ಓರ್ವ ವ್ಯಕ್ತಿ ಭಗವಾನ್ ಬುದ್ಧರ ಬಳಿಗೆ ಬಂದು “ಜೀವನಕ್ಕಿರುವ ಬೆಲೆ ಏನು?” – ಎಂದು ಕೇಳಿದ. ಬುದ್ಧ ಅವನಿಗೊಂದು ಕಲ್ಲಿನ ತುಂಡನ್ನು ಕೊಟ್ಟು ಹೇಳಿದರು, “ಹೋಗು, ಹೋಗಿ ಈ ಕಲ್ಲಿನ ಬೆಲೆಯನ್ನು ತಿಳಿದು ಬಾ. ಆದರೆ ಈ ಕಲ್ಲನ್ನು ಮಾರಬೇಡ.”
ಆ ವ್ಯಕ್ತಿ ಕಲ್ಲನ್ನು ಪೇಟೆಗೆ ಒಯ್ದು, ಒಬ್ಬ ಹಣ್ಣಿನ ವ್ಯಾಪಾರಿಯ ಬಳಿಗೆ ಹೋಗಿ ಕೇಳಿದ, “ಇದರ ಬೆಲೆ ಎಷ್ಟು?”
ಹಣ್ಣು ಮಾರುವವನು ಆ ಹೊಳೆಯುವ ಕಲ್ಲನ್ನು ನೋಡಿ “ಇದಕ್ಕೆ ಬದಲಾಗಿ ಹನ್ನೆರಡು ಮೋಸುಂಬಿ ಹಣ್ಣುಗಳನ್ನು ತೆಗೆದುಕೊಂಡು ಹೋಗು” – ಎಂದ.
ನಂತರ ಆ ವ್ಯಕ್ತಿ ಆ ಕಲ್ಲಿನೊಂದಿಗೆ ಒಬ್ಬ ತರಕಾರಿ ಮಾರುವವನ ಬಳಿಗೆ ಹೋಗಿ “ಇದರ ಬೆಲೆ ಎಷ್ಟು?” – ಎಂದು ಕೇಳಿದ.
ತರಕಾರಿ ಮಾರುವವನು ಆ ಹೊಳೆಯುವ ಕಲ್ಲನ್ನು ನೋಡಿ “ಇದಕ್ಕೆ ಬದಲಾಗಿ ಒಂದು ಚೀಲ ಆಲೂಗಡ್ಡೆಗಳನ್ನು ತೆಗೆದುಕೊಂಡು ಹೋಗು” – ಎಂದ.
ಆ ವ್ಯಕ್ತಿ ಬಂಗಾರದ ಆಭರಣದ ಅಂಗಡಿಗೆ ಹೋಗಿ ಅದರ ಮಾಲೀಕನಲ್ಲಿ “ಇದರ ಬೆಲೆ ಎಷ್ಟು?” ಎಂದು ಕೇಳಿದ.
ಬಂಗಾರದ ಅಂಗಡಿಯ ಮಾಲೀಕ ಆ ಹೊಳೆಯುವ ಕಲ್ಲನ್ನು ನೋಡಿ “ಇದನ್ನು ನನಗೆ ಐವತ್ತು ಲಕ್ಷಕ್ಕೆ ಮಾರಿಬಿಡು” – ಎಂದ. ಆ ವ್ಯಕ್ತಿ ಒಪ್ಪದಿದ್ದಾಗ ಮಾಲೀಕ ಹೇಳಿದ, “ಎರಡು ಕೋಟಿ ರೂಪಾಯಿಗೆ ಇದನ್ನು ಕೊಡು ಅಥವಾ ನೀನು ಹೇಳಿದಷ್ಟು ಹಣವನ್ನು ಕೊಡುತ್ತೇನೆ, ಇದನ್ನು ನನಗೆ ಮಾರಿಬಿಡು.” ಆಗ ಆ ವ್ಯಕ್ತಿ ಮಾಲೀಕನಿಗೆ ಹೇಳಿದ, “ನನ್ನ ಗುರುಗಳು ಈ ಕಲ್ಲನ್ನು ಮಾರಬೇಡವೆಂದು ಹೇಳಿದ್ದಾರೆ.”
ನಂತರ ಆ ವ್ಯಕ್ತಿ ವಜ್ರದ ವ್ಯಾಪಾರಿಯ ಬಳಿಗೆ ಹೋಗಿ ಕೇಳಿದ, “ಇದರ ಬೆಲೆ ಎಷ್ಟು?”
ವಜ್ರದ ವ್ಯಾಪಾರಿ ಆ ಅತ್ಯಮೂಲ್ಯ ಕಲ್ಲನ್ನು ನೋಡಿದ ಕೂಡಲೇ ಮೊದಲು ಅದರ ಮೇಲೆ ಒಂದು ಕೆಂಪು ಬಟ್ಟೆಯನ್ನು ಹಾಕಿ, ಅದಕ್ಕೆ ಪ್ರದಕ್ಷಿಣೆ ಹಾಕಿದ, ನಂತರ ಆ ಕಲ್ಲಿಗೆ ನಮಸ್ಕರಿಸಿ ಹೇಳಿದ, “ನೀನು ಈ ಅತ್ಯಮೂಲ್ಯ ಕಲ್ಲನ್ನು ಎಲ್ಲಿಂದ ತಂದೆ? ಇಡೀ ಜಗತ್ತನ್ನೇ ಮಾರಿದರೂ ಇದಕ್ಕೆ ಬೆಲೆಯನ್ನು ಕಟ್ಟಲಾಗದು.”
ಕಡೆಗೆ ಆ ವ್ಯಕ್ತಿ ಅತ್ಯಂತ ವ್ಯಗ್ರನಾಗಿ, ನೇರವಾಗಿ ಬುದ್ಧನ ಬಳಿಗೆ ಬಂದು ಎಲ್ಲವನ್ನೂ ತಿಳಿಸಿದ. “ಮಹಾತ್ಮಾ ಬುದ್ಧರೇ, ಈಗ ಹೇಳಿ, ಜೀವನಕ್ಕಿರುವ ಬೆಲೆ ಏನು?”
ಬುದ್ಧ ಹೇಳಿದ: “ನೀನು ಈ ಕಲ್ಲನ್ನು ಹಣ್ಣು ಮಾರುವವನಿಗೆ ತೋರಿಸಿದಾಗ, ಅವನು ಇದರ ಬೆಲೆ ಹನ್ನೆರಡು ಹಣ್ಣುಗಳು ಎಂದ. ತರಕಾರಿಯವನು ಇದರ ಬೆಲೆ ಒಂದು ಚೀಲ ಆಲೂಗಡ್ಡೆ ಎಂದ. ಬಂಗಾರದ ಅಂಗಡಿಯ ಮಾಲೀಕ ಕಲ್ಲಿನ ಬೆಲೆ ಎರಡು ಕೋಟಿ ಎಂದ. ವಜ್ರದ ವ್ಯಾಪಾರಿ ಕಲ್ಲಿನ ಬೆಲೆ ಅತ್ಯಮೂಲ್ಯ ಎಂದ. ಅಂತೆಯೇ ಮನುಷ್ಯನ ಜೀವನದ ಬೆಲೆಯೂ ಇದೇ ಆಗಿದೆ. ನೀನು ನಿಜವಾಗಿಯೂ ವಜ್ರ, ನಿನ್ನ ಜೀವನಕ್ಕೆ ವಜ್ರದಷ್ಟು ಬೆಲೆಯಿದೆ. ಆದರೆ ನಿನ್ನೆದುರಿಗೆ ಇರುವವರು ತಮ್ಮ ಸಾಮರ್ಥ್ಯ, ತಮ್ಮ ಜ್ಞಾನ ಮತ್ತು ತಿಳಿವಳಿಕೆಯಂತೆ ನಿನ್ನ ಜೀವನಕ್ಕೆ ಬೆಲೆಯನ್ನು ಕಟ್ಟುತ್ತಾರೆ. ಆದರೆ ಹೆದರಬೇಡ, ಜಗತ್ತಿನಲ್ಲಿ ನಿನ್ನ ಮಹತ್ತ್ವವನ್ನು ಅರಿತು ಗುರುತಿಸುವವರೂ ನಿನಗೆ ಸಿಗುತ್ತಾರೆ.”
ಆ ವ್ಯಕ್ತಿ ಬುದ್ಧನ ಚರಣಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ.