ಇನ್ನೇನು ಕ್ರಿಸ್ಮಸ್ ರಜೆ ಹತ್ತಿರ ಬಂತು. ಆರವ್ ಮನೆಯಲ್ಲೇ ಇರುತ್ತಾನೆ. ಅವನ ಜೊತೆ ಚೆಸ್ ಆಡಬೇಕು. ಅವನಿಗೆ ಚೆಸ್ ಆಡಲು ಬರುವುದಿಲ್ಲ. ತಾನು ಕಾಲೇಜು ದಿನಗಳಿಂದಲೂ ಚೆಸ್ ಚಾಂಪಿಯನ್. ಮೊಮ್ಮಗನಿಗೆ ಚೆಸ್ ಕಲಿಸಿಕೊಡಬೇಕು ಎಂದು ಆಸೆಯಿಂದ ಆ ದಿನ ಸಂಜೆ ವಾಕಿಂಗ್ನಿಂದ ಮರಳಿ ಬರುವಾಗ ಚೆಸ್ ಬೋರ್ಡ್ ಮನೆಗೆ ತಂದರು ನರಹರಿರಾಯರು. ಅವತ್ತು ಮಗ–ಸೊಸೆ ಶಾಪಿಂಗ್ ಮುಗಿಸಿ ಲೇಟಾಗಿ ಮನೆಗೆ ಬಂದರು.
ಮಗ ರಂಜನ್ “ಅಪ್ಪಾ, ಆರವ್ಗೆ ಕ್ರಿಸ್ಮಸ್ ರಜೆ ಇದೆ. ಹೀಗಾಗಿ ನಾವು ಒಂದು ಹತ್ತು ದಿನ ಗುಜರಾತ್ಗೆ ಫ್ಯಾಮಿಲಿ ಟೂರ್ ಹೋಗ್ತಾ ಇದೀವಿ. ಮನೆ ಕಡೆ ಜೋಪಾನ” ಎಂದ.
‘ಹ್ಹ, ಫ್ಯಾಮಿಲಿ ಟೂರ್! ಹಾಗಾದರೆ ತಾನಿವನ ಕುಟುಂಬ ಸದಸ್ಯನಲ್ಲವೆ? ಹೇಮಾ ಬದುಕಿರುವಾಗಲೂ ಇವರಿಬ್ಬರೇ ಹೋಗುತ್ತಿದ್ದರು. ಆದರೆ ಈಗ ತಾನು ಒಂಟಿ. ತನ್ನನ್ನು ಕರೆದುಕೊಂಡು ಹೋದರೆ ಇವರ ಖುಷಿಗೆ ಬೆಂಕಿ ಬೀಳುತ್ತದೆಯೆ?’
ಕೀರ್ತಿ, ಸ್ವಲ್ಪ ನನಗೆ ಇನ್ಸುಲಿನ್ ಇಂಜೆಕ್ಷನ್ ಕೊಡ್ತೀಯಾ? ನನಗೆ ನಾನಾಗೇ ತೊಗೋಳೋಕೆ ಕಷ್ಟ ಆಗುತ್ತೆ. ಒಂದು ತಿಂಗಳಿನಿಂದ ಇಂಜೆಕ್ಷನ್ ತೊಗೋಳೋಕೆ ಒದ್ದಾಡುತ್ತಾ ಇದೀನಿ. ಅಭ್ಯಾಸ ಇಲ್ಲ ನೋಡು. ನಿಮ್ಮತ್ತೆ ಇರೋವಾಗ ಅವಳೇ ಕೊಡೋಳು…” ನರಹರಿರಾಯರು ಅಲ್ಲೇ ಸೋಫಾದ ಮೇಲೆ ಕುಳಿತು ಮೊಬೈಲ್ನಲ್ಲಿ ಯಾವುದೋ ವಿಡಿಯೋ ನೋಡುತ್ತ ಕಾಲಕಳೆಯುತ್ತಿದ್ದ ಸೊಸೆ ಕೀರ್ತಿಯನ್ನು ಕರೆದರು.
ಒಳ್ಳೆಯ ತಮಾಷೆಯ ರೀಲ್ಸ್ ನೋಡುತ್ತ ಅದರಲ್ಲೇ ಮುಳುಗಿಹೋಗಿದ್ದ ಕೀರ್ತಿಗೆ ಮಾವನ ಕರೆಯಿಂದ ರಸಭಂಗವಾದಂತಾಗಿ ಸಿಟ್ಟುಬಂತು.
“ಮಾವ, ಅದನ್ನೆಲ್ಲ ನೀವಾಗಿಯೆ ತೊಗೊಳ್ಳೋಕೆ ಅಭ್ಯಾಸ ಮಾಡಿಕೋಬೇಕು. ಅತ್ತೆಗೆ ಮಾಡೋಕೆ ಬೇರೆ ಕೆಲಸ ಇರಲಿಲ್ಲ. ಹೀಗಾಗಿ ಅವರು ನಿಮ್ಮ ಇಂಜೆಕ್ಷನ್, ಪಥ್ಯದ ಊಟ ಅಂತೆಲ್ಲ ಮಾಡ್ತಾ ಇದ್ದರು. ನನ್ನಿಂದ ಅದೆಲ್ಲ ಆಗೋದಿಲ್ಲ. ನೀವು ಅಂತಹ ನಿರೀಕ್ಷೆ ಇಟ್ಟುಕೊಳ್ಳಬೇಡಿ” ಎಂದು ಸೊಸೆ ಮುಖದ ಮೇಲೆ ಹೊಡೆದಂತೆ ಹೇಳಿದಾಗ ನರಹರಿರಾಯರ ಕಣ್ಣುಗಳಲ್ಲಿ ತೆಳುವಾಗಿ ನೀರಾಡಿತು. ಹೆಂಡತಿ ಹೇಮಾ ಬದುಕಿರುವವರೆಗೆ ತನಗೆ ಹೀಗೆ ಯಾರೂ ಎದುರು ವಾದಿಸಿದವರಿಲ್ಲ. ಅವಳು ಕಣ್ಮುಚ್ಚಿ ತಿಂಗಳಾಯಿತಷ್ಟೆ, ಅಷ್ಟರಲ್ಲೇ ತಾನು ಎಲ್ಲರಿಗೂ ಕಾಲಕಸವಾದೆನೆ? ಹೇಗೆ, ಏಕೆ ಎಂದೇ ಅರ್ಥವಾಗುತ್ತಿಲ್ಲ ಅವರಿಗೆ! ತಾನೀಗಲೂ ಈ ಮನೆಯ ಹಿರಿಯ. ತಿಂಗಳು ತಿಂಗಳು ಕೈತುಂಬಾ ಪೆನ್ಶನ್ ತರುವ ಒಬ್ಬ ರಿಟೈರ್ಡ್ ಸರ್ಕಾರೀ ಅಧಿಕಾರಿ ಎಂಬ ಹಮ್ಮು ಅವರಲ್ಲಿ ಇದೆ! ಮೊದಲೆಲ್ಲ ಆ ಮನೆಯಲ್ಲಿ ಅವರ ಗೌರವಕ್ಕೆ, ಸ್ಥಾನಮಾನಕ್ಕೆ ಧಕ್ಕೆ ಬರದಂತೆ ಎಲ್ಲರೂ ನಡೆದುಕೊಳ್ಳುತ್ತಿದ್ದರು. ಅದಕ್ಕೆಲ್ಲ ತನ್ನ ಪ್ರತಿಷ್ಠೆ, ತಾನು ಕಟ್ಟಿಸಿದ ಈ ಬಂಗಲೆ, ಗಳಿಸಿದ ಸಂಪತ್ತು ಕಾರಣ ಎಂದು ಭ್ರಮಿಸಿದವರಿಗೆ ಅದಕ್ಕೆಲ್ಲ ಹೆಂಡತಿ ಕಾರಣ ಅಂತ ಈಗೀಗ ಅರ್ಥವಾಗುತ್ತಿದೆ. ಅವಳಿರುವವರೆಗೆ ತಾನು ಯಾವುದಕ್ಕೂ ಮಗ ಅಥವಾ ಸೊಸೆಯ ಮೇಲೆ ಅವಲಂಬಿತನಾಗಿರಲಿಲ್ಲ. ಹೀಗಾಗಿ ಮಗ, ಸೊಸೆಯ ನಿಜವಾದ ಬಣ್ಣ ತನಗೆ ತಿಳಿಯಲಿಲ್ಲ.
ಸೋಫಾದ ಮೇಲೆ ಕೂತು ಎದುರಿನ ಟೀಪಾಯ್ ಮೇಲೆ ಕಾಲಿಟ್ಟು ಮೊಬೈಲ್ನಲ್ಲಿ ಮುಳುಗಿರುವ ಸೊಸೆಯನ್ನೊಮ್ಮೆ ಕೆಂಗಣ್ಣು ಬಿಟ್ಟು ನೋಡಿದರು ನರಹರಿರಾಯರು. ಅತ್ತೆಗೆ ಮಾಡೋಕೆ ಬೇರೆ ಕೆಲಸ ಇರಲಿಲ್ಲ’ ಅಂತ ಅದು ಹೇಗೆ ಲಜ್ಜೆಗೆಟ್ಟು ಹೇಳುತ್ತಾಳಲ್ಲ ಇವಳು. ಹೇಮಾ ಬದುಕಿರುವವರೆಗೂ ಇವಳು ಅವಳಿಂದ ಮಾಡಿಸಿಕೊಂಡ ಕೆಲಸಗಳು ಒಂದೇ ಎರಡೇ! ಬೆಳಗ್ಗೆ ಎದ್ದು ಮನೆಯ ಮುಂದೆ ರಂಗೋಲಿ ಹಾಕುವುದರಿಂದ ಹಿಡಿದು ರಾತ್ರಿ ಅಡುಗೆಮನೆ ಕ್ಲೀನ್ ಮಾಡುವವರೆಗೂ ಎಲ್ಲ ಕೆಲಸಗಳಲ್ಲೂ ಸೊಸೆಗಿಂತ ಅತ್ತೆಯ ಪಾಲೇ ಹೆಚ್ಚಾಗಿ ಇರುತ್ತಿತ್ತು. ಅದಕ್ಕೇ ಅಲ್ಲವೆ ಹೇಮಾ ಸತ್ತ ನಾಲ್ಕು ದಿನಕ್ಕೆ ಕೆಲಸಕ್ಕೆ ಜನ ಹಾಕಿಕೊಂಡದ್ದು! ತನ್ನ ತವರಿನ ಬಳಗದವರ ಯಾವುದಾದರೂ ಒಂದು ಸಣ್ಣಪುಟ್ಟ ಕಾರ್ಯಕ್ರಮಗಳಿದ್ದರೂ ಸರಿ, ಮನೆಯ ಎಲ್ಲ ಜವಾಬ್ದಾರಿಗಳನ್ನು ಹೇಮಾಳ ತಲೆಗೆ ಹೊರಿಸಿ ಬ್ಯಾಗಿಗೆ ನಾಲ್ಕು ಸೀರೆ ತುಂಬಿಕೊಂಡು ಹೊರಟೇಬಿಡುತ್ತಿದ್ದಳಲ್ಲ ಈ ಸೊಸೆ ಮುದ್ದು!
ಹೇಮಾಳಿಗೋ ಮೊದಲೇ ಉಬ್ಬಸ. ಚಳಿಗಾಲದಲ್ಲಂತೂ ಉಬ್ಬಸ ಜೋರಾಗಿ ರಾತ್ರಿಯೆಲ್ಲ ನಿದ್ದೆಯಿಲ್ಲದೆ ಕಳೆಯುತ್ತಿದ್ದರೂ ಬೆಳಗ್ಗೆ ಬೇಗ ಎದ್ದು ಆಫೀಸಿಗೆ ಹೊರಡುವ ಮಗನಿಗೆ ತಿಂಡಿ ಮಾಡಿ, ಇನ್ನೂ ಐದನೆ ಕ್ಲಾಸ್ನಲ್ಲಿ ಓದುತ್ತಿರುವ ಮೊಮ್ಮಗ ಆರವ್ನನ್ನು ಎಬ್ಬಿಸಿ ಅವನನ್ನು ಶಾಲೆಗೆ ತಯಾರು ಮಾಡಿ ಸ್ಕೂಲ್ ಬಸ್ ಹತ್ತಿಸಿ ಬಂದ ಮೇಲೆಯೇ ಹೇಮಾ ನೆಟ್ಟಗೆ ಉಸಿರಾಡುತ್ತಿದ್ದುದು!
ಮಗ ಸೊಸೆ ಇಬ್ಬರೂ ಪ್ರವಾಸಪ್ರಿಯರು. ಅವರು ವಾರಗಟ್ಟಲೆ ಟೂರಿಗೆ ಹೋಗುವಾಗಲೆಲ್ಲ ಆರವ್ನ ಜವಾಬ್ದಾರಿಯನ್ನು ಹೇಮಾಳಿಗೆ ಒಪ್ಪಿಸಿ ನಿಶ್ಚಿಂತೆಯಿಂದ ಹೋಗಿಬರುತ್ತಿದ್ದರು.
ಅಬ್ಬಾ! ಆರವ್ನನ್ನು ಎಬ್ಬಿಸುವುದೇ ಒಂದು ದೊಡ್ಡ ಕೆಲಸ. ಕೀರ್ತಿಯಾದರೆ ಎರಡು ಸಲ ಕರೆದು ಅವನು ಏಳದಿದ್ದರೆ ಅವನು ಹೊದ್ದ ಹೊದಿಕೆ ಎಳೆದು “ಏಳೊ ಸೋಂಬೇರಿ, ಸ್ಕೂಲ್ಬಸ್ ಮಿಸ್ ಆಗುತ್ತೆ” ಎಂದು ಬಯ್ಯುತ್ತ ಅವನನ್ನು ಎಬ್ಬಿಸಿ, ಬಾತ್ರೂಮಿಗೆ ಓಡಿಸುತ್ತಿದ್ದಳು. ಮತ್ತೂ ಏಳದಿದ್ದರೆ ತಾಳ್ಮೆಗೆಟ್ಟು ಎರಡೇಟು ಕೊಟ್ಟೇ ಎಬ್ಬಿಸುತ್ತಿದ್ದಳು ಕೀರ್ತಿ.
ಆದರೆ ಹೇಮಾ ಹಾಗಲ್ಲ. “ಆರವ್ ಪುಟ್ಟ, ಏಳು ಮುದ್ದು. ನನ್ನ ಬಂಗಾರ ನೀನು! ಜಾಣ ಮರಿ, ಏಳು ಕಂದಾ…” ಎಂದು ಹತ್ತು ನಿಮಿಷ ಅವನ ತಲೆ ನೇವರಿಸಿ ಅವನನ್ನು ಮುದ್ದಿಸಿ, ರಮಿಸಿ, ಎಬ್ಬಿಸಿ ಅವನಿಷ್ಟದ ತಿಂಡಿ ಮಾಡಿ ತಿನ್ನಿಸಿ ಶಾಲೆಗೆ ಕಳಿಸುತ್ತಿದ್ದಳು. ಪಾಪ ಆರವ್! ಅಜ್ಜಿಯನ್ನು ತುಂಬಾ ಮಿಸ್ ಮಾಡ್ಕೊಳ್ತಾನೆ. ತನ್ನಂತೆ ಅವನಿಗೂ ಒಂಟಿತನ ಕಾಡುತ್ತಿದೆ. ಹೇಮಾ ದಿನಾ ಸಂಜೆ ಆರವ್ ಶಾಲೆಯಿಂದ ಬಂದ ಕೂಡಲೇ ಅವನಿಷ್ಟದ ತಿಂಡಿ ಮಾಡಿ ಕೊಡುತ್ತಿದ್ದಳು. ಅಲ್ಲದೆ ವಾರಕ್ಕೊಮ್ಮೆಯಾದರೂ ಅವನನ್ನು ಕರೆದುಕೊಂಡು ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದಳು, ಕಥೆ ಹೇಳುತ್ತಿದ್ದಳು. ಅಜ್ಜಿ ಮೊಮ್ಮಗ ಇಬ್ಬರೂ ಸಂಜೆ ಏಳು ಗಂಟೆಗೆ ದೇವರ ಮುಂದೆ ಕೂತು ಕನಿಷ್ಠ ನಾಲ್ಕಾದರೂ ದೇವರ ಕೀರ್ತನೆಗಳನ್ನು ಹೇಳುತ್ತಿದ್ದರು.
ಈಗ ಆರವ್ನ ದಿನಚರಿಯೇ ಬದಲಾಗಿದೆ. ಮೊದಲೆಲ್ಲ ಕೀರ್ತಿ ಮಗನಿಗೆ ತಾನೇ ಪಾಠ ಹೇಳಿಕೊಡುತ್ತಿದ್ದವಳು ಮೊನ್ನೆ ಟೆಸ್ಟ್ನಲ್ಲಿ ಕಡಮೆ ಮಾರ್ಕ್ಸ್ ಬಂತು ಎಂದು ಟ್ಯೂಷನ್ಗೆ ಸೇರಿಸಿದ್ದಾಳೆ. ಪಾಪ ಆ ಮಗು ಶಾಲೆಯಿಂದ ಸುಸ್ತಾಗಿ ಬರುತ್ತಲೆ ಒಂದು ಘಳಿಗೆ ಕುಳಿತು ವಿಶ್ರಮಿಸುವಂತೆಯೂ ಇಲ್ಲ.
“ಟ್ಯೂಷನ್ ಯಾಕಮ್ಮ? ನಾನೇ ಹೇಳಿಕೊಡ್ತೀನಿ. ಮಗು ಮನೆಯಲ್ಲೇ ಇದ್ದ ಹಾಗೂ ಆಗುತ್ತೆ, ನನಗೂ ಟೈಂ ಪಾಸ್ ಆಗುತ್ತೆ. ನನ್ನನ್ನೇನು ಕಡಮೆ ಅಂತ ತಿಳೀಬೇಡ ನೀನು. ನಾನು ಎಂ.ಎಸ್ಸಿ. ಮ್ಯಾಥ್ಸ್ನಲ್ಲಿ ಗೋಲ್ಡ್ ಮೆಡಲಿಸ್ಟ್!” ಎಂದು ನರಹರಿರಾಯರು ಹೆಮ್ಮೆಯಿಂದ ಹೇಳಿದರೆ, ಕೀರ್ತಿ ಅಷ್ಟೇ ತಾತ್ಸಾರ ಭಾವನೆಯಿಂದ “ಮಾವ, ಇದು ನಿಮ್ಮ ಕಾಲ ಅಲ್ಲ. ಸಿಲೆಬಸ್ ತುಂಬಾ ಟಫ್ ಇರುತ್ತೆ. ಅವನು ನಿಮ್ಮ ಜೊತೆ ಸೇರಿಬಿಟ್ಟರೆ ಆಯಿತು. ಅಜ್ಜ ಮೊಮ್ಮಗನ ಮಾತುಕಥೆಯೆ ಜಾಸ್ತಿಯಾಗುತ್ತೆ ಅಷ್ಟೇ!” ಎಂದು ಮುಖಕ್ಕೆ ಹೊಡೆದಂತೆ ಹೇಳಿಬಿಟ್ಟಳು. ಕೀರ್ತಿ ಅವನಿಗೆ ಒಂದಷ್ಟು ಬಿಸ್ಕತ್ತು, ಹಣ್ಣು, ಹಾಲು ಕೊಟ್ಟು ತನ್ನ ಸ್ಕೂಟಿಯಲ್ಲಿ ಟ್ಯೂಷನ್ಗೆ ಬಿಟ್ಟು ತಾನು ಫ್ರೆಂಡ್ಸ್ ಮನೆಗೊ, ಮಹಿಳಾ ಸಮಾಜದ ಕಾರ್ಯಕ್ರಮ ಅಂತಲೊ ಹಾಗಿಂದ ಹಾಗೇ ಹೋಗಿಬಿಡುತ್ತಿದ್ದಳು. ಆಗೆಲ್ಲ ತಾನು ಮನೆಯಲ್ಲಿ ಒಂಟಿಯಾಗಿ ಕೂರಲಾರದೆ ವಾಕಿಂಗ್ ಹೋಗಿ ಬರುವುದುಂಟು. ಆದರೆ ಅಲ್ಲೂ ತನಗೆ ಒಂಟಿತನ ಕಾಡತೊಡಗುತ್ತದೆ. ಮೊದಲೆಲ್ಲ ಹೇಮಾಳ ಜೊತೆಗೆ ದೇವಸ್ಥಾನದವರೆಗೆ ವಾಕಿಂಗ್ ಹೋಗುತ್ತಿದ್ದೆ. ಒಮ್ಮೊಮ್ಮೆ ಮೊಮ್ಮಗನೂ ಜೊತೆಗೆ ಬರುತ್ತಿದ್ದ. ಈಗ ಅವನು ತನ್ನ ಕೈಗೇ ಸಿಗುವುದಿಲ್ಲ. ಈಗೀಗ ವಾಕಿಂಗ್ಗೆ ಹತ್ತಿರದ ಪಾರ್ಕಿಗೆ ಹೋಗುವ ರೂಢಿ ಮಾಡಿಕೊಂಡ ಮೇಲೆ ಒಂದಷ್ಟು ಜನ ಫ್ರೆಂಡ್ಸ್ ಆಗಿದ್ದಾರೆ. ಎಲ್ಲ ತನ್ನಂತಹ ವಯಸ್ಸಾದವರೇ. ಒಬ್ಬೊಬ್ಬರದು ಒಂದೊಂದು ತರಹ ನೋವಿನ ಕಥೆ. ವೃದ್ಧಾಪ್ಯದಲ್ಲಿ ಬರುವ ವಯಃಸಹಜ ಕಾಯಿಲೆಗಳಿಗಿಂತ ಮಕ್ಕಳು ಕೊಡುವ ಮಾನಸಿಕ ನೋವು, ಚುಚ್ಚುಮಾತುಗಳು, ಆಘಾತಗಳು ಅವರುಗಳನ್ನು ಜರ್ಜರಿತರನ್ನಾಗಿ ಮಾಡಿವೆ. ತಾವೆಲ್ಲರೂ ಒಂದೇ ದೋಣಿಯ ಪಯಣಿಗರು ಅನಿಸುತ್ತದೆ.
* * *
ಹೊಟ್ಟೆ ತಾಳ ಹಾಕತೊಡಗಿದಾಗ ವಿಧಿ ಇಲ್ಲದೆ ನರಹರಿರಾಯರು ತಾವಾಗಿಯೆ ಇಂಜೆಕ್ಷನ್ ತಗೊಂಡು ಡೈನಿಂಗ್ ಟೇಬಲ್ ಮೇಲೆ ಸೊಸೆ ಮಾಡಿಟ್ಟ ಅಡಿಗೆಯನ್ನು ಬಟ್ಟಲಿಗೆ ಹಾಕಿಕೊಂಡು ಉಣ್ಣತೊಡಗಿದರು.
ತುತ್ತು ಬಾಯಿಗೆ ಇಡುತ್ತಿದ್ದಂತೆ ಮತ್ತೆ ಪುನಃ ಅವರಿಗೆ ಹೆಂಡತಿ ಹೇಮಾ ನೆನಪಾಯಿತು. ಅಪ್ಪ-ಅಮ್ಮ ತೀರಿಕೊಂಡಾಗ ತಾನೊಮ್ಮೆ ಅನಾಥನಾಗಿದ್ದೆ. ಆದರೆ ಆಗ ತನ್ನನ್ನು ಸಂಭಾಳಿಸಲು ಹೆಂಡತಿ ಇದ್ದಳು. ಈಗ ಹೆಂಡತಿ ತೀರಿಕೊಂಡ ಮೇಲೆ ಮತ್ತೊಮ್ಮೆ ಅನಾಥನಾಗಿದ್ದೇನೆ. ಈಗ ತನ್ನ ಪಾಲಿಗೆ ಯಾರೂ ಇಲ್ಲ. ಮಗ, ಸೊಸೆ, ಮೊಮ್ಮಗ ಎಲ್ಲ ಇದ್ದರೂ ತನ್ನನ್ನು ಉಂಡೆಯಾ ಬಿಟ್ಟೆಯಾ ಎಂದು ಕೇಳುವವರಿಲ್ಲ. ಹೇಮಾ ಬದುಕಿದ್ದಾಗ ಮಧ್ಯಾಹ್ನ ಒಂದು ಗಂಟೆಗೆ “ರೀ, ಊಟಕ್ಕೆ ಬನ್ನಿ” ಎಂದು ನಾಲ್ಕು ಸಲ ಕರೆದ ಮೇಲೆಯೆ ತಾನು ಕೈತೊಳೆಯಲು ಹೊರಡುತ್ತಿದ್ದುದು. ಊಟಕ್ಕೆ ಮುಂಚೆ ಹೇಮಾ ನುರಿತ ನರ್ಸ್ ರೀತಿ ಇನ್ಸುಲಿನ್ ಇಂಜೆಕ್ಷನ್ ಕೊಡುತ್ತಾ “ನೋವಾಯಿತೇನ್ರೀ?” ಎಂದು ಪುಟ್ಟ ಮಕ್ಕಳನ್ನು ಸಂತೈಸುವAತೆ ಕೇಳುತ್ತಿದ್ದಾಗ ತಾನು ಹುಸಿಗೋಪ ತೋರುತ್ತಾ “ಹೂಂ, ನನ್ನ ನೋವು ನಿನಗೆ ಹೇಗೆ ತಿಳಿಯುತ್ತೆ ಹೇಳು? ನಿನಗಂತೂ ಬಿ.ಪಿ., ಶುಗರ್ ಏನೂ ಇಲ್ಲವಲ್ಲ” ಎಂದು ಸಿಡುಕುತ್ತಿದ್ದೆ.
ಹಾಗೆ ಎದುರಿನಿಂದ ಸಿಡುಕಿದರೂ ಹೇಮಾ ತನಗಾಗಿ ಪಡುತ್ತಿದ್ದ ಪಾಡು ತನಗೆ ಗೊತ್ತಿದ್ದದ್ದೇ. ನಲವತ್ತು ವರ್ಷಕ್ಕೇ ತನಗೆ ಡಯಾಬಿಟೀಸ್ ಬಂದಾಗ ಹೇಮಾ ಅದು ಯಾರು ಯಾರೋ ಹೇಳಿದ ಮನೆಮದ್ದು, ಲೇಹ್ಯ, ಬೇವಿನ ಕಷಾಯ ಅಂತೆಲ್ಲ ಮಾಡಿ ತನಗೆ ಒತ್ತಾಯ ಮಾಡಿ ಕುಡಿಸುತ್ತಿದ್ದಳು.
“ರೀ, ಆಚೆ ಬೀದಿ ಸರಸಮ್ಮ ಹೇಳ್ತಾ ಇದ್ದರು. ಅವರ ಗಂಡನಿಗೆ ಹೈ ಶುಗರ್ ಇದ್ದಿತ್ತಂತೆ. ಅವರು ತಮ್ಮ ಗಂಡನಿಗೆ ದಿನಾ ಹಾಗಲಕಾಯಿ ಜ್ಯೂಸ್ ಮಾಡಿಕೊಟ್ಟರಂತೆ. ಈಗ ಶುಗರ್ ಕಂಟ್ರೋಲಿಗೆ ಬಂದಿದೆಯಂತೆ. ನಿಮಗೂ ಮಾಡಿ ಕೊಡಲಾ?” ಎಂದು ಕಕ್ಕುಲತೆಯಿಂದ ಕೇಳಿ ತಾನು ಬೇಡಬೇಡವೆಂದರೂ ಅವಳ ಒತ್ತಾಯಕ್ಕೆ ಮಣಿದು ಕೊನೆಗೆ ಹಾಗಲಕಾಯಿ ಜ್ಯೂಸ್, ಅದ್ಯಾವುದೋ ಬೇರಿನ ಕಷಾಯ ಅಂತೆಲ್ಲ ಕುಡಿಯಲೇಬೇಕಾಗುತ್ತಿತ್ತು.
ಆದರೆ ವಯಸ್ಸು ಮಾಗುತ್ತಿದ್ದಂತೆ, ಶುಗರ್ ಪ್ರಮಾಣ ಏರುತ್ತಲೇಹೋದಂತೆ ಮಾತ್ರೆಗಳು, ಇನ್ಸುಲಿನ್ ಇಂಜೆಕ್ಷನ್ ಬದುಕಿನ ಅನಿವಾರ್ಯ ಭಾಗವಾಗುತ್ತ್ತಹೋದವು. ಹೆಚ್ಚು ಓದಿರದ, ಅಷ್ಟೇನು ವ್ಯವಹಾರ ಚತುರೆ ಅಲ್ಲದ ಹೇಮಾ ಅದು ಹೇಗೋ ಪಕ್ಕದ ಬೀದಿಯ ನರ್ಸ್ ಒಬ್ಬರನ್ನು ಗುರುತು ಮಾಡಿಕೊಂಡು ಅವರಿಂದ ಇಂಜೆಕ್ಷನ್ ಹೇಗೆ ಕೊಡೋದು ಅಂತ ಕಲಿತು ತಾನೇ ಇಂಜೆಕ್ಷನ್ ಕೊಡತೊಡಗಿದಾಗ ‘ಭಪ್ಪರೆ ಹೆಣ್ಣೇ!’ ಎಂದು ತಾನು ಅವಳ ಬಗ್ಗೆ ಹೆಮ್ಮೆಪಡುವ ಹಾಗೆ ಮಾಡಿದ್ದಳು.
ತನ್ನ ಪಾಲಿಗೆ ಎಲ್ಲವೂ ಆಗಿದ್ದ ಹೇಮಾ ಇದ್ದಕ್ಕಿದ್ದಂತೆ ಈ ಜೀವನ ಸಾಗರದಲ್ಲಿ ತನ್ನನ್ನು ನಡುನೀರಿನಲ್ಲಿ ಕೈಬಿಟ್ಟು ಹೋಗುತ್ತಾಳೆಂದು ತಾನು ಕನಸಿನಲ್ಲೂ ಎಣಿಸಿರಲಿಲ್ಲ.
ಒಂದು ಶುಕ್ರವಾರ ಬೆಳಗ್ಗೆ ಎದ್ದು ಸ್ನಾನ ಮಾಡಿ ದೇವರಿಗೆ ನಮಸ್ಕರಿಸಿ, ಹೊಸ್ತಿಲಿಗೆ ಎಳೆ ಬರೆದು, ಮನೆಯ ಮುಂದೆ ರಂಗೋಲಿ ಹಾಕಿ ತುಳಸಿಗೆ ನಮಸ್ಕರಿಸಲು ಹೋದವಳು ಎಷ್ಟು ಹೊತ್ತಾದರೂ ಒಳಗೆ ಬರದೆ ಇದ್ದಾಗ ಎಲ್ಲಿಗೆ ಹೋದಳು ಎಂದು ಹೊರಬಂದು ನೋಡಿದರೆ ಹೇಮಾ ತುಳಸಿಕಟ್ಟೆಯ ಎದುರು ನಮಸ್ಕರಿಸುವ ಭಂಗಿಯಲ್ಲಿಯೇ ವಾಲಿಕೊಂಡು ಬಿದ್ದಿದ್ದಳು!
“ರಂಜನ್, ಇಲ್ಲಿ ಬಾರೋ!” ಎಂದು ನರಹರಿರಾಯರು ಗಟ್ಟಿಯಾಗಿ ಕೂಗಿದ ಪರಿಗೆ ಮಗ-ಸೊಸೆ ಇಬ್ಬರೂ ಓಡಿ ಬಂದು ನೋಡಿದರೆ ಹೇಮಾಳ ಮೈ ತಣ್ಣಗೆ ಕೊರೆಯುತ್ತಿತ್ತು. ಮನೆಯ ಹತ್ತಿರದ ಕ್ಲಿನಿಕ್ನ ಡಾಕ್ಟರ್ ವರುಣ್ರನ್ನು ಬರಹೇಳಿ ಅವರು ಬಂದು ಪರೀಕ್ಷಿಸಿ “ಶೀ ಈಸ್ ನೋ ಮೋರ್!” ಎಂದಾಗ ತನ್ನ ನಾಲಿಗೆಯ ದ್ರವವೆಲ್ಲ ಒಣಗಿ ಅಲ್ಲಿಯೇ ಕಣ್ಣು ಕತ್ತಲಿಟ್ಟು ಬಿದ್ದಿದ್ದೆ.
ಎಚ್ಚರವಾದಾಗ ಹೇಮಾಳ ಶವವನ್ನು ಹಾಲ್ನಲ್ಲಿ ಮಲಗಿಸಿದ್ದರು. ತನ್ನ ಕೈಹಿಡಿದು ಈ ಮನೆಯ ಹೊಸ್ತಿಲು ತುಳಿದು ಮಹಾಲಕ್ಷ್ಮಿಯಂತೆ ಗೃಹಪ್ರವೇಶ ಮಾಡಿ ತನ್ನ ಮನೆ-ಮನವನ್ನು ಬೆಳಗಿದವಳನ್ನು ಹೆಗಲು ಕೊಟ್ಟು ಸ್ಮಶಾನಕ್ಕೆ ಕರೆದುಕೊಂಡು ಹೋಗಬೇಕಾದ ಪರಿಸ್ಥಿತಿ ಬಂದಾಗ ತನ್ನಂತಹ ಗಟ್ಟಿ ಮನಸ್ಸುಳ್ಳವರ ಗುಂಡಿಗೆಯೂ ಅದುರಿ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದೆ.
* * *
ಹೆಂಡತಿ ಸತ್ತ ಮೇಲೆ ಗಂಡನ ಬದುಕು ಇಷ್ಟೊಂದು ಶೋಚನೀಯವಾಗಿಬಿಡುತ್ತದೆ ಎಂದು ನರಹರಿರಾಯರು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಹೇಮಾ ಬದುಕಿರುವಾಗ ನರಿಹರಿರಾಯರಿಗೆ ಡಯಾಬಿಟೀಸ್ ಎಂದು ಆದಷ್ಟು ಅವರಿಗಾಗಿ ಮೂರುಹೊತ್ತು ಚಪಾತಿ, ರಾಗಿರೊಟ್ಟಿ, ಉಪ್ಪಿಟ್ಟು, ತರಕಾರಿ ಸಲಾಡ್, ತರಕಾರಿ ಜ್ಯೂಸ್ ಹೀಗೆ ಏನಾದರೊಂದು ಮಾಡಿ ಹಾಕುತ್ತಿದ್ದಳು.
ಆದರೆ ಕೀರ್ತಿ ಮಾವನ ಪಥ್ಯದ ಬಗ್ಗೆ ತಿಳಿದಿದ್ದರೂ ಅವರಿಗೆ ಬೇಕಾಗುವ ಯಾವ ಅಡುಗೆ ತಿಂಡಿಗಳನ್ನೂ ಮಾಡದೆ ಸ್ಯಾಂಡ್ವಿಚ್, ರೈಸ್ಬಾತ್, ಟೊಮೇಟೊಬಾತ್ ಹೀಗೆ ಸುಲಭವಾಗಿ ಮಾಡುವಂತಹ ತಿಂಡಿ ಮಾಡಿ ಡೈನಿಂಗ್ ಟೇಬಲ್ ಮೇಲೆ ಇಟ್ಟು ಬೆಳಗ್ಗೆ ಬೇಗನೆ ಹೊರಡುವ ಗಂಡ ಮತ್ತು ಮಗನಿಗೆ ಹಾಕಿ ಉಳಿದದ್ದನ್ನು ಅಲ್ಲೇ ಟೇಬಲ್ ಮೇಲೆ ಇಟ್ಟಿರುತ್ತಿದ್ದಳು. ತಾನು ಎಷ್ಟು ಹೊತ್ತಿಗೊ ಬಂದು ತನ್ನ ತಿಂಡಿಯನ್ನು ರೂಮಿಗೆ ತಗೊಂಡು ಹೋಗಿ ತಿನ್ನುತ್ತಿದ್ದಳು. ನರಹರಿರಾಯರು ಹಸಿವಾದಾಗ ಹೋಗಿ ತಾವೇ ಪ್ಲೇಟಿಗೆ ಹಾಕಿಕೊಂಡು ತಿನ್ನಬೇಕು.
ಸೊಸೆ ಎರಡು ದಿನಕ್ಕೊಮ್ಮೆ ಸಾರು, ಪಲ್ಯ ಮಾಡಿ ಫ್ರಿಜ್ನಲ್ಲಿ ಇಟ್ಟುಬಿಡುತ್ತಿದ್ದಳು. ಸದÀ್ಯ ಅನ್ನ ಒಂದು ಪ್ರತಿನಿತ್ಯ ಮಾಡುತ್ತಾಳಲ್ಲ ಅದೇ ಪುಣ್ಯ ಎಂದುಕೊAಡು ತಂಗಳ ಮೇಲೋಗರವನ್ನೇ ಬಿಸಿ ಮಾಡಿ ಉಣ್ಣುವುದನ್ನೆ ರೂಢಿ ಮಾಡಿಕೊಂಡಿದ್ದರು ನರಹರಿರಾಯರು.
ಗಂಡ-ಹೆಂಡತಿ ರಾತ್ರಿ ಎಲ್ಲಾದರೂ ಡಿನ್ನರ್ ಪಾರ್ಟಿ ಇದ್ದರೆ ತನ್ನ ಬಗ್ಗೆ ಯೋಚನೆಯೂ ಮಾಡದೆ ಹಾಯಾಗಿ ಮಗನನ್ನು ಕರೆದುಕೊಂಡು ಹೋಗಿಬಿಡುತ್ತಿದ್ದರು. ತಾನು ಮಧ್ಯಾಹ್ನ ಮಿಕ್ಕಿದ ತಣ್ಣಗಿನ ಅನ್ನಕ್ಕೆ ಸಾಂಬಾರ್ ಹಾಕಿಕೊಂಡು ಉಣ್ಣಬೇಕು. ಪಥ್ಯದ ಊಟವಿಲ್ಲದೆ ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗಿತ್ತು. ಬೇಸತ್ತ ನರಹರಿರಾಯರು ಕೊನೆಗೆ ತನಗಾಗಿ ಚಪಾತಿ, ರಾಗಿ ಮುದ್ದೆ ಮಾಡಲು ಒಬ್ಬ ಅಡುಗೆ ಕೆಲಸದವರನ್ನು ನೇಮಿಸಿಕೊಂಡರು.
ಆದರೆ ಕೀರ್ತಿಗೆ ಅದು ಸರಿ ಬರಲಿಲ್ಲ. “ಮಾವ, ಬೇರೆಯವರು ಬಂದು ನಮ್ಮ ಕಿಚನ್ನಲ್ಲಿ ಅಡುಗೆ ಮಾಡೋದು ನನಗೆ ಒಂದು ಚೂರೂ ಹಿಡಿಸುವುದಿಲ್ಲ. ನೀವು ಬೇಕಿದ್ದರೆ ಹೋಟೆಲ್ಗೆ ಹೋಗಿ ತಿಂದುಕೊಂಡು ಬನ್ನಿ. ಇಲ್ಲದಿದ್ದರೆ ಹೋಟೆಲ್ನಿಂದ ಪಾರ್ಸೆಲ್ ತರಿಸಿ ತಿನ್ನಿ” ಎಂದು ತಾಕೀತು ಮಾಡಿದಳು. ಮಗನೂ ಅದನ್ನೇ ಅನುಮೋದಿಸಿದ. “ಹೌದಪ್ಪ ಹೊರಗಿನ ಕೆಲಸಕ್ಕಾದ್ರೆ ಪರವಾಗಿಲ್ಲ. ಆದರೆ ಅಡುಗೆಮನೆಗೆ ಹೀಗೆ ಯಾರು ಯಾರನ್ನೋ ಹೇಗೆ ಬಿಟ್ಟುಕೊಳ್ಳುವುದು?” ಎಂದು ಹೆಂಡತಿಯ ಪರ ವಹಿಸಿ ಮಾತನಾಡಿದ.
ಮಗನ ಮಾತನ್ನು ಕೇಳಿ ದುಃಖ ಒತ್ತರಿಸಿ ಬಂತು ನರಹರಿರಾಯರಿಗೆ. ಇದು ತಾನೇ ಕಟ್ಟಿಸಿದ ಮನೆ. ಆದರೆ ತಾನೇ ಇಲ್ಲಿ ಪರಕೀಯ! ತನ್ನೊಂದಿಗೆ ಮಾತನಾಡುವವರಿಲ್ಲ. ತನ್ನ ಬೇಕು-ಬೇಡಗಳನ್ನು ಕೇಳುವವರಿಲ್ಲ. ಏನಾಗಿಹೋಯಿತು ತನ್ನ ಪರಿಸ್ಥಿತಿ ಎಂದು ಹೇಮಾಳ ಫೋಟೋದ ಎದುರು ನಿಂತು ತಮ್ಮ ನೋವನ್ನು ತೋಡಿಕೊಂಡರು.
ಹೆಂಡತಿಯೊಡನೆ ಹೀಗೆ ಮಾತನಾಡಿದಾಗೆಲ್ಲ ಅವರ ಮನಸ್ಸು ಹಗುರವಾಗುತ್ತಿತ್ತು. ಈಗ ಅವರಿಗೆ ತನ್ನ ಬದುಕು ಸಹನೀಯವಾಗಿಸಲು ಹೊಸತೊಂದು ದಾರಿ ಸಿಕ್ಕಂತಾಯಿತು. ಈಗ ಅವರು ಹಾಲ್ಗೆ ಬರುವುದೇ ಇಲ್ಲ. ಊಟ ತಿಂಡಿ ಕೂಡ ತನ್ನ ರೂಮಿಗೆ ಹೋಗಿ ತಿನ್ನತೊಡಗಿದರು. ಹೆಚ್ಚಿನ ಸಮಯವನ್ನು ಕೋಣೆಯಲ್ಲಿ ಮಡದಿಯ ಫೋಟೊ ಜೊತೆಗೆ ಮಾತಾಡುತ್ತ ಕಳೆಯತೊಡಗಿದರು. ಇದು ಸೊಸೆಯ ಗಮನಕ್ಕೆ ಬಂತು. ಅವಳು ಮನೆಗೆ ಬರುವ ಗೆಸ್ಟ್ಗಳ ಹತ್ತಿರವೆಲ್ಲ ಈ ವಿಷಯವನ್ನು ಪ್ರಚಾರ ಮಾಡಿದಳು.
“ನಮ್ಮ ಮಾವನಿಗೆ ಹೆಂಡತಿ ಸತ್ತ ಮೇಲೆ ಸ್ವಲ್ಪ ತಲೆ ಕೆಟ್ಟಿದೆ. ಒಬ್ಬೊಬ್ಬರೇ ಅತ್ತೆಯ ಫೋಟೋ ಜೊತೆ ಮಾತಾಡುತ್ತ ಇರುತ್ತಾರೆ. ಹುಚ್ಚು ವಿಪರೀತಕ್ಕೆ ತಿರುಗಿದರೆ ಕಷ್ಟ!” ಎಂದು ಹೇಳುವ ಮಾತು ನರಹರಿರಾಯರ ಕಿವಿಗೂ ಬಿತ್ತು.
ಹೌದು, ಈ ಮನೆಯಲ್ಲಿ ತನ್ನೊಂದಿಗೆ ಮಾತನಾಡುವವರು ಯಾರಿದ್ದಾರೆ? ಹೊತ್ತು ಕಳೆಯಲು ತಾನು ಹೆಂಡತಿಯ ಫೋಟೊ ಜೊತೆಗೆ ಮಾತಾಡಿದರೆ ತನಗೆ ಮತಿಭ್ರಮಣೆಯಾಗಿದೆ ಎಂದು ಪ್ರಚಾರಮಾಡುತ್ತಾಳಲ್ಲ ತನ್ನ ಸೊಸೆ! ಇದನ್ನು ಮಗನೆದುರು ಹೇಳಲೇ ಎಂದುಕೊಂಡರೂ ಗಂಡ-ಹೆಂಡತಿ ಅನ್ಯೋನ್ಯವಾಗಿರುವಾಗ ತಾನೇಕೆ ಅವರ ಮಧ್ಯೆ ವಿರಸ ತಂದು ಈ ಮನೆಯ ಶಾಂತಿ ಕದಡಲಿ ಎಂದು ಸುಮ್ಮನಾದರು.
* * *
ಇನ್ನೇನು ಕ್ರಿಸ್ಮಸ್ ರಜೆ ಹತ್ತಿರ ಬಂತು. ಆರವ್ ಮನೆಯಲ್ಲೇ ಇರುತ್ತಾನೆ. ಅವನ ಜೊತೆ ಚೆಸ್ ಆಡಬೇಕು. ಅವನಿಗೆ ಚೆಸ್ ಆಡಲು ಬರುವುದಿಲ್ಲ. ತಾನು ಕಾಲೇಜು ದಿನಗಳಿಂದಲೂ ಚೆಸ್ ಚಾಂಪಿಯನ್. ಮೊಮ್ಮಗನಿಗೆ ಚೆಸ್ ಕಲಿಸಿಕೊಡಬೇಕು ಎಂದು ಆಸೆಯಿಂದ ಆ ದಿನ ಸಂಜೆ ವಾಕಿಂಗ್ನಿಂದ ಮರಳಿ ಬರುವಾಗ ಚೆಸ್ ಬೋರ್ಡ್ ಮನೆಗೆ ತಂದರು ನರಹರಿರಾಯರು. ಅವತ್ತು ಮಗ-ಸೊಸೆ ಶಾಪಿಂಗ್ ಮುಗಿಸಿ ಲೇಟಾಗಿ ಮನೆಗೆ ಬಂದರು.
ಮಗ ರಂಜನ್ “ಅಪ್ಪಾ, ಆರವ್ಗೆ ಕ್ರಿಸ್ಮಸ್ ರಜೆ ಇದೆ. ಹೀಗಾಗಿ ನಾವು ಒಂದು ಹತ್ತು ದಿನ ಗುಜರಾತ್ಗೆ ಫ್ಯಾಮಿಲಿ ಟೂರ್ ಹೋಗ್ತಾ ಇದೀವಿ. ಮನೆ ಕಡೆ ಜೋಪಾನ” ಎಂದ.
‘ಹ್ಹ, ಫ್ಯಾಮಿಲಿ ಟೂರ್! ಹಾಗಾದರೆ ತಾನಿವನ ಕುಟುಂಬ ಸದಸ್ಯನಲ್ಲವೆ? ಹೇಮಾ ಬದುಕಿರುವಾಗಲೂ ಇವರಿಬ್ಬರೇ ಹೋಗುತ್ತಿದ್ದರು. ಆದರೆ ಈಗ ತಾನು ಒಂಟಿ. ತನ್ನನ್ನು ಕರೆದುಕೊಂಡು ಹೋದರೆ ಇವರ ಖುಷಿಗೆ ಬೆಂಕಿ ಬೀಳುತ್ತದೆಯೆ?’
“ಆಯಿತಪ್ಪಾ. ನೀನೇನು ಹೆದರಬೇಡ. ಮನೆ ಜೋಪಾನವಾಗೇ ಇರುತ್ತೆ. ಆದರೆ ಮೊದಲೇ ಹೇಳುತ್ತೇನೆ. ಅಷ್ಟು ದಿನ ನಾನು ಹೊಟೇಲ್ನಲ್ಲಿ ಉಂಡರೆ ಆಸ್ಪತ್ರೆಗೆ ಎಡ್ಮಿಟ್ ಆಗಬೇಕಾದೀತು. ನೀವು ವಾಪಾಸು ಬರೋವರೆಗೂ ಅಡುಗೆ ಸುಬ್ಬಣ್ಣನಿಗೆ ಹೇಳಿಬಿಡ್ತೀನಿ. ಅವನು ಬಂದು ನನಗೆ ಅಡುಗೆ-ತಿಂಡಿ ಮಾಡ್ತಾನೆ” ಎಂದು ಸೊಸೆಯತ್ತ ಉರಿನೋಟ ಬೀರಿದರು. ಅವಳು ಮುಖ ಗಂಟು ಹಾಕಿಕೊಂಡು ತನ್ನ ಕೋಣೆಗೆ ಹೋದಳು.
* * *
ಸುಬ್ಬಣ್ಣ ಮಾಡಿದ ಚಪಾತಿ ಕುರ್ಮ ಸವಿಯುತ್ತ ಮೊಬೈಲ್ನಲ್ಲಿ ವಾಟ್ಸಾಪ್ ಸ್ಟೇಟಸ್ ನೋಡುತ್ತಿದ್ದವರ ಕಣ್ಣಿಗೆ ಮಗನ ಸ್ಟೇಟಸ್ ಕಣ್ಣಿಗೆ ಬಿತ್ತು. ಗುಜರಾತಿನ ಸುಂದರ ಯಾತ್ರಾ ಸ್ಥಳಗಳ ಎದುರಿನಲ್ಲಿ ಮಗನ ಪರಿವಾರದ ಜೊತೆಗೆ ನಗುಮುಖದೊಂದಿಗೆ ಸೊಸೆ ಕೀರ್ತಿಯ ಅಮ್ಮ, ಅಪ್ಪ, ಅಣ್ಣ, ಅತ್ತಿಗೆಯೂ ಫೋಸ್ ಕೊಟ್ಟು ನಿಂತಿದ್ದರು. ಕೀರ್ತಿ ತನ್ನ ಅಪ್ಪ-ಅಮ್ಮನನ್ನು ಕರೆದುಕೊಂಡು ಹೋಗಲು ಹಿಂದೇಟು ಹಾಕದೆ ಇದ್ದಾಗ ಮಗನೇಕೆ ತನ್ನನ್ನು ಒಂಟಿ ಮಾಡಿದ? ತಾನವನಿಗೆ ಅಷ್ಟು ಬೇಡದವನಾಗಿಬಿಟ್ಟೆನೆ? ಅವರ ಮನಸ್ಸು ದುಃಖ, ಅಪಮಾನದಿಂದ ಕುದಿಯತೊಡಗಿತು. ಚಪಾತಿ ಕುರ್ಮ ತಿನ್ನಲು ಮನಸ್ಸಾಗದೆ ಅದನ್ನು ಡಸ್ಟ್ಬಿನ್ಗೆ ಹಾಕಿ ಕೈತೊಳೆದು ರೂಮಿಗೆ ಹೋಗಿ ಮಲಗಿಬಿಟ್ಟರು.
ಕಣ್ಣುಗಳಿಂದ ತನ್ನಿಂತಾನೆ ನೀರು ಇಳಿಯತೊಡಗಿತ್ತು. ತಮ್ಮ ಮೊಬೈಲ್ನಲ್ಲಿನ ಹೆಂಡತಿ ಹೇಮಾಳ ಫೋಟೋ ನೋಡುತ್ತ ಅವಳ ಮುಂದೆ ತನ್ನ ನೋವನ್ನು ತೋಡಿಕೊಂಡರು. ಮನಸ್ಸು ಒಂದು ಕ್ಷಣ ಆತ್ಮಹತ್ಯೆಯ ಬಗ್ಗೆ ಯೋಚಿಸಿತು. ನೇಣು ಬಿಗಿದು ತನ್ನ ಬದುಕಿಗೆ ಇತಿಶ್ರೀ ಹಾಡಿಬಿಡಲೇ ಎಂದು ಯೋಚಿಸುತ್ತಿರುವಾಗ ಮೊಬೈಲ್ ರಿಂಗಣಿಸಿತು.
ನರಹರಿರಾಯರ ಸಹೋದ್ಯೋಗಿಯಾಗಿದ್ದ ಮೂರ್ತಿಯವರ ಫೋನ್. ಆರು ತಿಂಗಳ ಹಿಂದೆ ಅವರ ಹೆಂಡತಿ ತೀರಿಕೊಂಡಿದ್ದರಿಂದ ಅವರ ಮಗ ಅವರನ್ನು ತನ್ನ ಜೊತೆ ಇರಲು ಅಮೆರಿಕಾಕ್ಕೆ ಕರೆದೊಯ್ದಿದ್ದ. ಹಾಗಂತ ಮೂರ್ತಿಯೆ ತಮ್ಮ ಸ್ನೇಹಕೂಟದಲ್ಲಿದ್ದವರನ್ನೆಲ್ಲ ಕರೆದು ಒಂದು ಹೊಟೇಲ್ನಲ್ಲಿ ಭರ್ಜರಿ ಔತಣಕೂಟ ಏರ್ಪಡಿಸಿ ‘ನನ್ನ ಮಗ ನನ್ನನ್ನ ಯು.ಎಸ್.ಗೆ ಕರೆದೊಯ್ತಾ ಇದಾನೆ ಕಣ್ರಯ್ಯ. ಇನ್ನು ನಿಮ್ಮಗಳ ಭೇಟಿ ಯಾವಾಗಲೋ ಏನೊ! ಅದಕ್ಕೆ ನಿಮಗೆಲ್ಲ ಕೊನೆಯ ಸಲ ಒಂದು ಊಟ ಹಾಕಿಸೋಣ ಅಂತ ಇಲ್ಲಿಗೆ ಕರೆದೆ” ಎಂದು ಒಬ್ಬೊಬ್ಬರನ್ನೇ ತಬ್ಬಿಕೊಂಡು ಗಳಗಳನೆ ಅತ್ತಿದ್ದರು ಮೂರ್ತಿ. “ಅಲ್ಲಯ್ಯ, ಇದು ಅಳೋ ವಿಷಯನೇನಯ್ಯ? ಹೆಮ್ಮೆಪಡೋ ವಿಷಯ ಕಣೋ. ಈ ಕಲಿಯುಗದಲ್ಲಿ ನಿನಗೊಬ್ಬ ಶ್ರವಣಕುಮಾರನಂಥ ಮಗ ಇದ್ದಾನಲ್ಲ. ನಿಜವಾಗಲೂ ನೀನು ಪುಣ್ಯ ಮಾಡಿದ್ದೀ ಕಣಯ್ಯಾ. ನಮಗೆಲ್ಲ ನಿನ್ನ ಅದೃಷ್ಟ ಕಂಡು ಹೊಟ್ಟೆಕಿಚ್ಚು ಆಗ್ತಾ ಇದೆ” ಎಂದು ತಮ್ಮ ಗುಂಪಿನ ನಾರಾಯಣ ಹೇಳಿದಾಗ ಉಳಿದವರೂ ಅವನ ಮಾತಿಗೆ ತಲೆಯಾಡಿಸಿದ್ದರು.
“ಅರೆ, ಮೂರ್ತಿ, ನೀನು ನಿನ್ನ ಹಳೆ ನಂಬರ್ನಿಂದಲೇ ಮಾತಾಡ್ತಾ ಇದೀಯಲ್ಲ. ಇಂಡಿಯಾಗೆ ವಾಪಾಸ್ ಬಂದೆಯಾ, ಏನು ಕಥೆ? ನೀನು ಯಾವಾಗ ಯು.ಎಸ್.ನಿಂದ ಬಂದೆ? ಅಲ್ಲಿನ ವೆದರ್ ಸೂಟ್ ಆಗಲಿಲ್ಲವೇನೋ?” ನರಹರಿರಾಯರು ಒಂದರ ಬೆನ್ನಿಗೆ ಒಂದು ಪ್ರಶ್ನೆಗಳನ್ನು ಕೇಳಿದರು.
“ಇನ್ನು ನಿನ್ನ ಹತ್ತಿರ ಏನು ಮುಚ್ಚುಮರೆ? ನನ್ನ ಮಗ ನನ್ನನ್ನು ವೃದ್ಧಾಶ್ರಮಕ್ಕೆ ಸೇರಿಸಿದ. ಇಲ್ಲಿ ಎಲ್ಲ್ಲ ಅನುಕೂಲ ಇದೆ. ಅವನು ಅಮೆರಿಕಾದಲ್ಲಿರೋದು. ನನ್ನನ್ನು ಇಲ್ಲಿ ನೋಡ್ಕೊಳ್ಳೋರು ಯಾರೂ ಇಲ್ಲಾಂತ ಒಂದು ಒಳ್ಳೆ ವೃದ್ಧಾಶ್ರಮಕ್ಕೆ ಸೇರಿಸಿದಾನೆ. ತಿಂಗಳು ತಿಂಗಳು ಅವನೇ ಹಣ ಕಳಿಸ್ತಾನೆ. ಆವಾಗಾವಾಗ ವೀಡಿಯೋ ಕಾಲ್ ಮಾಡಿ ವಿಚಾರಿಸ್ಕೋತಾನೆ.”
“ಮತ್ತೆ ಅಮೆರಿಕಾ…?”
“ಅದು ನಾನು ನಿಮ್ಮೆಲ್ಲರ ಮುಂದೆ ಸುಳ್ಳು ಹೇಳಿದ್ದು. ಎಲ್ಲರ ಮುಂದೆ ಮಗನ ಮರ್ಯಾದೆ ಕಳೆಯೋಕಾಗುತ್ತೇನಯ್ಯ? ನೀನು ಬಾ. ಒಂದಷ್ಟು ಹೊತ್ತು ನಿನ್ನ ಜೊತೆ ಮಾತಾಡಬೇಕು. ವೃದ್ಧಾಶ್ರಮದ ಅಡ್ರೆಸ್ ವಾಟ್ಸಾಪ್ನಲ್ಲಿ ಕಳಿಸಿದೀನಿ…” ಎಂದು ಮೂರ್ತಿಯವರು ಫೋನ್ಕಾಲ್ ಕಟ್ ಮಾಡಿದಾಗ ಗೆಳೆಯನ ಪರಿಸ್ಥಿತಿಗೆ ನರಹರಿರಾಯರ ಮನಸು ಮರುಗಿತು.
* * *
ಗುಜರಾತ್ ಟೂರ್ ಮುಗಿಸಿ ಬಂದ ರಂಜನ್ಗೆ ಅಪ್ಪ ತನ್ನ ನಿರ್ಧಾರವನ್ನು ತಿಳಿಸಿದಾಗ ಅವನು ಕೆಂಡಾಮಂಡಲವಾದ.
“ ಅಪ್ಪಾ, ನೀವು ಆಶ್ರಮ ಸೇರುವಂಥಾದ್ದು ಏನು ಮಾಡಿದೀವಿ ನಾವು? ಮೂರ್ತಿ ಅವರ ಮಗ ಫಾರಿನ್ನಲ್ಲಿ ಇರೋದು. ಹೀಗಾಗಿ ಅವನು ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಿದ. ನಾನು ನಿಮ್ಮ ಜೊತೇನೆ ಇದೀನಲ್ಲ. ನೀವ್ಯಾಕೆ ಆಶ್ರಮ ಸೇರ್ತೀರಿ? ನಿಮಗೆ ಇಲ್ಲಿ ಹೊತ್ತು ಹೊತ್ತಿಗೆ ಊಟ ತಿಂಡಿ ಎಲ್ಲ ಸಿಗ್ತಾ ಇದೆ ತಾನೆ? ನಾನೇನಾದರೂ ನಿಮಗೆ ಎದುರು ಮಾತಾಡಿದ್ದೆನಾ?”
“ಹ್ಹ, ಎದುರು ಮಾತಾಡಿದ್ದರೂ ಬೇಜಾರಿರಲಿಲ್ಲ. ಆದರೆ ನೀನು ನನ್ನ ಜೊತೆ ಕೂತು ಯಾವತ್ತು ಮಾತಾಡಿದೀಯಪ್ಪ?” ನರಹರಿರಾಯರು ನಿಷ್ಠುರವಾಗಿ ನುಡಿದರು.
“ಅದೂ, ಅಪ್ಪ ಸಾರಿ, ಆಫೀಸ್ ಟೆನ್ಶನ್….. ಆ ಟೆನ್ಶನ್ನಿಂದ ದೂರ ಹೋಗೋಕೆ ಟೂರಿಗೆ ಹೋದದ್ದಲ್ಲಪ್ಪಾ….” ಮಗ ತನ್ನ ತಪ್ಪನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ.
“ಹೌದಪ್ಪ, ಆದರೆ ಆ ಟೂರಿಗೆ ನಿನ್ನ ಅತ್ತೆ ಮಾವನನ್ನು ಕರೆದುಕೊಂಡ ಹೋದ ಹಾಗೆ ನನ್ನನ್ನೂ ಕರೆದುಕೊಂಡು ಹೋಗಿದ್ದರೆ ನಿನ್ನ ಮರ್ಯಾದೆ ಹೋಗುತ್ತಿತ್ತಾ?” ರಾಯರು ಕೋಪದಿಂದಲೇ ಕೇಳಿದರು.
ಅಷ್ಟರಲ್ಲಿ ಕೀರ್ತಿ ಮಧ್ಯೆ ಬಾಯಿ ಹಾಕಿದಳು. “ಮಾವ, ಟೂರ್ ಪ್ಲಾನ್ ಮಾಡಿದ್ದು ನನ್ನ ಅಣ್ಣ. ಹೀಗಾಗಿ ನಿಮ್ಮನ್ನು ಕರೆದುಕೊಂಡು ಹೋಗೋದು ಸರಿಯೆನಿಸಲಿಲ್ಲ.”
“ಸಾಕಮ್ಮ, ನನ್ನ ಪಾಲಿನ ಖರ್ಚು ನಾನು ಕೊಡ್ತಾ ಇರಲಿಲ್ಲವಾ? ಅಷ್ಟು ಸೇವಿಂಗ್ಸ್ ಇದೆ ನನ್ನ ಹತ್ತಿರ. ಈಗ ವೃದ್ಧಾಶ್ರಮಕ್ಕೆ ಡಿಪಾಸಿಟ್ ಕೂಡ ನಾನು ನನ್ನ ಸೇವಿಂಗ್ಸ್ನಿಂದಲೇ ಕೊಟ್ಟು ಬಂದಿದೀನಿ. ತಿಂಗಳು ತಿಂಗಳು ಕಟ್ಟಬೇಕಾದ ಹಣ ನಾನು ನನ್ನ ಪೆನ್ಶನ್ ಹಣದಲ್ಲೇ ಕೊಡ್ತೀನಿ. ಅಷ್ಟು ಸ್ವಾಭಿಮಾನ ಇದೆ ನನಗೆ. ವೃದ್ಧಾಪ್ಯದಲ್ಲಿ ಬೇಕಾಗಿರುವುದು ಒಂದು ಹಿಡಿ ಪ್ರೀತಿ, ಒಂದಷ್ಟು ಆಪ್ತತೆ. ಅದೇ ಇಲ್ಲದ ಮೇಲೆ ನಾನು ಎಲ್ಲಿದ್ದರೇನು?”
ಗಂಡ ಹೆಂಡತಿ ಇಬ್ಬರೂ ಮಾತಾಡದೆ ತಲೆ ತಗ್ಗಿಸಿ ನಿಂತಿದ್ದರು. “ಅಪ್ಪಾ, ನಿಮಗಿಲ್ಲಿ ಏನು ಕಡಮೆಯಾಗಿದೆ? ನಾಳೆ ನಮ್ಮ ಸಂಬಂಧಿಕರು ಅಥವಾ ಮನೆಗೆ ಬಂದವರು ಯಾರಾದರೂ ಅಪ್ಪ ಎಲ್ಲಿ ಅಂತ ಕೇಳಿದರೆ ನಾನೇನು ಹೇಳಲಿ?” ರಂಜನ್ ಮುಖ ಸಿಂಡರಿಸಿಕೊAಡು ಕೇಳಿದ.
“ಓಹ್, ಅದಾ ನಿನ್ನ ಸಮಸ್ಯೆ. ಏನೋ ಒಂದು ಸುಳ್ಳು ಹೇಳು” ನರಹರಿರಾಯರು ವ್ಯಂಗ್ಯವಾಗಿ ನಕ್ಕು ನುಡಿದರು.
“ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ. ನಿಮಗೆ ಆಶ್ರಮಕ್ಕೆ ಹೋದ ಮೇಲೆ ನಮ್ಮ ಬೆಲೆ ತಿಳಿಯುತ್ತೆ” ರಂಜನ್ ಕೋಪದಿಂದ ನುಡಿದ.
“ನಾನು ಆಶ್ರಮಕ್ಕೆ ಹೋಗಿದ್ದೆ. ನನ್ನ ಫ್ರೆಂಡ್ ಮೂರ್ತಿ ಮತ್ತು ಇನ್ನೊಂದಿಬ್ಬರನ್ನು ಮಾತಾಡಿಸಿ ವಿಚಾರಿಸಿಕೊಂಡು ಬಂದಿದೀನಿ. ಅಲ್ಲಿ ಎಲ್ಲ ಅನುಕೂಲ ಇದೆ. ಒಂದಷ್ಟು ಸಮಾನವಯಸ್ಕರ ಮತ್ತು ಸಮಾನದುಃಖಿಗಳ ಜೊತೆಗೆ ಮಾತಾಡುತ್ತ ಕಾಲ ಕಳೆಯಬಹುದು. ಮೂರುಹೊತ್ತು ನನಗೆ ಬೇಕಾಗುವ ಡಯಾಬಿಟಿಕ್ ಫುಡ್ ಕೂಡ ಇದೆ. ನನ್ನ ಕೈಕಾಲು ಗಟ್ಟಿಯಿರುವಾಗಲೇ ನೀವುಗಳು ನನ್ನನ್ನು ತಾತ್ಸಾರ ಮಾಡಿದ್ರಿ. ಇನ್ನು ನನಗೇನಾದ್ರೂ ಕಾಯಿಲೆ ಬಂದರೆ ಯಾರಿದ್ದಾರೆ ನನ್ನನ್ನು ವಿಚಾರಿಸಿಕೊಳ್ಳುವವರು, ನೋಡಿಕೊಳ್ಳುವವರು? ಅಲ್ಲಿ ತೊಂಬತ್ತು ವರ್ಷ ದಾಟಿದ, ಬೆಡ್ ರಿಡನ್ ಆಗಿ ಹಾಸಿಗೆಯಲ್ಲೆ ಮಲಮೂತ್ರ ಮಾಡಿಕೊಳ್ಳುವ ವೃದ್ಧರೂ ಇದ್ದಾರೆ. ಅವರನ್ನು ನೋಡಿಕೊಳ್ಳಲು ನರ್ಸ್ಗಳಿದ್ದಾರೆ. ಮುಖ್ಯವಾಗಿ ನಾನು ನಿಮ್ಮಮ್ಮನ ಫೋಟೋ ಜೊತೆಗೆ ಮಾತಾಡಿದರೆ ಅಲ್ಲಿ ಯಾರೂ ನನಗೆ ತಲೆ ಸರಿ ಇಲ್ಲ ಅಂತ ಹೀಯಾಳಿಸುವವರಿಲ್ಲ” ಎಂದು ನೋವು ತುಂಬಿದ ಕಂಗಳಿಂದ ಸೊಸೆಯತ್ತ ನೋಡಿದರು. ಅವಳ ಮುಖ ಕಪ್ಪಿಟ್ಟಿತ್ತು. ಮೊಮ್ಮಗ ಆರವ್ ಬಂದು ಅಜ್ಜನನ್ನು ಬಿಗಿಯಾಗಿ ಅಪ್ಪಿ “ಅಜ್ಜ, ಹೋಗ್ಬೇಡಿ” ಎಂದ. ನರಿಹರಿರಾಯರು ಮೊಮ್ಮಗನ ಕೆನ್ನೆಗಳ ಮೇಲಿನ ಕಂಬನಿ ಒರೆಸಿ “ಅಳಬೇಡ ಪುಟ್ಟ, ನಿನ್ನ ಅಪ್ಪ ಅಮ್ಮ ಕರ್ಕೊಂಡು ಬಂದ್ರೆ ಯಾವತ್ತಾದ್ರೂ ಬಂದು ನನ್ನನ್ನು ಭೇಟಿಯಾಗು” ಎಂದು ಒತ್ತರಿಸಿ ಬರುತ್ತಿದ್ದ ದುಃಖವನ್ನು ತಡೆದುಕೊಳ್ಳುತ್ತಲೇ ಹೇಳಿದರು. ಅಷ್ಟರಲ್ಲಿ ಅವರು ಬುಕ್ ಮಾಡಿದ್ದ ಕ್ಯಾಬ್ ಹೊರಗೆ ಬಂದು ನಿಂತಿತ್ತು.