ದೇಶದಲ್ಲಿ ಆಗ ತುರ್ತುಸ್ಥಿತಿಯ ಸಮಯ. ಅದು ಜಾರಿಯಾಗಿ ಆರೆಂಟು ತಿಂಗಳು ಕಳಿದಿತ್ತೇನೋ. ಆ ಸಮಯದಲ್ಲಿ ಉಡುಪಿಯ ಪೂಜ್ಯ ಶ್ರೀ ಪೇಜಾವರ ಮಠಾಧೀಶರು ಹಲವೆಡೆ ಉಪನ್ಯಾಸಗಳಲ್ಲಿ ಜನಸಾಮಾನ್ಯರನ್ನು ಎಚ್ಚರಿಸಲು ಪ್ರಯತ್ನಿಸಿದರು. ಅದಕ್ಕಾಗಿ ಸ್ವಾರಸ್ಯಕರ ಪ್ರಸಂಗಗಳನ್ನು ಹಾಸ್ಯದ ರಂಗು ಬೆರೆಸಿ ಹೇಳುತ್ತಿದ್ದರು. ಆ ಪೈಕಿ ಇದೊಂದು:
ಒಮ್ಮೆ ಅವರು ಒಂದು ಸಭೆಯಲ್ಲಿ ಉಪನ್ಯಾಸ ನೀಡುತ್ತಿದ್ದಾಗ, ಯಾರೋ ಆಗಂತುಕರೊಬ್ಬರು ಸಭೆಯ ಮಧ್ಯೆ ಪ್ರವೇಶಿಸಿ, ನೆರೆದಿದ್ದವರಿಗೆಲ್ಲ ಮಿಠಾಯಿ ಹಂಚಲಾರಂಭಿಸಿದರಂತೆ. ಮಿಠಾಯಿ ತಿಂದು ಮುಗಿಸಿದ ನಂತರ ಸಭಿಕರಲ್ಲೊಬ್ಬರು, “ಹಂಚಲು ಈಗೇನು ಅಂಥ ವಿಶೇಷ?” ಎಂದರಂತೆ.
ಆಗ ಆ ವ್ಯಕ್ತಿ “ಅಂಥಹ ಮಹಾ ವಿಶೇಷವೇನಿಲ್ಲ, ಇಂದು ಬೆಳಗ್ಗೆ ನನ್ನ ಕುದುರೆ ಕಳೆದುಹೋಯಿತು, ಅದಕ್ಕೆ” ಎಂದರು ನಸುನಗುತ್ತಾ. ಕುಳಿತವರೆಲ್ಲ ಗೊಳ್ಳನೆ ನಕ್ಕು “ಎಂಥಾ ವಿಚಿತ್ರವಿದು? ಕುದುರೆ ಕಳೆದುಹೋದರೆ ಯಾರಾದರೂ ಮಿಠಾಯಿ ಹಂಚುತ್ತಾರೆಯೇ?” ಎಂದು ಪ್ರಶ್ನಿಸಿದರು. ಆ ಆಗಂತುಕರು ಮುಗುಳ್ನಕ್ಕು ಶಾಂತವಾಗಿ ಉತ್ತರಿಸಿದರಂತೆ: “ದೈವಯೋಗದಿಂದ ನಾನು ಕುದುರೆಯ ಮೇಲೆ ಕುಳಿತಿರಲಿಲ್ಲ. ಇಲ್ಲದಿದ್ದರೆ ಖಂಡಿತವಾಗಿ ನಾನು ಕಳುವಾಗಿ ಹೋಗುತ್ತಿದ್ದೆ!”
* * *
ಎರಡನೆ ಮಹಾಯುದ್ಧದ ವೇಳೆಯಲ್ಲಿ ಒಂದು ದಿನ ಥಿಯೋಡೋರ್ ರೂಸ್ವೆಲ್ಟ್ ವಿಮಾನವೊಂದನ್ನು ಹತ್ತಲು ನಿಲ್ದಾಣದಲ್ಲಿ ಕಾಯುತ್ತಿದ್ದರು. ಆ ಸಮಯದಲ್ಲೇ ಒಬ್ಬ ನಾವಿಕ ತರುಣ ಹಠಾತ್ತನೆ ಟಿಕೆಟು ಮಾರುವ ಸ್ಥಳಕ್ಕೆ ಧಾವಿಸಿ ಹೋಗಿ, “ದಯವಿಟ್ಟು ನನಗೆ ವಿಮಾನದಲ್ಲಿ ಒಂದು ಜಾಗವನ್ನು ಕಲ್ಪಿಸಿಕೊಡಿ, ನಾನು ನನ್ನ ತಾಯಿಯನ್ನು ಅಗತ್ಯವಾಗಿ ಕಾಣಬೇಕಾಗಿದೆ. ಆಕೆಯ ಆರೋಗ್ಯ ತೀರಾ ಕೆಟ್ಟಿದೆಯೆಂದು ನನಗೆ ಈಗಷ್ಟೆ ತಂತಿ ಬಂದಿದೆ” ಎಂದ.
ಆ ತರುಣನ ಬೇಡಿಕೆ ಈಡೇರಲಿಲ್ಲ.
ಈ ದೃಶ್ಯ ನೋಡುತ್ತಿದ್ದ ರೂಸ್ವೆಲ್ಟ್ ಕೋಟಿನ ಜೇಬಿನಲ್ಲಿದ್ದ ತಮ್ಮ ಟಿಕೆಟನ್ನು ಹೊರತೆಗೆದು “ದಯವಿಟ್ಟು ಈ ಟಿಕೆಟನ್ನು ಈ ತರುಣನ ಹೆಸರಿಗೆ ಬದಲಾಯಿಸಿ ಬಿಡಿ” ಎಂದರು. ಆಗ, ಟಿಕೆಟು ನೀಡುವವನು, “ತಾವು ಜನರಲ್ ಆದವರು, ಅಗತ್ಯವಾಗಿ ತುರ್ತಾಗಿ ವಿಮಾನದಲ್ಲಿ ಪ್ರಯಾಣ ಮಾಡಬೇಕಾದವರು. ತಾವೇಕೆ ತಮ್ಮ ಟಿಕೆಟನ್ನು ಆ ತರುಣನಿಗೆ ಕೊಡುವಂತೆ ಹೇಳುತ್ತಿದ್ದೀರೆಂದು ನಾನು ಕೇಳಬಹುದೇ?” ಎಂದ.
ರೂಸ್ವೆಲ್ಟ್ ಹೇಳಿದರು. “ಹೌದು. ತಾವು ಹೇಳಿದ್ದು ನಿಜವೇ, ನಾನೂ ತುರ್ತಾಗಿ ಪ್ರಯಾಣ ಮಾಡಬೇಕಾಗಿದೆ. ಆದರೆ ನಾನೊಬ್ಬ “ಜನರಲ್” ಆತನೋ ಒಬ್ಬ ತಾಯಿಯ ಪ್ರೀತಿಯ ಮಗ.”
* * *
ತಿರುವಾಂಕೂರಿನ ಮಹಾರಾಜರು ಒಮ್ಮೆ ತಮ್ಮ ಸಂಸ್ಥಾನದಲ್ಲಿ ಸಾಕಷ್ಟು ಪ್ರಸಿದ್ಧಿ ಹೊಂದಿದ್ದ ಶಾಲೆಯೊಂದಕ್ಕೆ ಅನಿರೀಕ್ಷಿತ ಭೇಟಿ ಕೊಟ್ಟರು. ಆಗ, ಮುಖ್ಯೋಪಾಧ್ಯಾಯರು ಯಾವುದೋ ತರಗತಿಯಲ್ಲಿ ಪಾಠ ಮಾಡುತ್ತಿದ್ದರು. ಅವರಿಗೂ ಕರೆ ಹೋಯಿತು. ಆದರೆ ಮುಖ್ಯೋಪಾಧ್ಯಾಯರು ತರಗತಿ ಬಿಟ್ಟು ಬರಲೇ ಇಲ್ಲ. ಆ ಹೊತ್ತಿಗೆ ಇತರ ಕೆಲ ಉಪಾಧ್ಯಾಯರು ರಾಜರನ್ನೂ ಇತರ ಅಧಿಕಾರಿಗಳನ್ನೂ ಎದುರುಗೊಂಡು ಮುಖ್ಯೋಪಾಧ್ಯಾಯರ ಕೋಣೆಯಲ್ಲಿ ಕೂಡಿಸಿದ್ದರು.
ರಾಜರ ಮುಖ ಮಹಾಕೋಪದಿಂದ ಧುಮುಗುಡುತ್ತಿದ್ದುದನ್ನು ಕಂಡು ತಮ್ಮ ಗತಿ ಏನಾಗುವುದೋ ಎಂದು ಎಲ್ಲರೂ ಹೆದರಿ ಕಂಗಾಲಾಗಿದ್ದರು.
ಅಂತೂ, ಪಾಠದ ಅವಧಿ ಮುಗಿಯಿತು. ಮುಖ್ಯೋಪಾಧ್ಯಾಯರು ನೇರ ತಮ್ಮ ಕೋಣೆಗೆ ಬಂದು ರಾಜನಿಗೆ ನಮಿಸಿ ಹೇಳಿದರು: “ನೀವು ನಮ್ಮನ್ನಾಳುವ ರಾಜರೆಂದು ನನಗೆ ತಿಳಿದಿದೆ. ಹಾಗಿದ್ದೂ ನನ್ನ ಈ ನಡತೆಯಿಂದ ತಮಗೆ ಬಹಳ ಕೋಪ ಬಂದಿರಲಿಕ್ಕೂ ಸಾಕು. ಆದರೆ ಗುರುವಿನ ವಿಷಯವಾಗಿ ನನ್ನ ಮನಸ್ಸಿನಲ್ಲಿ ಕೆಲವು ಕಲ್ಪನೆಗಳಿವೆ. ಗುರುವು ಪಾಠ ಹೇಳಿಕೊಡುವಾಗ, ವಿದ್ಯಾರ್ಥಿಗಳ ಮನಸ್ಸಿನಲ್ಲಿ ಗುರುವಿಗಿಂತ ಹೆಚ್ಚಿನವರಾರೂ ಇಲ್ಲ ರಾಜರೂ ಸೇರಿ ಎಂಬ ಭಾವನೆಯನ್ನು ಬೇರೂರಬೇಕೆಂಬುದೇ ನನ್ನ ಮುಖ್ಯವಾದ ಇಚ್ಛೆ. ಒಂದು ವೇಳೆ ತಾವು ಇಲ್ಲಿ ಆಗಮಿಸಿದೊಡನೆ, ನಾನು ಮಧ್ಯದಲ್ಲಿ ತರಗತಿಯನ್ನು ಬಿಟ್ಟು ತಮ್ಮನ್ನು ಆಹ್ವಾನಿಸಲು ಬಂದಿದ್ದರೆ ನಾನು ವಿದ್ಯಾರ್ಥಿಗಳ ಕಣ್ಣಿನಲ್ಲಿ ತೀರಾ ಅಲ್ಪನಾಗುತ್ತಿದ್ದೆ. ತರಗತಿ ಈಗ ಮುಗಿಯಿತು. ನಾನು ಈಗ ನಿಮ್ಮ ಪ್ರಜೆ. ದಯವಿಟ್ಟು ನನ್ನ ಆಹ್ವಾನವನ್ನು ಈಗ…”
ದೊರೆ ಅವರಿಗೆ ಮುಂದೆ ಮಾತನಾಡಲು ಬಿಡದೆ ಹೇಳಿದರು: “ಶಹಭಾಸ್! ಭಾರತ ದೇಶ ಧನ್ಯವಾಯಿತು. ಎಲ್ಲಿಯವರೆಗೆ ಈ ದೇಶದಲ್ಲಿ ನಿಮ್ಮಂಥ ಗುರುಗಳಿರುವರೋ ಅಲ್ಲಿಯವರೆಗೆ ಈ ಪುಣ್ಯಭೂಮಿಗೆ ಉಜ್ಜ್ವಲ ಭವಿತವ್ಯವಿದೆ. ನಿಮ್ಮ ಬಗ್ಗೆ ನನಗೆ ಸ್ವಲ್ಪವೂ ಕೋಪವಿಲ್ಲ, ಬದಲಾಗಿ ಅಭಿಮಾನ ಉಕ್ಕೇರುತ್ತದೆ. ನೀವು ಗುರುವಾಗಿರುವುದು ಸಣ್ಣ ಮಕ್ಕಳಿಗೆ ಮಾತ್ರವಲ್ಲ, ನನಗೂ ಸಹಾ.”