ಗಂಡನ ಅಲ್ಪ ಆದಾಯದಲ್ಲಿ ಕಾಸಿಗೆ ಕಾಸು ಕೂಡಿಟ್ಟು, ಊರಿನ ಕೃಷ್ಣಪ್ಪಾಚಾರಿಯಲ್ಲಿ ಮಾಡಿಸಿದ ಕರಿಮಣಿ ಸರ ಕಳೆದು ಮನೆಗೆ ತೆರಳುವುದುಂಟೇ? “ಬಟ್ಟೆ ತೊಳೆಯುವಾಗ ನೀರಿನೊಟ್ಟಿಗೆ ಪೈಪಿನಲ್ಲಿ ಹೋಗಿದ್ದರೆ ಸಿಗುವುದು ಕಷ್ಟವೇ, ಆದರೂ ತೋಟದಲ್ಲಿ ನೀರು ಬಿದ್ದ ಜಾಗದಲ್ಲಿ ಹುಡುಕಲಿಕ್ಕೆ ಈಗ ಸಂಜೆಗತ್ತಲು, ಯಾವುದಕ್ಕೂ ನಾಳೆ ಕೂಲಿಯಾಳುಗಳನ್ನು ಬರಹೇಳಿ ನೋಡೋಣ” ಎಂದರು ನರಸಯ್ಯ. “ಭರ್ತಿ ಒಂದೂವರೆ ಪವನು ಚಿನ್ನ ಇತ್ತು!”
ಅಕ್ಕ, ನನ್ನ ಮಾಂಗಲ್ಯ ಸರ ಕಾಣಿಸುತ್ತಿಲ್ಲ..” ಸಪ್ಪೆಮುಖದೊಂದಿಗೆ ಕಲ್ಯಾಣಿ ಎದುರಾದಳು. ಗೀತಕ್ಕ ಜೆಂಬ್ರದ ಊಟ ಮುಗಿಸಿ ಮನೆ ತಲಪುವಾಗ ನಾಲ್ಕು ಗಂಟೆಯ ಹೊತ್ತು, ಕಲ್ಯಾಣಿ, ಇಂದಿನ ಮನೆಕೆಲ್ಸ ಆಯ್ತು ಎಂದು ಹೊರಡುವ ಹೊತ್ತು. “ಮನೆ ಒಳಗೇ ಇದ್ದೀತು ಕರಿಮಣಿ ಎಲ್ಹೋಗುತ್ತೆ.. ನಾಳೆ ಸಿಕ್ಕೀತು ಬಿಡು.”
“ಇಲ್ಲ ಅಕ್ಕ, ಕತ್ತಿ ಹಿಡಿದು ಹಿತ್ತಲ ಹುಲ್ಲು ಹೆರೆದಿದ್ದೇನೆ, ನಿಮ್ಮ ಸೊಸೆ ಹುಲ್ಲು ಅಡಿಮೇಲು ಮಾಡಿ ನೋಡಿದ್ರು, ಸಿಗ್ಲಿಲ್ಲ.” ಅಷ್ಟೊತ್ತಿಗೆ ನರಸಯ್ಯ ಕಾರನ್ನು ಶೆಡ್ ಒಳಗಿರಿಸಿ ಬಂದರು.
“ಯಜಮಾನ್ರೆ, ಇಷ್ಟು ವರ್ಷ ಈ ಮನೇಲಿ ಕೆಲ್ಸ ಮಾಡಿದ್ದಕ್ಕೆ ಹೀಗಾಯ್ತಲ್ಲ, ಮನೆಗೆ ಹೇಗೆ ಹೋಗಲಿ?’’ ಕಣ್ಣು ತುಂಬಿ ನೀರು ಹರಿಯಿತು.
ಕಲ್ಯಾಣಿ ಮುದುವೆಯಾಗಿ ಗಂಡನ ಮನೆ ಎಂದು ಬಂದದ್ದು ಕುಂಜತ್ತೂರಿಗೆ. ಅದು ತನಕ ಶಾಲಾ ವ್ಯಾಸಂಗ ಮಾಡುತ್ತಿದ್ದಳು, ಕಲಿಯಲಿಕ್ಕೂ ಉಶಾರು, ಹೆಣ್ಣುಮಗಳಿಗೆ ಮದುವೆ ಮಾಡದೆ ಇಟ್ಟುಕೊಳ್ಳುವುದಕ್ಕಾದೀತೇ, ಊರ ಜನ ಏನೆಂದಾರು? ಕುಂಬಳೆಯ ನಾಯ್ಕಾಪು ಹಾಗೂ ಮಂಜೇಶ್ವರದ ಕುಂಜತ್ತೂರು ದೂರವೇನಲ್ಲ. ಹೋಗಿ-ಬಂದು ಮಾಡಬಹುದಿತ್ತು. ಆದರೂ ಮದುವೆಯ ನಂತರ ತಾಯಿಮನೆ ದೂರವೇ ಉಳಿಯಿತು. ಬಂದ ಮನೆಯಲ್ಲಿ ಗದ್ದೆ ಬೇಸಾಯ, ಅಡಕೆ ಕೃಷಿ, ಹಟ್ಟಿ ತುಂಬ ಹಸುಕರುಗಳು. ಮನೆಯೊಳಗೂ ಅತ್ತೆಮಾವ, ಅಣ್ಣತಮ್ಮಂದಿರು, ಅತ್ತಿಗೆನಾದಿನಿಯರು ಕೂಡಿದ ದೊಡ್ಡ ಕುಟುಂಬದ ನಿಭಾವಣೆ ಸಣ್ಣ ಮಾತೇ? ಗಂಡನೆಂಬ ರಂಗಣ್ಣನಿಗೆ ಮಾತು ಸರಿಯಾಗಿ ಬಾರದು, ತೊದಲಿದಂತೆ ಮಾತು ಹೊರಳುತ್ತಿತ್ತು. ಆದರೂ ಪೇಟೆ ಪರಿಸರದಲ್ಲಿ ಒಂದು ಗೂಡಂಗಡಿ ಇಟ್ಟಿದ್ದ.
ಕಲ್ಯಾಣಿಯೂ ಎರಡು ಮಕ್ಕಳ ತಾಯಿ ಆದಳು. ಸಮಯ ಹೋದಂತೆ ಅತ್ತೆ-ಮಾವಂದಿರು ಕೈಲಾಸ ಸೇರಿದರು. ಅಣ್ಣತಮ್ಮಂದಿರಲ್ಲಿ ಮನೆ, ಗದ್ದೆ, ತೋಟ, ಜಾನುವಾರುಗಳೂ ಪಾಲಾದವು. ರಂಗಣ್ಣನೂ ಕಲ್ಯಾಣಿಯೂ ಸಿಕ್ಕಿದ ಪಾಲನ್ನು ಪಡೆದು ಗದ್ದೆ ಭೂಮಿಯಲ್ಲಿ ಮುಳಿ ಗುಡಿಸಲು ಕಟ್ಟಿಕೊಂಡರು.
ಮಕ್ಕಳೂ, ಕೈಲಾಗದ ಗಂಡನನ್ನೂ ನಿಭಾಯಿಸಲು ಕಲ್ಯಾಣಿಯೂ ಹೊರಕೆಲಸಕ್ಕೆ ಹೋಗಬೇಕಾಯಿತು. ಜಮೀನುದಾರ ನರಸಯ್ಯ ಆಕೆಗೆ ತೋಟದ ಕೆಲಸ ಅಂತ ಕೊಟ್ಟರೇನೋ ಸರಿ. ಸಂಬಳ ಮಾತ್ರ ವಾರದ ರೇಷನ್ ಸಾಮಗ್ರಿ ಕೊಂಡೊಯ್ಯಲು ಸಾಕಾಗುವಷ್ಟೇ ಕೊಡುತ್ತಿದ್ದುದು.