ಸೆರೆಮನೆಯಲ್ಲಿದ್ದ ಸಾಂಬನಿಗೆ ಏನಾದರೂ ಹಾನಿ ಮಾಡುತ್ತಾರೋ ಎಂಬ ಆತಂಕ ನನಗಿತ್ತು. ಆದರೆ ಹಿರಿಯಜ್ಜ ಭೀಷ್ಮರು ಅದಕ್ಕೆ ಆಸ್ಪದ ಕೊಡಲಾರರು ಎಂದು ಭರವಸೆಯೂ ಇತ್ತು. ಅದಕ್ಕೆ ಕಾರಣ ಸಾಂಬನ ಬಗ್ಗೆ ಅಜ್ಜನಿಗೆ ಮೆಚ್ಚುಗೆ ಇತ್ತು ಎಂದಲ್ಲ. ಕೃಷ್ಣನ ಕುರಿತು ಅಜ್ಜನಿಗೆ ಆದರವಿದ್ದರೂ ಸಾಂಬನ ಕುಲೀನತೆ ತಮಗಿಂತ ಕಡಮೆ ಎಂಬ ತಿರಸ್ಕಾರ ಒಳಗಿಂದೊಳಗೆ ಅಜ್ಜನಿಗೂ ಇದ್ದಿರಬಹುದು. ಆದರೆ ಸಾಂಬನಿಗೆ ತೊಂದರೆ ಕೊಡದಂತೆ ಅವರು ಕಟ್ಟುನಿಟ್ಟು ಮಾಡಿದ್ದರಂತೆ. ಇದು ಒಂದು ರಾಜನೀತಿಯ ಕೌಶಲ ಅಷ್ಟೆ. ಯಾದವರು ದಿನೇ ದಿನೇ ಪ್ರಬಲರಾಗುತ್ತಿದ್ದಾರೆ. ಸಾಂಬನನ್ನು ಶಾಶ್ವತವಾಗಿ ಬಂಧನದಲ್ಲಿ ಇಡುವಂತಿಲ್ಲ. ಇವತ್ತಲ್ಲ ನಾಳೆ ಬಿಡಬೇಕಾಗಿ ಬಂದೀತು. ಹಾಗಾಗಿ ಯಾದವರ ಜೊತೆ ಇಂತಹ ವಿಚಾರದಲ್ಲಿ ವೈಷಮ್ಯ ಕಟ್ಟಿಕೊಳ್ಳುವುದು ಬುದ್ಧಿವಂತಿಕೆಯಲ್ಲ – ಎಂದು ಅವರು ಭಾವಿಸಿರಬಹುದು. ಅಂತೂ ಸಾಂಬನಿಗೆ ಕಾರಾಗೃಹದಲ್ಲಿದ್ದರೂ ಹಿಂಸೆಯಾಗಲಿಲ್ಲ.
ಸಾಂಬ ಹಸ್ತಿನಾವತಿಯಲ್ಲಿ ಸೆರೆಯಾಳಾಗಿ ಇದ್ದಾನೆ ಎಂಬ ವರ್ತಮಾನ ದ್ವಾರಕೆಗೆ ತಲಪಿರಬೇಕು. ಕೃಷ್ಣನಿಗೆ ಆತ್ಮೀಯರಾದ ಪಾಂಡವರೇ ಈ ಸುದ್ದಿಯನ್ನು ದ್ವಾರಕೆಗೆ ಮುಟ್ಟಿಸಿರಬಹುದು. ತಮ್ಮ ಆರಾಧ್ಯಮೂರ್ತಿ ಕೃಷ್ಣ. ಅಂತಹ ಮಹಾನಾಯಕನ ಪುತ್ರ ಸಾಂಬನನ್ನು ಬಂಧಿಸಿ ಹಸ್ತಿನಾವತಿಯವರು ಅವಮಾನ ಮಾಡಿದ್ದಾರೆ ಎಂದು ಯಾದವರೆಲ್ಲ ಭಾವಿಸಿದ್ದಾರಂತೆ. ಇದಕ್ಕೊಂದು ಪ್ರತೀಕಾರ ಮಾಡದೆ ಅವರು ಹಿಂದುಳಿಯುವುದಿಲ್ಲವಂತೆ. ಈಗಾಗಲೇ ಸಾಂಬನ ದೊಡ್ಡಪ್ಪ ಬಲರಾಮ, ಯಾದವರ ಸೇನೆಯನ್ನು ಕೂಡಿಕೊಂಡು ಇತ್ತ ಧಾವಿಸಿ ಬರುತ್ತಿದ್ದಾನಂತೆ – ಹೀಗೆಲ್ಲ ಸುದ್ದಿಗಳು ಪಿಸುದನಿಯಲ್ಲಿ ಅಂತಃಪುರದ ಗೋಡೆಗಳನ್ನು ದಾಟಿ ಒಳಗೆ ಬರುತ್ತಿದ್ದವು. ನನಗೆ ಇದ್ದುದರಲ್ಲಿ ಒಂದಿಷ್ಟು ಸಮಾಧಾನವೇ ಆಯಿತು. ನನ್ನ ಪರಿಸ್ಥಿತಿ ಹೇಗೇ ಇದ್ದರೂ ಸಾಂಬನಾದರೂ ಸೆರೆಯಿಂದ ಹೊರಬರುವಂತಾಗಲಿ ಎಂದು ಆಶಿಸಿದೆ.
ಈ ನಡುವೆ ನನ್ನ ಮನಸ್ಸನ್ನು ಒಲಿಸಿ, ಬೇರೊಬ್ಬನಿಗೆ ಮದುವೆ ಮಾಡುವ ಪ್ರಯತ್ನವನ್ನು ಅಪ್ಪ ಮಾಡುತ್ತಲೇ ಇದ್ದ. “ಅವಳು ಸಾಂಬನ ಚಿಂತೆಯನ್ನು ಬಿಡಲಿ. ಅವನು ಕಾರಾಗಾರದಿಂದ ಹೊರಬರುವ ಸಾಧ್ಯತೆಯೇ ಇಲ್ಲ. ವೃಥಾ ಅವನಿಗಾಗಿ ಲಕ್ಷಣೆ ಕಾಯಬೇಕಿಲ್ಲ. ಅವಳಿಗೆ ತಕ್ಕ ಯೋಗ್ಯತಾವಂತ ಕ್ಷತ್ರಿಯ ವೀರನನ್ನೇ ಹುಡುಕಿ ಮದುವೆ ಮಾಡುತ್ತೇನೆ. ಇದಕ್ಕೆ ಸಮ್ಮತಿಸುವಂತೆ ಅವಳನ್ನು ಒಪ್ಪಿಸು” ಎಂದು ಅಮ್ಮನಲ್ಲಿ ಹೇಳಿರಬೇಕು. ಅವಳು ಪ್ರತಿದಿನ ನನ್ನ ಬಳಿ ಇದನ್ನೇ ಮತ್ತೆ ಮತ್ತೆ ಆಡುತ್ತಿದ್ದಳು. ಇದರ ಅರ್ಥ ಅವಳಿಗೆ ಸಾಂಬನ ಕುರಿತು ಆಗ್ರಹ ಇತ್ತು ಎಂದಲ್ಲ. ಗಂಡ ಹೇಳಿದುದನ್ನು ಪಾಲಿಸುವ ವಿಧೇಯ ಪತ್ನಿಯಾಗಿ ಅವಳು ಅಪ್ಪ ಹೇಳಿದಂತೆ ಮಾಡುತ್ತಿದ್ದಳು, ಅಷ್ಟೇ.
ಆದರೆ ನನ್ನ ಮನಸ್ಸು ದೃಢವಾಗಿತ್ತು.
ಈಗಾಗಲೇ ಸಾಂಬ ನನ್ನ ಹೃದಯವನ್ನು ಗೆದ್ದಿದ್ದ. ಅವನು ನನಗಾಗಿ ಪ್ರಾಣವನ್ನು ಪಣಕ್ಕಿಟ್ಟು ಹೋರಾಟಕ್ಕಿಳಿದ ಚಿತ್ರ ನನ್ನ ಎದೆಯಿಂದ ಮಾಸಿಹೋಗುವುದು ಶಕ್ಯವಿರಲಿಲ್ಲ. ನನ್ನ ಅಮ್ಮ ಯಾವ ಬಗೆಯಿಂದ ಹೇಳಿದರೂ, ನಾನು ಸಾಂಬನನ್ನು ಮರೆಯುವುದು ಅಸಾಧ್ಯವಾಗಿತ್ತು. ಹೆಣ್ಣು ಒಮ್ಮೆ ಒಬ್ಬನನ್ನು ಒಲಿದರೆ ಮತ್ತೆ ಸುಲಭದಲ್ಲಿ ಮನಸ್ಸು ಬದಲಿಸಲಾರಳು. ಅಮ್ಮ ಒತ್ತಾಯ ಮಾಡಿದಷ್ಟೂ, ನನ್ನ ಹಟ ಹೆಚ್ಚುತ್ತಲೇಹೋಯಿತು. ಕೊನೆಗೊಮ್ಮೆ ಖಚಿತವಾಗಿ ಅಮ್ಮನಲ್ಲಿ ಹೇಳಿಯೇ ಬಿಟ್ಟೆ. “ಅಮ್ಮ, ನೀನು ಈ ವಿಚಾರದಲ್ಲಿ ನನ್ನನ್ನು ಒಪ್ಪಿಸಲಾರೆ. ನಿನ್ನ ಸ್ವಯಂವರದಲ್ಲಿ ಗೆದ್ದವನನ್ನು ಬಿಟ್ಟು ಇನ್ನೊಬ್ಬನನ್ನು ಮದುವೆಯಾಗಿರಬಹುದು ನೀನು. ಆದರೆ ನಿನ್ನ ಮಗಳು ಹಾಗೆ ಮಾಡುವವಳಲ್ಲ. ನಾನು ಎಂದಿದ್ದರೂ ಸಾಂಬನ ವಧು. ಒಂದು ವೇಳೆ ಸಾಂಬನಿಗೆ ನನ್ನನ್ನು ಕೊಡದೆ ಇದ್ದರೆ, ಮಗಳು ಇಲ್ಲವೆಂದೇ ತಿಳಿ. ಅಪ್ಪನಿಗೂ ಇದನ್ನು ಹೇಳು” ನನ್ನ ಮಾತಿನಲ್ಲಿದ್ದ ದೃಢತೆ ಅವಳ ಗಮನಕ್ಕೆ ಬಂದಿರಬೇಕು. ಮತ್ತೆ ಹೆಚ್ಚು ಒತ್ತಾಯ ಮಾಡಲಿಲ್ಲ ಅಥವಾ ಅವಳಿಗೂ ಒಳಗಿಂದೊಳಗೆ, ತನಗೆ ಇಷ್ಟ ಬಂದವನಿಗೆ ಮಾಲೆ ತೊಡಿಸುವ ಅವಕಾಶ ಬರಲಿಲ್ಲ. ಈಗ ಮಗಳು ಸ್ವತಂತ್ರವಾಗಿ ಸಾಂಬನನ್ನು ವರಿಸಿದ್ದಾಳೆ. ಅವನನ್ನೇ ಮದುವೆಯಾಗಲಿ ಎಂದು ಇತ್ತೋ ಏನೋ. ಹಾಗೆಂದು ಅವಳು ಬಾಯಿಬಿಟ್ಟು ಹೇಳಲಿಲ್ಲ.
ಸೆರೆಮನೆಯಲ್ಲಿದ್ದ ಸಾಂಬನಿಗೆ ಏನಾದರೂ ಹಾನಿ ಮಾಡುತ್ತಾರೋ ಎಂಬ ಆತಂಕ ನನಗಿತ್ತು. ಆದರೆ ಹಿರಿಯಜ್ಜ ಭೀಷ್ಮರು ಅದಕ್ಕೆ ಆಸ್ಪದ ಕೊಡಲಾರರು ಎಂದು ಭರವಸೆಯೂ ಇತ್ತು. ಅದಕ್ಕೆ ಕಾರಣ ಸಾಂಬನ ಬಗ್ಗೆ ಅಜ್ಜನಿಗೆ ಮೆಚ್ಚುಗೆ ಇತ್ತು ಎಂದಲ್ಲ. ಕೃಷ್ಣನ ಕುರಿತು ಅಜ್ಜನಿಗೆ ಆದರವಿದ್ದರೂ ಸಾಂಬನ ಕುಲೀನತೆ ತಮಗಿಂತ ಕಡಮೆ ಎಂಬ ತಿರಸ್ಕಾರ ಒಳಗಿಂದೊಳಗೆ ಅಜ್ಜನಿಗೂ ಇದ್ದಿರಬಹುದು. ಆದರೆ ಸಾಂಬನಿಗೆ ತೊಂದರೆ ಕೊಡದಂತೆ ಅವರು ಕಟ್ಟುನಿಟ್ಟು ಮಾಡಿದ್ದರಂತೆ. ಇದು ಒಂದು ರಾಜನೀತಿಯ ಕೌಶಲ ಅಷ್ಟೇ. ಯಾದವರು ದಿನೇ ದಿನೇ ಪ್ರಬಲರಾಗುತ್ತಿದ್ದಾರೆ. ಸಾಂಬನನ್ನು ಶಾಶ್ವತವಾಗಿ ಬಂಧನದಲ್ಲಿ ಇಡುವಂತಿಲ್ಲ. ಇವತ್ತಲ್ಲ ನಾಳೆ ಬಿಡಬೇಕಾಗಿ ಬಂದೀತು. ಹಾಗಾಗಿ ಯಾದವರ ಜೊತೆ ಇಂತಹ ವಿಚಾರದಲ್ಲಿ ವೈಷಮ್ಯ ಕಟ್ಟಿಕೊಳ್ಳುವುದು ಬುದ್ಧಿವಂತಿಕೆಯಲ್ಲ ಎಂದು ಅವರು ಭಾವಿಸಿರಬಹುದು. ಅಂತೂ ಸಾಂಬನಿಗೆ ಕಾರಾಗೃಹದಲ್ಲಿದ್ದರೂ ಹಿಂಸೆಯಾಗಲಿಲ್ಲ.
ದ್ವಾರಕೆಯಿಂದ ಸೇನೆಯೊಂದು ಹೊರಟಿದೆ ಎಂಬ ವಾರ್ತೆಯ ಬೆನ್ನಿಗೇ ಬಲರಾಮನ ನೇತೃತ್ವದಲ್ಲಿ ಪ್ರಬಲವಾದ ಪಡೆಯೊಂದು ಬಂದು ಹಸ್ತಿನಾವತಿಯ ಪಟ್ಟಣದ ಹೊರಬಯಲಿನಲ್ಲಿ ಬೀಡುಬಿಟ್ಟಿತು. ಪರಿಚಾರಕಿಯರು ಮಾತನಾಡುತ್ತಿದ್ದುದನ್ನು ಕೇಳಿದ ನನಗೆ ಈ ವಿಚಾರಗಳು ತಿಳಿದವು. ದ್ವಾರಕೆಯ ದೊಡ್ಡ ಸೇನೆಯೇ ಅಂತೆ ಅದು. ಆದರೆ ಹಸ್ತಿನಾವತಿಯ ಸೈನ್ಯದಷ್ಟು ದೊಡ್ಡದಲ್ಲ. ಬಂದ ಸೈನ್ಯ ಪಟ್ಟಣಕ್ಕೆ ಮುತ್ತಿಗೆ ಹಾಕಲಿಲ್ಲ. ಯುದ್ಧಕ್ಕೆ ತೊಡಗಲಿಲ್ಲ. ನಾಲ್ಕಾರು ದಿನ ಏನೂ ನಡೆಯಲಿಲ್ಲ. ಬಳಿಕ ಒಬ್ಬ ದೂತ ಅರಮನೆಗೆ ಬಂದನAತೆ. ಸಭಾಸ್ಥಾನದಲ್ಲಿ ಎಲ್ಲರ ಎದುರು ಬಲರಾಮನ ಸಂದೇಶವನ್ನು ಬಿತ್ತರಿಸಿದನಂತೆ.
“ಕುರುಕುಲದ ಹಿರಿಯರು ಪರಾಂಬರಿಸಬೇಕು. ದ್ವಾರಕೆಯೂ, ಹಸ್ತಿನಾವತಿಯೂ ಹಿಂದಿನಿಂದಲೂ ಆಪ್ತರು. ಕೊಡುಕೊಳ್ಳುವ ವೈವಾಹಿಕ ಸಂಬಂಧವನ್ನು ಹೊಂದಿದವರು. ಈ ಬಂಧುತ್ವವು ಕುಂತೀದೇವಿ ಹಾಗೂ ಸುಭದ್ರೆಯ ವಿವಾಹದಿಂದ ದೃಢವಾಗಿದೆ. ಹೀಗಿರುತ್ತ ನಮ್ಮ ಸಾಂಬ ಸ್ವಯಂವರದಲ್ಲಿ ವಧುವನ್ನು ಅಪಹರಣ ಮಾಡಿದ್ದನ್ನು ಅಪರಾಧವೆಂದು ಪರಿಗಣಿಸದೆ ತತ್ಕ್ಷಣವೇ ಬಿಡುಗಡೆ ಮಾಡಬೇಕು. ಅವನು ಕ್ಷತ್ರಿಯ ಪದ್ಧತಿಯಂತೆ ಹರಣ ಮಾಡಿದ ವಧುವನ್ನೂ ಅವನೊಂದಿಗೆ ಕಳುಹಿಸಬೇಕು ಅಥವಾ ಮುಂದಿನ ಪರಿಣಾಮವನ್ನು ಎದುರಿಸಬೇಕು” – ಇದು ದೂತನು ತಂದ ಸಂದೇಶ.
ಈ ಸಂದೇಶವನ್ನು ಕೇಳಿದ ಕೂಡಲೇ ಕುರುಪ್ರಮುಖರು ಸಿಡಿದೆದ್ದರಂತೆ. ನಮ್ಮ ಕುರುಗಳಲ್ಲಿ ತಾವು ಇತರರಿಗಿಂತ ಶ್ರೇಷ್ಠರು ಎಂಬ ಪ್ರಜ್ಞೆ ಸದಾ ಇತ್ತು. ಅದರಿಂದಾಗಿ, “ಯಾದವರು ದನಕಾಯುವವರು. ನಮಗೆ ಸಮಾನರಲ್ಲ. ಅವರು ಉತ್ತಮ ಕ್ಷತ್ರಿಯರಾದ ನಮ್ಮನ್ನು ಹೀಗೆ ಹೆದರಿಸುವುದೆ? ಗೋಪಾಲಕ ವೃತ್ತಿಯ ಯಾದವರಿಗೆ ನಾವು ಅಂಜಿಕೊAಡು ನಮ್ಮ ಕುಮಾರಿಯನ್ನು ಅಪಹರಿಸುವ ಯತ್ನ ಮಾಡಿದ ಪುಂಡ ಸಾಂಬನನ್ನು ಬಿಡುವ ಪ್ರಶ್ನೆಯೇ ಇಲ್ಲ. ನಾವು ಯುದ್ಧಕ್ಕೆ ಸಿದ್ಧರಾಗೋಣ. ನಮ್ಮ ಗೌರವದ ವಿಚಾರವಿದು. ಆ ಗೊಲ್ಲ ಬಲರಾಮ ಏನು ಮಾಡಿಯಾನು? ನಮ್ಮ ಪ್ರಬಲರಾದ ಮಹಾವೀರರನ್ನು ಎದುರಿಸಿ ಅವನು ನಿಲ್ಲಬಲ್ಲನೆ? ಒಂದು ಕೈ ನೋಡಿಯೇ ಬಿಡೋಣ” ಎಂದೆಲ್ಲ ರೋಷದ ಮಾತುಗಳನ್ನಾಡಿದರಂತೆ, ಸಭೆಯಲ್ಲಿದ್ದವರು. ಅದಕ್ಕೆ ಹಿರಿಯರಾದ ಅಜ್ಜ ಭೀಷ್ಮರು, ಆಚಾರ್ಯ ದ್ರೋಣರು, ಕೃಪರೇ ಮುಂತಾದವರು ಸಮ್ಮತಿಸಿದರಂತೆ. ನನ್ನ ಅಪ್ಪ ಮೊದಲೇ ಸಿಟ್ಟಿನಿಂದ ಕುದಿಯುತ್ತಿದ್ದ. ಇವರೆಲ್ಲರ ಸಹಮತ ಸಿಕ್ಕಿದ ಮೇಲೆ ಇನ್ನೇನು? ಅವರ ಅಭಿಪ್ರಾಯವನ್ನೇ ಸಂದೇಶ ಚರನಿಗೆ ಹೇಳಿ ಕಳುಹಿಸಿದರಂತೆ.
ಇದರ ಪರಿಣಾಮ ಯುದ್ಧವೇ ನಡೆಯುವುದು ಖಚಿತವಿತ್ತು. ಹಾಗಾಗಿ ಸೇನೆಯನ್ನು ಸಜ್ಜುಗೊಳಿಸುವ ಕೆಲಸ ಪ್ರಾರಂಭವಾಯಿತು. ಅವರೇ ಮೊದಲು ಆಕ್ರಮಣ ಮಾಡಲಿ ಎಂದು ಇಕ್ಕಡೆಯವರೂ ನಿರೀಕ್ಷಿಸುತ್ತ ಇದ್ದರು. ಆದರೆ ಬಲರಾಮನ ಸೇನೆ ಮುಂದೆ ಬರಲಿಲ್ಲ. ಅವರು ಬೇರೆ ಏನೋ ಪಥಕ ಹೂಡಿದ ಹಾಗಿತ್ತು. ಒಂದೆರಡು ದಿನ ಏನೂ ಆಗಲಿಲ್ಲ. ಮೂರನೆಯ ದಿನವೋ ಏನೋ. ಹಸ್ತಿನಾವತಿಯವರು ಚಿಂತೆಗೀಡಾಗುವ ಬೆಳವಣಿಗೆಯೊಂದು ಸಂಭವಿಸಿತು. ಪಟ್ಟಣವನ್ನು ಆವರಿಸಿದ ಕೋಟೆಯ ಪಕ್ಕದಲ್ಲಿ ಗಂಗಾನದಿ ರಭಸವಾಗಿ ಹರಿಯುತ್ತಿತ್ತು. ಆ ಭಾಗದ ಕೋಟೆ ಕುಸಿಯುವುದಕ್ಕೆ ತೊಡಗಿತಂತೆ. ಇದೇನು ಅಂತ ನೋಡಿದರೆ ಬಲರಾಮ ತಾನೇ ಮುಂದೆ ನಿಂತು ಕೋಟೆಯ ತಳದಲ್ಲಿ ಕಂದಕವನ್ನು ತೋಡಿ ಕುಸಿಯುವ ಹಾಗೆ ಪ್ರವಾಹದ ದಿಕ್ಕನ್ನು ಬದಲಿಸಿದನಂತೆ. ಭಾರೀ ಪ್ರಮಾಣದ ನೀರು ನಗರಕ್ಕೆ ನುಗ್ಗುವಾಗ ಯಾವ ಸೈನ್ಯ ಏನು ಮಾಡೀತು. ಏನೆಂದು ಪರೀಕ್ಷಿಸುವುದಕ್ಕೆ ಹೋದವರ ಮೇಲೆ ದೂರದಲ್ಲಿ ಅಡಗಿ ಕೂತು ಬಾಣ ಹೊಡೆಯುತ್ತಿದ್ದರಂತೆ ಯಾದವರು. ಈ ರೀತಿಯ ಉಪಾಯಗಳೆಲ್ಲ ನಮ್ಮವರಿಗೆ ತಿಳಿದಿರಲಿಲ್ಲ. ಇವರದೇನಿದ್ದರೂ ಬಯಲಿನ ಹೋರಾಟ.
ನಗರದಲ್ಲಿ ಪ್ರಜೆಗಳ ಹಾಹಾಕಾರ. ಇದರಿಂದ ಎಲ್ಲರಿಗೂ ಚಿಂತೆ ಆವರಿಸಿತು. ಈ ಅಪಾಯದಿಂದ ತಪ್ಪಿಸಿಕೊಳ್ಳುವುದು ಹೇಗೆ?
ಕೋಟೆಯ ಆ ಭಾಗ ಪೂರ್ಣ ಕುಸಿದರೆ ಯಾದವರ ಸೇನೆ ಪಟ್ಟಣದೊಳಗೆ ಬಹು ಸುಲಭವಾಗಿ ನುಗ್ಗಿ ಬಂದೀತು. ನಮ್ಮ ಜನರ ವಸತಿಗಳ ನಡುವೆ ಯುದ್ಧ ಮಾಡಲಾದೀತೆ? ನಮ್ಮ ಪ್ರಜೆಗಳೇ ಯುದ್ಧದಲ್ಲಿ ಬಲಿಯಾಗುವುದಿಲ್ಲವೆ? ಬಂದವರಲ್ಲಿ ಇನ್ನೇನು ಉಪಾಯಗಳಿವೆಯೋ ಯಾರಿಗೆ ಗೊತ್ತು? ಸಭೆಯಲ್ಲಿ ಪರಾಕ್ರಮ ಕೊಚ್ಚಿಕೊಂಡ ಮಹಾವೀರರೆಲ್ಲ ಈಗ ಮೌನವಾಗಿ ಕುಳಿತರು. ಕೊನೆಗೆ ಬಲರಾಮನಿಗೆ ಸ್ವಲ್ಪ ತಗ್ಗಿ ನಡೆಯುವುದೇ ಮಾನ ಉಳಿಸಿಕೊಳ್ಳುವ ದಾರಿ ಎಂದು ಮಂತ್ರಿಗಳು ಅಪ್ಪನಿಗೆ ಸಲಹೆ ಕೊಟ್ಟರಂತೆ. ಹಾಗಾಗಿ ಇಲ್ಲಿಂದ ಒಂದು ಸಂದೇಶ ಕಳಿಸಿದರಂತೆ.
‘ಸಾಂಬನ ಕೆಲಸದಿಂದ ನಮ್ಮ ಗೌರವಕ್ಕೆ ಚ್ಯುತಿಯಾಗಿದೆ. ಹಾಗಾಗಿ ಅವನನ್ನು ಬಂಧನದಲ್ಲಿಟ್ಟಿದ್ದೇವೆ. ಯಾದವರು ಕುರುಗಳ ಕುರಿತು ಆಗ್ರಹ ತಳೆಯಬೇಕಾಗಿಲ್ಲ. ನಾವು ಸಾಂಬನನ್ನು ಬಿಡುಗಡೆ ಮಾಡುತ್ತೇವೆ. ತಮ್ಮ ಆಕ್ರಮಣವನ್ನು ಇಷ್ಟಕ್ಕೇ ನಿಲ್ಲಿಸಿ, ಯಾದವ ಸೇನೆ ಮರಳಬೇಕು’ ಎಂಬ ಸಂದೇಶ ಅಲ್ಲಿಗೆ ಹೋಯಿತು.
ಬಲರಾಮನಿಗೆ ಸಾಂಬನ ಬಿಡುಗಡೆಯೇ ಮುಖ್ಯವಾಗಿತ್ತು. ನನ್ನ ವಿಚಾರದಲ್ಲಿ ಅವನು ತಲೆಕೆಡಿಸಿಕೊಂಡ ಹಾಗೆ ಕಾಣಿಸಲಿಲ್ಲ. ಹಸ್ತಿನಾವತಿಯವರು ತನಗೆ ಅಂಜಿ ಸಂಧಾನಕ್ಕೆ ಬಂದರಲ್ಲ. ತನ್ನ ದೊಡ್ಡಸ್ತಿಕೆಗೆ ಕುಂದಾಗಲಿಲ್ಲ ಎಂದು ಭಾವಿಸಿರಬಹುದು. ಅವನೂ ಸಾಂಬನನ್ನು ಬಿಡುಗಡೆ ಮಾಡಿದರೆ ಯುದ್ಧ ಮುಂದುವರಿಸುವುದಿಲ್ಲ ಎಂದು ಆಶ್ವಾಸನೆ ನೀಡಿದ. ಸಾಂಬನನ್ನು ಬಿಡುಗಡೆ ಮಾಡುವುದು ಎಂದಾಯಿತು. ಇದನ್ನು ಪರಿಚಾರಕಿಯರಿಂದ ಕೇಳಿದ ಮೇಲೆ ನನ್ನ ವಿಷಣ್ಣತೆ ಹೆಚ್ಚಿತು. ನಮ್ಮ ಅಲ್ಪಕಾಲದ ಪ್ರಣಯದ ಕಥೆ ಇಲ್ಲಿಗೆ ಮುಗಿಯಿತು. ಇನ್ನು ಸಾಂಬನೆಲ್ಲೋ ನಾನೆಲ್ಲೋ. ನನಗುಳಿದುದು ಒಂದೋ ತಂದೆ ಹೇಳಿದ ಯುವಕನ ಕೈ ಹಿಡಿಯುವುದು. ಇಲ್ಲವೇ ನನ್ನ ಜೀವನವನ್ನು ಕೊನೆಗೊಳಿಸುವುದು. ಅಯ್ಯೋ ನನ್ನ ಬದುಕೇ! ಅರಮನೆಯಲ್ಲಿ ರಾಜಕುಮಾರಿಯಾಗಿ ಹುಟ್ಟಿ, ಸಂಪತ್ತು, ಸುಖಗಳಲ್ಲಿ ಬೆಳೆದೆ. ಸಾಮಾನ್ಯರಿಗೆ ದಕ್ಕದ ಭಾಗ್ಯ ನನ್ನ ಪಾಲಿಗೆ ಒದಗಿತೆಂದು ಹಿಗ್ಗಿದೆ. ಜೀವನವೆಲ್ಲ ಹೀಗೇ ಸಂಭ್ರಮದಿAದ ಕೂಡಿರುವುದೆಂದು ಕನಸು ಕಂಡೆ. ಆದರೆ ಈಗ? ಕಂಡ ಕನಸು ಕಮರಿಹೋಯಿತು. ನನ್ನನ್ನು ಮೆಚ್ಚಿದ ಸಾಂಬ ಕೊನೆಗೂ ಕೈಬಿಟ್ಟ. ಇನ್ನೇನು ಉಳಿದಿದೆ ನನಗೆ?
ಮರುದಿನ ಬೆಳಗಾಯಿತು. ಅರಮನೆಯಲ್ಲಿ ಎಲ್ಲರಿಗೂ ನೆಮ್ಮದಿ. ಎದುರಾದ ಯುದ್ಧವೊಂದು ತಪ್ಪಿತು. ಹಸ್ತಿನಾವತಿಯ ಮಾನವೂ ಮುಕ್ಕಾಗದೆ ಉಳಿಯಿತು. ಇಂದು ಸಾಂಬನ ಬಿಡುಗಡೆಯಾದರೆ ಬಲರಾಮನಿಗೂ ಪ್ರಸನ್ನತೆ ಉಂಟಾಗುವುದು. ಸಮಸ್ಯೆ ಸರಳವಾಗಿ ಬಗೆಹರಿಯಿತು ಎಂದು ಎಲ್ಲರೂ ನಿಟ್ಟುಸಿರುಬಿಟ್ಟರು. ಸಾಂಬನನ್ನು ಸೆರೆಯಿಂದ ಬಿಡುಗಡೆಗೊಳಿಸುವ ಸಿದ್ಧತೆ ತೊಡಗಿತು. ಅವನಿಗೆ ಸ್ನಾನಾದಿಗಳನ್ನು ಮಾಡಿಸಿ, ಉತ್ತಮ ವಸ್ತ್ರಗಳನ್ನು ತೊಡಿಸಿ, ಸವಿಯಾದ ಮಾತುಗಳನ್ನಾಡಿ, ನಡೆದ ಕಹಿ ಘಟನೆಗಳನ್ನು ಮರೆಯುವಂತೆ ಮಾಡುವುದಕ್ಕೆ ಹಿರಿಯರು ಮುಂದಾದರು. ಸ್ವಲ್ಪ ತರಾತುರಿಯೇ ಇತ್ತು. ಯಾಕೆಂದರೆ ಬಲರಾಮ ಶೀಘ್ರಾತಿ ಶೀಘ್ರವಾಗಿ ಸಾಂಬನ ಬಿಡುಗಡೆಯಾಗತಕ್ಕದ್ದು. ಇಲ್ಲವಾದರೆ ಇಡೀ ಹಸ್ತಿನಾವತಿಯನ್ನು ಗಂಗೆಯಲ್ಲಿ ಮುಳುಗಿಸುತ್ತೇನೆ ಎಂದು ಬೆದರಿಕೆಯೊಡ್ಡಿದ್ದ.
ಆದರೆ ಸಾಂಬ ಸೆರೆಮನೆಯಿಂದ ಹೊರಗೆ ಕಾಲಿಡುವುದಕ್ಕೆ ಒಪ್ಪಲಿಲ್ಲ. “ನಾನು ಇಲ್ಲಿಂದ ಹೊರಕ್ಕೆ ಹೋಗುವುದಿದ್ದರೆ ಲಕ್ಷಣೆಯೊಂದಿಗೆ ಮಾತ್ರ. ಅವಳು ನನ್ನ ವಧು. ಅವಳಿಲ್ಲದೆ ನಾನೊಬ್ಬನೇ ಹೊರಗೆ ಕಾಲಿಡಲಾರೆ. ಅವಳನ್ನು ಕರೆಯಿಸಿ, ನನ್ನೊಂದಿಗೆ ಕಳುಹಿಸಿ. ಅಥವಾ ನಾನು ಶಾಶ್ವತವಾಗಿ ಕಾರಾಗಾರದಲ್ಲಿ ಬಂಧಿಯಾಗಿಯೇ ಇರುತ್ತೇನೆ. ಆಯ್ಕೆ ನಿಮ್ಮದು” ಎಂದನಂತೆ. ಅವನ ಮನಸ್ಸನ್ನು ಬದಲಿಸುವ ಯಾವ ಪ್ರಯತ್ನವೂ ಫಲಿಸಲಿಲ್ಲ. ‘ಅವಳನ್ನು ಕರೆಸಿ’ ಎಂಬ ಒಂದೇ ಹಟವಂತೆ. ಇದನ್ನು ಕೇಳಿದ ನನಗೆ ಬಾಯಾರಿದಾಗ ಹಾಲು ಕುಡಿದಷ್ಟು ಸಂತೋಷವೆನಿಸಿತು. ಆಹಾ! ನಾನು ಸಾಂಬನನ್ನು ಮೆಚ್ಚಿ ವರಿಸಿದ್ದು ಸಾರ್ಥಕವಾಯಿತು ಅಂದುಕೊಂಡೆ.
ಬಿಡುಗಡೆ ವಿಳಂಬವಾದಷ್ಟೂ ಬಲರಾಮ ಕೆರಳುತ್ತಾನೆ. ಒಬ್ಬನೇ ಹೊರಡುವುದಕ್ಕೆ ಸಾಂಬ ಸಮ್ಮತಿಸುತ್ತಿಲ್ಲ. ಬಲಾತ್ಕಾರದಿಂದ ಹೊರಗೆ ಹಾಕುವಂತಿಲ್ಲ. ಅವನ ಬೇಡಿಕೆಯನ್ನು ಅಂಗೀಕರಿಸುವುದಕ್ಕೆ ಅಂದರೆ ನನ್ನನ್ನು ಸಾಂಬನ ಜತೆ ಕಳುಹಿಸುವುದಕ್ಕೆ ಮನಸ್ಸಿಲ್ಲ. ಈ ಸಂದಿಗ್ಧದಲ್ಲಿ ನನ್ನ ಅಪ್ಪನೂ ಉಳಿದ ಹಿರಿಯರೂ ತೊಳಲಾಡಿದರು. ಈ ನಡುವೆ ಎರಡು ಸಲ ಬಲರಾಮ ಎಚ್ಚರಿಕೆ ಕೊಟ್ಟ. ಕೋಟೆಯ ಪಾರ್ಶ್ವ ಕುಸಿಯುವ ಹಂತದಲ್ಲಿತ್ತು. ಕೊನೆಗೆ ಕುರುಗಳು ತಮ್ಮ ಪ್ರಾಣ ರಕ್ಷಣೆಗಾಗಿ ಕುಲೀನತೆಯ ಅಹಂಕಾರವನ್ನು ಬಿಟ್ಟುಕೊಡುವ ಅನಿವಾರ್ಯ ಒದಗಿತು. ನಗರವನ್ನೇ ವಿನಾಶದ ಆಪತ್ತಿಗೆ ಒಡ್ಡುವುದಕ್ಕಿಂತ ಮನೆಯ ಹೆಣ್ಣುಮಗಳನ್ನು ಒಪ್ಪಿಸುವುದೇ ಕ್ಷೇಮಕರ ಎಂದು ಭಾವಿಸಿದರು. ಎಲ್ಲವೂ ಅಷ್ಟೇ ಅಲ್ಲವೆ? ಆಪತ್ತು ಬಂದಾಗ ಮರ್ಯಾದೆ ಎರಡನೆಯ ಸ್ಥಾನಕ್ಕೆ ಸರಿಯುತ್ತದೆ. ಅಂತೂ ನನ್ನನ್ನೂ ಸಾಂಬನ ಜೊತೆ ಕಳುಹಿಸುವುದಕ್ಕೆ ಸಮ್ಮತಿಸಲೇ ಬೇಕಾಯಿತು.
ನನ್ನನ್ನು ಸಾಂಬನ ಜೊತೆ ಕಳುಹಿಸುವುದು ಎಂದಾಯಿತು. ಮದುಮಗಳಿಗೆ ಯಾವ ಬಳುವಳಿ, ಉಡುಗೊರೆಗಳೂ ಇಲ್ಲದೆ, ಸಖಿಯರೂ ಜತೆಗಿಲ್ಲದೆ, ತಂದೆತಾಯಂದಿರು, ಹಿರಿಯರ ಆಶೀರ್ವಾದವೂ ಇಲ್ಲದೆ ಒಬ್ಬಳೇ ಸಾಂಬನ ಜೊತೆ ಹೊರಟೆ. ಇಬ್ಬರೂ ಕೈ ಕೈ ಹಿಡಿದುಕೊಂಡು ಎರಡನೆಯ ಬಾರಿಗೆ ಮಹಾದ್ವಾರದಿಂದ ಹೊರಗೆ ಕಾಲಿಟ್ಟೆವು. ಬಹಳ ದಿನಗಳ ಬಳಿಕ ನಾನು ಸೂರ್ಯನ ಬೆಳಕನ್ನು ಕಂಡೆ. ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡಿದೆ. ನಮ್ಮನ್ನು ಎರಡೂ ತೋಳುಗಳಿಂದ ಸ್ವಾಗತಿಸುವುದಕ್ಕೆ ಬಲರಾಮ ಕಾದು ನಿಂತಿದ್ದ.
ಅವನು ತಂದಿದ್ದ ರಥಗಳಲ್ಲಿ ಒಂದನ್ನು ಸಾಂಬನ ಕೈ ಹಿಡಿದು ಏರಿದೆ. ರಥ ಹೊರಡುವ ಹೊತ್ತಿಗೆ ಕೊನೆಯದಾಗಿ ಹಸ್ತಿನಾವತಿಯ ಅರಮನೆಯನ್ನು ನೋಡಿದೆ. ಗವಾಕ್ಷದಲ್ಲಿ ಒಬ್ಬಳು ಆರ್ತೆಯ ಮುಖ ಗೋಚರಿಸಿತು. ಆ ಮುಖ ನನ್ನ ತಾಯಿಯ ಮುಖವೆ? ಅಸ್ಪಷ್ಟವಾಗಿದ್ದ ಮುಖವನ್ನು ಗುರುತಿಸಲಾಗಲಿಲ್ಲ. ಹನಿದುಂಬಿದ ಕಣ್ಣುಗಳಿಂದ ನೋಡನೋಡುತ್ತಿದ್ದಂತೆ ರಥದ ಚಕ್ರಗಳಿಂದ ಎದ್ದ ಕೆಂಧೂಳು ಆ ಮುಖವನ್ನು ಮರೆಯಾಗಿಸಿತು. ನಾವು ನಿರಾತಂಕವಾಗಿ ದ್ವಾರಕೆಯತ್ತ ಸಾಗಿದೆವು.