ಅದೊಂದು ಪ್ರಶಾಂತವಾದ ತಾಣ. ಆ ಊರು ವಿಶ್ರಾಂತ ಜೀವನ ನಡೆಸುವವರಿಗೆ ಸ್ವರ್ಗವೆಂದೇ ಖ್ಯಾತಿಗೊಳಪಟ್ಟಿತ್ತು. ಅಲ್ಲಿ ಜೀವಿಸುತ್ತಿದ್ದ ಬಹುಪಾಲು ಜನ ನಿವೃತ್ತಿ ಹೊಂದಿ ವಿಶ್ರಾಂತ ಜೀವನ ನಡೆಸುವವರೇ ಆಗಿದ್ದರು. ಒಬ್ಬ ನಿವೃತ್ತಿ ಹೊಂದಿದ ಶಾಲಾ ಶಿಕ್ಷಕ ಮತ್ತು ನಿವೃತ್ತಿಯಾದ ಉದಾರಿಯೊಬ್ಬ ಅಕ್ಕಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದರು.
ಸಮಯ ಕಳೆಯಲು ಅವರು ವ್ಯಾಯಾಮ, ವಾಯುವಿಹಾರ, ಬಿಡುವಿನ ವೇಳೆಯಲ್ಲಿ ತಮ್ಮ ವರಾಂಡದಲ್ಲಿ ಕುಳಿತು ಓದುವುದು, ಉಳಿದ ಸಮಯದಲ್ಲಿ ಕೈತೋಟ ಮಾಡುವುದು ದಿನಚರಿಯನ್ನಾಗಿಸಿಕೊಂಡಿದ್ದರು.
ಅವರಿಬ್ಬರೂ ತಮ್ಮ ತಮ್ಮ ತೋಟದಲ್ಲಿ ಕೆಲವು ಗಿಡಗಳನ್ನು ನೆಟ್ಟು ಆರೈಕೆ ಮಾಡಲಾರಂಭಿಸಿದರು. ಇಬ್ಬರ ಕೈತೋಟದಲ್ಲಿ ಗಿಡಗಳು ಬೆಳೆಯಲಾರಂಭಿಸಿದವು. ಶಿಕ್ಷಕ ಗಿಡಗಳಿಗೆ ಆವಶ್ಯಕತೆಗೆ ಬೇಕಾದಷ್ಟೆ ನೀರುಣಿಸುವುದು ಕಳೆ ಕೀಳುವುದು ಮತ್ತು ಗೊಬ್ಬರ ಹಾಕುವುದು ಮಾಡುತ್ತಿದ್ದ. ಉದಾರಿ ತನ್ನ ತೋಟಗಾರಿಕೆಯ ಕೆಲಸದಲ್ಲಿ ಹೆಚ್ಚು ಹೆಚ್ಚು ಉದಾರಿತನ ತೋರಿಸುತ್ತಿದ್ದ. ಉದಾರಿ ತನ್ನ ತೋಟದ ಗಿಡಗಳಿಗೆ ಆವಶ್ಯಕತೆಗೆ ಹೆಚ್ಚೇ ನೀರುಣಿಸುವುದು ಕಳೆ ಕೀಳುವುದು ಮತ್ತು ಹೆಚ್ಚು ಗೊಬ್ಬರ ಹಾಕುವುದು ಮಾಡುತ್ತಿದ್ದ. ಉದಾರಿಯ ತೋಟದಲ್ಲಿ ಎಲ್ಲವೂ ಹೆಚ್ಚಾದ ಸೌಲಭ್ಯಗಳೆ!
ಹೀಗಿರುವಾಗ ಮಳೆಗಾಲದ ಒಂದು ದಿನ ಇಡೀ ರಾತ್ರಿ ಬಿರುಗಾಳಿಸಹಿತ ಮಳೆ ಸುರಿಯಿತು.
ಬೆಳಗ್ಗೆ ಎದ್ದು ಕೈ ತೋಟಗಳಿಗೆ ಬಂದ ಶಿಕ್ಷಕ ಮತ್ತು ಉದಾರಿಗೆ ಅಚ್ಚರಿ ಕಂಡಿತು. ಉದಾರಿಯ ತೋಟದಲ್ಲಿ ಬೆಳೆದಿದ್ದ ಗಿಡಗಳೆಲ್ಲವೂ ಬುಡಮೇಲಾಗಿ ನೆಲಕ್ಕುರುಳಿದ್ದವು. ಶಿಕ್ಷಕನ ತೋಟದಲ್ಲಿ ಬೆಳೆದ ಗಿಡಗಳೆಲ್ಲವೂ ತಲೆಎತ್ತಿ ಗಾಳಿ ಬೆಳಕಿಗೆ ಹರ್ಷದಿಂದ ತೂಗಾಡುತ್ತಿದ್ದವು. ಶಿಕ್ಷಕ ಸಂತಸಗೊಂಡರೆ ಉದಾರಿ ಅಸಂತುಷ್ಟನಾಗಿ ಶಿಕ್ಷಕನಿಗೆ “ಏಕೆ ಹೀಗೆ? ನಾನು ಗಿಡಗಳನ್ನು ಚೆನ್ನಾಗಿಯೇ ಬೆಳೆಸಿದ್ದೇನಲ್ಲ?” ಎಂದು ಕೇಳಿದ.
ಶಿಕ್ಷಕ ನಕ್ಕು, “ಸ್ನೇಹಿತ, ನಿನ್ನ ತೋಟದ ಗಿಡಗಳಿಗೆ ನೀನು ಉದಾರಿಯಾಗಿ ಆವಶ್ಯಕತೆಗಿಂತ ಹೆಚ್ಚಾಗಿ ನೀರು, ಗೊಬ್ಬರ ಮತ್ತು ವಿಪರೀತ ಕಾಳಜಿ ಮಾಡಿದೆ. ಗಿಡಗಳು ತಮ್ಮ ಆವಶ್ಯಕತೆಗಳಿಗೆ ಕಷ್ಟಪಡದಂತೆ ಮಾಡಿದೆ. ಅವುಗಳಿಗೆ ಜೀವನ ಬಲು ಸಲೀಸಾಯಿತು. ನಾನು ಗಿಡಗಳಿಗೆ ಆವಶ್ಯಕತೆಗೆ ಮೀರಿ ನೀರು ಗೊಬ್ಬರ ಏನನ್ನೂ ಕೊಡಲಿಲ್ಲ. ಅದ್ದರಿಂದ ಅವುಗಳು ಹೆಚ್ಚಿನ ನೀರು ಮತ್ತು ಗೊಬ್ಬರದ ಆವಶ್ಯಕತೆಗೆ ಹುಡುಕಾಟ ಮಾಡುತ್ತಾ ಬೇರುಗಳು ಆಳಕ್ಕೆ ಇಳಿಸಿದವು. ಇದರ ಫಲವಾಗಿ ಗಿಡಗಳಿಗೆ ಭದ್ರತೆಯನ್ನು ಒದಗಿಸಿದವು. ಬಲಿಷ್ಠವಾದವು ಮತ್ತು ಮಳೆ ಗಾಳಿಗೆ ಜಗ್ಗದೆ-ಬಗ್ಗದೆ ಬದುಕುಳಿದವು” – ಎಂದು ಉತ್ತರಿಸಿದ.
ಕತೆಯ ನೀತಿ ಎಂದರೆ ತಂದೆತಾಯಿಗಳು ಮಕ್ಕಳಿಗೆ ಅವರ ಆವಶ್ಯಕತೆಗಿಂತ ಮೀರಿದ್ದನ್ನು ಕೊಟ್ಟರೆ ಅವರಲ್ಲಿ ಶ್ರಮಪಡುವ ಸ್ವಭಾವ ಮತ್ತು ಹುಡುಕಾಟದ ಛಲ ಬೆಳೆಯುವುದಿಲ್ಲ. ಅದು ಕುಂಠಿತಗೊಳ್ಳುತ್ತದೆ. ಬೇಕಾಗಿರುವುದನ್ನು, ಬೇಡಿದ್ದನ್ನೆಲ್ಲ ಕೊಡುವುದಕ್ಕಿಂತ ಉತ್ತಮ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿ.