ಜಾಗತೀಕರಣ,ಶಿಕ್ಷಣ ಮತ್ತು ಸಮಾಜ
ಲೇಖಕರು: ಜಿ.ಎಸ್. ಜಯದೇವ
ಪ್ರಕಾಶಕರು: ಅಭಿರುಚಿ ಪ್ರಕಾಶನ
೩೮೬, ೧೪ನೆಯ ಮುಖ್ಯರಸ್ತೆ, ೩ನೆಯ ಅಡ್ಡರಸ್ತೆ
ಸರಸ್ವತೀಪುರಂ, ಮೈಸೂರು – ೫೭೦ ೦೦೯
ಪುಟಗಳು: ೧೬೮
ಆಕಾರ: ೧/೮ ಡಿಮೈ
ಬೆಲೆ: ರೂ. ೧೩೦
‘ನಾನು ನಾನೇ ಆಗಿ ಉಳಿಯಲು ನಮ್ಮ ಶಿಕ್ಷಣ ನಮಗೆ ಎಷ್ಟು ಸಹಾಯ ಮಾಡುತ್ತಿದೆ?’ ಎಂಬುದು ಇಡೀ ಕೃತಿಯಲ್ಲಿ ಲೇಖಕರು ಎತ್ತಿರುವ ಅತ್ಯಂತ ಪ್ರಮುಖ ಪ್ರಶ್ನೆ ಎನಿಸುತ್ತದೆ. ಮಗುವಿನಲ್ಲಿ ಸ್ವಂತಿಕೆಯನ್ನು ಬೆಳೆಸದ ಶಿಕ್ಷಣ ಉಳಿದದ್ದೇನನ್ನೇ ಬೋಧಿಸಿದರೂ ಅದು ಅರ್ಥಹೀನ ಎಂಬ ಧ್ವನಿ ಇಲ್ಲಿದೆ.
ರೋಗಲಕ್ಷಣಗಳನ್ನು ಅರ್ಥಮಾಡಿಕೊಳ್ಳುವ ವೈದ್ಯನ ಸಾಮರ್ಥ್ಯ ಆತ ನೀಡುವ ಔಷಧಿಗಿಂತಲೂ ಹೆಚ್ಚು ಮಹತ್ತ್ವದ್ದು. ಅರ್ಥಾತ್, ಚಿಕಿತ್ಸೆಗಿಂತಲೂ ರೋಗನಿದಾನವೇ ಮುಖ್ಯ. ವೈದ್ಯನ ಬಳಿ ಎಷ್ಟೇ ಔಷಧಿಗಳಿದ್ದರೂ ರೋಗದ ಮೂಲ ಅಥವಾ ಲಕ್ಷಣಗಳನ್ನು ಗುರುತಿಸುವಲ್ಲಿ ಆತ ಸೋತರೆ ಆ ಔಷಧಿಗಳೆಲ್ಲ ನಿಷ್ಪ್ರಯೋಜಕವೇ. ಅದಕ್ಕಿಂತಲೂ ಮುಖ್ಯವಾಗಿ ಅದು ರೋಗಿಗಾಗುವ ನಷ್ಟ. ತಮ್ಮ ‘ಜಾಗತೀಕರಣ, ಶಿಕ್ಷಣ ಮತ್ತು ಸಮಾಜ’ ಪುಸ್ತಕದಲ್ಲಿ ನಮ್ಮ ಶಿಕ್ಷಣಕ್ಷೇತ್ರಕ್ಕೆ ಅಂಟಿರುವ ಜಾಗತೀಕರಣವೆಂಬ ಮಾರಕ ರೋಗದ ಲಕ್ಷಣಗಳನ್ನು ಎಳೆಎಳೆಯಾಗಿ ಗುರುತಿಸುವ ಮೂಲಕ ಜಿ.ಎಸ್. ಜಯದೇವ ಅವರು ಯಶಸ್ವೀ ವೈದ್ಯನೊಬ್ಬನ ಕೆಲಸಗಳನ್ನು ಅತ್ಯಂತ ಸಮರ್ಥವಾಗಿ ಮಾಡಿದ್ದಾರೆ.
ಶಿಕ್ಷಣವ್ಯವಸ್ಥೆ ಇಡೀ ಸಮಾಜದ ಅಡಿಗಲ್ಲೆಂಬುದು ಎಲ್ಲ ಪ್ರಜ್ಞಾವಂತರೂ ಒಪ್ಪಿಕೊಳ್ಳುವ ಮಾತು. ಹೀಗಾಗಿ ಶಿಕ್ಷಣವ್ಯವಸ್ಥೆ ಆರೋಗ್ಯಕರವಾಗಿದ್ದರೆ ಇಡೀ ಸಮಾಜವೂ ಆರೋಗ್ಯಕರವಾಗಿದ್ದೀತೆಂಬುದು ಒಂದು ಸರಳ ತರ್ಕ. ಸಮಾಜದ ಎಲ್ಲ ಕಾಯಿಲೆಗಳಿಗೂ ಔಷಧಿ ನೀಡಬಲ್ಲ ಶಕ್ತಿಯಿರುವುದು ಶಿಕ್ಷಣಕ್ಕೆ ಮಾತ್ರ. ಅದು ಎಲ್ಲ ಸೋಂಕುಗಳನ್ನೂ ಬೇರಿನಿಂದಲೇ ನಿವಾರಿಸಿಕೊಂಡು ಬರಬಲ್ಲದು. ಅಂತಹ ಶಿಕ್ಷಣಕ್ಷೇತ್ರಕ್ಕೇ ರೋಗ ತಗಲಿದರೆ ಚಿಕಿತ್ಸೆ ನೀಡುವವರಾರು? ‘ಶಿಕ್ಷಣವು ಬದುಕಿನ ಸಮಸ್ಯೆಯನ್ನು ಗುರುತಿಸಿ ಪರಿಹಾರ ನೀಡುವ ಬದಲು ಸಮಸ್ಯೆಯ ಭಾಗವಾಗಿ ಬೆಳೆಯುತ್ತ ಹೋಗುತ್ತಿದೆ’ (ಪು. ೧೩೨) – ಇದು ಜಯದೇವ ಅವರ ಮೂಲ ಆತಂಕ.
ಶಿಕ್ಷಣ ಮತ್ತು ಬದುಕನ್ನು ಮುಖಾಮುಖಿಯಾಗಿಸಿ ನೋಡುತ್ತಲೇ ಜಯದೇವ ಅವರು ತಮ್ಮ ಈ ಆತಂಕವನ್ನು ತಲಸ್ಪರ್ಶಿಯಾಗಿ ವಿಶ್ಲೇಷಿಸಿದ್ದಾರೆ. ಒಟ್ಟು ಹನ್ನೊಂದು ಅಧ್ಯಾಯಗಳಲ್ಲಿ ವಿಸ್ತರಿಸಿಕೊಂಡಿರುವ ಪುಸ್ತಕವು ಪ್ರಾಥಮಿಕ ಶಾಲೆಗಳಿಂದ ತೊಡಗಿ ವಿಶ್ವವಿದ್ಯಾನಿಲಯಗಳವರೆಗೆ ಶಿಕ್ಷಣದ ವಿವಿಧ ಮಜಲುಗಳಲ್ಲಿ ಹಬ್ಬಿರುವ ಜಾಗತೀಕರಣದ ಕರಿಛಾಯೆಯನ್ನು ವೈಚಾರಿಕತೆಯ ನಿಕಷಕ್ಕೆ ಒಡ್ಡಿದೆ. ಶಿಕ್ಷಣವೆಂಬ ಸುಂದರ ಉದ್ಯಾನವನಕ್ಕೆ ಜಾಗತೀಕರಣದ ಮದ್ದಾನೆ ಹೊಕ್ಕು ವಿನಾಶಕ್ರಿಯೆಯಲ್ಲಿ ತೊಡಗಿರುವ ಬಗ್ಗೆ ಜಯದೇವ ಅವರಿಗೆ ಅಪಾರ ನೋವಿದೆ; ಆದರೆ ಅದನ್ನು ಹೇಳುವಲ್ಲಿ ಅವರಿಗೆ ಭಾವೋದ್ವೇಗವಾಗಲಿ ಆವೇಶವಾಗಲಿ ಇಲ್ಲ. ಅಕಡೆಮಿಕ್ ಪರಿಭಾಷೆ-ವ್ಯಾಖ್ಯೆಗಳ ಹಂಗಿಲ್ಲ, ವಿದ್ವತ್ತಿನ ಒಣ ಪ್ರಸ್ತುತಿಯಿಲ್ಲ. ಇಡೀ ಪುಸ್ತಕ ಒಂದು ಮುಖಾಮುಖಿ ಸಂವಾದದಂತೆ, ನಿರುಮ್ಮಳ ಚಿಂತನೆಯಂತೆ ಬೆಳೆಯುತ್ತಾ ಹೋಗುತ್ತದೆ. ಪ್ರತಿಯೊಂದು ವಾಕ್ಯವನ್ನೂ ಅವರು ಧ್ಯಾನಿಸಿ, ಅನುಭವಿಸಿ ಬರೆದಿದ್ದಾರೆ.
ಮೂಲಭೂತ ಪ್ರಶ್ನೆ
‘ಇಂದಿನ ಶಿಕ್ಷಣ ನಮ್ಮ ದಿನನಿತ್ಯದ ಬದುಕಿನ ವಾಸ್ತವಗಳನ್ನು ಎದುರಿಸಲು ನಮ್ಮ ಮಕ್ಕಳನ್ನು ತಯಾರು ಮಾಡುತ್ತಿದೆಯೆ?… ಸಾಮಾಜಿಕ ಜವಾಬ್ದಾರಿಗಳನ್ನು ಕುರಿತು ಚಿಂತಿಸಲು ಅನುವುಮಾಡಿಕೊಡುತ್ತಿದೆಯೆ?’ (ಪು. ೩) – ಇದು ಶಿಕ್ಷಣದ ಬಗ್ಗೆ ಲೇಖಕರಿಗೆ ಇರುವ ಮೂಲಭೂತ ಪ್ರಶ್ನೆ. ಜಾಗತೀಕರಣ ಮತ್ತು ಎಣೆಯಿಲ್ಲದ ತಾಂತ್ರಿಕ ಪ್ರಗತಿಯು ಮನುಷ್ಯನ ದುರಾಸೆಗಳಿಗೆ ಕೊನೆಯಿಲ್ಲದಂತೆ ಮಾಡಿದೆ. ಹೀಗಾಗಿ ಬದುಕಿನ ವಾಸ್ತವಗಳನ್ನು ಮರೆತು ಬರೀ ಕನಸುಗಳ ಬೆನ್ನಟ್ಟಿ ಓಡುತ್ತಿದ್ದಾನೆ ಎನ್ನುವ ಅವರು ಮನುಷ್ಯನೊಳಗೆ ಮನೆಮಾಡಿರುವ ‘ಅತೃಪ್ತಿಯ ದಾವಾನಲ’ಕ್ಕೆ ಬಲಿಯಾಗುತ್ತಿರುವುದು ‘ಅದಮ್ಯ ಸಾಧ್ಯತೆಯ ನಮ್ಮ ಕನಸಿನ ಲೋಕದ ಕೂಸುಗಳು’ ಎಂದು ವಿಷಾದಪಡುತ್ತಾರೆ.
ಜಾಗತೀಕರಣ ಎಷ್ಟು ಗಾಢವಾಗಿ ನಮ್ಮನ್ನು ಆವರಿಸಿಕೊಂಡಿದೆಯೆಂದರೆ, ಅದರ ಹಿಡಿತದಿಂದ ತಪ್ಪಿಸಿಕೊಂಡು ಮಕ್ಕಳಲ್ಲಿ ಸ್ವಂತಿಕೆ ಮತ್ತು ಸಹಜ ಬದುಕನ್ನು ಪ್ರೀತಿಸುವ ಮನಃಸ್ಥಿತಿಯನ್ನು ಬೆಳೆಸುವುದೇ ಇಂದಿನ ಶಿಕ್ಷಣದ ಅತಿದೊಡ್ಡ ಸವಾಲು ಎಂಬುದನ್ನು ಪುಸ್ತಕದ ಉದ್ದಕ್ಕೂ ಲೇಖಕರು ಪ್ರತಿಪಾದಿಸಿದ್ದಾರೆ. ಅವರ ಪ್ರಕಾರ ಶಿಕ್ಷಣ ಮತ್ತು ಬದುಕು ಬೇರೆ ಬೇರೆ ಅಲ್ಲ. ಒಂದನ್ನು ಬಿಟ್ಟರೆ ಇನ್ನೊಂದಕ್ಕೆ ಅಸ್ತಿತ್ವವೇ ಇಲ್ಲ. ಬದುಕಿನ ಅನುಭವಗಳಿಂದ ಶಿಕ್ಷಣ ಹೊರಹೊಮ್ಮಬೇಕು, ಶಿಕ್ಷಣದಿಂದ ಬದುಕು ಬೆಳೆಯಬೇಕು. ಆದರೆ ಜಾಗತೀಕರಣ ಈ ಸಾಧ್ಯತೆಗಳನ್ನು ಹೊಸಕಿಹಾಕಿ ಶಿಕ್ಷಣ ಮತ್ತು ಬದುಕಿನ ನಡುವಿನ ಸಹಜ ಸಂಬಂಧವನ್ನು ನಾಶಗೊಳಿಸಿದೆ. ಅಲ್ಲದೆ ಇದರಿಂದಾಗಿ ಜನರು ಸಹಜ ಬದುಕಿನಿಂದಲೇ ದೂರವಾಗಿ ತಮಗೆ ತಾವೇ ಒಂದು ಕೃತಕ ಪರಿಸರವನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ. ‘ಮಣ್ಣಿನೊಡನಾಟದ ಸರಳ ಜೀವನದಲ್ಲೂ ಸಂತೋಷವಿದೆ ಎಂಬ ಸತ್ಯವನ್ನು ನಮ್ಮ ಶಿಕ್ಷಣ ತಿಳಿಸಿಕೊಡುತ್ತಿಲ್ಲ, ಅಗತ್ಯಕ್ಕಿಂತ ಹೆಚ್ಚು ಸಂಗ್ರಹಿಸುವುದು ಸಾಮಾಜಿಕ ಅಪರಾಧವಷ್ಟೇ ಅಲ್ಲ, ಅದು ಬದುಕಿನ ನಿಜವಾದ ಸಂತೋಷಕ್ಕೆ ಕಂಟಕ ಎಂಬ ಸತ್ಯವನ್ನು ತಿಳಿಸಿಕೊಡುತ್ತಿಲ್ಲ’ (ಪು. ೩).
ಸಹಜತೆ ಮತ್ತು ಸರಕುಸಂಸ್ಕೃತಿ
ಸಹಜವಾದ್ದನ್ನು ತಿರಸ್ಕರಿಸುವುದನ್ನು ಜಾಗತೀಕರಣ ಹೇಗೆ ಪ್ರೋತ್ಸಾಹಿಸುತ್ತದೆ ಎಂದು ವಿವರಿಸಲು ಲೇಖಕರು ಪ್ಯಾಕೇಜ್ಡ್ ಆಹಾರದ ಉದಾಹರಣೆ ಕೊಡುತ್ತಾರೆ. ವರ್ಷದ ಬಹುತೇಕ ಭಾಗ ಚಳಿಯಿಂದ ಮರಗಟ್ಟುವ ಪಶ್ಚಿಮದ ದೇಶಗಳಲ್ಲಿ ಆಹಾರ ಸಂಸ್ಕರಣೆ ಮತ್ತು ಶೇಖರಣೆ ಒಂದು ಸಹಜ ಪ್ರಕ್ರಿಯೆ. ಅವರಿಗೆ ಅದು ಅನಿವಾರ್ಯ. ಉಷ್ಣವಲಯದಲ್ಲಿರುವ ನಾವು ವರ್ಷದುದ್ದಕ್ಕೂ ವೈವಿಧ್ಯಮಯ ಆಹಾರಪದಾರ್ಥಗಳನ್ನು ಸಹಜವಾಗಿ ಬೆಳೆಯಬಲ್ಲೆವು. ಆದರೆ ಜಾಗತೀಕರಣದ ಮೋಡಿಗೆ ಒಳಗಾಗಿರುವ ನಾವು ‘ರೆಡಿ ಟು ಈಟ್’ ಬಗೆಯ ‘ನ್ಯೂಡಲ್ಸ್ ಸಂಸ್ಕೃತಿ’ಯನ್ನು ಒಪ್ಪಿಕೊಂಡುಬಿಟ್ಟಿದ್ದೇವೆ ಎನ್ನುತ್ತಾರೆ. ನಮ್ಮ ದೌರ್ಬಲ್ಯವನ್ನು ಬಂಡವಾಳ ಮಾಡಿಕೊಂಡಿರುವ ಜಾಗತೀಕರಣ ನೈಜವಾಗಿ ಸಿಗುವ ಎಲ್ಲವನ್ನೂ ಕೃತಕ ಆಕಾರ, ಪ್ಯಾಕೇಜುಗಳಲ್ಲಿ ನೀಡಿ ಸಹಜವಾದ್ದನ್ನು ತಿರಸ್ಕರಿಸುವ ಮತ್ತು ಅಸಹಜ ಮಾಲನ್ನು ದುಬಾರಿ ಬೆಲೆ ಕೊಟ್ಟು ಕಳಪೆ ರೂಪದಲ್ಲಿ ಪಡೆಯುವ ಸಂಸ್ಕೃತಿಯನ್ನು ಹುಟ್ಟುಹಾಕಿದೆ ಎನ್ನುವ ಜಯದೇವ ಅವರು ‘ಸ್ವಾಭಾವಿಕವಾಗಿ ಆಚರಣೆಯಲ್ಲಿದ್ದ ಆರೋಗ್ಯಕರ ಆಹಾರಪದ್ಧತಿಯನ್ನು ಕೃತಕವಾದ ಅನಾರೋಗ್ಯಕರ ಆಹಾರಪದ್ಧತಿಗೆ ಬದಲಾಯಿಸಿಕೊಳ್ಳುವುದೇ ಪ್ರಗತಿಯ ಸಂಕೇತ ಎಂದು ಭಾವಿಸುವ ಮೂರ್ಖತನಕ್ಕೆ ನಾವೆಲ್ಲ ಬಂದು ನಿಂತಿದ್ದೇವೆ’ (ಪು. ೫) ಎಂದು ಖೇದಪಡುತ್ತಾರೆ.
ಜಾಗತೀಕರಣದ ಆಮಿಷಗಳಿಗೆ ಮರುಳಾಗಿ ಸಹಜ ಬದುಕಿನ ಆನಂದವನ್ನು ಮರೆತು ವಿಚಾರಶೀಲತೆಯನ್ನೇ ಜನರು ಕಳೆದುಕೊಂಡಿದ್ದಾರೆ. ಇವರಿಗೆ ತಮ್ಮ ಅಂತರಂಗದ ದನಿ ಕೇಳುವುದಿಲ್ಲ. ಇವರು ತಮ್ಮ ಆಂತರ್ಯದ ನೆಲೆಗಳಿಂದ ಬಹುದೂರ ತೇಲಿಬಂದಿದ್ದಾರೆ. ‘ಮನುಷ್ಯಪ್ರೀತಿ-ಜೀವನಪ್ರೀತಿಗಳಂತೂ ಕೈಲಾಗದ, ಸೋತುಹೋದ ಮಂದಮತಿಗಳು ತಮ್ಮ ನಿರರ್ಥಕ ಜೀವನಕ್ಕೆ ಕಂಡುಕೊಳ್ಳುವ ತಾತ್ತ್ವಿಕ ನೆಲೆಗಳು ಎಂಬಂತಿವೆ’ (ಪು. ೯) ಎನ್ನುವ ಲೇಖಕರು ಇಂತಹ ಮನಃಸ್ಥಿತಿಯನ್ನು ಹೋಗಲಾಡಿಸುವ ಶಿಕ್ಷಣ ನಮಗೆ ಸಿಗುತ್ತಿಲ್ಲ ಎಂದು ವಿಷಾದಪಡುತ್ತಾರೆ.
ಆಳುವ ನೀತಿಯ ಮತ್ತೊಂದು ಮುಖವೇ ಜಾಗತೀಕರಣ ಎಂದು ಒಂದೆಡೆ ಪ್ರತಿಪಾದಿಸುವ ಲೇಖಕರು, ‘ಭಾವನಾತ್ಮಕ ಸಂಬಂಧಗಳನ್ನು ಲೆಕ್ಕಿಸದಂತಹ ನೇತ್ಯಾತ್ಮಕ ಸ್ವಭಾವವನ್ನು ಬೆಳೆಸಿಕೊಂಡರೆ ಮಾತ್ರ ವಸಾಹತುಶಾಹಿ ಸಾಧ್ಯವಾಗುತ್ತದೆ… ಇದು ಮನುಷ್ಯನ ವಸ್ತು-ಅವಲಂಬನೆಯನ್ನು ಹೆಚ್ಚುಮಾಡಿ ಭಾವನಾತ್ಮಕ ಬಡತನಕ್ಕೆ ಕಾರಣವಾಗಿದೆ’ (ಪು. ೫೫) ಎಂದಿದ್ದಾರೆ. ಸರಕುಸಂಸ್ಕೃತಿ ಮತ್ತು ಸರಕುಸಮೃದ್ಧಿಯ ನಡುವೆ ಜೀವನಪ್ರೀತಿಯನ್ನು, ಜೀವನದ ಸಂತೋಷವನ್ನು ಕಳೆದುಕೊಂಡಿರುವುದನ್ನು ವಾಸ್ತವವಾಗಿ ಅನುಭವಿಸಿದರೂ ಮನುಷ್ಯ ತಾನು ಕಳೆದುಕೊಂಡಿರುವುದನ್ನು ಒಪ್ಪಲು ತಯಾರಿಲ್ಲ. ಇಂತಹ ಒಂದು ಮಿಥ್ಯಾ ಮನೋಧರ್ಮವನ್ನು ಸೃಷ್ಟಿಸುವಲ್ಲಿ ಜಾಗತೀಕರಣ ಯಶಸ್ವಿಯಾಗಿದೆ ಎನ್ನುವ ಜಯದೇವ ಅವರು ‘ಜಾಗತೀಕರಣದ ಯಶಸ್ಸಿನ ಮೂಲಗುಟ್ಟು ಜನಗಳ ದೌರ್ಬಲ್ಯಗಳಲ್ಲಿ ಅಡಗಿದೆ.. ಮನುಷ್ಯನ ಮನಸ್ಸಿನಲ್ಲಿರುವ ಎಲ್ಲ ಬಗೆಯ ದೌರ್ಬಲ್ಯಗಳನ್ನು ಜಾಗತೀಕರಣ ಬಂಡವಾಳ ಮಾಡಿಕೊಂಡಿದೆ’ ಎಂದು ವಿಶ್ಲೇಷಿಸುತ್ತಾರೆ.
‘ವ್ಯಕ್ತಿತ್ವ ಮತ್ತು ಶಿಕ್ಷಣ’ ಎಂಬ ಎರಡನೇ ಅಧ್ಯಾಯದಲ್ಲೂ ಜಯದೇವ ಅವರು ತಮ್ಮ ಇದೇ ಚಿಂತನೆಗಳನ್ನು ವಿಸ್ತರಿಸಿದ್ದಾರೆ. ಜಾಗತೀಕರಣ ಬೆಳೆಸಿರುವ ಐಷಾರಾಮಿ ಬದುಕಿನ ಭ್ರಮೆಗಳ ನಡುವೆ ‘ಸರಳಜೀವನದಲ್ಲಿ ಜೀವನಸೌಂದರ್ಯವಿದೆ ಎಂದು ತೋರುವ ಯಾರೂ ನಮಗೆ ಕಾಣುತ್ತಿಲ್ಲ’ (ಪು. ೧೦) ಎನ್ನುತ್ತಾರೆ. ಸಮಾಜಕ್ಕೆ ಆದರ್ಶಗಳನ್ನು ಬೋಧಿಸಬಲ್ಲರೆಂದು ನಾವು ನಿರೀಕ್ಷಿಸುವ ಸಾಧುಸಂತರು ತಾವೇ ಐಷಾರಾಮಿ ಜೀವನ ನಡೆಸುತ್ತಾ, ಕೇಕ್ ಕತ್ತರಿಸಿಕೊಂಡು ಬರ್ತ್ಡೇ ಆಚರಿಸುತ್ತಾ ನಮ್ಮಲ್ಲಿ ನಿರಾಸೆಯನ್ನೇ ಹುಟ್ಟಿಸುತ್ತಿದ್ದಾರೆ ಎಂಬುದು ಅವರ ಅಂಬೋಣ. ‘ತನ್ನತನ’ದಲ್ಲಿ ಗಟ್ಟಿಯಾದ ವಿಶ್ವಾಸ ಇಟ್ಟುಕೊಂಡಿದ್ದ ನಾಗರಿಕತೆಯ ಸೋಂಕು ತಗಲದ ಕಾಡು ಸೋಲಿಗನ ಉದಾಹರಣೆ ಕೊಡುವ ಲೇಖಕರು, ಆಧುನಿಕತೆಯ ನೆಪದಲ್ಲಿ ಸಹಜತೆಯನ್ನು ಕಳೆದುಕೊಂಡು ಬದುಕುವ ನಾಗರಿಕ ಮಂದಿಗಿಂತ ಕಾಡಿನಲ್ಲಿ ಬದುಕುವ ಮುಗ್ಧ ಮಂದಿಯೇ ಎಷ್ಟೋ ಮೇಲು ಎಂದು ಸೂಚ್ಯವಾಗಿ ಹೇಳುತ್ತಾರೆ. ಅಲ್ಲದೆ, ಬದುಕಿನಲ್ಲ್ಲಿ ಸಹಜವಾಗಿ ಬೆಳೆದುಕೊಂಡು ಬಂದಿರುವ ಅನೇಕ ಆಚರಣೆಗಳು ಪರೋಕ್ಷವಾಗಿ ಶಿಕ್ಷಣದ ನೈಜ ಆವಶ್ಯಕತೆಗಳನ್ನು ಪೂರೈಸುತ್ತವೆ ಎನ್ನುತ್ತಾರೆ. ‘ನಾವು ಆಚರಿಸುವ ಸಣ್ಣಪುಟ್ಟ ಪದ್ಧತಿ ವಿಧಿವಿಧಾನಗಳು ಹಾಗೂ ಮೌಲ್ಯಗಳ ನಡುವೆ ಒಂದು ಅನ್ಯೋನ್ಯ ಸಂಬಂಧವಿದೆ… ಆಳವಾದ ಶೀಲನಿರ್ಮಾಣಕ್ಕೂ ಭೌತಿಕ ಚಟುವಟಿಕೆಗಳಿಗೂ ಬಿಡಿಸಲಾರದ ಸಂಬಂಧ ಇರುವುದರಿಂದಲೇ ಮನುಕುಲ ಅನೇಕ ವಿಧಿವಿಧಾನಗಳನ್ನು ಸಂಸ್ಕೃತಿಯ ಭಾಗವಾಗಿ ರೂಪಿಸಿಕೊಂಡಿದೆ’ (ಪು. ೧೨) ಎಂದಿರುವ ಲೇಖಕರು, ಸಂಸ್ಕೃತಿಯೇ ಅತ್ಯುತ್ತಮ ಶಿಕ್ಷಣಪದ್ಧತಿ ಎಂಬುದನ್ನು ಧ್ವನಿಸಿದ್ದಾರೆ.
ಆದರೆ ಇದಾವುದನ್ನೂ ಗಂಭೀರವಾಗಿ ಪರಿಗಣಿಸದ ನಮ್ಮ ವರ್ತಮಾನದ ಶಿಕ್ಷಣಪದ್ಧತಿಯಲ್ಲಿ ಜಾಗತೀಕರಣದ ಜಗತ್ತಿಗೆ ಬೇಕಾದ ಕೌಶಲಗಳನ್ನು ಕಲಿಸುವುದೇ ಪ್ರಮುಖ ಉದ್ದೇಶವಾಗಿದೆ ಎಂದು ಲೇಖಕರು ಆತಂಕಪಡುತ್ತಾರೆ. ‘ನಮ್ಮ ಶಿಕ್ಷಣ ಕುದುರೆಗಿಂತ ಲಗಾಮೇ ಬಹಳ ಮುಖ್ಯ ಎನ್ನುವಂತಿದೆ… ನಿಧಾನ ಕಲಿಕೆಯ ಮಕ್ಕಳು, ನಿರೀಕ್ಷಿತ ಕೌಶಲಗಳನ್ನು ಕಲಿಯಲಾರದ ಮಕ್ಕಳು, ಜಾಗತೀಕರಣದ ಅವಸರದ ವ್ಯವಸ್ಥೆಗೆ ಹೊಂದಿಕೊಳ್ಳಲಾರದ ಮಕ್ಕಳನ್ನು ಕೆಲಸಕ್ಕೆ ಬಾರದ ಸಾಮಗ್ರಿಗಳೋ ಎಂಬಂತೆ ನಮ್ಮ ಶಿಕ್ಷಣ ಹೊರಗೆಸೆದುಬಿಡುತ್ತದೆ’ (ಪು. ೧೫).
ವಿಶ್ವವಿದ್ಯಾನಿಲಯಗಳ ಕತೆ
ಪ್ರಾಥಮಿಕ ಶಿಕ್ಷಣದ ದುರವಸ್ಥೆಗಿಂತ ಉನ್ನತ ಶಿಕ್ಷಣ ಏನೇನೂ ಭಿನ್ನವಾಗಿಲ್ಲ ಎಂಬುದು ಜಯದೇವ ಅವರ ಅಭಿಪ್ರಾಯ. ನಮ್ಮ ವಿಶ್ವವಿದ್ಯಾನಿಲಯಗಳಂತೂ ‘ಜಾಗತೀಕರಣ ಪ್ರಾಯೋಜಿತ ಸಂಸ್ಥೆಗಳಾಗುತ್ತಿವೆ’ ಎಂದು ಕುಟುಕುವ ಅವರು ‘ಈ ವಿಶ್ವವಿದ್ಯಾನಿಲಯಗಳು ಮನುಷ್ಯನ ಜ್ಞಾನವನ್ನು ವಿಸ್ತರಿಸುತ್ತಿಲ್ಲ. ಜಾಗತಿಕ ಮಾರುಕಟ್ಟೆಗೆ ಬೇಕಾದ ಮ್ಯಾನೇಜ್ಮೆಂಟ್ ಜ್ಞಾನವನ್ನಷ್ಟೇ ನೀಡುತ್ತಿವೆ… ಸ್ವಂತಿಕೆಯನ್ನು ಹಾಳುಮಾಡಿ ಬ್ರೈನ್ವಾಶ್ ತಂತ್ರದಿಂದ ಹಣಕ್ಕೆ ವಿಧೇಯರನ್ನಾಗಿ ಮಾಡುತ್ತಿವೆ’ ಎಂದು ವಿಶ್ಲೇಷಿಸುತ್ತಾರೆ.
ನಮ್ಮ ವಿಶ್ವವಿದ್ಯಾನಿಲಯಗಳು ಬಡವ-ಶ್ರೀಮಂತರ ನಡುವಿನ ಬಿರುಕನ್ನು ಹೆಚ್ಚಿಸುತ್ತಿವೆ. ನಾಯಿಕೊಡೆಗಳಂತೆ ತಲೆಯೆತ್ತುತ್ತಿರುವ ಖಾಸಗಿ ವಿಶ್ವವಿದ್ಯಾನಿಲಯಗಳಂತೂ ಪ್ರಭಾವಿ ರಾಜಕಾರಣಿಗಳ, ಉದ್ಯಮಿಗಳ ಕೈಯಲ್ಲಿವೆ. ಹಣ ಗಳಿಕೆಯೇ ಪ್ರಮುಖ ಉದ್ದೇಶವಾಗಿರುವ ಈ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳಲ್ಲಿ ಇದಕ್ಕಿಂತ ಭಿನ್ನವಾದ ಗುರಿಗಳನ್ನು ಹೇಗೆ ಪ್ರೇರೇಪಿಸಬಲ್ಲವು? – ಎಂಬ ಪ್ರಶ್ನೆ ಜಯದೇವ ಅವರನ್ನು ಕಾಡಿದೆ. ಸರ್ಕಾರಿ ವಿ.ವಿ.ಗಳು ಇದಕ್ಕಿಂತ ಭಿನ್ನವಾಗಿಲ್ಲ ಎನ್ನುವ ಅವರು ‘ಅವು ಕೇವಲ ಪರೀಕ್ಷೆ ನಡೆಸುವ ಅಂಗಗಳಾಗಿವೆ’ ಎಂಬ ವಿವೇಕಾನಂದರ ಮಾತನ್ನು ಉಲ್ಲೇಖಿಸುತ್ತಾರೆ. ವಿವೇಕಾನಂದರು ಈ ಮಾತನ್ನು ಹೇಳಿ ಶತಮಾನವೇ ಕಳೆದರೂ ಪರಿಸ್ಥಿತಿ ಏನೇನೂ ಸುಧಾರಿಸಿಲ್ಲ ಎಂಬ ಧ್ವನಿ ಇಲ್ಲಿದೆ.
ವಿಶ್ವವಿದ್ಯಾನಿಲಯಗಳ ತಥಾಕಥಿತ ಪ್ರಾಧ್ಯಾಪಕರುಗಳ ಬಗೆಗೂ ತಮ್ಮ ತಣ್ಣನೆಯ ಆಕ್ರೋಶವನ್ನು ಅವರು ವ್ಯಕ್ತಪಡಿಸಿದ್ದಾರೆ: ‘ಈ ವಿಶ್ವವಿದ್ಯಾನಿಲಯ ನನ್ನದು; ಹಾಗಾಗಿ ಇದರ ಕಾರ್ಯವೈಖರಿಗೆ, ಇದರ ನಿಲವುಗಳಿಗೆ, ಇದರ ಸಾಧಕ-ಬಾಧಕಗಳಿಗೆ ನಾನು ಜವಾಬ್ದಾರನಾಗಬೇಕೆಂಬ ಸಮಗ್ರ ಪ್ರಜ್ಞೆ ಇವರಿಗಿದೆಯೇ? ವಿಶ್ವವಿದ್ಯಾನಿಲಯ ಒಟ್ಟಾರೆಯಾಗಿ ನನಗೆ ಸೇರಿದ್ದು ಎಂಬ ಲೇಶಮಾತ್ರ ಭಾವನೆಯೂ ಇಲ್ಲದಿದ್ದರೆ ಈ ಪಂಡಿತರು ತಮ್ಮನ್ನು ತಾವು ಯಾವುದರೊಂದಿಗೆ ಗುರುತಿಸಿಕೊಳ್ಳುತ್ತಾರೆ?’ (ಪು. ೧೯).
ಮರೆತುಹೋದ ಮೌಲ್ಯಗಳು
ನಮ್ಮ ಶಿಕ್ಷಣಪದ್ಧತಿಯನ್ನು ‘ವಾಸ್ತವಕ್ಕೆ ಸ್ಪಂದಿಸದ ಮನಸ್ಸುಗಳನ್ನು ತಯಾರಿಸುವ ಪದ್ಧತಿ’ ಎಂದು ವ್ಯಾಖ್ಯಾನಿಸುವ ಜಯದೇವ ಅವರು ಒಟ್ಟಾರೆ ಪರಿಸ್ಥಿತಿಯನ್ನು ಮಾರ್ಮಿಕವಾಗಿ ಚಿತ್ರಿಸುತ್ತಾರೆ: ‘ಯಾವುದೇ ನಿಲ್ದಾಣದಲ್ಲಿ ನಿಲ್ಲದೆ, ನಿಂತರೂ ಕೆಲವೇ ಕ್ಷಣ ನಿಂತು ವೇಗವಾಗಿ ಸಾಗುವ ರೈಲುಗಾಡಿಯಂತೆ ಶಿಕ್ಷಣವು ಮಕ್ಕಳನ್ನು ಮೊದಲನೇ ತರಗತಿಯಿಂದ ಎಳೆದೊಯ್ದು ಕೊನೆಮುಟ್ಟುವವರೆಗೆ ಸಾಗಿಸಿಬಿಡುತ್ತದೆ. ಆಗೊಮ್ಮೆ ಈಗೊಮ್ಮೆ ನಿಂತು ತಾನು ಸವೆಸಿದ ದಾರಿಯನ್ನು ಹಿಂತಿರುಗಿ ನೋಡುವ, ಆತ್ಮವಿಮರ್ಶೆ ಮಾಡುವ ಯಾವ ಅವಕಾಶವೂ ಇಲ್ಲ, ಪರಿಪಾಟವೂ ಇಲ್ಲ. ಸಮಾಜದ ಭಾಗವಾಗಿ ಬದುಕಬೇಕಾದ ನಮ್ಮ ಮಕ್ಕಳಿಗೆ ಈ ಶಿಕ್ಷಣ ಸಮಾಜದ ವಾಸ್ತವಗಳಿಗೆ ಸುತ್ತಣ ಪರಿಸರಕ್ಕೆ ಸ್ಪಂದಿಸಲು ಅವಕಾಶವನ್ನೇ ಮಾಡಿಕೊಡುವುದಿಲ್ಲ’ (ಪು. ೨೨).
‘ಶಿಕ್ಷಣದ ಆದರ್ಶದ ಸಾಧ್ಯತೆಗಳು ಮತ್ತು ಮಿತಿಗಳು’ ಎಂಬ ಅಧ್ಯಾಯದಲ್ಲಿ ಲೇಖಕರು, ವಿಜ್ಞಾನ ಮತ್ತು ಜಾಗತೀಕರಣದ ತಾಂತ್ರಿಕ ಪ್ರಗತಿ ಪ್ರಕೃತಿಯನ್ನು ನಿಯಂತ್ರಿಸುವ ಅನುಕೂಲ ದೃಷ್ಟಿಕೋನದಿಂದ ಮಾತ್ರ ನೋಡುವ ಒಂದು ವಿನಾಶಕಾರಿ ನಿಲವನ್ನು ತಂದುಕೊಟ್ಟಿದೆ ಎನ್ನುತ್ತಾರೆ. ಯೂರೋಪಿಯನ್ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ಶಾಲೆಗಳು ಹೆಚ್ಚುತ್ತಿರುವುದನ್ನೂ ಒಂದು ಗಂಭೀರ ಸಮಸ್ಯೆಯೆಂದೇ ಭಾವಿಸುವ ಅವರು, ‘ಯಾರಿಗೂ ಭಾರತೀಯರಾಗುವ ತವಕವಿಲ್ಲ, ಯೂರೋಪಿಯನ್ನರಾಗುವ ಬಯಕೆ!’ ಎಂದು ಸೋಜಿಗಪಡುತ್ತಾರೆ. ‘ತಾಂತ್ರಿಕ ಪ್ರಗತಿಯನ್ನೇ ಮುಂದುಮಾಡಿ ವಿಸ್ತರಿಸುತ್ತಿರುವ ಜಾಗತೀಕರಣದ ಈ ಸಂದರ್ಭದಲ್ಲಿ ‘ಸರ್’ ಆಗುವುದೇ ಜೀವನದ ಪರಮಗುರಿಯಾಗಿದೆ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ವೈಜ್ಞಾನಿಕ ಮನೋಭಾವನೆಯನ್ನು ರೂಢಿಸಿಕೊಳ್ಳುವುದು ಎಂದರೆ ಹಿಂದಿನ ಎಲ್ಲ ಪರಂಪರಾಗತ ನಂಬಿಕೆಗಳಿಂದ ಬಿಡಿಸಿಕೊಂಡು ಏಕಾಏಕಿ ಆಧುನಿಕರಾಗುವುದಲ್ಲ ಎಂಬುದನ್ನು ಧ್ವನಿಸುವ ಲೇಖಕರು ಒಂದಡೆ ‘ಮೌಲ್ಯವಿಲ್ಲದ ಬದುಕು ವೈಜ್ಞಾನಿಕವೂ ಅಲ್ಲ ಎಂದು ನಿಜವಾದ ವಿಜ್ಞಾನಿಗಳಿಗೆ ತಿಳಿದಿರುತ್ತದೆ’ (ಪು. ೩೫) ಎಂದು ಹೇಳಿರುವುದು ಅರ್ಥಪೂರ್ಣವಾಗಿದೆ. ವಿಜ್ಞಾನ, ಗಣಿತ, ಖಗೋಳಶಾಸ್ತ್ರ, ವೈದ್ಯಕೀಯ ಮುಂತಾದ ಕ್ಷೇತ್ರಗಳಿಗೆ ಭಾರತೀಯರು ನೀಡಿರುವ ಕೊಡುಗೆಗಳನ್ನು ನೆನಪಿಸುವ ಅವರು, ಜ್ಞಾನವನ್ನು ಹಂಚಿಕೊಳ್ಳದ ಮನೋಭಾವದಿಂದಾಗಿ ‘ನಮ್ಮದೇ ನೆಲದಲ್ಲಿ ಹುಟ್ಟಿದ ಉತ್ತಮ ಜ್ಞಾನವನ್ನು ಕಳೆದುಕೊಂಡು ಯೂರೋಪ್ ಮೂಲದ್ದೆಲ್ಲಾ ಶ್ರೇಷ್ಠ ಎಂಬ ತಿಳಿವಳಿಕೆಗೆ ಇಡೀ ರಾಷ್ಟ್ರವೇ ಬಂದು ನಿಂತಿತು. ಇಂದು ಜಾಗತೀಕರಣದ ಪ್ರಭಾವ ಇದೇ ನಂಬಿಕೆಯನ್ನು ಗಟ್ಟಿಗೊಳಿಸುತ್ತಿದೆ’ ಎಂದಿದ್ದಾರೆ. ‘ಆಧುನಿಕರಾಗುವ ಭ್ರಮೆಯಲ್ಲಿ ನಾವು ಗುರುಕುಲ ಪರಂಪರೆಯಲ್ಲಿ ಹುದುಗಿರುವ ವಿವೇಕವನ್ನು ಕಳೆದುಕೊಳ್ಳುತ್ತಿದ್ದೇವೆ’ (ಪು. ೧೩೧) ಎಂದು ‘ಸಂಸ್ಕೃತಿ ಮತ್ತು ಗುಣಾತ್ಮಕ ಶಿಕ್ಷಣ’ ಎಂಬ ಅಧ್ಯಾಯದಲ್ಲಿ ಅವರು ಹೇಳಿರುವುದು ಗಮನಾರ್ಹ. ‘ಇಂದು ಇಡೀ ದೇಶ ಕೆಟ್ಟ ಟ್ರಾಫಿಕ್ ಜಾಮ್ನಲ್ಲಿ ಸಿಕ್ಕಿಕೊಂಡಂತೆ ದಾರಿಗಾಣದೆ ಚೀರಾಡುತ್ತಿದೆ’ (ಪು. ೩೯) ಎಂಬ ಜಯದೇವ ಅವರ ಮಾತಂತೂ ದೇಶದ ಒಟ್ಟಾರೆ ಪರಿಸ್ಥಿತಿಯನ್ನು ಅತ್ಯಂತ ಸಶಕ್ತವಾಗಿ ಪರಿಚಯಿಸಿದೆ.
ಮಾಹಿತಿ ಮತ್ತು ವಿವೇಕ
ಸಹಜ ಬದುಕಿನ ಸೌಂದರ್ಯವನ್ನು ವಿವೇಕದ ಹಿನ್ನೆಲೆಯಲ್ಲಿ ಪರಿಶೀಲಿಸುವುದಕ್ಕೆ ಇನ್ನೊಂದು ಅಧ್ಯಾಯವನ್ನು ಲೇಖಕರು ಬಳಸಿಕೊಂಡಿದ್ದಾರೆ. ‘ಸಹಜವಾಗಿ ಬದುಕಬೇಕಾಗಿರುವ ಈ ಬದುಕನ್ನು ನಮ್ಮ ಕಲ್ಪನೆಯ ಚೌಕಟ್ಟಿಗೆ ಒಳಪಡಿಸಿ ಅದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಲೇ ನಾವು ನಿಜವಾದ ಬದುಕನ್ನು ಕಳೆದುಕೊಳ್ಳುತ್ತೇವೆ. ಸಹಜವಾದ ಬದುಕಿಗೆ ಬೇಕಾಗಿರುವುದು ವಿವೇಕವೇ ಹೊರತು ಮಾಹಿತಿಯಲ್ಲ’ (ಪು. ೪೦) ಎನ್ನುವ ಅವರು ನಮ್ಮ ಶಿಕ್ಷಣಪದ್ಧತಿ ವ್ಯಕ್ತಿಗೆ ವಿವೇಕವನ್ನು ನೀಡುವುದಕ್ಕಿಂತಲೂ ಮಾಹಿತಿಗಳ ಮಹಾಪೂರ ಹರಿಸುವುದರಲ್ಲೇ ಮಗ್ನವಾಗಿರುವುದರತ್ತ ಬೊಟ್ಟುಮಾಡುತ್ತಾರೆ. ‘ಮನುಷ್ಯನಿಗಾಗಿ ಯಂತ್ರಗಳು ಎಂದು ಪ್ರಾರಂಭವಾಗಿ ಯಂತ್ರಗಳಿಗಾಗಿ ಮನುಷ್ಯರು ಎನ್ನುವ ಹಂತ ತಲಪಿದ್ದೇವೆ… ಯಂತ್ರಗಳಿಗಿಂತ ಯಂತ್ರಗಳನ್ನು ತಯಾರು ಮಾಡುವ ಮನುಷ್ಯ ಮುಖ್ಯ ಎಂಬ ಸಂದೇಶವನ್ನು ತಲಪಿಸುವಲ್ಲಿ ನಮ್ಮ ಶಿಕ್ಷಣ ವಿಫಲವಾಗಿದೆ’ ಎನ್ನುತ್ತಾರೆ.
ಅತಿಯಾದ ತಂತ್ರಜ್ಞಾನವು ಮನುಷ್ಯಸಂಬಂಧಗಳನ್ನು ಹದಗೆಡಿಸುತ್ತದೆ ಎನ್ನುವ ಜಯದೇವ ಅವರು ಸತ್ಯವನ್ನು ಬಹಿರಂಗಪಡಿಸುವುದಕ್ಕಿಂತ ಸುಳ್ಳನ್ನು ಮುಚ್ಚಿಡುವುದರಲ್ಲಿ ತಂತ್ರಜ್ಞಾನ ಹೆಚ್ಚು ಶಕ್ತಿಶಾಲಿಯಾಗಿದೆ; ಈ ತಂತ್ರಜ್ಞಾನ – ಅವಲಂಬಿತ ಬದುಕು ಎಷ್ಟು ಜಟಿಲವಾಗುತ್ತ ಹೋಗುತ್ತದೆ ಎಂದರೆ ಮನುಷ್ಯ ಬದುಕುವುದಕ್ಕಿಂತ ಬದುಕಲು ಬೇಕಾದ ತಂತ್ರಜ್ಞಾನದ ಸಿದ್ಧತೆಗಳಲ್ಲೇ ಬದುಕನ್ನು ಕಳೆಯಬೇಕಾಗುತ್ತದೆ ಎನ್ನುತ್ತಾರೆ.
ಕೇವಲ ಪುಸ್ತಕಜ್ಞಾನ ಹೆಚ್ಚಾದಂತೆ ಮನುಷ್ಯನ ವಿನಾಶಕಾರಿ ಶಕ್ತಿಯೂ ಹೆಚ್ಚುತ್ತದೆ; ಅದ್ದರಿಂದ ಮನುಷ್ಯನಿಗೆ ಜ್ಞಾನಕ್ಕಿಂತಲೂ ವಿವೇಕ ಹೆಚ್ಚು ಮುಖ್ಯ ಎನ್ನುವ ಅವರು, ನಾವು ಗಳಿಸುವ ಜ್ಞಾನ ನಮ್ಮನ್ನು ವಿನಾಶಕಾರಿಯಾಗಿ ಮಾಡುತ್ತಿರುವುದೇಕೆ ಎಂಬ ಪ್ರಶ್ನೆಗೆ ಉತ್ತರಿಸಲು ಈಶೋಪನಿಷತ್ತಿನ ‘ಅವಿದ್ಯೆ ಕುರುಡುಗತ್ತಲು, ವಿದ್ಯೆಯನ್ನು ಪಡೆಯುವವರು ಇನ್ನೂ ಹೆಚ್ಚಿನ ಕತ್ತಲೆ ಪ್ರವೇಶಿಸುತ್ತಾರೆ’ ಎಂಬ ಮಾತನ್ನು ಉಲ್ಲೇಖಿಸುತ್ತಾರೆ. ‘ಸಮೂಹದ ಕಗ್ಗೊಲೆಗೆ ತಯಾರಾಗುವ ಕ್ಷಿಪಣಿಗಳು ಹುಟ್ಟುವುದು ಈ ಬಗೆಯ ಜ್ಞಾನದಿಂದಲೇ’ (ಪು. ೪೬) ಎನ್ನುವ ಲೇಖಕರು ವಿವೇಕರಹಿತ ಜ್ಞಾನದ ಅಪಾಯವನ್ನು ಅತ್ಯಂತ ಸಮರ್ಪಕವಾಗಿ ಗುರುತಿಸುತ್ತಾರೆ. ‘ಔಪಚಾರಿಕ ಶಿಕ್ಷಣ ವಿವೇಕವನ್ನು ಕೊಟ್ಟಿದ್ದರೆ ನಾವು ಅಣುಬಾಂಬುಗಳ ತಂಟೆಗೇ ಹೋಗುತ್ತಿರಲಿಲ್ಲ. ಮನುಷ್ಯನ ಅಳಿವು-ಉಳಿವಿನ ಪ್ರಶ್ನೆ ಬಂದಾಗ ಔಪಚಾರಿಕ ಶಿಕ್ಷಣ ನಮಗೆ ಉಪಯೋಗಕ್ಕೆ ಬರುತ್ತಿಲ್ಲ ಎಂಬುದು ತಿಳಿದುಬರುತ್ತದೆ’ (ಪು. ೫೧) ಎಂಬ ಲೇಖಕರ ಮಾತು ತುಂಬ ಮಹತ್ತ್ವದ್ದು.
ಬೌದ್ಧಿಕವಾಗಿ ಎಲ್ಲರೂ ಸಂವೇದನಶೀಲತೆಯನ್ನು ಉಳಿಸಿಕೊಳ್ಳುವ ಮತ್ತು ಪ್ರಕೃತಿಯನ್ನು ಕಾಪಾಡುವ ಮಾತನಾಡುತ್ತಾರೆ. ಆದರೆ ಪರಿಣಾಮದಲ್ಲಿ ಮಾತ್ರ ಪ್ರಕೃತಿಯನ್ನು ವಿನಾಶ ಮಾಡುತ್ತಾರೆ. ಇದು ನಮ್ಮ ಅರ್ಥಕೇಂದ್ರಿತ ಔಪಚಾರಿಕ ಶಿಕ್ಷಣದ ಪರಿಣಾಮ ಎನ್ನುವ ಲೇಖಕರು, ನಾವು ನಮ್ಮ ಬೌದ್ಧಿಕ ಶಕ್ತಿಯಿಂದ ಪಡೆದ ಜ್ಞಾನವನ್ನು ನಮ್ಮ ಮುಂದಿನ ಪೀಳಿಗೆಗೆ ಅಭ್ಯಾಸದ ಮಾದರಿಗಳಾಗಿ ಕೊಡಲು ಸಾಧ್ಯವೆ? – ಎಂದು ಪ್ರಶ್ನಿಸುತ್ತಾರೆ.
ಸಮಾಜವು ರೋಗಗ್ರಸ್ತವಾಗಲು ಸರಕುಸಂಸ್ಕೃತಿ ಕಾರಣ ಎನ್ನುವ ಕೃತಿಕಾರರು ‘ನೇತ್ಯಾತ್ಮಕ ಚಿಂತನೆಗಳು ಸಮಾಜದಲ್ಲಿ ಹೆಚ್ಚಾಗದಂತೆ ತಡೆಯಬೇಕಾದರೆ ಅದು ಸರಕುಸಂಸ್ಕೃತಿಯ ಮಿಥ್ಯೆಯನ್ನು ಬಯಲುಮಾಡುವುದರಿಂದ ಮಾತ್ರ ಸಾಧ್ಯ’ ಮತ್ತು ಈ ಪ್ರಕ್ರಿಯೆಯಲ್ಲಿ ಶಿಕ್ಷಣದ ಪಾತ್ರ ತುಂಬ ಮಹತ್ತ್ವದ್ದೆಂದು ಸೂಚಿಸುತ್ತಾರೆ. ಸಮಾಜದಲ್ಲಿ ವಿಚ್ಛಿದ್ರಕಾರಿ ಶಕ್ತಿಗಳು ಹೆಚ್ಚಾಗುವುದರ ಹಿಂದಿನ ಕಾರಣಗಳನ್ನು ಮನೋವೈಜ್ಞಾನಿಕ ವಿಶ್ಲೇಷಣೆಗೂ ಒಳಪಡಿಸುವ ಅವರು ನಾವು ಮಕ್ಕಳನ್ನು ಪ್ರೀತಿಸಿದ್ದರೆ ಪ್ರಪಂಚದಲ್ಲಿ ಯುದ್ಧವೆಂಬುದೇ ಇರುತ್ತಿರಲಿಲ್ಲ ಎಂಬ ಜೆ. ಕೃಷ್ಣಮೂರ್ತಿಯವರ ಮಾತನ್ನೂ ಉಲ್ಲೇಖಿಸುತ್ತಾರೆ.
ಪರಿಸರಪ್ರಜ್ಞೆಯ ಅನಿವಾರ್ಯತೆ
ಇದೇ ಚಿಂತನೆಯನ್ನು ‘ಪರಿಸರ ಮತ್ತು ನಮ್ಮ ಶಿಕ್ಷಣ’ ಎಂಬ ಅಧ್ಯಾಯದಲ್ಲಿ ಮುಂದುವರಿಸಿರುವ ಲೇಖಕರು, ಸ್ವಸ್ಥ ಸಮಾಜಕ್ಕೆ ಮನಸ್ಸಿನ ನಿಯಂತ್ರಣದ ಆವಶ್ಯಕತೆಯನ್ನು ಒತ್ತಿಹೇಳಿದ್ದಾರೆ. ವ್ಯಕ್ತಿಗತ ನೆಲೆಯಲ್ಲಿ ಪ್ರತಿಯೊಬ್ಬನೂ ಮಾಡಬಹುದಾದ ಒಂದು ಗುಣಾತ್ಮಕ ಕೆಲಸವೆಂದರೆ ತನ್ನ ಆಲೋಚನೆಗಳನ್ನು ತಾನೇ ನಿಯಂತ್ರಿಸಿಕೊಳ್ಳುವುದು (ಪು. ೬೬) ಎನ್ನುವ ಅವರು ‘ಮನೋನಿಯಂತ್ರಣದ ಸಾಧ್ಯತೆಯನ್ನು ನಮ್ಮ ಶಿಕ್ಷಣ ಗುರುತಿಸುತ್ತಿಲ್ಲ’ ಎಂಬುದಕ್ಕೂ ಬೊಟ್ಟುಮಾಡಿದ್ದಾರೆ.
ಮನುಕುಲದ ಭವಿಷ್ಯಕ್ಕೆ ಅನಿವಾರ್ಯವಾಗಿರುವ ಪರಿಸರವನ್ನು ಉಳಿಸಿಕೊಳ್ಳುವ ಪ್ರಜ್ಞೆಯನ್ನು ಸಮಾಜದಲ್ಲಿ ಬೆಳೆಸುವುದನ್ನು ಶಿಕ್ಷಣದ ಪರಮಗುರಿಗಳಲ್ಲಿ ಒಂದು ಎಂದು ಪರಿಭಾವಿಸುವ ಜಯದೇವ ಅವರು, ‘ಹಣ ಗಳಿಕೆಯ ಸಾಮರ್ಥ್ಯವೇ ಪ್ರಮುಖ ಪ್ರತಿಭೆ’ಯೆಂದು ಭಾವಿಸಿರುವ ನಮ್ಮ ಶಿಕ್ಷಣವು ಪರಿಸರದ ಬಗೆಗಿನ ಪ್ರೀತಿಯನ್ನು ಮಕ್ಕಳಲ್ಲಿ ಬೆಳೆಸುತ್ತಿಲ್ಲ ಎಂದಿದ್ದಾರೆ. ಅನಿರ್ಬಂಧಿತವಾದ ಆರ್ಥಿಕ ಪ್ರಗತಿ ಮತ್ತು ಸುಸ್ಥಿರ ಸಮಾಜ ಎರಡೂ ಒಟ್ಟಿಗೆ ಹೋಗುವುದು ಸಾಧ್ಯವಿಲ್ಲ. `ಐದುನೂರು ವರ್ಷದಾಚೆ ಕನಸುಕಾಣಿ’ ಎನ್ನುವ ನಮ್ಮ ನಾಯಕರಿಗೆ ವರ್ತಮಾನದಲ್ಲೇ ದುರಂತಮಯವಾಗಿರುವ ಪರಿಸರ ಕಣ್ಣಿಗೇ ಕಾಣಿಸುತ್ತಿಲ್ಲ ಎಂದು ಚಕಿತಗೊಳ್ಳುತ್ತಾರೆ. ಕೈಗಾರಿಕೀಕರಣದಲ್ಲಿ ಕೆಡುಕುಗಳು ಅಂತರ್ಗತವಾಗಿವೆ. ಎಷ್ಟೇ ಸಾಮಾಜೀಕರಣ ಮಾಡಿದರೂ ಕೈಗಾರಿಕೀಕರಣದ ಕೆಡುಕುಗಳನ್ನು ತಪ್ಪಿಸಲಾಗದು ಎಂಬ ಗಾಂಧಿಯವರ ಅಭಿಪ್ರಾಯವನ್ನು ಅವರಿಲ್ಲಿ ಸ್ಮರಿಸುತ್ತಾರೆ.
ಸಹಜತೆಯೆನ್ನುವುದು ಒಟ್ಟಾರೆ ಶಿಕ್ಷಣದ ಪ್ರಕ್ರಿಯೆಯಿಂದಲೇ ಮಾಯವಾಗಿರುವುದನ್ನು ‘ಶಿಶುಕೇಂದ್ರಿತ ಶಿಕ್ಷಣ’ ಎಂಬ ಅಧ್ಯಾಯದಲ್ಲಿ ಲೇಖಕರು ವಿವರಿಸಿದ್ದಾರೆ. ‘ಮಕ್ಕಳನ್ನು ಗುಡ್ಡೆಹಾಕಿಕೊಂಡು ಕಪ್ಪುಹಲಗೆಯ ಬಳಿಯೇ ನಿಲ್ಲುವ ಅಧ್ಯಾಪಕ ಜೋರುದನಿಯಲ್ಲಿ ಸಹಜವಾಗಿ ಹೇಳಬಹುದಾದ್ದನ್ನೆಲ್ಲಾ ಅಸಹಜವಾಗಿ, ಪುಸ್ತಕೀಯವಾಗಿ ಹೇಳುತ್ತಾ ಹೋಗುತ್ತಾನೆ. ಅವನು ಮಕ್ಕಳನ್ನು ಉದ್ದೇಶಿಸಿ ಮಾತನಾಡುವುದು ‘ಗಲಾಟೆ ಮಾಡಬೇಡಿ’ ಎಂದು ಕೂಗಿಕೊಳ್ಳುವಾಗ ಮಾತ್ರ. ಉಳಿದ ವೇಳೆಯಲ್ಲಿ ಪಾಠ ಸ್ವಗತವಾಗಿರುತ್ತದೆ’ (ಪು. ೯೦) ಎಂಬಲ್ಲಿ ಮಕ್ಕಳೊಂದಿಗೆ ಸಹಜವಾಗಿ ಬೆರೆಯುವುದರಲ್ಲಿ ಶಿಕ್ಷಣದ ಸಾರ್ಥಕತೆಯಿರುವುದನ್ನು ಲೇಖಕರು ಗುರುತಿಸುತ್ತಾರೆ. ‘ನಮ್ಮ ಅಧ್ಯಾಪಕರು ಪ್ರತಿಯೊಂದನ್ನೂ ಮಕ್ಕಳಿಗೆ ತಾವೇ ಕಲಿಸಬೇಕೆಂಬ ವೃತ್ತಿನಿಷ್ಠೆಯನ್ನು ಮೈಗೂಡಿಸಿಕೊಂಡಂತೆ ಕಾಣುತ್ತದೆ’ ಎನ್ನುವ ಮೂಲಕ ‘ವಿದ್ಯಾರ್ಥಿಗೇನೂ ಗೊತ್ತಿಲ್ಲ, ತಾನೇ ಎಲ್ಲ ತಿಳಿದವನು’ ಎಂಬ ನಮ್ಮ ಬಹುತೇಕ ಶಿಕ್ಷಕರ ಅಜ್ಞಾನವನ್ನು ಅಣಕಿಸುತ್ತಾರೆ.
ಅಧ್ಯಾಪಕರು ಯಾ ಪೋಷಕರು ಹೇರುವ ಅತಿಯಾದ ನಿಯಂತ್ರಣದಿಂದಾಗಿ ಮಗುವಿನ ಸ್ವಂತಿಕೆ ನಷ್ಟವಾಗುತ್ತದೆ, ಇದು ಜೀವನಪೂರ್ತಿ ಅದು ಪರಾವಲಂಬಿ ಜೀವಿಯಾಗಿ ಬದುಕುವುದಕ್ಕೆ ಕಾರಣವಾಗುತ್ತದೆ ಎಂದು ಲೇಖಕರು ಎಚ್ಚರಿಸಿರುವುದು ಇನ್ನೊಂದು ಪ್ರಮುಖ ವಿಷಯ. ಇದೇ ಸ್ವಂತಿಕೆಯ ಮೇಲೆ ಭಾಷಾ ಮಾಧ್ಯಮವು ಪರಿಣಾಮ ಬೀರುವುದನ್ನೂ ಅವರು ಗುರುತಿಸಿದ್ದಾರೆ. ‘ಮಾತೃಭಾಷೆಯಲ್ಲಿ ಕಲಿಯುವುದು ಮಕ್ಕಳ ಹಕ್ಕು. ತನ್ನದಲ್ಲದ, ಅರ್ಥವಾಗದ ಭಾಷೆ ಆತಂಕಗಳ ಸರಮಾಲೆಯನ್ನೇ ಸೃಷ್ಟಿಸುತ್ತದೆ, ಕೀಳರಿಮೆಯನ್ನು ಬಿತ್ತುತ್ತದೆ. ಅಥವಾ ಅನ್ಯಮಾರ್ಗ ಕಾಣದೆ ಮಗು ಸ್ಪಂದನಹೀನವಾಗಿ ಇಡೀ ಪರಿಸರದಿಂದ ಬೇರ್ಪಟ್ಟು ತನ್ನೊಳಗೆ ಒಂದು ಗೂಡು ಕಟ್ಟಿಕೊಂಡು ತಮಸ್ಸಿಗೆ ಶರಣಾಗುತ್ತದೆ’ (ಪು. ೧೦೧) ಎಂಬ ಲೇಖಕರ ಮಾತು ಭಾಷಾಮಾಧ್ಯಮದ ಬಗೆಗಿನ ಒಟ್ಟಾರೆ ಚರ್ಚೆಯನ್ನು ಕ್ರೋಡೀಕರಿಸುತ್ತದೆ.
‘ಮಾತೃಭಾಷೆಯ ಮೂಲಕ ನಾವು ನಮಗೆ ಬಹಳ ಆಪ್ತವಾಗಿರುವ ಸಂಗತಿಗಳನ್ನು ಹೇಳಿಕೊಳ್ಳಲು ಸಾಧ್ಯ. ಇಂತಹ ಭಾಷಾಸಾಮರ್ಥ್ಯವನ್ನು ಕಳೆದುಕೊಂಡರೆ ನಾವು ಆಪ್ತವಾದ ಯಾವುದನ್ನೂ ಹೇಳಿಕೊಳ್ಳಲು ಪ್ರಯತ್ನಿಸುವುದೇ ಇಲ್ಲ. ಅನಿವಾರ್ಯವಾಗಿ ನಾವು ನಮ್ಮ ಗ್ರಾಮೀಣ ನುಡಿಗಟ್ಟುಗಳಿಂದ ದೂರವಾಗುತ್ತೇವೆ, ನಮ್ಮ ಸಂಸ್ಕೃತಿಯಲ್ಲಿ ತಲೆತಲಾಂತರಗಳಿಂದ ರೂಪುಗೊಂಡ ಮನುಷ್ಯಸಂಬಂಧಗಳಿಗೆ, ಮೌಲ್ಯಗಳಿಗೆ ಧ್ವನಿ ನೀಡಲಾರದೆ ಸೋತುಹೋಗುತ್ತೇವೆ’ ಎಂಬ ಅವರ ಮಾತೂ ಚಿಂತನಯೋಗ್ಯ. ಇಂಗ್ಲಿಷ್ ಎಂದರೆ ಅನ್ನದ ಭಾಷೆಯೆಂಬ ಭ್ರಮೆ ಸೃಷ್ಟಿಸಿರುವ ಖಾಸಗಿ ಶಾಲೆಗಳ ವರ್ತನೆಯನ್ನು ‘ಒಂಟೆಯ ಮುಂದೆ ಎಟುಕದ ಕ್ಯಾರೆಟ್ ಹಿಡಿದು ಅದನ್ನು ಮರಳುಗಾಡಿನಲ್ಲಿ ನೀರಿಲ್ಲದೆ ನಡೆಸುವ ಜಾಣತನ’ (ಪು. ೧೦೪) ಎಂದಿರುವ ಜಯದೇವ ಅವರ ಮಾತಂತೂ ವಾಸ್ತವಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಮುಂದೇನು?
ಜಯದೇವ ಅವರ ಕೃತಿಯು ಶಿಕ್ಷಣಕ್ಷೇತ್ರದ ಸಮಸ್ಯೆಗಳನ್ನಷ್ಟೇ ಪಟ್ಟಿಮಾಡದೆ, ಜಾಗತೀಕರಣವು ಹುಟ್ಟುಹಾಕಿರುವ ಸಂದಿಗ್ಧಗಳಿಂದ ಹೊರಬರುವ ದಾರಿಗಳ ಬಗೆಗೂ ಮಾತನಾಡಿರುವುದು ಅದರ ವಿಶಿಷ್ಟತೆ. ನಮ್ಮ ಮುಂದಿರುವ ಸವಾಲುಗಳ ಪೈಕಿ ಎರಡನ್ನು ಅವರು ಪ್ರಮುಖವೆಂದು ಕಾಣುತ್ತಾರೆ: ಒಂದು, ಭೂಮಿ ಹಸಿರಾಗಿಯೇ ಉಳಿಯುವಂತೆ ಮನುಕುಲ ಬದುಕು ಸಾಗಿಸಬೇಕು. ಎರಡು, ಇಂತಹ ಬದುಕನ್ನು ಸಾಧ್ಯವಾಗಿಸುವ ಜೀವನದೃಷ್ಟಿಯನ್ನು ಬಹುಸಂಖ್ಯಾತರಲ್ಲಿ ಮೂಡಿಸಬೇಕು ಮತ್ತು ಶಿಕ್ಷಣ ಇದನ್ನು ಸಾಧ್ಯಮಾಡಬೇಕು. ಇದಕ್ಕೆ ಬಹಳ ಹಿಂದೆಯೇ ಗಾಂಧಿಯವರು ಹೇಳಿರುವ ಸರಳ ಜೀವನವೇ ಪರಿಹಾರ ಎಂದಿದ್ದಾರಲ್ಲದೆ, ನಮ್ಮ ಶಿಕ್ಷಣವ್ಯವಸ್ಥೆ ಮಕ್ಕಳ ಮನಸ್ಸನ್ನು ಇಂತಹ ಒಂದು ಸರಳ ಜೀವನಕ್ಕೆ ಸನ್ನದ್ಧಗೊಳಿಸಬೇಕು (ಪು. ೧೩೪) ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಾಗತೀಕರಣದ ಬಿರುಗಾಳಿಯಿಂದ ತಪ್ಪಿಸಿಕೊಳ್ಳಬೇಕಾದರೆ ನಮಗೆ ಎಂತಹ ಶಿಕ್ಷಣ ಬೇಕೆಂಬುದನ್ನು ತಮ್ಮ ಕೃತಿಯುದ್ದಕ್ಕೂ ಲೇಖಕರು ಪ್ರತಿಪಾದಿಸಿದ್ದಾರೆ:
ಜಾಗತೀಕರಣದ ಹಿಡಿತದಿಂದ ತಪ್ಪಿಸಿಕೊಳ್ಳಬೇಕಾದರೆ ಶಾಲಾ ವ್ಯವಸ್ಥೆಯಲ್ಲಿ ಸ್ವಂತಿಕೆ ಇರಬೇಕು; ಅಂತಹ ವ್ಯವಸ್ಥೆ ಮಕ್ಕಳಲ್ಲೂ ಸ್ವಂತಿಕೆ ಬೆಳೆಸುತ್ತದೆ, ತನ್ಮೂಲಕ ಯುಕ್ತಾಯುಕ್ತತೆಯ ವಿವೇಚನೆಯನ್ನು ಅವರು ಮೈಗೂಡಿಸಿಕೊಳ್ಳುವಂತಾಗುತ್ತದೆ. (ಪು. ೫).
ಸಹಜವಾದದ್ದು ಶ್ರೇಷ್ಠ ಎಂಬ ಭಾವನೆ ಪ್ರತಿ ಮಗುವಿನಲ್ಲೂ ಮೂಡುವಂತೆ ಮಾಡಬೇಕಾದದ್ದು ಇಂದಿನ ಶಿಕ್ಷಣದ ಮುಖ್ಯ ಗುರಿಯಾಗಬೇಕು (ಪು. ೭).
ಅಹಿಂಸೆಯಂತಹ ಒಂದು ಮೌಲ್ಯವನ್ನು ಎತ್ತಿಹಿಡಿದ ನಮ್ಮ ಚಿಂತನೆಯನ್ನು ಯಾವುದೋ ಆಧುನಿಕ ಅಲೆ ಹೊಡೆದುಕೊಂಡು ಹೋಗದಂತೆ ನಮ್ಮ ಶಿಕ್ಷಣ ಕಾಯಬೇಕು (ಪು. ೫೨).
ಜೀವನವನ್ನು ಸಮಗ್ರವಾಗಿ ನೋಡಬಲ್ಲ ಒಂದು ಸರಳ ಜೀವನದೃಷ್ಟಿಯನ್ನು ರೂಪಿಸುವ ಶಿಕ್ಷಣ ಇಂದು ನಮಗೆ ಬೇಕು (ಪು. ೬೦)
ಇಂದಿನ ಭಾರತೀಯ ಮನಸ್ಸು ಪಾಶ್ಚಾತ್ಯ ಮಾದರಿಯ ಬದುಕಿಗೆ ಮಾರುಹೋಗಿದೆ. ಭೂಮಿಯನ್ನು ಹಸಿರಾಗಿ ಉಳಿಸಬಲ್ಲ ಶಿಕ್ಷಣದ ಸಿದ್ಧಮಾದರಿಯೊಂದು ನಮಗೆ ಬೇಕಾಗಿದೆ (ಪು. ೧೩೪).
‘ನಾನು ನಾನೇ ಆಗಿ ಉಳಿಯಲು ನಮ್ಮ ಶಿಕ್ಷಣ ನಮಗೆ ಎಷ್ಟು ಸಹಾಯ ಮಾಡುತ್ತಿದೆ?’ ಎಂಬುದು ಇಡೀ ಕೃತಿಯಲ್ಲಿ ಲೇಖಕರು ಎತ್ತಿರುವ ಅತ್ಯಂತ ಪ್ರಮುಖ ಪ್ರಶ್ನೆ ಎನಿಸುತ್ತದೆ. ಮಗುವಿನಲ್ಲಿ ಸ್ವಂತಿಕೆಯನ್ನು ಬೆಳೆಸದ ಶಿಕ್ಷಣ ಉಳಿದದ್ದೇನನ್ನೇ ಬೋಧಿಸಿದರೂ ಅದು ಅರ್ಥಹೀನ ಎಂಬ ಧ್ವನಿ ಇಲ್ಲಿದೆ. ‘ಜ್ಞಾನವು `ತರು ತಳೆದ ಪುಷ್ಪ’ವಾಗಬೇಕು. ಕೃತಕವಾಗಿ ಅಂಟಿಸಿಕೊಂಡ ಹೂವಾಗಬಾರದು. ಎಂದರೆ ಜ್ಞಾನದ ಜೊತೆ ಒಂದು ಸಾವಯವ ಸಂಬಂಧ ಸಾಧ್ಯವಾಗಬೇಕು’ ಎಂಬ ಅವರ ಮಾತಿನಲ್ಲೂ ನಮ್ಮ ಶಿಕ್ಷಣಪದ್ಧತಿ ಏನಾಗಿದೆ ಮತ್ತು ಏನಾಗಬೇಕು ಎಂಬ ಕಾಣ್ಕೆ ಇದೆ. ಅದು ಲೇಖಕರ ಒಟ್ಟಾರೆ ಅನುಭವ ಹಾಗೂ ಜೀವನದರ್ಶನದ ಬಿಂಬವೂ ಹೌದು.