ಆ ಪಕ್ಕದ ಮನೆಯವರನ್ನು ಕಂಡರೆ ಇತ್ತಿತ್ತಲಾಗಿ ನನಗೆ ಸಿಟ್ಟು ಬರ್ತಾ ಇದೆ. ಯಾಕೆಂದರೆ ಹೊತ್ತಲ್ಲದ ಹೊತ್ತಲ್ಲಿ ಬಂದು ‘ಅಕ್ಕ ಸ್ವಲ್ಪ ಚಹಾಪುಡಿ ಕೊಡ್ತೀರಾ? ಮುಗಿದೇ ಹೋಗಿದೆ, ನೋಡಲಿಲ್ಲ.’
‘ಸ್ವಲ್ಪ ಕತ್ತರಿ ಕೊಡ್ತೀರಾ? ನನ್ನ ಕತ್ತರಿ ಹರಿತಾನೆ ಇಲ್ಲ. ಪೇಪರ್ ಓದಿ ಕೊಡ್ತೀನಿ, ನೀವೇನೂ ಈಗ ಓದಲ್ವಲ್ಲಾ. ಸುಧಾ ಪತ್ರಿಕೆ ತಂದಿದೀರಾ?’
ಒಟ್ಟಿನಲ್ಲಿ ಒಂದಲ್ಲ ಒಂದು ಬೇಡಿಕೆಗಳು. ಮೊದಮೊದಲು ಪಾಪ ಅಂತ ಕೊಟ್ಟುಬಿಡುತ್ತಿದ್ದೆ. ಇತ್ತಿತ್ತಲಾಗಿ ಯಾಕೋ ಸಿಟ್ಟು ಬರುತ್ತಿದೆ. ಯಾಕಾದರೂ ಬರುತ್ತಾಳೋ? – ಎಂದೆನಿಸುತ್ತದೆ.
ಈವತ್ತು ಬೆಳಗಿನಿಂದ ಎರಡು ಸಲ ಬಾಗಿಲು ತಟ್ಟಿದಳು.
ನನಗೂ ಅಸಹನೆ; ಬಾಗಿಲು ತೆರೆಯಲೇ ಇಲ್ಲ. ಮೂರನೇಸಲ ಬಾಗಿಲು ಬಡಿದಳು. ಉಹೂಂ, ನಾನು ತೆಗೆಯಲಿಲ್ಲ.
ನಮ್ಮ ಆಚೆಮನೆ ಸಾವಿತ್ರಿ ಕರೆದಳು. ಏನ್ ಕೇಳ್ತಾಳೋ? – ಎಂದು ಕಿವಿ ಗೋಡೆಗೆ ಇಟ್ಟು ಆಲಿಸುತ್ತಾ ಕಿಟಕಿಯಲ್ಲಿ ಕಣ್ಣು ಕಿರಿದಾಗಿಸಿದೆ.
‘ಕುಸುಮಕ್ಕ ಇಲ್ಲ ಎಂದು ಕಾಣುತ್ತದೆ. ಎಷ್ಟೇ ಬಾಗಿಲು ಬಡಿದರೂ ತೆಗೆಯುತ್ತಿಲ್ಲ. ಹಳ್ಳಿಯಿಂದ ನಮ್ಮತ್ತೆ ಬಂದಿದ್ದರು; ಹಲಸಿನ ತೊಳೆ ತಂದಿದ್ದರು. ತುಂಬಾ ಚೆನ್ನಾಗಿದೆ. ಅಕ್ಕನಿಗೆ ಕೊಡೋಣ ಎಂದು ಮೂರು ಸಲ ಬಾಗಿಲು ತಟ್ಟಿದೆ, ತೆಗೆಯಲಿಲ್ಲ. ಎಲ್ಲೋ ಹೊರಗಡೆ ಹೋಗಿದ್ದಾರೆ ಎಂದು ಕಾಣುತ್ತದೆ. ಇಟ್ಟರೆ ಹಾಳಾಗಿ ಬಿಡುತ್ತದೆ. ನೀವು ತೆಗೆದುಕೊಳ್ಳಿ’ ಎಂದು ಸಾವಿತ್ರಿಗೆ ಬಂಗಾರಬಣ್ಣದ ಹಳದಿ ಹಳದಿ ಹಲಸಿನ ತೊಳೆಗಳನ್ನು ಬಟ್ಟಲು ತುಂಬಿ ಕೊಟ್ಟಾಗ ಹೊಟ್ಟೆಯಲ್ಲಿ ಹುಣಸೆಹಣ್ಣು ಕಿವುಚಿದಂತೆ ಆಯಿತು.