ಸತ್ಸಂಗತಿಯು ಅತ್ಯಂತ ಮಹತ್ತ್ವದ ಪರಿಣಾಮವನ್ನುಂಟು ಮಾಡುವುದಾಗಿರುತ್ತದೆ. ಸತ್ಪುರುಷರ ಸಹವಾಸವು ಎರಡು ಪ್ರಕಾರದಿಂದ ಆಗಲು ಶಕ್ಯವಿರುತ್ತದೆ. ಒಂದು – ಸತ್ಪುರುಷರ ದೇಹದ ಸಹವಾಸ. ಎರಡು – ಸತ್ಪುರುಷರು ಹೇಳಿದ ಸಾಧನೆ ಮಾಡುತ್ತಿರುವುದರ ಮೂಲಕ ಆಗುವ ಸಹವಾಸ. ಇವುಗಳಲ್ಲಿ ಮೊದಲನೆಯದು ಅಂದರೆ ಸತ್ಪುರುಷರ ದೇಹದ ಸಹವಾಸ ಪ್ರಾಪ್ತವಾಗುವುದು ಬಹಳ ಕಠಿಣ ಹಾಗೂ ದುರ್ಲಭವಾಗಿರುತ್ತದೆ. ಏಕೆಂದರೆ ನಿಜವಾದ ಸತ್ಪುರುಷರನ್ನು ತಿಳಿದುಕೊಳ್ಳುವುದು ಬಹಳ ಕಠಿಣವಿರುತ್ತದೆ. ಅಲ್ಲದೆ ಎಷ್ಟೋ ವೇಳೆ ಅವರ ಹೊರಗಿನ ವ್ಯವಹಾರವನ್ನು ನೋಡಿ ಮನಸ್ಸಿನಲ್ಲಿ ವಿಕಲ್ಪ ಬರುವ ಸಂಭವವಿರುತ್ತದೆ.
ಒಂದು ವೇಳೆ ತಿಳಿಯದೆ ಢೋಂಗಿ ಮನುಷ್ಯನ ಸಹವಾಸವು ಪ್ರಾಪ್ತವಾದರೆ ಅವನ ಸಹವಾಸದಿಂದ ಹಾನಿಯೂ ಉಂಟಾಗಬಹುದು. ಆದ್ದರಿಂದ ಮೊದಲನೆಯ ಅಂದರೆ ಸತ್ಪುರುಷರ ದೇಹದ ಸಹವಾಸದ ಮಾರ್ಗವು ಎಷ್ಟೋ ವೇಳೆ ಅಪಾಯಕಾರಿಯಾಗುವ ಸಂಭವವಿರುತ್ತದೆ. ಎರಡನೆಯ ಮಾರ್ಗದಿಂದ ಹೋಗುವುದರಲ್ಲಿ ಅಂದರೆ ಅವರು ಹೇಳಿದ ಸಾಧನೆ ಮಾಡುವುದರಲ್ಲಿ ಕಿಂಚಿತ್ತೂ ಅಪಾಯವಿರುವುದಿಲ್ಲ. ಏಕೆಂದರೆ ನಿಜವಾದ ಸಾಧುವೇ ಆಗಲಿ ಅಥವಾ ಢೋಂಗಿ ಸಾಧುವೇ ಆಗಲಿ ಯಾರೇ ಆದರೂ ಎರಡನೆಯವರಿಗೆ ಹೇಳುವಾಗ ಯೋಗ್ಯವಾದದ್ದನ್ನೇ ಹೇಳಬೇಕಾಗುತ್ತದೆ. ಅವನು ಢೋಂಗಿ ಆಗಿದ್ದರೂ ಕೂಡ ತನ್ನ ಢೋಂಗಿತನವನ್ನು
ಮುಚ್ಚಿಕೊಳ್ಳುವುದಕ್ಕಾಗಿಯಾದರೂ ಯೋಗ್ಯವಾದದ್ದನ್ನೇ ಹೇಳಬೇಕಾಗುತ್ತದೆ.
ಸಾಧಕನು ಶುದ್ಧಭಾವನೆಯಿಂದ ಆ ಸಾಧನೆಯನ್ನು ಮಾಡಿದ್ದಾದರೆ ಅವನಿಗೆ ಸತ್ಸಂಗತಿಯು ಪ್ರಾಪ್ತವಾದಂತಾಗಿ ಅವನ ಉದ್ದೇಶವು ಸಫಲವಾಗುತ್ತದೆ. ಸುದೈವದಿಂದ ನಿಜವಾದ ಸತ್ಪುರುಷರ ದೇಹದಿಂದ ಸಹವಾಸವು ಪ್ರಾಪ್ತವಾದದ್ದಾದರೆ ಸಾಧಕನ ಕಾರ್ಯವು ಅವನಿಗೆ ಅರಿಯದಂತೆಯೇ ಸಿದ್ಧವಾಗುತ್ತದೆ. ನಾವು ಯಾವ ವಾಹನದ ಆಶ್ರಯ ಹೊಂದುತ್ತೇವೆಯೋ ಆ ವಾಹನದ ವೇಗವು ನಮ್ಮದಾಗುತ್ತದಷ್ಟೆ. ನಾವು ಕೇವಲ ಆ ವಾಹನದಲ್ಲಿ ಕುಳಿತು ನಿಶ್ಚಲವಾಗಿ ಕುಳಿತುಕೊಳ್ಳುವುದೇ ನಾವು ಮಾಡಬೇಕಾದ ಕಾರ್ಯವಾಗಿರುತ್ತದೆ. ಅದರಂತೆ, ನಾವು ನಿಜವಾದ ಸತ್ಪುರುಷರ ಹತ್ತಿರ ಕೇವಲ ಬಿದ್ದುಕೊಂಡಿರಬೇಕು. ಸತ್ಪುರುಷರ ಸಹವಾಸದಲ್ಲಿ ನಾವು ಮಾಡುವಂತಹದೇನೂ ಇರುವುದಿಲ್ಲ. ಅಲ್ಲಿ ಕೇವಲ ನಮ್ಮ ಅಸ್ತಿತ್ವ ಮಾತ್ರ ಇರಬೇಕು. ಆದ್ದರಿಂದ ನಮ್ಮ ಅಹಂಕಾರಕ್ಕೆ ಅವಕಾಶವಿಲ್ಲದಂತಾಗಿ ವಾಸನಾಕ್ಷಯವಾಗಲು ಬಹಳ ಸಹಾಯವಾಗುತ್ತದೆ.
[ಸದ್ಗುರು ಮಹಾರಾಜರ ಪ್ರವಚನದಿಂದ.
ಅನುವಾದ: ಶ್ರೀ ದತ್ತಾತ್ರೇಯ ಅವಧೂತಕೃಪೆ: ಚೈತನ್ಯಾಶ್ರಮ, ಹೆಬ್ಬಳ್ಳಿ.]