೨೦೨೬ – ಅನಾದಿಕಾಲದಿಂದಲೂ ಭಾರತೀಯರ ಪವಿತ್ರಕ್ಷೇತ್ರ. ಜ್ಯೋತಿರ್ಲಿಂಗಗಳಲ್ಲೊಂದಾದ ಸೋಮನಾಥ ದೇವಾಲಯದ ಇತಿಹಾಸದಲ್ಲಿ ಮಹತ್ತ್ವದ ವರ್ಷ. ವಿದೇಶೀ ದಾಳಿಕೋರರ ಮೊಹಮ್ಮದ್ ಗಜನಿಯಿಂದ ಈ ಪುಣ್ಯಕ್ಷೇತ್ರದ ಮೇಲೆ ಮೊದಲ ದಾಳಿ ನಡೆದು (೧೦೨೬ ಜನವರಿಯಲ್ಲಿ) ಒಂದು ಸಾವಿರ ವರ್ಷಗಳೇ ಕಳೆದವು. ಇನ್ನೊಂದು – ಭಾರತದ ಪುನರುತ್ಥಾನದ ಸಂಕೇತ ನಾಂದಿ ಎಂಬಂತೆ ಭವ್ಯ ಸೋಮನಾಥ ಮಂದಿರ ಮರುನಿರ್ಮಾಣಗೊಂಡು (ಮೇ ೧೧, ೧೯೫೧) ೭೫ ವರ್ಷಗಳು ಪೂರೈಸಿದೆ.
ವಿದೇಶೀ ದಾಳಿಕೋರರ ಆಕ್ರಮಣಕ್ಕೆ ಸೋಮನಾಥ ಮಂದಿರ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದೆ. ಆಫಘನಿಸ್ತಾನದ ಮೊಹಮ್ಮದ್ ಗಜನಿ(೧೦೨೬)ಯಿಂದ ಪ್ರಾರಂಭಿಸಿ ಅಲ್ಲಾವುದ್ದೀನ್ ಖಿಲ್ಜಿ (೧೩೦೦), ಮೊದಲನೆ ಮುಜಾಫರ್ ಶಾ (೧೩೯೦), ಮೊಹಮ್ಮದ್ ಬೆಗಡಾ (೧೪೯೦), ಎರಡನೆಯ ಮುಜಾಫರ್ (೧೫೩೦), ಔರಂಗಜೇಬ್ (೧೭೦೬) – ಹೀಗೆ ಸೋಮನಾಥ ಮಂದಿರದ ವಿದ್ವಂಸ ಕಾರ್ಯ ನಿರಂತರವಾಗಿ ನಡೆಯಿತು. ಸ್ವತಃ ಗಜನಿ ಮೊಹಮ್ಮದ್ ಮಂದಿರದೊಳಗೆ ಕಾಲಿಟ್ಟು ಜ್ಯೋತಿರ್ಲಿಂಗವನ್ನು ಪುಡಿಗುಟ್ಟಿದ. ದೇವಸ್ಥಾನವನ್ನು ವಿಧ್ವಂಸಗೊಳಿಸಿದ ಬಳಿಕ ಆತ ಅಲ್ಲಿದ್ದ ಭಾರಿ ಪ್ರಮಾಣದ ಬಂಗಾರ ಮತ್ತು ಅಮೂಲ್ಯ ಆಸ್ತಿಯನ್ನು ಆಫಘನಿಸ್ತಾನಕ್ಕೆ ಕೊಂಡೊಯ್ದ. ಅಷ್ಟೇ ಅಲ್ಲ, ದೇವರಮೂರ್ತಿಗಳನ್ನು ಹೊತ್ತೊಯ್ದು ಅಲ್ಲಿಯ ಮಸೀದಿಯ ಬಾಗಿಲಿನಲ್ಲಿ ಹುದುಗಿಸಿ, ಜನ ಅವುಗಳನ್ನು ಮೆಟ್ಟುವಂತೆ ಮಾಡಿದ. ಹೀಗೆ ಈ ಎಲ್ಲ ದಾಳಿಗಳು ದೇವಸ್ಥಾನದ ಲೂಟಿಗಷ್ಟೇ ನಿಲ್ಲದೇ ವಿಗ್ರಹಭಂಜನೆ, ಶ್ರದ್ಧಾಭಂಗಗೊಳಿಸುವಂತಹ ಅನಾಚಾರಗಳು ಎಗ್ಗಿಲ್ಲದೆ ನಡೆದವು. ಪ್ರತಿ ಬಾರಿ ದಾಳಿ ನಡೆದಾಗಲೂ ಸೋಮನಾಥ ಮಂದಿರದ ರಕ್ಷಣೆಗಾಗಿ ಹಿಂದೂಗಳು ಕೆಚ್ಚೆದೆಯಿಂದ ಹೋರಾಡಿದರು. ಮತ್ತೆ ಮತ್ತೆ ಮಂದಿರ ಧ್ವಂಸಗೊಳಿಸಿದಾಗಲೂ ಅದನ್ನು ಮರುನಿರ್ಮಿಸಿದರು!
ಭಾರತಕ್ಕೆ ಸ್ವಾತಂತ್ರ್ಯ ಬಂದ ಹೊಸ್ತಿಲಲ್ಲೇ ಸೋಮನಾಥ ಮಂದಿರದ ಪುನರುತ್ಥಾನದ ಪ್ರತಿಜ್ಞೆ ಮಾಡಿ ಅದನ್ನು ಮರುನಿರ್ಮಾಣಗೊಳಿಸಿದ್ದು ಸರ್ದಾರ್ ಪಟೇಲರ ದೃಢ ನಿರ್ಧಾರ, ಕೆ.ಎಂ. ಮುನ್ಶಿಯವರ ದಿಟ್ಟ ಹೋರಾಟ ಮತ್ತು ರಾಜೇಂದ್ರ ಪ್ರಸಾದ್‌ರ ‘ರಾಷ್ಟ್ರಪತಿ ಮುದ್ರೆ’.
೧೯೫೧ರಲ್ಲಿ ಮಂದಿರ ಲೋಕಾರ್ಪಣೆಗೊಳಿಸಿದ ಡಾ|| ಬಾಬು ರಾಜೇಂದ್ರ ಪ್ರಸಾದ್ ಅವರು ‘ಸೋಮನಾಥ ಮಂದಿರ ರಾಷ್ಟ್ರೀಯ ನಂಬಿಕೆಯ ಸಂಕೇತ’ ಎಂದು ಸ್ಪಷ್ಟವಾಗಿ ಘೋಷಿಸಿದರು. “ಈ ಮಂದಿರ ಬೂದಿಯಿಂದ ಮೇಲಕ್ಕೆದ್ದು ನಿಂತಿದೆ. ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಈ ಸೀಮಾತೀತ ನಂಬಿಕೆಯ ಸಂಕೇತವನ್ನು ವಿಶ್ವದ ಯಾವುದೇ ವ್ಯಕ್ತಿ, ಶಕ್ತಿ ಅಥವಾ ಅಧಿಕಾರದಿಂದ ನಾಶಪಡಿಸಲಾಗದು ಎಂಬುದನ್ನು ಈ ಮಂದಿರ ಸಾರಿ ಹೇಳಿದೆ. ಇಂದು ನಮ್ಮ ಪ್ರಯತ್ನ ಗತ-ಇತಿಹಾಸವನ್ನು ಬದಲಿಸಲಾಗದು. ಆದರೆ ಅದು ನಮ್ಮ ಧಾರ್ಮಿಕ ನಂಬಿಕೆ ಮತ್ತು ಮೌಲ್ಯವನ್ನು ಮರುಸ್ಥಾಪಿಸಬಲ್ಲದು.” – ಎಂದರು.
ಇದೀಗ ಐದು ನೂರು ವರ್ಷಗಳ ಸುದೀರ್ಘ ವೈಚಾರಿಕ-ರಾಜಕೀಯ-ನ್ಯಾಯಾಂಗಾಧೀನ ಸಂಘರ್ಷಗಳ ಫಲರೂಪವಾಗಿ ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿ ಭವ್ಯ ಶ್ರೀರಾಮಮಂದಿರ ನಿರ್ಮಾಣವೂ ಸಾಕಾರಗೊಂಡಿದೆ. ಇವುಗಳು ಕೇವಲ ಮಂದಿರವೊಂದರ ಮರುನಿರ್ಮಾಣವಾಗಿರಲಿಲ್ಲ, ಕಳೆದುಹೋಗಿದ್ದ ರಾಷ್ಟ್ರಗೌರವದ, ಸ್ವಾಭಿಮಾನದ ಮರುಪೂರಣಕ್ಕಾಗಿ ಮನಃಪೂರ್ವಕವಾಗಿ ನಡೆದ ದಿಟ್ಟ ಮತ್ತು ಯಶಸ್ವಿ ಹೋರಾಟಗಾಥೆ. ಇದು ಭಾರತದ ಅಂತಃಸ್ಸತ್ತ್ವ. ಅದಲ್ಲದಿದ್ದರೆ ದಾಳಿಕೋರ ಅಬ್ರಹಾಮಿಕ್ ರಿಲಿಜನ್‌ಗಳ ಅತ್ಯಾಚಾರದಿಂದ ನಾಶವಾದ ಶ್ರದ್ಧಾಸ್ಥಾನಗಳನ್ನು ಮರಳಿ ನಿರ್ಮಿಸಿಕೊಂಡ ಮಾನವೇತಿಹಾಸದ ದಾಖಲೆ ಇರುವುದು ಭಾರತದ ಹೆಸರಿನಲ್ಲಿ ಮಾತ್ರ.
ಸೋಮನಾಥ ಮಂದಿರ ಪುನರುತ್ಥಾನ
Month : February-2026 Episode : Author :




