ನೋವು-ನಲಿವಿನ ಪುಟಗಳು
ಅವಳವಳೆಂದು
ನರಳುತಿರಬೇಡ
ಕನಸಿಗವಳಿರೆ ಮಾತ್ರ ಭಾವ ಬಂದಿಳಿವುದೇ?
ಮನಸಿನೊಳಗಿಣುಕು,
ಸಪ್ತ ಲೋಕಕೂ ಮೀರಿ
ಸಾಹಿತ್ಯ ಸಂಗ್ರಹವಿದೆ
ಭಾವ ಖಂಡೋಲವಿದೆ
ಹುಟ್ಟು-ಸಾವಿನ ನಡುವ
ದಶಬಲದ ದಾಗೀನು,
ಮಿಡಿವ ಹೃದಯದಲಿದೆ
ಧರ್ಮ ಕರ್ಮದಲಿದೆ
ನೆಲ-ಮುಗಿಲ ಆಲಯವು
ಅಗಣಿತಗುಣದಂಬುಧಿಯ
ಅಲವಲಿಕೆಯಂಗಳಕೆ
ಸುರುವಿ ಸೆಳವಿಕ್ಕಿದೆ
ರವಿಯ ರಂಗಿನ ಬಾನು
ದಿನಕೆರಡು ಕ್ಷಣಮಾತ್ರ….
ಅಂಶುಧರ ಹೊಳಪಿನಲಿ,
ಕಣಕಣದ ಸ್ಪಂದನವಿದೆ
ಶರಧಿಯಾಳದೊಳಿಳಿದು
ಆಳವರಿಯದ ಅವಕೆ,
ಕೆರೆಯೊಡಲಿನಂಬಲಿಗೆ
ಹಸಿವು ನೀಗುವುದೇ?
ಸಂಗೀತ ಸುಧೆಯೊಳಗೆ
ಒಂದೊಂದು ಸ್ವರವಿಲ್ಲ
ಶ್ರುತಿ ಲಯ ಸಮರಸದ
ನವರಸ ಸಾರಥ್ಯವಿದೆ
ಅಕ್ಷೀಣ ಕ್ಷಾರಿಕೆಯು
ಭಾವಾಂಬುಧಿಯ ತನುವು
ಸ್ಪಂದಿಸುತ ಸ್ಫುರಿಸುವುದು
ಮನುಜ ಸ್ಮೃತಿಯೊಳಗೆ
ನೋವು ನಲಿವಿನ ಪುಟದಿ,
ಬದುಕು ಬರೆವುದು ಬಿಳಿಯ
ಹಾಳೆಗಳ ತುಂಬುವುದು
ಕಳೆದ ಘಳಿಗೆಯಲಿ!
— ಅರುಣಾ ಭಾಗವತ
ಸ್ವಾರ್ಥ ಪ್ರೀತಿ ಒಲ್ಲೆನು
ಮರದ ಮೇಲೆ ಕುಳಿತ ಗಿಳಿಯೆ
ಬಾರ ನನ್ನ ಗೂಡಿಗೆ |
ಆಯ್ದ ಸವಿಯ ಫಲವ ಕೊಡುವೆ
ನಾಗರೀಕ ನಾಡಿಗೆ ||೧||
ರುಚಿಗೆ ದಾಸನಾಗಲೇಕೆ
ನಮಗಿಟ್ಟುದನ್ನು ತಿನುವೆನು |
ಬಯಲ ಮರದ ಗೂಡು ಸಾಕು
ಚಳಿಗೆ ಮಳೆಗೆ ಹೆದರೆನು ||೨||
ಹೊಂಚುತಿರುವ ಗಿಡುಗ ಹದ್ದು
ತೆತ್ತಲೇಕೆ ಪ್ರಾಣವ |
ಅಚ್ಚೆಮಾತು ಕಲಿಸಿಕೊಡುವೆ
ಮೆಚ್ಚುವಂತೆ ಎಲ್ಲರೂ ||೩||
ಕನಕ ಬೇಡಿಯೊಳಗೆ ಒಡಲ
ಹೊರೆವ ದಾಸ್ಯವೊಲ್ಲೆನು |
ದಾತನಿತ್ತ ಮಾತೆ ಸಾಕು
ಸ್ವಾರ್ಥ ಪ್ರೀತಿಯೊಲ್ಲೆನು ||೪||
ನಕ್ಕು ಹಗುರಾಗು
ಚಿಕ್ಕದಿಹುದೀ ಬಾಳು ನಕ್ಕು ಹಗುರಾಗು
ದುಃಖಿಸುತಲೇ ನೂಕಿಬಿಡಲು ಮತ್ತೆ ಮರಳುವುದೇ
ಗಗನ ಚುಂಬಿಯನೊತ್ತಿ ಮುರುಕು ಜೋಪಡಿ ಇಹವು
ಹಿಮ ಕವಚ ಗರ್ಭದಲಿ ಕುದಿವ ಜಲವು
ಮರಳುಗಾಡಲಿ ಚಿಲುಮೆ ಗಿರಿಯ ಕೆಳಗೆ ಪ್ರಪಾತ
ಜ್ಯೋತಿಯಡಿಯಲಿ ತಮವು ಮುಳ್ಳಿನೆಡೆ ಸುಮವು
ವಿಷವುಳಿಸೆ ಪ್ರಾಣವನು ಮಧು ತೆಗೆದು ಜೀವವನು
ವೈಪರೀತ್ಯದ ಬದುಕು ಹೆಣೆದುಕೊಂಡಿಹವು
ಧಗಧಗನೆ ದಿನಕರನ ಕುದಿವ ಕಿರಣವ ಪಡೆದು
ತೆಗೆದು ಬೆಂಕಿಯ ತಣಿಸಿ ಮುದವೀವ ಚಂದ್ರನೊಲು
—- ರತ್ನಾ ಮೂರ್ತಿ