ಇನ್ನೇನು ಮನೆಯತ್ತ ನಡೆಯಬೇಕು ಹಿಂತಿರುಗಿದೆ, ಎದುರು ಒಂದು ಹುಡುಗಿ. ವಯಸ್ಸು ಆರು ಏಳು ವರ್ಷ ಇರಬೇಕು. ಪುಡಿಗೂದಲು ಇಳಿ ಬಿದ್ದಿತ್ತು ತೊಟ್ಟ ಗೌನ್ ಯಾರೋ ಕೊಟ್ಟಿರಬೇಕು. ಮುಖ ಬಾಡಿತ್ತು. ದೈನ್ಯತೆ ಇದ್ದರೂ ಮುಗ್ಧಭಾವ ಅವಳ ಮುಖಕ್ಕೆ ಕಳೆ ಕೊಟ್ಟಿತ್ತು. ಬಾಳೆಹಣ್ಣನ್ನು ಮತ್ತು ನನ್ನನ್ನು ಮತ್ತೆ ಮತ್ತೆ ಪಿಳಿಪಿಳಿ ನೋಡಿದಳು. ಆ ಕಣ್ಣೋಟ ‘ನನಗೆ ಒಂದು ಬಾಳೆಹಣ್ಣು ಕೊಡಿ’ ಎಂದು ಅಂಗಲಾಚಿ ಬೇಡುವಂತಿತ್ತು. ಅದು ಅವಳ ಹಸಿವಿಗೆ ಹಿಡಿದ ಕನ್ನಡಿಯಂತಿದ್ದು, ನನಗೆ ಅನುಕಂಪ ಉಂಟುಮಾಡಿತು.
ಜನತಾಬಜಾರ್ ಸ್ಟಾಪ್. ಇನ್ನೇನು ಇಳಿಯಬೇಕು. ಬಸ್ ನಿಂತಂತೆ ಹಿಂದಿದ್ದ ಇಳಿಯುವ ಪ್ರಯಾಣಿಕರು ಬೇಗ ಬೇಗ ಎನ್ನುತ್ತ ನನ್ನನ್ನು ತಳ್ಳಿದರು. ಇಳಿಯುವ ಗಡಬಿಡಿಯಲ್ಲಿ ಸದ್ಯ ಬೀಳಲಿಲ್ಲ. ಇಳಿದಾಗ ಕೈಯಲ್ಲಿನ ಬ್ಯಾಗೂ ಇತ್ತು. ಏಳು ಕಿ.ಮೀ. ದೂರದ ಸಿಟಿ ಬಸ್ ಪ್ರಯಾಣಕ್ಕೆ ಒಂದು ಗಂಟೆ ಹತ್ತು ನಿಮಿಷ ಹಿಡಿದಿತ್ತು. ಇಳಿಯುತ್ತಲೇ ಜನರ ನೂಕುನುಗ್ಗಲಲ್ಲಿ ಬೆಂದುಹೋಗಿದ್ದ ದೇಹಕ್ಕೆ ಮೇ ತಿಂಗಳ ಮಧ್ಯಾಹ್ನದ ಒಂದು ಗಂಟೆಯ ಮಟಮಟ ವಾತಾವಾರಣ ಎ.ಸಿ. ಹಾಲ್ ಹೊಕ್ಕಂತೆ ಹಿತ ಎನಿಸಿತ್ತು. ಇನ್ನು ಇಲ್ಲಿಂದ ಮನೆಗೆ ಹನ್ನೆರಡು ನಿಮಿಷದ ನಡಿಗೆ. ‘ಸುಧಾ ಅಡಿಗೆ ಮಾಡುತ್ತಿರುತ್ತಾಳೆ. ಬೇಳೆ ಬೆಂದಿರುತ್ತದೆ. ಅಕ್ಕಿಯ ಕುಕ್ಕರ್ ಒಲೆಯ ಮೇಲೆ ಇರುತ್ತದೆ. ಇನ್ನು ಅರ್ಧಗಂಟೆಯಾದರೂ ಬೇಕು, ಭೋಜನ ಸಿದ್ಧವಾಗಲು’ ಎಂದುಕೊಳ್ಳುತ್ತ ಎದುರು ಕಂಡ ಹಾಪ್ಕಾಮ್ನತ್ತ ನೋಟ ಹರಿಸಿದೆ. ಬಂಗಾರ ಬಣ್ಣದ ಏಲಕ್ಕಿ ಬಾಳೆ ನೇತಾಡುತ್ತಿತ್ತು. ‘ಬನ್ನಿ ಬನ್ನಿ’ ಎಂದು ಅಪ್ಪಾಜಿಗೌಡ ನನಗಾಗಿ ಕಾದಿದ್ದವನಂತೆ ಕರೆದು ‘ನಿಮಗಾಗಿ ಇಟ್ಟಿದ್ದೆ’ ಎಂದು ಒಳ್ಳೆಯ ಮಾತನಾಡಿ ಹಣ್ಣು ತೂಕ ಮಾಡಿ ಪೇಪರ್ ಬ್ಯಾಗಲ್ಲಿ ಇಟ್ಟು ಕೊಟ್ಟ.
ಇನ್ನೇನು ಮನೆಯತ್ತ ನಡೆಯಬೇಕು ಹಿಂತಿರುಗಿದೆ, ಎದುರು ಒಂದು ಹುಡುಗಿ. ವಯಸ್ಸು ಆರು ಏಳು ವರ್ಷ ಇರಬೇಕು. ಪುಡಿಗೂದಲು ಇಳಿ ಬಿದ್ದಿತ್ತು ತೊಟ್ಟ ಗೌನ್ ಯಾರೋ ಕೊಟ್ಟಿರಬೇಕು. ಮುಖ ಬಾಡಿತ್ತು. ದೈನ್ಯತೆ ಇದ್ದರೂ ಮುಗ್ಧಭಾವ ಅವಳ ಮುಖಕ್ಕೆ ಕಳೆ ಕೊಟ್ಟಿತ್ತು. ಬಾಳೆಹಣ್ಣನ್ನು ಮತ್ತು ನನ್ನನ್ನು ಮತ್ತೆ ಮತ್ತೆ ಪಿಳಿಪಿಳಿ ನೋಡಿದಳು. ಆ ಕಣ್ಣೋಟ ‘ನನಗೆ ಒಂದು ಬಾಳೆಹಣ್ಣು ಕೊಡಿ’ ಎಂದು ಅಂಗಲಾಚಿ ಬೇಡುವಂತಿತ್ತು. ಅದು ಅವಳ ಹಸಿವಿಗೆ ಹಿಡಿದ ಕನ್ನಡಿಯಂತಿದ್ದು, ನನಗೆ ಅನುಕಂಪ ಉಂಟುಮಾಡಿತು. ಒಂದು ಹಣ್ಣನ್ನು ಕಿತ್ತು ಅವಳ ಕೈಗೆ ನೀಡಿ, ಮುಂದೆ ನಡೆದೆ. ಹಿಂತಿರುಗಿ ನೋಡಿದರೆ ಅವಳು ಮತ್ತೆ ನನ್ನನ್ನೇ ಹಿಂಬಾಲಿಸಿ ಬರುತ್ತ ನನ್ನತ್ತ ನೋಡಿದಳು. ಮೊದಲ ನೋಟದಲ್ಲಿ ಮುಗ್ಧತೆ ಕಂಡು ನಾನೇ ಕೊಡುವಂತೆ ಮಾಡಿದ್ದ ಈ ನೋಟದಲ್ಲಿ ಬಿಕಾರಿಭಾವ ಕಂಡು ತಿರಸ್ಕಾರ ಮೂಡಿತ್ತು. ‘ನೀವು ಕೊಟ್ಟದ್ದು ಇಷ್ಟೇನಾ? ಇನ್ನೂ ಒಂದು ಕೊಡಿ’ ಎನ್ನುವಂತಹ ಆ ನೋಟ ನಮ್ಮನ್ನು ಸಣ್ಣವರನ್ನಾಗಿ ಮಾಡಿಬಿಡುತ್ತದೆ. ಕೊಟ್ಟದ್ದನ್ನು ತೆಗೆದುಕೊಂಡು ಕಣ್ಣಲ್ಲೇ ಕೃತಜ್ಞತೆ ತೋರಿದರೆ ನಮಗೆ ಬರುವ ಧನ್ಯತಾಭಾವ ಮತ್ತೆ ಕೇಳಿದಾಗ ಅಸಹನೀಯವಾಗಿರುತ್ತದೆ. ಏನು ಕೊಟ್ಟರೂ ಸಾಕು ಎನ್ನುವುದಿಲ್ಲ! ‘ನನ್ನ ತಮ್ಮನಿಗೆ ಒಂದು ಕೊಡಿ’ ಎಂದು ಅವಳು ಕೇಳಿಯೇಬಿಟ್ಟಳು. ಇಲ್ಲ ಹೋಗು ಎನ್ನುವಂತೆ ಅವಳ ಕಡೆ ನೋಡಿ ಮನೆ ಕಡೆ ಹೆಜ್ಜೆ ಹಾಕಿದೆ. ಈ ಭಿಕಾರಿಗಳ ಜಾತಿಯೇ ಇಷ್ಟು ಎನ್ನುವ ತಿರಸ್ಕಾರ ಹುಟ್ಟಿತ್ತು.
ಎರಡು ಮೂರು ಮಾರು ನಡೆದಿರಬಹುದು ಗೆಳೆಯ ಗೋಪಾಲ ಕಂಡು ‘ಎಲ್ಲಿ? ಏನು ಈ ಹೊತ್ತಲ್ಲಿ?’ ಹೀಗೆ ಎಂದಿನ ಮಾತುಕತೆಗೆ ಇಳಿದೆ. ಅದೂ ಇದೂ ಮಾತುಗಳು. ಸಿಟಿ ಮಾರ್ಕೆಟ್ ಕಡೆ ಹೋಗೋ ಬಸ್ ಬಂತು. ಮಾತು ನಿಲ್ಲಿಸಿ ‘ಬರ್ತೀನಿ’ ಎನ್ನುತ್ತ ಅವನು ಅದರತ್ತ ದಾಪುಗಾಲು ಹಾಕಿ ಮುಂದಿನ ಬಾಗಿಲಿನಿಂದಲೇ ಬಸ್ ಹತ್ತಿದ.
ಮುಂದೆ ನಡೆದೆ, ಅಂಡರ್ಪಾಸ್ ಸರ್ವೀಸ್ ರಸ್ತೆಯಲ್ಲಿ ನಡೆದು ಡಾ. ಮುತ್ತುರಾಜ ವೃತ್ತದಲ್ಲಿ ಎಡಕ್ಕೆ ಇನ್ನೇನು ತಿರುಗಬೇಕು. ಅದೇ ಚೋಟುದ್ದದ ಹುಡುಗಿ ರಸ್ತೆಯ ಪಕ್ಕದ ಆಚೆ ಕಂಡಳು. ಮೂರು ವರ್ಷದ ಹುಡುಗನಿಗೆ ಬಾಳೆಹಣ್ಣಲ್ಲಿ ಅರ್ಧ ಮುರಿದು ತಿನ್ನಲು ಅವಳು ಕೊಟ್ಟಿರಬೇಕು. ಅದನ್ನು ಬಾಯಿ ತುಂಬ ಇಟ್ಟುಕೊಂಡ ಅವನು ‘ಇನ್ನೂ ಅದನ್ನೂ ಕೊಡು ಅಕ್ಕ’ ಎನ್ನುವಂತೆ ಅವಳನ್ನು ಬಡಿಯತೊಡಗಿತ್ತು. ‘ಇರು’ ಎಂದು ಅವಳು ಉಳಿದ ಅರ್ಧವನ್ನೂ ಅವನ ಕೈಲಿ ಇಡುವುದನ್ನು ನೋಡಿ ನನ್ನ ಮನಸ್ಸು ‘ಚುರ್’ ಎಂದಿತು. ಚೀಲದಿಂದ ಎರಡು ಬಾಳೆಹಣ್ಣು ತೆಗೆದು ಅವಳಿಗೆ ಕೊಡಬೇಕು ಎನ್ನುವ ಅನುಕಂಪ ಮೂಡಿ ರಸ್ತೆ ದಾಟಬೇಕು, ಒಂದು ಟ್ರ್ಯಾಕ್ಟರ್ ಅಲ್ಲಿ ಬಂದು ನಿಂತಿತು. ಒಬ್ಬ ಹೆಣ್ಣು ಮಗಳು ಬಾಗಿ ಬಾ ಎಂದು ಆ ಮಕ್ಕಳನ್ನು ಕರೆಯುತ್ತಲೇ ಅವು ಓಡಿಹೋದವು. ಟ್ರ್ಯಾಕ್ಟರಿಂದ ಒಬ್ಬ ಇಳಿದು ಆ ಮಕ್ಕಳನ್ನು ಹಿಡಿದೆತ್ತಿ ಆ ತಾಯಿ ಕೈಗೆ ಕೊಟ್ಟ. ಟ್ರ್ಯಾಕ್ಟರ್ ಸಾಗಿತು. ನಾನು ಬಾಳೆಹಣ್ಣು ಮತ್ತೆ ಚೀಲದಲ್ಲಿ ಹಾಕಿ ಮನೆಯತ್ತ ಹೆಜ್ಜೆ ಹಾಕಿದೆ. ಉಲ್ಲಸಿತನಾಗಿ ಬಸ್ ಇಳಿದು ಮನೆಗೆ ಹೊರಟಿದ್ದ ನನ್ನನ್ನು ಈ ಪ್ರಸಂಗ ಕುಗ್ಗಿಸಿಬಿಟ್ಟಿತ್ತು. ಏನು ಆ ಹುಡುಗಿಯ ಪ್ರೀತಿ! ಅವಳ ದೈನ್ಯತೆ ಏಕೆ ತಿರಸ್ಕಾರ ಮೂಡಿಸಿತ್ತು? ಅವಳು ಸುಳ್ಳು ಹೇಳುತ್ತಿದ್ದಾಳೆ ಎಂದು ಏಕೆ ಭ್ರಮಿಸಿದೆ? ಎಂದೆಲ್ಲ ಯೋಚನೆ ಕೊರೆಯತೊಡಗಿತ್ತು. ಆದರೆ ಕಾಲ ಮಿಂಚಿತ್ತು. ಮತ್ತೆ ಎರಡು ಹಣ್ಣು ಕೊಟ್ಟಿದ್ದರೆ…