“ಬಡ ಮೆಕ್ಸಿಕೋ, ಅಮೆರಿಕಾಗೆ ಹತ್ತಿರ, ದೇವರಿಂದ ಬಹು ದೂರ!’’
ಬಲಾಢ್ಯ ಅಮೆರಿಕದ ನೆರೆನಾಡಾಗಿ ತನ್ನ ದೇಶ ಅನುಭವಿಸುತ್ತಿರುವ ಸಂಕಷ್ಟಗಳನ್ನು ನೆನೆದು ಒಂದು ಶತಮಾನದ ಹಿಂದೆ ಮೆಕ್ಸಿಕೋದ ಅಂದಿನ ಅಧ್ಯಕ್ಷ ಫಿಗರೆಡೋ ಡಯಾಸ್ ಅಲವತ್ತುಕೊಂಡದ್ದು ಹೀಗೆ! ಈ ಮಾತುಗಳು ಅಮೆರಿಕ ಕಳೆದ ಇನ್ನೂರು ವರ್ಷಗಳಿಂದಲೂ ಪಶ್ಚಿಮಾರ್ಧ ಗೋಲದಲ್ಲಿ ಅನುಸರಿಸಿಕೊಂಡು ಬರುತ್ತಿರುವ ನೀತಿಗಳ ಒಂದು ಚಿತ್ರಣವನ್ನು ನಮಗೆ ನೀಡುತ್ತವೆ. ಹಾಗೆ ನೋಡಿದರೆ ಪ್ರತಿಯೊಂದು ಬಲಾಢ್ಯ ದೇಶ ಅಥವಾ ಸಾಮ್ರಾಜ್ಯ ತನ್ನ ಸುತ್ತಲಿನ ಸಣ್ಣಪುಟ್ಟ ದೇಶಗಳು ತನ್ನ ಹಿತಾಸಕ್ತಿಗಳಿಗೆ ವಿರುದ್ಧವಾಗಿ ನಡೆದುಕೊಳ್ಳದಂತೆ ಅಥವಾ ತನ್ನ ವೈರಿಗಳ ಕೈಗೊಂಬೆಗಳಾಗದಂತೆ ತಡೆಯಲು ನಿರಂತರವಾಗಿ ಹೆಣಗುತ್ತಿರುತ್ತವೆ. ಪ್ರಾಚೀನ ಕಾಲದಲ್ಲಿ ಅಥೆನ್ಸ್, ಸ್ಪಾರ್ಟಾ, ಪರ್ಷಿಯಾ, ಮೌರ್ಯ ಭಾರತ, ಚೀನಾ – ಹೀಗೆಯೆ ಮಾಡಿದ್ದವು. ಮಧ್ಯಯುಗದಲ್ಲಿ ಇಂಗ್ಲೆಂಡ್, ರಶಿಯಾ, ಆಸ್ಟ್ರಿಯಾ, ತುರ್ಕಿಗಳು ಮಾಡಿದ್ದೂ ಇದನ್ನೇ. ಆಧುನಿಕ ಕಾಲದಲ್ಲೂ ಅವುಗಳ ಈ ನೀತಿ ಸರಿಸುಮಾರು ಹೀಗೆಯೆ ಮುಂದುವರಿದಿತ್ತು.
ಇಂದೂ ಸಹ ಪೂರ್ವ ಯೂರೋಪ್ನಲ್ಲಿ ಮತ್ತು ಮಧ್ಯ ಏಶಿಯಾದಲ್ಲಿ ರಶಿಯಾ, ದಕ್ಷಿಣ ಪೂರ್ವ ಏಶಿಯಾದಲ್ಲಿ ಚೀನಾ, ದಕ್ಷಿಣ ಏಶಿಯಾದಲ್ಲಿ ಒಂದಷ್ಟು ಮಟ್ಟಿಗೆ ನಾವೂ ಹೀಗೇ ಮಾಡುತ್ತಿದ್ದೇವೆ. ಬೃಹದ್ ರಾಷ್ಟçಗಳ ಅಸ್ತಿತ್ವಕ್ಕೆ ಇದು ಅಗತ್ಯ. ಕಳೆದ ಎರಡು ಶತಮಾನಗಳಿಂದಲೂ ಅಮೆರಿಕ ಮಾಡಿಕೊಂಡು ಬರುತ್ತಿರುವುದು ಇದನ್ನೇ. ಅದು ಮೊದಲಿಗೆ ದೊಡ್ಡದಾಗಿ ಕಾಣಿಸಿಕೊಂಡದ್ದು ೧೮೨೦ರ ದಶಕದ ಆದಿಭಾಗದಲ್ಲಿ. ವಸಾಹತುಶಾಹಿ ಯುಗದಲ್ಲಿ ಇಡೀ ಅಮೆರಿಕ ಖಂಡಗಳೂ ಪೋರ್ತುಗಲ್, ಸ್ಪೇನ್, ಫ್ರಾನ್ಸ್ ಮತ್ತು ಇಂಗ್ಲೆಂಡ್ಗಳ ಅಧೀನದಲ್ಲಿದ್ದವು. ಕ್ರಿ.ಶ. ೧೭೭೬-೮೩ರ ಅವಧಿಯಲ್ಲಿ ಅಮೆರಿಕ ಇಂಗ್ಲೆಂಡ್ ವಿರುದ್ಧ ಯಶಸ್ವಿ ಸ್ವಾತಂತ್ರ್ಯ ಹೋರಾಟ ನಡೆಸಿ ಮುಕ್ತವಾಯಿತು. ಅನಂತರ ನೆಪೋಲಿಯಾನಿಕ್ ಯುದ್ಧಗಳ ಸುಳಿಯಲ್ಲಿ ಸಿಕ್ಕಿ ಯೂರೋಪ್ ಹೆಣಗಾಡತೊಡಗಿದಾಗ ಆ ಅವಕಾಶವನ್ನು ಉಪಯೋಗಿಸಿಕೊಂಡು ಮೆಕ್ಸಿಕೋದಿಂದ ಚಿಲಿಯವರೆಗೆ ಎಲ್ಲ ವಸಾಹತುಗಳೂ ಸ್ಪೇನ್ ಮತ್ತು ಪೋರ್ತುಗಲ್ನ ಸಂಕೋಲೆಗಳಿಂದ ಹೊರಬಂದು ಸ್ವಾತಂತ್ರ್ಯ ಘೋಷಿಸಿಕೊಂಡವು. ಆದರೆ ೧೮೧೫ರಲ್ಲಿ ನೆಪೋಲಿಯನ್ನ ಪತನವಾದ ಮೇಲೆ ಯೂರೋಪಿಯನ್ ರಾಷ್ಟ್ರಗಳು ತಂತಮ್ಮ ಗಡಿಗಳನ್ನು ಸುಭದ್ರಗೊಳಿಸಿಕೊಳ್ಳುವುದಲ್ಲದೆ ತಮ್ಮ ಕಳೆದುಹೋದ ವಸಾಹತುಸಾಹಿ ವೈಭವವನ್ನೂ ಮತ್ತೆ ಗಳಿಸಿಕೊಳ್ಳಲು ಸನ್ನಾಹ ನಡೆಸಿದವು. ಅಂದರೆ ಲ್ಯಾಟಿನ್ ಅಮೆರಿಕದ ದೇಶಗಳ ಸ್ವತಂತ್ರ ಅಸ್ತಿತ್ವ ಅಂತ್ಯಗೊಳ್ಳುವ ಸೂಚನೆ ಅದು. ಬಲಾಢ್ಯ ಯೂರೋಪಿಯನ್ ರಾಷ್ಟ್ರಗಳೂ ಮತ್ತೊಮ್ಮೆ ತನ್ನ ನೆರೆಯಲ್ಲಿ ಕಾಲೂರುವುದು ತನ್ನ ಹಿತಾಸಕ್ತಿಗಳಿಗೆ ಹಾಗೂ ಭವಿಷ್ಯಕ್ಕೆ ಮಾರಕ ಎಂದು ಬಗೆದ ಅಂದಿನ ಅಮೆರಿಕ ಅದನ್ನು ತಡೆಯಲು ತೀರ್ಮಾನಿಸಿತು. ಅದು ವ್ಯಕ್ತವಾದದ್ದು ಪ್ರಸಿದ್ಧ ಮನ್ರೋ ಸಿದ್ಧಾಂತದಲ್ಲಿ. ಅಧ್ಯಕ್ಷ ನೇಮ್ಸ್ ಮನ್ರೋ ಪ್ರತಿಪಾದಿಸಿದ ಈ ನೀತಿ ಅಮೆರಿಕ ಖಂಡಗಳು ೧೮೨೩ರಲ್ಲಿ ಹೇಗಿವೆಯೋ ಹಾಗೆಯೆ ಉಳಿಯಬೇಕು, ವಸ್ತುಸ್ಥಿತಿಯನ್ನು ಬದಲಾಯಿಸುವ ಯಾವುದೇ ಪ್ರಯತ್ನವನ್ನು ಅಮೆರಿಕ ತಿರಸ್ಕರಿಸುತ್ತದೆ ಮತ್ತು ವಿರೋಧಿಸುತ್ತದೆ ಎಂದಾಗಿತ್ತು. ಆ ಪ್ರಕಾರ ಮೆಕ್ಸಿಕೋ ಮತ್ತದರ ದಕ್ಷಿಣಕ್ಕಿದ್ದ ಎಲ್ಲಾ ದೇಶಗಳೂ ಸ್ವತಂತ್ರವಾಗಿಯೇ ಉಳಿಯುತ್ತವೆ, ಅಮೆರಿಕದ ಉತ್ತರದಲ್ಲಿನ ಕೆನಡಾದಲ್ಲಿ ಬ್ರಿಟಿಷರ ಅಸ್ತಿತ್ವ ಸಹ ಹಾಗೆಯೆ ಮುಂದುವರಿಯುತ್ತದೆ ಎಂದಾಗಿತ್ತು. ಈ ನೀತಿ ಹೊರಗೆಡಹಿದ ಗಮನಾರ್ಹ ಅಂಶವೆಂದರೆ ಬ್ರಿಟನ್ ಇನ್ನು ಮುಂದೆ ತನ್ನ ಶತ್ರುವಲ್ಲ, ಆದರೆ ಸ್ಪೇನ್ ಮತ್ತು ಪೋರ್ತುಗಲ್ಗಳ ಕುರಿತಾಗಿ ಹಾಗೆ ಹೇಳಲಾಗುವುದಿಲ್ಲ ಎಂದು! ಈ ವಿಚಾರ ಅಂದು ಜಾಗತಿಕ ರಾಜಕಾರಣದ ಹೊಸ ಸಮೀಕರಣದ ಮೇಲೊಂದು ಕ್ಷಕಿರಣ ಬೀರುತ್ತದೆ. ಇಂದು ವೆನೆಜುವೆಲಾದಲ್ಲಿ ನಮ್ಮ ಕಣ್ಣಮುಂದೆ ಅನಾವರಣಗೊಳ್ಳುತ್ತಿರುವ ಅಸಾಮಾನ್ಯ ಬೆಳವಣಿಗೆಗಳನ್ನು ಸರಿಯಾದ ಬಗೆಯಲ್ಲಿ ಅರ್ಥಮಾಡಿಕೊಳ್ಳಬೇಕಾದರೆ ನಾವು ಈ ಅಂಶವನ್ನು ಅಗತ್ಯವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು. ಅಂದು ವಸಾಹತುಶಾಹಿ ಸ್ಪೇನ್ ಮತ್ತು ಪೋರ್ತುಗಲ್ ತನ್ನ ನೆರೆಯಲ್ಲಿರುವುದನ್ನು ಸಹಿಸದ ಅಮೆರಿಕ ಇಂದು ನವವಸಾಹತುಶಾಹಿ ಕಮ್ಯೂನಿಸ್ಟ್ ಚೀನಾ ತನ್ನ ನೆರೆಯಲ್ಲಿ ಕಾಲೂರುತ್ತಿರುವುದನ್ನು ಸಹಿಸುತ್ತಿಲ್ಲ.
ಮೆಕ್ಸಿಕೋ
ಒಮ್ಮೆ ಸ್ಪೇನ್ ಮತ್ತು ಪೋರ್ತುಗಲ್ಗಳನ್ನು ಹೊರಗಟ್ಟಿದ ಮೇಲೆ ತನ್ನ ದಕ್ಷಿಣದ ಲ್ಯಾಟಿನ್ ಅಮೆರಿಕ ದೇಶಗಳು ತನಗನುಕೂಲವಾಗುವಂತಹ ನೀತಿಗಳನ್ನು ಅನುಸರಿಸುತ್ತ ತಾನು ಹಾಕಿದ ಗೆರೆಯಲ್ಲೇ ಸಾಗಬೇಕೆನ್ನುವುದು ಅಮೆರಿಕದ ನೀತಿಯಾಯಿತು. ತನ್ನ ನಿಲವನ್ನು ಒಪ್ಪದ ಸರ್ಕಾರಗಳನ್ನು ಕಿತ್ತೊಗೆಯುವ, ಸಹಕರಿಸಿದ ಸರ್ಕಾರಗಳನ್ನು ಬೆಂಬಲಿಸಿ ಸದೃಢಗೊಳಿಸುವ ನೀತಿಯನ್ನು ವಾಷಿಂಗ್ಟನ್ ಪಶ್ಚಿಮಾರ್ಧ ಗೋಲದಲ್ಲಿ ತನ್ನ ವಿದೇಶ, ರಕ್ಷಣಾ ಹಾಗೂ ಆರ್ಥಿಕ ನೀತಿಗಳ ಬುನಾದಿಯನ್ನಾಗಿಸಿಕೊಂಡಿತು. ಅದಕ್ಕೆ ಮೊತ್ತಮೊದಲು ಮತ್ತು ಯಾವಾಗಲೂ ಬಲಿಯಾಗುವ ದೇಶ ಸಹಜವಾಗಿಯೇ ಅತಿ ಹತ್ತಿರದ ಮೆಕ್ಸಿಕೋ.
ಮೊದಲಿಗೆ ಅಗಾಧ ಸಿಹಿನೀರು ಮತ್ತು ಫಲವತ್ತಾದ ನೆಲವನ್ನು ಹೊಂದಿದ ಮೆಕ್ಸಿಕೋದ ಈಶಾನ್ಯ ರಾಜ್ಯ ಟೆಕ್ಸಾಸ್ ತನ್ನ ಆರ್ಥಿಕ ಅಭಿವೃದ್ಧಿಗೆ ಮಹತ್ತ್ವಪೂರ್ಣ ಎಂದೆಣಿಸಿದ ಅಮೆರಿಕ ೧೮೩೦ರ ದಶಕದಲ್ಲಿ ಆ ರಾಜ್ಯ ಮೆಕ್ಸಿಕೋದಿಂದ ಪ್ರತ್ಯೇಕಗೊಳ್ಳುವಂತೆ ಸಂಚುಹೂಡಿತು, ಅನಂತರ ಅದು ತನ್ನೊಳಗೇ ಮಿಳಿತಗೊಳ್ಳುವಂತೆಯೂ ದಾಳ ಉರುಳಿಸಿತು. ಅದಾದ ಮೇಲೆ ತಾನು ಅಟ್ಲಾಂಟಿಕ್ ಸಾಗರದಿಂದ ಪೆಸಿಫಿಕ್ ಸಾಗರದವರೆಗೆ ಹರಡಿಕೊಳ್ಳಬೇಕಾದರೆ ತನಗೆ ಇಡೀ ಉತ್ತರ ಮೆಕ್ಸಿಕೋ ಬೇಕು ಎಂದು ತೀರ್ಮಾನಿಸಿದ ಅಮೆರಿಕ ಕ್ಷುಲ್ಲಕ ಕಾರಣಗಳನ್ನೊಡ್ಡಿ ‘ಬಡ ಮೆಕ್ಸಿಕೋ’ ಮೇಲೆ ಎರಡು ೧೮೪೬ರಲ್ಲಿ ಇಡೀ ಉತ್ತರ ಮೆಕ್ಸಿಕೋವನ್ನು ಕಬಳಿಸಿತು. ಹೀಗೆ ಪೂರ್ವದಲ್ಲಿ ಟೆಕ್ಸಾಸ್ನಿಂದ ಪಶ್ಚಿಮದಲ್ಲಿ ಕ್ಯಾಲಿಫೋರ್ನಿಯಾವರೆಗಿನ ವಿಶಾಲ ಹಾಗೂ ಸಂಪದ್ಭರಿತ ನೆಲವನ್ನು ಅಮೆರಿಕ ತನ್ನದಾಗಿಸಿಕೊಂಡಿತು. ಆ ಅಗಾಧ ನಷ್ಟದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮೆಕ್ಸಿಕೋಗೆ ಇಂದಿಗೂ ಸಾಧ್ಯವಾಗಿಲ್ಲ. ಜೊತೆಗೆ ಮೆಕ್ಸಿಕನ್ನರಿಗೆ ತಮ್ಮ ಇತಿಹಾಸದ ನೆನಪು ಮಾಡಿಕೊಡುವ ಯಾವ ಪ್ರಯತ್ನವನ್ನೂ ಅಲ್ಲಿನ ಸರ್ಕಾರಗಳು ಮಾಡದಂತೆ, ಅದರಿಂದಾಗಿ ತನ್ನ ಇಂದಿನ ಪ್ರಾದೇಶಿಕ, ಆರ್ಥಿಕ ಹಾಗೂ ಸಾಮಾಜಿಕ ವಾಸ್ತವಗಳು ಹಾನಿಗೊಳಗಾಗದಂತೆ ಅಮೆರಿಕ ಸದಾ ಕಟ್ಟೆಚ್ಚರ ವಹಿಸುತ್ತದೆ. ಅದಕ್ಕಾಗಿ ಆ ದೇಶದ ಆಂತರಿಕ ರಾಜಕಾರಣದಲ್ಲಿ ನಿರಂತರವಾಗಿ ಕೈಯಾಡಿಸುತ್ತಲೇ ಇರುತ್ತದೆ. ಅಧ್ಯಕ್ಷ ಪಿಗರೆಡೋ ಡಯಾಸ್ ಅತ್ತದ್ದಕ್ಕೆ ಕಾರಣ ಇದು.
‘ರೂಸ್ವೆಲ್ಟ್ಸ್ ಕಾರೋಲರಿ’
ಈ ನಡುವೆ ದಕ್ಷಿಣ ಅಮೆರಿಕದಲ್ಲಿ ಅಂದಿನ ಬಲಾಢ್ಯ ನೌಕಾಶಕ್ತಿ ಚಿಲಿ ನೆರೆಯ ಪೆರು ಮತ್ತು ಬೊಲಿವಿಯಾಗಳ ಮೇಲೆ ಆಕ್ರಮಣವೆಸಗಿದಾಗ ಅಲ್ಲಿ ಯೂರೋಪಿಯನ್ ರಾಷ್ಟ್ರಗಳ ಮಧ್ಯಪ್ರವೇಶವನ್ನು ತಡೆದು ತನ್ನದೇ ಯಜಮಾನಿಕೆಯನ್ನು ಸ್ಥಾಪಿಸಲು ಅಮೆರಿಕ ಸಂಧಾನ ನಡೆಸಿ ೧೮೭೯-೮೧ರ ‘ಪೆಸಿಫಿಕ್ ಯುದ್ಧ’ವನ್ನು ಅಂತ್ಯಗೊಳಿಸಿತು. ಆಮೇಲೆ ಕೆರಿಬಿಯನ್ ಸಮುದ್ರದಲ್ಲಿ ಅಳಿದುಳಿದಿದ್ದ ಸ್ಪ್ಯಾನಿಷ್ ಹಾಜರಿಯನ್ನು ತೊಡೆದುಹಾಕಲು ೧೮೯೮ರಲ್ಲಿ ಕ್ಯೂಬಾದ ಸ್ವಾತಂತ್ರ್ಯಾಂದೋಲನದ ಪರವಾಗಿ ನಿಂತು, ಅದಕ್ಕಾಗಿ ಆ ಮುದಿ ವಸಾಹತುಶಾಹಿ ಸ್ಪೇನ್ ಮೇಲೆ ಯುದ್ಧ ಸಾರಿ, ಸೋಲಿಸಿ ಕ್ಯೂಬಾವನ್ನು ವಿಮೋಚನೆಗೊಳಿಸಿ ತನ್ನ ರಾಜಕೀಯ ಪ್ರಭಾವ ಸ್ಥಾಪಿಸಿತು. ಪಕ್ಕದ ಪ್ಯೂರ್ಟೋ ರಿಕೋ ದ್ವೀಪವನ್ನೂ ಸ್ಪೇನ್ನಿಂದ ಕಿತ್ತುಕೊಂಡು ತನ್ನ ಹೊಟ್ಟೆಗೆ ಹಾಕಿಕೊಂಡಿತು. ಹೊಸ ಶತಮಾನ ಆರಂಭವಾಗುತ್ತಿದ್ದಂತೆ ಅಧಿಕಾರಕ್ಕೆ ಬಂದ ಅಧ್ಯಕ್ಷ ಥಿಯೋಡೋರ್ ರೂಸ್ವೆಲ್ಟ್ ಹಿಂದಿನ ಮನ್ರೋ ನೀತಿಗೆ “ರೂಸ್ವೆಲ್ಟ್ಸ್ ಕಾರೋಲರಿ” ಎಂಬ ಹೆಸರಿನಲ್ಲಿ ತಮ್ಮದೊಂದು ಬಾಲಂಗೋಚಿಯನ್ನು ಸೇರಿಸಿ ಪಶ್ಚಿಮಾರ್ಧ ಗೋಲ ಅಮೆರಿಕದ ಹಿತ್ತಲು, ಅಲ್ಲಿ ತಮ್ಮ ಮಾರು ಕೇಳುವವರಿಗೆ ಮಾತ್ರ ಅಸ್ತಿತ್ವ, ಅದನ್ನು ಸಾಧಿಸಲು ತಾವು ಮೆತ್ತಗೆ ಮಾತನಾಡುತ್ತೇವೆ, ಆದರೆ ಕಂಕುಳಲ್ಲಿ ಭಾರಿ ದೊಣ್ಣೆಯನ್ನು ಇಟ್ಟುಕೊಂಡಿರುತ್ತೇವೆ ಎಂದು ಮಾರ್ಮಿಕವಾಗಿ ಸಾರಿದರು. ಇದು ಹೊರಗಿನ ಶಕ್ತಿಗಳಿಗೆ ಮತ್ತವರ ಕೈಗೊಂಬೆಗಳಿಗೆ ಅಮೆರಿಕದ ಹಿತ್ತಲಿನಲ್ಲಿ ಸುತರಾಂ ಜಾಗ ಇಲ್ಲ ಎಂದು ಅಮೆರಿಕ ಸ್ಪಷ್ಟವಾಗಿ ಹಾಗೂ ನಿರ್ಣಾಯಕವಾಗಿ ಸಾರಿದ ಬಗೆ. ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಸ್ಥೈರ್ಯವನ್ನು ಯಾವುದೇ ಯೂರೋಪಿಯನ್ ರಾಷ್ಟ್ರ ತೋರಿಸಲಿಲ್ಲ, ೧೯೬೨ರವರೆಗೆ.
ಚೀನಾದ ಕಳ್ಳ ಹೆಜ್ಜೆ
ತಾನೇ ಸ್ವತಂತ್ರಗೊಳಿಸಿದ ಕ್ಯೂಬಾ ಐವತ್ತು ವರ್ಷಗಳ ತರುವಾಯ ಫಿದೆಲ್ ಕಾಸ್ತ್ರೋ ನಾಯಕತ್ವದಲ್ಲಿ ತನಗೇ ಸೆಡ್ಡುಹೊಡೆದು ಅಣ್ವಸ್ತç ಹೊತ್ತೊಯ್ಯಬಲ್ಲ ಕ್ಷಿಪಣಿಗಳನ್ನು ತನ್ನ ನೆಲದಲ್ಲಿ ಸ್ಥಾಪಿಸಲು ಸೋವಿಯತ್ ಯೂನಿಯನ್ ಅನ್ನು ಆಹ್ವಾನಿಸಿದಾಗ ಅದನ್ನು ಒಪ್ಪುವುದು ಅಮೆರಿಕಗೆ ಸಾಧ್ಯವೇ ಇರಲಿಲ್ಲ. ಅಧ್ಯಕ್ಷ ಜಾನ್ ಎಫ್. ಕೆನೆಡಿ ಹಾಕಿದ ಉಗ್ರ ಬೆದರಿಕೆಯನ್ನು ನಿರ್ಲಕ್ಷಿಸಲು ಸೋವಿಯತ್ ನೇತಾರ, ವಿವೇಕಿ ನಿಕಿತಾ ಖ್ರುಶ್ಚೇವ್ ಹೋಗಲಿಲ್ಲ. ಅಣ್ವಸ್ತ್ರ ಯುದ್ಧದಿಂದ ಜಗತ್ತು ಅಂದು ಪಾರಾದ ಬಗೆ ಅದು. ಮುಂದಿನ ಮೂರು ದಶಕಗಳವರೆಗೆ ಪಶ್ಚಿಮಾರ್ಧ ಗೋಲದಲ್ಲಿ ಅಮೆರಿಕದ ಯಜಮಾನಿಕೆಗೆ ಸವಾಲೊಡ್ಡುವ ಪ್ರಯತ್ನವನ್ನು ಯಾರೂ ಮಾಡಲಿಲ್ಲ. ಅಂತಹ ಸೂಚನೆ ನೀಡಿದ ಚಿಲಿಯ ಎಡಪಂಥೀಯ ಅಧ್ಯಕ್ಷ ಸಾಲ್ವಡೋ ಅಲೆಂದೇಗೆ ೧೯೭೩ರಲ್ಲಿ ಆದ ಗತಿ ಮಾಸ್ಕೋವನ್ನು ಅಲ್ಲಿಂದ ಶಾಶ್ವತವಾಗಿ ದೂರ ಇಟ್ಟಿತು. ಈ ವಸ್ತುಸ್ಥಿತಿಯನ್ನು ಮುರಿಯಲು ಪ್ರಯತ್ನಿಸಿದ್ದು ಕಮ್ಯೂನಿಸ್ಟ್ ಚೀನಾ, ಶತಮಾನದ ಅಂತ್ಯದ ಹೊತ್ತಿನಲ್ಲಿ.
೧೯೯೦-೯೧ರಲ್ಲಿ ಸೋವಿಯತ್ ಯೂನಿಯನ್ ಪತನಗೊಂಡು ಶೀತಲ ಸಮರ ಅಂತ್ಯಗೊಳ್ಳುತ್ತಿದ್ದಂತೆ ಹೊಸ ಯೂರೋಪ್ ಅನ್ನು ಕಟ್ಟುವ ಬಗೆ, ತಲೆಯೆತ್ತಿದ ಇಸ್ಲಾಮಿಕ್ ಮೂಲಭೂತವಾದವನ್ನು ನಿಗ್ರಹಿಸುವ ತಂತ್ರ, ಕೊಲ್ಲಿ ಯುದ್ಧ ಹಾಗೂ ಅಲ್-ಖೈದಾ ಭಯೋತ್ಪಾದನೆಗಳಲ್ಲಿ ಅಮೆರಿಕ ಸಿಲುಕಿಕೊಂಡು ಒದ್ದಾಡತೊಡಗಿದ ಅವಕಾಶವನ್ನು ದುರುಪಯೋಗ ಮಾಡಿಕೊಂಡ ಚೀನಾ ಲ್ಯಾಟಿನ್ ಅಮೆರಿಕಕ್ಕೆ ಕಳ್ಳ ಆದರೆ ದೃಢ ಹೆಜ್ಜೆಗಳನ್ನಿಟ್ಟು. ಅದರ ತಂತ್ರ ವಿಶಿಷ್ಟ. ಸೇನಾ ಹಾಜರಿ ಅಮೆರಿಕದ ಗಮನವನ್ನು ಸೆಳೆಯುತ್ತದೆ, ಅದರಿಂದ ತನಗಾಗುವುದು ಪ್ರಥಮ ಚುಂಬನಂ ದಂತಭಗ್ನಂ ಎಂದು ಸರಿಯಾಗಿಯೇ ಅರಿತಿದ್ದ ಚೀನಾ ಅಮೆರಿಕದ ಹಿತ್ತಲಿಗೆ ಕಾಲಿಟ್ಟಿದ್ದು ಆರ್ಥಿಕ ಮಾರ್ಗದಲ್ಲಿ. ಹಿಂದಿನ ಸೋವಿಯತ್ ತಪ್ಪುಗಳಿಂದ ಚೀನಾ ಕಲಿತ ಹಲವು ಪಾಠಗಳಲ್ಲಿ ಅದೂ ಒಂದು. ಅಚ್ಚರಿಯೆಂದರೆ ಶೀತಲ ಸಮರೋತ್ತರ ಅಮೆರಿಕ ಇದನ್ನು ಗುರುತಿಸುವುದರಲ್ಲಿ ವಿಫಲವಾಯಿತು. ಪರಿಣಾಮವಾಗಿ ಇಂದು ಅರ್ಜೆಂಟೀನಾದ ಲಿಥಿಯಂ, ಚಿಲಿ ಮತ್ತು ಪೆರುವಿನ ತಾಮ್ರ, ವೆನೆಜುವೆಲಾದ ಕಚ್ಚಾತೈಲ, ಕೊಲಂಬಿಯಾದ ಚಿನ್ನ, ಬ್ರೆಜಿಲ್ನ ಅಗಾಧ ಖನಿಜರಾಶಿ ಮತ್ತು ಅರಣ್ಯೋತ್ಪನ್ನಗಳು ಚೀನಾದ ಕೈಸೇರಿವೆ. ಬ್ರೆಜಿಲ್ನಲ್ಲಿ ಐಸ್ಕ್ರೀಂ ಮಾರಾಟ, ಮನೆಮನೆಗೆ ಊಟ ತಿಂಡಿ ಪೂರೈಸುವ ವ್ಯವಹಾರಗಳೂ ಚೀನಿ ಕಂಪೆನಿಗಳ ಕೈಯಲ್ಲಿವೆ ಎಂದರೆ ಲ್ಯಾಟಿನ್ ಅಮೆರಿಕದ ಬದುಕಿನಲ್ಲಿ ಚೀನಾ ಅದೆಷ್ಟು ಆಳವಾಗಿ ಪ್ರವೇಶಿಸಿದೆ ಎಂದರ್ಥವಾಗುತ್ತದೆ. ಇದರಿಂದ ಅಮೆರಿಕಾಗೆ ಆಗಬಹುದಾದ ಅಪಾಯದ ಪ್ರಮಾಣವನ್ನು ಗುರುತಿಸಿದ ಮೊಟ್ಟಮೊದಲ ಅಧ್ಯಕ್ಷ ಡೊನಾಲ್ಟ್ ಟ್ರಂಪ್. ಅಮೆರಿಕದ ಹಿತ್ತಲಿನಲ್ಲಿನ ಆರ್ಥಿಕ ಮೂಗುದಾರವನ್ನು ಹಿಡಿದ ಚೀನಾ ಆ ಶಕ್ತಿಯನ್ನು ಬಳಸಿಕೊಂಡು ಅಮೆರಿಕಾಗೆ ಉಸಿರು ಕಟ್ಟಿಸಬಹುದೆಂದು ಅವರು ೨೦೧೭-೨೦೨೧ರ ತಮ್ಮ ಮೊದಲ ಅಧ್ಯಕ್ಷ ಅವಧಿಯಲ್ಲೇ ಗುರುತಿಸಿ ಅದಕ್ಕಾಗಿ ಪರಿಹಾರಾತ್ಮಕ ಕಾರ್ಯಯೋಜನೆಗಳನ್ನು ರೂಪಿಸಿದರು. ವೆನೆಜುವೆಲಾ ಕಾಣಿಸಿಕೊಳ್ಳುವುದು ಇಲ್ಲಿ.
ವೆನೆಜುವೆಲಾ
ನೀರು, ನೆರಳು, ಅಸದೃಶ ಪ್ರಕೃತಿ ಸೌಂದರ್ಯ ಹಾಗೂ ಅಪ್ರತಿಮ ಸುಂದರಿಯರ ನಾಡಾದ ವೆನೆಜುವೆಲಾದ ಮುಡಿಗೆ ಅಗಾಧ ತೈಲ ನಿಕ್ಷೇಪದ ಗರಿಯೂ ಸೇರಿಕೊಂಡು ನೂರು ವರ್ಷಗಳೇ ಆಗಿಹೋಗಿವೆ. ಇಂದಿನ ಲೆಕ್ಕದ ಪ್ರಕಾರ ದಕ್ಷಿಣ ಅಮೆರಿಕದ ಉತ್ತರ ತುದಿಯಲ್ಲಿರುವ ಆ ದೇಶದಲ್ಲಿ ೩೦೩ ಬಿಲಿಯನ್ ಬ್ಯಾರೆಲ್ಗಳಷ್ಟು ಕಚ್ಚಾತೈಲ ಭಂಡಾರವಿದೆ. ಇಷ್ಟು ಅಗಾಧ ಪ್ರಮಾಣದ ನಿಕ್ಷೇಪ ಜಗತ್ತಿನ ಇನ್ನಾವ ದೇಶದಲ್ಲೂ ಇಲ್ಲ. ಸೌದಿ ಅರೇಬಿಯಾದಲ್ಲೂ ಇಲ್ಲ, ರಶಿಯಾದಲ್ಲೂ ಇಲ್ಲ, ಅಮೆರಿಕದಲ್ಲೂ ಇಲ್ಲ. ಆದರೆ ಇಲ್ಲೊಂದು ತೊಂದರೆ ಇದೆ. ಇತರೆಡೆಗಳ ತೈಲಕ್ಕಿಂತ ವೆನೆಜುವೆಲಾದ ಕಚ್ಚಾತೈಲ ತುಂಬ ಮಂದ, ಭಾರ. ಹೀಗಾಗಿ ಅದನ್ನು ಹೊರತೆಗೆಯುವುದು ಮತ್ತು ಸಂಸ್ಕರಿಸಿ ಪೆಟ್ರೋಲ್, ಡೀಸೆಲ್ ಮುಂತಾದ ಉಪಯೋಗಿ ವಸ್ತುಗಳನ್ನು ತಯಾರಿಸುವುದಕ್ಕೆ ಹೆಚ್ಚಿನ ಸಮಯ ಹಿಡಿಯುತ್ತದೆ. ಅದು ವೆಚ್ಚದಾಯಕ ಸಹ. ದ್ವಿತೀಯ ಮಹಾಯುದ್ಧಕ್ಕೆ ಮೊದಲು ಕಚ್ಚಾತೈಲ ನಿಕ್ಷೇಪಗಳು ಹೆಚ್ಚಿನ ಪ್ರಮಾಣದಲ್ಲಿನ್ನೂ ಪತ್ತೆಯಾಗಿರದಿದ್ದ ಕಾರಣ ವೆನೆಜುವೆಲಾ ತೈಲಕ್ಕೆ ಮಹತ್ತ್ವವಿತ್ತು. ಹಲವು ಅಮೆರಿಕನ್ ತೈಲ ಕಂಪೆನಿಗಳು ಆ ವ್ಯವಹಾರದಲ್ಲಿ ತೊಡಗಿಕೊಂಡಿದ್ದವು. ಆದರೆ ಯುದ್ಧಾನಂತರ ಜಗತ್ತಿನಲ್ಲಿ ಹಲವೆಡೆ ಮುಖ್ಯವಾಗಿ ಪಶ್ಚಿಮ ಏಶಿಯಾ, ರಶಿಯಾ, ಇಂಡೋನೇಶಿಯಾ, ನೈಜೀರಿಯಾ, ಉತ್ತರ ಆಫ್ರಿಕಾಗಳಲ್ಲಿ ಕಚ್ಚಾತೈಲ ಯಥೇಚ್ಛವಾಗಿ ಲಭ್ಯವಾಗತೊಡಗಿದ ಕಾರಣ ವೆನೆಜುವೆಲಾ ತೈಲದ ಮಹತ್ತ್ವ ಜಾಗತಿಕವಾಗಿ ಕುಗ್ಗಿಹೋಯಿತು. ಆದಾಗ್ಯೂ ಅದರ ವ್ಯವಹಾರದಲ್ಲಿ ದಶಕಗಳಿಂದಲೂ ತೊಡಗಿಕೊಂಡಿದ್ದ, ಅದಕ್ಕಾಗಿ ಅಗತ್ಯ ಯಂತ್ರೋಪಕರಣಗಳು ಮತ್ತು ಕೌಶಲಗಳನ್ನು ಗಳಿಸಿಕೊಂಡಿದ್ದ ಗಲ್ಫ್ ಆಯಿಲ್, ಎಕ್ಸಾನ್ ಮೊಬಿಲ್ ಮುಂತಾದ ಅಮೆರಿಕನ್ ಕಂಪೆನಿಗಳು ವ್ಯವಹಾರವನ್ನು ಮುಂದುವರಿಸಿಕೊಂಡೇ ಹೋದವು. ತಮ್ಮ ಆದಾಯದ ಒಂದು ಭಾಗವನ್ನು ವೆನೆಜುವೆಲಾಗೇ ನೀಡುತ್ತಿದ್ದುದರಿಂದ ೧೯೭೦ರ ದಶಕದವರೆಗೂ ಆ ದೇಶ ಲ್ಯಾಟಿನ್ ಅಮೆರಿಕದ ಅತ್ಯಂತ ಶ್ರೀಮಂತ ದೇಶವಾಗಿತ್ತು. ಆದರೆ ತೈಲ ವ್ಯವಹಾರವನ್ನು ರಾಷ್ಟ್ರೀಕರಿಸುವ ನೀತಿಗಳನ್ನು ಕರಾಕಸ್ ಸರ್ಕಾರಗಳು ೧೯೭೬ರಲ್ಲಿ ಆರಂಭಿಸಿದಾಗ ಪರಿಸ್ಥಿತಿ ಬದಲಾಗತೊಡಗಿತು. ಅದರಲ್ಲೂ ೧೯೯೮ರಲ್ಲಿ ಅಧಿಕಾರಕ್ಕೆ ಬಂದ ಸಮಾಜವಾದಿ ಅಧ್ಯಕ್ಷ ಹ್ಯೂಗೋ ಚಾವೆಜ್ ತಮ್ಮೆಲ್ಲಾ ಆಯಿಲ್ ರಿಗ್ಗಳು ಹಾಗೂ ಸಂಸ್ಕರಣಾಗಾರಗಳನ್ನು ವೆನೆಜುಯೆಲನ್ನರಿಗೇ ಬಿಟ್ಟುಹೋಗುವಂತೆ ಆದೇಶ ಹೊರಡಿಸಿದಾಗ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿತು. ಅಮೆರಿಕನ್ ಕಂಪೆನಿಗಳೇನೋ ಸುಮಾರು ಐದು ಬಿಲಿಯನ್ ಡಾಲರ್ಗಳಷ್ಟು ಮೌಲ್ಯದ ತಮ್ಮ ಯಂತ್ರೋಪಕರಣಗಳನ್ನು ಬಿಟ್ಟು ಹೊರಟುಹೋದವು, ಮಾತು ಕೊಟ್ಟಂತೆ ಚಾವೆಜ್ ಅವುಗಳಿಗೆ ಸೂಕ್ತ ಪರಿಹಾರವನ್ನೂ ನೀಡಲಿಲ್ಲ. ಆದರೆ ಅಮೆರಿಕನ್ನರು ಬಿಟ್ಟುಹೋದ ವ್ಯವಸ್ಥೆಯನ್ನು ನಿಭಾಯಿಸುವ ಸಾಮರ್ಥ್ಯ ತನ್ನ ಜನರಿಗಿಲ್ಲ ಎಂದು ಆ ಸಮಾಜವಾದಿ ಅಧ್ಯಕ್ಷ ಅರಿಯುವ ಹೊತ್ತಿಗೆ ಅಮೂಲ್ಯ ಸಮಯ ವ್ಯರ್ಥವಾಗಿಹೋಗಿತ್ತು. ಹೆಚ್ಚಿನ ಯಂತ್ರೋಪಕರಣಗಳು, ರಿಗ್ಗಳು, ಕೊಳವೆಗಳು ತುಕ್ಕು ಹಿಡಿದು ಹಾಳಾಗತೊಡಗಿದ್ದವು. ಪರಿಣಾಮವಾಗಿ ವೆನೆಜುವೆಲಾದ ತೈಲ ಆದಾಯ ಕುಗ್ಗಿ ಒಂದು ಕಾಲದ ಶ್ರೀಮಂತ ದೇಶ ಬಡತನದತ್ತ ಜಾರತೊಡಗಿತ್ತು. ತಪ್ಪು ತಿದ್ದಿಕೊಳ್ಳುವ ಅರೆಮನಸ್ಸಿನ ಕ್ರಮವಾಗಿ ಚಾವೆಜ್ ೨೦೦೮ರಲ್ಲಿ ಅಮೆರಿಕನ್ ಕಂಪೆನಿಗಳನ್ನು ಮತ್ತೆ ಆಹ್ವಾನಿಸಿದರು. ಆದರೆ ಈಗಾಗಲೇ ನಷ್ಟ ಅನುಭವಿಸಿದ್ದ ಹಾಗೂ ಹಾಳುಗೆಟ್ಟ ಯಂತ್ರೋಪಕರಣಗಳು ಮತ್ತು ಕೊಳವೆಗಳಿಗಾಗಿ ಮತ್ತೆ ಹೂಡಬೇಕಾದ ಬಂಡವಾಳ ತಮಗೆ ಹಿಂದಕ್ಕೆ ಬರುತ್ತದೋ ಇಲ್ಲವೋ, ಸಮಾಜವಾದಿ ಸರ್ಕಾರ ಮತ್ತೆ ಎಲ್ಲವನ್ನೂ ತನ್ನ ಕೈವಶ ಮಾಡಿಕೊಂಡು ತಮ್ಮನ್ನು ಬರಿಗೈಯಲ್ಲಿ ಹೊರಗಟ್ಟಿದರೇನು ಗತಿ ಎಂದೆಲ್ಲ ಸಂದಿಗ್ಧಕ್ಕೆ ಬಿದ್ದ ಅಮೆರಿಕನ್ ತೈಲ ಕಂಪೆನಿಗಳು ಚಾವೆಜ್ರ ಆಹ್ವಾನವನ್ನು ಪುರಸ್ಕರಿಸಲಿಲ್ಲ, ಬದಲಿಗೆ ಹಳೆಯ ನಷ್ಟ ಪರಿಹಾರಕ್ಕಾಗಿ ಅವು ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಲು ಹತ್ತಿ, ಅವುಗಳ ವಾದಕ್ಕೆ ಮನ್ನಣೆ ದೊರಕಿದಾಗ ಅವುಗಳು ಮತ್ತು ಚಾವೆಜ್ ಸರ್ಕಾರದ ನಡುವಿನ ಮನಃಸ್ತಾಪಗಳು ಇನ್ನಷ್ಟು ಹೆಚ್ಚಿದವು.
ಈ ಸನ್ನಿವೇಶದಲ್ಲಿ ತನ್ನ ಸ್ವಾರ್ಥ ಸಾಧನೆಗೆ ಮುಂದಾದದ್ದು ಚೀನಾ. ಚಾವೆಜ್ ಸರ್ಕಾರದ ಪರವಾಗಿ ನಿಂತ ಅದು ವೆನೆಜುವೆಲಾದ ತೈಲ ಹಾಗೂ ಇನ್ನಿತರ ವ್ಯವಹಾರಗಳಲ್ಲಿ ಹೂಡಿಕೆ ಮಾಡಿ ಆ ದೇಶದ ಪ್ರಾಕೃತಿಕ ಸಂಪತ್ತುಗಳು ಮತ್ತು ದುರ್ಲಭ ಖನಿಜಗಳ ಮೇಲೆ ಹತೋಟಿ ಸ್ಥಾಪಿಸುವ ಯೋಜನೆಗಳನ್ನು ರೂಪಿಸಿತು. ಅರ್ಜೆಂಟೀನಾ, ಪೆರು, ಬ್ರೆಜಿಲ್ ಮುಂತಾದ ದೇಶಗಳಲ್ಲಿ ಈಗಾಗಲೇ ರೂಪಿಸಿ ಅನುಷ್ಠಾನಗೊಳಿಸಿ ಯಶಸ್ವಿಯಾಗಿದ್ದ ನವವಸಾಹತುಶಾಹಿ ನೀತಿಗಳನ್ನೇ ಅದು ವೆನೆಜುವೆಲಾಗೂ ದೊಡ್ಡದಾಗಿ ವಿಸ್ತರಿಸಿತು. ಅಂತಾರಾಷ್ಟ್ರೀಯವಾಗಿ ನೇಹಿಗರು ಕಡಮೆಯಿದ್ದ ಚಾವೆಜ್ರ ಸಮಾಜವಾದಿ ಸರ್ಕಾರಕ್ಕೆ ಇದು ಸಹಜವಾಗಿಯೇ ಸಮ್ಮತವಾಗಿತ್ತು. ಆದರೆ ಇದು ಅಮೆರಿಕದ ಬರಾಕ್ ಹುಸೇನ್ ಒಬಾಮಾ ಸರ್ಕಾರಕ್ಕೂ ಸಮ್ಮತವಾದದ್ದು ಹೇಗೆ?
ಚೀನಾ ಹಿಡಿತ
ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಇಂದಿಗೂ ಅಮೆರಿಕನ್ನರಿಗೇ ತಿಳಿದಿಲ್ಲ, ತಿಳಿದವರು ಬಹಿರಂಗವಾಗಿ ಹೇಳುತ್ತಿಲ್ಲ. ಒಟ್ಟಾರೆ, ಲ್ಯಾಟಿನ್ ಅಮೆರಿಕದಲ್ಲಿ ಚೀನಾದ ಪ್ರಭಾವ ಅಗಾಧವಾಗಿ ವಿಸ್ತರಿಸಲು ಒಬಾಮಾ ಸರ್ಕಾರದ ನೀತಿಗಳೂ ಕಾರಣ. ಅದು ಮಾಡಿದ ಸ್ವದೇಶ ಹಿತಕ್ಕೆ ವಿರುದ್ಧವಾದ ನೀತಿಗಳನ್ನೇ ಅದೇ ದಿನಗಳಲ್ಲಿ ಭಾರತದ ಯುಪಿಎ ಸರ್ಕಾರವೂ ಅನುಸರಿಸುತ್ತಿದ್ದುದು ನಮಗಿಲ್ಲಿ ನೆನಪಾಗದಿರದು.
ಚೀನಾದ ಅನಿಯಂತ್ರಿತ ಪ್ರಭಾವ ವಿಸ್ತರಣೆ ಅಮೆರಿಕದ ಭವಿಷ್ಯಕ್ಕೆ ಮಾರಕ ಎಂದು ಗುರುತಿಸಿದ ಡೊನಾಲ್ಡ್ ಟ್ರಂಪ್ ೨೦೧೭ರಲ್ಲೇ ಆ ಕುರಿತಾಗಿ ಕ್ರಮಗಳನ್ನು ರೂಪಿಸಿದರು. ಚೀನಿ ಕೈಗಳನ್ನು ಕಟ್ಟಿಹಾಕುವುದೇ ಅತ್ಯಂತ ಜರೂರಾಗಿ ಆಗಬೇಕಾದ ಕೆಲಸ, ಉಳಿದೆಲ್ಲವೂ ವ್ಯರ್ಥ ಎಂದು ಸರಿಯಾಗಿಯೇ ಗುರುತಿಸಿದ ಅವರು ಅಮೆರಿಕದ ಇತರೆಲ್ಲ ಸೇನಾ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಿಲುಗಡೆಗೆ ತರಲು ಮುಂದಾದರು. ಕುಖ್ಯಾತ ಮೂಲಭೂತವಾದಿ ಭಯೋತ್ಪಾದಕ ಅಬು ಬಕ್ರ್ ಅಲ್-ಬಗ್ದಾದಿಯನ್ನು ಕೊಂದು ಐಸಿಸ್ ಅನ್ನು ನಿರ್ವೀರ್ಯಗೊಳಿಸಿದರು, ಅರಹಾಮಿಕ್ ಒಪ್ಪಂದಗಳ ಮೂಲಕ ಅರಬ್ ರಾಷ್ಟ್ರಗಳಾದ ಯುಎಇ, ಬಹರೈನ್, ಸುಡಾನ್ ಮತ್ತು ಮೊರಾಕ್ಕೊಗಳು ಇಸ್ರೇಲ್ ಜೊತೆ ಸ್ನೇಹ ಸಂವರ್ಧನೆ ಮಾಡಿಕೊಳ್ಳಲು ವ್ಯವಸ್ಥೆ ಮಾಡಿದರು. ಸೌದಿ ಅರೇಬಿಯಾ ಮತ್ತು ಜೋರ್ಡಾನ್ಗಳೂ ಅದೇ ಹಾದಿಗಿಳಿಯಲು ಪ್ರೇರೇಪಿಸಿದರು. ಆಫಘಾನಿಸ್ತಾನದಲ್ಲೂ ಯುದ್ಧ ನಿಲುಗಡೆಗೆ ಕ್ರಮಕೈಗೊಂಡರು. ತಮ್ಮೆಲ್ಲ ಗಮನವನ್ನು ಚೀನೀ ನಿಗ್ರಹಕ್ಕೆ ಕೇಂದ್ರೀಕರಿಸಿದರು. ಚೀನಾದ ಆದಾಯವನ್ನು ಕುಗ್ಗಿಸಿದರೆ ಅದರ ವಿಸ್ತರಣಾವಾದಿ ಮನೋಭಾವವನ್ನೂ ಹದ್ದುಬಸ್ತಿಗೆ ತರಬಹುದು ಎಂದು ಸರಿಯಾಗಿಯೇ ತರ್ಕಿಸಿದ ಅವರು, ಆ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳು ಷಿ ಜಿನ್ಪಿಂಗ್ ಸರ್ಕಾರವನ್ನು ಕಂಗೆಡಿಸಿದ್ದು ನಿಜ. ಆದರೆ ಒಬಾಮಾ ಆಡಳಿತ ಕಾಲದಲ್ಲಿ ನೆರೆಯ ಕೆನಡಾ ಇರಲಿ, ಅಮೆರಿಕದೊಳಗೇ ಪ್ರಭಾವ ವಿಸ್ತರಿಸಿಕೊಂಡಿದ್ದ ಚೀನಾವನ್ನು ನಿರ್ಣಾಯಕವಾಗಿ ಮಣಿಸುವುದು ಸುಲಭವೇನೂ ಆಗಿರಲಿಲ್ಲ. ಆದಾಗ್ಯೂ ಚೀನಾ ವಿರುದ್ಧ ಭಾರತಕ್ಕೆ ನೀಡಿದ ಬೆಂಬಲ, ವೆನೆಜುವೆಲಾದಲ್ಲಿ ಫೆಬ್ರುವರಿ ೨೦೧೩ರಲ್ಲಿ ಹ್ಯೂಗೋ ಚಾವೆಜ್ ಮರಣದ ಅನಂತರ ಅಧಿಕಾರ ಹಿಡಿದಿದ್ದ ನಿಕೊಲಾಸ್ ಮದೂರೋ ಕೈಗಳನ್ನು ಆರ್ಥಿಕ ದಿಗ್ಬಂಧನಗಳ ಮೂಲಕ ಕಟ್ಟಿಹಾಕುವ ಟ್ರಂಪ್ರ ಕ್ರಮಗಳು ಸಾಕಷ್ಟು ಫಲ ನೀಡಿದ್ದು ನಿಜ.
ಆದರೆ ೨೦೨೦ರ ಅಧ್ಯಕ್ಷೀಯ ಚುನಾವಣೆಗಳಲ್ಲಿ ಟ್ರಂಪ್ರ ಸೋಲು ಮತ್ತು ಜೋ ಬೈಡನ್ ಆಯ್ಕೆಯಾಗಿ ಅಧ್ಯಕ್ಷರಾದದ್ದು ಚೀನಾಗೆ ದಕ್ಕಿದ ಮಹತ್ತರ ಗೆಲವು. ಬೈಡನ್ರ ನಾಲ್ಕು ವರ್ಷಗಳ ಆವಧಿ ಲ್ಯಾಟಿನ್ ಅಮೆರಿಕದಲ್ಲಿ ಚೀನಾವನ್ನು ಮತ್ತೊಮ್ಮೆ ಮುಂಚೂಣಿಗೆ ಬಂದು ನಿಂತಿತು. ವರ್ಷದ ಹಿಂದೆ ಮತ್ತೆ ಶ್ವೇತಭವನ ಪ್ರವೇಶಿಸುವಾಗ ಟ್ರಂಪ್ ಮನಸ್ಸಿನಲ್ಲಿದ್ದುದು ತಮಗಿರುವ ಸಮಯ ಕಡಮೆ, ಸಾಧಿಸಬೇಕಾದದ್ದು ಅಪಾರ ಎಂದು. ಹಿಂದಿನ ಅಧ್ಯಕ್ಷರುಗಳು ದುರ್ಲಭ ಖನಿಜಗಳು ಮತ್ತಿತರ ಅತ್ಯಗತ್ಯ ವಸ್ತುಗಳ ವಿಷಯದಲ್ಲಿ ತಮ್ಮ ದೇಶವನ್ನು ಚೀನಾದ ಮೇಲೆ ಅಪಾರವಾಗಿ ಅವಲಂಬಿತವಾಗಿಸಿದ್ದನ್ನು ಏಕಾಏಕಿ ಸರಿಪಡಿಸಲಾಗದು ಎಂಬ ವಾಸ್ತವವನ್ನು ನೆನಪಿನಲ್ಲಿಟ್ಟುಕೊಂಡೇ ಟ್ರಂಪ್ ತಮ್ಮ ನಡೆಗಳನ್ನು ರೂಪಿಸಿದರು.
ಲ್ಯಾಟಿನ್ ಅಮೆರಿಕದಲ್ಲಿ ಚೀನಿ ಪ್ರಭಾವವನ್ನು ಮೊತ್ತಮೊದಲಿಗೆ ನಿಗ್ರಹಿಸಬೇಕಾದದ್ದು ಪನಾಮಾ ಕಾಲುವೆ ಮತ್ತು ವೆನೆಜುವೆಲಾದಲ್ಲಿ ಎಂದು ಗುರುತಿಸಿದ ಟ್ರಂಪ್ ಆ ನಿಟ್ಟಿನಲ್ಲಿ ಇಟ್ಟ ಹೆಜ್ಜೆಗಳು ಆಸಕ್ತಿಕರ. ಕಳೆದ ಶತಮಾನದ ಅಂತ್ಯದಲ್ಲಿ ಪನಾಮಾ ಕಾಲುವೆಯನ್ನು ಪನಾಮಾ ಸರ್ಕಾರಕ್ಕೆ ಅಮೆರಿಕ ವರ್ಗಾಯಿಸಿದ ಅನಂತರದ ದಿನಗಳಲ್ಲಿ ಅಲ್ಲಿ ಚೀನೀ ಪ್ರಭಾವ ಹಂತಹಂತವಾಗಿ ವೃದ್ಧಿಯಾಗಿತ್ತು. ಹೇಳಿಕೇಳಿ ಪನಾಮಾ ಕಾಲುವೆ ಅಮೆರಿಕದ ಪೂರ್ವ ಮತ್ತು ಪಶ್ಚಿಮ ತೀರಗಳನ್ನು ಸಂಪರ್ಕಿಸುವ ಅತಿ ಹತ್ತಿರದ, ಸುಲಭದ, ಕಡಮೆ ಖರ್ಚಿನ ಹಾದಿ. ಅದು ಚೀನಾದ ಕೈಗೆ ಬಿದ್ದರೆ ಸೂಕ್ಷö್ಮ ಸನ್ನಿವೇಶಗಳಲ್ಲಿ ಅಮೆರಿಕದ ಆರ್ಥಿಕವಷ್ಟೇ ಅಲ್ಲ, ಸಾಮರಿಕ ಹಿತಾಸಕ್ತಿಗಳಿಗೂ ಹಾನಿಯೊಡ್ಡುವ ಶಕ್ತಿ ಚೀನಾಗೆ ನಿರಾಯಾಸವಾಗಿ ದಕ್ಕುತ್ತದೆ. ಇದನ್ನು ತಡೆಯುವುದು ಅಮೆರಿಕದ ಅಧ್ಯಕ್ಷರಾಗಿ ತಮ್ಮ ಕರ್ತವ್ಯ ಎಂದು ಟ್ರಂಪ್ ತರ್ಕಿಸಿದರು. ತಮ್ಮ “Make America Great Again” (ಮಾಗಾ) ನೀತಿಯ ಮೊದಲ ಹೆಜ್ಜೆ ಪನಾಮಾ ಕಾಲುವೆಯಲ್ಲಿಯೇ ಎಂದು ಸರಿಯಾಗಿಯೇ ಗುರುತಿಸಿದ ಅವರು ಅದಕ್ಕಾಗಿ ಪನಾಮಾ ದೇಶದ ಅಧ್ಯಕ್ಷ ಹೊಸೆ ರಾವುಲ್ ಕ್ವಿಂತೇರೋ ಅವರನ್ನು ಸಂಪರ್ಕಿಸಿದರು. ಆದರೆ ಅವರಿಂದ ಬಂದ ಪ್ರತಿಕ್ರಿಯೆ ಆಶಾದಾಯಕವಾಗಿರಲಿಲ್ಲ. ಮುಂದಿನ ಕ್ರಮವಾಗಿ ಟ್ರಂಪ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೋ ಅವರನ್ನು ಪನಾಮಾ ಸಿಟಿಗೆ ಕಳುಹಿಸಿದರು. ಅವರೊಂದಿಗಿನ ಭೇಟಿಯ ಮರುಗಳಿಗೆಯೇ ಹೊಸೆ ರಾವುಲ್ ಕ್ವಿಂತೇರೋ ಚೀನಾಗೆ ಗೇಟ್ಪಾಸ್ ನೀಡಿದರು. ಮೂರೂವರೆ ದಶಕಗಳ ಹಿಂದಿನ ಪ್ರಕರಣವೊಂದನ್ನು ರೂಬಿಯೋ ಅವರಿಗೆ ಬಹುಶಃ ನೆನಪು ಮಾಡಿಕೊಟ್ಟಿರಬಹುದು.
“ಆಪರೇಷನ್ ಆಬ್ಸಲ್ಯೂಟ್ ರಿಸಾಲ್ವ್”
ಅಮೆರಿಕಾಗೆ ಮಾದಕ ವಸ್ತುಗಳ ಕಳ್ಳಸಾಗಾಣಿಕೆ ಮಾಡುವ ಆಪಾದನೆ ೧೯೮೦ರ ದಶಕದ ಅಂತ್ಯದಲ್ಲಿ ಪನಾಮಾ ದೇಶದ ಅಂದಿನ ಸರ್ವಾಧಿಕಾರಿ ಮ್ಯಾನ್ಯುಯೆಲ್ ನೊರಿಯೇಗಾ ಅವರ ಮೇಲೆ ಬಂದದ್ದನ್ನು ನೆನಪಿಸಿಕೊಳ್ಳ್ಳಿ. ಅಮೆರಿಕದ ಯಾವುದೇ ಮನವೊಲಿಕೆ ಅಥವಾ ಬೆದರಿಕೆಗೆ ನೊರಿಯೇಗಾ ಬಗ್ಗದೇ ಇದ್ದಾಗ ಜನವರಿ ೧೯೯೦ರಲ್ಲಿ ಅಧ್ಯಕ್ಷ ಜಾರ್ಜ್ ಬುಶ್ (ಹಿರಿಯ) ಪನಾಮಾಗೆ ಸೇನಾ ತುಕಡಿಯೊಂದನ್ನು ಕಳುಹಿಸಿದರು. ಅದು ನೊರಿಯೇಗಾರನ್ನು ಬಂಧಿಸಿ ಅಮೆರಿಕಗೆ ಕರೆತಂದಿತು. ಆಮೇಲೆ ಅವರು ಮೂರು ದಶಕಗಳಷ್ಟು ಕಾಲವನ್ನು ಟೆಕ್ಸಾಸ್ನ ಕಾರಾಗೃಹವೊಂದರಲ್ಲಿ ಕಳೆಯಬೇಕಾದದ್ದು ಈಗ ಇತಿಹಾಸ. ಈ ಇತಿಹಾಸ ಇಂದು ಹೊಸೆ ರಾವುಲ್ ಅವರಿಗೆ ತಮ್ಮ ಭವಿಷ್ಯದ ಚಿತ್ರವೊಂದನ್ನು ನೀಡಿರಲೇಬೇಕು. ಟ್ರಂಪ್ರ ‘ಮಾಗಾ’ಗೆ ಮೊದಲ ಬಲಿಯಾಗುವುದನ್ನು ಹೊಸೆ ರಾವುಲ್ ತಪ್ಪಿಸಿಕೊಂಡದ್ದು ಹೀಗೆ. ಆ ‘ಕೀರ್ತಿ’ ನಿಕೊಲಾಸ್ ಮದೂರೋ ಅವರಿಗೇ ಕಾದಿತ್ತೇನೋ.
ಇಲ್ಲಿ ಟ್ರಂಪ್ರ ಯಾವುದೇ ಮನವೋಲಿಕೆ ಅಥವಾ ಬೆದರಿಕೆಗೆ ವೆನೆಜುವೆಲಾದ ಈ ಅಧ್ಯಕ್ಷ ಸೊಪ್ಪು ಹಾಕದ್ದನ್ನು ಗಮನಿಸಬೇಕು. ಅಷ್ಟೇ ಅಲ್ಲ, “ತಾಕತ್ತಿದ್ದರೆ ನನ್ನನ್ನು ಮುಟ್ಟು, ಧೈರ್ಯವಿದ್ದರೆ ನನ್ನನ್ನು ಮುಟ್ಟು” ಎಂದು ಟ್ರಂಪ್ರನ್ನು ಕೆಣಕಿದ್ದೂ ಉಂಟು. ತಮ್ಮಲ್ಲಿದ್ದ ೨೫-೩೦ ವರ್ಷಗಳ ಹಿಂದಿನ ರಶಿಯನ್ ಎಸ್-೩೦೦ ವಾಯು ಸುರಕ್ಷಾ ವ್ಯವಸ್ಥೆ ಹಾಗೂ ಆಪರೇಷನ್ ಸಿಂದೂರ್ನಲ್ಲಿ ಕಳಪೆಯೆಂದು ಭಾರತ ಜಗತ್ತಿಗೇ ತೋರಿಸಿದ್ದ ಚೀನಿ ರೆಡಾರ್ಗಳು, ವಾಯು ಸುರಕ್ಷಾ ವ್ಯವಸ್ಥೆಗಳು ಹಾಗೂ ಶಸ್ತಾಸ್ತ್ರಗಳ ಮೇಲೆ ಮದೂರೋಗೆ ಅಷ್ಟು ನಂಬಿಕೆ. ಅದೆಷ್ಟು ನಿರರ್ಥಕ ಎನ್ನುವುದು ಇದೇ ಜನವರಿ ೨-೩ರ ರಾತ್ರಿ ಅವರಿಗೆ ದಾರುಣವಾಗಿ ಅನುಭವಕ್ಕೆ ಬಂತು.
“ಆಪರೇಷನ್ ಆಬ್ಸಲ್ಯೂಟ್ ರಿಸಾಲ್ವ್” ಗಾಗಿ ಅಮೆರಿಕನ್ ಸೇನೆಯ ಘಾತಕ ಡೆಲ್ಟಾ ಫೋರ್ಸ್ ಹಲವು ತಿಂಗಳುಗಳ ಹಿಂದೆಯೇ ತಯಾರಿ ಆರಂಭಿಸಿತ್ತು. ಮದೂರೋ ಕಟ್ಟಿಕೊಂಡಿದ್ದ ಐದು ನಿವಾಸಗಳ ಪ್ರತಿಕೃತಿಗಳನ್ನು ಅವುಗಳು ಇರುವಂತೆಯೇ ನಿರ್ಮಿಸಿ, ಕತ್ತಲಲ್ಲಿ ಅವುಗಳಲ್ಲಿ ಸಲೀಸಾಗಿ ಪ್ರವೇಶಿಸುವುದು ಹೇಗೆ, ಉಕ್ಕಿನ ಬಾಗಿಲುಗಳನ್ನು ಭೇದಿಸುವುದು ಹೇಗೆ ಎನ್ನುವುದನ್ನು ಡೆಲ್ಟಾ ಫೋರ್ಸ್ ಯಾವ ಪ್ರಶ್ನೆಯೂ ಎದುರಾಗದಂತೆ ಅಭ್ಯಾಸ ಮಾಡಿತ್ತು. ಅದೆಲ್ಲವೂ ಕಾರ್ಯರೂಪಕ್ಕಿಳಿದದ್ದು ಜನವರಿ ೨-೩ರ ರಾತ್ರಿ ಒಂದು ಗಂಟೆಯಿಂದ ಮೂರು ಹತ್ತೊಂಬತ್ತರ ನಡುವೆ. ಆಗೇನು ನಡೆಯಿತು, ಅದೆಲ್ಲ ಹೇಗಾಯಿತು ಎನ್ನುವುದನ್ನು ನಾವು ನೋಡಿಯೇ ಇದ್ದೇವೆ.
ಮ್ಯಾನ್ಯುಯೆಲ್ ನೊರಿಯೇಗಾ ರೀತಿ ನಿಕೊಲಾಸ್ ಮದೂರೋ ಅಮೆರಿಕದ ಕಾರಾಗೃಹದಲ್ಲಿ ಕೊಳೆಯುವುದು ನಿಶ್ಚಿತ. ಆ ಬಗ್ಗೆ ಸಂಶಯವಿಲ್ಲ. ಹೀಗಾಗಿ ಅದರ ಕುರಿತಾಗಿ ಚರ್ಚೆ ಮಾಡಿ ಸಮಯ ವ್ಯರ್ಥ ಮಾಡದೆ ಇಡೀ ಪ್ರಕರಣ ಜಾಗತಿಕ ರಾಜಕಾರಣ ಮತ್ತು ಭೂ-ರಾಜಕೀಯದ ಮೇಲೆ ಬೀರಬಹುದಾದ ಪರಿಣಾಮಗಳತ್ತ ಗಮನಹರಿಸೋಣ.
ಡಿಸೆಂಬರ್ ೩೧, ೨೦೨೫ರ ಸಂಜೆ ಅಧ್ಯಕ್ಷ ಟ್ರಂಪ್ ತಮ್ಮ ಖಾಸಗಿ ನಿವಾಸ ಮಾರಾ ಲಾಗೋದಲ್ಲಿ ಹತ್ತಿರದ ಬಂಧುಮಿತ್ರರು, ಸರ್ಕಾರದ ಸಹಯೋಗಿಗಳು ಮತ್ತು ಆಯ್ದ ಪತ್ರಕರ್ತರಿಗಾಗಿ ಹೊಸ ವರ್ಷದ ಸಂಭ್ರಮಾಚರಣೆಯ ಕಾರ್ಯಕ್ರಮವೊಂದನ್ನು ಆಯೋಜಿಸಿದರು. ಅಲ್ಲಿ ಅವರಿಗೆ ಬಂದ ಹಲವು ಪ್ರಶ್ನೆಗಳಲ್ಲೊಂದು – “೨೦೨೬ಕ್ಕೆ ತಮ್ಮ ನಿರ್ಣಯಗಳೇನು? ಟ್ರಂಪ್ ನೀಡಿದ ಉತ್ತರ – “ಈ ಭೂಮಿಯ ಮೇಲೆ ಶಾಂತಿ.’’
ಆದರೆ ವೆನೆಜುವೆಲಾ ಮೇಲೆ ಸೇನಾ ಕಾರ್ಯಾಚರಣೆಗಾಗಿ ಅವರು ಅದಾಗಲೇ ಆದೇಶ ನೀಡಿಯಾಗಿತ್ತು, ಡೆಲ್ಟಾ ಫೋರ್ಸ್ ಅನುಕೂಲಕರ ಗಳಿಗೆಗಾಗಿ ಕಾದುನಿಂತಿತ್ತು. ವಿದೇಶವೊಂದರ ಅಧ್ಯಕ್ಷನನ್ನು ಹೀಗೆ ಹೊತ್ತೊಯ್ಯವುದು ಶಾಂತಿಗೆ ಹೇಗೆ ಪೂರಕ ಎಂಬ ಪ್ರಶ್ನೆ ಹಲವೆಡೆಯಿಂದ ಕೇಳಿಬರುತ್ತಿದೆ. ಹೌದು, ಟ್ರಂಪ್ ಮಾಡಿದ್ದು ಅಂತಾರಾಷ್ಟ್ರೀಯ ಕಾನೂನುಗಳಿಗೆ ವಿರುದ್ಧ, ವಿಶ್ವಸಂಸ್ಥೆಯ ಉದ್ದೇಶಗಳಿಗೆ ಅವಮಾನಕರ, ನಿಜ. ಆದರೆ ವಿಷಯದ ಇನ್ನೊಂದು ಮುಖವನ್ನೂ ನೋಡೋಣ. ಮದೂರೋ ವೆನೆಜುವೆಲಾ ಜನತೆಯ ನಾಯಕನಾಗಿ ಮುಕ್ತವಾಗಿ ಆಯ್ಕೆಯಾದವರಲ್ಲ, ಹಿಂದಿನ ಎರಡೂ ಚುನಾವಣೆಗಳಲ್ಲಿ ಅವರು ಗೆಲವು ಸಾಧಿಸಿದ್ದು ಮೋಸ ಹಾಗೂ ದಬ್ಬಾಳಿಕೆಯ ಮೂಲಕ ವಿರೋಧಿಗಳನ್ನು ಹತ್ತಿಕ್ಕಿ. ಸರಿ, ಹಾಗೆ ಮಾಡಿ ಅವರು ಜನತೆಯ ಹಿತ ಸಾಧನೆಗಾಗಿಯಾದರೂ ಶ್ರಮಿಸಿದರೇ? ಅವರ ಆಡಳಿತದಲ್ಲಿ ಅಗತ್ಯ ವಸ್ತುಗಳು ಅಲಭ್ಯವಾಗಿವೆ, ಬೆಲೆ ಏರಿಕೆ ೬೦೦% ದಾಟಿದೆ. ಒಂದು ಕಾಲದ ಶ್ರೀಮಂತ ವೆನೆಜುವೆಲನ್ ಜನತೆ ಇಂದು ನಿರ್ಗತಿಕರಾಗಿದ್ದಾರೆ. ಆದರೆ ನಿಕೊಲಾಸ್ ಮದೂರೋ, ಅವರ ಸಮೀಪವರ್ತಿಗಳು ಮತ್ತು ಸಹಯೋಗಿಗಳು ಐಷಾರಾಮಿ ಜೀವನ ನಡೆಸುತ್ತಿದ್ದಾರೆ, ವಿರೋಧಿಗಳು ಯಮಪುರಿಯಲ್ಲಿದ್ದಾರೆ ಅಥವಾ ವಿದೇಶಗಳಲ್ಲಿದ್ದಾರೆ. ಅವೆರಡರಿಂದಲೂ ಹೊರಗುಳಿದವರು ಕಾರಾಗೃಹದಲ್ಲಿದ್ದಾರೆ. ಇಂತಹ ಆಡಳಿತಗಾರನನ್ನು ಕೆಳಗೆಳೆದದ್ದು ಜನತೆಗೆ ಹೊಸ ಆಶಾಕಿರಣ.
ಇದರರ್ಥ ಟ್ರಂಪ್ರ ಈ ಕ್ರಮದಿಂದ ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವ ಶೀಘ್ರವಾಗಿ ಸ್ಥಾಪನೆಯಾಗುತ್ತದೆ, ಆ ದೇಶ ಮತ್ತೊಮ್ಮೆ ಸಂಪದ್ಭರಿತವಾಗುತ್ತದೆ ಎಂದಲ್ಲ. ಆದರೆ ಅದರ ಬಾಗಿಲುಗಳು ತೆರೆದಿವೆ ಎನ್ನುವುದನ್ನು ಗುರುತಿಸದಿರಲಾಗದು.
ಒಂದುವೇಳೆ ಮದೂರೋ ಅಧಿಕಾರದಲ್ಲೇ ಮುಂದುವರಿದಿದ್ದರೆ ಏನಾಗಬಹುದಿತ್ತು? ೧೯೭೦ರ ದಶಕದವರೆಗೂ ಆರ್ಥಿಕವಾಗಿ ಹೀನಾಯಸ್ಥಿತಿಯಲ್ಲಿದ್ದ ಚೀನಾವನ್ನು ಅದ್ಭುತ ಪ್ರಗತಿಯತ್ತ ಕೊಂಡೊಯ್ದು ಇಂದು ಆ ದೇಶ ಜಾಗತಿಕವಾಗಿ ಎರಡನೆಯ ಬೃಹತ್ ಅರ್ಥವ್ಯವಸ್ಥೆಯಾಗಲು ಬುನಾದಿ ಹಾಕಿದ ನೇತಾರ ದೆಂಗ್ ಷಿಯಾವೋಪಿಂಗ್. ಆತ ಚೀನೀಯರಿಗೆ ಕೊಟ್ಟ ಒಂದು ಉಪದೇಶ ಇಂದಿಗೂ ಪ್ರತಿಧ್ವನಿಸುತ್ತಿದೆ. “Hide your strength bide your time” ಎಂಬ ಆ ಮಾತಿನ ಅರ್ಥ “ನಿಮ್ಮ ಸಮಯ ಬರುವವರೆಗೆ ನಿಮ್ಮ ಶಕ್ತಿಯನ್ನು ತೋರಿಸಿಕೊಳ್ಳಬೇಡಿ” ಎಂದು. ಇಂದು ಸೇನಾಶಕ್ತಿಯ ದೃಷ್ಟಿಯಲ್ಲಿ ಅಮೆರಿಕಾದ ಮುಂದೆ ಚೀನಾ ಏನೇನೂ ಅಲ್ಲ, ಆದರೆ ಅದು ಅಮೆರಿಕ, ಜಪಾನ್ ಮತ್ತು ಯೂರೋಪಿಯನ್ ಯೂನಿಯನ್ಗಳ ಆರ್ಥಿಕ ಕೊರಳಿನ ಸುತ್ತಲೂ ಕುಣಿಕೆ ಬಿಗಿಗೊಳಿಸುತ್ತಿದೆ. ತಾವು ಕುಣಿಕೆಗೆ ಕೊರಳೊಡ್ಡಿದ್ದೇವೆ ಎಂದು ಆ ದೇಶಗಳಿಗೆ ತಿಳಿದ್ದದೇ ತೀರಾ ತಡವಾಗಿ. ಅದರಿಂದ ಹೊರಬರುವುದು ಅವುಗಳಿಗೆ ಕಷ್ಟಸಾಧ್ಯ. ಸದ್ಯಕ್ಕೆ ಅವುಗಳಿಗಿರುವ ಸೇನಾಶಕ್ತಿಯೇ ಚೀನಾ ಯಾವುದೇ ದುಸ್ಸಾಹಸಕ್ಕೆ ಇಳಿಯದಂತೆ ತಡೆದಿದೆ. ಈ ವಿಷಯದಲ್ಲಿ ನಮ್ಮ ಸ್ಥಿತಿಯೂ ಹಾಗೆಯೆ. ಸೂಕ್ಷ್ಮ ಸನ್ನಿವೇಶದಲ್ಲಿ ಈ ದೇಶಗಳ ಕೊರಳನ್ನು ತಾನು ಹಿಚುಕಿಬಿಡಬಲ್ಲೆ, ಅವುಗಳ ಸೇನಾಶಕ್ತಿ ಅವುಗಳಿಗೆ ಪ್ರಯೋಜನವಿಲ್ಲದಂತೆ ಮಾಡಬಲ್ಲೆ ಎಂಬ ನಂಬಿಕೆ ಚೀನಾಗೆ ಬಂದ ದಿನ ಜಗತ್ತಿನ ಇತಿಹಾಸ ಬದಲಾಗುತ್ತದೆ.
ಇಂತಹದೊಂದು ದುರಂತವನ್ನು ತಡೆಯಬೇಕಾದರೆ ಇಂದು ಸಣ್ಣದೊಂದು ಕಾರ್ಯಾಚರಣೆ ನಡೆಯುವುದು ಅಗತ್ಯ. ಇಂದು ಕೈ ಬೆರಳುಗಳನ್ನು ತುಸು ಸುಟ್ಟುಕೊಂಡಾದರೂ ಸರಿ, ಮುಂದಿನ ಭಾರೀ ಬೆಂಕಿಯನ್ನು ತಡೆಯುವುದು ವಿವೇಕ ಎಂದು ಟ್ರಂಪ್ ತಿಳಿದರೆ ಅದು ಭವಿಷ್ಯತ್ತಿನ ಶಾಂತಿಯ ದೃಷ್ಟಿಯಿಂದ ಅಗತ್ಯವಾದ ವಿವೇಕ. ಈ ನಿಟ್ಟಿನಲ್ಲಿ ಮಾಗಾ ಅಷ್ಟೇ ಅಲ್ಲ, ಜಾಗತಿಕ ಶಾಂತಿಗಾಗಿಯೂ ನಿಕೊಲಾಸ್ ಮದೂರೋ ಮೊದಲ ಬಲಿ. ಈ ಬಲಿ ಆಗಲೇಬೇಕಾಗಿತ್ತು. ಇದು ಸದ್ಯಕ್ಕೆ ಇಲ್ಲಿಗೇ ನಿಲ್ಲುವಂತಿಲ್ಲ. ಇರಾನ್ನ ಮೂಲಭೂತವಾದಿ ಆಡಳಿತ, ಕೊಲಂಬಿಯಾದ ಚೀನಿ-ಪರ ಅಧ್ಯಕ್ಷ ಗುಸ್ತಾವೋ ಪೆತ್ರೋ ತಾವು ಮದೂರೋ ಹಾದಿ ಹಿಡಿಯಬಾರದು ಎಂದು ನಿರ್ಧರಿಸುತ್ತಾರೆ ಎಂದು ಆಶಿಸೋಣ.
ಕೊನೆಯ ಮಾತು – ಈ ಪ್ರಕರಣದ ಪರಿಣಾಮ ಭಾರತದ ಮೇಲೆ ಏನು? ವೆನೆಜುವೆಲಾ ಕಚ್ಚಾತೈಲ ಮಂದ, ಭಾರ ಎಂದು ಈಗಾಗಲೇ ಹೇಳಿದ್ದೇನೆ. ಅದನ್ನು ಹೊರತೆಗೆದು ಸಂಸ್ಕರಿಸುವ ತಾಂತ್ರಿಕ ಸಾಮರ್ಥ್ಯ ಇರುವುದು ಅಮೆರಿಕ, ಚೀನಾ ಮತ್ತು ಭಾರತಗಳಲ್ಲಿ ಮಾತ್ರ. ಚೀನಾಗೆ ಈಗ ಅಲ್ಲಿಂದ ಎತ್ತಂಗಡಿಯಾಗಿದೆ. ಅಲ್ಲಿಗೆ ಹೋಗಲು ಅಮೆರಿಕದ ತೈಲ ಕಂಪೆನಿಗಳು ತಯಾರಿಲ್ಲ. ಟ್ರಂಪ್ರ ಪುಸಲಾಯಿಸುವಿಕೆಗೆ ತೈಲ ದಿಗ್ಗಜಗಳಾದ ಎಕ್ಸಾನ್ ಮೊಬಿಲ್, ಶೆವ್ರಾನ್, ಕನಾಕೋ ಫಿಲಿಪ್ಸ್ ಬಾಗುತ್ತಿಲ್ಲ. ಹೀಗಾಗಿ ನಾಳೆ ಟ್ರಂಪ್ ಭಾರತದತ್ತ ಮುಖ ಮಾಡಬಹುದೆ? ವೆನೆಜುವೆಲಾದಂತೆ ಮಂದ ತೈಲ ಹೊಂದಿರುವ ಗಯಾನಾದಲ್ಲಿ ನಮ್ಮ ಓಎನ್ಜಿಸಿ ವಿದೇಶ್ ಈಗಾಗಲೇ ಕಾರ್ಯನಿರತವಾಗಿದೆ, ಹತ್ತು ಮಿಲಿಯನ್ ಡಾಲರ್ಗಳನ್ನೂ ಹೂಡಿದೆ, ವೆನೆಜುವೆಲಾದ ಬೆಳವಣಿಗೆಗಳ ನಾಡಿಮಿಡಿತ ಅರಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಕಳೆದ ನವೆಂಬರ್ನಲ್ಲಿ ಗಯಾನಾಗೆ ಭೇಟಿ ನೀಡಿ ಸಂಬಂಧ ಹಾಗೂ ಸಹಯೋಗಗಳ ಹೊಸ ಶಕೆಯನ್ನು ಆರಂಭಿಸಿದ್ದಾರೆ. ಗಯಾನಾದಲ್ಲಿನ ಚಟುವಟಿಕೆಗಳನ್ನು ಗಡಿ ದಾಟಿ ವೆನೆಜುವೆಲಾಗೂ ವಿಸ್ತರಿಸುವುದು ಓಎನ್ಜಿಸಿ ವಿದೇಶ್ಗೆ ಕಷ್ಟವೇನೂ ಆಗುವುದಿಲ್ಲ. ಈ ಕುರಿತಾಗಿ ಮೋದಿ ಮತ್ತು ಟ್ರಂಪ್ ಹೇಗೆ ವಿಚಾರವಿನಿಮಯ ನಡೆಸುತ್ತಾರೆ, ಇಬ್ಬರೂ ನಾಯಕರು ಕೊಡಕೊಳ್ಳುವ ಬಗ್ಗೆ ಯಾವ ನಿಲವು ತಳೆಯುತ್ತಾರೆ ಎನ್ನುವುದರ ಮೇಲೆ ಲ್ಯಾಟಿನ್ ಅಮೆರಿಕದಲ್ಲಿ ಭಾರತದ ಸ್ಥಾನ ರೂಪಿತಗೊಳ್ಳುತ್ತದೆ, ಅಷ್ಟರಮಟ್ಟಿಗೆ ವಿಶ್ವಶಾಂತಿಯೂ ಸಹ.




