ಭತ್ತ ಕುಟ್ಟಿದ ಮೇಲೆ ಹೊಟ್ಟಿಗೇನಿದೆ ಬೆಲೆಯು
ಅತ್ತ ದೂಡುವರದನು ಮೂಲೆಯೆಡೆಗೆ
ಹೊತ್ತಿ ಉರಿಸಿದರದನು ಬರಿ ಬೂದಿ ಕರಿಬಣ್ಣ
ಹತ್ತಿರಕೂ ಸುಳಿಯರದರ ಕಡೆಗೆ
ಅಕ್ಕಿಯಿಂದಲೆ ಅನ್ನವೆಂಬುದೇನೋ ದಿಟವು
ಸಿಕ್ಕಿದರೆ ಸಾಕೆಂಬ ಮೌಢ್ಯ ನಮಗೆ
ಸೊಕ್ಕಿನಲಿ ಘನವಾದ ವಿಷಯವನೆ ಮರೆತಿಹೆವು
ಚಿಕ್ಕದೆನ್ನುವ ತಾತ್ಸಾರ ಭಾವವೆಮಗೆ
ಭತ್ತದೊಳಗಡೆಯಲ್ಲಿ ಅಡಗಿದ್ದ ಶಕ್ತಿಯನು
ಕತ್ತರಿಸಿ ಕಳೆದಿಹೆವು ದೂರವೆಸೆದು
ಉತ್ತಿರುವ ಮಣ್ಣಿನಲಿ ಬಿತ್ತಿದರೆ ಅಕ್ಕಿಯನು
ಮತ್ತೆ ಹುಟ್ಟೀತೇನು ಮೊಳಕೆಯೊಡೆದು
ಹೊಟ್ಟಿಗೆಲ್ಲಿದೆ ಶಕ್ತಿ ಬಲವಿಹುದು ಅಕ್ಕಿಯಲಿ
ಹುಟ್ಟಿಸಲು ಹೊಟ್ಟಿನಾ ನೆರವು ಬೇಕು
ಸುಟ್ಟುಬಿಡು ಮೇಲರಿಮೆ ಕೀಳರಿಮೆ ತರವಲ್ಲ
ಕೆಟ್ಟದದು ನಾವದನು ತೊರೆಯಬೇಕು
ಹೊಟ್ಟಿನಾ ರಕ್ಷೆಯಲಿ ಅಕ್ಕಿಯೊಳು ಚೈತನ್ಯ
ಕಟ್ಟು ಮೀರದೆ ಬದುಕ ಕಟ್ಟಬೇಕು
ಒಟ್ಟಿಗಿದ್ದರೆ ಸಾಕೇ ಒಂದಾಗಿ ಇರಬೇಕು
ಗುಟ್ಟರಿತು ಗುರಿಯೆಡೆಗೆ ನಡೆಯಬೇಕು