– ಒಂದು –
ಸ್ವಾತಂತ್ರ್ಯಾನಂತರದ ದಿನಗಳಲ್ಲಿ ದೇಶದ ಯುವಜನರ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳ ಮೇಲೆ ಗಣನೀಯ ಪ್ರಭಾವಬೀರಿದ ಏಕೈಕ ವ್ಯಕ್ತಿ ಅಬ್ದುಲ್ ಕಲಾಮ್ ಎಂದರೆ ತಪ್ಪಾಗಲಾರದು. ದೇಶವನ್ನು ಸ್ವಾವಲಂಬನೆಯ ಹಾದಿಯಲ್ಲಿ ಮುನ್ನಡೆಸಲು ಅಗತ್ಯವಾಗಿದ್ದ ರಾಕೆಟ್-ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದ ತಂತ್ರಜ್ಞರೊಬ್ಬರು ರಾಷ್ಟ್ರಪತಿಸ್ಥಾನವನ್ನು ಅಲಂಕರಿಸಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಅದೊಂದು ಅಲಂಕಾರದ ಪಟ್ಟವಲ್ಲ, ದೇಶದ ಪ್ರಜೆಗಳಿಗೆ ಮೌಲ್ಯಾಧಾರಿತ ಮಾರ್ಗದರ್ಶನ ಮಾಡಲು ತಮಗೆ ಸಿಕ್ಕ ಸದವಕಾಶವೆಂದು ಅವರು ಭಾವಿಸಿದ್ದರು. ಅಧಿಕಾರಾವಧಿಯ ನಂತರದ ತಮ್ಮ ಸಾರ್ವಜನಿಕ ಜೀವನವನ್ನು ಕೋಟ್ಯಂತರ ಯುವಜನರ ಪ್ರೇರೇಪಣೆಗೆ ಅವರು ಮೀಸಲಿಟ್ಟರು. ಈ ಕಾರಣದಿಂದಲೇ ವಿದ್ಯಾರ್ಥಿಗಳಿಗೆ ಕಲಾಂ ಕುರಿತು ಬರೆಯುವುದೆಂದರೆ ಉತ್ಸಾಹ ಉಕ್ಕಿಹರಿಯುತ್ತದೆ.
ಈ ದೃಷ್ಟಿಯಿಂದ, ಪ್ರಥಮ ಹಂತದಲ್ಲಿ ಆಯ್ಕೆಯಾದ ಹದಿನೈದು ಪ್ರಬಂಧಗಳನ್ನು ನಾನು ಓದುತ್ತಾ ಹೊರಟಂತೆ, ಕಲಾಮ್ ಅವರ ಜೀವನಚರಿತ್ರೆಯೊಂದಿಗೆ ಅವರ ಜೀವನದರ್ಶನದ ಮರು ಪರಿಚಯವಾಯಿತು. ಅವರ ಆತ್ಮಕಥನ `ಅಗ್ನಿಯ ರೆಕ್ಕೆಗಳು’ ಪುಸ್ತಕದ ಭಾಗಗಳನ್ನು ಇಲ್ಲಿ ಪ್ರಬಂಧಗಳನ್ನು ರಚಿಸಿದವರೆಲ್ಲರೂ ಉಲ್ಲೇಖಿಸಿದ್ದಾರೆ. ಹಾಗೆಯೇ ಕಲಾಂ ಅವರು ತಮ್ಮ ಕನಸಿನ ಭಾರತ ಕುರಿತಂತೆ ಬರೆದ `ವಿಷನ್-೨೦೨೦’ ಪುಸ್ತಕದ ಅನೇಕ ಮುಖ್ಯಾಂಶಗಳನ್ನು ವಿದ್ಯಾರ್ಥಿಗಳು ತಮ್ಮ ಕನಸಿನೊಂದಿಗೆ ಹೋಲಿಸಿಕೊಂಡಿದ್ದಾರೆ. ಇಲ್ಲಿ ತಪ್ಪದೇ ಹೇಳಬೇಕಾದ ಒಂದು ಸಂಗತಿಯೆಂದರೆ, ಅನೇಕ ವಿದ್ಯಾರ್ಥಿಗಳಿಗೆ ಅವರ ಸೋಲಿನ ಸಮಯದಲ್ಲಿ ಕಲಾಂ ಉಲ್ಲೇಖಗಳು ಸ್ಫೂರ್ತಿದಾಯಕವಾಗಿವೆ. ಕಲಾಂ ಅವರೂ ಅನುಭವಿಸಿದ ಸೋಲುಗಳು ಮತ್ತು ಅವುಗಳನ್ನು ಅವರು ಎದುರಿಸಿದ ಬಗೆ, ವಿದ್ಯಾರ್ಥಿಗಳಲ್ಲನೇಕರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿವೆ. ಹೀಗಾಗಿ, `ಉತ್ಥಾನ’ ಏರ್ಪಡಿಸಿದ ಕಲಾಂ ಕುರಿತ ಈ ಪ್ರಬಂಧಸ್ಪರ್ಧೆಯು ಸಾರ್ಥಕತೆಯನ್ನು ಕಂಡುಕೊಂಡಿದೆಯೆಂಬ ಅಭಿಪ್ರಾಯ ನನ್ನದು.
ಇನ್ನು, ಮೌಲ್ಯಮಾಪನವನ್ನು ಕುರಿತು ಮಾತನಾಡುವುದಾದರೆ, ೧೫ ಪ್ರಬಂಧಗಳೂ ಅಭಿನಂದನಾರ್ಹವಾಗಿವೆ. ಕಲಾಂ ಅವರನ್ನು ಅರ್ಥಮಾಡಿಕೊಂಡ ಮಟ್ಟವನ್ನು ಅಳೆಯುವುದಾದರೆ ಬಹುತೇಕ ಪ್ರಬಂಧಗಳು ಉನ್ನತ ಮಟ್ಟದಲ್ಲಿಯೇ ತೇರ್ಗಡೆಯಾಗಿವೆ. ಕನ್ನಡ ಭಾಷೆಯ ಮೇಲಿನ ಹಿಡಿತದಲ್ಲಿ ಕೆಲ ಪ್ರಬಂಧಗಳು ಮನಮೆಚ್ಚುವಂತಿದ್ದರೂ, ಹೆಚ್ಚಿನ ಸಂಖ್ಯೆಯ ಪ್ರಬಂಧಗಳು ಈ ನಿಟ್ಟಿನಲ್ಲಿ ಸೋತಿವೆ. ಕಾರಣ, ಸ್ಪಷ್ಟ – ಪುಸ್ತಕಗಳ ಓದು ಮತ್ತು ಕಾಗದ-ಪೆನ್ನಿನ ಬರವಣಿಗೆಯಿಂದ ವಿದ್ಯಾರ್ಥಿಗಳು ದೂರವಾಗುತ್ತಿರುವುದು. ಕಲಾಂ ಅವರು ಉದ್ಗರಿಸಿದ ಇಂಗ್ಲಿಷ್ ಮಾತೊಂದನ್ನು ಬರೆಯುವಾಗ ಪ್ರಬಂಧಕಾರರೊಬ್ಬರು ಶಿಷ್ಟಶೈಲಿಯಿಂದ ದೂರವಾಗಿ ಇಂದಿನ ಜನಪ್ರಿಯ ಅಪಭ್ರಂಶಪೂರಿತ ಎಸ್.ಎಂ.ಎಸ್. ಭಾಷೆಯ ಪದವನ್ನೂ ಬಳಸಿದ್ದಾರೆ; ವಿಷಯ ನಿರೂಪಣೆಯಲ್ಲಿ ಹೆಚ್ಚಿನ ಪ್ರಬಂಧಗಳು ಮುನ್ನಡೆ ಸಾಧಿಸಿದ್ದರೂ, `ಕಲಾಂ ಚಿಂತನೆಯ ಬೆಳಕಿನಲ್ಲಿ ನನ್ನ ಭವಿಷ್ಯದ ದಾರಿ’ಯಿಂದ ದೂರ ಸಾಗಿದ್ದಾರೆ. ಈ ಕಾರಣದಿಂದ ಕೆಲವೊಂದು ಪ್ರಬಂಧಗಳು ಕೊನೆಯ ಹಂತದ ಆಯ್ಕೆಯಲ್ಲಿ ಹಿಂದುಳಿದಿವೆ. ಇಷ್ಟೆಲ್ಲಾ ಕೊರತೆಗಳನ್ನು ಪಟ್ಟಿಮಾಡುತ್ತಲೇ ಸಮಾಧಾನಕರ ಅಂಶವೊಂದನ್ನು ನಾನಿಲ್ಲಿ ಪ್ರಸ್ತುತ ಪಡಿಸಲೇಬೇಕು. ಮೊದಲ ಮೂರು ಸ್ಥಾನ ಪಡೆದಿರುವ ಪ್ರಬಂಧಕಾರರು ತಾವು ಮುಂದೇನು ಮಾಡುತ್ತೇವೆ? ಆ ಗುರಿಗಳನ್ನು ತಲಪಲು ಕಲಾಂ ಅವರು ಹೇಗೆ ಸ್ಫೂರ್ತಿದಾಯಕರು? ಇವೆಲ್ಲವೂ ಒಟ್ಟಾರೆಯಾಗಿ ಸ್ವಾಸ್ಥ್ಯ ಸಮಾಜವನ್ನು ಸೃಷ್ಟಿಸಲು ಹೇಗೆ ನೆರವಾಗುತ್ತವೆ? – ಎಂದು ಚರ್ಚಿಸಿದ್ದಾರೆ. ತಮ್ಮ ನಿರೂಪಣಾ ಶೈಲಿ, ಭಾಷೆಯ ಮೇಲಿನ ಹಿಡಿತ, ವಿಷಯಗ್ರಹಿಕೆಯ ಕಲೆಯನ್ನು ಮುಂದುವರಿಸಿದಲ್ಲಿ ಈ ಪ್ರಬಂಧಕಾರರು ಉತ್ತಮ ಬರಹಗಾರರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
– ಸುಧೀಂದ್ರ ಹಾಲ್ದೊಡ್ಡೇರಿ
– ಎರಡು –
ನೆಚ್ಚಿನ `ಉತ್ಥಾನ’ ಕನ್ನಡ ಮಾಸಪತ್ರಿಕೆ ಆಯೋಜಿಸಿದ ವಾರ್ಷಿಕ ಪ್ರಬಂಧ ಸ್ಪರ್ಧೆ-೨೦೧೫ರ ವಿಷಯ: `ಡಾ. ಕಲಾಂ ಚಿಂತನೆಯ ಬೆಳಕಿನಲ್ಲಿ ನನ್ನ ಭವಿಷ್ಯದ ದಾರಿ’, ಸಮಯೋಚಿತ ಹಾಗೂ ತುಂಬ ಅರ್ಥಪೂರ್ಣ. ಅನುಕರಣೀಯ ಯೋಗ್ಯ ಕೆಲಸ ಕೂಡ.
ನಿರ್ಣಾಯಕನಾಗಿ ಅಂತಿಮ ಸುತ್ತಿನ ೧೫ ಮೌಲಿಕ ಪ್ರಬಂಧಗಳನ್ನು ಕೂಲಂಕಷವಾಗಿ ಓದಿದ ನನಗೆ, ಯುವಪೀಳಿಗೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ವ್ಯಕ್ತಿತ್ವ ಮತ್ತು ಕೃತಿತ್ವವನ್ನು ತಮ್ಮ ವೈಯಕ್ತಿಕ ಬದುಕಿಗೆ ಸಮೀಕರಿಸಿಕೊಂಡು ಯೋಚಿಸಿದ, ಆವಾಹಿಸಿಕೊಂಡು ಲೆಕ್ಕಣಿಸಿದ ಪರಿ ಬೆರಗು ಮೂಡಿಸಿತು. ಪ್ರಬಂಧಕ್ಕೆ ರೂಪಿಸಿಕೊಂಡ ಚೌಕಟ್ಟು, ಅದಕ್ಕೆ ಕಟ್ಟಿದ ಸ್ವಾನುಭವದ ತೋರಣ, ಸುವಿಚಾರಗಳಿಗೆ ತೆರೆದಿಟ್ಟುಕೊಂಡ ಪುಟ್ಟ ಕಿಟಕಿ, ಒಟ್ಟಂದದಲ್ಲಿ ಬೆಳಕಿಂಡಿಯ ಮೂಲಕ ಇವರು ನಿರೂಪಿಸಿದ `ಹಿರಿಯರ ಹಾದಿ-ಹೆಜ್ಜೆ’ ಖುಷಿ ತಂದಿತು. ಆದರೆ, ಪ್ರಬಂಧಕಾರರ ನಿರೂಪಣೆಯ ಶೈಲಿ ಮತ್ತು ಭಾಷಾಪ್ರಯೋಗ ತುಂಬ ಸುಧಾರಿಸಬೇಕು ಎನಿಸಿತು.
ಕನ್ನಡದ ಕವಿ ಎಂ. ಗೋಪಾಲಕೃಷ್ಣ ಅಡಿಗರು ಹೇಳುತ್ತಿದ್ದ ಮಾತು – “ಪದಗಳು ಬೆಂಡಿನಂತೆ ತೇಲಬಾರದು, ಗುಂಡಿನಂತೆ ತಳ ಮುಟ್ಟಬೇಕು.” ಹೆಚ್ಚು ಸಂಗತಿಗಳನ್ನು ಕಡಮೆ ಶಬ್ದಗಳಲ್ಲಿ ಹೇಳುವುದು ಜಾಣ್ಮೆ. ಶಬ್ದಗಳ ಉಳಿತಾಯವೇ ಉತ್ತಮ ಬರೆಹದ ಲಕ್ಷಣ. ಉತ್ತಮ ಬರವಣಿಗೆ ಸದಾ ಸಂಕ್ಷಿಪ್ತ. ಹಾಗೆಯೇ ಉತ್ತಮ ಬರೆಹದ ತಳಪಾಯ ಸ್ಪಷ್ಟತೆ. ಓದುಗರ ಏಕಾಗ್ರತೆ ಮತ್ತು ಮಿತ ಶಬ್ದಯೋಜನೆ – ಇವೇ ಬರವಣಿಗೆಯ ಶೈಲಿ. ಹೀಗಾಗಿ, ಬಳಸುವ ಪ್ರತಿ ಶಬ್ದದ ಮೇಲೂ ಎಚ್ಚರ ಅಗತ್ಯ. `ನೋಟ್ನ್ನು ತಿಕ್ಕಿ ತಿಕ್ಕಿ ಎಣಿಸುವಂತೆ ಪ್ರತಿ ಶಬ್ದವನ್ನು `ನೋಟಿ’ನಂತೆಯೇ ಬಳಸಬೇಕು. ಪದವನ್ನು ಹೀಗೆ ಬಳಸುವುದರಿಂದ ಅರ್ಥವೇ ಪದವನ್ನು ಹುಡುಕುತ್ತದೆಯೇ ಹೊರತು, ಪದ ಅರ್ಥವನ್ನು ಹುಡುಕುವುದಿಲ್ಲ! ಹರ್ಬರ್ಟ್ ಸ್ಪೆನ್ಸರ್ ಹೇಳುತ್ತಾನೆ: “ನಿಮ್ಮ ಕೈಗಡಿಯಾರವನ್ನು ಒಮ್ಮೆ ನೋಡಿ; ದಿಟ್ಟಿಸಿ ನೋಡಿ. ಈಗ ಹೇಳಿ. ಅದರಲ್ಲಿ ಯಾವುದಾದರೂ ಒಂದು ವಸ್ತು ಅನಗತ್ಯವಾದುದಿದಿಯೇ? ಯಾವುದೋ ಒಂದು ತಿರುಪು ತೆಗೆದರೂ ಕೈಗಡಿಯಾರ ಸರಿಯಾಗಿ ಕಾರ್ಯನಿರ್ವಹಿಸಲಿಕ್ಕಿಲ್ಲ! ಹಾಗೆ, ಅದರಲ್ಲಿ ಅಗತ್ಯಕ್ಕಿಂತ ಒಂದೇ ಒಂದು ವಸ್ತು ಕೂಡ ಜಾಸ್ತಿ ಇಲ್ಲ. ಹೀಗಿರುವಾಗ ನಮ್ಮ ಪ್ರಬಂಧ ಬರವಣಿಗೆಯಲ್ಲಿ ಏಕೆ ಅನಗತ್ಯ ಶಬ್ದ, ಅಕ್ಷರ, ವಾಕ್ಯಗಳಿರಬೇಕು?”
ಅರ್ಥಾತ್, ಒಂದು ರೇಖಾಚಿತ್ರದಲ್ಲಿ ಹೇಗೆ ಅನಗತ್ಯ ರೇಖೆಗಳಿರುವುದಿಲ್ಲವೋ, ಒಂದು ಯಂತ್ರದಲ್ಲಿ ಹೇಗೆ ಅನಗತ್ಯ ಬಿಡಿಭಾಗಗಳನ್ನು ಜೋಡಿಸಲಾಗುವುದಿಲ್ಲವೋ, ಹಾಗೆಯೇ ವಾಕ್ಯದಲ್ಲಿ ಅನಗತ್ಯ ಶಬ್ದ, ಪ್ಯಾರಾದಲ್ಲಿ ಅನಗತ್ಯ ವಾಕ್ಯಗಳಿರಬಾರದು. ಎಲ್ಲ ವಾಕ್ಯಗಳೂ ಸ್ಪಷ್ಟವಾಗಿ, ಚುಟುಕಾಗಿ, ನೇರವಾಗಿ ಬರೆದಿರಬೇಕು. ವಿವರ ಮಾಹಿತಿ ಅಲಕ್ಷಿಸಬೇಕು, ಕೇವಲ ಮುಖ್ಯಾಂಶ ಮಾತ್ರ ಹೇಳಬೇಕು ಎಂಬ ಅರ್ಥವಲ್ಲ. ಪ್ರಬಂಧದಲ್ಲಿ ಬಳಸಿದ ಪ್ರತಿ ಶಬ್ದವೂ ದುಡಿಯಲಿ, ಮಾತನಾಡಲಿ. ಅನಗತ್ಯ ಪದಪ್ರಯೋಗ ನಿವಾರಿಸಿದರೆ ವಾಕ್ಯರಚನೆ ಬಿಗುವಾಗುತ್ತದೆ. ಪದಗಳು ಕಲ್ಪನೆ, ವಿಚಾರ, ಭಾವನೆಯ ಪ್ರತೀಕ. ಕಲ್ಪನೆಯ ಜತೆ ಸಮರ್ಪಕ ಪದಗಳ `ಮದುವೆ’ ಆಗದಿದ್ದರೆ, ಅರ್ಥ `ವಿಚ್ಛೇದನ’ ಕೋರುತ್ತದೆ!
ಡಾ. ಕಲಾಂ ತಾವು ಬಳಸಿದ ಪದಗಳಿಂದ ತಾವೇನು ನೋಡುತ್ತಿದ್ದೇವೆ ಮತ್ತು ಯೋಚಿಸುತ್ತಿದ್ದೇವೆ ಎಂಬುದನ್ನು ಇತರರಿಗೆ ಸರಳವಾಗಿ ಮನವರಿಕೆ ಮಾಡಿ-ಕೊಡ-ಬಲ್ಲವ-ರಾಗಿದ್ದರು! ಈ ತಂತ್ರವನ್ನು ಪರಿಣಾಮಕಾರಿಯಾಗಿ ಉಪಯೋಗಿಸಬಲ್ಲವರೆಲ್ಲ ತಮ್ಮ ಕ್ಷೇತ್ರದಲ್ಲಿ `ಮಹಾನ್ ಎನಿಸಿದ್ದಾರೆ! ಈ ನಿಟ್ಟಿನಲ್ಲಿ ಪ್ರಬಂಧಸ್ಪರ್ಧೆ ಇವರಿಗೆಲ್ಲ ಪ್ರಥಮ ಹೆಜ್ಜೆಯಾಗಲಿ. ಭಾಗವಹಿಸಿದ, ಪುರಸ್ಕಾರಕ್ಕೆ ಭಾಜನರಾದ ಯುವಮಿತ್ರರಿಗೆ ಶುಭವಾಗಲಿ.
– ಹರ್ಷವರ್ಧನ ವಿ. ಶೀಲವಂತ
ಧಾರವಾಡ
ಬೆಂಗಳೂರು
Comments are closed.