ದಿನೇಶನ ಮಾತಿನಲ್ಲಿ ಧೈರ್ಯವಿದ್ದರೂ ಅವನ ಒಳಗೆಲ್ಲೋ ಒಂದು ಅಳುಕಿತ್ತು…
ಒಂದು
`ಚಳಿಗಾಲದಲ್ಲಿ ಬೇಗ ಕತ್ತಲಾಗೋಗುತ್ತೆ, ಈ ದೇಶದಲ್ಲಿ’ ಅಂದುಕೊಳ್ಳುತ್ತಾ ಕಾರುಹತ್ತಿ ಆಫೀಸಿನಿಂದ ಮನೆಕಡೆಗೆ ಧಾವಿಸಿದ, ಸತ್ಯಮೂರ್ತಿ. ಅವನು ಅಮೆರಿಕೆಗೆ ಬಂದು ಹತ್ತಿರಹತ್ತಿರ ಎರಡುವರ್ಷ ಆಯಿತು. ಒಂದು ತಿಂಗಳ ಹಿಂದೆಯಷ್ಟೇ ಹೆಂಡತಿ, ಮಗು ಚಿಕ್ಕ ವಿರಾಮದ ಸಲುವಾಗಿ ಭಾರತಕ್ಕೆ ಹೋಗಿದ್ದಾರೆ. ಇವನ ಸ್ನೇಹಿತ ದಿನೇಶ ಈಗ ತಾತ್ಕಾಲಿಕವಾಗಿ ಇವನ ಮನೆಯಲ್ಲೇ ಉಳಿದಿದ್ದಾನೆ. ಅವನು ಬೇರೊಂದು ಕಂಪನಿಯಲ್ಲಿ ಕೆಲಸ ಮಾಡುತ್ತಾನೆ.
`ಎಂದಿನಂತೆ ಇವತ್ತೂ ಅವನು ತಡವಾಗಿ ಬರ್ತಾನೋ ಏನೋ’ ಅಂದುಕೊಂಡ ಸತ್ಯಮೂರ್ತಿ ಕಾರು ನಿಲ್ಲಿಸಿ ಎಲಿವೇಟರ್ ಮೂಲಕ ತನ್ನ ಮನೆಗೆ ಬಂದ.
ಮನೆಗೆ ಬಂದೊಡನೆ ಅವನು ಮೊದಲು ಬಟ್ಟೆ ಬದಲಾಯಿಸಿ, ಆಮೇಲೆ ಕಾಫಿಮಾಡಿಕೊಂಡು ಕುಡಿಯುತ್ತಾನೆ. `ಅವಳಿದ್ದಿದ್ದರೆ ಕಾಫಿ ಜೊತೆ ಏನಾದರೂ ಸ್ನ್ಯಾಕ್ಸ್ ಕೊಟ್ಟಿರೋಳು’ ಅಂದುಕೊಂಡು ಶೂ ಬಿಚ್ಚಿಟ್ಟು ರೂಮಿಗೆ ಹೋದ.
ಇನ್ನೂ ಆರುವರೆ ಅಷ್ಟೆ. ಆಗಲೇ ಮಬ್ಬುಗತ್ತಲೆಯಾಗಿದೆ. ಏನೂ ಸ್ಪಷ್ಟವಾಗಿ ಕಾಣುತ್ತಿಲ್ಲ. `ಅರೆ, ಹಾಸಿಗೆ ಮೇಲೆ ಯಾರೋ ಮಲಗಿರೋ ಹಾಗಿದೆಯಲ್ಲ’ ಕಣ್ಣು ಅಗಲಿಸಿ ಬೆಡ್ಲ್ಯಾಂಪಿಗಾಗಿ ತಡಕಾಡಿದ. ಆನ್ ಮಾಡಿದರೂ ದೀಪ ಹತ್ತಲಿಲ್ಲ. ನಡುಗುವ ದನಿಯಲ್ಲಿ “ಯಾರದು?” ಅಂದ. ಯಾವ ಉತ್ತರವೂ ಬರಲಿಲ್ಲ. ಹತ್ತಿರ ಹೋಗೋಣವೆಂದುಕೊಂಡ. ಅದೇಕೋ ಧೈರ್ಯ ಸಾಲಲಿಲ್ಲ. ಕಾಲು ಏನನ್ನೋ ಎಡವಿತು. ಬೆಚ್ಚಿಬಿದ್ದು ಹೊರಬಂದ.
ಅಷ್ಟರಲ್ಲಿ ಹಾಸಿಗೆ ಮೇಲಿಂದ – “ನಾನು ನಿಮ್ಮ ಹೆಂಡತಿ, ನೀವು ನನ್ನ ಗಂಡ….” – ಮಾತು ಕೇಳಿಬಂತು.
“ಯಾರು ನೀನು. ಈಚೆ ಬಾ….”
ಒಂದು ನಿಮಿಷ ಪೂರ್ತಿ ಮೌನ. ಮತೊಮ್ಮೆ ರೂಮಿನಿಂದ ಅದೇ ಧ್ವನಿ – “ನಾನು ನಿಮ್ಮ ಹೆಂಡತಿ ನೀವು ನನ್ನ ಗಂಡ…..”
ಒಳಗೆ ಹೋಗಿ ನೋಡೇ ಬಿಡೋಣ ಎಂದು ರೂಮಿನ ಕಡೆಗೆ ನಡೆದ.
“ಟ್ರಿಣ್…. ಟ್ರಿಣ್….”
ಅಷ್ಟರಲ್ಲಿ ಅವನು ಡೈನಿಂಗ್ ಟೇಬಲ್ ಮೇಲಿಟ್ಟಿದ್ದ ಮೊಬೈಲ್ ಫೋನ್ ರಿಂಗಣಿಸಿತು.
“ಹಲೋ…. ಹಲೋ….”
ಆ ಕಡೆಯಿಂದ ಯಾವ ಶಬ್ದವೂ ಇಲ್ಲ.
– ಎರಡು-
“ಹಾಯ್, ದಿನೇಶ್. ಓಹೋ ಫೋನಲ್ಲಿದ್ದೀರಾ? ಗಮನಿಸಲಿಲ್ಲ. ಸಾರಿ.”
“ಪರವಾಗಿಲ್ಲ, ಸರ್” ಫೋನ್ ರಿಸೀವರ್ ಕೆಳಗಿಡುತ್ತಾ “ಫೋನ್ ಆಮೇಲೆ ಮಾಡಿದರು ಆಗುತ್ತೆ. ಹೇಳಿ ಸರ್.”
“ಈಗತಾನೇ ಕ್ಲೈಂಟ್ಸ್ ಮೀಟಿಂಗ್ ಮುಗಿಸಿಕೊಂಡು ಬರ್ತಾ ಇದ್ದೀನಿ. ನೀವು ಮಾಡಿದ್ದ ಕ್ಯಾಶ್ಫ್ಲೋ ರಿವ್ಯೂ ಮಾಡಿಸಿದೆ. ಫಾರ್ಮಾಟ್ ಎಲ್ಲ ಸರಿಯಿದೆ. ಆದರೆ, ಕ್ಯಾಶ್ ಬ್ಯಾಲೆನ್ಸ್ ಯಾಕೋ ಬ್ಯಾಲೆನ್ಸ್ ಶೀಟ್ ಜೊತೆ ತಾಳೆ ಆಗ್ತಾ ಇಲ್ಲ.”
“ಹೌದ?”
“ನಾವು ಪ್ರಾಮಿಸ್ಮಾಡಿದ್ದ ಪ್ರಕಾರ ಇದು ಹೋದವಾರ ಮುಗೀಬೇಕಿತ್ತು. ನೀವು ಆಂಡ್ರೂ ಜೊತೆ ಕೆಲಸಮಾಡಿ ಈ ಸಮಸ್ಯೆ ಇವತ್ತೇ ಬಗೆಹರಿಸಿಬಿಡಿ. ನಾನು ಇವತ್ತು ಸ್ವಲ್ಪ ಬೇಗ ಮನೆಗೆ ಹೋಗಬೇಕು. ಈ ನಡುವೆ ಅಂತೂ ತುಂಬಾ ಕೆಲಸದ ಒತ್ತಡ. ಸರಿ, ದಿನೇಶ್, ಹಾಗಾದರೆ ನಾನು ಹೊರಡ್ತೀನಿ. ನೀವು ಆಮೇಲೆ ನನಗೆ ಫೋನ್ ಮಾಡೋದು ಮಾತ್ರ ಮರೀಬೇಡಿ.”
“ಓಕೆ. ಸರ್”
ಬಾಸ್ ಹೋಗುತ್ತಿದ್ದಂತೆಯೇ `ಥೂ ಬಡ್ಡೀಮಗ. ಇವತ್ತಾದರೂ ಸ್ವಲ್ಪ ಬೇಗ ಹೋಗೋಣ ಅಂದುಕೊಂಡರೆ, ಛೇ! ಅವನಿಗೆ ಮಾತ್ರ ಮನೆಗೆ ಹೋಗಬೇಕು. ಇಲ್ಲಿ ನಾನು ಸಾಯಬೇಕು.’
ಅವನ ಬಾಸು ಕನ್ನಡದವನೆ. ಅಮೆರಿಕೆಗೆ ಬಂದು ಸುಮಾರು ೧೦ ವರ್ಷ ಆಗಿದೆ. ಮೊದಲು ಮೊದಲು ತುಂಬ ಕ್ಲೋಸ್ ಆಗಿದ್ದ. ಆದರೆ, ಬರ್ತಾಬರ್ತಾ ಪ್ರಾಜೆಕ್ಟ್ ಪ್ರೆಷರ್ ಜಾಸ್ತಿ ಆಗಿ, ಇವರ ಬಾಂಧವ್ಯ ಅಷ್ಟು ಚೆನ್ನಾಗಿಲ್ಲ.
ಆಂಡ್ರೂಗೆ ಪಿಂಗ್ ಮಾಡಲು ನೋಡಿದ. ಆದರೆ, ಅವನು ಆಗಲೇ ಆಫ್ಲೈನ್ ಇದ್ದಾನೆ. `ಬಹುಶಃ ಅವನು ಮನೆಗೆ ಹೋಗಿಬಿಟ್ಟಿರಬೇಕು. ಒಂದು ಈಮೇಲ್ ಮಾಡಿ ಇನ್ನು ಅರ್ಧಗಂಟೆ ಕಾಯ್ತೀನಿ. ಏನೂ ಉತ್ತರ ಬರದೇ ಇದ್ದರೆ, ನಾನು ಜಾಗ ಖಾಲಿಮಾಡ್ತೀನಿ’ ಅಂದುಕೊಂಡ.
ಬೆಳಗ್ಗೆಯಿಂದ ಅವನ ಮೊಬೈಲ್ ಫೋನು ಕಾಣಿಸ್ತಾ ಇಲ್ಲ. ಬಾಸ್ ಬರುವ ಮುನ್ನ ಸತ್ಯಮೂರ್ತಿಗೆ ಫೋನ್ ಮಾಡಿದ್ರೂ ಅವನು ಫೋನ್ ಎತ್ತಲಿಲ್ಲ.
`ಬಹುಶಃ ಸತ್ಯಮೂರ್ತಿ ಇನ್ನೂ ಮನೆ ಸೇರಿಲ್ಲ ಅನ್ನಿಸುತ್ತೆ. ಇನ್ನೊಂದು ೫-೧೦ ನಿಮಿಷ ಬಿಟ್ಟು ಮಾಡೋಣ’ ಅಂದುಕೊಂಡ.
ಸತ್ಯಮೂರ್ತಿಗೆ ಫೋನ್ ಮಾಡುವ ಮುಂಚೆ ದಿನೇಶ್ ತನ್ನದೇ ಮೊಬೈಲ್ಗೂ ಕಾಲ್ ಮಾಡಿದ್ದ. ಯಾರು ಎತ್ತಲಿಲ್ಲ. `ಅಂದರೆ, ನನ್ನ ಮೊಬೈಲ್ ಎಲ್ಲಾದರೂ ಕಳೆದುಹೋಗಿದೆಯಾ? ಅದರಲ್ಲೇ ನನ್ನ ಬ್ಯಾಂಕ್ ಅಕೌಂಟ್, ಎಸ್.ಎಸ್.ಎನ್. ನಂಬರ್ ಎಲ್ಲ ಸ್ಟೋರ್ ಆಗಿತ್ತಲ್ಲ. ಅದೇನಾದರೂ ಕಳೆದುಹೋದರೆ ಮುಗೀತು ನನ್ನ ಕಥೆ.’
ಇನ್ನೊಂದು ಸಾರಿ ಸತ್ಯಮೂರ್ತಿಗೆ ಮಾಡಿ ನೋಡೋಣ ಅಂದುಕೊಂಡು ಅವನ ಮೊಬೈಲ್ಗೆ ಡಯಲ್ ಮಾಡಿದ.
– ಮೂರು –
“ಟ್ರಿಣ್…. ಟ್ರಿಣ್…”
“ಹಲೋ….”
ಸತ್ಯಮೂರ್ತಿ ನಡುಗುತ್ತಾ ತುಂಬಾ ಮೆಲುದನಿಯಲ್ಲಿ “ಹಲೋ ದಿನೇಶ್….”
“ಲೋ ಎಲ್ಲಿದ್ದೀ? ಯಾಕೋ ಅಷ್ಟು ಮೆತ್ತಗೆ ಮಾತಾಡ್ತಾ ಇದ್ದೀ?”
“ಇಲ್ಲ. ಹೇಳು ಏನು ವಿಷಯ?”
“ನೀನು ಹೇಳ್ತಾ ಇರೋದು ಸರಿಯಾಗಿ ಕೇಳಿಸ್ತಾನೇ ಇಲ್ಲ. ಭಾರತಕ್ಕೆ ಫೋನ್ ಮಾಡಿದಾಗ ನನಗೆ ಟಿ.ವಿ.ನೂ ನೋಡಕ್ಕೆ ಬಿಡದೆ ರೂಫ್ ಕಿತ್ತೋಗೋ ಹಾಗೆ ಕಿರುಚಿಕೋತಿ. ಈಗೇನು ಇಷ್ಟೊಂದು ಮೆತ್ತಗೆ ಮಾತಾಡ್ತಾ ಇದ್ದಿ; ಯಾರಾದ್ರೂ ಬಂದಿದ್ದಾರ ಮನೆಗೆ?”
“ಅದು…. ಅದು…. ರೂಮಲ್ಲಿ ಯಾರೋ ಇದ್ದಾರೆ ಅನ್ಸುತ್ತೆ.”
“ಯಾರೋ? ನಾನು ಆಫೀಸಿಗೆ ಹೋಗಕ್ಕೆ ಮುಂಚೆ ಬೀಗ ಹಾಕ್ಕೊಂಡು ಹೋಗಿದ್ದೆ. ನೀನು ಬಂದಾಗ ಬಾಗಿಲು ಬೀಗ ಹಾಕಿತ್ತು ತಾನೇ?”
“ಹೌದು ಕಣೋ. ನಾನು ಬೀಗ ತೆಕ್ಕೊಂಡೆ ಒಳಗೆ ಬಂದೆ.”
“ಮತ್ತೆ ಹೇಗೆ ಯಾರಾದರು ಒಳಗೆ ಬರಕ್ಕೆ ಸಾಧ್ಯ? ಇರೋದು ಎರಡೇ ಕೀ ಸೆಟ್ಟು. ಸರಿ, ಹೋಗಿ ನೋಡು ಯಾರು ಅಂತ?”
“ರೂಮಲ್ಲಿ ದೀಪ ಆನ್ ಆಗ್ತಾ ಇಲ್ಲ. ಯಾರು ಅಂತ ಕೇಳಿದರೆ `ನಾನು ನಿಮ್ಮ ಹೆಂಡತಿ, ನೀವು ನನ್ನ ಗಂಡ’ ಅಂತಾಳೆ.”
“ಏನೋ ಇದು! ನಿನ್ನ ಹೆಂಡತಿ ಊರಿಗೆ ಹೋಗಿ ಒಂದೇ ತಿಂಗಳಲ್ಲಿ ಇನ್ನೊಂದು ಹೆಂಡತೀನಾ?”
“ನೀನು ತಮಾಷೆ ಮಾಡಬೇಡ. ಈಗಲೇ ಬೇಗ ಬಾ.”
“ಇಷ್ಟು ಹೆದರಿಕೊಂಡರೆ ಆಯಿತು ಕಥೆ. ಸರಿ ಬರ್ತಿನಿ…. ಆಮೇಲೆ ನಾನು ಯಾಕೆ ಫೋನ್ ಮಾಡಿದೆ ಅಂದ್ರೆ….”
“ಅದೆಲ್ಲ ಆಮೇಲೆ ಮನೆಗೆ ಬಂದಮೇಲೆ ಮಾತನಾಡಿದರೆ ಆಯಿತು. ಈಗಲೇ ಹೊರಡು. ತಡಮಾಡಬೇಡ.”
“ಸರಿ. ಬಾಯ್.”
ದಿನೇಶನ ಮಾತಿನಲ್ಲಿ ಧೈರ್ಯವಿದ್ದರೂ ಅವನ ಒಳಗೆಲ್ಲೋ ಒಂದು ಅಳುಕಿತ್ತು. ಕೆಲಸ ಬಿಟ್ಟು ತಕ್ಷಣ ಮನೆಕಡೆ ಹೊರಟ.
`ಗಂಟೆ ೭ ಆಗಿದೆ. ಸೆಂಟ್ರಲ್ ಎಕ್ಸ್ಪ್ರೆಸ್ ವೇ ಈ ಹೊತ್ತಲ್ಲಿ ಅಷ್ಟೊಂದು ರಶ್ಶ್ ಇರಲ್ಲ. ಅದರಲ್ಲೇ ಹೋಗೋಣ…..’
೧೫ ನಿಮಿಷದಲ್ಲಿ ಮನೆಗೆ ತಲಪಿದ.
“ಸಧ್ಯಃ ಬಂದ್ಯಲ್ಲ.”
“ಸರಿ, ಕೂಗು ನಿನ್ನ ಹೆಂಡತೀನ. ನಾನು ವಿಚಾರಿಸ್ತೀನಿ.”
“ಇಬ್ಬರು ಹೋಗಿ ನೋಡೋಣ. ಅದು ಯಾರು ಅಂತ….”
“ಏ ನಾನು ನಿನಗೆ ಯಾಕೆ ಫೋನ್ ಮಾಡಿದ್ದು ಅಂದ್ರೆ ನನ್ನ ಮೊಬೈಲ್ ಕಾಣಿಸ್ತಾ ಇಲ್ಲ. ಮನೇಲಿ ಎಲ್ಲಾದರೂ ನಿನಗೆ ಕಾಣಿಸ್ತಾ?”
“ಇಲ್ಲ ಮಾರಾಯ. ನನ್ನ ಟೆನ್ಶನ್ ನನಗೆ. ಮೊದಲು ರೂಮಲ್ಲಿ ಇರೋದು ಯಾರು ಅಂತ ನೋಡೋಣ”
“ಸರಿ, ಅಲ್ಲಿ ದೀಪ ಇಲ್ಲ ಅಂತಿದ್ಯಲ್ಲ. ನಿನ್ನ ಮೊಬೈಲಲ್ಲಿ ಟಾರ್ಚ್ ಆನ್ಮಾಡು. ಹೋಗಿ ನೋಡೋಣ.”
ಇಬ್ಬರೂ ಆ ಟಾರ್ಚ್ ಬೆಳಕಿನಲ್ಲಿ ರೂಮಿಗೆ ನಡೆದರು. ಸತ್ಯಮೂರ್ತಿ ಕಾಲು ಏನನ್ನೋ ಎಡವಿತು. ಅಲ್ಲಿಗೆ ಬೆಳಕು ಬಿಟ್ಟು ನೋಡಿದ. ಅದು ಬೆಡ್ ಲ್ಯಾಂಪಿನ ಪ್ಲಗ್.
“ಓ….. ಬೆಳಗ್ಗೆ ಆಫೀಸಿಗೆ ಹೋಗಕ್ಕೆ ಮುಂಚೆ ಬಟ್ಟೆ ಐರನ್ ಮಾಡಬೇಕಿತ್ತು. ಬೆಡ್ ಲ್ಯಾಂಪ್ ತೆಗೆದು ಐರನ್ ಬಾಕ್ಸ್ ಪ್ಲಗ್ ಹಾಕಿದ್ದೆ. ಸರಿ. ಆ ಪ್ಲಗ್ ಫಿಕ್ಸ್ ಮಾಡು.”
ಪ್ಲಗ್ ಹಾಕಿದ. ದೀಪಬಂತು. ಇಬ್ಬರೂ ಈಗ ಮಂಚದ ಮೇಲೆ ನೋಡಿದರು.
ಅದು ಐರನ್ ಬೋರ್ಡ್.
“ಓಹ್….”
“ಮತ್ತೆ ಯಾರೋ ಮಾತನಾಡಿದ ಹಾಗಾಯ್ತಿಲ್ಲ; ಅದೇನು?”
“ನಾನು ನಿಮ್ಮ ಹೆಂಡತಿ, ನೀವು ನನ್ನ ಗಂಡ….”
ಆ ಶಬ್ದ ದಿಂಬಿನ ಒಳಗಿಂದ ಬರುತ್ತಿತ್ತು. ದಿನೇಶ ದಿಂಬು ಸರಿಸಿದ. ಅಲ್ಲಿತ್ತು ಅವನ ಮೊಬೈಲ್. ಈಗಷ್ಟೆ ಒಂದು ಮಿಸ್ಡ್ ಕಾಲ್ ಬಂದದ್ದರಿಂದ ಮೊಬೈಲ್ ಲೈಟ್ ಆನ್ ಆಗಿತ್ತು.
“ಇದೇನೋ, ಇದಾ ನಿನ್ನ ರಿಂಗ್ಟೋನ್?!”
“ಅದ್ಯಾವಾಗ ಬದಲಾಯಿತು ಅಂತ ಗೊತ್ತಿಲ್ಲ. ನಿನ್ನೆ ನಾನು `ರಿಂಗ್ರೆಕಾರ್ಡ್’ ಅಂತ ಒಂದು ಹೊಸ ಆಪ್ ಡೌನ್ಲೊಡ್ ಮಾಡಿದ್ದೆ. ಅದು ಹೊರಗಿನ ಶಬ್ದವನ್ನು ರೆಕಾರ್ಡ್ಮಾಡಿ ಅದನ್ನೇ ರಿಂಗ್ಟೋನನ್ನಾಗಿ ಮಾಡುತ್ತೆ.” ನಿನ್ನೆ ಸಾಯಂಕಾಲ ನಾವು `ಬುದ್ಧಿವಂತ’ ಸಿನಿಮಾ ನೋಡ್ತಾ ಇದ್ವಲ್ಲ. ಆಗ ನಾನು ಈ ಆಪ್ ಡೌನ್ಲೊಡ್ ಮಾಡಿದ್ದೆ ಅಂತ ಕಾಣತ್ತೆ. ಆ ಸಿನಿಮಾ ಡೈಲಾಗ್ ಈಗ ನನ್ನ ರಿಂಗ್ಟೋನ್ ಆಗಿದೆ ಅನ್ಸುತ್ತೆ.”
“ನಾನು ನಿಮ್ಮ ಹೆಂಡತಿ, ನೀವು ನನ್ನ ಗಂಡ….”
“ಹಲೋ ಸರ್.”
“ಆಂಡ್ರೂಗೆ ಮಾತಾಡಿದ್ರಾ? ಆ ಸಮಸ್ಯೆ ಬಗೆಹರೀತಾ?”
“ಆಂಡ್ರೂ ಆಗಲೇ ಮನೆಗೆ ಹೋಗಿಬಿಟ್ಟಿದ್ದ ಸಾರ್. ಅವನಿಗೆ ನಾನು ಈಮೇಲ್ ಮಾಡಿದ್ದೀನಿ.”
“ಸರಿ. ನಾಳೆ ನೋಡೋಣ. ಗುಡ್ನೈಟ್.”
“ಗುಡ್ನೈಟ್.”
Comments are closed.