ದೋಷೇಭ್ಯೋ ನೈವ ಭೇತವ್ಯಂ
ದೃಢಾ ಚೇದ್ಭಕ್ತಿರಚ್ಯುತೇ |
ತಿಮಿರೇಭ್ಯೋ ನ ಹಿ ಭಯಂ
ದೀಪಶ್ಚೇಲ್ಲಭ್ಯತೇ ಮಹಾನ್ ||
– ವಿಶ್ವಗುಣಾದರ್ಶ, ೧೪೯
“ಭಗವಂತನಲ್ಲಿ ದೃಢವಾದ ಭಕ್ತಿಯಿದ್ದಲ್ಲಿ ಹೊರಗಿನ ದೋಷಗಳಿಂದಲೂ ನ್ಯೂನತೆಗಳಿಂದಲೂ ಹೆದರಬೇಕಾದ್ದಿಲ್ಲ. ಪ್ರಕಾಶಮಾನವಾದ ದೀಪದ ಆಸರೆ ಇದ್ದರೆ ಕತ್ತಲೆಗೇಕೆ ಭಯಪಡಬೇಕು?”
ಎಲ್ಲ ಪ್ರಾಪಂಚಿಕ ದುಃಖಗಳನ್ನೂ ‘ತಿಮಿರವನ್ನೂ (ಎಂದರೆ ಬಾಹ್ಯ ಹಾಗೂ ಆಂತರಿಕ ಅಂಧಕಾರವನ್ನೂ) ನಿವಾರಿಸಬಲ್ಲದ್ದು, ನಾಶಮಾಡಬಲ್ಲದ್ದು ಭಗವದ್ಭಕ್ತಿ ಎಂಬ ಅಸ್ತ್ರ.
ಸಮಸ್ಯೆಗಳೂ ಕ್ಲೇಶಗಳೂ ಹಲವಾದರೂ, ಪರಿಹಾರ ಒಂದೇ! ಮೂಲೆಯಲ್ಲಿ ಹಚ್ಚಿಟ್ಟ ಒಂದು ಹಣತೆ ಇಡೀ ಕೋಣೆಯ ಕತ್ತಲೆಯನ್ನು ಕಳೆಯಬಲ್ಲದು – ಎಂಬುದು ತಾತ್ಪರ್ಯ.
ಕ್ಷೌರ ಮಾಡಿಸಿಕೊಳ್ಳುವುದಕ್ಕೆ ಒಬ್ಬಾತ ‘ಅಯುಷ್ಕರ್ಮಶಾಲೆಗೆ ಹೋದ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು. ಆಗಷ್ಟೆ ಊರಿನಲ್ಲಿ ಯಾವುದೊ ರಥೋತ್ಸವ ನಡೆದಿತ್ತು. “ಇಷ್ಟಕ್ಕೂ ದೇವರು ಎಲ್ಲಿದ್ದಾನೆ? ಇಷ್ಟೊಂದು ಜನ ನಮ್ಮ ಸಮಯವನ್ನೂ ಹಣವನ್ನೂ ವ್ಯರ್ಥಮಾಡುತ್ತಿದ್ದಾರಲ್ಲ!” ಎಂದ, ಕ್ಷೌರಿಕ,
ಗಿರಾಕಿ: “ದೇವರು ಇಲ್ಲವೆಂದು ನೀನು ಹೇಗೆ ಹೇಳುತ್ತೀ?”
ಕ್ಷೌರಿಕ:
“ಒಮ್ಮೆ ರಸ್ತೆಗೆ ಹೋಗಿ ನೋಡಿ. ದೇವರಿದ್ದಿದ್ದರೆ ಇಷ್ಟೊಂದು ಜನ ಅನಾಥರು, ರೋಗಿಗಳು, ದಟ್ಟದರಿದ್ರರು ಲೋಕದಲ್ಲಿ ಇರುತ್ತಿದ್ದರೆ?”
– ಗಿರಾಕಿ ಮಾತನಾಡಲಿಲ್ಲ. ಕ್ಷೌರ ಮುಗಿದು ಹಣ ತೆತ್ತಾದ ಮೇಲೆ ಹೇಳಿದ:
ಗಿ: “ನೀನು ದೇವರಿಲ್ಲ ಎಂದೆ ಅಲ್ಲವೆ? ನಾನು ಹೇಳುತ್ತೇನೆ – ಇಲ್ಲಿ ಕ್ಷೌರಿಕ ಎಂಬವನು ಇಲ್ಲ!”
ಕ್ಷೌ:“ಏನು ವಿಚಿತ್ರವಾಗಿ ಮಾತನಾಡುತ್ತಿದ್ದೀರಿ? ನೀವು ಈಗ ತಾನೆ ನನ್ನಿಂದಲೇ ಕ್ಷೌರ ಮಾಡಿಸಿಕೊಳ್ಳಲಿಲ್ಲವೆ?”
ಗಿ: ರಸ್ತೆಯ ಕಡೆ ಬೊಟ್ಟು ಮಾಡಿ ತೋರಿಸಿದ. ಅಲ್ಲೊಬ್ಬ ಗಡ್ಡ-ಜುಟ್ಟು ಬೆಳೆಸಿದ ಭಿಕ್ಷುಕ ಕುಳಿತಿದ್ದ.
ಗಿ: “ಲೋಕದಲ್ಲಿ ಕ್ಷೌರಿಕರು ಇದ್ದಿದ್ದರೆ ಹೀಗೆ ಜುಟ್ಟು-ಗಡ್ಡ ಬೆಳೆದವರು ಏಕಿರುತ್ತಿದ್ದರು?”
ಕ್ಷೌ: “ಅವನಲ್ಲಿ ಹಣ ಇಲ್ಲವಾದ್ದರಿಂದ ಅವನು ಇಲ್ಲಿ ಬಂದಿಲ್ಲ. ಬಂದಿದ್ದರೆ ನಾನು ಅವನಿಗೆ ಕ್ಷೌರ ಮಾಡಿರುತ್ತಿದ್ದೆ.”
ಗಿ: “ನಾನು ಹೇಳುವುದೂ ಅದೇ! ಭಕ್ತಿ ಎಂಬ ಹಣ ಇಲ್ಲದಿರುವ ಕಾರಣ ಎಷ್ಟೊ ಜನ ದೇವರ ಹತ್ತಿರ ಹೋಗುವುದಿಲ್ಲ. ಭಕ್ತಿಯ ಕೊರತೆಯಿಂದಾಗಿ ಏನೇನೊ ಸಮಸ್ಯೆಗಳನ್ನಂಟಿಕೊಂಡವರು ರಸ್ತೆಯಲ್ಲಿ ತುಂಬಿದ್ದಾರೆ. ದೇವರನ್ನು ನಂಬಿದವರಾರೂ ಅನಾಥರಲ್ಲ.”
ದೀಪ್ತಿ
Month : February-2026 Episode : Author :




