ನೀನು ಆಗಿಂದ ಇದೇ ತಪ್ಪು ಮಾಡ್ತಿರೋದು. ಸ್ವಲ್ಪ ಸಮಾಧಾನದಲ್ಲಿ ಹೇಳದನ್ನ ಕೇಳಿಸ್ಕಳೋ ಮಾರಾಯಾ. ನಿಂಗೆ ಸಂಬ್ಳದ ಚಿಂತೆನೇ ಬೇಡ. ನನ್ನ ಮಗ ಮುಕುಂದನಿಗೆ ನಿನ್ನ ಎನ್ಜಿಓದಲ್ಲೊಂದು ಏನಾದ್ರೂ ಹುದ್ದೆ ಹುಟ್ಸಿ ಕೆಲ್ಸ ಕೊಡು… ಬೆಳ್ಗಿಂದ ಸಂಜೆ ಮಾಡ್ತಾನೆ. ಅವ್ನಿಗೆ ಖರ್ಚಿಗೆ, ಸಂಸಾರಕ್ಕೆ ಎಲ್ಲ ದುಡ್ಡು ನಾನೇ ಬ್ಯಾಂಕಿಗೆ ಹಾಕ್ತೆ. ದೇವ್ರ ದಯೆಯಿಂದ ನಮ್ಗೇನೂ ಕೊರತೆ ಇಲ್ಲ ಇಲ್ಲಿ. ಆದ್ರೆ ಎಂತ ಸಾಯೋದು, ಈ ಮಳ್ ಹುಣ್ಮಕ್ಳಿಗೆ ದೊಡ್ಡ ನಗರದಲ್ಲಿಪ್ಪ ಹುಡ್ಗನೇ ಬೇಕು ಮದ್ವೆಗೆ. ಸ್ವಲ್ಪ ಸಮಯ ಅಲ್ಲಿದ್ದು ಎಲ್ಲ ನೋಡ್ಕಂಡು ಸಾಕಾಗಿ ಆಮೇಲೆ ಒಂದೆರಡು ಮಕ್ಕಳಾದ್ಮೇಲೆ ಅಜ್ಜ, ಅಜ್ಜಿ ಜೊತೆಗಿದ್ರೆ ಸಹಾಯ ಆಗ್ತದೆ ಅಂತ ಇಲ್ಲಿಗೇ ಬರ್ತವೆ. ಅಲ್ಲಿವರೆಗೆ ಹೇಗೂ ನಾನೇ ಆದಷ್ಟು ತೋಟ, ಗದ್ದೆ ಎಲ್ಲ ನೋಡ್ಕೊಂಡು ಹೋಗ್ತೇನೆ. ಆಮೇಲೆ ನಿಧಾನಕ್ಕೆ ಎಲ್ಲ ಸರಿ ಆಗ್ತದೆ ಅನ್ನೋದು ನನ್ನ ನಂಬ್ಕೆ ಎಂದು ಮುಗುಳ್ನಗಲು ಶಾಕ್ ಹೊಡೆದಂತೆ ಕುಳಿತುಬಿಟ್ಟನು ವಿನೋದ.

ರಾಧಮ್ಮ ಕಾಲೆಳೆಯುತ್ತ ಅಡುಗೆಮನೆಯಲ್ಲಿ ಏನೋ ಕೆಲಸ ಮಾಡುತ್ತಿದ್ದ ಸೊಸೆ ಅನನ್ಯಳ ಕಣ್ತಪ್ಪಿಸಿ ಬಚ್ಚಲಿಗೆ ಹೋಗಲು ಪ್ರಯತ್ನಿಸುತ್ತಿರುವುದು ಅದು ಆರನೇ ಸಲ. ಆದರೆ ಪ್ರತಿಬಾರಿಯೂ ಹೇಗೋ ಸೊಸೆಯ ಕಣ್ಣಿಗೆ ಬಿದ್ದು ಬೇರೇನೋ ಕೆಲಸಕ್ಕೆ ಬಂದವರಂತೆ ಮಾಡಿ ಮತ್ತೆ ತಮ್ಮ ಕೋಣೆಯ ಕಡೆಗೆ ಹೋಗುತ್ತಿದ್ದುದನ್ನು ಗಮನಿಸಿ ಅನನ್ಯಳೂ ಮನದೊಳಗೇ ನಕ್ಕಿದ್ದಳು. ಈ ಸಲವೂ ಅತ್ತೆ ತಾನು ಗಮನಿಸಿದ್ದು ಕಂಡು ಮತ್ತೆ ರೂಮಿಗೆ ಹೋಗಿದ್ದು ನೋಡಿ ತಡೆಯಲಾಗದೆ ಅವರಿದ್ದಲ್ಲಿಗೆ ಹೋದಳು.
ಅತ್ತೆ, ಅದ್ಯಾಕೆ ಇಷ್ಟು ತ್ರಾಸು ತಗೊಳ್ತಿದ್ದೀರಾ? ಇವತ್ತೊಂದು ದಿನಕ್ಕಷ್ಟೇ ಮೈಗೆ ನೀರು ಸುರ್ಕುಂಡು ಸ್ನಾನ ಮಾಡ್ಬೇಡಿ ಅಂದಿದ್ದಾರೆ ಡಾಕ್ಟ್ರು. ಬೇಕಿದ್ರೆ ಬಿಸಿನೀರಲ್ಲಿ ಟವಲ್ ಅದ್ದಿ ಗಟ್ಟಿಯಾಗಿ ಹಿಂಡಿ ಮೈ ಒರೆಸಿಕೊಳ್ಳಬಹುದು ಅಂತಾನೂ ಹೇಳಿದ್ರಲ್ವ. ನಿಮ್ಗೆ ಆಗ್ದೇ ಹೋದ್ರೆ ನಾನು ಸಹಾಯ ಮಾಡ್ತೀನಿ ಅಂದ್ರೂ ಬೇಡ ಅಂತೀರಾ. ನೀವೇ ಆದ್ರೂ ಮಾಡ್ಕೊಳ್ಳಿ ಎಲ್ಲ ತಂದಿಡ್ತೀನಿ ಇಲ್ಲೇ ಅಂದ್ರೂ ಒಪ್ತಿಲ್ಲ. ಹಠ ಮಾಡ್ಕೊಂಡು ಯಾವತ್ತಿನ ಹಾಗೇ ಅರ್ಧ ಗಂಟೆ ನೀರು ಹಾಕ್ಕೊಂಡೇ ಬರ್ತೀನಿ ಅಂದ್ರೆ ಹೇಗೆ ಅಂತ? ನಿನ್ನೆ ರಾತ್ರಿಯಷ್ಟೇ ಜ್ವರ ಬಿಟ್ಟಿದೆ ತುಸು ಮೆದುವಾಗಿಯೇ ಹೇಳಿದಳು ಸೊಸೆ.
ಆಕೆ ಹೇಳುತ್ತಿರುವುದು ತನ್ನ ಒಳಿತಿಗಾಗಿ ಎಂಬುದು ರಾಧಮ್ಮರಿಗೆ ಗೊತ್ತಿಲ್ಲವೆಂದಲ್ಲ. ಆದರೆ ಪ್ರತಿ ದಿವಸ ತಪ್ಪದೇ ಮೈಯನ್ನು ತಿಕ್ಕಿತಿಕ್ಕಿ ಸ್ನಾನ ಮಾಡಿದರಷ್ಟೇ ತೃಪ್ತಿಯಾಗುವುದು. ಹೀಗಿರುವಾಗ, ಕಳೆದೆರಡು ದಿನ ಏಳಲೂ ಕಷ್ಟವಾಗುವಂತೆ ಹೊಡೆತ ಕೊಟ್ಟಿದ್ದ ಜ್ವರದಿಂದಾಗಿ, ಬೆವರಿ ಅಂಟಾಗಿಹೋಗಿದ್ದ ಮೈಗೆ ನೀರು ಸುರಿಯುವಂತಿಲ್ಲ ಎಂದಿದ್ದು ಅಸಹನೀಯವೆನ್ನಿಸಿತ್ತು. ಹೀಗಾಗಿಯೇ ತಿಂಡಿ ಆಗಿದ್ದೇ, ಹೇಗೋ ಕಣ್ತಪ್ಪಿಸಿ ತಮ್ಮ ಬಟ್ಟೆಗಳನ್ನು ಬಚ್ಚಲಿನಲ್ಲಿ ಅಡಗಿಸಿ ಬಂದಿದ್ದರೂ ಸ್ನಾನ ಮಾಡಲು ಬಡಕ್ಕನೆ ಹೋಗಿ ಬಾಗಿಲು ಹಾಕಿಕೊಳ್ಳಬೇಕೆಂದಿದ್ದ ಅವರ ಹುನ್ನಾರಿಗೆ ಮುಹೂರ್ತ ಕೂಡಿಬಂದಿರಲಿಲ್ಲ.
ನನಗೂ ಅದೆಲ್ಲ ಗೊತ್ತಮ್ಮ ಅನು. ಆದ್ರೆ ನನ್ನ ಕಷ್ಟ ನಿಮಗ್ಯಾರಿಗೂ ಗೊತ್ತಾಗ್ತಿಲ್ಲ. ಎಷ್ಟೆಂದ್ರೂ ದೊಡ್ಡ ಶಹರದಲ್ಲಿ ಅದ್ಯಾವ್ದೋ ತೂಬಿನಲ್ಲಿ ಬಿದ್ಕೊಂಡು ಸ್ನಾನ ಮಾಡೋರಲ್ವ ನೀವೆಲ್ಲ. ಈ ಹಳ್ಳಿಮನೆಯ ಹಂಡೆಯ ಬಿಸಿನೀರಿನ ಸ್ನಾನದ ತಾಕತ್ತಾದ್ರೂ ಹೇಂಗೆ ಗೊತ್ತಾಗ್ಬೇಕು ನಿಮ್ಗೆ? ಆ ಡಾಕ್ಟರು ಏನೋ ಹೇಳ್ಬಿಡ್ತಾನೆ, ನನ್ನ ದೇಹ ನಂಗೆ ಗೊತ್ತಾಗಲ್ವಾ? ಮೈಭಾರ ಹತ್ತು ಕೆ.ಜಿ ಹೆಚ್ಚಾದಾಂಗಿದೆ ಈ ಬೆವರಿನ ಕೊಳೆಯಿಂದ ಕರ್ಮ. ಅದೆಂತೋ ಟವೆಲ್ ಒದ್ದೆ ಮಾಡ್ಕೊಂಡು ಒರೆಸ್ಕೊಳ್ಬೇಕಂತೆ… ಸಮುದ್ರ ಎಲ್ಲೋ ಮಂಗೇಶ ಅಂದ್ರೆ ಅಲ್ಲೇ ಇದ್ಯಲ್ಲ ಧಣಿ ಅಂತ ಹಳ್ಳ ತೋರ್ಸಿದಾಂಗಿದೆ ನಿಮ್ದೆಲ್ಲ ಎಂದು ಬೈದುಕೊಳ್ಳುವಾಗಲೇ ಅತ್ತ ಬಂದಿದ್ದ ಹದಿನಾಲ್ಕು ವರುಷದ ಮೊಮ್ಮಗಳು ಚಿನ್ಮಯಿಗೆ ಅಜ್ಜಿಯ ಮಾತು ಕೇಳಿ ಜೋರಾಗಿ ನಗು ಉಕ್ಕಿ ಕಿಸಕ್ಕೆಂದಳು, ಅಮ್ಮನ ಬಿರುಗಣ್ಣನ್ನೂ ಲೆಕ್ಕಿಸದೆ.
ಅಯ್ಯೋ ಅಜ್ಜಿ, ಅದು ತೂಬು ಅಲ್ಲ. ಟಬ್… ಟಬ್! ಅದ್ರಲ್ಲಿ ಮುಳ್ಗಿ ಏಳೋದಿಲ್ಲ ನಾವ್ಯಾರೂ. ಚೆನ್ನಾಗೇ ಸ್ನಾನ ಮಾಡ್ತೇವೆ ಆಯ್ತಾ? ಯು ನೋ ವಾಟ್ ಅಜ್ಜಿ, ಎಲ್ಲ ನಮ್ಮ ಮೈಂಡಲ್ಲಿ ಇರೋದು ಸೆಟ್ಟಿಂಗ್ಸ್. ಈಗ ನಿಂಗೆ ಅಲ್ಲಿ ಸ್ನಾನ ಮಾಡಿದ್ರೆ ಮಾತ್ರ ಹುಶಾರಾಗ್ತೀನಿ ಅಂತ ಅನ್ನಿಸ್ತಿದೆ. ಸ್ವಲ್ಪ ನಿನ್ನ ಥಿಂಕಿಂಗ್ ಅಂದ್ರೆ… ಹಾಂ, ಆಲೋಚನೇನ ಚೇಂಜ್ ಮಾಡ್ಕೋ. ಆಗ ನಿಂಗೇ ಸದ್ಯ ಪ್ರಿಕಾಶನ್ಸ್ ಇಂಪಾರ್ಟೆಂಟ್ ಅನ್ನಿಸ್ತದೆ ಎಂದು ಕಣ್ಣು ಮಿಟುಕಿಸಲು ಅನನ್ಯ ಮೆಲ್ಲನೆ ಗದರಿ ಸುಮ್ಮನಾಗಲು ಸನ್ನೆ ಮಾಡಿದಳು.
ಎಂಥದೋ ಮಣ್ಣು ತುಬೋ, ಟಬ್ಬೋ… ಅದು ಅತ್ಲಾಗೆ ಸಾಯ್ಲಿ. ಹಾಂ ಏನಂದೆ ನೀನು ಚಿನ್ನು, ಎಲ್ಲ ನಮ್ಮ ಮನ್ಸೊಳ್ಗೇ ಇರೋದು ಅಲ್ವಾ? ಮತ್ಯಾಕೆ ನಿನ್ನ ಅಪ್ಪ-ಅಮ್ಮ ಆ ಶಹರದಿಂದ ಈ ಹಳ್ಳಿಗೆ ಬಂದಿರೋಕೆ ಒಪ್ತಿಲ್ಲ? ಅಪ್ಪ-ಅಮ್ಮಂಗೆ ಮನಸ್ಸು ಯಾಕೆ ಕೈಕೊಡ್ತಿದೆ? ನಮ್ಗೆ ವಯಸ್ಸಾಯ್ತು… ಇಷ್ಟೊಂದು ಗದ್ದೆ, ತೋಟ ಎಲ್ಲ ಇದೆ… ನೋಡ್ಕೊಳೋಕೆ ಕಷ್ಟ ಆಗ್ತಿದೆ… ಚಿಕ್ಕವ್ರು ಬೇಗ ಹೊಂದ್ಕೊಳ್ತಾರೆ ಅಲ್ವಾ? ಈಗ ನೀ ನೋಡು ಎಷ್ಟು ಖುಶೀಲಿ ಕುಣ್ಕೊಂಡು ಇದ್ದೀಯಲ್ಲ ಇಲ್ಲಿ, ಮುದ್ದಮ್ಮ ಎಂದು ಅವಳನ್ನಾಲಿಂಗಿಸಿಕೊಂಡರು ರಾಧಮ್ಮ.
ಐ ಡೋಂಟ್ ಹ್ಯಾವ್ ಎನಿ ಪ್ರಾಬ್ಲೆಂ ಅಜ್ಜಿ, ನಾನು ಹಾಸ್ಟೆಲ್ಲಿನಲ್ಲಿ ಇರ್ತೀನಿ ಬೇಕಾದ್ರೆ. ಅಪ್ಪ, ಅಮ್ಮ ಕ್ಯಾನ್ ಶಿಫ್ಟ್ ಹಿಯರ್. ಆಗಾಗ ಬಂದು ನಾನು ಹೋಗ್ತೀನಿ. ಸೀ, ಈಗ ನನ್ನ ಪ್ರಾಜೆಕ್ಟಿಗಾಗಿ ಅವ್ರನ್ನ ಎಬ್ಬಿಸ್ಕೊಂಡು ಇಲ್ಲಿಗೆ ನಾನು ಬಂದಿಲ್ವಾ? ಹೌದು, ಅಪ್ಪ ಎಲ್ಲಿ? ಕತ್ಲಾಗೋದ್ರೆ ಮತ್ತೆ ನಾಳೆ ಹೋಗೋಣ ಪುಟ್ಟಿ ಅಂತ ಸುಮ್ಮನಾಗಿಸ್ತಾನೆ. ಆದಷ್ಟು ಬೇಗ ನಾನು ಎಲ್ಲ ರೆಕಾರ್ಡ್ ಮಾಡ್ಕೊಳ್ಬೇಕು ಚಿನ್ನು ಹೊರಜಗುಲಿಯತ್ತ ಹೋಗಿದ್ದೇ ರಾಧಮ್ಮ ಸೊಸೆಯತ್ತ ತಿರುಗಲು ಆಕೆ ಹಿತ್ತಲಿಗೆ ಅದಾಗಲೇ ಬಂದು ಕುಳಿತಿದ್ದ ಕೆಲಸದವಳಿಗೆ ಚಹಾ ಕೊಡುವ ನೆಪ ಮಾಡಿ ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿಬಿಟ್ಟಳು. ಅವಳಿಗೆ ಗೊತ್ತಾಗಿತ್ತು ಇನ್ನು ಬಾಣಗಳು ಪರೋಕ್ಷವಾಗಿ ತನ್ನೆಡೆಗೇ ಬರುತ್ತವೆ ಮತ್ತು ಅವುಗಳನ್ನು ಸಮಪಾಲಿನಲ್ಲಿ ಹಂಚಿಕೊಳ್ಳಲು ಪತಿ ವಿನೋದ ಆಸುಪಾಸಿಲ್ಲ, ತೋಟದ ಕಡೆಗೆ ಹೋಗಿದ್ದಾನೆ ಎಂದು. ಮಗಳ ಹುಚ್ಚಾಪಟ್ಟೆ ಮಾತಿಗೆ ಸಿಟ್ಟು ಉಕ್ಕಿಬರತೊಡಗಿತ್ತು. ರಾತ್ರಿ ಮಲಗುವ ಮುನ್ನ ಚೆನ್ನಾಗಿ ಕ್ಲಾಸ್ ತಗೊಂಡೇ ಸಿದ್ಧ ಎಂದು ನಿರ್ಧರಿಸಿದಳು.
* * *
ತೋಟದಲ್ಲಿ ಅಡಿಕೆ ತುಂಬಾ ಬಿದ್ದೋಗಿದ್ಯಾ ವಿನು? ಆಳುಗಳು ಎರಡು ದಿವ್ಸದಿಂದ ಈ ಕಡೆಗೆ ಬಂದಿಲ್ಲ. ಪಕ್ಕದೂರಲ್ಲಿ ಜಾತ್ರೆ ಇವತ್ತು ನಾಳೆ. ನೆನ್ಪಿದೆ ನಿಂಗೆ ಅಲ್ವಾ ನನ್ನ ಹೆಗಲ ಮೇಲೆ ಕೂತ್ಕೊಂಡು ಎಲ್ಲ ಕಡೆ ತಿರುಗ್ತಿದ್ದೆ ನೀನು ಚಿಕ್ಕವನಿದ್ದಾಗ. ತೋಟ, ಗದ್ದೆದೆಲ್ಲ ಉತ್ಪನ್ನ ಸಾಕಷ್ಟಾಗ್ತಿದೆ ಈಗ. ಸರಿಯಾಗಿ ನೋಡ್ಕೊಳ್ಳೋರು ಸಿಕ್ಕಿದ್ರೆ ಮತ್ತಷ್ಟು ಜಾಸ್ತಿ ಆಗ್ತದೆ. ಆದ್ರೆ ಯಾರೂ ಜನ ಸಿಕ್ತಿಲ್ವೇ, ಅದೇ ನನ್ನ ಚಿಂತೆ. ರಾಗಿ ಗದ್ದೆ ಗೌಡ್ರ ಮಗ ಈಗ ಪರ್ಮನೆಂಟ್ ಆಗಿ ಊರಿಗೆ ಬಂದು ಸೆಟ್ಲ್ ಆಗಿದ್ದಾನಂತಪ್ಪ. ಅವ್ನಿಗ ಈ ಕೊರೋನಾ ಕಾಲದಿಂದ ವರ್ಕ್ ಫ್ರಮ್ಮು… ಅದೆಂತೋ ಅವ್ನ ಕಂಪೆನಿ ಮನೆಲೇ ಕೆಲ್ಸ ಮಾಡಿಕೊಳ್ಳೋಕೆ ಪರ್ಮಿಶನ್ ಕೊಟ್ಟಿದ್ಯಂತೆ. ನಿಮ್ಮ ಹಾಗೆ ಆಗಾಗ ಆಫೀಸಿಗೆ ಹೋಗೋ ತಲೆಬಿಸಿಯೂ ಇಲ್ವಂತೆ. ಆರು ತಿಂಗ್ಳಿಗೊಮ್ಮೆ ಬೆಂಗ್ಳೂರಿಗೆ ಬಂದು ಮುಖ ತೋರಿಸಿದ್ರೆ ಆಗ್ತದಂತಪ್ಪ ಮಗನ ಕಡೆ ನೋಡದೆಯೆ ಹಾರಿಸಿಕೊಂಡು ಮಾತನಾಡಿದ್ದರು ಗಜಾನನ ಶರ್ಮರು. ಈಗಾಗಲೇ ಹಲವು ಬಾರಿ ಹಲವಾರು ರೀತಿಯಲ್ಲಿ ಸೂಚನೆಯನ್ನು ನೀಡಿದ್ದ ಅಪ್ಪನ ಈ ಮಾತಿನ ಹಿಂದಿನ ಮರ್ಮವನ್ನು ಅರಿತ ವಿನೋದ ನಸುನಕ್ಕನು.
ಅಪ್ಪಾ ಅಡಿಕೆ ಎಂತ ವಿಶೇಷ ಬಿದ್ದಿಲ್ಲ. ಒಂದಿಷ್ಟನ್ನ ಹೆಕ್ಕಿ ತಂದಿಟ್ಟಿದ್ದೇನೆ. ಇನ್ನೊಂದು ಮೂರ್ನಾಲ್ಕು ದಿನ ಹೇಂಗೋ ಇಲ್ಲೇ ಇರ್ತೀವಿ ಚಿನ್ನು ಪ್ರಾಜೆಕ್ಟಿಗಾಗಿ. ಅದೆಂತೋ ಗದ್ದೆ ಕಡೆಗೆ ಹೋಗೇ ವೀಡಿಯೋ ಎಲ್ಲ ಮಾಡ್ಕೊಳ್ಬೇಕಂತೆ. ಈ ಐಸಿಐಸಿ ಸಿಲೆಬಸ್ಸು ದೊಡ್ಡ ತಲೆನೋವಾಗಿದೆ ನಂಗೆ… ಯಾಕಾದ್ರೂ ಕೊಡ್ಸಿದ್ವೋ ಅನ್ನುವಷ್ಟು ಕಾಟ ಈಗ. ಆದ್ರೂ ಈ ಸಲ ಅವ್ಳಿಗೆ ಒಳ್ಳೇ ಪ್ರೊಜೆಕ್ಟ್ ಸಿಕ್ಕಿದ್ದು ನಮಗೂ ಅನುಕೂಲ ಆಯ್ತು ಇಲ್ಲಿಗೆ ಒಂದಿಷ್ಟು ದಿನ ಬಂದಿರೋಕೆ. ಅಪ್ಪಾ, ನೀವು ಹೇಳಿದ್ದು ನಿಜ… ಜಾತ್ರೆ, ಬಯಲಾಟ, ಟೆಂಟ್ ನಾಟ್ಕ ಎಲ್ಲ ಬನನೆನ್ಪಾಗಿ ಖುಶಿ ಆಗ್ತಿರ್ತದೆ. ಎಷ್ಟು ಚೆಂದಿತ್ತು ಆ ಕಾಲ ಅಂತ ಎಷ್ಟೋ ಸಲ ಅನ್ನಿಸೋದು. ಆದ್ರೆ ಅದೇ ಹಳತರಲ್ಲೇ ಬಂಧಿಯಾಗ್ಬಿಟ್ರೆ ಹೊಸತು ಕಾಣ್ಸದಿಲ್ಲ ಅಲ್ವಾ? ಅದೇ ಅಲೋಚನೆಯಲ್ಲಿ ಏನೋ ಬಂಡಿ ಮುಂದೆಳ್ಕೊಂಡು ಹೋಗ್ತಿರೋದು ಅನ್ನಿಸಿದೆ ಈಗ.
ಅಪ್ಪ, ಬೆಂಗಳೂರಲ್ಲೇ ಹುಟ್ಟಿ ಬೆಳೆದಿರುವ ಅನನ್ಯ ಈ ಹಳ್ಳಿಗೆ, ಪರಿಸರಕ್ಕೆ ಮೆಚ್ಚಿ ಒಂದ್ವಾರ ಬಂದು ಹೋಗ್ತಿರೋದೇ ದೊಡ್ಡದು. ಆಮೇಲೆ ಬೋರಾಗ್ತಿದೆ ಅಂತ ಹೇಳ್ಬಿಡ್ತಾಳೆ. ಎಂತ ದೊಡ್ಡ ಸಾಮಾನು ಬೇಕಿದ್ರೂ, ದೊಡ್ಡ ವೈದ್ಯರನ್ನ ಕಾಣ್ಬೇಕು ಅಂದ್ರೂ ಇಪ್ಪತ್ತೈದು ಕಿಲೋಮೀಟರಿನ ಮೂರ್ನಾಡು ಪೇಟೆಗೇ ಹೋಗ್ಬೇಕಲ್ಲ! ಈಗ ನೋಡಿ ಮೂರು ದಿನದ ಹಿಂದೆ ಅಮ್ಮಂಗೆ ಜೋರು ಜ್ವರ ಬಂದು ನಿತ್ರಾಣ ಆಗೋದಾಗ ಎಷ್ಟು ಟೆನ್ಷನ್ ನಮ್ಗೆಲ್ಲ! ಅಷ್ಟು ದೂರ ಕಾರಲ್ಲಿ ಕರ್ಕೊಂಡು ಹೋಗೋವರೆಗೂ ನನ್ನ ಎದೆ ಹೊಡ್ಕೊಳ್ತನೇ ಇತ್ತು ಗೊತ್ತಾ? ಹೂಂ, ನಮ್ಮ ಆಫೀಸಲ್ಲೂ ವರ್ಕ್ ಫ್ರಮ್ ಹೋಮೇ ಇದೆ ಈಗ್ಲೂ, ಆದ್ರೆ ತಿಂಗ್ಳಿಗೊಂದೆರಡು ಸಲವಾದ್ರೂ ಹೋಗಿ ಬರ್ಬೇಕಾಗ್ತದೆ. ಒಬ್ಬೊಬ್ಬರ ಆಫೀಸಿನಲ್ಲಿ ಒಂದೊಂದು ರೂಲ್ಸು ಇರ್ತದೆ ಎಂತ ಮಾಡೋದು ಸುದೀರ್ಘ ನಿಟ್ಟುಸಿರಿಡಲು ಇನ್ನೇನೋ ಹೇಳಲು ಹೊರಟವರನ್ನು ತಡೆದದ್ದು ಮೊಮ್ಮಗಳ ಮಾತು.
ಅಪ್ಪಾ, ವಾಟ್ ಈಸ್ ದಿಸ್… ಎಷ್ಟು ಟೈಮ್ ಆಯ್ತು ನಾನು ಕಾಯ್ತಿದ್ದು ಗೊತ್ತಾ? ಮಳೆ ಇವತ್ತೂ ಬರೋ ಹಾಗಿದೆ ಅಂತ ಅಜ್ಜಿ ಹೇಳ್ತಿದ್ಳು. ನಂಗೆ ಬೇಗ ಕರ್ಕೊಂಡು ಹೋಗು ಅಮ್ಮ ರೆಡಿ ಆಗಿದ್ದಾಳೆ. ಅವ್ಳಿಗೆ ರಾತ್ರಿ ಆಫೀಸ್ ಕಾಲ್ ಬೇರೆ ಇದ್ಯಂತೆ. ಯು ಪೀಪಲ್ ಡೋಂಟ್ ಹ್ಯಾವ್ ಟೈಮ್ ಫಾರ್ ಮೈ ವರ್ಕ್ ಸೆಟೆದುಕೊಂಡು ಕೂರಲು ಜಗ್ಗನೆ ಎದ್ದ ವಿನೋದ ಮಗಳನ್ನೊಮ್ಮೆ ಮುದ್ದಿಸಿ, ಸಮಾಧಾನಿಸುತ್ತಾ ಕಾರನ್ನು ಶೆಡ್ಡಿನಿಂದ ಹೊರ ತೆಗೆಯಲು ಓಡಿದ.
ಚಿನ್ನು ಅದೆಂತ ಪ್ರಾಜೆಕ್ಟೇ ನಿಂದು? ಗದ್ದೆಗೆಲ್ಲ ಹೋಗಿ ಮಾಡೋಕೆ ಕೊಟ್ಟಿದ್ದಾರೆ ಸ್ಕೂಲಲ್ಲಿ ಅಂದ್ರೆ? ನೀ ಈಗ ಬರೀ ಒಂಭತ್ತನೇ ತರಗತಿ ಅಲ್ವಾ? ಇದೆಲ್ಲ ಈಗ್ಲೇ ಇರ್ತದಾ? ಎಂದು ಅಚ್ಚರಿಯಿಂದ ಕೇಳಿದ ಅಜ್ಜನ ಮಾತಿಗೆ ನಗುವರಳಿಸಿದ ಚಿನ್ಮಯಿ,
ಅಜ್ಜ, ಇದೆಲ್ಲ ಎಲ್ರಿಗೂ ಕಂಪಲ್ಸರಿ ಅಲ್ಲ, ಆದ್ರೆ ನಾನು ಜಾಯಿನ್ ಆಗಿದ್ದೀನಿ ಅಷ್ಟೇ. ಒಳ್ಳೇ ಪ್ರಾಜೆಕ್ಟ್ ಮಾಡಿದವ್ರಿಗೆ ಗೋಲ್ದ್ ಮೆಡಲ್ ಕೊಡ್ತಾರಂತೆ! ನಾನು ಭತ್ತ ಹೇಗೆ ಬೆಳೆಯತ್ತೆ, ಹೇಗಿರ್ತದೆ ಅಂತೆಲ್ಲ ಒಂದು ಡಾಕ್ಯುಮೆಂಟ್ರಿ ಮಾಡ್ಬೇಕು ಅಂತಿದ್ದೇನೆ ಎಂದು ಹುಬ್ಬು ಹಾರಿಸಿ ಹೆಮ್ಮೆಯಿಂದ ಉತ್ತರಿಸಿದ್ದಳು.
ಸರಿ ಪುಟ್ಟಿ, ನಿಂಗೇ ಸಿಗ್ಲಿ ಆಯ್ತಾ… ಚೆನ್ನಾಗಿ ತಯಾರಿ ಮಾಡ್ಕೋ. ಈಗ್ಲೇ ಗಂಟೆ ನಾಲ್ಕೂವರೆ ಆಗೋಗಿದೆ, ಮೋಡ ಸ್ವಲ್ಪ ಕಡಿಮೆ ಇದೆ ಇವತ್ತು ಪುಣ್ಯಕ್ಕೆ. ವಾರದಿಂದ ಬಿಡದೇ ಮಳೆ ಹೊಯ್ದು ನಿಮ್ಗೆ ಹೋಗೋಕೇ ಆಗ್ಲಿಲ್ಲ. ಸರಿ ಬೇಗ ಹೊರಡಿ, ಹೇಗೂ ಅನು ಪಕ್ಕದ್ಮನೆ ಪಾರ್ವತಿಗೆ ಬರೋಕೆ ಹೇಳೇ ಇರ್ತಾಳೆ ಅಜ್ಜಿ ಹತ್ರ ಇರೋಕೆ, ಚಿಂತೆ ಬೇಡ ಎಂದು ಮೊಮ್ಮಗಳ ತಲೆ ಸವರಿ ಒಳಗೆ ನಡೆದರು ಶರ್ಮರು.
~೨~
ನನ್ನ ಮಗಳು ಪಟಪಟನೆ ಕನ್ನಡ ಮಾತಾಡೋದನ್ನ ಕೇಳೋದೇ ಚಂದ ಅಲ್ವಾ ಅನು. ನಾನು ಚಿಕ್ಕಂದಿನಿಂದ ಕನ್ನಡ ಸ್ವರಗಳನ್ನ ಕಲಿಸಿದ್ದಕ್ಕೂ ಸಾರ್ಥಕ ಎಂದು ಪತ್ನಿಯ ಕಡೆ ತಿರುಗಿದವನಿಗೆ ಕಂಡಿದ್ದು ಹೆಂಡತಿಯ ಬಿರುಗಣ್ಣು.
ದಾರಿ ನೋಡ್ಕೊಂಡು ಡ್ರೈವ್ ಮಾಡಿ ಕನ್ನಡದ ಮಹಾನ್ ಪಂಡಿತರೆ. ತಾವು ಅರ್ಧ ರಾತ್ರಿಯವರೆಗೂ ಆಫೀಸ್ ಮೀಟಿಂಗಿನಲ್ಲಿ ಮುಳುಗಿದ್ದಾಗ, ನನ್ನ ಕೆಲ್ಸವನ್ನು ಬದಿಗಿಟ್ಟು ಅವ್ಳಿಗೆ ಹೋಮ್ವರ್ಕ್, ಎಕ್ಸಾಮ್ ತಯಾರಿ ಎಲ್ಲ ಮಾಡ್ಸಿದ್ದು ಇದೇ ಬೆಂಗಳೂರಿನ ಹುಡ್ಗಿ ನೆನ್ಪಿರ್ಲಿ ಎಂದು ಮೂತಿ ತಿವಿಯಲು ಹಿಂಬದಿ ಸೀಟಿನಲ್ಲಿ ಕಿವಿಗೆ ಇಯರ್ ಫೋನ್ ಹಾಕಿ ಕುಳಿತು ಯಾವುದೋ ರ್ಯಾಪ್ ಹಾಡಿನೊಳಗೆ ಮುಳುಗಿಹೋಗಿದ್ದ ಚಿನ್ಮಯಿಗೆ ಇದ್ಯಾವುದೂ ಗೊತ್ತಾಗುವಂತಿರಲಿಲ್ಲ.
ಚಿನ್ನು, ವಿ ಹ್ಯಾವ್ ರೀಚ್ಡ್, ಎದ್ಕೋ… ಅರ್ಧಗಂಟೆ ಆಗಿದ್ದಷ್ಟೆ ಇವ್ಳು ನಿದ್ದೆನೂ ಮಾಡ್ಬಿಟ್ಟಾಯ್ತು? ನಮ್ಮನ್ನ ಗಡಿಬಿಡಿ ಮಾಡೋದೇ ಆಗೋಯ್ತು ಈ ಹುಡ್ಗಿ ಅನನ್ಯ ಹಾಡಿನೊಳಗೆ ನಿದ್ದೆಗೆ ಜಾರಿದ್ದ ಮಗಳನ್ನು ಎಬ್ಬಿಸಿದ್ದಳು.
ನಿಧಾನಕ್ಕೆ ಕಣ್ತೆರೆದು ಅಗಲಿಸಿ ನೋಡಿದ ಚಿನ್ನುವಿಗೆ ಎದುರಿಗೆ ಕಣ್ಣು ಹಾಯಿಸಿದಷ್ಟೂ ದೂರ ತೆನೆ ಹೊತ್ತ ಹಚ್ಚಹಸಿರಿನ ಭತ್ತದ ಗದ್ದೆಯ ಸೌಂದರ್ಯ ಅವಳ ಅಳಿದುಳಿದ ನಿದ್ದೆಯನ್ನೂ ಹಾರಿಸಿಬಿಟ್ಟಿತು.
ವಾವ್! ಇಟ್ಸ್ ಆಸಮ್ ಅಪ್ಪಾ… ಕಾಂಟ್ ಬಿಲೀವ್! ಆಕ್ಚುವಲಿ ವೀ ಆರ್ ಇನ್ ಅವರ್ ಪ್ಯಾಡಿ ಫೀಲ್ಡ್! ಕೆನ್ನೆಗಳ ಮೇಲೆ ಕೈಗಳನ್ನೊತ್ತಿಕೊಂಡು ನಿಂತುಬಿಟ್ಟಿದ್ದಳು ಚಿನ್ಮಯಿ.

ಮಗಳ ಸಂತಸ ಕಂಡು ಅವರಿಬ್ಬರಿಗೂ ಖುಶಿಯಾಗಿತ್ತು. ಅವಳಿಗೆ ಬುದ್ಧಿ ಬಂದಾಗಿನಿಂದ ಈ ಸಮಯದಲ್ಲಿ ಊರಿಗೆ ಬರಲು ಅವರಿಗೆ ಏನಾದರೂ ಒಂದು ನೆಪ, ಅಡ್ಡಿ, ತೊಂದರೆಯಾಗಿ ಮಗಳಿಗೆ ಭತ್ತದ ಗದ್ದೆಯನ್ನು ಇಷ್ಟು ಸಮೀಪದಿಂದ ತೋರಿಸಲೇ ಆಗಿರಲಿಲ್ಲ. ಅನನ್ಯಳಾದರೋ ಮದುವೆಯಾದ ಹೊಸತರಲ್ಲಿ ಹೊಸತನವನ್ನರಸಿ ಪತಿಯ ಜೊತೆಗೆ ಮಳೆಗಾಲ, ಚಳಿಗಾಲಗಳ ಕೆಲವು ದಿನಗಳನ್ನು ಈ ಕಾನೇರಿ ಹಳ್ಳಿಯಲ್ಲಿ ಕಳೆದಿದ್ದಳು. ಆದರೆ ಹಲವು ವರುಷಗಳ ಅನಂತರ ಕಾಣುತ್ತಿರುವ ದೃಶ್ಯ ಸಂಪತ್ತು ಅವಳನ್ನೂ ಮೈಮರೆಸಿತ್ತು. ವಿನೋದನ ಎದೆಯಲ್ಲೇನೋ ಸಣ್ಣ ಛಳಕ್. ತುಸು ಹೊತ್ತಿನ ಮುಂಚೆ ಅಪ್ಪ ಜಗುಲಿಯಲ್ಲಿ ಆಡಿದ್ದ ಯಾರೂ ಸರಿಯಾಗಿ ನೋಡಿಕೊಳ್ಳುವವರೇ ಸಿಕ್ಕುತ್ತಿಲ್ಲ ಎಂಬ ಮಾತೇ ಅಲೆಯೆಬ್ಬಿಸತೊಡಗಿತ್ತು.
ಕಮಾನ್ ಚಿನ್ನು ಬೇಗ ಅದೇನೋ ನಿನ್ನ ಕೆಲ್ಸ ಮುಗಿಸ್ಕೋ. ಮೋಡ ಎಷ್ಟೊತ್ತಿಗೂ ಹೆಚ್ಚಾಗಿ ಮಳೆ ಬೀಳಬಹುದು, ಬೆಳಕೂ ಕಡ್ಮೆ ಆಗ್ತಿದೆ ಅಪ್ಪನ ಅವಸರಕ್ಕೆ ತುಸು ಹುಬ್ಬೇರಿಸಿದರೂ ಅದರಲ್ಲೂ ಅರ್ಥವಿದೆ ಎಂದು ಅನ್ನಿಸಿದ ಚಿನ್ಮಯಿ ತನ್ನ ಪುಟ್ಟ ಕ್ಯಾಮರಾ ಮತ್ತು ಮೊಬೈಲಿನ ಜೊತೆಗೆ ಗದ್ದೆಯ ಅಂಚಿನತ್ತ ಹೋಗಲು ಮಗಳನ್ನು ಇಬ್ಬರೂ ಹಿಂಬಾಲಿಸಿದರು.
* * *
ಓಹೋಹೋ… ಏನು ವಿನೋದಪ್ಪ ಭಾರಿ ಸಂಭ್ರಮ ಆತಲ್ಲ ಈಗ… ಎಂತ ವಿಶೇಷ? ಈ ಸಮಯದಲ್ಲಿ ಊರಿಗೆ ಬಂದೀರಿ, ಅದೂ ಹೆಣ್ತಿ ಮಗ್ಳು ಎಲ್ಲ ಜೊತೆಯಾಗಿ! ಎಷ್ಟು ವರ್ಸಾತ್ರ ನಿಮ್ಮನ್ನೆಲ್ಲ ನೋಡಿ! ಗದ್ದೆಯಲ್ಲೇನೋ ಕೆಲ್ಸ ಮಾಡ್ತಿದ್ದ ಚಂದ್ರಿ ಸೊಂಟಕ್ಕೆ ಕೈ ಇಟ್ಟುಕೊಂಡು ನೋಡಲು ಇಬ್ಬರೂ ಹಲ್ಕಿರಿದರು. ಚಿನ್ಮಯಿ ಈಗ ತನ್ನ ಕಾರ್ಯದೊಳಗೆ ಸಂಪೂರ್ಣ ಮುಳುಗಿಬಿಟ್ಟಿದ್ದಳು.
ಹಾಗೇನಿಲ್ಲ ಚಂದ್ರವ್ವ ಬರ್ತಾ ಇರ್ತೀನಲ್ಲ ಆಗೀಗ. ಕೆಲ್ಸ ಸ್ವಲ್ಪ ಜೋರು. ಎರಡು ವರ್ಷ ಕೊರೋನಾ ಗಲಾಟೆ… ಆಗೆಲ್ಲ ಶಹರದ ನಾವು ಊರಿನ್ಕಡೆ ಬಂದ್ರೆ ನೀವೆಲ್ಲ ಓಡೋಗ್ತಿದ್ರಿ, ಮನೆ ಕೆಲ್ಸಕ್ಕೆ ಬರೋದಿಲ್ಲ ಮಗ, ಸೊಸೆ ಬಂದ್ರೆ ಅಂತಿದ್ರಂತೆ. ನಮ್ಮಿಂದ ವೈರಸ್ಸು ನಿಮ್ಗೆ ಬರ್ಬಾರ್ದು ನೋಡು… ಅದ್ಕೇ ಅಲ್ಲೇ ಉಳ್ದಿದ್ದಾಯ್ತು. ಈಗ ಒಂದ್ವರ್ಷದಿಂದ ಎರಡು ಸಲ ಬಂದು ಹೋದ್ವಲ್ಲ. ಈಗ ಮಗು ಶಾಲೇಲಿ ಏನೋ ಹೋಮ್ವರ್ಕು ಕೊಟ್ಟಿದ್ದಾರೆ ಅಂತ ಮತ್ತೆ ಬಂದಿದ್ದೀವಿ ನಗಲು ಚಂದ್ರಿ ಚಿನ್ನುವನ್ನೇ ಗಮನವಿಟ್ಟು ನೋಡಿದಳು.
ದೊಗಲೆ ಪ್ಯಾಂಟು, ಅದ್ಯಾವ್ದೋ ಮಾಸಲು ಟಾಪ್ ಧರಿಸಿ ಅದರ ಮೇಲೆ ಪುಟ್ಟ ಜಾಕೆಟ್ ಏರಿಸಿಕೊಂಡು ಚಿಕ್ಕ ಪೋರಿಯರ ದುಂಡು ಮುಖದ ಪೋರಿ ಚಕಚಕನೆ ಕ್ಯಾಮರಾ ಮತ್ತು ಮೊಬೈಲಿನಲ್ಲಿ ಅದೇನೇನೋ ಮಾಡುತ್ತಿರುವುದು ಕಂಡು ಗಲ್ಲದ ಮೇಲೆ ಕೈಯಿಟ್ಟುಕೊಂಡಳು.
ಗದ್ದೆ ಬದುವಿನಲ್ಲಿ ಇಬ್ಬರು ಪುಟ್ಟ ಪೋರಿಯರು ಕೈಕೈ ಹಿಡಿದುಕೊಂಡು ಅದೇನೋ ಹಾಡಿಕೊಳ್ಳುತ್ತಿದ್ದರು. ಚಿನ್ನು ಮತ್ತು ಅನನ್ಯ ಅವರ ಬಳಿಗೆ ಹೋಗಿ ಆಸಕ್ತಿಯಿಂದ ಕೇಳತೊಡಗಲು ಅವರು ಉತ್ಸಾಹದಿಂದ ಮತ್ತೂ ಜೋರಾಗಿ ಹಾಡಲು ಆರಂಭಿಸಿದರು. ಚಿನ್ಮಯಿ ಕೂಡಲೇ ತನ್ನ ಮೊಬೈಲಿನಲ್ಲಿ ವೀಡಿಯೋ ಮಾಡಲು ತೊಡಗಿದ್ದೇ ಆ ಪೋರಿಯರ ಹುಮ್ಮಸ್ಸು ದುಪ್ಪಟ್ಟಾಯಿತು.
ಅಕ್ಕಿ ಅದೆ? ನೀರ್ ಅದೆ? ಒಲಿ ಅದೆ? ಸೌದೆ ಅದೆ? ಮೆಣ್ಸ್ ಅದೆ, ಉಪ್ಪ್ ಅದೆ?
ಅಡ್ಗೆ ಮಾಡೂಕ್ ಯಾರೂ ಇಲ್ಲ?
ಉಂಬೂದ್ ಬಡ್ಸೂಕ್ ಯಾರೂ ಇಲ್ಲ!
ಎಲೆ ಅದೆ? ಚಾಪೆ ಅದೆ? ಲೋಟ ಅದೆ? ಪಾಯ್ಸ್ ಅದೆ? ಎಲ್ಲ ಅದೆ?
ಅಡ್ಗೆ ಮಾಡೂಕ್ ಯಾರೂ ಇಲ್ಲ?
ಉಣ್ಣೂಕೆ ಬರೂಕೂ ಯಾರೂ ಇಲ್ಲ!
ಇದೇ ರೀತಿಯ ಚಿತ್ರವಿಚಿತ್ರ ಸಾಲುಗಳನ್ನು ಕಟ್ಟಿಕೊಂಡು ರಾಗವಾಗಿ ಹಾಡಿಕೊಳ್ಳುತ್ತ, ತಿರುತಿರುಗುತ್ತ ಕುಣಿಯುವ ಮಕ್ಕಳ ಜೊತೆಗೆ ಚಿನ್ನುವೂ ಸೇರಿಕೊಂಡು ಅನನ್ಯಳೂ ಚಪ್ಪಾಳೆ ತಟ್ಟುತ್ತ, ಲೀನವಾಗಿದ್ದರೆ ವಿನೋದನಲ್ಲಿ ಮಾತ್ರ ತಳಮಳವನ್ನು ಹೆಚ್ಚಿಸಿತ್ತು.
ಅವರ ಹಾಡು ಮುಗಿದಿದ್ದೇ ಒಳಗಿನ ಬಿಸಿಯನ್ನು ಹೊರ ಹಾಕುವಂತೆ ಜೋರಾಗೊಮ್ಮೆ ಉಸಿರೆಳೆದುಕೊಂಡು,
ಚಂದ್ರವ್ವ, ನಿನ್ನ ಮೊಮ್ಮಕ್ಳಾ ಇವ್ರು? ಎಂದಿದ್ದೇ ಆಕೆ ಥಟ್ಟನೆ ಅವನತ್ತ ತಿರುಗಿ,
ಅಯ್ಯಾ ಅವು ಗುಡ್ಡದ ಅತ್ಲಾಗೆ ಇರೋ ಬಡವಿ ನಾಗಿ ಮಕ್ಳು ವಿನೋದಪ್ಪ. ಗಂಡ ಸತ್ತೋಗವ್ನೆ, ಪಾಪ ಆಕೆಗೆ ಈಗ ಆ ದಿನದ್ ಆದಿನಕ್ಕೆ ದುಡ್ಕಳದೇ ಆಗಿದೆ. ಈ ಮಕ್ಳು ನಮ್ಮೂರಿನ ಬಾಲ್ವಾಡಿಗೆ ಹೋಗ್ತಿವೆ. ಮಧ್ಯಾಹ್ನ ಬಿಸಿ ಊಟಾನಾದ್ರೂ ಕೊಡ್ತ್ರಲ್ಲ ಅಲ್ಲಿ ಅಂತ ಅಮ್ಮನೂ ಕಳಿಸ್ತಿದೆ. ನನ್ನ ಮೊಮ್ಮಗ್ನ ನೀವ್ಯಾರೂ ನೋಡಿಲ್ಲ ಅಲ್ವಾ? ತಡೀರಿ ನಾಳ್ಗೀಳ್ಗೆ ಕರ್ಕ ಬರ್ತೆ ಮನೆ ಹತ್ರ. ಅದೇ ನಿಮ್ಗಿಂತ ಒಂದು ಐದು ವರ್ಷ ಸಣ್ಣವನಿದ್ದನಲ್ಲ ನನ್ನ ಮೂರ್ನೇ ಮಗ ಅವ್ನ ಮಗ್ನೂ ಮೂರ್ನಾಡು ಪೇಟೇಲಿರೋ ಇಂಗ್ಲೀಸು ಶಾಲೆಗೆ ಹೋಗ್ತಿದ್ದಾನೆ. ಎಂಟನೇ ಕ್ಲಾಸು ಈಗ. ಟುಸ್ಸುಪುಸ್ಸು ಇಂಗ್ಲೀಸು ಮಾತಾಡ್ತಾನೇ ಇರ್ತಾನೆ. ನನ್ನ ದೊಡ್ಡ ಮಗನ ಸಣ್ಣ ಕೂಸೇ ಎಲ್ಲರಿಗೂ ಟೀಚರು ಮನೇಲಿ. ಅದು ಕಾಲೇಜು ಕಲ್ತು ಬೆಂಗ್ಳೂರಲ್ಲೆಂತೋ ಕೆಲ್ಸ ಮಾಡ್ಕಂಡಿದೆ. ‘ಅಜ್ಜಿ, ನೀ ಇನ್ನು ಈ ಗದ್ದೆ ಕೆಲ್ಸ, ಅವ್ರಿವ್ರ ಮನೆಕೆಲ್ಸ ಎಲ್ಲ ಮಾಡೂಕಾಗ… ಮಕ್ಕ, ಮೊಮ್ಮಕ್ಕ ಎಲ್ಲ ದುಡೀತ್ರು, ನೀ ಆರಾಮಾಗಿ ಉಣ್ಕ ಮಕ್ಕ ಅಂತ ಹೇಳ್ತು ಅಂಬೆ! ಆದ್ರೆ ಸಣ್ಣಿಂದ ದುಡ್ದ್ ಜೀವ ಇದು… ಈಗ ಹೇಂಗೆ ಕುತ್ಕಂಡು ತಿಂದೀತು? ಅದ್ಕೇ ಮೊದ್ಲಿಂದ್ ಇಸ್ವಾಸದಿಂದ ದುಡೀತಿದ್ದ ಎಲ್ಡ್ ಮನೇಗಷ್ಟೇ ಹೋಗ್ತಿಪ್ಪದು. ಅದೂ ಇದೊಂದೇ ವರ್ಸ ಅಂತ ಕಾಣ್ತದೆ. ಮಕ್ಕ ಎಲ್ಲ ಹಾನೂರು ಕಡೆ ಮನೆ ನೋಡವ್ರೆ. ಅದೆಂತೋ ಫ್ಯಾಕ್ಟ್ರಿ ಕಟ್ತಾರಂತೆ ಅಲ್ಲಿ.. ಚೊಲೋ ಸಂಬ್ಳ ಕೊಟ್ಟು, ಮಕ್ಳಿಗೆ ಇಂಗ್ಲೀಸು ಶಾಲೆ ಎಲ್ಲ ಯವಸ್ಥೆ ಮಾಡವ್ರಂತಪ್ಪ. ಹೋದ್ವಾರನೇ ಇದೆಲ್ಲ ನಿಮ್ಮ ಅಪ್ಪಾರ ಹತ್ರನೂ ಪ್ರಸ್ತಾಪ ಮಾಡಾಗಿದೆ ನಾನು ಎನ್ನುತ್ತಾ ಮತ್ತೆ ಬಗ್ಗಿ ಏನನ್ನೋ ಕೀಳುವ ಕೆಲಸದಲ್ಲಿ ಮಗ್ನಳಾದಳು ಚಂದ್ರಿ.
ಅಮ್ಮ, ಮಗಳು ಆ ಪರಿಸರದೊಳಗೆ ಮುಳುಗಿ ಸೆಲ್ಫಿ, ಫೋಟೋ ಎಂದೆಲ್ಲ ಮುಳುಗಿರಲು ವಿನೋದನಿಗೆ ಯಾಕೋ ಎಲ್ಲವೂ ಕರಗುತ್ತಿರುವಂತೆ ಭಾಸವಾಯಿತು. ಸುಂದರ ವರ್ಣ ತೈಲವೊಂದಕ್ಕೆ ಬಿದ್ದ ಹನಿ ನೀರು ಸಣ್ಣ ಧಾರೆಯಾಗಿ, ಕವಲಾಗಿ ಎಲ್ಲೆಡೆ ಹರಿದು ಸಂಪೂರ್ಣ ಚಿತ್ರವನ್ನೇ ಕಲಸುಮೇಲೋಗರ ಮಾಡಿದಂತಹ ಭಾವ!
– ೩ –
ನಿಜ್ವಾಗ್ಲೂ ಊಟ ಆಗಿದ್ಯೆನೋ ಶಂಕರ? ಇವ್ರದ್ದೆಲ್ಲ ಊಟ ಆಗೋಯ್ತು ಅಂತ ದಾಕ್ಷಿಣ್ಯ ಆಗಿ ಸುಮ್ನಿರ್ಬೇಡ. ಸೊಸೆ ಮೀಟಿಂಗಲ್ಲಿದ್ರೂ ಮಗ ಬಡಿಸ್ತ. ನಾ ಇಲ್ಲೇ ಇರ್ತೆ ಮಾತಾಡಿಸ್ತ, ಊಟ ಮಾಡು ಎಂದು ರಾಧಮ್ಮ ತಮ್ಮ ಮಗನನ್ನು ಭೇಟಿಯಾಗಲು ಸುಮಾರು ಹತ್ತುಗಂಟೆಯ ಹೊತ್ತಿಗೆ ನಾಲ್ಕುಮನೆಯಾಚೆಯಿಂದ ಬಂದ ಶಂಕರನನ್ನು ಅಭ್ಯಾಸಬಲದಲ್ಲಿ ಅದಾಗಲೇ ಎರಡು ಸಲ ಒತ್ತಾಯಿಸಿದ್ದರು. ಆದರೆ ಅವರಿಗೋ ಒಳಗೇ ಪುಕಪುಕ ಆಗುತ್ತಿತ್ತು. ಕಳೆದ ಕೆಲವು ದಿನಗಳಿಂದ ಅಡುಗೆಮನೆ ಜವಾಬ್ದಾರಿ ಸೊಸೆಯದಾಗಿತ್ತಲ್ಲ, ಆಯ್ತು ರಾಧತ್ತೆ… ನಿಮ್ಮನೇಲೂ ಆಗೋಗ್ಲಿ ಸ್ವಲ್ಪ… ಹಾಕಿ ಒಂದು ಎಲೆ ಎಂದು ಈತನೇನಾದರೂ ಹೇಳಿಬಿಟ್ಟರೆ ಏನು ಗತಿಯಪ್ಪ ಎಂದು ಒಮ್ಮೆ ಅಡುಗೆಮನೆಗೆ ಹೋಗಿ ತಪ್ಪಲೆಯಲ್ಲೇನಿದೆ? ಫ್ರಿಜ್ಜಲ್ಲೇನಿದೆ ಎಂದು ನೋಡಿದರೆ, ಅಕ್ಕಚ್ಚು ಎಂದರೆ ಮಾರು ದೂರ ಓಡುವ ಸೊಸೆ ಬಾಲ್ಡಿಗೆ ಸುರಿಯದೇ ಇಟ್ಟಿದ್ದ ಸ್ವಲ್ಪ ಸಾರು, ಮೊಸರು, ಮೂರು ಸೌಟು ಅನ್ನ, ಅಷ್ಟೇ ಉಳಿದದ್ದು ಕಂಡು ಮೂರನೇ ಬಾರಿಗೆ ಕೇಳುವ ಕೆಲಸಕ್ಕೇ ಹೋಗಿದೆ ತಮಗಾಗಿ ಕಷಾಯ ಮಾಡಿಕೊಳ್ಳುವಾಗಲೇ ಅವರಿಬ್ಬರೂ ಮಾಡಿ ಕೊಟ್ಟು ಕೋಣೆಗೆ ಹೋಗಿಬಿಟ್ಟಿದ್ದರು.
ಪರ್ವಾಗಿಲ್ಲ ಸೊಸೆ, ನನ್ನ ಹಾಗೆ ತಪ್ಪಲುಗಟ್ಲೆ ಮಾಡಿ ಇಡೋಲ್ಲ.. ಅಳತೆಯ ಅರಿವಿದೆ ಎಂದು ಒಮ್ಮೆ ಮೆಚ್ಚುಗೆಯಾದರೂ… ಹ್ಮ್, ನನ್ನ ಹಾಗೆ ಆರೇಳು ಆಳುಗಳಿಗೆ, ನೆಂಟ್ರಿಷ್ಟರಿಗೆಲ್ಲ ಮಾಡ್ತಾ ಇದ್ರೆ ಗೊತ್ತಾಗೋದು ಅಳತೆ ಕೈಮೀರೋದು ಹೇಂಗೆ ಅಂತ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದರು.
ಇತ್ತ ರಾಧಮ್ಮ ಮರೆಯಾಗಿದ್ದೇ ಶಂಕರ ಮುಖ್ಯ ವಿಷಯಕ್ಕೆ ಮುನ್ನುಡಿಯಿಟ್ಟ.
ನೋಡು ವಿನೋದ ನೀನು ನನ್ನ ಮೆಚ್ಚಿನ ಗೆಳೆಯ ಆಗಿದ್ದೆ ಶಾಲೇಲಿ. ನಿಂಗೆ ಎಷ್ಟು ಸಲ ಮಾಸ್ತರರ ಪೆಟ್ಟಿನಿಂದ ಬಚಾವು ಮಾಡಿಲ್ಲ ಹೇಳು? ಅದ್ರ ಸಲುವಾಗಾದ್ರೂ ಹೆಲ್ಪ್ ಮಾಡು ಮಾರಾಯ ಎಂದು ಬಿಸಿಬಿಸಿ ಕಷಾಯ ಹೀರುತ್ತ, ಶಂಕರ ಕುಶಾಲು ಮಾಡಿದ್ದ. ಆದರೆ ಅವನ ಧ್ವನಿಯಲ್ಲಿದ್ದ ಕಳಕಳಿಯ ಬಿಸಿ ವಿನೋದನಿಗೆ ತಾಗಿತ್ತು.
ನೀ ಏನು ಅಂತ ಹೇಳು ಮೊದ್ಲು ಮಾರಾಯ… ಅದೆಂತ ಪೆಪ್ಪೆಪ್ಪೆ ನಿಂದು ಈ ಹೊತ್ತಲ್ಲಿ? ನಮ್ಮಲ್ಲಿ ಯಾವಾಗ ಇಷ್ಟು ನಾಚ್ಗೆ, ಹಿಂಜ್ಕೆ ಎಲ್ಲ ಹುಟ್ಟಿದ್ದು ತುಸು ಗದರಲು ಸುಮ್ಮನೆ ಮಳ್ಳುಮಳ್ಳಾಡುತ್ತಿದ್ದ ಶಂಕರ ಅತ್ತಿತ್ತ ಯಾರೂ ಇಲ್ಲದ್ದು ನೋಡಿಕೊಂಡವನೇ ಅವನತ್ತ ಜರುಗುತ್ತ,
ನಾನು ಈ ಹೊತ್ತಲ್ಲಿ ಇಲ್ಲಿಗೆ ಬಂದಿದ್ದೇ ಈ ವಿಷ್ಯ ನಿನ್ನ ಬಿಟ್ಟು ಬೇರೆ ಯಾರಿಗೂ ಗೊತ್ತಾಗ್ದೇ ಇರಲಿ ಅಂತ ಎಂದು ಉಗುಳು ನುಂಗಿ ಮೌನವಾಗಲು ಹಣೆಯೊತ್ತಿಕೊಂಡ ವಿನೋದನನ್ನು ಕಂಡು,
ತಡೆತಡೆ ಎಲ್ಲದನ್ನೂ ಫಟ್ಟನೆ ಹೇಳಕಾಗ್ತದಾ? ಅದೆಂತ ಅಂದ್ರೆ… ನಿಂಗೇ ಗೊತ್ತು ನನ್ನ ಮದ್ವೆ ಬೇಗ ಮಾಡ್ಬಿಟ್ಟ ಅಪ್ಪ. ಅದೆಲ್ಲಿ ನಾನು ನಿನ್ನ ಹಾಂಗೆ ಹೆಚ್ಗೆ ಓದು, ದೊಡ್ಡ ನಗರದ ಹುಚ್ಚಿಗೆ… ಅಲ್ಲ ಹಾಂಗಲ್ಲ, ಆಸೆ ಇರತ್ತಲ್ದಾ? ಆದ್ರೆ ನಂಗೆಂತ ಇರ್ಲಿಲ್ಲ ಬಿಡು, ಪಿಯುಸಿ ಪಾಸಾಗಿದ್ದೇ ಹೆಚ್ಚು ನಾನು ಅನ್ನದು ನಿಂಗೊತ್ತು. ಆದ್ರೂ, ಅಪ್ಪಂಗೆ ಭಯ ಆಗಿ, ಮನೆ ಕಡೆ ಮಗ ಇರ್ಲಿ ಅಂತ ತಂಗಿ ಮಗಳನ್ನೇ ಗಂಟು ಹಾಕ್ದ. ನಂಗೂ ಸಣ್ಣವಯಸ್ಸು ಉಮೇದಿ, ವರ್ಷದೊಳ್ಗೆ ಮಗ ಹುಟ್ದ. ಆದ್ರೆ ಪಾಪ ಈಗ ಅವಂಗೆ ವಯಸ್ಸು ಮೂವತ್ತು, ಆದ್ರೂ ಮದ್ವೆಗೆ ಹುಡ್ಗಿ ಸಿಕ್ತಿಲ್ಲ ಮಾರಾಯ! ಬಿಕಾಂ ಮಾಡ್ಕಂಡಿದ್ದಾನೆ ಆದ್ರೆ ಕೆಲ್ಸ್ ಎಲ್ಲೂ ದೊಡ್ಡೂರಲ್ಲಿ ಸಿಗ್ತಿಲ್ಲ. ಅದ್ಕೇ… ಎಂದು ರಾಗವೆಳೆಯಲು ತಡಬಡಿಸಿದ ವಿನೋದ.
ಅದ್ಕೇ ಎಂತ ಮಾರಾಯಾ? ನಾನು ಇರೋದು ಐಟಿ ಫೀಲ್ಡಲ್ಲಿ. ಅಲ್ಲಿ ಬಿಕಾಂ ಆದವ್ರಿಗೆ ನನ್ನ ರೀತಿ ಕೆಲ್ಸ ಕೊಡ್ಸೋಕೆ ಆಗಲ್ಲ. ಬೇರೆ ಆಪ್ಷನ್ ಏನಿದೆ ನೋಡ್ಬೇಕಾಯ್ತು. ಅದೂ ಅಲ್ದೇ ಅವ್ನ ಓದಿಗೆ ಸಂಬ್ಳ ಸಣ್ಣದಿರ್ತದೆ, ಇಲ್ಲಿಯ ಹಾಗೆ ದೊಡ್ಡ ಮನೆ, ಸಂಸಾರ ಎಲ್ಲ ಅಲ್ಲಿ ಕಷ್ಟವಾಗ್ಬಹುದು ಎಂದು ರಾಗವೆಳೆಯುತ್ತಾ ತಲೆಕೆರೆದುಕೊಳ್ಳಲು,
ಅಯ್ಯೋ ಇರು ಮಾರಾಯಾ ಪೂರ್ತಿ ವಿಷ್ಯ ಕೇಳ್ಕ ಮೊದ್ಲು. ಅವ್ನಿಗೆ ನಿನ್ನ ಆಫೀಸಲ್ಲಾಗ್ಲೀ ಬೇರೆದ್ರಲ್ಲಾಗ್ಲೀ ಬೇಡ, ನೀವು ಕೆಲವು ಗೆಳೆಯರು ಸೇರಿ ಅದೆಂತೋ ಸಂಸ್ಥೆ ನಡೆಸ್ತಿದ್ದೀರಂತಲ್ಲ ಅಲ್ಲೇನಾದ್ರೂ…?
ರಾಮಾ, ಶಂಕ್ರ ಅದು ನಮ್ಮ ಸ್ವಂತದ ಎನ್ಜಿಓ ಮಾರಾಯಾ! ನಾವೆಲ್ಲ ಫ್ರೀಯಾಗಿ ಅಲ್ಲಿ ಕೆಲ್ಸ ಮಾಡ್ತಿರೋದು… ಏನೋ ನಮ್ಮಿಂದಾದಷ್ಟು ಬಡವ್ರಿಗೆ ಸಹಾಯ ಆಗ್ಲಿ ಅಂತ. ಈ ಕೊರೊನಾದಲ್ಲಿ ಎಷ್ಟೆಲ್ಲ ಜನ ಬೀದಿಗೆ ಬಂದ್ರಲ್ಲ ಅದ್ಕಾಗಿ. ಅಲ್ಲೆಂತ ದುಡ್ಡು ಬರಲ್ಲ ಮಾರಾಯಾ ಎನ್ನಲು ಸಿಟ್ಟುಗೊಂಡ ಶಂಕರ.
ನೀನು ಆಗಿಂದ ಇದೇ ತಪ್ಪು ಮಾಡ್ತಿರೋದು. ಸ್ವಲ್ಪ ಸಮಾಧಾನದಲ್ಲಿ ಹೇಳೂದನ್ನ ಕೇಳಿಸ್ಕಳೋ ಮಾರಾಯಾ. ನಿಂಗೆ ಸಂಬ್ಳದ ಚಿಂತೆನೇ ಬೇಡ. ನನ್ನ ಮಗ ಮುಕುಂದನಿಗೆ ನಿನ್ನ ಎನ್ಜಿಓದಲ್ಲೊಂದು ಏನಾದ್ರೂ ಹುದ್ದೆ ಹುಟ್ಸಿ ಕೆಲ್ಸ ಕೊಡು… ಬೆಳ್ಗಿಂದ ಸಂಜೆ ಮಾಡ್ತಾನೆ. ಅವ್ನಿಗೆ ಖರ್ಚಿಗೆ, ಸಂಸಾರಕ್ಕೆ ಎಲ್ಲ ದುಡ್ಡು ನಾನೇ ಬ್ಯಾಂಕಿಗೆ ಹಾಕ್ತೆ. ದೇವ್ರ ದಯೆಯಿಂದ ನಮ್ಗೇನೂ ಕೊರತೆ ಇಲ್ಲ ಇಲ್ಲಿ. ಆದ್ರೆ ಎಂತ ಸಾಯೋದು, ಈ ಮಳ್ ಹುಣ್ಮಕ್ಳಿಗೆ ದೊಡ್ಡ ನಗರದಲ್ಲಿಪ್ಪ ಹುಡ್ಗನೇ ಬೇಕು ಮದ್ವೆಗೆ. ಸ್ವಲ್ಪ ಸಮಯ ಅಲ್ಲಿದ್ದು ಎಲ್ಲ ನೋಡ್ಕಂಡು ಸಾಕಾಗಿ ಆಮೇಲೆ ಒಂದೆರಡು ಮಕ್ಕಳಾದ್ಮೇಲೆ ಅಜ್ಜ ಅಜ್ಜಿ ಜೊತೆಗಿದ್ರೆ ಸಹಾಯ ಆಗ್ತದೆ ಅಂತ ಇಲ್ಲಿಗೇ ಬರ್ತವೆ. ಅಲ್ಲಿವರೆಗೆ ಹೇಗೂ ನಾನೇ ಆದಷ್ಟು ತೋಟ, ಗದ್ದೆ ಎಲ್ಲ ನೋಡ್ಕೊಂಡು ಹೋಗ್ತೇನೆ. ಆಮೇಲೆ ನಿಧಾನಕ್ಕೆ ಎಲ್ಲ ಸರಿ ಆಗ್ತದೆ ಅನ್ನೋದು ನನ್ನ ನಂಬ್ಕೆ ಎಂದು ಮುಗುಳ್ನಗಲು ಶಾಕ್ ಹೊಡೆದಂತೆ ಕುಳಿತುಬಿಟ್ಟನು ವಿನೋದ. ಗೆಳೆಯನಿಗೆ ಹೇಗೆ ಸಮಜಾಯಿಶಿ ಕೊಟ್ಟರೂ ವಿಲನ್ ತಾನೇ ಆಗುವ ಅಪಾಯವಿರುವುದರಿಂದ ತಾನೊಬ್ಬನೇ ನಿರ್ಧಾರ ತೆಗೆದುಕೊಳ್ಳಲಾಗದೆಂದೂ, ಅಲ್ಲಿಗೆ ಹೋಗಿದ್ದೇ ತನ್ನ ಗೆಳೆಯರೊಡನೆ ಮಾತಾಡಿ ಪಕ್ಕಾ ಕಾಲ್ ಮಾಡುವೆನೆಂದೂ ಏನೋ ಆ ಕ್ಷಣಕ್ಕೆ ಹೊಳೆದ ಉತ್ತರವನ್ನಿತ್ತು ಸಾಗಹಾಕುವಾಗ ಗಂಟೆ ಹನ್ನೆರಡು ದಾಟಿತ್ತು. ಕೋಣೆಗೆ ಹೋದರೆ ಕೆಲಸ ಮುಗಿಸಿದ್ದ ಅನನ್ಯ ಸುಸ್ತಾಗಿ ಗಾಢ ನಿದ್ದೆಯಲ್ಲಿದ್ದರೆ, ಆ ದಿನವಿಡೀ ನಡೆದ ಅನೇಕ ವಿದ್ಯಮಾನಗಳಿಂದ ಅವನ ನಿದ್ದೆ ಮಾಯವಾಗಿಬಿಟ್ಟಿತ್ತು.
* * *
ನೀವಿಬ್ರು ನಮ್ಗೆ ವಯಸ್ಸಾಯ್ತು ಇಲ್ಲಿ ಒಳ್ಳೆ ಆಸ್ಪತ್ರೆನೂ ಹತ್ರ ಇಲ್ಲ, ಜನ ಸಿಗಲ್ಲ ಕೆಲ್ಸಕ್ಕೆ ಸರಿಯಾಗಿ ಅಂತೆಲ್ಲ ಹೇಳಿ ನಿಮ್ಜೊತೆ ಬಂದಿರೋಕೆ ಕರೀತಿದ್ದೀರಾ. ಆದ್ರೆ ಸಾವು, ಹುಟ್ಟು ಯಾರ ಕೈಯಲ್ಲಿದೆ? ಆಸ್ಪತ್ರೆ ಮನೆ ಪಕ್ಕದಲ್ಲಿದ್ರೂ ಸತ್ತೋರು ಎಷ್ಟು ಜನ ಇಲ್ಲ? ಮನಸು ತನಗೆ ಬೇಕಾದ್ದನ್ನೇ ಒಟ್ಟಾಕ್ತದೆ ಅಷ್ಟೇ. ಅಲ್ಲಾ, ಒಂದು ಹೇಳಿ ಹಳ್ಳಿಯಿಂದೆಲ್ರೂ ಪಟ್ಣಕ್ಕೆ ಹೋಗ್ಬಿಟ್ರೆ ಸಮಸ್ಯೆ ಪರಿಹಾರ ಆಗ್ತದ? ಮರ ಬದ್ಕೋದೇ ಬೇರು ಗಟ್ಟಿ ಇರೋದ್ರಿಂದ, ಅದನ್ನೇ ಕಿತ್ತುಹಾಕಿದ್ರೆ ಟೊಂಗೆ ಎಲ್ಲ ಗಾಳೀಲಿ ಎಷ್ಟೊತ್ತು ಹಾರ್ಕೊಂಡು ಇರ್ತವೆ ಹೇಳಿ? ಊಟಕ್ಕೆ ಅನ್ನ ಬೇಕು, ಆದ್ರೆ ಅಕ್ಕಿ ಹುಟ್ಟೋ ಭತ್ತ ಬೆಳ್ಯೋಕೆ ಯಾರೂ ಬೇಡ್ವಾ? ನಿಮ್ಗೆ ನಮ್ಮ ಕಷ್ಟ ಅರ್ಥ ಆಗಲ್ಲ ಅಂತಿಲ್ಲ, ನಮ್ಗೂ ನಿಮ್ಮ ಸಂಕ್ಟ ಗೊತ್ತಾಗ್ತಿದೆ. ಆದ್ರೆ ಪರಿಹಾರ ಮಾತ್ರ ಅತ್ಲಾಗೂ ಇತ್ಲಾಗೂ ಎತ್ಲಾಗೂ ಕಾಣ್ತಿಲ್ಲ ಎಂದು ಆರಾಮ್ ಚೇರಿನಲ್ಲಿ ಒರಗಿ ಎದೆಯ ಮೇಲೆ ಕೈಯಿಟ್ಟು ಕುಳಿತುಬಿಟ್ಟರು ಶರ್ಮರು. ಅವರ ಪತ್ನಿ ರಾಧಮ್ಮರಿಗಂತೂ ಬೆಳಗಾದರೆ ಅಲ್ಲಿಂದ ಹೊರಡುವ ಮಗನ ಸಂಸಾರವನ್ನು ಕಣ್ತುಂಬಿಕೊಳ್ಳುವುದೇ ಕೆಲಸವಾಗಿತ್ತು. ಪ್ರಯಾಸದಿಂದ ಉಕ್ಕಿಬರುತ್ತಿದ್ದ ಅಳುವನ್ನೂ ತಡೆಹಿಡಿದಿದ್ದರು.
ಎಲ್ಲರೂ ಊಟ ಮುಗಿಸಿ ಹೊರಜಗುಲಿಯಲ್ಲಿ ಜಮಾಯಿಸಿ ನಾಲ್ಕೈದು ಸುತ್ತು ಇದೇ ವಿಷಯದ ಕುರಿತು ಚರ್ಚೆ, ವಾದ, ಸಂವಾದ ನಡೆಸಿ ಮುಗಿಸಿದ್ದರು. ಕೊನೆಯಲ್ಲಿ ಶರ್ಮರು ತಮ್ಮ ಕ್ಲುಪ್ತವಾಗಿ ಅದಕ್ಕೊಂದು ತಾತ್ಕಾಲಿಕ ತೆರೆ ಎಳೆದಿದ್ದರು. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಚಿನ್ಮಯಿ ಥಟ್ಟನೆ ಮೊಬೈಲ್ ತೆಗೆದವಳೇ ಅಮ್ಮಾ ನಾನು ಶ್ರೇಯಸ್ಸಿಗೆ ಕಾಲ್ ಮಾಡ್ಲಾ? ಅದೇ ಅವ್ನೇ ಪ್ರಾಜೆಕ್ಟಿಗೆ ಏನು ಮಾಡ್ಲಿ ಅಂತ ನನ್ನ ತಲೆ ತಿಂತಿದ್ದ. ಕೊರೋನಾ ಟೈಮಲ್ಲಿ ಆನ್ಲೈನಲ್ಲಿ ನಿನ್ನ ಹತ್ರ ಕನ್ನಡ ಟ್ಯೂಶನ್ ತಗೊಳ್ತಿದ್ನಲ್ಲಾ ಅವ್ನೇ. ಅರ್ಜೆಂಟು ಪ್ಲೀಸ್, ಲೇಟ್ ಆಯ್ತು ಈಗ ಬೇಡ ಅನ್ಬೇಡ ಎನ್ನಲು ಈ ಸ್ಥಿತಿಯಲ್ಲಿ ವಿಷಯದ ಡೈವರ್ಷನ್ ಒಳ್ಳೆಯದೇ ಅನ್ನಿಸಿದ ಅನನ್ಯ ಜಾಸ್ತಿ ಹರಟೆ ಈ ಸಮಯದಲ್ಲಿ ಬೇಡ ಎಂದು ಎಚ್ಚರಿಸಿ, ಅಲ್ಲೇ ಮಾತಾಡಿಕೊಳ್ಳಲು ಪರ್ಮಿಶನ್ ಕೊಟ್ಟಳು.
ಹೇಯ್ ಬಡ್ಡಿ ವಾಟ್ಸ್ ಅಪ್… ಯು ನೋ ವಾಟ್, ಐ ಹ್ಯಾವ್ ಸಮ್ಥಿಂಗ್ ಟು ಶೇರ್ ವಿದ್ ಯು… ನೀನು ನಿನ್ನ ಪ್ರಾಜೆಕ್ಟಿಗಾಗಿ ಒಳ್ಳೇ ಸಬ್ಜೆಕ್ಟ್ ಸರ್ಚ್ ಮಾಡ್ತಿದ್ದೆ ಅಲ್ವಾ, ಹಿಯರ್ ಇಟೀಸ್… ನೋಟ್ ಡೌನ್ ರೈಟ್ ನೌ… ಹೌ ಟು ಡೆವಲಪ್ ಎ ರೊಬೋಟ್ ವಿಚ್ ಕ್ಯಾನ್ ಕಲ್ಟಿವೇಟ್ ಪ್ಯಾಡಿ ವಿದೌಟ್ ಮ್ಯಾನ್ಪವರ್ ಇದ್ರ ಬಗ್ಗೆ ರಿಸರ್ಚ್ ಮಾಡೋಣ ಸ್ವಲ್ಪ. ಐ ವಿಲ್ ಆಲ್ಸೋ ಹೆಲ್ಪ್ ಯು. ಇದ್ರಿಂದ ಎಷ್ಟೋ ಜನರ ಪ್ರಾಬ್ಲೆಮ್ಮೂ ಸಾಲ್ವ್ ಆಗ್ಬಹುದು. ಹೌ ಎಕ್ಸೈಟಿಂಗ್ ಅಲ್ವಾ! ಎಂದು ಮತ್ತೇನೋ ಬಡಬಡಿಸುತ್ತ ಮೆಲ್ಲನೆ ಅಂಗಳಕ್ಕಿಳಿದು ಆತ್ತಿಂದಿತ್ತ ತಿರುಗಾಡತೊಡಗಿದರೆ, ಇತ್ತ ಎಲ್ಲರೂ ಅವಳ ಮಾತನ್ನು ಕೇಳಿ ಅವಾಕ್ಕಾಗಿ ಪ್ರತಿಮೆಯಂತೆ ಕುಳಿತಿದ್ದರು.