ನದಿಯಾಗಿ ಹರಿದೆ ನೀನು
ಅಂಚೆಯೇರಿ ಬಳಿಗೆ ಬಂದೆ
ತಾಯಿಯಾಗಿ ಹಾಲು ನೀಡಿ
ಪೊರೆ ನೀನು ಈ ಶಿಶುವ
ಗಂಟೆಯಾಗಿ ಮಂತ್ರವಾಗಿ
ನಾದವಾಗಿ ವೇದವಾದೆ
ದೇವಿ ಜ್ಞಾನ ಜ್ಯೋತಿಯೆ
ಶ್ವೇತ ಶುಭ್ರ ರೂಪಿಣಿ
ಕವಿ-ಕಾಣಿಕೆ ನಿನ್ನ ವರ
ನೀ ತಾರಾ ನೀ ವರದಾ
ಕಶ್ಮೀರದ ವಂದ್ಯೆ ನೀ, ಶೃಂಗೇರಿಯ ಶಾರದೆ
ಬಲ್ಲವರ ಪ್ರವರ ನೀನೆ
ಕ್ಷರಾಕ್ಷರದಲ್ಲಿ ಕೂತು
ಮಾತಿನ ಜೇನ್ನೋಂಪಿ ನೂತು
ಕಿವಿಚಿತ್ತದ ಸಿಂಪಿಯಲ್ಲಿ
ಬೀಜಮಂತ್ರವಾಗಿ ಕೂತು
‘ಅ’ ಮಾತಿಗೆ ‘ಉ’ ಮಾತಿಗೆ
‘ಮ’ ಮಾತಿಗೆ ನಿತ್ಯ ಹೂತು
ಋಷಿವಾಣಿಯ ಪ್ರಣವವಾದೆ
ಲೋಕಗಾಯತ್ರಿ ರೂಪವಾದೆ
ಓಂಕಾರದ ಝೇಂಕಾರವೆ
ಯಮನ ಕದವ ಬಡಿದ
ನಚಿಕೇತನ ಮಾತೆಯೆ
ಅರವಿಂದವು ಮರಳಿ ಅರಳಿ
ಸಾವಿತ್ರಿಯ ರೂಪ ತಾಳಿ
ದಿವ್ಯಜೀವಗಾಥೆಯೆ
ಘನಮೌನಕು ಜಾತೆಯೆ
ನವಿಲ ಚಿತ್ತದಲ್ಲಿ ಕವಲು
ಅಂಡವೊಡೆದು ಬಂದು ಮರಿ
ಮೂಡಿತದಕೆ ರೆಕ್ಕೆಗರಿ
ತನ್ನ ಪ್ರಜ್ಞೆ ಪಂಕ ಮೆರೆದು
ತಮಂಧದ ಒಡಲ ಬಗೆಯೆ
ಶಿವಶಕ್ತಿಯ ಜ್ಞಾನವೆ
ಪ್ರತ್ಯಭಿಜ್ಞಾನ ಕಾಮವೆ
ಕಡಲ ಒಡಲಿನಿಂದ ಬಂದ
ಸಕಲ ಜ್ಞಾನ ತೆರೆ-ತೆರೆ
ಭೂಮಂಡಲ ಕರೆಯುತಿಹುದು
ಹಸುಗೂಸು ಮೊರೆಯುತಿಹುದು
ಮೊಲೆಹಾಲಿನ ತನನಕೆ
ಅಂಧಕಾರ ಹನನಕೆ
ನಿಮ್ಮ ಕೆಲಸ ಬಹಳವಿಹುದು
ಎದೆಯ ಚಿಪ್ಪು ತೆರೆದಿಹುದು
ನಿಲಬೇಕು ಅದರಲಿ
ಸದಾ ನೀನು ಶಾಶ್ವತಿ
ಜಗದಂಬೆ ಸರಸ್ವತಿ.