ಹೊಟ್ಟೆಯೊಳಗೆ ಅದೆಷ್ಟು ಹೊತ್ತಿನಿಂದ ಅದೇನೇನಿತ್ತೋ, ಬಾಯಿಯನ್ನು ಅದೆಷ್ಟು ಹೊತ್ತಿನಿಂದ ತೊಳೆಯದೆ ಬಿಟ್ಟಿದ್ದರೋ. ಆ ದುರ್ವಾಸನೆಗೆ ಕ್ಷಣದಲ್ಲಿ ನನ್ನ ಹೊಟ್ಟೆಯೆಲ್ಲ ತೊಳೆಸಿಹೋಯಿತು. ನನ್ನ ಕಣ್ಣು, ಬಾಯಿ ಗಕ್ಕನೆ ಮುಚ್ಚಿಕೊಂಡವು. ಮಾಯದಂತೆ ಆ ಗಳಿಗೆಯಲ್ಲೂ ಸೌಜನ್ಯ ಜಾಗೃತಗೊಂಡು, ಮೂಗಿನತ್ತ ಮೇಲೆದ್ದ ಕೈಯನ್ನು ಅರ್ಧದಲ್ಲೇ ತಡೆದು ನಿಲ್ಲಿಸಿತು. ಕಣ್ಣು ತೆರೆದರೆ ಸ್ಟೌವ್ ಮುಂದೆ ನಿಂತ ಆಕೆ ಹಾಲಿನ ಪಾತ್ರೆಯನ್ನು ಮೇಲೆತ್ತಿ ಬಾಯಿಯ ಹತ್ತಿರ ಕೊಂಡೊಯ್ಯುತ್ತಿದ್ದರು. ಅದಕ್ಕೆ ಮತ್ತೆರಡು ಸಲ ಪೂ ಫೂ… ಉಫ್ ಉಫ್ ಎಂದು ಊದಿ. ಪುಟ್ಟ ಪಾತ್ರೆಗೆ ಇನ್ನಷ್ಟು ಹಾಲು ಸುರಿದುಕೊಂಡರು. ಹಾಲಿನ ಪಾತ್ರೆಯನ್ನು ಫ್ರಿಜ್ಗೆ ಸೇರಿಸಲು ಇತ್ತ ಹೊರಳಿದ ಅವರ ಮುಖದಲ್ಲಿ ತೆಳ್ಳನೆಯ ನಗೆಯಿತ್ತು. ಅದಕ್ಕೆ ಹೆಮ್ಮೆಯ ಲೇಪವಿತ್ತು. ಸಣ್ಣಗೇನೋ ಗುನುಗಿಕೊಳ್ಳುತ್ತ ಸ್ಟೌವ್ ಹಚ್ಚಿ ಹಿಡಿಕೆಯ ಪುಟ್ಟ ಪಾತ್ರೆಯನ್ನು ಅದರ ಮೇಲಿರಿಸಿದರು. ಬಿಸಿ ಜಾಸ್ತಿ ಬೇಡ ಅಲ್ವಾ ಇವರೇ? ತುಂಬಾ ಸೆಖೆ ನೋಡಿ. ಒಂಚೂರು ಬೆಚ್ಚಗಾದ್ರೆ ಸಾಕಲ್ವಾ? ಎಂದರು.
ನನ್ನಿಂದ ಉತ್ತರ ಹೊರಡಲಿಲ್ಲ.
ತಟ್ಟೆಗೆ ಮೂರು ದೋಸೆಗಳನ್ನು ಹಾಕಿ ಕಿಚನ್ನತ್ತ ಓಡಿದ ಲಲಿತೆ ಎರಡು ಕ್ಷಣಗಳಲ್ಲಿ ನನ್ನ ಮುಂದೆ ಬಂದು ನಿಂತಾಗ ಕೈಯಲ್ಲಿ ಚಟ್ನಿಯ ಪಾತ್ರೆಯಿತ್ತು. ಮಿಕ್ಸಿ ಗರಗರ ತಿರುಗಿದ್ದು ನಾನು ಸ್ನಾನದ ಮನೆಯಲ್ಲಿದ್ದಾಗ ಇರಬೇಕು. ಅವಳು ಮಾಡಿದ್ದ ತೆಂಗಿನಕಾಯಿ ಚಟ್ನಿಯ ಪರಿಮಳ ಮೂಗಿಗೇರಿ ಆಸೆ ಹುಟ್ಟಿಸಿದರೂ ಸನ್ನಿವೇಶ ಎಚ್ಚರಿಸಿತು.
“ಚಟ್ನಿ ಬೇಡ, ಉಪ್ಪಿನಕಾಯಿ ಹಾಕು ಸಾಕು” ಎಂದೆ ಮೆಲ್ಲಗೆ. ಅವಳು ಸಿಡಿದಳು.
“ಪುಟ್ಟೀನೂ ಚಟ್ನಿ ಬೇಡ ಅಂತ ಚಟ್ನಿಪುಡೀಲಿ ತಿಂದುಹೋದ್ಲು. ಈಗ ನೀವೂ ಬೇಡ ಅಂದ್ರೆ ಹೇಗೆ? ಮಾಡಿರೋ ಚಟ್ನೀನ ಏನು ಮಾಡ್ಲಿ? ತಲೆಗೆ ಹಚ್ಕೊಳ್ಳಲಾ?”
ಅವಳ ಕಣ್ಣುಗಳಲ್ಲಿ ಸಿಟ್ಟುಲೇಪಿತ ಬೇಸರ.
ಅವಳ ಸಮಸ್ಯೆ ನನಗೆ ಅರ್ಥವೇನೋ ಆಯಿತು. ಆದರೆ ನನಗೆ ನನ್ನದೇ ಆದ ಸಮಸ್ಯೆಯಿದೆ. ಅದು ಅವಳಿಗೆ ತಿಳಿಯದ್ದೇನೂ ಅಲ್ಲ. ಇಂದೇಕೋ ಮರೆತಿದ್ದಾಳೆ.
“ನಿಂಗೆ ಗೊತ್ತಲ್ವಾ ಚಿನ್ನು, ಇತ್ತೀಚೆಗೆ ಬೆಳಗ್ಗೆ ಬೆಳಗ್ಗೇನೆ ತೆಂಗಿನಕಾಯಿ ಚಟ್ನಿ ತಿಂದ್ರೆ ನಂಗೆ ತೇಗು ತುಂಬಾ ಬರುತ್ತೆ. ಈವತ್ತು ಹನ್ನೊಂದು ಗಂಟೆಗೆ ಫ್ಯಾಕಲ್ಟಿ ಮೀಟಿಂಗ್ ಇದೆಯಲ್ಲ, ಅಲ್ಲಿ ನಾನು ಮತ್ತೆಮತ್ತೆ ತೇಗಿದ್ರೆ ಚಂದ ಅನಿಸಲ್ಲ ಅಲ್ವಾ? ಕೆಟ್ಟ ಸದ್ದು, ವಾಸನೆ. ನನಗೂ ಮುಜುಗರ, ಉಳಿದೋರಿಗೂ ಅಸಹ್ಯ” – ತಟ್ಟೆಯ ಮೇಲೆ ಕಿರಿದು ಕಣ್ಣು ಹೂಡಿ ಸಮಾಧಾನದ ದನಿಯಲ್ಲೇ ಮೆಲ್ಲಗೆ ಹೇಳಿದೆ. ಅವಳಿಂದ ಪ್ರತಿಕ್ರಿಯೆ ಬರಲಿಲ್ಲ. ತಲೆಯೆತ್ತಿದೆ.
ಲಲಿತೆ ಚಟ್ನಿಯ ಪಾತ್ರೆ ಹಿಡಿದಂತೆ ಗೊಂಬೆಯಂತೆ ನಿಂತುಬಿಟ್ಟಿದ್ದಳು. ಕಣ್ಣುಗಳಲ್ಲಿ ಪಶ್ಚಾತ್ತಾಪ. “ಬೇಜಾರು ಮಾಡ್ಕೋಬೇಡಿ. ನಂಗೆ ಮರ್ತುಹೋಯ್ತೂರೀ. ಆ ಮಠಪತಿ ತಿಂಗಳಿಂದ್ಲೂ ಬರೀ ಎಳಸು ಕಾಯಿಗಳನ್ನೇ ಕೊಡ್ತಿದ್ದ. ಸಾರಿಗೆ, ಪಲ್ಯಕ್ಕೆ ಹಾಕೋದಷ್ಟೆ. ಚಟ್ನಿಗಂತೂ ಆಗಲ್ಲ. ಬೈದ ಮೇಲೆ ನಿನ್ನೆ ನಾಕು ಬಲಿತ ಕಾಯಿ ತಂದುಕೊಟ್ಟಿದಾನೆ. ತುಂಬಾ ದಿನ ಆದಮೇಲೆ ಒಳ್ಳೇ ತೆಂಗಿನಕಾಯಿ ಸಿಕ್ಕಿದೆ ಅಂತ ಖುಷೀಲಿ ಒಂದೆಸಳು ಕೊತ್ತಂಬರಿ ಸೊಪ್ಪು, ಜತೆಗೆ ನಾಕೆಲೆ ಪುದೀನಾನೂ ಹಾಕಿ ಚಟ್ನಿ ಮಾಡಿದೆ. ಹಸಿಮೆಣಸಿನಕಾಯಿ ಬೇರೆ ಫ್ರೆಶ್ ಸಿಕ್ಕಿತ್ತೂರೀ. ಎಷ್ಟು ಗಮಗಮಾ ಅಂತಿದೆ ನೀವೇ ನೋಡಿ. ಅವಳು ತಿನ್ಲಿಲ್ಲ, ನೀವೂ ಬೇಡ ಅಂದ್ರಿ. ಅದ್ಕೆ ಒಂಥರಾ ಆಯ್ತೂರಿ. ನೀವೇ ಹೇಳಿ, ಎಲ್ಲನೂ ನಾನು ತಿನ್ನೋಕಾಗುತ್ತಾ? ತೆಂಗಿನಕಾಯಿ ಚಟ್ನಿ ಫ್ರಿಜ್ನಲ್ಲಿಟ್ರೂ ಮಧ್ಯಾಹ್ನಕ್ಕೆಲ್ಲ ಹುಳಿವಾಸನೆ ಬಂದುಬಿಡುತ್ತೆ. ಆಸೆಯಿಂದ ಮಾಡಿದ್ದು ವೇಸ್ಟ್ ಆಗಿಬಿಟ್ರೆ ಹೇಗೇರೀ? ಅದಕ್ಕೆ ಬೇಜಾರಾಗಿ ರೇಗಿಬಿಟ್ಟೆ.” ಸಣ್ಣಗೆ ದನಿ ಹೊರಡಿಸಿದಳು. ಮತ್ತೊಮ್ಮೆ “ಬೇಜಾರು ಮಾಡ್ಕೋಬೇಡಿ ಪ್ಲೀಸ್” ಅಂದಳು. ಪಾಪ ಅನಿಸಿತು. “ಬೇಜಾರೇನೂ ಇಲ್ಲ ಬಿಡು ಚಿನ್ನು. ನೀನು ತಿನ್ನೋವಷ್ಟು ತಿಂದು ಉಳಿದದ್ದನ್ನೆಲ್ಲ ಫ್ರೀಜರ್ನಲ್ಲಿಡು, ಕೆಡೋದಿಲ್ಲ. ರಾತ್ರಿ ಊಟಕ್ಕೆ ಅರ್ಧ ಗಂಟೆ ಮೊದ್ಲು ಹೊರಗೆ ತೆಗೆದಿಡು. ನಾನು ಅನ್ನದ ಜತೆ ತಿನ್ತೀನಿ” ಅಂದೆ, ಸಮಾಧಾನಿಸುವ, ಸಮಸ್ಯೆ ಬಗೆಹರಿಸುವ ದನಿಯಲ್ಲಿ. ಅವಳು ತಲೆ ಅಲುಗಿಸಿಬಿಟ್ಟಳು. “ಅಯ್ ಬಿಡ್ರೀ. ರಾತ್ರಿ ನಿಮಗೆ ಬಿಸಿ ಅನ್ನಕ್ಕೆ ತಂಗಳು ಚಟ್ನಿ ಕೊಡ್ಲಾ! ನನ್ನ ಮನಸ್ಸು ತಡೆಯುತ್ತಾ? ಹೋಗ್ರಿಹೋಗ್ರಿ! ಈವತ್ತು ಇಷ್ಟು ಚಟ್ನಿ ಮಾಡಿದ್ದು ನನ್ನ ತಪ್ಪು, ಸ್ವಯಂಕೃತಾಪರಾಧ. ಹೇಗೋ ಸರಿಮಾಡ್ತೀನಿ ಬಿಡಿ” ಅಂದವಳು ಕಿಚನ್ಗೆ ಓಡಿಹೋಗಿ ಚಟ್ನಿಪುಡಿ, ತುಪ್ಪದ ಡಬ್ಬ ಹಿಡಿದು ಬಂದಳು. ಎರಡು ಚಮಚ ಪುಡಿಯ ಮೇಲೆ ಒಂದು ದೊಡ್ಡ ಚಮಚ ತುಪ್ಪ ಹಾಕಿ, “ನಿಧಾನವಾಗಿ ತಿನ್ನಿ. ಈವತ್ತು ನಿಮಗೆ ಕ್ಲಾಸ್ ಇರೋದು ಹತ್ತು ಗಂಟೆಗಲ್ವಾ? ತುಂಬಾ ಹೊತ್ತಿದೆ” ಎನ್ನುತ್ತ ಉಪಚರಿಸಿದಳು. ಇನ್ನೊಂದು ದೋಸೆ ಹಿಡಿದು ಬಂದವಳನ್ನು ಬೇಡವೆಂದು ತಡೆದೆ. ಕಿಚನ್ಗೆ ಹಿಂತಿರುಗಿದವಳು ಎರಡು ಕ್ಷಣದಲ್ಲಿ ವಾಪಸ್ಸಾದಳು. “ಸ್ವಲ್ಪವೇ ಸ್ವಲ್ಪ ಚಟ್ನಿ ಹಾಕ್ತೀನೀರೀ. ನೀವು ಒಂಚೂರಾದ್ರೂ ಟೇಸ್ಟ್ ನೋಡಿದ್ರೆ ನಂಗೆ ಸಮಾಧಾನಾರೀ. ಅರ್ಧ ಚಮಚ ಹಾಕಲಾ? ಅಥವಾ ಕಾಲು ಚಮಚ? ಒಂದು ಚುಟ್ಕೀ?” ಅಂದಳು ಗೋಗರೆಯುವ ದನಿಯಲ್ಲಿ. ನಗುತ್ತ ಹ್ಞೂಂಗುಟ್ಟಿದೆ. ಮುಖ ಅರಳಿಸಿಕೊಂಡು ಕಿಚನ್ಗೆ ಓಡಿಹೋಗಿ ಚಟ್ನಿಯ ಪಾತ್ರೆ ಹಿಡಿದು ಬಂದಳು.
ಮೂರನೆಯ ದೋಸೆ ಮುಗಿಯುತ್ತ ಬಂದರೂ ಕಾಫಿಯ ಪರಿಮಳ ಇತ್ತ ಬರಲಿಲ್ಲ. ಎಡಕ್ಕೆ ತಿರುಗಿ ಕೊರಳು ಉದ್ದ ಮಾಡಿದೆ. ಲಲಿತೆ ಹಾಲಿನ ಪಾತ್ರೆಗೆ ಅಗಲ ಚಮಚ ಹೂಡಿ ಕೆನೆ ಎತ್ತಿ ಡಬ್ಬವೊಂದಕ್ಕೆ ಹಾಕುತ್ತಿದ್ದಳು. ಅವಳು ಮಾಡುವ ಘಮಘಮಿಸುವ ತುಪ್ಪಕ್ಕೆ ಮೂಲವಸ್ತು ಅದು.
ಕೈ ತೊಳೆದು ಕಿಚನ್ಗೆ ಹೋಗಿ ಅವಳ ಹಿಂದೆ ನಿಂತೆ. ಕಾಫಿ ತಯಾರಾಗುವವರೆಗೂ ಅವಳ ಜಡೆಯೊಂದಿಗೆ ಆಟವಾಡುತ್ತಿದ್ದೆ. ಅವಳು ಸದ್ದಿಲ್ಲದೆ ನಗುತ್ತಿದ್ದಳು.
ಪುಟ್ಟಿ ಬೆಳೆಯುತ್ತಿದ್ದಾಳೆ. ಅವಳು ಶಾಲೆಗೆ ಹೋದಾಗಷ್ಟೇ ಇಂತಹ ಸಣ್ಣಸಣ್ಣ ಆಸೆಗಳ ನಿರಾತಂಕ ಹೊರಹೊಮ್ಮುವಿಕೆಗೆ ಸೂಕ್ತ ಸಮಯ.
* * *
ಸ್ಟ್ಯಾಫ್ ಕ್ವಾರ್ಟರ್ಸ್ನಿಂದ ಡಿಪಾರ್ಟ್ಮೆಂಟ್ಗೆ ಹತ್ತು-ಹನ್ನೆರಡು ನಿಮಿಷದ ನಡಿಗೆ. ಇಂದು ನನಗೆ ಫಸ್ಟ್ ಅವರ್ ಬಿಡುವಿದ್ದುದರಿಂದ ವಿರಾಮವಾಗಿಯೇ ನಡೆದು ಹೋದೆ.
ಡಿಪಾರ್ಟ್ಮೆಂಟ್ ತಲಪಿದಾಗ ಅಂದಿನ ಮೀಟಿಂಗ್ ಕ್ಯಾನ್ಸಲ್ ಆಗಿದೆಯೆಂದು ತಿಳಿಯಿತು. ಅದನ್ನು ಹೇಳಿದ ಆಫೀಸ್ ಮ್ಯಾನೇಜರ್ ನವೀನ್ ಹೆಚ್ಓಡಿ ಅಂದು ರಜೆ ಹಾಕಿದ್ದಾರೆ ಅಂತಲೂ ಹೇಳಿದರು. “ಇದ್ದಕ್ಕಿದ್ದ ಹಾಗೆ ರಜೆ! ಆರಾಮ ಇದಾರೆ ತಾನೆ?” ಎಂದೆ. “ಏನೊ ಗೊತ್ತಿಲ್ಲ ಸರ್. ಒಂಬತ್ತೂಕಾಲಿಗೆ ಕಾಲ್ ಮಾಡಿ ರಜಾ ತಗೋತೀನಿ ಅಂದ್ರು. ಹೆಚ್ಚಿಗೇನೂ ಹೇಳ್ಲಿಲ್ಲ” ಎಂಬ ಉತ್ತರ ಬಂತು. ಒಳ್ಳೆಯದಾಯಿತು ಎಂದುಕೊಳ್ಳುತ್ತ ನನ್ನ ಛೇಂಬರ್ನತ್ತ ನಡೆದೆ. ಆಗಿರುವುದು ಒಳ್ಳೆಯದೇನಲ್ಲ ಎಂದು ಕೆಲವೇ ನಿಮಿಷಗಳಲ್ಲಿ ಗೊತ್ತಾಯಿತು.
ಸಹೋದ್ಯೋಗಿ ಅಲಮೇಲು ಪಿಸುದನಿಯಲ್ಲಿ ಅರುಹಿದ ವಿಷಯದ ಪ್ರಕಾರ ಹೆಚ್ಓಡಿ ಪ್ರೊ. ರಾಘವೇಂದ್ರ ತಮ್ಮ ಹೊಸ ಪ್ರಕಟಣೆಯೆಂದು ನಿನ್ನೆ ಬೆಳಗ್ಗೆ ನಮಗೆಲ್ಲ್ಲ ಹೆಮ್ಮೆಯಿಂದ ತೋರಿಸಿದ ಪುಸ್ತಕ ಸಾರಾಸಗಟು ಕೃತಿಚೌರ್ಯವಂತೆ! ಯುವ ಲೇಖಕಿಯೊಬ್ಬಳು ಶರಣ ಸಾಹಿತ್ಯದ ಬಗ್ಗೆ ತಾನು ಬರೆದ ಪುಸ್ತಕದ ಹಸ್ತಪ್ರತಿಯನ್ನು ಸ್ವಲ್ಪ ನೋಡಿ ಎಂದು ಇವರಿಗೆ ಕೊಟ್ಟಿದ್ದಳಂತೆ. ಈ ಆಸಾಮಿ ಅದನ್ನು ತಮ್ಮ ಹೆಸರಿನಲ್ಲಿ ಪ್ರಕಟಿಸಿಕೊಂಡು, ‘ನಿಮ್ಮ ಕೃತಿ ನನಗೆ ತುಂಬ ಇಷ್ಟವಾಯಿತು. ಹೀಗಾಗಿ ಅದನ್ನು ನನ್ನ ಹೆಸರಿನಲ್ಲೇ ಪ್ರಕಟಿಸಿಕೊಂಡುಬಿಟ್ಟೆ. ಬೇಸರ ಮಾಡಿಕೊಳ್ಳಬೇಡಿ’ ಎಂದಾಕೆಗೆ ವಾಟ್ಸ್ಆಪ್ನಲ್ಲಿ ಮೆಸೇಜ್ ಕಳಿಸಿದರಂತೆ. ಆಯಮ್ಮ ಕಿಡಿಕಿಡಿಯಾಗಿ ಇವರನ್ನು ತರಾಟೆಗೆ ತೆಗೆದುಕೊಂಡದ್ದಲ್ಲದೆ, ಇಲ್ಲಿಗೆ ಬಂದು ಇವರ ಛೇಂಬರ್ನೊಳಗೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳಂತೆ. ಹೆದರಿದ ಹೆಚ್ಓಡಿ ಸಾಹೇಬರು ನಿನ್ನೆ ಸಂಜೆಯಿಂದ ಯಾರಿಗೂ ಮುಖ ತೋರಿಸಿಲ್ಲವಂತೆ.
ಪ್ರೊ. ರಾಘವೇಂದ್ರ ಕರ್ನಾಟಕದ ಭಕ್ತಿಸಾಹಿತ್ಯದಲ್ಲಿ ಸ್ವತಃ ದೊಡ್ಡ ವಿದ್ವಾಂಸರು. ಆ ಅಧ್ಯಯನ ಕ್ಷೇತ್ರದಲ್ಲಿ ಅವರ ಸಾಧನೆ ಗಮನಾರ್ಹ. ಇಷ್ಟಾಗಿಯೂ ಅವರದು ಅಷ್ಟೇನೂ ಶುದ್ಧವಲ್ಲದ ಕೈ ಎನ್ನುವುದು ಯೂನಿವರ್ಸಿಟಿಯಲ್ಲಿ, ಹೊರಗೆ ಹಲವರಿಗೆ ಗೊತ್ತಿರುವ ವಿಷಯವೇ. ವಿದ್ಯಾರ್ಥಿಗಳು ಬರೆದು ತಂದು ತೋರಿಸಿದ ಕವನಗಳನ್ನು ತಮ್ಮ ಹೆಸರಿನಲ್ಲಿ ಪತ್ರಿಕೆಗಳಿಗೆ ಕಳುಹಿಸಿ ಪ್ರಕಟಿಸಿಕೊಂಡಿದ್ದಾರೆ ಎಂಬ ಆಪಾದನೆಗಳನ್ನು ಹಲವರಿಂದ ಕೇಳಿದ್ದೇನೆ. ಒಮ್ಮೆಯಂತೂ ಅವರ ಪಿಎಚ್ಡಿ ವಿದ್ಯಾರ್ಥಿಯೊಬ್ಬ ಮುದ್ರಿತ ಕವನವನ್ನು ನನ್ನ ಮುಂದೆ ಹಿಡಿದು ಅದರ ಕೊನೆಯ ಸಾಲಿನ ಹೊರತಾಗಿ ಉಳಿದದ್ದೆಲ್ಲವೂ ತನ್ನದು ಎಂದು ಮುಖ ಬಾಡಿಸಿಕೊಂಡು ಹೇಳಿದ್ದ. ‘ವಿಷಯ ದೊಡ್ಡದು ಮಾಡಲು ಹೆದರಿಕೆ, ನನ್ನ ಪಿಎಚ್ಡಿಗೆ ಕಲ್ಲು ಬೀಳುತ್ತದೆ’ ಎಂದು ಕಣ್ಣಲ್ಲಿ ನೀರು ತಂದುಕೊಂಡಿದ್ದ. ನನಗವನ ನಿರಾಸೆ, ನಿಸ್ಸಹಾಯಕತೆ ಬಗ್ಗೆ ನೋವಾಗಿತ್ತು. ಆದರೆ ಆ ಬಗ್ಗೆ ಏನೂ ಮಾಡಲಾಗದ ನನ್ನ ಅಸಹಾಯಕತೆಯೂ ನನ್ನೆದೆಗೆ ಈಟಿಯಂತೆ ಇರಿದಿತ್ತು. ‘ಇಂಥಾದ್ದು ಎಲ್ಲ ಕಡೆ ನಡೀತದೆ ಬಿಡಿ. ಅಕ್ಯಾಡೆಮಿಕ್ ಪರಿಸರದಲ್ಲಿ ಕೃತಿಚೌರ್ಯದ ಕೆಟ್ಟ ವಾಸನೆ ಹರಡೋರಿಗೆ ಕೊರತೆ ಇಲ್ಲ. ಇದು ತಪ್ಪು ಅಂದ್ರೆ ನಮ್ಮ ಮಾತನ್ನು ಯಾರು ಕೇಳ್ತಾರೆ? ಇಂತಹದನ್ನು ನಾವು ಮಾಡಬಾರದು ಅಷ್ಟೇ. ಅದು ಮಾತ್ರ ನಮ್ಮ ಕೈಲಿರೋದು’ ಎಂದು ಹಿರಿಯ ಸಹೋದ್ಯೋಗಿ ಸೂರ್ಯನಾರಾಯಣಶಾಸ್ತ್ರಿ ಸಮಾಧಾನ ಹೇಳಿದ್ದರು.
ಆದರೆ ಈಗ ಇಡೀ ಪುಸ್ತಕವನ್ನು, ಅದೂ ತನ್ನ ಕೈ ಕೆಳಗಿರುವ ವಿದ್ಯಾರ್ಥಿಯಲ್ಲದ, ಯಾವ ಬಗೆಯಲ್ಲೂ ತನ್ನ ಹಿಡಿತದಲ್ಲಿಲ್ಲದ ಯುವ ಲೇಖಕಿಯೊಬ್ಬರದನ್ನು ಹೀಗೆ ತಮ್ಮ ಹೆಸರಿನಲ್ಲಿ ಪ್ರಕಟಿಸಿಕೊಳ್ಳುವುದು ತೀರಾ ಅಕ್ಷಮ್ಯ ಅಪರಾಧವೆನಿಸಿತು.
ಈ ಕುರಿತು ಶಾಸ್ತ್ರಿ ಏನು ಹೇಳಬಹುದು ಎಂದು ಕುತೂಹಲವಾಯಿತು. ಕ್ಲಾಸ್ ಮುಗಿಸಿದ ನಂತರ ಮಾತಾಡಬೇಕು ಅಂದುಕೊಂಡೆ.
ಮಹಾನ್ ಲೇಖಕರ ಆತ್ಮಕಥೆಗಳಲ್ಲಿ ದಾಖಲಾಗಿರುವ ವಿವರಗಳು ಅವರು ಬರಹಗಾರರಾಗಿ ಬೆಳೆದದ್ದರ ಅಧ್ಯಯನಕ್ಕೆ ಹೇಗೆ ಸಹಕಾರಿಯಾಗುತ್ತವೆ ಎನ್ನುವುದರ ಬಗ್ಗೆ ನಿನ್ನೆ ಪೀಠಿಕೆ ನೀಡಿದ್ದೆ. ಇಂದು ರಶಿಯನ್ ಸಾಹಿತಿ ಮ್ಯಾಕ್ಸಿಂ ಗಾರ್ಕಿಯ ಆತ್ಮಕಥೆಯ ಮೂರು ಸಂಪುಟಗಳಾದ “ಮೈ ಚೈಲ್ಡ್ಹುಡ್, ಮೈ ಅಪ್ರೆಂಟಿಸ್ಶಿಪ್, ಮೈ ಯೂನಿವರ್ಸಿಟಿಸ್”ಗಳ ಕುರಿತಾದ ಪಾಠವನ್ನು ಕೈಗೆತ್ತಿಕೊಳ್ಳಬೇಕಾಗಿತ್ತು. ಅದರ ವಿವರಗಳನ್ನು ಮನಸ್ಸಿನಲ್ಲಿ ಮತ್ತೊಮ್ಮೆ ಸರಿಯಾಗಿ ಜೋಡಿಸಿಕೊಳ್ಳುತ್ತ ಕ್ಲಾಸ್ರೂಂನತ್ತ ಹೆಜ್ಜೆಹಾಕಿದೆ.
“ನೀನು ನನ್ನ ಕೊರಳಿನಲ್ಲಿ ತೂಗಾಡುವ ಪದಕವೇನಲ್ಲ. ನಿನ್ನನ್ನು ನಾನು ಸಾಕಲಾಗದು. ಮನೆಯಿಂದ ಹೊರಗೆ ನಡೆ, ನಿನ್ನ ಬದುಕನ್ನು ನೀನೇ ಕಟ್ಟಿಕೋ” ಎಂದು ನಿರ್ದಯಿ ಆದರೆ ಬಡ ಹಾಗೂ ಅಸಹಾಯಕ ಅಜ್ಜ ಕಟುವಾಗಿ ಹೇಳಿದ್ದರಿಂದ ಆರಂಭಿಸಿ, ಹತ್ತು ವರ್ಷದ ಎಳೆಯ ಅಲೆಕ್ಸೀ ಮ್ಯಾಕ್ಸಿಮೋವಿಚ್ ಪೆಷ್ಕೋವ್ ಮನೆಯಿಂದ ಹೊರಬಿದ್ದು ಬೀದಿಯಲ್ಲಿ, ವೋಲ್ಗಾ ನದಿಯಲ್ಲಿ, ಅದರಲ್ಲಿ ಸಂಚರಿಸುವ ಸ್ಟೀಮರ್ನಲ್ಲಿ, ಅದರ ಕಿಚನ್ನಲ್ಲಿ, ಯಾವಯಾವುದೋ ಕಾರ್ಖಾನೆಗಳಲ್ಲಿ ಬದುಕು ಕಟ್ಟಿಕೊಂಡು ಮ್ಯಾಕ್ಸಿಂ ಗಾರ್ಕಿ ಎಂಬ ಜಗದ್ವಿಖ್ಯಾತ ಸಾಹಿತಿಯಾಗಿ ಬೆಳೆದದ್ದರ ಕೆಲವು ಚಿತ್ರಗಳು ಅವನ ಆತ್ಮಕಥೆಗಳಲ್ಲದೆ ಕಥೆಗಳಲ್ಲೂ ನಮಗೆ ದೊರೆಯುತ್ತವೆ ಎಂಬ ನನ್ನ ಉದಾಹರಣೆ ಸಹಿತ ಉಪನ್ಯಾಸ, ವಿದ್ಯಾರ್ಥಿಗಳ ಪ್ರಶ್ನೆಗಳು, ಅವುಗಳಿಗೆ ನನ್ನ ವಿವರಣೆಗಳಲ್ಲಿ, ನಡುವೆ ವಿದ್ಯಾರ್ಥಿಯೊಬ್ಬ ಪ್ರಶ್ನೆ ಕೇಳುವಾಗ ಮತ್ತೆಮತ್ತೆ “ಮ್ಯಾಕ್ಸಿಮಮ್ ಗಾರ್ಕಿ” ಅಂದದ್ದಕ್ಕೆ ಭುಗಿಲೆದ್ದ ನಗೆಯಲ್ಲಿ ಐವತ್ತು ನಿಮಿಷಗಳು ಐದು ನಿಮಿಷಗಳಂತೆ ಕಳೆದುಹೋದವು.
ಅದೇ ಗುಂಗಿನಲ್ಲಿ ಕ್ಲಾಸ್ರೂಂನಿಂದ ಹೊರಬಂದರೆ ಎದುರಿಗೆ ಕಾಣಿಸಿಕೊಂಡ ಕಿರಿಯ ಸಹೋದ್ಯೋಗಿ ರಿಜ್ವಾನ್ ಅಹಮದ್ “ಗುಡ್ ಮಾರ್ನಿಂಗ್ ಸರ್” ಎಂದು ಜೋರಾಗಿ ಹೇಳಿ, ಎರಡು ಹೆಜ್ಜೆ ಹತ್ತಿರ ಬಂದು ಸಣ್ಣದನಿಯಲ್ಲಿ “ನಾನು ನಮ್ಮ ಮುಂದಿನ ಹೆಚ್ಓಡಿ ಸಾಹೇಬರ ಜತೆ ಮಾತಾಡ್ತಿದೀನಿ ಅಲ್ವಾ?” ಎಂದು ತುಂಟನಗೆ ತುಳುಕಿಸಿದಾಗ ನಾನು ಗಕ್ಕನೆ ಈ ಲೋಕಕ್ಕೆ ಇಳಿದೆ. ರಿಜ್ವಾನ್ರಿಗೆ ಗುಡ್ ಮಾರ್ನಿಂಗ್ ಹೇಳಲೂ ಹೊಳೆಯಲಿಲ್ಲ. ಬದಲಿಗೆ ನಗು ಬಂತು.
ವಿಷಯ ಎಲ್ಲರಿಗೂ ತಿಳಿದುಹೋದಂತಿತ್ತು. ಕುಂದಗೋಳದ ಕಡೆಯ ಜಾಗೃತಿ ಕಲ್ಲೂರ ಎಂಬ ಆ ಯುವ ಲೇಖಕಿ ಘಾಟಿ ಹೆಂಗಸು, ಇಲ್ಲಿ ಬಂದು ಆತ್ಮಹತ್ಯೆಯೇನೂ ಮಾಡಿಕೊಳ್ಳುವುದಿಲ್ಲ, ಬದಲಿಗೆ ಪ್ರೊ. ರಾಘವೇಂದ್ರರಿಗೆ ಆತ್ಮಹತ್ಯೆಯ ದಾರಿ ತೋರಿಸುತ್ತಾಳೆ. ಅವರ ವಿರುದ್ಧ ಯೂನಿವರ್ಸಿಟಿಗೆ ಲಿಖಿತ ದೂರು ಸಲ್ಲಿಸುವುದಲ್ಲದೆ ಮಾಧ್ಯಮಗಳಲ್ಲಿ ದೊಡ್ಡದಾಗಿ ಸುದ್ದಿ ಮಾಡುತ್ತಾಳೆ, ಕೆಲವರು ಪತ್ರಕರ್ತರ ಜೊತೆ ಆಕೆಗೆ ಹತ್ತಿರದ ಸ್ನೇಹ ಇದೆ ಎಂದು ರಿಜ್ವಾನ್ ಹೇಳಿದರು. ಹೇಳುತ್ತ ಹೇಳುತ್ತ ನನ್ನ ಜೊತೆ ನನ್ನ ಛೇಂಬರ್ಗೆ ಬಂದರು. ತಿರುವಿನಲ್ಲಿ ಜತೆಗೂಡಿದ ಅಲಮೇಲು “ಹೆಚ್ಓಡಿ ಇಲ್ಲ, ಮೀಟಿಂಗ್ ಇಲ್ಲ. ತೊಂದರೆಯಿಲ್ಲ, ನಡೀರಿ ಸರ್, ನಿಮ್ಮ ಛೇಂಬರ್ನಲ್ಲೇ ಒಂದು ಅನ್ಅಫಿಷಿಯಲ್ ಫ್ಯಾಕಲ್ಟಿ ಮೀಟಿಂಗ್ ನಡೆಸಿಬಿಡೋಣ” ಎನ್ನುತ್ತ ಜೊತೆಗೂಡಿದರು. ಅಷ್ಟೇ ಅಲ್ಲ, ಡಿಪಾರ್ಟ್ಮೆಂಟ್ನಲ್ಲಿ ಹಾಜರಿದ್ದ ಇಬ್ಬರುಮೂವರಿಗೆ ಕರೆಮಾಡಿ ನನ್ನ ಛೇಂಬರ್ಗೆ ಬರುವಂತೆ ಹೇಳಿಯೂಬಿಟ್ಟರು.
ನನ್ನ ಛೇಂಬರ್ನಲ್ಲಿ ನಮ್ಮ ಅನಧಿಕೃತ ಸಭೆ ಆರಂಭವಾಯಿತು. ಮೊದಲು ಬಾಯಿತೆರೆದ ವಸಂತಕುಮಾರಿ “ಏನಾದ್ರೂ ತರಿಸಿ ಸರ್, ಹಸಿವಾಗ್ತಿದೆ” ಎಂದರು. ನಾನು ನಕ್ಕು, “ಆಯ್ತು, ಏನು ಬೇಕೋ ಕ್ಯಾಂಟೀನ್ಗೆ ಹೇಳಿಬಿಡಿ” ಎನ್ನುತ್ತ ನನ್ನ ಇಂಟರ್ಕಾಂ ಅನ್ನು ಅವರತ್ತ ಸರಿಸಿದೆ.
ನಾನು ತರಗತಿಯಲ್ಲಿಲ್ಲದ ಸಮಯದಲ್ಲಿ ಇವರೆಲ್ಲರ ನಡುವೆ ಬಿಡಿಬಿಡಿಯಾಗಿ ಮಾತುಕತೆ ನಡೆದಾಗಿತ್ತು ಎನ್ನುವುದು ಮಾತುಗಳು ಆರಂಭವಾದ ಬಗೆಯಲ್ಲೇ ನನ್ನ ಅರಿವಿಗೆ ಬಂತು.
ಇತ್ತೀಚೆಗೆ ಯೂನಿವರ್ಸಿಟಿಗಳ ಅಧ್ಯಾಪಕರುಗಳು ಎಸಗುವ ಕೃತಿಚೌರ್ಯದ ವಿಷಯದಲ್ಲಿ ಯುಜಿಸಿ ಮತ್ತು ಹೆಚ್ಆರ್ಡಿ ಮಿನಿಸ್ಟ್ರಿ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿವೆ. ಕೃತಿಚೌರ್ಯ ಸಾಬೀತಾದರೆ ಇವರು ತಕ್ಷಣ ಡಿಸ್ಮಿಸ್ ಆಗುತ್ತಾರೆ. ಆ ಅವಮಾನ ಬೇಡ ಅಂದರೆ ವಿಚಾರಣೆಗೂ ಮೊದಲೇ ತಾವಾಗಿಯೇ ರಾಜೀನಾಮೆ ಕೊಟ್ಟುಬಿಡುವುದೇ ದಾರಿ. ಒಟ್ಟಿನಲ್ಲಿ ನಮ್ಮ ಡಿಪಾರ್ಟ್ಮೆಂಟ್ನಲ್ಲಿ ಸದ್ಯದಲ್ಲೇ ಎಚ್ಓಡಿ ಸ್ಥಾನ ತೆರವಾಗುವುದು ಖಂಡಿತ. ನಿಧಾನವಾಗಿ ಇಷ್ಟು ಹೇಳಿದ ಸೂರ್ಯನಾರಾಯಣಶಾಸ್ತ್ರಿ ಎಲ್ಲರತ್ತಲೂ ಒಮ್ಮೆ ಕಣ್ಣಾಡಿಸಿ, ಕೊನೆಯಲ್ಲಿ ನನ್ನ ಮೇಲೆ ದೃಷ್ಟಿ ನೆಟ್ಟು ಅರ್ಥಗರ್ಭಿತವಾಗಿ ನಕ್ಕರು. ಉಳಿದವರೂ ನಗುತ್ತ ನನ್ನತ್ತ ನೋಡತೊಡಗಿದರು.
ಸೀನಿಯಾರಿಟಿ ಯಾದಿಯಲ್ಲಿ ಮುಂಚೂಣಿಯಲ್ಲಿರುವುದು ನಾನೇ. ಶಾಸ್ತ್ರಿ ನನಗಿಂತಲೂ ಹತ್ತು ವರ್ಷ ಹಿರಿಯರಾದರೂ ಈಗಾಗಲೇ ಒಮ್ಮೆ ಎಚ್ಓಡಿಯಾಗಿದ್ದದ್ದರಿಂದ ಅವರು ನನಗೆ ಪ್ರತಿಸ್ಪರ್ಧಿಯಲ್ಲ. ಆಗುವ ಇರಾದೆಯೂ ಅವರಿಗಿಲ್ಲ. ಅವರು ಎದುರುನೋಡುತ್ತಿರುವುದು ಡೀನ್ ಸ್ಥಾನವನ್ನು. ಅದಕ್ಕಾಗಿ ಸ್ವಲ್ಪ ಕಾಯಬೇಕಷ್ಟೆ.
ಮುಂದೊಮ್ಮೆ ನನಗೆ ಬರಲೇಬೇಕಾದ ಸ್ಥಾನ ಒಂದೋ ಒಂದೂಕಾಲು ವರ್ಷವೋ ಮೊದಲೇ ಬಂದರೆ ನನಗೆ ಖುಷಿಯೇ. ಆದರೆ ಅದು ಈ ಬಗೆಯಾಗಿ ಬರುವುದು ಸಂತಸಕರವೇನಲ್ಲ, ಸಂಭ್ರಮಿಸುವಂತಹದೂ ಅಲ್ಲ. ಪ್ರೊ. ರಾಘವೇಂದ್ರ ಮತ್ತಾವುದಾದರೂ ಉನ್ನತ ಸ್ಥಾನ ಪಡೆದು ಈ ಸ್ಥಾನ ತೆರವಾಗಿದ್ದಿದ್ದರೆ ನಾನದನ್ನು ಖುಷಿಯಿಂದಲೇ ಒಪ್ಪಿಕೊಳ್ಳುತ್ತಿದ್ದೆ. ಅದಾಗದಿದ್ದರೆ ಅವರ ಮೂರು ವರ್ಷಗಳ ಆವಧಿ ಪೂರ್ಣಗೊಳ್ಳುವವರೆಗೆ ನಾನು ತಾಳ್ಮೆಯಿಂದ ಕಾಯಬಲ್ಲೆ, ಕಾಯುತ್ತೇನೆ.
ಆದರೀಗ ಯಾವುದೂ ನನ್ನ ಕೈಯಲ್ಲಿಲ್ಲ. ರಾಘವೇಂದ್ರರದು ಸ್ವಯಂಕೃತಾಪರಾಧ. ಪರಿಣಾಮವನ್ನು ಅನುಭವಿಸಲೇಬೇಕು. ನಾನು ನನ್ನ ಹೆಗಲಿಗೆ ಬರುವ ಜವಾಬ್ದಾರಿಯನ್ನು ಒಪ್ಪಿಕೊಳ್ಳಲೇಬೇಕು.
ರಾಘವೇಂದ್ರರನ್ನು ಸಂಪರ್ಕಿಸಿ ಮಾತಾಡಿಸುವ ಬಗ್ಗೆ ನಮ್ಮಲ್ಲಿ ಮಾತಾಯಿತು. ಅದರ ಬಗ್ಗೆ ಅವರೆಲ್ಲರ ಒಟ್ಟಭಿಪ್ರಾಯ “ನೋ!” ಎಂದಾಗಿತ್ತು. ಕರೆಗೆ ಅವರು ಉತ್ತರಿಸುವುದಿಲ್ಲ, ಉತ್ತರಿಸಿದರೆ ನಾವು ಏನು ಹೇಳಬಹುದು? ಅವರ ಘನಂದಾರಿ ಕಾರ್ಯಕ್ಕೆ ಅಭಿನಂದಿಸುವುದಾ, ಬೈಯುವುದಾ? ಅಥವಾ ಅವರ ವೃತ್ತಿಜೀವನದಲ್ಲಿ ಮುಂದಾಗಲಿರುವ ಅನಾಹುತದ ಬಗ್ಗೆ ಸಂತಾಪ ಸೂಚಿಸುವುದಾ? ಇವು ಪಕೋಡದ ಅಗಿತ ಮತ್ತು ಕಾಫಿಯ ಗುಟುಕುಗಳ ನಡುವೆ ನಮ್ಮನ್ನು ಕಾಡಿದ ಪ್ರಶ್ನೆಗಳು. ಆದರೂ ಸೌಜನ್ಯಕ್ಕಾದರೂ ಅವರ ಜತೆ ಒಮ್ಮೆ ಮಾತಾಡುವುದು ಒಳ್ಳೆಯದು ಎಂದು ನನಗನಿಸತೊಡಗಿತು. ಆದರೆ ಈ ಕುರಿತಾಗಿ ಇತರರೆಲ್ಲರ ನಕಾರಾತ್ಮಕ ಅಭಿಪ್ರಾಯ ಸಾಕಷು ಸ್ಪಷ್ಟವಾಗಿಯೇ ಬಂದಿದ್ದುದರಿಂದ ನನ್ನ ಆಲೋಚನೆಗಳನ್ನು ನನ್ನಲ್ಲೇ ಇಟ್ಟುಕೊಂಡೆ.
ಆಮೇಲೆ ಇನ್ನೂ ಏನೇನೋ ವಿಷಯಗಳು ಬಂದು ಹೋದವು. ಹಿಂದೆ ಹೀಗೇ ಮಾಡಿ ದಕ್ಕಿಸಿಕೊಂಡು ಈಗ ದೊಡ್ಡ ವ್ಯಕ್ತಿಗಳಾಗಿರುವ ಒಂದಿಬ್ಬರ ವಿಷಯವನ್ನು ನಾಗೇಶ್ ಹೇಳಿದರೆ, “ಇಲ್ಲ, ಈಗ ಕಾಲ ಬದಲಾಗಿದೆ, ಒರಿಜಿನಲ್ ಆಥರ್ ಬಳಿ ಹಸ್ತಪ್ರತಿ ಇಲ್ಲದಿದ್ದರೂ ಅದು ತನ್ನದೇ ಕೃತಿ ಅಂತ ಕೋರ್ಟ್ನಲ್ಲಿ ಸಾಬೀತು ಮಾಡೋದಕ್ಕೆ ಹಲವು ಮಾರ್ಗಗಳನ್ನು ಈಗಿನ ತಂತ್ರಜ್ಞಾನ ಅವರಿಗೆ ತೋರಿಸುತ್ತೆ. ಕಳ್ಳ ಬಚಾವಾಗೋಕೆ ಆಗಲ್ಲ” ಎಂದರು ಶಾಸ್ತ್ರಿ. ಕೊನೆಯಲ್ಲಿ “ಎಚ್ಓಡಿ ಈಗ ಮನೆಯಲ್ಲಿ ಕೂತು ಏನು ಮಾಡುತ್ತಿರಬಹುದು?” ಎಂದು ಅಲಮೇಲು ಎಲ್ಲರ ತಲೆಯೊಳಗೆ ಹುಳು ಬಿಟ್ಟರು. ಅದಕ್ಕೆ ಬರತೊಡಗಿದ್ದು ತಮಾಷೆಯ ಉತ್ತರಗಳೇ. ಒಟ್ಟಿನಲ್ಲಿ ರಾಘವೇಂದ್ರರ ಬಗ್ಗೆ ಅವರಾರಿಗೂ ಸದಭಿಪ್ರಾಯ ಇಲ್ಲವೆಂದು ಇದುವರೆಗೆ ಬೇರೆಬೇರೆಡೆ ಬಿಡಿಬಿಡಿಯಾಗಿ ವ್ಯಕ್ತವಾಗುತ್ತಿದ್ದ ವಿಷಯ ಈಗ ಒಂದೇ ಕಡೆ ಒಕ್ಕೊರಲಿನಲ್ಲಿ ಹೊರಬಂತು. ನಾನು ಎಂತಹ ಪರಿಸರದಲ್ಲಿ ಎಚ್ಓಡಿ ಆಗುತ್ತಿದ್ದೇನೆ, ನಾನು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು, ನನ್ನ ನಡೆನುಡಿಯಲ್ಲಿ ಆಗಬೇಕಾದ ಮಾರ್ಪಾಡುಗಳೇನು ಎನ್ನುವುದೂ ನನ್ನ ಅರಿವಿಗೆ ತಟ್ಟತೊಡಗಿತು.
ಪಕೋಡಾ ಮತ್ತು ಕಾಫಿ ಮುಗಿದ ಮೇಲೆ ಇತರರೆಲ್ಲರೂ ಎದ್ದುಹೋಗಿ ಉಳಿದದ್ದು ರಿಜ್ವಾನ್ ಮತ್ತು ಅಲಮೇಲು ಮಾತ್ರ. ನನ್ನ ಬಗ್ಗೆ ಇತರರಿಗಿಂತ ಹೆಚ್ಚು ಗೌರವ ಮತ್ತು ವಿಶ್ವಾಸ ತೋರುವ ಇವರಿಗೆ ನನ್ನ ಆಲೋಚನೆಗಳನ್ನು ಹೇಳಬೇಕೆನಿಸಿತು.
“ಅವರ ಸಹೋದ್ಯೋಗಿಗಳಾಗಿರುವ ತಪ್ಪಿಗೆ ನಾವೀಗ ಅವರನ್ನು ಮಾತಾಡಿಸುವುದು ಒಳ್ಳೆಯದು ಎಂದೆ. ಅಲಮೇಲುವಿನ ಉತ್ತರ ಬಾಣದಂತೆ ಬಂತು: ನಾನು ಮಾತಾಡಲ್ಲ. ನೀವೂ ಮಾತಾಡಬೇಡಿ. ದನಿ ಕಟುವಾಗಿತ್ತು. “ಕಾಲ್ ಮಾಡಿದ್ರೆ ಅವರು ತಗೊಳ್ಳಲ್ಲ ಸರ್. ರಾಡ್ರಿಗ್ಸ್ ಎರಡು ಸಲ ಟ್ರೈ ಮಾಡಿ ಆಯ್ತು” ಎಂದರು ರಿಜ್ವಾನ್ ತುಸು ನಿಧಾನಿಸಿ.
ಕರೆ ಮಾಡುವುದು ಸೂಕ್ತ ಎಂದು ನನಗೆ ತೋರುತ್ತಿರಲಿಲ್ಲ. ಮನೆಗೆ ಹೋಗಿ ಎದುರು ಕೂತು ಮಾತಾಡುವುದು ಸರಿ. ನಾನಾಗಿ ಏನೂ ಹೇಳದಿದ್ದರೂ ಅವರು ಹೇಳುವುದೇನಾದರೂ ಇದ್ದರೆ ಸುಮ್ಮನೆ ಅದಕ್ಕೆ ಕಿವಿಯಾದರೂ ಸಾಕು ಎಂದೆನಿಸತೊಡಗಿತು. ಇಬ್ಬರಿಗೂ ಅದನ್ನೇ ಹೇಳಿದೆ. ಅಲಮೇಲು ನನ್ನನ್ನೇ ದುರುಗುಟ್ಟಿಕೊಂಡು ನೋಡಿದರೆ, ರಿಜ್ವಾನ್ರ ಮುಖದಲ್ಲಿ ತುಂಟ ನಗೆ. ಕುತೂಹಲದಿಂದ ನೋಡಿದರೆ ಅವರ ನಗೆ ದೊಡ್ಡದಾಯಿತು. ಮಹಮದ್ ಆಲಿ ಜಿನ್ನಾ, ಅದೇ ಆ ಪಾಕಿಸ್ತಾನವನ್ನು ಸೃಷ್ಟಿಸಿದೋರು, ವರ್ಷ ಆಗೋದಕ್ಕೂ ಮೊದಲೇ ಜಡ್ಡು ಹಿಡಿದು ರಾಜಧಾನಿ ಬಿಟ್ಟು ಜಿಯಾರತ್ ಆರೋಗ್ಯಧಾಮ ಸೇರಿಕೊಂಡಾಗ ಅವರನ್ನು ನೋಡೋದಕ್ಕೆ ಪ್ರೈಮ್ ಮಿನಿಸ್ಟರ್ ಲಿಯಾಖತ್ ಆಲಿಖಾನ್ ಹೋದ್ರಂತೆ. ವಿಸಿಟ್ ಮುಗಿಸಿ ಅವರು ಅತ್ತ ಹೊರಟ ಕೂಡಲೇ ಇತ್ತ ಜಿನ್ನಾ ಸಾಹೇಬರು ತಮ್ಮ ಪಿಎಗೆ ಏನು ಹೇಳಿದ್ರು ಗೊತ್ತೇ? ‘ಈ ಮನುಷ್ಯ ಬಂದಿದ್ದುದು ನಾನು ಇನ್ನೆಷ್ಟು ದಿನ ಬದುಕ್ತೀನಿ, ಎಲ್ಲ ಅಧಿಕಾರ ತನ್ನ ಕೈಗೆ ಇನ್ನೆಷ್ಟು ದಿನದಲ್ಲಿ ಸಿಗಬೋದು ಅಂತ ತಿಳಕೊಳ್ಳೋದಿಕ್ಕೆ!’ ಅಂತ ಹೇಳಿದ್ರಂತೆ.” ರಿಜ್ವಾನ್ರ ನಗೆ ಸೂರು ತಟ್ಟಿತು. ನಾನೂ ತುಟಿಯರಳಿಸಿದೆ. “ಅಯ್, ಇದೇನ್ ಸಾರ್ ನೀವು ಹೇಳೋದು!” ಎನ್ನುತ್ತಲೇ ನಗತೊಡಗಿದರು ಅಲಮೇಲು. ಅವರ ಫೋನ್ ಹಾಡತೊಡಗಿತ್ತು.
ಕರೆ ಬಂದದ್ದು ವಸಂತಕುಮಾರಿಯವರಿಂದ. ಅವರು ಬಡಬಡ ಹೇಳತೊಡಗಿದ್ದು ಇಡೀ ಕೋಣೆಗೆ ಕೇಳುವಂತಿತ್ತು. “ಆಯಮ್ಮ ಇಲ್ಲಿಗೆ ಬಂದಿದಾಳೆ. ಬೆಳಗ್ಗೆ ಅವಳನ್ನು ಜಯಶ್ರೀ ಬಸ್ಸ್ಟ್ಯಾಂಡ್ನಲ್ಲಿ ನೋಡಿದ್ರಂತೆ.”
“ಹೌದಾ! ಅಂದ್ರೆ ಈಗಾಗ್ಲೇ ವಿಸಿನ ಮೀಟ್ ಮಾಡಿ ಆಗಿರುತ್ತೆ” – ಅಲಮೇಲುವಿನ ಪ್ರತಿಕ್ರಿಯೆ. ಅದಕ್ಕೆ ಉತ್ತರವಾಗಿ ವಸಂತಕುಮಾರಿ “ಇನ್ನೂ ಇಲ್ಲ. ನಾನು ಜಾನ್ಸೀನ ವಿಚಾರಿಸ್ದೆ. ಬಂದಿಲ್ಲ ಅಂದ್ರು. ಬಂದ್ರೆ ತಿಳಿಸ್ತೀನಿ ಅಂತನೂ ಹೇಳಿದ್ರು” ಅಂದರು.
ವಸಂತಕುಮಾರಿಯವರ ಸಂಪರ್ಕಜಾಲ ವಿಶಾಲವಾಗಿಯೇ ಇದೆ. ಅದರೊಳಗೆ ವಿಸಿಯವರ ಪಿಎ ಸಹಾ ಇದ್ದಾರೆ.
“ಮೈಸೂರು ಸಿಟಿಗೆ ಬಂದವಳು ಯೂನಿವರ್ಸಿಟಿಗೆ ಬಾರದಿರುತ್ತಾಳೆಯೇ?” ಎಂದು ನಕ್ಕು, ಮಾತು ಮುಗಿಸಿದರು ಅಲಮೇಲು.
ಜಾಗೃತಿ ಕಲ್ಲೂರ ಡಿಪಾರ್ಟ್ಮೆಂಟ್ಗೂ ಬಂದ ಹಾಗಿಲ್ಲ. ಈ ಊರಿನಲ್ಲಿರಬಹುದಾದ ಹಿತೈಷಿಗಳ ಜೊತೆ ಸಮಾಲೋಚನೆ ನಡೆಸುತ್ತಿರಬಹುದು. ಅದು ಮುಗಿದೊಡನೆ ರಾಘವೇಂದ್ರರನ್ನು ಹುಡುಕಿಕೊಂಡು ಡಿಪಾರ್ಟ್ಮೆಂಟ್ಗೆ ದಾಳಿಯಿಡುವುದು ಅಥವಾ ಅಹವಾಲು ಎತ್ತಿಕೊಂಡು ನೇರ ವಿಸಿಯವರ ಮುಂದೆ ಹೋಗಿ ನಿಲ್ಲುವುದು ಖಂಡಿತ.
ಇಷ್ಟು ಮಾತು ಮುಗಿಸಿ ರಿಜ್ವಾನ್ ಮತ್ತು ಅಲಮೇಲು ಹೊರಟರು. ಬಾಗಿಲನ್ನು ಅರ್ಧ ತೆರೆದು ನಿಂತ ಅಲಮೇಲು ಅಲ್ಲಿಂದಲೇ ಕೂಗಿ ಹೇಳಿದರು: “ಫೋನೂ ಮಾಡಬೇಡಿ, ಹುಡುಕ್ಕೊಂಡೂ ಹೋಗಬೇಡಿ. ತೆಪ್ಪಗೆ ಮನೆಗೆ ಹೋಗಿ ಗಡದ್ದಾಗಿ ಉಂಡು ಧೀಂರಂಗಾ ಅಂತ ಮಲಗಿಬಿಡಿ. ಇಲ್ಲಾಂದ್ರೆ ನಿಮ್ಮ ಫೋನು, ಕಾರ್ ಕೀ ಎರಡನ್ನೂ ಕಿತ್ತು ಇಟ್ಕೊಳ್ಳಿ ಅಂತ ಲಲಿತಕ್ಕನಿಗೆ ಹೇಳ್ತೀನಿ.” ಈ ಸಲ ನನ್ನ ನಗೆ ರಿಜ್ವಾನ್ರ ನಗೆಗಿಂತಲೂ ಜೋರಾಗಿತ್ತು.
ಅನಂತರ ನೆಲಸಿದ ಮೌನದಲ್ಲಿ ನಾನು ಯೋಚನೆಗೆ ಬಿದ್ದೆ.
ಸಂತ್ರಸ್ತೆ ವೇಗವಾಗಿ ಪ್ರತೀಕಾರಕ್ಕೆ ತೊಡಗಿದ್ದಾಳೆ. ರಾಘವೇಂದ್ರರ ಸಂಕಷ್ಟ ಆರಂಭವಾಗಿಹೋಗಿದೆ! ಸಹೋದ್ಯೋಗಿಯಾಗಿ ನಾನು ಒಂದಿಷ್ಟು ನಿರಪಾಯಕಾರಿ ಕೆಲಸಗಳನ್ನು ಮಾಡಲೇಬೇಕು. ರಾಘವೇಂದ್ರರನ್ನು ಭೇಟಿಯಾಗಿ, ಅವರು ಕೇಳುವ ಮನಃಸ್ಥಿತಿಯಲ್ಲಿದ್ದರೆ, ಎರಡು ಮಾತು ಹೇಳಬೇಕು. ಎನ್ಕ್ವಾಯರಿ, ಗಿನ್ಕ್ವಾಯರಿ ಅಂತ ಸಿಕ್ಕೊಂಡು ತಿಂಗಳುಗಟ್ಟಲೆ ಸುದ್ದಿಯಾಗಿ ಅವಮಾನ ಮಾಡಿಕೊಳ್ಳೋದು ಬೇಡ ಅಂತ ಒಂದಿಷ್ಟು ಬುದ್ಧಿಮಾತು ಹೇಳಬೇಕು. ತಪ್ಪು ಒಪ್ಪಿಕೊಂಡು, ಪುಸ್ತಕವನ್ನು ಮಾರುಕಟ್ಟೆಗೆ ಬಿಡದೆ, ಅದು ಮೂಲ ಲೇಖಕಿಯ ಹೆಸರಿನಲ್ಲೇ ಪ್ರಕಟವಾಗುವ ಹಾಗೆ ವ್ಯವಸ್ಥೆ ಮಾಡಿದರೆ ಸಮಸ್ಯೆಯ ತೀವ್ರತೆ ಕಡಮೆಯಾಗುವ ಸಾಧ್ಯತೆ ಇದೆಯೇ ಎಂದು ಪರಿಶೀಲಿಸಿ ಎಂದೂ ಹೇಳಬೇಕು. ಈ ವಿಷಯದಲ್ಲಿ ನನ್ನಿಂದೇನಾದ್ರೂ ಆಗಬಹುದೆ ಎಂದು ನಾನೂ ನೋಡುವುದು ಉತ್ತಮ. ಸಹೋದ್ಯೋಗಿಯಾಗಿ ಅಷ್ಟೂ ಮಾಡದಿದ್ದರೆ ಹೇಗೆ? ಕೊನೆಗೆ ಯಾವ ದಾರಿಯೂ ಇಲ್ಲವೆಂದರೆ ರಿಸೈನ್ ಮಾಡಿ ಅಂತ ನಾನೇನೂ ನೇರವಾಗಿ ಹೇಳುವುದು ಬೇಡ. ಹೆಚ್ಚು ಕಾಲ ಸುದ್ದಿಯಲ್ಲಿದ್ದಷ್ಟೂ ಹೆಸರಿಗೆ ಮಸಿ ಹತ್ತಿಕೊಳ್ಳುವ ಸಾಧ್ಯತೆ ಜಾಸ್ತಿಯಾಗುತ್ತಲೇ ಹೋಗುವ ಬಗ್ಗೆ ಹೇಳಿದರೆ ಸಾಕು, ರಾಜೀನಾಮೆ ಕೊಡುವ ನಿರ್ಧಾರವನ್ನು ಅವರೇ ಮಾಡುತ್ತಾರೆ!
ಇದೇ ಯೋಚನೆ ಮುಂದುವರಿದಂತೆ ಸಮಸ್ಯೆಯ ಇನ್ನೊಂದು ಮುಖ ಕಾಣಿಸತೊಡಗಿತು. ಜಾಗೃತಿ ಕಲ್ಲೂರ ಸರಿಯಾದ ವಕೀಲರನ್ನು ಹಿಡಿದು ಕ್ರಿಮಿನಲ್ ಕೇಸ್ ಹಾಕಿಬಿಟ್ಟರೆ ರಾಘವೇಂದ್ರರಿಗೆ ಜೈಲಾಗುವುದು ಶತಸ್ಸಿದ್ಧ.
ಈಗ ಮಾತ್ರ ಹನ್ನೊಂದು ವರ್ಷಗಳ ಸಹೋದ್ಯೋಗಿ ರಾಘವೇಂದ್ರರ ಬಗ್ಗೆ ನನಗೆ ಪಾಪ ಅನಿಸಿತು. ಶಾಸ್ತ್ರಿಯವರಿಗೆ ಕಾಲ್ ಮಾಡಿ ಹೇಳಿದರೆ ಅವರು, “ಇದ್ಯಾಕೆ ಬೇಕಿತ್ತು ಈ ಅಯೋಗ್ಯನಿಗೆ? ಅದೇನೋ ಗಾದೆ ಹೇಳ್ತಾರಲ್ಲ, ‘ಸುಮ್ಮನಿರಲಾರದ ಕೋಡಗ ಅದೇನನ್ನೋ ಕೆರಕೊಂಡು ಹುಣ್ಣು ಮಾಡ್ಕೊಂಡ್ತು’ ಅಂತಾರಲ್ಲ ಹಂಗಾಯ್ತು ನೋಡಿ. ಸ್ವಯಂಕೃತಾಪರಾಧ! ಅನುಭವಿಸಲಿ ಬಿಡಿ” ಅಂದುಬಿಟ್ಟರು.
ಇದೇ ಯೋಚನೆಯಲ್ಲಿ ಇಡೀ ಮಧ್ಯಾಹ್ನ ಕಳೆದುಹೋಯಿತು. ಇನ್ನೊಂದು ಕ್ಲಾಸ್ ಮುಗಿಸಿ ಬಂದಾಗಲೂ ನನ್ನಲ್ಲಿನ್ನೂ ಹ್ಯಾಮ್ಲೆಟ್ ಕಾಂಪ್ಲೆಕ್ಸ್, ರಾಘವೇಂದ್ರರನ್ನು ನೋಡಿ ಬರುವುದಾ, ಬೇಡವಾ ಅಂತ.
ಇನ್ನು ಆ ಜಾಗೃತಿ ಕಲ್ಲೂರ ಇತ್ತ ಡಿಪಾರ್ಟ್ಮೆಂಟ್ಗೂ ದಾಳಿಯಿಟ್ಟಿಲ್ಲ, ಅತ್ತ ವಿಸಿ ಆಫೀಸ್ನಲ್ಲೂ ಕಾಣಿಸಿಕೊಂಡಿಲ್ಲ. ಅದು ಯಾರ ಜೊತೆ ಅದೆಂತಹ ದೀರ್ಘ ಸಮಾಲೋಚನೆಯಲ್ಲಿ ತೊಡಗಿದ್ದಾಳೋ!
ಅಳೆದೂ ಸುರಿದೂ ಕೊನೆಗೆ ರಾಘವೇಂದ್ರರ ಮನೆಗೆ ಹೋದರೆ ನನಗೇನೂ ನಷ್ಟವಿಲ್ಲ, ಲಾಭದ ಲೆಕ್ಕವಂತೂ ನನ್ನಲ್ಲಿಲ್ಲ, ಹೋದರೆ ಸಹೋದ್ಯೋಗಿಗೆ ಅರೆಕ್ಷಣವಾದರೂ ಸಮಾಧಾನ ಅನಿಸಬಹುದು, ಹೋಗಿಯೇಬಿಡೋಣ – ಎಂದು ನಾನು ನಿರ್ಧರಿಸಿದಾಗ ಸಮಯ ಮೂರೂಕಾಲು.
ನನ್ನ ನಿರ್ಧಾರವನ್ನು ಯಾರಿಗೂ ಹೇಳಬೇಕೆನಿಸಲಿಲ್ಲ. ಯಾರಿಗೆ ಹೇಳಿದರೂ ಅಲಮೇಲುವಿಗೆ ಮಾತ್ರ ಹೇಳಬಾರದು. ಅವರಿಗೆ ಗೊತ್ತಾದರೆ ಖಂಡಿತಾ ತಡೆಯುತ್ತಾರೆ. ಅಡ್ಡಗಟ್ಟಿ ನಿಂತರೂ ನಿಂತರೇ. ಜೀವನಾನುಭವ ಕಡಮೆ. ಬದುಕಿನಲ್ಲಿ ನಮಗಿಷ್ಟವಿಲ್ಲದ ಕೆಲಸಗಳನ್ನೂ ಒಮ್ಮೊಮ್ಮೆ ನಮ್ಮದಲ್ಲ ಅಂದುಕೊಂಡು ಮಾಡಬೇಕಾಗುತ್ತದೆ ಎಂದು ಈ ಹುಡುಗಿಗೆ ಗೊತ್ತಿಲ್ಲ.
ಪ್ರೊ. ರಾಘವೇಂದ್ರ ನನ್ನ ಹಾಗೆ ಸ್ಟ್ಯಾಫ್ ಕ್ವಾರ್ಟರ್ಸ್ನಲ್ಲಿಲ್ಲ. ಇದೇ ಊರಿನವರಾದ ಅವರಿಗೆ ಪಿತ್ರಾರ್ಜಿತವಾದ ಭಾರಿ ಮನೆಯೇ ಇತ್ತು. ಅದು ಹಳೆಯ ಕಾಲದ್ದಾಯಿತು ಎಂದು ಹೆಂಡತಿ ಮಕ್ಕಳು ಗಲಾಟೆ ಮಾಡಿದ್ದರಿಂದ ಇತ್ತೀಚೆಗೆ ಅದನ್ನು ಕೆಡವಿಸಿ ಭರ್ಜರಿಯಾಗಿ ಹೊಸ ಮನೆ ಕಟ್ಟಿಸಿದ್ದಾರೆ. ಅದಕ್ಕೆ ಯೂನಿವರ್ಸಿಟಿಯಿಂದ ನಾಲ್ಕು ಕಿಲೋಮೀಟರ್ ದೂರ.
ಮನೆಗೆ ಹೋಗಿ ಕಾರ್ ತೆಗೆದುಕೊಂಡು ಹೊರಟೆ. ಕಣ್ಣರಳಿಸಿದ ಲಲಿತೆಗೆ ಏನೂ ಹೇಳಲಿಲ್ಲ. ಅದಕ್ಕೀಗ ಸಮಯವಿಲ್ಲ. ಮಾಮೂಲಾಗಿ ಮಾಡುವಂತೆ ದಿನದ ಪ್ರಸಂಗವೆಲ್ಲವನ್ನೂ ಸಂಜೆ ವಿವರವಾಗಿ ಹೇಳಿದರಾಯಿತು.
* * *
ಬಾಗಿಲು ತೆರೆದದ್ದು ರಾಘವೇಂದ್ರರ ಪತ್ನಿ ಸ್ವರ್ಣಾ. ನನಗೆ ಹೀಗೇ ಅಲ್ಲಿ ಇಲ್ಲಿ ನೋಡಿ ಪರಿಚಯ. ಒಂದೆರಡು ಸಲ ಬಿಟ್ಟರೆ ನೇರ ಮಾತಾಡಿಲ್ಲ.
ಆಕೆ ನಿದ್ದೆಯಿಂದ ಎದ್ದು ಬಂದಂತಿದ್ದರು. ಬಾಯಿಗೆ ಕೈ ಇಟ್ಟು ಆಕಳಿಕೆ ತಡೆಯುತ್ತಲೇ “ಬನ್ನೀ ಬನ್ನೀ” ಎನ್ನುತ್ತ ಬಾಗಿಲು ವಿಶಾಲವಾಗಿ ತೆರೆದರು. ನಾನು ಒಳಗೆ ಹೋಗಿ ಕೂತ ಮೇಲೆ, ಪ್ರೊಫೆಸರ್ ಸಾಹೇಬರು ಮನೆಯಲ್ಲಿಲ್ಲ ಎಂದು ಹೇಳಿದರು. ನನಗೆ ಅಚ್ಚರಿ. ಯೂನಿವರ್ಸಿಟಿಗೆ ಬಾರದೆ ಎತ್ತ ಹೋಗಿದ್ದಾರೆ? ಇವರೂ ಯಾರಾದರೂ ಲಾಯರನ್ನು ಹುಡುಕಿಕೊಂಡು ಹೋಗಿದ್ದಾರೆಯೇ?
“ಡಿಪಾರ್ಟ್ಮೆಂಟ್ಗೆ ಬರಲಿಲ್ಲವಲ್ಲ ಮತ್ತೆ, ಏನೂ ಸುದ್ದೀನೂ ಇಲ್ಲ. ನೋಡಿಕೊಂಡು ಹೊಗೋಣ ಅಂತ ಬಂದೆ ಅಷ್ಟೇ. ಅವರು ಬಂದಾಗ ಹೇಳಿಬಿಡಿ. ನಾನು ಹೊರಡ್ತೀನಿ” ಎನ್ನುತ್ತ ಎದ್ದು ನಿಂತೆ. “ಕೂತುಕೊಳ್ಳಿ, ಇನ್ನೇನು ಬಂದುಬಿಡ್ತಾರೆ” ಎಂದು ಆತುರದಲ್ಲಿ ಹೇಳಿ ಮತ್ತೊಮ್ಮೆ ಆಕಳಿಸಿದರು ಆಕೆ. ಬಾಯಿಗೆ ಕೈ ಅಡ್ಡ ಇಟ್ಟುಕೊಂಡೇ ಮಾತು ಹೊರಡಿಸಿದರು: “ಈವತ್ತು ಅವರಿಗೆ ಏನೇನೋ ಕೆಲಸ ಬಿದ್ಬಿಡ್ತು ನೋಡಿ. ಆ ಹುಡುಗಿ ಕಾಟ ಅತಿಯಾಯ್ತು. ಅದಕ್ಕೆ ಯೂನಿವರ್ಸಿಟಿಗೆ ರಜಾ ಹಾಕಿ ಓಡಾಡ್ತಿದಾರೆ.”
ನಾನು ಯೋಚಿಸುವ ಮೊದಲೇ “ಯಾವ ಹುಡುಗಿ?” ಎಂಬ ಪ್ರಶ್ನೆ ನನ್ನ ಬಾಯಿಯಿಂದ ಹೊರಟಿತ್ತು. ಎದ್ದು ನಿಂತಿದ್ದವನು ಗಕ್ಕನೆ ಕುಸಿದು ಕೂತಾಗಿತ್ತು.
ಸಂಭಾಳಿಸಿಕೊಂಡು “ಅದೇನು ಕಾಟ?” ಅಂದೆ ಸಣ್ಣಗೆ. ಆಕೆ ಎದುರು ಕೂತು ಇನ್ನೊಮ್ಮೆ ಆಕಳಿಸಿದರು. “ಅದೇ ಆ ಜಾಗೃತಿ, ಕುಂದಗೋಳದವಳು. ಗಂಡ ಬಿಟ್ಟ ಮೇಲೆ ಕಷ್ಟದಲ್ಲಿದ್ದಾಳೆ ಪಾಪ. ಒಳ್ಳೇ ಸ್ಕಾಲರ್ರು. ಶರಣಸಾಹಿತ್ಯವನ್ನು ಅರೆದು ಕುಡಿದಿದ್ದಾಳೆ. ಆದರೇನು ಪ್ರಯೋಜನ? ಒಂದು ನಿಶ್ಚಿತ ಉದ್ಯೋಗ ಅಂತ ಇಲ್ಲ ನೋಡಿ. ಆವಾಗಾವಾಗ ಕಷ್ಟ ಹೇಳ್ಕೊಳ್ತಾ ಇದ್ಲು. ನಿನ್ನೆ ಸಾಯಂಕಾಲವಂತೂ ಫೋನ್ನಲ್ಲಿ ಗೊಳೋ ಅಂತ ಅತ್ತುಬಿಟ್ಲು. ನಾನು ಎಷ್ಟು ದಿನದಿಂದ ನನ್ನ ಕಷ್ಟ ಹೇಳ್ಕೊಳ್ತಾ ಇದೀನಿ. ನೀವಂತೂ ಲೆಕ್ಕಕ್ಕೇ ತಗೊಳ್ತಿಲ್ಲ. ನಾನು ನಿಮ್ಮ ತಂಗೀನೋ ಮಗಳೋ ಆಗಿದ್ದಿದ್ರೆ ಹೀಗೆ ಮಾಡ್ತಿದ್ರಾ ಅಂತ ಕೂಗಾಡಿಬಿಟ್ಲು ಪಾಪ. ಇವ್ರು ದಂಗಾಗಿ ಒಂದರ್ಧ ಗಂಟೆ ಮಾತೇ ಇಲ್ದೇ ಕಲ್ಲಿನ ಹಾಗೆ ಕೂತುಬಿಟ್ರು. ಆಮೇಲೆ ಇಲ್ಲೇ ಆ ಪ್ರೈವೇಟ್ ಕಾಲೇಜ್ನಲ್ಲಿ ಅವಳಿಗೆ ಅಸಿಸ್ಟೆಂಟ್ ಪ್ರೊಫೆಸರ್ ಕೆಲಸದ ವ್ಯವಸ್ಥೆ ಮಾಡಿದ್ರು. ಪ್ರಿನ್ಸಿಪಾಲ್ ಇವರ ಸ್ಟೂಡೆಂಟೇ ಅಲ್ವೇ? ಇವ್ರು ಎಲ್ಲ ಅರೇಂಜ್ ಮಾಡಿ, ತಕ್ಷಣ ಹೊರಟು ಬಾ ಅಂತ ಅವಳಿಗೆ ಹೇಳಿದ್ರು. ಅವ್ಳು ಸಿಕ್ಕಿದ ಬಸ್ ಹತ್ಕೊಂಡು ಬೆಳಗ್ಗೆ ಓಡಿಬಂದ್ಲು. ಈಗ ಡ್ಯೂಟಿಗೆ ಜಾಯಿನ್ ಮಾಡಿಸೋಕೆ ಕರಕೊಂಡು ಹೋಗಿದಾರೆ. ಟೆಂಪೊರರಿ ಪೋಸ್ಟು. ಹೀಗೇ ಮಾಡ್ತಾ ಇರು, ನೆಕ್ಸ್ಟ್ ಪ್ಲಾನ್ನಲ್ಲಿ ನಮ್ಮ ಡಿಪಾರ್ಟ್ಮೆಂಟ್ಗೆ ಎರಡು ಅಸಿಸ್ಟೆಂಟ್ ಪ್ರೊಫೆಸರ್ ಪೋಸ್ಟ್ಗಳು ಸ್ಯಾಂಕ್ಷನ್ ಆಗ್ತವೆ. ಆಗ ನಿನ್ನನ್ನ ಪರ್ಮನೆಂಟ್ ಫ್ಯಾಕಲ್ಟಿಯಾಗಿ ತಗೋತೀನಿ ಅಂತ ಹೇಳಿದ್ದಾರೆ.”
ನನಗೆ ಉಸಿರು ಸಿಕ್ಕಿಕೊಂಡಿತು. ತೇಗು ಬರುವಂತೆನಿಸಿ ಮೇಲೆ ಬಾರದೆ ಎದೆಯಲ್ಲಿ ಗೊರಗೊರ ಸದ್ದಾಯಿತು.
“ಇವ್ರು ಎಂಥೋರು ಅಂತ ನಿಮಗೆ ಗೊತ್ತೇ ಇದೆ ಅಲ್ವಾ? ನಂಬಿದೋರನ್ನ ಎಂದಿಗೂ ಕೈ ಬಿಡೋರಲ್ಲ” – ಆಕೆ ಹೇಳುತ್ತಿದ್ದರು. ನಾನು ಸುಧಾರಿಸಿಕೊಳ್ಳಲು ಹೆಣಗುತ್ತಿದ್ದೆ. ಅದೆಷ್ಟು ಹೊತ್ತು ಕಳೆಯಿತೋ, ಆಕೆ “ಅಪರೂಪಕ್ಕೆ ಬಂದಿದೀರಿ. ಕಾಫಿನೂ ಕೊಡದೇ ಕೂರಿಸಿಬಿಟ್ಟಿದೀನಲ್ಲ ನಾನು, ಛೇ” ಅಂದದ್ದು ಕಿವಿಗೆ ಬಿದ್ದು ಎಚ್ಚರಗೊಂಡೆ. ಆತುರದಲ್ಲಿ ‘ಬೇಡ ಮೇಡಂ’ ಎನ್ನಲು ಹೋದರೆ ಮತ್ತೆ ತೇಗು ಬರುವಂತೆನಿಸಿ ಎರಡು ಕ್ಷಣ ಎದೆಯ ಮೇಲುಭಾಗದಲ್ಲಿ ತಡವರಿಸಿ ಕೆಳಕ್ಕೇ ಇಳಿಯಿತು. “ಅವರ ಕೆಲಸ ಇಷ್ಟೊತ್ತಿಗೆ ಮುಗಿದೇ ಇರುತ್ತೆ. ಇನ್ನೇನು ಬಂದುಬಿಡ್ತಾರೆ. ಅಲ್ಲಿಯವರೆಗೆ ಒಂದು ಗುಟುಕು ಕಾಫಿ ಕುಡೀರಿ ನೀವು” ಎನ್ನುತ್ತ ಆಕೆ ಎದ್ದು ನನ್ನತ್ತ ನೋಡದೆ ಸರಸರನೆ ಒಳಗೆ ನಡೆದರು. ಇಂಗ್ಲಿಷಿನ ಎಲ್ ಅಕ್ಷರಾಕಾರದ ಡ್ರಾಯಿಂಗ್ ರೂಂನ ಮತ್ತೊಂದು ಅಂಚು ತಲಪಿ, “ಬನ್ನೀ, ಇಲ್ಲೇ ಡೈನಿಂಗ್ ಹಾಲ್ನಲ್ಲೇ ಕೂರಿ” ಎನ್ನುತ್ತ ಅಲ್ಲಿದ್ದ ಡೈನಿಂಗ್ ಟೇಬಲ್ನತ್ತ ಕೈ ತೋರಿ ಅಲ್ಲೆಲ್ಲೋ ಮಾಯವಾದರು. ಒಂದು ಬಿಸಿ ಕಾಫಿ ನನಗೆ ಹಲವು ವಿಧಗಳಲ್ಲಿ ಈಗ ಅಮೃತ ಅನಿಸಿತು. ಸೆಳೆತಕ್ಕೊಳಗಾದವನಂತೆ ಎದ್ದು ಅತ್ತ ಹೋಗಿ ಕೂತೆ. ಆಕೆ ಒಳಗಿನಿಂದ ಏಕಾಏಕಿ ಅವತರಿಸಿ, ಕಿಟಕಿಯ ದಪ್ಪ ಪರದೆ ಎಳೆದು ಕತ್ತಲು ಮಾಡಿ, ಅಲ್ಲೊಂದು ಸ್ವಿಚ್ ಒತ್ತಿದರು. ನನ್ನ ತಲೆಯ ಮೇಲೇ ಹಲವು ಬಣ್ಣಗಳ ದೀಪಗುಚ್ಛ ಝಗ್ಗನೆ ಕೋರೈಸಿ ಆ ಸ್ಥಳವೆಲ್ಲ ಜಗಮಗಿಸಿತು.
ಒಂದು ಆಲಂಕಾರಿಕ ಮೋಟುಗೋಡೆಯಾಚೆ ಇದ್ದ ಕಿಚನ್ನಲ್ಲಿ ಆಕೆ ತನಗಿಂತಲೂ ಒಂದಡಿ ಎತ್ತರದ ಫ್ರಿಜ್ ತೆರೆದು ಹಾಲಿನ ಪಾತ್ರೆ ಎತ್ತಿಕೊಂಡರು. ಅದನ್ನು ಬಾಯಿಗೆ ತಂದು ಫೂ “ಫೂ…ಉಫ್ ಉಫ್… ಉಫ್ಫೂ ಫೂ ಫೂ” ಎಂದು ಹಾಲಿಗೆ ಜೋರಾಗಿ ಗಾಳಿ ಊದಿ ಊದಿ ಕೆನೆಯನ್ನು ಮತ್ತೆ ಮತ್ತೆ ಹಿಂದಕ್ಕೆ ಸರಿಸುತ್ತ ಪುಟ್ಟ ಪಾತ್ರೆಗೆ ಒಂದಷ್ಟು ಹಾಲು ಸುರಿದುಕೊಂಡರು. ಏನೋ ನೆನಪಾದಂತೆ ಗಕ್ಕನೆ ಹಾಲಿನ ಪಾತ್ರೆಯನ್ನು ಕೆಳಗಿಟ್ಟು ನನ್ನತ್ತ ತಿರುಗಿದರು. “ನನ್ನ ಕವನ ಪ್ರಿಂಟ್ ಆಗಿದೆ ಸರ್. ಹೇಳೋದೇ ಮರೆತೆ ನೋಡಿ, ನಾನೆಂಥೋಳು! ಇರಿ ತೋರಿಸ್ತೀನಿ” ಎನ್ನುತ್ತ ದಾಪುಗಾಲಿನಲ್ಲಿ ಬಂದು ಟೇಬಲ್ ಮೇಲೆ ಇದ್ದ ಮಾಸಪತ್ರಿಕೆಯೊಂದನ್ನು ಸರ್ರನೆತ್ತಿಕೊಂಡರು. “ಹ್ಞಾಂಯ್” ಎಂದು ಸಶಬ್ದವಾಗಿ ಆಕಳಿಸುತ್ತ ಪತ್ರಿಕೆಯ ಹಾಳೆಗಳನ್ನು ಸರಸರ ಮಗುಚುತ್ತ ನನ್ನತ್ತ ಬಂದರು. ಮುಖವನ್ನು ಅರಳಿಸಿಕೊಂಡು “ನೋಡಿ” ಎನ್ನುತ್ತ ಪತ್ರಿಕೆಯನ್ನು ನನ್ನ ಮುಂದೆ ಹಿಡಿದರು. ನನ್ನತ್ತ ಬಾಗಿ “ನನ್ನ ಫೋಟೋನೂ ಹಾಕಿದಾರೆ” ಎಂದು ದೊಡ್ಡ ದನಿ ತೆಗೆದರು. ಬಾಯಿಯ ವಾಸನೆ ಗಪ್ಪನೆ ನನ್ನ ಮೂಗಿಗೆ ಅಡರಿತು.
ನಾನು ಮುಖ ಕಿವಿಚಿದೆ. ಆಕೆಗೆ ನನ್ನತ್ನ ಗಮನವಿರಲಿಲ್ಲ. ತಮ್ಮ ಕಪ್ಪು-ಬಿಳುಪು ಫೋಟೋದ ಮೇಲೆ ಬೆರಳಿಟ್ಟು “ಔ…ಊ…ಗಟ್ರ್” ಎಂದು ತೇಗಿ, “ಸಾರೀ” ಎಂದು ಸಣ್ಣಗೆ ನಕ್ಕು, “ನೋಡ್ತಾ ಇರಿ. ಕಾಫಿ ತಂದುಬಿಡ್ತೀನಿ” ಎಂದರು. ನನ್ನ ಮೂಗಿಗೆ ಮತ್ತೊಮ್ಮೆ ದುರ್ಗಂಧದ ದಾಳಿ.
ಹೊಟ್ಟೆಯೊಳಗೆ ಅದೆಷ್ಟು ಹೊತ್ತಿನಿಂದ ಅದೇನೇನಿತ್ತೋ, ಬಾಯಿಯನ್ನು ಅದೆಷ್ಟು ಹೊತ್ತಿನಿಂದ ತೊಳೆಯದೆ ಬಿಟ್ಟಿದ್ದರೋ. ಆ ದುರ್ವಾಸನೆಗೆ ಕ್ಷಣದಲ್ಲಿ ನನ್ನ ಹೊಟ್ಟೆಯೆಲ್ಲ ತೊಳೆಸಿಹೋಯಿತು. ನನ್ನ ಕಣ್ಣು, ಬಾಯಿ ಗಕ್ಕನೆ ಮುಚ್ಚಿಕೊಂಡವು. ಮಾಯದಂತೆ ಆ ಗಳಿಗೆಯಲ್ಲೂ ಸೌಜನ್ಯ ಜಾಗೃತಗೊಂಡು, ಮೂಗಿನತ್ತ ಮೇಲೆದ್ದ ಕೈಯನ್ನು ಅರ್ಧದಲ್ಲೇ ತಡೆದು ನಿಲ್ಲಿಸಿತು. ಕಣ್ಣು ತೆರೆದರೆ ಸ್ಟೌವ್ ಮುಂದೆ ನಿಂತ ಆಕೆ ಹಾಲಿನ ಪಾತ್ರೆಯನ್ನು ಮೇಲೆತ್ತಿ ಬಾಯಿಯ ಹತ್ತಿರ ಕೊಂಡೊಯ್ಯುತ್ತಿದ್ದರು. ಅದಕ್ಕೆ ಮತ್ತೆರಡು ಸಲ “ಪೂ ಫೂ… ಉಫ್ ಉಫ್” ಎಂದು ಊದಿ. ಪುಟ್ಟ ಪಾತ್ರೆಗೆ ಇನ್ನಷ್ಟು ಹಾಲು ಸುರಿದುಕೊಂಡರು. ಹಾಲಿನ ಪಾತ್ರೆಯನ್ನು ಫ್ರಿಜ್ಗೆ ಸೇರಿಸಲು ಇತ್ತ ಹೊರಳಿದ ಅವರ ಮುಖದಲ್ಲಿ ತೆಳ್ಳನೆಯ ನಗೆಯಿತ್ತು. ಅದಕ್ಕೆ ಹೆಮ್ಮೆಯ ಲೇಪವಿತ್ತು. ಸಣ್ಣಗೇನೋ ಗುನುಗಿಕೊಳ್ಳುತ್ತ ಸ್ಟೌವ್ ಹಚ್ಚಿ ಹಿಡಿಕೆಯ ಪುಟ್ಟ ಪಾತ್ರೆಯನ್ನು ಅದರ ಮೇಲಿರಿಸಿದರು. “ಬಿಸಿ ಜಾಸ್ತಿ ಬೇಡ ಅಲ್ವಾ ಇವರೇ? ತುಂಬಾ ಸೆಖೆ ನೋಡಿ. ಒಂಚೂರು ಬೆಚ್ಚಗಾದ್ರೆ ಸಾಕಲ್ವಾ?” ಎಂದರು.
ನನ್ನಿಂದ ಉತ್ತರ ಹೊರಡಲಿಲ್ಲ.
ಅವರು ತಂದು ಮುಂದಿಡುವ ಕಾಫಿಯನ್ನು ನನ್ನ ಹೊಟ್ಟೆಗಿಳಿಸಿಕೊಳ್ಳುವುದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತ, ಅಲಮೇಲುವಿನ ಮಾತು ಕೇಳದೆ ಮಾಡಿಕೊಂಡ ಸ್ವಯಂಕೃತಾಪರಾಧದಿಂದ ಪಾರಾಗುವ ದಾರಿಗಾಗಿ ತಡಕಾಡುತ್ತ ಚಾವಣಿಗೆ ತಲೆಯೆತ್ತಿದೆ. ದೀಪಗುಚ್ಛದ ಹತ್ತಾರು ಬಣ್ಣಗಳು ಕಣ್ಣಿಗೆ ಚುಚ್ಚಿದವು. ಜೇಬಿನಲ್ಲಿ ಮೊಬೈಲ್ ಗುಂಯ್ಗುಟ್ಟಿತು.
ಈ ಕರೆ ಇಲ್ಲಿಂದೆದ್ದು ಓಡಿಬಿಡುವ ದಾರಿಯನ್ನು ನನಗೆ ತೋರಬಹುದೇ? ಆತುರದಲ್ಲಿ ಫೋನ್ ಹೊರಗೆಳೆದೆ. ಹೆಸರು ನೋಡಿ ಬೆಚ್ಚಿದೆ.
ಪ್ರೊ. ರಾಘವೇಂದ್ರ!
“ಎಲ್ಲಿದೀರಿ ಮಾರಾಯ್ರೇ?” ಎಂದು ದೊಡ್ಡ ದನಿಯಲ್ಲಿ ಆರಂಭಿಸಿದರು. ನನಗೆ ದನಿ ಹೊರಡಲಿಲ್ಲ. ಅವರೇ ಮುಂದುವರಿಸಿದರು: “ನಿಮ್ಮನ್ನು ಹುಡುಕ್ಕೊಂಡು ನಿಮ್ಮನೆಗೆ ಬಂದೆ ನಾನು. ಬಂದು ನೋಡಿದ್ರೆ ನೀವು ಗಾಯಬ್! ಮೇಡಂಗೂ ಗೊತ್ತಿಲ್ಲ ನೀವು ಎಲ್ಲಿದೀರಿ ಅಂತ! ಈ ಊರಲ್ಲೇ ಇದೀರಿ ತಾನೆ?” ನಕ್ಕರು. “ಏನು ವಿಷಯ ಸರ್?” ಎಂದೆ. ನನ್ನ ದನಿ ನನಗೇ ಕೇಳಿಸಲಿಲ್ಲ. ಅವರಿಂದ ಮಾತು ಹೊರಟಿತು: “ಡಾ. ಜಾಗೃತಿ ಕಲ್ಲೂರ ಗೊತ್ತಲ್ಲ? ಟ್ಯಾಲೆಂಟೆಡ್ ಯಂಗ್ ಸ್ಕಾಲರ್. ನಮ್ಮ ಡಿಪಾರ್ಟ್ಮೆಂಟ್ಗೆ ಅವರು ಬಂದರೆ ಅಮೂಲ್ಯ ಆಸ್ತಿ ಆಗ್ತಾರೆ. ಆದ್ರೆ ಅದು ಈಗ ನಮ್ಮ ಕೈಯಲ್ಲಿಲ್ಲ ನೋಡಿ. ಇವರ ವಿದ್ವತ್ತು ವ್ಯರ್ಥ ಆಗಬಾರದು ಅಂತ ಕಾವೇರಿ ಮಾಡೆಲ್ ಜ್ಯೂನಿಯರ್ ಕಾಲೇಜ್ನಲ್ಲಿ ಒಂದು ಟೆಂಪರರಿ ಲೆಕ್ಚರರ್ ಕೆಲಸಕ್ಕೆ ವ್ಯವಸ್ಥೆ ಮಾಡಿದೀನಿ. ಆದ್ರೆ ಅವರಂಥಾ ಸ್ಕಾಲರ್ ಇರಬೇಕಾದ ಜಾಗ ಅದಲ್ಲ. ನಮ್ಮ ಡಿಪಾರ್ಟ್ಮೆಂಟ್ನಲ್ಲಿ ಗೆಸ್ಟ್ ಫ್ಯಾಕಲ್ಟಿ ಥರಾ ವಾರಕ್ಕಿಷ್ಟು ಅಂತ ಕ್ಲಾಸ್ ತಗೊಳ್ಳೋಕೆ ಅವಕಾಶ ಮಾಡಿಕೊಡೋಣ ಅನ್ನಿಸ್ತಿದೆ, ಯೂನಿವರ್ಸಿಟಿ ಎನ್ವಿರಾನ್ಮೆಂಟ್ ಪರಿಚಯ ಆಗಲಿ ಅಂತ. ಅದಕ್ಕಿಂತ ಹೆಚ್ಚಾಗಿ ಅವರ ವಿದ್ವತ್ತು ನಮ್ಮ ಸ್ಟೂಡೆಂಟ್ಸ್ಗೆ ದಕ್ಕಲಿ ಅಂತ. ಇದಕ್ಕೆ ನಿಮ್ಮ ಸಹಕಾರ ಬೇಕು. ಅದಕ್ಕೇ ನಿಮಗೆ ಪರಿಚಯ ಮಾಡಿಕೊಡೋಣ ಅಂತ ಅವರನ್ನು ನಿಮ್ಮನೇಗೆ ಕರಕೊಂಡು ಬಂದೆ. ನೀವು ಮನೇಲಿಲ್ಲ! ಇಂಥಾ ಬಡಿಂಗ್ ಸ್ಕಾಲರ್ರನ್ನ ನಾವು ಬೆಳೆಸಬೇಕು. ಮುಖ್ಯ ನೀವು ಬೆಳೆಸಬೇಕು. ಡಿಪಾರ್ಟ್ಮೆಂಟ್ನಲ್ಲಿ ನನ್ನದಾದ ಮೇಲೆ ನಿಮ್ಮದು ತಾನೆ ರಾಜ್ಯಭಾರ? ಒಂದೊಳ್ಳೇ ಕೆಲಸಕ್ಕೆ ಈಗಿನಿಂದಲೇ ಮನಸ್ಸು ಮಾಡಿ. ಅದರಿಂದ ನಿಮಗೆ ಅನುಕೂಲ ಜಾಸ್ತಿ. ಸಾಹಿತ್ಯ ಚರ್ಚೆಗೆ ನಿಮಗೆ ಒಳ್ಳೆ ಕಂಪೆನಿ ಆಗ್ತಾರೆ ಈ ಡಾ. ಜಾಗೃತಿ. ಹಾಗೇ ನಿಮ್ಮ ಕೆಲಸಗಳಿಗೆ ಸಹಾಯವಾಗಿ ನಿಲ್ತಾರೆ ಅವ್ರ್ರು. ಈಗ ನನ್ನ ವಿಷಯಾನೇ ತಗೊಳ್ಳಿ. ನನ್ನ ಹೊಸಾ ಬುಕ್ ಇದೆಯಲ್ಲ ಅದರ ಲೋಕಾರ್ಪಣೆ ಸಮಾರಂಭದಲ್ಲಿ ಕೃತಿಪರಿಚಯ ಇವರೇ ಮಾಡ್ತಾರೆ. ಅದಕ್ಕೆ ಸೂಕ್ತ ವ್ಯಕ್ತಿ ಇವ್ರು. ಅಷ್ಟೇ ಅಲ್ಲ ಸರ್, ಪ್ರೋಗ್ರಾಂಗೆ ನಾನು ಮಿನಿಸ್ಟರ್ಗಳನ್ನು ಕರೆದ್ರೆ ಇವ್ರು ಮೀಡಿಯಾದವ್ರನ್ನು ಕರೆದು ತರ್ತಾರೆ. ಸಮಾರಂಭ ಕಳೆಗಟ್ಟುತ್ತೆ, ಒಳ್ಳೇ ಪಬ್ಲಿಸಿಟೀನೂ ಸಿಗುತ್ತೆ. ಇಂಥಾ ಕೆಲಸಗಳಿಗೆ ನಿಮಗೆ ಜಾಗೃತಿ ಸಹಾಯ ಆಗ್ತಾರೆ ಅಂತ ನಾನು ಹೇಳ್ತಿರೋದು. ಯಾವಾಗ್ಲೂ ಜೊತೇಲಿ ಕಟ್ಕೊಂಡು ತಿರುಗ್ತೀರಲ್ಲ ಆ ಕಿಲಾಡಿ ರಿಜ್ವಾನ್, ಆ ಎಳಸು ಹುಡುಗಿ ಅಲಮೇಲು…. ನಿಮಗೆ ಇಂಥಾ ಸಹಕಾರ ಸಿಗೋದಿಲ್ಲ. ವೇಸ್ಟ್ ಅವ್ರು. ಜಾಗೃತಿಯ ಮುಂದೆ ಅವರಿಬ್ರನ್ನ ನೀವಾಳಿಸಿ ಒಗೀಬೇಕು. ಮತ್ತೆ ಆ ಮುದಿ ನರಿ ಶಾಸ್ತ್ರಿ! ಅವ್ನು ತನ್ನ ಕೆಲಸಾನ ಮಾತ್ರ ಅಚ್ಚುಕಟ್ಟಾಗಿ ಮಾಡ್ಕೋತಾನೆ. ನಿಮಗೆ ಮೂರುಕಾಸಿನ ಕೆಲಸಕ್ಕೂ ಬರಲ್ಲ. ಬಿಟ್ಹಾಕಿ ಅವನನ್ನ. ನಮ್ಮ ಡಿಪಾರ್ಟ್ಮೆಂಟ್ನಲ್ಲಿ ನಿಮಗೆ ಸರಿಯಾದ ಅಕ್ಯಾಡೆಮಿಕ್ ಕಂಪ್ಯಾನಿಯನ್ ಆಗೋರು ಅಂದ್ರೆ ಈ ಡಾ. ಜಾಗೃತಿ ಕಲ್ಲೂರ. ಸ್ಯೂಟೆಬಲ್ ಆದ, ಪರ್ಮನೆಂಟ್ ಆದ ಒಂದು ಜಾಗದಲ್ಲಿ ಅವರನ್ನು ನಾವು ಕೂರಿಸಿಕೊಳ್ಳೋಣ ಸರ್. ನಾವು ಸೀನಿಯರ್ ವಿದ್ವಾಂಸರು ಮಾಡಬೇಕಾದ್ದು ತಾನೆ ಅದು? ನಮ್ಮದು ಮುಗೀತಾ ಬರ್ತಿದ್ದ ಹಾಗೇ ನಮ್ಮ ಜ್ಞಾನಶಿಸ್ತನ್ನು ನಾವು ಡಾ. ಜಾಗೃತಿ ಕಲ್ಲೂರರಂಥಾ ಪ್ರತಿಭಾವಂತೆಯ ಕೈಲಿ ಇಟ್ಟುಬಿಡಬೇಕು?” ಎಚ್ಓಡಿ ಪ್ರೊ. ರಾಘವೇಂದ್ರ ಹೇಳುತ್ತಿದ್ದರು. ಅವರ ಪತ್ನಿ ಶ್ರೀಮತಿ ಸ್ವರ್ಣಾ ರಾಘವೇಂದ್ರ ಕಾಫಿ ತುಂಬಿದ ಉದ್ದನೆಯ ಲೋಟವನ್ನು ತಂದು ನನ್ನ ಮುಂದಿಟ್ಟರು. ಅತ್ತ ಗಂಡ “ನಾನು ಏನು ಹೇಳ್ತಾ ಇದೀನಿ ಅಂದ್ರೆ ಜಾಗೃತಿ ಒಂದ್ಸಲ ಡಿಪಾರ್ಟ್ಮೆಂಟ್ನೊಳಗೆ ಕಾಲಿಟ್ಟುಬಿಡ್ಲಿ, ನೀವೇ ನೋಡೋರಂತೆ, ಈಗಿರೋ ಕೊಳಕು ಪಾಲಿಟಿಕ್ಸ್ ವಾಸನೆ ಎಲ್ಲ ಹೊರಹೋಗಿ ಶುದ್ಧ ಲಿಟರೇಚರ್ ವಾಸನೆ ತುಂಬಿಕೊಳ್ಳುತ್ತೆ. ಹ್ಞಾ ಮರೆತಿದ್ದೆ, ಈ ಜಾಗೃತಿ ನಿಮ್ಮ ಹಾಗೇ ಕಥೆ ಗಿಥೆ ಅಂತ ಬರೀತಾರೆ. ಇನ್ನೇನು ಬೇಕು ಸರ್ ನಿಮಗೆ? ಹ್ಞುಂ ಆಯ್ತು, ಆಮೇಲೆ ಮಾತಾಡೋಣ. ನಿಮ್ಮ ಮೇಡಂ ಗಮಗಮಾ ಅನ್ನೋ ಕಾಫಿ ತಂದು ನಮ್ಮುಂದೆ ಇಟ್ರು ನೋಡಿ ಈಗ. ಜಾಗೃತಿಯಂತೂ ಸೊರಸೊರಾ ಅಂತ ಕುಡಿಯೋಕೆ ಶುರು ಮಾಡಿಯೂ ಆಯ್ತು” ಎಂದು ಮಾತು ಮುಗಿಸಿದರೆ, ಇತ್ತ ಹೆಂಡತಿ ತಮ್ಮ ಕಾಫಿ ಲೋಟ ಹಿಡಿದು ನನ್ನೆದುರು ಕೂತರು.