“ಏ ಮಣಿ, ಕುರಿಗ್ ಕಟ್ಟಿದ್ ದಾರ ಬಿಚ್ಚೇ. ಟರ್ರ್… ಆ, ಆ… ಬಾ, ಬಾ… ಉಷ್, ಷ್ … ಅಂತ ಏನಾರ ಒಂದ್ ಪದ ಹಿಡ್ದು ಕರ್ದೂ ಕರ್ದೂ ಬುಡಕ್ ಬರಾ ಹಂಗೆ ಮಾಡ್ಕಾ. ಅಷ್ಟೂ ಭಯಾ ಭಯಾ ಒಲ್ಲೆವ್ವಾ ಅಂದ್ರೆ ಹೆಂಗೇ? ಕುರಿಮರಿ ತೊಡೆ ಎತ್ರುಕ್ಕೆ ಬೆಳ್ದು, ಕಾಸ್ ಎಣಸಾದ್ ಬ್ಯಾಡ್ವಾ? ಒಂದಪಾ ಎರಡ್ದಪ ಹೇಳ್ಬೋದು. ಇಕಿ ಒಳ್ಳೇ ಹಳೇ ಕೆಪ್ಪಿ. ಒಪ್ಕಳ್ಳದೂ ಇಲ್ಲಾ. ಬಡ್ಕಳ್ಳಾಕು ಬ್ಯಾಸ್ರ” ಎಂದು ಬಡಬಡಿಸುತ್ತ ಶಾರದಾ ತನ್ನ ಹತ್ತೂ ಕುರಿಗಳನ್ನು ಉಷ್ ಷ್… ಎನ್ನುತ್ತ ಕರೆದು ಪುಳ್ಳೆ ಕೋಲಿನಿಂದ ಆಚೆ ಈಚೆ ಸವರುತ್ತ ಸಾಲುಗಟ್ಟಿಸಿ ಅವುಗಳಿಗೆ ನೀರು ಕುಡಿಸಲು ತನ್ನ ಸೀರೆಯನ್ನು ಕಚ್ಚೆಹಾಕಿ ಬೆನ್ನಿಗೆ ಸಿಕ್ಕಿಸಿಕೊಂಡವಳೇ, ಹಳ್ಳದ ದಾರಿಗೆ ಇಳಿಯುತ್ತ ಮರೆಯಾಗಿಹೋದಳು. ಆಕೆ ಹೋದ ದಾರಿಯನ್ನೇ ನೋಡುತ್ತ್ತ ಮಣಿಯೂ ಕೂಡ ಮರಕ್ಕೆ ಕಟ್ಟಿದ್ದ ತನ್ನೆರಡೂ ಕುರಿಗಳ ದಾರ ಬಿಚ್ಚಿ ಭದ್ರವಾಗಿ ಎಡಮುಷ್ಟಿಗೆ ಸುತ್ತಿಕೊಂಡು ಹಿಂದೆ ಹಿಂದೆಯೇ ತನ್ನ ಮಕ್ಕಳನ್ನು ಕರೆದುಕೊಂಡು ಬರಲು ಗುಡಿಯತ್ತ ಹೊರಟಳು.
* * *
ಹಳ್ಳಿಯ ಎಲ್ಲರಿಗೂ ಇದೊಂದೇ ಹಳ್ಳ ಇದ್ದದ್ದು. ಈ ಹಳ್ಳವೇ ಎಲ್ಲರಿಗೂ ಶಿವ, ಐನೋರು, ಅಪ್ಪಾ, ಅವ್ವಾ, ಕಳ್ಳು-ಬಳ್ಳಿ ಎಲ್ಲವೂ ಆಗಿತ್ತು. ಪುಣ್ಯಕ್ಕೆ ಹಳ್ಳವು ವರ್ಷದ ಹನ್ನೆರಡೂ ತಿಂಗಳುಗಳು ಹರಿಯುತ್ತಿರುತ್ತಿತ್ತು. ಹಳ್ಳಿಯನ್ನು ದಾಟಿ ಮುಂದೆ ಆರು ಕಿ.ಮೀ.ಗೆ ತಾಲೂಕಿನ ಎ.ಪಿ.ಎಂ.ಸಿ. ಸುವ್ಯವಸ್ಥಿತ ಕಟ್ಟಡವಿದ್ದ ಕಾರಣಕ್ಕೋ ಏನೋ ಹಳ್ಳದ ಮೇಲೆ ಭದ್ರವಾದ ಕಾಂಕ್ರೀಟ್ ಕಿರುಸೇತುವೆಯೊಂದು ನಿರ್ಮಾಣವಾಗಿತ್ತು. ಗಾಡಿಯ ಸಲಕರಣೆಗಳು ಹಾಗೂ ಗಾಡಿಗಳನ್ನು ತೊಳೆಯುವವರು ಸೇತುವೆಯ ಆಚೆ ಬದಿಗೆ ಮುಂದೆ ಹರಿಯುವ ಹಳ್ಳದಲ್ಲಿ ತಮ್ಮ ಕೆಲಸವನ್ನು ನೋಡಿಕೊಳ್ಳುತ್ತಿದ್ದರು. ಈಚೆ ಬದಿಯದು ಹಳ್ಳಿಯ ದಡ ಮತ್ತು ಅಲ್ಲಿ ಹೆಣ್ಣುಮಕ್ಕಳೇ ಹೆಚ್ಚಾಗಿರುತ್ತಿದ್ದರು. ಅವರೆಲ್ಲರೂ ಹೊರಗಿನ ಕೆಲಸಗಳಿಗೆ ಹಳ್ಳವನ್ನೇ ಅವಲಂಬಿಸಿದ್ದರು. ಹಳ್ಳಿಯಲ್ಲಿದ್ದ ಎಲ್ಲ್ಲ ಕೇರಿ, ತಿರುವುಗಳಿಗೂ ಸಾಕಷ್ಟು ಸಂಖ್ಯೆಯಲ್ಲಿ ನಲ್ಲಿಗಳಿದ್ದವು. ಆದರೆ ಈ ಕೊನೆಯ ಎರಡು ಕೇರಿಗಳಿಗೆ ಮಾತ್ರ ಒಂದೊಂದೇ ನಲ್ಲಿಯಿತ್ತು. ಬರುತ್ತಿದ್ದ ನೀರು, ಕುಡಿಯುವ ಮತ್ತು ಪೂಜೆಯ ಬಳಕೆಗೆ ಸಾಕಾಗುತ್ತಿತ್ತಷ್ಟೇ. ಅದೂ ಕುರಿ ರಾಮಣ್ಣನ ಮಧ್ಯಸ್ಥಿಕೆಯಿಂದಾಗಿ. ಇಲ್ಲವಾದರೆ ಅದಕ್ಕೂ ತತ್ವಾರವಿತ್ತು. ಬಾಕಿ ಎಲ್ಲ ಕೆಲಸ ಕಾರ್ಯಗಳಿಗೂ ಅದೇ ಹಳ್ಳ. ಅದಾವುದೋ ಸಂಖ್ಯೆ, ದಾಖಲೆ, ಬರೆಯದ ಬೆಲೆಬಾಳುವ ಮರಗಳನ್ನು ಕಡಿದು ನಾಲ್ಕು ವರ್ಷ ಜೈಲಿಗೆ ಹೋಗಿ ಬಂದಿದ್ದ ಸಾತನ ಹೆಂಡತಿಯು, ನಲ್ಲಿಗೆ ಪೈಪು ಹಾಕಿ ಅರ್ಧ ದಿನ ಕುಳಿತು ಬಿಡುತ್ತಿದ್ದಳು. ಯಾರೂ ಆಕೆಗೆ ಬಾಯಿ ಕೊಡುತ್ತಿರಲಿಲ್ಲ. ಜೈಲಿಗೆ ಹೋಗಿದ್ದ ಸಾತನೂ ಸಹ ಕಡಮೆಯವನಲ್ಲ. ಅವನು ಹದಿನಾರಾಣೆ ಕೇಡಿಗ ಗುರು. ಇಂಥವನನ್ನು ಸೆರಗಿಗೆ ಕಟ್ಟಿಕೊಂಡು ಸಂಸಾರ ಹೊತ್ತಿದ್ದ ಅವನ ಹೆಂಡತಿ, ಹನ್ನೆರಡಾಣೆ ಬಾಯಿಹರಕು ಶಿಷ್ಯೆ. ಒಂದು ರೀತಿಯಲ್ಲಿ ನೆಟ್ಟಗಿರದ ಸೊಟ್ ಸೊಟ್ಟಗಿನ ಮಂತ್ರವಾದಿಯ ಕೋಲಿನಂತಹ ಸಂಸಾರ. ಆಕಡೆ ಒಂದು ಸೈ ಎನಿಸುವಂತಹ ಮಾತಿರಲಿಲ್ಲ. ಈಕಡೆ ಸೇರು ಕಾಳುಕಡ್ಡಿ ಹುಟ್ಟುವಂತಹ ಕೇಮೆಯೂ ಇರದ ದಂಪತಿಗಳು. ಇಬ್ಬರೂ, ಕೇಡಿ ಸಾತ-ಸಾತನ್ ಹೆಂಡ್ರು ಅಂತಲೇ ಹೆಸರುವಾಸಿಯಾಗಿದ್ದರು.
ನೀರಿನ ನಲ್ಲಿಗೆ ಪೈಪು ಹಚ್ಚಿ ಬೀಡಿ ಸೇದುತ್ತ ಜಗಲಿಯಲ್ಲಿ ಕುಳಿತು ಬಿಡುತ್ತಿದ್ದ ಅವಳ ರಾದ್ಧಾಂತಗಳ ಅರಿವಿಲ್ಲದ ಕುರಿ ರಾಮಣ್ಣ, ಆಷಾಢದ ಬಿಡುವಿನಲ್ಲಿ ಮನೆಯಲ್ಲಿರುವಾಗ ಎಲ್ಲವನ್ನು ಗಮನಿಸಿದ್ದ. ಸಾತ ಹಾಗೂ ಅವನ ಹೆಂಡತಿ ಇರುತ್ತಿದ್ದ ಮನೆಯು ರಾಮಣ್ಣನದ್ದೇ ಆಗಿತ್ತು. ವರ್ಷವಾದರೂ ಬಾಡಿಗೆ ಕೊಡದ ಸಾತನು ರಾಮಣ್ಣನ ಬಳಿಯೇ ಕೆಲಸಕ್ಕಿದ್ದ. ಮನೆ ಖಾಲಿ ಮಾಡಿ, ಕೆಲಸಕ್ಕೆ ಬರಬೇಡ ಎಂದು ರಾಮಣ್ಣ ಗುಡುಗುತ್ತಿದ್ದಂತೆಯೇ ಬೀದಿಯ ಎಲ್ಲರ ಕೊಡಗಳಲ್ಲಿಯೂ ನಲ್ಲಿ ನೀರಿನ ಧಾರೆ ಸುರಿಯಲಾರಂಭಿಸಿತು. ಕುರಿ ರಾಮಣ್ಣನ ಹೆಂಡತಿ ಗಂಗಮ್ಮ. ಆಕೆಯೋ ತಿಳಿನೀರಿನಂತಹ ಮನಸ್ಸಿನವಳು. ನೆರೆಹೊರೆಯಲ್ಲಿ ಸದಾ ಸ್ನೇಹದಿಂದ ಬದುಕುತ್ತಿದ್ದ ಸಾಧು ಜೀವಿ. ಇಬ್ಬರು ಹೆಣ್ಣುಮಕ್ಕಳ ಮದುವೆ, ಬಾಣಂತನ ಎಲ್ಲ ಮುಗಿಸಿ ಈಗ ಗಂಡ-ಗುಂಡಿ ಉಳಿದಿದ್ದರು.
ಕುರಿ ಸಾಕಣೆ ಕಸುಬಿನ ರಾಮಣ್ಣನು ಕುರಿಗಳ ಹಿಂಡನ್ನು ಕಾಂಟ್ರಾಕ್ಟ್ ಒಪ್ಪಿಕೊಂಡಂತೆ ಆಯಾ ಹೊಲಗಳಿಗೆ ಹೊಡೆದುಕೊಂಡು ಹೋಗಿಬಿಡುತ್ತಿದ್ದ. ಕುರಿ ಗೊಬ್ಬರದ ಕಾಂಟ್ರಾಕ್ಟ್ ಅದು. ಹತ್ತು ದಿನಗಳು, ಒಂದು ಪಕ್ಷ, ತಿಂಗಳು ಎಂದು ಅಲ್ಲೇ ಕಟಾವು ಮುಗಿದ ಹೊಲಗಳಲ್ಲಿ ಕುರಿ ಮೇಯಿಸಿ, ಅವು ಹಾಕುವ ಹಿಕ್ಕೆ ಗೊಬ್ಬರದ ಅಂದಾಜು ನೋಡಿಕೊಂಡು ಹೊಲದ ಮಾಲೀಕರಿಗೆ ತಿಳಿಸಿ ಮತ್ತೆ ಮುಂದಿನ ಹಳ್ಳಿಗೋ, ಊರಿಗೋ ಕಾಂಟ್ರಾಕ್ಟಿಗೆಂದು ಹೊರಡುತ್ತಿದ್ದ. ಕುರಿಗಳನ್ನು ಹೊಡೆದುಕೊಂಡು ನಡೆದು ಸಾಗುವ ಸುತ್ತಾಟಕ್ಕೆ, ಹಾಲು ಕರೆಯಲು, ಅಡುಗೆಗೆ ಹಾಗೂ ಕಾವಲಿಗೆ ಆತನಲ್ಲಿ ನಂಬಿಕಸ್ತ ಬಂಟರ ಒಂದು ಗುಂಪೇ ಇತ್ತು. ಕಮ್ಮಾರರ ಕುಮಾರ, ಮ್ಯಾದರ ಅಜ್ಜಪ್ಪ, ತಳವಾರ ಭೀಮಾ, ಅನಾಥರಾದ ಕೂಲಿ ಆಳುಗಳಾದ ಕುಶಪ್ಪ, ಜವರ, ಪ್ರಕಾಶ, ಶಂಭುಲಿಂಗ – ಹೀಗೆ ಅಲ್ಪ ಆದಾಯದ ಹಾಗೂ ಕುಲಕಸುಬಿನಿಂದ ಹೊಟ್ಟೆ ತುಂಬದ, ಅರೆಕಾಲಿಕ ಕೆಲಸಗಳಿಂದ ನೊಂದವರು ಜೊತೆಯಾಗಿದ್ದರು. ತಮ್ಮ ತಮ್ಮ ಮೂಲ ಕೆಲಸಗಳು ಇರುವಾಗ ಅಲ್ಲಿ ದುಡಿದುಕೊಂಡು, ಬಿಡುವಿನ ಕಾಲದಲ್ಲಿ ಅಥವಾ ಕೆಲಸದ ಸೀಸನ್ ಇಲ್ಲದಾಗ ರಾಮಣ್ಣನಲ್ಲಿ ಬಂದು ದುಡಿಯಲು ನಿಲ್ಲುತ್ತಿದ್ದರು. ನಿಸ್ವಾರ್ಥವಾಗಿ ಜಾತಿ, ಮತ, ಗಂಡು ಹೆಣ್ಣೆಂದು ಭೇದ ಬಗೆಯದೆ ಕೆಲಸ ಹಂಚಿ ನೆರವಾಗುತ್ತಿದ್ದ ರಾಮಣ್ಣನು, ಹಾಲು ಕುಡಿಯುವ ಕುರಿ ಮರಿಗಳು ತಾಯಿಯ ಹಾಲು ಬಿಟ್ಟು ಮೇಯಲು ಶುರು ಮಾಡುತ್ತಿದ್ದಂತೆಯೇ ಅವುಗಳನ್ನು ಹಿಂಡಿನಿಂದ ಬೇರ್ಪಡಿಸಿ, ಮೇಯಿಸಿ ಬೆಳೆಸುವ ಗುತ್ತಿಗೆ ಕೆಲಸವನ್ನೂ ಸಹ ಕೊಡುತ್ತಿದ್ದ. ಮರಿಗಳನ್ನು ಐದರಿಂದ ಆರು ತಿಂಗಳುಗಳು ಮೇಯಿಸಿದ ಅನಂತರ ಅವು ನಿರ್ದಿಷ್ಟ ತೂಕ ಮತ್ತು ವಯಸ್ಸಿಗೆ ಬರುತ್ತಿದ್ದಂತೆಯೇ ವಾಪಸ್ಸು ಪಡೆಯುತ್ತಿದ್ದ ಮತ್ತು ಆಗ ಗುತ್ತಿಗೆ ಕೆಲಸ ಮುಗಿಸಿದ ಬಾಬ್ತು; ಕುರಿಯೊಂದಕ್ಕೆ ನಾಲ್ಕುವರೆಯಿಂದ ಐದು ಸಾವಿರದವರೆಗೆ ಹಣ ನೀಡುತ್ತಿದ್ದ. ಆ ಸುತ್ತಲಿನ ಸುಮಾರು ಇಪ್ಪತ್ತು ಕಿ.ಮೀ.ಗಳವರೆಗೂ ವಯಸ್ಸಾದವರು, ಮನೆವಾರ್ತೆಯ ಹೆಣ್ಣುಮಕ್ಕಳು, ಶಾಲೆ ಮುಗಿದ ಅನಂತರ ಬಿಡುವಾಗಿರುತ್ತಿದ್ದ ಕೊಂಚ ದೊಡ್ಡ ಹುಡುಗರು – ಹೀಗೆ ಹಣದ ಆವಶ್ಯಕತೆ ಇರುವ ಸಂಸಾರಗಳು ಇದನ್ನು ಉಪಜೀವನದ ಮಗ್ಗುಲಿನ ದಾರಿಯಾಗಿ ಮಾಡಿಕೊಂಡಿದ್ದರು. ಟೈಲರ್ ಜಮೀಲಪ್ಪನ ಇಬ್ಬರು ತಮ್ಮಂದಿರು ಸಹಾ ಮಾಂಸ ಮತ್ತು ಚರ್ಮದ ವ್ಯಾಪಾರಕ್ಕೆ ಜೊತೆಯಾಗಿದ್ದರು. ಪರಸ್ಪರರ ಅವಲಂಬನೆಯು ಎಲ್ಲರನ್ನೂ ಒಂದುಗೂಡಿಸಿತ್ತು. ಕುರಿ ಮಂದೆಯಂತೆಯೇ ಇವರ ವಲಯವು ಸಹಾ ಬೆಳೆಯುತ್ತಿತ್ತು, ದೊಡ್ಡದಿತ್ತು.
ಹೀಗೆ ಕುರಿ ರಾಮಣ್ಣನಿಂದ ಎರಡು ಕುರಿಮರಿಗಳನ್ನು, ಗುತ್ತಿಗೆಯ ಮೇಲೆ ಸಾಕಲು ಪಡೆದಿದ್ದ ಮಣಿಯದು ಕೂಡ ಒಂದು ನೋವಿನ ಕಥೆಯೇ. ಇನ್ನೂ ಹದಿನಾರು ವರ್ಷಗಳೂ ಸಹ ತುಂಬದ ಎಳೆಯ ಹುಡುಗಿಯನ್ನು ಮನೆಕೆಲಸ ಕಲಿಸಿ ಮದುವೆ ಮಾಡಿ ಸಾಗಹಾಕಿದ್ದ ಆಕೆಯ ಅಪ್ಪ. ಮಣಿಯ ತಾಯಿಯು ತೀರಿಕೊಂಡು ಇನ್ನೂ ಆರು ತಿಂಗಳಾಗಿರಲಿಲ್ಲ ಆಗಲೇ ಆಕೆಯ ಅಪ್ಪ ತನಗೆ ಹೊಸ ಹೆಂಡತಿಯನ್ನು ತರುವ ಅವಸರದಲ್ಲಿದ್ದ. ಸತ್ತ ಹೆಂಡತಿಯ ಕೊರಳಲ್ಲಿದ್ದ ಐದು ಲಕ್ಷ್ಮಿಕಾಸುಗಳನ್ನು ಅವಳ ಮಗಳಿಗೆ ಹಾಕಿ, ತನ್ನ ನೋಟುಗಳು ಹೊಸಿಲು ದಾಟದಂತೆ ಭದ್ರ ಮಾಡಿಕೊಂಡಿದ್ದ. ಸ್ಥಿತಿಗತಿಯಿಂದ ಏನೇನೂ ಅನುಕೂಲವಿರದ ಮಣಿಯ ಗಂಡ ಹೇಮನು, ಆಕೆಯನ್ನು ಕೂಲಿನಾಲಿ ಮಾಡಿ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಪ್ರೀತಿಗೆ ಸ್ವಲ್ಪವೂ ಬರವಿರಲಿಲ್ಲ. ದುರ್ಭಿಕ್ಷದಲ್ಲಿ ಅಧಿಕಮಾಸ ಬಂದಂತೆ ಅವಳಿ-ಜವಳಿ ಗಂಡು ಮಕ್ಕಳಾಗಿದ್ದವು. ಮಕ್ಕಳ ಭಾಗ್ಯಕ್ಕಾಗಿ ಸಂತೋಷವಾಗಿದ್ದು ನಿಜ, ಆದರೆ ಉಣ್ಣುವ ತಟ್ಟೆಗಳು ನಾಲ್ಕಾಗುತ್ತಿದ್ದಂತೆಯೇ ಮೂರು ಹೊತ್ತಿನ ಊಟವನ್ನು ಹಾಗೂ ಹೀಗೂ ಹೊಂದಿಸುತ್ತಿದ್ದ ಹೇಮನು ಬರಬರುತ್ತ ಕೃಶನಾಗತೊಡಗಿದ್ದ. ಹೆಂಡತಿ, ಮಕ್ಕಳ ಹೊಟ್ಟೆ ತುಂಬಿಸಿ ಸುಖವಾಗಿಡಬೇಕೆಂಬ ಆತನ ಆಸೆ ಈಡೇರದೆ ಚಿಂತೆಗಳು ತಲೆಯನ್ನು ತುಂಬತೊಡಗಿದ್ದವು. ತೋಟದ ಗಿಡಮರಗಳ ಸವರಣೆ ಹಾಗೂ ಕಸಿ ಕೆಲಸ ಮಾಡುತ್ತಿದ್ದ ಹೇಮನು ಕೆಲವು ದಿನಗಳಲ್ಲಿ ಕೆಲಸ ಸಿಗದಿದ್ದಾಗ ಹೈರಾಣಾಗುತ್ತಿದ್ದ. ಸಾಲ ಮಾಡಲು ಹೆದರುತ್ತಿದ್ದ. ಪುಟಗೋಸಿ ಆದಾಯದಲ್ಲಿ ಸಾಲ ತೀರಿಸುವ ಗುಂಡಿಗೆ ಎಲ್ಲಿಂದ ಬರಬೇಕು ಹೇಳಿ. ಗಂಡ-ಹೆಂಡತಿಗೆ ಮುಂದಿನ ದಿನಗಳಲ್ಲಿ ಮಕ್ಕಳನ್ನು ಶಾಲೆಗೆ ಕಳಿಸುವ ಆಸೆಯಿದ್ದರೂ ಅದು ಆಸೆಯಾಗಿಯೇ ಉಳಿಯುವುದೆಂದು ಬಗೆದಿದ್ದರು. ಹೊಸ ದಾರಿಯೊಂದು ಕಂಡೀತು ಎಂಬ ನಂಬಿಕೆ ಇರಲಿಲ್ಲ. ಹೇಗಾದರೂ ನಾಲ್ಕು ಕಾಸು ಹೆಚ್ಚಾಗಿ ಸಂಪಾದಿಸಬೇಕೆಂದು ಸದಾ ತಹತಹಿಸುತ್ತಿದ್ದರು.
ಅದೊಂದು ಮಧ್ಯಾಹ್ನ ಸುಟ್ಟ ಗೆಣಸು ಹಾಗೂ ಗಂಜಿ ಉಂಡು ಮಲಗಿದ್ದ ಮಣಿಯ ಮಕ್ಕಳಲ್ಲಿ ಒಬ್ಬನಿಗೆ ಜ್ವರ ಕಾಣಿಸಿಕೊಂಡಿತ್ತು. ಇನ್ನೊಬ್ಬನನ್ನು ತಕ್ಷಣ ದೂರ ಮಲಗಿಸಿದ ಮಣಿಯು, ಮನೆ ಕೆಲಸದ ಜೊತೆಜೊತೆಗೆ ಮಗನ ಮೇಲೆ ಕಣ್ಣಿಟ್ಟು ಗಂಡ ಬರುವುದನ್ನೇ ಕಾಯುತ್ತಿದ್ದಳು. ತೊಳೆದ ಪಾತ್ರೆಗಳನ್ನು ಹಚ್ಚಿ, ಒಣಗಿದ ಬಟ್ಟೆಗಳನ್ನು ಒಳತಂದರೂ ಗಂಡ ಬಂದಿರಲಿಲ್ಲ. ಸಂಜೆಗೆ ಮುದ್ದೆ ತಿರುವಲು ತಲೆ ಓಡದೆ ಮಗನನ್ನು ತೊಡೆಗೆ ಹಾಕಿಕೊಂಡು ಬಾಗಿಲಲ್ಲೇ ಕುಳಿತಿದ್ದಳು. ಕುರಿಗಳನ್ನು ಮೇಯಿಸಲು ಹೋಗಿದ್ದ ಎದುರು ಮನೆಯ ಶಾರದಳು, ಮಣಿ ಹಾಗೆ ಬಾಗಿಲಲ್ಲಿ ಕುಳಿತಿರುವುದನ್ನು ನೋಡಿ “ಕೆಲಸ ಆತ ಮಣಿ. ಹಿಂಗ ಬಾಗ್ಲಾಗಾ ಕುಂತಿದ್ದೇ ಇಲ್ಲ ನೀನು!” ಎನ್ನುತ್ತ ಬಿದಿರ ಬೇಲಿಯನ್ನು ಬಿಚ್ಚಿ ಕುರಿಗಳನ್ನು ಒಳಗೆ ಅಟ್ಟಿ ಮತ್ತೆ ಮೊದಲಿನಂತೆ ತಂತಿಯಿಂದ ಬೇಲಿಯ ಮೂಲೆಯನ್ನು ಕಟ್ಟಿ, ಕೈಕಾಲು ತೊಳೆಯಲು ತೊಟ್ಟಿಯತ್ತ ಹೊರಟಳು. ಯಾಕೋ ಮಣಿಯ ಮುಖದಲ್ಲಿ ಎಂದೂ ಕಾಣದ ಆತಂಕವೊಂದು ಮುಳ್ಳಿನ ಬೇಲಿಯಂತೆ ಕಚ್ಚಿಕೊಂಡಿರುವುದನ್ನು ಗಮನಿಸಿ ಸೆರಗಿನಿಂದ ಮುಖ ಒರೆಸುತ್ತಾ ಹತ್ತಿರ ಬಂದಳು. “ಯಾಕೆ ಯವ್ವ, ಹಿಂಗ್ ಖಬರಗೇಡಿಯಂಗ್ ಕುಂತಿ… ಏನಾತೆ?” ಎಂದು ಕಕ್ಕುಲಾತಿಯಿಂದ ಭುಜಕ್ಕೆ ಕೈಯಿಟ್ಟು ಕೇಳಿದಳಷ್ಟೇ, ಮಣಿಯ ಕಣ್ಣಿನಿಂದ ಕೊರಳ ಸರ ಹರಿದಂತೆ ಮಣಿಗಳು ಉದುರಲು ಶುರುವಾದವು. ತೀರಾ ಎಳೆಯ ವಯಸ್ಸಿನ ತಾಯಿಯಾದ ಆಕೆ ಜ್ವರ ಬಂದ ಮಗುವನ್ನು ತೋರಿಸುತ್ತಾ ತನ್ನ ಅಸಹಾಯಕತೆಯನ್ನು ವಿವರಿಸಿದಳು. ಶಾರದಳು ತಕ್ಷಣ ಒಂದರ್ಧ ಲೋಟದಷ್ಟು ಕುರಿಯ ಹಾಲು ಕರೆದು, ಕಾಯಿಸಿ, ಚಿಟಿಕೆ ಅರಿಸಿನ ಸೇರಿಸಿ ಮಗುವಿಗೆ ಕುಡಿಸಲು ಹೇಳಿದವಳೇ, ಮೇಲಿನ ಬೀದಿಯತ್ತ ನಡೆದು ನಾಟಿ ವೈದ್ಯ ಮಾಡುವ ಸಾವಂತ್ರಿಯನ್ನು ಕರೆತಂದಳು. ಮಗುವನ್ನು ಪರೀಕ್ಷಿಸಿದ ಸಾವಂತ್ರಿಯು ಆತಂಕ ಪಡುವಂತಹ ಯಾವುದೇ ಕಾರಣವಿಲ್ಲವೆಂದವಳು, ಎರಡು ದಿನಗಳಿಗೆ ಔಷಧಿ ಕಳಿಸುವುದಾಗಿ ಹೇಳಿ, ಪಥ್ಯ ತಿಳಿಸಿ, ಇನ್ನೊಬ್ಬ ಮಗನಿಗೂ ಎರಡು ಹೊತ್ತು ಹಾಕಲು ಕಷಾಯ ಕುದಿಸಿಕೊಟ್ಟು ಹೊರಟಳು. ಶಾರದಳು ಸಾವಂತ್ರಿಯ ಕೈಗೆ ಇಪ್ಪತ್ತರ ನೋಟೊಂದನ್ನು ಇಟ್ಟು ಎರಡು ದಿನ ಬಿಟ್ಟು ಮತ್ತೆ ಮಗುವನ್ನು ಕರೆದುಕೊಂಡು ಬರುವುದಾಗಿ ಹೇಳಿ ಬಿಳ್ಕೊಟ್ಟಳು. ಮಣಿಗೆ ಶಾರದಾಳ ಸಹಾಯದಿಂದ ಬಹಳ ಸಮಾಧಾನ ಸಿಕ್ಕಿತ್ತು. ತನ್ನಷ್ಟಕ್ಕೆ ತಾನು ಎಂಬಂತೆ ಇರುತ್ತಿದ್ದ ಮಣಿಗೆ ಆ ಕ್ಷಣದಲ್ಲೇ ಶಾರದಾ ಅತ್ಯಂತ ಹತ್ತಿರವಾಗಿದ್ದಳು. ಹತ್ತಾರು ಬಾರಿ ಧನ್ಯವಾದಗಳನ್ನು ಹೇಳಿದ್ದಳು. “ಅಕ್ಕಾಪಕ್ಕದೋರು ಅಲ್ವಾ ಮಣಿ, ಏ ಬಿಡೆ. ಕೂಸು ಕಣೇ. ಕಳ್ಳು ಚುರ್ ಅನ್ನಲ್ವಾ. ನನ್ ಹೊಟ್ಟಾö್ಯಗಂತೂ ಒಂದ್ ಹುಳ ಸಮ್ತಾ ಇಲ್ಲ. ಇವುö್ರನ್ನ ನೋಡಿ ಲವ-ಕುಶ ಅಂದ್ಕಂತಾ ಕುಸಿ ಪಡ್ತೀನಿ” ಎಂದು ತನ್ನ ಮನೆ ಸೇರಿದ್ದಳು ಶಾರದಾ. ಮಣಿಯ ಗಂಡ ಹೇಮನು ಅಂದು ಮನೆ ಸೇರಿದಾಗ ಅಮ್ಮ ಮಕ್ಕಳಾಗಲೇ ನಿದ್ದೆ ಹೋಗಿದ್ದರು.
ಮರುದಿನ ಬೆಳಗ್ಗೆ ಮಗನ ಜ್ವರದ ಪ್ರಕರಣವನ್ನು ಮಣಿಯು ಗಂಡನಿಗೆ ಹೇಳಿದಳು. ಸಾವಂತ್ರಕ್ಕ ಕೊಟ್ಟ ಔಷಧ ಹಾಕುತ್ತಿರುವುದಾಗಿಯೂ ಶಾರದನಿಗೆ ಔಷಧಿಯ ಬಾಬ್ತು ಕೊಡಬೇಕಾಗಿರುವ ಇಪ್ಪತ್ತು ರೂಪಾಯಿಗಳ ಬಗ್ಗೆಯೂ ತಿಳಿಸಿದಳು. ಶನಿವಾರದ ಬಟವಾಡೆಯ ದಿನವೇ ಹಣ ಬರುವ ಖಾತ್ರಿ ಇದ್ದ ಕಾರಣ ಹೇಮನು ಅಂದೇ ಹಣ ಹಿಂದಿರುಗಿಸಲು ಆಗುವುದೆಂದೂ, ಹಾಗೆಯೇ ಮಗನನ್ನು ಮತ್ತೊಮ್ಮೆ ಸಾವಂತ್ರಕ್ಕನಲ್ಲಿಯೇ ತೋರಿಸಿಬಿಡೆಂದು ಸಮಾಧಾನ ಹೇಳಿದನು. ಜ್ವರ ಬಂದ ಮಗನನ್ನು ಒಬ್ಬಳೇ ನೋಡಿಕೊಂಡು ಮನೆಗೆಲಸ ಮಾಡುತ್ತಾಳೆ ಎಂದು ಎದ್ದವನೇ ನೀರು ತುಂಬಿ ಇನ್ನೊಬ್ಬ ಮಗನಿಗೆ ಸ್ನಾನ ಹಾಕಿ, ಹೆಂಡತಿಗೂ ಸ್ನಾನ ಮಾಡಲು ಹೇಳಿ, ದೀಪ ಹಚ್ಚಿ, ಎಲ್ಲರ ಬಟ್ಟೆಗಳನ್ನು ಒಗೆದು ತಂದಿಟ್ಟು ಕೆಲಸಕ್ಕೆ ಹೊರಟನು. ಶಾರದಳ ಬಾಗಿಲ ಬಳಿ ಒಮ್ಮೆ ಇಣುಕಿ ನೋಡಿದನು. ಆದರೆ ಬೇಲಿಯಲ್ಲಿ ಕಟ್ಟಿದ್ದ ಕುರಿಗಳೆಲ್ಲವೂ ಖಾಲಿಯಾಗಿದ್ದವು. ಆಕೆ ಆಗಲೇ ಕುರಿಗಳನ್ನು ಅಟ್ಟಿಕೊಂಡು ಹೋಗಿಯಾಗಿತ್ತು.
* * *
ಹಳ್ಳದ ಆಚೆಯ ಬಯಲಿನ ಕಾಲುದಾರಿಯಲ್ಲಿ ಮುಂದೆ ಒಂದು ಕಿ.ಮೀ. ನಡೆದರೆ ಭರಮಪ್ಪ ದೇವರ ಗುಡಿ ಮತ್ತು ಚಾವಡಿ ಇದ್ದವು. ಅದು ಯಾವ ಕಾಲದ್ದೆಂದು ತಿಳಿಯದು. ಭರಮಪ್ಪ ದೇವರ ಒಂದು ಕಲ್ಲಿನ ಲಿಂಗವಿದ್ದು ಅದಕ್ಕೆ ಒಂದು ಹತ್ತು ಅಡಿಗಳಷ್ಟು ಚೌಕದ ಮೂರು ಕಲ್ಲಿನ ಹಾಸಿದ್ದ ಸೂರಿತ್ತು. ನಾಲ್ಕು ಕಂಬಗಳ, ಮೂರೂ ಕಡೆಯಿಂದಲೂ ತೆರೆದ ಗುಡಿಯ ಬೆನ್ನಿನ ಭಾಗಕ್ಕೆ ಲಿಂಗದ ಹಿಂದೆ ಜೋಡಿ ಬಿಲ್ವಪತ್ರೆಯ ಮರಗಳಿದ್ದವು. ಈ ಗುಡಿಗೆ ನಾಯಕರ ಜೋಗಪ್ಪ ಬಂದು ಸೇರಿಕೊಂಡಿದ್ದ. ಕುರಿ ರಾಮಣ್ಣನ ದೂರದ ಸಂಬಂಧಿಯಾಗಿದ್ದ ಜೋಗಪ್ಪನ ತಂದೆ, ಹೆಂಡತಿ, ಮಕ್ಕಳೆಲ್ಲರೂ ಕೊರೋನಾದ ನೆರೆಯಲ್ಲಿ ಕೊಚ್ಚಿಹೋಗಿದ್ದರು. ಅದು ಹೇಗೋ ಈತನೊಬ್ಬನೇ ಆಯಸ್ಸಿನ ಹುಲ್ಲುಕಡ್ಡಿ ಹಿಡಿದು ಬದುಕುಳಿದುಕೊಂಡಿದ್ದ. ಗುಡಿಯ ಪಕ್ಕದ ಜಮೀನು ರಾಮಣ್ಣನಿಗೆ ಸೇರಿದ್ದ ಕಾರಣ, ಆತ ಜೋಗಪ್ಪನಿಗೆ ಅಲ್ಲಿಯೇ ವಾಸ ಮಾಡಲು ಅನುಮತಿಸಿದ್ದ. ಜಮೀನಿನಲ್ಲಿ, ನಾಲ್ಕು ಗೋಡೆಗಳ ವಿಶಾಲವಾದ ಹೆಂಚಿನ ಸೂರಿದ್ದ ಮನೆಯಿತ್ತು. ಮನೆಯ ಒಳಗೆ ದೊಡ್ಡ ಮುಖ ಕೋಣೆ, ಅಡುಗೆ ಕೋಣೆ ಹಾಗೂ ಹಿಂದುಗಡೆ ದೊಡ್ಡ ನೀರಿನ ತೊಟ್ಟಿಯನ್ನು ಕಟ್ಟಿಸಿದ್ದ ಸ್ನಾನದ ಕೋಣೆಯಿತ್ತು. ಜಮೀನಿಗೆ ಹೋದಾಗ ತಂಗಲು ಆಗುವುದೆಂದು ಯೋಚಿಸಿ ಕಟ್ಟಿದ್ದ ಮನೆಯಲ್ಲಿ ಈಗ ಜೋಗಪ್ಪ ಬೀಡು ಬಿಟ್ಟಿದ್ದ. ಗುಡಿಯ ಹಿಂಭಾಗದ ಬಾವಿಯಿಂದ ನೀರು ಸೇದಿಕೊಂಡು ಜೋಗಪ್ಪನು ಅಲ್ಲೆಲ್ಲ ಬಿಲ್ವಪತ್ರೆ, ಬೇವು, ಬನ್ನಿ, ಔದುಂಬರ ಮರಗಳಲ್ಲದೆ ಕೆಲವು ಹಣ್ಣಿನ ಗಿಡಗಳನ್ನು ತಂದು ನೆಟ್ಟು ಬೆಳೆಸುತ್ತಿದ್ದ. ಮರಗಳನ್ನು ಬಳಸಿಕೊಂಡು ದೊಡ್ಡ ತಂತಿ ಬೇಲಿ ಬಿಗಿದ ರಾಮಣ್ಣ ಮಳೆಗಾಲದಲ್ಲಿ ತನ್ನ ಜಮೀನಿನಲ್ಲಿಯೇ ಕುರಿಗಳನ್ನು ಬಿಡುವ ವ್ಯವಸ್ಥೆ ಮಾಡಿಕೊಂಡಿದ್ದ. ಈ ಮನೆ ಹಾಗೂ ಮರಗಳ ತಾಣವು ಆತನಿಗೆ ಹಾಗೂ ಆತನ ಕುರಿಮಂದೆಗೆ ಬಹಳ ಉಪಯೋಗಕ್ಕೆ ಬರುತ್ತಿತ್ತು. ಸದಾ ಜೋಗಪ್ಪ ಅಲ್ಲಿರುತ್ತಾನೆಂಬ ಧೈರ್ಯದ ಮೇರೆಗೆ, ಸುತ್ತಮುತ್ತಲ ಹಳ್ಳಿಯ ಜನರು ಈಚೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗುಡಿಗೆ ಬರಲಾರಂಭಿಸಿದ್ದರು. ಮಾಸ್ತರಿಕೆ ಮಾಡುತ್ತಿದ್ದ ಜೋಗಪ್ಪನು ಗುಡಿಗೆ ಬರುವವರ ಜೊತೆ ಒಡನಾಡುತ್ತಾ, ಎರಡು ಒಳ್ಳೆಯ ಮಾತುಗಳನ್ನಾಡುತ್ತ್ತ ತನ್ನ ಒಂಟಿತನ ಮರೆಯುತ್ತಿದ್ದ. ಮಾಸ್ತರಿಕೆ ಬಿಟ್ಟಿದ್ದರೂ, ಸಾಮಾಜಿಕ ಕಳಕಳಿಯ ರೂಢಿಗತ ಸ್ವಭಾವವು ಆತನನ್ನು ಸಮಾಜದ ಒಳಿತಿನ ಚಿಂತನೆಯೆಡೆಗೆ ಸೆಳೆಯುತ್ತಿತ್ತು. ಪುಸ್ತಕಗಳ ನೆಂಟನಾದ ಆತನನ್ನು ಅಕ್ಕಪಕ್ಕದ ಜನರೆಲ್ಲರೂ ತಮ್ಮ ಮನೆಯ ಹಿರಿಯನೆಂಬಂತೆ ಗೌರವಿಸುತ್ತಿದ್ದರು. ಮದುವೆ, ಗ್ರಾಮದೇವತೆಯ ಜಾತ್ರೆ, ಹಬ್ಬಗಳು, ಹುಟ್ಟು-ಸಾವುಗಳಿಗೆ ಜೋಗಪ್ಪನ ಹಾಜರಿ ಬೇಕೇಬೇಕಿತ್ತು ಅವರಿಗೆ.
ಅದೊಂದು ಸಂಜೆ ಪಕ್ಕದೂರಿನ ಸಂತೆಯಿಂದ ವಾಪಸ್ಸು ಬಂದ ಜೋಗಪ್ಪನು ಕಾಲು ತೊಳೆಯಲು ಹಿತ್ತಲಿಗೆ ಹೋದವನು ಒಲೆಯುರಿಗೆಂದು ಜೋಡಿಸಿಟ್ಟಿದ್ದ ಪುಳ್ಳೆ, ಕಂಟಿ, ಸೌದೆ ರಾಶಿಯ ಹಿಂದೆ ನೆಲದ ಮೇಲೆ ಆಕೃತಿಯೊಂದು ಮಿಸುಕಾಡಿದ್ದನ್ನು ಗಮನಿಸಿದನು. ಪ್ರಾಣಿಯಲ್ಲವೆಂದು ಖಾತ್ರಿಯಾಗಿತ್ತು. ಕೈಯಲ್ಲಿ ಉದ್ದ ಕೋಲೊಂದನ್ನು ಹಿಡಿದು ನಿಧಾನವಾಗಿ ರಾಶಿಯ ಹಿಂಭಾಗಕ್ಕೆ ಚಲಿಸಿದಾಗ ಹೆಣ್ಣುಮಗಳೊಬ್ಬಳು ಚಳಿಗಾಲದಲ್ಲಿಯ ನಾಯಿಯಂತೆ ಕೈಕಾಲು ಮುದುರಿಕೊಂಡು ಮಲಗಿರುವುದು ಕಾಣಿಸಿತು. ನಿದ್ದೆಯಲ್ಲಿದ್ದಳೋ ಅಥವಾ ಅರೆಪ್ರಜ್ಞಾವಸ್ಥೆಯೋ, ಆಗಾಗ ಪ್ರತಿಭಟಿಸುವ ರೀತಿಯಲ್ಲಿ ಕೈಕಾಲು ಒದರಿ ಬೆಚ್ಚಿದಂತೆ ಹೊರಳುತ್ತಿದ್ದಳು. ಮಣ್ಣು ಮೆತ್ತಿಕೊಂಡು ಗಲೀಜಾಗಿದ್ದಳು. ತೊಟ್ಟ ಬಟ್ಟೆಗಳು ಅಸ್ತವ್ಯಸ್ತವಾಗಿ ಕುಬುಸದ ಎಡತೋಳು ಹರಿದು ಜೋತು ಬಿದ್ದಿತ್ತು. ಸೊಂಟದ ಕೆಳಗಿನ ಬಟ್ಟೆಯ ಭಾಗದ ರಕ್ತದ ಕಲೆಯು ಕರೆಗಟ್ಟಿತ್ತು. ಹದಿನೆಂಟು ವರ್ಷಗಳು ಸಂಸಾರ ಮಾಡಿದ್ದ ಜೋಗಪ್ಪನಿಗೆ ಇದೇನೆಂದು ತಕ್ಷಣವೇ ಅರ್ಥವಾಗಿತ್ತು. ಒಂದು ಕ್ಷಣ ಆತನ ಕೈಕಾಲು ತಣ್ಣಗಾಗಿ ಬೆನ್ನಲ್ಲಿ ಚಳ್ಳೆಂದು ನಡುಕ ಮೂಡಿತ್ತು. ಜಾಗೃತನಾಗಿ ಆಕೆಯ ಮುಖಕ್ಕೆ ಮೊದಲು ನೀರು ಸಿಂಪಡಿಸಿ ಎಚ್ಚರಿಸಲು ಪ್ರಯತ್ನಿಸಿದನಾದರೂ ಆಕೆ ಎಚ್ಚರವಾಗದೆ ಹೋದಾಗ, ದೊಡ್ಡ ದುಪ್ಪಟಿಯೊಂದನ್ನು ಹೊದಿಸಿ, ಪಕ್ಕದಲ್ಲಿ ನೀರಿನ ಚೊಂಬಿಟ್ಟು, ಹಳ್ಳ ದಾಟಿ ಸರಸರನೆ ರಾಮಣ್ಣನ ಮನೆಯತ್ತ ಹೊರಟ. ಗಂಗಮ್ಮ ವಿಷಯ ತಿಳಿದು ಅಧೀರಳಾಗಿದ್ದಳು. ರಾಮಣ್ಣ ಕಾಂಟ್ರಾಕ್ಟಿನ ಕೆಲಸದ ಮೇಲೆ ದೂರದಲ್ಲಿದ್ದ. ಗಂಗಮ್ಮ ಹಾಗೂ ಜೋಗಪ್ಪ ಸಾವಂತ್ರಮ್ಮನ ಮನೆಯತ್ತ ಹೋಗಿ ಸ್ಥಿತಿಯ ತೀವ್ರತೆಯನ್ನು ತಿಳಿಸಿ, ತಾವು ಮುಂದೆ ನಡೆದು ಹೋಗುವುದಾಗಿಯೂ ಹಾಗೂ ಕೊಂಚ ಸಮಯದ ಅನಂತರ ಯಾರಿಗೂ ಅನುಮಾನ ಬರದಂತೆ ಆಕೆ ಗುಡಿಯತ್ತ ಬರಬೇಕೆಂದು ಹೇಳಿ ಜಾಗ ಖಾಲಿ ಮಾಡಿದ್ದರು. “ಹೆಣ್ಮಗಳು ಜೀವಂತ ಅದಾಳಲ್ವ ಜೋಗಣ್ಣ?” ಎಂದು ಸಾವಂತ್ರಿ ಎರಡೆರಡು ಬಾರಿ ಕೇಳಿ ದೃಢಪಡಿಸಿಕೊಂಡಳು. ಸಾವಂತ್ರಿಯ ವೈದ್ಯಕ್ಕೆ, ಎಳ್ಳಷ್ಟೂ ಕೈಹತ್ತದ ಸ್ಥಿತಿ ಆ ಹೆಣ್ಣುಮಗಳದ್ದಾಗಿತ್ತು.
ಇವರೇ ಮೂವರು ಸೇರಿ ತಾಲೂಕು ಆಸ್ಪತ್ರೆಗೆ ಆಕೆಯನ್ನು ಸಾಗಿಸಿದ್ದರು. ತೊಡೆ ಸಂದಿಯ ಸೂಕ್ಷ್ಮ ಜಾಗದಲ್ಲಿ ಬೆಳಕು ಬಿಡುವ ಬ್ಯಾಟರಿಯನ್ನು ಗೂಟದಂತೆ ಬಡಿದು ಅದ್ಯಾವ ಮನುಷ್ಯರ ಹೆಸರಿನ ಪಿಶಾಚಿಗಳು ಸಾಯಲು ಬಿಟ್ಟಿದ್ದರೋ ಏನೋ, ಅಂತಹ ದಾರುಣ ಸ್ಥಿತಿಯಲ್ಲಿದ್ದವಳನ್ನು ತಿಂಗಳೊಪ್ಪತ್ತು ಅಡ್ಮಿಟ್ ಮಾಡಿ ಚಿಕಿತ್ಸೆ ಮಾಡಿಸಿದ್ದರು. ತಾಯಿ ಚೀಲ ತೆಗೆದು ಹಾಕಿದ ಅನಂತರ ನರಕ ಮುಗಿಸಿ ಬದುಕಿದ ಆ ಹೆಣ್ಣುಮಗಳು ಗಂಗಮ್ಮನ ಮನೆಯನ್ನೇ ಆಶ್ರಯಿಸಿದ್ದಳು. ದಿನಗಳೆದಂತೆ ಗಂಗಮ್ಮ ಹಾಗೂ ಜೋಗಪ್ಪನ ಧೈರ್ಯದ ಮಾತು, ಆರೈಕೆ, ಜೊತೆಗೆ ಸಾವಂತ್ರಮ್ಮನ ಕೈ ಔಷಧÀ ಕೆಲಸ ಮಾಡಿದ್ದವು. ಮರುಜನ್ಮ ಪಡೆದ ಆ ಹೆಣ್ಣುಮಗಳೇ ಶಾರದ.
ಶಾರದಳನ್ನು ಆಕೆಯ ಪ್ರೇಮಿಯು ಮದುವೆಯಾಗುವುದಾಗಿ ನಂಬಿಸಿ ಎರಡು ತಿಂಗಳು ಅನುಭವಿಸಿ ಆಸೆ ತೀರಿದ ಅನಂತರ ತನ್ನ ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಬಸ್ ಹತ್ತಿಸಿದ್ದ. ಆದರೆ ದಾರಿಯ ಮಧ್ಯದಲ್ಲೇ ಕಳ್ಳನಂತೆ ಬಸ್ಸಿನಿಂದಿಳಿದು ಈಕೆಯನ್ನು ಒಂಟಿಯಾಗಿ ಬಿಟ್ಟು ಪರಾರಿಯಾಗಿದ್ದ. ತಾಯಿಯ ಮನೆಯವರು ಮತ್ತೊಮ್ಮೆ ಅತ್ತ ತಲೆಹಾಕಲು ಹೆದರಿಕೆ ಹುಟ್ಟುವಂತೆ ಕರುಳು ಕತ್ತರಿಸಿ, ಬಾಯಿ ಒಣಗುವವರೆಗೂ ಬೈದು ಹೊರಗಟ್ಟಿದ್ದರು. ದಿಕ್ಕುಗಾಣದೆ ಕುಳಿತವಳನ್ನು ಜೀಪಿನಿಂದ ಇಳಿದ, ಸಭ್ಯನಂತೆ ತೋರುತ್ತಿದ್ದ ವ್ಯಕ್ತಿಯೊಬ್ಬ ಎಲ್ಲಾದರೂ ಕೂಲಿಗೆ ಹಚ್ಚುವುದಾಗಿ ಭರವಸೆಯ ಮಾತುಗಳನ್ನಾಡಿ ಕರೆದುಕೊಂಡು ಹೋಗಿ ಗುಡಿಸಿಲೊಂದರಲ್ಲಿ ಕಟ್ಟಿಹಾಕಿದ್ದ. ತನ್ನ ಗೆಳೆಯರೊಡನೆ ಸೇರಿಕೊಂಡು ಮನಸೋ ಇಚ್ಛೆ ಅತ್ಯಾಚಾರವೆಸಗಿ, ನೀಚತನಕ್ಕೆ ಕಳಸವಿಟ್ಟಂತೆ ಮತ್ತೂ ಮೃಗೀಯವಾಗಿ ಹಲ್ಲೆ ಮಾಡಿ, ಕಣ್ಣು, ಕೈಕಾಲು ಕಟ್ಟಿ ಅದೆಷ್ಟೋ ಗಂಟೆಗಳು ಪ್ರಯಾಣಿಸಿ ಭರಮಪ್ಪ ದೇವರ ಚಾವಡಿಯ ಒಂದರ್ಧ ಕಿಲೋಮೀಟರು ದೂರದ ಕಂಟಿಗಳ ಮಧ್ಯೆ ಎಸೆದು ಹೊರಟು ಹೋಗಿದ್ದ. ಒಟ್ಟಿನಲ್ಲಿ ಆಕೆ ಸಾವನ್ನು ಸೇರಿಕೊಳ್ಳಲೇಬೇಕು ಅನ್ನೋ ಹಾಗೆ. ಎರಡು ದಿನಗಳಿಂದಲೂ ಹೊಟ್ಟೆಗೆ ಅನ್ನವಿಲ್ಲದ ಶಾರದಳನ್ನು ಆ ದುರುಳರು ಹರಿದು ಹರಿದು ಮುಕ್ಕಿಮುಕ್ಕಿ ತಿಂದಿದ್ದರು, ಹಿಂಸಿಸಿದ್ದರು. ಎಷ್ಟೋ ಹೊತ್ತು ಪ್ರಜ್ಞೆಯಿಲ್ಲದೆ ಬಿದ್ದಿದ್ದವಳಿಗೆ ಎಚ್ಚರವಾದಾಗ ಗುಡಿಯ ಗಂಟೆಯ ಸದ್ದು ಕೇಳಿತ್ತು. ಅದನ್ನು ಅನುಸರಿಸಿ ಅದೆಷ್ಟು ಹೊತ್ತು ತೆವಳುತ್ತಾ ಬಂದಳೋ… ಇಲ್ಲಿ ಬಂದು ಬಿದ್ದಿದ್ದಳು. ಪೊಲೀಸು, ವೈದ್ಯರು, ದಾದಿ, ಜೋಗಪ್ಪ, ಗಂಗಮ್ಮ, ಸಾವಂತ್ರಕ್ಕ ಯಾರೆಲ್ಲ ಎಷ್ಟೆಷ್ಟು ರೀತಿಯಲ್ಲಿ ಕೇಳಿದರೂ ಯಾವ ನೀಚನ ಬಗ್ಗೆಯೂ ಆಕೆ ಬಾಯಿ ಬಿಡಲೇ ಇಲ್ಲ. ಅಳಿಸಿ ಹಾಕಿದ ಚಿತ್ರದಂತೆ ಖಾಲಿಯಾಗಿದ್ದಳು. ಗಂಗಮ್ಮನಿಗೆ ಮನೆಯ ಕೆಲಸಗಳಿಗೆಲ್ಲ ಸಹಾಯ ಮಾಡುತ್ತ್ತ ಆಸರೆ ಕಂಡುಕೊಂಡ ಶಾರದಳು, ಅನಂತರದಲ್ಲಿ ಕುರಿಗಳನ್ನು ಮೇಯಿಸಿ ದುಡಿಯುವುದನ್ನು ಕರಗತ ಮಾಡಿಕೊಂಡಿದ್ದಳು. ಜೊತೆಯಲ್ಲೇ ತನ್ನ ಸಣ್ಣ ಕುರಿಮಂದೆಯೊಂದನ್ನು ಬೆಳೆಸಿದ್ದಳು. ಕಲಿಸಲು ರಾಮಣ್ಣನೇ ನಿಂತಿದ್ದ ಎಂದ ಮೇಲೆ ಇನ್ನೇನು. ಗಂಗಮ್ಮನ ಆಸರೆಯಿಂದಲೇ ತನ್ನದೆಂದು ಒಂದು ಗೂಡು ಮಾಡಿಕೊಂಡಿದ್ದಳು. ಹರಿದ ಪುಸ್ತಕವಾಗಿದ್ದಾಕೆ ಆರ್ಥಿಕವಾಗಿ ಸುಧಾರಿಸಿಕೊಂಡು ಲೇಖನಿಯಾಗಿದ್ದಳು. ಗಟ್ಟಿಯಾಗಿದ್ದಳು. ಸದಾ ಕುರುಪಿಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಕಾಳಿಯಂತೆ ಒಬ್ಬಳೇ ಧೈರ್ಯದಿಂದ ಓಡಾಡುತ್ತಿದ್ದಳು. ರಾಮಣ್ಣ-ಗಂಗಮ್ಮ ಎಷ್ಟು ಬಾರಿ ತಿಳಿಹೇಳಿದರೂ ಮತ್ತೆ ಆಕೆ ಪ್ರೀತಿಗೆ ಹೊರಳಲಿಲ್ಲ. ಮದುವೆಯಂತೂ ದೂರದ ಮಾತು ಬಿಡಿ. “ನಾಕ್ ಜನ್ಮಕ್ಕಾಗೋಷ್ಟು ಸವ್ದಿದೀನಿ ಅಣ್ಣಯ್ಯ. ಯಾಕ ಭಾಳ ಹೇಸ್ಗೆ ಬಂದೈತಿ. ಒಲ್ಲೆ ಬಿಡಪಾ ನಿನ್ನ ದಮ್ಮಯ್ಯ” ಎಂದು ಸೆರಗನ್ನು ಕಣ್ಣಿಗೆ ಹಚ್ಚಿ ಅದೊಂದು ಕ್ಷಣ ಭಾವುಕಳಾಗುತ್ತಿದ್ದಳು ಅಷ್ಟೇ. ಮತ್ತೆ ಮಾಮೂಲಿನಂತೆ ಎದ್ದು ಹೊರಟಾಗಿರುತ್ತಿತ್ತು.
ಮಕ್ಕಳ ದೆಸೆಯಿಂದಾಗಿ ಶಾರದಾ ಹಾಗೂ ಮಣಿ ಈಗ ಗೆಳತಿಯರಾಗಿದ್ದರು. ಮಣಿಯ ಹಣಕಾಸಿನ ಅಡಚಣೆಯನ್ನು ಅರಿತ ಶಾರದ ಆಕೆಗೆ, ಕುರಿ ರಾಮಣ್ಣನ ಹತ್ತಿರ ಕುರಿ ಮೇಯಿಸಲು ಗುತ್ತಿಗೆ ಹಿಡಿಯುವುದು ಒಳ್ಳೆಯದೆಂದು ಕಿವಿಮಾತು ಹೇಳಿದ್ದಳು. ದುಡಿಯಲು ಹೊಸ ದಾರಿಯೊಂದು ಇರುವುದೆಂಬ ಬಗ್ಗೆ ಖಾತ್ರಿ ನೀಡಿದ್ದಳು ಹಾಗೂ ಕುರಿ ಮೇಯಿಸಲು ಜೊತೆಯಾಗಿ ತಾನೇ ಇರುತ್ತೇನಲ್ಲ ಎಂದು ಧೈರ್ಯ ತುಂಬಿದ್ದಳು. ಭರಮಪ್ಪನ ಗುಡಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾಗೂ ಹಳ್ಳದಗುಂಟ ಉದ್ದಕ್ಕೂ ಕುರಿಗಳನ್ನು ಮೇಯಿಸುತ್ತಿದ್ದರಿಂದ ಅಲ್ಲಿ ಯಾವ ಭಯವೂ ಇರಲಿಲ್ಲ. ಮಳೆಗಾಲದಲ್ಲಿ ಮತ್ತು ಅನಾನುಕೂಲದ ದಿನಗಳಲ್ಲಿ ಸೊಪ್ಪು, ಹುಲ್ಲು ಹಾಕಿ ಮನೆಯ ಹತ್ತಿರವೇ ಮೇಯಿಸಿಕೊಂಡರೆ ನಡೆದು ಹೋಗುತ್ತಿತ್ತು. ಆದರೆ ಮೂರು ವರ್ಷದ ಎರಡು ಮಕ್ಕಳನ್ನು ಬಿಡುವುದೆಲ್ಲಿ ಎಂಬುದೇ ಹೇಮಪ್ಪನ ಚಿಂತೆಯಾಗಿತ್ತು. ಬೀಳುವ ಸೂರಿಗೆ ಸಿಡಿಲು ಬಡಿದದ್ದು ಮಣಿಯ ಅಪ್ಪ ಬಂದಾಗ. ಹೊಸ ಹೆಂಡತಿಗೆಂದು ಕೆನೆದು ಕುದುರೆಯಾಗಿದ್ದ ಆಕೆಯ ಅಪ್ಪನು ಇದ್ದಬದ್ದ ಹಿತ್ತಾಳೆ ಪಾತ್ರೆ, ಹಾಲು ಕರೆಯುವ ಜೋಡಿ ಹಸುಗಳು, ಹಣವನ್ನು ಆಕೆ ದೋಚಿ ಪರಾರಿಯಾದಾಗ ಕುಂಟು ಕತ್ತೆಯಾಗಿದ್ದ. ಊರು ಮನೆಯಲ್ಲಿ ಮತ್ತೆ ತಲೆಯೆತ್ತಲಾಗದ ಸ್ಥಿತಿಯಾಗಿತ್ತು ಅವನದು. ರಾತ್ರೋ ರಾತ್ರಿ ಓಡಿ ಬಂದವನು ನಾಚಿಕೆ ಬಿಟ್ಟು ಮಗಳು-ಅಳಿಯನಿಗೆ ಶರಣಾಗಿದ್ದ.
ಹೊರೆಗಳಿಂದ ಕುಸಿದ ಹೇಮ ಹಾಗೂ ಮಣಿಯು ರಾಮಣ್ಣನಲ್ಲಿಯೇ ಒಮ್ಮೆ ಮಾತನಾಡಿಬಿಡುವ ಎಂದು ಹೊರಟರು. ತಮ್ಮ ಹಣಕಾಸಿನ ತೊಂದರೆ ಹೇಳಿಕೊಂಡು, ದುಡಿಯಲು ಮನಸ್ಸಿದ್ದರೂ ದಾರಿ ಕಾಣದ ಅವಸ್ಥೆಯನ್ನು ವಿವರಿಸಿದ್ದರು. ರಾಮಣ್ಣನಿಗೆ ಶಾರದಳು ಮೊದಲೇ ಇವರಿಬ್ಬರ ವಿಷಯವನ್ನು ತಿಳಿಸಿದ್ದಳು. ಇವರ ಬರುವಿಕೆಯನ್ನು ರಾಮಣ್ಣನು ಅಂದಿನಿಂದಲೇ ಎದುರು ನೋಡುತ್ತಿದ್ದನು. ಎಲ್ಲವನ್ನು ಸಮಾಧಾನದಿಂದ ಕೇಳಿಸಿಕೊಂಡ ರಾಮಣ್ಣನು ಎರಡು ಕುರಿ ಮರಿಗಳೊಡನೆ ಕೆಲಸ ಆರಂಭಿಸಲು ಸಲಹೆ ನೀಡಿದ್ದ. ಕುರಿಯೊಂದಕ್ಕೆ ಐದೂವರೆ ಸಾವಿರ ನೀಡುವುದಾಗಿ ಹೇಳಿ, ಮಕ್ಕಳ ಓದಿನ ಬಗ್ಗೆಯೂ ಜೋಗಪ್ಪನೊಡನೆ ಚರ್ಚಿಸಿ ಮುಂಬರುವ ದಿನಗಳಲ್ಲಿ ಏನಾದರೂ ಒಂದು ದಾರಿಯನ್ನು ತೋರಿಸುವುದಾಗಿ ಅಭಯ ನೀಡಿದ್ದ. “ಧೈರ್ಯಾನೆ ದೊಡ್ದು ಹೇಮಪ್ಪ. ಎಲ್ಲ ಸೇರಿ ದುಡ್ಕಂಡು ಸಂದಾಕಿರಣ. ನಾನಂತೂ ಯಾರ್ಗೂ, ನನ್ತಾವ ಕೆಲಸ ಇಲ್ಲ ಅನ್ನೋ ಕುಳ ಅಲ್ಲ. ಏನ್ ತಗಂಡು ಹೋಗಾದೈತಿ? ಯಾರಿಗಾನಾ ಕೇಳು; ನನ್ನ ತಾವ ದುಡಿಯೋರಿಗೆ ಮೋಸ ಇಲ್ವೇ ಇಲ್ಲ. ಕೂಲಿಗೆ ಏನಾರ ಒಂದ್ ಉಪಾಯ ಇಡ್ತೀನಿ. ನಮ್ ಶಾರದವ್ವ ನೋಡು ತಯಾರಾಗೇ ಬಿಟ್ಲು. ಆ ಸಾತ ಸಲ್ಪ ದಾರೀಗೆ ಬಂದವ್ನೆ. ಆದ್ರೆ ಅವ್ನ ಹೆಂಡ್ರು ಮಾತ್ರ ತಿದ್ದಕ್ಕಾಗ್ಲಿಲ್ಲ. ನೀವು ಹಂಗಲ್ಲ ಬಿಡು. ದುಡೀಬೇಕು ಅಂತೀರಿ. ದಾರಿ ನಿಮ್ಗೆ ಸಿಕ್ಕೆöÊತೆ. ಹೇಮಪ್ಪಾ ನೀನ್ ಮನಸ್ ಮಾಡು. ನಿನ್ ಮಾವನ್ನೂ ದುಡಿಯಕ್ಹಚ್ಚು. ಮಕ್ಕಳುದ್ದೂ ಒಂದು ಯವಸ್ತೆ ಮಾಡಾಣಾ. ರೊಕ್ಕ ಗಿಕ್ಕ ಬೇಕಿದ್ರೆ ಗಂಗಮ್ಮಂತವ ಕೇಳಿ ಇಸ್ಕಳ್ಳಿ. ಅಕಿ ಎಲ್ಲಾ ಲೆಕ್ಕ ಇಡ್ತಾಳೆ” ಎಂದು ಕಂಬಳಿ ಹೊದ್ದು ಬೈಕ್ ಏರಿ ತನ್ನ ಕೆಲಸಕ್ಕೆ ಹೊರಟ.
ರಾಮಣ್ಣನಂತಹ ಒಬ್ಬ ಹಿರಿಯನ ಉದಾರ ಮನಸ್ಸಿನ ದೂರದೃಷ್ಟಿಯು ಅದೆಷ್ಟೋ ಬದುಕುಗಳನ್ನು ಹಸನಾಗಿಸಿತ್ತು. ಇಲ್ಲಿ ಮಣಿ, ಹೇಮ, ಶಾರದಾ, ಸಾತ ಮತ್ತು ಜೋಗಪ್ಪ ಮಾತ್ರ ಮುನ್ನೆಲೆಯಲ್ಲಿ ಕಂಡಿದ್ದಾರೆ. ಬಾಕಿಯವರದ್ದೂ ಇಂತಹುದೇ ಅಥವಾ ಸೇರಿನ ಮೇಲೆ ಒಂದು ಪಾವು ಹೆಚ್ಚೇ ಅನ್ನುವಂತಹ ನೋವಿನ ಕತೆಗಳಿವೆ. ಆದರೆ ಬದುಕಿನ ಉದಾರತೆಯ ಬಗ್ಗೆ ವಿಶ್ವಾಸ ಮೂಡುವುದು ಇಂತಹ ಜೀವಗಳು ನೆಲೆಯನ್ನು ಕಂಡುಕೊಂಡಾಗ. ಹತಾಶ ಮನಗಳ ಕತ್ತಲಿಗೆ ಭರವಸೆಯ ಮಂಥವೊಂದು ಮೂಡಿದಾಗ.
ಈಗ ಮಣಿ ಹಾಗೂ ಶಾರದಾ ಕುರಿ ಮೇಯಿಸುವ ಕಾಯಕದಲ್ಲಿ ಜೊತೆಯಾಗಿದ್ದಾರೆ. ಜಮೀಲಪ್ಪನ ಹತ್ತಿರ ಮಣಿಯು ಉದ್ದನೆಯ ದಪ್ಪ ಬಟ್ಟೆಯ ಚಡ್ಡಿ ಹೊಲಿಸಿಕೊಂಡಿದ್ದಾಳೆ. ಅದರ ಮೇಲೆ ಸೀರೆಯುಟ್ಟು ಭದ್ರವಾಗಿ ಕಚ್ಚೆ ಹಾಕಿಕೊಂಡು, ಹಳ್ಳ ದಾಟಿ ಕುರಿ ಮೇಯಿಸಲು ಹೊರಡುತ್ತಾಳೆ. “ಕುರುಪಿಯನ್ನ ಯಾಕ್ ತರ್ತಿ ಶಾರದ?” ಎಂದು ಮಣಿ ಕೇಳಿದರೆ, ಶಾರದಳ ಉತ್ತರ “ನನ್ನನ್ನ ಅವಾಗ ಸಾಯ್ಸುದ್ರಲ್ಲ ಆ ಮಿಂಡ್ರಿಗ್ಹುಟ್ದೋರು ಸಿಕ್ರೆ ನರ ಸೀಳಕ್ಕೆ” ಎಂದು ಹಲ್ಲು ಕಚ್ಚುತ್ತಾಳೆ. “ಅಕ್ಕೋ, ಅಂಥ ಒಂದ್ ಕುರುಪಿ ನಂಗೂ ಬೇಕೇಳು. ಕುರಿಗೆ ಸಪ್ಪು ಸವ್ರಕ್ಕೆ ಕಣಕ್ಕೋ. ನಾವು ಕುರಿಮರೀನ ಮೇಯ್ಸೋರು. ಅವುನ್ನ ಬೆಳ್ಸಿ ದೊಡ್ದು ಮಾಡೋರು. ಸಾಕಾದೇ ನಮ್ ಕೆಲ್ಸಾ. ಸಾಯ್ಸಾದು ನಮ್ಗಲ್ಲ ಬಿಡು. ಬಿಡ್ತು ಅನ್ನು. ಅದನ್ನೇ ಸಂದಾಕ್ ಮಾಡಾಣ” ಎಂದು ಆಕೆಯ ಮನಸ್ಸನ್ನು ತಿಳಿಯಾಗಿಸುತ್ತಾಳೆ. “ಲೇ ಸುಂದ್ರಿ, ಆ ಮಿಲ್ಲಿನ ಕಂಪೌಂಡ್ ತಾವ ಯಾವನೋ ಆಟೋ ಹತ್ತು ಅಂದಾ ಅಂತಿದ್ದೆ! ಕುರ್ಪಿ ಇಟ್ಕಾ. ನಾವು ಒಳ್ಳೆವ್ರೇಯಾ. ಹಣೆಬರಾ ಒಳ್ಳೇದು ಇರ್ಬೇಕು ಅಷ್ಟೇಯಾ. ಇಬ್ರೂ ಬರ್ರಾಗಿ ಇರಾಣ. ಕುರಿ ಏನ್ ಬಿಡು ಬೆಳೀತಾವೆ. ನಮ್ ಲವ ಕುಶ ಹೌದನ್ನಂಗೆ ಬೆಳೀಬೇಕಮ್ಮಿ” ಎಂದು ಶಾರದಾ ವಸ್ತುಸ್ಥಿತಿಯನ್ನು ಮುಖಕ್ಕೆ ಹಿಡಿಯುತ್ತಾಳೆ. ಈ ಸಾವು ಗೆದ್ದವಳ ಧೈರ್ಯ ಅವಳ ಮನೆಯ ಬಡತನದ ಕತ್ತಲು ನೀಗುತ್ತಿದೆ. ಆ ಮಕ್ಕಳ ತಾಯಿಯ ನಂಬಿಕೆ ಇವಳ ಬದುಕಿನ ಗಾಯಗಳಿಗೆ ಮುಲಾಮು ನೀವುತ್ತದೆ.
***




