ಅವನ ಬಳಿ ಸೇರುವ ಮುನ್ನ ಅವನೇ ನನ್ನತ್ತ ಬಂದ. ತಡೆಯುವುದಕ್ಕೆ ಮುಂದಾದ ಅಣ್ಣನನ್ನು ನಯವಾಗಿ ಆದರೆ ದೃಢವಾದ ಹಸ್ತದಿಂದ ಬದಿಗೆ ಸರಿಸಿದ. ನನ್ನೆದುರು ಬಂದು ನಿಂತ. ಮಾಲಿಕೆಯನ್ನು ಹಿಡಿದಿದ್ದ ನನ್ನ ಕೈಗಳೀಗ ಅವನ ಮುಷ್ಟಿಯೊಳಗೆ ಸೇರಿದವು. ಮಾಲೆ ಅವನ ಕೊರಳಲ್ಲಿತ್ತು. ಅವನೇ ಹಾಕಿಕೊಂಡನೋ ಅಥವಾ ನಾನು ಹಾಕಿದೆನೋ ಅರಿವಿಗೆ ಬರಲಿಲ್ಲ. ಮುಂದಿನ ಕ್ಷಣದಲ್ಲಿ ನನ್ನ ಕೈಯನ್ನು ಹಿಡಿದು, ಸಭಾವಲಯವನ್ನು ದಾಟಿಬಿಟ್ಟ.
ಅದೊಂದು ವರ್ತಮಾನ ನನ್ನ ಬದುಕನ್ನು ಬದಲಿಸುವಷ್ಟು ಪರಿಣಾಮಕಾರಿಯಾಗಿತ್ತು. ನನ್ನ ಯೋಚನೆಯ ಅಳವಿಗೆ ಮೀರಿದ್ದೂ ಆಗಿತ್ತು. ನನ್ನ ಅಮ್ಮ ಭಾನುಮತಿಯೇ ತಿಳಿಸಿದ ಸುದ್ದಿ ಅದು. ಮಗಳೇ ಲಕ್ಷಣಾ, ನಿನ್ನ ಅಪ್ಪ ನಿನಗೆ ಸ್ವಯಂವರ ಏರ್ಪಡಿಸುತ್ತಾರಂತೆ. ಸದ್ಯದಲ್ಲೇ ಅದಕ್ಕೆ ಬೇಕಾದ ಸಿದ್ಧತೆಗಳೂ ನಡೆಯುತ್ತವೆ ಎಂದರು ಅಮ್ಮ. ಹೀಗೆ ಹೇಳಿದ ಬಳಿಕ ಅದು ಸತ್ಯವೇ. ನನ್ನ ಮದುವೆಯ ಕುರಿತು ನಾನು ಊಹಿಸಿದ್ದೇ ಬೇರೆ. ಈಗ ನಡೆಯಲಿರುವುದೇ ಬೇರೆ. ಅಪ್ಪನ ಆಪ್ತಮಿತ್ರ ಕರ್ಣನ ಮಕ್ಕಳಲ್ಲಿ ಒಬ್ಬನಿಗೆ ನನ್ನನ್ನು ಕೊಟ್ಟು ಮದುವೆ ಮಾಡುತ್ತಾರೆ ಎಂದು ನಾನು ತರ್ಕಿಸಿದ್ದೆ. ಆದರೆ ಈಗ ಸ್ವಯಂವರ ಏರ್ಪಡಿಸುತ್ತಾರೆ ಎಂದರೆ ಒಂದು ಅನಿರೀಕ್ಷಿತವಾದ ಬೆಳವಣಿಗೆಯೇ ಅದು. ಸ್ವಯಂವರ ಅಂದರೆ ವಧುವಿಗೆ ಸ್ವಾತಂತ್ರ್ಯ ನೀಡಿ, ಬಂದ ರಾಜಕುಮಾರರಲ್ಲಿ ಮೆಚ್ಚುಗೆಯಾದವನ ಕೊರಳಿಗೆ ಮಾಲೆ ತೊಡಿಸಿ ಅವನ ಮಡದಿಯಾಗುವುದು ಒಂದು ವಿಧ. ಇನ್ನೊಂದು ಬಂದವರೊಳಗೆ ಸ್ಪರ್ಧೆ ಏರ್ಪಟ್ಟು ಅವರಲ್ಲಿ ಗೆದ್ದವನನ್ನು ಮದುವೆಯಾಗುವುದು ಇನ್ನೊಂದು. ಇದರಲ್ಲಿ ಏನೋ ಒಂದು ಪಣವನ್ನು ಇಟ್ಟು ಅದರಲ್ಲಿ ಗೆದ್ದವನಿಗೆ ವಧುವನ್ನು ಕೊಡುವುದೂ ಸೇರಿತ್ತು.
ಏನೇ ಇದ್ದರೂ, ಎರಡನೆಯ ವಿಧಾನದಲ್ಲಿ ವಧುವಿಗೆ ಸ್ವಾತಂತ್ರ್ಯ ಏನೇನೂ ಇಲ್ಲ. ಗೆದ್ದವನನ್ನು ಮದುವೆಯಾಗುವುದು ಎಂದರೆ ಅದರಲ್ಲಿ ಆರಿಸುವ ಪ್ರಶ್ನೆಯೇ ಇಲ್ಲವಷ್ಟೆ? ಗೆದ್ದರಾಯಿತು. ಅವನು ತರುಣನೊ, ಮುದುಕನೊ, ರೋಗಿಯೊ, ದುಷ್ಟನೊ ಏನೇ ಆಗಿರಬಹುದು. ಗೆದ್ದ ಮೇಲೆ, ವಧು ಅವನ ಸ್ವತ್ತು. ಇಲ್ಲ, ಇವನು ಬೇಡ ಎನ್ನುವ ಹಾಗಿಲ್ಲ. ಹೇಳಿದರೂ ಯಾರು ಕೇಳುತ್ತಾರೆ? ಸ್ವಯಂವರದಲ್ಲಿ ಬಿಡಿ, ಈಗಲಾದರೂ, ನನ್ನಂತಹ ರಾಜಕನ್ಯೆ, ಅಪ್ಪಾ, ನನಗೆ ಇಂತಹವನು ಮೆಚ್ಚುಗೆಯಾಗಿದ್ದಾನೆ. ಅವನಿಗೆ ಮದುವೆ ಮಾಡಿಕೊಡಿ ಎನ್ನಲಾದೀತೆ? ಅಥವಾ ಓ ಇಂತಹವನ ಕುರಿತು ಕೇಳಿದ್ದೇನೆ. ಅವನು ನನ್ನನ್ನು ಮದುವೆಯಾಗುತ್ತಾನೋ ಎಂದು ಕೇಳಿ ಎಂದು ಹೇಳಬಹುದೆ? ಅದೂ ಬೆಂಕಿಯಂತಹ ನನ್ನ ಅಪ್ಪನಲ್ಲಿ?
ಇಷ್ಟಕ್ಕೂ ನಾನು ಈ ಮೊದಲೇ ನನ್ನ ವರನ ಸ್ಥಾನದಲ್ಲಿ ಯಾರನ್ನಾದರೂ ಕಲ್ಪಿಸಿಕೊಂಡಿದ್ದರೆ ತಾನೇ. ಕಲ್ಪಿಸಬೇಕಾದರೆ ನನಗೆ ಮೆಚ್ಚುಗೆಯಾಗುವ ಒಬ್ಬನನ್ನಾದರೂ ಕಣ್ಣಾರೆ ಕಂಡಿರಬೇಕಲ್ಲ! ಕಣ್ಣಿಗೆ ಕಾಣಿಸುವ ಯಾರೂ ನನಗೆ ಮೆಚ್ಚುಗೆಯಾಗಿರಲಿಲ್ಲ. ಹೀಗಿರುವಾಗ ಯಾರನ್ನು ಸೂಚಿಸಲಿ?
ಆದರೂ ಸ್ವಯಂವರ ಎಂದಾಗ ಅದು ನನಗೆ ಹಿತವಾಗಿಯೇ ಕಾಣಿಸಿತು. ಸ್ವಯಂವರವೇ ಆಗಲಿ, ಮದುವೆಯಾದ ಬಳಿಕ ಈ ಸೆರೆಮನೆಯಿಂದ ದೂರವಾಗಬಹುದು ಎಂಬುದರಿಂದ ಇದು ಹಿತವಾಯಿತು. ಹಾಗಾಗಿ ನಾನು ಪ್ರಸನ್ನಚಿತ್ತಳಾದೆ. ಅಮ್ಮನಂತೂ ಸಂಭ್ರಮದಲ್ಲಿ ಮುಳುಗಿದಳು. ಅವಳಿಗೆ ಸ್ವಯಂವರದ ವಿಧಾನದ ಕುರಿತು ಕುತೂಹಲವಿರಲಿಲ್ಲ. ಹೇಗಾದರೂ ಮಗಳಿಗೆ ಮದುವೆಯಾಗುತ್ತದೆ ಎಂಬ ಹೆತ್ತವಳ ಹರ್ಷ ಅದು. ಅಲ್ಲದೆ, ಅವಳ ಸ್ವಯಂವರವು ನಡೆದ ವಿಧಾನವೂ ಹಾಗೆಯೇ ಅಂತೆ. ಪೂರ್ವದಲ್ಲಿ ಬಂದವರಲ್ಲಿ ಒಬ್ಬನನ್ನು ಆರಿಸುವ ಸ್ವಾತಂತ್ರ್ಯ ಕೊಟ್ಟಿದ್ದರಂತೆ. ಆದರೆ ಅಲ್ಲಿಗೆ ಬಂದಿದ್ದ ನನ್ನ ಅಪ್ಪನಿಗೆ ಅಮ್ಮನನ್ನು ಕಂಡ ಮೇಲೆ, ಇವಳನ್ನೇ ಮದುವೆಯಾಗಬೇಕು ಎಂಬ ತೀವ್ರ ಹಂಬಲ ಹುಟ್ಟಿತಂತೆ. ಮಾಲೆಯನ್ನು ಕೈಯಲ್ಲಿ ಹಿಡಿದು ಸಭೆಯಲ್ಲಿ ನಡೆಯುವಾಗ ತನ್ನನ್ನು ವರಿಸುತ್ತಾಳೋ ಇಲ್ಲವೋ ಎಂದು ಅಪ್ಪನಿಗೆ ಸಂಶಯ ಬಂದಿರಬೇಕು. ನಿಜವಾಗಿ ಅಮ್ಮ ಅಪ್ಪನನ್ನು ವರಿಸುತ್ತಿದ್ದಳೊ ಇಲ್ಲವೊ ಅವಳಿಗೇ ಗೊತ್ತು. ಮದುವೆಯಾದ ಬಳಿಕವೂ ಅವಳು ಯಾರಲ್ಲಿಯೂ ಬಾಯಿಬಿಟ್ಟವಳಲ್ಲ.
ಈ ಸಂಶಯ ಬಂದ ಮೇಲೆ ಅಪ್ಪ ಸುಮ್ಮನಿರಲಿಲ್ಲ. ಅವನ ಜತೆ ಬಂದಿದ್ದ ಕರ್ಣನಿಗೆ ಸೂಚಿಸಿದ. ಕರ್ಣ ತಡಮಾಡದೆ ವಧುವನ್ನು ಎತ್ತಿಕೊಂಡು ಹೊರಗೆ ಧಾವಿಸಿದ. ಉಳಿದ ರಾಜರು ಇದನ್ನು ನೋಡಿ, ಯುದ್ಧಕ್ಕೆ ಬಂದರಂತೆ. ಕರ್ಣ ತನ್ನ ವಿಕ್ರಮದಿಂದ ಎಲ್ಲರನ್ನೂ ಸೋಲಿಸಿ, ಅಮ್ಮನನ್ನು ಅಪ್ಪನಿಗೆ ಮದುವೆ ಮಾಡಿಸಿದನಂತೆ. ಹೀಗೆ ತನ್ನ ಸ್ವಯಂವರದಲ್ಲಿ ಅಪಹರಿಸಿದವನೊಬ್ಬ, ಮದುವೆಯಾದವನೊಬ್ಬ ಎಂದಾದ ಮೇಲೆ, ನನ್ನ ಸ್ವಯಂವರದ ವಿಧಾನದ ಕುರಿತು ಅವಳಿಗೆ ಏನು ಕುತೂಹಲವಿದ್ದೀತು?
ಅಪ್ಪ ನನ್ನಲ್ಲಿ ನೇರವಾಗಿ ಹೇಳದಿದ್ದರೂ ಅಮ್ಮನ ಮೂಲಕ ನನ್ನ ಸಮ್ಮತಿಯನ್ನು ತಿಳಿದುಕೊಂಡಿರಬಹುದು. ಅಂತೂ ಲಕ್ಷಣೆಗೆ ಸ್ವಯಂವರವಂತೆ ಎಂಬ ವಾರ್ತೆ ಎಲ್ಲೆಡೆ ಕೇಳಿಬರತೊಡಗಿತು. ನನ್ನ ಗೆಳತಿಯರಿಗೆ ದಿನವೂ ಮಾತಾಡುವುದಕ್ಕೆ ವಿಷಯವೂ ಸಿಕ್ಕ ಹಾಗಾಯಿತು. ನಾನೂ ನನ್ನ ವರನ ಮಾಲಿಕೆಗೆ ಕೊರಳನ್ನೊಡ್ಡುವ ರಾಜಕುಮಾರ ಯಾರು? ಎಂಬ ನಿರೀಕ್ಷೆಯಲ್ಲಿ ಕಾಯತೊಡಗಿದೆ. ಅದರ ಜತೆ ಸ್ವಯಂವರದ ವಿಧಿಗಳ ಕುರಿತು ಕುತೂಹಲವೂ ಇತ್ತು. ಯುದ್ಧವೋ, ಸ್ಪರ್ಧೆಯೋ ಆಗಿದ್ದರೆ ನನಗೆ ಅದು ಪ್ರಿಯವಾಗಿರಲಿಲ್ಲ. ಯಾಕೆಂದರೆ ಅಲ್ಲಿ ಒಪ್ಪಿಗೆಯಾದವನನ್ನು ವರಿಸುವ ಹಾಗಿಲ್ಲ. ಗೆದ್ದವನನ್ನು ವರಿಸಬೇಕು. ನನಗೆ ನನ್ನನ್ನು ಗೆದ್ದವನನ್ನು ವರಿಸಬೇಕು ಎಂಬ ಅಪೇಕ್ಷೆಯಿತ್ತೆ ಹೊರತು, ಯುದ್ಧದಲ್ಲಿ ಗೆದ್ದವನನ್ನಲ್ಲ.
ದಿನಗಳು ಸಾಗುತ್ತಿದ್ದಂತೆ, ಸ್ವಯಂವರದಲ್ಲಿ ಸ್ಪರ್ಧೆ ಇಲ್ಲವಂತೆ. ಬಂದವರಲ್ಲಿ ಇಷ್ಟವಾದ ವರನ ಕೊರಳಿಗೆ ರಾಜಕುಮಾರಿ ಮಾಲೆ ತೊಡಿಸಬಹುದಂತೆ ಎಂದು ಸಖಿಯರಿಂದ ಕೇಳಿ ತಿಳಿದೆ. ಅಲ್ಲಿಗೆ ಸಮಾಧಾನವೂ ಆಯಿತು. ಅಷ್ಟು ಸ್ವಾತಂತ್ರ್ಯ ಸಿಕ್ಕಿತಲ್ಲ!
ಅರಮನೆಯಲ್ಲಿ ಸ್ವಯಂವರದ ಸನ್ನಾಹಗಳು ಪ್ರಾರಂಭವಾದವು. ಹಸ್ತಿನಾವತಿಯ ಮುಂದಿನ ಸಾಮ್ರಾಟನ ಮಗಳ ಸ್ವಯಂವರ ಅಲ್ಲವೆ? ಆ ಘನತೆಗೆ ತಕ್ಕಂತೆ ಎಲ್ಲವೂ ನಡೆಯಬೇಡವೆ? ರಾಜ ಮಹಾರಾಜರಿಗೆ ಆಮಂತ್ರಣದ ಓಲೆಗಳು ಹೊರಟವು. ಪಟ್ಟಣವು ಸಿಂಗಾರದ ವೈಭವಕ್ಕೆ ಮೈಯೊಡ್ಡಿತು. ಪ್ರಜಾಜನರಿಗೂ ಅತಿಶಯದ ಸಡಗರ. ಕೆಲವು ದಿನಗಳ ಕಾಲ ಈ ಉತ್ಸವವನ್ನು ನೋಡುವ ಸಡಗರ ಅದು. ಅಲ್ಲದೆ ಇದನ್ನು ನೋಡುವುದಕ್ಕೆಂದೇ ದೂರ ದೂರದ ನಾಡುಗಳಿಂದ ಬಂಧುಜನರು ಬರುತ್ತಾರೆ. ಅವರನ್ನು ಸ್ವಾಗತಿಸುವ, ಕೂಡಿಯಾಡುವ ಅವಕಾಶ ಈ ಪ್ರಜೆಗಳಿಗೆ. ಅರಮನೆಯ ವಿವಾಹ ಕಾರ್ಯಕ್ರಮದಲ್ಲಿ ದಿನವೂ ಸಹಸ್ರಾರು ಮಂದಿಗೆ ಸುಗ್ರಾಸ ಭೋಜನ. ದಾನ, ದಕ್ಷಿಣೆ, ಉಡುಗೊರೆಗಳ ಮಹಾಪೂರ. ಜನಸಾಮಾನ್ಯರಿಗೆ ಇದಕ್ಕಿಂತ ಹೆಚ್ಚೇನು ಬೇಕು?
ಹೀಗೆ ನನ್ನ ಸ್ವಯಂವರ ಎಂಬುದು ಎಲ್ಲರ ಬಯಕೆಗಳನ್ನೂ ಈಡೇರಿಸುವ ಕಾಮಧೇನುವೇ ಆಯಿತು.
ಇನ್ನೇನು, ಕೆಲವೇ ದಿನಗಳಿವೆ ಎನ್ನುವಾಗಲೇ ಆಮಂತ್ರಿತ ಕ್ಷತ್ರಿಯಸತ್ತಮರ ಆಗಮನ ಪ್ರಾರಂಭವಾಯಿತು. ವಿವಿಧ ದೇಶಗಳ ಅರಗುವರರು, ಅವರ ಜತೆಗೆ ರಾಜ ಮಹಾರಾಜರು, ಅವರ ಪರಿವಾರ, ಸೇನೆ ಹಸ್ತಿನಾವತಿಯನ್ನು ತುಂಬಿಕೊಂಡವು. ಅರಮನೆಯ ಹಿರಿಯರಿಗೂ, ಬಂಧುಜನರಿಗೂ ಬಂದವರನ್ನು ಅವರವರ ಯೋಗ್ಯತೆಗೆ ತಕ್ಕಂತೆ ಸ್ವಾಗತಿಸುವ, ಭೋಜನಾದಿಗಳು, ಬಿಡಾರಗಳ ವ್ಯವಸ್ಥೆ ಮಾಡುವ ಹೊಣೆ ತಲೆಗೇರಿತು. ಅಪ್ಪನ ಸಹೋದರರಾದ ಪಾಂಡವರೂ ಅರಮನೆಗೆ ಬಂದರು. ಅಷ್ಟು ದೊಡ್ಡ ಅರಮನೆಯಾದರೂ ಜನ ಸಮ್ಮರ್ದದಿಂದ ತುಳುಕತೊಡಗಿತು. ನಾನೂ ಬಂಧುಗಳ, ಅಪ್ತರ ಒಡನಾಟದಿಂದ ಹರ್ಷಚಿತ್ತಳಾದೆ. ಅಲಂಕಾರ ಮಾಡಿಕೊಂಡು ಅವರನ್ನೆಲ್ಲ ಮಾತನಾಡಿಸುತ್ತ ಸಖೀಗಣದೊಂದಿಗೆ ಓಡಾಡುತ್ತಿದ್ದೆ. ಸಖಿಯರ ಹಾಸ್ಯ ಪ್ರಿಯವೆನಿಸಿ ಮನಸ್ಸಂತೋಷವನ್ನು ಹೆಚ್ಚಿಸುತ್ತಿತ್ತು.
ಹಸ್ತಿನಾವತಿಯ ಪ್ರಸಿದ್ಧಿ ಹಾಗೂ ಸಂಪತ್ತಿಗೆ ತಕ್ಕಂತೆ ವೈಭವಪೂರ್ಣವಾದ ಸ್ವಯಂವರ ಮಂಟಪವೂ ಸಜ್ಜುಗೊಂಡಿತು. ಬಂದ ಅರಸರಿಗೆ, ಅರಗುವರರಿಗೆ ಅವರವರ ಅಂತಸ್ತಿಗೆ ತಕ್ಕಂತೆ ಕುಳಿತುಕೊಳ್ಳುವ ವ್ಯವಸ್ಥೆ, ಅವರ ಪರಿವಾರಕ್ಕೆ ಸ್ವಯಂವರವನ್ನು ವೀಕ್ಷಿಸುವುದಕ್ಕೆ ಬೇಕಾದ ಅನುಕೂಲಗಳು ಕಲ್ಪಿಸಲ್ಪಟ್ಟವು. ಅಪ್ಪನಿಗೂ ಅವನ ಗೆಳೆಯರಿಗೂ ಇದು ಮನೆಮಗಳ ಮದುವೆ ಅನ್ನುವುದಕ್ಕಿಂತ ತಮ್ಮ ರಾಜನೀತಿಯ ಪ್ರಭಾವದ ವಿಸ್ತರಣೆ ಎನ್ನುವ ಭಾವನೆ ಇದ್ದಂತೆ ನನಗೆ ಕಾಣಿಸಿತು. ಅದೂ ಅಸಹಜವಾಗಿರಲಿಲ್ಲ. ಎಲ್ಲ ರಾಜರೂ ತಮ್ಮ ಸಂಬಂಧದ ಕನ್ಯೆಯರ ವಿವಾಹವನ್ನು ತಮ್ಮ ಬಲವರ್ಧನೆಗೆ ಬಳಸುವುದು ಸಾಮಾನ್ಯ ಪದ್ಧತಿಯಾಗಿ ಎಲ್ಲ ಕಡೆ ಸ್ವೀಕೃತವಾಗಿತ್ತು. ಹಾಗಾಗಿ ಅಂತಹ ಭಾವನೆ ಸಹಜವಿತ್ತೆ ಹೊರತು, ಮದುಮಗಳ ಕುರಿತು ಅಲಕ್ಷ್ಯವಲ್ಲ. ಅಂತೂ ಸ್ವಯಂವರದ ದಿನವೂ ಬಂತು.
ಆ ದಿನ ನಾನು ಸಾಲಂಕೃತಳಾಗಿ ಸಿದ್ಧಳಾದೆ. ಪರಿಮಳಿಸುವ ಅರಳಿದ ಹೂಗಳ ಮಾಲೆಯನ್ನು ವರಣಮಾಲಿಕೆಯಾಗಿ ನನ್ನ ಕೈಗೆ ಕೊಟ್ಟರು. ಸಖಿಯರು ಹಿಂಬಾಲಿಸುತ್ತಿರಲಾಗಿ, ನಾನು ಸ್ವಯಂವರದ ಸಭೆಯನ್ನು ಪ್ರವೇಶಿಸಿದೆ. ಅಪ್ಪನೇ ಮುಂದೆ ಬಂದು, ಕುಮಾರಿ, ಇದೋ ಈ ಸಭಾಮಂಟಪದಲ್ಲಿ ಸೇರಿದ ರಾಜ ಮಹಾರಾಜರು, ರಾಜಕುಮಾರರಲ್ಲಿ ನಿನಗೆ ಮೆಚ್ಚುಗೆಯಾದವನನ್ನು ನೀನು ವರಿಸಬಹುದು. ಬಂದವರ ಪೂರ್ವೋತ್ತರಗಳನ್ನು, ಕುಲ ದೇಶಾದಿ ವಿವರವನ್ನು ನಿನ್ನ ಅಣ್ಣ ತಿಳಿಸಿಕೊಡುತ್ತಾನೆ ಎಂದು ಹೇಳಿ, ತಲೆಯನ್ನು ನೇವರಿಸಿ ಸರಿದು ನಿಂತ. ನಾನು ಅಣ್ಣನ ಹಿಂದೆ ನಡೆದೆ. ಉಚಿತಾಸನಗಳಲ್ಲಿ ಮಂಡಿಸಿದ ಕ್ಷತ್ರಿಯೋತ್ತಮರ ಪರಿಚಯವನ್ನು ಮಾಡಿಕೊಡುತ್ತ ಅಣ್ಣ ಮುಂದುವರಿದ.
ಒಬ್ಬೊಬ್ಬರ ಮುಖವನ್ನೂ ಅವಲೋಕಿಸುತ್ತ ನಾನು ಮುಂದಡಿಯಿಡತೊಡಗಿದೆ. ನಾನು ಮುಂದೆ ಸಾಗಿದಂತೆ, ಉತ್ಸುಕರಾಗಿ ಕುಳಿತಿದ್ದ ಮಕುಟವರ್ಧನರ ಮುಖಗಳು ನಿರಾಶೆಯಿಂದ ಕಳೆಗುಂದುತ್ತಿದ್ದವು. ಮುಂದಿದ್ದವರ ಮುಖ ನಿರೀಕ್ಷೆಯಿಂದ ಅರಳುತ್ತಿದ್ದವು. ಸಭೆಯ ಮಧ್ಯಭಾಗದವರೆಗೆ ಸಾಗಿದ್ದೆನಷ್ಟೆ. ಅಷ್ಟು ಮಂದಿಯಲ್ಲಿ ಯಾರೂ ನನಗೆ ಮೆಚ್ಚುಗೆಯಾಗಲಿಲ್ಲ. ನಿಧಾನವಾಗಿ ಮುಂದೆ ಹೆಜ್ಜೆಯಿಕ್ಕುತ್ತಿದ್ದಂತೆ ಸಾಲಿನ ಕೊನೆಯಲ್ಲಿ ಕುಳಿತಿದ್ದ ತರುಣನೊಬ್ಬ ಎದ್ದು ನಿಂತ. ಸಭೆಯಲ್ಲಿ ಗುಜುಗುಜು ಸದ್ದಾಯಿತು. ಯದುಕುಲದ ಕುಮಾರ, ಸಾಂಬ, ಕೃಷ್ಣಪುತ್ರ ಎಂದು ಹಲವರು ಉದ್ಗರಿಸಿದರು. ನಾನು ಅಚ್ಚರಿಯಿಂದ ಆ ತರುಣನ ಮುಖ ನೋಡಿದೆ. ಅತ್ಯಂತ ಸುಂದರನಾಗಿದ್ದ. ಸೌಂದರ್ಯಕ್ಕೆ ಪುಟವಿಟ್ಟಂತೆ ಮುಖದಲ್ಲಿ ಕ್ಷಾತ್ರತೇಜ ಬೆಳಗುತ್ತಿತ್ತು. ಸದೃಢವಾದ ದೇಹಯಷ್ಟಿ. ಮೊದಲ ಸಾಲಿನಲ್ಲಿ ಅವನಿದ್ದಿದ್ದರೆ ಅವನಿಗೇ ಮಾಲೆಯಿಕ್ಕುತ್ತಿದ್ದೆನೊ ಏನೋ. ಈಗಲೂ ಕಾಲವೇನೂ ಮಿಂಚಿಲ್ಲ. ಅವನನ್ನೇ ವರಿಸೋಣವೆಂಬ ಯೋಚನೆ ಬಂತು. ವರಣಮಾಲಿಕೆಯನ್ನು ಎತ್ತಿ ಅವನತ್ತ ಹೆಜ್ಜೆಯಿಟ್ಟೆ.
ಅಷ್ಟೇ. ಅವನ ಬಳಿ ಸೇರುವ ಮುನ್ನ ಅವನೇ ನನ್ನತ್ತ ಬಂದ. ತಡೆಯುವುದಕ್ಕೆ ಮುಂದಾದ ಅಣ್ಣನನ್ನು ನಯವಾಗಿ ಆದರೆ ದೃಢವಾದ ಹಸ್ತದಿಂದ ಬದಿಗೆ ಸರಿಸಿದ. ನನ್ನೆದುರು ಬಂದು ನಿಂತ. ಮಾಲಿಕೆಯನ್ನು ಹಿಡಿದಿದ್ದ ನನ್ನ ಕೈಗಳೀಗ ಅವನ ಮುಷ್ಟಿಯೊಳಗೆ ಸೇರಿದವು. ಮಾಲೆ ಅವನ ಕೊರಳಲ್ಲಿತ್ತು. ಅವನೇ ಹಾಕಿಕೊಂಡನೋ ಅಥವಾ ನಾನು ಹಾಕಿದೆನೋ ಅರಿವಿಗೆ ಬರಲಿಲ್ಲ. ಮುಂದಿನ ಕ್ಷಣದಲ್ಲಿ ನನ್ನ ಕೈಯನ್ನು ಹಿಡಿದು, ಸಭಾವಲಯವನ್ನು ದಾಟಿಬಿಟ್ಟ. ನಾನು ಹಿಂಬಾಲಿಸುತ್ತಿದ್ದೆ. ಸಭೆಯಲ್ಲಿ ಗುಲ್ಲೆದ್ದಿತು. ಹಲವರು ಆಯುಧ ಧರಿಸಿ ಎದ್ದು ನಿಂತರು. ಅಷ್ಟರಲ್ಲಿ ನಾವು ಮಹಾದ್ವಾರದ ಬಳಿ ತಲಪಿದ್ದೆವು. ತಡೆಯಿರಿ, ಸಾಂಬನನ್ನು ಹಿಡಿಯಿರಿ, ಹೆಬ್ಬಾಗಿಲು ಮುಚ್ಚಿ ಎಂದೆಲ್ಲ ನನ್ನ ಅಪ್ಪ ಚಿಕ್ಕಪ್ಪಂದಿರು ಕೂಗುತ್ತಿದ್ದರು. ಕರ್ಣನ ಧ್ವನಿಯೂ ಕೇಳುತ್ತಿತ್ತು.
ಮಹಾದ್ವಾರದ ಬಳಿ ಸಾಯುಧರಾಗಿ ನಿಂತಿದ್ದ ರಾಜಭಟರು ಎರಡು ಹೆಜ್ಜೆ ಮುಂದೆ ಬಂದಿದ್ದರಷ್ಟೆ. ಯಾವ ಮಾಯದಲ್ಲಿ ಸಾಂಬನ ಒರೆಯಲ್ಲಿದ್ದ ಖಡ್ಗ ಹೊರಗೆ ಬಂತೋ ತಿಳಿಯಲಿಲ್ಲ. ಖಣಖಣವೆಂಬ ಸದ್ದು ಕೇಳಿಸಿತು. ಭಟರ ಕತ್ತಿಗಳು ಹಾರಿಹೋದವು. ಕೆಲವರಿಗೆ ಗಾಯವೂ ಆಗಿರಬೇಕು. ಈ ಗೊಂದಲದಲ್ಲಿ ನಾವು ಬಾಗಿಲು ದಾಟಿದ್ದೆವು. ಈಗ ಅವನೇನೂ ನನ್ನ ಕೈಗಳನ್ನು ಹಿಡಿದಿರಲಿಲ್ಲ. ನಾನೇ ಹಿಂಬಾಲಿಸುತ್ತಿದ್ದೆ. ಅಲ್ಲೇ ನಿಂತಿದ್ದರೆ ರಕ್ಷಣಾಪಡೆ ಬಂದು ನನ್ನನ್ನು ಒಳಗೊಯ್ಯುತ್ತಿತ್ತು ಅಥವಾ ನಾನೇ ಹಿಂತಿರುಗಿ ಧಾವಿಸಬಹುದಿತ್ತು. ಆದರೆ ನಾನು ಹಾಗೆ ಮಾಡಲಿಲ್ಲ. ಮಾಡಬೇಕೆಂದು ನನಗೆ ತೋರಲಿಲ್ಲ. ಸಾಂಬನ ಧೀರತೆಗೆ ಒಲಿದಿದ್ದೆನೋ ಏನೋ. ಅಂತೂ ನನಗೆ ಅರಿವು ಹುಟ್ಟಿದಾಗ ನಾವು ರಾಜವೀಥಿಯಲ್ಲಿದ್ದೆವು. ಸಮೀಪದಲ್ಲಿ ನಿಂತಿದ್ದ ರಥವೊಂದು ಕಾಣಿಸಿತು. ಗಟ್ಟಿಯಾದ ಯುದ್ಧ ರಥ. ಬಲಿಷ್ಠವಾದ ಕುದುರೆಗಳು. ರಥದ ತುಂಬ ಶಸ್ತ್ರಾಸ್ತ್ರಗಳು.
ಸಾಂಬ ರಥದ ಬಳಿ ನಿಂತ. ರಾಜಕುಮಾರಿ, ನಾನು ಯದುಕುಲದ ಸಾಂಬ. ನನ್ನ ತಂದೆ ವಸುದೇವ ಪುತ್ರ ಕೃಷ್ಣ. ಕ್ಷತ್ರಿಯೋಚಿತವಾಗಿ ನಿನ್ನನ್ನು ನಿನ್ನನ್ನು ಒಯ್ಯುತ್ತಿದ್ದೇನೆ. ರಥವೇರಬಲ್ಲೆಯಷ್ಟೆ? ಕಷ್ಟವಾದರೆ ನಾನೇ ರಥವೇರಿಸುತ್ತೇನೆ. ನಾವು ವಿಳಂಬಿಸುವಂತಿಲ್ಲ ಎಂದ. ರಥವೇರುವುದು ನನಗೆ ಲೀಲಾಜಾಲ. ಆದರೆ ನಿಧಾನಿಸಿದೆ. ಅವನ ಮುಖದಲ್ಲೊಂದು ಮುಗುಳುನಗೆಯ ಮಿಂಚು ಸುಳಿಯಿತು. ಮರುಕ್ಷಣ ನನ್ನನ್ನೆತ್ತಿ ರಥವೇರಿಸಿದ. ತಾನೂ ಏರಿ ಕಡಿವಾಣ ಹಿಡಿದ. ರಥ ಧೂಳನ್ನೆಬ್ಬಿಸುತ್ತ ಕ್ಷಣಾರ್ಧದಲ್ಲಿ ನಗರದ ಹೊರವಲಯಕ್ಕೆ ಬಂತು. ನಗರದ ಹೆಬ್ಬಾಗಿಲಿನ ಪಹರೆಯವರು ರಥದ ವೇಗವನ್ನು ಕಂಡೋ ಏನೋ, ತಡೆಯುವ ಸಾಹಸಕ್ಕೆ ಮುಂದಾಗಲಿಲ್ಲ. ನಾವು ಮಿಂಚಿನ ವೇಗದಲ್ಲಿ ಹೊರಗೆ ಬಂದೆವು. ರಥ ದ್ವಾರಕೆಯ ದಿಕ್ಕನ್ನು ಹಿಡಿದು ಧಾವಿಸತೊಡಗಿತು. ನನಗೆ ಇದೆಲ್ಲ ಕನಸಿನಂತೆ ಭಾಸವಾಗುತ್ತಿತ್ತು. ಎಂದೋ ಸಖಿಯರಿಂದ ಕೇಳಿದ್ದ ಹೆಸರು ಸಾಂಬನದು. ಅವನ ಕುರಿತಾದ ವರ್ಣನೆಯನ್ನು ಕೇಳಿ ಸಣ್ಣ ಆಕರ್ಷಣೆಯೂ ಹುಟ್ಟಿರಬಹುದು. ಆದರೆ ಅವನೇ ಬಂದು ಹೀಗೆ ನನ್ನನ್ನು ಒಯ್ಯುತ್ತಾನೆ ಎಂದು ಭಾವಿಸಿರಲಿಲ್ಲ.
ರಥ ಓಡುತ್ತಿದ್ದಂತೆ ನನ್ನೊಳಗೆ ಏನೋ ಬಿಡುಗಡೆಯ ಭಾವ. ಎಲ್ಲರ ಬಂಧನವನ್ನೂ ಬಿಡಿಸಬಲ್ಲ ಶ್ರೀಕೃಷ್ಣನ ದ್ವಾರಕೆಗೆ ಹೋಗುತ್ತಿದ್ದೇನೆ ಎಂಬುದಕ್ಕೇ? ಅಥವಾ ಮೊದಲ ನೋಟದಲ್ಲೇ ಆಕರ್ಷಿಸಿದ ಸಾಂಬನ ಪತ್ನಿಯಾಗುತ್ತಿರುವುದಕ್ಕೇ? ಅಲ್ಲ, ಉಸಿರುಗಟ್ಟಿಸುವಂತಿದ್ದ ಹಸ್ತಿನಾವತಿಯ ಅರಮನೆಯಿಂದ ಹೊರಬಂದುದಕ್ಕೇ? ಏನೋ ಹೇಳಲಾಗದ ಹಿತವಾದ ಅನುಭವವೊಂದು ಅಂತರಂಗವನ್ನು ತುಂಬಿತ್ತು. ಸಾಂಬನಾದರೋ ರಥವನ್ನು ಹರಿಸುವಲ್ಲಿ ವ್ಯಸ್ತನಾಗಿದ್ದ. ದಾರಿಯಲ್ಲಿದ್ದ ಆತಂಕಗಳನ್ನು ನಿವಾರಿಸಿಕೊಳ್ಳುತ್ತ, ಕುದುರೆಗಳನ್ನು ಉತ್ತೇಜಿಸುತ್ತ ಹಸ್ತಿನಾವತಿಯ ಪರಿಧಿಯನ್ನು ಶೀಘ್ರವಾಗಿ ದಾಟಿಹೋಗುವುದಕ್ಕೆ ಗಮನವಿತ್ತಿದ್ದ. ನಾನು ಈ ಅನಿರೀಕ್ಷಿತ ಸಂಭವನ್ನು ಧ್ಯಾನಿಸುತ್ತ ರಥದಲ್ಲಿ ಕುಳಿತಿದ್ದೆ.
ರಾಜಕುಮಾರಿ ಇದ್ದಕ್ಕಿದ್ದಂತೆ ಸಾಂಬನ ಧ್ವನಿ ನನ್ನನ್ನು ಎಚ್ಚರಿಸಿತು. ಕಣ್ಣೆತ್ತಿ ಅವನತ್ತ ನೋಡಿದೆ. ನನ್ನನ್ನೇ ದಿಟ್ಟಿಸುತ್ತಿದ್ದನವ. ನಿನ್ನ ಸೌಂದರ್ಯ, ಸಂಸ್ಕಾರಗಳ ಕುರಿತು ಕೇಳಿ, ಮೋಹಿತನಾಗಿದ್ದೆ ರಾಜಕುಮಾರಿ. ಸ್ವಯಂವರದಲ್ಲಿ ನೀನು ನನ್ನನ್ನು ವರಿಸುವ ಭರವಸೆಯಿರಲಿಲ್ಲ. ಹಾಗಾಗಿ ಹೀಗೆ ಅಪಹರಣ ಮಾಡಬೇಕಾಯಿತು. ಇದರಿಂದ ನನ್ನ ಬಗೆಗೆ ಬೇಸರವೇನಾದರು ಇಲ್ಲವಷ್ಟೆ? ಕ್ಷತ್ರಿಯರಲ್ಲಿ ಇದು ಸಹಜವೆಂದು ಭಾವಿಸಿದ್ದೇನೆ. ನಿನ್ನನ್ನು ಹೃದಯದಲ್ಲಿಟ್ಟು ಆರಾಧಿಸುವೆ. ನನ್ನವರು ನಿನಗೆ ಪ್ರಿಯವಾಗುವಂತೆ ನಡೆದುಕೊಳ್ಳುತ್ತಾರೆ. ಏನಾದರೂ ಮಾತನಾಡು ಎಂದು ನುಡಿದ.
ಏನೆನ್ನಲಿ?
ಈಗ ನಾವಿದ್ದ ರಥ ನಗರದಿಂದ ದೂರವಾಗಿ ನಿರ್ಜನ ಮಾರ್ಗದಲ್ಲಿ ಓಡುತ್ತಿತ್ತು. ಸುತ್ತಲೂ ಉದ್ದಾನುದ್ದ ಬಯಲು. ನಾವಿಬ್ಬರೇ ರಥದಲ್ಲಿ. ಸಾಂಬನ ಮಾತಿಗೆ ಉತ್ತರಿಸಬೇಕು. ನನ್ನ ಮನಸ್ಸಿನ ಮಾತನ್ನು ಆಡಬೇಕು ಎಂದು ತುಟಿದೆರೆದೆ. ಅಷ್ಟೇ. ಆ ಕ್ಷಣ ನಮ್ಮಿಬ್ಬರ ಗಮನವನ್ನು ಸೆಳೆಯುವಂತೆ, ಹಿಂದಿನಿಂದ ಕೋಲಾಹಲ ಧ್ವನಿ ಕೇಳಿಸಿತು.
ಏನದು?
(ಸಶೇಷ)