ದೈನಂದಿನ ಹೋರಾಟದಲ್ಲಿ ಬಸವಳಿದ ಜೀವಕ್ಕೆ ಮನುಷ್ಯತ್ವ, ಮಾಧವತ್ವ, ಒಳ್ಳೆಯತನದಲ್ಲಿ ನಂಬಿಕೆ, ದಾಸೋಹಕ್ಕಾಗಿ ಕಾಯಕ ತತ್ತ್ವಪರಿಪಾಲನೆ, ದುಡಿದೇ ಉಣ್ಣುವ ‘ಕಾಯಕವೇ ಕೈಲಾಸ’ ಎಂಬ ಅನುಭಾವದ ಅರಿವು, ಹೃದಯವೀಣೆಯ ತಂತಿ ಮೀಟಿದವರು ಸಿದ್ಧರು–ಸಾಧಕರು, ತಪಸ್ವಿಗಳು, ಅನುಭಾವಿಗಳು, ಶರಣರು, ವಚನಕಾರರು. ನಿತ್ಯದ ದಾಸರು, ಬದುಕಿನ ಮೌಲ್ಯಾದರ್ಶಗಳನ್ನು ಚರ್ಮವಾಗಿಸಿಕೊಂಡ ಬಸವತತ್ತ್ವ ನಿಜಾಚರಣೆಯ ಗುರು–ವಿರಕ್ತರು ನಮ್ಮಂತಹ ಶ್ರೀಸಾಮಾನ್ಯರಿಗೆ ‘ಏಣಿ’ಗಳಾಗಿ, ಆಧ್ಯಾತ್ಮಿಕ ಔನ್ನತ್ಯ ಸಾಧಿಸುವ ಹಾದಿಯಲ್ಲಿ ಅರಿವಿನ ದೀವಟಿಗೆಗಳಾದವರು.
ಹುಬ್ಬಳ್ಳಿ: ಸಿದ್ಧಾರೂಢಜ್ಜನ ಜೋಳಿಗಿ… ಊರಿಗೆಲ್ಲ ಹೋಳಿಗಿ!
ನೀವೂ ಈ ಮಾತು ಕೇಳಿರಬೇಕಲ್ಲ! – ಇದು ಜಗತ್ಪ್ರಸಿದ್ಧ ಉಕ್ತಿ. ವಿಚಾರ ಮತ್ತು ಆಚಾರ ಎರಡಕ್ಕೂ ಅನ್ವಯಿಸುವ ಮಾತು.
ಗೋಕರ್ಣದ ಮೇಷ್ಟುç ಡಾ. ಗೌರೀಶ ಕಾಯ್ಕಿಣಿ ಹೇಳಿದ ಮಾತು: “ನನಗೆ ವಿದ್ಯಾರ್ಥಿಗಿಂತ ‘ಸತ್ಯಾರ್ಥಿ’ ಹೆಚ್ಚು ಆಪ್ತ!”
ಮನುಷ್ಯನ ಘನತೆ ಬಾಳಬೇಕು. ಅದಕ್ಕೆ ಅನುಭಾವದ ಆಶ್ರಯ ಬೇಕು. ‘ಬೆಂದ್ರ ಬೇಂದ್ರೆ ಆದಿಯೋ ತಮ್ಮ’ ಎಂದ ವರಕವಿ ಬೇಂದ್ರೆ ಅವರ ಮಾತನ್ನು ಈ ಬೆಳಕಿನಲ್ಲಿ ಗ್ರಹಿಸಬೇಕು. ‘ತಿರುಕನಿಗೂ ತಿರುಗಿದ ಅನುಭವ ಅದ. ಅವಗ ತಿರುಕ ಅನ್ನಬಾರದು. ಯಾಕಂದ್ರ ನಮಗ ಆ ತಿರುಗಿದ ಅನುಭವ ಇಲ್ಲ!’ ಎಂದವರು ಅಂಬಿಕಾತನಯದತ್ತ.
ಖರೀದಿಸಿದ ಮಾವಿನಹಣ್ಣನ್ನು ಮನೆಗೊಯ್ದು ಏಕಾಂತದಲ್ಲಿ ತಿಂದು, ಹಳಹಳಿಸುವವರ ಮಧ್ಯೆ, ಅಲ್ಲೇ ನಿಂತು ತಿಂದು, ರುಚಿಯಾಗಿದ್ದರೆ, ಎಲ್ಲರಿಗೂ ಹಂಚಿಬಿಡುವ ಅವಧೂತರೆಲ್ಲಿ? ಅಂತಹ ವಿಭೂತಿಪುರುಷ ಪೂಜ್ಯ ಸಿದ್ಧಾರೂಢರು. ಅವರು ಅಧ್ಯಾತ್ಮ ಸತ್ಯಾರ್ಥಿ. “ತಿಳದೈತಿ ಅಂತಲ್ಲ; ತಿಳಕೋಬೇಕು ಅಂತ ಯಾವುದಕ್ಕೂ ಅಂಟಿಕೊಳ್ಳದ, ಬೆಸೆದುಕೊಳ್ಳದ ‘ಗ್ಲೋಬ್ ಟ್ರಾಟರ್’! ಹೊಡಬೇಕು…” ಎಂದವರು ಸಿದ್ಧಾರೂಢ ಅಜ್ಜ.
ಅಂತಹ ವ್ಯಾಖ್ಯಾನದ ಹಂಗಿಲ್ಲದ ಆಖ್ಯಾನ. ಸಿದ್ಧಾರೂಢಜ್ಜ ಮತ್ತು ಅಜ್ಜನವರ ಮಠ. ಅವರಿಂದಾಗಿ ಹುಬ್ಬಳ್ಳಿಗೆ ಇಂದು ವಿಶ್ವವಿಖ್ಯಾತಿ. ಹೂವು ಮತ್ತು ಬಳ್ಳಿಗಿರುವ ನಂಟಿನಷ್ಟೇ, ಅಜ್ಜನಿಗೂ-ಭಕ್ತರಿಗೂ ಅವಿನಾಭಾವ ಕರುಳ ಬಂಧsವಿದೆ.
‘ನಡೆ’ ಮತ್ತು ‘ನುಡಿ’ಯಲ್ಲಿ ಅದ್ವೈತ ಸಾಧಿಸಿದ ಮೇರು
‘ನಡೆ’ ಮತ್ತು ‘ನುಡಿ’ಯಲ್ಲಿ ಅದ್ವೈತವನ್ನು ಸಾಧಿಸಿದ ಮೇರು ಪೂಜ್ಯ ಶ್ರೀ ಸಿದ್ಧಾರೂಢರು. ಬದುಕಿದಂತೆ ಬೋಧಿಸಿದರು; ಬೋಧಿಸಿದಂತೆ ನಡೆದೂ ತೋರಿದರು. ಅಂತಹ ಹಠಯೋಗಿ. ಅಸಾಮಾನ್ಯ ತಪಸ್ವಿ. ತ್ರಿಕಾಲ ತ್ರಿಕರಣ ಶಿವಯೋಗಿ. ನಡೆದಾಡಿದ ದೇವರು. ನಂಬಿದವರಿಗೆ ಕಲ್ಪವೃಕ್ಷವೂ; ಕಾಮಧೇನುವೂ.
ಉತ್ತರ ಕರ್ನಾಟಕದ ಬಹುತೇಕ ಬಯಲುಸೀಮೆಯ ನಮ್ಮ ಹಿರೀಕರಿಗೆ ಕೃಷಿಯೇ ಕುಲಕಸುಬು. ಇದ್ದಷ್ಟರಲ್ಲಿಯೇ ಸಂತೃಪ್ತ ಜೀವನ. ಹೀಗಾಗಿ ನವನಾಗರಿಕತೆಯ ‘ಬಡತನ’ದ ಪರಿಭಾಷೆ ಅವರ ಬದುಕಿಗೆ ಅನ್ವಯಿಸದು. ಅಕ್ಷರಜ್ಞಾನ ಕಮ್ಮಿ ಇದ್ದಿರಬಹುದು. ಬದುಕಿನ ವಿವೇಕ ಮಾತ್ರ ಸಿದ್ಧಾರೂಢರಂತಹ ಸಾಧಕ, ಸಂತ-ಮಹಾಂತರು, ತಪಸ್ವಿಗಳು, ನಿತ್ಯದ ದಾಸರ ಸಹವಾಸದಿಂದ ಪ್ರತಿಯೊಬ್ಬರೂ ಮಾನವರೂಪಿ ಮಾಧವರಾಗಲು ಬುದ್ಧಿಪೂರ್ವಕ ಪ್ರಯತ್ನಿಸಿದವರು.
ನಿಜಾರ್ಥದಲ್ಲಿ, ಮನುಷ್ಯನ ಬದುಕು ಹಾವು-ಏಣಿ ಆಟವೇ! ಈ ನಿತ್ಯದ ಬದುಕಿನಲ್ಲಿ ಹಾವುಗಳೆಂದರೆ, ಜಾತೀಯತೆ, ಅಸ್ಪೃಶ್ಯತೆ, ಶ್ರೇಷ್ಠ-ಕನಿಷ್ಠ ಎಂಬ ಶ್ರೇಷ್ಠತೆಯ ವ್ಯಸನಗಳು, ಮೂಢನಂಬಿಕೆಗಳು, ಅನಾಚಾರ, ಕಂದಾಚಾರ, ಅಪನಂಬಿಕೆ, ಅವಿಶ್ವಾಸ, ಮೋಸ-ವಂಚನೆ, ಭ್ರಷ್ಟಾಚಾರ.
ದೈನಂದಿನ ಹೋರಾಟದಲ್ಲಿ ಬಸವಳಿದ ಜೀವಕ್ಕೆ ಮನುಷ್ಯತ್ವ, ಮಾಧವತ್ವ, ಒಳ್ಳೆಯತನದಲ್ಲಿ ನಂಬಿಕೆ, ದಾಸೋಹಕ್ಕಾಗಿ ಕಾಯಕ ತತ್ತ್ವಪರಿಪಾಲನೆ, ದುಡಿದೇ ಉಣ್ಣುವ ‘ಕಾಯಕವೇ ಕೈಲಾಸ’ ಎಂಬ ಅನುಭಾವದ ಅರಿವು, ಹೃದಯವೀಣೆಯ ತಂತಿ ಮೀಟಿದವರು ಸಿದ್ಧರು-ಸಾಧಕರು, ತಪಸ್ವಿಗಳು, ಅನುಭಾವಿಗಳು, ಶರಣರು, ವಚನಕಾರರು. ನಿತ್ಯದ ದಾಸರು, ಬದುಕಿನ ಮೌಲ್ಯಾದರ್ಶಗಳನ್ನು ಚರ್ಮವಾಗಿಸಿಕೊಂಡ ಬಸವತತ್ತ್ವ ನಿಜಾಚರಣೆಯ ಗುರು-ವಿರಕ್ತರು ನಮ್ಮಂತಹ ಶ್ರೀಸಾಮಾನ್ಯರಿಗೆ ‘ಏಣಿ’ಗಳಾಗಿ, ಆಧ್ಯಾತ್ಮಿಕ ಔನ್ನತ್ಯ ಸಾಧಿಸುವ ಹಾದಿಯಲ್ಲಿ ಅರಿವಿನ ದೀವಟಿಗೆಗಳಾದವರು.
ಸಿದ್ಧಾರೂಢಜ್ಜನಂಥವರು ಸ್ವತಃ ಕಹಿ ಉಂಡರೂ, ಕಹಿ ಉಳಿಸಿಕೊಳ್ಳದೇ ಅದನ್ನು ಆರೋಗ್ಯಕ್ಕೆ ಮೈಗೂಡಿಸಿಕೊಂಡರು! ಪೂಜ್ಯರ ಈ ನಡೆ ಸಾಮಾನ್ಯರಾದಿಯಾಗಿ ಅಸಾಮಾನ್ಯ ಸಾಮಾಜಿಕರಲ್ಲೂ ಬೆರಗನ್ನುಂಟುಮಾಡಿತ್ತು. ಕಹಿ ಉಂಡು ಕಹಿ ಉಳಿಸಿಕೊಳ್ಳದೇ ಅದು ಆರೋಗ್ಯಕ್ಕೆ ಮೈಗೂಡಿದ್ದನ್ನು ನೋಡಿ, ಬೆರಗಾಗುವುದು ಸುಂದರ ಪ್ರತಿಮೆ! ಈ ಬೆರಗಿನ ಅನುಭವವೇ ಬದುಕಿನ ಸಾರವಿರಬಹುದು; ಆದರೆ, ಹೀಗೆ ಬೆರಗಾಗುವ ಮನೋಭಾವವಿದ್ದ ಸಿದ್ಧಾರೂಢರಿಗೆ ಮಾತ್ರ ಆ ಕಹಿಯನ್ನು ಉಳಿಸಿಕೊಳ್ಳದೇ ಇರುವುದೂ ಸಾಧ್ಯವಾಯಿತು ಎಂಬುದು ಪವಾಡವೇ, ನಿಜವೇ!
ತಾನುಂಡ ನೋವು ತನ್ನ ಹಾಡಾಗಿ, ಆಲಾಪವಾಗಿ, ಆಲಾಪವನ್ನು ವಿಸ್ತರಿಸುವ, ಆಳವಾಗಿಸುವ ಮನೋಧರ್ಮವಾಗಿ ಒದಗಿಬರುವ ಸೋಜಿಗವಿದೆಯಲ್ಲ!
ಅದು ಸಿದ್ಧಾರೂಢಜ್ಜನವರ ಸಾಧನೆ-ಮಹಿಮೆ. ಭವವು-ಅನುಭವವಾಗಿ ಪರಿವರ್ತಿತವಾಗುವ ಸೋಜಿಗಕ್ಕೆ ಬೆರಗಾಗಿ ನಿಲ್ಲುವುದೇ ಮುಗ್ಧತೆಯ ‘ಭಾಗ್ಯ’. ಹೀಗೆ, ಜಡವನ್ನು ಚೈತನ್ಯಗೊಳಿಸುವ ಮನುಷ್ಯಪ್ರಯತ್ನ! ಇದು ಬದುಕಿನ ಕಲೆ! ನಿಜವಾದ ಬೋಧ-ಅಧ್ಯಾತ್ಮ! ಸಿದ್ಧಾರೂಢರು ಅಷ್ಟು ನೆಲಕ್ಕಂಟಿಕೊಂಡಿದ್ದವರು.
‘ಓಂ ನಮಃ ಶಿವಾಯ’ವೇ ಪರಮೋಚ್ಚ ಅಧ್ಯಾತ್ಮ
ಜೀವನೇ ಯಾವದಾದಾನಂ ಸ್ಯಾತ್ ಪ್ರದಾನಂ ಚ ತತೋಧಿಕಮ್ – ಬದುಕಿನಲ್ಲಿ ನಾವು ಪಡೆದಿರುವುದಕ್ಕಿಂತ ಅಧಿಕವಾಗಿ ಕೊಡುವುದಾಗಬೇಕು ಎಂಬುದನ್ನು ತನ್ನ ನಂಬಿಬಂದವರಿಗೆ ಚರ್ಮವಾಗಿಸಿದ, ಅಂತಶ್ಚಕ್ಷುಗಳಿಂದ ಅರಿವು ಬೆಳಗಿಸಿದ ‘ದೇವರೇ’ ಸಿದ್ಧಾರೂಢಜ್ಜ!
ಅಜ್ಜನವರು ಅಧ್ಯಾತ್ಮದ ಶಿಖರಸದೃಶ ಉತ್ತುಂಗ. ಶ್ರೀಸಾಮಾನ್ಯನಿಗೂ ಅಧ್ಯಾತ್ಮದ ಬಗ್ಗೆ ರುಚಿ ಹುಟ್ಟಬೇಕು ಎಂದು ಸರಳ ಆಚರಣೆ ಜಾರಿಗೆ ತಂದ ಜನರ ಗುರು. ಶಿವ ಪಂಚಾಕ್ಷರ ಮಂತ್ರ ‘ಓಂ ನಮಃ ಶಿವಾಯ’ ಬಹಿರಂಗವಾಗಿ ಪಠಿಸಲು ಜನಸಾಮಾನ್ಯರಿಗೆ ಪ್ರೇರಣೆ ನೀಡಿ, ‘ಕಾಯುವವ ದೊಡ್ಡವ; ಕಾಯಕವೇ ಮುಕ್ತಿಯ ಹಾದಿ’ ಎನ್ನುವ ವಿನೀತ, ನೈತಿಕ ಸನ್ಮಾರ್ಗ ತೋರಿದ ಪ್ರಾತಃಸ್ಮರಣೀಯರು.
ಹೀಗಾಗಿ ಕಳೆದ ೭೫ಕ್ಕೂ ಹೆಚ್ಚು ವರ್ಷಗಳಿಂದ ಸಿದ್ಧಾರೂಢ ಮಠದಲ್ಲಿ ದಿನದ ೨೪ ಗಂಟೆಗಳೂ ತಂಬೂರಿ ಹಿಡಿದು, ‘ಓಂ ನಮಃ ಶಿವಾಯ’ ಮಂತ್ರ ಪಠಿಸಲಾಗುತ್ತದೆ. ತಂಬೂರಿ ನೆಲಕ್ಕೆ ತಾಗದೆಯೂ ೭೫ ವರ್ಷಗಳಾಗಿರಬಹುದು! ಲೆಕ್ಕವಿಟ್ಟವರು ಯಾರು? ಅಜ್ಜನವರೇ!
ಭತ್ತ ಇದ್ದಲ್ಲಿಗೆ ಒನಕೆ ಬರಬೇಕು!
ಸಿದ್ದಾರೂಢಸ್ವಾಮಿಗಳು ಕಲ್ಯಾಣ ಕರ್ನಾಟಕ ಹಾಗೂ ಶರಣ ಚಳವಳಿಯ ಬೀಡು, ಬಸವತತ್ತ್ವ ನಿಜಾಚರಣೆಯ ನಾಡು ಬೀದರ್ ಜಿಲ್ಲೆಯ ಪೂಜ್ಯ ಚೆನ್ನಬಸವ ಪಟ್ಟದ್ದೇವರು, ಪೂಜ್ಯ ಬಸವಲಿಂಗ ಪಟ್ಟದ್ದೇವರ ಪಾದಸ್ಪರ್ಶದಿಂದ ಪುನೀತವಾದ ಅಧ್ಯಾತ್ಮಸಾಧಕರ ಭೂಮಿ ಭಾಲ್ಕಿ ತಾಲೂಕಿನ ಚಳಕಾಪುರದವರು. ಮಾರ್ಚ್ ೨೬, ೧೮೩೬ರಲ್ಲಿ ಸಿದ್ಧಾರೂಢ ಅಜ್ಜ ಜನ್ಮತಳೆದರು. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಗುರುವನ್ನರಸಿ ಲೋಕಸಂಚಾರಕ್ಕೆ ಹೊರಟವರು.
ತಮ್ಮ ೪೧ನೇ ವಯಸ್ಸಿನಲ್ಲಿ, ೧೮೭೭ರ ಸುಮಾರಿಗೆ ಲೋಕಸಂಚಾರನಿರತ ಅಜ್ಜ ಹುಬ್ಬಳ್ಳಿಗೆ ಬಂದರು. ಇಲ್ಲಿಯ ಹಿರಿಯರ ಪುಣ್ಯದ ಫಲದಿಂದ ಅಧ್ಯಾತ್ಮಸಾಧನೆಗೆ ಅಜ್ಜ ಇಲ್ಲಿಯೇ ನೆಲೆನಿಲ್ಲುವಂತಾಯಿತು. ಜನಸಾಮಾನ್ಯರ ಕಷ್ಟ-ಸುಖಗಳಿಗೆ, ಆಧ್ಯಾತಿಕ ಸವಾಲುಗಳಿಗೆ ಅವರು ಮಾರ್ಗದರ್ಶಕರಾದರು. ನಂಬಿಬಂದವರ ದುಃಖ, ದುಗುಡ, ದುಮ್ಮಾನಗಳಿಗೆ ಸಾಂತ್ವನ, ಪರಿಹಾರ ಸೂಚಿಸಿ, ನಿಃಸ್ವಾರ್ಥವಾಗಿ, ಶೋಷಣೆಯೇ ಸೋಕದಂತೆ ಬಾಳು ಬೆಳಗಿದರು.
ಅಧ್ಯಾತ್ಮಜಿಜ್ಞಾಸುಗಳಿಗೆ ದೀವಟಿಗೆ
ಅನ್ಯಕೇಂದ್ರಿತ ವಿಶ್ವದಲ್ಲಿ ಆತ್ಮಕೇಂದ್ರಿತ ಮನುಷ್ಯನ ಬಾಳು-ಪಾಡಿಗೆ ಜೀವದೃಷ್ಟಿ, ಆತ್ಮ ಸೃಷ್ಟಿಯ ಅರಿವು ಜಾಗೃತಗೊಳಿಸಿ, ವಿಧಿ ಮತ್ತು ವ್ಯಕ್ತಿತ್ವದ ನಡುವಿನ ಸಂಕಟ-ದ್ವಂದ್ವಗಳಿಗೆ ಮಾನವತೆಯ ಸ್ಪರ್ಶ ನೀಡಿದವರು ಅಜ್ಜ. ಹೀಗಾಗಿ ಆಚಾರ, ವಿಚಾರಗಳಲ್ಲಿ ಭಕ್ತರಿಗೆ ಅವರು ಸಾಕ್ಷಾತ್ ಶಿವನ ಸ್ವರೂಪವೇ ಆಗಿದ್ದರು. ಆತ್ಮ-ಪರಮಾತ್ಮ ಎರಡೂ ಒಂದೇ; ಬೇರೆ ಅಲ್ಲ. ‘ಅಹಂ ಬ್ರಹ್ಮಾಸ್ಮಿ’ ಎಂದು ಅದ್ವೈತ ಸಾರಿದವರು ಸಿದ್ಧಾರೂಢರು.
ಗರಗದ ಪೂಜ್ಯ ಮಡಿವಾಳಪ್ಪಜ್ಜ, ನವಲಗುಂದದ ನಾಗಲಿಂಗಸ್ವಾಮಿಗಳು, ಶಿಶುವಿನಹಾಳದ ಸಂತ ಷರೀಫಜ್ಜ, ಪೂಜ್ಯ ಕಬೀರದಾಸರು ಪ್ರಾತಃಸ್ಮರಣೀಯ ಸಿದ್ಧಾರೂಢ ಅಜ್ಜನವರ ಪ್ರಭಾವ, ಪ್ರೀತಿ-ಅಂತಃಕರಣದಿಂದ ತೋಯ್ದು, ಅಜ್ಜನ ಮುಖೋದ್ಗತಗಳನ್ನು ಹೃದ್ಗತ ಮಾಡಿಕೊಳ್ಳುವಲ್ಲಿ ಜನಸಾಮಾನ್ಯರಿಗೆ ಇನ್ನೂ ಅಧ್ಯಾತ್ಮವನ್ನು ಸರಳಗೊಳಿಸುವಲ್ಲಿ, ದೈನಂದಿನ ಜೀವನದಲ್ಲಿ ಸರಳವಾಗಿ ಪರಿಪಾಲಿಸುವಷ್ಟು ‘ತೈಲವಿಲ್ಲದ ಜ್ಯೋತಿ’ ಆಗಿ ಬೆಳಗಿದರು! ಸಿದ್ಧಿಸಿದರು.
‘ತೋಂಡಿ’ ಅಥವಾ ಮೌಖಿಕ ಸಂಪ್ರದಾಯದಲ್ಲಿ ಅಜ್ಜನವರ ಮಾತು, ಉಕ್ತಿ, ಜ್ಞಾನಬೋಧೆ ಮತ್ತು ನಡಾವಳಿ ಇಲ್ಲಿನ ಜಾನಪದೀಯ ಕಥಾನಕ, ಲಾವಣಿ, ಗೀಗೀ ಪದ ಮತ್ತು ಕವಿಗಳ ಕಾವ್ಯಾಮೃತದಲ್ಲಿ ಎರಕ ಹೊಯ್ದುಕೊಂಡಿವೆ. ಅವ್ವನಿಂದ ಅಮ್ಮನಿಗೆ, ಅಮ್ಮನಿಂದ ಮಗಳಿಗೆ, ಮಗಳಿಂದ ಮೊಮ್ಮಗಳಿಗೆ – ಹೀಗೆ ಅಜ್ಜನ ನಡೆ-ನುಡಿ ಪವಾಡಗಳು ಎಂಬಂತೆ ತಲೆತಲಾಂತರಗಳಿಗೆ ಸಾಗಿ ತಾಳೆ-ಓಲೆ ಗರಿಗಳಲ್ಲಿ ನೆಲೆನಿಂತಿವೆ. ಉತ್ತರ ಕರ್ನಾಟಕ ಭಾಗದ ಎಲ್ಲರ ಮನೆಗಳಲ್ಲೂ ಪೂಜ್ಯ ಅಜ್ಜನ ಭಾವಚಿತ್ರಗಳು ತಲೆಬಾಗಿಲಿಗಿವೆ.
ಕಬೀರದಾಸ ಎಂಬ ಅಜ್ಜನ ಉಪಕರಣ!
ಕಬೀರದಾಸರು ಅಜ್ಜನವರಲ್ಲಿ ಜ್ಞಾನದಾಸೋಹಿಯಾಗಿ, ಶಿಷ್ಯತ್ವ ಸಂಪಾದಿಸಿ, ತಮ್ಮನ್ನು ಒರೆಗೆ ಹಚ್ಚಿಕೊಂಡರು ಎಂಬ ಪುರಾವೆ, ಐತಿಹ್ಯಗಳಿವೆ.
ಅಜ್ಜನ ಭಕ್ತರು ಮಠಕ್ಕೊಮ್ಮೆ ಬಂದರು. ಕಬೀರದಾಸರ ಬಗ್ಗೆ ದೂರುಗಳ ಪಟ್ಟಿ ಸಮೇತ!
“ಅಪ್ಪ, ನೋಡ್ರಿ. ಕಬೀರದಾಸರು ರಾಜ ಪೋಷಾಕು ಹಾಕಿಕೊಳ್ತಾರೆ! ಕಾಲಲ್ಲಿ ಬೆಳ್ಳಿಯ ಆವುಗೆಗಳನ್ನೂ ಧರಿಸುತ್ತಾರೆ! ಬಂಗಾರದ ಬೆತ್ತ ಕೈಯಲ್ಲಿ ಹಿಡಿಯುತ್ತಾರೆ! ಸ್ನಾನ ಮಾಡಲಿಕ್ಕೆ ಹೊತ್ತಿಗೊಮ್ಮೆ ಎರಡು ಹಂಡೆ ನೀರು ಕಾಯಿಸಿ, ಎರಡು ಬಾಟಲಿ ಇತ್ರ್-ಅತ್ತರ್ ಸುರುವಿಕೊಂಡು ಜಳಕ ಮಾಡ್ತಾರೆಪಾ! ಮಠದಾಗ ಅವ್ರು ಹಂಗ ಮಾಡೋದು ನಮಗ ಸರಿ ಕಾಣವಾಲ್ತು. ನೀವು ಅವರಿಗೆ ತಿಳಿಸಿ ಹೇಳಬೇಕು!” ಎಂದು ವರಾತ ಹಚ್ಚಿದರು.
ಸಿದ್ಧಾರೂಢ ಅಜ್ಜ ಪಾಠಶಾಲೆಯಲ್ಲಿ ಬೋಧನೆಗೆ ನಿರತರಾಗಿದ್ದ ಸಂದರ್ಭ. ಕೂಡಲೇ ಕಬೀರದಾಸರನ್ನು ಬರಹೇಳಿದರು. ಬಂದು ತಮ್ಮ ಎದುರು ನಮಸ್ಕರಿಸಿ ನಿಂತು, ‘ಯಾಕ್ರೀಪಾ, ಕರೆದಿರಂತೆ?” ಎಂದರು ಕಬೀರದಾಸರು.
ಅಂದು ಗುರುವಾರ. ಹೀಗೆ ಕೇಳಿದ ಕಬೀರದಾಸರನ್ನುದ್ದೇಶಿಸಿ, ಅಜ್ಜ ಹೇಳಿದರು: “ಕಬೀರ, ನೀನು ಸಂಚಾರಕ್ಕ ಹೊರಡಬೇಕಲ್ಲ!” ಎಂದರು. “ಎಷ್ಟು ದಿನಾ ನಾನು ಸಂಚಾರಕ್ಕ ಹೋಗಬೇಕ್ರಿ, ನನ್ನಪ್ಪ!” ಅಂತ ಕಬೀರದಾಸರು ಕೇಳಿದರು. “ಕಬೀರ, ಇವತ್ತು ಗುರುವಾರ; ಬರೋ ಸೋಮವಾರದ ತನಕ ನೀನು ಸಂಚಾರಕ್ಕ ಹೊರಡಬೇಕು.” ಎಂದರು ಸಿದ್ಧಾರೂಢ ಅಜ್ಜ!
“ಆಯ್ತು ಅಪ್ಪ, ಸಂಚಾರ ಮುಗಿಸಿ, ಸೋಮವಾರ ನಾನು ಮಠಕ್ಕ ಹಿಂತಿರುಗುವೆ.” ಎಂದರು ಕಬೀರದಾಸರು. “ಆದ್ರ, ಲೋಕಸಂಚಾರಕ್ಕ ನೀನು ಹಿಂಗ ಹೋಗಬಾರದೋ ಕಬೀರ!” ಎಂದರು ಸಿದ್ಧಾರೂಢ ಅಜ್ಜ. “ಹಂಗಾದ್ರ, ನಾನು ಹೆಂಗ ಹೋಗಬೇಕ್ರೆಪಾ?” ಎಂದು ಮರು ಪ್ರಶ್ನೆ ಹಾಕಿದರು, ಕಬೀರದಾಸರು. “ನಿನ್ನ ರಾಜಪೋಷಾಕವನ್ನೆಲ್ಲ ತೆಗೆದಿರಿಸು. ಕಾಲೊಳಗಿನ ಬೆಳ್ಳಿ ಆವುಗೆಯನ್ನೂ ಬಿಚ್ಚಿಡು. ಕೈಯೊಳಗಿನ ಬಂಗಾರದ ಬೆತ್ತ ಅಲ್ಲಿ ಮೂಲಿಗೆ ಆನಿಸಿಡು. ಬರೀ ಲಂಗೋಟಿ ತೊಡು; ಮೈತುಂಬ ವಿಭೂತಿ ಬಳಕೋ… ಸಂಚಾರಕ್ಕ ಹೊರಡು. ಸೋಮವಾರ ಬಾ” ಎಂದರು.
ಗುರುವಿಗೆ ತಿರುಗಿ ಪ್ರಶ್ನೆ ಕೇಳದೆ, ಎಲ್ಲವನ್ನೂ ಕಳಚಿಟ್ಟು, ಲಂಗೋಟಿ ಧರಿಸಿ, ಭಸ್ಮವಿಭೂಷಿತರಾಗಿ ಕಲಘಟಗಿಯ ಕಡೆ ನಡೆದು ಹೊರಟರು. ಸುಮಾರು ಹೊತ್ತು ನಡೆದ ಬಳಿಕ, ಹಳ್ಳಿಯೊಂದರಲ್ಲಿ ಯಾರೋ ಮಠದ ಭಕ್ತರು ಇವರ ಗುರುತು ಪತ್ತೆ ಮಾಡಿದರು. “ಇವರು ಕಬೀರದಾಸರು. ಹುಬ್ಬಳ್ಳಿಯ ಸಿದ್ಧಾರೂಢಜ್ಜನ ಮಠದೊಳಗ ಇದ್ದವರು. ನೀವ್ಯಾಕೆ ಹಿಂಗ ಆಗಿ ಹೊಂಟೀರಿ?!” ಎಂದು ಪ್ರಶ್ನೆ ಮಾಡಿದರು.
ಕಬೀರದಾಸರು ಅಂತ ಖಾತ್ರಿ ಆದದ್ದೇ ತಡ, ಯಾರೋ ರೇಷ್ಮೆ ಅಂಗಿ ತಂದು ತೊಡಿಸಿದರು. ಮತ್ತೊಬ್ಬರು ಆವುಗೆ ತಂದು ಪಾದಕ್ಕಿಟ್ಟರು. ಯಾರೋ ಭಕ್ತರು ಬೆತ್ತ ತಂದು ಹಿಡಿದರು. ಷೋಡಶೋಪಚಾರ ಪೂಜೆಗಳನ್ನು ಅವರಿಗೆ ಸಮರ್ಪಿಸಿ, “ಅಪ್ಪಾವರು (ಪೂಜ್ಯ ಸಿದ್ಧಾರೂಢಜ್ಜವರು) ತಮಗ ಯಾವಾಗ ಮಠಕ್ಕ ಬರಬೇಕು ಅಂತ ಅಪ್ಪಣೆ ಕೊಟ್ಟಾರ?” ಎಂದು ಕಬೀರದಾಸರನ್ನು ಕೇಳಿದರು.
“ಸೋಮವಾರ ದಿನ ನಾನು ತಿರುಗಿ ಮಠಕ್ಕ ಹೋಗಬೇಕು.” ಎಂದರು ಕಬೀರರು. ನಾಲ್ಕು ದಿನ ಅದೇ ಊರಲ್ಲಿ ಅವರಿಗೆ ಎಲ್ಲ ರೀತಿಯ ಉಪಚಾರಗಳನ್ನು ಮಾಡಿ, ಮಠದ ಭಕ್ತರು ಊರೊಳಗೆ ಹೊಸ ಪಲ್ಲಕ್ಕಿ ಮಾಡಿಸಿ, ಆ ಪಲ್ಲಕ್ಕಿಯೊಳಗೆ ಕಬೀರದಾಸರನ್ನು ಕುಳ್ಳಿರಿಸಿ, ಸಕಲ ವಾದ್ಯಗಳೊಂದಿಗೆ ಸಿದ್ಧಾರೂಢ ಮಠಕ್ಕೆ ಕರೆತಂದರು.
ಪೂಜ್ಯ ಸಿದ್ಧಾರೂಢ ಅಜ್ಜ ಪ್ರವಚನ ಮಾಡುತ್ತಿದ್ದರು. ತಮ್ಮ ಭಕ್ತರಿಗೆ ಸನ್ನೆ ಮಾಡಿದರು. “ಈಗ ಇಲ್ಲಿಗೇ ನಿಲ್ಲಿಸಿಬಿಡೋಣ. ಯಾರೋ ಮಹಾರಾಜರು ಮಠಕ್ಕ ದರ್ಶನಕ್ಕೆಂದು ಬಂದಿರಬಹುದು. ಒಳಗೆ ಕರೆ ತನ್ನಿ…” ಎಂದರು.
ಪಲ್ಲಕ್ಕಿಯನ್ನು ತಂದು ಮಠದ ಮುಂದೆ ಇಳಿಸಲಾಯಿತು. ಪಲ್ಲಕ್ಕಿಯೊಳಗಿನಿಂದ ಇಳಿದು ಬಂದ ಕಬೀರದಾಸರು, ಪೂಜ್ಯ ಗುರುಗಳಿಗೆ ಶಿರಸಾಷ್ಟಾಂಗ ನಮಸ್ಕಾರ ಹಾಕಿದರು. ಕೈಮುಗಿದು ನಿಂತರು. “ನಾಲ್ಕು ದಿನಗಳ ಹಿಂದೆ, ಇವರನ್ನು ತಿರುಕನಾಗಿ ಮಾಡಿ ಕಳಹಿಸಿದ್ದೆವು. ಮತ್ತ ತಿರುಗಿ ರಾಜನ್ಹಂಗ ಮಠಕ್ಕ ಬಂದು ಇಳದಾರ.. ಅಂದ್ರ, ಅವರ ಹಣೆಬರೆಹದೊಳಗ ರಾಜವೈಭೋಗ ಬರೆದಿದ್ದರೆ, ಯಾರಿಂದಲೂ ತಪ್ಪಿಸಲಾಗದು!” ಅಂತ ಸಿದ್ಧಾರೂಢ ಅಜ್ಜ ಭಕ್ತಾದಿಗಳಿಗೆ ಪ್ರಾಯೋಗಿಕವಾಗಿಯೇ ಅರುಹಿದರಂತೆ!
ಯಾರ ಯಾರ ಪ್ರಾರಬ್ಧದೊಳಗ ಏನೇನು ವಿಧಿಲಿಖಿತ ಇದೆಯೋ, ಅದನ್ನು ಅನುಭವಿಸಲೇಬೇಕು; ಯಾರಿಂದಲೂ ತಪ್ಪಿಸಲಾಗದು. ಇದು ಅಜ್ಜನ ಬೋಧೆ.
ಒಮ್ಮೆ ಬರಗಾಲ ಬಿತ್ತು. ಕಬೀರದಾಸರು ದುಡ್ಡು ಕೊಟ್ಟು, ಎರಡು ಹಂಡೆ ನೀರು ತರಿಸಿ, ಕಾಯಿಸಿ, ಇತ್ರ್-ಅತ್ತರ್ ಹಾಕಿ, ಜಳಕಕ್ಕಿಳಿದರು. ಇಡೀ ಮಠ ಘಮ..ಘಮ! ಸರಿಯಾಗಿ ಅದೇ ಹೊತ್ತಿಗೆ ಅಲ್ಲಿಗೆ ಬಂದ, ಸಿದ್ಧಾರೂಢ ಅಜ್ಜ ಇದನ್ನು ಗ್ರಹಿಸಿದರು.
ಸ್ನಾನದ ಕೋಣೆಗೆ ಬಂದ ಅಜ್ಜನವರು, ಕಬೀರದಾಸರನ್ನುದ್ದೇಶಿಸಿ “ಕಬೀರ, ಇಷ್ಟು ಭೀಕರ ಬರಗಾಲದೊಳಗ ಎರಡು ಹಂಡೆ ನೀರು ಜಳಕ ಮಾಡಿ, ಅದನ್ನು ವ್ಯರ್ಥ ಮಾಡೋ ಬದಲು, ನೀರಿನ ಆವಶ್ಯಕತೆ ಇದ್ದ ನಾಲ್ಕ ಮಂದಿಗೆ ಆ ನೀರು ಹಂಚಿದ್ರ.. ನಿನಗ ಪುಣ್ಯ ಪ್ರಾಪ್ತಿ ಆಗ್ತಿತ್ತಲೋ!” ಎಂದರಂತೆ.
ಅದೇ ಕೊನೆ. ಗುರುವಾಕ್ಯ ಪರಿಪಾಲಕನಾಗಿ ಕಬೀರದಾಸರು, ತಮ್ಮ ಜೀವನದ ಕೊನೆ ಉಸಿರಿನವರೆಗೂ, ಬಿಸಿನೀರು ಮೈಗೆ ಸೋಕಿಸಲಿಲ್ಲ! ಯಾವ ವೈಭೋಗವನ್ನೂ ಅನುಭವಿಸಲಿಲ್ಲ. ಬೆಳಗ್ಗೆ ೪ ಗಂಟೆಗೆ ಎದ್ದು, ಮೈ ಕೊರೆಯುವ ಚಳಿಯಲ್ಲಿ ಕೆರೆ-ಬಾವಿಯ ನೀರು ಬಳಸಿ, ಸ್ನಾನ-ಶುಚಿ ಆದಿ ಕೆಲಸ ಮುಗಿಸಿ, ತಪೋನಿಷ್ಠರಾಗುತ್ತಿದ್ದರು. ಗುರು ಸಿದ್ಧಾರೂಢ ಅಜ್ಜನ ಮಾತೇ ಅವರಿಗೆ ವೇದ-ವಾಕ್ಯ!
ಒಮ್ಮೆ ಓರ್ವ ಭಕ್ತರು ಮಠಕ್ಕೆ ಬಂದರು. ಸಿದ್ಧಾರೂಢ ಅಜ್ಜನ ಮುಂದೆ ಕೈಮುಗಿದು ನಿಂತರು. “ಅಪ್ಪ, ನೀವು ದೇವರನ್ನು ಕಂಡೀರಾ?!” ಎಂದು ಕೇಳಿದರು. ಅಜ್ಜ ನಿರ್ಲಿಪ್ತರಾಗಿಯೇ “ನೋಡೇನಿ..!” ಎಂದರು. “ಅಪ್ಪಾ, ನಮಗೂ ದೇವರನ್ನ ತೋರಿಸ್ತೀರಿ..?” ಅಂತ ಮರುಪ್ರಶ್ನೆ ಮಾಡಿದರು. “ತೋರಿಸಬಲ್ಲೆ, ಅದಕ್ಕೇನು?!” ಎಂದರು ಸಿದ್ಧಾರೂಢ ಅಜ್ಜ. “ಅಪ್ಪಾ, ಯಾವಾಗ ತೋರಿಸ್ತೀರಿ, ದೇವರನ್ನ?” ಎಂದ ಭಕ್ತ ಮಹಾಶಯ. “ನೀನು ಯಾವಾಗ ದೇವರನ್ನ ನೋಡಬೇಕಂತಿ, ಆವಾಗ ತೋರಿಸ್ತೇನಿ.” ಎಂದರು ಅಜ್ಜ. “ಅಪ್ಪಾ, ನನಗ ಈಗ ನೀವು ದೇವರನ್ನ ತೋರಿಸಬೇಕಲ್ಲ..?” ಎಂದ, ಭಕ್ತ.
“ಆಯ್ತು, ನಿಲ್ಲು ಹಂಗಂದ್ರ…” ಎಂದ ಅಜ್ಜರು “ಕಬೀರ..” ಎಂದು ಕೂಗಿದರು. ಅಲ್ಲೇ ಪಕ್ಕದೊಳಗ, ಕಬೀರದಾಸರು ಬಟ್ಟೆ ಬಿಚ್ಚಿ ಸ್ನಾನಕ್ಕಿಳಿದಿದ್ದರು. ಮೈಮೇಲೆ ಚೂರು ಬಟ್ಟೆಯೂ ಇಲ್ಲ; ನಾನು ಸ್ನಾನಕ್ಕಿಳಿದಿದ್ದೇನೆ ಎಂಬ ಕಿಂಚಿತ್ ಅರಿವೂ ಇಲ್ಲದೆ, ಗುರುವಿನ ಕರೆಗೆ ಓಗೊಟ್ಟು, ಪರವಶರಾಗಿ ಓಡೋಡಿ ಬಂದು ಗುರುವಿನ ಮುಂದೆ ನಿಂತು, ಕೈಮುಗಿದು, “ಯಾಕ್ರೀ, ಅಪ್ಪಾ ಕರೆದ್ರೀ?” ಎಂದು ವಿರಾಗಿಯಾಗಿಯೇ ಕೇಳಿದರು.
ಆಗ ಭಕ್ತನಿಗೆ ಅಜ್ಜ ಹೇಳಿದರು, “ಇವನ ನೋಡಪಾ.. ಪರಮಾತ್ಮ! ಈಗ ದರ್ಶನ ಮಾಡಕೋ…” ಇದರ ಅರ್ಥ ಏನು ಅಂದರೆ ಯಾರು ನಿಜವಾದ ಭಕ್ತನೋ, ಯಾರು ಗುರುವಿನ ಮೇಲೆ ನಿಜವಾದ ನಂಬಿಕೆಯನ್ನು ಇಟ್ಟಿರುವನೋ, ಯಾರು ಗುರುವಾಕ್ಯ ಪರಿಪಾಲನೆಗಾಗಿ ತನ್ನನ್ನೂ ಮರೆಯಬಲ್ಲನೋ – ಅವನೇ ನಿಜವಾದ ದೇವರು. ಬೇರೆ ಯಾವ ದೇವರನ್ನೂ ನೀನು ಹುಡುಕಬೇಕಾದ ಆವಶ್ಯಕತೆ ಇಲ್ಲ” ಎಂದರು.
ಕಬೀರದಾಸರನ್ನು ಉದಾಹರಣೆಯಾಗಿ ಇಟ್ಟುಕೊಂಡು, ಜಗತ್ತಿಗೆ ದೇವರ ದರುಶನ ಮಾಡಿಸಿದರು ಸಿದ್ಧಾರೂಢಜ್ಜ!
ದೇಹ ಇರುವಾಗಲೇ ಸಕಲ ಸ್ವರೂಪದ ಜ್ಞಾನಗಳನ್ನು ಪಡೆದು ಮುಕ್ತಿ ಹೊಂದಬೇಕು ಎನ್ನುವುದು ಸಿದ್ಧಾರೂಢಜ್ಜನ ಬೋಧನೆಯ ಸಾರ.
೧೯೨೯ರ ಆಗಸ್ಟ್ ೨೧. ಸಿದ್ಧಾರೂಢ ಅಜ್ಜ ಶಾಂತವಾಗಿ ಶಿವನ ಸದನಕ್ಕೆ ಹೊರಟುಹೋದರು.
ಸ್ವಾತಂತ್ರ್ಯ ಹೋರಾಟ; ಹೋರಾಟಗಾರರಿಗೆ ಪ್ರೇರಣೆ
‘ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು’ ಎಂದ ವೀರಕೇಸರಿ ಬಾಲಗಂಗಾಧರ ತಿಲಕರು, ‘ಸತ್ಯ, ತ್ಯಾಗ ಮತ್ತು ಅಹಿಂಸೆ’ಯನ್ನೇ ಜೀವನವ್ರತವಾಗಿಸಿಕೊಂಡ ಮೋಹನದಾಸ್ ಕರಮಚಂದ್ ಗಾಂಧಿ ಅವರಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ಮತ್ತು ಮಾರ್ಗದರ್ಶನ ಮಾಡಿದ ಚಾಣಕ್ಯ ಸಿದ್ಧಾರೂಢ ಅಜ್ಜ. ಹುಬ್ಬಳ್ಳಿಗೆ ಈ ಮಹನೀಯರು ಭೇಟಿ ನೀಡಿದ್ದ ಸಂದರ್ಭದಲ್ಲಿ, ಅಜ್ಜನ ದರ್ಶನ ಪಡೆದು, ಮಾರ್ಗದರ್ಶನ ಕೋರಿದರವರು.
ಕೊಲ್ಹಾಪುರದ ಶಾಹು ಮಹಾರಾಜರಿಗೆ ಪ್ರಜಾಸತ್ತಾತ್ಮಕ ಆಡಳಿತ ಮತ್ತು ಕಲ್ಯಾಣ ರಾಜ್ಯದ ಆಳ್ವಿಕೆಯ ಪರಿಕಲ್ಪನೆ ಬೋಧಿಸಿದ್ದು, ಪೂಜ್ಯ ಸಿದ್ಧಾರೂಢರು. ಮಹಾರಾಜರು ಮತ್ತು ಪೂಜ್ಯರಿಗೂ ಗುರು-ಶಿಷ್ಯರ ಸಂಬಂಧವಿತ್ತು. ಪ್ರಜಾವತ್ಸಲರಾಗಿ, ಸರ್ವಜನಪರಿಪಾಲಕರಾಗಿ ಶಾಹು ಮಹಾರಾಜರು ರೂಪಗೊಳ್ಳುವಲ್ಲಿ ಅಜ್ಜನವರ ಪಾತ್ರ ಹಿರಿದು.
ಸ್ವಾವಲಂಬನೆ ಮತ್ತು ಸ್ವಾಭಿಮಾನ ಮಠ ಸದೈವ ಬೋಧಿಸಿದ ತತ್ತ್ವ. ಸ್ವಾತಂತ್ರ್ಯ ಸೇನಾನಿಗಳಿಗೆ, ಸಮಾಜಸೇವಕರಿಗೆ ಅನ್ನ, ವಸತಿ ಮತ್ತು ವಸ್ತ್ರವಿತ್ತು ಪೋಷಿಸಿದ್ದು ಶ್ರೀಮಠ ಮತ್ತು ಅಜ್ಜ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಿದ್ಧಾರೂಢ ಮಠ ನೀಡಿದ ಕೊಡುಗೆ ಅಧ್ಯಯನಯೋಗ್ಯ ವಿಷಯ. ಆದರೆ, ಲಿಖಿತ ಆಕರ, ದಾಖಲೆಗಳ ಪುರಾವೆಗಳ ಕೊರತೆಯಿಂದ ಅಳಿದುಳಿದ ಅಂದಿನ ಕೆಲ ಹಿರಿಯರ ಸ್ಮೃತಿಪಟಲಗಳಿಂದ ದೊರಕುವ ಪ್ರೇರಣಾದಾಯಿ ಮಾಹಿತಿಯೇ ಸದ್ಯದ ಆಕರ.
ಜಾತಿ–ಮತದ ಸಂಕೋಲೆಗಳೇ ಇಲ್ಲದ ಶ್ರೀ ಮಠ
ರಾಬರ್ಟ್ ಫ್ರಾಸ್ಟ್ ಅವರ ಒಂದು ಪ್ರಬಂಧ, ‘ದ ರೋಡ್ ನಾಟ್ ಟೇಕನ್’ ನೀವು ಓದಿರಬಹುದು. ಓರ್ವ ಪಥಿಕನ ಮುಂದೆ ಎರಡು ದಾರಿಗಳಿವೆ. ಒಂದು ಬಹುತೇಕರು ಹಿಡಿದು ಸಾಗಿದ, ಹೆಜ್ಜೆಯ ಗುರುತುಗಳಿಂದ ಬಹುತೇಕ ಸವೆದ ಸಾಮಾನ್ಯ ಹಾದಿ. ಇನ್ನೊಂದು ಯಾರೂ ಸಾಗಲು ಯೋಚಿಸದ ಮತ್ತು ಬಹುತೇಕರು ಮನಸ್ಸು ಮಾಡದ ಕಲ್ಲು ಮುಳ್ಳಿನ ಸಂಘರ್ಷದ ಹಾದಿ. ಅರ್ಥಾತ್ ಬದುಕು ಏಣಿಯಂತೆ ಮೇಲೇರುತ್ತ ಸಾಗದೇ, ಪುಟ್ಟ ಬೀಜವೊಂದು ಸಸಿಯಾಗಿ, ಗಿಡವಾಗಿ, ಮರವಾಗಿ ಹೂವು, ಕಾಯಿ, ಹಣ್ಣು ಮತ್ತು ನೆರಳು ಹೊದ್ದು ನಿಲ್ಲುವಂತೆ ಕಟ್ಟಿಕೊಳ್ಳಬೇಕಾಗುತ್ತದೆ.
ಹಾಗಾಗಿ ಗೋಡೆಗಳನ್ನು ಕಟ್ಟುವವರ ಮಧ್ಯೆ, ಗೋಡೆಗಳನ್ನು ಕೆಡವಿ ಮನಸ್ಸುಗಳನ್ನು ಕಟ್ಟಿದ ಧ್ಯೇಯಯಾತ್ರಿ ಸಿದ್ಧಾರೂಢರು.
‘ಹರಿಜನರನ್ನು ಮುಟ್ಟಿದರೆ ಮೈ ತೊಳೆದುಕೊಳ್ಳಬೇಕು’ ಎಂಬಷ್ಟರಮಟ್ಟಿಗೆ ಸಾಮಾಜಿಕ ಕಟ್ಟುಪಾಡುಗಳು ಅತ್ಯಂತ ಬಿಗಿಯಾಗಿದ್ದ ಕಾಲಘಟ್ಟ. ಅಂತಹ ಉಗ್ರ ಸ್ವರೂಪದ ಸಂದಿಗ್ಧ ಸಾಮಾಜಿಕ ನಡಾವಳಿ, ಕಟ್ಟುಪಾಡುಗಳಿದ್ದ ಪರಿಸ್ಥಿತಿಯಲ್ಲಿ ಅಜ್ಜ ಶ್ರೀಮಠವನ್ನು ಎಲ್ಲರಿಗೂ ಮುಕ್ತವಾಗಿಟ್ಟರು. ಬಯಸಿ ಬಂದವರೆಲ್ಲ ‘ಇವ ನಮ್ಮವ… ಇವ ನಮ್ಮವ…’ ಎನಿಸುವಂತೆ ಅಜ್ಜ ಪವಾಡವನ್ನೇ ಸೃಷ್ಟಿಸಿದರು.
ಡಾ. ಅಂಬೇಡ್ಕರ್ ಪ್ರೇರಿತ ಹರಿಜನೋದ್ಧಾರ
೧೯೨೩ರ ಆಸುಪಾಸು. ಡಾ. ಬಾಬಾಸಾಹೇಬ್ ಅಂಬೇಡ್ಕರ ಅವರು, ಹರಿಜನೋದ್ಧಾರದ ಸಂಕಲ್ಪ ಕಟ್ಟಿಕೊಂಡು, ಅಂದಿನ ಮುಂಬೈ ಪ್ರಾಂತದಲ್ಲಿ (ಮುಂಬೈ, ಮಹಾರಾಷ್ಟ್ರ, ಕರ್ನಾಟಕ) ಮತ್ತು ಗುಜರಾತ ರಾಜ್ಯದಲ್ಲಿ ಹರಿಜನ ಫ್ರೀ ಬೋರ್ಡಿಂಗ್ಗಳನ್ನು ಪ್ರತ್ಯೇಕವಾಗಿ, ಕನಿಷ್ಠ ಒಂದನ್ನಾದರೂ ಒಂದೊಂದು ಪ್ರಾಂತದಲ್ಲಿ ಸ್ಥಾಪಿಸಬೇಕು ಎಂದು ನಿಶ್ಚಯಿಸಿದ್ದರು. ಸರ್ಕಾರದ ಧನಸಹಾಯ ಒದಗಿಸುವ ಯೋಜನೆ-ಯೋಚನೆ ಅವರು ಹೊಂದಿದ್ದರು.
ಈ ಹಿನ್ನೆಲೆಯಲ್ಲಿ ಪದ್ಮಶ್ರೀ ಸರದಾರ ವೀರನಗೌಡ ಪಾಟೀಲರಿಗೆ ಹಾಗೂ ನಾಗಮ್ಮಾ ತಾಯಿ ಪಾಟೀಲರಿಗೆ ಬೆಳಗಾವಿಯಲ್ಲಿದ್ದ ಹರಿಜನ ವಿದ್ಯಾರ್ಥಿಗಳ ಫ್ರೀ ಬೋರ್ಡಿಂಗ್ ನಿಲ್ಲಿಸಿ ಅದನ್ನು ಧಾರವಾಡದಲ್ಲಿ ನಡೆಸಬೇಕು ಎಂದು ಸೂಚಿಸಿದರು. ಈ ಸೂಚನೆಗೆ ವೀರನಗೌಡರು ಸಮ್ಮತಿಸಲಿಲ್ಲ. ಮಾತ್ರವಲ್ಲ, ಇಂತಹ ಹರಿಜನ ವಿದ್ಯಾರ್ಥಿಗಳ ಫ್ರೀ ಬೋರ್ಡಿಂಗ್ ಜಿಲ್ಲೆಗೊಂದು, ಸಾಧ್ಯವಾದರೆ ತಾಲೂಕಿಗೊಂದು ಆಗಬೇಕು. ಆ ನಿಟ್ಟಿನಲ್ಲಿ ಚಿತ್ತೈಸುವಂತೆ ಡಾ. ಅಂಬೇಡ್ಕರ ಅವರನ್ನು ಕೋರಿದರು.
ಹರಿಜನ ಬಾಲಕಿಯರ ಉದ್ಧಾರಕ್ಕಾಗಿ ಗಾಂಧಿ ಅವರ ಪ್ರೇರಣೆಯಿಂದ ಸ್ಥಾಪಿತಗೊಂಡ ದಕ್ಷಿಣ ಭಾರತದ ಮೊದಲ ಆಶ್ರಮ ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠ. ಇಂದಿಗೆ ಅದು ಕಸ್ತೂರ್ ಬಾ ಬಾಲಕಿಯರ ಆಶ್ರಮ. ಕಸ್ತೂರ್ ಬಾ ಉಚಿತ ಪ್ರಸಾದ ನಿಲಯದ ಶಂಕುಸ್ಥಾಪನೆಯನ್ನು ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಇಂದಿರಾಗಾಂಧಿ ಅವರು ನೆರವೇರಿಸಿದ್ದು ಚರಿತ್ರಾರ್ಹ.
೧೯೩೪ರಲ್ಲಿ ಮಹಾತ್ಮ ಗಾಂಧಿ ಹರಿಜನ ಉದ್ಧಾರ ಮತ್ತು ಅಸ್ಪೃಶ್ಯತೆ ನಿವಾರಣೆ ಜನಾಂದೋಲನ ರೂಪಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯದಲ್ಲಿ ಪ್ರವಾಸ ಕೈಗೊಂಡಾಗ ಸಂಪೂರ್ಣ ಉಸ್ತುವಾರಿ ಹೊತ್ತು, ಸಂಘಟಿಸಿದವರು ಕರ್ನಾಟಕ ಹರಿಜನ ಸೇವಕ ಸಂಘದ ಅಧ್ಯಕ್ಷರಾಗಿದ್ದ ವೀರನಗೌಡ ಪಾಟೀಲರು.
ಹುಬ್ಬಳ್ಳಿಯ ಹೊಸೂರಿನಲ್ಲಿ ಸುಮಾರು ೧೦ ಎಕರೆ ಪ್ರದೇಶದಲ್ಲಿ ಮಹಿಳಾ ವಿದ್ಯಾಪೀಠ ತಲೆಯೆತ್ತಿ ನಿಂತಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ, ಗಾಮನಗಟ್ಟಿ ಗ್ರಾಮದ ಬಳಿ ಗುರುರಾವ್ ಕಲ್ಲಾಪುರ ದೇಸಾಯಿ ಅವರು ಮಹಿಳಾ ವಿದ್ಯಾಪೀಠಕ್ಕೆ ೫೪ ಎಕರೆ ಜಮೀನನ್ನು ದಾನವಾಗಿ ಈ ದಂಪತಿಗಳಿಗೆ ನೀಡಿ ಉಪಕರಿಸಿದ್ದಾರೆ.
ಗುರುತರ ಹೊಣೆ ಹೊತ್ತಿದ್ದ ಅವ್ವ ನಾಗಮ್ಮಾ
ಹುಬ್ಬಳ್ಳಿಯ ಹರಿಜನ ಬಾಲಿಕಾಶ್ರಮಕ್ಕೆ ಬಂದ ತಳಸಮುದಾಯದ ಮಕ್ಕಳನ್ನು ಎಲ್ಲ ರೀತಿಯಿಂದ ಸುಧಾರಿಸುವ ಗುರುತರ ಹೊಣೆ ಅವ್ವ ನಾಗಮ್ಮಾ ತಾಯಿಯದ್ದಾಗಿತ್ತು. ಅರೆಹೊಟ್ಟೆ ಉಂಡು, ಮೈತುಂಬ ಉಡಲು ಬಟ್ಟೆ ಸಹ ಇಲ್ಲದೇ, ತಲೆಕೂದಲು ಎಣ್ಣೆ ಕಾಣದೇ, ಮೈಗೆ ನೀರೂ ತಾಗದೇ ಹೀನಾಯ ಬದುಕು, ಪ್ರಾಣಿಸದೃಶ ರೀತಿಯಲ್ಲಿ ಮಕ್ಕಳದ್ದಾಗಿರುತ್ತಿತ್ತು. ನೋಡಿದರೇ ಹೇಸಿಗೆ ಪಟ್ಟುಕೊಳ್ಳುವಷ್ಟು ಮನುಷ್ಯರ ಮಕ್ಕಳ ದಯನೀಯ ಸ್ಥಿತಿ, ನೀವೇ ಊಹಿಸಬಹುದು. ಅವ್ವ ನಾಗಮ್ಮಾ ಇಂತಹ ಮಕ್ಕಳನ್ನು ಆಶ್ರಮಕ್ಕೆ ಕರೆತಂದೊಡನೆ ಎಲ್ಲ ರೀತಿಯಿಂದಲೂ ಸುಧಾರಿಸುವಷ್ಟು ಅಂತಃಕರಣಿ ಮತ್ತು ಮಾತೃಹೃದಯಿ ಆಗಿದ್ದರು.
ಇಲ್ಲಿನ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿದ್ದು ಹುಬ್ಬಳ್ಳಿಯ ಸಿದ್ಧಾರೂಢ ಅಜ್ಜನ ಮಠ ಹಾಗೂ ಮೂರುಸಾವಿರ ಮಠದ ಪೂಜ್ಯ ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳು. ಹುಬ್ಬಳ್ಳಿಯ ಮೂರುಸಾವಿರ ಮಠದ ಹಿರಿಯ ಜಗದ್ಗುರುಗಳು ಶ್ರಾವಣ ಮಾಸದಲ್ಲಿ ಆಶ್ರಮದ ಮಕ್ಕಳನ್ನು ಮಠಕ್ಕೆ ಆಹ್ವಾನಿಸಿ ಪ್ರಸಾದ ಉಣಬಡಿಸಿ ಮೇಲ್ಪಂಕ್ತಿ ಹಾಕಿಕೊಟ್ಟರು.
ಶ್ರಾವಣಮಾಸದ ರಥೋತ್ಸವ ವಿಶೇಷ
ಸಿದ್ಧಾರೂಢ ಮಠದಲ್ಲಿ ಶ್ರಾವಣಮಾಸದ ಜಲರಥೋತ್ಸವ ಭಾವಪರವಶಗೊಳಿಸುವಂಥದ್ದು. ಭಕ್ತರನ್ನು ಸಮ್ಮೋಹನಗೊಳಿಸುವಂಥದ್ದು. ಪೂಜ್ಯ ಸಿದ್ಧಾರೂಢಜ್ಜನವರ ಪುತ್ತಳಿಯನ್ನು ಸುಂದರವಾಗಿ ಅಲಂಕರಿಸಿದ ತೆಪ್ಪದಲ್ಲಿ ಕುಳ್ಳಿರಿಸಿ, ಶ್ರೀಮಠದ ಆವರಣದಲ್ಲಿರುವ ಪುಷ್ಕರಣಿಯಲ್ಲಿ ಜಲರಥೋತ್ಸವ ನೆರವೇರಿಸಲಾಗುತ್ತದೆ. ಜನಸಾಗರವೇ ಹರಿದು ಬಂದು, ಶ್ರದ್ಧಾ-ಭಕ್ತಿಯಿಂದ ಈ ತೆಪ್ಪೋತ್ಸವದಲ್ಲಿ ಪಾಲ್ಗೊಳ್ಳುವುದು ಹಬ್ಬ!
ನೆರೆದ ಜನರೆಲ್ಲ ಶಿವ ಪಂಚಾಕ್ಷರ ಮಂತ್ರ ಪಠಿಸುತ್ತ, ಶಿವ ನಾಮಸ್ಮರಣೆ ಮಾಡುತ್ತ, ‘ಶ್ರೀ ಸಿದ್ಧಾರೂಢ ಮಹಾರಾಜ್ ಕೀ ಜೈ’ ಮತ್ತು ‘ಶ್ರೀ ಗುರುನಾಥಾರೂಢ ಮಹಾರಾಜ್ ಕೀ ಜೈ’ ಎಂಬ ಉಭಯ ಶ್ರೀಗಳ ಬಹುಪರಾಕ್ನೊಂದಿಗೆ ಜಲರಥೋತ್ಸವ ನರೆವೇರುತ್ತದೆ.
ಕಾರ್ತಿಕಮಾಸದ ಲಕ್ಷ ದೀಪೋತ್ಸವ ಅಜ್ಜನ ನೆನಪನ್ನು ಚಿರಂತನಗೊಳಿಸುತ್ತ ಬಂದಿದೆ. ಶಿವರಾತ್ರಿ ಜಾತ್ರಾ ಮಹೋತ್ಸವ, ರಥೋತ್ಸವ ಮತ್ತು ಸಿದ್ಧಾರೂಢರು ಹಾಗೂ ಗುರುನಾಥಾರೂಢರ ಗದ್ದುಗೆಗಳ ವಿಶೇಷ ಪೂಜೆ, ಅಲಂಕಾರ ಮತ್ತು ಪಲ್ಲಕ್ಕಿ ಉತ್ಸವ ಸ್ವರ್ಗಸದೃಶ ವಾತಾವರಣ ರೂಪಿಸುತ್ತದೆ. ಭಕ್ತಾದಿಗಳು ಕಣ್ತುಂಬಿಕೊಳ್ಳುತ್ತಾರೆ.
ವಿಶೇಷವೆಂದರೆ ಈ ಪಲ್ಲಕ್ಕಿ ನಗರದ ವಿವಿಧ ಬಡಾವಣೆ, ಬೀದಿಗಳಲ್ಲಿ ಸಂಚರಿಸುತ್ತದೆ. ಇಡೀ ಬಡಾವಣೆಗಳನ್ನು ಶುಚಿಗೊಳಿಸಿ ರಂಗೋಲಿ ಹಾಕಿ ತಳಿರು-ತೋರಣಗಳಿಂದ ಶೃಂಗರಿಸಲಾಗಿರುತ್ತದೆ. ಹಣ್ಣುಕಾಯಿಗಳನ್ನು ಪಲ್ಲಕ್ಕಿಗೆ ಸಮರ್ಪಿಸಿ ಪ್ರತಿ ಮನೆಯವರೂ ಪೂಜೆ ಸಲ್ಲಿಸುತ್ತಾರೆ, ಜಾತಿ-ಮತದ ಹಂಗಿಲ್ಲದೇ!
ಇಡೀ ದಿನ ಸಂಚರಿಸಿ ಪಲ್ಲಕ್ಕಿ ಸಂಜೆ ಗೋಧೂಳಿ ಮುಹೂರ್ತದಲ್ಲಿ ಶ್ರೀಮಠವನ್ನು ಪ್ರವೇಶಿಸುತ್ತದೆ. ಶ್ರೀ ಮಠದ ಕೈಲಾಸ ಮಂಟಪದ ಆವರಣದಿಂದ ಮಹಾದ್ವಾರದವರೆಗೆ ಆ ಬಳಿಕ ರಥವನ್ನು ಎಳೆಯಲಾಗುತ್ತದೆ. ಲಕ್ಷಾಂತರ ಭಕ್ತರು ಪಾಲ್ಗೊಂಡು ಅಜ್ಜನ ತೇರನ್ನೆಳೆದು ಪುನೀತರಾದ ಭಾವ ತಳೆಯುತ್ತಾರೆ. ರಾಜಬೀದಿಯಲ್ಲಿ ಸರ್ವಾಲಂಕೃತ ತೇರು ಬರುವುದು ರೋಮಾಂಚನಗೊಳಿಸುವ ಸನ್ನಿವೇಶ. ಭಕ್ತರು ರಥಕ್ಕೆ ಉತ್ತತ್ತಿ, ಕೊಬ್ಬರಿ, ಬಾಳೇಹಣ್ಣು, ನಿಂಬೆಹಣ್ಣು ತೂರಿ ತಮ್ಮ ಹರಕೆ ತೀರಿಸುವುದು ವಿಶೇಷ.
ನಿತ್ಯ ದಾಸೋಹ
ಸಿದ್ಧಾರೂಢ ಅಜ್ಜನವರ ಸಂಕಲ್ಪದಂತೆ ಇಲ್ಲಿ ನಿತ್ಯ ಸಹಸ್ರಾರು ಜನರಿಗೆ ಪ್ರಸಾದ ದಾಸೋಹ ನಡೆಯುತ್ತದೆ. ಯಾರು ಬೇಕಾದರೂ, ಯಾವಾಗ ಬೇಕಾದರೂ ಶ್ರೀಮಠಕ್ಕೆ ತೆರಳಿ ಪ್ರಸಾದ ಪಡೆಯಬಹುದು. ಭೋಜನದ ಸಮಯ ನಿಗದಿತವಿದೆ.
ಈಗಲೂ ಅಂದಿನ ಕೊನೆಯ ಭಕ್ತರ ತಾಟಿಗೆ ಅನ್ನ ಬಡಿಸುವ ಮೊದಲು, ‘ಪ್ರಸಾದಕ್ಕ ಯಾರಾದರೂ ಉಳಿದಿದ್ದರ, ಇದ್ರ ರ್ರೀ…’ ಎಂದು ಕೂಗಿ ಕರೆದು ಅಂತಿಮವಾಗಿ ಯಾರೂ ಇಲ್ಲ ಈ ವೇಳೆಗೆ ಅಂಬುದನ್ನು ಖಾತ್ರಿಪಡಿಸಿಕೊಂಡು ಆರತಿ ಬೆಳಗಿ ಮುಂದಿನ ಪ್ರಸಾದದ ಹೊತ್ತಿನವರೆಗೆ ಪಾಕಶಾಲೆಯ ಬಾಗಿಲು ಮುಚ್ಚಲಾಗುತ್ತದೆ. ಅರ್ಥಾತ್ ಅಜ್ಜನ ದರ್ಶನಕ್ಕೆ ಬಂದವರು ಉಪವಾಸ ತೆರಳುವಂತಿಲ್ಲ!
ಒಂದು ಪಲ್ಯ, ಸಂಗಟಿ-ಸಾರು, ಅನ್ನ-ಸಾಂಬಾರು, ಗೋಧಿ ಸಜ್ಜಕ ಇಷ್ಟು ಸರಳ ದಾಸೋಹ. ಈ ಪ್ರಸಾದ ಉಂಡವರೇ ಪುಣ್ಯವಂತರು. ಅಷ್ಟು ರುಚಿ.
ಶ್ರೀ ಮಠಕ್ಕೆ ಭೇಟಿ ನೀಡುವ ಎಲ್ಲರಿಗೂ ವಸತಿ ಮತ್ತು ಪ್ರಸಾದದ ವ್ಯವಸ್ಥೆ ಇದೆ. ಕೈಲಾಸ ಮಂಟಪ ಆದಿಯಾಗಿ ಉಭಯ ಪೂಜ್ಯರ ಗದ್ದುಗೆಗಳನ್ನು ಯಾರು ಬೇಕಾದರೂ ನೇರವಾಗಿ ಸ್ಪರ್ಶಿಸಿ ಪೂಜಿಸುವ ಅವಕಾಶವಿರುವುದು ವಿಶೇಷ.
ಶ್ರೀ ಮಠದ ಆಡಳಿತ ವ್ಯವಸ್ಥೆ
ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿಯ ಪ್ರಸ್ತುತ ಅಧ್ಯಕ್ಷರಾಗಿ ಧರಣೇಂದ್ರ ಜವಳಿ, ಉಪಾಧ್ಯಕ್ಷರಾಗಿ ಡಾ. ಗೋವಿಂದ ಮಣ್ಣೂರ, ಗೌರವ ಕಾರ್ಯದರ್ಶಿಯಾಗಿ ಎಸ್.ಐ. ಕೋಳಕೂರ ಹಾಗೂ ೧೫ ಜನ ವಿಶ್ವಸ್ತರಿದ್ದಾರೆ.
ಧಾರವಾಡ ಜಿಲ್ಲೆ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಕೆ.ಜಿ. ಶಾಂತಿ ಶ್ರೀಮಠದ ಪ್ರಧಾನ ವಿಶ್ವಸ್ತರು, ಕಾರ್ಯಾಧ್ಯಕ್ಷರು ಹಾಗೂ ಆಡಳಿತಾಧಿಕಾರಿ. ನ್ಯಾಯಾಧೀಶರು ತಮಗೆ ಸಲಹೆ, ಸೂಚನೆ ನೀಡಲು ಟ್ರಸ್ಟ್ ಕಮಿಟಿ ನೇಮಕ ಮಾಡುವ ಪ್ರಾವಧಾನವಿದೆ. ಒಟ್ಟು ೧೭ ಜನ ವಿಶ್ವಸ್ತರು ೫ ವರ್ಷಗಳಿಗೊಮ್ಮೆ ಆಯ್ಕೆಯಾಗಿ ಮಠದ ದೈನಂದಿನ ಆಗುಹೋಗುಗಳ ಉಸ್ತುವಾರಿಯ ಹೊಣೆ ಹೊರುತ್ತಾರೆ. ಸದ್ಯ ಎರಡು ಸ್ಥಾನಗಳು ತೆರವಾಗಿವೆ. ಈ ಕಮಿಟಿಯಲ್ಲಿ ಎಲ್ಲ ಜಾತಿ, ಧರ್ಮದವರಿಗೆ ಪ್ರಾತಿನಿಧ್ಯ ಕಲ್ಪಿಸಿರುವುದು ಜಾತ್ಯತೀತ ಪರಿಕಲ್ಪನೆಗೆ ಮಕುಟ.
ಮಠದ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನು ಈ ಕಮಿಟಿ ಸೌಹಾರ್ದಯುತವಾಗಿ ಚರ್ಚಿಸಿ ನಿರ್ಣಯಿಸುತ್ತದೆ.
ಶ್ರೀ ಮಠದ ಅನುಯಾಯಿಗಳು
ವರನಟ ಡಾಕ್ಟರ್ ರಾಜಕುಮಾರ್ ಹಾಗೂ ಕುಟುಂಬ ಶ್ರೀಮಠದ ಭಕ್ತರಲ್ಲಿ ಅಗ್ರಗಣ್ಯರು. ಹುಬ್ಬಳ್ಳಿಯಲ್ಲಿ ವರನಟ ಯಾವತ್ತೇ ನಾಟಕ ಕಂಪೆನಿಯ ಕ್ಯಾಂಪ್ನಲ್ಲಿ ಅಭಿನಯಿಸಲು ಬಂದರೂ ಶ್ರೀಮಠದ ಆಶ್ರಯ ಬಯಸುತ್ತಿದ್ದರು.
ಶ್ರೀಮಠದ ಪ್ರಸಾದದ ಬಗ್ಗೆ ಅವರಿಗೆ ವಿಶೇಷ ಗೌರವವಿತ್ತು. ಕಷ್ಟಕಾಲದಲ್ಲಿ ಶ್ರೀಮಠ ತಮ್ಮನ್ನು ಸಲುಹಿದೆ ಎಂಬ ಕೃತಜ್ಞತೆ ಅವರ ಅಂತಃಕರಣದಲ್ಲಿತ್ತು. ತಾವು ಟೆಂಟ್ ಹಾಕಿದ ಜಾಗೆಯಿಂದ ರಾತ್ರಿಯ ಕೊನೆ ಪ್ರದರ್ಶನ ಮುಗಿಸಿ ಸಹ ನಟ-ನಟಿಯರ ಮಕ್ಕಳನ್ನು ಹೆಗಲಮೇಲೆ ಕುಳ್ಳಿರಿಸಿಕೊಂಡು, ಶ್ರೀಮಠದವರೆಗೆ ವರನಟ ರಾಜಕುಮಾರ್ ನಡೆದೇ ಬರುತ್ತಿದ್ದರು!
ರಾಜಕುಮಾರ್ ಅವರು ಹಾಗೂ ಅವರ ತಾಯಿ ಶ್ರೀಮಠದಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದು ಅಜ್ಜನ ಬಗ್ಗೆ ಅವರಿಗಿರುವ ಭಕ್ತಿಯನ್ನು ತೋರಿಸುತ್ತದೆ. ಹೆಸರಾಂತ ಚಿತ್ರನಟರಾದ ಸುದೀಪ್, ಯಶ್, ದರ್ಶನ್ ಹಾಗೂ ಗಣೇಶ್ ಸೇರಿದಂತೆ ಅನೇಕರು ಶ್ರೀಮಠದ ಭಕ್ತರು.
ಅಜ್ಜನ ಕೀರ್ತಿ ದೇಶಾದ್ಯಂತ!
ಬಾಲಿವುಡ್ನ ಖ್ಯಾತ ನಟಿ ಕಾಜೋಲ್, ಅಜಯ್ ದೇವಗನ್ ಹಾಗೂ ಕುಟುಂಬ ಮಠದ ಪರಮ ಭಕ್ತರು. ಅವರ ತಂಗಿ ತನಿಷಾ, ತಾಯಿ ತನುಜಾ ಮುಖರ್ಜಿ, ಅಜ್ಜಿ ಶ್ರೀಮತಿ ಶೋಭನಾ ಸಮರ್ಥ ಕೂಡ ಶ್ರೀ ಮಠದ ಪರಮ ಭಕ್ತರು.
ಭಗವಂತ ನೀಡುತ್ತಾನೆ ಮತ್ತು ಉಪಕೃತ ಮರೆತರೂ ಕ್ಷಮಿಸುತ್ತಾನೆ; ಮನುಷ್ಯ ಪಡೆಯುತ್ತಾನೆ ಮತ್ತು ಉಪಕಾರವನ್ನು ಮರೆಯುತ್ತಾನೆ! ಉದಾತ್ತತೆ ದೈವಿಕತೆಯ ವಿಶೇಷತೆ; ಕೃತಘ್ನತೆ ಮನುಜತ್ವದ ಹೀನತೆ.. ಅಜ್ಜನನ್ನು ನಾವು ಮರೆತರೂ, ಅಜ್ಜ ನಮ್ಮ ಕೈ ಬಿಡುವುದಿಲ್ಲ – ಎಂಬ ನಂಬಿಕೆ ಈ ಭಾಗದ ಜನರಲ್ಲಿ ಜನಜನಿತ.
ಜ್ಞಾನ ಎಂಬುದು ಎಷ್ಟು ಶಾಂತ, ಸುಂದರ, ಶೀತಲ ಮತ್ತು ಪೂರ್ಣಚಂದ್ರನ ಬೆಳದಿಂಗಳಿನಂತೆ! ಅಜ್ಜ ನಿಜಾರ್ಥದಲ್ಲಿ ಈ ಮಾತಿಗೆ ಅನ್ವರ್ಥಕ. ಇನ್ನೂ ಅವರ ಪ್ರಭೆ ಜಗವನ್ನು ಬೆಳಗುತ್ತಲೇ ಇದೆ. ಜಂಜಡದ ಬದುಕಿಗೆ ಅವರ ಸ್ಮೃತಿ ದೀವಟಿಗೆಯಾಗಿದೆ.
ಪ್ರಣತೆ ಇದೆ, ಬತ್ತಿ ಇದೆ,
ಜ್ಯೋತಿ ಬೆಳಗುವೊಡೆ!
ತೈಲವಿಲ್ಲದೇ ಪ್ರಭೆ ತಾನೆಲ್ಲಿಯದೋ?!
ಗುರುವಿದೆ, ಲಿಂಗವಿದೆ,
ಶಿಷ್ಯನ ಸುಜ್ಞಾನವಂಕುರಿಸದನಕ್ಕರ,
ಭಕ್ತಿ ಎಲ್ಲಿಯದೋ?!
ಸೋಹಂ ಎಂಬುದ ಕೇಳಿ, ದಾಸೋಹವ ಮಾಡದಿದ್ದೊಡೆ, ಅತೀಗಳೆವ – ಗುಹೇಶ್ವರ!