
ಬಾನಲಿ ಮೂಡಿದ ಮೋಡಗಳೆಲ್ಲ
ಮರೆಯಾಗುತ್ತಿವೆ ಓಡೋಡಿ.
ಭೂಮಿಯ ಮೇಲೆ ಮುನಿಸನು ತಾಳಿದ
ಹಾಗಿದೆಯಲ್ಲ ಅದೊ ನೋಡಿ!
ಕಡುಬರಗಾಲಕೆ ಮುನ್ನುಡಿ ಬರೆದರೆ
ಬೆಂಗಾಡಾಗದೆ ಕರುನಾಡು?
ಕರುಣೆಯ ನೀರಿನ ಹೌದನು ತೆರೆದು
ಸುರಿಯಲಿ ಮುಂಗಾರಿನ ಮಳೆಯು.
ಕೆರೆತೊರೆ ನದ ನದಿ ಬತ್ತಿವೆ ನೆಲದಲಿ
ಭಣಭಣ ಹೊಲವನ ತೋಟಗಳು.
ದನಕರು ಖಗಮೃಗ ಜೀವೀ ರಾಶಿ
ಸೊರಗಿವೆ ಪಂಚ ಪ್ರಾಣಗಳು.
ಮುದವನು ತರುವುದು ಮುಂಗಾರಿನ ಮಳೆ
ಹಸಿರು ಸಮೃದ್ಧಿಗೆ ಹಿತದ ಮಳೆ.
ಮಳೆ ಚಳಿ ಬಿಸಿಲು ಗಾಳಿಯು ವರವು
ಜನಜನ ರೈತರ ಜೀವ ಕಳೆ.
ಮಳೆಯೆ ಮಳೆಯೆ ಭೂಮಿಗೆ ಇಳಿಯೆ
ಬೆಳೆಯಲಿ ನವಧಾನ್ಯದ ಫಸಲು.
ಚಿನ್ನದ ಚೂಡಾಮಣಿಯನು ಹೊತ್ತು
ತಲೆಯನು ತೂಗಲಿ ಪೈರುಗಳು.