‘ಉತ್ಥಾನ’ ದೀಪಾವಳಿ ಪ್ರಬಂಧ ಸ್ಪರ್ಧೆ-೨೦೧೫ರಲ್ಲಿ ಪ್ರಥಮ ಬಹುಮಾನ ಪಡೆದ ಪ್ರಬಂಧ
ನಿದ್ದೆಯಲ್ಲಿ ಕಾಣುವಂತಹದ್ದು ಕನಸಲ್ಲ ನಿದ್ದೆಗೆಡುವಂತೆ ಮಾಡುವುದಿದೆಯಲ್ಲ ಅದು ನಿಜವಾದ ಕನಸು
-ಎ.ಪಿ.ಜೆ. ಅಬ್ಬುಲ್ ಕಲಾಂ.
ಅವಿಭಕ್ತ ಕುಟುಂಬದಲ್ಲಿ ಎಲ್ಲರೂ ಒಗ್ಗೂಡಿ ಜೀವನ ಸಾಗಿಸುತ್ತಿದ್ದ ಕಾಲಮಾನ ಅಂದಿಗಿತ್ತು. ಅಂತಹ ಕುಟುಂಬದಲ್ಲಿ ಬಾಲ್ಯ ಕಳೆದವರಿಗೆ ಸಹಬಾಳ್ವೆಯ ಅರಿವು, ಅನುಭವ ಇರುತ್ತದೆ. ತನ್ನದು ಎಂಬ ತೀರಾ ಸಂಕುಚಿತತೆಗಿಂತ ತಮ್ಮದು ಎಂಬ ವಿಶಾಲ ಅನುಭವವನ್ನು ಅಥವಾ ಮನೋಭಾವವನ್ನು ಇವರು ಮೈಗೂಡಿಸಿಕೊಂಡಿರುತ್ತಾರೆ. ಎಲ್ಲರೊಂದಿಗೆ ಹೊಂದಿಕೊಂಡು ಬದುಕುವ ವಿಶಾಲ ಮನಸ್ಸಿನ ಜೀವನ ಅವರಿಗೆ ಒಗ್ಗಿರುತ್ತದೆ. ಅಬ್ದುಲ್ ಕಲಾಂ ಸಂಕುಚಿತ ಪರಿಸರದಲ್ಲಿ ಬೆಳೆದವರಲ್ಲ. ಅವರಿಗೆ ಎಳವೆಯಲ್ಲಿಯೇ ಅವಿಭಕ್ತ ಕುಟುಂಬದ ಜೀವನ ಭಾಗ್ಯ ದೊರೆತಿತ್ತು. ಹಳ್ಳಿಯ ಬೀದಿಯಲ್ಲಿ ಅವರ ಮನೆಗೆ ಹತ್ತಿರದಲ್ಲೇ ಇದ್ದ, ಪಕ್ಷೀ ಲಕ್ಷ್ಮೀನರಸಿಂಹಶಾಸ್ತ್ರಿಗಳೆಂಬ ಹಿರಿಯರ ಒಡನಾಟ ಕಲಾಂಗೆ ಲಭಿಸಿತ್ತು. ಹಿರಿಯರೂ, ಸಂಸ್ಕಾರವಂತರೂ, ಸಜ್ಜನರೂ ಒಳ್ಳೆಯ ಆಚರಣೆ ಉಳ್ಳವರೂ ಆದ ಪಕ್ಷೀ ಲಕ್ಷ್ಮೀನರಸಿಂಹಶಾಸ್ತ್ರಿಗಳು ಬಾಲಕ ಕಲಾಂಗೆ ತಮ್ಮಲ್ಲಿರುವ ಉತ್ತಮ ಅಂಶಗಳನ್ನೆಲ್ಲ ಧಾರೆಯೆರೆದರು. ಎಲ್ಲದರಿಂದ ಪ್ರಭಾವಿತರಾಗಿ ಎರಕಹೊಯ್ದ ಮೂರ್ತಿಯಂತಾದ ಕಲಾಂಗೆ ಪರೋಪಕಾರ, ಅನುಕಂಪ ಮತ್ತು ಪ್ರೀತಿ ವಾತ್ಸಲ್ಯಗಳಿಂದ ಸಮಾಜಮುಖಿಯಾಗಿ ಬಾಳ್ವೆನಡೆಸುವುದು ಕರಗತವಾಯಿತು. ಚಿಕ್ಕವನಾದ ಕಲಾಂಗೆ ಶಾಸ್ತ್ರಿಗಳೆಂದರೆ ಭಾರೀ ಇಷ್ಟ; ಶಾಸ್ತ್ರಿಗಳಿಗೂ ಸಹ ಕಲಾಂ ಎಂದರೆ ಅಷ್ಟೇ ಪ್ರೀತಿ.
ಪ್ರಸಿದ್ಧ ಕ್ಷೇತ್ರವಾದ ರಾಮೇಶ್ವರದಲ್ಲಿ, ಪತಿವರ್ಷ ನಡೆಯುತ್ತಿದ್ದ ಸೀತಾರಾಮ ಕಲ್ಯಾಣಮಹೋತ್ಸವದಲ್ಲಿ ಕಲಾಂ ಕುಟುಂಬವೂ ಎಲ್ಲರೊಂದಿಗೆ ಬೆರೆತು ಸಂಭ್ರಮ ಆಚರಿಸುತ್ತಿತ್ತು. ಮನೆಯಲ್ಲಿ ತಾಯಿ ಆಶಿಯಮ್ಮ ಪ್ರವಾದಿಗಳ ಬದುಕಿನ ಕಥೆಗಳನ್ನು ಹೇಳುವುದರ ಜತೆಗೆ ರಾಮಾಯಣದ ಕಥೆಗಳನ್ನೂ ಹೇಳುತ್ತಿದ್ದ ಕಾರಣ ಕಲಾಂ ಅವರ ತಿಳಿವಳಿಕೆಯ ವ್ಯಾಪ್ತಿ ಹಿರಿದಾಗಿತ್ತು.
ಆಗಲೇ ರಾಮನಾಥಶಾಸ್ತ್ರಿ, ಅರವಿಂದಶಾಸ್ತ್ರಿ ಮತ್ತು ಪ್ರಕಾಶನ ಎಂಬ ಸಂಪ್ರದಾಯಸ್ಧ ಬ್ರಾಹ್ಮಣ ಕುಟುಂಬದ ಹುಡುಗರು ಕಲಾಂಗೆ ಬಾಲ್ಯಸ್ನೇಹಿತರಾಗಿದ್ದರು. ಪರಸ್ಪರ ಧರ್ಮಸಹಿಷ್ಣುತೆ, ಪ್ರೀತಿ-ವಿಶ್ವಾಸ, ಸಂಸ್ಕಾರಯುತ ನಡವಳಿಕೆ ಮತ್ತು ವಿಶಾಲ ಮನೋಭಾವವನ್ನು ಬೆಳೆಸಿಕೊಳ್ಳುವುದು ಇದರಿಂದ ಅವರಿಗೆ ಸಾಧ್ಯವಾಗಿತ್ತು. ಜಾತಿ-ಮತಗಳ ಭೇದವಿಲ್ಲದೆ ಮುಕ್ತ ಮನಸ್ಸಿನಿಂದ ಎಲ್ಲರ ಜೊತೆ ಒಂದಾಗಿ ಬಾಳುವ ಕಲೆ, ಬಾಲಕ ಕಲಾಂಗೆ ಸಿದ್ಧಿಸಿತು. ಶಿವಸುಬ್ರಹ್ಮಣ್ಯ ಅಯ್ಯರ್ ಎಂಬ ಶಿಕ್ಷಕರು ವಿಜ್ಞಾನವನ್ನು ಬೋಧಿಸುತ್ತಿದ್ದರು. ಕಲಾಂ ಅವರ ಆಸಕ್ತಿಯನ್ನು ಗಮನಿಸಿ ಹೆಚ್ಚಿನ ಓದಿಗೆ ಅವಕಾಶ ಕಲ್ಪಿಸಿ, ಕಲಾಂರಲ್ಲಿದ್ದ ಜ್ಞಾನತೃಷೆಯ ಸಸಿಗೆ ಅವರೇ ನೀರೆರೆದು ಪೋಷಿಸಿದರು. ತಾಯಿತಂದೆ ಕೂಡ ಸದಾ ಭರವಸೆಯ ಮಾತನಾಡಿ ಹುರಿದುಂಬಿಸುತ್ತಿದ್ದರು. ವಿಜ್ಞಾನಶಿಕ್ಷಕರು ಎದುರಾದಾಗಲೆಲ್ಲಾ ಪ್ರೋತ್ಸಾಹದ ಮಾತುಗಳನ್ನಾಡಿ, ಬಾಲಕ ಕಲಾಂಗೆ ಉತ್ಸಾಹವನ್ನು ತುಂಬುವ ಕೆಲಸ ಮಾಡುತ್ತಿದ್ದರು. ಕಲಾಂ ತಂದೆ ವಿದ್ಯಾವಂತರಲ್ಲ. ಆದರೆ, ತನ್ನ ಮಗ ಹೆಚ್ಚು ಓದಿ ವಿದ್ಯಾವಂತನಾಗಬೇಕೆಂಬ ಬಹುದೊಡ್ಡ ಆಸೆಯನ್ನು ಅವರು ಇಟ್ಟುಕೊಂಡಿದ್ದರು. ಶ್ರಮಜೀವಿಯಾದ ಅವರ ದುಡಿಮೆಯು ಬೆಳಗ್ಗೆ ನಾಲ್ಕು ಗಂಟೆಗೆ ಆರಂಭವಾದರೆ, ರಾತ್ರಿ ಹನ್ನೊಂದರವರೆಗೂ ನಡೆಯುತ್ತಿತ್ತು. ತಂದೆಯ ಜೊತೆಗೆ ಕಲಾಂ ಬೆಳಗಿನ ನಾಲ್ಕುಗಂಟೆಗೆ ಎದ್ದು ಓದಿನಲ್ಲಿ ತೊಡಗುತ್ತಿದ್ದರು. ಇದರಿಂದ ಕಷ್ಟಜೀವನ ರೂಢಿಯಾಗಿತ್ತು. ಕಲಾಂರ ಮನೆಯಲ್ಲಿ ಆ ದಿನಗಳಲ್ಲಿ ವಿದ್ಯುಚ್ಛಕ್ತಿ ಇರಲಿಲ್ಲ. ಇದ್ದುದನ್ನು ಬಳಸಿಕೊಂಡು ಸಂತೃಪ್ತಜೀವನ ನಡೆಸುವ ಕಲೆ ಸೋಮಾರಿಯಲ್ಲದ ಕಲಾಂ ಅವರಿಗೆ ಬಾಲ್ಯದಲ್ಲಿಯೇ ಅನುಭವಕ್ಕೆ ಬಂದಿತ್ತು. ಹಾಗಾಗಿ ಮುಂದೆ ಅವರಿಗೆ, ದೇಶದ ಅತ್ಯುನ್ನತ ಪದವಿಗೆ ಹೋದರೂ ಸಹ, ಅತ್ಯಂತ ವಿನೀತಭಾವದಿಂದಿದ್ದು ಯಾವುದೇ ಐಷಾರಾಮಿ ಸೌಲಭ್ಯಗಳನ್ನು ಬಯಸದೇ ಬದುಕುವುದು ಸಾಧ್ಯವಾಯಿತು.
ಪರಿಶ್ರಮದ ಜೀವನ
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಪಡೆದ ನಂತರ ಕಲಾಂ ಅವರು ತಿರುಚಿನಾಪಳ್ಳಿಯ ಸೈಂಟ್ ಜೋಸೆಫ್ ಕಾಲೇಜಿಗೆ ಸೇರಿಕೊಂಡು, ಅಲ್ಲಿಯೂ ಆಸಕ್ತಿಯಿಂದ ಓದಿ, ೧೯೫೪ರಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕ ಪದವಿಯನ್ನು ಪಡೆದರು. ಸ್ನಾತಕ ಪದವಿಯ ಕೊನೆಯ ದಿನಗಳಲ್ಲಿ, ೧೯೫೫ರಲ್ಲಿ ವೈಮಾನಿಕ ತಂತ್ರಜ್ಞಾನ (ಏರೋನಾಟಿಕಲ್ ಇಂಜಿನಿಯರಿಂಗ್)ದಲ್ಲಿ ಉನ್ನತ ಶಿಕ್ಷಣ ಪಡೆಯಲು ಕಲಾಂ ಮದರಾಸಿಗೆ ತೆರಳಿದರು.
ಕಲಾಂ ಎಂದೂ ಸೋಮಾರಿಯಾಗಿರಲಿಲ್ಲ. ಶ್ರಮದಿಂದಲೇ ಶಾಲಾ-ಕಾಲೇಜಿಗೆ ಅವರು ಸೇರಲು ಸಾಧ್ಯವಾಗಿದ್ದುದು. ಗಡುವಿಗೆ ಅಂಜಿ, ಹಗಲುರಾತ್ರಿ ಪರಿಶ್ರಮಹಾಕಿ, ಅವಧಿಯೊಳಗೆ ಕೆಲಸವನ್ನು ಪೂರ್ಣಗೊಳಿಸಿ, ಇಲಾಖಾ ಮುಖ್ಯಸ್ಥರ ಮೆಚ್ಚುಗೆಗೆ ಪಾತ್ರರಾದ ಕಲಾಂ ಮುಂದೆ ಓದಿನತ್ತ ಹೆಚ್ಚಿಗೆ ಕಾಳಜಿ ವಹಿಸುವ ನಿರ್ಧಾರಕ್ಕೆ ಬಂದರು.
ಮದರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ೧೯೬೦ರಲ್ಲಿ ಪದವಿ ಪಡೆದು ಹೊರಬಂದ ಮೇಲೆ ಉದ್ಯೋಗಕ್ಕಾಗಿ ಪ್ರಥಮವಾಗಿ ಸೇರಿದ್ದು ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್ ಎಂಬ ಕೆಂದ್ರಸರಕಾರದ ವ್ಯಾಪ್ತಿಯಲ್ಲಿರುವ ರಕ್ಷಣಾ ಇಲಾಖೆಯ ಸಂಶೋಧನಾ ಕೇಂದ್ರವನ್ನು. ಅಲ್ಲಿ ವಿಜ್ಞಾನಿಯಾಗಿ ನಿಯುಕ್ತರಾದ ನಂತರ ಕಲಾಂ ಪ್ರತಿಭೆಗೆ ವಿಪುಲ ಅವಕಾಶ ದೊರೆಯಿತು. ಭಾರತೀಯ ಸೇನೆಗೆ ಒಂದು ಹೆಲಿಕಾಪ್ಟರ್ ಮಾದರಿಯನ್ನು ವಿನ್ಯಾಸಗೊಳಿಸಿದ್ದು ಇವರ ಪ್ರಥಮ ಕೆಲಸ. ಖ್ಯಾತ ಬಾಹ್ಯಾಕಾಶ ವಿಜ್ಞಾನಿ ವಿಕ್ರಮ್ ಸಾರಾಭಾಯಿ ಅವರು ದೇಶದಲ್ಲಿ ಬಾಹ್ಯಾಕಾಶ ಕ್ಷಿಪಣಿಗಳ ಸಂಶೋಧನೆಯಲ್ಲಿ ತೊಡಗಿದ್ದರು. ಅವರ ಜೊತೆಯಲ್ಲಿ ಉನ್ನತ ಅಧ್ಯಯನ ಮತ್ತು ಸಂಶೋಧನಾ ಸಮಿತಿಯಲ್ಲಿ ಕೆಲಸ ಮಾಡುವ ಮತ್ತು ಅವರೊಂದಿಗೆ ಸಂವಹಿಸುವ ಅವಕಾಶ ಪಡೆದುಕೊಂಡ ಕಲಾಂಗೆ ಹೆಚ್ಚಿನ ಅನುಭವ ಪಡೆಯುವುದಕ್ಕೆ ಆಸ್ಪದ ದೊರೆಯಿತು. ೧೯೬೯ರಲ್ಲಿ ಕಲಾಂರನ್ನು ಇಸ್ರೋ ಸಂಸ್ಥೆಗೆ ವರ್ಗಾವಣೆ ಮಾಡಿದರು. ಅಲ್ಲಿ ಎಸ್.ಎಲ್.ವಿ-೩ ಎಂಬ ಅಂತರಿಕ್ಷ ಉಪಗ್ರಹದ ಸಿದ್ಧತೆಗಳು ನಡೆದಿದ್ದವು. ಅದು ಭಾರತದ ಮೊತ್ತಮೊದಲ ಸ್ವತಂತ್ರ ಉಪಗ್ರಹ ಯೋಜನೆ ಎನಿಸಿತ್ತು. ಈ ಯೋಜನೆಯ ನಿರ್ದೇಶಕರಾಗಿ ಕಲಾಂ ಸವಾಲನ್ನು ಎದುರಿಸಬೇಕಾಗಿತ್ತು. ವಹಿಸಿದ ಈ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಿದ್ದು ಅವರೊಳಗಿದ್ದ ಪ್ರತಿಭೆಯನ್ನು ಒರೆಗಲ್ಲಿಗೆ ಹಚ್ಚಲು ಸಿಕ್ಕ ಅವಕಾಶ. ೧೯೬೦ರಲ್ಲಿ ಇದೇ ಯೋಜನೆಯಡಿ ‘ರೋಹಿಣಿ’ ಎಂಬ ಹೆಸರಿನ ನೌಕೆಯನ್ನು ಮೊದಲ ಬಾರಿಗೆ ಅಂತರಿಕ್ಷಕ್ಕೆ ಯಶಸ್ವಿಯಾಗಿ ಉಡಾಯಿಸಲಾಯಿತು. ಹೀಗೆ ವೃತ್ತಿಜೀವನದಲ್ಲಿ ಒಂದೊಂದೇ ಹೆಜ್ಜೆ ಇಡುತ್ತಾ ಪ್ರಗತಿಯನ್ನು ಗಳಿಸಿದ ಕಲಾಂ ಹಿಂತಿರುಗಿ ನೋಡಲೇ ಇಲ್ಲ. ಭಾರತದ ಅನೇಕ ಉಪಗ್ರಹಗಳ ಉಡಾವಣೆಯಲ್ಲಿ ಅಬ್ದುಲ್ ಕಲಾಂರವರ ಪಾತ್ರ ಗಣನೀಯವಾಗಿತ್ತು.
‘ಜನರ ರಾಷ್ಟ್ರಪತಿ’
ಕಲಾಂರವರು ೨೦೦೨ ಜೂನ್ ೧೮ರಂದು, ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗಲು ನಾಮಪತ್ರ ಸಲ್ಲಿಸಿದರು. ಜುಲೈ ೧೫, ೨೦೦೨ರಂದು ಚುನಾವಣೆ ನಡೆಯಿತು. ಕಲಾಂರವರು ಅಭೂತಪೂರ್ವ ಗೆಲವನ್ನು ಸಾಧಿಸಿದರು. ೨೦೦೨ ಜುಲೈ ೨೫ರಂದು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಕಲಾಂ ದೇಶದ ೧೧ನೇ ರಾಷ್ಟ್ರಪತಿಯಾಗಿ ನಿಯುಕ್ತರಾದರು. ಅವರ ಸರಳತೆ ಮತ್ತು ಕಾರ್ಯವೈಖರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ದೇಶದಾದ್ಯಂತ ಇವರನ್ನು ‘ಜನರ ರಾಷ್ಟ್ರಪತಿ’ ಎಂದು ಎಲ್ಲರೂ ಕೊಂಡಾಡಿದರು. ಏಕೆಂದರೆ ಅವರಲ್ಲಿದ್ದ ಆ ಸರಳ ಗುಣ, ನಡತೆ ಎಲ್ಲೆಡೆ ಮನೆಮಾತಾಗಿತ್ತು. ಅದಕ್ಕೂ ಮೊದಲು ಆ ಹುದ್ದೆಯನ್ನೇರಿದ ಹಲವರು ಉತ್ಸವಮೂರ್ತಿಗಳಾಗಿದ್ದರೆ, ಕಲಾಂ ಅವರು ಎಲ್ಲರೊಂದಿಗೆ ಬೆರೆತು ನಗುಮೊಗದಿಂದಲೇ ಅಧಿಕಾರ ನಡೆಸಿದರು. ಆ ದಿನಗಳಲ್ಲಿ ದೇಶದ ಪ್ರಧಾನಮಂತ್ರಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಅವಿವಾಹಿತರು; ಅಂತೆಯೇ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂರೂ ಅವಿವಾಹಿತರು. ಇವರಿಬ್ಬರಿಗೂ ದೇಶದ ಬಗ್ಗೆ ಹೊಸ ಕನಸಿತ್ತು. ದೇಶವನ್ನು ಅಭಿವೃದ್ಧಿಪಥದಲ್ಲಿ ಮುಂದೊಯ್ಯುವ ಪಣತೊಟ್ಟಿದ್ದರು.
ಸಾಮಾನ್ಯವಾಗಿ ತಮ್ಮ ವೈಜ್ಞಾನಿಕ ಅಥವಾ ತಾಂತ್ರಿಕ ಲೋಕದ ಗಂಭೀರ ಸಂಶೋಧನಾ ಕೆಲಸಗಳಲ್ಲಿ ವ್ಯಸ್ತರಾಗಿರುವ ಹಲವು ಮಂದಿ, ಸಂಗೀತ, ನೃತ್ಯ, ನಾಟಕ ಇಂತಹ ಸಾಂಸ್ಕೃತಿಕ ಕ್ಷೇತ್ರಗಳ ಗಂಧಗಾಳಿಯೂ ಇರದವರಂತೆ ಬದುಕುತ್ತಾರೆ. ತಮ್ಮ ಕ್ಷೇತ್ರವನ್ನು ಹೊರತುಪಡಿಸಿ ಇನ್ನೊಂದರಲ್ಲಿ ಅವರಿಗೆ ಆಸಕ್ತಿಯೇ ಇರುವುದಿಲ್ಲ. ಅಂತಹ ವಿಚಾರಗಳ ಬಗ್ಗೆ ಹಲವರಿಗೆ ಅದೇನೋ ಹೇಳಲಾಗದ ಅನಾದರ. ಆದರೆ ಕಲಾಂ ಇದಕ್ಕೆ ತೀರಾ ಭಿನ್ನ. ಮೊದಲಿನಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ತಾವೇ ಸ್ವತಃ ವೀಣೆ ನುಡಿಸಬಲ್ಲ ಕಲಾಂ ಸಂಗೀತ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದರು. ಸಾಹಿತ್ಯ ಮತ್ತು ಸಂಗೀತದಲ್ಲಿ ಅವರಿಗೆ ಆಸಕ್ತಿ ಅಪಾರ. ಅವರು ಕವಿಯೂ ಹೌದು. ಒಬ್ಬ ಕವಿಗೆ ಸುತ್ತಲ ಜಗದ ವಿಚಾರಗಳನ್ನು ಸಮಗ್ರವಾಗಿ ಗ್ರಹಿಸಿ ಸ್ಪಂದಿಸುವ ಶಕ್ತಿ, ಮನೋಭಾವ ಇರುತ್ತದೆ. ಉತ್ತಮ ಬರಹಗಾರರಾಗಿ, ಕವಿಯಾಗಿ, ಸಂಗೀತಜ್ಞಾನಿಯಾಗಿ ಬೆಳೆದ ಕಲಾಂ, ದೇಶದ ಪ್ರಥಮ ಪ್ರಜೆಯಾಗಿ ‘ಮಿಸೈಲ್ ಮ್ಯಾನ್’ ಆಗಿದ್ದವರು ‘ಮ್ಯೂಸಿಕ್ ಮ್ಯಾನ್’ ಕೂಡ ಆಗಿದ್ದರು ಎಂಬುದು ಅವರ ಮಧುರಭಾವಗಳ ಮನಃಸ್ಥಿತಿಯನ್ನು ತೋರಿಸುತ್ತದೆ. ಅನೇಕ ಜನಪದೀಯ ಸಂಸ್ಕೃತಿಗಳನ್ನು ಹೊಂದಿರುವ ಯಾವುದೇ ದೇಶ ಬಡದೇಶವಾಗಿರಲು ಸಾಧ್ಯವಿಲ್ಲ; ಯಾವ ದೇಶದಲ್ಲಿ ಸಂಗೀತ ಮತ್ತು ಸಂಸ್ಕೃತಿ ಶ್ರೀಮಂತವಾಗಿದೆಯೋ ಆ ದೇಶವೇ ನಿಜವಾದ ಶ್ರೀಮಂತ ದೇಶ ಎಂಬುದು ಕಲಾಂ ಅವರ ಹೇಳಿಕೆ; ಅದು ನಿಜ ಕೂಡ. ಭಾರತದ ಪರಮೋಚ್ಚ ನಾಗರಿಕ ಪ್ರಶಸ್ತಿಯೆಂದರೆ ಅದು ಭಾರತರತ್ನ. ರಾಷ್ಟ್ರಪತಿಯಾಗುವುದಕ್ಕೂ ಮೊದಲು ದೇಶದ ಅತ್ಯುನ್ನತ ಪ್ರಶಸ್ತಿ – ಭಾರತರತ್ನದಿಂದ ಪುರಸ್ಕೃತರಾದವರಲ್ಲಿ ಕಲಾಂ ಮೂರನೆಯವರು. ಅದಕ್ಕೂ ಮೊದಲು ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಡಾ|| ಜಾಕೀರ್ ಹುಸೇನ್ ಇಬ್ಬರು ರಾಪ್ಟ್ರಪತಿಯಾಗುವ ಮೊದಲೇ ಆ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾಗಿದ್ದರು.
ಕಲಾಂ ಅವರು ವಿಜ್ಞಾನಿಯಾಗಿ ಮಾಡಿದ ಕೆಲಸ ಮತ್ತು ಅದಕ್ಕೆ ದಕ್ಕಿದ ಅಭೂತಪೂರ್ವ ಯಶಸ್ಸು ಅವರನ್ನು ಭಾರತದ ರತ್ನವಾಗಿಸಿತ್ತು. ಹೋಮಿ ಭಾಭಾರ ನಂತರ ವಿಜ್ಞಾನಕ್ಷೇತ್ರದ ಸಾಧನೆಗಾಗಿ ಅತ್ಯುನ್ನತ ಪ್ರಶಸ್ತಿ ಪಡೆದ ಎರಡನೇ ವ್ಯಕ್ತಿ ಕಲಾಂ. ಅವರ ಅತ್ಯಮೂಲ್ಯ ಸೇವೆಯನ್ನು ಪರಿಗಣಿಸಿ ಅವರನ್ನು ಭಾರತರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ದೇಶದ ವೈಜ್ಞಾನಿಕ ಕ್ಷೇತ್ರಕ್ಕೆ ಅಥವಾ ವಿಜ್ಞಾನ ಯುಗಕ್ಕೆ ಅಪಾರ ಕೊಡುಗೆ ಕೊಟ್ಟ ಕಲಾಂ, ೧೯೯೭ರಲ್ಲಿ ಭಾರತರತ್ನ ಪುರಸ್ಕಾರಕ್ಕೆ ಪಾತ್ರರಾಗಿದ್ದರು. ದೇಶದಲ್ಲಿ ಭಾರತರತ್ನ ಪ್ರಶಸ್ತಿ ಪಡೆದ ಮೂವತ್ತನೇ ವ್ಯಕ್ತಿ ಅಬ್ದುಲ್ ಕಲಾಂ. ಭಾರತರತ್ನ ಪುರಸ್ಕಾರಕ್ಕೆ ಅವರು ಅತ್ಯಂತ ಯೋಗ್ಯವ್ಯಕ್ತಿಯಾಗಿದ್ದರು ಎಂಬುದು ನಿರ್ವಿವಾದ. ದಿನಾಂಕ ೨೭-೭-೨೦೧೫ರಂದು ಶಿಲ್ಲಾಂಗ್ನಲ್ಲಿ ಭಾಷಣ ಮಾಡುತ್ತಲೇ ಅಬ್ದುಲ್ ಕಲಾಂ ನಮ್ಮನ್ನೆಲ್ಲ ಬಿಟ್ಟುಹೋದರು. ದೇಶ, ಭಾಷೆ ಎಲ್ಲವನ್ನೂ ಮೀರಿ ಮಾನವೀಯತೆಯ ಮೂರ್ತಿಯಾಗಿದ್ದ ಈ ಮಹನೀಯರ ನಿರ್ಗಮನದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಅವರಿಗೆ ಸದ್ಗತಿ ಸಿಗಲಿ. ಅಂಥವರ ಸಂತತಿ ಸಾವಿರವಾಲಿ.
ಕಲಾಂ ಚಿಂತನೆಯ ಬೆಳಕಿನಲ್ಲಿ ನನ್ನ ಭವಿಷ್ಯದ ದಾರಿ
ಜೀವನದಲ್ಲಿ ಸರಿಯಾದ ಹಾದಿಯಲ್ಲಿ ಅತ್ಯುನ್ನತ ಸ್ಥಾನಕ್ಕೆ ಏರಿರುವ ಬಹುತೇಕ ಮಂದಿ ಬಡತನದ ಹಿನ್ನೆಲೆಯಿಂದ ಬಂದವರೇ ಆಗಿದ್ದಾರೆ. ಹಾಗೆಯೇ ಶಾಲೆಯ ಸಮಯದ ನಂತರ ದುಡಿಮೆಯನ್ನು ತಮ್ಮ ಬದುಕಿನ ಭಾಗವಾಗಿಸಿಕೊಂಡು, ಅದರಿಂದ ಅಲ್ಪಸ್ವಲ್ಪ ಹಣವನ್ನು ಸಂಪಾದಿಸಿ ತಂದೆಗೆ ಕುಟುಂಬದ ನಿರ್ವ ಣೆಗಾಗಿ ಸಹಾಯ ಮಾಡುತ್ತಿದ್ದರು. ನಾವು ಚಿಕ್ಕವಯಸ್ಸಿನಲ್ಲೇ ಏನೆಲ್ಲಾ ಸಾಧಿಸಬೇಕೆಂದು ನೂರೆಂಟು ಕನಸುಗಳನ್ನು ಕಾಣುತ್ತೇವೊ ಆ ಕಾರ್ಯದಲ್ಲಿ ತೊಡಗಿಕೊಂಡು ಸಮಯ ವ್ಯರ್ಥ ಮಾಡದೇ ಓದಿಕೊಂಡು ತಮ್ಮ ಹಾದಿಯಲ್ಲಿ ಮುನ್ನಡೆಯಬೇಕು. ಹೀಗೆಂದ ತಕ್ಷಣ ಹೆಚ್ಚಿನ ಅಂಕಪಡೆಯುವ ಬುದ್ಧಿವಂತ ಎಂದಷ್ಟೆ ಎನಿಸಿಕೊಳ್ಳಬೇಕೆನ್ನುವುದಲ್ಲ. ಜೀವನದಲ್ಲಿ ಏನಾದರೂ ವಿಶಿಷ್ಟವಾದದ್ದನ್ನು ಸಾಧಿಸಬೇಕೆಂಬ ಮಹದಾಸೆಯು ನಮ್ಮ ಮನದಾಳದಲ್ಲಿ ಹುದುಗಿರಬೇಕು.
ಸಮಯ ಹಾಳುಮಾಡದೇ ಓದಿನಲ್ಲಿ ತಲ್ಲೀನನಾಗಿ ನಮಗೆ ಬಹಳ ಇಷ್ಟವಾದ ವಿಷಯವನ್ನು ಆಯ್ಕೆಮಾಡಿಕೊಂಡು ಆ ವಿಷಯದ ಬಗ್ಗೆ ಹೆಚ್ಚಿನ ರೀತಿಯ ಅಭ್ಯಾಸ ಮಾಡುವುದರಲ್ಲಿ ನಮಗೆ ವಿಶೇಷವಾದ ಆಸಕ್ತಿಯೂ ಇರಬೇಕು. ಪಾಲಕರ ಪ್ರಾಮಾಣಿಕತೆಯ ನಡೆನುಡಿ, ಪರಿಶ್ರಮದ ಜೀವನವಿಧಾನ, ಗುರು ಹಿರಿಯರನ್ನು ಗೌರವಿಸುವ ಮನೋಭಾವ ಎಳವೆಯಲ್ಲೇ ಮೈಗೂಡಿಸಿಕೊಳ್ಳುವುದರಿಂದ ಮುಂದಿನ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ. ಮನೆಯ ಎಲ್ಲ ಸದಸ್ಯರು ಇರುವಂಥ ತುಂಬುಕುಟುಂಬದಲ್ಲಿ ಜೀವನ ಲಭಿಸುವುದರಿಂದ ಜನರೊಂದಿಗೆ ಬೆರೆಯುವ ಸ್ವಭಾವ ತನ್ನಿಂದ ತಾನಾಗಿಯೇ ಬರುತ್ತದೆ. ಜೀವನದಲ್ಲಿ ಹೇಗೆ ಪ್ರಾಮಾಣಿಕತೆ, ಸಾಮರಸ್ಯ ಮತ್ತು ನ್ಯಾಯಪರ ನಡೆಗಳನ್ನಿಟ್ಟುಕೊಂಡು ಬದುಕಬೇಕೆಂಬ ತಿಳಿವಳಿಕೆ ಅತ್ಯಗತ್ಯ. ಬಾಲ್ಯದಲ್ಲಿ ಇಂತಹ ವಾತಾವರಣ ಯಾವನೇ ಒಬ್ಬ ವ್ಯಕ್ತಿಯ ಮೇಲೆ ಗಾಢಪರಿಣಾಮವನ್ನುಂಟುಮಾಡಿ, ಅವನಿಗೆ ತನ್ನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತದೆ.
ಉತ್ತಮ ಬುನಾದಿ
ಅವಿಭಕ್ತ ಕುಟುಂಬದಲ್ಲಿ ಎಲ್ಲರೂ ಒಂದಾಗಿ ಬಾಳುವ ಜೀವನ ಸಾಗಿಸುತ್ತಿದ್ದ ಕಾಲಮಾನ ಹಿಂದಿನದು. ಅಂತಹ ತುಂಬು ಕುಟುಂಬದಲ್ಲಿ ಬಾಲ್ಯ ಕಳೆದವರಿಗೆ ಸಹಬಾಳ್ವೆಯ ಅರಿವು-ಅನುಭವ ಇರುತ್ತದೆ. ತನ್ನದು ಎಂಬ ತೀರಾ ಸಂಕುಚಿತ ಭಾವನೆಗಿಂತ ತಮ್ಮದು ಎಂಬ ವಿಶಾಲ ಮನೋಭಾವವನ್ನು ಮೈಗೂಡಿಸಿ ಕೊಂಡಿರಬೇಕು. ಎಲ್ಲರೊಂದಿಗೆ ಹೊಂದಿಕೊಂಡು ಬದುಕುವ ಜೀವನವಿಧಾನದ ಪರಿಪಾಟವೂ ತಿಳಿಯುತ್ತದೆ. ಹಾಗೆಯೇ ಗುರು-ಹಿರಿಯರ ಆಶೀರ್ವಾದ, ಒಡನಾಟ, ವಿಶ್ವಾಸವನ್ನು ಹೊಂದಿರಬೇಕು. ಹಿರಿಯರೂ, ಸಂಸ್ಕಾರವಂತರೂ, ಸಚ್ಚಾರಿತ್ರರೂ, ಸಜ್ಜನರೂ ಆಗಿರುವ ಹಿರಿಯ ವ್ಯಕ್ತಿಗಳು ತಮ್ಮಲ್ಲಿರುವ ಉತ್ತಮ ಅಂಶಗಳನ್ನೆಲ್ಲ ಧಾರೆಯೆರೆಯುತ್ತಾರೆ. ಇದರಿಂದ ಕಲ್ಲಿನ ಬಂಡೆಯಂತಿದ್ದ ನಾವು ದೇವಸ್ಥಾನದಲ್ಲಿರುವ ದೇವರ ವಿಗ್ರಹದಂತೆ ಕಂಗೊಳಿಸುವುದರಲ್ಲಿ ಅನುಮಾನವೇ ಇಲ್ಲ. ಇದರ ಪರಿಪಕ್ವತೆಯಿಂದಾಗಿ ಪರೋಪಕಾರ, ಅನುಕಂಪ ಮತ್ತು ಪ್ರೀತಿವಾತ್ಸಲ್ಯಗಳಿಂದ ಸಮಾಜಮುಖಿಯಾಗಿ ಬಾಳ್ವೆ ನಡೆಸುವುದರಲ್ಲಿ ಅನುಮಾನವೇ ಇಲ್ಲ. ಜೊತೆಜೊತೆಗೇ, ವೃತ್ತಪತ್ರಿಕೆಗಳನ್ನು ಓದುವುದು, ಅಲ್ಪಸ್ವಲ್ಪ ತಿಳಿವಳಿಕೆಯನ್ನೂ ಪಡೆದುಕೊಳ್ಳುವುದು ಕೂಡ ಸಾಧ್ಯವಾಗುತ್ತದೆ. ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ತಂದೆ ಯಲ್ಲಿಯೂ ನೈರ್ಮಲ್ಯ, ಪ್ರೀತಿವಿಶ್ವಾಸ ಅಮ್ಮನಿಂದಲೂ ಕಲಿತಲ್ಲಿ ಉತ್ತಮ ನಾಗರಿಕನಾಗುವ ಲಕ್ಷಣಗಳೆಲ್ಲವನ್ನು ಮೈಗೂ ಡಿಸಿಕೊಳ್ಳುವುದರಿಂದ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನಗಳೂ ಲಭಿಸುತ್ತವೆ.
ಯಾವುದೇ ಜಾತಿ, ಮತ, ಭೇದವಿಲ್ಲದೆ ಹಬ್ಬದ ಸಮಯದಲ್ಲಿ ಎಲ್ಲರೊಂದಿಗೆ ಬೆರೆತು ಸಂಭ್ರಮವನ್ನಾಚರಿಸುವುದು ಮತ್ತು ಅನೇಕ ಧರ್ಮಗ್ರಂಥಗಳನ್ನು ಹಾಗೂ ಅನೇಕ ಮಹಾತ್ಮರ, ಋಷಿಗಳ ಬದುಕಿನ ಕಥೆಗಳನ್ನು ಓದುವುದರಿಂದ ನಮ್ಮಲ್ಲಿರುವ ತಿಳಿವಳಿಕೆಯ ವ್ಯಾಪ್ತಿ ದುಪ್ಪಟ್ಟುಗೊಳ್ಳುತ್ತದೆ. ಪರಸ್ಪರ ಸಹಿಷ್ಣುತೆ, ಪ್ರೀತಿ, ವಿಶ್ವಾಸ, ಸಂಸ್ಕಾರಯುತ ನಡವಳಿಕೆ ಮತ್ತು ವಿಶಾಲ ಮನೋಭಾವನೆಯನ್ನು ಬೆಳೆಸಿಕೊಳ್ಳುವುದಕ್ಕೆ ನಮಗೆ ಸಾಧ್ಯವಾಗುತ್ತದೆ. ನಾವು ಶ್ರಮಜೀವಿ ಗಳಾಗಿ ನಮ್ಮ ದುಡಿಮೆಯ ಸಮಯ ಹಾಗೂ ಓದಿನ ಸಮಯವನ್ನು ಹೊಂದಿಸಿಕೊಳ್ಳುವುದರಿಂದ ಕಷ್ಟದ ಜೀವನವಿರುವುದಿಲ್ಲ. ಕೆಲ ವೊಮ್ಮೆ ಜೀವನದಲ್ಲಿ ಯಶಸ್ಸು ಸಾಧಿಸಲು ಯಾವುದೋ ಒಂದು ತಿರುವು ಸಿಕ್ಕಿಬಿಡುತ್ತದೆ. ಯಾರಿಗೂ ಅದು ಮೊದಲೇ ಗೊತ್ತಿರುವುದಿಲ್ಲ. ನಾವು ಸಹ ಅದೇ ರೀತಿಯ ಪ್ರಯತ್ನದ ಹಾದಿಯತ್ತ ಮುನ್ನಡೆಯುತ್ತಿರಬೇಕು. ಮಾತ್ರವಲ್ಲ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮುನ್ನಡೆಯಬೇಕು. ಒಬ್ಬ ಹೃದಯವಂತ ಮನುಷ್ಯನು ಮಾತ್ರ ಸದಾ ನಸುನಗುತ್ತ ಎಲ್ಲವನ್ನೂ ಸಹಿಸಿ ಬದುಕಬಲ್ಲ. ಕವಿಹೃದಯವಿಲ್ಲದ ವ್ಯಕ್ತಿ ಅರಸಿಕನೆನಿಸುತ್ತಾನೆ ಮತ್ತು ಆತನಿಗೆ ಸುತ್ತಲ ಜಗದ ವಿಚಾರಗಳನ್ನು ಸಮಗ್ರವಾಗಿ ಗ್ರಹಿಸಿ ಸ್ಪಂದಿಸುವ ಶಕ್ತಿ, ಮನೋಭಾವ ಇರುವುದಿಲ್ಲ. ಉತ್ತಮ ಬರಹಗಾರರಾಗಿ, ಕವಿಯಾಗಿ, ಸಂಗೀತಜ್ಞಾನಿಯಾಗಿ ಎಲ್ಲರೊಂದಿಗೆ ಬೆರೆತು ಬಾಳುವ ಗುಣವನ್ನು ಹೊಂದಿರಬೇಕು. ರಾಗಗಳ ಮೂಲಕ ರೋಗಗಳನ್ನು ಗುಣಪಡಿಸುವ, ಮಾನಸಿಕ ತುಮುಲ-ಗೊಂದಲ, ವೇದನೆಗಳನ್ನು ತೊಡೆದುಹಾಕುವ ಶಕ್ತಿಯುಳ್ಳ ಸಂಗೀತವನ್ನು ಆಲಿಸುವುದರಿಂದ, ಕಲಿಯುವುದರಿಂದ ಮತ್ತು ದಿನನಿತ್ಯ ಅಭ್ಯಾಸ (ತಾಲೀಮು) ಮಾಡುವುದರಿಂದ ಬದುಕನ್ನು ಸುಂದರವಾಗಿಡಲು ಸಾಧ್ಯ.
ಕಲಾಂ ಅವರ ಚಿಂತನೆ ಸಾಕಾರಗೊಳ್ಳಬೇಕಾದರೆ ನಾವು ಕೃಷಿಕ್ಷೇತ್ರ ಮತ್ತು ಆಹಾರ ಸಂಸ್ಕರಣೆಗೂ ಕಾಯಕಲ್ಪ ನೀಡುವುದು, ಮೂಲಭೂತ ಸೌಕರ್ಯ ಮತ್ತು ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುವುದು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ಸಿಗುವಂತೆ ಮಾಡಬೇಕು. ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಕ್ಷೇತ್ರಗಳಲ್ಲಿ ಕ್ರಾಂತಿಯಾಗಬೇಕು ಹಾಗೂ ರಕ್ಷಣಾ ತಂತ್ರಜ್ಞಾನ, ಪರಮಾಣು ತಂತ್ರಜ್ಞಾನ, ಆಂತರಿಕ್ಷ ತಂತ್ರಜ್ಞಾನದಲ್ಲಿ ಹೆಚ್ಚಿನ ಸಾಧನೆ ಆಗುವಂತೆ ಮುಂದಿನ ಪ್ರಜೆಗಳಾದ ನಾವು ಆಗ್ರಹಿಸುವುದು, ಶ್ರಮಿಸುವುದು ಅತ್ಯಗತ್ಯವಾಗಿದೆ. ನಾವು ನಮ್ಮ ಬೆಳಗನ್ನು ಧರ್ಮಗ್ರಂಥಗಳನ್ನು ಓದುವ ಮೂಲಕ ಆರಂಭ ಮಾಡುವುದು, ಪ್ರತಿದಿನ ಹಗಲ ವೇಳೆ ನಾವು ಮಾಡುವ ಕೆಲಸದಲ್ಲಿ ಕಾರ್ಯನಿರತರಾಗಿರುವುದು, ಪ್ರಾಮಾಣಿಕತೆ, ವ್ಯಕ್ತಿನಿಷ್ಠೆ, ಮಾನವೀಯ ಅನುಕಂಪ ಹಾಗೂ ಮಕ್ಕಳೊಂದಿಗೆ ಬೆರೆಯುವುದು ಹಾಗೂ ನಾಯಕತ್ವ ಗುಣದ ಬಗ್ಗೆ ನಾವು ತಿಳಿದುಕೊಳ್ಳುವುದು – ಇವೆಲ್ಲ ಕಲಾಂರ ಆದರ್ಶ ಮೇಲ್ಪಂಕ್ತಿ.
ನನಗೆ ತಿಳಿದಂತೆ ನಾನು ಆಳವಡಿಸಿಕೊಳ್ಳಬಹುದಾದ ಕಲಾಂ ಅವರ ಹತ್ತು ಸೂತ್ರಗಳು-
ನಾನು ನನ್ನ ವಿದ್ಯಾಭ್ಯಾಸದ ಬಗ್ಗೆ ಅಥವಾ ನನಗೆ ನೀಡಿದ ಕಾರ್ಯವನ್ನು ಶ್ರದ್ಧೆಯಿಂದ ಕೈಗೊಂಡು ಅದರಲ್ಲಿ ಯಶಸ್ಸು ಕಾಣುತ್ತೇನೆ: ಅಂದರೆ ನಮ್ಮ ಪರಿಪೂರ್ಣವಾದ ವಿದ್ಯಾಭ್ಯಾಸದ ಸಮಯದಲ್ಲಿ ಅತ್ಯಂತ ಶ್ರದ್ಧೆಯಿಂದ ಅಭ್ಯಾಸ ಕೈಗೊಂಡು ಅದರಲ್ಲಿ ಯಶಸ್ಸು ಕಾಣುವುದು. ಇದರಲ್ಲಿ ಬಸವಣ್ಣ ಹೇಳಿದಂತೆ ಕಾಯಕವೇ ಕೈಲಾಸ ಎಂಬ ಉಕ್ತಿಯೂ ಈ ವಾಕ್ಯಪುಂಜಕ್ಕೆ ಹೋಲುತ್ತದೆ.
ನಾನು ಕನಿಷ್ಠ ಪಕ್ಷ ಹತ್ತು ಜನರಿಗೆ ಓದಲು ಮತ್ತು ಬರೆಯಲು ಕಲಿಸಿಕೊಡುತ್ತೇನೆ: ಒಂದು ದೇಶ ಪ್ರಗತಿಯನ್ನು ಸಾಧಿಸಬೇಕಾದರೆ ವಿದ್ಯೆಯು ಮಹತ್ತರ ಪಾತ್ರವಹಿಸುತ್ತದೆ. ಎಷ್ಟೋ ಬಡ ಮಕ್ಕಳಿಗೆ ಆರ್ಥಿಕ ಸೌಲಭ್ಯವಿಲ್ಲದೆ ಶಾಲೆಗೆ ಸೇರಲು ಅವಕಾಶವಿರುವುದಿಲ್ಲ. ಅವರಿಗೆ ನನ್ನಲ್ಲಿರುವ ಜ್ಞಾನವನ್ನು ಧಾರೆಯೆರೆಯುವ ಮೂಲಕ ಕನಿಷ್ಠ ಹತ್ತು ಜನರಿಗೆ ವಿದ್ಯಾರ್ಜನೆಗೆ ನೆರವಾಗುತ್ತೇನೆ. ದುಡ್ಡೇ ದೊಡ್ಡಪ್ಪ, ವಿದ್ಯೆ ಅದರಪ್ಪ ನಾಣ್ಣುಡಿ ಈ ವಾಕ್ಯಗಳಿಗೆ ಉತ್ತಮ ಅರ್ಥವನ್ನು ನೀಡುತ್ತದೆ.
ನಾನು ಕನಿಷ್ಠ ಪಕ್ಷ ಹತ್ತು ಸಸಿಗಳನ್ನು ನೆಟ್ಟು ನಿರಂತರ ಕಾಳಜಿಯ ಮೂಲಕ ಅವುಗಳು ಬೆಳೆಯುವುದನ್ನು ದೃಢಪಡಿಸುತ್ತೇನೆ: ಪರಿಸರದಲ್ಲಿ ಆಮ್ಲಜನಕವನ್ನು ಹೆಚ್ಚಿಸಿ, ಇಂಗಾಲದ ಡೈ-ಆಕ್ಸೈಡ್ನ ಪ್ರಮಾಣ ನಿಯಂತ್ರಿಸುವುದರಲ್ಲಿ ಸಸ್ಯಗಳ ಪಾತ್ರ ಮಹತ್ತ್ವವಾದದ್ದು. ಅಂತೆಯೇ ಪರಿಸರದ ಸಮತೋಲನ, ಕಾಲಕಾಲಕ್ಕೆ ಮಳೆ, ಬೆಳೆಯಾಗಿ ಉತ್ತಮ ಜೀವನ ನಡೆಸಬಹುದು. ಹಸಿರೇ ಉಸಿರು, ಮನೆಗೊಂದು ಮರ, ಊರಿಗೊಂದು ವನ ಎಂಬ ನಾಣ್ಣುಡಿ ಇದಕ್ಕೆ ಉತ್ತಮ ಸಂದೇಶವನ್ನು ನೀಡುತ್ತದೆ.
ನಾನು ಹಳ್ಳಿ ಮತ್ತು ಪಟ್ಟಣ ಪ್ರಾಂತಕ್ಕೆ ಭೇಟಿಯಿತ್ತು ಕುಡಿತದ ಚಟದಿಂದ ಮತ್ತು ಜೂಜಾಟದಿಂದ ಬಳಲುವವರನ್ನು ಅದರಿಂದ ಮುಕ್ತರನ್ನಾಗಿಸುತ್ತೇನೆ: ಇಂದಿನ ಪೀಳಿಗೆಯಲ್ಲಿ ಮನುಷ್ಯರನ್ನು ಕೊಲ್ಲುವ ವಸ್ತುಗಳಲ್ಲಿ ಕುಡಿತವೂ ಒಂದು. ಜನರು ಅದರ ವ್ಯಾಮೋಹಕ್ಕೆ ಒಳಗಾಗಿ ತಮ್ಮ ಜೀವನವನ್ನೇ ಹಾಳುಮಾಡಿಕೊಳ್ಳುತ್ತಾರೆ. ಹಾಗೂ ಜೂಜಾಟದಿಂದಲೂ ಸಹ ತಮ್ಮ ಸಂಸಾರ ಬೀದಿಪಾಲಾಗುವುದನ್ನು ಲೆಕ್ಕಿಸದೇ ಅದರಲ್ಲಿ ಸಿಲುಕಿ ಹೊರಗೆ ಬರಲಾರದೆ ವಿಲಿವಿಲಿ ಒದ್ದಾಡಿಕೊಂಡು ನಂತರ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಇಂತಹ ದುಶ್ಚಟಗಳನ್ನು ನಿಯಂತ್ರಿಸಲು ಜನರಿಗೆ ಇವುಗಳಿಂದ ಆಗುವ ಅನಾಹುತಗಳ ಬಗ್ಗೆ ಮತ್ತು ಕಾನೂನು ಕ್ರಮಗಳ ಬಗ್ಗೆ ವಿವರವಾಗಿ ಮನಸ್ಸಿಗೆ ಮುಟ್ಟುವಂತೆ ಮನವರಿಕೆ ಮಾಡುತ್ತೇನೆ. ಇದರಿಂದ ದೇಶವು ಸುವ್ಯವಸ್ಥೆಯಲ್ಲಿರುತ್ತದೆ.
ನಾನು ದೇಶಬಾಂಧವರ ಕಷ್ಟಗಳನ್ನು ಹೋಗಲಾಡಿಸಲು ನನ್ನಿಂದಾದ ಪ್ರಯತ್ನ ಮಾಡುತ್ತೇನೆ: ಬಹಳ ಕಷ್ಟದಲ್ಲಿರುವ ಅನೇಕ ಮುಗ್ಧಜನರಿಗೆ ಧನ, ವಿದ್ಯೆ ಹಾಗೂ ಮೂಲಭೂತ ಸೌಕರ್ಯಗಳು ದೊರೆಯುವಂತೆ ನಾನು ನನ್ನಿಂದಾದ ಪ್ರಯತ್ನ ಮಾಡುತ್ತೇನೆ.
ನಾನು ಪ್ರಾಮಾಣಿಕನಾಗಿದ್ದುಕೊಂಡು ಲಂಚರಹಿತ ಸಮಾಜಕ್ಕಾಗಿ ನಿರಂತರ ಪ್ರಯತ್ನ ಮಾಡುತ್ತೇನೆ: ನಮ್ಮ ದೇಶದಲ್ಲಿ ತಲೆಯೆತ್ತಿರುವ ಭ್ರಷ್ಟಾಚಾರ, ಮೋಸ ಮುಂತಾದ ಕೃತ್ಯಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಲಂಚರಹಿತ ಸಮಾಜಕ್ಕಾಗಿ ನಾವು ನಿರಂತರ ಪ್ರಯತ್ನ ಮಾಡೋಣ. ಭಾರತ ಮಾತೆಯ ಆಶೀರ್ವಾದಕ್ಕಾಗಿ ನಮ್ಮ ಜೀವವನ್ನೆ ಮುಡಿಪಾಗಿಡೋಣ.
ನಾನು ಯಾವಾಗಲೂ ಮಾನಸಿಕ ಮತ್ತು ದೈಹಿಕ ಅಂಗವಿಕಲರ ಸ್ನೇಹಿತನಾಗಿ ಅವರಿಗೂ ಕೂಡ ನಮ್ಮೆಲ್ಲರಂತೆ ಸಹಜವಾಗಿರುವೆವೆಂಬ ಭಾವನೆಯುಂಟಾಗುವಂತೆ ಮಾಡುತ್ತೇನೆ: ವಿಕಲಚೇತನರಿಗೂ, ಮಾನಸಿಕ ಅಸ್ವಸ್ಥರಿಗೂ ನಮ್ಮಂತೆಯೇ ಪ್ರಪಂಚದ ಅರಿವುಂಟಾಗುವಂತೆ ಮಾಡಬೇಕಾದದ್ದು ಕರ್ತವ್ಯ. ಅದಕ್ಕಾಗಿ ಯಾವನಾದರೂ ಒಬ್ಬ ಅಂಗವಿಕಲನದಾದರೂ ಆರೈಕೆ, ವಿದ್ಯಾಭ್ಯಾಸದ ವ್ಯವಸ್ಥೆಯನ್ನು ರೂಪಿಸುವುದಕ್ಕೆ ನಾವು ಅವನ ಸ್ನೇಹಿತನಂತೆ ವರ್ತಿಸೋಣ.
ನಾನು ನನ್ನ ದೇಶ ಮತ್ತು ದೇಶಬಾಂಧವರ ಯಶಸ್ಸನ್ನು ಸಂಭ್ರಮದಿಂದ ಆಚರಿಸುತ್ತೇನೆ: ನಾವು ನಮ್ಮ ದೇಶಕ್ಕಾಗಿ ಹೋರಾಡಿದ ಮಹಾತ್ಮರ ತ್ಯಾಗ, ಬಲಿದಾನಗಳ ಕುರಿತು ಹಾಗೂ ಸಾಮಾಜಿಕ ಮತ್ತು ಇತರ ಕ್ಷೇತ್ರಗಳಲ್ಲಿ ಉನ್ನತ ಸ್ಥಾನ ಪಡೆದ ಎಲ್ಲ ದೇಶಬಾಂಧವರ ಹೋರಾಟದ ಫಲದ ಜಯಕ್ಕಾಗಿ ನಾವು ಸಂಭ್ರಮಪಡೋಣ.
ನಾನು ಯಾವುದೇ ರೀತಿಯ ಧಾರ್ಮಿಕ, ಮತೀಯ ಅಥವಾ ಭಾಷೀಯ ವಿದ್ವೇಷಗಳನ್ನು ಹುಟ್ಟುಹಾಕುವ ಕಾರ್ಯಗಳನ್ನು ಬೆಂಬಲಿಸುವುದಿಲ್ಲ.
ನಾನು ಜವಾಬ್ದಾರಿಯುತ ನಾಗರಿಕನಾಗುವ ದಿಶೆಯಲ್ಲಿ ಕಾರ್ಯಪ್ರವೃತ್ತನಾಗುವುದಲ್ಲದೆ ನನ್ನ ಕುಟುಂಬವನ್ನು ನ್ಯಾಯಯುತ ಮಾರ್ಗದಲ್ಲಿರುವಂತೆ ನೋಡಿಕೊಳ್ಳುತ್ತೇನೆ.
ಹೀಗೆ ನಾನು ಭಾರತಮಾತೆಯ ಮಗನಾಗಿ ಭಾರತಕ್ಕಾಗಿ, ಭಾರತದ ಏಳಿಗೆಗಾಗಿ ಶ್ರಮಿಸಿದ ಡಾ| ಅಬ್ದುಲ್ ಕಲಾಂ ಅವರ ‘ಭಾರತ ೨೦೨೦’ರ ಕನಸನ್ನು ನನಸಾಗಿಸುವುದನ್ನು ನನ್ನ ಭವಿಷ್ಯದ ಆದರ್ಶಪಥವಾಗಿ ಸ್ವೀಕರಿಸಲು ಬಯಸಿರುವೆ.
Comments are closed.