ಏತಾವಜ್ಜನ್ಮಸಾಫಲ್ಯಂ
ದೇಹಿನಾಮಿಹ ದೇಹಿಷು |
ಪ್ರಾಣೈರರ್ಥೈರ್ಧಿಯಾ ವಾಚಾ ಶ್ರೇಯ ಏವಾಚರೇತ್ ಸದಾ ||
– ಭಾಗವತ
“ಪ್ರಾಣ, ಹಣ, ಬುದ್ಧಿಶಕ್ತಿ, ಮಾತು – ಇವುಗಳ ಸಮರ್ಪಣೆಯಿಂದ
ಇತರರ ಒಳಿತನ್ನು ಸಾಧಿಸುವುದನ್ನು ಮನುಷ್ಯಜನ್ಮದ ಪರಮಾದರ್ಶವೆಂದು ಭಾವಿಸಬೇಕು.”
ಬದುಕಿನ ದಾರಿಯಲ್ಲಿ ಪ್ರತಿಕೂಲತೆಗಳೂ ಕ್ಲೇಶಗಳೂ ಎದುರಾಗುವುದು ವಿರಳವೇನಲ್ಲ. ವ್ಯಾವಹಾರಿಕ ಪರಿಮಿತಿಗಳಿಂದಲೋ ಮಾನವಾತೀತ ಸನ್ನಿವೇಶಗಳಿಂದಲೋ ಎಷ್ಟೋ ಜನಹಿತ ಸಂಕಲ್ಪಗಳ ಪೂರೈಕೆಗೆ ಹಲವು ತಡೆಗಳು ಉಂಟಾಗುತ್ತವೆ. ಇಂತಹ ಅಡ್ಡಿ-ಆತಂಕಗಳಿಂದ ನಿರುತ್ಸಾಹಗೊಳ್ಳದೆ ಸದಾ ಸಂಕಲ್ಪಿತ ಲಕ್ಷ್ಯದಲ್ಲಿ ಮನಸ್ಸನ್ನು ಕೇಂದ್ರೀಕರಿಸಿ ದೃಢಪ್ರಯತ್ನಶೀಲರಾದವರು ಧೀರರೆನಿಸಿ ಕೀರ್ತಿವಂತರಾಗುತ್ತಾರೆ. ತಾನು ಇರಲಿ ಅಥವಾ ಇಲ್ಲದಿರಲಿ, ತನ್ನ ಸ್ಥಿರವಾದ ಪ್ರಯತ್ನದಿಂದ ಲೋಕದ ಹಿತವು ಸಾಧಿತವಾದೀತೆಂಬ ಸಮರ್ಪಣಭಾವವು ಅಂತಹ ಧ್ಯೇಯಜೀವಿಗಳನ್ನು ಮುನ್ನಡೆಸುತ್ತಿರುತ್ತದೆ.
ಈಗ್ಗೆ ಸುಮಾರು ನೂರಾ ಇಪ್ಪತ್ತು ವರ್ಷ ಹಿಂದಿನ ಪ್ರಸಂಗ ಇದು. ಪ್ರತಾಪಚಂದ್ರರಾಯ್ ಎಂಬ ವಂಗದೇಶೀಯ ಮಹನೀಯ ಇಡೀ ಮಹಾಭಾರತವನ್ನು ಆಂಗ್ಲಭಾಷೆಗೆ ತರ್ಜುಮೆ ಮಾಡಿಸಿ ಪ್ರಕಟಿಸಲು ಸಂಕಲ್ಪಿಸಿದ. ಆತ ಕಷ್ಟಪಟ್ಟು ಗುರುತಿಸಿದ ಕಿಶೋರಿಮೋಹನ ಗಂಗೂಲಿ ಎಂಬಾತ ಹನ್ನೆರಡು ವರ್ಷ ಶ್ರಮಿಸಿ ಆಂಗ್ಲ ಅನುವಾದವನ್ನು ಸಿದ್ಧಪಡಿಸಿದ. ಅದರ ಪ್ರಕಟನೆಗಾಗಿ ಪ್ರತಾಪಚಂದ್ರರಾಯ್ ತನ್ನ ಆಸ್ತಿಯಷ್ಟನ್ನೂ ವ್ಯಯಮಾಡಿದರೂ ಸಾಕಾಗಲಿಲ್ಲ; ಇಡೀ ದೇಶವನ್ನು ಸುತ್ತಿ ಸಾಮಾನ್ಯ ರೈತರಿಂದ ಸಂಸ್ಥಾನಾಧಿಪರವರೆಗೆ ಎಲ್ಲರ ಬಾಗಿಲನ್ನು ತಟ್ಟಿ ದೇಣಿಗೆ ಸಂಗ್ರಹಿಸಿದ. ಈ ಅಗಾಧ ಶ್ರಮದಿಂದ ಕಾಯಿಲೆ ಮಲಗಿದ. ಮರಣಾಸನ್ನನಾಗಿದ್ದಾಗ ಭಾರ್ಯೆಗೆ ಹೇಳಿದ: ಈ ಪುಣ್ಯಪ್ರದವಾದ ಗ್ರಂಥವನ್ನು ಹೇಗಾದರೂ ಪ್ರಕಟಿಸು. ನನ್ನ ಅಂತ್ಯಕ್ರಿಯೆಗಾಗಿ ದಮ್ಮಡಿಯನ್ನೂ ಖರ್ಚು ಮಾಡಬೇಡ; ಆ ಹಣವನ್ನೂ ಇದಕ್ಕಾಗಿ ವಿನಿಯೋಗಿಸು. ಆ ಸಾಧ್ವೀಮಣಿ ಅತ್ಯಂತ ಶ್ರಮವಹಿಸಿ ಒಂದು ವರ್ಷದ ಅವಧಿಯಲ್ಲಿ ಹನ್ನೊಂದು ದೊಡ್ಡ ಸಂಪುಟಗಳಲ್ಲಿ ಇಡೀ ಮಹಾಭಾರತವನ್ನು ಆಂಗ್ಲಭಾಷೆಯಲ್ಲಿ ಪ್ರಕಟಿಸಲು ಶಕ್ತಳಾದಳು. ಹೀಗೆ ಇಂಗ್ಲಿಷರಿಗೂ ಇಂಗ್ಲಿಷಿನಲ್ಲಿಯಷ್ಟೆ ಓದುವ ಸೌಲಭ್ಯವಿದ್ದ ಭಾರತೀಯರಿಗೂ ಅಮೂಲ್ಯ ನಿಧಿ ದೊರೆತಂತಾಯಿತು. ಇದರ ಮೂಲಕ ಭಾರತದ ಕೀರ್ತಿ-ಪ್ರತಿಷ್ಠೆಗಳೂ ವರ್ಧಿಸಿದವೆಂದು ಹೇಳುವ ಆವಶ್ಯಕತೆಯಿಲ್ಲ. ಧ್ಯೇಯಾಭಿಮುಖತೆಯ ಉಜ್ಜ್ವಲ ನಿದರ್ಶನ ಇದು.
Comments are closed.