ನದಿಯ ಆಲಾಪ
೧
ಒಂದೇ ನದಿಯಲ್ಲಿ
ಎಲ್ಲರೂ
ಮುಳುಗಿ ಏಳುತ್ತಾರೆ,
ಆ ಮೇಲೆ
ಮಡಿ ಮಡಿಯೆಂದು
ದೂರ ಸರಿಯುತ್ತಾರೆ!
೨
ಬೇಸಿಗೆಯಲ್ಲಿ ಒಣಗಿ
ಬೆತ್ತಲಾಯಿತು ನದಿ;
ನಾನೇ ಮೊಗೆದು
ಬರಿದಾಗಿಸಿದ್ದು ಎಂದು
ಬೀಗಿತು ಬಲೆ!
೩
ಸಾಗರವನ್ನು ಸೇರಬೇಕೆಂಬುದು
ನದಿಯ ಕಾತುರ;
ನೀರಿನಲ್ಲಿ ನಿಂತು
ಪರಲೋಕಕ್ಕೆ
ತರ್ಪಣ ಮುಟ್ಟಿಸಲು
ಮನುಷ್ಯನ ಆತುರ!
೪
ನದಿ
ನಾಡಿನ ಪ್ರವಾದಿ,
ಸಾಗರ
ಅದರ ಸಮಾಧಿ!
೫
ಜೀವ ಜಲದ
ನದಿಯೊಳಗೂ
ಜೀವಗಳನ್ನು
ಚಪ್ಪರಿಸುವ
ಸುಳಿ ನಾಲಗೆಯೂ
ಇದೆ!
೬
ಹರಿಗೋಲ ಹುಟ್ಟಲ್ಲಿ
ನದಿಯ ಮೈ ನೇವರಿಸಿದ
ತೃಪ್ತಿ ನಾವಿಕನಿಗೆ,
ಮೈ ಮೇಲೆ ಮಗು
ನಲಿದಾಡಿದ ಪುಳಕ
ಹೊತ್ತು ಸಾಗಿದ ನದಿಗೆ!
೭
ಬಳುಕಿ ಓಡುವ
ಬೆಡಗಿನ ನದಿಯ
ಕಂಡ ಮುಗಿಲುಗಳು
ಮಿಂಚಿನ ಕಣ್‌ಹೊಡೆದವು,
ಗುಡುಗಿ ಮಳೆಯಾಗಿ
ಬಿದ್ದು ಕೂಡಿಕೊಂಡವು!
೮
ನದಿ; ನಾಡಿನ ನಿಧಿ
ವಾರಿಧಿ; ಜಗದ ಶ್ರೀನಿಧಿ!
೯
ನೀರು
ಸಿಹಿಯಾಗಿದ್ದರೆ
ಸಾಗರದ ಮೇಲೂ
ಹೊತ್ತು ಸಾಗುತ್ತಾರೆ!
೧೦
ಮಂಜು
ನದಿಯನ್ನು ಆವರಿಸಿ
ಮುದ್ದಿಸಿತು
ಮೋಡಗಳನ್ನು
ನಾಚಿಸುವಂತೆ;
ಆದರೇನು
ಒಂದು ಹನಿಯ
ಲಾಭವೂ ಇಲ್ಲ
ನದಿಗೆ!
೧೧
ಆಕಾಶದ ಹಾರಾಟ
ಸಾಕಾಯಿತು ಮುಗಿಲಿಗೆ,
ನೆಲದ ಓಡಾಟ
ಸಂಸಾರವಾಯಿತು ನದಿಗೆ,
ಅಲೆಗಳ ಅಲೆದಾಟ
ಕಗ್ಗಂಟಾಯಿತು ಕಡಲಿಗೆ!
೧೨
ಒಂದೇ ದಿನ
ಸುರಿದರು ಮಳೆ
ಅದೆಷ್ಟು ದೂರ
ಹರಿಯುತ್ತದೆ ಹೊಳೆ!
ಒಂದೇ ದಿನ
ಎದುರಾದರು ಪ್ರೇಮಿ
ಬಾಳಿನುದ್ದ
ಅನುರಾಗದ ಬೆಳೆ!
ಜರಗನಹಳ್ಳಿ ಶಿವಶಂಕರ್
ತಾಯಿ
ಉತ್ಸಾಹದಿಂದ ಉಕ್ಕುವ ಹಾಗಿದೆ ಹಾಲು
ಒಲೆಯ ಮೇಲೆ ಕುದಿಯುತ್ತ ಕುದಿಯುತ್ತ
ಚಿಮುಕಿಸುತ್ತಿದ್ದರೂ ತಣ್ಣೀರು
ಕೆಚ್ಚಿಲಿನಿಂದ ಈ ಹಾಲು ಹರಿದು ಬರುವಾಗಲೂ
ಹೀಗೇ ಉಕ್ಕುತ್ತಿತ್ತು
ತುಂಬಿಕೊಳ್ಳುತ್ತಿದ್ದೇನೆ ತಾನೇ
(ತಂಬಿಗೆಯನ್ನಲ್ಲ)
ಕರುವಿನ ಹೊಟ್ಟೆಯನ್ನು ಎಂಬಂತೆ
ಈಗ ಒಲೆಯಿಂದ ಇಳಿಸಿದ ಮೇಲೂ ಮತ್ತೆ
ನಿಧಾನವಾಗಿ ಆರಿ
ಮೈಮನಸ್ಸುಗಳಲ್ಲಿ ನೀರಿನ ಬಣ್ಣ ಮತ್ತು ಗುಣ ಇಡದೆ
ನಾವು ಹುಳಿ ಹಿಂಡಿ ಮೊಸರಾಗು ಎಂದಾಗಲೂ
ತಣ್ಣಗೆ ಎನ್ನುವುದು ತುಂಬಿ ತುಳುಕಿ
ಹಸುವಿನ ಪ್ರೀತಿ
ಕೆಚ್ಚಲಿನಿಂದ ಇಳಿದ ಹಾಗೇ
ಮೊಸರಾಗಿ ಬಂತಲ್ಲ ಎನುವಂತೆ
ಮರುದಿನ ಗಟ್ಟಿಮೊಸರಿನ ಜೊತೆ
ಇಡ್ಲಿ ಮತ್ತು ಹಸಿಮೆಣಸಿನ ಚಟ್ನಿ ಬೆರೆಸಿ
ಇಡುವಾಗ ಕೈ ಎತ್ತಿ ಪ್ರತಿ ತುತ್ತು
ಹಸು ಇಲ್ಲ ಕಣ್ಣಲ್ಲಿ
ಇದಿರಿನ ಹೊಗೆ ಹಿಡಿದ ಗೋಡೆಯಲ್ಲಿ
ನನ್ನ ತಾಯಿ
ಮೊಸರನ್ನು ಮೀರಿ.
ಡಾ. ನಾ. ಮೊಗಸಾಲೆ
Comments are closed.