ್ತು ಅವಳ ಗಂಡನ ಬಗ್ಗೆ ಗೊತ್ತುಂಟೆಂದು?’’ ಸವಾಲೆಸಿದರು. ಶಾಂಭವಿ ಗಂಡನ ಮಾತನ್ನು ಕೇಳಿಯೂ ಕೇಳಿಸಿಕೊಳ್ಳದಂತೆ ಸುಮ್ಮನಿದ್ದಳು. ಈ ಗೌರವವನ್ನು ಚಿನ್ನದ ಸರದಂತೆ ಕಟ್ಟಿ ಕುತ್ತಿಗೆಗೆ ಹಾಕಿ ಕೊಳ್ಳಲಾಗುತ್ತದಾ? ಬೇರೆ ಕೆಲಸವಿಲ್ಲ ಎಂದುಕೊAಡಳು.
ಕಾರಿನ ಸ್ಪೀಡನ್ನು ಜಾಸ್ತಿ ಮಾಡುತ್ತಿದ್ದಂತೆ ಸಾಲು ಸಾಲು ಹಸುಗಳು ಕಾರಿಗೆ ಅಡ್ಡವಾಗಿ ಬಂದವು. ಅವುಗಳಿಗಾಗಿ ಕಾರನ್ನು ಸ್ವಲ್ಪ ಹೊತ್ತು ನಿಲ್ಲಿಸಬೇಕಾಯಿತು. “ಅಪ್ಪಯ್ಯ, ಇವುಗಳಲ್ಲಿ ಗೀರ್ ಹಸುಗಳಿವೆಯಾ?’’ ಕೂಡಲೆ ಗಿರಿಧರ “ಮುಂದೆ ಇದ್ದ ಮೂರು ಹಸುಗಳು ಗೀರ್ ಹಸುಗಳಿರಬೇಕು. ಗೀರ್ ಹಸುಗಳು ಹೆಚ್ಚಾಗಿ ಕೆಂಪು ಮಿಶ್ರಿತ ಹೊನ್ನಿನ ಬಣ್ಣ ಅಥವಾ ಬಿಳಿ ಬಣ್ಣದಲ್ಲಿದ್ದು ಹಣೆ ಅಗಲವಾಗಿರುತ್ತದೆ, ಕೋಡು ಹಿಂದಕ್ಕೆ ತಿರುಚಿಕೊಂಡಿದ್ದು ಬಾಲ ಬಹಳ ಉದ್ದವಾಗಿರುತ್ತದೆ. ಉದ್ದ ಕಿವಿ ಜೋತು ಬಿದ್ದಿರುತ್ತದೆ.” ಇಷ್ಟು ಹೊತ್ತು ಎಲ್ಲಿದ್ದವೋ ಆಕಾಶದಲ್ಲಿ ಕಪ್ಪು ಮೋಡಗಳು ಒಂದನ್ನೊಂದು ಅಟ್ಟಿಸಿಕೊಂಡು ಬಂದವು. “ಅಯ್ಯೋ… ಕತ್ತಲಾಗುತ್ತ ಬಂತು, ಬೆಂಗ್ಳೂರು ತಲ್ಪುವಾಗ ಮಧ್ಯರಾತ್ರಿಯಾಗುವುದು ಖಂಡಿತ. ನಾಳೆ ಬೆಳಗ್ಗೆ ೯ ಗಂಟೆಗೇ ದಾರೆ ಮುಹೂರ್ತ. ನಾವಿಲ್ಲದಿದ್ದರೂ ಮದ್ವೆ ನಡೆಯುತ್ತೆ, ಆದ್ರೆ ಹುಡುಗಿಗೆ ಕಟ್ಟುವ ಕರಿಮಣಿ ನಮ್ಮ ಹತ್ರವೇ ಇದೆ. ಅಲ್ಲ ನಿಮ್ಮ ಹತ್ರ ಬೆಳಗ್ಗೆಯೇ ಹೊರಡ್ವಾ ಅಂದೆ, ನೀವು ನನ್ನ ಮಾತನ್ನು ಕೇಳಿಸಿಕೊಳ್ಳಬೇಕಲ್ಲ! ಹೊರಡುವಾಗಲೇ ಗಂಟೆ ಮೂರು ಕಳೆದಿತ್ತು’’ ಮತ್ತೆ ಜರಿಯತೊಡಗಿದಳು ಶಾಂಭವಿ.
ಬೆಳಗ್ಗೆಯೇ ಬೆಂಗಳೂರಿಗೆ ಹೊರಡುವ ಪ್ಲಾನ್ ಇದ್ದು ಹೆಂಡತಿ, ಮಕ್ಕಳು ರೆಡಿಯಾಗಿದ್ದರು ಕೂಡ. ತಮ್ಮ ಷಷ್ಟ್ಯಬ್ದದ ಪ್ರಯುಕ್ತ ಒಂದು ದೊಡ್ಡ ಜಾಹೀರಾತು ಕೊಡಲು ಬೆಳಗ್ಗೆ ಒಂಭತ್ತು ಗಂಟೆಗೆ ಆಫೀಸಿಗೆ ಬರುತ್ತೇನೆಂದ ಪೈಗಳು ಬಂದದ್ದು ೧ ಗಂಟೆಗೆ. ಸಲೀಮ ಸಹಾಯಕ್ಕಿದ್ದರೂ ದೊಡ್ಡ ಮೊತ್ತದ ಜಾಹೀರಾತು ತಂದಾಗ ಮರ್ಯಾದೆ ಕೊಡಲು ನಾನಿರಬೇಕಲ್ಲವೇ? ಇದೆಲ್ಲ ಇವಳಿಗೆ ಹೇಳಿದರೆ ಎಲ್ಲಿ ಗೊತ್ತಾಗುತ್ತದೆ? ಪೂರಾ ಎರಡು ಪೇಜಿನ ಬಣ್ಣದ ಜಾಹೀರಾತು ಎಂದರೆ ಸಣ್ಣ ಮೊತ್ತವಲ್ಲ. ದಿನಪತ್ರಿಕೆ ನಡೆಸುವುದು ಸಣ್ಣ ಮಾತಲ್ಲ, ಕಪ್ಪೆಗಳನ್ನು ತಕ್ಕಡಿಯಲ್ಲಿ ಇಟ್ಟುಕೊಂಡು ನಡೆಯುವ ಬದುಕು, ಅದರೊಂದಿಗೆ ಮನೆಯವರ ಸಹಕಾರವೂ ಇಲ್ಲವೆಂದರೆ? ತನಗೆ ಎಷ್ಟು ಹೇಳಿದರೂ ಸಹಿಸಬಹುದು, ಅದೇ ನಾನೇ ಶುರು ಮಾಡಿದ, ತನಗೆ ಗೌರವ ತಂದ ದಿನಪತ್ರಿಕೆಯ ಬಗೆಗೆ ಯಾರಾದರೂ ಏನಾದರೂ ಹೇಳಿದರೆ ಸಹಿಸುವುದು ಅಸಾಧ್ಯ. ದಿನಪತ್ರಿಕೆ ‘ಅಗ್ಗಿಷ್ಟಿಕೆ’ ನನ್ನ ಗೌರವ, ನನ್ನ ಹೆಮ್ಮೆ. ಹೀಗೆ ಆಲೋಚಿಸುತ್ತಿದ್ದಾಗ ಪತ್ರಿಕೆ ಪ್ರಾರಂಭಿಸಿದ ದಿನಗಳು ನೆನಪಾದವು ಗಿರಿಧರನಿಗೆ…
* * *
ಪರ್ಕಳದ ಕೃಷಿ ಕುಟುಂಬದ ಶೇಷಗಿರಿರಾವ್ ಮತ್ತು ಲಕ್ಷ್ಮಿ ದಂಪತಿಗಳಿಗೆ ಇಬ್ಬರು ಮಕ್ಕಳು, ದೊಡ್ಡ ಮಗ ಗಿರಿಧರ, ಅವನಿಗಿಂತ ಎರಡು ವರ್ಷ ಸಣ್ಣವ ಗಿರೀಶ. ಒಂದೇ ತಾಯಿಯ ಮಕ್ಕಳಾದರೂ ವಿರುದ್ಧ ಸ್ವಭಾವ.
ಗಿರಿಧರ ಬಾಲ್ಯದಲ್ಲೇ ಆಟ ಪಾಠವೆರಡರಲ್ಲೂ ಬಹಳ ಚುರುಕು. ಎಸ್ಎಸ್ಎಲ್ಸಿಯಲ್ಲಿ ಒಳ್ಳೆಯ ಅಂಕ ಬಂದಾಗ ಸೈನ್ಸ್ ತೆಗೆದುಕೊಂಡು ಡಾಕ್ಟರೋ ಎಂಜಿನಿಯರೋ ಆಗೆಂದು ಎಲ್ಲರೂ ಒತ್ತಾಯ ಮಾಡಿದರೂ ‘ನನ್ನ ಗುರಿಯೇ ಬೇರೆ, ಗ್ರಹಣ ಹಿಡಿದ ಸಮಾಜವನ್ನು ಸುಧಾರಿಸಬೇಕು’ ಎಂದು ಕನಸುಕಂಡು ಅದಕ್ಕಾಗಿ ಪಿಯುಸಿಯಲ್ಲಿ ಆರ್ಟ್ಸ್ ತೆಗೆದುಕೊಂಡು ಪೊಲಿಟಿಕಲ್ ಸೈನ್ಸ್ ಸಬ್ಜೆಕ್ಟನ್ನು ಬಹಳ ಪ್ರೀತಿಯಿಂದ ಓದಿ ಜರ್ನಲಿಸಂ ಮುಗಿಸಿದ. ನಾಲ್ಕಾರು ವರ್ಷಗಳ ಕಾಲ ಬೆಂಗಳೂರಿನ ಕೆಲವು ಪತ್ರಿಕೆಗಳಲ್ಲಿ ಕೆಲಸ ಮಾಡಿ ತನ್ನದೇ ಪತ್ರಿಕೆ ಶುರು ಮಾಡುವ ಕನಸು ಹೊತ್ತು ಊರಿಗೆ ವಾಪಸ್ಸಾದ. ಊರಿಗೆ ಬಂದಾಗ ತಂದೆತಾಯಿಗೆ ವಯಸ್ಸಾಗಿತ್ತು. ಕೃಷಿಕ ಕುಟುಂಬವಾದರೂ ಕೃಷಿ ಮಾಡದೆ ಗದ್ದೆಗಳು ಹಾಳುಬಿದ್ದಿತ್ತು. ಜನರ ಅನ್ನದ ಬಟ್ಟಲಾದ ಕೃಷಿಯನ್ನು ಅಭಿವೃದ್ಧಿಪಡಿಸಬೇಕೆಂದು ಲೋನ್ ತೆಗೆದುಕೊಂಡು ಕೃಷಿ ಸುಧಾರಿಸಲು ಹೊರಟಾಗ ರೈತನ ನಿಜವಾದ ತೊಂದರೆ ಅರಿವಿಗೆ ಬಂತು. ಅಷ್ಟರಲ್ಲಿ ಸ್ವಂತ ಪೇಪರ್ ಶುರು ಮಾಡುವ ಕನಸು, ಕನಸಿನಲ್ಲೂ ಕೈಗೆಟುಕುವುದು ಕಷ್ಟವಾಗಿ ತೋರಿತು.
ತಮ್ಮ ಗಿರೀಶನದ್ದು ಒಂದು ತರಹದ ಭೋಳೆ ಸ್ವಭಾವ, ಎಲ್ಲವನ್ನೂ ಎಲ್ಲರನ್ನೂ ನಂಬುವವ, ಕಲಿಯುವುದರಲ್ಲೂ ಅಷ್ಟಕ್ಕಷ್ಟೆ. ಇವನು ಊರಿನಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡೋ, ಇಲ್ಲಾ ಕೃಷಿ ಮಾಡಿಕೊಂಡೋ ಇರಲು ಲಾಯಕ್ಕೆಂದು ಎಲ್ಲರೂ ಸರ್ಟಿಫಿಕೇಟ್ ಕೊಟ್ಟಿದ್ದರು. ಆದರೂ ಹೇಗೂ ಮೆಕ್ಯಾನಿಕಲ್ ಡಿಪ್ಲೊಮಾ ಮಾಡಿದ. ಆದರೆ ಅವನ ಭೋಳೇ ಸ್ವಭಾವಕ್ಕೆ ಎಲ್ಲಿಯೂ ಕೆಲಸ ಸರಿಯಾಗಿ ಸಿಗಲಿಲ್ಲ. ಕಡೆಗೆ ಯಾರೋ ದುಬೈಗೆ ಕರೆದುಕೊಂಡು ಹೋದರು, ಯಾವುದೋ ಗ್ಯಾರೇಜಿಗೆ ಸೇರಿಸಿದರು.
ಅದೃಷ್ಟ ಬದಲಾಯಿಸುವುದೆಂದರೇ ಹೀಗೆ. ಹಾಗೆಯೇ ಅದೃಷ್ಟ ಒದ್ದಾಗ ಎಲ್ಲವೂ ಬದಲಾಗುತ್ತದೆ ಎನ್ನುವುದು ಸುಳ್ಳಲ್ಲ. ಹೆಚ್ಚು ಮಾತಿಲ್ಲದೆ ಕತ್ತೆಯಂತೆ ದುಡಿಯುತ್ತಿದ್ದ ಗಿರೀಶ ಗ್ಯಾರೇಜ್ ಓನರ್ ದುಬೈ ಶೇಕನಿಗೆ ಬಹಳ ಇಷ್ಟವಾದ. ವಯಸ್ಸಾದ ಶೇಕ್ ಗ್ಯಾರೇಜನ್ನು ಗಿರೀಶನಿಗೇ ಒಪ್ಪಿಸಿದ. ವರ್ಷಕ್ಕೆ ಸ್ವಲ್ಪ ಹಣ ಕೊಟ್ಟರೆ ಸಾಕು ಎಂದ. ಭೋಳೇ ಸ್ವಭಾವದ ಗಿರೀಶ ವ್ಯವಹಾರಚತುರನಾದ. ದೊಡ್ಡ ಕಾರು ಲ್ಯಾಂಡ್ ಕ್ರೂಸರ್ ಕೊಂಡ. ದೊಡ್ಡವನು ಮದುವೆಗಿದ್ದರೂ ತಮ್ಮನಿಗೇ ಮೊದಲು ಸಂಬಂಧ ಬಂತು, ಮದುವೆಯೂ ಆಯಿತು. ಹೆಂಡತಿ ರಾಧಿಕಾ ಮನೆ, ಮನ ತುಂಬಿದಳು, ಎರಡು ಗಂಡುಮಕ್ಕಳಾದವು.
ಗಿರಿಧರನಂತವರಿಗೆ ಒಮ್ಮೆ ಕನಸನ್ನು ಕಂಡರೆ ಅದನ್ನು ದೂರ ಮಾಡುವುದಾಗಲಿ, ಇಲ್ಲಾ ಕೈ ಬಿಡುವುದಾಗಲಿ ಸುಲಭವಲ್ಲ. ಇದು ಕನಸನ್ನು ನನಸಾಗಿಸುವುದಕ್ಕಿಂತ ಹೆಚ್ಚು ಕಷ್ಟದ್ದು. “ಈ ನವರಾತ್ರಿಗೆ ಪೇಪರ್ ಶುರು ಮಾಡಿಬಿಡು, ಹಣಕ್ಕೆ ಚಿಂತೆ ಮಾಡ್ಬೇಡ, ನಾವು ಕೊಡ್ತೇವೆ” ಅಂತ ಒಂದಿಬ್ಬರು ಫ್ರೆಂಡ್ಸ್ ಮುಂದೆ ಬಂದರೆ, ಪ್ರೆಸ್ ಇಟ್ಟುಕೊಂಡ ಸಹೃದಯಿಯೊಬ್ಬ ಕಡಮೆ ಖರ್ಚಿನಲ್ಲಿ ಪೇಪರ್ ಮುದ್ರಿಸಿಕೊಡಲು ಒಪ್ಪಿದ. ನವರಾತ್ರಿಗೆ ಪೇಪರ್ ಶುರುವಾಯಿತು. ಸತ್ಯದ ಬೆಳಕನ್ನು ಜನರಿಗೆ ದರ್ಶನ ಮಾಡಿಸುವ ಉದ್ದೇಶದಿಂದ ಶುರು ಮಾಡಿದ ದಿನಪತ್ರಿಕೆಗೆ ಬೆಳಕಿನ ಮೂಲ ‘ಅಗ್ಗಿಷ್ಟಿಕೆ’ ಎನ್ನುವ ಹೆಸರೇ ಸೂಕ್ತವಾದದ್ದು ಎನಿಸಿ ಅದೇ ಹೆಸರನ್ನಿಟ್ಟ. ಮೊದಲ ವರ್ಷದ ಪ್ರತಿ ದಿನದ ಮುದ್ರಣ ಕೇವಲ ೫೦೦ ಪ್ರತಿಗಳಾಗಿತ್ತು. ಸ್ನೇಹಿತರು, ಪರಿಚಯಸ್ಥರು ತಮ್ಮ ಅಂಗಡಿಗಳಲ್ಲಿಟ್ಟುಕೊಂಡು ಮಾರಿದರು. ನಿಧಾನವಾಗಿ ಪತ್ರಿಕೆ ಜನಪ್ರಿಯವಾಗತೊಡಗಿತು. ಜೀವನದ ಮೆಟ್ಟಿಲನ್ನು ಕಷ್ಟಪಟ್ಟು ಒಂದೊಂದಾಗಿ ಹತ್ತುವಾಗ ಸಮಯ, ವಯಸ್ಸು ಬಹಳ ವೇಗವಾಗಿ ಸಾಗುತ್ತದೆ ಎನಿಸುತ್ತದೆ. ವಯಸ್ಸು ಮೂವತ್ತೈದು ದಾಟಿದಾಗ ಪಕ್ಕದ ಊರಿನ ಶಾಂಭವಿಯೊಡನೆ ಮದುವೆಯಾಯಿತು, ಸ್ವಲ್ಪ ತಡವಾದರೂ ಮಕ್ಕಳು ಹುಟ್ಟಿದವು.
ಗಿರೀಶನ ಮೊದಲನೆಯ ಮಗ ದುಬೈಯಲ್ಲೇ ಎಂಜನಿಯರಿಂಗ್ ಮಾಡಿ ಎಂ.ಎಸ್ ಮಾಡಲು ಅಮೆರಿಕಾಗೆ ಹೋದ. ತನ್ನೊಡನೆ ಓದುತ್ತಿದ್ದ ಉತ್ತರ ಭಾರತದ ಹುಡುಗಿಯೊಬ್ಬಳನ್ನು ಮೆಚ್ಚಿದ. ಗಿರೀಶ ಮಗನ ಮದುವೆಯನ್ನು ಬೆಂಗಳೂರಿನಲ್ಲಿ ಮಾಡಲು ನಿಶ್ಚಯಿಸಿದ. ಆ ಮದುವೆಗೇ ಎಲ್ಲರೂ ಬೆಂಗಳೂರಿಗೆ ಹೊರಟಿದ್ದರು. ಮದುವೆಯಲ್ಲಿ ಹುಡುಗಿಗೆ ಹಾಕುವ ಕರಿಮಣಿಯನ್ನು ಊರಿನಿಂದ ತರಬೇಕೆಂಬುದು ಗಿರೀಶನ ಆಗ್ರಹವಾಗಿತ್ತು. ಅದಕ್ಕಾಗಿ ಅಣ್ಣ ಮದುವೆಗೆ ಬರುವಾಗ ತರಬೇಕೆಂದು ಹೇಳಿದ್ದ.
“ನೋಡ್ತಾ ಇರಿ, ಈ ಸಲ ನಿಮ್ಮ ತಮ್ಮ ಮನೆ, ಗದ್ದೆಯಲ್ಲಿ ಪಾಲು ಕೇಳ್ದೇ ಬಿಡೋದಿಲ್ಲ. ಹೋದ ಸಲ ಬಂದಾಗಲೇ ಎಷ್ಟು ಬೆಳೆ ಬೆಳೆಸುತ್ತೀರಿ, ಏನು ಬೆಳೆಸುತ್ತೀರಿ ಎಂದು ಕೇಳುತ್ತಿದ್ದರು, ಪೇಪರಿನಲ್ಲಿ ಬರುವ ಆದಾಯದ ಬಗ್ಗೆಯೂ ತನಿಖೆ ಮಾಡುತ್ತಿದ್ದರಲ್ಲ. ರಾಧಿಕಾಳೂ ‘ಮನೆ ಹಳತಾಗಿದ್ದರೂ ವಿಶಾಲವಾಗಿದೆ. ಈಗಿನ ಕಾಲದಲ್ಲಿ ಇಂತಹ ಮನೆ ಕಟ್ಟಿಸುವುದು ಕಷ್ಟ’ ಎನ್ನುತ್ತಿದ್ದಳು. ಅವರಿಗೆ ಪ್ರಾಪರ್ಟಿಯನ್ನು ನಾವೊಬ್ಬರೇ ಉಪಯೋಗಿಸುತ್ತಿರುವುದರ ಮೇಲೆ ಕಣ್ಣಿದೆ” ಎಂದಳು ಶಾಂಭವಿ. ಹೆಂಡತಿಯ ಮಾತಿಗೆ ಡ್ರೈವಿಂಗಿಗೆ ಗಮನ ಕೊಡಲು ಸಾದ್ಯವಾಗದೆ ಕಾರು ಮುಂದೆ ಹೋಗುತ್ತಿರುವ ಟ್ಯಾಂಕರಿಗೆ ಡಿಕ್ಕಿ ಕೊಡುವಂತಾಗಿ ಬ್ರೇಕ್ ಒತ್ತಿದರು. ಅಲ್ಲಾ… ಇವಳಿಗೆ ಎಷ್ಟು ಹೊತ್ತಿಗೆ ಯಾವ ಮಾತಾಡಬೇಕೆಂದು ಗೊತ್ತಿಲ್ಲ. ಕಾರು ಘಾಟಿ ಹತ್ತುವಾಗ ಈ ಮಾತೆ? “ನನ್ನ ತಮ್ಮ ಅಂತವನಲ್ಲ. ದುಬೈಯಲ್ಲಿ ಸಂಪಾದನೆ ಜೋರಾಗಿದೆ. ಬೆಂಗಳೂರಿನಲ್ಲೂ ಎರಡೆರಡು ಮನೆ ಇದೆ.’’ ಹಾಗಂದರೂ ಗಿರಿಧರನ ಮನಸ್ಸು ಹೆಂಡತಿ ಹೇಳಿದ ಮಾತಿನ ಜಾಡಿನತ್ತ ತಿರುಗಿತು. ಗಿರೀಶ ಬೇಕಾದಷ್ಟು ಸಂಪಾದಿಸಿರಬಹುದು, ಗದ್ದೆ ಅಜ್ಜಯ್ಯ ದುಡಿದು ಸಂಪಾದಿಸಿದ್ದು. ಮನೆ ಅಪ್ಪಯ್ಯನ ಕಾಲದ್ದು, ಅವನಿಗೂ ಇದರಲ್ಲಿ ಸಮ ಪಾಲು ಇದೆಯಲ್ಲ? ಹಣ, ಆಸ್ತಿಯ ಆಕರ್ಷಣೆಯೇ ಅಂತಹದ್ದು, ಯಾರೂ ಅದರಿಂದ ತಪ್ಪಿಸಿಕೊಳ್ಳುವಂತಿಲ್ಲ. ತಾನು ಮಾಡಿದ್ದು ಒಂದು ತರಹದ ಕ್ರಾಂತಿ, ಸಾಧನೆ ಎಂದುಕೊಂಡರೂ ಹಣಕಾಸಿನ ದೃಷ್ಟಿಯಿಂದ ಅಳೆದರೆ ಸೊನ್ನೆಯೇ. ಮನೆಗೆ ಪೈಂಟ್ ಮಾಡಿಸಲು ಸಹ ೫-೬ ವರ್ಷಗಳ ಕೆಳಗೆ ತಮ್ಮನೇ ಖರ್ಚು ಮಾಡಿದ್ದ. ಗದ್ದೆಗೆ, ತೋಟಕ್ಕೆ ಸ್ಪಿçಕ್ಲಲರ್ ವ್ಯವಸ್ಥೆಯನ್ನೂ ಅವನೇ ಮಾಡಿಸಿದ್ದ. ಹೀಗೆ ಒಂದರ ಬೆನ್ನಿಗೆ ಮತ್ತೊಂದು ಆಲೋಚನೆಗಳು ಎಡೆಬಿಡದೆ ಬಂದವು ಗಿರಿಧರನಿಗೆ.
* * *
ಕಾರು ಘಾಟಿ ಹತ್ತಿ ಮೂಡಗೆರೆ ತಲಪಿದಾಗ ಗಂಟೆ ಏಳಾಗಿತ್ತು. ಶಾಂಭವಿ “ಇಲ್ಲೇ ಎಲ್ಲಾದರೂ ಊಟ ಮಾಡೋಣ” ಎಂದಳು. “ಅಯ್ಯೋ ನೀನೇನೂ ತಿಂಡಿ ಮಾಡಿ ಕಟ್ಟಿಕೊಂಡು ಬಂದಿಲ್ವಾ? ಸುಮ್ಮನೆ ಮನೆಯಲ್ಲಿ ಕೂತಿರುವ ಬದಲು ಅದನ್ನಾದರೂ ಮಾಡಬಹುದಿತ್ತು, ಸುಮ್ಮನೆ ಹೋಟಲಿಗೆ ದುಡ್ಡು ದಂಡ.’’ ಮಗಳೂ “ಅಪ್ಪ, ಹೋಟಲಿಗೆ” ಎಂದಳು ಅಳುವಿನ ಸ್ವರದಿಂದ, ಶಾಂಭವಿಯೂ ಸೊರ ಸೊರವೆನ್ನುತ್ತಾ ಮೂಗು ಒರೆಸಿಕೊಂಡಳು. ಅರ್ಥವಾಯಿತು ಗಿರಿಧರನಿಗೆ. ಛೀ.. ವರ್ಷ ಐವತ್ತು ದಾಟಿದರೂ ಜೀವನದಲ್ಲಿ ಒಂದು ಹಂತಕ್ಕೆ ಬರಲಾಗಲಿಲ್ಲ, ಹೆಂಡತಿ, ಮಗಳಿಗೆ ಬೇಕಾದದ್ದನ್ನು ಕೊಡಿಸಲಾಗುತ್ತಿಲ್ಲ. ಈಗಲೇ ಹೀಗಾದರೆ ಮುಂದೇನು? ಮಗಳಿನ್ನೂ ಚಿಕ್ಕವಳು. ಅವಳಿಗೆ ಓದಿಸಬೇಕು, ಮದುವೆ ಮಾಡಬೇಕು, ತಮಗೂ ವಯಸ್ಸಾದ ಕಾಲಕ್ಕೆ ನೆಮ್ಮದಿಯ ಜೀವನ ನಡೆಸಲು ವ್ಯವಸ್ಥೆ ಮಾಡಿಕೊಳ್ಳಬೇಕು. ಎಲ್ಲದಕ್ಕೂ ಹಣ ಬೇಕು. ದಿನಕ್ಕೆ ೨ ಸಾವಿರ ಸರ್ಕ್ಯುಲೇಶನ್ ಇರುವ ಪೇಪರಿಗೆ ಹೆಸರಿದ್ದರೂ ಆದಾಯ ಹೇಳಿಕೊಳ್ಳುವಂತಹದ್ದಿಲ್ಲ. ಹೆಸರೂ ಬೇಕು, ಹಣವೂ ಮಾಡಬೇಕೆಂದರೆ ಅದರ ಸರ್ಕ್ಯುಲೇಶನ್ ಜಾಸ್ತಿ ಮಾಡಬೇಕು. ಅದಕ್ಕೆ ಸ್ವಂತ ಪ್ರೆಸ್ ಬೇಕು, ಸಹಾಯಕರು ಬೇಕು, ಜಾಹೀರಾತು ಕೊಡುವವರನ್ನು ಹಿಡಿಯಬೇಕು. ಇದಕ್ಕೆಲ್ಲ ದೊಡ್ಡ ಮೊತ್ತದ ಬಂಡವಾಳ ಬೇಕು. ಪೇಪರ್ ಹೆಸರು ತಂದುಕೊಟ್ಟಿದೆ ಸರಿ, ಯಾವ ಪಂಥಕ್ಕೂ ವಾಲಿಕೊಳ್ಳದೆ ನೇರ, ದಿಟ್ಟ ಸುದ್ದಿಯ ವರದಿಯಿಂದ, ವೈಚಾರಿಕ ಲೇಖನಗಳಿಂದ, ರೈತರಿಗೆ ವಿಶೇಷವಾಗಿ ಪರಿಣತರಿಂದ ಸಲಹೆ ಕೊಡುತ್ತಾ, ಉದಯೋನ್ಮುಖ ಸಾಹಿತಿಗಳಿಗೆ ಪ್ರೋತ್ಸಾಹ ಕೊಟ್ಟು ಸುತ್ತಮುತ್ತಲ ಜನರ ಮನ ತಟ್ಟಿದ್ದು, ಮನ ಮುಟ್ಟಿದ್ದು ನಿಜ. ಆದರೆ ಹಣದ ಮುಗ್ಗಟ್ಟಿನಿಂದ ಸಹಾಯಕರು ಇರಲಿಲ್ಲ, ಹೆಚ್ಚಿನ ಕೆಲಸವನ್ನು ಗಿರಿಧರ ಮತ್ತು ಸಹಾಯಕ ಸಲೀಮನೇ ಮಾಡುತ್ತಿದ್ದರು. ಇಷ್ಟೆಲ್ಲ ಇದ್ದರೂ ಅಂತಹ ಹೇಳಿಕೊಳ್ಳುವಂತಹ ಆದಾಯವಿರಲಿಲ್ಲ.
ಎತ್ತಲೋ ಓಡುತ್ತಿದ್ದ ಆಲೋಚನೆಯನ್ನು ಕಿತ್ತು ಡ್ರೈವಿಂಗಿನತ್ತ ಗಮನಹರಿಸಿದ ಗಿರಿಧರ. ಅದರೊಂದಿಗೆ ಶಾಂಭವಿ ಹೇಳಿದಂತೆ ತಮ್ಮ ಗಿರೀಶ ಪಾಲೂ ಕೇಳಬಹುದು, ಅವನಿಗೂ ಮನೆ, ಗದ್ದೆಯಲ್ಲಿ ಸಮ ಹಕ್ಕಿದೆ, ಮನೆ, ಗದ್ದೆಗಾಗಿ ಖರ್ಚೂ ಮಾಡಿದ್ದಾನೆ, ಅವನ ದೊಡ್ಡತನ, ಇಷ್ಟು ದಿನ ಏನೂ ಕೇಳಿರಲಿಲ್ಲ.
ಗಿರಿಧರ ವಾಚನ್ನು ನೋಡಿಕೊಂಡು ಕಾರಿನ ವೇಗವನ್ನು ಜಾಸ್ತಿ ಮಾಡಿದ. ಕತ್ತಲೆ ಆಗಲೇ ಬೆಳಕನ್ನು ನುಂಗಿತ್ತು, ದೂರದೂರಕ್ಕೆ ಬೀದಿದೀಪಗಳು ಮಿನುಗುತ್ತಿತ್ತು. ಅಲ್ಲೊಂದು, ಇಲ್ಲೊಂದು ವಾಹನಗಳು ವೇಗವಾಗಿ ಹೋಗುತಿದ್ದವು. ಪಕ್ಕನೆ ಕ್ರಾಸ್ ರೋಡಿನಿಂದ ಸೈಕಲ್ ಬಿಡುತ್ತಿದ್ದ ಹುಡುಗನೊಬ್ಬ ಕಾರಿಗೆ ಅಡ್ಡವಾಗಿ ಬಂದ, ವರ್ಷ ೧೦-೧೨ ಇರಬಹುದು. ಛೇ ಇಷ್ಟು ಹೊತ್ತಿಗೂ ಮಕ್ಕಳು ಸೈಕಲಿನಲ್ಲಿ ಓಡಾಡುತ್ತಿದ್ದಾರೆ, ಹೆತ್ತವರ ಬೇಜವಾಬ್ದಾರಿಯ ಬಗ್ಗೆ ಸಿಟ್ಟು ಬಂದು ಗಟ್ಟಿಯಾಗಿ ಹಾರ್ನ್ ಒತ್ತಿದ. ಹೆದರಿದ ಹುಡುಗ ಪಟಪಟನೆ ಸೈಕಲನ್ನು ತುಳಿದು ವೇಗ ಇನ್ನೂ ಜಾಸ್ತಿ ಮಾಡಿದ. ಮಗಳು “ಅಪ್ಪ, ಈಗ ಗಗನ್ ಇದ್ದಿದ್ದರೆ ಹೀಗೇ ಇರುತ್ತಿದ್ದನಲ್ವಾ?’’ ಎಂದಳು, ಕಾರಿನ ವೇಗ ತಟ್ಟನೆ ಕಡಮೆಯಾಯಿತು. ಶಾಂಭವಿ “ನಿಮ್ಮ ಅಗ್ಗಿಷ್ಟಿಕೆ ನನ್ನ ಮಗನನ್ನು ನುಂಗಿತು” ಎನ್ನುತ್ತಾ ಅಳತೊಡಗಿದಳು. “ಎಲ್ಲಿಯದೋ ವಿಷಯವನ್ನು ಮತ್ತೆಲ್ಲಿಗೋ ಸೇರಿಸುತ್ತ” ಎಂದು ಗಿರಿಧರ ಗದರಿದರೂ ಮಗನ ನೆನಪಾಯಿತು.
ಆ ಘಟನೆ ನಡೆದು ೪ ವರ್ಷವಾಯಿತು, ಮಗ ಗಗನ್ ಬಹಳ ತುಂಟ. ಅವನ ೬ನೇ ವರ್ಷದ ಹುಟ್ಟಿದ ದಿನಕ್ಕೆ ೨ ದಿನಗಳಿತ್ತು. “ಅಪ್ಪ, ನನ್ನ ಬರ್ತಡೇಗೆ ಚಾಕಲೇಟ್ ಕೇಕ್ ತರಬೇಕು. ಬಂದ ಫ್ರೆಂಡ್ಸುಗಳಿಗೆ ಚಾಕಲೇಟ್ ಕೊಟ್ಟರೆ ಸಾಕು, ಕೇಕು ನನಗೆ ಮತ್ತು ಅಕ್ಕನಿಗೆ ಮಾತ್ರ” ಎಂದಿದ್ದ ಅವನ ಮಾತು ಕೇಳಿ ನಗು ಬಂದಿತ್ತು. ಮರುದಿನ ಸ್ನೇಹಿತರೊಡನೆ ಆಡುತ್ತಿದ್ದ ಹುಡುಗ ದಂಡೆ ಇಲ್ಲದ ಬಾವಿಗೆ ಬಿದ್ದುಬಿಟ್ಟ. ಅವನನ್ನು ಬಾವಿಯಿಂದ ತೆಗೆಯಬೇಕಾದರೆ ಸಾಕುಬೇಕಾಯಿತಂತೆ. ಸಣ್ಣದಾಗಿ ಉಸಿರಾಡುತ್ತಿದ್ದವ ಆಸ್ಪತ್ರೆ ಸೇರುವಾಗ ಮರಣಿಸಿದ. ಅಂದು ಮಿನಿಸ್ಟರ್ ಒಬ್ಬರು ಪಕ್ಕದ ಊರಿಗೆ ಬಂದಿದ್ದು ಅವರ ಭಾಷಣವನ್ನು ವರದಿ ಮಾಡಿಕೊಳ್ಳಬೇಕಿತ್ತು, ಮಿನಿಸ್ಟರ್ ಬಂದ ಗಲಾಟೆಯಲ್ಲಿ ಶಾಂಭವಿ ಫೋನ್ ಮಾಡಿದರೂ ಕೇಳಿಸಲಿಲ್ಲ. ಫೋನ್ ತೆಗೆದಾಗ ಮಗನ ಕತೆ ಮುಗಿದಿತ್ತು. ಶಾಂಭವಿಯ ದೃಷ್ಟಿಯಲ್ಲಿ ಇದೆಲ್ಲದಕ್ಕೂ ಕಾರಣ ನಾನು ಮತ್ತು ನನ್ನ ಉದ್ಯೋಗವೇ ಆಗಿತ್ತು. ಹೆಚ್ಚು ಓದಿರದ ಮೊದಲೇ ಒರಟು ಸ್ವಭಾವದ ಶಾಂಭವಿ ಮಗನ ಸಾವಿನಿಂದ ಮತ್ತಷ್ಟು ಒರಟುತನವನ್ನು ಮೈಗೂಡಿಸಿಕೊಂಡಳು, ಮಾತು ಮಾತಿಗೆ ಸಿಡುಕುತ್ತಿದ್ದಳು.
* * *
ಕಾರು ಬೇಲೂರು ಮುಟ್ಟಿತು, ಗಂಟೆ ಆಗಲೇ ಎಂಟಾಗಿತ್ತು. ಗಿರಿಧರನಿಗೆ ಏಕೋ ಹೆದರಿಕೆಯಾಯಿತು, ಬೆಂಗಳೂರು ತಲಪುವಾಗ ಗಂಟೆ ಹನ್ನೆರಡಾಗುವುದು ಗ್ಯಾರೆಂಟಿ. ಛೇ… ರಾತ್ರಿ ಡ್ರೈವಿಂಗ್ ಸೇಫ್ ಅಲ್ಲ. ನಾನೊಬ್ಬನೆ ಆಗಿದ್ದರೆ ಸರಿ, ಹೆಂಡತಿ, ಮಗಳೂ ಇದ್ದಾರೆ, ಜೀವನವೇ ಹೀಗಾಯಿತು. ತಾನು ಮಾತ್ರ ಅಲ್ಲ, ಕುಟುಂಬದವರನ್ನೂ ಅಪಾಯಕ್ಕೆ ದೂಡುತ್ತಿದ್ದೇನೆ ಎನಿಸಿತು. ಎದುರಿಗೆ ಬಂದ ಲಾರಿಯ ಬೆಳಕು ಕಣ್ಣು ಕುಕ್ಕಿತು, ಒಂದು ಕ್ಷಣ ಡ್ರೈವಿಂಗ್ ಕಷ್ಟವಾಗಿ ಕಾರು ಓಲಾಡಿತು. ಪಕ್ಕನೆ ಶೆಟ್ಟರ ಪ್ರಸ್ತಾಪ ನೆನಪಿಗೆ ಬಂತು, ಯಾಕಾಗಿ ಅಂತಹ ಮಾತು ಅವರ ಬಾಯಿಂದ ಬಂತೋ…. “ಗಿರಿಧರ, ನೀವು ಅಗ್ಗಿಷ್ಟಿಕೆಯನ್ನು ಮಾರುತ್ತೀರಂತೆ ಹೌದಾ? ಹಾಗೆ ಮಾರುವುದಿದ್ದರೆ ಹೇಳಿ ನನ್ನ ಭಾವ ಕೊಳ್ಳುತ್ತಾರಂತೆ. ದೊಡ್ಡ ಪಾರ್ಟಿ, ಹಣಕ್ಕೆ ಹಿಂದೆ-ಮುಂದೆ ನೋಡುವವರಲ್ಲ. ನಿಮಗೂ ಒಂದೇ ಪೆಟ್ಟಿಗೆ ಕ್ಯಾಶ್ ಸಿಗುತ್ತದೆ, ಆಲೋಚನೆ ಮಾಡಿ’’ ಎನ್ನುತ್ತಾ ಎದ್ದು ಹೋಗಿದ್ದ. ಆ ಸಮಯಕ್ಕೆ ಶೆಟ್ಟರ ಮಾತು ಕೇಳಿ ಸಿಟ್ಟು ಬಂದಿತ್ತು. ಅಂಗಡಿಯಲ್ಲಿ ಸಾಮಾನು ಕೇಳುವ ಹಾಗೆ ನನ್ನ ಪತ್ರಿಕೆಯನ್ನು ಕೇಳುತ್ತಿದ್ದಾರಲ್ಲ ಅನ್ನಿಸಿತ್ತು. ಈಗ ಯಾಕಾಗಬಾರದು? ತಮ್ಮ ಕುಟುಂಬದವರೇ ಶುರು ಮಾಡಿದ, ದೊಡ್ಡ ಬ್ರಾಂಡಿನ ಸರಣಿ ಹೋಟೆಲು ಇಟ್ಟುಕೊಂಡವರೇ ಮಾರಾಟ ಮಾಡಿದ್ದಾರೆ, ಅಲ್ಲದೆ ಪತ್ರಿಕೆಗಳನ್ನು ಮಾರಾಟ ಮಾಡಿದ ಉದಾಹರಣೆಗಳೂ ಇವೆ. ಬಂದ ಹಣದಿಂದ ಮನೆಯ ಹತ್ತಿರ ಕಿರಾಣಿ ಅಂಗಡಿ ತೆಗೆದು ಕೂತರಾಯಿತು. ಅಕ್ಕಿ, ತೊಗರಿಬೇಳೆಗೆ ಗಿರಾಕಿ ಬಾರದಿರುವುದುಂಟೆ? ತರ್ಕ, ವಿತರ್ಕದಿಂದ ಬಸವಳಿದ ಮನಸ್ಸು ಒಂದು ನಿರ್ಧಾರ ತೆಗೆದುಕೊಂಡಿತು, “ಶಾಂಭವಿ, ಅಗ್ಗಿಷ್ಟಿಕೆಯನ್ನು ಮಾರುತ್ತೇನೆ. ಗಿರಾಕಿ ಬಂದಿದೆ, ಬಂದ ದುಡ್ಡಲ್ಲಿ ಒಂದು ಕಿರಾಣಿ ಅಂಗಡಿಯನ್ನು ಮನೆಯ ಹತ್ತಿರವೇ ತೆರೆಯುತ್ತೇನೆ” ಎಂದ. “ವರ್ಷ ಐವತ್ತು ದಾಟಿದ ಮೇಲಾದರೂ ಬುದ್ದಿ ಬಂತಲ್ಲ ಎನ್ನುವುದೇ ಸಂತೋಷದ ವಿಚಾರ, ಎಷ್ಟು ಕೊಡುತ್ತಾರಂತೆ?’’ ಎಂದಿನಂತೆ ಕುಹಕವಾಡಿದಳು. ಮಗಳು ಗ್ರೀಷ್ಮ ಮಾತ್ರ “ಬೇಡ ಅಪ್ಪ, ಇದು ನಮ್ಮ ಗೌರವ, ನಿಮ್ಮ ಪ್ರತಿಷ್ಠೆ. ಎಲ್ಲವನ್ನೂ ದುಡ್ಡಿನಲ್ಲಿ ಅಳೆಯಲಾಗದು. ಡೋಂಟ್ ವರಿ ಅಪ್ಪ, ಓದು ಮುಗಿಸಿ ನಾನು ನಿಮ್ಮ ಸಹಾಯಕ್ಕೆ ಬರುತ್ತೇನೆ.’’ ಮಗಳ ಮಾತು ಕೇಳಿ ಕ್ಷಣಕಾಲ ಸಂತೋಷವಾದರೂ ಇದರ ಭಾರ ಸಣ್ಣದಲ್ಲ ಮಗಳೇ ಎಂದು ಹೇಳಬೇಕೆನಿಸಿತು ಗಿರಿಧರನಿಗೆ.
ಕಾರು ಹಾಸನಕ್ಕೆ ಹೋಗುವ ಹಾದಿ ಹಿಡಿಯಿತು, ಇನ್ನೊಂದು ಮೂರು ಗಂಟೆ ಡ್ರೈವ್ ಅಷ್ಟೆ. ಅಷ್ಟರಲ್ಲಿ ಗಿರೀಶ ಎರಡೆರಡು ಬಾರಿ ಫೋನ್ ಮಾಡಿ ವಿಚಾರಿಸಿಯಾಗಿತ್ತು. ಕಾರು ಇನ್ನೇನು ಹಾಸನ ತಲಪಿತು ಎನ್ನುವಾಗ ಎದುರಿನಲ್ಲಿ ೧೫೦-೨೦೦ ಜನ ಸೇರಿದ್ದು ಕಾಣಿಸಿತು. ದೊಡ್ಡ ಗಲಾಟೆ ನಡೆಯುತ್ತಿತ್ತು. ರಸ್ತೆಯಲ್ಲೇ ಸುಟ್ಟು ಕರಕಲಾದ ಒಂದೆರಡು ಬಸ್ಸು, ಇನ್ನೂ ಹೊತ್ತಿ ಉರಿಯುತ್ತಿರುವ ಕಾರುಗಳು ಕಾಣಿಸಿತು, ಕೆಲವರು ಅಳುತ್ತಿದ್ದರು. ವಿಷಯ ಗಂಭೀರವಾಗಿದೆ ಎಂದು ಮನಸ್ಸು ಎಚ್ಚರಿಸಿತು. ವಿಚಾರಿಸಿದಾಗ ತಿಳಿದದ್ದಿಷ್ಟು: ಸಂಜೆ ರಾಂಗ್ ಸೈಡಿನಿಂದ ಬಂದ ಬಸ್ಸು ಆಡುತ್ತಿದ್ದ ಹುಡುಗರ ಮೇಲೆ ಹಾದು ಇಬ್ಬರು ಹುಡುಗರ ಸ್ಪಾಟ್ ಡೆತ್ ಆಗಿತ್ತು. ಸಿಟ್ಟಿಗೆದ್ದ ಹಳ್ಳಿಯವರು ಬಸ್ಸನ್ನು ನಿಲ್ಲಿಸಿ ಬೆಂಕಿ ಹಚ್ಚಿದರು. ಡ್ರೈವರ್, ಕಂಡಕ್ಟರ್ ಓಡಿಹೋಗಿದ್ದರು. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಒಂದಿಬ್ಬರು ಬೆಂಕಿಗೆ ಆಹುತಿಯಾದರು. ಹಳ್ಳಿಯವರ ಸಿಟ್ಟು ಅಲ್ಲಿಗೆ ತಣಿಯದೆ ಆ ದಾರಿಯಲ್ಲಿ ಸಾಗುತ್ತಿದ್ದ ಎಲ್ಲ ವಾಹನಗಳಿಗೂ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದ್ದರು. ಪೊಲೀಸರು ಸ್ಥಳಕ್ಕೆ ಬರುವಾಗ ಪರಿಸ್ಥಿತಿ ಕೈ ಮೀರಿತ್ತು. ಯಾರೂ ಆ ಹಳ್ಳಿ ದಾಟದಂತೆ ತಡೆದು ನಿಲ್ಲಿಸುತ್ತಿದ್ದರು. ಬೇರೆ ದಿನವಾಗಿದ್ದರೆ ಗಿರಿಧರ ಅಲ್ಲೇ ನಿಂತು ಇನ್ನೂ ಹೆಚ್ಚು ವಿಚಾರಿಸಿ ವರದಿ ತಯಾರು ಮಾಡುತ್ತಿದ್ದರೋ ಏನೋ. ಆದರಿಂದು ಆದಷ್ಟು ಬೇಗನೆ ಹೇಗಾದರೂ ಮಾಡಿ ಬೆಂಗಳೂರು ತಲಪಬೇಕಾಗಿರುವುದರಿಂದ ಹಳ್ಳಿಯ ಒಳಗೆ ಕಾರನ್ನು ತಿರುಗಿಸಿ ಮತ್ತೊಂದು ದಾರಿ ಹುಡುಕತೊಡಗಿದರು. ದಾರಿ ಹುಡುಕುತ್ತಿದ್ದ ಗಿರಿಧರನ ಕಾರು ಹಳ್ಳಿಯವರ ಕಣ್ಣಿಗೆ ಕಂಡಿತು “ನೋಡ್ರೋ ಅಲ್ಲೊಂದು ಕಾರು, ಹಾಕ್ರೋ” ಎನ್ನುತ್ತಾ ಗಿರಿಧರನ ಕಾರಿನ ಎದುರಿಗೆ ಓಡಿ ಬಂದರು. ಗಿರಿಧರನಿಗೆ ಮುಂದೆ ಹೋಗುವಂತೆಯೂ ಇಲ್ಲ, ಇಕ್ಕಟ್ಟಾದ ದಾರಿಯಲ್ಲಿ ವಾಪಸ್ಸು ಹೋಗುವಂತೆಯೂ ಇಲ್ಲ. ಒಂದಿಬ್ಬರು ಉರಿಯುತ್ತಿರುವ ದೊಂದಿಯನ್ನು ಗಿರಿಧರನ ಕಾರಿನ ಮೇಲೆಸೆದರು. ಕಾರನ್ನು ನಿಲ್ಲಿಸಿ ಕಾರಿನೊಳಗಿದ್ದ ಗಿರಿಧರನ ಮಗಳನ್ನು ಹಿಡಿದೆಳೆಯಲು ಪ್ರಯತ್ನಿಸಿದರು. ಅಷ್ಟರಲ್ಲಿ ಯುವಕನೊಬ್ಬ ಅಲ್ಲಿಗೆ ಬಂದ. “ನಿಲ್ಸಿ, ಇವರು ಪ್ರತಿಷ್ಠಿತ ‘ಅಗ್ಗಿಷ್ಟಿಕೆ’ ಪತ್ರಿಕೆಯವರು. ಸತ್ಯ, ದಿಟ್ಟ ವರದಿ ಇವರದ್ದು. ನನ್ನ ಕೋರಿಕೆಯ ಮೇಲೆ ಇಲ್ಲಿಗೆ ಬಂದಿದ್ದಾರೆ. ದಯವಿಟ್ಟು ಎಲ್ಲರೂ ದೂರ ಇರಿ” ಎನ್ನುತ್ತಾ ಕಾರನ್ನು ತನ್ನ ಮನೆಯತ್ತ ತಿರುಗಿಸುವಂತೆ ಹೇಳಿದ. ಮುಂದೇನು ಕಾದಿದೆ ಎಂದುಕೊಂಡರೂ ಕಾರನ್ನು ಯುವಕ ಹೇಳಿದತ್ತ ತಿರುಗಿಸಿದ, ಅವನೂ ಕಾರಿನ ಹಿಂದುಗಡೆಯ ಸೀಟಿನಲ್ಲಿ ಬಂದು ಕುಳಿತ, ಹಳ್ಳಿಯವರು ಸುಮ್ಮನಾದರು. ಕಾರಿನಲ್ಲಿ ಕೂತ ಯುವಕ ಮಾತನಾಡಲಿಲ್ಲ. ಯುವಕ ಸರಿಯಾಗಿ ಗಿರಿಧರನನ್ನು ಗುರುತಿಸಿದ್ದರೂ, ಗಿರಿಧರನಿಗೆ ಅವನ ಪರಿಚಯ ಸಿಗಲಿಲ್ಲ. ಯುವಕ ಹೇಳಿದಂತೆ ಕಾರನ್ನು ಡ್ರೈವ್ ಮಾಡಿದಾಗ ಒಂದು ಸಾಧಾರಣ ಹಂಚಿನ ಮನೆಯ ಮುಂದೆ ಕಾರನ್ನು ನಿಲ್ಲಿಸುವಂತೆ ಹೇಳಿದ.
“ಬನ್ನಿ ಸರ್ ಒಳಗೆ, ನಮ್ಮದು ಬಡವರ ಮನೆ. ಮನೆಯವರು ಬೇರೆ ಊರಿಗೆ ಹೋಗಿದ್ದಾರೆ. ಇವತ್ತು ನೀವು ಹಳ್ಳಿ ಬಿಟ್ಟು ಹೋಗುವಂತಿಲ್ಲ. ಏನಿದ್ದರೂ ನಾಳೆ. ಇಲ್ಲಿ ನೀವು ಸೇಫ್. ಮೇಡಂ, ಇಷ್ಟೊಂದು ಹೆದ್ರಿಕೊಂಡ್ರೆ ಹ್ಯಾಗೆ? ಎಡಿಟರ್ ಹೆಂಡತಿ ನೀವು’’ ಎಂದು ತಮಾಷೆ ಮಾಡಿದ. “ಅದೆಲ್ಲ ಸರಿಯಪ್ಪ, ನೀವ್ಯಾರು? ಹಿಂದೆ ನೋಡಿದ ನೆನಪಾಗುತ್ತಿಲ್ಲ. ನಾವು ಈ ಹಿಂದೆ ಭೇಟಿಯಾಗಿದ್ದೆವಾ?’’
“ನಾನೂ ಇವತ್ತೇ ನಿಮ್ಮನ್ನು ಭೇಟಿಯಾಗಿರುವುದು ಸರ್. ಆದರೆ ನಿಮ್ಮ ದಿನಪತ್ರಿಕೆಯ ಪರಿಚಯವಿತ್ತು. ನಾನು ಪರ್ಕಳದ ಹತ್ತಿರದ ಊರಿನಲ್ಲಿ ಗ್ರಾಮೀಣ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದೆ. ದಿನಾ ಬೆಳಗ್ಗೆ ನಿಮ್ಮ ಪತ್ರಿಕೆ ಓದುತ್ತಿದ್ದೆ, ಅದರಲ್ಲೂ ನಿಮ್ಮ ಸಂಪಾದಕೀಯ ಬಹಳ ಇಷ್ಟಪಟ್ಟಿದ್ದೆ ಹಾಗೂ ಒಂದೆರಡು ಸಮಾರಂಭಗಳಲ್ಲಿ ನಿಮ್ಮನ್ನು ನೋಡಿದ್ದೆ. ನಾನು ಕೆಲಸ ಮಾಡುತ್ತಿದ್ದ ಗ್ರಾಮೀಣ ಬ್ಯಾಂಕಿನ ಶಾಖೆ ಈಗ ನಮ್ಮೂರಿನಲ್ಲೇ ತೆರೆದು ಇಲ್ಲಿಗೆ ಬಂದೆ. ಅಂತೂ ನಮ್ಮೂರಿನಲ್ಲಿ ನನ್ನ ಅಭಿಮಾನದ ಪತ್ರಿಕೆಯ ಸಂಪಾದಕರನ್ನು ಭೇಟಿ ಮಾಡುವ ಹಾಗಾಯಿತು” ಎಂದ. ಗಿರಿಧರನಂತೂ ಕಣ್ಣೀರು ತುಂಬಿಕೊಂಡು “ನಿಮ್ಮ ಅಭಿಮಾನಕ್ಕೆ ಏನೆಂದು ಹೇಳಲಿ? ಆದರೆ ನಮಗೆ ಆದಷ್ಟು ಬೇಗನೆ ಬೆಂಗಳೂರು ತಲಪಬೇಕು” ಎನ್ನುತ್ತಾ ತಮ್ಮ ವಿಷಯವನ್ನು ತಿಳಿಸಿದರು.
“ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಜನರು ಕೆರಳಿದ್ದಾರೆ. ಈ ತರಹದ ಅಕ್ಸಿಡೆಂಟ್ ಆಗುವುದು ಇದು ಮೊದಲಲ್ಲ. ಇರಲಿ, ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ಆದಷ್ಟು ಬೇಗನೆ ಕಳುಹಿಸುವ ವ್ಯವಸ್ಥೆ ಮಾಡುತ್ತೇನೆ” ಎಂದ. ಗಿರಿಧರನ ಕುಟುಂಬ ಹೆದರಿಕೆ, ಬೇಸರ, ವ್ಯಥೆಯಲ್ಲೇ ರಾತ್ರಿ ಕಳೆಯಬೇಕಾಗಿ ಬಂತು. ಬೆಳಗ್ಗೆ ೫ ಗಂಟೆಗೆ ಬಂದ ಯುವಕ “ಈಗ ಹಳ್ಳಿಯ ಜನರು ತಮ್ಮ, ತಮ್ಮ ಮನೆಯಲ್ಲಿದ್ದಾರೆ. ಬೇಗನೆ ಹಳ್ಳಿ ಕ್ರಾಸ್ ಮಾಡಿಬಿಡಿ” ಎನ್ನುತ್ತ ಅವಸರಪಡಿಸಿದ. ಹೆದರಿಕೊಂಡೇ ಕಾರು ಚಲಾಯಿಸಿದ, ಗಿರಿಧರ. ಸ್ವಲ್ಪ ಹೊತ್ತಿನಲ್ಲಿ ಕಾರು ಹಳ್ಳಿ ಬಿಟ್ಟು ಮುಂದೆ ಸಾಗಿತು.
ಬೆಂಗಳೂರಿನಲ್ಲಿ ಮದುವೆ ಛತ್ರ ತಲಪುವಾಗ ಗಂಟೆ ಎಂಟು. ಆಗಲೇ ಮದುವೆಯ ಕಾರ್ಯಕ್ರಮಗಳು ನಡೆಯುತ್ತಿದ್ದವು.
* * *
ಕಾರು ಮದುವೆಯ ಛತ್ರದ ಗೇಟು ದಾಟಿ ಒಳಗೆ ಹೋಗುತ್ತಿದ್ದಂತೆ ಮೂವರು ದಿಗ್ಭ್ರಾಂತರಾದರು. ಮದುವೆ ದೊಡ್ಡ ರೆಸಾರ್ಟಿನಲ್ಲಿದ್ದು ಎದುರುಗಡೆ ಹಸಿರು ಸುಂದರ ಲಾನ್. ಲಾರಿಗಟ್ಟಲೆ ಹೂವಿನ ಅಲಂಕಾರವಿತ್ತು. ಒಂದು ಮೂಲೆಯಲ್ಲಿ ಹರಿಯುತ್ತಿರುವ ಕೃತಕ ಜಲಪಾತ. ಶ್ರೀಮಂತ ಬಟ್ಟೆಯಲ್ಲಿ ಓಡಾಡಿಕೊಂಡಿರುವ ಬಂಧು-ಮಿತ್ರರು. ಸುತ್ತಲೂ ಹರಡಿರುವ ನಗು, ಸೆಂಟಿನ ಪರಿಮಳ. ಒಂದು ಕ್ಷಣ ದಂಗಾದ ಗ್ರೀಷ್ಮ “ಅಪ್ಪ, ನಾನೂ ಇಲ್ಲೇ ಮದುವೆ ಮಾಡಿಕೊಳ್ತೇನೆ” ತಟ್ಟನೆಂದಳು. ಕೂಡಲೆ ಸಾವರಿಸಿಕೊಂಡು “ಸಾರಿ ಅಪ್ಪ” ಎನ್ನುತ್ತ ತನ್ನ ಬಾಯಿಯನ್ನು ಗಟ್ಟಿಯಾಗಿ ಮುಚ್ಚಿಕೊಂಡಳು. “ಹೆಚ್ಚು ಕನಸು ಕಟ್ಟಬೇಡ ಪುಟ್ಟಿ, ಇದು ನಮ್ಮಂತವರಿಗಲ್ಲ” ಎಂದಳು ಶಾಂಭವಿ ನಡುಗುವ ಸ್ವರದಿಂದ, ಗಿರಿಧರ ಮಾತಾಡದೆ ನಿಟ್ಟುಸಿರುಬಿಟ್ಟ.
ಇವರನ್ನು ದೂರದಿಂದಲೇ ನೋಡಿದ ಗಿರೀಶ ಓಡುತ್ತಾ ಬಂದ. “ನನಗಂತೂ ಟೆನ್ಶನ್ ಆಗಿತ್ತು ಅಣ್ಣ, ಏನಾಯಿತು? ಯಾಕಿಷ್ಟು ಲೇಟ್? ಇನ್ನು ಸ್ವಲ್ಪ ಲೇಟ್ ಆಗಿದ್ದರೆ ಮದುವೆಯ ಮುಹೂರ್ತವೇ ತಪ್ಪಿ ಹೋಗುತ್ತಿತ್ತು.” ಗಿರಿಧರ ಮಾತನಾಡಲಿಲ್ಲ, ನಡೆದದ್ದು ವಿವರಿಸಲು ಹೋಗಲಿಲ್ಲ. ಮಾತಾಡದೇ ತಂದ ಕರಿಮಣಿಯನ್ನು ಗಿರೀಶನ ಕೈಯಲ್ಲಿಟ್ಟ. ಅಷ್ಟು ಹೊತ್ತಿಗೆ ಅಲ್ಲಿಗೆ ಬಂದ ರಾಧಿಕಾ ಕರಿಮಣಿಯನ್ನು ನೋಡಿ “ಬಹಳ ಚೆನ್ನಾಗಿದೆ” ಎನ್ನುತ್ತಾ ಅದನ್ನು ಮದುವೆಯ ಮಂಟಪಕ್ಕೆ ತೆಗೆದುಕೊಂಡು ಹೋದಳು.
ಮದುವೆಗೆ ಯಾರಾರೋ ಬಂದರು. ಚಿನ್ನ, ವಜ್ರ, ಜರಿ ಸೀರೆಗಳ ಪ್ರದರ್ಶನ ನಡೆಯಿತು. ಕೂತು, ನಿಂತು ಫೋಟೋ ತೆಗೆಸಿಕೊಂಡರು, ನಗದವರೂ ಕ್ಯಾಮರಾದ ಮುಂದೆ ನಕ್ಕರು. ತಮ್ಮನ ಬೆಳವಣಿಗೆ ಅಣ್ಣನಿಗೆ ಹೆಮ್ಮೆ ಎನಿಸಿತು. ಒಂದೇ ಹೊಟ್ಟೆಯಲ್ಲಿ ಹುಟ್ಟಿ, ಒಂದೇ ಸೂರಿನಡಿಯಲ್ಲಿ ಬೆಳೆದು ಸ್ಲೇಟು, ಬಳಪ, ತಿಂಡಿಗಾಗಿ ಜಗಳವಾಡಿದವ ಏರಿದ ಎತ್ತರ ಅಂದಾಜು ಮಾಡಲಾಗದು. ಒಂದು ಕಾಲದಲ್ಲಿ ನಾನು ಹಾಕಿ ಬಿಟ್ಟ ಚಡ್ಡಿ, ಶರಟು, ಪುಸ್ತಕ ಎಲ್ಲವನ್ನೂ ಉಪಯೋಗಿಸಿದ್ದ ಇದೇ ತಮ್ಮ. ನೀಡುತ್ತಿದ್ದ ನನ್ನ ಕೈ ಈಗ ಕೆಳಗಿದೆ. ಜೀವನದಲ್ಲಿ ಏನಿಲ್ಲದಿದ್ದರೂ ಹಣ ಸಂಪಾದನೆ ಮುಖ್ಯ, ಅದರ ಮುಂದೆ ಮತ್ತಾವುದೂ ಅಲ್ಲ ಎನಿಸಿತು.
ಎರಡು ದಿನಗಳ ಮದುವೆಯ ಕಾರ್ಯಕ್ರಮದಲ್ಲಿ ಗಿರಿಧರ ದಂಪತಿಗಳು ತಮ್ಮ ಪಾಡಿಗೆ ತಾವಿದ್ದರು. ಮದುವೆ ಸಹ ಹುಡುಗಿ ಕಡೆಯ ಮಾರ್ವಾಡಿ ಸಂಪ್ರದಾಯದಂತೆ ನಡೆಯಿತು. ಶಾಂಭವಿ ಮತ್ತು ಗ್ರೀಷ್ಮ ತಮ್ಮ ಡ್ರೆಸ್ ಇಂತಹ ಮದುವೆಗೆ ತಕ್ಕದಾಗಿಲ್ಲ ಎನ್ನುವ ಕೀಳರಿಮೆಯಿಂದಲೋ ಏನೋ ದೂರವೇ ಉಳಿದುಬಿಟ್ಟರು. ಪರಿಚಯವಿಲ್ಲದ ಮುಖಗಳೇ ಹೆಚ್ಚು. ಶಾಂಭವಿ “ನಾವು ಮನೆಯ ಹಿರಿಯರು. ಇದೇ ಮದುವೆ ನಮ್ಮೂರಲ್ಲಾಗಿದ್ರೆ ಎಷ್ಟೊಂದು ಮರ್ಯಾದೆ ಇರುತ್ತಿತ್ತು ನಮಗೆ. ಇಲ್ಲಿ ನಿಮ್ಮ ತಮ್ಮ, ತಮ್ಮನ ಹೆಂಡತಿಯಾದ್ರೂ ಬಂದು ಮಾತಾಡಿಸಿದ್ರಾ ನೋಡಿ?’’ ಎಂದು ಕುಟುಕಿದಳು.
ಮದುವೆಯ ಮರುದಿನದ ಬೀಗರ ಔತಣ ಮುಗಿಯುತ್ತಿದ್ದಂತೆ ಗಿರಿಧರ ತಮ್ಮನ ಬಳಿ ಬಂದು “ನಾವಿನ್ನು ಹೊರಡ್ತೀವಿ ಗಿರೀಶ, ದುಬೈಗೆ ಹೋಗುವ ಮೊದಲು ಊರಿಗೆ ಬಂದು ಹೋಗಪ್ಪ” ಎಂದ. ಗಿರೀಶ “ಸ್ವಲ್ಪ ತಡಿಯಣ್ಣ, ನಿನ್ನ ಹತ್ರ ಮಾತನಾಡುವುದಿದೆ. ಪುರಸೊತ್ತಿನಲ್ಲಿ ಮಾತನಾಡಬೇಕು, ಇವತ್ತೊಂದು ರಾತ್ರಿ ಉಳಿದುಬಿಡು, ನಾಳೆ ಬೆಳಗ್ಗೆ ಹೊರಟರಾಯಿತು” ಎಂದ. ದುಡ್ಡಿದ್ದವರಿಗೆ ಸಮಯದ ಬೆಲೆ ತಿಳಿಯದೆನಿಸಿತು ಗಿರಿಧರನಿಗೆ, ಆದರೂ ತಮ್ಮನ ಮಾತನ್ನು ಅಲ್ಲಗಳೆಯಲಾಗಲಿಲ್ಲ. ಸರಿ ಎನ್ನುವಂತೆ ತಲೆಯಲ್ಲಾಡಿಸಿದ.
ಶಾಂಭವಿ ಹತ್ತಿರ ಬಂದು “ನಾನು ಹೇಳಲಿಲ್ವಾ, ಪ್ರಾಪರ್ಟಿಯಲ್ಲಿ ಶೇರ್ ಕೇಳ್ತಾರೆ ನೋಡಿ. ಇಷ್ಟೊಂದು ಖರ್ಚು ಮಾಡಿದ್ದಾರಲ್ವಾ, ಆದಾಯ ಬೇಡ್ವಾ?’’ ಗಿರಿಧರನಿಗೆ ಸಿಟ್ಟು ಬಂತು “ಸ್ವಲ್ಪ ಸುಮ್ಮನಿರು, ನಮ್ಮ ಪ್ರಾಪರ್ಟಿಯನ್ನು ನೋಡಿ ಖರ್ಚು ಮಾಡಿಲ್ಲ ಅವನು. ಸಂಪಾದಿಸಿದ್ದಾನೆ, ಖರ್ಚು ಮಾಡಿದ್ದಾನೆ’’ ಎಂದು ಗಿರಿಧರ ಹೆಂಡತಿಗೆ ಗದರಿದರೂ ಮನಸ್ಸಿನ ಮೂಲೆಯಲ್ಲಿ ಅನುಮಾನವಿತ್ತು. ಹೆಂಡತಿ ಅತ್ತ ತಿರುಗಿದ ಕೂಡಲೆ ಶೆಟ್ಟರಿಗೆ ಫೋನ್ ಮಾಡಿದ ಗಿರಿಧರ “ನಿಮ್ಮ ಭಾವನ ಹತ್ರ ಮಾತಾಡ್ಬೇಕು, ಮೀಟಿಂಗ್ ಫಿಕ್ಸ್ ಮಾಡಿ, ಅದೇ ಪೇಪರ್ ತಗೊಳ್ತೇನೆ ಅಂತ ಮುಂದೆ ಬಂದ್ರಲ್ಲಾ ಅವರು. ಪೇಪರ್ ಕೊಂಡವರು ಅದರ ಹೆಸರನ್ನು ಮಾತ್ರ ಬದಲಾಯಿಸಬಾರದು” ಎಂದರು.
ಸಾಯಂಕಾಲವೇ ಮದುಮಕ್ಕಳು ಮಧುಚಂದ್ರಕ್ಕೆಂದು ತೆರಳಿದರು. ಬಂದ ನೆಂಟರು ಅವರವರ ಮನೆಗೆ ಹೋದರು. ತಮ್ಮ ಅಣ್ಣನ ಸಂಸಾರವನ್ನು ಬೆಂಗಳೂರಿನಲ್ಲಿರುವ ತಮ್ಮ ಮನೆಗೆ ಕರೆದುಕೊಂಡು ಹೋದ. ರಾತ್ರಿ ಊಟವಾದ ನಂತರ ಗಿರೀಶ ಅಣ್ಣನನ್ನು ಟೆರೆಸ್ ಮೇಲೆ ಕರೆದುಕೊಂಡು ಹೊರಟ.
“ಅಣ್ಣ, ಹೇಗೆ ಹೇಳಬೇಕು, ಎಲ್ಲಿಂದ ಶುರು ಮಾಡಬೇಕು ಎಂದು ತಿಳಿಯುತ್ತಿಲ್ಲ” ಎಂದು ಎತ್ತಲೋ ನೋಡುತ್ತಾ ನಿಂತ. ಸ್ವಲ್ಪ ಹೊತ್ತು ಬಿಟ್ಟು “ದುಬೈಯ ಜೀವನ ಸಾಕಾಯಿತು. ಒಂದು ತರಹದ ಯಾಂತ್ರಿಕ ಬದುಕು. ಮಕ್ಕಳೀಗ ರೆಕ್ಕೆ ಬಲಿತ ಹಕ್ಕಿಗಳು. ಒಬ್ಬೊಬ್ಬರಾಗಿ ದೂರವಾಗುತ್ತಿದ್ದಾರೆ. ಮೊದಲನೆಯವನು ಅಮೆರಿಕಾದಲ್ಲಿ ನೆಲಸುತ್ತಾನೆ, ಎರಡನೆಯ ಮಗ ಡೆನ್ಮಾರ್ಕಿನಲ್ಲಿ. ನಾವೀಗ ಮರಳಿ ಗೂಡಿಗೆ ಬರಬೇಕಾದವರು. ಎಲ್ಲ ಸರಿಯಾಯಿತು ಎನ್ನುವಾಗ ಅನಾರೋಗ್ಯದ ಸಮಸ್ಯೆ, ರಾಧಿಕಾಳಿಗೆ ಆಗಾಗ ಹುಷಾರು ತಪ್ಪುತ್ತಿದೆ. ಹಾಗಾಗಿ ಇನ್ನೊಂದೆರಡು ವರ್ಷಗಳಲ್ಲಿ ಭಾರತಕ್ಕೇ ಬಂದು ನೆಲಸಲು ನಿಶ್ಚಿಯಿಸಿದ್ದೇನೆ. ಎಲ್ಲಿಗೆ ಹೋದರೂ ಊರನ್ನು ಮರೆಯಲಾಗುತ್ತಿಲ್ಲ, ಊರಿನ ಸೊಸೆಯನ್ನು ತರಬೇಕೆಂಬಾಸೆ ಇತ್ತು, ಹಾಗಾಗಲಿಲ್ಲ. ಕೊನೆಗೆ ಕರಿಮಣಿಯನ್ನಾದರೂ ಸರಿಯಂತ ಊರಿನಿಂದ ತರಿಸಿದ್ದು. ಈಗಿನ ಕಾಲದ ಹುಡುಗಿ ಎಷ್ಟು ದಿನ ಆ ಕರಿಮಣಿ ಹಾಕುತ್ತಾಳೋ ಗೊತ್ತಿಲ್ಲ.’’
ಗಿರಿಧರ ತಮ್ಮನ ಮಾತನ್ನು ಅರ್ಧಕ್ಕೆ ತುಂಡರಿಸಿ ಅರ್ಥವಾಯಿತೆಂಬಂತೆ “ಗೊತ್ತಾಯಿತು ಗಿರೀಶ, ಅದಕ್ಕಾಗಿ ಸಂಕೋಚ ಏಕೆ? ನಿನಗೆ ಪ್ರಾಪರ್ಟಿ ಶೇರ್ ಮಾಡಬೇಕಾಗಿದೆ ತಾನೇ? ಹೇಗೆ ಮಾಡಬೇಕೆಂಬುದನ್ನು ನೀನೇ ಹೇಳು’’ ಎಂದರು.
“ಅಯ್ಯೋ ಹಾಗಲ್ಲಣ್ಣ, ಅದೇ ಅಪ್ಪ ಕಟ್ಟಿಸಿದ ಹಳೇ ಮನೆಯಲ್ಲೇ ನೆಲಸಬೇಕೆಂಬ ಆಸೆ ಇದೆ. ಕೃಷಿ ಮಾಡಬೇಕೆಂಬ ಆಸೆಯೂ ಇದೆ. ರಾಧಿಕಾಳೂ ಒಪ್ಪಿದ್ದಾಳೆ. ಅದಕ್ಕೆ ಪ್ರಾಪರ್ಟಿ ಶೇರ್ ಏಕೆ ಮಾಡಬೇಕು ಹೇಳು? ಸಾಧ್ಯವಾದಷ್ಟು ದಿನ ಒಟ್ಟಿಗಿರೋಣ.” ಗಿರಿಧರನಿಗೆ ಸಮಾಧಾನವಾಯಿತು “ಆಯಿತಪ್ಪ, ನೀನಂದಂತೆ ಆಗಲಿ” ಎಂದ.
ಗಿರೀಶ ಮಾತು ಮುಂದುವರಿಸುತ್ತ “ನಿನ್ನ ಅಗ್ಗಿಷ್ಟಿಕೆಯ ಸುದ್ಧಿ ದುಬೈಯಲ್ಲೂ ಹರಡಿದೆ. ಊರಿನಿಂದ ಬಂದ ಕೆಲವರು ಪತ್ರಿಕೆಯ ಬಗ್ಗೆ ಒಳ್ಳೆಯ ಮಾತಾಡುತ್ತಿದ್ದರು. ಕೇಳಿ ಹೆಮ್ಮೆ ಎನಿಸಿತು. ಹಾಂ ಅಣ್ಣ, ನಿನ್ನ ದಿನಪತ್ರಿಕೆಯಲ್ಲಿ ನಾನು ಇನ್ವೆಸ್ಟ್ ಮಾಡ್ತೇನೆ. ಪ್ರಿಂಟಿಂಗ್ ಮೆಷಿನ್ನಿಗೆ ಎಷ್ಟಾಗುತ್ತದೆಂದು ಹೇಳು, ಎರಡು ತಿಂಗಳಲ್ಲಿ ಹಣ ಕಳುಹಿಸುತ್ತೇನೆ. ನಿನ್ನ ಒಳ್ಳೆಯ ಕೆಲಸದಲ್ಲಿ ಕೈ ಜೋಡಿಸುವಾಸೆ, ನಿನಗೆ ತೊಂದ್ರೆ ಇಲ್ಲ ತಾನೇ?’’
ಗಿರಿಧರನಿಗೆ ತನ್ನ ಕಿವಿಯನ್ನೇ ನಂಬಲಾಗಲಿಲ್ಲ, ಕಣ್ಣು ತುಂಬಿ ಬಂತು. ತಮ್ಮನ ಕೈಯನ್ನು ಹಿಡಿದುಕೊಂಡು ಗಳಗಳನೆ ಅತ್ತ.