೨೦೧೪ರ ವಾರ್ಷಿಕ ಕಥಾಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ ಪಡೆದ ಕಥೆ
ಆ ವೇಳೆಗೆ ಜಮಾಯಿಸಿದ ಟೀವಿ ವರದಿಗಾರರನ್ನು ಕಂಡು ಒಂದೂ ಅರ್ಥವಾಗದೆ ನಿಟ್ಟುಸಿರುಬಿಟ್ಟ ರಂಗವ್ವ ನಿಸ್ತೇಜಳಾಗತೊಡಗಿದಳು.
“ನೋಡಲಾ ಬಾಬುರಾಮ, ಹೋದ್ಸಾರ್ತಿ ಅದೆಂಗೆ ಹಲ್ಲೆ ಕಟ್ಟಿದ್ದೆಲಾ? ರಸ್ತೆ ಮ್ಯಾಲೆ ಕಾಲಿಕ್ಕಿದ್‌ಕೂಡ್ಲೆ ಎತ್ತುಗಳು ಕುಂಟಕ್ಕೆ ಸುರುಮಾಡಿದ್ವು, ನೀ ಮಾಡಿದ್ ಕ್ಯಾಮೆಗೆ ನಂ ಗೌಡ್ರತಾವ ಬಯ್ಯುಸ್ಕಂಡಿದ್ದು ನಾನು. ಈ ಸರ್ತಿ ಗೊರ್ಸು ಸರಿ ಕತ್ರುಸಿ ನೋವಾಗ್ದಂಗೆ ಹಲ್ಲೆ ಕಟ್‌ಬೇಕಂತ ಗೌಡ್ರು ಹೇಳಿರೆ. ಹೋದ್ಸಾರ್ತಿಹಂಗೆ ಎತ್ತು ಕುಂಟಿದ್ರೆ ನಿನ್ ಕಾಲೂ ಮುರ್ದು ಕುಂಟ ಹಂಗೆ ಮಾಡ್ತಾರಂತೆ ಉಸಾರು” ಕೃಷ್ಣೇಗೌಡ್ರ ಆಳು ಭೀಮ ತನಗೂ ಬೆಲೆ ಇರಲಿ ಅಂತ ಸ್ವಲ್ಪ ಜೋರಾಗೆ ತನ್ನ ಮಾತುಗಳಲ್ಲಿ ಏರಿಳಿತ ಮತ್ತು ಒರಟುತನ ತುಂಬಿ ಎಚ್ಚರಿಸಿದ್ದ.
ತಾನು ಆಳಾದರೂ ಜಮೀಂದಾರಿಕೆಯ ಪ್ರಾತಿನಿಧಿಕ ರೂಪದಲ್ಲಿ ತನ್ನನ್ನು ಗುರುತಿಸಿಕೊಳ್ಳಲು ಹವಣಿಸುವ ಭೀಮನಂತಹವರ ಮಾತುಗಳು ಕೆಲವೊಮ್ಮೆ ಕ್ರೌರ್ಯಭರಿತವಾಗಿಯೂ ಮತ್ತೆ ಕೆಲವೊಮ್ಮೆ ಉಡಾಫೆಯಂತೆಯೂ, ಒಮ್ಮೊಮ್ಮೆ ಕೇವಲ ತಮಾಷೆಯಂತೆಯೂ ಧ್ವನಿಸುತ್ತಿದ್ದುದರಿಂದ ಬಾಬುರಾಮ ಅಂತಹ ಬೆದರಿಕೆಗಳಿಗೆ ಪ್ರತಿಕ್ರಿಯಿಸುವುದನ್ನೆ ನಿಲ್ಲಿಸಿದ್ದ. ಆಂ…. ಆಂ…. ಎಂದು ಏನೋ ಅರ್ಥರಹಿತ ಪ್ರತಿಕ್ರಿಯೆ ವ್ಯಕ್ತಪಡಿಸುತ್ತ ಎತ್ತಿನ ಕಾಲುಕಟ್ಟಿ ಕೆಡವಲು ತನ್ನ ಸಹಾಯಕ್ಕೆ ಬರುವ ಮಗನನ್ನು ಕರೆದ. ಭೀಮನಿಗೆ `’ಸುಮ್ನೆ ನಿಂತ್ಕಬ್ಯಾಡ ಎತ್ತಿನ ಕೊಂಬು ಹಿಡ್ದು ಕೆಡವಲಿಕ್ಕೆ ಸಹಾಯ ಮಾಡು” ಅಂತ ಸೂಚಿಸಿದಾಗ “ನೀನೆ ಕೂಲಿಯವನು ನಿನಗೊಬ್ಬ ಆಳು ಬೇರೆ” ಎಂದು ಗೊಣಗುತ್ತ ಭೀಮ ಎತ್ತಿನ ಕೊಂಬು ಹಿಡಿದ. ಆ ವೇಳೆಗಾಗಲೆ ಸಂದರ್ಭದ ತೀವ್ರತೆ ಗ್ರಹಿಸಿ ತನಗೇನು ಕೇಡು ಕಾದಿದೆ ಎಂದು ಗ್ರಹಿಸಿದ್ದ ಎತ್ತು ಭಯದಿಂದ ಉಗ್ರವಾಗತೊಡಗಿತ್ತು. ಮೂವರೂ ಸೇರಿ ಪ್ರತಿಭಟಿಸುತ್ತಿದ್ದ ಎತ್ತಿನ ಕಾಲು ಕಟ್ಟಿ ಕೆಡವುವಲ್ಲಿ ಯಶಸ್ವಿಯಾದರು. ಬಾಬುರಾಮ ತನ್ನ ಹತಾರಗಳನ್ನು ಜೋಡಿಸಿಕೊಂಡು ಎತ್ತಿನ ಗೊರಸು ಹೆರೆಯುವುದರಲ್ಲಿ ಮಗ್ನನಾದ. ಆವೇಳೆಗೆ ಅಲ್ಲಿಗೆ ಬಂದ ಸಿದ್ದೇಶನು “ಏನ್ಲಾ ಬಾಬುರಾಮ, ಹೈವೇ ಪಕ್ಕದ್ದು ನಿನ್ ಜಮೀನು ಮಾರಿದೇನ್ಲಾ?” ಎಂದ. “ಇಲ್ಲಪ್ಪ ಜೀವನಕ್ಕೆ ಇರೋದೆ ಆ ಜಮೀನು. ಈ ಹಲ್ಲೆ ವ್ಯಾಪಾರ ನೆಚ್ಚಿಕೊಂಡ್ರೆ ಹೊಟ್ಟೆ ತುಂಬಿದಂಗೆ ಅದೆ. ಅಂತಾದ್ರಲ್ಲಿ ಆ ಜಮೀನು ಮಾರೀನ್ಯೇ?” ಎಂದವನು ಅನುಮಾನಕ್ಕೊಳಗಾದವನಂತೆ “ಅದ್ಯಾಕಲಾ ಸಿದ್ದೇಸ ಹಂಗೆ ಕೇಳಿದಿ?” ಎಂದ. “ಅಲ್ಲ, ಒಸ ರಸ್ತೆ ಪಕ್ಕ ಫ್ಯಾಕ್ಟ್ರಿಯವ್ರದ್ದು ಟೌನ್‌ಸಿಪ್ ಕಟ್ಟಕ್ಕೆ ನಿನ್ನ ಜಮೀನು ಕೇಳ್ತಾ ಇದ್ರಲ್ಲ ಅವರು ಆಗನೆ ನಿನ್ನ ಜಮೀನು ಸೇರಿಸ್ಕಂಡು ಕಾಂಪೌಂಡು ಕಟ್ತಾ ಇದ್ರು ಅದಕ್ಕೆ ಕೇಳ್ದೆ” ಎನ್ನುತ್ತಾ ಅಲ್ಲಿಂದ ಹೊರಟುಹೋದ. ಅವನ ಮಾತು ಕೇಳಿ ಬಾಬುರಾಮನ ಎದೆ ಧಸಕ್ಕಂದಿತು.
ಹಾಗೇನೂ ಒಳ್ಳೆಯ ಮಳೆ ಕಾಣದ ಆ ಭಾಗದ ಜಮೀನಿನಲ್ಲಿ ರೈತರು ಒಂದಷ್ಟು ಒಣಬೇಸಾಯದಲ್ಲಿ ರಾಗಿ, ಜೋಳ, ತೊಗರಿ ಇತ್ಯಾದಿ ಬೆಳೆದುಕೊಳ್ಳುತ್ತಿದ್ದರು. ಬಾಬುರಾಮ ಮಾತ್ರ ರಾಗಿ, ಜೋಳದ ಸಾಂಪ್ರದಾಯಿಕ ಕೃಷಿ ಜೊತೆಗೆ ಎರಡು ಎಕರೆಯಲ್ಲಿ ತೋಟಗಾರಿಕೆ ಇಲಾಖೆಯವರ ಮಾತು ಕೇಳಿ ಹೈಬ್ರೀಡ್ ಹುಣಸೆ ಮರ ಹಾಕಿದ್ದ. ಅದು ನಾಲ್ಕೇ ವರ್ಷಕ್ಕೆ ಫಸಲಿಗೆ ಸುರುಮಾಡಿತ್ತು. ಇನ್ನ ಕೆಲವು ದಿನ ಕಳೆದ್ರೆ ಅದರ ಆದಾಯ ಹೆಚ್ಚಿ ತಾನು ಸುಖವಾಗಿರಬಹುದೇನೋ ಎಂಬ ನಂಬಿಕೆ ಅವನದ್ದಾಗಿತ್ತು. ಮತ್ತಾರೋ ಪರಿಸರಪ್ರೇಮಿ ಸಲಹೆಯಂತೆ ಹಸಿರು ಬೇಲಿ ಹೆಸರಿನಲ್ಲಿ ಅಷ್ಟೇನೂ ನೀರು ಕೇಳದ ಸೀಗೆ, ಅಂಟುವಾಳ, ಬಿದಿರು ಇತ್ಯಾದಿ ಗಿಡಗಳನ್ನು ಬೆಳೆಸಿದ್ದ. ಅದು ಜೊತೆಯಲ್ಲಿ ಬೆಳೆದ ಲಾಂಟಾನದ ಜೊತೆ ಸೇರಿ ಒಳ್ಳೇ ಜಿಗ್ಗಾಗಿ ದನಗಳಿಂದ ತೋಟಕ್ಕೆ ರಕ್ಷಣೆ ನೀಡುತ್ತಿದ್ದುದಲ್ಲದೆ ಸೀಗೆ, ಬಿದಿರು ಅಂಟುವಾಳದಿಂದ ವರ್ಷಕ್ಕೆ ಒಂದಷ್ಟು ಕಾಸೂ ಸಿಕ್ಕುತ್ತಿತ್ತು. ಹೀಗೆ ಆ ಒಣ ಪ್ರದೇಶದಲ್ಲಿ ಬಾಬುರಾಮನ ಜಮೀನು ಮಾತ್ರ ಹಚ್ಚಗೆ ಪಚ್ಚೆಮಣಿಯಂತೆ ಕಂಗೊಳಿಸುತ್ತಿತ್ತು. ಅದೆಲ್ಲಾ ಒಂದು ಹದಕ್ಕೆ ಬಂದಮೇಲೆ ಹಿರಿಯರ ವೃತ್ತಿ ಅಂತ ಮಾಡ್ತಾ ಇದ್ದ ಎತ್ತುಗಳ ಕಾಲಿಗೆ ಹಲ್ಲೆ ಕಟ್ಟುವ ವೃತ್ತಿ ಬಿಟ್ಟು ಪೂರಾ ರೈತನಾಗಿ ಪರಿವರ್ತಿತನಾಗುವ ಕನಸು ಕಾಣುತ್ತಿದ್ದ ಬಾಬುರಾಮ. ಈಗೆಲ್ಲ ಹೊಲ ಉಳಕ್ಕೆ ಪೇಟೆಗೆ ಬರಕ್ಕೆ ಟಿಲ್ಲರ್, ಟ್ರಾಕ್ಟರ್ ಬಂದವೆ. ಎತ್ತು ಸಾಕೋರು ಕಡಮೆ ಆಗಿರೋವಾಗ ತನ್ನ ಹಲ್ಲೆ ಕಟ್ಟುವ ಕೆಲಸಕ್ಕೆ ಕಾಸು ಸಿಕ್ಕೋದು ಅಷ್ಟರಲ್ಲೆ ಇದೆ ಅನ್ನುವುದು ಅವನ ಅಭಿಪ್ರಾಯವಾಗಿತ್ತು. ಈಗ ಹಾಗೂ ಹೀಗೂ ಉಳಿಸಿರೊ ಹಣದಲ್ಲಿ ತನ್ನ ಜಮೀನಿಗೆ ಲಗತ್ತಾಗಿರೋ ಯಾವುದಾದ್ರೂ ಜಮೀನು ತಗಂಡು, ಬೆಳ್ಳಿತೊರೆ ಹಳ್ಳಕ್ಕೆ ಪಂಪುಸೆಟ್ಟು ಕೂರಿಸಿ ತರಕಾರಿ ಬೆಳೀಬೇಕು, ದನದ ಡಾಕ್ಟ್ರು ಹೇಳುವಂಗೆ ಮೊಲ ಸಾಕಿ ಮಾರಬೇಕು ಇತ್ಯಾದಿ ಕನಸು ಕಾಣುತ್ತಿದ್ದ. ಈಗ ಅದಕ್ಕೂ ಕುತ್ತು ಬಂದಿತ್ತು.
ಒಂದು ಟೌನುಶಿಪ್ ಕಟ್ಟುವ ಉಮೇದಿನಲ್ಲಿ ಅಲ್ಲಿಗೆ ಕಾಲಿರಿಸಿದ್ದ ಒಬ್ಬ ಬಂಡವಾಳದಾರ ಬಿಲ್ಡರು ಕಣ್ಣಿಟ್ಟಿದ್ದ ಜಮೀನಿನಲ್ಲಿ ಬಾಬುರಾಮನ ಜಮೀನೂ ಸೇರಿಬಿಟ್ಟಿತ್ತು. ಅದಾಗಲೆ ಒಂದಷ್ಟು ಜಮೀನು ನುಂಗಿದ್ದ ಆ ಬಿಲ್ಡರು ಜಮೀನು ಕೊಡುವಂತೆ ಬಾಬುರಾಮನನ್ನು ಒತ್ತಾಯಿಸುತ್ತಲೋ, ಬೆದರಿಸುತ್ತಲೋ ಸತಾಯಿಸುತ್ತಿದ್ದ. ಅದಕ್ಕೆಲ್ಲ ಬಗ್ಗದೆ ಸುಮ್ಮನಿದ್ದ ಬಾಬುರಾಮನು ಈಗ ಸಿದ್ದೇಶ ಬಂದು ಬೀಡಿ ಸೇದಿ ಹೊಗೆಬಿಡುವಷ್ಟೆ ಸಲೀಸಾಗಿ ಬಾಬುರಾಮನ ಜಮೀನು ಅತಿಕ್ರಮಣಕ್ಕೊಳಗಾಗಿದೆ ಎಂದು ಕೊಟ್ಟ ಸುದ್ದಿಯಿಂದ ನಿಜಕ್ಕೂ ಕಂಗಾಲಾದ. ಮಾಡುತ್ತಿದ್ದ ಕೆಲಸದ ಮೇಲಿನ ಏಕಾಗ್ರತೆ ತಪ್ಪಿತ್ತು.
ಕಾಲು ಕಟ್ಟಿ ಕೊಂಬು ಹಿಡಿದು ಒಬ್ಬರು ಹೊಟ್ಟೆಯ ಮೇಲೆ ಕುಳಿತು ಬಲವಾಗಿ ಅಮುಕಿ ಹಿಡಿದಿದ್ದರೂ ಎತ್ತು ನೋವಿನಿಂದ ಅಕ್ರಂದನ ಮಾಡಿದಾಗ ಬಾಬುರಾಮ ಇಹಕ್ಕೆ ಬಂದ. ತನ್ನ ಜಮೀನು ಪರರ ಪಾಲಾಗುವ ಚಿಂತೆಯಲ್ಲಿ ಅನ್ಯಮನಸ್ಕನಾಗಿ ಕೆಲಸ ಮಾಡುತ್ತಿದ್ದ ಬಾಬುರಾಮನು ಲಾಳಕ್ಕೆ ಹೊಡೆದ ಮೊಳೆ ಹಾದಿತಪ್ಪಿ ಎತ್ತಿನ ಗೊರಸನ್ನು ದಾಟಿ ಮಾಂಸವನ್ನು ಪ್ರವೇಶಿಸಿ ಅಸಾಧ್ಯ ಯಾತನೆಯನ್ನುಂಟುಮಾಡಿತ್ತು. ಕಾಲಿನಿಂದ ಸುರಿದ ರಕ್ತವನ್ನು ಕಂಡ ಭೀಮ ಕೆಂಡಾಮಂಡಲ ಕೋಪದಿಂದ “ಲೇ, ಬಾಬುರಾಮ ಮೊದ್ಲೆ ಉಸಾರು ಅಂತ ಹೇಳ್ಳಿಲ್ವ? ಆ ಮೂಕ ಪ್ರಾಣಿ ಕಾಲ ಮಾಂಸಕ್ಕೆ ಮೊಳೆ ಹೊಡೆದ್ಯಲ್ಲ ಹಲ್ಕಾ…..” ಎಂದಬ್ಬರಿಸಿದ. ತನ್ನ ಜಮೀನಿನ ಚಿಂತೆಯಲ್ಲೆ ಮುಳುಗಿದ್ದ ಅವನು ಅದಕ್ಕೆ ಪ್ರತಿಕ್ರಿಯಿಸದೆ ಆ ಮೊಳೆ ಕಿತ್ತು ಸರಿಯಾಗಿಟ್ಟು ಹೊಡೆದು ಎತ್ತನ್ನು ಸಂತೈಸಿ ಮೇಲೆಬ್ಬಿಸಿದ. ಕುಂಟುತ್ತಾ ನಡೆಯುತ್ತಿದ್ದ ಎತ್ತನ್ನು ನೋಡುತ್ತಾ ಭೀಮನು “ನಾಳೆ ಗೌಡ್ರ ಎದುರ್ಗೆ ಎತ್ತು ಕುಂಟಲಿ, ನಿಂಗೆ ಕಾದೈತೆ” ಎಂದು ಬೆದರಿಸುತ್ತಾ ಎತ್ತುಗಳನ್ನು ಹೊಡೆದುಕೊಂಡು ಹೊರಟ.
ಮಧ್ಯಾಹ್ನ ಮೂರರನಂತರ ಅಮ್ಮನಳ್ಳಿ ಸಂತೇಲಿ ಜನರ ಗೌಜು ಕಡಮೆಯಾಗುತ್ತದೆ. ಬೆಳಗ್ಗೆ ಕತ್ತಲುಹರಿವ ಹೊತ್ತಿಗೆ ಸಂತೆಗೆ ಬರುವ ರೈತಾಪಿ ಜನಗಳು ಮಧ್ಯಾಹ್ನದ ವೇಳೆಗೆ ತಮ್ಮ ವ್ಯವಹಾರ ಮುಗಿಸಿ ಸಂತೆ ಹೋಟೆಲಲ್ಲಿ ಊಟಮಾಡಿ ಊರಕಡೆ ಮುಖಮಾಡುತ್ತಾರೆ. ಆ ಸಮಯದ ನಂತರ ಬಾಬುರಾಮನ ಹಲ್ಲೆಕಟ್ಟುವ ವ್ಯಾಪಾರವೂ ನಿಲುಗಡೆಗೆ ಬರುತ್ತದೆ. ಇನ್ನು ಹಲ್ಲೆ ಕಟ್ಟಲು ಎತ್ತುಗಳಾವುವೂ ಇಲ್ಲ ಎಂದು ಖಚಿತವಾದನಂತರ ತನ್ನ ಹಲ್ಲೆ ಪೆಟ್ಟಿಗೆ ಮಗನ ಕೈಗೆ ಕೊಟ್ಟು ಮನೆಗೆ ಹೋಗಲು ತಿಳಿಸಿ ತಾನು ತಲ್ಲಣಗೊಂಡ ಮನಸ್ಸಿನಿಂದ ತನ್ನ ಜಮೀನಿದ್ದ ಕಡೆಗೆ ಹೋಗುವ ಬಸ್ಸನ್ನು ಕಾಯುತ್ತಾ ಅಮ್ಮನಳ್ಳಿ ಸಂತೆಯ ಬಾಯಲ್ಲಿರುವ ರಸ್ತೆಯ ಪಕ್ಕ ನಿಂತ.
ತನ್ನ ಪ್ರಾಣದಂತಿದ್ದ ತೋಟದ ಬಳಿ ಇಳಿದಾಗ ಅವನ ಎದೆ ಧಸಕ್ಕಂದಿತು. ಸಿದ್ದೇಶನ ಮಾತು ಸುಳ್ಳಾಗಲಿ ಅಂತ ಸತ್ಯದ ದೇವತೆ ಎಂದು ಹೆಸರಾಗಿದ್ದ ಊರಮ್ಮನನ್ನು ಧ್ಯಾನಿಸುತ್ತಾ ಬಂದವನು ಸಿದ್ದೇಶನ ಮಾತುಗಳು ನಿಜವೇ ಅಗಿದ್ದನ್ನು ಕಂಡು ಭೀತನಾದ. ಸಿದ್ದೇಶನ ಮಾತಿನಂತೆಯೆ ಅವನ ಚಂದದ ತೋಟವು ಅನ್ಯರ ಆಕ್ರಮಣಕ್ಕೆ ತುತ್ತಾಗಿತ್ತು. ಬುಲ್ಡೊಜರೊಂದು ಕರುಣೆಯಿಲ್ಲದೆ ಅವನು ಪ್ರೀತಿಯಿಂದ ಬೆಳೆಸಿದ್ದ ಹಸಿರು ಬೇಲಿಯ ಸೀಗೆಮೆಳೆ, ಅಂಟುವಾಳದ ಮರ ಇವೆಲ್ಲವನ್ನೂ ಸವರಿ ಒಂದು ದಿಕ್ಕಿಗೆ ಎಸೆದಿತ್ತು. ಆಗಲೆ ಆ ಮಿಶೀನು ಅವನ ತೋಟದ ಸುತ್ತ ಎರಡಡಿ ಅಗಲ ಎರಡಡಿ ಆಳದ ಕಾಂಪೌಂಡಿನ ಪಾಯದ ಗುಂಡಿ ತೋಡಿತ್ತು. ಟಿಪ್ಪರುಗಳು ತಂದು ಸುರಿದಿದ್ದ ಕಲ್ಲನ್ನು ಅಳುಗಳು ತಂದು ಕಾಂಪೌಂಡು ಹೊಂಡದ ಬಳಿ ರಾಶಿ ಹಾಕುತ್ತಿದ್ದರು. ಗಾರೆ ಕೆಲಸದ ಮೇಸ್ತ್ರಿಗಳು ಆಗಲೆ ಸಿಮೆಂಟು ಕಲಸಿ ತಮ್ಮ ಅಡಿಕೋಲು, ಮಟ್ಟಗೋಲು ಮತ್ತು ಕರಣೆಗಳನ್ನು ಝಳಪಿಸುತ್ತಿದ್ದರು. ಅದೆಲ್ಲವನ್ನೂ ನೋಡಿದ ಬಾಬುರಾಮನಿಗೆ ಅವರೆಲ್ಲರೂ ಸೇರಿ ತನ್ನ ಸಮಾಧಿಗೆ ಕಲ್ಲುಗಳನ್ನು ಜೋಡಿಸುತ್ತಿರಬಹುದೆ ಅನ್ನಿಸತೊಡಗಿತು.
ಬಸ್ಸಿಳಿದವನೆ ಓಡುನಡಿಗೆಯಲ್ಲಿ ತನ್ನ ತೋಟದತ್ತ ನಡೆದ. ಅವನೇನಾದರೂ ಬಂದಲ್ಲಿ ಅವನನ್ನು ತರುಬಿ ಬೆದರಿಸಿ ಓಡಿಸಲೆಂದೇ ನಿಯುಕ್ತರಾದಂತಿದ್ದ ನಾಲ್ವರು ರಾಕ್ಷಸರು “ಏ ಯಾರೋ ನೀನು, ನಡೆಯೋ ಇಲ್ಲಿಂದ ಆಚೆಗೆ” ಎಂದು ಆರ್ಭಟಿಸುತ್ತಾ ತೋಟದ ಸರಹದ್ದಿನಿಂದಾಚೆಗೆ ದೂಡಿದರು. “ನನ್ನ ಜಮೀನಿಗೆ ನಾನು ಕಾಲಿಡದಂತೆ ಮಾಡಿದ್ಯಲ್ಲವ್ವೋ” ಎಂದು ತಾನು ಭಕ್ತಿಯಿಂದ ನಂಬುವ ಊರಮ್ಮನನ್ನೆ ಶಪಿಸಿದ.
***
“ಆ ಕಳ್ಳ ನನ್‌ಮಕ್ಳ ಮೋಸಕ್ಕೆ ನೀನು ಎದ್ರಬೇಕಿಲ್ಲ ಬಾಬುರಾಮ. ಕಾಂಪೌಂಡು ಹಾಕ್ಕಳಕ್ಕೆ ಜಮೀನು ಅವನಪ್ಪಂದ? ಅವನತ್ರ ದುಡ್ಡಿರಬೌದು, ರೌಡಿಗಳಿರಬೌದು ಆದ್ರೆ ಕಾನೂನು ಅಂತ ಒಂದದೆ ಅಲ್ವ, ಅದು ಅವ್ರ ಕಡೆ ಇಲ್ಲ ನಿನ್ ಕಡೆ ಐತೆ. ನಾಳೆ ಕಂದಾಯ ಇಲಾಖೆಗೆ ಹೋಗೋಣ ಬಾ, ಪಾಣಿ ಮತ್ತೆ ಎಂಕಂಬ್ರನ್ಸ್ ತೆಗೆಸಿ ತೋರ್ಸನ. ಅದ್ಯಾವನು ಜಮೀನು ನಿಂದಲ್ಲ ಅಂತಾನೆ ನೋಡನ. ಅದೂ ಆಗದಿದ್ರೆ ಕೋರ್ಟು ಅಂತ ಒಂದದೆ ಅಲ್ವ? ಸ್ಟೇ ತಂದ್ರೆ ಅವನ್ಯಾವ ದೊಡ್ಡ ಬಿಲ್ಡರಾದ್ರೂ ನಿನ್ನ ಕಾಲ್‌ಬುಡಕ್ಕೆ ಬರ್ಬೇಕು” ಬಾಬುರಾಮನನ್ನು ಸಂತೈಸುವ ನೆವನದಲ್ಲಿ ಕಿಟ್ಟಪ್ಪ ತನ್ನ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿದ್ದ.
ಕಿಟ್ಟಪ್ಪನು ಅದೆಷ್ಟು ಓದಿದ್ದನೋ ಬಿಟ್ಟಿದ್ದನೋ ತಾನು ಮಾತ್ರ ಲಾಯರೆಂದೇ ಊರಲ್ಲಿ ಬಿಂಬಿಸಿಕೊಳ್ಳುತ್ತಿದ್ದ. ದಿನಬೆಳಕಾದರೆ ಶಿವಪುರದ ಕೋರ್ಟಿನ ಬಳಿ ಅಡ್ಡಾಡುತ್ತಿದ್ದ. ಅದೂ ಅವನ ಉಪಜೀವನಕ್ಕೆ ಪೂರಕವಾದ ವೃತ್ತಿ! ಅವನೇನೂ ಲಾಯರುಗಳ ತರ ಕಪ್ಪುಕೋಟು ಹಾಕಿ ಓಡಾಡುವ ಆಸಾಮಿಯಲ್ಲ. ಆದರೂ ಲಾಯರುಗಳ ಸೇವಕನಾಗಿ ಓಡಾಡುತ್ತಾ ಕೋರ್ಟುಗಳ ಒಂದಷ್ಟು ನಡಾವಳಿಗಳನ್ನೂ ಹಳ್ಳಿವ್ಯಾಜ್ಯಗಳಿಗೆ ಆಗುವಷ್ಟು ಸಾಮಾನ್ಯ ಕಾನೂನು ಜ್ಞಾನವನ್ನೂ ಗಳಿಸಿದ್ದ. ಹಳ್ಳಿಯ ಆಸ್ತಿ ಮಾರಾಟಗಳು, ಅಥವಾ ವ್ಯಾಜ್ಯಗಳ ತೀರುವಳಿಗೆ ಸಹಕರಿಸುತ್ತಿದ್ದ. ತನ್ನ ಪರಿಚಯದ ಯಾವುದಾದರೂ ಲಾಯರ್‌ಗೆ ಆ ಕೆಲಸ ವಹಿಸಿ ತಾನು ಅವರ ಜೊತೆಯಲ್ಲಿರುತ್ತಾ ಲಾಯರ್ ತಾನು ಹೇಳಿದಂತೆ ಕೇಳುತ್ತಾರೆ ಎಂಬಂತಹ ವ್ಯಕ್ತಿತ್ವವನ್ನು ಊರವರ ಎದುರು ಸೃಷ್ಟಿಸಲು ಹವಣಿಸುತ್ತಿದ್ದ. ಊರ ಆಸ್ತಿ ವಿಲೇವಾರಿ, ವ್ಯಾಜ್ಯ, ಪೊಲೀಸುಕೇಸು ಇಂಥವಕ್ಕೆಲ್ಲ ಅವನ ಬಳಿ ಏನಾದರೂ ಸಲಹೆ ಸಮಾಧಾನ ಇರುತ್ತಿತ್ತು. ಹೀಗಾಗಿ ಹಳ್ಳಿಯ ಇತರರಂತೆ ಬಾಬುರಾಮನೂ ಸಹಾ ಅವನು ಲಾಯರೇ ಇರಬಹುದೋ ಏನೋ ಎಂಬ ಭ್ರಮೆಗೆ ಒಳಗಾಗಿ ಕಿಟ್ಟಪ್ಪನು ಹೆಣೆಯುತ್ತಿದ್ದ ಬಲೆಯೊಳಗೆ ಸಿಲುಕಿಕೊಳ್ಳಲು ಉತ್ಸುಕನಾಗಿಬಿಟ್ಟಿದ್ದ.
`’ನಡಿ ನಾಳೆ ತಾಲೂಕಾಫೀಸಿಗೆ ಹೋಗಿ ನಿನ್ನ ಜಮೀನಿಂದು ಪಾಣಿನೋ ಇಲ್ಲ ಎಂಕಂಬ್ರನ್ಸೋ ತೆಗ್ಸನ. ಅದ್ನಂತೂ ಯಾವ್ನ ಕೈಲೂ ಬದ್ಲಾಯ್ಸಕ್ಕೆ ಆಗಲ್ಲ. ಅದ್ನ ಆ ಬಿಲ್ಡರ್ ಮುಖದ ಮ್ಯಾಲೆ ಎಸ್ದು ನಿನ್ನ ಜಮೀನು ಬಿಡ್ಸಿಕೊಡದು ನನ್ ಜವಾಬ್ದಾರಿ” ಎನ್ನುತ್ತಾ ತನ್ನ ವೀರಾವೇಶದ ಮಾತುಗಳು ಬಾಬುರಾಮನೆಂಬ ಮಿಕದ ಮೇಲೆ ಹೇಗೆ ಪರಿಣಾಮ ಬೀರಿತೋ ಎಂದು ನೋಡಿದ ಕಿಟ್ಟಪ್ಪ.
ಆತನ ಮಾತುಗಳಿಗೆ ಮರುಳಾದ ಬಾಬುರಾಮ ಮನೆಯ ಲವಾಜಮೆ ಖರ್ಚಿಗಾಗಿ ಇಟ್ಟಿದ್ದ ದುಡ್ಡಲ್ಲಿ ಒಂದು ಸಾವಿರ ಎಣಿಸಿಕೊಂಡು ಕಿಟ್ಟಪ್ಪನ ಜೊತೆ ಶಿವಪುರದ ಬಸ್ಸು ಹತ್ತಿದ. ಸೀದಾ ಕಂದಾಯ ಇಲಾಖೆಗೆ ಹೋದರು. ಬಾಬುರಾಮನನ್ನು ಹೊರಗೆ ನಿಲ್ಲಿಸಿ ಕಿಟ್ಟಪ್ಪ ಅವನ ಆಸ್ತಿಯ ಸರ್ವೆ ನಂಬರು ಇತ್ಯಾದಿ ವಿವರಗಳನ್ನು ತೆಗೆದುಕೊಂಡು ಒಳಗೆ ಹೋದ. ಬಾಗಿಲಿನಿಂದ ಇಣುಕುತ್ತಿದ್ದ ಬಾಬುರಾಮನಿಗೆ ಕಿಟ್ಟಪ್ಪ ಒಳಗೆ ಯಾರಿಗೋ ಕೈಮುಗಿದು ಮಾತನಾಡುತ್ತಿದ್ದುದು ಕಾಣಿಸಿತು. ಕೆಲವು ನಿಮಿಷದ ನಂತರ ಅವನ ಹಾವಭಾವ ಬದಲಾಗಿ ಅವನು ಜಗಳವಾಡುತ್ತಿರಬಹುದೆ ಎಂಬ ಸಂಶಯ ಬಂದಿತೆ ಶಿವಾಯ್ ಅವನ ಮಾತು ಕೇಳುತ್ತಿರಲಿಲ್ಲ. ಕೆಲಸಮಯದ ನಂತರ ಹೊರಬಂದ ಕಿಟ್ಟಪ್ಪ “ಲೋ ಬಾಬುರಾಮ ಎಲ್ರೂ ಮಿಂಡ್ರುಗುಟ್ಟಿದವ್ರೆ ಕಣ್ಲ. ದುಡ್ಡು ಕೊಡದೆ ನಿನ್ನ ಆಸ್ತಿದು ಎಂಕಂಬ್ರೆನ್ಸ್ ಕೊಡಲ್ಲ ಅಂತಾರೆ. ಸರ್ಕಾರಿ ಕೆಲ್ಸಕ್ಕೆ ನಾವ್ಯಾಕಲಾ ದುಡ್ಡುಕೊಡಬೇಕು? ನಡಿನಡಿ ಸೀದಾ ಡೀಸಿ ಸಾಹೇಬ್ರಿಗೆ ದೂರು ಕೊಡಾನ” ಎಂದು ಅವಸರಿಸಿದ. ಅದಕ್ಕೆ ಬಾಬುರಾಮನು “ಏ ಕಿಟ್ಟಪ್ಪ ಸಮಾಧಾನ ಮಾಡ್ಕ. ಇಷ್ಟು ಸಣ್ಣ ವಿಷಯಕ್ಕೆ ಡೀಸಿ ಸಾಯೇಬ್ರತಾವ ಹೋದ್ರೆ ಅವ್ರಿಗೂ ಕ್ವಾಪ ಬತ್ತದೆ, ಅಮೇಲೆ ಈ ಗುಮಾಸ್ತಂಗೂ ಕ್ವಾಪ ಬತ್ತದೆ. ದುಡ್ಡು ಕೊಡದು ಎಲ್ಲ ಕಡೆ ಇದ್ದದ್ದೆ. ಒಂದು ನೂರ ಇನ್ನೂರ ಕೊಟ್ಟು ಕೆಲ್ಸ ಮಾಡ್ಸಿಕೊಂಡು ಬಾ” ಎಂದ.
“ನೀವೆಲ್ಲ ಇಂಗೆ ಲಂಚ ಕೊಡಕ್ಕೆ ತುದಿಗಾಲಲ್ಲಿ ತಯಾರಾಗಿ ನಿಂತಿದ್ದಕ್ಕೆ ಈ ಜನ ಹಿಂಗೆ ಹೆಚ್ಕಂಡಿರದು, ನೀವ್ಗಳೆ ಸರಿ ಇಲ್ಲ” ಎಂದು ಕಿಟ್ಟಪ್ಪ ರಾಂಗಾದ. ಆಮೇಲೆ ಮೃದುವಾದ ಸ್ವರದಲ್ಲಿ “ಹಂಗತೀಯ? ಹಂಗಾದ್ರೆ ಒಂದೈನೂರು ಕೊಡು. ನಂದೇನಿಲ್ಲ ನೀನು ಒಪ್ಪಿ ಕೊಟ್ರೆ ಕೆಲ್ಸ ಮಾಡ್ಸಿಕಂಡು ಬರ್ತೀನಿ” ಎಂದು ದುಡ್ಡಿಸ್ಕಂಡು ಹೋದ. ನೂರು ಅಥವಾ ಇನ್ನೂರಕ್ಕೆ ತಯಾರಾಗಿದ್ದ ಬಾಬುರಾಮನಿಗೆ ಅವನು ಐನೂರು ಕಸಿದದ್ದು ಕಸಿವಿಸಿಯಾಯ್ತು. ಕಷ್ಟದ ದುಡಿಮೆ ಲಂಚಕೋರರ ಪಾಲಾಗಿ ಕರಗಿದ್ದು ಕಂಡು ಅವನ ಮನಸ್ಸು ರೋಧಿಸಿತು.
ಒಳಗಿನಿಂದ ಹೊರಬಂದ ಕಿಟ್ಟಪ್ಪ “ನಡಿ ಬಾಬುರಾಮ ಇನ್ನು ನಾಲ್ಕುದಿನ ಬಿಟ್ಕಂಬಂದು ಎಂಕಂಬ್ರನ್ಸ್ ತಗಳನ” ಎಂದು ಹೊರಡಿಸಿದ. “ನಾಲ್ಕು ದಿನ ಆದ್ರೆ ಅವ್ರು ಕಾಂಪೋಂಡು ಮುಗ್ಸಿರ್ತಾರೆ” ಎಂದ ಬಾಬುರಾಮ. “ಒಳ್ಳೇದೆ ಆಯ್ತಲ್ಲ ನಿನ್ನ ಜಮೀನಿಗೆ ಪುಗ್ಸಟ್ಟೆ ಲಕ್ಷಲಕ್ಷ ಬೆಲೆಯ ಕಾಂಪೌಂಡು ಆಗ್ತದೆ” ಎನ್ನುತ್ತಾ ಕಿಟ್ಟಪ್ಪನು ಅಯೋಮಯನಾಗಿ ನಿಂತಿದ್ದವನ ಬಳಿ “ಸರಿ ಹೊಟ್ಟೆ ಹಸೀತ ಅದೆ ಒಂದೈವತ್ತು ಕೊಡು ಊಟ ಮಾಡ್ಕಂತೀನಿ” ಅಂದ. ಅವನಿಗೆ ಐವತ್ತು ತೆತ್ತು ತಾನು ಮಾತ್ರ ಹಸಿದ ಹೊಟ್ಟೆಯಲ್ಲಿ ಮನೆ ಸೇರಿದ ಬಾಬುರಾಮ.
ನಾಲ್ಕುದಿನದ ನಂತರ ಕಿಟ್ಟಪ್ಪನ ಜೊತೆಯಲ್ಲಿ ತಾಲೂಕಾಫೀಸಿಗೆ ಬಂದ ಬಾಬುರಾಮನಿಗೆ ಭಯಾನಕ ವಿಷಯವೊಂದು ಕಾದಿತ್ತು. ಅವತ್ತು ಒತ್ತಾಯಪೂರ್ವಕವಾಗಿ ಬಾಬುರಾಮನನ್ನು ಒಳಗೆ ಕರೆದುಕೊಂಡುಹೋದ ಕಿಟ್ಟಪ್ಪ ಅದಾರ ಬಳಿಯೊ “ನಾಲ್ಕು ದಿನದ ಹಿಂದೆ ಇವರ ಹೆಸರಲ್ಲಿ ಎಂಕಂಬ್ರನ್ಸ್ ಸರ್ಟಿಫಿಕೇಟ್‌ಗೆ ಅರ್ಜಿ ಕೊಟ್ಟಿದ್ದೆ. ಅದೇನಾಯ್ತು?” ಎಂದ. ಆ ಗುಮಾಸ್ತನು ಒಂದಷ್ಟು ಫೈಲುಗಳ ಒಳಗೆ ಹುಡುಕಿ ಆ ಅರ್ಜಿಯನ್ನು ಅವನಿಗೆ ವಾಪಾಸ್ ಕೊಟ್ಟ. “ಮತ್ತೆ ಎಂಕಂಬ್ರನ್ಸ್ ಸರ್ಟಿಫಿಕೇಟು?” ಎಂದು ರಾಗ ಎಳೆದದ್ದಕ್ಕೆ ಆ ಗುಮಾಸ್ತ ನಿರ್ಭಾವುಕತನ ಪ್ರದರ್ಶಿಸುತ್ತ “ಎಂತ ಎಂಕಂಬ್ರನ್ಸ್ ಕಿಟ್ಟಪ್ಪನವ್ರೆ, ಈ ಸರ್ವೆ ನಂಬರಲ್ಲಿ ಬಾಬುರಾಮ ಅನ್ನೋರಿಗೆ ಸೇರಿದ ಯಾವುದೇ ಆಸ್ತಿ ಇಲ್ಲವಲ್ಲ” ಎಂದ. ಬಾಬುರಾಮ ಬಾಂಬ್‌ದಾಳಿಗೆ ಸಿಕ್ಕವನಂತೆ ಕಂಗಾಲಾಗಿ “ಸರ್ಯಾಗಿ ಹುಡುಕಿ ಸ್ವಾಮಿ. ಆಸ್ತಿ ನಮ್ಮ ಪರಂಪರೇಲಿ ಬಂದದ್ದು. ಕಾಲದಿಂದ್ಲೂ ನಾನೇ ಗೇಯ್ಮೆ ಮಾಡ್ತಾ ಇದೀನಿ” ಅಂತ ಅಂಗಲಾಚಿದ. ಆ ಗುಮಾಸ್ತನು “ಇಲ್ಲದ್ದನ್ನು ಎಲ್ಲಿಂದಪ್ಪ ಕೊಡ್ಲಿ?” ಅಂದದ್ದೇ ತಡ ಆ ಮಾತಿಗೆ ಕಾಯುತ್ತಿದ್ದನೋ ಏನೋ ಎಂಬಂತೆ ಕಿಟ್ಟಪ್ಪನು ವೀರಾವೇಶದಿಂದ “ಅದೆಂಗೆ ಆಸ್ತಿ ಇಲ್ಲದಂಗಾಯ್ತದೆ? ನಾನೂ ನೋಡ್ತೀನಿ, ನೀವೆಲ್ಲ ಆ ಬಿಲ್ಡರನ ದುಡ್ಡು ತಿನ್‌ಕಂಡಿರದಕ್ಕೆ ಹಿಂಗೆ ಮೋಸ ಮಾಡ್ತೀರ. ನಿಮ್ಮನ್ನೆಲ್ಲ ಕೋರ್ಟ್‌ನಲ್ಲಿ ವಿಚಾರ್ಸ್ಕಂತೀನಿ. ನೀವು ಮಾಡ್ತಾ ಇರೋದು ಕ್ರಿಮಿನಲ್ಲು ಅಫೆನ್ಸು; ನೆನಪಿರಲಿ ಹುಶಾರು” ಅಂತ ಆವಾಜು ಹಾಕಿದ. ಆ ಮಾತಿಗೆ ಗುಮಾಸ್ತನಂತೂ ಪ್ರತಿಕ್ರಿಯಿಸಲೇ ಇಲ್ಲ. ಅಕ್ಕ ಪಕ್ಕದಲ್ಲಿದ್ದವರೂ ಪ್ರತಿಕ್ರಿಯಿಸಲಿಲ್ಲ. ಅಸಲಿಗೆ ಅವರೆಲ್ಲ ಕಣ್ಣು, ಕಿವಿ, ಬಾಯಿ ಮುಂತಾದ ಇಂದ್ರಿಯಗಳೇ ಇಲ್ಲದವರಂತೆ, ಆ ಘಟನೆ ನಡೆಯುತ್ತಿದ್ದ ಪ್ರಪಂಚಕ್ಕೆ ಸಂಬಂಧಿಸಿದವರೆ ಅಲ್ಲದವರಂತೆ ಮೌನಿಗಳಾಗಿದ್ದರು. ಬಾಬುರಾಮನು ಮಾತ್ರ ನಡೆದ ವಿದ್ಯಮಾನದಿಂದ ಬೆದರಿ “ಬಾ ಕಿಟ್ಟಪ್ಪ ಜಗಳಾಡ ಬ್ಯಾಡ” ಎನ್ನುತ್ತಾ ಅವನನ್ನು ಹೊರಗೆ ಎಳೆದುಕೊಂಡು ಹೋದ. “ನೀನು ಸುಮ್ಮನಿದ್ರೆ ಅವ್ರಿಗೆಲ್ಲ ಬುದ್ಧಿ ಕಲುಸ್ತಿದ್ದೆ. ನೀನೆ ಹಿಂಜರಿದೆ” ಎಂದು ತಪ್ಪನ್ನೆಲ್ಲಾ ಬಾಬುರಾಮನ ಮೇಲೆ ಹೊರಿಸುತ್ತ ಹೊರಬಂದ. ಕೊನೆಯಲ್ಲಿ ಅವನ ಮುಖದ ಮೇಲೆ ಮೂಡಿದ ಒಂದು ಕಿರುನಗುವು ಅವನು ಒಪ್ಪಿಕೊಂಡಿರಬಹುದಾದ ಯಾವುದೋ ಕುತಂತ್ರಗಾರಿಕೆಯ ಮೊದಲ ಹಂತವನ್ನು ಯಶಸ್ವಿಯಾಗಿ ಪೂರೈಸಿದ ಕುರುಹಿನಂತಿತ್ತು.
***
ಈ ನಮೂನೆಯ ಕಷ್ಟಗಳು ಬಾಬುರಾಮನೊಬ್ಬನಿಗೆ ಹುಡುಕಿಕೊಂಡು ಬಂದುದು ಎಂದು ತಿಳಿಯಬಾರದು. ಆ ಹೊಸಾ ಆರು ಲೇನುಗಳ ರಸ್ತೆ ಅಲ್ಲಿ ಹರಿದುಹೋಗುತ್ತೆ ಅಂತ ಸುದ್ದಿ ಎದ್ದಾಗಲೆ ಆ ರಸ್ತೆ ಹೋಗಬಹುದಾದ ಕಾಲ್ಪನಿಕ ರೇಖೆಯ ಆಸುಪಾಸಿನಲ್ಲಿ ಜಮೀನುಳ್ಳವರ ಮನಸ್ಸಿನಲ್ಲಿ ರಸ್ತೆಗಾಗಿ ಆಕ್ರಮಿಸಿಕೊಳ್ಳುವ ಜಮೀನಿಗೆ ಬದಲಾಗಿ ಸಿಕ್ಕುವ ಹಣದ ಬಗ್ಗೆ ನಾನಾಥರದ ಭಾವನೆಗಳು ಸುಳಿಯಲಾರಂಭಿಸಿದ್ದವು. ‘ಮಳೆ ನಂಬಿ ಬದುಕೋ ಈ ಭಂಗದ ಬ್ಯಾಸಾಯ ಯಾವನಿಗೆ ಬೇಕಾಗದೆ?’ ಅಂತ ಕೆಲವರಿಗನ್ನಿಸಿದರೆ ಕೃಷಿಯಲ್ಲಿ ನೆಮ್ಮದಿ ಕಾಣುತ್ತಿದ್ದ ಬಾಬುರಾಮನಂತಹ ಕೆಲವರು ಇರೋ ಜಮೀನು ಕಳಕೊಂಡರೆ ಮುಂದಕ್ಕೇನು ಅನ್ನೋ ಭೀತಿಗೊಳಗಾಗಿದ್ದರು. ಬದಲಾವಣೆ ಅನ್ನೋದು ಕೇವಲ ಆರು ಸಾಲಿನ ಹೈವೇಗೆ ನಿಲ್ಲುವಂತಿರಲಿಲ್ಲ. ಆ ದೊಡ್ಡ ರಸ್ತೆ, ಹತ್ತಿರದಲ್ಲೆ ರಾಜಧಾನಿ, ವಿಮಾನ ನಿಲ್ದಾಣ, ಪಕ್ಕದಲ್ಲೆ ಹರಿಯುತ್ತಿದ್ದ ಬೆಳ್ಳಿತೊರೆ ನದಿಯ ನೀರು ಇವೆಲ್ಲದರಿಂದ ಆಕರ್ಷಿತವಾದ ಕಂಪೆನಿಯೊಂದು ಅಲ್ಲಿ ಸಿರಿವಂತರ ಮನೆಯ ನೆಲಹಾಸಿಗೆ ಉಪಯೋಗಿಸುವ ಟೈಲ್ಸ್ ತಯಾರಿಸುವ ಕಾರ್ಖಾನೆ ಆರಂಭಿಸಲು ಜಮೀನು ಗುರುತಿಸಿಕೊಂಡಿತ್ತು. ವಿದೇಶೀ ಬಂಡವಾಳದ ಮೋಹದಲ್ಲಿದ್ದ ಸರ್ಕಾರವೂ ಕಂಪೆನಿಗೆ ಭೂಮಿ ಒದಗಿಸಲು ಒಪ್ಪಂದಕ್ಕೆ ಸಹಿ ಹಾಕಿದೆ ಎಂಬ ಸುದ್ದಿ ಎದ್ದ ಬೆನ್ನಲ್ಲೆ ಸರ್ಕಾರ ಪೇಪರಲ್ಲಿ ಪ್ರಕಟಣೆ ಕೊಟ್ಟಿತ್ತು. ಅನಂತರ ಜಮೀನಿನ ಪಹಣಿದಾರರಿಗೆ ನೋಟೀಸು ಜಾರಿ ಮಾಡಲಾಗಿತ್ತು. ಕೃಷಿ ಬಿಟ್ಟು ಪಟ್ಟಣ ಸೇರುವ ಉಮೇದಿನಲ್ಲಿ ರೋಮಾಂಚಿತರಾಗಿದ್ದ ರೈತರು ಸರ್ಕಾರ ಕೊಟ್ಟ ಹಣವನ್ನು ತೆಗೆದುಕೊಂಡು ಕಾಗದಪತ್ರಕ್ಕೆ ಸಹಿಹಾಕಿ ಪಟ್ಟಣದ ಬದುಕಿನ ಬೆಡಗಿನ ಕಲ್ಪನೆಯಲ್ಲಿ ರೋಮಾಂಚನಗೊಳ್ಳತೊಡಗಿದ್ದರು.
ನೆಲದಾಹಿಗಳು ತೋರಿದ ಲಕ್ಷದ ಆಮಿಷಕ್ಕೆ ಮರುಳಾಗಿ ಭೂಮಿ ಕೊಟ್ಟವರಿಗೆ ಭರವಸೆಯಂತೆ ಲಕ್ಷದ ಲೆಕ್ಕದಲ್ಲಿ ಹಣ ಸಿಕ್ಕಿದ ಉದಾಹರಣೆಯೇನೂ ಇರಲಿಲ್ಲ. ಆದರೂ ಸಾವಿರವನ್ನೆ ಸರಿಯಾಗಿ ನೋಡಿರದಿದ್ದ ಅವರಿಗೆ ಕಂತೆಕಂತೆ ನೋಟು ಸಿಕ್ಕಾಗ ಅದು ಹೇಗೆ ಕರಗಿಹೋಗುವುದು ಸಹಜವಾಗಿತ್ತೋ ಹಾಗೆ ಕರಗಿಹೋಗಿತ್ತು.
ಬಾಬುರಾಮನದ್ದು ಹಲ್ಲೆಕಟ್ಟುವುದು ಕೇವಲ ಪಾರಂಪರಿಕ ವೃತ್ತಿ. ಆಜ್ಜ ಮಾಡ್ತಾ ಇದ್ದ, ಅಪ್ಪ ಮಾಡ್ತಾ ಇದ್ದ ಎಂಬ ಏಕೈಕ ಕಾರಣಕ್ಕೆ ಅವನೂ ನಡೆಸಿಕೊಂಡು ಬಂದಿದ್ದನೇ ಶಿವಾಯ್ ಅವನಿಗೆ ಅದರಲ್ಲಿ ತನ್ಮಯತೆಯಾಗಲಿ ಆಸಕ್ತಿಯಾಗಲಿ ಇರಲಿಲ್ಲ. ಬೇಸಗೆಯಲ್ಲಿ ಕೃಷಿ ಕೆಲಸಗಳು ಇರುವುದಿಲ್ಲ ಮತ್ತು ಆ ಕಾಲದಲ್ಲಿ ಸಂತೆಗಳಲ್ಲಿ ಹಲ್ಲೆಕಟ್ಟುವ ಕೆಲಸವಿದ್ದು ಅದರಿಂದ ಅಲ್ಪಸ್ವಲ್ಪ ದುಡ್ಡು ಸಿಕ್ಕುತ್ತದೆ ಎನ್ನುವುದು ಅದನ್ನು ಮುಂದುವರಿಸಲು ಇದ್ದ ಒಂದು ಕಾರಣವಾಗಿತ್ತು. ಅವನಿಗೆ ಕೃಷಿ ಮೇಲೆ ಮೋಹ. ಅಪ್ಪನಿಂದ ಬಂದ ಒಣ ಜಮೀನನ್ನು ಹಸಿರು ಬೇಲಿ, ಹೈಬ್ರಿಡ್ ಹುಣಸೆ ಮರ, ಹಣ್ಣಿನ ಮರ ಹೀಗೆ ಹಸಿರುಮಯ ಮಾಡಿಕೊಂಡಿದ್ದ. ಈಚೆಗೆ ಹಲ್ಲೆಕಟ್ಟುವ ವೃತ್ತಿಯಲ್ಲಿ ಬೈಗುಳ ಅವಮಾನ ಹೆಚ್ಚಾಗತೊಡಗಿದ್ದರಿಂದ ಅದನ್ನು ಪೂರ್ತಿ ಬಿಟ್ಟು ಕೃಷಿಯನ್ನು ಅಭಿವೃದ್ಧಿಪಡಿಸಬೇಕೆಂದಿದ್ದ. ಅದಕ್ಕೆಲ್ಲ ಒಂದಷ್ಟು ಹಣ ಬೇಕು. ತನ್ನಂಥವನಿಗೆ ಬ್ಯಾಂಕ್ ಸಾಲ ಕೊಡೋಲ್ಲ ಅಂತ ಬೇಸರಿಸಿಕೊಂಡಿದ್ದಾಗ ಅವನ ಹೆಂಡತಿ ರಂಗವ್ವ ಪರಿಚಯದ ದಲಾಲಿರಾಮನ ಹತ್ರ ಸಾಲ ತೆಗೆಯಲು ಸಲಹೆ ನೀಡಿದ್ದಳು. ಆದರೆ, ಚಕ್ರಬಡ್ಡಿ ವಸೂಲು ಮಾಡುವುದರಲ್ಲಿ ದಲಾಲಿರಾಮ ನಿಸ್ಸೀಮ.
ಕೃಷಿಯಲ್ಲಿ ಏನೆಲ್ಲಾ ಮಾಡುವ ಆಸೆ ಇದ್ದರೂ ಬಾಬುರಾಮನಿಗೆ ಈಗ ಜಮೀನೆ ಕೈತಪ್ತಾ ಇರೋವಾಗ ಏನು ಮಾಡಿಯಾನು? ಇತ್ತೀಚೆಗೆ ಕಿಟ್ಟಪ್ಪ ಸಹಾಯ ಮಾಡ್ತೀನಿ ಅಂತ ಬರ್ತಾನೆ. ಅವನ ನಡವಳಿಕೆ ಅನುಮಾನಾಸ್ಪದ. ಆದ್ರೆ ಅವನನ್ನು ಬಿಟ್ಟರೆ ಬೆರೆ ದಿಕ್ಕು ಕಾಣಿಸ್ತಾ ಇಲ್ಲ…..
***
ಮನೆಯಿಂದ ಅವನ ತೋಟಕ್ಕೆ ಸುಮಾರು ಒಂದು ಕಿಲೋಮೀಟರ್ ಆಗುತ್ತೆ. ಹಲ್ಲೆ ಕೆಲಸ ಇಲ್ಲದ ಎಲ್ಲಾ ದಿನಗಳು ತಪ್ಪದೆ ಅವನು ತೋಟಕ್ಕೆ ಹೋಗಿ ಬರುತ್ತಾನೆ. ಆದರೆ ಈಗ ಆಕಡೆ ಹೋದರೆ ಕಳ್ಳು ಕಿತ್ತುಬಂದಂಗಾಯ್ತದೆ ಎಂದು ಹೋಗೇ ಇಲ್ಲ. ಬುಲ್ಡೊಜರ್ ಓಡಾಡಕ್ಕೆ ಅಂತ ಹಸಿರು ಬೇಲಿ ಆಗಲೆ ನಾಶ ಮಾಡಿಯಾಗಿದೆ. ಕೆಲವು ಹುಣಿಸೇಮರ ಉರುಳಿಸಿದ್ದಾರೆ. ತನ್ನ ಎಂಟು ವರ್ಷಗಳ ತಪಸ್ಸು ಈ ರೀತಿ ಯಾರದ್ದೋ ಸ್ವಾರ್ಥಕ್ಕೆ ಬಲಿಯಾಗಿದ್ದು ನೋಡುವಾಗ ಅವನ ಕಣ್ಣಲ್ಲಿ ನೀರು ಬರುತ್ತದೆ. ಇವತ್ತು ಟೌನುಶಿಪ್‌ನ ಯಜಮಾನ ಅಲ್ಲಿಗೆ ಬರ್ತಾನೆ ಅನ್ನೋ ಸುದ್ದಿ ಇತ್ತು. ಅವರನ್ನ ಎದುರಿಸೋ ತಾಕತ್ತು ತನಗಿಲ್ಲ. ಕನಿಷ್ಠ ಕೈಕಾಲು ಹಿಡಿದಾದ್ರೂ ಬೇಡಬೇಕು ಅಂತ ಸರಸರ ಹೆಜ್ಜೆಹಾಕುತ್ತಾ ತನ್ನ ತೋಟದ ಬಳಿ ಬಂದಾಗ ಕಾಂಪೌಂಡ್ ಪಕ್ಕದಲ್ಲಿ ಮಾಡುತ್ತಿದ್ದ ರಸ್ತೆಯಲ್ಲಿ ಯಜಮಾನನ ಕಾರು ನಿಂತದ್ದು ಕಾಣಿಸಿತು. ಬಾಬುರಾಮ ಹತ್ತಿರ ಹೋಗೋವಷ್ಟರಲ್ಲಿ ಕಿಟ್ಟಪ್ಪ ಕಾರಿನಿಂದ ಇಳಿದ! ಅವನ ಹಿಂದೆ ಯಜಮಾನ ಸಹಾ ಇಳಿದ. ಅವರಿಬ್ಬರನ್ನೂ ಒಟ್ಟಿಗೆ ನೋಡಿ ಬಾಬುರಾಮ ದಿಗ್ಭ್ರಾಂತನಾದ. ಯಜಮಾನನ ಕೈ ಕುಲುಕಿದ ಕಿಟ್ಟಪ್ಪ ಅವನು ಕೊಟ್ಟದ್ದೇನೋ ಜೇಬಿನಲ್ಲಿಟ್ಟುಕೊಂಡು ಹಲ್ಕಿರಿದ, ಕಾರು ಹೊರಟುಹೋಯ್ತು. ಓಡು ನಡಿಗೆಯಲ್ಲಿ ಬಂದ ಬಾಬುರಾಮನನ್ನು ಆವಾಗಷ್ಟೆ ಗಮನಿಸಿದ ಕಿಟ್ಟಪ್ಪ ಮಿಣ್ಣಗೆ ನಕ್ಕ.
`’ಆ ಕಾರಿನವ ಊರಿಗೇ ಶತ್ರು, ಅವಂತಾವೇನ್ಲಾ ಕಿಟ್ಟಪ್ಪ ನಿಂದು ವ್ಯವಹಾರ?” ಬಾಬುರಾಮ ಗರಂ ಆಗಿ ಕೇಳಿದ್ದಕ್ಕೆ “ನಿನ್ನ ಕೆಲಸಕ್ಕೆ ಬಂದಿದ್ದೆ ಕಣಲಾ ಬಾಬುರಾಮ” ಎಂಬ ಕಿಟ್ಟಪ್ಪನ ಮಾತು ಕೇಳಿ ಬೆರಗಾದ ಬಾಬುರಾಮ “ಮತ್ತೆ ಅವಂಜೊತೆ ನಗಾಡ್ತಾ ಮಾತಾಡ್ತಿದ್ದೆ, ಕೈ ಕುಲುಕ್ದೆ, ಆವಯ್ಯ ಕೊಟ್ಟದ್ದೇನೋ ಜೇಬಲ್ಲಿಟ್ಟುಕೊಂಡೆ. ಅವಂತಾವ ದುಡ್ಡು ಈಸ್ಕೊಂಡ್ಯ?” ಎಂದು ಅರ್ಧ ಆತಂಕ ಅರ್ಧ ಕೋಪದಿಂದ ಕೇಳಿದಕ್ಕೆ “ನನ್ನ ಜೇಬಲ್ಲಿಟ್‌ಕಂಡದ್ದು ನನ್ ಮೊಬೈಲು ಕಣಲ ನೋಡು ಬೇಕಾದ್ರೆ” ಎನ್ನುತ್ತಾ ಕಿಟ್ಟಪ್ಪ ಜೇಬಿನಿಂದ ಮೊಬೈಲು ತೆಗೆದು ತೋರಿಸಿದ. ಆದರೂ ಅವನ ಪ್ಯಾಂಟಿನ ಜೇಬು ನೋಟಿನ ಕಂತೆ ಇರುವಂತೆ ಉಬ್ಬಿಕೊಂಡಿತ್ತು. ಅದನ್ನು ನೋಡುತ್ತಾ ಮತ್ತಷ್ಟು ಅನುಮಾನಕ್ಕೊಳಗಾದ. ಊರಕಡೆ ನಡೀತಾ ಹೋಗುವಾಗ ಕಿಟ್ಟಪ್ಪನು ದಾರಿಯಲ್ಲಿ ಸಿಕ್ಕ ಗ್ರಾಮದೇವತೆ ರಕ್ತೇಶ್ವರಿಯ ನ್ಯಾಯದ ಕಟ್ಟೆಯ ಮೇಲೆ ಕೂತುಕೊಂಡು ಹೇಳಿದ “ನೋಡಲ ಬಾಬುರಾಮ ಇದು ರಕ್ತೇಶ್ವರಿ ಅಮ್ಮನ ನ್ಯಾಯದ ಕಟ್ಟೆ, ಈ ಸತ್ಯದ ಕಟ್ಟೆ ಮೇಲೆ ಕೂತು ಸುಳ್ಳು ಹೇಳಿದ್ರೆ ಆ ಅಮ್ಮ ರಕ್ತ ಕಾರಿ, ಬಲಿ ತಗಂತಾಳೆ. ಇದ್ರ ಮೇಲೆ ಕೂತು ಯಾವನಿಗೂ ಸುಳ್ಳು ಹೇಳಕ್ಕೆ ಸಾಧ್ಯ ಇಲ್ಲ. ನಾನು ನಿನ್ನ ತೋಟವ ಬಿಡಿಸಿಕೊಡೋಕೆ ಅಂತ್ಲೆ ಹೋದದ್ದು. ಅಂತಾವ್ರ ಜೊತೆ ಜಗಳಾಡಿದ್ರೆ ಕೆಲ್ಸ ಆಯ್ತದ? ಅದಕ್ಕೆ ಕಾರೊಳಗೆ ಕುಂತು ನಾನು ಲಾ ಪಾಯಿಂಟು ಹಾಕಿ ಮಾತಾಡಿದೆ. ಬಡವರ ಜಮೀನು ನುಂಗಕ್ಕೆ ನಿಮಗೇನು ಅಧಿಕಾರ ಇದೆ? ಅಂತ ಕೇಳಿದೆ. ನಿಮ್ಮ ಅನ್ಯಾಯ ದಬ್ಬಾಳಿಕೇನೆಲ್ಲ ರೈಟ್ ಟು ಇನ್ಫಾರ್ಮೇಶನ್ ಕಾನೂನಲ್ಲಿ ಅರ್ಜಿಹಾಕಿ ತೆಗೆಸ್ತೇನೆ ಅಂತ ನಾನು ತಯಾರು ಮಾಡಿರೋ ಆರ್‌ಟಿಐ ಅರ್ಜಿ ತೋರುಸ್ದೆ. ಸ್ವಲ್ಪ ಹೆದರಿದ ಗೊತ್ತ. ಯಾರಿಗೂ ಅನ್ಯಾಯವಾಗದ ಹಾಗೆ ಏನಾರ ಮಾಡನ ಮಿಸ್ಟರ್ ಕೃಷ್ಣಮೂರ್ತಿ ಅಂತ ಕೈಕುಲುಕಿ ಹೊರಟು ಹೋದ” ಎಂದು ವರ್ಣಿಸಿ ತನ್ನ ಮಾತುಗಾರಿಕೆ ಎದುರಿದ್ದವನ ಮೇಲೆ ಹೇಗೆ ಪ್ರಭಾವ ಬೀರಿರಬಹುದು ಎಂದು ತರ್ಕಿಸುತ್ತ, ಧ್ವನಿಯಲ್ಲಿ ಮತ್ತಷ್ಟು ಆವೇಶವನ್ನು ತುಂಬಿಕೊಳ್ಳುತ್ತಾ “ಬೆಣ್ಣೆಯಂಗೆ ಮಾತಾಡೋ ಅಂತ ಖತರ್ನಾಕು ಶ್ರೀಮಂತರನ್ನ ನಂಬೋಕಾಗ್ದು. ನಾವು ಡೀಸೀ ಸಾಹೇಬ್ರಿಗೆ ಅರ್ಜಿ ಕೊಡಣ. ಅದೆಂಗೆ ಅವನು ನಿನ್ನ ಆಸ್ತಿ ದಕ್ಕುಸ್ಕತಾನೆ ನೋಡನ” ಎಂದು ತನ್ನ ದಸ್ತಾವೇಜು ಕಟ್ಟಿನಿಂದ ಒಂದು ಪತ್ರ ತೆಗೆದು ಬಾಬುರಾಮನ ಮುಂದೆ ಹಿಡಿದು “ಇದ್ರಲ್ಲಿ ಸೈನು ಮಾಡು” ಎಂದ.
ಅವನ ಮಾತನ್ನು ನಂಬಬಹುದೋ ಅಥವಾ ಇದು ಇನ್ನಾವುದಾದರೂ ಮೋಸದ ಮುನ್ನುಡಿಯೋ ಎಂದು ಅನುಮಾನದಿಂದ ನೋಡಿದ ಬಾಬುರಾಮ.
“ನಾವು ಕೂತಿರಾದು ರಕ್ತೇಶ್ವರಿ ಅಮ್ಮನ ನ್ಯಾಯದ ಕಟ್ಟೆ ಮೇಲೆ. ಇಲ್ಲಿ ಕೂತು ಯಾವನೂ ಮೋಸ ಅಧರ್ಮದ ಮಾತಾಡಕ್ಕಾಗಲ್ಲ. ಅನುಮಾನ ಇದ್ರೆ ಓದ್ಕ, ಕನ್ನಡದಲ್ಲೆ ಐತೆ” ಎಂದ ಕಿಟ್ಟಪ್ಪ.
ನಿಧಾನಕ್ಕಾದರೂ ಕನ್ನಡ ಓದಬಲ್ಲಷ್ಟು ವಿದ್ಯಾವಂತನಾಗಿದ್ದ ಬಾಬುರಾಮ ನಿಧಾನಕ್ಕೆ ಪದಗಳನ್ನು ಜೋಡಿಸುತ್ತಾ ಓದಿಕೊಂಡ. ಒಂದು ಪೇಜಿನಷ್ಟಿದ್ದ ಅರ್ಜಿಯಲ್ಲಿ ಅವನಿಗಾಗಿರುವ ಅನ್ಯಾಯ ವಿವರಿಸಲಾಗಿತ್ತು. ಅನ್ಯಾಯ ಸರಿಪಡಿಸಲು ಹೋರಾಟಕ್ಕೆ ಅಗತ್ಯವಾದ ಮಾಹಿತಿ ನೀಡುವಂತೆ ಕೋರಲಾಗಿತ್ತು. ಅದರಲ್ಲಿ ತನಗೆ ವಿರುದ್ಧವಾದದ್ದು, ಅನಾಹುತಕಾರಿಯಾದದ್ದು ಏನೂ ಇಲ್ಲ ಎನ್ನಿಸಿ ಬಾಬುರಾಮ ಸಹಿ ಹಾಕಲು ಪೆನ್ನು ಈಸ್ಕೊಂಡ. “ಅಲ್ಲಿ ಸ್ವಲ್ಪ ಕೆಳಗೆ ಅಲ್ಲಿ ಖಾಲಿ ಜಾಗ ಇದ್ಯಲ್ಲ ಅಲ್ಲಿ ಹಾಕು” ಎನ್ನುತ್ತಾ ತನಗೆ ಬೇಕಾದಲ್ಲಿ ಸಹಿ ಹಾಕಿಸಿಕೊಂಡ ಕಿಟ್ಟಪ್ಪ ಅದು ಅಮೂಲ್ಯವಾದ ವಸ್ತುವೆನ್ನುವಂತೆ ಹುಷಾರಾಗಿ ತನ್ನ ಕಡತದಲ್ಲಿಟ್ಟ. ಅವನ ತುಟಿಯಂಚಿನಲ್ಲಿ ಮತ್ತೊಮ್ಮೆ ವಿಜಯದ ನಗು ಮೂಡಿತು.
***
ಅಷ್ಟೆ!
ಅದಾದಮೇಲೆ ಕಿಟ್ಟಪ್ಪನು ಬಾಬುರಾಮನ ಕಣ್ಣಿಗೆ ಬೀಳುವುದೇ ನಿಂತುಹೋಯಿತು. ಬಹುಶಃ ಕಿಟ್ಟಪ್ಪನ ಆ ಅದೃಶ್ಯತೆಯು ಬಿಲ್ಡರ್ ಸಾಹುಕಾರ, ಕಿಟ್ಟಪ್ಪ ಮತ್ತು ಇತರ ಹಲವು ಅಧಿಕಾರಿಗಳು ಸೇರಿ ಬಾಬುರಾಮನ ಸುತ್ತ ಹೆಣೆಯುತ್ತಿದ್ದ ಒಂದು ಸಂಚಿನ ಭಾಗವಾಗಿರಬಹುದು. ಆದರೆ ಅದೊಂದೂ ಬಾಬುರಾಮನ ಅರಿವಿನ ಆಳಕ್ಕೆ ಸಿಕ್ಕುತ್ತಿರಲಿಲ್ಲ. ಆಮೇಲೆ ಒಂದು ಹದಿನೈದಿಪ್ಪತ್ತು ದಿನಗಳ ನಂತರ ಒಂದು ದಿನ ಕಿಟ್ಟಪ್ಪನನ್ನು ಹುಡುಕಿಕೊಂಡು ಅವನಿರಬಹುದಾದ ಡೀಸಿ ಆಫೀಸು, ತಾಲೂಕಾಫೀಸು, ಕೋರ್ಟು ಹೀಗೆ ಅಲೆಯುತ್ತಿರುವಾಗ ಡೀಸಿ ಸಾಹೇಬರ ಕಛೇರಿ ಆವರಣದಲ್ಲಿ ಪರಿಚಿತರಿಗೆ ತನ್ನ ಹೊಸ ಬೈಕನ್ನು ತೋರಿಸುತ್ತಾ ಅದರ ಇಂಜಿನು, ಬಣ್ಣ, ಹಾರ್ಸುಪವರ್ರು, ಮೈಲೇಜು ಇತ್ಯಾದಿಗಳನ್ನು ತನ್ನ ಬೈಕಿನಲ್ಲಿ ಮಾತ್ರ ಇದೆಯೇನೋ ಎಂಬಷ್ಟು ಪ್ರೌಢತೆಯಿಂದ ವರ್ಣಿಸುತ್ತಿದ್ದ ಕಿಟ್ಟಪ್ಪ ಕಾಣಿಸಿದ. ತನ್ನನ್ನು ಗಮನಿಸದವನಂತೆ ಹೊರಟವನನ್ನು ಕೋಪದಿಂದ ತಡೆದು ನಿಲ್ಲಿಸಿದಾಗ ಕಿಟ್ಟಪ್ಪನು ಕೋಪೋದ್ರಿಕ್ತನಾಗಿ ನೋಡುತ್ತ “ನಿನ್ನಂಥ ಹಲ್ಕಾಗಳಿಗೆ ಸಹಾಯ ಮಾಡಕ್ಕೆ ಬರ್ತೀವಲ್ಲ ನಮ್ಮ ಕೆರದಲ್ಲಿ ನಾವೆ ಹೊಡ್ಕಬೇಕು ಕಣಲ, ನಿಂಗೆ ಸಹಾಯ ಮಾಡಕ್ಕೋಗಿ ನನ್ನ ಮರ್ಯಾದೆ ಹೋಯ್ತು. ಇನ್ನೊಂದ್ಸಾರಿ ಜಮೀನು ವಿಷಯಕ್ಕೆ ಸಹಾಯ ಕೇಳ್ಕಂಡು ನನ್ನತ್ರ ಬರ್ಬ್ಯಾಡ” ಎಂದು ಏರುಸ್ವರದಲ್ಲಿ ಕೂಗಾಡಿದ.
ಅವನ ಉಗ್ರ ಮಾತುಗಳಿಗೆ ಬೆರಗಾದ ಬಾಬುರಾಮ ಈವಯ್ಯನ್ನ ನಾನ್ಯಾವತ್ತೂ ಸಹಾಯ ಮಾಡು ಅಂತ ಕೇಳಲೇ ಇಲ್ಲ. ಅವನಾಗಿ ಅವನೆ ಸಹಾಯ ಮಾಡ್ತೀನಿ ಅಂತ ಬಂದ, ತನಗೂ ಗೊತ್ತಾಗದಂಗೆ ಬಿಲ್ಡರನ ಹತ್ರ ಮಾತಾಡ್ತಾ ಇದ್ದ. ಈಗ ತನ್ನನ್ನೆ ಬೈತಾ ಇದ್ದಾನೆ. ಯಾಕೆ ಏನು ಒಂದೂ ಅರ್ಥವಾಗದೆ “ಯಾಕ್ಲ ಕಿಟ್ಟಪ್ಪ, ಏನಾತು?” ಎಂದು ಅಯೋಮಯನಾಗಿ ಕೇಳಿದ.
ಕಿಟ್ಟಪ್ಪನು ತನ್ನ ಕಡತದಿಂದ ಯಾವುದೋ ಡಾಕ್ಯುಮೆಂಟಿನ ಜೆರಾಕ್ಸು ತೆಗೆದು ಅವನ ಮುಖಕ್ಕೆ ಹಿಡಿದು “ನೋಡಿಲ್ಲಿ ನಿನ್ನ ತೋಟನ ಯಾರೋ ಯೋಗೀಶಪ್ಪ ಅನ್ನೋನಿಗೆ ಹತ್ತುವರ್ಷದ ಹಿಂದೆ ಬರ್ದುಕೊಟ್ಟಿದೀಯ. ಅವರು ಆ ಜಮೀನನ್ನ ಆ ಬಿಲ್ಡರನಿಗೆ ಮಾರಿದಾನೆ. ದಾಖಲೆ ಎಲ್ಲ ಸರ್ಯಾಗೆ ಅವೆ. ಅದಕ್ಕೇ ಅವತ್ತು ನಿನ್ ಜಮೀನಿಂದು ಎಂಕಂಬ್ರನ್ಸ್ ಕೇಳಕ್ಕೆ ಹೋದಾಗ ಅಲ್ಲಿ ನಿನ್ನ ಜಮೀನೇ ಇಲ್ಲ ಅಂದದ್ದು. ಹತ್ವರ್ಸದ ಹಿಂದೆ ಯಾರ್ಗೋ ಜಮೀನು ಮಾರಿ, ದುಡ್ಡು ತಿಂದು ಈಗ ಮಿಣ್ಣಗೆ ನನ್ ತೋಟ ನನ್ ಜಮೀನು ಅಂತ ಹೇಳ್ತೀಯಲ್ಲ ನಾಚ್ಕೆ ಆಗಲ್ವ?” ಅಂತ ಕೂಗಾಡಿದ.
ಅವನ ಆರ್ಭಟದಿಂದ ಆಕರ್ಷಿತರಾದ ಹಲವಾರು ಕದನಕುತೂಹಲಿಗಳು ಆಗಲೆ ಅವರಿಬ್ಬರ ಸುತ್ತ ಜಮಾಯಿಸಿದ್ದರು. ಭಯ ಮತ್ತು ನಾಚಿಕೆಯಿಂದ ಕುಗ್ಗಿಹೋದ ಬಾಬುರಾಮ “ದೇವ್ರಾಣೆ ಕಿಟ್ಟಪ್ಪ, ನಾನು ನನ್ ತೋಟ ಯಾರ್ಗೂ ಮಾರಾಟ ಮಾಡಿಲ್ಲ” ಎಂದು ದಯನೀಯವಾಗಿ ಹೇಳಿದಾಗ “ಹಂಗಾದ್ರೆ ಈ ಸೈನು ನಾನು ಪೋರ್ಜರಿ ಮಾಡಿದ್ದ?” ಅಂತ ಜೆರಾಕ್ಸನ್ನು ತೋರಿಸಿದ “ಈ ಕಡೆ ಬಿಕ್ಕಲಮ್ಮಿನಲ್ಲಿ ಸಾಕ್ಷಿ ಹಾಕಿದ್ದು ಯಾರು? ಅವನನ್ನೆ ಕೇಳು. ಇನ್ನು ಈ ವಿಷಯ ಹಿಡಕಂಡು ನನ್ನ ಹತ್ರ ಬರ್ಬ್ಯಾಡ. ಈ ವಿಚಾರಕ್ಕೂ ನನಗೂ ಯಾವ್ದೆ ಸಂಬಂದ ಇಲ್ಲ” ಅಂತ ಕಿಟ್ಟಪ್ಪ ತನ್ನ ಹೊಸ ಬೈಕು ಏರಿಕೊಂಡು ಹೊರಟೇಹೋದ.
ಇವರೆಲ್ಲರೂ ತೋಡಿದ ಹಳ್ಳಕ್ಕೆ ತಾನು ಬಿದ್ದೆನೆ ಅನ್ನಿಸುವಾಗ ಬಾಬುರಾಮ ಕಂಗಾಲಾದ. ಇಂಥಾ ಮಧ್ಯವರ್ತಿಗಳನ್ನು ನಂಬಿಕೊಂಡ್ರೆ ನನ್ನ ಕೊಂದಾಕಿಬಿಡ್ತಾರೆ. ನಾನೆ ಡೀಸಿ ಸಾಹೇಬ್ರ ತಾವ ಹೋಗಿ ಕೈಮುಗ್ದು ನ್ಯಾಯ ಕೇಳಬೇಕು ಅನ್ನಿಸಿ ಆ ದೊಡ್ಡ ಭವನದ ನಾಲ್ಕನೆ ಮಹಡಿಯಲ್ಲಿದ್ದ ಡೀಸಿ ಸಾಹೇಬರ ಕಛೇರಿಗೆ ಲಿಫ್ಟ್ ಎನ್ನುವ ಯಂತ್ರವೊಂದಿದೆ ಎಂದರಿಯದ ಬಾಬುರಾಮ ಹತ್ತಿಕೊಂಡೇ ಹೋದ. ತನ್ನ ಜೀವನದ ಗತಿ ಏನಾಗುತ್ತಿದೆಯೋ ಎಂದು ತಿಳಿಯದ ಆತಂಕದಲ್ಲಿ ಮನೆಯಿಂದ ತಿಂಡಿಯನ್ನೂ ತಿನ್ನದೆ ಧಾವಿಸಿಬಂದಿದ್ದ ಅವನು ಹೊಟ್ಟೆ ಹಸಿವು ನಿತ್ರಾಣ ಉದರದೊಳಗಿನ ಉರಿಯಿಂದ ಹೈರಾಣಾಗಿ ಹೋಗಿದ್ದ. ಕಛೇರಿಯಲ್ಲಿ ಸಾಹೇಬರು ಇರಲಿಲ್ಲವಾಗಿ ಜನಜಂಗುಳಿ ಇರಲಿಲ್ಲ. ಸ್ವಲ್ಪ ಅಂಜಿಕೆಯಿಂದಲೆ ಒಳಗೆ ಪ್ರವೇಶಿಸಿ ಅಲ್ಲಿದ್ದ ಸ್ವಾಗತಕಾರಿಣಿಯ ಎದುರು ಕೆಲವು ದಿನದ ಹಿಂದೆ ತಾನೊಂದು ಅರ್ಜಿ ಸಾಹೇಬ್ರಿಗೆ ಕಳಿಸಿಕೊಟ್ಟಿದ್ದೆ. ಅದನ್ನು ಸಾಹೇಬ್ರು ನೋಡಿದಾರ ಅಂತ ಕೇಳಿದ. ಏನೋ ಸಹನೆಯಿಂದಿದ್ದ ಆ ಹೆಂಗಸು ಆತನ ಹೆಸರು ವಿಷಯ ಎಲ್ಲ ಕೇಳಿ ಇನ್ವರ್ಡ್ ರಿಜಿಸ್ಟರ್ ಪರಿಶೀಲಿಸಿ ಕಳೆದ ಒಂದು ತಿಂಗಳಲ್ಲಿ ಬಾಬುರಾಮ ಎನ್ನುವ ಹೆಸರಲ್ಲಿ ಯಾವುದೇ ಅರ್ಜಿ ಬರಲಿಲ್ಲ ಅಂತ ಹೇಳಿದಳು.
ಈಗ ಬಾಬುರಾಮ ತೀರಾ ಹತಾಶನಾದ. ಹಂಗಾದ್ರೆ ಕಿಟ್ಟಪ್ಪ ತನ್ನ ಅರ್ಜಿ ಇಲ್ಲಿ ಕೊಟ್ಟೇ ಇಲ್ಲ. ತಾನು ರುಜು ಮಾಡಿದ್ದು ಯಾತಕ್ಕೆ? ಕಿಟ್ಟಪ್ಪ ತೋರಿಸಿದ ತನ್ನ ಜಮೀನು ಮಾರಾಟದ ಪತ್ರದಲ್ಲಿ ಇದ್ದದ್ದು ತನ್ನ ಪೋರ್ಜರಿ ರುಜು ಇರಬಹುದು. ಅಂಥದ್ದೊಂದು ಪೋರ್ಜರಿಯ ಉದ್ದೇಶಕ್ಕೆ ಕಿಟ್ಟಪ್ಪ ಮಾದರಿಗಾಗಿ ತನ್ನ ಸಹಿ ಪಡೆದಿರಬಹುದು ಎನ್ನಿಸಿ ದಿಗಿಲಾಯಿತು. ಅದು ಸುಳ್ಳು ಪತ್ರ ಎನ್ನುವುದು ತನಗೆ ಗೊತ್ತು. ಆದರೆ ಅದು ಸುಳ್ಳು ಎಂದು ಸಾಧಿಸಲು ತನ್ನಿಂದ ಸಾಧ್ಯವಿಲ್ಲ. ಹೊರಗೆ ಬಂದು ನಾಲ್ಕನೆ ಮಹಡಿಯ ಕಾರಿಡಾರಿನ ಕಟಾಂಜನಕ್ಕೆ ಒರಗಿನಿಂತ. ಹಸಿವೆ ಬಾಯಾರಿಕೆ ಭಯ ಆತಂಕಗಳಿಂದ ತಲೆಸುತ್ತುವ ಅನುಭವವಾಗತೊಡಗಿತು. ಕಿಟ್ಟಪ್ಪ ಕಾರಿನವನ ಜೊತೆ ಕೈಕುಲುಕಿ ಮಾತಾಡಿದ್ದು, ತಾನು ಸಹಿ ಮಾಡಿದ್ದು, ತನ್ನ ಹೆಸರಲ್ಲಿದ್ದ ಮಾರಾಟದ ಪೇಪರು ಕೊನೆಗೆ ಕಿಟ್ಟಪ್ಪನ ಹೊಸ ಮೋಟಾರುಬೈಕು ಎಲ್ಲಕ್ಕೂ ಒಂದಕ್ಕೊಂದು ಖಚಿತ ಸಂಬಂಧವಿದೆ ಎನ್ನಿಸಿತು. ತಾಲೂಕಾಫೀಸಿನ ಗುಮಾಸ್ತ, ಕಿಟ್ಟಪ್ಪ, ಕಾರಿನವ ಎಲ್ಲರೂ ಸಂಚುಮಾಡಿ ತನ್ನ ಆಸ್ತಿ ಕಬಳಿಸಿದ್ದು ನಿಚ್ಚಳವಾಯ್ತು. ದೇವರೇ ತನ್ನ ಗತಿ? ತಾನು ಬಿಡಬೇಕೆಂದು ಬಯಸುತ್ತಿದ್ದ ದನಗಳ ಹಲ್ಲೆಕಟ್ಟುವ ಕಾಯಕವೆ ಜನ್ಮೇಪಿ ತನಗೆ ಅನ್ನಕ್ಕೆ ಗತಿಯೆ? ಅದನ್ನೆ ಮುಂದುವರಿಸಬೇಕೆ? ಎಂದುಕೊಳ್ಳುವಾಗ ಅದುವರೆಗಿನ ಎಲ್ಲ ಘಟನಾವಳಿಗಳು ಮತ್ತು ಹಸಿವಿನ ಕಾರಣ ತಲೆ ಸುತ್ತತೊಡಗಿ ಹಿಡಿದುಕೊಂಡಿದ್ದ ಆಧಾರ ಕೈತಪ್ಪಿ ನಾಲ್ಕನೆ ಮಹಡಿಯಿಂದ ಕೆಳಗುರುಳಿ ಬಿದ್ದು ಬಾಬುರಾಮ ಸತ್ತ. ಜನ ಮುತ್ತಿಕೊಳ್ಳತೊಡಗಿದರು.
***
ಗಂಡ ಡೀಸಿ ಸಾಹೇಬ್ರ ಆಫೀಸಿಂದ ಕೆಳಗೆ ಬಿದ್ದು ಸತ್ತ ಸುದ್ದಿ ಕೇಳಿದ ರಂಗವ್ವ ಮಗನನ್ನು ಜೊತೆಯಲ್ಲಿ ಕರೆದುಕೊಂಡು ಬಾಯಿಬಡಿದುಕೊಳ್ಳುತ್ತ ದಿಗ್ಭ್ರಮೆ, ಭಯ ಮತ್ತು ಆತಂಕದಿಂದ ಓಡಿಕೊಂಡು ಬಾಬುರಾಮನ ಶವವಿದ್ದ ಜಾಗಕ್ಕೆ ಬರುವವೇಳೆಗೆ ಹೆಣದ ಸುತ್ತ ಒಂದು ಕ್ರೂರ ನಾಟಕಕ್ಕೆ ರಂಗಮಂಚವು ಅದಾಗಲೆ ತಯಾರಾಗಿತ್ತು. ಅಲ್ಲಾಗಲೆ ಹಲವಾರು ಪಾತ್ರಧಾರಿಗಳು ರಾಕ್ಷಸ, ಹುಲಿವೇಷ, ವಿದೂಷಕ, ಇತ್ಯಾದಿ ವೇಷ ಧರಿಸಿ ನಾಟಕವನ್ನು ಕಳೆಗಟ್ಟಿಸಲು ತಯಾರಾಗಿ ನಿಂತಿದ್ದರು. ಕೆದರಿದ ಕೂದಲು ಅಸ್ತವ್ಯಸ್ತ ಉಡುಪಿನೊಡನೆ ಮೈಮೇಲಿನ ಖದರು ಇಲ್ಲದೆ ಓಡಿಬಂದವಳ ಅಂಗಸೌಷ್ಟವವನ್ನು ದಿಟ್ಟಿಸುತ್ತ ಕಣ್ತುಂಬಿಸಿಕೊಳ್ಳುತ್ತಾ “ಬಾವ್ವ ಬಾ… ನೋಡಿಲ್ಲಿ ನಿನ್‌ಗಂಡ ಯಂತ ಕೆಲ್ಸವ ಮಾಡ್ಕಂಬಿಟ್ಟೌನೆ?” ಅಂತ ಸ್ವಾಗತಿಸಿದವನೆ ದಲಾಲಿರಾಮ. ಅವನ ಪಕ್ಕದಲ್ಲೆ ಹೊಸ ಮೋಟಾರ್‌ಬೈಕ್ ಮೇನ್‌ಸ್ಟಾಂಡಾಕಿ ನಿಲ್ಲಿಸಿ ಅದಕ್ಕೆ ತಾಗಿಕೊಂಡೆ ನಿಂತಿದ್ದ ಕಿಟ್ಟಪ್ಪ “ನೋಡಕ್ಕ ಆಸ್ತಿ ವಿಚಾರಕ್ಕೆ ಹಿಂಗ ಮಾಡ್ಕಳಾದು? ಅದೆಲ್ಲ ಸರಿ ಮಾಡ್ಕೊಡಕ್ಕೆ ನಾವೆಲ್ಲ ಕಾನೂನು ಗೊತ್ತಿದ್ದೋರು ಇರಲಿಲ್ವ?” ಅಂತ ಸಮಾಧಾನ ಮಾಡಲು ಪ್ರಯತ್ನಿಸಿದ. ಪರಿಚಿತರು ಅಪರಿಚಿತರು ಹೀಗೆ ಅಲ್ಲಿದ್ದವರೆಲ್ಲ ತಲೆಗೊಂದರಂತೆ ಮಾತಾಡುತ್ತಿದ್ದರೂ ಅದನ್ನು ಗಮನಿಸದೆ ರಂಗವ್ವ ತಲೆ ಚಚ್ಚಿಕೊಳ್ಳುತ್ತ ಗಂಡನ ಶವದ ಎದುರು ಕುಳಿತುಕೊಂಡು ಗೋಳಾಡತೊಡಗಿದಳು. ಅದಾವ ಮಾಯಕದಲ್ಲೋ ದಲಾಲಿರಾಮನೂ ಸಹ ಆಕೆಯ ಪಕ್ಕ ಮೈಗೆ ಮೈ ತಾಗುವಂತೆ ಆಸೀನನಾಗಿ ಸ್ಪರ್ಷಮಾತ್ರದಿಂದ ಪುಳಕಿತನಾಗುತ್ತ ಆಕೆಯನ್ನು ಸಂತೈಸುವ ನೆವದಲ್ಲಿ ಬೆನ್ನು ಸವರುತ್ತ ಸಮಾಧಾನಪಡಿಸುವ ನಾಟಕವಾಡತೊಡಗಿದ. ಅತ್ತೂಅತ್ತೂ ಶಕ್ತಿಗುಂದುವಂತಾದಾಗ ರಂಗವ್ವ ಪಕ್ಕದಲ್ಲಿದ್ದ ರಾಮ ಮತ್ತು ಎದುರಿದ್ದ ಕಿಟ್ಟಪ್ಪ ಇತ್ಯಾದಿ ಪರಿಚಿತರನ್ನು ಕಂಡು ‘`ಬನ್ರಣ್ಣ ದೇಹವ ಹಳ್ಳಿಗೆ ಸಾಗ್ಸುವ” ಅಂದಳು.
ಕೂಡಲೆ ಅಲ್ಲಿದ್ದ ಜುಬ್ಬಾಧಾರಿಯೊಬ್ಬನು ತನ್ನ ಗಡ್ಡವ ಸವರಿಕೊಳ್ಳುತ್ತ `’ಅದೆಂಗಾಯ್ತದೆ ತಾಯಿ? ಶವನ ಇಲ್ಲಿಂದ ಕದಲಿಸೊ ಹಂಗಿಲ್ಲ. ಇದು ಅಧಿಕಾರಿಗಳ ನಿರ್ಲಕ್ಷ್ಯ, ದುಡ್ಡಿದ್ದವರ ದೌರ್ಜನ್ಯದಿಂದಾಗಿರುವ ಸಾವು. ಇದನ್ನೆಲ್ಲ ಹಂಗೆ ಬಿಡುವಂತಿಲ್ಲ. ಇದಕ್ಕೆಲ್ಲ ಕಾರಣರಾಗಿರುವ ಡೀಸಿ ಸಾಹೇಬರು, ಎಂಎಲ್‌ಎ ಸಾಹೇಬರೂ ಇಲ್ಲಿಗೆ ಬರಬೇಕು. ಅಲ್ಲಿವರೆಗೂ ಶವ ತೆಗೆಯಲು ನಾವು ಬಿಡುವುದಿಲ್ಲ” ಎಂದು ಘೋಷಿಸಿದ. ಅವನ ಬೆನ್ನಿಗಿದ್ದ ಹಲವು ಹಿಂಬಾಲಕರು `’ಹೌದು….. ಹೌದು ಹೆಣ ಎತ್ತಬಾರದು” ಎನ್ನುತ್ತಾ ಬಾಬುರಾಮನ ಪಾರ್ಥಿವ ಶರೀರದ ಅಕ್ಕಪಕ್ಕ ಕುಳಿತುಬಿಟ್ಟರು. ಇತ್ತ ರಂಗವ್ವ ತನ್ನ ಗಂಡನ ಹೆಣವನ್ನು ಮಣ್ಣು ಮಾಡಲು ಬಿಡದ ಯಾವುದೋ ಅಪರಿಚಿತರ ಹುನ್ನಾರಕ್ಕೆ ದಿಗ್ಭ್ರಮೆಗೊಂಡು ಏನುಮಾಡುವುದೆಂದು ತೋಚದೆ ದಲಾಲಿ ರಾಮ ಮತ್ತು ಕಿಟ್ಟಪ್ಪನತ್ತ ಕರುಣಾಜನಕವಾಗಿ ನೋಡಿದಳು. ದಲಾಲಿರಾಮನು “ನಾವಿದೀವಿ ಹೆದ್ರಬ್ಯಾಡ” ಎನ್ನುತ್ತಾ ಮತ್ತಷ್ಟು ಒತ್ತಿ ಕುಳಿತ.
ಡೀಸಿ ಆಫೀಸಿನ ಕಟ್ಟಡದ ಬಳಿ ಯಾರೋ ಅನಾಮಿಕ ರೈತ ಆತ್ಮಹತ್ಯೆ ಮಾಡಿಕೊಂಡು ಸತ್ತವನೆ ಎಂಬ ಸುದ್ದಿ ತಿಳಿಯುತ್ತಲೆ ಸ್ವಯಂಘೋಷಿತ ಹೋರಾಟಗಾರರ ಸಣ್ಣಸಣ್ಣ ತುಕಡಿಗಳು ಶವದ ಸುತ್ತ ಸುತ್ತಿಕೊಂಡವು. ಶವದ ಅಸಲಿ ವಾರಸುದಾರಳಾದ ರಂಗವ್ವನನ್ನು ನೇಪಥ್ಯಕ್ಕೆ ಸರಿಸಿ, ಸಂಬಂಧವೆ ಇಲ್ಲದವರಿಂದ ತಾವೇ ಘಟನೆಯ ಫಲಾನುಭವಿಗಳಾಗುವ ಸಂಚು ಆರಂಭವಾಯಿತು. ಆ ವೇಳೆಗೆ ಜಮಾಯಿಸಿದ ಟೀವಿ ವರದಿಗಾರರನ್ನು ಕಂಡು ಒಂದೂ ಅರ್ಥವಾಗದೆ ನಿಟ್ಟುಸಿರುಬಿಟ್ಟ ರಂಗವ್ವ ನಿಸ್ತೇಜಳಾಗತೊಡಗಿದಳು.