ಬಸ್ ಹಿಡಿಯಲು ವಿಳಂಬವಾಗಿತ್ತು, ರಾತ್ರಿಯಾದ್ದರಿಂದ ವಿಧಿಯಿಲ್ಲದೆ ಆಟೋರಿಕ್ಷಾವನ್ನರಸುತ್ತಾ ಬಡವರು ನೆಲೆಸಿದ್ದ ಪ್ರದೇಶದೆಡೆಗೆ ಹೋಗಬೇಕಾಯಿತು. ಅಲ್ಲಿ ಒಂದಲ್ಲ ಒಂದು ರಿಕ್ಷಾ ಹೊರಗೆ ನಿಂತಿರುತ್ತದೆ ಎಂಬ ವಿಶ್ವಾಸ ನನಗಿತ್ತು.
ದೂರದಿಂದಲೇ ಆಟೋರಿಕ್ಷಾ ಮತ್ತು ಅದರೊಳಗಿನಿಂದ ಬೆಳಕು ಕಾಣಿಸಿದಾಗ ನೆಮ್ಮದಿಯಿಂದ, ‘ಸದ್ಯ ರಿಕ್ಷಾ ಸಿಕ್ಕಿತು’ ಎಂದು ನಿರಾಳನಾದೆ.
ಆದರೆ ರಿಕ್ಷಾ ಸಮೀಪಕ್ಕೆ ಹೋಗಿ ನೋಡಿದಾಗ ಗರ ಬಡಿದಂತಾಯಿತು, ಒಂದು ಚಿಕ್ಕ ಹರಕು-ಮುರಕು ಗುಡಿಸಿಲಿನಲ್ಲಿ ನಾಲ್ಕೈದು ಜನ ಮಲಗಿದ್ದರು. ಎಂಟುಹತ್ತು ವರ್ಷದ ಬಾಲಕನೊಬ್ಬ, ಎದುರಿಗೆ ನಿಂತಿದ್ದ, ಆಟೋರಿಕ್ಷಾದಲ್ಲಿ ಕೂತು ಬೀದಿ ದೀಪದ ಬೆಳಕಿನಲ್ಲಿ ಓದುತ್ತಿದ್ದ.
ಅವನ ಏಕಾಗ್ರತೆಯನ್ನು ನೋಡಿ ಮನಸ್ಸು ತುಂಬಿ ಬಂತು; ಬಾಲಕನ ವಿದ್ಯಾಭ್ಯಾಸದಲ್ಲಿ ಅಡ್ಡಿಯುಂಟು ಮಾಡುವ ಮನಸ್ಸು ಮತ್ತು ಧೈರ್ಯ ಬರಲಿಲ್ಲ. ನಾನು ಅಲ್ಲಿಂದ ಮೌನವಾಗಿ ಬ್ಯಾಗ್ ಹಿಡಿದು ಕಾಲ್ನಡಿಗೆಯಲ್ಲಿಯೇ ಬಸ್-ಸ್ಟೇಷನ್ ಕಡೆಗೆ ಹೆಜ್ಜೆಗಳನ್ನು ಹಾಕಿದೆ.
ಗುರುತಿಸುವ ಕಷ್ಟ
ಇಪ್ಪತ್ತೈದು ವರ್ಷಗಳ ಹಿಂದೆ, ಮಗನ ಬಾಲ್ಯದ ದಿನಗಳಲ್ಲಿ ಅವನನ್ನು ಕರೆತರಲು ಶಾಲೆಗೆ ಹೋಗುತ್ತಿದ್ದಾಗ, ಶಾಲೆಯ ಬಳಿ ಯೂನಿಫಾರ್ಮ್ನಲ್ಲಿ ನಿಂತ ನೂರಾರು ಮಕ್ಕಳಲ್ಲಿ ನನ್ನ ಮಗನನ್ನು ಗುರುತಿಸುವುದು ಕಷ್ಟವಾಗುತ್ತಿತ್ತು. ಅವನೇ ನನ್ನನ್ನು ನೋಡಿ, ಓಡೋಡಿ ನನ್ನ ಬಳಿಗೆ ಬಂದು ನನ್ನ ಬಟ್ಟೆಗಳನ್ನು ಹಿಡಿದು ತಲೆಯೆತ್ತಿ ಖುಷಿಯಿಂದ, ‘ಅಪ್ಪಾ-ಅಪ್ಪಾ!’ ಎಂದು ಬೀಗುತ್ತಿದ್ದ.
ಇಂದು ಮಗ ದೊಡ್ಡ ಅಧಿಕಾರಿಯಾಗಿದ್ದಾನೆ; ದೀರ್ಘ ಕಾಲದ ನಂತರ ಅವನನ್ನು ಭೇಟಿಯಾಗಲು ಅವನ ಕಚೇರಿಗೆ ಬಂದಿದ್ದೇನೆ. ಆದರೆ ಬಹುಶಃ ಕೆಲಸದ ಒತ್ತಡದಿಂದ ನನ್ನನ್ನು ಭೇಟಿಯಾಗಲು ಅವನಿಗೆ ಕಷ್ಟವಾಗುತ್ತಿದೆ ಅಥವಾ ನನ್ನನ್ನು ಅಸಡ್ಡೆ ಮಾಡುತ್ತಿದ್ದಾನೆ. ಆದರೆ ನನ್ನ ಕಷ್ಟ ಎಂದರೆ ನಾನು ಓಡಿಹೋಗಿ, ಅವನ ಬಟ್ಟೆಗಳನ್ನು ಹಿಡಿದು, ‘ಮಗಾ!’ ಎಂದು ಹೇಳಲಾರೆ.
ಹಿಂದಿ ಮೂಲ: ಸಂತೋಷ್ ಸುಪೇಕರ್
ಕನ್ನಡಕ್ಕೆ: ಡಿ.ಎನ್. ಶ್ರೀನಾಥ್