ಖ್ಯಾತ ಸಿತಾರ್‌ಪಟು ರವಿಶಂಕರರ ವಿದ್ಯಾಭ್ಯಾಸದ ಮೊದಲ ದಿನಗಳು. ಅವರು ಅದೇ ತಾನೆ ಗುರುವಿನ ಬಳಿ ವಿದ್ಯೆ ಕಲಿಯಲು ಬಂದಿದ್ದರು. ಗುರುಗಳು ಪ್ರಥಮ ಪಾಠವನ್ನು ಹೇಳಿಕೊಡುತ್ತಿದ್ದರು. ರವಿಶಂಕರರಿಗೆ ಎಷ್ಟು ಪ್ರಯತ್ನಿಸಿದರೂ ನುಡಿಸಲು ಆಗುತ್ತಿರಲಿಲ್ಲ.
ಗುರುವಿಗೆ ತುಂಬ ಕೋಪಬಂದಿತು. ಚೆನ್ನಾಗಿ ಬೈದರು. ಚಿಕ್ಕಂದಿನಿಂದ ಯಾರಿಂದಲೂ ಒಂದು ಮಾತನ್ನೂ ಕೇಳದಿದ್ದ ರವಿಶಂಕರರು ಇದರಿಂದ ಗಾಬರಿಗೊಳ್ಳುವ ಬದಲು ಕೋಪಗೊಂಡರು. ಗುರು ಅವರನ್ನು ಛೇಡಿಸುತ್ತ “ಹೋಗು, ಕೈಗಳಿಗೆ ಬಳೆ ತೊಟ್ಟುಕೊಂಡು ಬಾ, ಸ್ವಲ್ಪವೂ ಶಕ್ತಿ ಇಲ್ಲ. ಇಂಥ ಸಣ್ಣ ಪಾಠವನ್ನೂ ಸರಿಯಾಗಿ ಕಲಿಯದಿದ್ದ ಮೇಲೆ ಏನು ಪ್ರಯೋಜನ?’’ ಎಂದು ರೇಗಿದರು.
ಸ್ವಾಭಿಮಾನಿಯಾದ ಶಂಕರರಿಗೆ ಇದು ಸಹ್ಯವಾಗಲಿಲ್ಲ. ಆ ಕ್ಷಣ ಅಲ್ಲಿಂದ ಎದ್ದು ಹೊರಟುಹೋದರು. ಮಾರನೆಯ ಬೆಳಗ್ಗೆ ಅವರು ತಮ್ಮ ಗಂಟುಮೂಟೆ ಕಟ್ಟಿ ಊರಿಗೆ ಹೊರಟುಹೋಗಲು ರೈಲ್ವೇ ನಿಲ್ದಾಣಕ್ಕೆ ಬಂದರು. ಅಲ್ಲಿಗೆ ತಮ್ಮ ಸಂಬಂಧಿಗಳನ್ನು ಕಳುಹಿಸಲು ಬಂದಿದ್ದ ಒಬ್ಬ ಸಹಪಾಠಿಗೆ ಇವರನ್ನು ಕಂಡು ಆಶ್ಚರ್ಯವಾಯಿತು. ಹತ್ತಿರ ಬಂದು ವಿಚಾರಿಸಿದರು.
ವಿಷಯ ತಿಳಿದ ಅವರಿಗೆ ರವಿಶಂಕರರ ಮೇಲೆ ಸಿಟ್ಟು ಬಂದಿತು. ಅವರು “ಅಲ್ಲಯ್ಯಾ, ನಿನಗೇನು ಬುದ್ಧಿ ಇದೆಯೋ ಇಲ್ಲವೋ? ಗುರುಗಳು ಕೋಪದಲ್ಲಿ ಒಂದು ಮಾತನ್ನು ಆಡಿದಾಕ್ಷಣ ನಿನ್ನ ಮಾನ ಹೋಯಿತೆ? ನಡಿ, ಇದೆಲ್ಲ ಒಳ್ಳೆಯದಲ್ಲ. ನೀನು ಇಷ್ಟಕ್ಕೇ ಹೀಗೆ ಕೋಪ ಮಾಡಿಕೊಂಡಿರುವೆ. ಅವರು ಕೈ ಎತ್ತದಿರುವ ಏಕಮಾತ್ರ ವ್ಯಕ್ತಿಯೆಂದರೆ ನೀನೇ. ಒಂದು ಸಾರಿ ನನ್ನ ಕೈ ಕಾಲು ಕಟ್ಟಿಸಿ ಛಡಿ ಏಟು ಹೊಡೆಸಿದ್ದರು. ಒಂದು ದಿನ ಪೂರ್ಣ ಹಾಗೆಯೇ ಇರಬೇಕಾಗಿತ್ತು. ಊಟ, ತಿಂಡಿ ಒಂದೂ ಇರಲಿಲ್ಲ! ಸ್ವಲ್ಪ ಗದರಿಸಿದ ಮಾತ್ರಕ್ಕೆ ಆಗಲೆ ನೀನು ಊರಿಗೆ ಹೊರಟು ನಿಂತಿರುವೆಯಲ್ಲಾ!” ಎಂದು ಹೇಳಿ ಅವರನ್ನು ವಾಪಸು ಕರೆತಂದರು.
ಗುರುಗೃಹಕ್ಕೆ ಬಂದು ಕೊಠಡಿಯಲ್ಲಿ ಕುಳಿತಿದ್ದ ಶಂಕರರಿಗೆ ಗುರುಪತ್ನಿಯಿಂದ ಕರೆ ಬಂದಿತು. ಹೆದರುತ್ತ ಹೋದ ಅವರನ್ನು ಆಕೆಯು ಬಹಳ ಆತ್ಮೀಯತೆಯಿಂದ ಮಾತನಾಡಿಸಿ “ನೋಡು ಮಗು, ಯಾವಾಗಲೂ ಗುರುವಿನ ಮೇಲೆ ಕೋಪ ಮಾಡಿಕೊಳ್ಳಬಾರದು. ನೀನು ಊರಿಗೆ ಹೋಗುವುದಕ್ಕೆ ನನ್ನ ಅಭ್ಯಂತರವೇನೂ ಇಲ್ಲ. ಆದರೆ ಹೋಗುವ ಮೊದಲು ಅವರಿಗೆ ಒಂದು ಮಾತು ಹೇಳುವುದು ಒಳ್ಳೆಯದು!” ಎಂದರು. ಅವರ ಮಾತನ್ನು ಒಪ್ಪಿಕೊಂಡರೂ ಮನಸ್ಸು ಮಾತ್ರ ಇನ್ನೂ ಕಸಿವಿಸಿಯಾಗಿತ್ತು. ಕಳ್ಳಹೆಜ್ಜೆ ಹಾಕುತ್ತ ಗುರುವಿನ ಕೋಣೆಗೆ ಬಂದರು. ಆಗ ಗುರು ರವಿಶಂಕರರ ಭಾವಚಿತ್ರವೊಂದಕ್ಕೆ ಕಟ್ಟು ಹಾಕುತ್ತಿದ್ದರು. ಇದನ್ನು ಕಂಡಾಗಲೇ ಜಂಘಾಬಲ ಉಡುಗಿಹೋಯ್ತು. ಆದರೂ ಸಾವರಿಸಿಕೊಂಡು ನಿಧಾನವಾಗಿ “ನಾನು ಈ ದಿನ ಊರಿಗೆ ಹೋಗುತ್ತೇನೆ” ಎಂದರು, ರವಿಶಂಕರ್.
ಕತ್ತೆತ್ತಿ ನೋಡಿದ ಗುರುಗಳು ಸ್ವಲ್ಪ ಹೊತ್ತು ಮೌನವಾಗಿದ್ದರು. ಬಳಿಕ ಸಣ್ಣ ದನಿಯಲ್ಲಿ “ಅಷ್ಟೇನೋ, ಇನ್ನು ಏನಾದರೂ ಹೇಳುವುದಿದೆಯೊ? ನಾನು ‘ಹೋಗಿ ಬಳೆ ತೊಟ್ಟುಕೊಂಡು ಬಾ’ ಎಂದು ಹೇಳಿದ್ದೇ ನಿನಗೆ ಸಹನವಾಗಲಿಲ್ಲ, ಅಲ್ಲವೆ? ಅಷ್ಟಕ್ಕೇ ನೀನು ಊರಿಗೆ ಹೊರಟುನಿಂತಿರುವೆ. ಆಂ?” ಎಂದು ಕೇಳಿದರು.
ರವಿಶಂಕರರ ಕಣ್ಣಲ್ಲಿ ನೀರೂರಿತು. ಏನೂ ಹೇಳಲಾಗದೆ ತಲೆತಗ್ಗಿಸಿ ನಿಂತರು. ಗುರು ಹತ್ತಿರ ಬಂದು ಶಿಷ್ಯನನ್ನು ವಾತ್ಸಲ್ಯದಿಂದ ಮೈದಡವುತ್ತ “ನಿನ್ನ ತಾಯಿಯು ಮುಂಬಯಿಯ ರೈಲ್ವೇ ನಿಲ್ದಾಣದಲ್ಲಿ ನಿನ್ನನ್ನು ನನ್ನ ಕೈಗೆ ಒಪ್ಪಿಸುತ್ತ ‘ನಿಮ್ಮ ಮಗನಂತೆ ಇವನನ್ನು ನೋಡಿಕೊಳ್ಳಿ, ಇವನ ಸಂಪೂರ್ಣ ಜವಾಬ್ದಾರಿಯನ್ನು ನಿಮ್ಮ ಮೇಲೆ ಹಾಕಿದ್ದೇನೆ’ ಎಂದು ಹೇಳಿದ ಮಾತು ನೆನಪಿದೆಯೇನು? ಅಂದಿನಿಂದ ನಾನು ನಿನ್ನನ್ನು ನನ್ನ ಮಗನೆಂದೇ ಭಾವಿಸಿದ್ದೇನೆ. ಈ ನನ್ನ-ನಿನ್ನ ಸಂಬಂಧವನ್ನು ಕಡಿದುಹಾಕಲು ಇಚ್ಛಿಸುವೆಯಾ?” ಎಂದು ಕೇಳಿದರು.
ಈ ಘಟನೆಯಾದ ಮೇಲೆ ರವಿಶಂಕರರು ಮುಂದೆಂದೂ ತಮ್ಮ ಗುರುವನ್ನು ಬಿಟ್ಟುಹೋಗುವ ವಿಚಾರವನ್ನು ಯೋಚಿಸಲೂ ಇಲ್ಲ.