ಹೊಸ ಮನೆಯಲ್ಲಿ ಸರಸಮ್ಮ ಮತ್ತು ಶಶಿಯ ಹೊಸ ಬದುಕು ನೆಮ್ಮದಿಯಿಂದ ಸಾಗುತ್ತಿತ್ತು. ಒಂದೆರಡು ತಿಂಗಳು ಕಳೆದಿರಬಹುದು. ಮನೆ ಕಟ್ಟಿದ ಯೋಗವೋ ಜನರ ಹಾರೈಕೆಯ ಫಲವೋ ಎಂಬಂತೆ ಶಶಿಗೆ ಹೆಣ್ಣುಕೊಡಲು ಒಂದೆರಡು ಸಂಬಂಧಗಳೂ ಕೇಳಿಕೊಂಡು ಬಂದವು. ಇನ್ನೇನು ಒಂದು ಸಂಬಂಧ ಗಟ್ಟಿಯಾಗಿ ಮದುವೆಯಾಗುವ ಸೂಚನೆಯಿತ್ತು ಎನ್ನುವಾಗ ಇದ್ದಕ್ಕಿದ್ದಂತೆ ಶಶಿಗೆ ಅನಾರೋಗ್ಯವೆಂದು ಆಸ್ಪತ್ರೆಗೆ ಹೋಗುವಂತಾಯ್ತು. ಏನೋ ಚಿಕ್ಕಪುಟ್ಟದ್ದು ಬಂದಿದೆ, ಚಿಕಿತ್ಸೆ ಮಾಡಿದ ಮೇಲೆ ಸರಿಯಾಗುತ್ತಾನೆ ಎಂದು ಎಲ್ಲರೂ ಅಂದುಕೊಂಡರು. ಆದರೆ ಡಾಕ್ಟರ್ ಹೇಳಿದ್ದೇ ಬೇರೆ. ‘ಶಶಿಗೆ ಬಂದಿದ್ದು ಕ್ಯಾನ್ಸರ್. ಅದು ಆಗಲೇ ಮೂರು ಹಂತ ಕಳೆದುಬಿಟ್ಟಿದೆ’ ಎಂದಾಗ ಮನೆಯವರಿಗೆಲ್ಲಾ ದಿಕ್ಕೇ ತೋಚದಂತಾಗಿ ಒಮ್ಮೆಲೆ ಗರಬಡಿದು ಕುಳಿತುಬಿಟ್ಟರು. ಆದರೂ ಇವತ್ತಿನ ದಿನ ಇದಕ್ಕೂ ಮದ್ದಿದೆ ಗುಣವಾಗಬಹುದು ಎಂಬ ಆಸೆ. ಎಷ್ಟೇ ಖರ್ಚಾದರೂ ಸರಿ ಎಂದು ಚಿಕಿತ್ಸೆ ಕೊಡಿಸುವುದಕ್ಕೆ ಮುಂದಾದರು. ಶಶಿಯಂತೂ ಜೋಯಿಸರು ಹೇಳಿದ್ದು ಸತ್ಯ, ತನಗೆ ಮನೆ ಕಟ್ಟುವ ಯೋಗ ಮಾತ್ರ ಇದೆಯೇನೋ? ಯಾಕೋ ತನಗೆ ಈ ಮನೆಯಲ್ಲಿ ವಾಸ ಮಾಡುವ ಯೋಗವಿಲ್ಲ, ಅದಕ್ಕೇ ಜಾತಕ ನೋಡಿದ ಜೋಯಿಸರು ‘ವಾಸ್ತವ್ಯ ಇಲ್ಲ’ ಎಂದು ಹೇಳಿರಬೇಕು – ಎಂದುಕೊಂಡ.
ಗಂಟೆ ಆಗಲೇ ಎಂಟಾಗಿಬಿಟ್ಟಿತ್ತು. ಕಂಪ್ಯೂಟರ್ ಮುಂದೆ ಕುಳಿತು ಕೆಲಸದಲ್ಲಿ ಮುಳುಗಿದರೆ ವೇಳೆ ಹೋಗಿದ್ದೇ ಗೊತ್ತಾಗುವುದಿಲ್ಲ ಎಂದು ಮನಸಲ್ಲೇ ಅಂದುಕೊಂಡ ಶಶಿ, ರಾಮಾಜೋಯಿಸರಲ್ಲಿಗೆ ಹೋಗುವ ಕಾರ್ಯಕ್ರಮವನ್ನು ಮತ್ತೆ ನೆನಪಿಸಿಕೊಂಡ. ತುಂಬಾ ದಿನಗಳಿಂದ ಜೋಯಿಸರನ್ನು ಭೇಟಿಯಾಗಬೇಕು ಎಂದು ಯೋಚಿಸುತ್ತಿದ್ದುದೇನೋ ಹೌದು. ಆದರೆ ಹೊರಡುವ ಹೊತ್ತಿನಲ್ಲಿ ಯಾರಾದರೂ ಬರುತ್ತಿದ್ದರು. ಅಥವಾ ಯಾವುದಾದರೂ ಅರ್ಜೆಂಟ್ ಕೆಲಸ ಬಂದುಬಿಡುತ್ತಿತ್ತು. ಮತ್ತೆ ನಾಳೆ ಹೋಗುವುದೆಂದು ಮುಂದೆಹಾಕುವುದಾಗುತ್ತಿತ್ತು. ಏನಾದರಾಗಲಿ ಇವತ್ತು ಜೋಯಿಸರನ್ನು ಭೇಟಿಯಾಗೇ ಮನೆಗೆ ಬರಬೇಕು ಎಂದುಕೊಂಡವನೆ ಬೇಗಬೇಗ ಕಂಪ್ಯೂಟರ್ ಶಟ್ಡೌನ್ ಮಾಡಿ ಬೈಕ್ ಏರಿ ಜೋಯಿಸರ ಆಫೀಸಿಗೆ ಬಂದ. ಅಲ್ಲಿ ನೋಡಿದರೆ ಆಸ್ಪತ್ರೆಯಲ್ಲಿರುವ ಕ್ಯೂಗಿಂತಲೂ ಒಂದು ಕೈ ಮೇಲೆ ಎನ್ನುವಂತೆ ಜನರು ಸಾಲು ಹಿಡಿದು ಕುಳಿತಿದ್ದರು.
ಹೌದು. ಜೋಯಿಸರ ಪ್ರಭಾವಳಿಯೇ ಅಂಥದ್ದು. ಶಿರಸಿ ಸಿದ್ದಾಪುರ ತಾಲೂಕಿನಲ್ಲಿ ರಾಮಾಜೋಯಿಸರ ಹೆಸರು ಗೊತ್ತಿಲ್ಲದವರೇ ಇಲ್ಲ ಎಂದರೆ ತಪ್ಪಿಲ್ಲ. ಜೋಯಿಸರು ಜಾತಕ ನೋಡಿ ಗುಣಾವಗುಣಗಳ ಬಗ್ಗೆ ಹೇಳಿದರೆಂದರೆ ಮುಗಿಯಿತು, ಅದು ಸುಳ್ಳಾಗುವುದು ಅಪರೂಪವೇ. ಅದಕ್ಕೇ ಜನರು ಮುಗಿಬಿದ್ದು ಬರುತ್ತಿದ್ದರು. ಮದುವೆ ಕಾರ್ಯಗಳಲ್ಲಿ ಗಂಡು-ಹೆಣ್ಣಿನ ಜಾತಕ ಕೂಡಿಸುವುದಾಗಲಿ, ಪೂಜೆ, ಮಂಗಳಕಾರ್ಯಗಳಿಗೆ ಮುಹೂರ್ತ ನೋಡುವುದಾಗಲಿ, ಚಿಕ್ಕ ಮಕ್ಕಳಿಗೆ ಅಡ್ಡ ತೊಂದರೆಯಾಗಲಿ, ಗಂಡ-ಹೆಂಡತಿ ಜಗಳವಾಗಲಿ, ಮನೆಯಲ್ಲಿ ಯಾರಿಗಾದರೂ ಅನಾರೋಗ್ಯವಾಗಲಿ ಜಾತಕದೋಷ ಕೇಳುವುದಕ್ಕೆ ಇಲ್ಲೇ ಓಡಿಬರುವುದು. ಮನೆಕಟ್ಟುವುದಕ್ಕೆ ಅಡಿಗಲ್ಲು ಮುಹೂರ್ತದಿಂದ ಗೃಹಪ್ರವೇಶದವರೆಗೂ ತಾರಾನುಕೂಲ ಕೂಡಿಸುವುದಕ್ಕೆ, ಭವಿಷ್ಯ ಕೇಳುವುದಕ್ಕೆ ಜೋಯಿಸರ ಹೊರತೂ ಬೇರೆ ಯಾರೇ ಇದ್ದರೂ ಸರಿಹೊಂದುವುದಿಲ್ಲ ಇಲ್ಲಿಯ ಜನರಿಗೆ. ಅದೇನಂತೀರಾ – ಕೊಟ್ಟಿಗೆಯಲ್ಲಿ ಎಮ್ಮೆಯೋ ಆಕಳೋ ಹಾಲು ಕಡಮೆ ಮಾಡುವುದರಿಂದ ಮೇಯಲು ಬಿಟ್ಟ ದನಕರುಗಳು ಮನೆಗೆ ಬಾರದಿದ್ದಾಗಲೂ ಜೋಯಿಸರ ಬಳಿಯೇ ಬರುವುದು ಎಂದರೆ ಆಶ್ಚರ್ಯವೇನಿಲ್ಲ. ಮೊದಲೆಲ್ಲ ಈ ಜೋಯಿಸರು ಜಾತಕವನ್ನು ಎದುರು ಇಟ್ಟುಕೊಂಡು ಕವಡೆ ಹಾಕಿ, ಕೈಬೆರಳುಗಳ ಲೆಕ್ಕಾಚಾರದಲ್ಲಿ ಗುರು-ಶುಕ್ರ-ಶನಿ ಎಂದು ನೋಡಿ ಭವಿಷ್ಯ ನುಡಿಯುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಇವರೂ ಕಂಪ್ಯೂಟರ್ ಕಲಿತು ಆಫೀಸಿನಲ್ಲಿ ಅದನ್ನೂ ಇಟ್ಟುಕೊಂಡಿದ್ದಾರೆ. ಜಾತಕವನ್ನು ಕಂಪ್ಯೂಟರಿನಲ್ಲೇ ನೋಡುವುದು. ಅದಕ್ಕೇ ಜೋಯಿಸರ ಬಳಿ ಈಗ ಬೇಗಬೇಗ ಕೆಲಸವಾಗುತ್ತದೆ. ಇವರ ಕೈಗುಣವೋ ಹೆಸರಿನ ಪ್ರಭಾವವೋ ಅಥವಾ ಜಾತಕ ನೋಡುವ ರೀತಿಗೋ ಇಲ್ಲಿಗೆ ಬರುವ ಜನರ ಕ್ಯೂ ಮಾತ್ರ ದಿನದಿಂದ ದಿನಕ್ಕೆ ದೊಡ್ಡದಾಗುತ್ತಲೇ ಇತ್ತು.
ಶಶಿ ಬಂದು ಆಗಲೇ ಅರ್ಧಗಂಟೆಯಾಗಿತ್ತು. ಆಗಾಗ ಜೋಯಿಸರ ಆಫೀಸಿನೊಳಗೆ ಇಣುಕಿ ಇಣುಕಿ ನೋಡುವುದು, ಅಲ್ಲೇ ಪರಿಚಯಸ್ಥರ ಬಳಿ ಮುಗುಳು ನಗುವುದು ಮಾಡುತ್ತಿದ್ದ. ಜೋಯಿಸರೇನಾದರೂ ತನ್ನನ್ನು ನೋಡಿದರೆ ಹೇಗಾದರೂ ಅಡ್ಜಸ್ಟ್ ಮಾಡಿಕೊಂಡು ಒಳಗಡೆ ಕರೆಯುತ್ತಾರೆ ಎನ್ನುವ ಚಿಕ್ಕ ಆಸೆ ಶಶಿಗೆ. ಯಾಕೆಂದರೆ ಶಶಿಯೂ ಜೋಯಿಸರಿಗೆ ಬೇಕಾದವನೆ; ಮತ್ತು ಜೋಯಿಸರ ಹೊಸಮನೆ ಕಟ್ಟಿದ್ದೂ ಅವನೇ. ಅವರಿಗೇನಾದರೂ ಕೆಲಸವಾಗಬೇಕಾದರೆ ಅಥವಾ ಪರಿಚಯದವರಿಗೆ ಏನಾದರೂ ಸಹಾಯವಾಗಬೇಕಿದ್ದರೆ ಶಶಿಯ ಬಳಿಯೇ ಕಳುಹಿಸುವುದು.
ಶಶಿಯೇನು ಸಣ್ಣ ಆಸಾಮಿಯಲ್ಲ. ಸಿವಿಲ್ ಇಂಜಿನಿಯರ್. ಬೆಂಗಳೂರಿನ ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ಬಿ.ಇ. ಮುಗಿಸಿ ಕೆಲವು ವರ್ಷ ಅಲ್ಲೇ ಕೆಲಸವನ್ನೂ ಮಾಡಿ ಆಮೇಲೆ ಊರಿಗೆ ಹೋಗಿ ಸ್ವಂತ ಆಫೀಸು ತೆಗೆದಿದ್ದ. ಶಿರಸಿ ಸಿದ್ದಾಪುರ ತಾಲೂಕಿಗೆ ಮಾತ್ರವಲ್ಲ ಇಡೀ ಉತ್ತರಕನ್ನಡ ಜಿಲ್ಲೆಯಲ್ಲಿ ಹೆಸರು ಮಾಡಿದ್ದ. ಇವನು ಕಟ್ಟಿದ ಮನೆಗಳಾಗಲಿ ಕಟ್ಟಡಗಳಾಗಲಿ ನೋಡಿದವರಾರೂ ಚಕಾರ ಎತ್ತುವಂತಿಲ್ಲ. ‘ಇಂಜಿನಿಯರ್ ಯಾರು? ತುಂಬಾ ಚೆನ್ನಾಗಿ ಬಂದಿದೆ. ನಾವು ಕಟ್ಟಿಸುವವರಿದ್ದೇವೆ’ ಫೋನ್ ನಂಬರ್ ಕೊಡಿ, ಎಂದು ಕೇಳಿ ಪಡೆದು ಇವನನ್ನು ಹುಡುಕಿಕೊಂಡು ಬಂದು ಕೆಲಸ ಒಪ್ಪಿಸಿದ ಉದಾಹರಣೆಗಳಿಗೇನೂ ಕಡಮೆ ಇರಲಿಲ್ಲ. ಕೆಲಸದಲ್ಲಾಗಲಿ ಲೆಕ್ಕಾಚಾರಗಳಲ್ಲಾಗಲಿ ಎಲ್ಲದರಲ್ಲೂ ಪರ್ಫೆಕ್ಟ್. ಈ ಕೆಲಸ ಹೀಗೇ ಇರಬೇಕು. ಕಟ್ಟಡ ಸಾಮಗ್ರಿ ಇದನ್ನೇ ಹಾಕಬೇಕು. ಈ ಮನೆಗೆ ಇಷ್ಟೇ ಹಣ ಬೇಕಾಗುತ್ತೆ – ಎಂದೆಲ್ಲ ನಿದ್ದೆಗಣ್ಣಿನಲ್ಲಿ ಕೇಳಿದರೂ ಹೇಳುವಂತಹ ಚುರುಕುತನ. ಯಾರಿಗೂ ಮೋಸ, ವಂಚನೆ, ಸುಳ್ಳು ಇದಾವುದೂ ಇರಲಿಲ್ಲ. ತನ್ನ ವೃತ್ತಿಯಲ್ಲಿ ಹಣ ಸಂಪಾದನೆಯೇ ಮುಖ್ಯ ಎಂದು ಅವನು ಭಾವಿಸಿದವನಲ್ಲ. ತಾನು ಮಾಡುವ ಕೆಲಸದಲ್ಲಿ ದೋಷ ಹುಡುಕುವಂತಿರಬಾರದು ಎಂದು ಬಯಸುತ್ತಿದ್ದ. ಅದೂ ಅಲ್ಲದೆ ಕಟ್ಟಡಗಳನ್ನು ಕಟ್ಟುವುದೆಂದರೆ ಸಾವಿರಾರು ರೂಪಾಯಿ ಕೆಲಸ. ಜನರದ್ದೂ ಹಣವಲ್ಲವೇ? ಜೀವನದಲ್ಲಿ ಎಲ್ಲರೂ ಹಣ ಗಳಿಸಿಯೇ ಮನೆಯಾಗಲಿ ಬೇರೆ ಇನ್ನಾವುದೋ ಕಟ್ಟಡಗಳನ್ನಾಗಲಿ ಕಟ್ಟುವುದಿಲ್ಲ. ಸಾಲ ಸೋಲ ಮಾಡಿರುತ್ತಾರೆ. ಈ ಕಟ್ಟಡಗಳ ಕೆಲಸ ಪದೇ ಪದೇ ಮಾಡುವಂತಹುದಲ್ಲ. ಎಷ್ಟೋ ವರ್ಷಗಳ ಕಾಲ ಬಾಳುವಂತಿರಬೇಕು. ಹಣಕ್ಕೋಸ್ಕರ ಹೇಗೋ ಕೆಲಸ ಮುಗಿಸಿ ಇನ್ನೊಂದು ಹಿಡಿಯುವ ವಿಧಾನ ತನ್ನದಲ್ಲ ಎನ್ನುವುದು ಅವನ ಭಾವನೆ.
ಮುಕ್ಕಾಲು ಗಂಟೆ ಕಳೆದಿತ್ತು. ಕೊನೆಗೂ ಜೋಯಿಸರು ಶಶಿ ಬಂದಿದ್ದನ್ನು ನೋಡಿದರು. ಮಧ್ಯದಲ್ಲೇ ತೆರವು ಮಾಡಿ ಅವನನ್ನು ಒಳಗಡೆ ಕರೆದರು. ಹೊರಗಡೆ ತುಂಬಾ ಜನರಿದ್ದರೂ ವಾಡಿಕೆಯಂತೆ ಶಶಿಯ ಬಳಿ ಉಭಯಕುಶಲೋಪರಿ ವಿಚಾರಿಸುವುದನ್ನು ಮರೆಯಲಿಲ್ಲ. ಶಶಿ ತನ್ನ ಜಾತಕವನ್ನು ಕೊಟ್ಟವನೇ ತುಂಬಾ ದಿನಗಳ ಹಿಂದೆ ತಾನೊಂದು ಜಾಗವನ್ನು ಖರೀದಿ ಮಾಡಿದ್ದ ವಿಷಯವನ್ನು ಪ್ರಸ್ತಾಪಿಸಿದ. ಆಗಲೂ ಕೂಡ ಶಶಿ ತನ್ನ ಜಾತಕವನ್ನು ಜೋಯಿಸರ ಬಳಿ ತೋರಿಸಿ ಖರೀದಿ ಮಾಡಲು ಯೋಗ್ಯವೋ ಅಲ್ಲವೋ ಎಂದು ವಿಚಾರಿಸಿಕೊಂಡು ಹೋಗಿದ್ದನ್ನು ಜ್ಞಾಪಿಸಿದ. ಒಂದು ಕ್ಷಣ ಯೋಚನೆ ಮಾಡಿದ ಜೋಯಿಸರು ಅರೆಕ್ಷಣಕ್ಕೆ ‘ಧಾರೇಶ್ವರ ಚಾಳ… ಮೇನ್ ರೋಡಿಗೆ ಹತ್ತಿರವಾಗಿದ್ದಿದ್ದಲ್ಲವೇ? ಇತ್ತ ಸಿಟಿಗೂ ದೂರವಿಲ್ಲ. ಅದೇ ಜಾಗ ಅಲ್ಲವೇ? ಎಲ್ಲದಕ್ಕೂ ತುಂಬಾ ಪ್ರಶಸ್ತವಾಗಿ ಹೇಳಿ ಮಾಡಿಸಿದ ಜಾಗ. ಹಳ್ಳಿಯ ವಾತಾವರಣ ಬೇರೆ. ನೀರಂತೂ ತುಂಬಾ ಚೆನ್ನಾಗಿದೆ. ಅದು ಮೊದಲು ಗದ್ದೆಯ ಜಾಗವಾಗಿತ್ತು” ಎಂದು ನೆನಪಿಸಿಕೊಂಡರು ತುಂಬಾ ಖುಷಿಯಿಂದ.
“ಹೌದು ಜೋಯಿಸರೆ, ಅದೇ ಜಾಗದಲ್ಲೇ ಒಂದು ಮನೆ ಕಟ್ಟುವ ಆಲೋಚನೆ ಮಾಡಿದ್ದೇನೆ ಅದಕ್ಕೇ ಕೆಲಸ ಕೈಗೆತ್ತಿಕೊಳ್ಳುವ ಮುನ್ನ ಒಮ್ಮೆ ನಿಮ್ಮ ಬಳಿ ಜಾತಕ ತೋರಿಸಿಬಿಡೋಣವೆಂದು ಬಂದೆ” ಎನ್ನುತ್ತ ಶಶಿ ಜಾತಕವನ್ನು ಅವರ ಕೈಗೆ ಕೊಟ್ಟ. ಜಾತಕವನ್ನು ಹಿಡಿದು ಕೂಡಿಸಿ ಕಳೆದು ತಾಳೆ ನೋಡಿದ ಜೋಯಿಸರು ಶಶಿಯತ್ತ ಕುಡಿ ನೋಟ ಬೀರಿ ಸ್ವಲ್ಪ ಅನುಮಾನ ವ್ಯಕ್ತಪಡಿಸಿದರು. ಹೇಳಲೋ ಬೇಡವೋ ಎಂಬ ಗೊಂದಲವಾದರೂ ಅದೇಕೋ ದೇವರೇ ಬಾಯಿಬಿಡಿಸಿದಂತೆ ‘ಮತ್ತೇನಿಲ್ಲ ಶಶಿ, ಮನೆಕಟ್ಟುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಯಾವುದೇ ಅಡಚಣೆಗಳಿಲ್ಲದೆ ಕೆಲಸ ಮುಗಿಯುವ ಸೂಚನೆಯಂತೂ ಕಾಣುತ್ತಿದೆ. ಆದರೆ…” ಎಂದರು.
ಜೋಯಿಸರತ್ತ ನೋಡಿದ ಶಶಿಗೆ ಅವರ ಮುಖದಲ್ಲಿ ಅನುಮಾನದ ಛಾಯೆ ಕಂಡಂತಾಗಿ ‘ಏನಾದರೂ ಸಮಸ್ಯೆನಾ ಜೋಯಿಸರೇ?” ಎಂದು ಪ್ರಶ್ನಿಸಿದ.
“ಮತ್ತೇನಿಲ್ಲ ಇಲ್ಲಿ ಮನೆ ಕಟ್ಟುವುದಕ್ಕೇನೂ ತೊಂದ್ರೆ ಇಲ್ಲ. ಆದ್ರೆ… ಅದೇಕೋ ಆ ಮನೆಯಲ್ಲಿ ವಾಸ್ತವ್ಯ ಕಾಣುತ್ತಿಲ್ಲ” ಎಂದರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ. ಹೊರಗಡೆ ಇನ್ನೂ ತುಂಬಾ ಜನರು ಇದ್ದಿದ್ದರಿಂದ ಜೋಯಿಸರು ಹೆಚ್ಚೇನೂ ಮಾತಾಡಲಿಲ್ಲ. ಶಶಿಯೂ ಮರುಪ್ರಶ್ನೆಯನ್ನೇನೂ ಹಾಕದೆ ಗಾಡಿ ಏರಿ ಹೊರಟ.
ಶಶಿ ಮನೆಗೆ ಬಂದರೂ ಜೋಯಿಸರು ಹಾಗೇಕೆ ಅನುಮಾನ ಮಾಡಿದರು? ವಾಸ್ತವ್ಯ ಇಲ್ಲ ಎಂದರೆ ಏನರ್ಥ? ಆ ಮನೆಯಲ್ಲಿ ವಾಸ ಮಾಡುವ ಯೋಗವಿಲ್ಲ ಎಂದಿರಬಹುದೇ? – ಎಂಬ ಪ್ರಶ್ನೆ ಉದ್ಭವಿಸಿ ಗೊಂದಲಕ್ಕೀಡಾದ. ಹೇಗಿದ್ದರೂ ಮನೆ ಕಟ್ಟಬೇಕೆಂಬ ನಿರ್ಧಾರ ಮಾಡಿಯಾಗಿದೆ, ಮತ್ತೇಕೆ ಹೆಜ್ಜೆ ಹಿಂದಿಡುವುದು ಎನಿಸಿತು. ಜೋಯಿಸರ ಮಾತನ್ನು ಶಶಿ ಅಷ್ಟೇನೂ ಗಂಭೀರವಾಗಿ ತೆಗೆದುಕೊಳ್ಳಲು ಹೋಗಲಿಲ್ಲ.
ಏನಾದರೂ ಸಮಸ್ಯೆಯಾದರೆ ಆ ಮನೆ ಮಾರಾಟ ಮಾಡಿದರಾಯ್ತು ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡ. ಮನೆ ಕಟ್ಟುವ ಜಾಗ ಸರಿಯಾಗಿ ಹೊಂದಾಣಿಕೆ ಇದೆ ಎಂದು ಕೂಡಲೇ ಮನೆಕಟ್ಟುವ ನಿರ್ಧಾರವನ್ನು ಗಟ್ಟಿ ಮಾಡಿಕೊಂಡ. ಅದರಲ್ಲೂ ಶಶಿಗೆ ಆದಷ್ಟು ಬೇಗ ಮನೆಕಟ್ಟುವ ಅವಸರ. ಅದಕ್ಕೂ ಕಾರಣವಿತ್ತು ಎನ್ನಿ. ಶಶಿಯ ತಾಯಿ ಸರಸಮ್ಮನಿಗೆ ಆಗಲೇ ಎಪ್ಪತ್ತು ದಾಟಿಬಿಟ್ಟಿತ್ತು. ಸರಸಮ್ಮ ಮದುವೆಯಾಗಿ ಮನೆಗೆ ಬಂದಾಗಿನಿಂದ ಬಡತನ ಬಿಟ್ಟರೆ ಮತ್ತಾವ ಸುಖವನ್ನೂ ಕಂಡವಳಲ್ಲ.
ಸರಸಮ್ಮನಿಗೆ ಶಶಿ ಒಬ್ಬನೇ ಮಗ, ಇನ್ನೊಬ್ಬಳು ಮಗಳು ನಳಿನಿ. ಗಂಡ ವೆಂಕಣ್ಣನ ಕಾಲದಲ್ಲಿ ಮುಗದೂರಿನ ಮನೆ ಒಂದು ಚಿಕ್ಕ ಬಿಡಾರದ ರೂಪದಲ್ಲಿತ್ತು. ಅಡಕೆ ಸೋಗೆಯ ಹೊದಿಕೆ. ಎಲ್ಲ್ಲ ಕಡೆ ಮಣ್ಣು ಗೋಡೆ ಮಣ್ಣು ನೆಲವಾಗಿತ್ತು. ಮಳೆಗಾಲದಲ್ಲಂತೂ ಒಮ್ಮೊಮ್ಮೆ ರಾತ್ರಿ ಮಲಗುವುದಕ್ಕೂ ಆಗುತ್ತಿರಲಿಲ್ಲ. ಮಲೆನಾಡಿನ ಮಳೆಯೆಂದರೆ ಕೇಳಬೇಕೇ? ದೊಡ್ಡಮಳೆ ಬಂದರಂತೂ ಮನೆ ಒಳಗೆಲ್ಲ ನೀರು. ಮಧ್ಯರಾತ್ರಿಯಲ್ಲೂ ಎದ್ದು ಮಲಗಿದ ಹಾಸಿಗೆಯನ್ನು ಮಡಚಿಟ್ಟುಕೊಂಡು ನೀರು ತೆಗೆಯುವ ಕೆಲಸ ಮಾಡುವುದಾಗಿತ್ತು. ಹಿತ್ತಲಕಡೆ ಹೇಡಿಗೆ ನೀರು ಸಿಡಿದು ಒದ್ದೆಯಾಗಿ ಅರಲುಮಣ್ಣಿನ ಮೇಲೆ ಹಸಿರು ಪಾಚಿಕಟ್ಟಿ ಕಾಲಿಟ್ಟರೆ ಜಾರುತ್ತಿತ್ತು. ಹೊರಗೆ ಹರಿಯುವ ಚಾರಟೆ, ನಂಜುಳೆ, ಉಂಬುಳಗಳು ಮುಲಾಜಿಲ್ಲದೆ ಒಳಗೆ ಬಂದುಬಿಡುತ್ತಿದ್ದವು. ಸಿಮೆಂಟಿನ ಕೆಂಪು ನೆಲವೋ ನುಣುಪು ಕಲ್ಲೋ ಹಾಕುವುದಕ್ಕಂತೂ ಸಾಧ್ಯವಾಗದ ಮಾತು. ಮನೆಯಲ್ಲಿ ಜಾಗ ಸಣ್ಣದು. ನಾಲ್ಕು ಜನರಿಗೂ ಸಾಕಾಗುತ್ತಿರಲಿಲ್ಲ.
ವೆಂಕಣ್ಣ ಒಬ್ಬನ ದುಡಿಮೆಯಲ್ಲಿ ಯಾವ ವ್ಯವಸ್ಥೆ ಮಾಡುವುದೂ ಕನಸಿನ ಮಾತೇ ಸರಿ. ಅಡುಗೆಮನೆಯಲ್ಲಾದ್ರೂ ನುಣುಪು ನೆಲ ಮಾಡಿಕೊಳ್ಳಬೇಕು. ಸಾರಿಸುವುದಕ್ಕೆ ಸಸಾರವಾಗುತ್ತದೆಯೆಂದು ಸರಸಮ್ಮನೆ ಮಣ್ಣಿನ ಮೇಲೆ ಸಿಮೆಂಟಿನ ನೀರು ಹಾಕಿ ಅದಕ್ಕೆ ಹಂಚಿನ ಪುಡಿ ಮತ್ತಿಲೋಳೆ ಸೇರಿಸಿ ಕವಳೆಕಾಯಿಯಲ್ಲಿ ಒರೆದು ನುಣುಪು ಮಾಡಿಕೊಂಡಿದ್ದಳು. ಅದು ಒಂದೆರಡು ವರ್ಷ ಕಳೆಯುವುದರಲ್ಲಿ ಅಲ್ಲಲ್ಲಿ ಕಿತ್ತು ಸಾರಿಸುವುದಕ್ಕೆ ಆಗದೆ ಒದ್ದಾಟ ಪಡುತ್ತಿದ್ದಳು.
ಇದನ್ನೆಲ್ಲ ನೋಡುತ್ತಿದ್ದ ಶಶಿ ‘ಈ ಪುಟ್ಟ ಜಮೀನಿನಲ್ಲಿ ಅಪ್ಪನಂತೆ ತಾನು ಜೀವ ತೇಯುತ್ತಿದ್ದರೆ ಈಗಿದ್ದಿದ್ದಕ್ಕಿಂತ ಹೆಚ್ಚಿನದನ್ನು ಸಾಧಿಸುವುದು ಸಾಧ್ಯವಿಲ್ಲ, ಹೇಗಾದರೂ ಮಾಡಿ ಚೆನ್ನಾಗಿ ಓದಿ ಒಂದು ನೌಕರಿ ಹಿಡಿದು ಒಂದು ಚೆಂದದ ಮನೆ ಕಟ್ಟಲೇಬೇಕು’ ಎಂಬ ನಿರ್ಧಾರವನ್ನು ಮಾಡಿದ್ದ. ಹಾಗೇ ಕಷ್ಟಪಟ್ಟು ಓದಿ ಒಳ್ಳೆಯ ಅಂಕಗಳನ್ನೇ ಗಳಿಸಿದ್ದ. ಪಿ.ಯು.ಸಿ. ಮುಗಿದ ಮೇಲೂ ಕೂಡ ತಾನು ಇಂಜಿನಿಯರಿಂಗ್ಗೆ ಹೋಗಬೇಕೆಂಬ ಹಠತೊಟ್ಟ. ಅಕ್ಕಪಕ್ಕದವರು ನೆಂಟರೆಲ್ಲ ‘ಅದ್ಕೆಲ್ಲಾ ರಾಶಿ ರಾಶಿ ದುಡ್ಡು ಬೇಕು. ಸಾಲ ಮಾಡ್ಬೇಕಾಗುತ್ತೆ. ಬ್ಯಾಂಕಿನವರು ಸಾಲ ಕೊಡೋ ಮೊದ್ಲು ನಿನ್ನ ಜಮೀನು ನೋಡ್ತಾರೆ. ಗುಂಟೆ ಲೆಕ್ಕದ ಜಮೀನಿನ ಮೇಲೆ ಸಾಲಾನೂ ತೆಕ್ಕೊಂಡು ಹೊಟ್ಟೆಗೆ ತಣ್ಣೀರು ಪಟ್ಟಿ ಹಾಕ್ಕೊಳ್ತಾö್ಯ? ಹಾಸ್ಗೆ ಇದ್ದಷ್ಟೆ ಕಾಲು ಚಾಚ್ಬೇಕು..’ ಎಂದೆಲ್ಲ ಹೇಳಿ ಭಯ ಹುಟ್ಟಿಸಿದ್ದರು. ಈ ವಿಷಯಕ್ಕೆ ಶಶಿ ಅಪ್ಪನ ಬಳಿ ಜಗಳವನ್ನೂ ಮಾಡಿದ್ದ. ಆದರೂ ಯಾರಾರದ್ದೋ ಕೈಕಾಲು ಹಿಡಿದು ಬ್ಯಾಂಕಿನಲ್ಲಿ ಸಾಲಾನೂ ಮಾಡಿ ಇಂಜಿನಿಯರಿAಗ್ಗೆ ಸೇರಿದ್ದ. ಅಲ್ಲೂ ಹಾಗೆಯೇ ಆಯ್ತು. ಸಿವಿಲ್ ವಿಷಯ ಬಿಟ್ಟರೆ ಮತ್ತೆ ಯಾವುದೂ ಸಿಗಲಿಲ್ಲ. ಅವನ ಪುಣ್ಯಕ್ಕೆ ಸರ್ಕಾರಿ ಕಾಲೇಜಾಗಿದ್ದರಿಂದ ಫೀ ಕಡಮೆ ಇತ್ತು. ಹಾಸ್ಟೆಲ್ ಕೂಡ ಕಡಮೆ ಖರ್ಚಿನಲ್ಲಿ ಸಿಕ್ಕಿತ್ತು.
ಅಂತೂ ಶಶಿ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನಲ್ಲೇ ಒಂದು ಕಂಪೆನಿಯಲ್ಲಿ ಕೆಲಸ ಹಿಡಿದುಕೊಂಡ. ಆದರೆ ಕಲಿತು ಮುಗಿದಿದ್ದೆ ಬ್ಯಾಂಕಿನವರು ಸಾಲದ ಬಡ್ಡಿ ತುಂಬುವುದಕ್ಕೆ ಒತ್ತಾಯಿಸುವುದಕ್ಕೆ ಶುರು ಮಾಡಿದರು. ಶಶಿಯ ಕಂಪೆನಿಯಲ್ಲೋ ಸಂಬಳ ಕಡಮೆ. ಊಟ ತಿಂಡಿ ರೂಮಿನ ಬಾಡಿಗೆ ತುಂಬುವುದಕ್ಕೆ ಸರಿಹೋಗುತ್ತಿತ್ತು. ಬಡ್ಡಿ ತುಂಬುವುದಕ್ಕೂ ಹಣವಿಲ್ಲದೆ ಪರದಾಟ ಮಾಡುವ ಸ್ಥಿತಿ ಇವನದು. ಬೆಂಗಳೂರಿನಲ್ಲಿ ಕೆಲವು ಕಂಪೆನಿಗಳಲ್ಲಿ ಕೆಲಸ ಸಿಕ್ಕಿದ್ದರೂ ಒಂದು ಕಡೆಯೂ ಸರಿಹೊಂದುತ್ತಿರಲಿಲ್ಲ. ಕೆಲವು ಕಡೆ ಸಂಬಳ ತೀರಾ ಕಡಮೆ ಎನಿಸಿದರೆ ಕೆಲವು ಕಡೆ ಕೆಲಸ ಮಾಡಿಸಿಕೊಂಡು ಪಗಾರವನ್ನೇ ಕೊಡುತ್ತಿರಲಿಲ್ಲ. ಇದೇ ಹೊತ್ತಿಗೆ ಸರಿಯಾಗಿ ಅಪ್ಪ ವೆಂಕಣ್ಣ ತೀರಿಕೊಂಡಿದ್ದ. ಶಶಿಗೆ ಮನೆಯ ಜವಾಬ್ದಾರಿಯೂ ಮೈಮೇಲೆ ಬಿತ್ತು. ಅಕ್ಕನ ಮದುವೆ, ಬಾಣಂತನದ ಸಾಲದ ಜೊತೆ ಇವನ ಓದಿಗೆ ಮಾಡಿದ ಸಾಲ. ಇನ್ನೊಂದು ಕಡೆ. ಜಮೀನಿನಲ್ಲಿ ಮಣ್ಣು ಗೊಬ್ಬರದ ಕೆಲಸವಾಗದೆ ಪೀಕು ಕಡಮೆಯಾಗಿತ್ತು. ಅಪ್ಪಯ್ಯ ಹೋದಾಗಿನಿಂದ ಊರಲ್ಲಿ ತಾಯಿ ಸರಸಮ್ಮ ಒಬ್ಬಳೇ ಇರುವಂತಾಗಿದ್ದರಿಂದ ಪುನಃ ಹಳ್ಳಿಗೆ ಬರುವಂತಾಯ್ತು. ಅಂತೂ ಬೆಂಗಳೂರಿನಲ್ಲಿ ನಾಲ್ಕು ವರ್ಷ ಕೆಲಸದ ಅನುಭವ ಪಡೆದುಕೊಂಡ ಶಶಿ ಮತ್ತೆ ಅವರಿವರ ಕೈಕಾಲು ಹಿಡಿದು ಊರಲ್ಲೇ ಒಂದು ಚಿಕ್ಕ ಕೆಲಸ ಹಿಡಿದುಕೊಂಡ. ಅಂತೂ ಬ್ಯಾಂಕಿನ ಬಡ್ಡಿ ತುಂಬುವುದಕ್ಕೆ ವ್ಯವಸ್ಥೆಯಾಯಿತು. ನಾಲ್ಕೈದು ವರ್ಷಗಳಲ್ಲೇ ಶಶಿ ವ್ಯಾವಹಾರಿಕವಾಗಿ ಸ್ವಲ್ಪ ಸುಧಾರಿಸಿಕೊಂಡು ಸ್ವಂತ ಆಫೀಸು ಮಾಡಿಕೊಂಡ. ಇಲ್ಲಿಂದ ಅವನ ದೆಸೆಯೇ ತಿರುಗಿತೆಂದರೆ ತಪ್ಪಿಲ್ಲ. ಒಂದರ ಹಿಂದೆ ಒಂದು ಎನ್ನುವಂತೆ ಕೆಲಸಗಳು ಬರುವುದಕ್ಕೆ ಶುರುವಾದವು. ಲಕ್ಷಿö್ಮ ಕೈ ಹಿಡಿದಿದ್ದಳು. ಇವನಿಗೋ ಕೆಲಸ ಮಾಡುವ ಉತ್ಸಾಹ. ತಾನೂ ಎಲ್ಲರಂತೆ ಆರ್ಥಿಕವಾಗಿ ಸುಧಾರಿಸಿಕೊಳ್ಳಬೇಕೆಂಬ ತುಡಿತ. ರಾತ್ರಿ ಹಗಲು ಎನ್ನದೇ ದುಡಿಯುತ್ತಿದ್ದ.
ಇತ್ತ ಸರಸಮ್ಮನಿಗೋ ಮಗನಿಗೆ ಮದುವೆ ಮಾಡಬೇಕೆಂಬ ಹಂಬಲ. ಆದರೆ ಶಶಿಗೋ ಇನ್ನೂ ಮನೆ-ಜಮೀನು ಎಂದು ಸುಧಾರಿಸಿಕೊಳ್ಳಬೇಕಿತ್ತು. ಎಲ್ಲವನ್ನೂ ಮುಗಿಸಿಕೊಂಡು ಮದುವೆಯಾಗುತ್ತೇನೆಂದರೆ ವಯಸ್ಸು ತಡೆಯುತ್ತದೆಯೇ? ಆಗಲೇ ಶಶಿಗೆ ಮೂವತ್ತ್ಸು ದಾಟಿತ್ತು. ಹೆಣ್ಣು ಕೊಡುವವರೋ ಇವನಿಗೆ ಉಳಿಯುವುದಕ್ಕೆ ಒಳ್ಳೆಯ ಮನೆ ಇಲ್ಲವೆಂದೂ ಹಳ್ಳಿಯಲ್ಲಿದ್ದಾನೆಂದೂ ಜಾತಕ ಕೊಡುವುದಕ್ಕೇ ಹಿಂಜರಿಯುತ್ತಿದ್ದರು. ನೆರೆಕೇರಿಯವರೆಲ್ಲರೂ ಶಶಿಯ ಬಳಿ “ಈ ಹರಕು ಮುರುಕು ಮನೆಗೆ ಯಾವ ಹೆಣ್ಣು ಬರುವುದಕ್ಕೆ ಮನಸ್ಸು ಮಾಡ್ತಾಳೆ? ಹೆಣ್ಣು ಕೊಡುವವರು ಎಲ್ಲವನ್ನೂ ನೋಡ್ತಾರೆ, ನಿನಗೆ ಪಗಾರು ಎಷ್ಟು? ಆಸ್ತಿ ಎಷ್ಟು? ಬ್ಯಾಂಕ್ ಬ್ಯಾಲೆನ್ಸು ಎಷ್ಟಿದೆ? ಮನೆ ಸ್ವಂತದ್ದೋ ಬಾಡಿಗೆಯದೋ? ಆಧುನಿಕ ವ್ಯವಸ್ಥೆಗಳಿದೆಯೋ ಇಲ್ವೋ? ಓಡಾಡುವುದಕ್ಕೆ ಕಾರಿದೆಯೋ? – ಎಂದೆಲ್ಲಾ ವಿಚಾರಿಸ್ತಾರೆ. ಮೊದ್ಲು ಒಂದು ಮನೆ ಕಟ್ಕೋ” ಎಂದು ಹೇಳುತ್ತಿದ್ದರು. ಅವರ ಮಾತು ವಾಸ್ತವಕ್ಕೆ ಹತ್ತಿರವಾಗಿದ್ದರೂ ಸ್ವಾಭಿಮಾನದ ಶಶಿಗೆ ಇದು ವ್ಯಂಗ್ಯವೆನಿಸಿ ಬೇಸರವನ್ನುಂಟು ಮಾಡುತ್ತಿತ್ತು. “ಹೌದು. ನನಗೂ ಅಪ್ಪ ಅಜ್ಜ-ಮುತ್ತಜ್ಜಂದಿರು ಮಾಡಿಟ್ಟ ಆಸ್ತಿಯಿದ್ದಿದ್ದರೆ ನಾನೂ ಮನೆ ಕಟ್ಟಿಕೊಳ್ಳುತ್ತಿದ್ದೆ. ಆದರೆ ನನ್ನ ಪಾಲಿಗೆ ಹಿರಿಯರಿಂದ ಸಿಕ್ಕಿದ್ದು ಸಾಲದ ಕಂತೆ ಮಾತ್ರ. ಮನೆ ಬೇಕೆಂದು ಇದ್ದ ಸಾಲವನ್ನು ತೀರಿಸದೇ ಮತ್ತೆ ಮತ್ತೆ ಸಾಲದ ಹೊರೆ ಹೆಚ್ಚಿಸಿಕೊಂಡರೆ ನಾನು ದುಡಿದಿದ್ದೆಲ್ಲ ಬಡ್ಡಿ ಕಟ್ಟುವುದಕ್ಕೆ ಸರಿಹೊಂದಬಹುದು. ನನಗೆ ಮದುವೆಯಾಗದಿದ್ದರೂ ಚಿಂತೆಯಿಲ್ಲ. ಹೆಣ್ಣು ಕೊಡುವುದಿಲ್ಲವೆಂದು ಸಾಲ ಮಾಡಿ ಮನೆ ಕಟ್ಟಿಕೊಳ್ಳಲಾರೆ. ಆದಷ್ಟು ಬೇಗ ಮನೆ ಕಟ್ಟುವ ಆಲೋಚನೆಯಂತೂ ಇದೆ” ಎಂದು ಸಿಡುಕಿದ್ದ.
ಕೆಲವು ವರ್ಷಗಳಲ್ಲೇ ಶಶಿಗೆ ಕೆಲಸದ ಒತ್ತಡವೂ ಜಾಸ್ತಿಯಾಗಿ ಹಳ್ಳಿಗೂ ಪೇಟೆಗೂ ಓಡಾಡುವುದು ಕಷ್ಟವಾಗುವುದಕ್ಕೆ ಶುರುವಾಯ್ತು. ಅದಕ್ಕೇ ಶಶಿ ಗಟ್ಟಿ ಮನಸ್ಸು ಮಾಡಿ ಹಳ್ಳಿಯ ಮನೆಯನ್ನು ಬಿಟ್ಟು ಪೇಟೆಯಲ್ಲಿ ಬಾಡಿಗೆ ಮನೆ ಮಾಡಿ ತಾಯಿಯ ಜೊತೆ ಬಂದು ನೆಲೆಸಿದ. ಸರಸಮ್ಮನಿಗೋ ‘ಹೇಗಿದ್ದರೂ ಮಗ ಈಗ ಪೇಟೆಯಲ್ಲಿ ಮನೆ ಮಾಡಿದ್ದಾನೆ. ಯಾರಾದರೂ ಹೆಣ್ಣು ಕೊಡಬಹುದು’ ಎಂಬ ಆಸೆ. ಆದರೆ ಶಶಿಗೆ ನಲವತ್ತರ ಗಡಿ ದಾಟಿದರೂ ಯಾವ ಹೆಣ್ಣೂ ಕೂಡಿಬರಲಿಲ್ಲ. ಹೋಮ-ಹವನ-ಪೂಜೆ ಪುನಸ್ಕಾರ ಹರಕೆಗಳೆಲ್ಲಾ ಮುಗಿದವು. ಈಗ ಜನರದ್ದು ಇನ್ನೊಂದು ರೀತಿಯ ಮಾತು. ‘ಬಾಡಿಗೆ ಮನೆಯೆಂದೇ ಹೆಣ್ಣಿನವರು ಹಿಂದೆ ಸರಿಯುತ್ತಿರಬಹುದು. ಒಂದು ಸ್ವಂತ ಮನೆ ಮಾಡಿಕೊಳ್ಳುವುದು ಒಳ್ಳೆಯದು’ ಎಂಬ ಸಲಹೆ. ಸರಸಮ್ಮನಿಗೂ ವಯಸ್ಸಾಗುತ್ತಿತ್ತು. ಯಾವುದಾದರೂ ವಿಧವೆಯೋ ಡೈವೋರ್ಸಿಯೋ ಸಿಕ್ಕಿದರೆ ಅವಳನ್ನಾದರೂ ಒಪ್ಪಿದರೆ ಆಗ್ತಿತ್ತು ಎಂಬ ಮನಸ್ಸು ಇವಳದ್ದು. ಆದರೆ ಶಶಿ ಮಾತೇ ಆಡುತ್ತಿರಲಿಲ್ಲ. ‘ಮದುವೆ ಇಲ್ಲದಿದ್ರೆ ಇಲ್ಲ ಬಿಡು. ಹಾಗೇ ಇರುತ್ತೇನೆ ಎಂದು ಮೊಂಡು ಹಠ ಮಾಡುತ್ತಿದ್ದ. ‘ಮಾಣಿಗೆ ಮದುವೆಯ ಯೋಗ ಬರೆದರೆ ಆಗುತ್ತೆ ಇಲ್ಲದಿದ್ದರೆ ಇಲ್ಲ…’ ಎಂದು ಸಮಾಧಾನ ಮಾಡಿಕೊಂಡಿದ್ದರೂ, ಅಂತರಾಳ ಕೇಳುತ್ತದೆಯೇ? ಮನಸಿನ ಮೂಲೆಯಲ್ಲೇನೋ ಒಂದು ಕೊರಗು. ಸ್ವಂತ ಮನೆ ಮಾಡಿದರೆ ಹೆಣ್ಣು ಸಿಗುತ್ತಿತ್ತೇನೋ ಎಂಬ ಚಿಕ್ಕ ಆಸೆ ಸರಸಮ್ಮನಿಗೆ.
ಶಶಿಗೆ ಮನೆ, ಕಟ್ಟಡಗಳನ್ನು ಕಟ್ಟುವ ಕೆಲಸಗಳು ಒಂದರ ಹಿಂದೆ ಒಂದು ಬರುತ್ತಲೇ ಇದ್ದವು. ಊಟ-ತಿಂಡಿ ಮಾಡುವುದಕ್ಕೂ ಪುರುಸೊತ್ತಿಲ್ಲ. ಮನೆ ಕಟ್ಟಿಸಿಕೊಂಡವರೆಲ್ಲ ಗೃಹಪ್ರವೇಶಕ್ಕೆ ಕರೆಯುತ್ತಿದ್ದರು. ತುಂಬಾ ಪರಿಚಯದವರು ಬೇಕಾದವರ ಮನೆಗಳಿಗೆಲ್ಲ ಸರಸಮ್ಮನನ್ನೂ ಕರೆದುಕೊಂಡು ಹೋಗುತ್ತಿದ್ದ ಶಶಿ. ತನ್ನ ಜೀವಮಾನದಲ್ಲಿ ಇಂತಹ ಮನೆಗಳನ್ನು ನೋಡಿರದ ಸರಸಮ್ಮ ಮನೆಯನ್ನು ನೋಡಿ ದಂಗುಬಡಿಯುತ್ತಿದ್ದಳು. ತನ್ನ ಮಗ ಎಷ್ಟು ಚೆಂದಚೆಂದದ ಮಜಬೂತಾದ ಮನೆ ಕಟ್ಟಿ ನಿಲ್ಲಿಸುತ್ತಾನೆ. ಇವರೆಲ್ಲಾ ಎಷ್ಟು ಹೊಗಳುತ್ತಾರೆ. ತುಂಬಾ ಜನರ ಪ್ರೀತಿ ವಿಶ್ವಾಸವನ್ನೂ ಗಳಿಸಿದ್ದಾನೆ – ಎಂಬ ಹೆಮ್ಮೆ ಕೂಡ ಆಗುತ್ತಿತ್ತು. ಇದರ ಜೊತೆಗೆ ನೆಂಟರಿಷ್ಟರು ಪರಿಚಯದವರು ಕೆಲವರು ಇವನ ಬಳಿ ಹಣ ಮಾಡಿಕೊಂಡಿದ್ದಾನೆಂದು ತಿಳಿದು ಆಗಾಗ ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಸಹಾಯ ಕೇಳಿ ಬರುತ್ತಿದ್ದರು. ಇದನ್ನು ನೋಡಿದಾಗ ಸರಸಮ್ಮನಿಗೆ ‘ಇವರೆಲ್ಲ ತಮ್ಮ ಬಡತನದಲ್ಲಿ ಬಾರದಿದ್ದವರು. ಬಾಯಿಮಾತಿಗೂ ಒಳ್ಳೆಯದನ್ನು ಹೇಳಿದವರಲ್ಲ. ಚುಚ್ಚುಮಾತುಗಳಿಂದ ನೋಯಿಸಿದವರು. ಈಗ ಇವನ ಬಳಿ ಹಣ ಕಂಡ ಕೂಡಲೆ ಹತ್ತಿರವಾಗುತ್ತಿದ್ದಾರೆ. ಇಂವ ಬೇರೆ ಕಷ್ಟ ಎಂದು ಹೇಳಿಕೊಂಡು ಬಂದವರಿಗೆಲ್ಲಾ ಅಯ್ಯೋ ಎಂದು ಮರುಗುವವನು. ತನ್ನ ಬಳಿ ಇದ್ದ ಹಣವನ್ನೆಲ್ಲಾ ದಾನ ಧರ್ಮ ಎಂದು ಮಾಡಿ ಖರ್ಚು ಮಾಡಿಕೊಂಡರೆ..’ ಎಂಬ ಅಪನಂಬಿಕೆ. ಹೇಗಾದರೂ ಇವನೂ ಒಂದು ಮನೆ ಕಟ್ಟುವ ಮನಸ್ಸು ಮಾಡಲೆಂಬ ಆಸೆಯಿಂದ ‘ಮಗ ಇಂಜಿನಿಯರ್ ಆಗಿದ್ದೇನೋ ಹೌದು ಸಂತೋಷವೇ. ಆದ್ರೆ ನನಗಂತೂ ಬರಿ ಮಗ ಬೇರೆಯವರಿಗೆ ಕಟ್ಟಿದ ಮನೆ ನೋಡಿ ಖುಷಿ ಪಡೋದಷ್ಟೇ ಹಣೇಲಿ ಬರೆದಿದ್ದೋ ಏನೋ. ನನ್ನ ಆಯುಷ್ಯಪೂರ್ತಿ ಬಾಡಿಗೆಮನೆಯಲ್ಲೇ ಕಳೆದುಬಿಡುತ್ತೋ ಏನೋ’ ಎಂದು ಮಗನಿಗೆ ಸುತ್ತು ಬಳಸಿ ಹೇಳಿದ್ದರು.
ತಾಯಿಯ ಮಾತು ಕೇಳಿದಾಗ ಯಾಕೋ ಶಶಿಗೆ ತನ್ನ ಎದೆಯ ಮೇಲೆ ಹೊಡೆದಷ್ಟು ನೋವಾಗುತ್ತಿತ್ತು. ತಾನು ಚಿಕ್ಕವನಿದ್ದಾಗ ಅವಳು ಪಟ್ಟ ಕಷ್ಟಗಳೆಲ್ಲಾ ನೆನಪಾಗಿ ಕಣ್ಣೀರು ಬರುತ್ತಿತ್ತು. ‘ಅಮ್ಮನ ಆಯುಷ್ಯಪೂರ್ತಿ ಬಡತನ ಕಷ್ಟದಲ್ಲೇ ಕಳೆದುಹೋಗುವುದು ಬೇಡ. ನನ್ನ ಮದುವೆಯ ಆಸೆಯಂತೂ ಪೂರೈಸಲಿಲ್ಲ. ಅದು ನನ್ನ ಹಣೆಬರಹ. ಆಗಲೇ ಇವಳಿಗೆ ವಯಸ್ಸು ಎಪ್ಪತ್ತು ದಾಟಿದೆ. ಯಾವಾಗ ಭಗವಂತನಿಂದ ಕರೆ ಬರುತ್ತೋ ಹೇಳುವುದಕ್ಕೆ ಸಾಧ್ಯವಿಲ್ಲ. ಕೊನೆಯಪಕ್ಷ ಮಗ ಕಟ್ಟಿದ ಮನೆಯನ್ನಾದರೂ ನೋಡಿಕೊಂಡು ಹೋಗಲಿ. ಈ ಆಸೆಯನ್ನಾದರೂ ಪೂರೈಸಿದ ಸಮಾಧಾನ ನನ್ನದಾಗುತ್ತದೆ’ ಎಂದು ಯೋಚಿಸಿದ.
ಇದೇ ಕಾರಣಕ್ಕೆ ಅರ್ಜೆಂಟಾಗಿ ಮನೆ ಕಟ್ಟುವ ನಿರ್ಧಾರ ಕೈಗೊಂಡಿದ್ದ. ಅದಕ್ಕೆ ಯೋಗಾವಳಿ ಕೇಳುವುದಕ್ಕೋಸ್ಕರ ಜೋಯಿಸರ ಬಳಿ ಹೋಗಿದ್ದ.
ಜೋಯಿಸರ ಮಾತಿಗೇನೂ ಶಶಿ ತಲೆಕೆಡಿಸಿಕೊಳ್ಳದಿದ್ದರೂ ಮನದ ಮೂಲೆಯಲ್ಲಿ ಒಂದು ಚಿಕ್ಕ ಭಯ ಇದ್ದೇ ಇತ್ತು. ಇದನ್ನು ಅಕ್ಕನ ಬಳಿ ಹೇಳಿಕೊಂಡಿದ್ದ ಕೂಡ. ಅಕ್ಕ ನಳಿನಿಗೂ ಜೋಯಿಸರ ‘ಒಂದು ಹೌದು, ಒಂದಲ್ಲ’ ಮಾಡಿ ಹೇಳುವ ಒಗಟಿನ ಮಾತು ಅರ್ಥವಾಗಲಿಲ್ಲ. ಅಮ್ಮ ಸ್ವಂತ ಮನೆಯನ್ನು ಕಾಣದೇ ಹೋಗಬಹುದು ಎಂದಾಗ ‘ಹೇಗಿದ್ದರೂ ಮನೆ ಕಟ್ಟುವ ನಿರ್ಧಾರ ಮಾಡಿಯಾಗಿದೆ, ಕಟ್ಟಿಬಿಡು. ಜೋಯಿಸರೇನೂ ಮನೆ ಕಟ್ಟುವುದು ಬೇಡ, ಒಳ್ಳೆಯದಾಗುವುದಿಲ್ಲ ಎಂದೇನೂ ಹೇಳಿಲ್ಲವಲ್ಲ?’ ಎಂದಾಗ ಶಶಿ ಇಟ್ಟ ಹೆಜ್ಜೆಯನ್ನು ಹಿಂದಿಡಲಿಲ್ಲ. ವರ್ಷ ಕಳೆಯುವುದರ ಭರ್ಜರಿಯಾದ ಮನೆ ಕಟ್ಟಿ ಗೃಹಪ್ರವೇಶವನ್ನೂ ಮಾಡಿದ.
ಗೃಹಪ್ರವೇಶಕ್ಕೆ ಬಂದವರೆಲ್ಲ ಮನೆ ನೋಡಿ ಬೆರಗಾಗಿದ್ದರು. ಯಾರೂ ಇಂವ ಇಷ್ಟು ಚೆಂದದ ದೊಡ್ಡ ಮನೆ ಕಟ್ಟುತ್ತಾನೆಂದು ಕನಸಲ್ಲೂ ಊಹಿಸಿರಲಿಲ್ಲ. ‘ಮನೆಯಂತೂ ಸಿನೆಮಾ ಶೂಟಿಂಗಿಗೆ ಹೇಳಿಮಾಡಿಸಿದಂತಿದೆ. ಮನೆ ಕಟ್ಟಿದ ಯೋಗದಲ್ಲಿ ಮದುವೆಯೂ ಆಗಲಿ. ಆದಷ್ಟು ಬೇಗ ಯಾವುದಾದರೂ ಹೆಣ್ಣು ಸಿಗುವಂತಾಗಲಿ’ ಎಂದು ಬಾಯಿತುಂಬ ಹರಸಿ ಹೋಗಿದ್ದರು. ಜನರ ಬಾಯ ಹರಕೆಯಿಂದ ಮಾಣಿಗೊಂದು ಕೂಸು ಸಿಕ್ಕರೆ ತಾನು ನಿಶ್ಚಿಂತೆಯಿಂದ ಕಣ್ಣು ಮುಚ್ಚಿಕೊಳ್ಳಬಹುದು ಎಂದು ಮನಸಲ್ಲೇ ಹೇಳಿಕೊಂಡು ಸರಸಮ್ಮ ನಿಟ್ಟುಸಿರುಬಿಟ್ಟಿದ್ದರು.
ಹೊಸ ಮನೆಯಲ್ಲಿ ಸರಸಮ್ಮ ಮತ್ತು ಶಶಿಯ ಹೊಸ ಬದುಕು ನೆಮ್ಮದಿಯಿಂದ ಸಾಗುತ್ತಿತ್ತು. ಒಂದೆರಡು ತಿಂಗಳು ಕಳೆದಿರಬಹುದು. ಮನೆ ಕಟ್ಟಿದ ಯೋಗವೋ ಜನರ ಹಾರೈಕೆಯ ಫಲವೋ ಎಂಬಂತೆ ಶಶಿಗೆ ಹೆಣ್ಣುಕೊಡಲು ಒಂದೆರಡು ಸಂಬಂಧಗಳೂ ಕೇಳಿಕೊಂಡು ಬಂದವು. ಇನ್ನೇನು ಒಂದು ಸಂಬಂಧ ಗಟ್ಟಿಯಾಗಿ ಮದುವೆಯಾಗುವ ಸೂಚನೆಯಿತ್ತು ಎನ್ನುವಾಗ ಇದ್ದಕ್ಕಿದ್ದಂತೆ ಶಶಿಗೆ ಅನಾರೋಗ್ಯವೆಂದು ಆಸ್ಪತ್ರೆಗೆ ಹೋಗುವಂತಾಯ್ತು. ಏನೋ ಚಿಕ್ಕಪುಟ್ಟದ್ದು ಬಂದಿದೆ ಚಿಕಿತ್ಸೆ ಮಾಡಿದ ಮೇಲೆ ಸರಿಯಾಗುತ್ತಾನೆ ಎಂದು ಎಲ್ಲರೂ ಅಂದುಕೊಂಡರು. ಆದರೆ ಡಾಕ್ಟರ್ ಹೇಳಿದ್ದೇ ಬೇರೆ. ‘ಶಶಿಗೆ ಬಂದಿದ್ದು ಕ್ಯಾನ್ಸರ್. ಅದು ಆಗಲೇ ಮೂರು ಹಂತ ಕಳೆದುಬಿಟ್ಟಿದೆ’ ಎಂದಾಗ ಮನೆಯವರಿಗೆಲ್ಲಾ ದಿಕ್ಕೇ ತೋಚದಂತಾಗಿ ಒಮ್ಮೆಲೆ ಗರಬಡಿದು ಕುಳಿತುಬಿಟ್ಟರು. ಆದರೂ ಇವತ್ತಿನ ದಿನ ಇದಕ್ಕೂ ಮದ್ದಿದೆ ಗುಣವಾಗಬಹುದು ಎಂಬ ಆಸೆ. ಎಷ್ಟೇ ಖರ್ಚಾದರೂ ಸರಿ ಎಂದು ಚಿಕಿತ್ಸೆ ಕೊಡಿಸುವುದಕ್ಕೆ ಮುಂದಾದರು. ಶಶಿಯಂತೂ ಜೋಯಿಸರು ಹೇಳಿದ್ದು ಸತ್ಯ. ತನಗೆ ಮನೆ ಕಟ್ಟುವ ಯೋಗ ಮಾತ್ರ ಇದೆಯೇನೋ? ಯಾಕೋ ತನಗೆ ಈ ಮನೆಯಲ್ಲಿ ವಾಸ ಮಾಡುವ ಯೋಗವಿಲ್ಲ. ಅದಕ್ಕೇ ಜಾತಕ ನೋಡಿದ ಜೋಯಿಸರು ‘ವಾಸ್ತವ್ಯ ಇಲ್ಲ’ ಎಂದು ಹೇಳಿರಬೇಕು. ಆರೋಗ್ಯ ಸುಧಾರಿಸಿದ ಮೇಲೆ ಈ ಮನೆಯನ್ನು ಬಾಡಿಗೆಗೆ ಕೊಟ್ಟು ಬೇರೆ ಮನೆಗೆ ಹೋಗಿಬಿಡಬೇಕು – ಎಂದು ಆಲೋಚಿಸಿದ್ದ. ಆದರೆ ಡಾಕ್ಟರುಗಳ ಚಿಕಿತ್ಸೆ ಫಲಕಾರಿಯಾಗಲೇ ಇಲ್ಲ. ಶಶಿ ಬದುಕಲೇ ಇಲ್ಲ. ಹೊಸ ಮನೆಯಲ್ಲಿ ಬಾಳಿ ಬದುಕಬೇಕೆಂದು ಕನಸು ಕಟ್ಟಿದವನು ವರ್ಷ ಕಳೆಯುತ್ತಿರುವ ಅಮ್ಮನಿಗೆ ಮನೆಯನ್ನು ಬಿಟ್ಟು ದೇವರ ಪಾದ ಸೇರಿಬಿಟ್ಟ.
ಇತ್ತ ಜೋಯಿಸರು ಹೇಳಿದ ಮಾತು ಬಾಯಿಂದ ಬಾಯಿಗೆ ಹರಡಿ ‘ಮಾಣಿ ಮನೆ ಕಟ್ಟದೆ ಇದ್ದಿದ್ದರೆ ಬದುಕಾದ್ರೂ ಬದುಕ್ತಿದ್ನೇನೋ.. ಜೋಯಿಸರು ಹಾಗೆ ಹೇಳಿದ ಮೇಲೂ ಮುಂದುವರಿಯಬಾರದಿತ್ತು…’ ಎಂಬ ಉದ್ಗಾರ ತೆಗೆದಿದ್ದರು. ಶಶಿಯ ತಾಯಿ ಸರಸಮ್ಮನಂತೂ ನನಗೇ ಅಂತಾನೇ ಮನೆ ಕಟ್ಟಿ ಹೊರಟೇ ಹೋದ್ಯಲ್ಲೋ… ಹೀಗೆ ಅಂತ ನನಗೊಂದು ಮಾತು ಹೇಳಿದ್ದರೆ ಈ ಮನೆ ಕಟ್ಟುವುದಕ್ಕೇ ಬಿಡುತ್ತಿರಲಿಲ್ಲ – ಎಂದು ಗೋಳಿಟ್ಟರು. ಹಾಗಿದ್ದರೆ ಜೋಯಿಸರಿಗೆ ಅಂವ ಸಾಯುತ್ತಾನೆಂದು ಗೊತ್ತಿದ್ದರೂ ಯಾಕೆ ಹೇಳಲಿಲ್ಲ. ಮನೆಕಟ್ಟುವುದೇ ಬೇಡವೆಂದು ಹೇಳಬೇಕಿತ್ತು. ಅವನಾದ್ರೂ ರ್ತಿದ್ದ.. ಮಗನಿಗಿಂತ ನನಗೆ ಮನೆಯೇನೂ ಹೆಚ್ಚಾಗಿತ್ತಿಲ್ಲ ಎಂದು ಜೋಯಿಸರನ್ನೇ ಆಕ್ಷೇಪಿಸಿದರು.
ಪಾಪ, ಆ ಜೋಯಸರದೇನು ತಪ್ಪಿತ್ತು? ಕಟ್ಟಿದ ಮನೆಯಲ್ಲಿ ಅವನಿಗೆ ವಾಸ್ತವ್ಯ ಕಾಣಿಸುತ್ತಿಲ್ಲ ಎಂದರೆ ಅವನ ಸಾವೇ ಸಂಭವಿಸುತ್ತದೆ ಎಂದರ್ಥವಲ್ಲವಲ್ಲ. ಆ ಮನೆಯಲ್ಲಿ ಉಳಿದುಕೊಳ್ಳುವ ಸಾಧ್ಯತೆ ಕಾಣಿಸುತ್ತಿಲ್ಲ. ಏನಾದರೂ ಅಡ್ಡಿ-ಆತಂಕ ಬರಬಹುದು, ಮತ್ತೇನಾದರೂ ಘಟನೆ ನಡೆಯಲೂಬಹುದು ಎಂದೂ ಇರಬಹುದಲ್ಲ. ಹಾಗೂ ಒಮ್ಮೆ ಸಾವು ಸಂಭವಿಸುತ್ತದೆ ಎಂದು ಅವರಿಗೆ ತಿಳಿದಿದ್ದರೂ ಅವನ ಬಳಿ ನಿಖರವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ‘ಒಳ್ಳೆಯ ಕೆಲಸ ಮಾಡುತ್ತಿದ್ದಾನೆ ಮಾಡಲಿ, ಎಲ್ಲವೂ ದೈವೇಚ್ಛೆ’ ಎಂದು ಮನೆ ಕಟ್ಟುವುದಕ್ಕೆ ಅಭ್ಯಂತರವಿಲ್ಲ ಎಂದಿರಬಹುದು. ಜೋಯಿಸರ ಜ್ಯೋತಿಷದ ಮಾತೂ ಶಶಿಯ ಸಾವೂ ಎಲ್ಲವೂ ಕಾಕತಾಳೀಯವಾಗಿದೆ ಅಷ್ಟೆ. ಅವರನ್ನೇಕೆ ಹಳಿಯುವುದು? ಮನೆ ಕಟ್ಟಲಿ ಕಟ್ಟದೇ ಇರಲಿ ಅವನ ಸಾವಂತೂ ನಿಶ್ಚಿತವಾಗಿತ್ತು. ಅದನ್ನು ಯಾರಿಂದಲೂ ತಪ್ಪಿಸುವುದಕ್ಕೆ ಸಾಧ್ಯವಿಲ್ಲ. ಕುರುಕ್ಷೇತ್ರ ಯುದ್ಧದಲ್ಲಿ ಅಭಿಮನ್ಯುವಿನ ಸಾವು ನಿಶ್ಚಿತವೆಂದು ಕೃಷ್ಣಪರಮಾತ್ಮನಿಗೂ ತಿಳಿದಿತ್ತು. ಸೋದರಳಿಯನೇ ಆಗಿದ್ದರೂ ಕೃಷ್ಣನೇಕೆ ಸಾವನ್ನು ತಪ್ಪಿಸಲಿಲ್ಲ? ಎಲ್ಲವೂ ನಮ್ಮ ಹಣೆಬರಹದಲ್ಲಿ ಇದ್ದಂತೆಯೇ ಆಗುವುದಲ್ಲವೇ? ತಾಯಿಯ ಆಸೆಯನ್ನು ಪೂರೈಸಿದ ಸಮಾಧಾನವಾದರೂ ಅವನಿಗೆ ಸಿಕ್ಕಿತಲ್ಲ. ಅದಕ್ಕಾದರೂ ಸಂತೋಷಪಡೋಣ ಎಂದು ಮಗಳು ಹೇಳಿದಾಗ ಹೌದೆನ್ನುವಂತೆ ಗೋಣು ಆಡಿಸಿದ ಸರಸಮ್ಮ ಕಣ್ಣಂಚಿನಲ್ಲಿ ಹರಿಯುತ್ತಿದ್ದ ನೀರನ್ನು ಒರೆಸಿಕೊಂಡರು.