ಅಣ್ಣನ ಬೋರ್ವೆಲ್ ಇರುವುದು ಅವನ ಮನೆಯ ಹಿಂದೆಯೇ. ನಮ್ಮದು ನಮ್ಮ ಮನೆಯಿಂದ ಫರ್ಲಾಂಗಿನಷ್ಟು ದೂರ. ಅಲ್ಲಿಂದ ನೀರು ತರುವುದು ಕಷ್ಟ. ಇದಕ್ಕಾಗಿ ನಾವು ಕುಡಿಯುವ ನೀರಿಗೆ ಪಂಚಾಯತಿಯ ನೀರನ್ನು ಆಶ್ರಯಿಸಬೇಕಾಗಿದೆ ಅಂತ ಬಂದೆ’ ಎಂದ. ನಾನು ಅವನಿಂದ ಅರ್ಜಿ ಕೊಡಿಸಿ ಪಿ.ಡಿ.ಓ. ಅವರಲ್ಲಿ ಮಂಜೂರು ಮಾಡಿ ‘ನಾಳೆಯೇ ಕೆಲಸ ಪ್ರಾರಂಭಿಸಿ’ ಎಂದಿದ್ದೆ. ಅವರು ಒಪ್ಪಿ ಪ್ಲಂಬಿಗ್ನ ವ್ಯವಸ್ಥೆ ಮಾಡಿಸಲು ಲಿಂಗಪ್ಪನನ್ನು ಕರೆದು ‘ನಾಳೆ ಇವರಿಗೆ ಪೈಪುಲೈನ್ ಹಾಕು’ ಎಂದು ನನ್ನ ಎದುರಿನಲ್ಲೇ ಆದೇಶಿಸಿದ್ದರು. ಆಗ ಲಿಂಗಪ್ಪ ‘ಸರ್ ನಮ್ಮ ಪಂಚಾಯತ್ ಪೈಪ್ಲೈನ್ ಅವರ ಮನೆಯ ಹತ್ತಿರ ಹೋಗುವುದಿಲ್ಲ! ಅದು ಅವರ ಮನೆಯಿಂದ ಒಂದು ಫರ್ಲಾಂಗಿನಷ್ಟು ಹಿಂದೆ ಅಂದರೆ ಚಿರ್ತಿಲ್ಲ ಭೋಜಪ್ಪನ ಮನೆ ತನಕ ಮಾತ್ರ ಇರುವುದು. ಅಲ್ಲಿಂದ ಇವರ ಮನೆಗೆ ಪೈಪುಲೈನ್ ಹಾಕಬೇಕಾದರೆ, ಕನಿಷ್ಠ ಎರಡು ದಿನದ ಕೂಲಿ ಕೆಲಸ ಬೇಕು’ ಎಂದ.
ಯಾವತ್ತೂ ಬೆಳಗ್ಗೆ ಒಂಬತ್ತರ ಸುಮಾರಿಗೆ ಮನೆಯಿಂದ ಹೊರಡುವ ಕುಪ್ಪಣ್ಣಯ್ಯ ಆ ದಿನ ಪತ್ನಿ ಪ್ರೇಮಕ್ಕನಿಗೆ ಶೀತಜ್ವರ ಬಂದಿದೆಯೆಂದು ಮನೆ ಕೆಲಸಗಳಿಗೆ ನೆರವಾಗಿ, ದುರ್ಗಾಭವನ ಹೋಟೆಲಿಗೆ ಹೊರಡುವಾಗ ಬೆಳಗ್ಗೆ ಗಂಟೆ ಹತ್ತು ದಾಟಿತ್ತು. ಅವರ ಹೋಟೆಲು ಇರುವುದು ಸೀತಾಪುರದ ರಥಬೀದಿಯಲ್ಲಿ. ಅಲ್ಲಿಂದ ಅವರ ಮನೆಗೆ ಸುಮಾರು ಎರಡು ಕಿ.ಮೀ.ನಷ್ಟು ದೂರ. ಅದನ್ನು ಅವರು ಇಪ್ಪತ್ತೇ ನಿಮಿಷದಲ್ಲಿ ಕ್ರಮಿಸುತ್ತಿದ್ದರು. ಈ ದಿನ ‘ಸ್ವಲ್ಪ ತಡವಾಯಿತಲ್ಲ’ ಎಂದು ಅವರು ಬೀಸುಗಾಲಿನ ಹೆಜ್ಜೆ ಹಾಕಿ ಮುಂದುವರಿದಾಗ, ದಾರಿ ಮಧ್ಯೆ ಸಿಗುವ ವೆಂಕಪ್ಪಯ್ಯನ ಮೋರಿಯ ಬಳಿ ಹತ್ತಾರು ಜನ ಸೇರಿದ್ದನ್ನು ಕಂಡು ಆಶ್ಚರ್ಯಪಟ್ಟರು. ‘ಅರೇ! ಏನಾಗಿರಬಹುದು ಇಲ್ಲಿ?’ ಎಂದುಕೊಂಡು ಮೋರಿಯ ಬದಿಗೆ ಬಂದಾಗ, ಅಲ್ಲಿ ಪಂಚಾಯತ್ ಅಧ್ಯಕ್ಷ ನಾಗಪ್ಪಯ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸದಾಶಿವ ಗೌಡ ಮತ್ತು ವೆಂಕಪ್ಪಯ್ಯನ ಸುತ್ತಮುತ್ತಲಿನ ಮನೆಯವರೂ ನೆರೆದಿದ್ದರು.
ಕುಪ್ಪಣ್ಣಯ್ಯ ಅಲ್ಲಿಗೆ ಬರುತ್ತಿದ್ದಂತೆ ಆ ತನಕ ತುಸು ಜೋರೇ ಎಂಬಂತೆ ಮಾತು ಆಡುವವರೆಲ್ಲ ಸ್ವಲ್ಪ ತಗ್ಗಿದ ಸ್ವರದಲ್ಲಿ ಮಾತನಾಡತೊಡಗಿದರು. ಕುಪ್ಪಣ್ಣಯ್ಯ ಅಲ್ಲಿ ನಿಂತು ‘ಏನು? ಎತ್ತ?’ ಎಂದು ಕೇಳಬೇಕು ಎಂದು ಕೇಳಲು ಬಾಯಿ ಬಿಡುವ ಮೊದಲೇ ಪಂಚಾಯತ್ ಅಧ್ಯಕ್ಷ ನಾಗಪ್ಪಯ್ಯ ‘‘ಹೇಳುವಷ್ಟು ಹೇಳಿಯಾಗಿದೆ ನಿಮಗೆ. ಇನ್ನೂ ನಮ್ಮ ಮಾತು ಕೇಳುವುದಿಲ್ಲವಾದರೆ ನಾವು ಈ ವಿಷಯದಲ್ಲಿ ಇಲ್ಲ’’ ಎನ್ನುತ್ತಾ ಮುಖ ಕೆಂಪೇರಿಸಿ ‘‘ನಿಮಗಿಬ್ಬರಿಗೂ ಕ್ರಿಮಿನಲ್ ಕೇಸ್ ಮಾಡಬೇಕೆಂಬ ಉದ್ದೇಶ ಇದ್ದರೆ ಹಾಗೇ ಮಾಡಿ. ಆಮೇಲೆ ಪೊಲೀಸಿನವರು ಬಂದು ನಮ್ಮಲ್ಲಿ ‘ನೀವು ಈಗ ಪೈಪ್ಲೈನ್ ಹಾಕಿ, ನಾವಿದ್ದೇವೆ’ ಎಂದ ಮೇಲೆಯೇ ನಾವು ಪೈಪ್ಲೈನಿನ ಕೆಲಸ ಮುಂದುವರಿಸುವುದು’’ ಎನ್ನುತ್ತಾ ತಮ್ಮ ತೋಳನ್ನೆತ್ತಿ ಕಂಕುಳವನ್ನು ತುರಿಸಿಕೊಂಡರು. ದೂರದಲ್ಲಿದ್ದವರಿಗೆ ಅದು ‘ನೋಡಿಕೊಳ್ಳುತ್ತೇನೆ ನಿಮ್ಮನ್ನು’ ಎಂಬಂತಿತ್ತು.
ಶೀನಪ್ಪಯ್ಯ ತಕ್ಷಣ ಏರುದನಿಯಲ್ಲಿ ‘‘ನೀವು ಏನು ಹೇಳುವುದು ಸ್ವಾಮಿ, ಹೀಗೆ ಜವಾಬ್ದಾರಿ ಇಲ್ಲದವರ ಹಾಗೆ? ಒಂದು ಪೈಪ್ಲೈನ್ ಹಾಕಿಸುವ ಧೈರ್ಯ ಇಲ್ಲ ಎಂದಾದರೆ ನಿಮ್ಮನ್ನು ನಾವು ಪಂಚಾಯತ್ ಅಧ್ಯಕ್ಷ ಸ್ಥಾನದಲ್ಲಿ ಕುಳ್ಳಿರಿಸಿದ್ದು ತಪ್ಪಾಯಿತಲ್ಲ!’’ ಎಂದರು. ನಾಗಪ್ಪಯ್ಯನ ಸಿಟ್ಟು ನೆತ್ತಿಗೇರಿತು. ‘‘ನೋಡಿ ಶೀನಪ್ಪಯ್ಯ, ನೀವು ಹೀಗೇ ಮಾತನಾಡಿದರೆ ನಾನು ನಿಮ್ಮ ಮೇಲೆ ಪೊಲೀಸ್ ಕಂಪ್ಲೈಂಟ್ ಕೊಡಬೇಕಾಗುತ್ತದೆ. ನನಗೇನೂ ಈ ಅಧ್ಯಕ್ಷ ಸ್ಥಾನ ಶಾಶ್ವತದ್ದಲ್ಲ. ನಾನು ನಿಮ್ಮ ಕಡೆಯ ಮತಗಳಿಂದಲೇ ಬಂದವನು ನಿಜ. ನಿಮ್ಮಣ್ಣ ವೆಂಕಪ್ಪಯ್ಯ ‘ನಾನು ಸತ್ತರೂ ನೀರಿನ ಪೈಪ್ಲೈನ್ ಹಾಕಲು ಬಿಡುವುದಿಲ್ಲ’ ಎಂದು ಪಂಚಾಯತ್ ಕಛೇರಿಗೆ ಬಂದು ಅಬ್ಬರಿಸಿದಾಗ, ನಾನು ನಿಮ್ಮ ಮೇಲಿನ ಸಹಾನುಭೂತಿಯಿಂದ ನಮ್ಮ ಪಿ.ಡಿ.ಓ. ಸದಾಶಿವ ಗೌಡರನ್ನು ಕರೆದುಕೊಂಡು ‘ನಾವಿಬ್ಬರೂ ಖುದ್ದಾಗಿ ನಿಂತು ಇತ್ಯರ್ಥ ಮಾಡೋಣ’ ಎಂದು ಇಲ್ಲಿಗೆ ಬಂದರೆ, ನಿಮ್ಮ ಅಣ್ಣ ಈ ವೆಂಕಪ್ಪಯ್ಯ ಪಂಚಾಯತಿಯಲ್ಲಿ ಅಬ್ಬರಿಸಿದ ಹಾಗೆಯೇ ಇಲ್ಲೂ ಅಬ್ಬರಿಸಿದ್ದಾರೆ. ನೀವೂ ಅಷ್ಟೇ, ನಿಮ್ಮ ಅಣ್ಣನನ್ನು ತರಾಟೆಗೆ ತೆಗೆದುಕೊಳ್ಳುವುದು ಬಿಟ್ಟು, ಕೈಲಾಗದವರು ಎಂದು ನಮ್ಮನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದೀರಲ್ಲ? ನಮಗೇನೂ ಕೆಲಸ ಇಲ್ಲ ಅಂತ ತಿಳಿದುಕೊಂಡಿದ್ದೀರಾ? ನನಗೆ ಪಂಚಾಯತಿನ ಕೆಲಸ ಮಾತ್ರವಲ್ಲ, ಮನೆಯ ಕೃಷಿ ಕೆಲಸಗಳೂ ಸಾಕಷ್ಟು ಇವೆ. ಪಿ.ಡಿ.ಓ. ಅವರಿಗೆ ಬರುವ ಸೋಮವಾರ ‘ಜಮಾಬಂದಿ’ ಇದೆಯಂತೆ. ಅಂದರೆ ಕೈಯಲ್ಲಿ ಹಿಡಿಯದಷ್ಟು ಕೆಲಸ ಅವರಿಗೂ ಇದೆ. ಇದರ ಮಧ್ಯೆಯೂ ನಾವು ಊರಲ್ಲಿ ಯಾರೂ ಜಗಳಕಾಯದೆ ನೆಮ್ಮದಿಯಿಂದ ಇರಬೇಕು ಎಂದು ಬಯಸಿ ಬಂದರೆ, ನೀವು ಆಡುವುದೇ ಇನ್ನೊಂದು!’’ ಎನ್ನುತ್ತಾ ತಮ್ಮ ಸಿಟ್ಟನ್ನು ಸ್ವಲ್ಪ ಕಡಮೆ ಮಾಡಿಕೊಂಡರು.
ಶೀನಪ್ಪಯ್ಯ ಎರಡು ಕಣ್ಣುಗಳನ್ನು ದೊಡ್ಡದು ಮಾಡಿ ‘‘ನನಗೆ ಅದೆಲ್ಲ ಗೊತ್ತಿಲ್ಲ ಸ್ವಾಮಿ. ನೀವು ನನಗೆ ಪಂಚಾಯತಿಯಿಂದ ನೀರು ಸಪ್ಲೈ ಮಾಡುತ್ತೀರೋ ಇಲ್ಲವೋ ಹೇಳಿ? ಇಲ್ಲ ಎಂದಾದರೆ ಹಾಗೇ ಬರೆದುಕೊಡಿ’’ ಎಂದರು.
ಆ ತನಕ ಸುಮ್ಮನಿದ್ದ ಪಿ.ಡಿ.ಓ. ಸದಾಶಿವ ಗೌಡರು ‘‘ಬನ್ನಿ ಅಧ್ಯಕ್ಷರೇ ಇದು ನಮ್ಮಿಂದಾಗುವ ಕೆಲಸ ಅಲ್ಲ. ನಾವು ಬಂದ ಹಾಗೇ ಹೋಗೋಣ. ಈ ರಸ್ತೆ ಮಧ್ಯೆ ಯಾಕೆ ಬೇಕು ಇವರ ವಾದ ವಿವಾದ?’’ ಎನ್ನುತ್ತಾ ಬದಿಯಲ್ಲೇ ನಿಂತಿದ್ದ ನಾಗಪ್ಪಯ್ಯನ ಬಳಿ ತೆರಳಿದರು.
ವೆಂಕಪ್ಪಯ್ಯನಿಗೆ ಖುಶಿಯಾಯಿತು. ತಕ್ಷಣ ಆತ ತಮ್ಮ ಶೀನಪ್ಪಯ್ಯನ ಮುಂದೆ ನಿಂತು ‘‘ಸಾಯುತ್ತಿ ನೋಡು ನೀನು ನೀರಿಲ್ಲದೆ! ಇದು ನಿನ್ನ ಅಹಂಕಾರದಿಂದ ಆದದ್ದೇ ಹೊರತು ನನ್ನಿಂದ ಅಲ್ಲ! ಆ ದಿನ ನಿನ್ನ ಹೆಂಡತಿ ನಿನ್ನ ಹಾಗೆ ಅಹಂಕಾರದಲ್ಲಿ ನನ್ನ ಮನೆಯ ಕಂಪೌಂಡಿನ ಹೊರಗೆ ನಿಂತು ನಾಯಿಗೆ ಬೈದ ಹಾಗೆ – ನಾನು ಇಲ್ಲಿ ಅದನ್ನೆಲ್ಲ ಹೇಳಲಾರೆ – ನಿನ್ನ ಹೆಂಡತಿಯ ದೊಂಡೆಯ ಇದಿರು ನನಗೆ ನಿಲ್ಲುವ ಶಕ್ತಿ ಇಲ್ಲ ಎಂದು ನಾನು ಆ ದಿನ ಹೇಳಿದಾಗ, ಆಕೆ ಏನು ಹೇಳಿದಳು ಗೊತ್ತಾ, ‘ನೀನೊಬ್ಬ ಗಂಡಸಾ? ಮೊದಲು ನಿನ್ನ ಹೆಂಡತಿಯನ್ನು ಹದ್ದು ಬಸ್ತಿನಲ್ಲಿಡು’ ಎಂದಳು. ಆಗ ನನ್ನ ಬಳಿಯೇ ಇದ್ದ ನನ್ನ ಹೆಂಡತಿ ಲಕ್ಷ್ಮಿ ‘ನೀನೇ ಅಲ್ಲವೇ ನಮ್ಮ ಮನೆಯ ದನದ ಕಾಲು ಕಡಿದದ್ದು? ಅದಕ್ಕೆ ನಾನೇನೂ ಮಾಡುವುದಿಲ್ಲ ಇವಳೇ, ನಿನ್ನನ್ನು ದೇವರು ನೋಡಿಕೊಳ್ಳುತ್ತಾನೆ’ ಎಂದಾಗ ಅದರಲ್ಲಿ ನಿನ್ನ ಹೆಂಡತಿಯ ಮಾನ ಹೋಗುವಂತಾದ್ದು ಏನಿತ್ತು? ತಪ್ಪು ಮಾಡಿದ ಮೇಲೂ ತನ್ನನ್ನು ತಾನೇ ಆಕೆ ಸಮರ್ಥಿಸಿಕೊಳ್ಳುವುದು ನೋಡಿ, ನನ್ನ ಹೆಂಡತಿ ‘ನೀನು ಖಂಡಿತ ಪತಿವ್ರತೆ ಅಲ್ಲ, ಬೇವರ್ಸಿ’ ಎಂದು ಸಿಟ್ಟಿನಲ್ಲಿ ಹೇಳಿದ್ದು ಹೌದು. ಆಗ ಅವಳು ಏನು ಮಾಡಿದಳು ಗೊತ್ತಾ?’’ ಎನ್ನುತ್ತಾ ಅಲ್ಲಿಂದ ತಿರುಗಿ, ವೆಂಕಪ್ಪಯ್ಯ, ನಾಗಪ್ಪಯ್ಯ, ಸದಾಶಿವಗೌಡ ಮತ್ತು ಕುಪ್ಪಣ್ಣಯ್ಯನವರು ಇರುವ ಕಡೆ ಹೋಗಿ ‘‘ಅವಳು ಮಾನಗೆಟ್ಟವಳು ಸ್ವಾಮಿ ಮಾನಗೆಟ್ಟವಳು. ಅವಳಿಗೆ ನಾಚಿಕೆ ಮಾನ ರ್ಯಾದೆ ಎನ್ನುವುದು ಇಲ್ಲ ಸ್ವಾಮಿ’’ ಎಂದ.
ನಾಗಪ್ಪಯ್ಯ ಸದಾಶಿವ ಗೌಡ ಮತ್ತು ಕುಪ್ಪಣ್ಣಯ್ಯನಿಗೆ ಆ ಮಾತು ಕೇಳಿ ಅಲ್ಲಿ ನಿಲ್ಲಲಾಗಲಿಲ್ಲ. ಕುಪ್ಪಣ್ಣಯ್ಯ ‘ತನ್ನ ಪಾಡಿಗೆ ತಾನು ಇರುತ್ತೇನೆ’ ಎಂಬAತೆ ಅಲ್ಲಿಂದ ಮುಂದಕ್ಕೆ ಹೆಜ್ಜೆ ಇಡುತ್ತಿದ್ದಂತೆ ನಾಗಪ್ಪಯ್ಯ ‘‘ಬನ್ನಿ ಕುಪ್ಪಣ್ಣಯ್ಯನೋರೆ, ನಾವು ಹೇಗೋ ರಥಬೀದಿಗೆ ಹೋಗುವವರಿದ್ದೇವೆ’’ ಎಂದು ಕಾರು ಹತ್ತಿ ಕುಳಿತರು. ಸದಾಶಿವಗೌಡರು ಆಗಲೇ ನಾಗಪ್ಪಯ್ಯನ ಪಕ್ಕದ ಸೀಟಿನಲ್ಲಿ ಆಸೀನರಾಗಿದ್ದರು. ನಾಗಪ್ಪಯ್ಯ ಕಾರನ್ನು ನಿಧಾನವಾಗಿ ಚಲಾಯಿಸುತ್ತಾ ‘‘ಎಂಥ ಮಕ್ಕಳು ಹುಟ್ಟಿದರು ನೋಡಿ ಆ ನರಸಪ್ಪಯ್ಯನಿಗೆ. ಸಜ್ಜನ ವ್ಯಕ್ತಿ ಅವರು! ಸಾಕಷ್ಟು ದುಡಿದು ಭೂಮಿಗೀಮಿ ಮಾಡಿ ಇಟ್ಟಿದ್ದಾರೆ ಈ ಮಕ್ಕಳಿಗೆ, ಇವರಿಬ್ಬರಿಗೂ ಕುಳಿತು ತಿನ್ನುವಷ್ಟು ಜಮೀನಿದೆ. ಆದರೆ ಬುದ್ಧಿ ಮಾತ್ರ ಕೇಳಬೇಡಿ. ಥೇಟು ಮೂರ್ಖರದ್ದು’’ ಎಂದರು ಬಳಿಯಲ್ಲಿದ್ದ ಪಿ.ಡಿ.ಓ ಸದಾಶಿವ ಗೌಡರಲ್ಲಿ. ಅವರು ಯಾವ ಪ್ರತಿಕ್ರಿಯೆಯನ್ನು ಕೊಡಲಿಲ್ಲ. ಆದರೆ ಮಧ್ಯೆ ಮಾತಿಗೆ ಮುಂದಾದ ಕುಪ್ಪಣ್ಣಯ್ಯ ‘‘ಅಲ್ಲ! ಏನದು ನೀರಿನ ಪೈಪ್ಲೈನ್ ಹಾಕುವ ಸಮಸ್ಯೆ?’’ ಎಂದು ಕುತೂಹಲ ತೋರಿಸಿದರು.
ಅಷ್ಟರಲ್ಲಿ ರಥಬೀದಿ ಬಂತು. ಪಂಚಾಯತ್ ಕಛೇರಿ ಬರುತ್ತಿದ್ದಂತೆ ಸದಾಶಿವಗೌಡರು ‘‘ಸರ್ ನೀವು ಬರಲಿಕ್ಕೆ ಉಂಟಾ ಆಫೀಸಿಗೆ?’’ ಎಂದು ನಾಗಪ್ಪಯ್ಯನನ್ನು ಪ್ರಶ್ನಿಸಿದರು.
‘‘ನನಗೇನಾದರೂ ಕೆಲಸ ಉಂಟಾ ನಮ್ಮ ಕಛೇರಿಯಲ್ಲಿ ಈಗ? ಸಹಿ-ಗಿಹಿ ಹಾಕಲಿಕ್ಕೆ ಇದ್ದರೆ, ಬರುತ್ತೇನೆ’’ ಎನ್ನುತ್ತಾ ನಾಗಪ್ಪಯ್ಯ ಕಾರು ನಿಲ್ಲಿಸುತ್ತಿದ್ದಂತೆ ‘‘ಹಾಗೇನೂ ಇಲ್ಲ ಸರ್’’ ಎಂದ ಸದಾಶಿವಗೌಡರು ಅದರ ಬಾಗಿಲು ತೆರೆದು ನಾಗಪ್ಪಯ್ಯನಿಗೆ ನಮಸ್ಕರಿಸಿ ಇಳಿದರು.
ನಾಗಪ್ಪಯ್ಯನ ಮನೆ ಅಲ್ಲಿಂದ ಸುಮಾರು ಒಂದು ಕಿ.ಮೀ.ಯಷ್ಟು ದೂರ. ಆದರೆ ಅವರು ಸೀತಾಪುರದ ರಥಬೀದಿಯ ಕುಪ್ಪಣ್ಣಯ್ಯನ ದುರ್ಗಾಭವನದ ಇದಿರೇ ಹಾದು ಹೋಗಬೇಕಿತ್ತು. ಅವರು ಕುಪ್ಪಣ್ಣಯ್ಯನ ಹೋಟೇಲಿನ ಇದಿರಿನಲ್ಲಿ ಕಾರು ನಿಲ್ಲಿಸಿ ‘‘ಇಳಿಯಿರಿ ಕುಪ್ಪಣ್ಣಯ್ಯನೋರೆ’’ ಎನ್ನುತ್ತಿದ್ದಂತೆ ಕುಪ್ಪಣ್ಣಯ್ಯ ಕಾರಿನಿಂದ ಇಳಿದವರೇ ‘‘ಒಂದು ನಿಮಿಷ ನಮ್ಮ ಹೊಟೇಲಿಗೆ ಬಂದು ಹೋಗಿ ಸ್ವಾಮಿ. ಬಿಸಿಲಿಗೆ ಬಂದಿದ್ದೀರಿ, ಬಾಯಾರಿಕೆ ಆಗಿರಬಹುದು ನಿಮಗೆ’’ ಎಂದು ಕಾರಿನ ಬಾಗಿಲು ಹಾಕುತ್ತಾ ನಾಗಪ್ಪಯ್ಯನನ್ನು ವಿನಂತಿಸಿದರು.
ನಾಗಪ್ಪಯ್ಯನಿಗೆ ನೀರಡಿಕೆ ಆಗುತ್ತಿರಲಿಲ್ಲ ಅಥವಾ ಚಹಾ ಬೇಕೆನಿಸುತ್ತಿರಲಿಲ್ಲ. ಆದರೂ ಕುಪ್ಪಣ್ಣಯ್ಯನ ಜೊತೆ ಒಡನಾಟ ಅವರಿಗೆ ಚೆನ್ನಾಗಿದ್ದುದರಿಂದ ‘‘ಸರಿ’’ ಎಂದು, ಕಾರನ್ನು ಬದಿಗೆ ನಿಲ್ಲಿಸಿ ದುರ್ಗಾಭವನದ ಒಳ ಹೊಕ್ಕರು.
ಕುಪ್ಪಣ್ಣಯ್ಯ ನಾಗಪ್ಪಯ್ಯನನ್ನು ‘‘ಬನ್ನಿ ಬನ್ನಿ’’ ಎನ್ನುತ್ತಾ, ಹೋಟೇಲಿನ ಫ್ಯಾಮಿಲಿ ರೂಮಿಗೆ ಕರೆದೊಯ್ದು ಕುಳ್ಳಿರಿಸಿ, ಅದರ ಬಾಗಿಲಿನ ಪರದೆಯನ್ನು ಸರಿಪಡಿಸಿ ಹೋಟೇಲಿನ ಮಾಣಿ ಗೋವಿಂದಯ್ಯನನ್ನು ಕರೆದು ‘‘ಏನಿದೆ ಬಿಸಿಬಿಸಿ? ಪೋಡಿ-ಗೀಡಿ ಮಾಡಿದ್ದೀಯಾ?’’ ಎಂದು ಪ್ರಶ್ನಿಸಿದರು. ‘‘ನೀವು ನಿನ್ನೆ ಸೀಲಂಡಿ ಬಾಳೆಕಾಯಿ ತಂದಿದ್ದೀರಲ್ಲ, ಅದರ ಪೋಡಿ ಮಾಡಿದ್ದೇನೆ. ಈಗ ಮುಗಿಯುತ್ತಾ ಬಂತು!’’
‘‘ಎರಡು ಪ್ಲೇಟು ಪೋಡಿ, ಹಾಗೆಯೇ ಎರಡು ಖಡಕ್ ಚಹಾ’’ ಎಂದು ಗೋವಿಂದಯ್ಯನಿಗೆ ಹೇಳಿದ ಕುಪಣ್ಣಯ್ಯ ‘‘ಇಂಥ ಜಗಳ ನಾನು ಜೀವಮಾನದಲ್ಲಿ ನೋಡಿರಲಿಲ್ಲ ಸ್ವಾಮಿ’’ ಎಂದು ನಾಗಪ್ಪಯ್ಯನಿಗೆ ಹೇಳಿದರು.
‘‘ಹೌದು ಆ ಶೀನಪ್ಪಯ್ಯ ತಲೆಕೆಟ್ಟವನ ಹಾಗೆ ಇದ್ದಾನೆ. ಒಂದು ಮಾತಿನಲ್ಲಿ ಆಗುವ ಕೆಲಸ, ನೂರು ಮಾತು ಆಡಿದರೂ ಆಗುವುದಿಲ್ಲ ಎಂಬ ಹಾಗೆ ಮಾತನಾಡಿದ!’’
‘‘ಹೌದು ಸ್ವಲ್ಪ ತಾಳ್ಮೆ ವಹಿಸಿದ್ದರೆ ಇದು ಸುಲಭದಲ್ಲಿ ಇತ್ಯರ್ಥವಾಗುತ್ತಿತ್ತು. ಅವನು ಇಷ್ಟು ಕೆಟ್ಟವನು ಅಂತ ನನಗೆ ತಿಳಿದೇ ಇರಲಿಲ್ಲ. ಇಬ್ಬರೂ ಅಣ್ಣತಮ್ಮಂದಿರು ನನ್ನ ಸ್ನೇಹಿತರೇ. ನಮ್ಮ ನೆರೆಕರೆಯವರು. ಹಾಗೆಂದು ನನಗೆ ಅವರಲ್ಲಿ ವ್ಯವಹಾರ ಇಲ್ಲ. ‘ಏನು?’ ಅಂದರೆ ‘ಒಳ್ಳೇದು’ ಎನ್ನುವ ಮಾತುಕತೆ ಬಿಟ್ಟರೆ, ನಾನು ಅವರ ಮನೆಗೆ ಹೋದದ್ದೂ ಕಡಮೆಯೇ! ಆದರೂ ಅವರ ಜಗಳ-ಗಲಾಟೆ ಇತ್ಯಾದಿಯೆಲ್ಲ ಈ ಹೋಟೇಲಿನಲ್ಲಿ ಅವರಿವರಿಂದ ಕೇಳಿ ಗೊತ್ತು! ಇಲ್ಲಿ ಒಬ್ಬರಲ್ಲದಿದ್ದರೆ ಇನ್ನೊಬ್ಬರು ಒಂದೊಂದು ಪಕ್ಷ ಹಿಡಿದವರ ಹಾಗೆ ವಾದಿಸುವುದೂ ಉಂಟು. ಹಾಗಾಗಿ ನಾನು ಇದನ್ನು ತಮಾಷೆಗೆ ‘ತಾಳಮದ್ದಳೆ ಕೂಟ’ ಎನ್ನುವುದುಂಟು. ದಿನಾ ನಮ್ಮಲ್ಲಿ ರಾಮ-ರಾವಣರ ‘ಕಾಳಗ’ ನಡೆದು ಪುಕ್ಕಟೆ ಮನೋರಂಜನೆ ಸಿಗುವುದುಂಟು. ಆದರೂ ಒಮ್ಮೆಯೂ ಈ ಅಣ್ಣತಮ್ಮಂದಿರ ಯಾವುದೇ ವಿಚಾರವು ಹೋಟೆಲಲ್ಲಿ ಬ್ರೋಡ್ ಕಾಸ್ಟ್ ಆದದ್ದು ಇಲ್ಲ’’ ಎಂದರು.
‘‘ಹೌದು. ಈ ಇಬ್ಬರೂ ಊರವರ ನಡುವೆ ಜಗಳ ಕಾದದ್ದು ನನಗೆ ಗೊತ್ತಿಲ್ಲ. ಅವರ ಅಪ್ಪ ನನಗೆ ಚೆನ್ನಾಗಿ ಗೊತ್ತು. ಸಾಕಷ್ಟು ಭೂಮಿಗೀಮಿ ಮಾಡಿ ಇಬ್ಬರು ಮಕ್ಕಳಿಗೂ ‘ಹಿಸೆ’ ಮಾಡುವಾಗ (ಪಾಲು ಹಾಕುವಾಗ) ಇಬ್ಬರು ಸೊಸೆಯಂದಿರ ತಂದೆಯವರನ್ನು ಕರೆಸಿದ್ದಲ್ಲದೆ ನನ್ನನ್ನೂ ಕರೆದಿದ್ದರು. ‘ನಾನು ಯಾಕಯ್ಯ?’ ಅಂದರೆ, ‘ನೀವು ಬೇಕು’ ಎಂದಿದ್ದರು. ನಾನಾಗ ಪಂಚಾಯತ್ ಅಧ್ಯಕ್ಷನೂ ಆಗಿರಲಿಲ್ಲ. ಆದರೆ ನಮ್ಮೂರ ಸೊಸೈಟಿಯಲ್ಲಿ ಹದಿನೈದು ವರುಷ ಅಧ್ಯಕ್ಷನಾಗಿ ಇದ್ದೆನಲ್ಲ, ಆಗ ಅವರಿಗೆ ಕೃಷಿ ಸಾಲ ಕೊಟ್ಟದ್ದುಂಟು. ಸರಿಯಾದ ಸಮಯಕ್ಕೆ ಸಾಲ ಪಾವತಿಸುತ್ತಿದ್ದ ಸಾಚಾ ಮನುಷ್ಯ ಅವರು’’ ಎಂದರು ನಾಗಪ್ಪಯ್ಯ. ಆ ವಿಚಾರ ತಿಳಿದಿರದ ಕುಪ್ಪಣ್ಣಯ್ಯ ‘‘ಹೌದಾ? ಇವೊತ್ತು ನೀವಾಗಿಯೇ ಅಲ್ಲಿಗೆ ಹೋದದ್ದಾ, ಶೀನಪ್ಪಯ್ಯನೇ ನಿಮ್ಮನ್ನು ಕರೆಸಿದ್ದಾ?’’ ಎಂದು ಪ್ರಶ್ನಿಸಿದರು.
‘‘ಅವರಾಗಿಯೇ ನನ್ನನ್ನು ಕರೆಸಿದ್ದು. ನಾಲ್ಕು ದಿನಗಳ ಹಿಂದೆ ಪಂಚಾಯತಿಗೆ ಬಂದ ಶೀನಪ್ಪಯ್ಯ ‘ಸರ್, ನಮಗೆ ಈ ವರುಷ ನೀರಿಗೆ ತತ್ವಾರ ಆಗಿದೆ. ಬಾವಿಯಲ್ಲಿ ನೀರು ಆರುತ್ತಾ ಬಂದಿದೆ. ಕೊಡಪಾನ ಮುಳುಗುತ್ತದೋ ಇಲ್ಲವೋ ಎಂಬಷ್ಟು ಮಾತ್ರ ನೀರಿದೆ. ಇದೇ ರೀತಿ ಬಿಸಿಲು ಕಾದರೆ ವಾರದೊಳಗೆ ಬಾವಿ ಬತ್ತಿ ಹೋಗುತ್ತದೆ. ಹಾಗಾಗಿ ನಾವು ಪಂಚಾಯತಿಯಿಂದ ನೀರಿನ ಸಪ್ಲೆöÊ ಬಯಸಿದ್ದೇವೆ. ದಯವಿಟ್ಟು ಮಾಡಿಸಿಕೊಡಿ’ ಅಂತ ಹೇಳಿದ. ‘ಹೌದಾ?! ನೀರು ಅಷ್ಟೂ ಕಡಮೆ ಇದೆಯೇ?’ ಎಂದು ನಾನು ಪ್ರಶ್ನಿಸಿದಾಗ ಆತ ‘ನನ್ನ ದುರದೃಷ್ಟ ಸರ್ ನಮ್ಮ ಅಣ್ಣ ವೆಂಕಪ್ಪಯ್ಯನ ಬಾವಿಯಲ್ಲಿ ಇನ್ನೂ ಒಂದು ಮುಂಡು (ಒಂದಾಳು) ಮುಳುಗುವಷ್ಟು ನೀರಿದೆ. ನಮಗೆ ಇಬ್ಬರಿಗೂ ಬೋರ್ವೆಲ್ ಇದೆ. ಅವುಗಳಿಗೆ ನೀರಿನ ಬರಗಾಲವಿಲ್ಲ. ಆದರೆ ಅಣ್ಣನ ಬೋರ್ವೆಲ್ ಇರುವುದು ಅವನ ಮನೆಯ ಹಿಂದೆಯೇ. ನಮ್ಮದು ನಮ್ಮ ಮನೆಯಿಂದ ಫರ್ಲಾಂಗಿನಷ್ಟು ದೂರ. ಅಲ್ಲಿಂದ ನೀರು ತರುವುದು ಕಷ್ಟ. ಇದಕ್ಕಾಗಿ ನಾವು ಕುಡಿಯುವ ನೀರಿಗೆ ಪಂಚಾಯತಿಯ ನೀರನ್ನು ಆಶ್ರಯಿಸಬೇಕಾಗಿದೆ ಅಂತ ಬಂದೆ’ ಎಂದ. ನಾನು ಅವನಿಂದ ಅರ್ಜಿ ಕೊಡಿಸಿ ಪಿ.ಡಿ.ಓ. ಅವರಲ್ಲಿ ಮಂಜೂರು ಮಾಡಿ ‘ನಾಳೆಯೇ ಕೆಲಸ ಪ್ರಾರಂಭಿಸಿ’ ಎಂದಿದ್ದೆ. ಅವರು ಒಪ್ಪಿ ಪ್ಲಂಬಿಗ್ನ ವ್ಯವಸ್ಥೆ ಮಾಡಿಸಲು ಲಿಂಗಪ್ಪನನ್ನು ಕರೆದು ‘ನಾಳೆ ಇವರಿಗೆ ಪೈಪುಲೈನ್ ಹಾಕು’ ಎಂದು ನನ್ನ ಎದಿರೇ ಆದೇಶಿಸಿದ್ದರು. ಆಗ ಲಿಂಗಪ್ಪ ‘ಸರ್ ನಮ್ಮ ಪಂಚಾಯತ್ ಪೈಪ್ಲೈನ್ ಅವರ ಮನೆಯ ಹತ್ತಿರ ಹೋಗುವುದಿಲ್ಲ! ಅದು ಅವರ ಮನೆಯಿಂದ ಒಂದು ಫರ್ಲಾಂಗಿನಷ್ಟು ಹಿಂದೆ ಅಂದರೆ ಚಿರ್ತಿಲ್ಲ ಭೋಜಪ್ಪನ ಮನೆ ತನಕ ಮಾತ್ರ ಇರುವುದು. ಅಲ್ಲಿಂದ ಇವರ ಮನೆಗೆ ಪೈಪುಲೈನ್ ಹಾಕಬೇಕಾದರೆ, ಕನಿಷ್ಠ ಎರಡು ದಿನದ ಕೂಲಿ ಕೆಲಸ ಬೇಕು’ ಎಂದ. ಆಗ ನಾನು ಶೀನಪ್ಪಯ್ಯನ ಹತ್ತಿರ ‘ನೋಡಿ ಇವರೇ, ನಿಮ್ಮ ಅಣ್ಣ ವೆಂಕಪ್ಪಯ್ಯ ನಾಲ್ಕು ವರುಷಗಳ ಹಿಂದೆ ಪಂಚಾಯತಿನ ಅನುಮತಿ ಪಡೆದು ತಮ್ಮ ಮನೆ ಬಾಗಿಲಿನ ಚರಂಡಿಗೆ ಎರಡೆರಡು ಅಡಿಯ ಸಿಮೆಂಟ್ ಪೈಪು ಹಾಕಿಸಿ ಆ ಮೋರಿಯಿಂದ ತನ್ನ ಮನೆ ಗೇಟಿನ ತನಕ ಕಾಂಕ್ರೀಟ್ ಹಾಕಿಸಿದ್ದು ನಿಮಗೂ ಗೊತ್ತು. ಈಗ ಅಲ್ಲಿ ನಮ್ಮ ಪೈಪ್ಲೈನ್ ಆ ಮೋರಿ ಮತ್ತು ಅವರ ಮನೆಯ ಗೇಟಿನ ನಡುವೆಯೇ ಇರುವ ಕಾಂಕ್ರೀಟ್ ರಸ್ತೆಯಲ್ಲೇ ಹಾದು ಹೋಗಬೇಕಾಗುತ್ತದೆ. ಹಾಗಾಗಿ ಅದೇನು ಮಾಡುತ್ತಿಯೋ ಮಾಡು! ಎಂದೆ. ಆಗ ಲಿಂಗಪ್ಪ ‘ವೆಂಕಪ್ಪಯ್ಯನವರಲ್ಲಿ ಒಪ್ಪಿಗೆ ಕೇಳಬೇಕಲ್ಲ ಸರ್’ ಎಂದು ನನ್ನನ್ನು ಪ್ರಶ್ನಿಸಿದ. ‘ಹ್ಞೂ. ಆದರೆ ಇದು ಸ್ವಲ್ಪ ರಗಳೆ ಕೆಲಸ. ಜಾಗ್ರತೆಯಿಂದ ಇರು’ ಅಂತ ಎಚ್ಚರಿಸಿದೆ. ‘ಡ್ಯಾಮೇಜ್ ಆದ ಸ್ಥಳಕ್ಕೆ ಮತ್ತೆ ಈ ಶೀನಪ್ಪಯ್ಯ ಕಾಂಕ್ರೀಟ್ ಹಾಕಿ ಕೊಡುತ್ತಾರೆ ಎಂದೂ ಹೇಳು’ ಎಂದೂ ಹೇಳಿದ್ದೆ.’’
ಆಗ ಕುಪ್ಪಣ್ಣಯ್ಯ ‘‘ಹೌದು. ನನಗೆ ಅದು ಗೊತ್ತು. ನಾನು ದಿನಾ ಹೋಗುವ ರಸ್ತೆಯ ಬದಿ ತಾನೇ ಅದು?’’ ಎಂದವರೇ, ‘‘ವೆಂಕಪ್ಪಯ್ಯನಲ್ಲಿ ಲಿಂಗಪ್ಪ ಒಪ್ಪಿಗೆ ಕೇಳಿದನಾ ಹೇಗೆ?’’ ಎಂದು ಪ್ರಶ್ನಿಸಿದರು. ‘‘ಹೌದು, ಲಿಂಗಪ್ಪ ಹೋಗಿ ವೆಂಕಪ್ಪಯ್ಯನಲ್ಲಿ ಒಪ್ಪಿಗೆ ಕೇಳಿದನಂತೆ. ಆಗ ವೆಂಕಪ್ಪಯ್ಯ ‘ನೀರು ಬೇಕಾದದ್ದು ನಿನಗೋ ಆ ಶೀನಪ್ಪನಿಗೋ? ಶೀನಪ್ಪನಿಗೆ ನೀರು ಬೇಕಾದರೆ ಅವ ಬಂದು ಕೇಳಲಿ’ ಎಂದನಂತೆ. ಲಿಂಗಪ್ಪ ಅದನ್ನು ಶೀನಪ್ಪಯ್ಯನಿಗೆ ಹೇಳಿದಾಗ ಆತ ವೆಂಕಪ್ಪಯ್ಯನಲ್ಲಿ ಹೋಗದೆ ನಿನ್ನೆ ಪಂಚಾಯತಿಗೆ ಬಂದು ‘ನೀವು ಬರಬೇಕು’ ಎಂದು ನನ್ನನ್ನು ವಿನಂತಿಸಿದ. ನಾನು ಅಣ್ಣತಮ್ಮ ಇಬ್ಬರಿಗೂ ನಿನ್ನೆ ರಾತ್ರೆ ಫೋನು ಮಾಡಿ ‘ಬೆಳಗ್ಗೆ ಒಂಬತ್ತು ಗಂಟೆಗೆ ನಾನು ಬರುತ್ತೇನೆ’ ಎಂದೆ. ಆ ಪ್ರಕಾರ ಅಲ್ಲಿಗೆ ಹೋದಾಗ ಈ ಅಣ್ಣತಮ್ಮ ಇಬ್ಬರೂ ನನಗೂ ನಮ್ಮ ಪಿ.ಡಿ.ಓ. ಅವರಿಗೂ ಮಾತನಾಡಲು ಬಿಡದ ಹಾಗೆ, ಪರಸ್ಪರ ಬೈಗಳು ಆರಂಭಿಸಿಬಿಟ್ಟರು’’ ಎಂದರು ನಾಗಪ್ಪಯ್ಯ.
ಕುಪ್ಪಣ್ಣಯ್ಯ ನಾಗಪ್ಪಯ್ಯನವರ ಮಾತಿಗೆ ಏನೂ ಪ್ರತಿಕ್ರಿಯೆ ಕೊಡಲಿಲ್ಲ. ಸುಮ್ಮನೇ ನಾಗಪ್ಪಯ್ಯನವರ ಮುಖ ನೋಡುತ್ತಾ ಕುಳಿತರು. ಅದನ್ನು ಸಹಿಸದ ನಾಗಪ್ಪಯ್ಯ ‘ಈಗ ನಿಮ್ಮ ಅಭಿಪ್ರಾಯ ಏನು?’ ಎಂಬಂತೆ ಬಿಸಿಬಿಸಿ ಬಾಳೆಕಾಯಿ ಪೋಡಿಗೆ ಕೈ ಹಾಕಿ ಕುಪ್ಪಣ್ಣಯ್ಯನ ಮುಖ ನೋಡತೊಡಗಿದರು. ಕುಪ್ಪಣ್ಣಯ್ಯ ಒಂದು ಚಿಟಿಕೆ ನಸ್ಯ ಏರಿಸಿ ‘‘ಸ್ವಾಮಿ ಅಧ್ಯಕ್ಷರೇ, ಇದನ್ನು ನೀವು ಒಪ್ಪುವುದು ಕಷ್ಟ. ಆದರೂ ನಾನೊಂದು ಸಲಹೆ ಕೊಡಬಲ್ಲೆ’’ ಎಂದರು.
‘‘ಏನದು?’’
‘‘ವಿಶೇಷ ಏನೂ ಇಲ್ಲ ಸ್ವಾಮೀ, ವೆಂಕಪ್ಪಯ್ಯನ ಕಾಂಕ್ರೀಟ್ ದಾರಿಯ ತನಕ ಬರುವ ಪೈಪ್ಲೈನನ್ನು ಮೋರಿಯ ಅಡಿಯಲ್ಲಿ ಗೆಲನೈಸ್ ಪೈಪ್ನ ಮೂಲಕ ಆ ಬದಿಯಿಂದ ಈ ಬದಿಗೆ ತೆಗೆದುಕೊಂಡರೆ, ಕಾಂಕ್ರಿಟ್ ರಸ್ತೆಯನ್ನು ಕೀಳುವ ಪ್ರಶ್ನೆಯೇ ಇಲ್ಲವಲ್ಲ?’’ ಎಂದರು ಕುಪ್ಪಣ್ಣಯ್ಯ ಮುಗುಳುನಗುತ್ತ.
‘‘ಅರೆ! ಹೌದಲ್ಲ! ಒಳ್ಳೆ ಐಡಿಯಾ, ಆದರೆ ನಾನಾಗಿ ಇದನ್ನು ಅವರಿಗೆ ಹೇಳುವುದಿಲ್ಲ. ಏನೇನೆಲ್ಲ ಮಾಡುತ್ತಾರೋ ಅದೆಲ್ಲ ಮಾಡಿಕೊಳ್ಳಲಿ. ಇಬ್ಬರಲ್ಲೂ ದುಡ್ಡು ಉಂಟು ಅಹಂಕಾರವೂ ಉಂಟು.’’
‘‘ಹೌದು. ಅದು ನನಗೂ ಗೊತ್ತು. ಶೀನಪ್ಪಯ್ಯನ ಹೆಂಡತಿ ಮಹಾ ತಾಟಕಿತ್ತಿ. ಅವಳೇ ಈ ಜಗಳದ ತಾಯಿಬೇರು ಎಂದು ಕಾಣುತ್ತದೆ. ಎರಡು ವರುಷಗಳ ಹಿಂದಿನ ತನಕ ಈ ಅಣ್ಣತಮ್ಮಂದಿರು ತುಂಬಾ ಚೆನ್ನಾಗಿಯೇ ಇದ್ದರು. ಅದೊಂದು ದಿನ ಬೇಲಿ ಹಾರಿ ಬಂದ ವೆಂಕಪ್ಪಯ್ಯನ ದನ ಶೀನಪ್ಪಯ್ಯನ ಮನೆ ಹಿಂದಿನ ಬಸಳೆ ಚಪ್ಪರಕ್ಕೆ ಬಾಯಿ ಹಾಕಿ ಪೂರ್ತಿ ತಿಂದಾಗ ಶೀನಪ್ಪಯ್ಯನ ಹೆಂಡತಿ – ಹೆಸರು ಗೊತ್ತಿಲ್ಲ, ಭಾಗೀರಥಿ ಇರಬೇಕು – ಮೊಂಡು ಕತ್ತಿಯಿಂದ ದನದ ಕಾಲನ್ನೇ ಕಡಿದು ಬಿಟ್ಟಳಂತೆ. ದನ ನಡೆಯಲಾರದೆ ಕುಸಿದುಬಿತ್ತಂತೆ. ಅದನ್ನು ಮತ್ತೆ ವೆಂಕಪ್ಪಯ್ಯ ನಾಲ್ಕು ಜನರ ಸಹಾಯದಿಂದ ಮನೆಗೆ ತಂದು ಎರಡು ತಿಂಗಳು ಚಿಕಿತ್ಸೆ ಕೊಡಿಸಿದರಂತೆ. ಇಷ್ಟು ವಿಚಾರ ನಮ್ಮ ಹೋಟೇಲಿನಲ್ಲಿ ಚರ್ಚೆ ಆದದ್ದರಿಂದ ನನಗೆ ಗೊತ್ತು’’ ಎಂದರು.
‘‘ಓಹೋ! ನಿಜವಾಗಿಯೂ ಆಕೆ ತಾಟಕಿತ್ತಿಯೇ!’’ ಕುಪ್ಪಣ್ಣಯ್ಯನ ಮಾತನ್ನು ಸಮರ್ಥಿಸಿದಂತೆ ಆಡಿದ ನಾಗಪ್ಪಯ್ಯ ‘‘ನಾನು ಈಗ ಸುಮ್ಮನಾಗುವುದು ಎಂದುಕೊಂಡಿದ್ದೇನೆ. ಇಬ್ಬರೂ ನನ್ನ ಬಳಿ ಬಂದು ‘ಒಪ್ಪಿಗೆ’ ಎಂದು ಹೇಳಿದಮೇಲೆ ಪೈಪ್ಲೈನಿನ ಕೆಲಸ ಮುಂದುವರಿಸುತ್ತೇನೆ’’ ಎಂದು ಎದ್ದುನಿಂತು ತನ್ನ ಕಿಸೆಗೆ ಕೈಹಾಕಿ ಹಣ ಕೊಡಲು ಮುಂದಾಗುತ್ತಿದ್ದಂತೆ, ನಯವಾಗಿ ಅವರ ಕೈಯನ್ನು ತಡೆದ ಕುಪ್ಪಣ್ಣಯ್ಯ ‘‘ಬೇಡ ಅಧ್ಯಕ್ಷರೇ’’ ಎಂದು ನಮಸ್ಕರಿಸಿ ನಾಗಪ್ಪಯ್ಯನನ್ನು ಕಾರಿನ ತನಕ ಹೋಗಿ ಬೀಳ್ಕೊಟ್ಟು ಬಂದರು.
ಇತ್ತ ಅಣ್ಣತಮ್ಮಂದಿರ ಜಗಳ ನೋಡಿ ಸುಸ್ತಾದ ಲಿಂಗಪ್ಪ ಕೆಲಸ ನಿಲ್ಲಿಸಿ ಏನೂ ಆಡದೆ, ಹಾರೆ ಪಿಕ್ಕಾಸಿಯನ್ನು ಹೆಗಲಿಗೇರಿಸಿ ವೆಂಕಪ್ಪಯ್ಯನ ಮೋರಿಯ ಬದಿಯಿಂದ ಹೊರಟು ಬಂದ.
ವೆಂಕಪ್ಪಯ್ಯ ಮನೆಗೆ ಬಂದವನೇ, ಹೆಂಡತಿಯನ್ನು ಕರೆದು ‘‘ಲಕ್ಷ್ಮಿ ಅಷ್ಟು ಗಲಾಟೆ ಆದರೂ ನೀನು ಬರಲೇ ಇಲ್ಲವಲ್ಲ ಮೋರಿಯ ಬಳಿಗೆ? ಸರೀ ನಾಲ್ಕು ಮಾತು ಆಡಿದೆ ಆ ಮಂಗನಿಗೆ! ನೀರಂತೆ ನೀರು! ಅವನಿಗೆ ನಾನು ನೀರು ಕೊಡುವುದಲ್ಲ ಶಂಖ ಪಾಷಾಣ ಕೊಡುತ್ತೇನೆ’’ ಎಂದು ಚಾವಡಿಯಲ್ಲಿ ಗರ್ಜಿಸುತ್ತಾ ನಿಧಾನವಾಗಿ ನಡೆದು ಕುರ್ಚಿಯಲ್ಲಿ ಕಾಲ ಮೇಲೆ ಕಾಲು ಹಾಕಿ ಕುಳಿತ. ಮುಖದ ಬೆವರನ್ನು ಸೆರಗಿನಿಂದ ಒರೆಸುತ್ತಾ ಅಡುಗೆಕೋಣೆಯಿಂದ ಹೊರಬಂದ ಆಕೆ ಅದನ್ನು ಸೊಂಟಕ್ಕೆ ಬಿಗಿದು ‘‘ನೀವು ಲೋಕವನ್ನು ಜಯಿಸಿದ ಹಾಗೆ ಯಾಕೆ ಮಾತನಾಡುತ್ತೀರಿ? ನೀವು ನಿಮ್ಮ ತಮ್ಮನ ಸ್ಥಾನದಲ್ಲಿ ನಿಂತು ಯೋಚಿಸಿ ನೋಡಿ. ಅವರಿಗೆ ಎಷ್ಟು ಕಷ್ಟ ಆಗಿರಬಹುದು ನೀರಿಲ್ಲದೆ?’ ಎಂದವಳೇ ‘‘ನೀರಿಲ್ಲದೆ ಬದುಕುವುದು ಹೇಗೆ ಸಾಧ್ಯ? ನೀವು ಇಷ್ಟು ಕ್ರೂರವಾಗಿ ನಡೆದುಕೊಳ್ಳಬಾರದಿತ್ತು. ನಾನು ನಿನ್ನೆ ರಾತ್ರೆಯೇ ಲಿಂಗಪ್ಪ ಬಂದ ವಿಚಾರವನ್ನು ನಿಮ್ಮ ಮುಂದೆ ಇಟ್ಟಾಗ ನೀವು ‘ಜೀವ ಹೋದರೂ ಕಾಂಕ್ರೀಟ್ ರಸ್ತೆಯನ್ನು ಅಗೆಯಲು ಬಿಡಲಾರೆ’ ಎನ್ನುವಾಗ ‘ಬೇಡ’ ಅಂದಿದ್ದೆ ನಾನು. ಆದರೆ ನೀವು ನನ್ನ ಮಾತು ಕೇಳಲಿಲ್ಲ. ಬೈದು ಹಂಗಿಸಿದಿರಿ. ಒಂದು ಮಾತು ಹೇಳುತ್ತೇನೆ ಕೇಳಿ. ನೀವು ಅವರಿಗೆ ನೀರು ಕೊಂಡುಹೋಗಲು ಅವಕಾಶ ಕೊಡದಿದ್ದರೆ ನಾನು ನಾಳೆಯಿಂದ ಇಲ್ಲಿ ನೀರು ಮುಟ್ಟುವುದಿಲ್ಲ’’ ಎಂದುಬಿಟ್ಟಳು. ವೆಂಕಪ್ಪಯ್ಯ ಬೆಚ್ಚಿಬಿದ್ದ. ‘‘ಅಯ್ಯೋ ದೇವರೇ ಇದೆಂಥದ್ದು ಮಾರಾಯ್ತಿ ನಿನ್ನ ಮಾತು? ನಿನ್ನ ನಿರ್ಧಾರ ನನ್ನನ್ನು ಜೀವಂತ ಹೆಣದ ಥರ ಮಾಡುವುದೇ ನಿನಗಿಷ್ಟವಾದರೆ ಹಾಗೇ ಮಾಡು! ನಾನು ಮೀಸೆ ಬೋಳಿಸಬೇಕಾ ಹೇಳು?’’ ಎಂದು ತಣ್ಣಗಿನ ಸ್ವರದಲ್ಲಿ ಪ್ರತಿಕ್ರಿಯಿಸಿದ.
‘‘ಬಿಸಿ ನೀರಾದರೂ ಅದನ್ನು ತಣ್ಣಗೆ ಮಾಡಿ ಕುಡಿಯಬೇಕು ಎನ್ನುತ್ತಿದ್ದರು ನನ್ನ ಅಪ್ಪ. ನಿಮ್ಮ ಹಾಗೇ ನನಗೂ ಸಿಟ್ಟು ಬರುವುದುಂಟು. ಆಗ ನನಗೆ ಅಪ್ಪನ ನೆನಪಾಗುತ್ತದೆ. ನಾನು ನಿಮ್ಮ ಹಾಗೆ ಹುಳಿಮರ ಅಲ್ಲ. ಬಾಳೆ ಅಂದರೆ ಬಾಳೆಯೇ. ಬಾಳೆಗೊನೆ ಹಾಕಿ ಮಾಗಿದ ಕೂಡಲೇ ತನ್ನಿಂತಾನೇ ಬಾಗುತ್ತದೆ. ನಿಮಗೆ ಬಾಗಿಯೇ ಗೊತ್ತಿಲ್ಲ’’ ಎಂದು ಹೇಳುತ್ತಾ ನಾಟಕೀಯವಾಗಿ ಕೈಮುಗಿದು ‘‘ದಮ್ಮಯ್ಯ. ನಿಮ್ಮ ಹಠ ಬಿಟ್ಟು ಬಿಡಿ. ಆ ಶೀನಪ್ಪಯ್ಯ ನಿಮ್ಮ ಖಾಸಾ ತಮ್ಮ. ಅವನ ಹೆಂಡತಿ ನನ್ನ ತಂಗಿಯಲ್ಲದಿರಬಹುದು. ಆದರೆ ನನ್ನ ಹಾಗೆ ಹೆಣ್ಣುಮಗಳು. ಹೆಣ್ಣುಮಕ್ಕಳಿಗೆ ಎಲ್ಲಾ ಹೆಣ್ಣುಮಕ್ಕಳೂ ಅಕ್ಕ-ತಂಗಿಯರೇ ಆಗಿರುತ್ತಾರೆ ಅಥವಾ ಅಮ್ಮ ದೊಡ್ಡಮ್ಮನೇ. ಹಠ ಬೇಡ, ನೀರು ಕೊಡಿ ಎಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ’’ ಎಂದಳು.
ವೆಂಕಪ್ಪಯ್ಯನಲ್ಲಿ ಉತ್ತರ ಇರಲಿಲ್ಲ. ಆತ ತಗ್ಗಿದ ಸ್ವರದಲ್ಲಿ ‘‘ನಿನ್ನ ಒಳಗೆ ಕರಗುವ ಹೃದಯ ಇದೆ ಎಂದು ಗೊತ್ತಿರಲಿಲ್ಲ ಮಾರಾಯ್ತಿ’’ ಎನ್ನುತ್ತಾ ಎದ್ದು ನಿಂತು ‘‘ಸರಿ. ನೀನು ಹೇಳಿದ ಹಾಗೆಯೇ ಆಗಲಿ. ಆದರೆ ನಾನು ಈ ಬಾಯಿಯಿಂದ ಹೇಗೆ ಒಪ್ಪಿಗೆ ಕೊಡಲಿ? ಅದಕ್ಕೆ ನೀನು ಬೇಕಾದರೆ ನಿನ್ನ ತಂಗಿಗೆ ಪೋನು ಮಾಡಿ ‘ನೀರಿನ ಪೈಪ್ಲೈನು ಹಾಕಲಿಕ್ಕೆ ನಮ್ಮ ಆಕ್ಷೇಪ ಇಲ್ಲ’ ಅಂತ ಹೇಳಿ ಬಿಡು’’ ಎಂದ.
‘‘ನಾನು ಪೋನು ಮಾಡಬಹುದು. ಆದರೆ ಆಕೆ ಖಂಡಿತ ಫೋನು ಎತ್ತುವುದಿಲ್ಲ. ಅವಳ ಆ ಮುಖವೂ ನನಗೆ ಗೊತ್ತು. ನಿಮ್ಮ ಸ್ನೇಹಿತ ಕುಪ್ಪಣ್ಣಯ್ಯ ಇದ್ದಾರಲ್ಲ ದುರ್ಗಾಭವನದಲ್ಲಿ. ಅಲ್ಲಿಗೆ ಹೋಗಿ ಕುಪ್ಪಣ್ಣಯ್ಯನಿಂದಲೇ ಫೋನು ಮಾಡಿಸಿ. ನಿಮ್ಮ ತಮ್ಮನಿಗೆ ಅವರೇ ಹೇಳಲಿ.’’
ವೆಂಕಪ್ಪಯ್ಯನಿಗೆ ಹೌದೆನಿಸಿತು. ಆತ ‘ಈಗ ಈ ಬಿಸಿಲಿಗೆ ಯಾರು ಹೋಗುವುದು?’ ಎಂದುಕೊಂಡು ಅಲ್ಲೇ ಸೋಫಾದಲ್ಲಿ ಬಿದ್ದುಕೊಂಡ.
ಸಂಜೆ ಆರರ ಸುಮಾರಿಗೆ ಕುಪ್ಪಣ್ಣಯ್ಯನ ಹೊಟೇಲಿಗೆ ಬಂದ ವೆಂಕಪ್ಪಯ್ಯ ‘‘ಕುಪ್ಪಣ್ಣಯ್ಯನೋರೆ’’ ಎಂದು ಹೇಳಿದಾಗ ‘‘ಅರೇ! ನೀವು ಇಲ್ಲಿ?’’ ಎಂದು ಆಶ್ಚರ್ಯ ಸೂಚಿಸಿದ ಕುಪ್ಪಣ್ಣಯ್ಯ ‘‘ಬನ್ನಿ, ಬನ್ನಿ’’ ಎನ್ನುತ್ತಾ ಆ ಮೇಲೆ ‘‘ಏನು ವಿಶೇಷ?’’ ಎಂದು ಮೆತ್ತಗೆ ಪ್ರಶ್ನಿಸಿದರು.
ವೆಂಕಪ್ಪಯ್ಯ ಗಿರಾಕಿಗಳು ಕುಳಿತುಕೊಳ್ಳುವ ಒಂದು ಕುರ್ಚಿಯನ್ನು ಎತ್ತಿ ಕುಪ್ಪಣ್ಣಯ್ಯ ಕುಳಿತಿದ್ದ ಗಲ್ಲಾಪೆಟ್ಟಿಗೆಯ ಹತ್ತಿರಕ್ಕೆ ತಂದು ‘‘ನೀವೂ ನಾಗಪ್ಪಯ್ಯನವರೂ ಒಟ್ಟಿಗೇ ಬಂದಿರಿ ತಾನೇ? ಏನು ಹೇಳಿದರು ಅವರು ನನ್ನ ಬಗ್ಗೆ?’’ ಎಂದು ಪ್ರಶ್ನಿಸಿದ.
ಕುಪ್ಪಣ್ಣಯ್ಯ ‘‘ಅವರೇನೂ ಹೇಳಲಿಲ್ಲ. ಆದರೆ ನನಗೂ ಅವರಿಗೂ ನೀವು ಅಣ್ಣತಮ್ಮಂದಿರು ಎರಡು ವರುಷದ ಹಿಂದೆ ಆದ ನಿಮ್ಮ ಪತ್ನಿಯರ ಜಗಳ ಮುಂದಿಟ್ಟುಕೊಂಡು ಈಗ ಬದ್ಧವೈರಿಗಳಾಗಿ ಇರುವುದು ಅಷ್ಟು ಹಿತವಾಗಲಿಲ್ಲ. ಆದದೆಲ್ಲ ಆಗಿ ಹೋಗಿದೆ ಇನ್ನು ಅದನ್ನು ಕೆದಕಬಾರದು ನೋಡಿ. ನಿಮ್ಮ ಹೆಂಡತಿ ಈ ವಿಷಯದಲ್ಲಿ ಏನು ಹೇಳುತ್ತಾರೋ ನನಗೆ ಗೊತ್ತಿಲ್ಲ. ಮೋರಿಯ ಬದಿಯಲ್ಲಿ ನೀವು ಅಣ್ಣತಮ್ಮಂದಿರು ಜಗಳವಾಡುವುದನ್ನು ನೋಡಿದರೂ ಆಕೆ ನಿಮ್ಮನ್ನು ಸಮರ್ಥಿಸಲು ಬರಲಿಲ್ಲ. ಅದು ಆಶ್ಚರ್ಯ. ಆಕೆಯ ಆ ನಿಲವು ‘ಸರಿ’ ಅಂದುಕೊಂಡೆ. ಆದರೆ ನಿಮ್ಮ ತಮ್ಮನ ಹೆಂಡತಿಯೂ ಅಲ್ಲಿಗೆ ಬರಲಿಲ್ಲ ಎನ್ನುವುದೂ ಮುಖ್ಯವೇ!’’ ಎಂದರು.
ವೆಂಕಪ್ಪಯ್ಯ ಒಂದು ಕ್ಷಣ ಮಾತನಾಡಲಿಲ್ಲ. ಆ ಮೇಲೆ ‘‘ನನ್ನ ಹೆಂಡತಿ ‘ಮಧ್ಯಾಹ್ನ ನನ್ನಲ್ಲಿ ನೀವು ನೀರಿನ ಪೈಪ್ಲೈನ್ ಕೊಂಡು ಹೋಗಲು ಒಪ್ಪಿಗೆ ನೀಡದಿರುವುದು ತಪ್ಪು’ ಎಂದಳು. ನನಗೆ ಕೋಪ ಬಂತು. ನಾನು ರೇಗಿ ‘ಹಿಂದಿನದ್ದು ಮರೆತೆಯಾ?’ ಎಂದು ಜರಿದೆ. ಆಗ ಆಕೆ ‘ಯಾಕೆ ಸುಮ್ಮನೆ ಜಗಳ? ನಿಮ್ಮ ತಮ್ಮ ನೀರಿಲ್ಲದೆ ಸಾಯುವುದು ನಿಮಗೆ ಇಷ್ಟವಾ?’ ಎಂದು ಸಮಾಧಾನದ ಮಾತು ಹೇಳಿ ‘ಒಪ್ಪಿಗೆ ಕೊಡಿ’ ಎಂದಳು. ಯೋಚಿಸಿದಾಗ ಹೌದೆನಿಸಿತು. ಈಗ ನಾನು ಒಪ್ಪಿಗೆ ನೀಡುವವನಿದ್ದೇನೆ. ಆದರೆ ನಮ್ಮಿಬ್ಬರ ಪೋನನ್ನು ಅವರು ಗಂಡಹೆಂಡತಿ ಇಬ್ಬರೂ ಖಂಡಿತ ಎತ್ತಿಕೊಂಡರೂ ಮಾತನಾಡುವುದಿಲ್ಲ. ಅದಕ್ಕೆ ನಿಮ್ಮಿಂದಲೇ ಅವರಿಗೆ ಒಂದು ಮಾತು ಹೇಳಿಸೋಣ ಎಂದು ಬಂದೆ’’ ಎಂದ.
ಕುಪ್ಪಣ್ಣಯ್ಯನ ಮುಖ ಅರಳಿತು. ‘‘ವಾಹ್! ಒಳ್ಳೆಯ ನಿರ್ಧಾರ. ಬನ್ನಿ ಚಹಾ ಸೇವಿಸಿ!’’ ಎಂದು ಎರಡು ಚಹಾಕ್ಕೆ ಆರ್ಡರ್ ಮಾಡಿ, ಆ ಮೇಲೆ ‘‘ಹಾವು ಸಾಯಲೂ ಬಾರದೂ ಕೋಲು ಮುರಿಯಬಾರದು ಎಂಬಂತೆ ನಾನು ಒಂದು ಸಲಹೆ ನಿಮಗೆ ನೀಡುತ್ತೇನೆ, ಪಂಚಾಯತಿಯವರು ನಿಮ್ಮ ಕಾಂಕ್ರೀಟ್ ದಾರಿಯನ್ನು ಅಗೆಯದೆ ಆ ಮೋರಿಯ ಒಳಗೆ ಗೆಲೊನೈಸ್ ಪೈಪ್ ಹಾಕಿ ಪೈಪ್ಲೈನ್ ಕೊಂಡು ಹೋಗಲಿ. ಅದರಿಂದ ನಿಮ್ಮ ಮನೆಯ ಮುಂದಿನ ಕಾಂಕ್ರೀಟ್ ದಾರಿ ಅಗೆಯುವುದು ಉಳಿಯಿತು. ನಿಮ್ಮಿಬ್ಬರ ಹಠವೂ ಗೆದ್ದ ಹಾಗಾಯಿತು’’ ಎಂದರು.
‘‘ಹೌದಲ್ಲ! ಅದ್ಭುತ ಐಡಿಯಾ, ವೆರಿಗುಡ್ ವೆರಿಗುಡ್!’’ ಎಂದು ವೆಂಕಪ್ಪಯ್ಯ ಎದ್ದುನಿಂತು ಕುಪ್ಪಣ್ಣಯ್ಯನ ಕೈ ಕುಲುಕಿದರು.
‘‘ಆಗಲಿ ಆಗಲಿ’’ ಎಂದರು ಕುಪ್ಪಣ್ಣಯ್ಯ.
ತುಸು ತಡೆದು ಕುಪ್ಪಣ್ಣಯ್ಯ ಪೋನಿನಲ್ಲಿ ಶೀನಪ್ಪಯ್ಯನನ್ನು ಸಂಪರ್ಕಿಸಿದರು. ಫೋನನ್ನು ಎತ್ತಿಕೊಂಡ ಶೀನಪ್ಪಯ್ಯ ಸಹಜವಾಗಿ ‘ಹಲೋ’ ಎನ್ನದೆ ಅಸಮಾಧಾನದಿಂದಲೇ ಎಂಬಂತೆ ‘‘ಯಾರು?’’ ಎಂದು ಪ್ರಶ್ನಿಸಿದ ದೊಡ್ಡ ದೊಂಡೆಯಲ್ಲಿ.
‘‘ನಾನು ಇವರೇ ಕುಪ್ಪಣ್ಣಯ್ಯ, ಒಂದು ನಿಮಿಷ ಮಾತನಾಡಬಹುದಾ? ಹೇಗೆ?’’
‘‘ಓ… ಧಾರಾಳ! ನಾನು ನನ್ನ ಅಣ್ಣ ವೆಂಕಪ್ಪಯ್ಯ ಪೋನು ಎತ್ತಿಕೊಂಡು ಈ ದಿನ ನನಗೆ ಉಗಿಯಲೂಬಹುದು ಎಂದು ಲೆಕ್ಕ ಹಾಕಿದ್ದೆ. ಅವನ ಮರ್ಜಿ ಗೊತ್ತಲ್ಲ ನಿಮಗೆ? ಬಗ್ಗಿದವರಿಗೆ ಒಂದು ಗುದ್ದು ಹೆಚ್ಚು ಗುದ್ದುವಾತ ಆತ. ನೀವಾದರೆ ಪರವಾಗಿಲ್ಲ. ಹೇಳಿ, ಹೇಳಿ.’’
‘‘ನಾನು ಆಗ ನಿಮ್ಮ ಅಣ್ಣತಮ್ಮಂದಿರ ಜಗಳಕ್ಕೆ ಸಾಕ್ಷಿಯಾಗಿ ಇದ್ದಾಗ ನನಗೆ ‘ಅಯ್ಯೋ’ ಅನಿಸಿತ್ತು. ನನಗೆ ಆಗ ಅನಿಸಿದ್ದು ಅಂದರೆ ಒಂದು ಸಣ್ಣ ಮುಳ್ಳನ್ನು ತೆಗೆಯಲು ನೀವು ಕೊಡಲಿಯ ಮೊರೆ ಹೋಗಿದ್ದೀರಿ ಎಂದು! ಹೋಗಲಿ ಬಿಡಿ, ಈಗ ನಿಮ್ಮ ಅಣ್ಣನೇ ಇಲ್ಲಿಗೇ ಬಂದು ‘ನಾನು ನನ್ನ ತಮ್ಮನಿಗೆ ಪೈಪ್ಲೈನ್ ಹಾಕಲು ಒಪ್ಪಿಗೆ ಕೋಡುತ್ತಿದ್ದೇನೆ’ ಎನ್ನುತ್ತಿದ್ದಾರೆ. ಆದರೆ ಅದನ್ನು ನಿಮ್ಮಲ್ಲಿ ಹೇಳಲು ಅವರಿಗೆ ಮುಜಗರವೋ ಆತಂಕವೋ ಏನೋ ಒಂದಿದೆ. ಹಾಗಾಗಿ ಇಲ್ಲಿಗೆ ಬಂದು, ಇಲ್ಲೇ ಇದ್ದು, ನಿಮಗೆ ಈ ಶುಭ ಸುದ್ದಿ ಹೇಳಲು ನನಗೆ ಅವಕಾಶ ಕೊಟ್ಟಿದ್ದಾರೆ’’
ಶೀನಪ್ಪಯ್ಯ ‘‘ಹೌದಾ?’’ ಎನ್ನುವಾಗ ಅವರು ತುಂಬಾ ಭಾವೋದ್ರೇಕಕ್ಕೊಳಗಾದ ಹಾಗೆ ಕುಪ್ಪಣ್ಣಯ್ಯನಿಗೆ ಅನಿಸಿತು. ಅವರು ‘‘ಹೌದಪ್ಪಾ ಹೌದು’’ ಎಂದರು.
‘‘ಶೀನಪ್ಪಯ್ಯ ನನ್ನ ಅಣ್ಣ. ಯಾವತ್ತೂ ನನಗೆ ಅಣ್ಣನೇ. ನಾನು ನನ್ನ ಹೆಂಡತಿಯ ಮಾತು ಕೇಳಿ ಕೆಟ್ಟೆ’’ ಎಂದು ಹೇಳುತ್ತಾ ಗದ್ಗದಿತನಾಗಿ ಮಾತು ಮುಂದುವರಿಸದೆ ನಿಂತ.
‘‘ಸಮಾಧಾನ ಮಾಡಿಕೊಳ್ಳಿ ಇವರೇ. ಇಂದು ಒಳ್ಳೆಯ ದಿನ, ಒಳ್ಳೆಯ ಗಳಿಗೆ ಅಂದುಕೊಳ್ಳಿ! ಈಗ ನೀವು ಮತ್ತೆ ಅಣ್ಣತಮ್ಮಂದಿರು ಅಣ್ಣತಮ್ಮಂದಿರೇ ಆದಿರಲ್ಲ, ಅದು ಸಂತೋಷ’’ ಎಂದ ಕುಪ್ಪಣ್ಣಯ್ಯನವರು ‘‘ಇನ್ನೂ ಒಂದು ವಿಚಾರ ಉಂಟು. ನಿಮ್ಮ ಮನೆಗೆ ಬರುವ ನೀರಿನ ಪೈಪುಲೈನ್ ಅವರ ಮೋರಿಯ ಕೆಳಗಿನಿಂದ ಹಾದು ಬರುವ ಹಾಗೆ ನಾನೇ ಸಲಹೆ ಕೊಟ್ಟೆ. ಒಪ್ಪಿಗೆ ಇದೆ ತಾನೇ?’’ ಎಂದು ಪ್ರಶ್ನಿಸಿದರು.
‘‘ಖಂಡಿತ. ಒಟ್ಟಿನಲ್ಲಿ ನಮಗೆ ನೀರು ಬಂದರೆ ಆಯಿತು. ಅದು ಮೋರಿಯ ಒಳಗೆ ಬರಲಿ, ಕೆಳಗೆ ಬರಲಿ ಅಥವಾ ಆಕಾಶದಿಂದ ಬರಲಿ ಯಾವುದಾದರೂ ಸರಿಯೇ. ಅಂತೂ ಅಣ್ಣ ತಮ್ಮನನ್ನು ಕ್ಷಮಿಸಿದ್ದಲ್ಲದೆ ನಮ್ಮ ಜೀವವನ್ನೂ ಉಳಿಸಿದ’’ ಎಂದ.
‘‘ಹೌದು. ನಿಮ್ಮ ಅಣ್ಣ ಇಲ್ಲೇ ಇದ್ದಾರೆ ಮಾತನಾಡುತ್ತೀರಾ ಹೇಗೆ?’’ ಎಂದು ಪ್ರಶ್ನಿಸಿದರು. ಶೀನಪ್ಪಯ್ಯ ‘‘ಕೊಡಿ, ಕೊಡಿ’’ ಎಂದವನೇ ವೆಂಕಪ್ಪಯ್ಯ ‘‘ಹಲೋ ಅಣ್ಣ’’ ಎನ್ನುತ್ತಲೇ ಗದ್ಗದಿತನಾಗಿ ‘‘ಕ್ಷಮಿಸಿ ಬಿಡು ತಪ್ಪಾಯ್ತು’’ ಎಂದ. ಆಮೇಲೆ ಕ್ಷಣ ತಡೆದು ‘‘ನಾಳೆ ಬೆಳಿಗ್ಗೆ ಚಹಾ ಕುಡಿಯಲು ನಿನ್ನ ಮನೆಗೆ ನಾವಿಬ್ಬರು ಬರುತ್ತೇವೆ. ಒಪ್ಪಿಗೆ ಕೊಡುತ್ತೀ ತಾನೇ?’’ ಎಂದ. ವೆಂಕಪ್ಪಯ್ಯನೂ ಗದ್ಗದಿತನಾಗಿ ‘‘ಒಪ್ಪಿಗೆ’’ ಎಂದ.
ವೆಂಕಪ್ಪಯ್ಯನ ಮುಖ ಅರಳಿತು. ಆತ ನಿಧಾನವಾಗಿ ಮೇಲೆದ್ದು ನಿಂತು ದೇವರ ಇದಿರು ನಿಂತು ಕೈ ಮುಗಿಯುವ ಹಾಗೆ ಕುಪ್ಪಣ್ಣಯ್ಯನಿಗೆ ಕೈಮುಗಿದು ‘‘ಬರುತ್ತೇನೆ’’ ಎಂದ.
ಎರಡು ದಿನಗಳ ಮೇಲೆ ಶೀನಪ್ಪಯ್ಯನ ಮನೆ ಬಾಗಿಲಿಗೆ ಪಂಚಾಯತಿನ ನೀರು ಬಂತು!