ಸಾಮಾನ್ಯವಾಗಿ ಪತ್ನಿಯಾದವಳು ಏನಾದರೂ ಸಲಹೆ ಕೊಡುವ ಪ್ರಯತ್ನ ಮಾಡಿದರೆ ‘ನಿನಗೇನು ಗೊತ್ತಾಗುತ್ತದೆ, ಬಾಯಿ ಮುಚ್ಚು’ ಎಂಬ ಭಂಡ ಉತ್ತರ ಕೊಡುವವರು ಇದ್ದೇ ಇರುತ್ತಾರೆ. ಅಮ್ಮಂದಿರು ಮಕ್ಕಳಿಗೇನಾದರೂ ತಿಳಿಯ ಹೇಳುವ ಪ್ರಯತ್ನ ಮಾಡಿದರೂ ‘ಅವಳಿಗೇನು ಗೊತ್ತಾದೀತು’ ಎಂದು ಅಮ್ಮನನ್ನು ಕೇವಲ ಮಾಡುವ ಅಪ್ಪಂದಿರೂ ಇಲ್ಲದಿಲ್ಲ. ಪರಸ್ಪರರನ್ನು ಗೌರವಿಸಿಕೊಂಡು ಬಾಳುವ ಮನೆಯ ಮಕ್ಕಳೂ ಅದನ್ನೇ ಕಲಿಯುತ್ತಾರೆ. ಅನಾದರವನ್ನೇ ಕಂಡು ಬೆಳೆದವರು ಮುಂದೆ ಸಂಗಾತಿಯಾದವರನ್ನು ಅವಗಣನೆ ಮಾಡುವುದನ್ನು ಕಲಿಯುತ್ತಾರೆ. ಕಟುಕ ಸಾಕಿದ ಗಿಣಿಗೂ ಋಷಿ ಸಾಕಿದ ಗಿಣಿಗೂ ವ್ಯತ್ಯಾಸವೇನೆಂದು ನಮಗೆ ತಿಳಿದೇ ಇದೆಯಲ್ಲ!
ಮಹಾಭಾರತದಲ್ಲಿ ಭಾನುಮತಿಯದು ಮುಖ್ಯವಾದರೂ ಮುಖ್ಯವಲ್ಲದ ಪಾತ್ರ. ಕಳಿಂಗದೇಶದ ರಾಜ ಚಿತ್ರಾಂಗದನ ಮಗಳು, ಅಪ್ರತಿಮ ಸುಂದರಿಯೆಂದೇ ವಿಖ್ಯಾತಳಾದವಳು. ತುಂಬಿಕೊಂಡ ಮೈಕಟ್ಟು, ನೀಳವಾದ ಕೇಶರಾಶಿ. ಸೌಂದರ್ಯವತಿಯೆಂದು ಯಾರೇ ಆದರೂ ಕಲ್ಪಿಸಿಕೊಳ್ಳಬಹುದಾದ ನಿಲವಿನವಳು. ಪ್ರಾಯ ಪ್ರಬುದ್ಧಳಾದ ಅವಳಿಗೆ ಅರಸ ಚಿತ್ರಾಂಗದ ಸ್ವಯಂವರವನ್ನು ಏರ್ಪಡಿಸುತ್ತಾನೆ. ಸುಯೋಧನ, ಮತ್ತವನ ಆಪ್ತಮಿತ್ರ ಕರ್ಣನೂ ವರರ ಸಾಲಿನಲ್ಲಿ ಕುಳಿತಿರುತ್ತಾರೆ. ಒಬ್ಬೊಬ್ಬರನ್ನೇ ದಾಟಿ ಬಂದ ಭಾನುಮತಿ ಸುಯೋಧನನನ್ನೂ ದಾಟಿ ಸಾಗಿಬಿಡುತ್ತಾಳೆ. ಇದರಿಂದ ಮಿತ್ರ ವ್ಯಾಕುಲಗೊಂಡುದನ್ನು ತಿಳಿದ ಕರ್ಣ ಅವಳನ್ನು ಅಪಹರಿಸಿ ತನ್ನೊಡೆಯನಿಗೆ ಮದುವೆ ಮಾಡಿಸುತ್ತಾನೆ. ಕಳಿಂಗದೇಶದ ಕುವರಿ ಹಸ್ತಿನಾವತಿಯ ಸೊಸೆಯಾಗುತ್ತಾಳೆ. ಸುಯೋಧನ ಅವಳಿಗೆ ಒದಗಿಸಿದ ಸುಖಸಂತೋಷಗಳೇನೋ ಕೃಷ್ಣನೇ ಬಲ್ಲ. ಕರಣೇಷು ದಾಸಿಯರು ಸುಯೋಧನನಿಗೆ ಅಗತ್ಯವೇ ಇದ್ದಿರಲಿಕ್ಕಿಲ್ಲ ಎಂದುಕೊಳ್ಳೋಣ. ಆದರೆ ಕರ್ಯೇಷು ಮಂತ್ರಿಯಾಗಿ ಆಕೆ ತನ್ನ ಕರ್ತವ್ಯವನ್ನು ನಿರ್ವಹಿಸಹೊರಟರೂ ತನ್ನ ದುಷ್ಟ ಚತುಷ್ಟಯದ ಜೊತೆಗೆ ಅತ್ಯಾಪ್ತವಾಗಿದ್ದ ದುರ್ಯೋಧನನಿಗೆ ಭಾನುಮತಿಯ ಸಲಹೆಗಳು ರುಚಿಸುವುದಕ್ಕಿದೆಯೇ?
ಪಾಂಡವರು ವನವಾಸದಲ್ಲಿದ್ದ ಸಮಯದಲ್ಲಿ ಅವರ ಸಂಕಟವನ್ನು ಹೆಚ್ಚಿಸುವುದಕ್ಕೆಂದು ಘೋಷಯಾತ್ರೆಗೆ ತೊಡಗಿದ ಕೌರವ ಗಂಧರ್ವರಿಂದ ಅಪಹೃತನಾದಾಗ ಕರ್ಣ ವ್ಯಾಪ್ತಿಪ್ರದೇಶದಲ್ಲಿಯೇ ಇರದಂತೆ ಓಡಿದ್ದ. ಪಾಂಡವರಲ್ಲಿ ಬಂದು ಸೆರಗೊಡ್ಡಿ ಬೇಡಿದವಳು ಭಾನುಮತಿಯೇ. ಎಂತಹಾ ವಿರ್ಯಾಸ! ಯಾರನ್ನು ತನ್ನ ಗಂಡನೇ ಇತರ ಧೂರ್ತರೊಂದಿಗೆ ಸೇರಿಕೊಂಡು ಕಾಡುಪಾಲಾಗಿಸಿದ್ದನೋ ಅದೇ ಪಾಂಡವರಲ್ಲಿ ತನ್ನರಸನನ್ನು ಬಿಡಿಸಿ ಕೊಡಿ ಎಂದು ಅಂಗಲಾಚುವುದು ಎಷ್ಟು ಹೀನಾಯ ಪರಿಸ್ಥಿತಿ! ಆದರೆ ಅವಳು ತನ್ನ ಕರ್ತವ್ಯವನ್ನು ನಿರ್ವಹಿಸಿದಳು. ತಮ್ಮನ ಮಡದಿ ಎಂದರೆ ಮಗಳ ಸಮಾನವೆಂದೇ ತಿಳಿದ ಧರ್ಮಜ ತನ್ನ ಸಹೋದರನಾದ ಪಾರ್ಥನ ಮನವೊಲಿಸಿ ‘ಇತರರ ಎದುರು ನಾವು ನೂರೈದು ಮಂದಿ, ನಾವೇ ಆದರೆ ನೂರು ಮತ್ತೈದು ಮಂದಿ’ ಎಂದು ಬುದ್ಧಿಹೇಳಿ ಕೌರವನನ್ನು ಬಿಡಿಸಿಕೊಂಡು ಬರುವಂತೆ ಹೇಳಿದ್ದು ಭಾನುಮತಿಯ ಹಣೆಯ ಕುಂಕುಮವನ್ನು ಉಳಿಸಲೆಂದೇ.
ಆದರೇನು ಮಾಡೋಣ, ಕಹಿಬೇವಿನ ಮರದ ಬುಡಕ್ಕೆ ಬೆಲ್ಲ ಹಾಕಿ ಬೆಳೆಸಿದರೂ ಅದು ಸಿಹಿಯಾಗುವುದಕ್ಕಿಲ್ಲವಲ್ಲ! ಸುಯೋಧನ ಬದಲಾಗುವುದಕ್ಕೆ ಹುಟ್ಟಿದವನೇ ಅಲ್ಲ. ಅವನ ಬದುಕು ಮೋಕ್ಷದೆಡೆಗಿನ ಪಯಣವೂ ಅಲ್ಲ. ‘ಅಧರ್ಮವೆಂದರೇನೆಂದು ನನಗೆ ತಿಳಿದಿದೆ, ಆದರೂ ಬಿಡಲಾರೆ’ ಎಂಬ ಮದದಿಂದಲೇ ಛಲದಂಕ ಚಕ್ರೇಶ್ವರನಾಗಿ ಮೆರೆದವನು ಆತ. ಸಂಗ್ರಾಮಕ್ಕಿಂತ ಮೊದಲು ಕೃಷ್ಣ ಸಂಧಾನಕ್ಕಾಗಿ ಹಸ್ತಿನಾವತಿಗೆ ಬಂದಾಗ ಅಹಂಕಾರಿ ಕೌರವ ಕೃಷ್ಣನನ್ನು ಬಂಧಿಸಲು ಅಪ್ಪಣೆ ನೀಡುತ್ತಾನೆ. ಆಕಾಶ ಭೂಮಿ ಪಾತಾಳಗಳನ್ನು ತನ್ನ ಪಾದದಲ್ಲೇ ಅಳೆದ, ಬ್ರಹ್ಮಾಂಡವನ್ನು ತನ್ನಲ್ಲಿರಿಸಿಕೊಂಡ, ಮಹಾವಿಷ್ಣುವನ್ನು ಬಂಧಿಸುವುದಕ್ಕೆ ಶಕ್ತನಾದವನಾದರೂ ಯಾರು? ಕೃಷ್ಣ ವಿಶ್ವರೂಪವನ್ನು ತೋರಿಸಿದಾಗ ಅದನ್ನು ನೋಡುವ ಭಾಗ್ಯ ಎಲ್ಲರಿಗೂ ಒದಗಿದರೂ ಕೌರವಾದಿ ದುಷ್ಟರಿಗೆ ಒದಗಲಿಲ್ಲ. ಆದರೆ ಭಾನುಮತಿಗೆ ಒದಗಿತ್ತು ಎಂಬುದೇ ಅವಳ ಹಿರಿಮೆ. ಶ್ರೀಮನ್ನಾರಾಯಣನನ್ನು ಶಂಖ ಚಕ್ರ ಗದಾಪದ್ಮ ಹಸ್ತನಾಗಿ ಕಣ್ತುಂಬಿಕೊಳ್ಳುವ ಭಾಗ್ಯ ಅವಳದ್ದಾಗಿತ್ತು. ಅಂತಹಾ ಪುಣ್ಯವಂತೆ ಅವಳಾದರೂ ತನ್ನ ಗಂಡನ ಮನಸ್ಸನ್ನು ಪರಿವರ್ತಿಸಲಾಗಲಿಲ್ಲ ಎಂಬುದು ಅವಳ ಬದುಕಿನ ಸೋಲು.
ದ್ರೌಪದಿಯ ಸಿರಿಮುಡಿಯನ್ನು ಕಟ್ಟಿಸುವ ನಿರ್ಧಾರ ಕೃಷ್ಣ ತೆಗೆದುಕೊಳ್ಳಲೇಬೇಕಾಗಿದ್ದುದು ಭೂಭಾರ ಹರಣಕ್ಕಾಗಿ ಎಂಬುದೇನೋ ನಿಜವೇ. ಆದರೆ ಪರಿಣಾಮವಾಗಿ ಅನೇಕ ಹೆಂಗಳೆಯರ ಹಣೆ ಬರಿದಾಗಿ ಶಿರವೂ ಬರಿದಾಗಿ ಬಾಳೇ ಬರಿದಾಗುವ ದುರ್ವಿಧಿ ಇದ್ದದ್ದೂ ಬದುಕಿನ ಒಂದು ಭಾಗವೇ. ಕೃಷ್ಣನಲ್ಲಿ ‘ತನ್ನ ಮಾಂಗಲ್ಯ ಭಾಗ್ಯವನ್ನು ಉಳಿಸಿಕೊಡು ಸ್ವಾಮೀ’ ಎಂದು ಅವಳು ಅಂಗಲಾಚಿದರೂ ಕೃಷ್ಣ ಭರವಸೆಯ ಮಾತುಗಳನ್ನು ಆಡಲಾರ. ‘ಸ್ತ್ರೀಗೆ ದೇವರೆಂದರೆ ಪತಿಯೇ. ನೀನು ಅವನಿಗೇ ಮನವರಿಕೆ ಮಾಡಿಸು’ ಎಂಬ ಸೂಚನೆಯನ್ನಷ್ಟೇ ಕೊಟ್ಟ. ತನ್ನ ಮಾತುಗಳನ್ನು ಎಂದೂ ಕೌರವ ಕೇಳುವವನಲ್ಲ ಎಂಬುದು ಅವಳಿಗೆ ತಿಳಿದಿಲ್ಲವೇ? ಆದರೂ ಒಂದಾಸೆ, ಈ ಸೂಚನೆ ಬಂದಿರುವುದು ಕೃಷ್ಣನಿಂದ ಎಂದ ಮೇಲೆ, ತನ್ನ ಪತಿಯ ಮನಃಪರಿವರ್ತನೆಯಾದರೆ..
ಕಂತುಪಿತನ ಮಹಿಮೆಯ ಕಣ್ಣಾರೆ ನೋಡಿ | ಮುಂತೆ ಯುದ್ಧವ ಮಾಳ್ಪೆಯ | ಕುಂತಿಯಾತ್ಮಜರುಗಳು ಶಿವನೊಲು ಶಕ್ತಿ | ಯಂತೆ ದ್ರೌಪದಿಯೆಂಬವಳು
ಮುತ್ತಯ್ಯ ದ್ರೋಣರಾಡಿದ | ಬೋಧೆಯ ಮೀರಿ | ಮಿತ್ರಜಾದ್ಯರು ಪೇಳಿದ || ಸತ್ಯವೆಂದಂಬುಕೇಳಿಗೆ| ಪೋಗಲು ನಿಮಗನರ್ಥವಾದುದು ಕಡೆಗೆ ||
ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಈಶಾನವೆಂಬ ಪಂಚಮುಖಗಳಿಂದ ಕೂಡಿದ ಪರಮೇಶ್ವರನು ಆದಿಶಕ್ತಿಯಾದ ಪಾಂಡವರನ್ನು ಕೂಡಿಕೊಂಡಿದ್ದಂತೆ ಪಾಂಡವರೈವರು ದ್ರೌಪದಿಯನ್ನು ಕೂಡಿಕೊಂಡಿದ್ದಾರೆ. ಮಹಾವಿಷ್ಣುವಾದ ಕೃಷ್ಣನೂ ಅವರೆಡೆಗೆ ಇದ್ದಾನೆ ಎಂದರೆ ಪ್ರಳಯಕಾಲದಲ್ಲಿ ಹರಿಹರರು ಒಂದಾದ ಹಾಗೆ ಎಂಬುದನ್ನು ಪರಿಪರಿಯಾಗಿ ಕೌರವನಿಗೆ ತಿಳಿಯಹೇಳಿದರೂ ಅವನು ಅರ್ಥಮಾಡಿಕೊಳ್ಳುವವನಲ್ಲ. ಸೀತೆಯನ್ನು ಅಪಹರಿಸಿದ ರಾವಣನ ಉದಾಹರಣೆಯನ್ನೋ ರುಮೆಯನ್ನು ಅಪಹರಿಸಿದ ವಾಲಿಯ ಉದಾಹರಣೆಯನ್ನೋ ನೀಡಿ, ತನ್ನ ಕೈಲಾದ ಪ್ರಾಮಾಣಿಕ ಪ್ರಯತ್ನವನ್ನಂತೂ ಆಕೆ ಮಾಡಿಯೇ ಮಾಡಿದಳು. ಆದರೆ ಪ್ರಯೋಜನವೇನೂ ಆಗಲಿಲ್ಲ. ವೈಧವ್ಯವೆಂಬುದು ಅವಳ ಹಣೆಯ ಮೇಲೆಯೇ ಇತ್ತಲ್ಲ!
ಮಹಾಭಾರತ ಯುದ್ಧವೆಲ್ಲ ಮುಗಿದ ಮೇಲೆ ಶ್ರೀಕೃಷ್ಣ ಗಂಗಾಸ್ನಾನ ಮಾಡಿ ಅಳಿದವರಿಗೆ ಜಲತರ್ಪಣ ಕೊಡುವ ವೇಳೆಗೆ ಭಾನುಮತಿಯನ್ನು ಗಮನಿಸುತ್ತಾನೆ. ಸಹಗಮನ ಮಾಡದೇ ಉಳಿದ ಅವಳ ವಿವೇಕ ಉಳಿದವರಿಗೂ ಆದರ್ಶವಾಗಲಿ ಎಂದು ಹರಸುತ್ತಾನೆ. ‘ಬದುಕಿರುವಾಗಲೇ ಪತಿಯ ದಾರಿಯಲ್ಲಿ ಹೋಗದವಳಿಗೆ, ಪತಿ ಹೋದ ಮೇಲೆ ಆ ದಾರಿಯಲ್ಲಿ ಹೋಗಿ ಸಾಧಿಸುವುದೇನಿದೆ?’ ಎಂಬುದು ಭಾನುಮತಿಯ ಮನದಾಳದ ಪ್ರಶ್ನೆ.
ಭಾನುಮತಿಯ ಭಾವತಲ್ಲಣಗಳು ಮುಗಿಯುವಂಥವೇ ಅಲ್ಲ. ಕರ್ತವ್ಯದಲ್ಲಿ ಗಂಡನಿಗೆ ಮಂತ್ರಿಯಾಗಬೇಕು ಎನ್ನುತ್ತದೆ ಶಾಸ್ತ್ರ. ಆದರೆ ಗಂಡನಾದವನಿಗೆ ಅವಳನ್ನು ಮಂತ್ರಿಯಾಗಿ ಕಾಣುವ ಮನಸ್ಸಿರಬೇಕಲ್ಲ! ಅದೇ ರೀತಿ ಹೆಂಡತಿಯಾದವಳು ಗಂಡನಿಗೆ ತಾನು ಕೊಡಬಹುದಾದ ಸಲಹೆ ಸೂಚನೆಗಳೇನು ಎಂಬುದರ ಅರಿವೂ ಇರಬೇಕಲ್ಲ? ಒಂದೆಡೆಯಲ್ಲಿ ಕೂಡುಕುಟುಂಬದಲ್ಲಿರುವ ಗಂಡನನ್ನು ಮನವೊಲಿಸಿ ಪ್ರತ್ಯೇಕ ಸಂಸಾರ ಹೂಡುವ ಸಂಕುಚಿತ ಮನಃಸ್ಥಿತಿಯ ಹೆಣ್ಣುಮಕ್ಕಳು, ಮನೆಗೆ ಬಂದ ಸೊಸೆಯನ್ನು ಬಾಳಿಸಲಾಗದ ಅತ್ತೆ-ಮಾವ. ಸಂಬಂಧಗಳು ಒಡಕಾಗುತ್ತಲೇ ಸಾಗುತ್ತವೆ ವಿನಾ ಬಾಳು ಸುಗಮವಾಗುವುದಿಲ್ಲ. ತನ್ನ ತಂದೆತಾಯಿಗೆ ಮಾಡಬೇಕಾದ ಕನಿಷ್ಠ ಸೇವೆಗೂ ಹೆಂಡತಿಯ ಅನುಮತಿಯನ್ನು ಕಾಯುವ ಗಂಡನಿಗಿಂತ ಹೀನಾಯ ಸ್ಥಿತಿ ಅದಾರದ್ದು? ಹಾಗೆಯೇ ಊರಿನಲ್ಲಿರುವ ಅಪ್ಪ-ಅಮ್ಮನೊಂದಿಗೆ ಮಾತಾಡಬೇಕಾದರೂ ಗಂಡನ ಒಪ್ಪಿಗೆ ಪಡೆಯಬೇಕಾದ ಹೆಂಡತಿಯ ಸ್ಥಿತಿ ಅದೆಷ್ಟು ಚಿಂತಾಜನಕವಾದದ್ದು. ಕಲ್ಪಿಸಿಕೊಳ್ಳಬಲ್ಲೆವೆ? ಇವರೆಲ್ಲರಿಗೂ ಕೊನೆಯಲ್ಲಿ ಉಳಿಯುವುದು ಭಾನುಮತಿ ಅನುಭವಿಸಿದ ವಿಷಾದವೊಂದೇ ತಾನೆ? ಬದಲಾದರೆ ಬದುಕು ಬಂಗಾರವಾಗುತ್ತದೆ ಎಂಬುದು ಖಂಡಿತಾ ತಿಳಿದಿದೆ, ಆದರೆ ಬದಲಾಯಿಸಲಾಗದ ಅಸಹಾಯಕತೆ. ಮಹಾಭಾರತದುದ್ದಕ್ಕೂ ವಿದುರ ಅನುಭವಿಸಿದ ಯಾತನೆ ಇದೇ ಬಗೆಯದು.
ಮನೆಮನೆಗಳೊಳಗೂ ಗಂಡಹೆಂಡಿರ ನಡುವೆ ಅದೆಷ್ಟೋ ಚರ್ಚೆಗಳು ನಡೆಯಬಹುದು. ವಾಗ್ಯುದ್ಧವೇ ನಡೆಯಬಹುದು. ಆದರೆ ಕೆಲಕಾಲ ಮನಸ್ಸನ್ನು ಶಾಂತವಾಗಿಸಿಕೊಂಡು ಯೋಚನೆ ಮಾಡಬಲ್ಲೆವಾದರೆ ಬದುಕು ಅತ್ಯಂತ ಹಗುರ ಮತ್ತು ಸುಲಭ. ಅನಗತ್ಯವಾಗಿ ಯಾವ್ಯಾವುದೋ ವಿಷಯವನ್ನು ಕೆದಕಿಕೊಂಡು, ಎಲ್ಲವೂ ತನ್ನದೇ ಸಮಸ್ಯೆಯೆಂಬಂತೆ ಭ್ರಮಿಸಿಕೊಂಡು ಬಾಳುವವರು ಭಾನುಮತಿಯನ್ನು ನೆನೆಯಬೇಕು. ಪುರಾಣಪಾತ್ರಗಳು ಸಾರ್ವಕಾಲಿಕವಾಗಿ ಆದರ್ಶವೇ ಹೌದು. ಪ್ರತಿಯೊಂದು ಪಾತ್ರದ ಸಂದೇಶವೇನೆಂದು ಆಯಾ ಪಾತ್ರವಾಗಿ ಯೋಚಿಸಿದಾಗ ಅರ್ಥವಾಗುತ್ತದೆ. ತನ್ನ ಕಣ್ಣಮುಂದೆಯೇ ಅನಾಚಾರಗಳು ನಡೆಯುತ್ತಿದ್ದರೂ ಅದನ್ನು ತಡೆಯಲಾಗದ ಅಸಹಾಯಕ ಹೆಣ್ಣುಮಕ್ಕಳ ಪ್ರತೀಕ ಈ ಭಾನುಮತಿ.
ಸಾಮಾನ್ಯವಾಗಿ ಪತ್ನಿಯಾದವಳು ಏನಾದರೂ ಸಲಹೆ ಕೊಡುವ ಪ್ರಯತ್ನ ಮಾಡಿದರೆ ‘ನಿನಗೇನು ಗೊತ್ತಾಗುತ್ತದೆ, ಬಾಯಿ ಮುಚ್ಚು’ ಎಂಬ ಭಂಡ ಉತ್ತರ ಕೊಡುವವರು ಇದ್ದೇ ಇರುತ್ತಾರೆ. ಅಮ್ಮಂದಿರು ಮಕ್ಕಳಿಗೇನಾದರೂ ತಿಳಿಯ ಹೇಳುವ ಪ್ರಯತ್ನ ಮಾಡಿದರೂ ‘ಅವಳಿಗೇನು ಗೊತ್ತಾದೀತು’ ಎಂದು ಅಮ್ಮನನ್ನು ಕೇವಲ ಮಾಡುವ ಅಪ್ಪಂದಿರೂ ಇಲ್ಲದಿಲ್ಲ. ಪರಸ್ಪರರನ್ನು ಗೌರವಿಸಿಕೊಂಡು ಬಾಳುವ ಮನೆಯ ಮಕ್ಕಳೂ ಅದನ್ನೇ ಕಲಿಯುತ್ತಾರೆ. ಅನಾದರವನ್ನೇ ಕಂಡು ಬೆಳೆದವರು ಮುಂದೆ ಸಂಗಾತಿಯಾದವರನ್ನು ಅವಗಣನೆ ಮಾಡುವುದನ್ನು ಕಲಿಯುತ್ತಾರೆ. ಕಟುಕ ಸಾಕಿದ ಗಿಣಿಗೂ ಋಷಿ ಸಾಕಿದ ಗಿಣಿಗೂ ವ್ಯತ್ಯಾಸವೇನೆಂದು ನಮಗೆ ತಿಳಿದೇ ಇದೆಯಲ್ಲ!
ಎಷ್ಟೋ ಮನೆಗಳಲ್ಲಿ ಮನೆಯ ಮಗ ದಾರಿತಪ್ಪಿದಾಗ ಮದುವೆ ಮಾಡಿಯಾದರೂ ತಿದ್ದಿಕೊಂಡಾನೇ ಎಂದು ನೋಡುತ್ತಾರೆ. ಹೆತ್ತವರ ಮುದ್ದಿನಿಂದಲೇ ಹಾಳಾದ, ಅವರಿಂದಲೂ ಸ್ವತಃ ತಿದ್ದಲಾಗದ ಮನಸ್ಸನ್ನು ಹೆಣ್ಣೊಬ್ಬಳು ತಿದ್ದಿಯಾಳು ಎಂಬ ಆಶಾಭಾವ. ಆ ಭರವಸೆಯೇನೋ ಒಳ್ಳೆಯದೇ. ಆದರೆ ಅವಳಿಂದ ತಿದ್ದಲು ಸಾಧ್ಯವಾಗದೇ ಹೋದಾಗ ದೂಷಣೆಗೊಳಗಾಗುವ ದುಸ್ಥಿತಿಯೂ ಅವಳದೇ. ಇನ್ನೂ ಕೆಲವೆಡೆ, ‘ಮನೆಯಲ್ಲಿ ಕೈತೊಳೆದು ಮುಟ್ಟಬೇಕು ಎಂಬಂಥ ಹೆಂಡತಿಯಿದ್ದಾಳೆ, ಅಂದರೂ ಇವನು ಹೀಗೆ’ ಎಂಬ ಮಾತುಗಳನ್ನು ಕೇಳುತ್ತೇವೆ. ಅವಳ ಮೌಲ್ಯ ಅರ್ಥಮಾಡಿಕೊಳ್ಳದವನನ್ನು ಅವಳಾದರೂ ಏನು ಮಾಡಿಯಾಳು? ಆದದ್ದು ಆಗಲಿ, ದೇವರು ತನಗೊದಗಿಸಿದ ಬದುಕು ಇದುವೇ ಅಂತಾದರೆ ಯಾರಿಂದಲೂ ಬದಲಾಯಿಸಲಾಗದು ಎಂದು ಮನಸ್ಸನ್ನು ಕಲ್ಲುಮಾಡಿಕೊಂಡು ಕುಳಿತುಬಿಡುತ್ತಾಳೆ. ಹೀಗೆ ಸ್ವತಃ ಬಂಡೆಗಳಾಗುವ ಅಹಲ್ಯೆಯರು ಅದೆಷ್ಟು ಮಂದಿ ನಮ್ಮ ನಡುವೆ ಇಲ್ಲ?
ಮನೆಮನೆಯೊಳಗಿನ ಭಾನುಮತಿಯರನ್ನು ಕೃಷ್ಣ ಪೊರೆಯಲಿ. ಸುಯೋಧನನಂಥವರ ಮನಸ್ಸು ಬದಲಾಗಲಿ!