ಕುರುಕ್ಷೇತ್ರಯುದ್ಧ ಮುಗಿದನಂತರ ಯುಧಿಷ್ಠಿರ ಹಸ್ತಿನಾಪುರದ ರಾಜನಾದ. ಭೀಮ ಬೊಕ್ಕಸದ ಜವಾಬ್ದಾರಿ ಹೊತ್ತ; ಅಂದರೆ ಅರ್ಥಮಂತ್ರಿ.
ಧೃತರಾಷ್ಟ್ರನಿಗೆ ತಡವಾಗಿ ವೈರಾಗ್ಯ ಉಂಟಾಗಿತ್ತು; ಇನ್ನು ರಾಜವೈಭವ ಸಾಕೆಂದು ಅಡವಿಗೆ ಹೋಗಿ ಅಲ್ಲಿ ಮಿಕ್ಕ ಜೀವಿತಾವಧಿಯನ್ನು ಕಳೆಯಲು ನಿರ್ಧರಿಸಿದ. ಆದರೆ ಆಗಲೂ ಮಕ್ಕಳ ಮೇಲಿನ ವ್ಯಾಮೋಹ ಬಿಡಲಿಲ್ಲ. ತನ್ನ ಮಕ್ಕಳ ನೆನಪು ಜನರ ಮನಸ್ಸಲ್ಲಿ ಉಳಿಯಲಿ ಮತ್ತು ಅವರಿಗೆ ಸದ್ಗತಿ ದೊರೆಯಲಿ ಎಂಬ ಎರಡು ಉದ್ದೇಶದಿಂದ ಯಜ್ಞಯಾಗಾದಿಗಳನ್ನು ನಡೆಸಲು ಇಚ್ಛಿಸಿದ. ಅದಕ್ಕೆ ಭಾರಿಮೊತ್ತದ ಹಣಬೇಕು. ರಾಜನಾದ ಯುಧಿಷ್ಠಿರನನ್ನೇ ಕೇಳಿದ. ಯುಧಿಷ್ಠಿರನಿಗೆ ದೊಡ್ಡಪ್ಪ ಅಂದರೆ ಎಲ್ಲಿಲ್ಲದ ಗೌರವ. ಆ ಯಜ್ಞಯಾಗಾದಿಗಳಿಗೆ ಧನವನ್ನು ಬೊಕ್ಕಸದಿಂದ ಕೊಡುವಂತೆ ಭೀಮನಿಗೆ ಹೇಳಿದ.
ಆದರೆ ಅದಕ್ಕೆ ಭೀಮ ಒಪ್ಪಲಿಲ್ಲ. `ಇದು ಜನರ ಹಣ. ರಾಜ್ಯಬೊಕ್ಕಸದ ಧನ ಜನರ ಯೋಗಕ್ಷೇಮಕ್ಕಾಗಿ ಇದೆ. ಅದನ್ನು ದೊಡ್ಡಪ್ಪ ತನ್ನ ಮಕ್ಕಳ ಹೆಸರು ಉಳಿಸುವುದಕ್ಕಾಗಿ ಬಳಸುವುದು ಸರಿಯಲ್ಲ. ಆದ್ದರಿಂದ ಒಂದು ನಾಣ್ಯವನ್ನೂ ಬೊಕ್ಕಸದಿಂದ ಕೊಡುವುದಿಲ್ಲ’ ಎಂದು ಖಡಾಖಂಡಿತವಾಗಿ ನಿರಾಕರಿಸಿಬಿಟ್ಟ.
ಹೀಗಿತ್ತು ಅಂದಿನ ರಾಜ್ಯಭಾರ ಕ್ರಮ.
– ಸತ್ಯಬೋಧ
ಬೊಕ್ಕಸದ ಹಣ ಜನಹಿತಕ್ಕೆ
Month : June-2015 Episode : Author :
Comments are closed.