ಸರ್ವಮಂಗಳೆ, ಸರ್ವರ ಆಶ್ರಯದಾತೆ ಭಾರತಮಾತೆ
ಬಹುಶ್ರೇಷ್ಠ ಸಂಸ್ಕೃತಿ, ಸಂಸ್ಕಾರ, ಸಹಿಷ್ಣುತೆಗಳ ಸನ್ಮಾತೆ
ಗಂಗೆ, ತುಂಗೆ, ಕಾವೇರಿ, ಗೋದಾವರಿಯರ ಜನ್ಮದಾತೆ
ಹಿಮಾಲಯದ ರಜತ ಕಿರೀಟ ತೊಟ್ಟ ಹಿಮಗಿರಿಜಾತೆ.
ಇಪ್ಪತ್ತೆಂಟು ವಿಧದ ಹೂಗಳ ಹಾರದ ಅಂದ
ಪ್ರತಿಯೊಂದೂ ಅನನ್ಯ, ಸುಂದರ. ಚಂದ ಸುಗಂಧ
ಕೊರಳಲ್ಲಿ ಎಂಟು ಪದಕಗಳ ಸರದ ಬಂಧ
ಎಲ್ಲ ಒಂದಾಗಿ ಅವಳ ಮೆರೆಸುವುದೇ ಅತ್ಯಾನಂದ.
ಕೆಂಪುಕೋಟೆಯನ್ನೇ ಹಣೆಯ ಬೊಟ್ಟಾಗಿಸಿ
ಸ್ವರ್ಣಮಂದಿರವನ್ನು ಮುಡಿವ ಮಲ್ಲಿಗೆಯಾಗಿಸಿ
ಹೃದಯದಲಿ ತಾಜಮಹಲಿನೊಂದಿಗೆ ಶ್ರೀರಾಮನನ್ನಿರಿಸಿ
ಬೇಲೂರು, ಅಜಂತಾ, ಕೋನಾರ್ಕಗಳೆ ಮೈವೆತ್ತ ಅರಸಿ, ಸರಸಿ.
ಗೊಮ್ಮಟ, ಬುದ್ಧ, ಮಹಾವೀರರು ಬೆಳೆಸಿದ ನಾಡಿದು
ಶಂಕರ, ರಾಮಾನುಜ, ಮಧ್ವ, ದಾಸವರೇಣ್ಯರ ಬೀಡಿದು
ವಿಶ್ವಗುರುವೆನಿಸಿ ಹಲವು ಮತಧರ್ಮಗಳ ಪೊರೆದ ಹೊನ್ನಾಡಿದು
ಸಂಸಾರ ಮಥಿಸಿ ಶಾಂತಿಯ ಬೆಣ್ಣೆ ಪಡೆದ ಬುದ್ಧನ ತಾಯ್ನಾಡಿದು.
ವಿಶ್ವಕ್ಕೆ ಗಾಂಧಿ ಹೇಳಿದ್ದು ಅಹಿಂಸೆ ಮತ್ತು ಶಾಂತಿಮಂತ್ರ
ರಾಮ, ಕೃಷ್ಣರನ್ನು ಎದೆಯಲ್ಲಿಟ್ಟ ಭಾರತಿಯ ಕೈಯಲ್ಲೂ ಗಣಕಯಂತ್ರ
ಬೊಗಸೆ ನೀರಿನಲ್ಲೇ ಮಂಗಳನ ಅಂಗಳಕ್ಕಿಳಿದುದು ಮಹಾತಂತ್ರ ಭಾರತಿಗೆ ಆರತಿಯಾಗಲಿ ನಮ್ಮ ದೇಶಪ್ರೇಮ, ಆತ್ಮನಿರ್ಭರತೆಯ ಮಹಾಮಂತ್ರ.