ಕಾರ್ಯಕಾರಣ ಸಂಬಂಧವಿಲ್ಲದ ಯಾವೊಂದು ಕ್ರಿಯೆಗಳೂ ಈ ಜಗತ್ತಿನಲ್ಲಿಲ್ಲವೆ?
ಅಂತೂ ಮನೆ ದಾರಿ ನೆನಪಿದೆ ಅಂತಾಯ್ತು…. ಕೆಣಕಿದಳು ದೊಡ್ಡಕ್ಕ.
ನೆನಪಿರ್ಲಿಲ್ಲ ಕಣೇ, ದಾರೀಲಿ ಹೋಗೋರನ್ನ ಕೇಳ್ಕಂಡು ಹೆಂಗೋ ಬಂದು ಸೇರ್ಕಂಡೆ ಶೂಸು ಕಳಚುತ್ತಾ ಅನಂತಕೃಷ್ಣ ಪ್ರತಿಕ್ರಿಯಿಸಿದ.
ಬೆಂಗಳೂರಿಂದ ನೀನೇ ಕಾರು ಬಿಟ್ಕಂಡು ಬಂದ್ಯನೋ? ಎಷ್ಟೊತ್ತಿಗೆ ಹೊರಟಿದ್ದು? ಅಮ್ಮನಿಗೆ ಕುತೂಹಲ.
ಬೆಳಗಾಮುಂಚೆ, ಐದೈದೂವರೆ.
ಒಂದೂವರೆಗೆ ಮಧ್ಯಾಹ್ನದ ಊಟಕ್ಕೆ ಬಳ್ಳೆ ಹಾಕಿ ಅದಾಗಲೇ ಗಂಡಸರ ಪಂಕ್ತಿಯ ಊಟ ಮುಗಿದಿತ್ತು. ಹೆಂಗಸರು ಊಟಕ್ಕೆ ಕೂರುವ ಸವರಣೆಯಲ್ಲಿದ್ದರು.
ಇಡೀ ಒಂದು ಒಪ್ಪೊತ್ತು ಡ್ರೈವ್ ಮಾಡ್ಕಂಡು ಬರೋದು ಅಂದ್ರೆ ಮೈಕೈ ಹುಡಿಯಾಗಿರುತ್ತೆ. ಹೋಗು, ಊಟ ಗೀಟ ಮಾಡಿ ರೆಸ್ಟ್ ತಗಾ…. ದೊಡ್ಡ ಭಾವ ಎಲಡಿಕೆ ತಟ್ಟೆ ಎದುರಿಗೆ ಎಳೆದುಕೊಂಡು ಅಪ್ಪಣೆ ಕೊಡಿಸಿದರು. ಅಷ್ಟರಲ್ಲಿ ದೊಡ್ಡಕ್ಕನ ಮಗಳು ಮಂಗಳಾ ಬಲಗೈಯ ತುದಿಬೆರಳುಗಳಲ್ಲಿ ಬಿಸಿ ಕಾಫಿಯ ಲೋಟ ಹಿಡಿದುಕೊಂಡು ಒಳಗಿನಿಂದ ಬಂದಳು. ದಾರಿ ಬಿಡಿ, ದಾರಿ ಬಿಡಿ, ಬಿಸೀ ಉಂಟು ಕಾಫಿ.
ಮೇಜಿನ ಮೇಲೆ ಕಾಫಿಯ ಲೋಟ ಬಂದು ಕೂತಿತು. ನೀವೂ ಇದೀರಾ ದಂಡಕ್ಕೆ. ಅಷ್ಟು ದೂರದಿಂದ ಸುಸ್ತಾಗಿ ಬಂದಿರೋನಿಗೆ ಮೊದಲು ಒಂದು ಲೋಟ ಕಾಫಿ ತಂದ್ಕೊಡ್ಬೇಕು ಅಂತ ಗೊತ್ತಾಗ್ಲಿಲ್ಲ. ನಮ್ಮ ಮಂಗಳೀನ ನೋಡಿ ಕಲೀರಿ…. ಪುಗಸಟ್ಟೆ ಒಂದು ಹೊಗಳಿಕೆ ಹಾಕಿ ಅನಂತಕೃಷ್ಣ ಕಾಫಿಯ ಲೋಟಕ್ಕೆ ಕೈಹಾಕಿದ.
ಊಟದ ಹೊತ್ತಿಗೆ ಕಾಫಿ ಕುಡಿದ್ರೆ ಊಟ ಸೇರುತ್ತನೋ? ಬೇಕಾರೆ ಊಟ ಆದ್ಮೇಲೆ ಕುಡೀಬೋದಾಗಿತ್ತು. ಸಣ್ಣಕ್ಕ ಆಕ್ಷೇಪಣೆ ಮಾಡಿದಳು.
ಆಮೇಲೂ ಕುಡಿದ್ರಾಯ್ತು ಕಣೇ, ಸರೀನಾ?
ಕಾಫಿ ಹಂಡೆ ನೀನು…. ಅನ್ನುತ್ತಾ ಹಳೆಯ ನೆನಪುಗಳಿಗೆ ಕಚಕುಳಿ ಕೊಟ್ಟಳು ದೊಡ್ಡಕ್ಕ.
ಪುರಾಣ ಮಾಡೋಕೆ ಆಮೇಲೆ ಬೇಕಾದಷ್ಟು ಹೊತ್ತಿರುತ್ತೆ. ಮೊದಲು ಊಟಗೀಟ ಮುಗಿಸಿ. ಅಪ್ಪನ ಆರ್ಡರು.
ಓ, ಬಳ್ಳೆ ಹಾಕಿದ್ದು ರೆಡೀ ಉಂಟು. ಹೆಂಚಿಗೆ ಅನ್ನ ತೋಡ್ಕಂಡು ಕಾಯ್ತಿದ್ದಾರೆ ಭಟ್ರು. ಹೋಗಿ ಕೂರೋದೊಂದೇ ಬಾಕಿ. ಬೇಗ ಕೈಕಾಲು ತೊಳ್ಕಂಡು ಬಾರೋ ಪುಣ್ಯಾತ್ಮ. ಬರೋನು ಬಂದೆ, ಇನ್ನೊಂಚೂರು ತಡಮಾಡಿ ಬಂದಿದ್ರೆ ನಮ್ಮ ಊಟ ಆದ್ರೂ ಆಗಿರ್ತಿತ್ತು. ಆಗ್ಲೇ ಹೊಟ್ಟೇಲಿರೋ ಹುಳ ಎಲ್ಲಾ ನೆಗೆದು ಬಿದ್ದಿದಾವೆ…. ಅವಸರ ಮಾಡಿದಳು ಸಣ್ಣಕ್ಕ.
ಅಡಿಗೆಗೆ ಭಟ್ರು ಬಂದಾಗಿದ್ಯಾ? ಹಂಗಿದ್ರೆ ಇವತ್ತು ಊಟಕ್ಕೆ ತಿಳಿಸಾರು. ಗಮ್ಮತ್ತಿರುತ್ತೆ ಊಟ…. ಅನಂತಕೃಷ್ಣ ಹಿಂದೊಂದು ಕಾಲದಲ್ಲಿ ತನ್ನದಾಗಿದ್ದ, ಈಗಲೂ ಅವನಿಗಾಗಿಯೇ ಮೀಸಲಾಗಿಟ್ಟಿರುವ, ಅರೆಗತ್ತಲಿನ ಕೋಣೆ ಹೊಕ್ಕು ಬಟ್ಟೆ ಬದಲಿಸಿದ. ಮಂಚದ ಮೇಲೆ ಚೂರೂ ಸುಕ್ಕಿಲ್ಲದಂತೆ ಕೈಯಿಂದ ತೀಡಿ ತೀಡಿ ಹಾಸಿಟ್ಟ ಹಾಸಿಗೆ. ಕಾಲಬುಡದಲ್ಲಿ ಮಡಿಚಿಟ್ಟ ದಪ್ಪದ ಬೆಡ್ಶೀಟು. ಅವನಿಗೆ ಗೊತ್ತಿಲ್ಲದೆಯೇ ಅವನ ರೂಮೊಳಗೆ ಅದಾಗಲೇ ಬಂದು ಕೂತಿರುವ ಅವನೊಡನೆ ಪ್ರಯಾಣಿಸಿ ಬಂದ ಸೂಟ್ಕೇಸುಗಳು. ಕಳಚಿದ ಶರ್ಟು, ಪ್ಯಾಂಟುಗಳನ್ನು ಗೋಡೆಯ ಮೇಲಿನ ಗಿಳಿಗೂಟಕ್ಕೆ ನೇಲಿಸಿ ಅನಂತಕೃಷ್ಣ ಲುಂಗಿಧಾರಿಯಾಗಿ ಹಗುರಾದ. ಬಚ್ಚಲು ಹೊಕ್ಕರೆ ಕಾಲು ತೊಳೆಯಲು ಹದ ಬಿಸಿಯ ನೀರು. ಗೋಡೆಯ ಬದಿಗೆ ಉದ್ದಕ್ಕೆ ಕಟ್ಟಿದ್ದ ತುಕ್ಕು ಬಂದ ತಂತಿಯ ಮೇಲೆ ಒಗೆದು ಒಣಹಾಕಿದ ಯಾರ್ಯಾರದ್ದೋ ಒಳ ಉಡುಪುಗಳು. ಟವೆಲ್ಲುಗಳು. ಮುಲಾಜಿಲ್ಲದೆ ಒಂದು ಟವೆಲ್ ಎಳೆದುಕೊಂಡು ಕೈ ಕಾಲು ಮುಖ ವರೆಸಿಕೊಂಡ. ಹೆಂಡತಿ ಜೊತೆಗೆ ಬಂದಿದ್ದರೆ ದುರುಗುಟ್ಟುತ್ತಿದ್ದಳು, ಥೂ, ಯಾರ ಟವೆಲ್ಲೋ ಏನೋ, ಅಸಂಯ್ಯ ಆಗಲ್ವಾ?
ಹೊರಗಿನವರು ಇಲ್ಲಿ ಯಾರಿಲ್ಲ. ಎಲ್ಲರೂ ನಮ್ಮವರೇ. ಆ ಕ್ಷಣದ ತುರ್ತಿಗೆ ಯಾರದೋ ಟವೆಲ್ ಎಳೆದುಕೊಂಡರೆ ಯಾರೂ ತಪ್ಪು ತಿಳಿಯುವುದಿಲ್ಲ.
ಉದ್ದಕ್ಕೆ ಹೆಂಗಸರು ಸಾಲುಹಿಡಿದು ಕೂತು ಇವನ ಬರವಿಗೆ ಕಾಯುತ್ತಿದ್ದರು. ಕುಡಿಬಾಳೆಲೆಯ ಹಿಂಬದಿಗೆ ಕೂರಲು ಮಣೆ. ಎಲೆ ತುದಿಯಲ್ಲಿ ಉಪ್ಪು, ಉಪ್ಪಿನಕಾಯಿ.
ನಂಗೆಂತಕ್ಕೆ ಮಣೆ? ನಾನೇನು ನೆಂಟನಾ? ಮಣೆ ತೆಗೆದು ಗೋಡೆಗೆ ವರಗಿಸಿಟ್ಟು ನೆಲದ ಮೇಲೆ ಚಟ್ಟೆಮುಟ್ಟೆ ಹಾಕಿ ಕೂತುಕೊಂಡ ಅನಂತಕೃಷ್ಣ. ಭಟ್ಟರ ಜೊತೆ ಬಂದಿದ್ದ ಇಬ್ಬರು ತೈನಾತಿಗಳು ಬಡಿಸಲು ನಿಂತಿದ್ದರು. ರಸನೇಂದ್ರಿಯದ ಮೊಗ್ಗುಗಳನ್ನು ಕೆರಳಿಸುವಷ್ಟು ರುಚಿಯಾಗಿತ್ತು ಅನ್ನ, ಸಾರು, ಪಲ್ಯಗಳ ಸಾದಾ ಊಟ. ತುಪ್ಪದ ಮಿಳ್ಳೆ ಹಿಡಿದು ಬಂದವಳು ಮಂಗಳಾ.
ಚೌಕಾಶಿ ಮಾಡ್ಬೇಡ ಕಣೇ, ಇನ್ನೊಂದು ಚಮಚ ಜಾಸ್ತಿ ಹಾಕು….. ಅನಂತಕೃಷ್ಣ ಇಷ್ಟು ಹೇಳಿದ್ದೇ ಬಡಿಸುವ ಕೈ ಧಾರಾಳವಾಯ್ತು. ಮತ್ತೆ ಹೆಂಡತಿಯ ನೆನಪು. ನೋಡಿದ್ದರೆ ಬೊಂಬಡಾ ಬಜಾಯಿಸುತ್ತಿದ್ದಳು. ‘ಕೊಲೆಸ್ಟ್ರಾಲ್ ಜಾಸ್ತಿಯಾಗುತ್ತೆ’ ಎಂದು ಎಣ್ಣೆ, ಬೆಣ್ಣೆಗೆ ಹಿಡಿತ, ಉಪ್ಪಿಗೆ ಕತ್ತರಿ, ಸಕ್ಕರೆಗೆ ರೇಷನ್.
ಖಾಯಿಲೆ ಬರ್ಲೇಬೇಕು ಅಂತಿದ್ರೆ ಬಂದೇ ಬರುತ್ತೆ ಕಣೇ. ಬಂದ ಮೇಲೆ ಹೇಗೂ ಬಾಯಿ ಕಟ್ಟಬೇಕು. ಬರೋಕೆ ಮೊದಲಾದ್ರೂ ಚೆನ್ನಾಗಿ ಉಂಡು, ತಿಂದು ಹಾಯಾಗಿರೋದು ಕಲಿ…. ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಅನಂತಕೃಷ್ಣನ ವಾದ. ಅವಳ ಪ್ರಕಾರ ಅವಳು ಸರಿ. ಕೂತಲ್ಲೇ ಕೂತು ಕೆಲಸ ಮಾಡುವ ಗಂಡನ ಆರೋಗ್ಯದ ಕುರಿತಾದ ಕಾಳಜಿ ಅವಳ ಗುತ್ತಿಗೆ. ಈ ಕಾಳಜಿ ಅನಂತಕೃಷ್ಣನಿಗೆ ಹಿತವಲ್ಲದ್ದೇನಲ್ಲ. ಆದರೂ ಒಂದು ಅಡ್ಡ ಮಾತು ಹಾಕಿ ಹೆಂಡತಿಯನ್ನು ಗೋಳುಗುಟ್ಟಿಸುವುದರಲ್ಲಿ ಖುಷಿ.
ನೀನೇನಾದ್ರೂ ಡಾಕ್ಟ್ರು ಆಗ್ಬೇಕಿತ್ತು. ಪೇಷಂಟ್ಸ್ಗಳನ್ನು ಕೊಂದು ಕೈ ತೊಳ್ಕೋತಿದ್ದೆ ಛೇಡಿಸುತ್ತಿದ್ದ ಅನಂತಕೃಷ್ಣ.
ನೀನ್ಯಾಕೆ ಊಟಕ್ಕೆ ಕೂರ್ಲಿಲ್ವೇ ಚಿತ್ರಾಂಗಿ? ಮೂರನೇ ಪಂಕ್ತಿಗೆ ಭಟ್ರ ಜೊತೆ ಕೂತ್ಕೋತೀಯಾ? ಮಂಗಳಾ ಊಟಕ್ಕೆ ಕೂರದೆ ಬಡಿಸಲು ಸೆರಗು ಕಟ್ಟಿದ್ದನ್ನು ಅದೀಗಷ್ಟೇ ಗಮನಿಸಿದಂತೆ ವಿಚಾರಿಸಿಕೊಂಡ ಅನಂತಕೃಷ್ಣ.
ಪುಣ್ಯ, ಈಗ್ಲಾದ್ರೂ ನಿಂಗೆ ನೆನಪಾಯ್ತಲ್ಲ?
ಬೆಳಗ್ಗೆ ಸಮಾ ತಿಂಡಿ ಕತ್ತರಿಸಿದ್ದಿ ಅಂತ ಕಾಣುತ್ತೆ. ಹಸಿವಾಗ್ತಿಲ್ವೇನೋ?
ಎರಡನೇ ಪಂಕ್ತಿಗೆ ಬಡಿಸೋಕೇಂತ್ಲೇ ಅವಳು ಮೊದಲ ಪಂಕ್ತೀಲಿ ಕೂತು ಉಂಡಾಗಿದೆ…. ಉತ್ತರಿಸಿದ್ದು ಸಣ್ಣಕ್ಕ.
ಓ. ಅದಕ್ಕೇನಾ ಹಗೂರಕ್ಕೆ ಓಡಾಡ್ತಿರೋದು? ಅನಂತಕೃಷ್ಣನ ವ್ಯಾಖ್ಯಾನ ಮುಗಿಯುವುದರೊಳಗೆ ಏನೋ ಯೋಚಿಸುತ್ತಿದ್ದ ಅಮ್ಮ ಅಡ್ಡಬಾಯಿ ಹಾಕಿದಳು,
ಉಂಡ ಕೂಡ್ಲೆ ಒಂದು ಗಳಿಗೆ ಮಲಕ್ಕೋ. ಅಪರೂಪಕ್ಕೆ ಬಂದ್ರೂ ನಿಂಗೆ ಮನೇಲಿ ಕಾಲು ನಿಲ್ಲಲ್ಲ. ನೀವೂ ಒಂದು ಮಾತು ಹೇಳ್ರೇ. ಅವನ ಗೆಣೆಕಾರ ಊರು ಬಿಟ್ಟು ಎಲ್ಲೂ ಓಡಿ ಹೋಗಲ್ಲ…. ಇವನಿಗೆ ಕಿವಿ ತಿರುಪುವುದರ ಜೊತೆ ಅದೇ ಕೆಲಸ ಮಾಡುವಂತೆ ಹೆಣ್ಣುಮಕ್ಕಳಿಗೆ ಒಂದು ವಿನಂತಿ.
ಹೌದು ಕಣೋ, ಊರಿಗೆ ಬಂದಾಗ್ಲಾದ್ರೂ ಅಮ್ಮ ಹೇಳಿದ ಹಾಗೆ ಕೇಳು ಅಮ್ಮನ ಮಾತಿಗೆ ಒಗ್ಗರಣೆ ಹಾಕಿದರು ಅಕ್ಕ, ತಂಗಿ.
ಮೊಸರನ್ನ ಮುಗಿಸಿ ಏಳುವ ಮುನ್ನ ಎಲೆತುದಿಯಲ್ಲಿ ಮಿಕ್ಕಿದ್ದ ಮಿಡಿಉಪ್ಪಿನಕಾಯಿ ರಸದಲ್ಲಿ ತೋರುಬೆರಳು ಅದ್ದಿ ನೆಕ್ಕುವುದರಲ್ಲಿ ಗರ್ಕಾಗಿದ್ದ ಅನಂತಕೃಷ್ಣ ಊಂ ಅನ್ನಲಿಲ್ಲ, ಉಪ್ಪಿನಕಲ್ಲು ಅನ್ನಲಿಲ್ಲ.
* * *
ಯಾವತ್ತೂ ಮಧ್ಯಾಹ್ನ ಮಲಗಿ ಅಭ್ಯಾಸವಿಲ್ಲದ ಅನಂತಕೃಷ್ಣನಿಗೆ ಆವತ್ತು ದೂರದ ಪ್ರಯಾಣ ಮಾಡಿ ಬಂದ ದಣಿವಿಗೋ, ಹೊಟ್ಟೆ ಬಿರಿ ಉಂಡ ಬಿಸಿಯೂಟಕ್ಕೋ, ಅಥವಾ ಹುಟ್ಟಿದ ಮನೆಯ ತಂಪು ನೆರಳಿಗೆ ಬಂದ ನೆಮ್ಮದಿಗೋ, ಹೊಡೆದು ಹಾಕಿದಂತೆ ನಿದ್ದೆ ಬಂದಿತ್ತು. ಎಚ್ಚರಾಗುತ್ತಿದ್ದಂತೆ ಬಲ ಮಗ್ಗುಲಿಗೆ ಹೊರಳಿ ಕಿಟಕಿಯ ದಂಡೆಯ ಮೇಲಿಟ್ಟಿದ್ದ ಮೊಬೈಲ್ ಎತ್ತಿಕೊಂಡು ಗಂಟೆ ನೋಡಿದರೆ ಐದೂವರೆ. ಕಣ್ಣ ನೇರಕ್ಕೆ ಎದುರು ಗೋಡೆಯಲ್ಲಿ ಕೊಂಡಿಗೆ ಚಳ್ಳೆಹುರಿ ಕಟ್ಟಿ ಮೊಳೆಗೆ ನೇತುಹಾಕಿದ ಗಣಪತಿಯ ಪಟ. ಹೈಸ್ಕೂಲಿನಲ್ಲಿದ್ದಾಗ ಶ್ರದ್ಧಾಭಕ್ತಿಗಳಿಂದ ತಂದು ಗೋಡೆಗೆ ನೇಲಿಸಿದ್ದ ಆ ಪಟ ಆವತ್ತಿಂದ ಈವತ್ತಿನವರೆಗೆ ಜಾಗ ಬದಲಿಸದೆ ಅಲ್ಲೇ ಪ್ರತಿಷ್ಠಾಪನೆಯಾಗಿದೆ. ಬೆಳಗ್ಗೆ ಕಣ್ಣುಬಿಟ್ಟ ಕೂಡಲೆ ದೇವರ ಪಟ ನೋಡಿ ದಿನದ ಆರಂಭ. ರಾತ್ರಿ ಮಲಗುವಾಗ ಲೈಟ್ ಆರಿಸುವ ಮುನ್ನ ಮತ್ತೊಮ್ಮೆ ವಿಘ್ನನಿವಾರಕನಿಗೆ ಒಂದು ಸಾದರ ಪ್ರಣಾಮ. ಆವತ್ತು ತುದಿನಾಲಿಗೆಯಲ್ಲಿದ್ದ ‘ಬೆನಕ ಬೆನಕ, ಏಕದಂತ, ಪಚ್ಚೆಕಲ್ಲು, ಪಾಣಿಪೀಠ’ ಎಂದು ಶುರುವಾಗಿ ‘ಇಂತೀ ಒಪ್ಪುವ ಸಿದ್ಧಿವಿನಾಯಕನಿಗೆ ಇಪ್ಪತ್ತೊಂದು ನಮಸ್ಕಾರ’ ಅಂತ ಮುಕ್ತಾಯವಾಗುವ ದೊಡ್ಡಮ್ಮ ಹೇಳಿಕೊಟ್ಟ ಪ್ರಾರ್ಥನೆ ಈವತ್ತಿಗೂ ಮರೆತು ಹೋಗಿಲ್ಲ. ದೊಡ್ಡಮ್ಮನ ನೆನಪಿನೊಂದಿಗೆ ಮನಸ್ಸಲ್ಲಿ ಆರ್ದ್ರ ಭಾವನೆ. ಎಸ್ಸೆಲ್ಸಿ ಮುಗಿಸಿದ ಅನಂತಕೃಷ್ಣ ಪಿ.ಯು.ಸಿ.ಗೆ ಸೇರಲು ಅನಿವಾರ್ಯವಾಗಿ ಪೇಟೆ ಸೇರಿಕೊಳ್ಳಬೇಕಾದ ಸಂದರ್ಭದಲ್ಲಿ ಎದೆಒಡೆದುಕೊಂಡಿದ್ದಳು ದೊಡ್ಡಮ್ಮ. ‘ಹೋಗಬೇಡ’ ಅನ್ನಲಾರಳು. ಅಂದರೆ ಪ್ರಯೋಜನವೇನಿಲ್ಲ ಅನ್ನುವುದು ಗೊತ್ತಿದೆ. ಆದರೆ ಅಪರೂಪದ ಮೊಮ್ಮಗನನ್ನು ಅಗಲಿರುವುದೆಂದರೆ ಜೀವ ಬಾಯಿಗೆ ಬಂದಂತೆ. ದಿವಸಾ ಒಟ್ಟಿಗೆ ಕೂತು ನಾಲ್ಕು ಮಾತಾಡಿದ್ದು ಅನ್ನುವುದು ಇರಲಿಲ್ಲವಾದರೂ ಮನೆಯಲ್ಲಿ ತಮ್ಮ ಮೊಮ್ಮಗನ ಇರಸರಿಕೆಯೇ ದೊಡ್ಡಮ್ಮನಿಗೆ ಒಂದು ಬಲ. ಬೆಳಗ್ಗೆ ಕಾಫಿ ಕುಡಿಯುವ ಹೊತ್ತಿಗೆ ದೊಡ್ಡಮ್ಮನಿಗೆಂದು ಒಂದು ಲೋಟ ಕಾಫಿ ಬಗ್ಗಿಸಿ ತಂದುಕೊಡುತ್ತಿದ್ದ ಅನಂತಕೃಷ್ಣ. ಸ್ಕೂಲಿಗೆ ಹೋಗುವ ಹೊತ್ತಲ್ಲಿ, ಏನಾರೂ ಬೇಕನೇ? ಸೋಪು ಗೀಪು? ಅನ್ನುವ ವಿಚಾರಣೆ. ಅನಂತಕೃಷ್ಣ ತಪ್ಪದೆ ಮಾಡುತ್ತಿದ್ದ ಇನ್ನೊಂದು ಕೈಂಕರ್ಯ ಅಂದರೆ ರಾತ್ರಿ ದೊಡ್ಡಮ್ಮನ ಲೇಪು ಕೊಡಕಿ ಹಾಸಿಡುವ ಕೆಲಸ. ಅವನ ಓದು, ಬರಹ ನಡೆಯುವಾಗ ದೊಡ್ಡಮ್ಮ ಅಲ್ಲೇ ಸುಳಿದಾಡಿಕೊಂಡಿದ್ದರೆ ಅವನಿಗೆ ಹಿತ. ಯಾರೋ ತನ್ನ ಓದನ್ನು ಗಮನಿಸುತ್ತಿದ್ದಾರೆಂಬ ತೃಪ್ತಿ. ಮುಂಚೇಕಡೆ ಜಗುಲಿಯ ಕೆಂಪು ಸಿಮೆಂಟಿನ ನೆಲ ಅವನ ಪಾಲಿಗೆ ಲೆಕ್ಕ ಬಿಡಿಸುವ ಬೋರ್ಡು. ಎಷ್ಟುದ್ದ ಬೇಕಾದರೂ ಗಣಿತದ ಸಮಸ್ಯೆ ಬಿಡಿಸಬಹುದಾದ ಧಾರಾಳ ಸ್ಥಳಾನುಕೂಲ. ಮನೆಯೊಳಗಿನ ಕತ್ತಲುಕತ್ತಲಿಲ್ಲದೆ ಒಳ್ಳೇ ಬೆಳಕು. ಎಡಗೈ ಬುಡದಲ್ಲೊಂದು ವರಸರಿವೆಯ ಒದ್ದೆ ಬಟ್ಟೆ, ಬಲಗೈಯಲ್ಲಿ ಸೀಮೆಸುಣ್ಣ, ಬಾಯಲ್ಲಿ ಮಣಮಣ. ‘ಪಾಪದ್ದು. ಮೂರು ಹೊತ್ತೂ ಓದೋದೇ ಉದ್ಯೋಗ ಆಗ್ಹೋಯ್ತು’ ಅನ್ನುವ ದೊಡ್ಡಮ್ಮನ ಲೊಚಗುಟ್ಟುವಿಕೆಯ ಸ್ಫೂರ್ತಿ. ‘ಏನು ಓದಿದಿ? ಏನು ಬಿಟ್ಟಿ?’ ಎಂದು ಅಪ್ಪ ಕೇಳಲಿಲ್ಲ, ಅಮ್ಮ ಕೇಳಲಿಲ್ಲ, ಅಕ್ಕಂದಿರು ಕೇಳಲಿಲ್ಲ. ದೊಡ್ಡಮ್ಮ ಮಾತ್ರಾ ದಿನಾ ರಾತ್ರಿ ವಿಚಾರಿಸಿಕೊಳ್ಳುತ್ತಿದ್ದಳು,
ಇನ್ನೂ ನಿನ್ನದು ಮುಗೀಲಿಲ್ಲನೋ? ಬೆಳಗಾಮುಂಚೆ ಬೇಗ ಎದ್ದು ಓದಿದ್ರಾಯ್ತಪ್ಪಾ. ಹೋಗಿ ಮಲಕ್ಕಾ….
ತಡಿಯೇ, ಇನ್ನೊಂಚೂರು ಬಾಕಿ ಉಂಟು….
ಬೆಳಬೆಳಗ್ಗೆ ನಾನು ಎಬ್ಬಿಸ್ತೀನಿ ಕಣೋ, ನಿದ್ದೆ ತಡ್ಕಂಡು ಓದಿದ್ರೆ ತಲೆಗೆ ಹತ್ತುತ್ತಾ? ನಡಿ, ನಡಿ….
ಮಾತು ಕೊಟ್ಟಂತೆ ಟೆಸ್ಟೋ, ಪರೀಕ್ಷೆಯೋ ಹತ್ತಿರ ಬಂತು ಅಂದರೆ ಅಲುಗಾಡಿಸಿ, ಅಲುಗಾಡಿಸಿ ಎಬ್ಬಿಸುತ್ತಿದ್ದವಳು ದೊಡ್ಡಮ್ಮ.
ಇನ್ನೊಂಚೂರು ಮಲಗ್ತೀಯನೋ? ಬೇಕಾರೆ ಅರ್ಧ ಗಂಟೆ ಬಿಟ್ಟು ಎಬ್ಬಿಸ್ತೀನಿ ಅನುಕಂಪ ತೋರಿಸುತ್ತಿದ್ದವಳು ದೊಡ್ಡಮ್ಮ. ಅವಳ ಋಣ ತನ್ನ ಮೇಲೆ ಬಹಳಷ್ಟಿದೆ ಎಂದು ಅನಂತಕೃಷ್ಣನ ಭಾವನೆ. ಈ ಕುರಿತು ಅವನ ಅಮ್ಮನಿಗೆ ಸಣ್ಣನೆಯ ಅಸಹನೆ. ಕಿಚ್ಚು ಹತ್ತಿಕೊಳ್ಳುವಂಥಾದ್ದಲ್ಲ, ಆಗೀಗ ಬರೀ ಹೊಗೆಯಾಡುವಂಥಾದ್ದು. ಸಣ್ಣ ಪುಟ್ಟ ಖಾಯಿಲೆ ಬಂದರೆ ದೊಡ್ಡಮ್ಮ ಮಾಡಿಕೊಡುತ್ತಿದ್ದ ಮನೆಔಸ್ತಿ ಅವನಿಗೆ ಇನ್ನೂ ನೆನಪುಂಟು. ಮಕ್ಕಳು ಎರಡು ಸಲ ಸೀನಿದರೆ ಡಾಕ್ಟರ ಹತ್ತಿರ ಕರೆದುಕೊಂಡು ಹೋಗುವ ಜಮಾನಾದಲ್ಲಿರುವ ಅನಂತಕೃಷ್ಣ ತನ್ನ ದೊಡ್ಡಮ್ಮನ ನಾಟಿ ಔಷಧಿಯ ಜ್ಞಾನದ ಕುರಿತು ಹೆಂಡತಿಯ ಹತ್ತಿರ ನೆನೆಸಿಕೊಳ್ಳುತ್ತಿದ್ದುದಿತ್ತು. ಹೊಟ್ಟೆನೋವು ಬಂದ್ರೆ ಏನು ಔಸ್ತಿ ಗೊತ್ತನೇ? ಬೂದಿ ಹಣಿ. ಹಂಗಂದ್ರೆ ಗೊತ್ತಾ? ಅವನು ದೊಡ್ಡಮ್ಮನ ಪುರಾಣ ಎತ್ತಿದ ಅಂದರೆ ‘ಶುರುವಾಯ್ತು’ ಅನ್ನುವಂತೆ ಮೂತಿ ತಿರುಪುತ್ತಿದ್ದಳು ಹೆಂಡತಿ. ಅವಳ ಅನಾಸಕ್ತಿ ಗೊತ್ತಿದ್ದರೂ ಆ ಕ್ಷಣ ಅನ್ನಿಸಿದ್ದನ್ನು ಅವಳ ಕಿವಿಗೆ ತಲಪಿಸದಿದ್ದರೆ ಅನಂತಕೃಷ್ಣನ ನಾಲಿಗೆ ತುರಿಕೆ ನಿಲ್ಲುತ್ತಿರಲಿಲ್ಲ.
ಒಲೇಲಿರೋ ಬಿಸಿ ಬೂದೀನ ಒಂದು ಲೋಟಕ್ಕೆ ಹಾಕಿ ಕದರಿಡೋದು. ಅದು ಹಣಿತ ಮೇಲೆ ಮೇಲಿನ ತಿಳಿ ಕುಡಿಯೋದು. ಹೊಟ್ಟೆಮುರಿತಕ್ಕೆ ರಾಮಬಾಣ ಗೊತ್ತಾ?
ಅಂಥಾದ್ದೆಲ್ಲಾ ಕುಡ್ಕೊಂಡು ನೀವು ಇನ್ನೂ ಸಾಬೀತಾಗಿದೀರಲ್ಲಾ, ಪುಣ್ಯ… ಹೆಂಡತಿಯ ಕೊಂಕು, ಈಗೆಲ್ಲಿಂದ ಒಲೆಬೂದಿ ತರ್ತೀರಿ? ಹಳ್ಳಿಮನೇಗೆ ಹೋಗಿ ಹುಡುಕ್ಬೇಕು ಕೊಸರು.
ಅನಂತಕೃಷ್ಣ ದೊಡ್ಡ ಓದಿಗೆಂದು ಸಿಟಿ ಸೇರಿಕೊಳ್ಳುವವರೆಗೆ ಅವನಿಗೆ ಡಾಕ್ಟರ ಹತ್ತಿರ ಹೋಗಿಯೇ ಗೊತ್ತಿರಲಿಲ್ಲ ಅಂದರೆ ಉತ್ಪ್ರೇಕ್ಷೆ ಅಲ್ಲ. ಅದೇನೇ ಖಾಯಿಲೆ ಬಂದರೂ ದೊಡ್ಡಮ್ಮ ಮದ್ದು ಅರೆಯುತ್ತಿದ್ದಳು. ಸೀತಕ್ಕೆ, ವಾತಕ್ಕೆ, ಒಣ ಕೆಮ್ಮಿಗೆ, ಕಫದ ಕೆಮ್ಮಿಗೆ, ಪಿತ್ಥಕ್ಕೆ, ಅಜೀರ್ಣಕ್ಕೆ, ಕೆಲಕೆಲವು ಔಸ್ತಿಗಳಂತೂ ರಸನೇಂದ್ರಿಯಕ್ಕೆ ಅದೆಷ್ಟು ಮಧುರವಾಗಿರುತ್ತಿದ್ದುವು ಎಂಬುದನ್ನು ನೆನೆದರೆ ಈಗಲೂ ನಾಲಿಗೆಯಲ್ಲಿ ನೀರೊಡೆದು ಗುಳುಕ್ಕನೆ ಜೊಲ್ಲು ನುಂಗಿಕೊಳ್ಳುವಂತಾಗುತ್ತದೆ. ಪರೀಕ್ಷೆಹೊತ್ತಿನಲ್ಲಿ ರಾತ್ರಿ ನಿದ್ದೆ ಬಿಟ್ಟು, ಬೆಳಗ್ಗೆ ಬೇಗ ಎದ್ದು ಪಿತ್ಥ ಆಗುತ್ತದೆ, ತಲೆಸಿಡಿತ ಶುರುವಾಗುತ್ತದೆ ಎಂದು ದೊಡ್ಡಮ್ಮ ಹಿಂದಿನ ರಾತ್ರಿ ನೀರಲ್ಲಿ ನೆನೆಸಿಟ್ಟ ಒಣದ್ರಾಕ್ಷಿ, ಕಲ್ಲುಸಕ್ಕರೆಪುಡಿಗಳ ಮಿಶ್ರಣವನ್ನು ಬೆಳಗ್ಗೆ ಏಳುತ್ತಿದ್ದ ಹಾಗೆ ಬರಿ ಹೊಟ್ಟೆಗೆ ಕುಡಿಯಲು ಕೊಡುತ್ತಿದ್ದಳು. ಮಲೆನಾಡಿನ ಥಂಡಿ ಹವೆಗೆ ತಣ್ಣಗೆ ಕೊರೆಯುವಂತಾಗಿರುತ್ತಿದ್ದ ಸೀಸೀ ಪಾನೀಯದೊಳಗೆ ಉಬ್ಬಿಕೊಂಡು ಬುಡದಲ್ಲಿ ಕೂತಿರುತ್ತಿದ್ದ ದ್ರಾಕ್ಷಿಗಳು. ನೀರು ಕುಡಿದು, ದ್ರಾಕ್ಷಿ ಜಗಿದು, ಜಗಿದಂತೆಲ್ಲಾ ರಸ ಒಸರುವ ಅದ್ಭುತ ರುಚಿ ಎಂದು ನೆನೆಯುತ್ತಾ ಸವಿ ನೆನಪಲ್ಲಿ ತೇಲಾಡುವಂತಾಗಿದ್ದ ಅನಂತಕೃಷ್ಣನಿಗೆ ಇದ್ದಕ್ಕಿದ್ದಂತೆ ಜುಟ್ಟು ಹಿಡಿದು ಭೂಮಿಗೆ ಜಗ್ಗಿದಂತಾಗಿದ್ದಕ್ಕೆ ಕಾರಣ ಒಂದು ವಿಷಾದ ಘಟನೆಯ ನೆನಪು. ಆ ಸಂದರ್ಭದಲ್ಲಿ ಹೆಚ್ಚಿನ ಹಗರಣಕ್ಕೆ ಕಾರಣವಾಗದಂತೆ ಬಚಾವು ಮಾಡಿದ್ದು ಇದೇ ದೊಡ್ಡಮ್ಮ. ಹಗರಣ ಆಗಲಿಲ್ಲ ಎಂದು ಇವರು ಅಂದುಕೊಂಡಿದ್ದು. ಆದರೆ ಯಾವ ಮೂಲದಿಂದಲೋ ಸುದ್ದಿ ಲೀಕಾಗಿ ಊರಮಂದಿಗೆಲ್ಲಾ ಗೊತ್ತಾಗಿಬಿಟ್ಟಿದೆ ಎಂದು ಮನೆಯವರಿಗೆ ಗುಮಾನಿ. ದೊಡ್ಡಕ್ಕನ ಮದುವೆ ಆಗಿದ್ದೇ ಹರಸಾಹಸ. ಊರಿಂದೂರಿಗೆ ಮೆಟ್ಟು ಸವೆಸಿ ಅಪ್ಪ ಹೈರಾಣಾಗಿದ್ದ. ಕೊನೆಗೂ ಅವಳ ಪಾಲಿಗೆ ದಕ್ಕಿದ್ದು ಅವಳಿಗಿಂತಾ ಹದಿನಾಲ್ಕು ವರ್ಷಗಳಷ್ಟು ಹಿರಿಯನಾದ ಪತಿ ಪರಮೇಶ್ವರ. ನೋಡುವುದಕ್ಕೆ ಸುಮಾರು. ಆಸ್ತಿಪಾಸ್ತಿ ಅಷ್ಟಕ್ಕಷ್ಟೇ. ಧುಸುಮುಸು ಮಾಡುವಷ್ಟೂ ಧಾರ್ಷ್ಟ್ಯ ಉಳಿಸಿಕೊಂಡಿರದಿದ್ದ ದೊಡ್ಡಕ್ಕ ಬಲಿಪಶುವಿನಂತೆ ತಲೆ ಬಗ್ಗಿಸಿಕೊಂಡು ಕೂತು ಮಾಂಗಲ್ಯ ಕಟ್ಟಿಸಿಕೊಂಡಿದ್ದಳು. ಮನೆಯವರ ತಲೆಯ ಮೇಲಿದ್ದ ಹೆಬ್ಬಂಡೆ ಇಳುಕಿದ್ದಳು. ವರ್ಷಗಟ್ಟಲೆ ಅಮ್ಮ ಅವಳ ಜೊತೆ ಮುಖ ಕೊಟ್ಟು ಮಾತಾಡಿರಲಿಲ್ಲ. ಅಪ್ಪ ಅವಳ ಹೆಸರು ಹಿಡಿದು ಕರೆದಿರಲಿಲ್ಲ. ಏನೆಲ್ಲವನ್ನೂ ಹೆಂಡತಿಯ ಹತ್ತಿರ ಹೇಳಿಕೊಂಡಿರುವ ಅನಂತಕೃಷ್ಣ ಈ ವಿಷಯದಲ್ಲಿ ಮಾತ್ರ ರಹಸ್ಯ ಕಾಪಾಡಿಕೊಂಡಿದ್ದಾನೆ. ಅವನು ಮಾತ್ರ ಅಲ್ಲ, ಮನೆಯವರೆಲ್ಲಾ.
‘ಮಾಡಿದ್ದುಣ್ಣೋ ಮಹರಾಯ’ ಎಂದು ತಟ್ಟಿ ಹಾರಿಸಬಹುದಾದರೂ ದೊಡ್ಡಕ್ಕನ ತಪ್ಪು ಅಷ್ಟೊಂದು ದುಬಾರಿಯ ಕಪ್ಪ ವಸೂಲಿ ಮಾಡುವಂತಹುದಾಗಿತ್ತಾ ಎಂದು ಯೋಚಿಸಹೊರಟರೆ ಅನಂತಕೃಷ್ಣನ ತಲೆ ಕೆಡುತ್ತದೆ. ವಯಸ್ಸು ಅಂಥಾದ್ದು. ಸರಿ, ತಪ್ಪುಗಳ ಪರಿಜ್ಞಾನ ಹೆಚ್ಚು ಕಾಡದಂಥಾದ್ದು. ಪಾಠ ಹೇಳಿಕೊಡುವ ಮೇಷ್ಟ್ರು ಅಂದರೆ ಮೇಲಿನಿಂದ ಇಳಿದು ಬಂದಂಥವರು ಎನ್ನುವ ಭಾವನೆ. ಅವರು ಹೇಳಿದ್ದೆಲ್ಲಾ ವೇದವಾಕ್ಯ. ಎಸ್ಸೆಸ್ಸೆಲ್ಸಿಯಲ್ಲಿ ತನ್ನಂತಹ ಹಲವರ ಜೊತೆ ಮನೆಪಾಠಕ್ಕೆ ಹೋಗುತ್ತಿದ್ದ ದೊಡ್ಡಕ್ಕ ಯಾವ ಮಾಯಕದಲ್ಲೋ ಅವನ ವಶವರ್ತಿಯಾಗಿದ್ದಾಳೆ. ಹೆಂಡತಿ ತವರಿಗೆ ಹೋಗಿದ್ದ ಸಮಯವನ್ನು ಕಿರಾತಕ ಉಪಯೋಗಿಸಿಕೊಂಡಿದ್ದಾನೆ. ಅವಳ ಜೊತೆಗಾರರಿಗೆ ಈ ಬಗ್ಗೆ ಸುಳಿವು ಇದ್ದಿರಬಹುದಾದರೂ ಯಾರೂ ಬಾಯಿ ಬಿಟ್ಟಿಲ್ಲ. ಅಥವಾ ಗೊತ್ತೂ ಇರಲಿಕ್ಕಿಲ್ಲ ಅಂದುಕೊಂಡರೆ ಅದೊಂಥರದ ನೆಮ್ಮದಿ. ಹಾಗಲ್ಲ, ತಂತಮ್ಮ ಮನೆಯಲ್ಲಿ ಅವರು ಎಲ್ಲಾ ಊದಿದ್ದಾರೆ ಅಂದುಕೊಂಡರೆ ಅದನ್ನು ಸಮರ್ಥಿಸಿಕೊಳ್ಳಲು ಸಕಾರಣ ಉಂಟು. ಇಂಥಾದ್ದೊಂದು ಗುಸುಗುಸು ಹಬ್ಬದಿದ್ದರೆ ದೊಡ್ಡಕ್ಕನಂಥ ಚೆಂದುಳ್ಳಿ ಹುಡುಗಿಗೆ ಮದುವೆ ಮಾಡುವುದೆನ್ನುವುದು ಒಂದು ಯಜ್ಞ ಆಗುತ್ತಿತ್ತಾ? ಅಮ್ಮ ಹೇಳುತ್ತಿದ್ದ ಹಾಗೆ ಯಾರಾದರೂ ಕಾಲಿಗೆ ಬಿದ್ದು ಮದುವೆ ಮಾಡಿಕೊಳ್ಳುತ್ತಿದ್ದರು. ಸುತ್ತ ಅಷ್ಟು ರಾಷ್ಟ್ರದಲ್ಲಿ ಮದುವೆಗಿರುವ ಯಾವೊಬ್ಬ ಜಾತ್ಯಸ್ಥನ ಮನೆಮೆಟ್ಟಿಲನ್ನೂ ಅಪ್ಪ ಹತ್ತಿಳಿಯದೆ ಬಿಟ್ಟಿರಲಿಲ್ಲ. ಎಲ್ಲಾ ಕಡೆ ಏನೋ ಸಬೂಬು. ವಯಸ್ಸು ಇಪ್ಪತ್ನಾಲ್ಕಾಗಿ, ‘ಇನ್ನು ಇದು ಖರ್ಚಾಗುವ ಸರಕಲ್ಲ’ ಎಂದು ಅಪ್ಪ ಬಾಯ್ಬಿಟ್ಟೇ ಹೇಳುತ್ತಿದ್ದ. ಮನೆಮಗಳನ್ನು ಸರಕಿಗೆ ಹೋಲಿಸುವ ವಾಡಿಕೆಮಾತಿನ ಬಗ್ಗೆ ಅಸಮಾಧಾನ ತೋರಿಸುವ ವಯಸ್ಸು ಅಥವಾ ತಿಳಿವಳಿಕೆ ಅನಂತಕೃಷ್ಣನಿಗೆ ಇರಲಿಲ್ಲ.
ಗ್ರಾಚಾರ ಅಂದರೆ ವಿವಾಹಯೋಗ್ಯ ವರಮಹಾಶಯರು ಅಟ್ಟ ಏರಿ ಕೂತಿದ್ದ ಕಾಲದಲ್ಲಿ ದೊಡ್ಡಕ್ಕ ಮದುವೆ ವಯಸ್ಸಿಗೆ ಬಂದಿದ್ದು. ‘ಹುಡುಗಿ ಸಿಗುವುದಿಲ್ಲ’ ಎಂದು ಬೊಂಬಢ ಹೊಡೆಯುತ್ತಿರುವ ಈ ಕಾಲ ಆಗಿದ್ದರೆ ಪರಿಸ್ಥಿತಿ ಬೇರೆ ಆಗುತ್ತಿತ್ತೇನೋ. ಗೊತ್ತಿದ್ದೋ, ಗೊತ್ತಿಲ್ಲದೆಯೋ, ಭಯಕ್ಕೋ, ಆಮಿಷಕ್ಕೋ, ಮುಗ್ಧತೆಗೋ, ಅಂತೂ ದೊಡ್ಡಕ್ಕನ ಪ್ರಕರಣ ಕುತ್ತಿಗೆಗೆ ಬಂದಿದೆಯೆಂದು ಮನೆಮಂದಿಗೆ ಗೊತ್ತಾಗಿದ್ದು ಅವಳ ಅನೈತಿಕ ಸಂಬಂಧದ ಪರಿಣಾಮ ಕಣ್ಣಿಗೆ ರಾಚಿದ ಮೇಲೆ. ವಾಂತಿ, ಭ್ರಾಂತಿ ಎಂದು ಶುರುವಾಗಿ, ಆದರೂ ಮೂರು ದಿನ ಸುಳ್ಳೇ ಹೊರಗೆ ಕೂರುವ ನಾಟಕ ಹೂಡಿ ಎಲ್ಲರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ಮಾಡಿ, ಸೋತಿದ್ದಳು ದೊಡ್ಡಕ್ಕ. ದೊಡ್ಡಮ್ಮನ ಅನುಭವದ ಕಣ್ಣುಗಳಿಗೆ ಉಂಟಾದ ಸಂದೇಹ ಅಮ್ಮನ ಕಿವಿ ತಲಪಿ, ಏಕಾಂತದಲ್ಲಿ ಜಬರಿಸಿ ನಾಲ್ಕು ತಪರಾಕಿ ಬಿಗಿದ ಮೇಲೆ ಸತ್ಯ ಹೊರಗೆ ಬಂದಿತ್ತು. ಮನೆಮಂದಿ ನಡುಗಿಹೋಗಿದ್ದರು. ನಾರು, ಬೇರು, ಕಷಾಯಗಳ ದೊಡ್ಡಮ್ಮನ ತಿಳಿವಳಿಕೆ ತಾವು ಸಸಾರ ಮಾಡುತ್ತಿದ್ದಷ್ಟು ಕನಿಷ್ಟಮಟ್ಟದ್ದಲ್ಲ ಎಂದು ಅಪ್ಪ, ಅಮ್ಮನಿಗೆ ಮನದಟ್ಟಾಗಿದ್ದೇ ಆವಾಗ. ಅಂತೂ ದೊಡ್ಡಕ್ಕ ಬಚಾವು ಆಗಿದ್ದಳು. ಆಗಿದ್ದಳಾ? ಇಲ್ಲ, ಗೋಡೆಗೂ ಕೇಳುವ ಕಿವಿಗಳಿರುತ್ತವೆ, ನೋಡುವ ಕಣ್ಣುಗಳಿರುತ್ತವೆ. ಇಲ್ಲದಿದ್ದರೆ ದೊಡ್ಡಕ್ಕನ ಮದುವೆಗೆ ಸಾವಿರ ವಿಘ್ನ ಬಂದಿದ್ದೇಕೆ? ಆಯ್ತು, ಮದುವೆಯೂ ಆಯ್ತು ಅಂತಾಯ್ತು. ಇನ್ನಾದರೂ ಎಲ್ಲಾ ಸುಖಾಂತವಾಗುತ್ತದೆ ಅಂದುಕೊಂಡಿದ್ದರೆ ಮದುವೆಯಾಗಿ ಮೂರು ವರ್ಷ ಕಳೆದರೂ ದೊಡ್ಡಕ್ಕನಿಗೆ ಮಕ್ಕಳಾಗಲಿಲ್ಲ. ‘ಎಂಥಾ ಔಸ್ತಿ ಕೊಟ್ಟಿದ್ದೋ, ಏನು ಕತೆಯೋ? ಒಂದು ಹೋಗಿ ಒಂಭತ್ತಾಗಿದೆಯಾ ಅಂತ?’ ಅಮ್ಮ ಸಲೀಸಾಗಿ ಗೂಬೆ ಕೂರಿಸಿದ್ದು ದೊಡ್ಡಮ್ಮನ ಮೇಲೆ. ವಿಪರ್ಯಾಸ ಅಂದರೆ ಭರವಸೆಯ ಕಣ್ಣಿಟ್ಟಿದ್ದೂ ಅವರ ಕೈಗುಣದ ಮೇಲೆ. ಅವರು ಅರೆಯುವ ಮದ್ದಿಗೆ ನ್ಯಾಯ ಒದಗಿಸುವುದಕ್ಕಾಗಿ ಎಂಬಂತೆ ಪದೇ ಪದೇ ತೌರಿಗೆ ಬರುತ್ತಿದ್ದ ದೊಡ್ಡಕ್ಕನ ಹೆಜ್ಜೆಗಳು ಮತ್ತೆ ಜಾರಿದುವೇ? ಒಂದು ಮಗುವನ್ನು ಪಡೆಯುವ ಆಮಿಷ ಅವಳ ನೈತಿಕತೆಯನ್ನು ಮೀರಿ ನಿಂತಿತೇ? ಬಸುರಿಯಾದಳು ದೊಡ್ಡಕ್ಕ. ಹುಟ್ಟಿದ ಮಗುವಿನ ಕಣ್ಣು, ಕಿವಿ, ಮೂಗುಗಳಲ್ಲಿ ಮೇಷ್ಟ್ರ ಹೋಲಿಕೆ ಕಂಡರು ಜನ. ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಹಚ್ಚಿಕೊಡುವ ನಾರದರು ಎಲ್ಲಾ ಕಾಲದಲ್ಲೂ, ಎಲ್ಲಾ ಸ್ಥಳಗಳಲ್ಲೂ ಇದ್ದೇ ಇರುತ್ತಾರೆ. ಹೀಗೆ ಅನಂತಕೃಷ್ಣನ ಅಮ್ಮನವರೆಗೆ ಬಂದು ತಲಪಿತ್ತು ವದಂತಿ. ಬಾಣಂತನ ಮಾಡುವ ಅಮ್ಮನ ಉತ್ಸಾಹವನ್ನೇ ಕಸಿದುಕೊಂಡು ಅವಳನ್ನು ಕಂಗಾಲು ಮಾಡಿತ್ತು.
ಹೇಳು, ಯಾವ ದೇವರ ಮೇಲೆ ಆಣೆ ಇಡಲಿ? ಘಟ್ಟದ ತಗ್ಗಿನ ದೇವರ ಹೆಸರು ಹೇಳ್ಲಾ? ಆಗ್ಲಾದ್ರೂ ನನ್ನ ನಂಬ್ತೀಯಾ? ದೊಡ್ಡಕ್ಕ ತಲೆ ಕೆಟ್ಟವಳಂತೆ ಕಿರುಚಾಡಿದ್ದು ಇನ್ನೂ ಅವನ ಕಿವಿಗಳಲ್ಲಿದೆ. ಮತ್ತು ಮುಡ್ಪು ಮಾಡಿದ ಹಾಗೆ ಆ ವಿಷಯ ಮತ್ತೆ ಆ ಮನೆಯಲ್ಲಿ ಪ್ರಸ್ತಾಪವಾಗಿರಲಿಲ್ಲ. ಆಗ ಅನಂತಕೃಷ್ಣ ಹೈಸ್ಕೂಲಿನ ಕೊನೆಯ ವರ್ಷದಲ್ಲಿ ಓದುತ್ತಿದ್ದ. ಒಮ್ಮೆ ಈ ವಾತಾವರಣದಿಂದ ತಪ್ಪಿಸಿಕೊಂಡರೆ ಸಾಕು ಎನ್ನುವಷ್ಟು ಅವನಿಗೆ ಕರ್ಕರೆ ಹಿಡಿದು ಹೋಗಿತ್ತು.
* * *
ಅನಂತಕೃಷ್ಣ ಎನ್ನುವ ಪ್ರತಿಷ್ಠಿತ ಕಂಪೆನಿಯ ಸಾಫ್ಟ್ವೇರ್ ಇಂಜಿನಿಯರ್ಗೂ, ನಾಗಭೂಷಣ ಎನ್ನುವ ಮಲೆನಾಡಿನ ಬಡ ಕೃಷಿಕನಿಗೂ ಒಂದೇ ಊರಿನವರು ಎನ್ನುವ ವಿಷಯ ಬಿಟ್ಟರೆ ಮತ್ತೆ ಯಾವುದರಲ್ಲೂ ಸಮಾನತೆ ಎನ್ನುವುದಿಲ್ಲ. ವಯಸ್ಸಿನ ವಿಚಾರ ತೆಗೆದುಕೊಂಡರೂ ಅನಂತಕೃಷ್ಣನಿಗೆ ನಲವತ್ತಾಗುತ್ತಾ ಬಂದಿದ್ದರೆ ನಾಗಭೂಷಣನಿಗೆ ಮೂವತ್ತರ ಆಸುಪಾಸು. ದೇಶವಿದೇಶ ಸುತ್ತುತ್ತಿರುತ್ತಾನೆ ಅನಂತಕೃಷ್ಣ. ಬೆಂಗಳೂರನ್ನೇ ಕಂಡವನಲ್ಲ ನಾಗಭೂಷಣ. ಕೈತುಂಬಿ ಚೆಲ್ಲುವಷ್ಟು ದುಡಿಯುವವನು ಅನಂತಕೃಷ್ಣ. ಕೈಹಿಡಿತ ಮಾಡದಿದ್ದರೆ ಗಂಜಿಗೂ ತತ್ವಾರ ಆಗಿರುವವನು ನಾಗಭೂಷಣ. ಒಂದೇ ಊರಿನವರೆಂಬ ಕಾರಣಕ್ಕೆ ಮೊದಲಿಂದ ನಿಕಟ ಪರಿಚಯ, ಸಲಿಗೆ ಇದ್ದರೂ ಈ ಸಂಬಂಧ ಬಲವಾಗಿದ್ದರ ಹಿಂದಿರುವ ಕಾರಣ ದೊಡ್ಡಮ್ಮ. ನಾಟಿ ಔಷಧಿಯ ಕುರಿತಾದ ದೊಡ್ಡಮ್ಮನ ಜ್ಞಾನ ಅವಳ ಸ್ವಂತ ವಿಷಯದಲ್ಲಿ ಉಪಯೋಗಕ್ಕೆ ಬಾರದೆ ಇದ್ದುದು ಒಂದು ವಿಪರ್ಯಾಸ. ತಮ್ಮ ಖಾಯಿಲೆಗೆ ತಾವೇ ಚಿಕಿತ್ಸೆ ಮಾಡಿಕೊಳ್ಳಲು ಬೇಕಾದ ಆತ್ಮವಿಶ್ವಾಸ ಔಷಧ ಗೊತ್ತಿರುವವರಿಗೆ ಇರುವುದಿಲ್ಲವೇ? ಅಥವಾ ಔಷಧಿ ನಾಟುವುದಿಲ್ಲವೇ? ತನ್ನ ಬದುಕಿನ ಕೊನೆಕೊನೆಯ ಎರಡು ವರ್ಷಗಳಲ್ಲಿ ಹಾಸಿಗೆಹಿಡಿದು ಪರಾವಲಂಬಿಯಾಗಿಬಿಟ್ಟಿದ್ದಳು ದೊಡ್ಡಮ್ಮ. ಅಪ್ಪ, ಅಮ್ಮನಿಗೆ ಅವಳ ಆರೈಕೆ ಮಾಡುವಷ್ಟು ಶಕ್ತಿ ಇಲ್ಲ. ಮನೆಯಲ್ಲಿ ಗಟ್ಟಿಮುಟ್ಟಾದ ಜನ ಮತ್ತೆ ಯಾರಿಲ್ಲ. ಯಾರೋ ಹೊರಗಿನವರನ್ನು ಕರೆದುಕೊಂಡು ಬಂದು ಮನೆಯಲ್ಲಿಟ್ಟುಕೊಂಡು ಕಣ್ಮುಚ್ಚಿ ನಂಬಿಕೊಂಡಿರಬಹುದಾದ ಕಾಲ ಅಲ್ಲ. ದುಡ್ಡಿನ ವಿಚಾರಕ್ಕೆ ಬಂದರೆ ಎಷ್ಟು ಖರ್ಚು ಮಾಡುವುದಕ್ಕೂ ಅನಂತಕೃಷ್ಣ ತಯಾರು. ಆದರೆ ನಂಬಿಕಸ್ಥ ಜನ? ಅವನು ನಿರೀಕ್ಷಿಸಿರದ ರೀತಿಯಲ್ಲಿ ಸಮಸ್ಯೆಗೆ ಪರಿಹಾರ ಸಿಕ್ಕಿತ್ತು.
ಅನಂತಣ್ಣ, ನೀನು ತಲೆಬಿಸಿ ಮಾಡ್ಕಂಬೇಡ. ನಾನು ದಿನಕ್ಕೆರಡು ಸಲ ಬಂದು ನೋಡ್ಕಂಡ್ಹೋಗ್ತೀನಿ. ಊರುಮನೆಯೋರು ಅಂದ್ಮೇಲೆ ಅಷ್ಟೂ ಮಾಡದಿದ್ರೆ ಮನುಷ್ರು ಅಂತಾರಾ? ಹೇಳಿದ್ದ ನಾಗಭೂಷಣ. ಇದೊಂದು ಲೋಕಾರೂಢಿಯ ವಿಶ್ವಾಸದ ಮಾತು ಅಂದುಕೊಂಡಿದ್ದ ಅನಂತಕೃಷ್ಣನ ನಂಬಿಕೆಯನ್ನು ಸುಳ್ಳುಮಾಡುವಂತೆ ಯಾವ ಮಕ್ಕಳೂ ತಮ್ಮ ಹೆತ್ತವರಿಗೆ ಮಾಡದಷ್ಟು ದೊಡ್ಡಮ್ಮನ ಸೇವೆ ಮಾಡಿಬಿಟ್ಟ ಪುಣ್ಯಾತ್ಮ. ಹರಕೆ ಹೇಳಿಕೊಂಡವರಂತೆ ದಿನಕ್ಕೆರಡು ಸಲ ಹಾಜರಿ. ಎತ್ತಿ, ಇಳುಕಿ, ಸ್ನಾನಗೀನ ಮಾಡಿಸಿ, ಬಟ್ಟೆ ಬದಲಾಯಿಸುವವರೆಗೆ ಅಮ್ಮನಿಗೆ ಸಹಾಯಹಸ್ತ. ಯಾವ ಜನ್ಮದ ಋಣವೋ? ತನ್ನದು ಬರೀ ಆರಂಭಶೂರತ್ವ ಅಲ್ಲ ಅನ್ನುವ ಹಾಗೆ ದೊಡ್ಡಮ್ಮ ಬದುಕಿರುವವರೆಗೆ ನಿಗಾ ನೋಡಿಕೊಂಡ. ಅವಳೊಡನೆ ಮಾತುಕತೆ ಆಡುತ್ತಾ, ನಗೆಚಾಟಿಕೆ ಮಾಡುತ್ತಾ, ದೊಡ್ಡಮ್ಮನ ಪಾಲಿಗೆ ದೇವರಾಗಿಬಿಟ್ಟ. ಮನೆಮಗನಿಗಿಂತ ಹೆಚ್ಚಾದ. ಈ ಋಣದ ಭಾರ ತಗ್ಗಿಸಿಕೊಳ್ಳಲೆಂದು ಅನಂತಕೃಷ್ಣ ‘ತಿಂಗಳಿಗಿಷ್ಟು’ ಕೊಡುವ ಮಾತಾಡಬೇಕೆಂದುಕೊಂಡರೂ ಗಂಟಲಲ್ಲಿದ್ದಿದ್ದು ಬಾಯಿಗೆ ಬರದೆ ಫಜೀತಿ. ನಾಗಭೂಷಣನ ಆತ್ಮಪ್ರತಿಷ್ಠೆಗೆ ಎಲ್ಲಿ ಕುಂದುಂಟಾಗುವುದೋ ಎನ್ನುವ ಭೀತಿ. ಹೀಗಿದ್ದರೂ ಒಂದು ಸಲ ಊರಿಗೆ ಬಂದವನು ಪರೋಕ್ಷವಾಗಿ ಪೀಠಿಕೆ ಹಾಕಿದ್ದ,
ಸಿಟೀಲಾಗಿದ್ರೆ ಕಡೇಪಕ್ಷ ತಿಂಗಳಿಗೆ ಎಂಟೋ, ಹತ್ತೋ…. ಎಂದು ಅವನು ಶುರು ಮಾಡುತ್ತಿದ್ದಂತೆ ಸುಳುಹಿಡಿದ ನಾಗಭೂಷಣ ಕಡ್ಡಿಮುರಿದಂತೆ ಹೇಳಿದ್ದ,
ಎಲ್ರೂ ದುಡ್ಡಿಗೆ ಬಾಯಿಕಳ್ಕಂಡಿರ್ತಾರೆ ಅಂದ್ಕಂಬೇಡ ಅನಂತಣ್ಣ. ನೀನು ದುಡ್ಡಿನ ಪ್ರಸ್ತಾಪ ಮಾಡಿದ್ರೆ ಮತ್ತೆ ನಾನು ಇತ್ಲಾಕಡೆ ತಲೆಹಾಕಿ ಮಲಗಲ್ಲ….
ಅನಂತಕೃಷ್ಣನ ಬಾಯಿ ಬಂದ್ ಆಗಿತ್ತು. ಇದು ಋಣ ಅಲ್ಲದೆ ಮತ್ತೇನಲ್ಲ ಅನ್ನಿಸಿತ್ತು. ಆಚೀಚಿನಲ್ಲಿ ಯಾರಿದ್ದಾರೆ ಎಂದು ಹಣಿಕಿ ನೋಡಲು ವ್ಯವಧಾನವಿಲ್ಲದ, ಮನೋಧರ್ಮವೂ ಇಲ್ಲದ, ಪಟ್ಟಣದ ಯಾಂತ್ರಿಕ ಬದುಕಿನ ಕುರಿತು ಜಿಗುಪ್ಸೆ ಅನ್ನಿಸಿದ್ದು ಸುಳ್ಳಲ್ಲ. ದೊಡ್ಡಮ್ಮ ಬದುಕಿರುವವರೆಗೆ ಹೇಗೋ ಬಿಡುವು ಮಾಡಿಕೊಂಡು ವರ್ಷಕ್ಕೆರಡು ಸಲ ಊರಿಗೆ ಬರುವುದನ್ನು ರೂಢಿಸಿಕೊಂಡಿದ್ದ ಅನಂತಕೃಷ್ಣ. ಈ ಅವಧಿಯಲ್ಲಿ ನಾಗಭೂಷಣ ವಯಸ್ಸಿನ ಅಂತರವನ್ನೂ ಮೀರಿ ಅವನಿಗೆ ಆಪ್ತನಾಗಿಬಿಟ್ಟಿದ್ದ. ಇಬ್ಬರ ಈ ಬಾಂಧವ್ಯ ಎಷ್ಟು ನಿಕಟವಾಗಿತ್ತು ಅಂದರೆ ಅನಂತಕೃಷ್ಣನ ಅಮ್ಮ, ನೀನು ಬರೋದು ನಮ್ಮನ್ನೆಲ್ಲಾ ನೋಡೋಕೋ, ನಿನ್ನ ಗೆಣೆಕಾರನನ್ನೋ? ಎಂದು ಮಾತಿನಲ್ಲಿ ಚೂರು ಈರ್ಷ್ಯೆ ಬೆರೆಸಿ ಹಂಗಿಸುವಷ್ಟು.
* * *
ನಾಲಿಗೆ ಚುರುಗುಟ್ಟುವಷ್ಟು ಹಿತವಾದ ಉಪ್ಪು, ಖಾರ ಬೆರೆಸಿದ ಬಾಳೆಕಾಯಿ ಬುರುಬುರಿ, ಲೋಟ ಭರ್ತಿ ಕಾಫಿ. ಏನು ವರ ಬೇಕಾದ್ರೂ ಕೇಳೇ, ‘ತಥಾಸ್ತು’ ಅಂತೀನಿ ಮಂಗಳೆಯೊಡನೆ ಕುಶಾಲಿನ ಮಾತಾಡಿ ಅಂಗಳಕ್ಕಿಳಿದ ಅನಂತಕೃಷ್ಣ ಹೇಳದೆ ಕೇಳದೆ ಗಾಡಿ ಬಿಟ್ಟಿದ್ದು ಅಮ್ಮ ಹೇಳುತ್ತಿದ್ದ ಅದೇ ಗೆಣೆಕಾರನ ಮನೆಗೆ. ಇಬ್ಬರ ಮನೆಗಳ ನಡುಮಧ್ಯೆ ಅಡಿಕೆತೋಟದ ಒಂದು ತುಣುಕು. ಇಲ್ಲಿ ತೋಟಕ್ಕಿಳಿದು, ಅಲ್ಲಿ ದರೆಯಲ್ಲಿ ಕಡಿದ ಮೆಟ್ಟಿಲು ಹತ್ತಿ ಮೇಲಕ್ಕೇರಿದರೆ ನಾಗಭೂಷಣನ ಮನೆ. ಬಾ.., ಬಾ.. ಎನ್ನುತ್ತಾ ಹಾರ್ದಿಕವಾಗಿ ಸ್ವಾಗತಿಸಿದ್ದ ನಾಗಭೂಷಣ. ಇಬ್ಬರ ನಡುವೆ ಉಭಯಕುಶಲೋಪರಿ ನಡೆಯುತ್ತಿದ್ದಂತೆ ಭೂಷಣನ ಅಮ್ಮ ಕೆಂಡದಲ್ಲಿ ಸುಟ್ಟು, ಕೊಬ್ಬರಿಎಣ್ಣೆ ಸವರಿದ ಹಲಸಿನ ಹಪ್ಪಳಗಳು ತುಂಬಿದ್ದ ತಟ್ಟೆಯನ್ನು ಇಬ್ಬರ ನಡುವೆ ತಂದಿಟ್ಟಿದ್ದರು. ಅವರು ಈಗ ಏನು ಮಾತಾಡುತ್ತಾರೆ ಎನ್ನುವುದು ಅವರು ಬಾಯಿ ಬಿಡುವುದರೊಳಗೆ ಅನಂತಕೃಷ್ಣನಿಗೆ ಅಂದಾಜಾಗಿ, ಹಾಗೆ ಅಂದಾಜಾಗುವುದರೊಳಗೆ ಅದು ವಾಸ್ತವವೂ ಆಯ್ತು.
ಎಷ್ಟು ಹುಡುಕಿದ್ರೂ ಇವನಿಗೊಂದು ಹೆಣ್ಣು ಸಿಗ್ತಿಲ್ಲಲ್ಲ ಮಾರಾಯಾ, ಗಣಪತಿ ಮದುವೆ ಆಗಿ ಕೂತ್ಗಂಬಿಡುತ್ತೇನೋ ಅಂತ ಹೆದರಿಕೆ ಹತ್ಗಂಡಿದೆ ನಂಗೆ..
ನಾಗಭೂಷಣನಿಗೆ ರಗಳೆಯಾಗಿತ್ತು. ಒಳಗೆ ಹೋಗಿ ಕಾಫಿ ಮಾಡ್ಕಂಬಾರೇ ಪುಣ್ಯಾತ್ಗಿತ್ತಿ. ಬಂದೋರ ಎದುರೆಲ್ಲಾ ಹಲುಬ್ತಾ ನಿಂತ್ಗಂಬೇಡ.. ಅಂದಿದ್ದ. ಅಮ್ಮ ಒಳಗೆ ಹೋಗಿದ್ದರು. ನಾಗಭೂಷಣ ವಿಷಯಾಂತರ ಮಾಡಿದ್ದ. ಇಬ್ಬರೂ ಒಂದಷ್ಟು ಹೊತ್ತು ಊರಪುರಾಣ ಹರಟಿದ್ದರು. ಆಗಲೇ ಕಾಲಬುಡದ ನೆಲ ಕಾಣದಷ್ಟು ಕತ್ತಲಾಗಿಬಿಟ್ಟಿದೆ. ಮನೆಗೆ ಹೋದೊಡನೆ ಅಮ್ಮ ಪುಕಾರು ಮಾಡುತ್ತಾಳೆ ಎಂದು ಅನಂತಕೃಷ್ಣನಿಗೆ ಗೊತ್ತು. ಹಂಗಾರೆ ನಾನು ಹೊರಡ್ತೀನಿ. ನಾಳೆ ಊಟಕ್ಕೆ ಬಂದಾಗ ಸಿಗ್ತೀಯಲ್ಲ? ಮರುದಿನದ ವರ್ಷಾಂತಿಕದ ಒಂದು ಹೇಳಿಕೆಯನ್ನು ತಾನೂ ಮಾಡಿ ಹೊರಟು ನಿಂತಿದ್ದ ಅನಂತಕೃಷ್ಣ.
ತಡಿ, ಬ್ಯಾಟ್ರಿ ಕೊಡ್ತೀನಿ. ತಗೊಂಡ್ಹೋಗು..
‘ಬೇಡ’ ಅಂದಿರಲಿಲ್ಲ ಅನಂತಕೃಷ್ಣ. ಹಾಂವುಹರಣೆ ಓಡಾಡುವ ಜಾಗ. ಹೆಂಡತಿ ಜೊತೆಗೆ ಬಂದಿದ್ದರೆ ರಾತ್ರಿಹೊತ್ತು ಹೊರಗೆ ಕಾಲಿಡಲು ಬಿಡುತ್ತಿರಲಿಲ್ಲ. ನೀರೊಳ್ಳೆಹಾವು ಕಂಡರೂ ಹೆದರಿ ಸಾಯುವ ಪೈಕಿ. ಹಳ್ಳಿಯಲ್ಲಿ ಹುಟ್ಟಿ ಬೆಳೆದ ಅನಂತಕೃಷ್ಣನಿಗೆ ಹಾವುಗಳ ಬಗ್ಗೆ ವಿಪರೀತದ ಭಯವೇನಿಲ್ಲ. ಆದರೂ, ಕೈಯಲ್ಲೊಂದು ಬ್ಯಾಟ್ರಿ ಇರಬೇಕಪ್ಪಾ. ಬ್ಯಾಟ್ರಿ ಜೊತೆಗೆ ನಾಗಭೂಷಣ ಅರ್ಧ ಲೀಟರ್ ಹಿಡಿಯುವಷ್ಟು ದೊಡ್ಡಕ್ಕಿದ್ದ ಒಂದು ಪ್ಲಾಸ್ಟಿಕ್ ಬಾಟಲಿಯನ್ನು ತಂದುಕೊಟ್ಟಿದ್ದ. ಪಾರದರ್ಶಕ ಬಾಟ್ಲಿಯ ಕುತ್ತಿಗೆಯವರೆಗೆ ತುಂಬಿದ ಕಡು ಹಸಿರು ಬಣ್ಣದ ದ್ರವ. ಅನಂತಕೃಷ್ಣನಿಗೆ ಆಶ್ಚರ್ಯ.
ಎಂತದೋ ಇದು?
ಎಂತದು ಅಂತ ಈಗ ಕೇಳ್ಬೇಡ. ನಾನು ಹೇಳಿದ ಹಾಗೆ ತಪ್ಪದೆ ಮಾಡ್ಬೇಕು, ಅಷ್ಟೇ..
ನೀನು ಹೇಳೋದೆಲ್ಲಾ ಮಾಡೋಕೆ ನಂಗೆಲ್ಲಪ್ಪಾ ಪುರುಸೊತ್ತು?
ಹೆಕ್ಟಿಕ್ಕು, ಪ್ರೆಜ಼ರ್ರು ಅಂತ ನಿನ್ನ ಯಾವತ್ತಿನ ಪುರಾಣ ಶುರು ಮಾಡ್ಬೇಡ. ಈ ಎಣ್ಣೇನ ರಾತ್ರಿ ಮಲಗ್ಬೇಕಾದ್ರೆ ದಿವಸಾ ತಲೆಗೆ ಹಚ್ಚಿ ಐದು ನಿಮಿಷ ಮಸಾಜು ಮಾಡ್ಕೋ. ಬೆಳಗ್ಗೆ ಹೇಗೂ ದಿನಾ ತಲೆಸ್ನಾನ ಮಾಡ್ತೀಯಲ್ಲ..
ಆಯ್ತು, ನೋಡೋಣಂತೆ..
ನೋಡಣ, ಮಾಡಣ ಬಿಟ್ಬಿಡು. ಗಂಟೆಗಟ್ಲೆ ಕೆಲಸಾನಾ? ಬರೀ ಐದು ನಿಮಿಷ ಅಂದ್ನಲ್ಲ. ನಿನ್ನ ದೊಡ್ಡಮ್ಮ ನಂಗೆ ಸುಮಾರಷ್ಟು ಮನೆ ಔಸ್ತಿ ಹೇಳ್ಕೊಟ್ಟಿದ್ದಾರೆ ಕಣೋ. ಮರೆತುಹೋಗುತ್ತೆ ಅಂತ ಎಲ್ಲಾ ರೆದಿಟ್ಕೊಂಡಿದ್ದೇನೆ. ಕಳೆದ ಸಲ ನಿನ್ನ ನೋಡಿದಾಗ್ಲೇ ಇದೊಂದು ತೈಲ ಮಾಡ್ಕೊಡ್ಬೇಕು ಅಂತ ಅನ್ನಿಸಿಬಿಟ್ಟಿತ್ತು. ಹೇಗೂ ನೀನು ಬಂದೇ ಬರ್ತೀಯಾಂತ ಈ ಸಲ ರೆಡಿ ಮಾಡಿಟ್ಟಿದ್ದೆ.. ಮುಲಾಜಿಗೆ ಬಾಟಲಿ ಇಸಿದುಕೊಂಡವನು ದೊಡ್ಡಮ್ಮನ ಹೆಸರು ಬಂದೊಡನೆ ಮೃದುವಾಗಿಬಿಟ್ಟಿದ್ದ. ಥೇಟ್ ದೊಡ್ಡಮ್ಮನ ಥರವೇ ಆರ್ಡರು ಮಾಡುವ ಯಜಮಾನಿಕೆ ಬೇರೆ. ಆ ಕ್ಷಣ ಮನಸ್ಸು ಆರ್ದ್ರವಾಗಿಬಿಟ್ಟಿತ್ತು.
* * *
ನಿಮ್ಮ ಅಕ್ಕನ ಮಗಳೇ ಇದಾಳಲ್ರೀ, ಒಂದು ಮಾತು ಹಾಕಿ ನೋಡ್ಬೇಕಿತ್ತು.. ನಾಗಭೂಷಣನ ಪ್ರಸ್ತಾಪ ಮಾಡಿದರೆ ಇಂಥಾದ್ದೊಂದು ಮಾತು ಅನಂತಕೃಷ್ಣನ ಹೆಂಡತಿಯ ಬಾಯಿಂದ ತಪ್ಪದೆ ಉದುರುತ್ತಿತ್ತು. ಇರುವ ಒಬ್ಬಳೇ ಮಗಳನ್ನು ದೊಡ್ಡಕ್ಕ ಅಂತಿಂಥವರಿಗೆ ಕೊಡುವ ಪೈಕಿ ಅಲ್ಲ. ಅವಳು ಆಕಾಶಕ್ಕೆ ಏಣಿ ಹಾಕಿದ್ದಾಳೆ ಎಂದು ಅನಂತಕೃಷ್ಣನಿಗೆ ಗೊತ್ತಿದೆ. ‘ನಿಂಗೊತ್ತಿರೋರು ಯಾರಾರೂ ಇದ್ರೆ ಹೇಳೋ….’ ಎನ್ನುವಲ್ಲಿ ಸಾಫ್ಟ್ವೇರ್ ಇಂಜಿನಿಯರ್ಗಳು ಎನ್ನುವ ಅರ್ಥ ಧ್ವನಿಸುವುದನ್ನು ಅನಂತಕೃಷ್ಣ ಗುರ್ತಿಸಿದ್ದಾನೆ. ಇಲ್ಲದಿದ್ದರೆ ಯಾವತ್ತೋ ಮಂಗಳೆಗೆ ಮದುವೆಯಾಗಿ ದೊಡ್ಡಕ್ಕ ಅಜ್ಜಿಯಾಗಿರುತ್ತಿದ್ದಳು. ಅಂಥವಳ ಎದುರು ತಾನು ನಾಗಭೂಷಣನ ಹೆಸರು ಎತ್ತಿದರೆ ದೊಡ್ಡಕ್ಕ ಹಳೇ ಮೆಟ್ಟು ತಗೊಂಡು ಓಡಿಸಿಕೊಂಡು ಬರ್ತಾಳೆ ಅನ್ನಿಸಿ ಅನಂತಕೃಷ್ಣನಿಗೆ ನಗು ಬಂದಿತ್ತು. ಆಗದ-ಹೋಗದ ಮಾತಾಡುತ್ತಿರುವುದು ಹೆಂಡತಿಯ ಒಂದು ಚಾಳಿ ಅನ್ನಿಸಿತ್ತು. ಅನಂತಕೃಷ್ಣ ದಿವಸಾ ಅನ್ನುವಂತೆ ನಾಗಭೂಷಣನ ನೆನಪು ಮಾಡಿಕೊಳ್ಳುವುದಕ್ಕೆ ಅವನು ಕಾಯಿಸಿಕೊಟ್ಟಿದ್ದ ತೈಲ ಕೂಡಾ ಒಂದು ಕಾರಣ. ಅವನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಉಮೇದಿನಲ್ಲಿ ದೊಡ್ಡಮ್ಮನ ನೆನಪಿಗೆ ನ್ಯಾಯ ಒದಗಿಸುತ್ತಿದ್ದೇನೆಂದು ಭಾವಿಸಿಕೊಳ್ಳುತ್ತಾ ತಲೆಗೆ ತೈಲ ತಿಕ್ಕಿಕೊಂಡು ಮಲಗುತ್ತಿದ್ದ ಅನಂತಕೃಷ್ಣ. ದಿಂಬು ಗಬ್ಬೆದ್ದು ಹೋಗುತ್ತದೆಯೆಂದು ಅದರ ಮೇಲೆ ಒಂದು ಹಳೆ ಟವೆಲ್ ಹಾಕಿಕೊಂಡು ಮಲಗಲು ಅಪ್ಪಣೆ ಕೊಡಿಸಿದ್ದಳು ಹೆಂಡತಿ. ಯಾಕೋ ಇತ್ತೀಚೆಗೆ ತುಂಡುಗಡಿಯದ ಸೊಂಪು ನಿದ್ದೆ ಬರುತ್ತಿರುವುದಕ್ಕೆ ಕಾರಣ ನಾಗಭೂಷಣರಾಯರ ತೈಲ ಅನ್ನಿಸಿ ಅದನ್ನು ಅವನೊಡನೆ ಹಂಚಿಕೊಳ್ಳಬೇಕೆಂದು ನಾಲಿಗೆ ತುರಿಸುತ್ತಿದ್ದರೂ ಎದುರಿಗೆ ಕೂತು ಪಟ್ಟಾಂಗ ಹೊಡೆಯುವಾಗ ಹೇಳಿದರೆ ಅದಕ್ಕೊಂದು ತೂಕ. ಅಂತೂ ನಾಗಭೂಷಣ ಕಾಯಿಸಿಕೊಟ್ಟಿದ್ದ ತೈಲಕ್ಕೆ ನ್ಯಾಯ ಸಲ್ಲುತ್ತಿತ್ತು.
* * *
ಕಸ್ಟಮರ್ಸು, ಕಾನ್ಫರೆನ್ಸು, ಪ್ರಾಜೆಕ್ಟು, ಡೆಡ್ಲೈನು ಎನ್ನುವ ಯಥಾಪ್ರಕಾರದ ಒತ್ತಡಗಳ ನಡುವೆಯೂ ತಲೆ ಎನ್ನುವುದು ಬಿಸಿ ಏರಿಸಿಕೊಳ್ಳದೆ ಪ್ರತ್ಯೇಕವಾಗಿ, ತಂಪಾಗಿ ಉಳಿದುಕೊಂಡಿದೆ ಎನ್ನುವಂತೆ ಅನಂತಕೃಷ್ಣನ ತಲೆಯಲ್ಲಿ ಇತ್ತೀಚೆಗೆ ಹೊಸ ಚಿಗುರುಗಳು ಹುಟ್ಟಿಕೊಂಡಿವೆ. ಬೋಡು ಕಾಣುತ್ತಿದ್ದಲ್ಲಿ ಕೂದಲಿನ ಮೊಳಕೆ ಒಡೆದಿವೆ. ಒಂದು ಬಾಟಲು ತೈಲ ಉಪಯೋಗಿಸಿ ಮುಗಿಸುವಷ್ಟರಲ್ಲಿ ಅನಂತಕೃಷ್ಣನಿಗೆ ತೈಲದ ಪರಿಣಾಮ ಗೊತ್ತಾಗಿಬಿಟ್ಟಿತ್ತು. ಇನ್ನೊಂದೆರಡು ಬಾಟಲ್ ಕಳಿಸಿಬಿಡು ಮಾರಾಯಾ, ಕೊರಿಯರ್ನಲ್ಲಿ ಎನ್ನುವ ವಸಗೆ ನಾಗಭೂಷಣನನ್ನು ತಲಪಿತ್ತು.
ನಾನೂ ಹಚ್ಗಂಬೋದಂತಾ, ಕೇಳ್ರೀ…. ಅಂದಿದ್ದಳು ಹೆಂಡತಿ, ಪ್ರಾಯ ಹಿಮ್ಮುಖವಾಗಿ ತಿರುಗಿದಂತೆ ಕಾಣುತ್ತಿದ್ದ ಗಂಡಯ್ಯನನ್ನು ಮೆಚ್ಚುಗೆಯಿಂದ ನೋಡುತ್ತಾ.
ಏನು ಹಚ್ಕೋತೀಯೋ? ಯಾವ ತೈಲಾನೋ? ಕೂದಲು ಉದುರಿ ಬೊಕ್ಕರಾಗುತ್ತಿರುವ ಕೆಲ ಸಹೋದ್ಯೋಗಿಗಳ ಕುತೂಹಲದ ವಿಚಾರಣೆ. ಅನಂತಕೃಷ್ಣನ ತಲೆಯಲ್ಲಿ ಹೊಸ ಯೋಜನೆಯ ಹೊಳಹು.
* * *
ನಾಗಭೂಷಣನ ಕೇಶಾಮೃತಕ್ಕೆ ಅನಂತಕೃಷ್ಣನ ವ್ಯಾವಹಾರಿಕ ಜ್ಞಾನದ ಮಿಲಾಖತ್ತು. ಕಾನೂನಿನ ಚೌಕಟ್ಟಿನಡಿಯಲ್ಲಿ ತಯಾರಿಕೆಯ ಮೇಲೆ ಹಕ್ಕು ಸ್ಥಾಪನೆ. ವೆಬ್ಸೈಟಿನಲ್ಲಿ ಪ್ರಚಾರ. ಅನಂತಕೃಷ್ಣನ ಪರಿಚಿತರು ಮುಗಿಬಿದ್ದು ತೈಲ ಖರೀದಿಸಿದರು. ಹೆಮ್ಮಕ್ಕಳೂ ಪರಿಣಾಮ ಕಂಡುಕೊಂಡರು. ಬಾಯಿಂದ ಬಾಯಿಗೂ ನಡೆಯಿತು ಪ್ರಚಾರ. ಬೇಕಾದ ಸಸ್ಯಸಂಪತ್ತನ್ನು ತನ್ನ ಜಮೀನಿನಲ್ಲಿಯೇ ಬೆಳೆದುಕೊಳ್ಳುವ ವ್ಯವಸ್ಥೆ ಮಾಡಿಕೊಂಡ ನಾಗಭೂಷಣ. ಬೇಡಿಕೆ ಏರಿದಂತೆ ಹಣ ಝಣಗುಟ್ಟತೊಡಗಿತು. ಅನಂತಕೃಷ್ಣನಿಗೆ ತಾನು ಗೆಳೆಯನ ಋಣವನ್ನು ಕಿಂಚಿತ್ ಪ್ರಮಾಣದಲ್ಲಾದರೂ ತೀರಿಸಿದ್ದೇನೆಂಬ ತೃಪ್ತಿ, ಸಮಾಧಾನ.
ಒಂದುದಿನ ಈ ಕೆಲಸ ಬಿಸಾಕಿ ನಾನೂ ನಿಂಜೊತೆ ಸೇರ್ಕೊಂತೀನಿ ಕಣೋ…. ಅನ್ನುವವರೆಗೆ ಮೆಚ್ಚುಗೆ. ದೊಡ್ಡಮ್ಮ ಕೂಡಾ ತನ್ನ ಋಣ ತೀರಿಸಿಕೊಳ್ಳುತ್ತಿದ್ದಾಳಾ, ಕೊನೆಗಾಲದಲ್ಲಿ ತನ್ನ ಸೇವೆ ಮಾಡಿದವನ ಕೈಹಿಡಿದು ನಡೆಸುತ್ತಿದ್ದಾಳಾ ಅಂದುಕೊಂಡರೆ ಮೈಯಿಡೀ ರೋಮಾಂಚನ. ಕಣ್ಣುಗಳಲ್ಲಿ ಫಳಗುಟ್ಟುವ ನೀರು.
* * *
ನಾಗಭೂಷಣ ತನ್ನ ಜಮೀನಿಗೆ ಲಗತ್ತಾದ ಎರಡು ಎಕರೆ ಅಡಿಕೆತೋಟ ಖರೀದಿಸಿ ಮೊದಲು ಬುಡ ಗಟ್ಟಿಮಾಡಿಕೊಂಡ. ಅನಂತಕೃಷ್ಣನ ಸಲಹೆಯಂತೆ ಈ ಜಮಾನಾದ ಸರ್ವೇಸಾಧಾರಣವೆನಿಸುವ ಕೆಲ ಸಮಸ್ಯೆಗಳ ಕುರಿತು ಔಷಧಿ ತಯಾರಿಸುವ ಕುರಿತು ತಲೆ ಓಡಿಸತೊಡಗಿದ. ಯಾರಿಗೆ ಕೇಳು ಅಸಿಡಿಟಿ, ಯಾರಿಗೆ ಕೇಳು ಶುಗರ್ರು, ಯಾರಿಗೆ ಕೇಳು ಕೊಲೆಸ್ಟ್ರಾಲು, ಯಾರಿಗೆ ಕೇಳು ತೂಕ ಇಳಿಸುವ ಧಾವಂತ. ದೊಡ್ಡಮ್ಮನ ಜ್ಞಾನಭಂಡಾರ ನೋಟ್ಪುಸ್ತಕದಲ್ಲಿ ಜತನವಾಗಿತ್ತು. ಪ್ರಾಯೋಗಿಕವಾಗಿ ಮಾಡಿ ನೋಡುವುದಕ್ಕೆ ಬೇಕಾದ ನಾರುಬೇರಿನ ಕುರಿತು ಅಷ್ಟಿಷ್ಟು ತಿಳಿವಳಿಕೆ ಇತ್ತು. ಬಲ್ಲವರಿಂದ ಕೇಳಿ ತಿಳಿದುಕೊಳ್ಳುವ ಆಸಕ್ತಿ ಇತ್ತು. ಬೆನ್ನ ಹಿಂದೆ ನಿಂತು ಪ್ರೋತ್ಸಾಹಿಸಲು ಇದ್ದೇ ಇದ್ದ ಅನಂತಕೃಷ್ಣ. ಮತ್ತೇನು?
* * *
ಅಕ್ಕನಿಗೆ ಮದುವೆಗೆ ನೆರೆದಿರೋ ಒಬ್ಬ ಮಗಳಿದ್ದಾಳೆ ಅಂತ ಗ್ರಾಸ್ತನಿಗೆ ಮರೆತೇಹೋಗಿದ್ಯಾ ಅಂತ? ನಿನ್ನ ಗೆಣೆಕಾರ ಅಳಲೇಕಾಯಿ ಪಂಡಿತನನ್ನು ಒಂದು ಮಾತು ಕೇಳಿ ನೋಡೋ….. ದೊಡ್ಡಕ್ಕ ಫೋನ್ ಮಾಡಿ ಅನಂತಕೃಷ್ಣನನ್ನು ಅಚ್ಚರಿಗೊಳಿಸಿದ ಆ ಗಳಿಗೆಯಲ್ಲಿ ಅವನಿಗೆ ನೆನಪಾಗಿದ್ದು ದೊಡ್ಡಮ್ಮ. ಈ ಮೂರ್ನಾಲ್ಕು ವರ್ಷಗಳಲ್ಲಿ ತನ್ನ ಮಗಳಿಗೆ ಸೂಕ್ತವೆನಿಸಿದ ಗಂಡು ಹುಡುಕುತ್ತಾ ಹುಡುಕುತ್ತಾ ಸಾಕಷ್ಟು ಹದ ಆಗಿದ್ದಳು ದೊಡ್ಡಕ್ಕ. ನಾಗಭೂಷಣ ಗಮನಿಸುವಂಥ ಒಬ್ಬ ಜನ ಆಗಿದ್ದ. ಅವಳಿಗೆ ಗಂಡು ಸಿಗದೆ, ಇವನಿಗೆ ಹೆಣ್ಣು ಸಿಗದೆ, ಚೋದ್ಯ ಅನ್ನಿಸತೊಡಗಿತ್ತು ಅನಂತಕೃಷ್ಣನಿಗೆ. ಯಾವುದೋ ಘಟನೆ ಮತ್ತ್ಯಾವುದಕ್ಕೋ ತಳುಕುಹಾಕಿಕೊಂಡು ಭವಿಷ್ಯತ್ತಿನ ಇನ್ನ್ಯಾವುದಕ್ಕೋ ಕಾರಣವಾಗುವ ಕುರಿತು ಕೌತುಕವಾಗಿತ್ತು. ಕಾರ್ಯಕಾರಣ ಸಂಬಂಧವಿಲ್ಲದ ಯಾವೊಂದು ಕ್ರಿಯೆಗಳೂ ಈ ಜಗತ್ತಿನಲ್ಲಿಲ್ಲವೆ? ಅದು ಹಾಗಾಗಿದ್ದಕ್ಕೆ ಇದು ಹೀಗಾಗಿ, ಇದು ಹೀಗಾಗಿದ್ದರಿಂದ ಮತ್ತೊಂದು ಹಾಗೆ ಮುಂದುವರಿದು…..