ನನ್ನಂತಹವಳಿಗೆ ಯಾವ ಊರಿನ ಅರಮನೆಯಾದರೇನು? ಜೀವನದಲ್ಲಿ ವ್ಯತ್ಯಾಸವೇನೂ ಆಗುವುದಿಲ್ಲವಷ್ಟೆ? ನನ್ನ ಬದುಕಿನಲ್ಲೂ ಬದಲಾವಣೆಯೇನೂ ಆಗಲಿಲ್ಲ. ಹಿಂದೆ ರಾಜಕುಮಾರಿಯಾಗಿದ್ದು ಈಗ ರಾಣಿಯೆನಿಸಿದ ಅಂಬಿಕೆಯ ಪರಿಚರ್ಯೆಯಲ್ಲಿ ದಿನಗಳು ಸಾಗುತ್ತಿದ್ದವು. ಹಸ್ತಿನಾವತಿಯ ಮಹಾರಾಜ ವಿಚಿತ್ರವೀರ್ಯನ ಕೈಹಿಡಿದ ಕುಮಾರಿಯರಿಬ್ಬರೂ ಸುಖವಾಗಿ ಇದ್ದರು ಎನ್ನಬಹುದು. ಮಹಾರಾಜ ಅವರ ಅಂತಃಪುರವನ್ನು ಬಿಟ್ಟು ಹೊರಗೆ ಹೋಗುತ್ತಲೇ ಇರಲಿಲ್ಲ. ಹಗಲಿರುಳು ಅಲ್ಲಿಯೇ ಇರುತ್ತಿದ್ದ. ತನ್ನ ಮಡದಿಯರ ಚೆಲುವಿಗೆ ಮರುಳಾಗಿದ್ದನೋ ಅಥವಾ ಅವನ ಸ್ವಭಾವವೇ ಹಾಗಿತ್ತೋ ಹೇಳುವುದು ಕಷ್ಟ.
ನನಗೆ ಹೆಸರಿಲ್ಲ.
ಹೆಸರಿಲ್ಲ ಎಂದರೆ ಹೆತ್ತವರು ಕರೆಯುವುದಕ್ಕಾದರೂ ಒಂದು ಹೆಸರಿಡಲಿಲ್ಲವೋ ಅಥವಾ ಅವರಿಗೆ ಅದರ ಅಗತ್ಯವೇ ಕಾಣಿಸಲಿಲ್ಲವೊ ಗೊತ್ತಿಲ್ಲ. ಹೆತ್ತವರಿಗೆ ಮಗಳೇ ಅಂದರೂ ಸಾಕಾಗುತ್ತದೆ. ಅಥವಾ ಹೆಸರಿದಿಟ್ಟಿದ್ದರೂ, ನನ್ನ ಕಥೆ ಹೇಳಿದವರಿಗೆ ಅದು ಮರೆತಿದ್ದರೂ ಇರಬಹುದು. ಅವರಿಗೂ ಎಷ್ಟು ಹೆಸರುಗಳನ್ನು ನೆನಪಿಟ್ಟುಕೊಳ್ಳಲಾದೀತು? ಕಥೆ ದೊಡ್ಡದು. ನಾನು ಸಣ್ಣವಳು ಅಲ್ಲವೆ?
ತುಂಬಾ ಹೆಸರು ಮಾಡಿದ ದೊಡ್ಡವರ ಮಧ್ಯೆ ನನ್ನಂತಹವಳಿಗೆ ಹೆಸರಾದರೂ ಯಾಕೆ ಬೇಕು?
ಹಾಗಾಗಿ ನಾನು ಅನಾಮಿಕಾ.
ನಾನು ದಾಸಿ. ನನ್ನನ್ನು ದಾಸಿ ಎಂದೇ ಎಲ್ಲರೂ ಕರೆಯುತ್ತಿದ್ದರು. ಸಣ್ಣವಳಿದ್ದಾಗ ದಾಸೀಪುತ್ರಿ ಎನ್ನುತ್ತಿದ್ದರು. ಬೆಳೆದ ಮೇಲೆ ಪುತ್ರಿ ಎಂಬುದು ಬಿಟ್ಟುಹೋಯಿತು. ಆಮೇಲೆ ಹೆಸರು ಬೇಕು ಎಂದು ನನಗೂ ಅನಿಸಲಿಲ್ಲ. ಅನಿಸಿದರೂ ಸ್ವಂತ ಅಸ್ತಿತ್ವವೇ ಇಲ್ಲದವಳನ್ನು ಹೆಸರಿಟ್ಟು ಕರೆಯುವುದಕ್ಕೆ ಯಾರು ಮನಸ್ಸು ಮಾಡುತ್ತಾರೆ?
ನನ್ನ ನೆನಪು ಬಲಿಯುವುದಕ್ಕೆ ತೊಡಗಿದಲ್ಲಿಂದ ನಾನು ಕಾಶೀ ರಾಜಕುಮಾರಿ ಅಂಬಿಕೆಯ ದಾಸಿಯಾಗಿ ಇದ್ದವಳು. ಮೊದಲು ಕಾಶಿಯ ಅರಮನೆ. ಆ ಬಳಿಕ ಹಸ್ತಿನಾವತಿ.
ನಮ್ಮಂತಹವರಿಗೆ ಒಂದು ಅನುಕೂಲವುಂಟು.
ನಾವು ಹೊಕ್ಕದ್ದೇ ನಮ್ಮ ಮನೆಯಾಗುತ್ತದೆ.
ಅರಮನೆಯೂ ಆಗುತ್ತದೆ. ಹೀಗೆ ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದವಳು ನಾನು. ಆದುದರಿಂದ ಎಲ್ಲವೂ ನನ್ನದೇ. ಅಥವಾ ಯಾವುದೂ ನನ್ನದಲ್ಲ. ರಾಜಕುಮಾರಿಗೆ ಏನು ಬೇಕೋ ಆ ಸೇವೆಯನ್ನು ಒದಗಿಸುವುದು, ಅವಳ ಸೇವೆಯಲ್ಲಿಯೇ ಸಂತೋಷವನ್ನು ಕಾಣುವುದು ನನ್ನ ಸ್ವಭಾವವೇ ಆಗಿಹೋಯಿತು.
ಕಾಶಿಯಲ್ಲಿ ಅರಸ ಪ್ರತಾಪ ಸೇನ ಸ್ವಯಂವರ ಏರ್ಪಡಿಸಿದ. ತನ್ನ ಮಕ್ಕಳಾದ ಅಂಬೆ, ಅಂಬಿಕೆ, ಅಂಬಾಲಿಕೆಯರಿಗೆ ವಿವಾಹ ಮಾಡುವುದು ಅವನ ಉದ್ದೇಶವಾಗಿತ್ತು. ಅದಕ್ಕಾಗಿ ಒಂದು ಪಣವನ್ನೂ ಇಟ್ಟ. ಬಂದ ರಾಜಕುಮಾರರು, ರಾಜರು ಹೋರಾಟ ಮಾಡಬೇಕು, ಅದರಲ್ಲಿ ಗೆದ್ದವರಿಗೆ ಮೂವರೂ ಕುಮಾರಿಯರನ್ನು ವಿವಾಹ ಮಾಡುವುದು ಎಂದು ಘೋಷಿಸಿದ. ಇದೆಂತಹ ಸ್ವಯಂವರವೊ ನನಗೆ ಅರ್ಥವಾಗಲಿಲ್ಲ. ನನ್ನ ಮಾತು ಕೇಳುವವರು ಯಾರು? ಸ್ವಯಂವರ ನಡೆಯಿತು. ಆದರೆ ಅದು ಅವನು ಅಪೇಕ್ಷಿಸಿದಂತೆ ಈಡೇರಲಿಲ್ಲ. ಹೇಳಿಕೆಯಿಲ್ಲದಿದ್ದರೂ ಅಲ್ಲಿಗೆ ಸೌಭದ ದೊರೆ ಸಾಲ್ವ ಬಂದ. ಹಸ್ತಿನಾವತಿಯ ಭೀಷ್ಮನೂ ಬಂದ. ಏನೇನೋ ಆಗಿಹೋಯಿತು. ಭೀಷ್ಮ ಮೂವರು ಕುಮಾರಿಯರನ್ನೂ ಹಸ್ತಿನಾವತಿಗೆ ಒಯ್ದ. ಅಂಬಿಕೆ ಅಂಬಾಲಿಕೆಯರ ಜತೆ ನಾನು ಹಸ್ತಿನಾವತಿ ಅರಮನೆಯನ್ನು ಸೇರಿಕೊಂಡೆ. ಹಿರಿಯವಳಾದ ಅಂಬೆ ಮಾತ್ರ ಸಾಲ್ವನನ್ನು ಮದುವೆಯಾಗುತ್ತೇನೆ ಅಂತ ಹೊರಟು ದಿಕ್ಕಿಲ್ಲದ ಅನಾಥಳಂತೆ ಆದಳು.
ನಾನು ಹಸ್ತಿನಾವತಿಯ ಅರಮನೆಗೆ ಬಂದೆ.
ನನ್ನಂತಹವಳಿಗೆ ಯಾವ ಊರಿನ ಅರಮನೆಯಾದರೇನು? ಜೀವನದಲ್ಲಿ ವ್ಯತ್ಯಾಸವೇನೂ ಆಗುವುದಿಲ್ಲವಷ್ಟೆ? ನನ್ನ ಬದುಕಿನಲ್ಲೂ ಬದಲಾವಣೆಯೇನೂ ಆಗಲಿಲ್ಲ. ಹಿಂದೆ ರಾಜಕುಮಾರಿಯಾಗಿದ್ದು ಈಗ ರಾಣಿಯೆನಿಸಿದ ಅಂಬಿಕೆಯ ಪರಿಚರ್ಯೆಯಲ್ಲಿ ದಿನಗಳು ಸಾಗುತ್ತಿದ್ದವು. ಹಸ್ತಿನಾವತಿಯ ಮಹಾರಾಜ ವಿಚಿತ್ರವೀರ್ಯನ ಕೈಹಿಡಿದ ಕುಮಾರಿಯರಿಬ್ಬರೂ ಸುಖವಾಗಿ ಇದ್ದರು ಎನ್ನಬಹುದು. ಮಹಾರಾಜ ಅವರ ಅಂತಃಪುರವನ್ನು ಬಿಟ್ಟು ಹೊರಗೆ ಹೋಗುತ್ತಲೇ ಇರಲಿಲ್ಲ. ಹಗಲಿರುಳು ಅಲ್ಲಿಯೇ ಇರುತ್ತಿದ್ದ. ತನ್ನ ಮಡದಿಯರ ಚೆಲುವಿಗೆ ಮರುಳಾಗಿದ್ದನೋ ಅಥವಾ ಅವನ ಸ್ವಭಾವವೇ ಹಾಗಿತ್ತೋ ಹೇಳುವುದು ಕಷ್ಟ. ಅಂತೂ ಅವರಿಬ್ಬರ ಸಾಮೀಪ್ಯದಲ್ಲಿ ಅವನು ಅತ್ಯಾನಂದವನ್ನು ಅನುಭವಿಸುತ್ತಿದ್ದ. ಮಹಾರಾಜ ತಮ್ಮ ಸುತ್ತಲೇ ಸುತ್ತುತ್ತಿರುವುದು ರಾಣಿಯರಿಗೂ ಹಿತವೆನಿಸಿರಬಹುದು. ಆದುದರಿಂದ ಅವರು ಸುಖವಾಗಿಯೇ ಇದ್ದರು ಎನ್ನೋಣ.
ಆದರೆ ಅರಸನ ಈ ಪ್ರವೃತ್ತಿಯಿಂದಾಗಿ ರಾಜಕಾರ್ಯಗಳಲ್ಲಿ ವ್ಯತ್ಯಯವಾಗತೊಡಗಿತು. ಮಂತ್ರಿಗಳು ಹಳಬರು, ಅನುಭವಿಗಳು. ಸರಿದೂಗಿಸಿಕೊಂಡು ಹೋಗುವ ಪ್ರಯತ್ನವನ್ನು ಮಾಡುತ್ತಿದ್ದರು. ಆದರೆ ರಾಜನೇ ಮಾಡಬೇಕಾದ ಮುಖ್ಯ ಕಾರ್ಯಗಳನ್ನು ಮಂತ್ರಿಗಳು ಮಾಡಲಾಗದು ತಾನೆ? ಆಡಳಿತದಲ್ಲಿ ಅದೊಂದು ತೊಡಕಾಗಿ ಪರಿಣಮಿಸಿದಂತೆ ತೋರುತ್ತದೆ. ಈ ವಿಚಾರದಲ್ಲಿ ಪುರಪ್ರಮುಖರು, ಹಿರಿಯರು ಚಿಂತಿತರಾದರು. ಹಸ್ತಿನಾವತಿಯ ಸಂಧಿ ವಿಗ್ರಹಿಯಾಗಿ, ಸಿಂಹಾಸನದ ಕ್ಷೇಮದ ಹೊಣೆಯನ್ನು ಹೊತ್ತ ಆಚಾರ್ಯ ಭೀಷ್ಮರು ಮಾತ್ರ ಈ ಕುರಿತು ವಿಶೇಷ ಲಕ್ಷ÷್ಯವನ್ನು ವಹಿಸಲಿಲ್ಲ. ತಮ್ಮನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ಅಭಿಷೇಕ ಮಾಡಿ ಆಗಿದೆ. ಯೋಗ್ಯ ಕನ್ಯೆಯರನ್ನು ತಂದು ವಿವಾಹವನ್ನೂ ಮಾಡಿ ಆಗಿದೆ. ಇನ್ನು ತಾನು ನಿವೃತ್ತನಾಗುವುದು ಸರಿ ಎಂದು ಭಾವಿಸಿದಂತೆ ಕಾಣುತ್ತಿತ್ತು. ಬ್ರಹ್ಮಚಾರಿಯಾಗಿದ್ದ ಅವರಿಗೆ ಹೀಗೆ ವೈರಾಗ್ಯ ಭಾವನೆ ಬಂದಿದ್ದರೆ ಅದು ಸಹಜ. ಪ್ರತಿಯೊಬ್ಬನ ಜೀವನದಲ್ಲಿಯೂ ಅವರೇಕೆ ಕೈ ಹಾಕಬೇಕು? ಆದುದರಿಂದ ಮಹಾರಾಜನ ಈ ಪತ್ನೀ ವ್ಯಾಮೋಹಕ್ಕೆ ಅವರು ಗಮನವನ್ನೇ ಕೊಡಲಿಲ್ಲ.
ರಾಜ್ಯಾಡಳಿತ ಹೇಗೇ ಇದ್ದರೂ, ವಿಚಿತ್ರವೀರ್ಯ ಮಹಾರಾಜನ ಈ ಪ್ರವೃತ್ತಿಯು ಸ್ವಯಂ ಅವನ ಆರೋಗ್ಯವು ಕೆಡುವುದಕ್ಕೆ ಕಾರಣವಾಯಿತು. ಅತಿರೇಕ ಭೋಗದಿಂದ ದೇಹವು ದಣಿಯಿತು. ದೇಹ ದಣಿಯಿತು ಆದರೆ ಮನಸ್ಸು ತಣಿಯಲಿಲ್ಲ. ಸುಖವೆಂದರೆ ಹಾಗೆಯೇ ಅಲ್ಲವೆ? ಅನುಭವಿಸಿದಷ್ಟೂ ತೃಪ್ತಿಯಿಲ್ಲ. ಇನ್ನೂ ಬೇಕು ಎನ್ನುವುದು ಮನಸ್ಸಿನ ಗುಣ. ಈ ಲಾಲಸೆಯಿಂದ ದೇಹದ ಮೇಲೆ ಉಂಟಾದ ಪರಿಣಾಮವನ್ನು ಮಹಾರಾಜ ನಿರ್ಲಕ್ಷಿಸಿದ. ರಾಣಿಯರ ಮೇಲಣ ಮೋಹ, ಅತಿಸುಖದ ಬಯಕೆ ರೋಗಕ್ಕೆ ಕಾರಣವಾಯಿತು. ಯಾವ ವೈದ್ಯರಿಂದಲೂ ಗುಣಪಡಿಸಲಾಗದ ರೋಗದಿಂದ ಅವನು ಬಳಲಿದ; ನರಳಿದ. ಕೆಲವೇ ದಿನಗಳಲ್ಲಿ ರೋಗ ಮತ್ತೂ ವಿಷಮಿಸಿತು. ವೈದ್ಯೋಪಚಾರ ಫಲ ಕೊಡಲಿಲ್ಲ. ಕೊನೆಗೆ ಅವನು ಮೃತ್ಯುವಶನಾದ. ಸಿಂಹಾಸನ ಬರಿದಾಯಿತು. ರಾಜ್ಯ ಅರಾಜಕವಾಯಿತು. ವಿಚಿತ್ರವೀರ್ಯ ಅರಸನಾಗುವ ಪೂರ್ವದಲ್ಲಿಯೇ ಅವನ ಅಣ್ಣ ಚಿತ್ರಾಂಗದನು ಸಿಂಹಾಸನ ಏರಿದ್ದ. ಆದರೆ ಅವನ ಹೆಸರಿನ ಗಂಧರ್ವನೊಬ್ಬನ ಜತೆ ವಿವಾದ ಉಂಟಾಯಿತು. ಅವರಿಬ್ಬರು ಪರಸ್ಪರ ಕಾದಾಡಿದರು. ಆ ಯುದ್ಧದಲ್ಲಿ ಚಿತ್ರಾಂಗದ ಹತನಾದ. ಬಳಿಕ ಅರಸನಾದ ವಿಚಿತ್ರವೀರ್ಯನ ಕಥೆ ಹೀಗಾಯಿತು. ಪರಿಣಾಮವಾಗಿ ಹಸ್ತಿನಾವತಿಯ ಸಿಂಹಾಸನಕ್ಕೆ ಉತ್ತರಾಧಿಕಾರಿಗಳಿಲ್ಲದ ಪರಿಸ್ಥಿತಿ ಬಂತು.
ಇಲ್ಲಿಯವರೆಗೆ ನಿರ್ಲಿಪ್ತರಾಗಿದ್ದ ಭೀಷ್ಮರಿಗೂ ಚಿಂತೆಯಾಯಿತು. ಅವರಿಂದಲೂ ಹೆಚ್ಚು ಚಿಂತೆಗೊಳಗಾದವರು ರಾಜಮಾತೆಯಾಗಿದ್ದ ಸತ್ಯವತೀ ದೇವಿ. ತನ್ನ ಇಬ್ಬರು ಮಕ್ಕಳೂ ಮೃತ್ಯುವಶರಾದ ದುಃಖ ಒಂದಾದರೆ, ರಾಜ್ಯದ ಅನಾಥ ಸ್ಥಿತಿ ಇನ್ನೊಂದು. ಈ ಚಿಂತೆಗೆ ಪರಿಹಾರವೆಲ್ಲಿ? ಉತ್ತರಾಧಿಕಾರಿಗಳನ್ನು ಪಡೆಯುವುದಕ್ಕೆ ಇದ್ದ ಒಂದೇ ದಾರಿ ರಾಣಿಯರಿಗೆ ನಿಯೋಗ ಪದ್ಧತಿಯಿಂದ ಸಂತಾನಪ್ರಾಪ್ತಿ. ನಿಯೋಗವೆಂದರೆ ಯೋಗ್ಯನಾದ ಒಬ್ಬ ಪುರುಷನಿಂದ ಶಾಸ್ತç ವಿಧಾನದಂತೆ ಸಂತಾನವನ್ನು ಪಡೆಯುವುದು. ಯಾರು ನಿಯೋಗ ಮಾಡುವವರು? ಪ್ರಾಜ್ಞರಾದ ಶಾಸ್ತçಕಾರರಲ್ಲಿ ಕೇಳಿದಾಗ ಭೀಷ್ಮರ ಹೆಸರು ಕೇಳಿ ಬಂತು. ಸಮರ್ಥರೂ, ಕುಟುಂಬದ ಹಿರಿಯರೂ ಆದ ಭೀಷ್ಮರು ಸಂತಾನಕ್ಕಾಗಿ ನಿಯೋಗಕ್ಕೆ ಅರ್ಹರು ಎಂದಾಯಿತು. ಈ ವಿಚಾರದಲ್ಲಿ ಬಹುಶಃ ರಾಣಿಯರೂ ಉತ್ಸುಕರೇ ಇದ್ದರು. ಸತ್ಯವತೀ ದೇವಿಯವರು ಭೀಷ್ಮರನ್ನು ಇದಕ್ಕೆ ಒಪ್ಪಿಸುವುದಕ್ಕೆ ಯತ್ನಿಸಿದರು. ಆದರೆ ಭೀಷ್ಮರು ನಿರಾಕರಿಸಿದರು. ತಾನು ಬ್ರಹ್ಮಚರ್ಯೆಯ ಪ್ರತಿಜ್ಞೆ ಮಾಡಿರುವುದರಿಂದ ನಿಯೋಗಕ್ಕೆ ಸಮ್ಮತಿಸಲಾರೆ ಎಂದುಬಿಟ್ಟರು. ಅದನ್ನು ತಪ್ಪು ಎನ್ನಲಾದೀತೆ?
ಸತ್ಯವತೀ ದೇವಿಯವರಿಗೆ ಬೇರೆ ದಾರಿ ಹುಡುಕುವುದು ಅನಿವಾರ್ಯವಾಯಿತು.
ಏನು ಬೇರೆ ದಾರಿ?
ಅವರು ಶಂತನು ಚಕ್ರವರ್ತಿಗಳನ್ನು ವಿವಾಹವಾಗುವ ಮೊದಲೇ ಮಹರ್ಷಿ ಪರಾಶರರನ್ನು ಕೂಡಿ, ಕೃಷ್ಣ ದ್ವೆöÊಪಾಯನ ಎಂಬ ಪುತ್ರನನ್ನು ಪಡೆದಿದ್ದರಂತೆ. ಈಗ ಅವರನ್ನು ಕರೆಯಿಸಿ ನಿಯೋಗ ಮಾಡುವಂತೆ ವಿನಂತಿಸುವುದು ಎಂದಾಯಿತು. ಇದಕ್ಕೆ ಎಲ್ಲರೂ ಒಪ್ಪಿದರು. ಸತ್ಯವತೀ ದೇವಿಯವರ ಕರೆಗೆ ಓಗೊಟ್ಟು ಕೃಷ್ಣ ದ್ವೆöÊಪಾಯನರೂ ಬಂದರು. ನಿಯೋಗಕ್ಕೆ ಸಮ್ಮತಿಸಿದರು. ಅವರನ್ನು ಕಂಡಾಗ ನಾನು ಪರವಶಳಾದೆ. ಕೃಷ್ಣ ದ್ವೆöÊಪಾಯನರಿಗೆ ‘ವ್ಯಾಸ’ ಎಂದೂ ಪ್ರಸಿದ್ಧಿಯಿತ್ತು. ವೇದವನ್ನು ವಿಭಾಗ ಮಾಡಿದವರಂತೆ. ಮಹಾ ತಪಸ್ವಿ ಅವರು.
ಅವರ ಜ್ಞಾನದ ಕುರಿತು, ದೈವಿಕ ಶಕ್ತಿಯ ಕುರಿತು ಬಹಳ ಮಂದಿ ಮಾತನಾಡಿಕೊಳ್ಳುವುದನ್ನು ನಾನು ಕೇಳಿದ್ದೆ. ಹೀಗಾಗಿ ಅವರನ್ನು ನೋಡುವ ಮುನ್ನವೇ ಅವರ ಬಗೆಗೆ ಗೌರವವನ್ನು ಬೆಳೆಸಿಕೊಂಡಿದ್ದೆ. ಅಂತಹ ವಿಶೇಷ ವ್ಯಕ್ತಿ ಅರಮನೆಗೆ ಬಂದಾಗ ಅವರ ಸೇವೆ ಮಾಡುವಲ್ಲಿ ನನಗೆ ವಿಶೇಷ ಆಸ್ಥೆಯಿತ್ತು. ಭಯಭಕ್ತಿಗಳಿಂದ ಅವರನ್ನು ಉಪಚರಿಸಿದೆ. ಅವರಿಗೆ ಆಸಕ್ತಿ ಇತ್ತು ಎಂಬುದರಿAದ ಅಲ್ಲ. ನನಗೆ ಶ್ರದ್ಧೆಯಿತ್ತು ಎಂಬುದರಿಂದ.
ಅವರು ಸುಪ್ರೀತರಾದರು ಎನ್ನಲಾರೆ. ಆದರೆ ಅಸಮಾಧಾನವಾಗಲಿಲ್ಲ ಎಂದು ಗ್ರಹಿಸಿದೆ.
ನಿಯೋಗದ ಪದ್ಧತಿಯ ಪ್ರಕಾರ ಮೊದಲ ಸರದಿ ಹಿರಿಯವಳಾದ ಅಂಬಿಕೆಯದು. ಅವಳನ್ನು ಅಲಂಕರಿಸಿ, ವ್ಯಾಸರ ಸಮೀಪಕ್ಕೆ ಕರೆದೊಯ್ಯಬೇಕಿತ್ತು. ಅವಳು ಅದುವರೆಗೆ ಅವರನ್ನು ನೋಡಿರಲಿಲ್ಲ. ಸತ್ಯವತಿಯ ಪುತ್ರ ಎಂದಷ್ಟೇ ತಿಳಿದಿದ್ದಳು. ಭೀಷ್ಮರಂತೆ ಇರಬಹುದು ಎಂದು ತಿಳಿದಳೋ ಅಥವಾ ಭೀಷ್ಮರೇ ಎಂದುಕೊಂಡಳೋ ಗೊತ್ತಿಲ್ಲ. ಅವರ ಜಟೆ, ಕೃಶಕಾಯ, ಕೆಂಪಾದ ಕಣ್ಣುಗಳು, ನೀಳವಾದ ಗಡ್ಡ ಇದನ್ನೆಲ್ಲ ನೋಡಿದೊಡನೆ ಹೆದರಿದಳಂತೆ. ಹೆದರಿಕೊಂಡು ಕಣ್ಣುಗಳನ್ನು ಮುಚ್ಚಿಕೊಂಡಳಂತೆ. ಆಮೇಲೆ ಅವಳೇ ನನ್ನಲ್ಲಿ ಹೇಳಿಕೊಂಡಳು. ಕಣ್ಣುಗಳನ್ನು ಮುಚ್ಚಿದ್ದು ಕಾರಣವಾಗಿ ಹುಟ್ಟುವ ಮಗು ಅಂಧನಾಗಿರುತ್ತದೆ ಎಂದರAತೆ ವ್ಯಾಸರು. ಸತ್ಸಂತಾನವನ್ನು ಪಡೆಯುವ ಮೊದಲ ಉದ್ದೇಶ ಹೀಗೆ ವಿಫಲವಾಯಿತು.
ಆಮೇಲೆ ಎರಡನೆಯ ರಾಣಿ ಅಂಬಾಲಿಕೆಯನ್ನು ನಿಯೋಗಕ್ಕೆ ಒಪ್ಪಿಸಿದರು. ಅವಳಿಗೂ ವ್ಯಾಸರ ಕುರಿತು ಅಂಜಿಕೆಯಂತೆ. ಆದರೆ ನಿರ್ವಾಹವಿಲ್ಲ. ಅವರ ಸಮೀಪಕ್ಕೆ ಹೋದಳು. ಭಯವಿತ್ತು. ಆದರೆ ಕಣ್ಣು ಮುಚ್ಚಿಕೊಳ್ಳಲಿಲ್ಲ. ಹುಟ್ಟುವ ಮಗು ಕುರುಡಾಗಬೇಕು ಎಂದು ಯಾವ ತಾಯಿ ಬಯಸುತ್ತಾಳೆ? ಕಣ್ಣು ಮುಚ್ಚಲಿಲ್ಲ, ನಿಜ. ಆದರೆ ಅಂಜಿಕೆಯಾಗದಿರುತ್ತದೆಯೆ? ಈ ಅಂಜಿಕೆಯಿಂದಾಗಿ ಅವಳು ಬಿಳಿಚಿಕೊಂಡಿದ್ದಳಂತೆ. ನಿಯೋಗವಾಯಿತು. ಆದರೆ ಹುಟ್ಟುವ ಮಗುವಿಗೆ ಪಾಂಡು ರೋಗ. ಅಂದರೆ ಮೈಯೆಲ್ಲ ಬಿಳಿಚಿಕೊಂಡಿರುವುದಂತೆ. ಎರಡು ನಿಯೋಗಗಳ ಕಥೆಯೂ ಹೀಗಾಯಿತು. ಹಾಗಿದ್ದರೆ ಮುಂದೇನು ಅಂತ ರಾಜಮಾತೆಗೆ ಮತ್ತೆ ಚಿಂತೆ ಆವರಿಸಿತು. ಅದಕ್ಕಿದ್ದ ಪರಿಹಾರ ಒಂದೇ. ಮತ್ತೊಮ್ಮೆ ಅಂಬಿಕೆಯನ್ನು ನಿಯೋಗಕ್ಕೆ ಒಪ್ಪಿಸುವುದು.
ವ್ಯಾಸರೇನೋ ತಾಯಿಯ ಮಾತಿಗೆ ಮಣಿದು ಒಪ್ಪಿದರು. ಆದರೆ ಅಂಬಿಕೆ? ಅವಳಿಗೆ ಮೊದಲ ಬಾರಿಯೇ ಈ ನಿಯೋಗದ ಕುರಿತು ಅಸಹ್ಯಭಾವ ಉಂಟಾಗಿತ್ತು. ಇನ್ನು ಮತ್ತೊಮ್ಮೆ ಅದಕ್ಕಾಗಿ ವ್ಯಾಸರನ್ನು ಸಮೀಪಿಸುವುದೆಂದರೆ ಅವಳಿಗೆ ಅದು ಪ್ರಿಯವೆನಿಸುವುದಿರಲಿ, ತಿರಸ್ಕಾರವೇ ಇತ್ತು. ಆದರೆ ರಾಜಮಾತೆಯ ಮಾತಿಗೆ ಎದುರಾಡಿಯಾಳು ಹೇಗೆ? ಹಾಗಾಗಿ ಸಮ್ಮತಿಸಿದಳು. ಸುಕೋಮಲೆಯಾದ ಮಹಾರಾಣಿ ಈ ಒರಟು ತಪಸ್ವಿಯನ್ನು ಮತ್ತೊಮ್ಮೆ ಸ್ವೀಕರಿಸಲು ಸಿದ್ಧಳಾಗಲಿಲ್ಲ. ನಿರಾಕರಿಸುವ ಪರಿಸ್ಥಿತಿಯೂ ಇರಲಿಲ್ಲ. ಹಾಗಾಗಿ ಅಂಬಿಕೆ ಒಂದು ಉಪಾಯ ಮಾಡಿದಳು. ಹೆಚ್ಚುಕಡಮೆ ಅವಳದೇ ವಯಸ್ಸಿನವಳು ನಾನು. ನನ್ನನ್ನು ತನ್ನ ಬದಲಿಗೆ ನಿಯೋಗಕ್ಕಾಗಿ ಕಳುಹಿಸುವುದು ಅವಳ ಉಪಾಯ. ನಾನೂ ಒಪ್ಪಿದೆ. ಮಹಾರಾಣಿಯ ಮಾತನ್ನು ದಾಸಿಯೊಬ್ಬಳು ಉಲ್ಲಂಘಿಸಬಹುದೆ? ಅಲ್ಲದೆ ಇದಕ್ಕೆ ಒಪ್ಪುವುದಕ್ಕೆ ನನಗೆ ಇನ್ನೊಂದು ಕಾರಣವೂ ಇತ್ತು. ನಾನು ವ್ಯಾಸರ ಕುರಿತು ಬಹಳ ಗೌರವವಿತ್ತು. ಅವರ ಸಾಧನೆ-ಸಿದ್ಧಿಗಳ ಕುರಿತು ಕೇಳಿ ಅಭಿಮಾನವನ್ನು ಬೆಳೆಸಿಕೊಂಡಿದ್ದೆ. ಅಂತಹ ವಿಶಿಷ್ಟ ವರ್ಚಸ್ಸಿನ ಮಹಾತ್ಮರು ಸಂತಾನವನ್ನು ಕರುಣಿಸುವಾಗ ಅದೊಂದು ಸುಯೋಗವೆಂದೇ ತಿಳಿಯಬೇಕು. ನಾನೂ ಹಾಗೆಯೇ ಭಾವಿಸಿದೆ. ನಿಯೋಗಕ್ಕೆ ಸಿದ್ಧಳಾದೆ.
ಮಹಾರಾಣಿ ತನ್ನ ಬದಲಿಗೆ ಹೋಗುವವಳು ದಾಸಿ ಎಂದು ತಿಳಿಯದಂತೆ ನನ್ನನ್ನು ಅಲಂಕರಿಸಿಕೊಳ್ಳುವುದಕ್ಕೆ ಹೇಳಿದಳು. ಕತ್ತಲಿನಲ್ಲಿ ಬಂದವಳು ರಾಣಿಯೇ ಇರಬಹುದೆಂದು ಮಹರ್ಷಿಗಳು ಭಾವಿಸಿಯಾರು ಎಂದು ಅವಳ ತರ್ಕ. ನನಗೆ ಇದು ನಡೆದೀತು ಎಂದು ತೋರಲಿಲ್ಲ. ಅವರಿಗೆ ಬಂದವಳು ಮಹಾರಾಣಿಯಲ್ಲ ಎಂದು ಗ್ರಹಿಸುವ ಶಕ್ತಿ ಇರಲಾರದೆ? ಹಾಗೆ ಗೊತ್ತಾದಾಗ ಕೋಪಿಸಿಕೊಂಡು ಶಪಿಸಿದರೆ ಎಂಬ ಭಯವೂ ಇತ್ತು. ಆದರೆ ಪ್ರತಿಭಟಿಸಲಾಗದ ಅಸಹಾಯಕತೆಯಲ್ಲಿ ನಾನಿದ್ದೆ. ಅಂತೂ ದಾಸಿಯಾಗಿದ್ದ ನಾನು ಆ ಒಂದು ದಿನದ ಮಟ್ಟಿಗೆ ಮಹಾರಾಣಿಯಾದೆ!
ವ್ಯಾಸರಿದ್ದ ಮಂದಿರವನ್ನು ಸೇರಿದೆ. ನಾನು ಊಹಿಸಿದಂತೆ ಅವರು ಸತ್ಯವನ್ನು ಗ್ರಹಿಸಿದರು. ಆದರೆ ಕೋಪಿಸಿಕೊಳ್ಳಲಿಲ್ಲ. ನನ್ನ ಪರಿಸ್ಥಿತಿ ಅರಿವಾಯಿತೋ ಅಥವಾ ವಿಧಿಯ ವಿಲಾಸವನ್ನು ಒಪ್ಪಿದರೋ ಗೊತ್ತಿಲ್ಲ. ನನ್ನನ್ನು ನಿರಾಕರಿಸಲಿಲ್ಲ. ಅವರನ್ನು ನೋಡಿ ನಾನು ಭಯಗೊಳ್ಳಲಿಲ್ಲ. ಒಂದಿನಿತೂ ಅಂಜಿಕೆಯಿಲ್ಲದೆ ನಾನು ಮಾಡಿದ ಪರಿಚರ್ಯೆಯಿಂದ ವ್ಯಾಸರು ಪರಮ ಹೃಷ್ಟರಾದರು. ನಿಯೋಗವೂ ಪೂರ್ಣವಾಯಿತು. ಬಳಿಕ ನಾನು ಅರಮನೆಗೆ ಹೊರಟು ನಿಂತಾಗ ಅವರೆಂದರು,
“ನೀನು ಮಹಾರಾಣಿ ಹೇಳಿದಂತೆ ಬಂದವಳು ಎಂಬುದನ್ನು ನಾನು ಬಲ್ಲೆ. ಆದರೆ ಅವಳಿಗಿಲ್ಲದ ಭಾಗ್ಯ ನಿನಗೆ ಲಭಿಸಿತು. ನೀನು ಕಂಡವರೆಲ್ಲ ಭೋಗಿಸುವುದಕ್ಕೆ ಇರುವವಳಲ್ಲ. ನಿನ್ನ ಗರ್ಭದಲ್ಲಿ ಪರಮ ಜ್ಞಾನಿಯೂ, ಯೋಗ್ಯತಾವಂತನೂ ಆದ ಸುಪುತ್ರನು ಹುಟ್ಟುತ್ತಾನೆ. ಇನ್ನು ಮುಂದೆ ನೀನು ದಾಸಿಯಲ್ಲ. ದಾಸ್ಯದ ಬಾಧೆ ನಿನಗುಂಟಾಗದಂತೆ ನಡೆಸಿಕೊಳ್ಳುವಂತೆ ರಾಜಮಾತೆಯಲ್ಲಿ ಹೇಳುತ್ತೇನೆ. ಶುಭವಾಗುವುದು. ಹೋಗು” ಎಂದರು. ನಾನು ನನಗೊದಗಿದ ಅನುಗ್ರಹವನ್ನು ನೆನೆಯುತ್ತ ಅರಮನೆಗೆ ಮರಳಿದೆ. ಅಂಬಿಕೆಯಲ್ಲಿ ನಡೆದುದೆಲ್ಲವನ್ನೂ ಬಿತ್ತರಿಸಿದೆ. ವ್ಯಾಸರೂ ತಮ್ಮ ಆಶ್ರಮಕ್ಕೆ ಮರಳಿದರು. ಅವರ ಮಾತಿನಂತೆ ನಾನು ದಾಸಿ ಎಂಬ ಸ್ಥಾನದಿಂದ ಮೇಲಕ್ಕೇರಿದೆ.
ಅಲ್ಲಿಗೆ ನನ್ನ ಜೀವನದ ಒಂದು ಅಧ್ಯಾಯ ಮುಕ್ತಾಯವಾಯಿತು.
ಆದರೆ ಜೀವನ ಮುಗಿಯಲಿಲ್ಲ.
(ಸಶೇಷ)