ಮರವೊಂದರಲಿ ಕುಳಿತ| ಎರಡು ಹಕ್ಕಿಗಳಿಹವು
ಗುಣ ಭಾವ ಬಣ್ಣದಲಿ| ಸಲೆ ಹೋಲುತಿಹವು ||೧||
ಫಲವೊಂದ ತಿನ್ನುತಿದೆ| ಮೊದಲನೆಯ ಹಕ್ಕಿ
ಕುಳಿತು ನೋಡುತಲಿಹುದು| ಎರಡನೆಯ ಹಕ್ಕಿ ||೨||
`ತಿನುವ ಬಾ’ ಎನ್ನುತಿದೆ| ಮೊದಲನೆಯ ಹಕ್ಕಿ|
`ನಿನಗಿರಲಿ, ನಾನೊಲ್ಲೆ’| ಎನಲು ಜೊತೆವಕ್ಕಿ ||೩||
ತಿನುವಾಸೆ ಬಿಡದಿಹುದು| ಮೊದಲನೆಯ ಹಕ್ಕಿ|
ತಿನಲಾರೆನೆನ್ನುತಿದೆ| ಎರಡನೆಯ ಹಕ್ಕಿ ||೪||
ಸಾಕೆನದೆ ತಿನ್ನುತಿದೆ| ಮೊದಲನೆಯ ಹಕ್ಕಿ
ಸಾಕ್ಷಿ ತಾನಾಗಿಹುದು| ಎರಡನೆಯ ಹಕ್ಕಿ ||೫||
ಸುಖದುಃಖ ಸಂಗಾತಿ| ಮೊದಲನೆಯ ಹಕ್ಕಿ|
ಅಕಳಂಕ ಸಂನ್ಯಾಸಿ| ಎರಡನೆಯ ಹಕ್ಕಿ ||೬||
ವಾಸನೆಯ ಬಲೆಯೊಳಗೆ| ಮೊದಲನೆಯ ಹಕ್ಕಿ|
`ಕ್ಲೇಶ ನೋಡೆನ್ನುತಿದೆ| ಎರಡನೆಯ ಹಕ್ಕಿ ||೭||
`ಬದ್ಧ ಜೀವಾತ್ಮ’ನಿಹ| ಮೊದಲನೆಯ ಹಕ್ಕಿ|
`ಶುದ್ಧ ಪರಮಾತ್ಮ’ನಾ| ಎರಡನೆಯ ಹಕ್ಕಿ ||೮||
Comments are closed.