ಅಮ್ಮ ಪೂಜಿಸಿದ ದೇವರುಗಳ ಮುಂದೆ ನಾನು ನಿಂತಾಗ ಅವರುಗಳು ಯಾರೂ ಕಾಣುವುದೇ ಇಲ್ಲ. ನನ್ನ ಸಂಕಟ ಸಮಯದಲ್ಲಿ ಯಾವ ದೇವರನ್ನು ಕರೆಯಲಿ – ಶಿವನನ್ನೇ, ಗಣೇಶನನ್ನೇ, ಸುಬ್ರಹ್ಮಣ್ಯನನ್ನೇ, ವಿಷ್ಣುವನ್ನೇ, ರಾಮನನ್ನೇ, ಕೃಷ್ಣನನ್ನೇ, ಶಾರದೆಯನ್ನೇ, ಪಾರ್ವತಿಯನ್ನೇ…? ಉಹೂಂ, ಆಗೆಲ್ಲ ನನ್ನ ಅಮ್ಮನೇ ಕಣ್ಮುಂದೆ ಬರುತ್ತಾಳೆ.
ನನ್ನವರಿಗೆ ಅದೇನೋ ಹಾಗಲಕಾಯಿಗೊಜ್ಜು ತಿನ್ನುವ ಆಸೆ ಹುಟ್ಟಿತು. ತಡಮಾಡದೆ ಹತ್ತಿರದ ತರಕಾರಿ ಅಂಗಡಿಗೆ ಹೋಗಿ ಅರ್ಧ ಕಿಲೋ ಹಾಗಲಕಾಯಿ ತಂದು ನನ್ನ ಮುಂದೆ ಇಟ್ಟರು. ಏನೋ ಆಸೆ ಪಟ್ಟರಲ್ಲ ಎಂದು ದೇಹದಲ್ಲಿ ಅಸ್ವಸ್ಥತೆ ಇದ್ದರೂ ತೋರಿಸಿಕೊಳ್ಳದೆ ಗೊಜ್ಜು ತಯಾರಿಸಲು ತೊಡಗಿಕೊಂಡೆ. ನೀರಿನಲ್ಲಿ ಚೆನ್ನಾಗಿ ತೊಳೆದ ಹಾಗಲಕಾಯಿಯನ್ನು ಚಾಕುವಿನಿಂದ ಚಿಕ್ಕಚಿಕ್ಕದಾಗಿ ಕತ್ತರಿಸಿ ಪಾತ್ರೆಯಲ್ಲಿ ಹಾಕುತ್ತಿರುವಾಗ ಅಮ್ಮನ ನೆನಪು ಒತ್ತರಿಸಿಕೊಂಡು ಬರತೊಡಗಿತು.
ಅಮ್ಮ ಹಾಗಲಕಾಯಿ ಗೊಜ್ಜು ಮಾಡುವುದರಲ್ಲಿ ಎತ್ತಿದಕೈ. ನಾಜೂಕಾಗಿ ಕತ್ತರಿಸಿದ ಹಾಗಲವನ್ನು ಸಾಸುವೆ, ಇಂಗು ಒಗ್ಗರಣೆಯಲ್ಲಿ ಬೇಯಿಸುವುದು; ಒಂದು ಕೈ ಅಳತೆಯಲ್ಲಿ ಒಣ ಮೆಣಸಿನಕಾಯಿ ಅಥವಾ ಹಸಿ ಮೆಣಸಿನಕಾಯಿ, ಒಂದಿಷ್ಟು ಹುರಿಗಡಲೆ, ಹುರಿದ ಎಳ್ಳು, ತೆಂಗಿನಕಾಯಿತುರಿ, ಹುಣಿಸೇಹಣ್ಣು, ಕರಿಬೇವು, ಟೀ ಚಮಚೆಯಷ್ಟು ಅರಿಶಿನ, ಸಾಸುವೆ, ಜೀರಿಗೆ ಎಲ್ಲವನ್ನು ಒರಳುಕಲ್ಲಿನಲ್ಲಿ ಚೆನ್ನಾಗಿ ಅರೆದಿಟ್ಟುಕೊಳ್ಳುವುದು; ಹಾಗಲಕಾಯಿಯ ಕಹಿ ಹೋಗಿಸಲು ಬಿಸಿನೀರಿನಲ್ಲಿ ಕರಗಿಸುವುದು. ಅನಂತರ ಅರೆದ ಮಸಾಲೆ ಹಾಗೂ ಬೆಲ್ಲದ ನೀರನ್ನು ಬೆಂದ ಹಾಗಲಕ್ಕೆ ಸೇರಿಸಿ ಮತ್ತೆ ಹದವಾದ ಒಲೆಉರಿಯ ಮೇಲೆ ಕುದಿಸುವಾಗ ಗೊಜ್ಜಿನ ವಿಶಿಷ್ಟವಾದ ಗಮಲು ಮನೆಯಲ್ಲೆಲ್ಲ ಆವರಿಸಿಕೊಳ್ಳುತ್ತಿತ್ತು. ನಮಗೆಲ್ಲ ಯಾವಾಗ ಗೊಜ್ಜನ್ನು ಅನ್ನಕ್ಕೆ ಕಲೆಸಿಕೊಂಡು ತಿಂದೇವೋ ಎಂಬ ತಹತಹ.
ಈಗ ಗೊಜ್ಜು ಮಾಡಲೆಂದು ಮಿಕ್ಸಿಯಲ್ಲಿ ಮಸಾಲೆ ಅರೆಯುವಾಗ ಎಳ್ಳು ಸೇರಿಸುವುದನ್ನು ಮರೆತಿದ್ದೆ. “ಎಳ್ಳು ಹಾಕಿದ್ಯೇನೆ?” ಎಂದು ಅಮ್ಮ ನನ್ನ ಬೆನ್ನಹಿಂದೆ ನಿಂತು ಕೇಳಿದಂತಾಯ್ತು. ಮಿಕ್ಸಿಯ ಮುಚ್ಚಳ ತೆಗೆದು ಹುರಿದ ಎಳ್ಳು ಬೆರೆಸಿ ಮತ್ತೆ ಮಸಾಲೆ ಅರೆದಿದ್ದಾಯ್ತು. ಅಮ್ಮನ ಪ್ರಕಾರ ಗೊಜ್ಜಿಗೆ ಎಳ್ಳು ಸೇರಿಸಿದರೆ ವಿಶೇಷ ರುಚಿ ಇರುವುದೇನೋ!
ಶ್ರಾದ್ಧದ ಶ್ರದ್ಧೆ
ಅಜ್ಜಿ, ತಾತನ ಶ್ರಾದ್ಧದ ದಿನಗಳಲ್ಲಿ ಇತರ ಭಕ್ಷ್ಯಗಳೊಡನೆ ಅಮ್ಮ ಹಾಗಲಕಾಯಿ ಹಾಗೂ ಹೆರಳೇಕಾಯಿ ಗೊಜ್ಜುಗಳನ್ನು ಮಾಡುತ್ತಿದ್ದಳು. ಅವು ಬಹಳ ರುಚಿಕರವಾಗಿರುತ್ತಿದ್ದವು. ಶ್ರಾದ್ಧ ಮುಗಿದು ಮೂರು ದಿನಗಳಾದರೂ ಈ ಗೊಜ್ಜು ಹಾಳಾಗುತ್ತಿರಲಿಲ್ಲ. ಆಗೆಲ್ಲ ಈಗಿನಂತೆ ಫ್ರಿಜ್ ಇರಲಿಲ್ಲವಲ್ಲ! ನಮಗಂತೂ ಅನ್ನಕ್ಕೆ ಗೊಜ್ಜು ಕಲೆಸಿ ತಿನ್ನುವುದೆಂದರೆ ಸುಗ್ಗಿ. ಬೆಳಗ್ಗೆ ಬೇರೆ ತಿಂಡಿಯೇ ಬೇಕಿರಲಿಲ್ಲ.
ಶ್ರಾದ್ಧದ ದಿನಗಳ ನೆನಪು ಈಗಲೂ ನನ್ನ ಮನಸ್ಸಿನಲ್ಲಿ ದಟ್ಟವಾಗಿ ಉಳಿದಿದೆ. ಶ್ರಾದ್ಧದ ಹಿಂದಿನ ದಿನವೇ ಅಮ್ಮ ತನ್ನ ಸೀರೆ-ರವಿಕೆ ಮತ್ತು ಅಪ್ಪನ ಪಂಚೆ-ಟವೆಲು-ಅಂಗವಸ್ತ್ರಗಳನ್ನು ಒಗೆದು ತಲೆಗೆ ಸ್ನಾನ ಮಾಡಿ, ಒದ್ದೆ ಬಟ್ಟೆಯುಟ್ಟೇ ನಡುಮನೆಯಲ್ಲಿ ಹೆಂಚಿನಿಂದ ತೂಗಿಬಿದ್ದ ಗಳಗಳ ಮೇಲೆ ಒಗೆದ ಬಟ್ಟೆಗಳನ್ನು ಒಣಹಾಕುತ್ತಿದ್ದಳು. ಶ್ರಾದ್ಧ ಅಂದರೆ ತುಂಬಾ ಮಡಿಯಲ್ಲಿರಬೇಕಿತ್ತು. ಇನ್ನು ಶ್ರಾದ್ಧದ ದಿನವೂ ಅಷ್ಟೆ. ಬೆಳಗ್ಗೆ ಐದಕ್ಕೆಲ್ಲ ಎದ್ದು ತಲೆಸ್ನಾನ ಮಾಡಿ ಮಡಿಸೀರೆ ಉಟ್ಟು ಅಡುಗೆಮನೆಯ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಳು. ವಡೆಗಾಗಿ ಉದ್ದಿನಬೇಳೆ, ಆಂಬೊಡೆಗಾಗಿ ಕಡಲೆಬೇಳೆಯನ್ನು ನೆನೆಹಾಕುವುದೇನು; ರವೆ ಉಂಡೆಗಾಗಿ ರವೆ ಹುರಿಯುವುದೇನು; ಈಳಿಗೆಮಣೆ ಮೇಲೆ ಕೂತು ತರಕಾರಿಗಳನ್ನು ಕತ್ತರಿಸುವುದೇನು? ಅಡುಗೆ ಎಂದರೆ ಕಡೆ ಪಕ್ಷ ಹದಿನೈದು ಮಂದಿಗಾದರೂ ತಯಾರಾಗಬೇಕು. ಇದರ ನಡುವೆಯೇ ಮಕ್ಕಳಿಗೆಂದು ಉಪ್ಪಿಟ್ಟು, ಕಾಫಿ ಮಾಡಿ ಹಜಾರದ ಒಂದು ಮೂಲೆಯಲ್ಲಿ ಇಡುತ್ತಿದ್ದಳು. ತಿಥಿ ಮುಗಿಯುವವರೆಗೆ ಅಮ್ಮ-ಅಪ್ಪ ಕಾಫಿ ಸಹ ಸೇವಿಸುವಂತಿರಲಿಲ್ಲ. ನಿಧಾನವಾಗಿ ನಾವು ಒಬ್ಬೊಬ್ಬರೇ ಎದ್ದ ಬಳಿಕ ತಿಂಡಿ-ಕಾಫಿ ಮುಗಿಸಿ ಸ್ನಾನದ ನಂತರ ಕೋಣೆಯೊಳಗೆ ಸೇರಿ ಮೆಲುದನಿಯಲ್ಲಿ ಮಾತಾಡಿಕೊಂಡು ಕೂರುತ್ತಿದ್ದೆವು. ಶಾಲೆ-ಕಾಲೇಜಿಗೆ ನಾವೇ ರಜೆ ತೆಗೆದುಕೊಂಡುಬಿಡುತ್ತಿದ್ದೆವು.
ಪುರೋಹಿತರು ಸುಮಾರು ಹನ್ನೊಂದು ಗಂಟೆಯ ವೇಳೆಗೆ ಬರುತ್ತಿದ್ದರು. ಅದಕ್ಕೆ ಮುಂಚೆ ನನ್ನ ಅಕ್ಕ ಹಜಾರವನ್ನು ಗುಡಿಸಿ, ಒರಸಿ ಶುದ್ಧವಾಗಿಡುತ್ತಿದ್ದಳು. ಪುರೋಹಿತರು ಬಂದ ನಂತರ ಕೋಣೆ ಸೇರಿದ ನಾವ್ಯಾರೂ ಹಜಾರದೊಳಗೆ ಹೋಗುವಂತಿರಲಿಲ್ಲ. ಹೆಚ್ಚುಕಮ್ಮಿ ಮೂರು ಗಂಟೆಗಳ ಕಾಲ ಶ್ರಾದ್ಧಕಾರ್ಯಗಳೆಲ್ಲ ಮುಗಿದ ನಂತರ ಪಿಂಡಕ್ಕೆ ನಮಸ್ಕಾರ ಮಾಡುವಂತೆ ಕೋಣೆಯೊಳಗಿದ್ದ ನಮಗೆ ಕರೆ ಬರುತ್ತಿತ್ತು. ಇನ್ನು ಸ್ವಲ್ಪ ಹೊತ್ತಿನಲ್ಲೇ ತಿಥಿ ಊಟದ ಸಂಭ್ರಮವೆಂದು ನಮಗೆಲ್ಲಾ ಖುಷಿ. ನಾವೆಲ್ಲರು ಪಿಂಡಕ್ಕೆ ನಮಸ್ಕಾರ ಮಾಡಿದ ಬಳಿಕ ಅಮ್ಮ ಒಂದು ಬೋಗುಣಿಯಲ್ಲಿ ಒಂದಷ್ಟು ವಡೆ, ಆಂಬೊಡೆ, ರವೆಉಂಡೆಗಳನ್ನು ತುಂಬಿ ಕೋಣೆಯ ಬಾಗಿಲ ಬಳಿ ಪ್ರಸಾದವೆಂದು ಇಡುತ್ತಿದ್ದಳು. ಅದಕ್ಕೇ ಕಾದಿರುವ ಕಾಗೆಗಳಂತೆ ನಾವು ಅದನ್ನು ಹಂಚಿಕೊಂಡು ತಿನ್ನುತ್ತಿದ್ದೆವು. ಪುರೋಹಿತರು ನಿರ್ಗಮಿಸಿದ ಬಳಿಕವೇ ನಾವೆಲ್ಲ ಹೊರಗೆ ಬರುತ್ತಿದ್ದೆವು.
ಸಾಲದ ಶೂಲ
ಶ್ರಾದ್ಧದ ದಿನಗಳಲ್ಲಿ ಮಾತ್ರವಲ್ಲ, ಅಮ್ಮ ಯಾವುದೇ ಹಬ್ಬದ ದಿನಗಳಲ್ಲಿ ಬಗೆ ಬಗೆಯ ತಿನಿಸುಗಳನ್ನು ಮಾಡಿ ನಮಗೆ ಉಣ ಬಡಿಸುತ್ತಿದ್ದಳು. ಅವಳ ಶ್ರಮ, ದಣಿವು ನಮಗೆ ಅರ್ಥವೇ ಆಗುತ್ತಿರಲಿಲ್ಲ. ನಮಗೆ ಗೊತಿದ್ದದ್ದು ತಿನ್ನುವುದೊಂದೇ. ಮನೆಯಲ್ಲಿ ಬಡತನವಿದ್ದರೂ ಅಮ್ಮ ಸಾಲಸೋಲ ಮಾಡಿಯಾದರೂ ನಮಗೆಲ್ಲ ಹೊಟ್ಟೆ ತುಂಬಾ ಉಣಿಸುತ್ತಿದ್ದಳು. ಸಾಲಗಾರರಿಗೆ ಹೇಳಿದ ಸಮಯಕ್ಕೆ ಹಣ ಹಿಂತಿರುಗಿಸಲಾಗದಿದ್ದಾಗ ಅಪ್ಪನೊಂದಿಗೆ ಅಮ್ಮನೂ ಅವಮಾನಕ್ಕೆ ಗುರಿಯಾಗುತ್ತಿದ್ದಳು. `ನನ್ನ ದ್ರಾಬೆ ಮುಖಕ್ಕಿಂತ ನಿನ್ನ ಮುಖಲಕ್ಷಣಕ್ಕೆ ಸಾಲ ಹುಟ್ಟುತ್ತೆ ಕಣೆ’ ಎಂದು ಪುಸಲಾಯಿಸಿ ಅಮ್ಮನನ್ನು ಅವರಿವರ ಬಳಿ ಸಾಲಕ್ಕೆ ಕೈಒಡ್ಡಲು ಅಪ್ಪ ಮುಂದೂಡುತ್ತಿದ್ದರು. ಅಮ್ಮ ಬಡ್ಡಿಗೆ ಸಾಲ ನೀಡುತ್ತಿದ್ದ ಕೆಲವು ಪರಿಚಿತ ಹೆಂಗಸರಿಂದ ಸಾಲ ಹೊಂದಿಸುತ್ತಿದ್ದಳು. ವೆಂಕಟೇಶಶೆಟ್ಟಿ ದಿನಸಿ ಅಂಗಡಿಯಲ್ಲೂ ಸಾಲ. ಅಣ್ಣಾಮಲೈ ಚೆಟ್ಟಿಯಾರನ ಬಟ್ಟೆ ಅಂಗಡಿಯಲ್ಲಿ ಬಟ್ಟೆ ಸಾಲದ ಹೊರೆ ಬೇರೆ. ಹಾಗೆಂದು ಹಣವನ್ನಾಗಲೀ, ಆಹಾರ ಪದಾರ್ಥಗಳನ್ನಾಗಲೀ ಅಮ್ಮ ಅನಾವಶ್ಯಕವಾಗಿ ಬಳಸುತ್ತಿರಲಿಲ್ಲ. ದುಂದುಗಾರಿಕೆ ಎನ್ನುವುದು ಅವಳ ಅರ್ಥಕೋಶದಲ್ಲೇ ಇರಲಿಲ್ಲ. ಹೀಗಿರುವಾಗ ಮೋಜು, ಮನರಂಜನೆಗೆಂದು ಹಣ ಖರ್ಚುಮಾಡುವ ಬಾಬತ್ತು ಹೇಗೆ ಬರಲು ಸಾಧ್ಯ? ಈ ವಿಷಯಕ್ಕೆ ಬಂದಾಗ ನನಗೊಂದು ಪ್ರಸಂಗ ಜ್ಞಾಪಕಕ್ಕೆ ಬರುತ್ತದೆ.
ಸಿನಿಮಾ ರಾಮಾಯಣ
ಆಗ ನಾವು ಮೈಸೂರಿನಲ್ಲಿ ವಾಸವಾಗಿದ್ದ ಕಾಲ. ನನ್ನ ತಂದೆಯವರಿಗೆ ಸಿನಿಮಾ ನೋಡುವ ಖಯಾಲಿ ಇತ್ತು. ಅದು ಹೇಗೋ ಹಿಂದಿ ಸಿನಿಮಾ ಮೇಲೂ ಪ್ರೀತಿ ಬೆಳೆಸಿಕೊಂಡರು. ಮನೆಯ ರೇಡಿಯೋದಲ್ಲಿ `ವಿವಿಧ ಭಾರತಿ’, `ಬಿನಾಕ ಗೀತಮಾಲ’ ಮೂಲಕ ಬಿತ್ತರವಾಗುತ್ತಿದ್ದ ಹಿಂದಿ ಚಿತ್ರಗೀತೆಗಳು ಅವರ ಕಿವಿಯ ಮೇಲೂ ಬೀಳುತ್ತಿದ್ದ ಪರಿಣಾಮವಿರಬೇಕು. ಹಾಗಾಗಿ ಮಹಮ್ಮದ್ರಫಿ, ಮುಖೇಶ್, ಕಿಶೋರ್ಕುಮಾರ್, ಲತಾ, ಆಶಾ ಇವರೆಲ್ಲ ನಮಗೆ ಹೇಗೋ ಅವರಿಗೂ ಅಚ್ಚುಮೆಚ್ಚಿನ ಗಾಯಕರಾಗಿದ್ದರು. ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಗೆ ಮುಂಚೆಯೇ ಅದರ ಹಾಡುಗಳೆಲ್ಲ ನಮಗೆ ಚಿರಪರಿಚಿತವಾಗಿರುತ್ತಿದವು. ಒಂದು ಸಿನಿಮಾದ ಹಾಡುಗಳು ಶ್ರೇಷ್ಠಮಟ್ಟದ್ದಾಗಿದ್ದರೆ ಆ ಸಿನಿಮಾ ನೋಡುವುದು ನಿಶ್ಚಿತವಾಗಿತ್ತು.
ಅದು ೧೯೬೬ನೇ ಇಸವಿ. ಉಡ್ಲ್ಯಾಂಡ್ಸ್ ಥಿಯೇಟರಿನಲ್ಲಿ “ಸಾಜ್ ಔರ್ ಆವಾಜ್” ಎಂಬ ಸಂಗೀತ ಪ್ರಧಾನವಾದ ಸಿನಿಮಾ ಪ್ರದರ್ಶಿತವಾಗುತ್ತಿತ್ತು. ಅಪ್ಪ ಗುಟ್ಟಾಗಿ ಅದ್ಯಾವಾಗಲೋ ಆ ಸಿನಿಮಾ ನೋಡಿ ಬಂದಿದ್ದರು. “ಸಾಜ್ ಹೊ ತುಮ್ ಆವಾಜ್ ಹೂ ಮೈ….” ಎನ್ನುವ ಗೀತೆಯನ್ನು ಮಹಮದ್ರಫಿ ಬೇರೆ ಸೊಗಸಾಗಿ ಹಾಡಿದ್ದನಲ್ಲ! ನಮ್ಮ ಮನ ಸೂರೆಗೊಂಡಿತ್ತು. ಅದು ಪಟ್ದೀಪ್ ರಾಗವಂತೆ. ಗೌರಿಮನೋಹರಿ ರಾಗದ ಛಾಯೆ ಅದರಲ್ಲಿದೆ ಅಂತ ಅಪ್ಪ ಹೇಳುತ್ತಿದ್ದರು. ಮನೆ ಚಾಕರಿ ಮಾಡುತ್ತಲೇ ಹೈರಾಣಾಗುತ್ತಿದ್ದ ಹೆಂಡತಿಗೂ ಕೊಂಚ ಮನರಂಜನೆ ಇರಲೆಂದೋ ಏನೋ ಅಪ್ಪ, ಅಮ್ಮನಿಗೆ “ನೀನು ಮತ್ತು ಇಬ್ಬರು ಹೆಣ್ಣುಮಕ್ಕಳು ಹೋಗಿ ಆ ಸಿನಿಮಾ ನೋಡ್ಕೊಂಡು ಬನ್ನಿ” ಎಂದು ಹೇಳಿದರು. ಇದಕ್ಕೆಲ್ಲಾ ವೃಥಾ ಖರ್ಚು ಮಾಡುವುದೇಕೆ ಎನ್ನುವುದು ಅಮ್ಮನ ವಾದ. ನಾನು ಮತ್ತು ಅಕ್ಕ ಅವಳನ್ನು ತುಂಬಾ ಒತ್ತಾಯಿಸಿದಾಗ ಕಡೆಗೂ ಸಿನಿಮಾಕ್ಕೆ ಬರಲು ಒಪ್ಪಿಕೊಂಡಳು. ಬಾಲ್ಕನಿ ಕ್ಲಾಸ್ ಬೇಡ, ಕೆಳಗಡೆಯ ಅರವತ್ತೈದು ಪೈಸೆ ಟಿಕೇಟು ದರದ ಸೀಟಿಗೆ ಹೋಗೋಣ ಎಂದು ಅವಳ ಕಂಡೀಷನ್. ಕೆಳಗಡೆ ಕ್ಲಾಸ್ ಅಂದರೂ ಎರಡು ಬಗೆಯಿತ್ತು. ಅರವತ್ತೈದು ಪೈಸೆ ಟಿಕೇಟು ದರದಲ್ಲಿ ನೋಡುವ ಒಂದಷ್ಟು ಸಾಲಿನ ಸೀಟುಗಳು ಮತ್ತು ಅವುಗಳ ಹಿಂದಿನ ಎರಡು ಮೂರು ಸಾಲಿನ ಸೀಟುಗಳು ಒಂದು ರೂಪಾಯಿ ಹದಿನೈದು ಪೈಸೆ ಟಿಕೇಟು ದರದ ಸೀಟುಗಳು. ಸಿನಿಮಾಗೆ ರಷ್ ಇರದಿದ್ದರೆ ಅಥವಾ ನಮ್ಮ ಅದೃಷ್ಟ ಚೆನ್ನಾಗಿದ್ದರೆ ಅರವತೈದು ಪೈಸೆ ಟಿಕೇಟುಗಳೇ ಸಿಗುತ್ತವೆಂದು ನಾನು ಮತ್ತು ಅಕ್ಕ ಲೆಕ್ಕಹಾಕಿದೆವು.
ಅಮ್ಮನೊಂದಿಗೆ ಅಕ್ಕ, ಇಬ್ಬರು ಚಿಕ್ಕ ತಮ್ಮಂದಿರು ಹಾಗೂ ನನ್ನ ಸವಾರಿ ಸಿನಿಮಾಗೆ ಹೊರಟಿತು. ಅದು ಮ್ಯಾಟಿನಿ ಷೋ. ಬಸ್ಚಾರ್ಜ್ ಮತ್ತು ಸಿನಿಮಾ ಟಿಕೇಟಿಗೆಂದು ಅಕ್ಕನ ಕೈಗೆ ಅಪ್ಪ ಹಣ ಕೊಟ್ಟಿದ್ದರು. ಥಿಯೇಟರ್ ಬಳಿಗೆ ತಲಪಿದೆವು. ಅಲ್ಲಿನ ಜನಜಂಗುಳಿ ನೋಡಿ ಅರವತ್ತೈದು ಪೈಸೆ ಟಿಕೇಟು ದೊರೆಯುವುದರ ಬಗ್ಗೆ ಅನುಮಾನ ಕಾಡಿತು. ಟಿಕೇಟ್ ಬೂತ್ ಮುಂದೆ ದೊಡ್ಡ ಕ್ಯೂ. ನಮ್ಮ ಗ್ರಹಚಾರಕ್ಕೆ ನಾವು ಬೂತ್ ಹತ್ತಿರ ಹೋಗುವುದಕ್ಕೂ ಅರವತ್ತೈದು ಪೈಸೆ ಟಿಕೇಟುಗಳು ಖಾಲಿಯಾಗುವುದಕ್ಕೂ ಸರಿಹೋಯ್ತು. ಒಂದು ರೂಪಾಯಿ ಹದಿನೈದು ಪೈಸೆ ಮೊತ್ತದ ಟಿಕೇಟನ್ನು ಹರಿಯಲು ಬೂತ್ನವನು ಮುಂದಾದಾಗ ಅಮ್ಮನಿಗೆ ಇದ್ದ ವಿಷಯವನ್ನು ಅಕ್ಕ ತಿಳಿಸಿದಳು. ಅಮ್ಮನಿಗೆ ಸಿಟ್ಟು ಬಂತು. ಸಿನಿಮಾ ನೋಡೋದು ಬೇಡ, ವಾಪಸ್ ಮನೆಗೆ ಹೋಗೋಣ ನಡೀರಿ ಎಂದು ಹೇಳಿಬಿಟ್ಟಳು. ನನಗೆ ಮತ್ತು ಅಕ್ಕನಿಗೆ ಸಿನಿಮಾ ನೋಡುವ ಆಸೆ. ನಯವಾಗಿಯೇ ಅಕ್ಕ, ಅಮ್ಮನಿಗೆ ಹೇಗೂ ಸಿನಿಮಾ ನೋಡೋದಕ್ಕೆ ಅಂತ ಬಂದಾಗಿದೆ, ಟಿಕೇಟಿನ ಬೆಲೆ ಸ್ವಲ್ಪ ಹೆಚ್ಚಾದರೇನಂತೆ ನೋಡಿಯೇ ಹೋಗೋಣ ಎಂದರೂ ಅಮ್ಮ ಕೇಳಲಿಲ್ಲ. ನೀವು ಬೇಕಾದರೆ ನೋಡ್ಕೊಳ್ಳಿ, ನಾನು ಮನೆಗೆ ಹೊರಟೆ ಎಂದು ತಮ್ಮಂದಿರ ಕೈಯನ್ನು ಹಿಡಿದು ಅಲ್ಲಿಂದ ಬಿಸಿಲಿನಲ್ಲಿ ಸರಸರನೆ ಹೊರಟೇಬಿಟ್ಟಳು. ನಮ್ಮಿಬ್ಬರಿಗೆ ತುಂಬಾ ಬೇಸರವಾಯ್ತು. ಅಮ್ಮನನ್ನು ಹಿಂಬಾಲಿಸಬೇಕೋ ಅಥವಾ ಹೆಚ್ಚಿನ ದರದ ಟಿಕೇಟು ಕೊಂಡು ಸಿನಿಮಾ ನೋಡುವುದೋ ಎಂಬ ಗೊಂದಲಕ್ಕೊಳಗಾದೆವು. ಸಿನಿಮಾ ಆಸೆಯೇ ಗೆದ್ದಿತು. ಎರಡು ಟಿಕೇಟು ಪಡೆದು ಧೈರ್ಯವಾಗಿ ಥಿಯೇಟರಿನೊಳಗೆ ಪ್ರವೇಶಿಸಿದೆವು. ಅಮ್ಮನ ವರ್ತನೆಯಿಂದ ನೊಂದ ನಾವು ಸಿನಿಮಾ ನೋಡುವಾಗಲೂ ಒಂದೇ ಸಮನೆ ಅಳುತ್ತಾ ಕಣ್ಣೊರೆಸಿಕೊಳ್ಳುತ್ತಿದ್ದೆವು. ನಾವು ಮನೆಗೆ ಹೋದ ನಂತರ ಅಪ್ಪ ನಮ್ಮಿಬ್ಬರನ್ನು ಬೈಯುವರೆಂಬ ಆತಂಕದಲ್ಲಿ ಬೇಯುತ್ತಿದ್ದೆವು. ಇಷ್ಟಾಗಿಯೂ ಆ ಸಿನಿಮಾ ನಮ್ಮನ್ನು ರಂಜಿಸಿದ್ದಂತೂ ನಿಜ. ಮನೆಗೆ ಹಿಂತಿರುಗಿದಾಗ ಎಲ್ಲಾ ಶಾಂತವಾಗಿತ್ತು. ಅಮ್ಮ ಕಾಫಿ ನೀಡಿದಳು. ಸಿನಿಮಾ ಹೇಗಿತ್ತಮ್ಮ ಎಂದು ಅಪ್ಪ ಕೇಳಿದಾಗ ನಮ್ಮ ಭಯ ಓಡಿಹೋಯ್ತು. “ನಿಮ್ಮ ಅಮ್ಮನಿಗೆ ಬುದ್ಧಿ ಇಲ್ಲ. ಕಾಸಿನ ಮುಖ ನೋಡಿ ಮನರಂಜನೆ ಕಳಕೊಂಡಳು. ಅವಳ ಹಣೆಬರಹವೇ ಹಾಗೆ. ಇನ್ಮೇಲೆ ಸಿನಿಮಾ ನೋಡಬೇಕೆನಿಸಿದರೆ ನೀವಿಬ್ಬರೇ ಹೋಗಿ ಬನ್ನಿ” ಎಂದು ಅಪ್ಪ ಅವತ್ತು ನಮಗೆ ಪರ್ಮಿಷನ್ ಕೊಟ್ಟುಬಿಟ್ಟರು.
ಬದಲಾದ ಅಮ್ಮ
ಅಮ್ಮ ಸಿನಿಮಾ ದ್ವೇಷಿಯಾಗಿರಲಿಲ್ಲ. ಮಕ್ಕಳ ಹೊಟ್ಟೆ-ಬಟ್ಟೆಗೆ ಹೊಂದಿಸುವುದೇ ಕಷ್ಟವಾಗಿರುವ ಸಮಯದಲ್ಲಿ ಮನರಂಜನೆಗೆಂದು ಹಣ ಚೆಲ್ಲುವುದು ಘೋರ ಅಪರಾಧ ಎಂದು ಅವಳು ಭಾವಿಸಿದ್ದಳಷ್ಟೆ. ಮುಂದೆ ನಾನು ಉದ್ಯೋಗಸ್ಥಳಾಗಿ ಕೈ ತುಂಬಾ ಹಣ ಸಂಪಾದಿಸುವಾಗ ನನ್ನ ಸಿನಿಮಾ ಸಂಗಾತಿ ಅಮ್ಮನೇ ಆಗಿದ್ದಳು. ಯಾವುದೇ ಸಿನಿಮಾಕ್ಕೆ, ಯಾವಾಗ ಕರೆದರೂ ರೆಡಿ ಅಂತ ನಿಲ್ಲುತ್ತಿದ್ದಳು. ಯಾವ ಯೋಚನೆಯೂ ಇಲ್ಲದೆ ಮಗುವಿನಂತೆ ನನ್ನ ಜೊತೆಗಿರುತ್ತಿದ್ದಳು.
ಒಮ್ಮೆ “ಅವ್ವೈ ಷಣ್ಮುಗಿ” ಎಂಬ ಕಮಲಹಾಸನ್ ನಟಿಸಿದ ತಮಿಳು ಸಿನಿಮಾ ನೋಡಲೆಂದು ಟಾಕೀಸಿಗೆ ಹೋದಾಗ ಹೌಸ್ಫುಲ್ ಆಗಿ ಟಿಕೇಟು ಸಿಗಲಿಲ್ಲ. ಯಾವನೋ ಒಬ್ಬ ಬ್ಲಾಕ್ನಲ್ಲಿ ಟಿಕೇಟ್ ಒಂದಕ್ಕೆ ಮೂವತ್ತೈದು ರೂಪಾಯಿಯಂತೆ ಮಾರುತ್ತಿದ್ದ. ಬ್ಲಾಕ್ನಲ್ಲಿ ಟಿಕೇಟ್ ಕೊಂಡು ಸಿನಿಮಾ ನೋಡೋಣವೇ ಎಂದು ಅಮ್ಮನನ್ನು ಕೇಳಿದಾಗ “ತೊಗೊ, ಸಿನಿಮಾ ನೋಡೋಕೆ ಅಂತ್ಲೆ ಬಂದಾಯ್ತಲ್ಲ” ಎಂದು ಅವಳು ಹೇಳಿದಾಗ ನನಗೆ ಸಂತೋಷವಾಯ್ತು. ಅಮ್ಮ ಬದಲಾಗಿದ್ದಳು. ಹಣದ ಉಳಿತಾಯಕ್ಕಿಂತಲೂ ನನ್ನ ಸಂತೋಷಕ್ಕೆ ಬೆಂಬಲ ನೀಡುವುದು ಅವಳಿಗೆ ಮುಖ್ಯವೆನಿಸಿತ್ತು. ನನ್ನ ಸಂತೋಷವೇ ಅವಳ ಸಂತೋಷವಾಗಿತ್ತು.
ಅಚ್ಚಳಿಯದ ದೃಶ್ಯ
ಹಣದ ತಾಪತ್ರಯಕ್ಕಾಗಿ ತನ್ನ ಪ್ರಸವ ಯಾತನೆಯನ್ನೂ ಲೆಕ್ಕಿಸದೆ ಇದ್ದಂಥ ಅಮ್ಮನ ಮನೋಸ್ಥೈರ್ಯ ನೆನೆದಾಗ ಇಂದಿಗೂ ನನಗೆ ಅದೊಂದು ಅಚ್ಚರಿ! ನಾನಾಗ ಸುಮಾರು ಆರೇಳು ವರ್ಷದ ಬಾಲೆ. ತುಂಬು ಬಸಿರಿಯಾಗಿದ್ದ ಅಮ್ಮನಿಗೆ ಅಂದು ಬೆಳಗಿನಝಾವದಿಂದಲೇ ಪ್ರಸವದ ನೋವು ಆರಂಭವಾಗಿತ್ತು. ಅವತ್ತೇ ನನ್ನ ತಂದೆಯವರು ಬೆಂಗಳೂರಿಗೆ ಬೆಳಗ್ಗೆ ಹೊರಡುವ ಮೊದಲ ರೈಲಿನಲ್ಲಿ ಪ್ರಯಾಣ ಬೆಳೆಸಬೇಕಿತ್ತು. ಆಕಾಶವಾಣಿಯಲ್ಲಿ ಹತ್ತೂವರೆ ಸಮಯಕ್ಕೆ ಅವರ ರಾಗ-ತಾನ-ಪಲ್ಲವಿ ರೆಕಾರ್ಡಿಂಗ್ ಆಗುವುದಿತ್ತು. ಬೆಳಗ್ಗೆ ನಾಲ್ಕು ಗಂಟೆಯಿಂದಲೇ ಹೆರಿಗೆನೋವು ಶುರುವಾಗಿದ್ದರೂ ತೋರ್ಪಡಿಸಿಕೊಳ್ಳದೆ ಅಮ್ಮ ಹಲ್ಲುಕಚ್ಚಿಕೊಂಡು ನೋವನ್ನು ಸಹಿಸಿಕೊಂಡಿದ್ದಳು. ಬಚ್ಚಲು ಮನೆಯ ನೀರಿನ ಹಂಡೆಗೆ ಸೌದೆ ಒಲೆ ಉರಿಸಿದ್ದಳು. ಕಾಫಿ ಮಾಡಿದ್ದಳು. ಅಪ್ಪ ಸ್ನಾನ ಮಾಡಿ ಡ್ರೆಸ್ ಧರಿಸಿ ಕಾಫಿ ಕುಡಿಯುವಾಗ ನೋವಿನಿಂದ ಹಿಂಡಿ ಹೋದಂಥ ಅಮ್ಮನ ಮುಖವನ್ನು ನೋಡಿ ಆತಂಕದಿಂದ “ಯಾಕೋ ಸಪ್ಪಗಿದ್ದೀಯಲ್ಲ, ಏನಾಗ್ತಿದೆ? ನೋವು ಬಂದಿದೆಯಾ, ಹೇಳು. ಬೆಂಗಳೂರಿಗೆ ಹೋಗೋದನ್ನು ಕ್ಯಾನ್ಸಲ್ ಮಾಡ್ತೀನಿ” ಎಂದದ್ದಕ್ಕೆ “ಹಾಗೇನೂ ಇಲ್ಲ, ಹೆರಿಗೆಗೆ ಇನ್ನೂ ಒಂದೆರಡುದಿನ ಆಗುತ್ತೆ. ನೀವು ಪ್ರೋಗ್ರಾಮ್ ಮುಗಿಸ್ಕೊಂಡು ಬನ್ನಿ. ಹೇಗೂ ಸಂಜೆಯೊಳಗೆ ಬಂದುಬಿಡ್ತೀರಲ್ಲ” ಅಂತ ಅಮ್ಮ ಹೇಳಿದಳು. ಅಪ್ಪ ಬೆಂಗಳೂರಿಗೆ ಹೋಗದಿದ್ದರೆ ಅವರಿಗೆ ಸಿಗುವ ಎಪ್ಪತ್ತೈದು ರೂಪಾಯಿ ಸಂಭಾವನೆ ಕೈ ಬಿಟ್ಟು ಹೋಗುವುದಲ್ಲ ಎನ್ನುವುದು ಅಮ್ಮನ ಚಿಂತೆ. ಮನೆಯಲ್ಲಿ ದಾರಿದ್ರ್ಯ ಹುರಿದು ಮುಕ್ಕುವಾಗ ಬರಲಿರುವ ಹಣವನ್ನು ನೀಗಿಕೊಳ್ಳುವುದು ಮೂರ್ಖತನವಲ್ಲದೆ ಮತ್ತೇನು? ಅಂತೂ ಆತಂಕದಿಂದಲೇ ಅಪ್ಪ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ಅಪ್ಪ ಮನೆಯಿಂದ ಹೊರಟದ್ದೇ ತಡ ಅಮ್ಮ ಮಲಗಿದ್ದ ನಮ್ಮೆಲ್ಲರನ್ನು ಎಬ್ಬಿಸಿದರು. ನನ್ನ ಹಿರಿಯ ಅಣ್ಣನಿಗೆ ಕೂಡಲೇ ಸೂಲಗಿತ್ತಿ ಸುಂದ್ರಮ್ಮನನ್ನು ಕರೆದುಕೊಂಡು ಬರುವಂತೆ ಅಟ್ಟಿದಳು. ಅಮ್ಮನ ಸ್ಥಿತಿಯನ್ನು ಅವನು ತಕ್ಷಣ ಗ್ರಹಿಸಿದ. ಹದಿನೇಳು ವಯಸ್ಸಿನ ಅವನಿಗೆ ಅಮ್ಮ ನಮಗೆಲ್ಲ ಮನೆಯಲ್ಲೇ ಜನ್ಮ ನೀಡಿದ್ದರ ಅರಿವು ಇತ್ತು. ನೂರಡಿ ರಸ್ತೆ ಸಮೀಪದಲ್ಲೇ ಅಡ್ಡ ರಸ್ತೆಯ ಚಿಕ್ಕ ಮನೆಯೊಂದರಲ್ಲಿವಾಸವಾಗಿದ್ದ ಸುಂದ್ರಮ್ಮನನ್ನು ಕರೆತರಲು ಅವನು ಸೈಕಲ್ಲೇರಿ ವೇಗವಾಗಿ ಹೋದ. ಅಮ್ಮನಿಗೆ ಈ ಹಿಂದೆ ಆಗಿದ್ದ ಹೆರಿಗೆಗಳನ್ನು ಇದೇ ಸೂಲಗಿತ್ತಿ ನಿರ್ವಹಿಸಿದ್ದಳು. ಆಸ್ಪತ್ರೆಯ ಸಮಾಚಾರವೇ ಇಲ್ಲ. ಸೂಲಗಿತ್ತಿಯೇ ನುರಿತ ವೈದ್ಯಳು!
ಅರ್ಧ ಗಂಟೆಯಲ್ಲೇ ಅಣ್ಣ ಹಿಂತಿರುಗಿ ಬಂದು ಸುಂದ್ರಮ್ಮ ಊರಿನಲ್ಲಿಲ್ಲ, ಇಲವಾಲಕ್ಕೆ ಹೋಗಿದ್ದಾಳೆಂಬ ಸುದ್ದಿ ತಂದ. ಅಮ್ಮನಿಗೆ ದಿಕ್ಕೇ ತೋಚದಂತಾಯ್ತು. ಆಗ ಅವಳ ನೆರವಿಗೆ ಬಂದದ್ದು ನಮ್ಮ ಬಳಗದವರೇ ಆದ ನರಸಮ್ಮ ಮತ್ತು ಪಾರ್ವತಮ್ಮ ಎಂಬ ಅಕ್ಕ-ತಂಗಿಯರು. ಅಣ್ಣ ಜಟಕಾಗಾಡಿಯವನಿಗೆ ಹೇಳಿ ಮನೆಯ ಹತ್ತಿರ ಗಾಡಿ ಬರುವಂತೆ ಮಾಡಿದ. ಇಷ್ಟೆಲ್ಲಾ ನಡೆಯುವ ಹೊತ್ತಿಗೆ ಅಮ್ಮ ನೋವು ತಿನ್ನುತ್ತಲೇ ಸುಸ್ತಾಗಿ ಹೋಗಿದ್ದಳು. ನರಸು ಮತ್ತು ಪಾರ್ವತಿ ಅಮ್ಮನನ್ನು ಕಷ್ಟಪಟ್ಟು ಗಾಡಿಯೊಳಗೆ ಹತ್ತಿಸಿಕೊಂಡರು. ಅವರುಗಳನ್ನು ಹೊತ್ತ ಗಾಡಿ “ಗೌರಮ್ಮ ಆಸ್ಪತ್ರೆ”ಯ ಕಡೆ ಸಾಗಿತು. ಅಲ್ಲಿಗೆ ಹೋದ ಅರ್ಧ ಗಂಟೆಯಲ್ಲೇ ಅಮ್ಮನಿಗೆ ಪ್ರಸವವಾಗಿ ಗಂಡುಮಗುವಿಗೆ ಜನ್ಮಕೊಟ್ಟಳೆಂಬ ಸುದ್ದಿಯನ್ನು ಅಣ್ಣ ನಮಗೆ ಹೇಳಿದ. ಅಮ್ಮ ಮತ್ತು ಪುಟ್ಟ ತಮ್ಮನನ್ನು ನೋಡಲು ನಾವೆಲ್ಲ ಉತ್ಸಾಹದಿಂದ ಆಸ್ಪತ್ರೆಗೆ ಓಡಿದ್ದೆವು. ಅಮ್ಮನ ಅಂದಿನ ಚಡಪಡಿಕೆ, ನೋವು ಹಾಗೂ ನರಸು, ಪಾರ್ವತಿ ಅವರೊಂದಿಗೆ ಅವಳು ಜಟಕಾಗಾಡಿಯಲ್ಲಿ ಕುಳಿತು ಗೌರಮ್ಮ ಆಸ್ಪತ್ರೆಗೆ ತೆರಳುತ್ತಿದ್ದ ದೃಶ್ಯ ಇಂದಿಗೂ ನನ್ನ ಮನದಲ್ಲಿ ಅಚ್ಚಳಿಯದೆ ನಿಂತಿದೆ.
ಅಮ್ಮ, ಅವಳ ತಾಯಿಗೆ ಏಳು ತಿಂಗಳು ಬಸಿರಿ ಇರುವಾಗಲೇ ಹುಟ್ಟಿದವಳಂತೆ. ಏಳು ತಿಂಗಳಿಗೆ ಹುಟ್ಟಿದರೇನು? ಅವಳು ಅಪ್ಪನಿಗಿಂತಲೂ ದೈಹಿಕವಾಗಿ, ಮಾನಸಿಕವಾಗಿ ಗಟ್ಟಿಮುಟ್ಟಾಗಿದ್ದಳು. ಮನೆಯ ಸಕಲ ಕೆಲಸಗಳನ್ನು ಒಬ್ಬಳೇ ನಿರ್ವಹಿಸಿಕೊಂಡು ಹೋಗುತ್ತಿದ್ದಳು. ನನಗೆ ಮತ್ತು ಅಕ್ಕನಿಗೆ ಮನೆಕೆಲಸ ಮಾಡಿ ಎಂದು ಒತ್ತಾಯ ಮಾಡುತ್ತಿರಲಿಲ್ಲ. ನಮಗ್ಯಾರಿಗಾದರೂ ಜ್ವರ, ಕಾಯಿಲೆ ಬಂದರೆ ಅದರ ಜವಾಬ್ದಾರಿ ಅಮ್ಮನದೇ. ಸಾಧಾರಣ ಕೆಮ್ಮು, ನೆಗಡಿ, ಜ್ವರಕ್ಕೆ ಚಾಮುಂಡಿಪುರಂನಲ್ಲೇ ಇದ್ದ “ಅಕ್ಕಮ್ಮಣ್ಣಿ ಆಸ್ಪತ್ರೆ”ಗೆ ನಮ್ಮನ್ನು ಕರೆದೊಯ್ಯುತ್ತಿದ್ದಳು. ಅಲ್ಲಿ ಔಷಧೋಪಚಾರ ಉಚಿತ. ಅಲ್ಲಿನ ಸರಕಾರಿ ಡಾಕ್ಟರ್ ನೀಡುತ್ತಿದ್ದ ಮಾತ್ರೆ, ಕೆಂಪು ಅಥವಾ ಜೇನು ಬಣ್ಣದ ನೀರಿನ ಔಷಧಿಯಿಂದಲೇ ನಮ್ಮ ಕಾಯಿಲೆ ವಾಸಿಯಾಗುತ್ತಿತ್ತು. ಸ್ವಲ್ಪ ಗಂಭೀರವಾದ ಕಾಯಿಲೆಗಳಾದರೆ ಡಾ. ಬಾಪು ಶ್ರೀನಿವಾಸರಾಯರ ಕ್ಲಿನಿಕ್ಗೆ ಹೋಗುವುದಿತ್ತು. ನಾನು ವಯಸ್ಕಳಾಗಿ, ಉದ್ಯೋಗದಲ್ಲಿದ್ದಾಗ ಜ್ವರ ಬಂದು ಮಲಗಿದಾಗಲೂ ಅಮ್ಮನ ಆರೈಕೆ, ಸಾಂತ್ವನವನ್ನು ಬಯಸುತ್ತಿದ್ದೆ. ಅವಳು ನನ್ನ ಪಕ್ಕದಲ್ಲೇ ಕೂತಿರಬೇಕೆಂದು ಕೇಳಿಕೊಳ್ಳುತ್ತಿದ್ದೆ. ಪಾಪ, ಅಮ್ಮ ತನ್ನ ಇತರ ಕೆಲಸಗಳನ್ನೆಲಾ ಬಿಟ್ಟು ನನ್ನ ಪಕ್ಕದಲ್ಲಿ ಕೂರುತ್ತಿದ್ದಳು. ಅಮ್ಮ ತನಗೆ ಕಾಯಿಲೆ ಅಂತ ಹೇಳಿಕೊಂಡು ಯಾವತ್ತೂ ಮಲಗಿದ್ದೇ ಇಲ್ಲ.
ಸಹನಾಮಯಿ
ನಾನು ಚಿಕ್ಕವಳಾಗಿದ್ದಾಗ ನನ್ನ ಅಣ್ಣ ನರಹರಿ ಅನುಭವಿಸಿದ ಒಂದು ಘಟನೆ ನನ್ನಿಂದ ಮರೆಯಲು ಸಾಧ್ಯವೇ ಆಗಿಲ್ಲ. ಮೈಸೂರಿನ ಚಾಮುಂಡಿಪುರಂನಲ್ಲಿ ವಾಸವಾಗಿದ್ದ ಕಾಲ ಅದು. ನಾವಿದ್ದ ಬೀದಿಯಲ್ಲೇ ಭವಿಷ್ಯ ಹೇಳುವವನೊಬ್ಬನ ಮನೆಯೂ ಇತ್ತು. ಅವನ ಮಗ ಸುದರ್ಶನ, ನರಹರಿಯೂ ಒಂದೇ ಶಾಲೆಯ ಒಂದೇ ತರಗತಿಯಲ್ಲಿ ಓದುತ್ತಿದ್ದರು. ಸುದರ್ಶನ ಓದಿನಲ್ಲಿ ಹಿಂದಾದರೆ ತುಂಟಾಟದಲ್ಲಿ ಮುಂದು. ನರಹರಿಗೆ ಅಗ ಎಂಟು ವಯಸ್ಸಿರಬೇಕು. ನನಗೆ ಐದು ವಯಸ್ಸು. ನರಹರಿ ಮತ್ತು ಸುದರ್ಶನ ಇತರ ಹುಡುಗರೊಂದಿಗೆ ಆಡುತ್ತಿದ್ದಾಗ ಸುದರ್ಶನನಿಗೆ ಏಟು ಬಿದ್ದು ಅವನ ಹಣೆಯಲ್ಲಿ ತರಚು ಗಾಯವಾಯ್ತು. ಹಾಗಾಗಲು ನರಹರಿಯೇ ಕಾರಣ ಎಂದು ಅವನು ತನ್ನ ತಂದೆಯ ಬಳಿ ದೂರು ಹೇಳಿದ. ಮಕ್ಕಳಾಟದಲ್ಲಿ ಇವೆಲ್ಲಾ ಸಹಜ ಎಂದು ಭಾವಿಸದ ಆ ಕ್ರೂರಿ ಜ್ಯೋತಿಷದವನು ಅಮಾಯಕನಾದ ನರಹರಿಯ ಎರಡು ಕಾಲುಗಳನ್ನೆತ್ತಿ ಹಿಡಿದು ಅವನನ್ನು ತಲೆಕೆಳಗಾಗಿಸಿ ಗಿರಗಿರನೆ ಜೋರಾಗಿ ತಿರುಗಿಸುತ್ತಿದ್ದ. ಈ ದೃಶ್ಯವನ್ನು ಜನರೆಲ್ಲ ದಿಗ್ಭ್ರಮೆಯಿಂದ ನೋಡತೊಡಗಿದರು. ವಿಷಯ ತಿಳಿದ ನನ್ನ ಬಾಣಂತಿ ಅಮ್ಮ ಹಾಲು ಕುಡಿಯುತ್ತಿದ್ದ ನನ್ನ ಪುಟ್ಟ ತಮ್ಮನನ್ನು ಗಡಿಬಿಡಿಯಿಂದ ತೊಟ್ಟಿಲಿನಲ್ಲಿ ಮಲಗಿಸಿ ಓಡಿಕೊಂಡು ಅಲ್ಲಿಗೆ ಬಂದಳು. ಅವಳ ಹಿಂದೆ ನಾನೂ ಓಡಿ ಬಂದಿದ್ದೆ. ತನ್ನ ಮಗನಿಗಾಗುತ್ತಿದ್ದ ಹಿಂಸೆಯನ್ನು ನೋಡಿ ಅವಳ ಎದೆ ನಡುಗಿಹೋಗಿರಬೇಕು. ಜ್ಯೋತಿಷದವನ ಬಳಿ ದೈನ್ಯ ದನಿಯಲ್ಲಿ ತನ್ನ ಮಗನನ್ನು ಹಿಂಸಿಸದೆ ಬಿಟ್ಟುಬಿಡುವಂತೆ ಬೇಡಿಕೊಂಡಳು. ಆದರೆ ಆತನ ಕ್ರೌರ್ಯ ಅಡಗಲಿಲ್ಲ. ನನಗಂತೂ ಅಣ್ಣನನ್ನು ಆ ಕ್ರೂರಿ ಸಾಯಿಸಿಯೇ ಬಿಡುವವನಂತೆ ಕಂಡ. ಆತನ ಮುಖಲಕ್ಷಣ, ವೇಷ ಭೂಷಣವೂ ಹೆದರಿಕೆ ತರಿಸುವಂತೆಯೇ ಇತ್ತು. ಅಷ್ಟರಲ್ಲಿ ಯಾರೋ ಹಿರಿಯರೊಬ್ಬರು ನಡುವೆ ಪ್ರವೇಶಿಸಿ ಜ್ಯೋತಿಷಿಗೆ ಬುದ್ಧಿ ಹೇಳಿದರೇನೋ. ಆ ರಾಕ್ಷಸ ತನ್ನ ಆಟವನ್ನು ನಿಲ್ಲಿಸಿದಾಗ ನರಹರಿ ಸುಸ್ತಾಗಿ ಮಣ್ಣಿನ ನೆಲದಲ್ಲಿ ಬಿದ್ದ. ತಲೆ ತಿರುಗಿ, ಏಳಲೂ ಆಗದೆ ಬಿದ್ದಿದ್ದ ಅವನನ್ನು ಅಮ್ಮ ಮೆಲ್ಲನೆ ಎಬ್ಬಿಸಿಕೊಂಡು ಮನೆಗೆ ಕರೆತಂದಳು.
ಮುಂದೆ ನರಹರಿ ಬಿ.ಇ. ಪದವಿಯನ್ನು ಮೆರಿಟ್ನಲ್ಲಿ ಮುಗಿಸಿ ಭೋಪಾಲ್ನ ಭಾರತ್ ಹೆವಿ ಇಲೆಕ್ಟ್ರಿಕಲ್ಸ್ನಲ್ಲಿ ಕೆಲಸಕ್ಕೆ ಸೇರಿದ. ಮನೆಯ ಬಡತನವನೆಲ್ಲ ತೊಲಗಿಸಿ ಬಿಡುವುದಾಗಿ ಉತ್ಸಾಹದಿಂದ ಹೇಳಿ ಹೋದ. ಅಮ್ಮನಿಗೆ ತನ್ನ ಮೊದಲ ಸಂಬಳದಲ್ಲಿ ನೂರು ರೂಪಾಯಿ ಮನಿ ಆರ್ಡರ್ ಮಾಡಿದ. ರಕ್ತ ಕ್ಯಾನ್ಸರ್ ವ್ಯಾಧಿ ಅವನಿಗೆ ಹೇಗೆ ತಗುಲಿಕೊಂಡಿತೋ ಗೊತ್ತಿಲ್ಲ. ಎರಡು ವಾರಗಳ ಕಾಲ ಅಲ್ಲಿನ ಆಸ್ಪತ್ರೆಯಲ್ಲಿ ನರಳಿ ಇಹ ಲೋಕವನ್ನೇ ತ್ಯಜಿಸಿದ. ಸಾಯುವಾಗ ಅವನ ವಯಸ್ಸು ೨೨ ಮಾತ್ರ. ಅವನ ಅಂತ್ಯಕಾಲದಲ್ಲಿ ಭೋಪಾಲ್ಗೆ ಧಾವಿಸಿದ ನನ್ನ ತಂದೆ ಅವನೊಂದಿಗಿದ್ದರು. ಅವನ ಪಾರ್ಥಿವ ಶರೀರವನ್ನು ಮೈಸೂರಿಗೆ ತರುವುದು ಅಂದಿನ ಸ್ಥಿತಿಯಲ್ಲಿ ಕಷ್ಟಕರದ ವಿಷಯವಾಗಿತ್ತು. ಅಂಥಾ ಪರಮ ಶೋಕದಲ್ಲೂ ಮಗನ ಅಂತ್ಯಕ್ರಿಯೆಯನ್ನು ಅಲ್ಲಿಯೇ ಜರುಗಿಸಿ ಅಪ್ಪ ಊರಿಗೆ ಹಿಂತಿರುಗಿದ್ದೇ ಪರಮಾಶ್ಚರ್ಯ! ಅಮ್ಮನಿಗೆ ಅವನ ಕಡೇ ದರ್ಶನವೂ ಆಗಲಿಲ್ಲ. ಮಗನೊಂದಿಗೆ ಪದೇ ಪದೇ ಫೋನ್ನಲ್ಲಿ ಸಮಾಚಾರ ತಿಳಿಯಲು ಮಾತಾಡುವ ಭಾಗ್ಯವೂ ಈಗಿನ ಹಾಗೆ ಆಗ ಇರಲಿಲ್ಲ. ತನ್ನ ಮಗ ಟ್ರಂಕನ್ನು ಕೈಯಲ್ಲಿ ಹಿಡಿದು “ಅಮ್ಮಾ, ಭೋಪಾಲಿನಿಂದ ಇಲ್ಲಿಗೆ ಬಂದ್ಬಿಟ್ಟೆ” ಎಂದು ಯಾವಾಗಲಾದರೂ ಬಂದು ಬಿಡುತ್ತಾನೇನೋ ಎಂದು ಭ್ರಮಿಸುತ್ತಿದ್ದಳು. ಅಪ್ಪ ಮಾನಸಿಕ ರೋಗಿಯಂತಾದರು. ಅಮ್ಮ ಮಾತ್ರ ತನ್ನ ನೋವನ್ನು ನುಂಗುತ್ತಲೇ ನಮ್ಮೆಲ್ಲರನ್ನು ನೋಡಿಕೊಂಡು ಕಾಲ ತಳ್ಳುತ್ತಿದ್ದಳು.
ಮುಂದೆ ನನ್ನ ಓದಿಗೆ ಒಳ್ಳೆಯ ಉದ್ಯೋಗ ಎಲ್.ಐ.ಸಿ.ಯಲ್ಲಿ ಸಿಕ್ಕಿತು. ಅಕ್ಕ ಮದುವೆಯಾಗಿ ಹೊರಟುಹೋದ ಬಳಿಕ ಅಮ್ಮ ನನ್ನನ್ನೆ ಸಂಪೂರ್ಣವಾಗಿ ಅವಲಂಬಿಸಿದಳು. ನನ್ನ ಸಂಬಳದ ಹಣ ಅಮ್ಮನಿಗೆ ನೀಡುವಾಗ ಅವಳ ಮುಖದಲ್ಲಿ ನನ್ನ ಬಗ್ಗೆ ಎಂಥಾ ಅಭಿಮಾನ! ಅವಳು ಖರ್ಚಿನ ಪಟ್ಟಿ ಕೊಡುತ್ತಿದ್ದಳು – ಹಾಲಿನ ಬಾಬ್ತು ಇಷ್ಟು, ದಿನಸಿ ಅಂಗಡಿ ಬಾಬ್ತು ಇಷ್ಟು, ಬಟ್ಟೆ ಅಂಗಡಿ ಬಾಬ್ತು ಇಷ್ಟು, ಬಡ್ಡಿ ಪದ್ಮಮ್ಮಳಿಗೆ, ಬಡ್ಡಿ ಸೀತಾಲಕ್ಷ್ಮಮ್ಮಳಿಗೆ, ಎಂದು. ನಾನು ಎಲ್ಲಾ ಬಾಬತ್ತಿನ ಹಣವನ್ನು ಅವಳಿಗೆ ಕೊಟ್ಟರೆ ತನ್ನ ಕಣ್ಗಳಲ್ಲೇ ಮೌನವಾಗಿ ಕೃತಜ್ಞತೆ ಸಲ್ಲಿಸುತ್ತಿದ್ದಳು. ನನ್ನಲ್ಲಿ ಅವಳು ಅಳಿದುಹೋದ ನರಹರಿಯನ್ನು ಕಾಣುತ್ತಿದ್ದಳೇನೋ!
ಅಪ್ಪ ಹೆಚ್ಚು ಕಾಲ ಬದುಕಲಿಲ್ಲ. ಅವರ ಮರಣಾನಂತರ ಅಮ್ಮನಿಗೆ ಫ್ಯಾಮಿಲಿ ಪೆನ್ಷನ್ ದೊರೆಯಿತು. ಅವಳಿಗೆ ತನ್ನದೇ ಆದ ಬ್ಯಾಂಕ್ ಅಕೌಂಟ್ ಇತ್ತು. ಉಳಿತಾಯ ಖಾತೆಗೆ ಹಣ ತುಂಬಲು ಮತ್ತು ಅದರಿಂದ ಹಣ ತೆಗೆಯಲು ಕಲಿತಿದ್ದಳು. ಇಂಗ್ಲಿಷ್ನಲ್ಲಿ ಸಹಿ ಹಾಕುತ್ತಿದ್ದಳು. ಸಿಟಿ ಬಸ್ಸುಗಳಲ್ಲಿ ಒಬ್ಬಳೇ ಪಯಣಿಸಿ ಬ್ಯಾಂಕಿಗೆ ಹೋಗಿ ಬರುವಷ್ಟು ದಾಷ್ಟೀಕ ಗಳಿಸಿಕೊಂಡಿದ್ದಳು. ಒಮ್ಮೆ ರಾಜಾಜಿನಗರದಿಂದ ಜಯನಗರದ ಸ್ಟೇಟ್ ಬ್ಯಾಂಕ್ಗೆ ಎರಡು ಬಸ್ ಬದಲಾಯಿಸಿ ಹೋಗಿ ಎರಡು ತಿಂಗಳ ಪೆನ್ಷನ್ ಹಣ ಪಡೆದು ವಾಪಸ್ ಬರುವಾಗ ಯಾರೋ ಅವಳ ಪರ್ಸ್ ಎಗರಿಸಿಬಿಟ್ಟರು. ಪರ್ಸ್ನಲ್ಲಿದ್ದ ಹಣದ ಜೊತೆಗೆ ಮನೆಯ ಬೀಗದಕೈ ಕೂಡ ಹೋಯ್ತು. ಪಾಪ, ಅಮ್ಮನಿಗೆ ದೊಡ್ಡ ಆಘಾತ! ದುಃಖ ಪಟ್ಟುಕೊಂಡೇ ನರಸಿಂಹರಾಜ ಚೌಕದ ಬಳಿಯಿದ್ದ ನನ್ನ ಆಫೀಸಿಗೆ ಮಧ್ಯಾಹ್ನ ೩:೩೦ ಸಮಯದಲ್ಲಿ ಅವಳು ಬಂದಾಗ ನನಗೆ ತುಂಬಾ ಅಚ್ಚರಿಯಾಯ್ತು. ಪೆಚ್ಚುಮುಖ ಹೊತ್ತು ನೋವಿನಿಂದ ತಾನು ಪರ್ಸ್ ಕಳೆದುಕೊಂಡ ವಿಷಯ ಹೇಳಿದಾಗ ನಾನು ಅಮ್ಮನ ಮೇಲೆ ಸಿಟ್ಟಾಗಲಿಲ್ಲ. ತನ್ನ ಅಜಾಗ್ರತೆಗಾಗಿ ಮಗಳಿಂದ ಬೈಯಿಸಿಕೊಳ್ಳುವೆನೇನೋ ಎಂಬ ಭಯವಿತ್ತು ಅವಳಿಗೆ. “ಹೋಗಲಿ ಬಿಡು. ಬೇಜಾರು ಮಾಡಿಕೊಳ್ಳಬೇಡ. ಪರ್ಮಿಶನ್ ಹೇಳಿ ಬರುತ್ತೀನಿ. ಇಬ್ಬರೂ ಒಟ್ಟಿಗೆ ಮನೆಗೆ ಹೋಗೋಣ” ಎಂದಾಗ ಅವಳಿಗೆ ಸಮಾಧಾನವಾಯ್ತು. ಆ ಘಟನೆಯ ನಂತರ ಅಮ್ಮ ಒಬ್ಬಳೇ ಹೊರಗೆ ಓಡಾಡುವಾಗ ಬಹಳ ಜಾಗರೂಕಳಾದಳು.
ದೈವಭಕ್ತಿ
ಅಮ್ಮನಿಗೆ ದೇವರಲ್ಲಿ ಅಪಾರ ಭಕ್ತಿ. ದೇವರ ಕೋಣೆ ಎಂದು ಪ್ರತ್ಯೇಕವಾಗಿರದಿದ್ದರೂ ಅಡಿಗೆ ಕೋಣೆಯಲ್ಲೇ ಒಂದು ಕಡೆ ದೇವರನ್ನು ಪ್ರತಿಷ್ಠಾಪಿಸಿದ್ದಳು. ದೇವರ ಮಂದಾಸನ, ವಿವಿಧ ದೇವರುಗಳ ಚಿತ್ರಪಟಗಳು, ಲೋಹದ ದೇವರ ವಿಗ್ರಹಗಳನ್ನು ನೀಟಾಗಿ ಜೋಡಿಸಿದ್ದಳು. ಸ್ನಾನದ ನಂತರ ಅವಳ ಮೊದಲ ಕೆಲಸವೆಂದರೆ ಕುಡಿಯುವ ಕಾವೇರಿ ನೀರನ್ನು ಒಂದು ಬೀದಿಯಾಚೆಯಿದ್ದ ಗುರುತಿನವರ ಮನೆಯಿಂದ ತರುವುದು. ಮನೆಯಲ್ಲಿ ಜನ ಜಾಸ್ತಿ ಇದ್ದುದರಿಂದ ನಾಲ್ಕಾರು ಸಲ ಓಡಾಡಿ ಬಿಂದಿಗೆ, ದೊಡ್ಡ ಪಾತ್ರೆಗಳಲ್ಲಿ ನೀರನ್ನು ತರುತ್ತಿದ್ದಳು. ನಮ್ಮ ಮನೆಯಲ್ಲಿ ಉಪಯೋಗಿಸುತ್ತಿದ್ದುದು ಬಾವಿ ನೀರು. ಅದು ಮನೆಯವರ ಇತರ ಎಲ್ಲಾ ಕೆಲಸಗಳಿಗಾಗುತ್ತಿತ್ತು. ನೀರು ತರುವಾಗ ಆ ಮನೆಯ ಹೂಗಿಡಗಳಿಂದ ಸ್ವಲ್ಪ ಹೂಗಳನ್ನು ದೇವರ ಪೂಜೆಗೆಂದು ಕಿತ್ತು ತರುತ್ತಿದ್ದಳು. ದೇವರಿಗೆಂದು ಎಣ್ಣೆದೀಪ ಉರಿಸಲು ಅವಳು ಮಾಡುತ್ತಿದ್ದ ಹೂಬತ್ತಿಗಳು ಬಹಳ ಚಂದವಿರುತ್ತಿದ್ದವು. ಅವು ಸೊಡರಿನಲ್ಲಿ ಗಟ್ಟಿಯಾಗಿ ನಿಲ್ಲುತ್ತಿದ್ದವು. ದೇವರು ಕಾಪಾಡುವನೋ ಇಲ್ಲವೋ ಅದು ಬೇರೆ ಸಂಗತಿ. ಅಮ್ಮ ಮಾತ್ರ ದಿನವೂ ದೇವರಿಗೆ ದೀಪ ಹಚ್ಚಿಡುವುದನ್ನು ತಪ್ಪಿಸುತ್ತಿರಲಿಲ್ಲ. ಇದು ಅವಳ ಕಡೆಗಾಲದ ವರೆಗೂ ಮುಂದುವರಿದಿತ್ತು. ಅವಳು ಗತಿಸುವ ಎರಡು ವಾರಗಳ ಮುಂದೆ ತೀರಾ ನಿಶ್ಶಕ್ತಳಾದಾಗ ಆ ಕೆಲಸ ಬಿಟ್ಟಳು. `ಆ ದೇವರಿಗೆ ಎಷ್ಟೋ ವರ್ಷಗಳಿಂದ ಬೇಕಾದಷ್ಟು ಸಲ ದೀಪ ಹಚ್ಚಿದ್ದೀನಿ. ಈಗ ಹಚ್ಚದೇ ಇದ್ರೂ ಪರವಾಗಿಲ್ಲ ಬಿಡು’ ಎಂದು ತಾನೇ ಸಮಾಧಾನ ಮಾಡಿಕೊಳ್ಳುವವಳಂತೆ ನನ್ನೊಂದಿಗೆ ಮಾತಾಡಿದ್ದಳು.
ಬಚ್ಚಿಟ್ಟ ಬಯಕೆ
ಅವತ್ತೊಂದು ದಿನ ನಾನು ಆಫೀಸಿನಿಂದ ಮನೆಗೆ ಬಂದು ಅಮ್ಮ ಕೊಟ್ಟ ಕಾಫಿ ಕುಡಿಯುತ್ತಿದ್ದೆ. ರಾತ್ರಿಯಾದರೆ ಸಾಕು ಮನೆಯಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿತ್ತು. ಸೊಳ್ಳೆ ಬತ್ತಿ ಹಚ್ಚಿದರೆ ಅದರ ವಾಸನೆ ನನಗೆ ಆಗಿಬರುತ್ತಿರಲಿಲ್ಲ. ಮಂಚಕ್ಕೆ ಸೊಳ್ಳೆಪರದೆ ಕಟ್ಟಿದರೆ ವಾಸಿ ಎಂದುಕೊಂಡು ಹಾಗೆಯೇ ಅಮ್ಮನಿಗೆ ಹೇಳಿದೆ. ರೂಮಿನ ಬಡುವಿನ ಮೇಲಿದ್ದ ಟ್ರಂಕಿನಲ್ಲಿ ಹಳೆಯ ಸೊಳ್ಳೆಪರದೆಯೇನೋ ಇತ್ತು. ನಿಧಾನವಾಗಿ ತೆಗೆದರಾಯ್ತು ಎಂದುಕೊಳ್ಳುತ್ತಿರುವಾಗ ರೂಮಿನಿಂದ ಧಡಾರ್ ಎಂದು ಬಿದ್ದ ಸದ್ದು! ನನಗೆ ಗಾಬರಿಯಾಯ್ತು. ಕುಡಿಯುತ್ತಿದ್ದ ಕಾಫಿ ಲೋಟ ಹಿಡಿದುಕೊಂಡೇ ಅಲ್ಲಿಗೆ ಓಡಿದೆ. ಗೋದ್ರೇಜ್ ಕುರ್ಚಿ ಹತ್ತಿ ಬಡುವಿನಲ್ಲಿದ್ದ ಸೊಳ್ಳೆಪರದೆ ತೆಗೆಯಲು ಹೋದಾಗ ಮೊಸಾಯಿಕ್ ನೆಲವಾದ್ದರಿಂದ ಕುರ್ಚಿ ಜಾರಿ ಆಯತಪ್ಪಿ ಅಮ್ಮ ಕೆಳಗೆ ಬಿದ್ದಿದ್ದಳು. ಬಿದ್ದ ರಭಸಕ್ಕೆ ಗೋಡೆಗೆ ಅವಳ ಹಣೆಯ ಪಾರ್ಶ್ವಕ್ಕೆ ಬಲವಾದ ಏಟು ತಗುಲಿ ಅಲ್ಲಿ ರಕ್ತ ಹೆಪ್ಪು ಗಟ್ಟಿತ್ತಲ್ಲದೆ ಸ್ವಲ್ಪ ಊತವೂ ಇತ್ತು. ಮೆಲ್ಲನೆ ಅವಳನ್ನು ಎಬ್ಬಿಸಿದೆ. “ಹೀಗೇಕೆ ಅವಸರ ಮಾಡಿದೆಯಮ್ಮ? ಸೊಳ್ಳೆಪರದೆಯನ್ನು ನಾನೇ ತೆಗೆದುಕೊಳುತ್ತಿದ್ದೆನಲ್ಲ. ವಯಸ್ಸಾದ ಕಾಲದಲ್ಲಿ ಈ ಕೆಲಸವೆಲ್ಲ ನಿನಗೇಕೆ” ಎಂದು ಮೆದುವಾಗಿಯೇ ಆಕ್ಷೇಪಿಸಿದೆ. ಪಾಪ, ಅವಳಿಂದ ಉತ್ತರ ಬರಲಿಲ್ಲ. ಮಗಳು ರಾತ್ರಿಯ ಹೊತ್ತು ಸೊಳ್ಳೆಯ ಕಾಟವಿಲ್ಲದೆ ನೆಮ್ಮದಿಯಾಗಿ ನಿದ್ರೆ ಮಾಡಲಿ ಎನ್ನುವ ಅವಳ ಹಂಬಲ ತನ್ನ ಎಡ ಭಾಗದ ಕಿವಿಯ ಶ್ರವಣಶಕ್ತಿಯನ್ನು ಕಳೆದುಕೊಳ್ಳುವಂತೆ ಮಾಡಿತು. ಎಡದ ಕಿವಿಯಲ್ಲಿ ಶಿಳ್ಳೆ ಶಬ್ದದಂತೆ ಕೇಳುತ್ತೆ ಎನ್ನತೊಡಗಿದಳು.
ಮರುದಿನ ಅವಳನ್ನು ಕಿವಿ ಡಾಕ್ಟರರ ಬಳಿಗೆ ಕರೆದೊಯ್ದು ಪರೀಕ್ಷೆ ಮಾಡಿಸಿದಾಗ ಎಡ ಕಿವಿಯಿಂದ ಮೆದುಳಿಗೆ ಹೋಗುವ ನರಕ್ಕೆ ಜಖಂ ಆಗಿದೆ ಎನ್ನುವುದು ಗೊತ್ತಾಯ್ತು. ಅದಕ್ಕೆ ಶಕ್ತಿ ನೀಡಲು ಮಾತ್ರೆಗಳನ್ನು ಬರೆದುಕೊಟ್ಟರು. ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೂ ಅಮ್ಮನಿಗೆ ಪ್ರಯೋಜನವಾಗಲಿಲ್ಲ. ಮತ್ತೊಬ್ಬ ಕಿವಿ ತಜ್ಞರ ಬಳಿ ಅಮ್ಮನ ಕಿವಿಸಮಸ್ಯೆ ಬಗ್ಗೆ ಮಾತಾಡಿದೆ. “ಆಪರೇಷನ್ ಆದರೆ ಒಂದು ವೇಳೆ ಕಿವಿ ಕೇಳ ಬಹುದು” ಎಂದರು. ತನ್ನ ಎಪ್ಪತ್ತರ ವಯಸ್ಸಿನಲ್ಲಿ ಆಪರೇಷನ್ ಬೇಡ. ಒಂದು ಕಿವಿಯಾದರೂ ಕೇಳುತ್ತದಲ್ಲ ಎಂದು ಅಮ್ಮ ತನ್ನನ್ನು ತಾನೇ ಸಂತೈಸಿಕೊಂಡಳು. ಹಾಗೆಂದು ಸುಮ್ಮನೆ ಬಿಡಲು ನನಗೆ ಮನಸ್ಸಾಗಲಿಲ್ಲ. ಅಮ್ಮನಿಗೆ ತುಂಬಾ ಬೇಜಾರು. ಹಿಯರಿಂಗ್ ಏಡ್ ಹಾಕಿಸಿದರೆ ಹೇಗೆ ಎಂಬ ಆಲೋಚನೆ ಬಂತು. ಅದರ ಬಗ್ಗೆ ಡಾಕ್ಟರನ್ನು ಕೇಳಿದ್ದಕ್ಕೆ ಅವರು ಅದರಿಂದೇನೂ ಸಹಾಯವಾಗಲಾರದು ಎಂದುಬಿಟ್ಟರು. ಆದರೂ ಪರೀಕ್ಷೆ ಮಾಡಿಸೋಣ ಎಂದುಕೊಂಡೆ. ಆದರೆ ಬದುಕಿನ ಏನೇನೋ ಜಂಜಾಟಗಳಲ್ಲಿ ಅದು ನೆರವೇರಲೇ ಇಲ್ಲ. ಅಮ್ಮ ಗತಿಸಿದ ಬಳಿಕ ಅವಳ ಬಳಿ ಇದ್ದ ಚಿಕ್ಕ ನೋಟ್ ಪುಸ್ತಕದಲ್ಲಿ ಹಿಯರಿಂಗ್ ಏಡ್ ಬಗ್ಗೆ ಪತ್ರಿಕೆಗಳಲ್ಲಿ ಕೆಲವು ಸಂಸ್ಥೆಗಳು ಕೊಟ್ಟ ಜಾಹೀರಾತುಗಳು, ಅವುಗಳ ವಿಳಾಸಗಳನ್ನು ಅವಳು ಬರೆದಿಟ್ಟಿದ್ದದ್ದು ನೋಡಿ ನನ್ನ ಮನಸ್ಸಿಗೆ ನೋವಾಯಿತು. ನನಗೇಕೆ ತೊಂದರೆಕೊಡಬೇಕೆಂದು ತನ್ನ ಬಯಕೆಯನ್ನು ಬಚ್ಚಿಟ್ಟುಕೊಂಡ ಅಮ್ಮ ಅದೆಂಥಾ ತ್ಯಾಗಮಯಿ!
ನೋವ ನುಂಗಿ ನಗೆಯನೀವ ತಾಯಂದಿರಲ್ಲಿ ನನ್ನ ಅಮ್ಮನೂ ಒಬ್ಬಳಾಗಿದ್ದಳು. ಬಂಗಾರದಂಥ ಮಗ ನರಹರಿ ಸತ್ತಿದ್ದು, ಇಳಿಗಾಲದಲ್ಲಿ ಅಮ್ಮನನ್ನು ಅದೆಷ್ಟು ಬಾಧಿಸಿರಬಹುದೆಂದು ನಾನು ಊಹಿಸಬಲ್ಲೆ. ಹೆತ್ತವರ ಕಣ್ಮುಂದೆ ಬೆಳೆದ ಮಕ್ಕಳು ಸಾಯುವುದಿದೆಯಲ್ಲ ಅದಕ್ಕಿಂತ ಘೋರ ಶಿಕ್ಷೆ ಬೇರೊಂದಿಲ್ಲ. ದೇವರನಾಮ, ಕೀರ್ತನೆಗಳನ್ನು ಹಾಡಿಕೊಂಡು ತನ್ನ ಕಡುಶೋಕವನ್ನು ಮರೆಯುತ್ತಿದ್ದಳೇನೊ ಎಂದು ನನಗೆ ತೋರುತ್ತದೆ. ಬಂದದ್ದನ್ನು ಅನುಭವಿಸಿಯೇ ಬಿಡುತ್ತೇನೆಂಬ ಅಮ್ಮನ ಮನೋಬಲ ಅಪಾರವಾದದ್ದು. ಅವಳ ಅಂತ್ಯ ಕೂಡಾ ಆಶ್ಚರ್ಯಕರ! ರಾತ್ರಿ ಮಲಗಿದವಳು ಬೆಳಿಗ್ಗೆ ಏಳುವಷ್ಟರಲ್ಲಿ ದೈವಾಧೀನಳಾಗಿದ್ದಳು. ಇಂಥಾ ಅನಾಯಾಸ ಮರಣದ ಭಾಗ್ಯ ಪಡೆದ ಅಮ್ಮ ಈ ಜನ್ಮದಲ್ಲಿ ಎಷ್ಟೊಂದು ಪುಣ್ಯ ಸಂಪಾದಿಸಿರಬಹುದು!
ಅಮ್ಮ ಪೂಜಿಸಿದ ದೇವರುಗಳ ಮುಂದೆ ನಾನು ನಿಂತಾಗ ಅವರುಗಳು ಯಾರೂ ಕಾಣುವುದೇ ಇಲ್ಲ. ನನ್ನ ಸಂಕಟ ಸಮಯದಲ್ಲಿ ಯಾವ ದೇವರನ್ನು ಕರೆಯಲಿ – ಶಿವನನ್ನೇ, ಗಣೇಶನನ್ನೇ, ಸುಬ್ರಹ್ಮಣ್ಯನನ್ನೇ, ವಿಷ್ಣುವನ್ನೇ, ರಾಮನನ್ನೇ, ಕೃಷ್ಣನನ್ನೇ, ಶಾರದೆಯನ್ನೇ, ಪಾರ್ವತಿಯನ್ನೇ…? ಉಹೂಂ, ಆಗೆಲ್ಲ ನನ್ನ ಅಮ್ಮನೇ ಕಣ್ಮುಂದೆ ಬರುತ್ತಾಳೆ. ಬದುಕಿದ್ದಾಗ ಅವಳು ನನ್ನ ಕಣ್ಣಮುಂದಿನ ಮಾತಾಡುವ ದೈವವಾಗಿದ್ದಳು. ಈಗ ಅವಳು ಕಾಣದಿರುವಾಗಲೂ ನನ್ನ ಮನಸ್ಸಿನಲ್ಲಿ ಇದ್ದಾಳೆ; ನನ್ನ ಮೌನದಲ್ಲೂ ಇದ್ದಾಳೆ.
ಜೀವನದಲ್ಲಿ ಎಷ್ಟು ಹಣ ಬೇಕಾದರೂ ಸಂಪಾದನೆ ಮಾಡಬಹುದು, ಆದರೆ ಅಮ್ಮನನ್ನು ಕಳೆದುಕೊಂಡರೇ ಜೀವನವೇ ವ್ಯರ್ಥವಾಗುತ್ತದೆ. ನಾವು ಏನೇ ಸಾಧನೆಯನ್ನು ಮಾಡಬೇಕಾಗಿದ್ದರೂ ಅಮ್ಮ ಇರುವಾಗಲೇ ಮಾಡಬೇಕು. ಆ ನಂತರ ಮಾಡಿದ ಸಾಧನೆ ಅಷ್ಟು ಪರಿಣಾಮಕಾರಿ ಅನಿಸುವುದಿಲ್ಲ. ಏಕೆಂದರೆ, ಮಕ್ಕಳು ಏನೇ ಸಾಧನೆ ಮಾಡಿದರೂ ಮೊದಲು ಖುಷಿ ಪಡುವವಳು ತಾಯಿಯೇ ಹೊರತು ಮತ್ಯಾರು ಅಲ್ಲ. ಅಮ್ಮನ ಬಗ್ಗೆ ಹೇಳುತ್ತಾ ಹೋದರೆ ಸಾಕಷ್ಟು ವಿಚಾರಗಳು ನೆನಪಿಗೆ ಬರುತ್ತವೆ. ಅದರಲ್ಲಿ ಒಂದು ಸಣ್ಣ ಘಟನೆ:- ಅಮ್ಮನನ್ನು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದಾಗಲೂ ಕೂಡ ಮನೆ ಕೆಲಸದ ಜವಾಬ್ದಾರಿಯ ಬಗ್ಗೆ ಚಿಂತಿಸುತ್ತಿದ್ದಳೆ ಹೊರತು ತನ್ನ ಆರೋಗ್ಯದ ಬಗ್ಗೆ ಕಿಂಚತ್ತು ಗಮನಹರಿಸಿರಲಿಲ್ಲ. ನಾನು ಕೂಡ ಅಮ್ಮನ ಬಗ್ಗೆ ಕಾಳಜಿವಹಿಸಿ ಆರೈಕೆ ಮಾಡಿದ್ದೇನೆ. ಆದರೆ ಈಗ ಅದು ಕಡಿಮೆ ಅನಿಸುತ್ತಿದೆ. ಕೆಲಸದ ಒತ್ತಡದಲ್ಲಿ ಸ್ವಲ್ಪ ಕಾಳಜಿ ವಹಿಸಲು ಸಾಧ್ಯವಾಗಲಿಲ್ಲವೆಂಬ ವಿಚಾರ ಈಗ ನೆನಪಿಗೆ ಬಂದು ಪದೇ ಪದೇ ಕಾಡುತ್ತದೆ. ಉದ್ದೇಶಪೂರ್ವಕವಾಗಿ ನಾನು ಕೇರ್ಲೆಸ್ ಮಾಡಿಲ್ಲ. ಆದರೂ ನಾನು ಮಾಡಿದ್ದು ದೊಡ್ಡ ತಪ್ಪು. ಯಾಕೆಂದರೆ ಅಮ್ಮ ನೀಡಿದ ಉಸಿರು,ದೇಹ ಪ್ರಾಣ. ಅಮ್ಮನ ಸೇವೆ ಮಾಡುವುದು ನನ್ನ ಕರ್ತವ್ಯ. ಆ ಸಮಯದಲ್ಲಿ ಅದನ್ನು ಮರೆತುಬಿಟ್ಟಿದ್ದೆನಾ ಎಂದು ನೋವಾಗುತ್ತಿದೆ. ಆ ದೇವರಲ್ಲಿ ನನ್ನ ಪ್ರಾರ್ಥನೆ. ಅಮ್ಮನನ್ನು ಕಳೆದುಕೊಳ್ಳದೇ ಇರುವವರಿಗೆ ಅಮ್ಮನ ಬಗ್ಗೆ ತುಂಬಾ ಕಾಳಜಿ ವಹಿಸುವ ಶಕ್ತಿಯನ್ನು ನೀಡು ಎಂದು. ಜೀವನ ಮುಗಿದರೂ ನಮ್ಮ ಜೀವನಕ್ಕಾಗಿ ಚಿಂತಿಸಿದ ಅಮ್ಮನ ನೆನಪಿನಲ್ಲಿ ಬಾಳುತ್ತಿರುವ ವಿಶ್ವ