ನಮ್ಮ ಮನೆಗಳು ಹಾರಾಡುವ ಹಕ್ಕಿಗಳ ಆಗಸವಾಗಬೇಕೇ ಇಲ್ಲ ಪಂಜರವಾಗಬೇಕೇ ಎಂಬುದು ಮಾನಿನಿಯರ ಕೈಯಲ್ಲೇ ಇದೆ.
ಅದೊಂದು ಪುಟ್ಟಮನೆ. ಮನೆಯಲ್ಲಿ ವಾಸವಿರುವುದು ಅಪ್ಪ, ಅಮ್ಮ ಹಾಗೂ ನಾಲ್ಕು ವರುಷದ ಪುಟ್ಟ ಹುಡುಗಿ. ಆ ಕಂದಮ್ಮ ಮನೆಯಿಂದ ಆಚೆ ಕಾಣಿಸಿಕೊಳ್ಳುವುದೇ ಅಪರೂಪ. ಆದರೆ ಮನೆಯ ಕಿಟಕಿಯಿಂದ ಆಕೆ ಸದಾ ಮನೆಯಿಂದಾಚೆ ಆಡುವ ಮಕ್ಕಳ ಸಂಭ್ರಮವನ್ನು ಕಾಣುತ್ತಾಳೆ. ಅದೇ ಸಂತೋಷಕ್ಕಾಗಿ ಹಂಬಲಿಸುತ್ತಾಳೆ. ‘ಅಮ್ಮಾ… ಆಚೆ ಬಿಡ್ತೀಯಾ ಆಡ್ಕೋತೀನಿ’ ಅಂತ ಗೋಗರೆಯುತ್ತಾಳೆ. ಮರುಕ್ಷಣ ಅವರಮ್ಮನ ದನಿ ಕಿವಿಗಳಿಗೆ ಅಪ್ಪಳಿಸುತ್ತದೆ. ‘ಯಾವಾಗ ನೋಡಿದ್ರೂ ಆಟ ಆಟ ಅಂತ ಅದೊಂದೇ ಧ್ಯಾನ. ಏನ್ ನಿಂಗೆ ಮಾಡೋಕೆ ಬೇರೆ ಕೆಲ್ಸ ಇಲ್ವಾ? ಹೇಳು, ರೈಮ್ಸ್ ಹೇಳು…..ಬಾ ಬಾ ಬ್ಲ್ಯಾಕ್ ಶೀಪ್…..”
‘ನಾನು ರೈಮ್ಸ್ ಹೇಳಿದ್ರೆ ಆಟ ಆಡುವುದಕ್ಕೆ ಬಿಡ್ತೀಯಾ?’ ಮಗು ಷರತ್ತು ವಿಧಿಸುತ್ತದೆ. ಪರಿಣಾಮವಾಗಿ ನಾಲ್ಕೇಟು ತಿನ್ನುತ್ತದೆ. ಅಳುತ್ತಾ ಮಲಗುತ್ತದೆ. ಈ ಪುಟ್ಟಿಗೆ ಮನೆಯೆಂಬುದು ಒಂದು ಬಂದೀಖಾನೆ.
ಅಷ್ಟಕ್ಕೂ ಆ ಕಂದನನ್ನು ದಿನದಲ್ಲಿ ಒಂದು ಗಂಟೆಯಾದರೂ ಹೊರಗೆ ಕರೆತಾರದ ಆ ತಾಯಿಗೆ ಅದೇನು ಚಿಂತೆಯೋ ಭಯವೋ ಗೊತ್ತಿಲ್ಲ. ಆಕೆಯ ಭಯವನ್ನು ಸಾರಾಸಗಟಾಗಿ ಅಲ್ಲಗಳೆಯಲೂ ಬರುವುದಿಲ್ಲ. ಇಂದಿನ ದಿನ ಎಷ್ಟು ಕೆಟ್ಟಿದೆಯೆಂದರೆ ಹಾಲುಹಸುಳೆಯ ಮೇಲೂ ಅದು ಹೆಣ್ಣುಮಗುವೆಂಬ ಕಾರಣಕ್ಕೆ ದೌರ್ಜನ್ಯ ನಡೆಯುತ್ತದೆ. ಆದರೆ ಅಂಥದ್ದೊಂದು ವ್ಯವಸ್ಥೆಯನ್ನು ಎದುರಿಸುವಂತೆ, ಹೋರಾಡುವಂತೆ ನಮ್ಮ ಮಕ್ಕಳು ತಯಾರಾಗಬೇಕೇ ವಿನಾ ನಮ್ಮ ಸುತ್ತಲು ನಾವೇ ಕೋಟೆಕಟ್ಟಿಕೊಳ್ಳುವುದು ಪರಿಹಾರವಲ್ಲ. ಮಗು ಇತರ ಮಕ್ಕಳೊಂದಿಗೆ ಆಟವಾಡುವಷ್ಟು ಸಮಯವಾದರೂ ತಾಯಿಯೂ ಅದನ್ನು ಗಮನಿಸಿಕೊಂಡು ಜೊತೆಗಿರಬಹುದು; ಅಥವಾ ಆಡುವ ಮಕ್ಕಳಿಗೆ ಉತ್ತೇಜನ ನೀಡಬಹುದು; ಅಥವಾ ತಾನೇ ಜೊತೆಗೆ ಆಟವಾಡಬಹುದು. ಯೋಚಿಸಿದರೆ ಹಲವು ದಾರಿಗಳಿವೆ. ಆದರೆ ಅವೆಲ್ಲದರ ಬದಲಾಗಿ ಮಗುವನ್ನು ಮನೆಯೊಳಗೆ ಕೂಡಿಹಾಕಿಕೊಂಡರೆ ಆ ಮಗು ಜನರೊಂದಿಗೆ ಬೆರೆಯುವ ಬಗೆಯನ್ನು ಕಲಿಯುವುದಾದರೂ ಹೇಗೆ?
ಹಾರಲು ಬಯಸುವ ಹಕ್ಕಿಗಳು
ಒಂದು ದಿನ ಆ ತಾಯಿಗೆ ಆರೋಗ್ಯ ಕೆಟ್ಟಿತ್ತು. ವೈದ್ಯರ ಬಳಿಗೆ ಹೋಗಬೇಕಾದರೆ ಈ ಕಂದನನ್ನು ಕರೆದೊಯ್ಯುವುದು ಕಷ್ಟವೆನಿಸಿ ನಮ್ಮ ಮನೆಯಲ್ಲೇ ಬಿಟ್ಟು ಹೋದರು. ನನ್ನಿಬ್ಬರು ಮಕ್ಕಳೊಂದಿಗೆ ಆ ಪುಟ್ಟಿ ಅಂದು ಮನಸೋ ಇಚ್ಛೆ ಕುಣಿದಾಡಿದಳು. ಇದ್ದ ಎರಡು ಗಂಟೆಗಳ ಅವಧಿಯಲ್ಲಿ ಹತ್ತಾರು ಆಟಗಳನ್ನು ಆಡಿದ್ದಾಯಿತು. ಅವಳನ್ನು ಹಿಡಿಯುವವರೇ ಇಲ್ಲ ಎಂಬಂತೆ ತನಗೆ ಎಷ್ಟು ಜೋರಾಗಿ ಮಾತನಾಡಲು ಬರುತ್ತದೋ ಅಷ್ಟೂ ದೊಡ್ಡ ದನಿಯಲ್ಲಿ ಮಾತನಾಡಿದಳು. ಕಿಟಕಿಯಿಂದಾಚೆ ನೋಡುವಾಗ ಮಕ್ಕಳು ಹೇಗೆಲ್ಲಾ ಕುಣಿಯುತ್ತಿದ್ದರೋ ಅದೆಲ್ಲಾ ರೀತಿಯಲ್ಲಿ ಮಜಾ ಮಾಡಿದ್ದಾಯಿತು. ಯಾವಾಗ ಅವಳ ತಂದೆಯ ಬೈಕಿನ ಸದ್ದು ಕೇಳಿಸಿತೋ ಆ ಮಗು ಬಾಗಿಲ ಪರದೆಯ ಹಿಂದೆ ಅವಿತು ನನ್ನನ್ನು ಕರೆದಳು. ‘ಆಂಟೀ, ನೀವೇ ನಮ್ಮಮ್ಮಂಗೆ ಹೇಳಿ ಪ್ಲೀಸ್….. ನಾನೀಗ ಹೋಗಲ್ಲ ಮನೆಗೆ. ಇಲ್ಲೇ ಇರ್ತೀನಿ. ಅಲ್ಲಿಗೆ ಹೋದ್ರೆ ಅಮ್ಮ ಮತ್ತೆ ನನ್ನನ್ನು ಆಚೆ ಬಿಡಲ್ಲ…….’
ನನಗೋ ಇಕ್ಕಟ್ಟು. ಮಗುವೀಗ ಅಮ್ಮನ ಜೊತೆಗೆ ಹೋಗದಿದ್ದರೆ ಅದಕ್ಕೆ ಏಟು ಬೀಳುವುದು ಖಚಿತ. ಆದರೂ ಆ ಮಗುವಿನ ಮುಖದಲ್ಲಿದ್ದ ಮನವಿ, ನಾನು ಹೇಳಿದರೆ ಅವರಮ್ಮ ಆಟವಾಡಲು ಬಿಡುತ್ತಾರೆಂಬ ಭರವಸೆ ನೋಡಿ ನಾನು ಸೋತುಹೋದೆ. ‘ಇರಲಿ ಬಿಡಿ ಇನ್ನೂ ಸ್ವಲ್ಪ ಹೊತ್ತು. ಮಕ್ಕಳ ಜೊತೆಗೆ ಆಟ ಆಡ್ಕೊಂಡು ಖುಷಿಯಾಗಿರ್ತಾಳೆ. ನಮಗೇನೂ ತೊಂದರೆಯಿಲ್ಲ.’ ವಕಾಲತ್ತು ಮಾಡಿದ್ದಾಯಿತು. ಮಗುವಿನ ಬಳಿಯೂ ‘ನೀನೀಗ ಮನೆಗೆ ಹೋಗು. ಊಟಮಾಡಿ ಹಾಲು ಕುಡಿದು ಬಾ. ಆಮೇಲೆ ಆಟವಾಡೋಣ. ನಾನೇ ಕರೀತೀನಿ ನಿನ್ನನ್ನ…..’ ಎಂದು ಪೂಸಿಹೊಡೆದದ್ದಾಯಿತು. ‘ಆಂಟೀ, ನೀವು ನನ್ನನ್ನ ಆಮೇಲೆ ಕರಿಯಲ್ಲ. ಅಕ್ಕ ಮತ್ತೆ ಪುಟ್ಟು ಆಟ ಆಡುವುದಕ್ಕೆ ನಮ್ಮನೆಗೆ ಬರಲ್ಲ……ಅವ್ರು ಆಚೆನೇ ಆಟ ಆಡ್ತಾರೆ. ನಾನಿಲ್ಲೇ ಊಟ ಮಾಡ್ತೀನಿ…..ಹೋಗಲ್ಲ ಮಗುವಿನದ್ದು ತನ್ನದೇ ರೀತಿಯ ವಾದ. ಸುಳ್ಳಲ್ಲದ ವಾದ!
‘ಮಕ್ಕಳು ಕರೆದ ತಕ್ಷಣ ಬರೋದು ಕಲ್ತುಕೋಬೇಕು. ಇಲ್ಲಾಂದ್ರೆ ಒದೆ ಬೀಳುತ್ತೆ…’ ಎಂದ ತಾಯಿ ಅವಳನ್ನು ಎಳೆದೊಯ್ದಳು. ‘ಅಮ್ಮಾ ಇನ್ನೊಂಚೂರೊತ್ತು ಆಟ ಆಡಿ ಬರ್ತೀನಿ…..’ ಎಂಬ ಪುಟ್ಟಿಯ ಮಾತು ಪ್ರತಿ ಹೆಜ್ಜೆಗೂ ಕೇಳಿಸಿತು. ಅದರ ಜೊತೆಗೆ ಅವಳಿಗೆ ಬಿದ್ದ ಏಟುಗಳೂ!
ಇಲ್ಲಿ ಆ ಮಗುವಿನ ತಪ್ಪೇನು? ಅದರ ಮೈಮೇಲೆ ಬಿದ್ದ ಏಟುಗಳು ನಿಜವಾಗಲೂ ನ್ಯಾಯಸಮ್ಮತವೇ? ಮಕ್ಕಳಿಗೆ ತೀರಾ ಹಟಮಾಡಿದಾಗಲೋ ತಪ್ಪುಮಾಡಿದಾಗಲೋ ಒಂದೆರಡು ಹೊಡೆಯದ ಹೆತ್ತವರಿಲ್ಲ. ಆದರೆ ಹಾರಲು ಬಯಸುವ ಹಕ್ಕಿಯನ್ನು ಪಂಜರದಲ್ಲಿಟ್ಟು ಹೊಡೆದರೆ?
ನಮ್ಮ ಬಾಲ್ಯದ ತುಂಬಾ ಬಣ್ಣವಿತ್ತು. ಅಲ್ಲಿ ಸ್ವಾತಂತ್ರ್ಯವಿತ್ತು. ಓಡಾಡುವುದಕ್ಕೆ ಮನೆಯ ಸುತ್ತ ಬೇಕಾದಷ್ಟು ಜಾಗವೂ ಇತ್ತು. ಗೋಡಂಬಿ ಗುಡ್ಡ, ತೋಟ, ತೋಟದಲ್ಲಿ ಮಾವು ಸೀಬೆಯಂಥಾ ಹಣ್ಣುಗಳು…..ಆ ಬದುಕೇ ಬೇರೆ. ಮಣ್ಣಿನಲ್ಲಿ ಆಟವಾಡುವುದಷ್ಟೇ ಅಲ್ಲ, ಮಣ್ಣಿನಲ್ಲಿ ಹೊರಳಾಡಿ ಬಂದರೂ ಏಟು ಬೀಳುತ್ತಿರಲಿಲ್ಲ. ಹಂಡೆ ತುಂಬಾ ಬಿಸಿನೀರು ಸದಾ ಸಿದ್ಧ. ಸ್ನಾನಮಾಡಿಸುವುದಕ್ಕೆ ಅಮ್ಮನೋ ಅಕ್ಕನೋ ಅಪ್ಪನೋ ಯಾರಾದರೂ ಸರಿ. ಮುಸ್ಸಂಜೆಯಾಯಿತೆಂದರೆ ಅಮ್ಮನೊಂದಿಗೆ ದೇವರಿಗೆ ನಮಸ್ಕರಿಸಿ ಬರುವಷ್ಟರಲ್ಲಿ ಕಥೆಯ ಗೊಂಚಲೊಂದಿಗೆ ಕಾಯುವ ಅಜ್ಜಿ. ಕೆಲವೊಮ್ಮೆ ಕಥೆಯ ಜೊತೆಜೊತೆಗೆ ಊಟ. ಅಲ್ಲಿಯೇ ನಿದ್ದೆ. ಯಾರು ಎತ್ತಿ ಚಾಪೆಯ ಮೇಲೆ ಮಲಗಿಸಿಬಿಡುತ್ತಿದ್ದರೋ ಗೊತ್ತಿಲ್ಲ. ಸೂರ್ಯನ ಕಿರಣ ಕಣ್ಣಿನ ಮೇಲೆ ಬಿದ್ದಾಗಲೇ ಎಚ್ಚರ. ಅಷ್ಟರಲ್ಲಿ ತಿಂಡಿ ತಯಾರಿಸಿ ಬಿಡುತ್ತಿದ್ದ ಅಮ್ಮ…..
ಜೀವನದ ಪಾಠ
ಇಂದು ಮನೆಯಲ್ಲಿ ವ್ಯವಸ್ಥೆಗಳು ಹೆಚ್ಚಿವೆ. ಮಕ್ಕಳಿಗೆ ಆಡುವುದಕ್ಕೆ ಕಲ್ಲು, ತೆಂಗಿನ ಗರಿ, ಕೊತ್ತಳಿಗೆ ಬ್ಯಾಟುಗಳ ಬದಲಾಗಿ ಕಂಪ್ಯೂಟರ್ ಗೇಮ್ಗಳೋ, ಮೊಬೈಲ್ ಗೇಮ್ಗಳೋ ಇವೆ. ಅವರೇನು ಬಯಸುತ್ತಾರೋ ಅದನ್ನು ಆ ದಿನವೇ ತಂದುಕೊಡುವುದಕ್ಕೆ ಅಪ್ಪ, ಅಮ್ಮ ಸದಾ ಸಿದ್ಧರಿರುತ್ತಾರೆ; ಆದರೆ ಅವರು ಹಂಬಲಿಸುವ ಸ್ವಾತಂತ್ರ್ಯವನ್ನು ಮಾತ್ರ ಯಾವುದೇ ಕಾರಣಕ್ಕೂ ಕೊಡುವುದಿಲ್ಲ. ಏಕೆಂದರೆ ತಮ್ಮ ಮಗು ಚೆನ್ನಾಗಿ ಓದಬೇಕು, ನೂರಾರು ರೈಮ್ಸ್ ಬಾಯಿಪಾಠ ಹೇಳಬೇಕು, ತರಗತಿಯಲ್ಲಿ ಎಲ್ಲದರಲ್ಲೂ ಮೊದಲಿಗನಾಗಿರಬೇಕು….. ಇತ್ಯಾದಿ ಇತ್ಯಾದಿ. ಆದರೆ ಬಾಲ್ಯದಲ್ಲಿ ದೊರೆಯುವ ಆಟದ ಮಜ, ಅದರ ಜೊತೆಜೊತೆಗೇ ಸಿಗುವ ಹೊಂದಾಣಿಕೆಯ ಪಾಠ, ಜನರೊಂದಿಗೆ ವ್ಯವಹರಿಸುವ ಪಾಠವನ್ನು ಯಾವ ತರಬೇತಿಯೂ ತುಂಬಿಕೊಡುವುದಕ್ಕೆ ಸಾಧ್ಯವಿಲ್ಲ. ಬಾಲ್ಯದ ಪ್ರತಿಯೊಂದು ಅನುಭವವೂ ಕೂಡಾ ಜೀವನದ ಪರೀಕ್ಷೆಗೆ ನಮಗೆ ದೊರೆಯುವ ಪಾಠ.
ಮೇಲೆ ಉದಾಹರಿಸಿದ ಅಮ್ಮ-ಮಗು ಕಾಲ್ಪನಿಕವಲ್ಲ. ನಮ್ಮ ಸುತ್ತಲೂ ಕಾಣುವ ಹಲವು ತಾಯಿ ಮಕ್ಕಳ ಪ್ರತಿರೂಪ. ನಾವಂತೂ ಕಾಣದ ಒತ್ತಡಗಳ ನಡುವೆ ಕಾಣುವ ತೊಂದರೆಗಳ ನಡುವೆ ಒದ್ದಾಡುತ್ತಿದ್ದೇವೆ. ಲಕ್ಷಗಟ್ಟಲೆ ದುಡಿದರೂ ಬದುಕುವ ಸ್ವಾತಂತ್ರ್ಯವನ್ನೇ ಪರದೇಶೀ ಕಂಪನಿಗಳಿಗೆ ಮಾರಿಕೊಂಡಿದ್ದೇವೆ. ಆತಂಕ, ಒತ್ತಡಗಳಿಗೆ ಮನಸ್ಸು ಹೃದಯಗಳೆರಡನ್ನೂ ಬಲಿಕೊಡುತ್ತಾ ಬದುಕುತ್ತಿದ್ದೇವೆ. ಮೂವತ್ತು ದಾಟಿದವರಿಗೆ ಬಿ.ಪಿ., ಶುಗರ್. ಅದೂ ಜೀವನದ ಅವಿಭಾಜ್ಯ ಅಂಗ ಎಂಬಂತೆ ಸಾಕಿಕೊಳ್ಳುತ್ತೇವೆ. ಆದರೆ ಮಕ್ಕಳ ಸ್ವಾತಂತ್ರ್ಯ ಕಸಿಯುವ ಹಕ್ಕು ನಮಗೆಲ್ಲಿಯದ್ದು? ಹೂವು ತಾನಾಗಿ ಅರಳಬೇಕು. ಬಲವಂತದಿಂದ ಅರಳಿಸಲೂ ಸಾಧ್ಯವಿಲ್ಲ, ಮುದುಡಿಸಲೂ ಸಾಧ್ಯವಿಲ್ಲ. ಪ್ರೆಶರ್ಕುಕ್ಕರಿನಲ್ಲಿ ಅನ್ನ ಬೇಯಿಸಿದ ಹಾಗೆ ಮಕ್ಕಳನ್ನೂ ಬೇಗ ಪ್ರಬುದ್ಧರನ್ನಾಗಿಸಲು ಹೊರಡುತ್ತೇವೆ. ನಾವೂ ಕಾಯಿಲೆ ಬೀಳುತ್ತೇವೆ, ಮಕ್ಕಳನ್ನೂ ಬೀಳಿಸುತ್ತೇವೆ.
ನಮ್ಮ ಮನೆಗಳು ಹಾರಾಡುವ ಹಕ್ಕಿಗಳ ಆಗಸವಾಗಬೇಕೇ ಇಲ್ಲ ಪಂಜರವಾಗಬೇಕೇ ಎಂಬುದು ಮಾನಿನಿಯರ ಕೈಯಲ್ಲೇ ಇದೆ.?
Comments are closed.