“ಅತೀತ…” “ಪ್ರಸಿದ್ಧ ಚಿತ್ರಕಲಾವಿದ ಶ್ರೀನಿವಾಸ್ ರಾಘವ್ರಿಂದ ಈ ಬಾರಿ ರಚನೆಯಾಗುತ್ತಿರುವ ಅಪರೂಪದ ಚಿತ್ರ. ಇನ್ನು ಒಂದು ವಾರದಲ್ಲಿ ನಡೆಯಲಿರುವ ಚಿತ್ರಜಾತ್ರೆಯಲ್ಲಿ ನಿಮ್ಮೆಲ್ಲರ ಮುಂದೆ…” ಎಂದು ಚಿತ್ರಜಾತ್ರೆಯ ಆಯೋಜಕರು ಬೀದಿ ಬೀದಿಯಲ್ಲಿ ಅನೌನ್ಸ್ ಮಾಡುತ್ತಿದ್ದರು. “ಇವೆಲ್ಲ ಬೇಕಾ? ಇನ್ನೂ ಚಿತ್ರ ರಚನೆಯೇ ಆಗಿಲ್ಲ. ಈಗ್ಲೇ ಇಷ್ಟು ಹೈಪ್ ಕೊಟ್ರೆ ಹೇಗೆ ಹೇಳಿ” ಎಂದ ಶ್ರೀನಿವಾಸ್ರನ್ನು ಆಯೋಜಕ ನಾಯಕ್ ತುಸು ಸಲಿಗೆ, ಹುಸಿಕೋಪದಲ್ಲೇ ನಿಂದಿಸಿದ್ದರು. “ನೀವ್ ಬಿಡಿ ಸರ್, ತುಂಬಿದ್ ಕೊಡ ತುಳಕಲ್ಲ ಅನ್ನೋ ಹಾಗೆ. ಇಷ್ಟೆಲ್ಲ ಟ್ಯಾಲೆಂಟ್ ಇಟ್ಕೊಂಡು ಪ್ರಚಾರ ಬೇಡ ಅಂತೀರಾ. ಇಷ್ಟೆಲ್ಲ ಸಂಕೋಚ ಒಳ್ಳೇದಲ್ಲ ಸರ್. ನಿಮ್ಗೆ ಬೇಕೋ ಬೇಡ್ವೋ, ನಮಗೆ ಜಾತ್ರೆಗೆ ಜನ ಬರ್ಬೇಕಂದ್ರೆ ನಿಮ್ ಚಿತ್ರ ಇದ್ರೆ ಮಾತ್ರ. ನಮ್ ಹೊಟ್ಟೆ ತುಂಬೋರು ಸರ್ ನೀವು. ಈ ಹೈಪ್ ಕೊಡೋದ್ ನಮ್ಗೆ ತುಂಬಾ ಅಗತ್ಯ ನೋಡಿ..”. ಎಂದಿದ್ದರು. ಹೊಟ್ಟೆಪಾಡು ಎಂಬೆಲ್ಲ ಪದ ಕೇಳಿದ ನಂತರ ಶ್ರೀನಿವಾಸ ಸುಮ್ಮನಾಗಿದ್ದ. ತನ್ನಿಂದ ಯಾರಿಗೋ ಹೊಟ್ಟೆ ತುಂಬುತ್ತದಂದ್ರೆ ಯಾಕೆ ಬೇಡ ಎನ್ನಲಿ ಎಂದುಕೊಂಡಿದ್ದ.
ಅತೀತ – ಓಹ್, ಎಷ್ಟು ಅರ್ಥಪೂರ್ಣ! ಜಗನ್ನಾಥ ಪೈಯಿಂದ ಅಂಥ ಉದ್ಗಾರವನ್ನು ನಿರೀಕ್ಷಿಸಿಯೇ ನಿಂತಿದ್ದ ಶ್ರೀನಿವಾಸ್ ರಾಘವ್ ಒಳಗೊಳಗೆ ಉಬ್ಬಿದ. ಆದರೂ ಮನಸ್ಸಿನ ಉದ್ವೇಗವನ್ನು ಅದ್ಹೇಗೋ ತಡೆದುಕೊಂಡ. ಮುಖದಲ್ಲಿ ಪ್ರಬುದ್ಧ ಚಿತ್ರಕಲಾವಿದನೊಬ್ಬನ ಗಾಂಭೀರ್ಯ ತಾನೇ ತಾನಾಗಿ ಪ್ರತ್ಯಕ್ಷವಾಯಿತು. ‘ಎಲ್ಲ ನಿಮ್ಮಂಥವರ ಆಶೀರ್ವಾದ ಸರ್! ಇದ್ರಲ್ಲಿ ನಂದೇನಿದೆ? ಮೇಲಿರೋವ್ನ ಕೃಪೆ ಅಷ್ಟೆ ಎಂದ ಸಂಕೋಚದಿಂದಲೇ. ಅದು ನಿಮ್ಮ ದೊಡ್ಡಗುಣ ಬಿಡಿ. ಪ್ರತಿಭಾವಂತರು ಹೇಳೋದೇ ಹೀಗೆ’ ಎನ್ನುತ್ತ ಶ್ರೀನಿವಾಸನ ಬೆನ್ನುತಟ್ಟಿ, ಚಿತ್ರಗಳನ್ನೆಲ್ಲ ಕೂಲಂಕಷವಾಗಿ ವೀಕ್ಷಿಸಿದರು ಪೈ. ಪ್ರತಿಯೊಂದು ಚಿತ್ರದ ಸಂದೇಶ, ಅದನ್ನು ಬರೆಯುವಾಗ ತನಗಾದ ತೊಡಕುಗಳನ್ನೆಲ್ಲ ಪೈಗಳ ಮುಂದೆ ಆತ್ಮೀಯವಾಗಿ ಹೇಳಿಕೊಂಡ, ಶ್ರೀನಿವಾಸ.
“ಇದೇನ್ ಸರ್, ಬರಿಗೈಲಿ ಹೋಗ್ತಿದ್ದೀರಿ. ನಿಮ್ಮಂಥ ಸಹೃದಯರೇ ನಮ್ಗೆ ಪ್ರೋತ್ಸಾಹ ಕೊಟ್ಟಿಲ್ಲ ಅಂದ್ರೆ ಹೇಗೆ ಸರ್? ಒಂದೆರಡಾದ್ರೂ ಪೇಂಟಿಂಗ್ಸ್ ಖರೀದಿ ಮಾಡ್ಬಾರ್ದೇ?” ಪ್ರದರ್ಶನ ನೋಡಿಕೊಂಡು ಹೊರಟ ಪೈಗಳ ಬಳಿ ಕೊಂಚ ಸಲಿಗೆಯಲ್ಲೇ ಶ್ರೀನಿವಾಸ್ ಅಲವತ್ತುಕೊಂಡ. “ಮಿಸ್ಟರ್ ರಾಘವ್, ನಂಗೆ ನಿಮ್ಮ ಅತೀತ ಪೇಂಟಿಂಗ್ ಬೇಕಿತ್ತು. ನೀವು ಅದನ್ನ ಮಾರೋದೇ ಇಲ್ಲ ಅಂತೀರಿ. ಆ ಪೇಂಟಿಂಗಿಗೆ ನಾನು ೫ ಲಕ್ಷದವರೆಗೂ ಕೊಡೋಕೆ ರೆಡಿ ಶ್ರೀನಿವಾಸ್. ನನ್ ಮಗಳು ಆ ಪೇಂಟಿಂಗ್ ಬೇಕು ಅಂತ ಹಠ ಹಿಡ್ದಿದಾಳೆ. ನೋಡಿ ಯೋಚ್ಸಿ. ಯಾವ್ದಕ್ಕೂ ನಾಳೆ ಅವೆನ್ಯೂ ರೋಡ್ನಲ್ಲಿರೋ ನನ್ ಆಫೀಸಿಗೆ ಬನ್ನಿ. ನಿಮ್ಜೊತೆ ಸ್ವಲ್ಪ ಮಾತನಾಡೋದಿದೆ” ರಾಘವ್ ತಲೆಯಲ್ಲಾಡಿಸುತ್ತಿದ್ದಂತೆಯೇ ಅವನ ಬೆನ್ನು ತಟ್ಟುತ್ತ ಪೈ ಕಾರು ಹತ್ತಿಯೇಬಿಟ್ಟರು.
ಹೆಸರಾಂತ ಉದ್ಯಮಿ ಕನಿಷ್ಠ ಐದಾದರೂ ಚಿತ್ರ ಖರೀದಿಸಿಯಾರು ಎಂದು ಯೋಚಿಸಿದ್ದ ಶ್ರೀನಿವಾಸ್ಗೆ ಬರಿಗೈಲಿ ಹೊರಟ ಪೈಗಳನ್ನು ಕಂಡು ಸ್ವಲ್ಪ ಅಸಮಾಧಾನವಾಗಿದ್ದು ನಿಜ. ಒಂದಲ್ಲ ಎರಡಲ್ಲ ಬರೋಬ್ಬರಿ ಐದು ಲಕ್ಷ! ಮಾರಿದ್ದರೆ ತನ್ನ ಗಂಟೇನು ಹೋಗ್ತಿತ್ತು? ತನ್ನ ಮೇಲೆಯೇ ಬೇಸರ ಹುಟ್ಟಿತು ಶ್ರೀನಿವಾಸ್ಗೆ. “ಸರ್, ನಾನು ಹೀಗ್ಹೇಳ್ತೀನಿ ಅಂತ ಬೇಸರ ಮಾಡ್ಕೋಬೇಡಿ. ಆ ಚಿತ್ರ ಮಾರೋಕೆ ನಿಮಗ್ಯಾಕೆ ಇಷ್ಟ ಇಲ್ಲ? ನೀವು ಮನ್ಸು ಮಾಡಿದ್ರೆ ಇಂಥ ನೂರು ಚಿತ್ರ ಬರೀಬೋದು. ಅವ್ರು ಅಷ್ಟೆಲ್ಲ ಕೇಳಿದ್ರೂ ನೀವ್ಯಾಕೆ ಮನಸು ಬದಲಾಯಿಸ್ತಿಲ್ಲ? ಇಷ್ಟು ದಿನ ಸೃಜನಶೀಲತೆಗೆ ಬೆಲೆನೇ ಇಲ್ಲ ಅಂತಿದ್ರಿ. ಈಗ್ನೋಡಿ ಪ್ರದರ್ಶನದಲ್ಲಿ ಹೈಯೆಸ್ಟ್ ಮಾರಾಟ ಆಗಿದ್ದು ನೀವು ಬರೆದ ಚಿತ್ರಗಳೇ. ನಿಮ್ಮ ಅತೀತ ಚಿತ್ರವಂತೂ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರನ್ನೂ ಸೆಳೀತಾ ಇದೆ. ಹೀಗಿರುವಾಗ ನೀವ್ಯಾಕೆ ಮಂಕಾಗಿ ಕೂತಿದ್ದೀರಾ?” ಶ್ರೀನಿವಾಸನ ಕಟ್ಟಾ ಅಭಿಮಾನಿಯೂ, ಆತನ ಆಪ್ತ ಸಹಾಯಕನೂ ಆದ ಸುಧೀರ್ ಒಂದೇ ಸಮನೆ ಮಾತನಾಡುತ್ತಿದ್ದರೂ ಶ್ರೀನಿವಾಸ ಮೌನ ಮುರಿಯಲಿಲ್ಲ. ಆಗ ತನ್ನ ಕೇಳೋರಿಲ್ಲ ಅನ್ನೋ ಕೊರಗು, ಈಗ ಮತ್ತೊಂದು ಥರದ ಕೊರಗು – ಎಂದು ಮನಸ್ಸಿನಲ್ಲೇ ಅಂದುಕೊಂಡ. “ಇನ್ನೇನು ಪ್ರದರ್ಶನ ಮುಗಿಯುವ ಹೊತ್ತಾಯ್ತು, ಮಾರಾಟವಾಗದೆ ಉಳಿದ ಚಿತ್ರಗಳನ್ನೆಲ್ಲ ಜೋಪಾನವಾಗಿ ಮನೆಯತ್ತ ಸಾಗಿಸಬೇಕು. ನಡಿ, ಆ ಬಗ್ಗೆ ಮತ್ತೆ ಮಾತಾಡೋಣ” ಎಂದ, ಶ್ರೀನಿವಾಸ.
“ಸರ್, ಈಗಾಗ್ಲೆ ಅರ್ಧಕ್ಕಿಂತ ಹೆಚ್ಚು ಪೇಂಟಿಂಗ್ಸ್ ಸೇಲ್ ಆಗ್ಬಿಟ್ಟಿವೆ. ಇನ್ನು ಸ್ವಲ್ಪ ಮಾತ್ರವೇ ಉಳ್ಕೊಂಡಿರೋದು. ಇನ್ನೂ ಜನ ಬರ್ತಿದ್ದಾರೆ. ಇವತ್ತು ರಾತ್ರಿವರೆಗೂ ನೋಡೋಣ. ಆಮೇಲೆ ಖಾಲಿ ಮಾಡೋಣ” ಎಂದ, ಸುಧೀರ್. “ಸರಿ, ನಿನ್ನಿಷ್ಟ. ಯಾರಾದರೂ ಬಂದರೆ ನನ್ನ ಕರಿ. ಇಲ್ಲೇ ಇರ್ತೀನಿ” ಎನ್ನುತ್ತ ಪ್ರದರ್ಶನವಿದ್ದ ಸ್ಥಳದ ಹೊರಗೆ ಹೋಗಿ ನಿಂತ, ಶ್ರೀನಿವಾಸ್. ಪ್ರದರ್ಶನ ಆರಂಭವಾಗಿ ಆಗಲೇ ಒಂದು ತಿಂಗಳಾಗಿತ್ತು. ವಿವಿಧ ಪ್ರಸಿದ್ಧ ಕಲಾವಿದರ ಪೇಂಟಿಂಗ್ಗಳೂ ಪ್ರದರ್ಶನದಲ್ಲಿದ್ದರೂ ಶ್ರೀನಿವಾಸ ರಾಘವ್ನ ‘ಅತೀತ’ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಯಾಗಲಿ, ಅದರ ಬಗ್ಗೆ ನಡೆದಷ್ಟು ಚರ್ಚೆಯಾಗಲಿ, ಅದಕ್ಕೆ ಸಿಕ್ಕ ಬೇಡಿಕೆಯಾಗಲಿ ಬೇರೆ ಯಾವ ಚಿತ್ರಕ್ಕೂ ಸಿಕ್ಕಿರಲಿಲ್ಲ. ಆದರೆ ಆ ಚಿತ್ರವನ್ನು ಮಾರಾಟ ಮಾಡುವುದಿಲ್ಲವೆಂದು ಶ್ರೀನಿವಾಸ ಖಡಾಖಂಡಿತವಾಗಿ ಹೇಳಿಬಿಟ್ಟಿದ್ದ. ದೊಡ್ಡ ದೊಡ್ಡ ಉದ್ಯಮಿಗಳು ಲಕ್ಷಗಟ್ಟಲೆ ಹಣ ಕೊಡುವುದಕ್ಕೆ ತಯಾರಿದ್ದರೂ ಆ ಚಿತ್ರವನ್ನು ಮಾತ್ರ ಮಾರಲೊಲ್ಲೆ ಎಂದು ಸಂಕೋಚದಲ್ಲೇ ಹೇಳುತ್ತಿದ್ದ ಶ್ರೀನಿವಾಸನ ನಡೆಯೇ ಸುಧೀರನಿಗೆ ಅರ್ಥವಾಗಲಿಲ್ಲ. ಪ್ರದರ್ಶನ ಆರಂಭವಾದಾಗಿನಿಂದ ಶ್ರೀನಿವಾಸ್ ರಾಘವ್ ಮನೆಗೂ ಹೋಗಿರಲಿಲ್ಲ. ಆಗಾಗ ಫೋನಿನಲ್ಲಿ ಹೆಂಡತಿಯ ಬಳಿ ಮಾತನಾಡುವಾಗಲೂ ಕೊಂಚ ಮುಜುಗರದಲ್ಲೇ ಮಾತನಾಡುತ್ತಿರುವುದನ್ನು ಸುಧೀರ ಗಮನಿಸಿದ್ದಾನೆ. ಆದರೂ ಗುಟ್ಟನ್ನು ಮಾತ್ರ ಆತ ಬಿಟ್ಟುಕೊಟ್ಟಿಲ್ಲ. ಶ್ರೀನಿವಾಸನೊಂದಿಗೆ ಆತ್ಮೀಯವಾಗಿಯೇ ಇದ್ದರೂ ವೈಯಕ್ತಿಕ ವಿಷಯಗಳಲ್ಲೆಲ್ಲ ತಲೆಹಾಕುವಷ್ಟು ಸಲಿಗೆಯನ್ನು ಶ್ರೀನಿವಾಸ ಸುಧೀರನಿಗೆ ಕೊಟ್ಟಿಲ್ಲ.
ಪ್ರದರ್ಶನದ ಹಾಲ್ನಿಂದ ಹೊರಬಂದ ರಾಘವ್ ಆಕಾಶದತ್ತ ನೋಡುತ್ತ ನಿಂತ. ಆಗಸದಲ್ಲಿ ಆಗಷ್ಟೇ ನಕ್ಷತ್ರಗಳು ಕಾಣಿಸಿಕೊಳ್ಳುತ್ತಿದ್ದವು. ಕಲಾವಿದನಾಗಿ ಆಕಾಶ ನೋಡುತ್ತಿದ್ದರೆ ಶ್ರೀನಿವಾಸನ ಕಲ್ಪನೆಗೆ ಈಗ ಅದೆಷ್ಟೋ ಹೊಸ ಹೊಸ ಹೊಳಹುಗಳು ಸಿಕ್ಕುತ್ತಿದ್ದವು, ಅವನ ಮನದ ಕ್ಯಾನ್ವಾಸ್ ಮೇಲೆ ಅದಾಗಲೇ ಮುಸ್ಸಂಜೆ ಆಗಸದ ಚೆಂದದ ಚಿತ್ರವೊಂದು ಮೂಡಿಬಿಡುತ್ತಿತ್ತು. ಆದರೆ ಇಂದು ಶ್ರೀನಿವಾಸ್ ಕಲಾವಿದನಲ್ಲ. ಯಾವುದೋ ಪಾಪಪ್ರಜ್ಞೆಯ ಸುಳಿಯಲ್ಲಿ ಸಿಕ್ಕಿ ಸರಿ-ತಪ್ಪಿನ ಲೆಕ್ಕಾಚಾರದಲ್ಲಿ ತನ್ನನ್ನೇ ಮರೆತವ. ನೀಲ ಸಾಗರದಲ್ಲಿ ಬೆಳ್ಳಿ ಬಣ್ಣದ ದೋಣಿಯಂತೆ ಕಾಣುತ್ತಿರುವ ಚಂದ್ರನೂ ಶ್ರೀನಿವಾಸನೊಳಗಿನ ಕಲಾವಿದನನ್ನು ಎಬ್ಬಿಸಲು ಸಫಲನಾಗಲಿಲ್ಲ. ಯಾಕೋ ತನ್ನ ಬಗ್ಗೆಯೇ ಅಸಹ್ಯ ಮೂಡುತ್ತಿತ್ತು. ಹಾಗೆಯೆ ಕಲಾರಸಿಕರ ಬಗ್ಗೆಯೂ! ಹೀಗೆ ತನ್ನನ್ನು ಶ್ರೇಷ್ಠ ಕಲಾವಿದನೆಂಬಂತೆ ಯಾವುದೋ ಎತ್ತರಕ್ಕೆ ಕೊಂಡೊಯ್ಯುತ್ತಿರುವುದನ್ನು ತಾನ್ಯಾಕೆ ವಿರೋಧಿಸಲಿಲ್ಲ? ಇಷ್ಟೆಲ್ಲ ಮೆಚ್ಚುಗೆಗೆ ತಾನು ಅರ್ಹನಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬಹುದಿತ್ತಲ್ಲ? ತನಗೂ ಇದೇ ಬೇಕಿತ್ತೆ? ಶ್ರಮವಿಲ್ಲದೆ ಸಿಗುವ ಪ್ರಸಿದ್ಧಿಗೆ ಹಾತೊರೆದೆನೆ? ಅದಾಗಲೇ ಆಕಾಶವನ್ನು ತುಂಬಿಕೊಂಡಿದ್ದ ಚುಕ್ಕಿಗಳೆಲ್ಲ ತನ್ನನ್ನು ಇರಿಯುವುದಕ್ಕೆಂದೇ ಭೂಮಿಗಿಳಿದು ಬರುತ್ತಿವೆಯೇನೋ ಅನ್ನಿಸುವುದಕ್ಕೆ ಶುರುವಾಯ್ತು.
ತನ್ನೊಳಗಿನ ಮುಗ್ಧ ಕಲಾವಿದನೊಬ್ಬನಿಗೆ ಈ ಪ್ರಸಿದ್ಧಿಯ ಹುಚ್ಚು ಅಂಟಿಕೊಂಡಿದೆ. ತನ್ನ ಶ್ರಮಕ್ಕಷ್ಟೇ ಪ್ರತಿಫಲವೂ ಮೆಚ್ಚುಗೆಯೂ ಸಾಕು – ಎಂಬ ಅಲ್ಪತೃಪ್ತ ಮನೋಭಾವದಿಂದ ತಾನೀಗ ದೂರಹೋಗುತ್ತಿದ್ದೇನಾ? ತನ್ನನ್ನು ನಾಲ್ಕು ಜನ ಹಾಡಿಹೊಗಳುತ್ತಾರಾದರೆ ಯಾರದೋ ಶ್ರಮವನ್ನು ತನ್ನದೆಂದುಕೊಳ್ಳುವುದಕ್ಕೆ ತಾನು ಸಿದ್ಧನಾಗುತ್ತಿದ್ದೇನಾ? ಛೇ, ಎಂಥ ಅಸಹ್ಯ! ಶ್ರೀನಿವಾಸ್, ಇದು ನೀನೇನಾ? – ತನ್ನನ್ನೇ ತಾನು ಪ್ರಶ್ನಿಸಿಕೊಂಡ. ಹೊರಜಗತ್ತಿಗೆ ತಾನೊಬ್ಬ ಅತ್ಯುತ್ತಮ ಕಲಾವಿದನಾಗುವ ಹೊತ್ತಲ್ಲೇ ತನ್ನೊಳಗಿನ ಆತ್ಮಸಾಕ್ಷಿಯೆದುರು ತೀರಾ ಕೀಳಾಗುತ್ತಿದ್ದೇನೆ ಅನ್ನಿಸುವುದಕ್ಕೆ ಶುರುವಾಯ್ತು. ತಾನೆಲ್ಲಿದ್ದೇನೆ ಎಂಬುದನ್ನೇ ಮರೆತು “ಇಲ್ಲ, ಹೀಗೆ ಪ್ರತಿಕ್ಷಣ ಸಾಯುವುದಕ್ಕಿಂತ ಸತ್ಯವನ್ನೆಲ್ಲ ಹೇಳಿಬಿಡಬೇಕು…” ಎಂದು ಉಸುರಿದ ಶ್ರೀನಿವಾಸ್. ಇಹಲೋಕದ ಅರಿವೇ ಇಲ್ಲದೆ ತನ್ನೊಳಗಿನ ತೊಳಲಾಟದ ಸುಳಿಯಲ್ಲಿ ತನ್ನ ಅಸ್ತಿತ್ವವೇ ಸಿಕ್ಕಿಹಾಕಿಕೊಂಡು ಸಂಕಟಪಡುವಂತೆ ಮರುಗಿದ. ಅಷ್ಟರಲ್ಲೇ ಫೋನು ರಿಂಗಣಿಸಿತು.
“ಹೇಳು ಸುರೇಖಾ…”
“ಎಲ್ಲಿದ್ದೀರಾ ಶ್ರೀ? ಇವತ್ತು ಎಗ್ಸಿಬಿಶನ್ ಮುಗೀತಲ್ವಾ? ಇವತ್ತೂ ಮನೆಗೆ ಬರೋ ಯೋಚನೆ ಇಲ್ವಾ?” ಪತ್ನಿ ಸುರೇಖಾ ಸ್ವಲ್ಪ ಜೋರು ಧ್ವನಿಯಲ್ಲೇ ಕೇಳಿದಳು.
“ಬರ್ತೀನಿ ಕಣೆ, ಸ್ವಲ್ಪ ಲೇಟ್ ಆಗ್ಬೋದು. ಸುಧೀರ ಇನ್ನು ಸ್ವಲ್ಪ ಹೊತ್ತು ಇಲ್ಲೇ ಇದ್ದು ನೋಡೋಣ ಅಂದ…”
“ನಿಂಜೊತೆ ಮಾತಾಡೋದಿದೆ, ಬೇಗ ಬನ್ನಿ. ಇನ್ನು ಸ್ವಲ್ಪ ಹೊತ್ತು ತಾನೆ? ಸುಧೀರ ನೋಡ್ಕೋತಾನೆ. ನೀವು ಹೊರಟು ಬನ್ನಿ.”
“ಹುಂ… ಸರಿ.”
ಫೋನ್ ಇಟ್ಟು ಎಷ್ಟೋ ಹೊತ್ತಿನವರೆಗೂ ಶ್ರೀನಿವಾಸ ಅಲ್ಲಿಂದ ಕದಲಲಿಲ್ಲ. ‘ಮನೆಗೆ ಹೋಗುತ್ತಿದ್ದಂತೆಯೇ ಎದುರಾಗುವ ಹೆಂಡತಿಯ ಮುಖವನ್ನು ನೋಡುವ ಸಾಮರ್ಥ್ಯ ನನಗಿದೆಯಾ? ಇನ್ನೂ ಮಾತೇ ಬರದ ತೊದಲುನುಡಿಯ ನನ್ನ ಕಂದನ ಕಿಲಕಿಲ ನಗುವೂ ಅಣಕವೇನೋ ಅನ್ನಿಸುವುದಿಲ್ಲವೇ? ಮನೆಗೆ ಹೋಗಲೇಬೇಕಾ?’ ಎಂದುಕೊಂಡ
“ಸರ್, ಮೇಡಂ ಫೋನ್ ಮಾಡಿದ್ರು. ನೀವು ಮನೆಗೆ ಹೊರಡಿ. ನಾನಿಲ್ಲಿ ನೋಡ್ಕೋತೀನಿ. ನಿಮ್ಮ ಪೇಂಟಿಂಗ್ಸ್ ಎಲ್ಲ ಮಾರಾಟ ಆಯ್ತು, ‘ಅತೀತ’ವೊಂದನ್ನ ಬಿಟ್ಟು. ಅದನ್ನ ಮನೆಗೆ ತಲಪಿಸೋ ಜವಾಬ್ದಾರಿ ನಂದು.
‘ಸರೀನಪ್ಪ, ನಾನು ಹೊರಡ್ತೀನಿ. ನೀನು ಜೋಪಾನ…’
ಶ್ರೀನಿವಾಸನ ವಿಕ್ಷಿಪ್ತ ಮುಖವನ್ನು ಕಂಡ ಸುಧೀರ ಏನನ್ನೋ ಕೇಳಬೇಕು ಎಂದುಕೊಂಡವನು ಅಧಿಕಪ್ರಸಂಗ ಬೇಡ ಎಂದುಕೊಂಡು ಸುಮ್ಮನಾದ.
* * *
ಒಂದು ತಿಂಗಳಿನಿಂದ ಅದಾವುದೋ ಪಾಪಪ್ರಜ್ಞೆಯಲ್ಲೇ ಮನೆಗೆ ಬಂದಿರದ ಶ್ರೀನಿವಾಸ ಅಂದು ಮನೆಬಾಗಿಲ ಬಳಿ ನಿಂತಿದ್ದ. ಪ್ರದರ್ಶನದ ಸ್ಥಳದಿಂದ ತನ್ನ ಮನೆ ಕೇವಲ ಹತ್ತು ಕಿ.ಮೀ. ದೂರವಷ್ಟೆ. ಕಾರಿನಲ್ಲಿ ಓಡಾಡೋಕೆ ಎಷ್ಟು ಹೊತ್ತು ಬೇಕು? ತಾನಿಲ್ಲಿ ಬರದಿರುವುದಕ್ಕೆ ಕಾರಣ ಪತ್ನಿಗೂ ಗೊತ್ತು. ಈಗಲೂ ಆಕೆಯ ಮುಖವನ್ನು ಎದುರಿಸುವುದು ಹೇಗೆಂಬ ಭಯದಲ್ಲೇ ತಾನಿಲ್ಲಿ ನಿಂತಿದ್ದಾನೆ. ಏನಾದರಾಗಲಿ, ಅವಳಿಗಲ್ಲದೆ ಇನ್ಯಾರಿಗೆ ಗೊತ್ತು ತನ್ನ ಸಂಕಟ – ಎಂದವನೇ ಕಾಲಿಂಗ್ ಬೆಲ್ ಸ್ವಿಚ್ ಅದುಮಿದ. ಆತನಿಗಾಗೇ ಕಾಯುತ್ತಿದ್ದಂತೆ ಓಡಿ ಬಂದ ಸುರೇಖಾ ಬಾಗಿಲು ತೆರೆದು ಶ್ರೀನಿವಾಸ ಒಳಗೆ ಬರುತ್ತಿದ್ದಂತೆಯೆ ಅವನನ್ನು ತಬ್ಬಿಕೊಂಡಳು. “ಎಷ್ಟು ಮಿಸ್ ಮಾಡ್ಕೊಂಡೆ ಗೊತ್ತಾ ನಿಮ್ಮನ್ನ. ನಿಮ್ಗೆ ಆ ಚಿತ್ರಗಳಿದ್ರೆ ಹೆಂಡ್ತಿ ಮಗು ಏನೂ ಬೇಡ. ನಿಮ್ಮನ್ನ ನೋಡ್ಬೇಕು ಅಂತ ನಾನೇ ನಾಲ್ಕು ಸಾರಿ ಈ ಪುಟ್ಟ ಮಗುವನ್ನ ಹೊತ್ಕೊಂಡು ಬರ್ಬೇಕು…” ಎಂದಳು ಕೋಪದಿಂದ.
‘ಸ್ಸಾರಿ ಮುದ್ದು, ನನ್ ತಳಮಳಾನ ನಾ ಹೇಗ್ ಹೇಳ್ಕೊಳ್ಳಿ? ಇದೊಂದು ತಿಂಗಳಿಂದ ನಾನು ಪ್ರತಿದಿನ ಸಾಯ್ತಾ ಇದೀನಿ. ಈ ಅಪರಾಧಿಪ್ರಜ್ಞೆ ನನ್ನ ಒಳಗೊಳಗೆ ಸಾಯಿಸ್ತಾ ಇದೆ…’
ನೀವ್ ತೀರಾ ಓವರ್ ರಿಯಾಕ್ಟ್ ಮಾಡ್ತಿದೀರಾ ಅನ್ನಿಸ್ತಿಲ್ವಾ? ಕಮಾನ್ ಶ್ರೀ… ಚೀರ್ ಅಪ್. ಯಾವ್ದನ್ನೂ ನೀವು ಬೇಕಂತ ಮಾಡಿಲ್ಲ. ಯಾರೋ ಬಿಡಿಸಿದ್ ಚಿತ್ರಾನೇ ತಂದು ನಮ್ಮದು ಅಂತ ಹಾಕ್ಕೊಳೋ ಕಳ್ಳರಿರೋ ಈ ಕಾಲದಲ್ಲಿ ಅಚಾನಕ್ಕಾಗಿ ನಡ್ದಿರೋ ತಪ್ಪಿಗೆ ನಿಮಗ್ಯಾಕ್ ಇಷ್ಟೊಂದ್ ಗಿಲ್ಟು?
“ಏನ್ ಮಾಡೋದ್ ಹೇಳು. ಪ್ರಾಮಾಣಿಕವಾಗಿರೋರಿಗೆ ಗಿಲ್ಟು, ಸ್ವಾಭಿಮಾನ ಎಲ್ಲ ಜಾಸ್ತಿ. ಆದ್ರೆ ನಂಗ್ ಬರೀ ಗಿಲ್ಟ್ ಅನ್ನಿಸ್ತಿಲ್ಲ. ನನ್ ತಲೇಲಿ ಆಗ್ತಾ ಇರೋ ಸಂಕಟಾನ ಹೇಗ್ ಅರ್ಥ ಮಾಡಿಸ್ಲಿ ಹೇಳು? ಒಂದು ಕಲೆ ಅಂದ್ರೆ ನಾವದ್ರಲ್ಲಿ ಸರಸ್ವತೀನ ಕಾಣ್ತೀವಿ. ಮೆಚ್ಚಿಸ್ಕೊಳ್ಳೋ ಯೋಗ್ಯತೆ ಇರೋ ಕಲೆಗೆ ಮನ್ನಣೆ ಸಿಕ್ಕಿದ್ರೆ ಖಂಡಿತ ಖುಷಿ ಆಗತ್ತೆ. ಆದ್ರೆ ಕಲೆನೇ ಅಲ್ದೆ ಇರೋದಕ್ಕೆ ಅತಿ ಅನ್ನಿಸೋ ಅಷ್ಟು ಬೆಲೆ ಸಿಕ್ದಾಗ ಕಲಾರಸಿಕರ ಬಗ್ಗೆನೇ ಅನುಮಾನ ಶುರುವಾಗತ್ತೆ. ಈಗ ನಂಗಾಗಿರೋದೂ ಹಾಗೇ. ಕಲೆಯೇ ಅಲ್ಲದ್ದಕ್ಕೆ ಸಹೃದಯರು ಕೊಡ್ತಾ ಇರೋ ಮೆಚ್ಚುಗೇನ ನೋಡಿದ್ರೆ ಇಷ್ಟುದಿನ ಸಿಕ್ಕಿದ್ ಮೆಚ್ಚುಗೆ ನಿಜವಾದ ಕಲೆಗೆ ಆಗಿರ್ಲಿಲ್ವಾ ಅನ್ಸೋಕ್ ಶುರುವಾಗಿದೆ” ಎಂದು ನಿಟ್ಟುಸಿರುಬಿಟ್ಟ ಶ್ರೀನಿವಾಸ.
“ಮತ್ತೊಂದ್ಸಾರಿ ಹೇಳ್ತಿದೀನಿ ಶ್ರೀ… ಯು ಆರ್ ಸಿಂಪ್ಲಿ ಓವರ್ ರಿಯಾಕ್ಟಿಂಗ್ ಟು ಸಚ್ ಅ ಸಿಲ್ಲಿ ಮ್ಯಾಟರ್…”
“ಸಿಲ್ಲಿ? ಡಸ್ ಇಟ್ ಲುಕ್ ಲೈಕ್ ಸಿಲ್ಲಿ ಫಾರ್ ಯು?”
“ಯಾ ಅಫ್ ಕೋರ್ಸ್… ಪ್ಲೀಸ್… ಜಸ್ಟ್ ಲೆಟ್ ಇಟ್ ಗೋ ಶ್ರೀ.”
“ಅಲ್ಲಾ ಸುರೇಖಾ… ಭೂಷಣ್ ದಿ ಗ್ರೇಟ್ ಆರ್ಟ್ ಕ್ರಿಟಿಕ್ ಅಂತ ಲೇಬಲ್ ಅಂಟಿಸ್ಕೊಂಡೋನು, ಅವ್ನೂ ಆ ಚಿತ್ರ ನೋಡಿ ‘ವಾಹ್’ ಅಂದ್ಬಿಟ್ಟ ಗೊತ್ತಾ? ಸಚ್ ಆನ್ ಎಂಬರಾಸಿಂಗ್ ಮೊಮೆಂಟ್ ಯಾ…” ಸುರೇಖಾ ರಾತ್ರಿ ಅನ್ನೋದನ್ನೂ ಮರೆತು ಜೋರಾಗಿ ನಗೋಕೆ ಶುರುವಿಟ್ಟಳು. ಶ್ರೀನಿವಾಸನ ಅನಗತ್ಯ ಗಂಭೀರವದನ ಕಂಡು ಧ್ವನಿ ತಗ್ಗಿತಾದರೂ ನಗು ಕಡಮೆಯಾಗಲಿಲ್ಲ. “ನಿಂಗ್ ತಮಾಷೆ ಅನ್ನಿಸ್ತಿದ್ಯಾ? ಆ ಭೂಷಣ್ ನನ್ ಎಲ್ಲ ಚಿತ್ರಕ್ಕೂ ನೆಗೆಟಿವ್ ಕಾಮೆಂಟ್ ಕೊಡದೆ ಇದ್ದೋನೇ ಅಲ್ಲ. ಒಂದೊಂದು ರೇಖೆಯಲ್ಲೂ ವಕ್ರತೆ ಹುಡ್ಕಿ ಆಡ್ಕೊಂಡೋನು ಅವ್ನು. ಅವ್ನಾದ್ರೂ ಆ ಚಿತ್ರಕ್ಕೆ ಹಿಗಾಮುಗ್ಗಾ ಬೈತಾನೆ, ಅಷ್ಟರಮಟ್ಟಿಗಾದ್ರೂ ನನ್ ಪಾಪಪ್ರಜ್ಞೆ ಕಡ್ಮೆ ಆಗತ್ತೆ ಅಂದ್ಕೊಂಡ್ರೆ ಆ ಕೆಟ್ಟಮಾತು ಬರತ್ತೆ ಬಾಯಲ್ಲಿ. ಛೆ…” ಎಂದು ಗೋಡೆಗೆ ಕೈ ಗುದ್ದಿಕೊಂಡ ಶ್ರೀನಿವಾಸ.
“ನಿಮ್ಮ ಅತೀತ ಚಿತ್ರ ವಿಮರ್ಶಾತೀತ ಅಂತಾಯ್ತು. ಹೆಮ್ಮೆಪಡಿ” ಸುರೇಖಾ ಗಂಭೀರವಾಗಿಯೇ ಹೇಳಿ ಸುಮ್ಮನಾದಳು. ಅದ್ಯಾಕೋ ಸುರೇಖಾ ಧ್ವನಿಯಲ್ಲಿ ಅಭಿಮಾನ, ಮೆಚ್ಚುಗೆಗಿಂತ ಅಣಕವೇ ಕಾಣಿಸಿತ್ತು ಶ್ರೀನಿವಾಸ್ಗೆ. ಬೇರೆ ದಿನವಾಗಿದ್ದರೆ ಸುರೇಖಾಳ ಈ ಮಾತಿಗೆ ನಕ್ಕು, “ನನ್ನ ಎಲ್ಲ ಚಿತ್ರಕ್ಕೂ ಮೊದಲ ವಿಮರ್ಶಕಿ, ಮೊದಲ ಅಭಿಮಾನಿ, ಮೊದಲ ಸ್ಫೂರ್ತಿ ನೀನೇ” ಎಂದು ಮುದ್ದುಗರೆಯುತ್ತಿದ್ದ. ಆದರೆ ಇವತ್ತು ಹಾಗಾಗಲಿಲ್ಲ.
“ವಿಲ್ ಯು ಪ್ಲೀಸ್ ಶಟ್ ಅಪ್ ಸುರೇಖಾ?” ಎಂದವನೇ ಬೆಡ್ ಮೇಲೆ ಹೋಗಿ ಒರಗಿದ. ಬೇರೆ ದಿನವಾಗಿದ್ದರೆ ಮಲಗುವ ಮುನ್ನ ನೀರಜ್ನನ್ನೊಮ್ಮೆ ಮುದ್ದು ಮಾಡಿ, ನಿದ್ರಿಸುತ್ತಿದ್ದ ಪುಟ್ಟ ಕಂದನನ್ನೇ ನೋಡುತ್ತ ಕೆಲಹೊತ್ತು ನಿಲ್ಲುತ್ತಿದ್ದ. ನಾಳೆ ಬರೆಯುವ ಯಾವುದೋ ಚಿತ್ರಕ್ಕೆ ಅಂದಿನ ನೀರಜ್ನ ನಿದ್ರಾಸ್ಥಿತಿಯೇ ಎಷ್ಟೋ ಬಾರಿ ಸ್ಫೂರ್ತಿಯಾಗುತ್ತಿತ್ತು. ಆದರೆ ಇವತ್ತು ಶ್ರೀನಿವಾಸ್ ಎಂದಿನಂತಿಲ್ಲ.
“ಶ್ರೀ… ಐ ಆಮ್ ರಿಯಲಿ ಸಾರಿ. ನೋಡಿ ಒಂದೇ ಒಂದ್ ಸಾರಿ ಯೋಚ್ಸಿ. ಹದಿನೈದು ದಿನದಿಂದ ನೆಮ್ಮದಿಯಿಂದ ನಿದ್ದೆ ಮಾಡದೆ ಯೋಚಿಸೋ ಅಷ್ಟು ಸೀರಿಯಸ್ ವಿಷ್ಯಾನಾ ಇದು? ಒಬ್ಬ ಕಲಾವಿದರಾಗಿ ನಿಮ್ಗೆ ಇದು ತುಂಬಾ ಗಂಭೀರ ವಿಷ್ಯ ಇರ್ಬೋದು. ಆದ್ರೆ ಇದ್ರಲ್ಲಿ ಯಾರ ತಪ್ಪೂ ಇಲ್ಲ. ನಿಮ್ಮ ಪರಿಶ್ರಮ ಇಲ್ದೆ ಯಾವುದೋ ತಪ್ಪಿಂದ ಆದ ಚಿತ್ರಕ್ಕೆ ಇಷ್ಟೆಲ್ಲ ಬೆಲೆ ಸಿಗ್ತಾ ಇದೆ, ಇದು ಕಲಾರಸಿಕರ ಕ್ರೆಡಿಬಿಲಿಟಿ ಬಗ್ಗೆನೇ ಅನುಮಾನ ಹುಟ್ಟಿಸುತ್ತೆ ಅನ್ನೋದು ನಿಮ್ ಚಿಂತೆ. ಆದ್ರೆ ಒಂದ್ ಸಾರಿ ಯೋಚ್ಸಿ. ನಾಲ್ಕು ವರ್ಷದ ಹಿಂದೆ ನಿಮ್ ಬದ್ಕು ಹೇಗಿತ್ತು? ನೀವ್ ಹೇಗಿದ್ರಿ? ನಿಜವಾದ ಕಲೆಗೆ ಬೆಲೆ ಇಲ್ಲ ಅಂತ ನೀವು ಕಣ್ಣೀರ್ ಹಾಕಿದ್ ದಿನಗಳು ನೆನಪಿಲ್ವಾ? ಈಗ ನಿಮ್ ಕಲೆಗೆ ಬೆಲೆ ಸಿಕ್ಕಿದೆ. ಈಗ ಅದ್ಯಾವ್ದೋ ಒಂದು ಸಣ್ಣ ವಿಷ್ಯಕ್ಕೆ….”
“ಸಣ್ಣ ವಿಷ್ಯಾ…? ಸುರೇಖಾ, ಅರ್ಥಮಾಡ್ಕೋ. ಅದೇ ಅತೀತ ಚಿತ್ರ ಬೇರೆ ಯಾರೋ ಬರ್ದಿದ್ದಾಗಿದ್ರೆ ಇವತ್ತು ಈ ಥರ ಪಬ್ಲಿಸಿಟಿ ಸಿಕ್ತಿತ್ತಾ? ಅಂದ್ರೆ ಏನ್ ಅರ್ಥ? ಬೆಲೆ ಇರೋದು ಕಲೆಗಲ್ಲ, ಕಲಾವಿದಂಗೆ…” ಎನ್ನುತ್ತಿದ್ದವನ ಮಾತನ್ನು ಅರ್ಧಕ್ಕೆ ತಡೆದು, ಅವನ ಕೈಯಲ್ಲಿ ತನ್ನ ಕೈ ಇಟ್ಟಳು ಸುರೇಖಾ. “ಎಸ್, ಬೆಲೆ ಇರೋದು ಕಲಾವಿದಂಗೆ. ಸೋ ವಾಟ್? ವಾಟ್ಸ್ ರಾಂಗ್ ಇನ್ ದಟ್?” ಅರ್ಥವಾಗದಂತೆ ನೋಡಿದ ಶ್ರೀನಿವಾಸ. ಅವನ ನೋಟದಲ್ಲಿ ನಿನ್ನೊಂದಿಗೆ ಇನ್ನು ಮಾತನಾಡಿ ಉಪಯೋಗವಿಲ್ಲ ಎಂಬ ಭಾವ ಇತ್ತು. ಮಗ್ಗಲು ಬದಲಿಸಿ ಮಲಗಿದ. ಸುರೇಖಾ ಅವನ ಪಕ್ಕ ಕೂತು ತಲೆ ಸವರುತ್ತಿದ್ದರೂ ಶ್ರೀನಿವಾಸನಲ್ಲಿ ಅಸಾಧ್ಯ ಅಸಹನೆ.
“ನೋಡಿ ಶ್ರೀ… ಬೆಳೆಯೋವರೆಗೂ ಕಲಾಕೃತಿಯಿಂದ ಕಲಾವಿದನ ಅಸ್ತಿತ್ವ. ಕಲಾವಿದ ಅನ್ನಿಸ್ಕೊಂಡು ಬೆಳೆದ್ಮೇಲೆ ಅವ್ನು ಏನ್ ಬರೆದ್ರೂ ಕಲಾಕೃತಿನೇ! ನೀವೇ ಒಂದ್ ಕಲೇನ ಸೃಷ್ಟಿಮಾಡೋ ಮಟ್ಟಕ್ ಬೆಳ್ದಿದೀರಾ ಅಂತ ಖುಷಿ ಪಡಿ. ಯು ಆರ್ ದಿ ಟ್ರೆಂಡ್ ಸೆಟರ್ ಅಂತ ಅಂದ್ಕೊಳಿ. ಹೋಪ್ ಯು ಅಂಡರ್ಸ್ಟ್ಯಾಂಡ್. ನೀವ್ ತಪ್ ಮಾಡಿಲ್ಲ. ಗಿಲ್ಟ್ ಇಟ್ಕೊಳೋದ್ ಬೇಕಾಗಿಲ್ಲ. ಲವ್ ಯು, ಗುಡ್ ನೈಟ್.” ಎಂದು ಸುರೇಖಾ ಮಗ್ಗಲು ಬದಲಿಸಿ ಮಲಗಿದಳು. ಮಲಗಿದ ಮೂರ್ನಾಲ್ಕು ನಿಮಿಷದಲ್ಲೇ ಅವಳ ಉಸಿರಾಟದ ಗತಿ ನೋಡಿ, ನಿದ್ದೆಹೋಗಿದ್ದಾಳೆ ಅನ್ನೋದು ತಿಳಿದು ಇತ್ತ ತಿರುಗಿದ ಶ್ರೀನಿವಾಸ್. ಮನಸ್ಸಲ್ಲೇ ಅವಳ ಬಗ್ಗೆ ಮೆಚ್ಚುಗೆ ಸೂಚಿಸಿದ. ‘ಅವ್ಳು ಇಷ್ಟ ಆಗೋದೇ ಅದಕ್ಕೆ. ಯಾವುದರಲ್ಲೂ ನೆಗೆಟಿವಿಟಿ ಹುಡ್ಕೋಳಲ್ಲ. ಹದಿನೈದು ದಿನದಲ್ಲಿ ನನ್ನ ಅಸ್ತಿತ್ವದ ಬಗ್ಗೆಯೇ ಅಸಹ್ಯ ಮೂಡಿಸಿದ್ದ ವಿಷ್ಯಾನ ನಾಲ್ಕು ಸಾಲಲ್ಲೇ ಬಗೆಹರಿಸಿಬಿಟ್ಳು. ಅವ್ಳು ಹೇಳಿದ್ದರಲ್ಲಿ ತಪ್ಪೇನಿದೆ?’ ಅಂಗಾತ ಮಲಗಿದವನ ಮೇಲೆ ತಿರುಗುತ್ತಿದ್ದ ಫ್ಯಾನು ಮನಸ್ಸನ್ನು ಹದಿನೈದಿಪ್ಪತ್ತು ದಿನದ ಹಿಂದಕ್ಕೆ ತಳ್ಳಿತ್ತು…
* * *
“ಅತೀತ…” “ಪ್ರಸಿದ್ಧ ಚಿತ್ರಕಲಾವಿದ ಶ್ರೀನಿವಾಸ್ ರಾಘವ್ರಿಂದ ಈ ಬಾರಿ ರಚನೆಯಾಗುತ್ತಿರುವ ಅಪರೂಪದ ಚಿತ್ರ. ಇನ್ನು ಒಂದು ವಾರದಲ್ಲಿ ನಡೆಯಲಿರುವ ಚಿತ್ರಜಾತ್ರೆಯಲ್ಲಿ ನಿಮ್ಮೆಲ್ಲರ ಮುಂದೆ… ಎಂದು ಚಿತ್ರಜಾತ್ರೆಯ ಆಯೋಜಕರು ಬೀದಿ ಬೀದಿಯಲ್ಲಿ ಅನೌನ್ಸ್ ಮಾಡುತ್ತಿದ್ದರು. ಇವೆಲ್ಲ ಬೇಕಾ? ಇನ್ನೂ ಚಿತ್ರ ರಚನೆಯೇ ಆಗಿಲ್ಲ. ಈಗ್ಲೇ ಇಷ್ಟು ಹೈಪ್ ಕೊಟ್ರೆ ಹೇಗೆ ಹೇಳಿ” ಎಂದ ಶ್ರೀನಿವಾಸ್ರನ್ನು ಆಯೋಜಕ ನಾಯಕ್ ತುಸು ಸಲಿಗೆ, ಹುಸಿಕೋಪದಲ್ಲೇ ನಿಂದಿಸಿದ್ದರು. “ನೀವ್ ಬಿಡಿ ಸರ್, ತುಂಬಿದ್ ಕೊಡ ತುಳಕಲ್ಲ ಅನ್ನೋ ಹಾಗೆ. ಇಷ್ಟೆಲ್ಲ ಟ್ಯಾಲೆಂಟ್ ಇಟ್ಕೊಂಡು ಪ್ರಚಾರ ಬೇಡ ಅಂತೀರಾ. ಇಷ್ಟೆಲ್ಲ ಸಂಕೋಚ ಒಳ್ಳೇದಲ್ಲ ಸರ್. ನಿಮ್ಗೆ ಬೇಕೋ ಬೇಡ್ವೋ, ನಮಗೆ ಜಾತ್ರೆಗೆ ಜನ ಬರ್ಬೇಕಂದ್ರೆ ನಿಮ್ ಚಿತ್ರ ಇದ್ರೆ ಮಾತ್ರ. ನಮ್ ಹೊಟ್ಟೆ ತುಂಬೋರು ಹಾಗೆ ಸರ್. ಈ ಹೈಪ್ ಕೊಡೋದ್ ನಮ್ಗೆ ತುಂಬಾ ಅಗತ್ಯ ನೋಡಿ…” ಎಂದಿದ್ದರು. ಹೊಟ್ಟೆಪಾಡು ಎಂಬೆಲ್ಲ ಪದ ಕೇಳಿದ ನಂತರ ಶ್ರೀನಿವಾಸ ಸುಮ್ಮನಾಗಿದ್ದ. ತನ್ನಿಂದ ಯಾರಿಗೋ ಹೊಟ್ಟೆ ತುಂಬುತ್ತದಂದ್ರೆ ಯಾಕೆ ಬೇಡ ಎನ್ನಲಿ ಎಂದುಕೊಂಡಿದ್ದ.
ನಾಳೆ ಬೆಳಗಾದರೆ ಚಿತ್ರ ಜಾತ್ರೆ. ಅಂದು ರಾತ್ರಿಯೆಲ್ಲ ಅತೀತ ಚಿತ್ರ ರಚನೆಯಲ್ಲೇ ಮುಳುಗಿದ್ದ ಶ್ರೀನಿವಾಸ್ ರಾಘವ್ ಅದಕ್ಕೊಂದು ಫೈನಲ್ ಟಚ್ ಕೊಟ್ಟು ಸಾರ್ಥಕತೆಯಲ್ಲಿ ಮಲಗಿದ್ದ. ತೀರಾ ಸುಸ್ತಾಗಿದ್ದರಿಂದ ಚೆನ್ನಾಗಿಯೇ ನಿದ್ದೆ ಹತ್ತಿತ್ತು. ಸುಮಾರು ೭ ಗಂಟೆಯಾಗಿದ್ದಿರಬೇಕು, ಸುರೇಖಾ ಕಿಟಾರನೆ ಕಿರುಚಿದ ಸದ್ದಾಯ್ತು. “ನೀರಜ್… ಏನೋ ಮಾಡ್ದೆ…” ಎಂದು ಆ ಪುಟ್ಟ ಕಂದನ ಮೇಲೆ ಕೈ ಎತ್ತಿದ್ದಳು ಸುರೇಖಾ, ನೀರಜ್ ಅಮ್ಮನ ಕಣ್ಣು ನೋಡಿಯೇ ತನ್ನಿಂದ ಏನೋ ಅನಾಹುತವಾಗಿದೆ ಎಂದು ಭಯವಾಗಿ ಅಳುವುದಕ್ಕೆ ಶುರು ಮಾಡಿದ್ದ. ಮುಂದೆ ಬಂದು ವಾಸ್ತವ ಅರಿಯುವ ಹೊತ್ತಿಗೆ ಶ್ರೀನಿವಾಸ್ನ ಕಣ್ಣುಗಳು ಮಂಜಾಗಿದ್ದವು. ರಾತ್ರಿ ಫೈನಲ್ ಟಚ್ ಕೊಟ್ಟು ಮುಗಿಸಿದ ಅತೀತ ಚಿತ್ರದ ಮೇಲೆ ನೀರಜ್ ಬಣ್ಣದ ಕಾಲಲ್ಲಿ ನಿಂತಿದ್ದ! ಅದರ ಮೇಲೆ ತನ್ನ ಕೈಯನ್ನೂ ಇಟ್ಟಿದ್ದ. ರಾತ್ರಿ ತಡವಾಗಿದ್ದರಿಂದ ಪೇಂಟ್ ಎತ್ತಿಡಲು ಮರೆತು ಮಾಡಿದ ಎಡವಟ್ಟಿಗೆ ಕ್ಯಾನ್ವಾಸ್ ಅಯೋಮಯವಾಗಿತ್ತು. ನೀರಜ್ನ ಅಂಗೈ ಗುರುತು, ಹೆಜ್ಜೆ ಗುರುತಲ್ಲೇ ಕ್ಯಾನ್ವಾಸ್ ಭರ್ತಿಯಾಗಿತ್ತು. ಅಲ್ಲೆಲ್ಲೂ ಅತೀತ ಚಿತ್ರದ ಕುರುಹಿರಲಿಲ್ಲ. ಶ್ರೀನಿವಾಸನ ತಲೆ ಗಿರ್ ಅನ್ನುವುದಕ್ಕೆ ಶುರುವಾಯ್ತು. ಅಷ್ಟರಲ್ಲಿ ಫೋನ್ ರಿಂಗ್ ಆಯ್ತು. “ಸಾರ್, ಮನೆ ಹತ್ರಾನೇ ಇದ್ದೀನಿ. ಐದೇ ಐದ್ ನಿಮಿಷ ಬಂದೆ. ಜಾತ್ರೆಲಿ ಜನ ನಿಮ್ ಅತೀತ ಚಿತ್ರಕ್ಕೇ ಕಾಯ್ತಿದಾರಂತೆ, ಈಗ್ತಾನೆ ನಾಯಕ್ ಫೋನ್ ಮಾಡಿದ್ರು…” ಸುಧೀರ್ ಒಂದೇ ಸಮನೆ ಮಾತನಾಡುತ್ತಿದ್ದ.
* * *
“ಶ್ರೀ… ವಾಟ್ ಆರ್ ಯು ಡೂಯಿಂಗ್…” ನೀರಜ್ನ ಅಂಗೈ, ಪಾದದ ಗುರುತಿನ ಕ್ಯಾನ್ವಾಸ್ಗೆ ತಾನು ಬಾರ್ಡರ್ ಎಳೆಯುತ್ತಿರುವುದನ್ನು ಕಂಡು ಸುರೇಖಾ ಗಾಬರಿಯಲ್ಲೇ ಕೇಳಿದ್ದಳು. ಐ ಡೋಂಟ್ ಹ್ಯಾವ್ ಎನಿ ಅದರ್ ಆಪ್ಷನ್ ಸುರೇಖಾ… ಎಂದ ರಾಘವ್ನ ಕಣ್ಣಲ್ಲಿ ನೀರು ಜಿನುಗಿತ್ತು. ಕಪ್ಪು ಪೇಂಟ್ನಲ್ಲಿ ಕ್ಯಾನ್ವಾಸ್ನ ಮೇಲ್ಗಡೆ ಬರೆದ ‘ಅತೀತ’ ಶೀರ್ಷಿಕೆಯನ್ನು ಇನ್ನೊಮ್ಮೆ ನೋಡುವ ಧೈರ್ಯವೂ ಆಗದೆ ಪ್ರದರ್ಶನಕ್ಕೆಂದು ಸಿದ್ಧವಾಗಿದ್ದ ಇತರ ಚಿತ್ರಗಳ ನಡುವಲ್ಲಿ ತೂರಿಸಿ ಬಂದಿದ್ದ.
* * *
ಇದ್ದಕ್ಕಿದ್ದಂತೆ ಫ್ಯಾನ್ ಆಫ್ ಆಗಿತ್ತು. “ಛೆ, ಕರೆಂಟ್ ಕೈ ಕೊಡ್ತು ಅನ್ಸುತ್ತೆ….” ಎಂದ ಶ್ರೀನಿವಾಸ ವಾಸ್ತವಕ್ಕೆ ಬಂದ. ಬಾಲ್ಕನಿಗೆ ಹೋಗಿ ಆಗಸ ದಿಟ್ಟಿಸಿದವನಿಗೆ ಈ ಬಾರಿ ನಕ್ಷತ್ರದಲ್ಲಿ ಇರಿವ ಮೊನಚಿರಲಿಲ್ಲ, ಹೊಳೆವ ಮೆರುಗಿತ್ತು. ‘ನೀವೇ ಒಂದ್ ಕಲೇನ ಸೃಷ್ಟಿಮಾಡೋ ಮಟ್ಟಕ್ ಬೆಳ್ದಿದೀರಾ ಅಂತ ಖುಷಿ ಪಡಿ. ಯು ಆರ್ ದಿ ಟ್ರೆಂಡ್ ಸೆಟರ್ ಅಂತ ಅಂದ್ಕೊಳಿ. ಬೆಳೆಯೋವರೆಗೂ ಕಲಾಕೃತಿಯಿಂದ ಕಲಾವಿದನ ಅಸ್ತಿತ್ವ. ಕಲಾವಿದ ಅನ್ನಿಸ್ಕೊಂಡ್ಮೇಲೆ ಅವ್ನು ಏನ್ ಬರೆದ್ರೂ ಕಲಾಕೃತಿನೇ!’ – ಸುರೇಖಾ ಆಡಿದ ಮಾತು ತಲೆಯಲ್ಲಿ ಗಿರಿಗಿಟ್ಲೆ ಆಡುವುದಕ್ಕೆ ಶುರು ಮಾಡಿತ್ತು.
ಒಂದು ಸುದೀರ್ಘ ನಿಟ್ಟುಸಿರು ತನ್ನೊಳಗೆ ಒಬ್ಬ ಕಲಾವಿದ ಮಾತ್ರವಲ್ಲ, ಹೊಟ್ಟೆಪಾಡಿಗಾಗಿ ಹೆಣಗುವ ಒಬ್ಬ ಸಾಮಾನ್ಯ ಮನುಷ್ಯನೂ ಇದ್ದಾನೆ ಅನ್ನೋದನ್ನ ನೆನಪಿಸಿತ್ತು.
‘ಮಿಸ್ಟರ್ ಶ್ರೀನಿವಾಸ್, ನಿಮ್ಮ ಅತೀತ ಪೇಂಟಿಂಗ್ಗೆ ನಾನು ೫ ಲಕ್ಷದವರೆಗೂ ಕೊಡೋಕೆ ರೆಡಿ. ಯಾವ್ದಕ್ಕೂ ನಾಳೆ ಅವೆನ್ಯೂ ರೋಡ್ನಲ್ಲಿರೋ ನನ್ ಆಫೀಸಿಗೆ ಬನ್ನಿ…’ ಆ ನಡುರಾತ್ರಿ ಇದ್ದಕ್ಕಿದ್ದಂತೆ ಪೈ ನೆನಪಾದರು. ‘ಐದಕ್ಕೆ ರೆಡಿ ಅಂತಿದಾರೆ, ಅವ್ರಿಗೇನ್ ದುಡ್ ಕಡ್ಮೆನಾ? ನಾನ್ ಆರು ಕೇಳಿದ್ರೆ ಹೇಗೆ?’ ಹದಿನೈದು ದಿನದ ನಂತರ ಶ್ರೀನಿವಾಸನ ಮುಖದಲ್ಲಿ ನಿರಾಳತೆಯ ನಕ್ಷತ್ರ ಮಿನುಗಿತ್ತು.
* * *