ಆರ್ಥಿಕ ಪರಿಸ್ಥಿತಿಯ ವಾಸ್ತವತೆಯನ್ನು ವಿವರಿಸುವ ಪುಸ್ತಕ
ಪುಸ್ತಕ The Third Curve:
The End of Growth as we know it
ಲೇಖಕರು: ಮನ್ಸೂರ್ ಖಾನ್
ಪುಟಗಳು: ೮+೨೦೨; ಬೆಲೆ: ರೂ. ೪೯೫
ಪ್ರತಿಗಳಿಗೆ: www.mansoorkhan.net
೨೦೧೩ರಲ್ಲಿ ಪ್ರಕಟಗೊಂಡ ಮನ್ಸೂರ್ ಖಾನ್ ಅವರ ಪುಸ್ತಕ ‘The Third Curve’ ಈಚೆಗೆ ಬಹಳಷ್ಟು ಚರ್ಚೆಯಾಗುತ್ತಿರುವ ಪುಸ್ತಕವಾಗಿದೆ. The Third Curve ಎನ್ನುವುದಕ್ಕೆ ಪುಸ್ತಕದ ಪೂರಕಸಾಲು The End of Growth as we know it’ ‘ (ನಾವು ತಿಳಿದ ಅಭಿವೃದ್ಧಿಯ ಕೊನೆ) ಎಂಬುದಾಗಿ ಇದೆ. ಜಗತ್ತು ಈಗ ಅಭಿವೃದ್ಧಿ ಎನ್ನುವ ಮಾಯಾಕುದುರೆಯನ್ನೇರಿ ಮುಂದುವರಿಯುತ್ತಿದೆ. ಆದರೆ ಆ ಕುದುರೆ ಎಂಥದ್ದು? ನಮ್ಮ ಗಮ್ಯಸ್ಥಾನಕ್ಕೆ ನಮ್ಮನ್ನು ಅದು ಒಯ್ಯಬಲ್ಲದೆ? – ಎಂಬುದು ಯಾರಿಗೂ ಗೊತ್ತಿರುವಂತೆ ಕಾಣಿಸುತ್ತಿಲ್ಲ. ನಮ್ಮ ಅಭಿವೃದ್ಧಿಯ ಶಿಲ್ಪಿಗಳು ಎನಿಸಿದವರು, ನಮ್ಮ ನೀತಿ ನಿರೂಪಕರಿಗಂತೂ ಅದು ಗೊತ್ತೇ ಇಲ್ಲ.
‘ವಾಸ್ತವವನ್ನು ಎದುರಿಸಿ; ಇಲ್ಲವಾದರೆ ವಾಸ್ತವವೇ ನಿಮ್ಮನ್ನು ನೋಡಿಕೊಳ್ಳುತ್ತದೆ’ ಎಂಬ ಅಜ್ಞಾತ ವ್ಯಕ್ತಿಯ ಮಾತು ಈ ಲೇಖಕರಿಗೆ ಶಿರೋಧಾರ್ಯ ಎಂಬಂತಿದೆ. ಹಣಕಾಸು ಮಾರುಕಟ್ಟೆ ಬೆದರಿಕೆಗೆ ಗುರಿಯಾಗಿದೆ; ಅಭಿವೃದ್ಧಿಯ ವೇಗ ಕುಸಿಯುತ್ತಿದೆ. ಬಹುಕಾಲದಿಂದ ಅನುಸರಿಸಿಕೊಂಡು ಬಂದ ಆರ್ಥಿಕ ಪ್ರಗತಿಯ ಸೂತ್ರಗಳು ಕೈಕೊಡುತ್ತಿವೆ; ಇದು ಮುಖ್ಯವಾಗಿ ೨೦೦೮ರ ಜಾಗತಿಕ ಆರ್ಥಿಕ ಕುಸಿತದ ನಂತರದ ವಿದ್ಯಮಾನ ಎಂಬುದು ಪುಸ್ತಕದ ವಿಚಾರಸರಣಿ.
ಇಂದಿನ ಈ ಆರ್ಥಿಕ ಪರಿಸ್ಥಿತಿಯ ವಾಸ್ತವತೆ ಅರ್ಥವಾಗಬೇಕಿದ್ದರೆ ಬೇರೆಯದೇ ಕನ್ನಡಕ ಬೇಕು ಎನ್ನುವ ಪುಸ್ತಕ ಆ ಕನ್ನಡಕವನ್ನು ತಾನು ಒದಗಿಸುವುದಾಗಿ ಹೇಳುತ್ತದೆ. ಹಣ ಮತ್ತು ಇಂಧನ, ಬಂಡವಾಳ ಮತ್ತು ಸಂಪನ್ಮೂಲ ಹಾಗೂ ಪರಿಕಲ್ಪನೆ ಮತ್ತು ವಾಸ್ತವಗಳ ನಡುವಣ ಸಂಬಂಧವನ್ನು ಮರೆತದ್ದೇ ಈ ಸಮಸ್ಯೆಯ ಮೂಲ ಎನ್ನುವ ಪುಸ್ತಕದ ಬಗ್ಗೆ ಉನ್ನತ ಚಿಂತಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಮಾಧ್ಯಮ ಯುವಕರಿಗೆ ದಾರಿದೀಪ
ಪುಸ್ತಕ: ನೀವು ಅತ್ಯುತ್ತಮ ಸಂದರ್ಶಕ ಆಗಬಯಸುವಿರಾ?
ಲೇಖಕರು: ಅರುಣಕುಮಾರ ಹಬ್ಬು
ಪುಟಗಳು: ೧೪+೧೫೪; ಬೆಲೆ: ರೂ. ೧೫೦
ಪ್ರಕಾಶಕರು: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ
ಹುಬ್ಬಳ್ಳಿ ೫೮೦ ೦೨೦
ಹೊಸದಾಗಿ ಪತ್ರಿಕೋದ್ಯಮಕ್ಕೆ ಕಾಲಿಡುತ್ತಿರುವ ಹಾಗೂ ಕೆಲಕಾಲ ಪತ್ರಿಕೋದ್ಯಮದಲ್ಲಿ ಕೆಲಸಮಾಡುತ್ತಿರುವವರು ತಿಳಿಯಬೇಕಾದ, ಕಲಿಯಬೇಕಾದ ಅನೇಕ ಅನಿವಾರ್ಯತೆಗಳು ಇಂದು ನಿರ್ಮಾಣವಾಗಿವೆ. ಈ ಹಿನ್ನೆಲೆಯನ್ನು ಇಟ್ಟುಕೊಂಡು, ಮಾಧ್ಯಮದ ಯುವಮಿತ್ರರಿಗೆ ದಾರಿದೀಪವೆಂದು, ಪರ್ತಕರ್ತ ಅರುಣಕುಮಾರ ಹಬ್ಬು ರಚಿಸಿದ ಗ್ರಂಥ – ‘ನೀವು ಅತ್ಯುತ್ತಮ ಸಂದರ್ಶಕ ಆಗಬಯಸುವಿರಾ?’ ಲೇಖಕ ಅರುಣಕುಮಾರ ಹಬ್ಬು ಪತ್ರಿಕೋದ್ಯಮದಲ್ಲಿ ತಾವು ಗಳಿಸಿದ ೩೩ ವರ್ಷಗಳ ಅನುಭವ ಹಾಗೂ ನಡೆಸಿದ ಸಂದರ್ಶನಗಳನ್ನು ಆಧಾರವಾಗಿಟ್ಟುಕೊಂಡು ಈ ಗ್ರಂಥವನ್ನು ರಚಿಸಿದ್ದಾರೆ. ಇದು ಉದಯೋನ್ಮುಖ ಪತ್ರಕರ್ತರಿಗೆ ಒಂದು ಮಾರ್ಗದರ್ಶಿಯಾದರೆ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಅಥವಾ ಆಕರಗ್ರಂಥವಾಗಿ ಪ್ರಯೋಜನವಾಗಬಹುದು ಎಂಬುದು ಲೇಖಕರ ಅಭಿಮತ.