ಈಚೆಗೆ, ೨೧.೧೦.೨೦೧೫ರಂದು, ನಮ್ಮನ್ನು ಅಗಲಿದ ಸಂಶೋಧಕ, ಇತಿಹಾಸಕಾರ ಡಾ| ಯು. ಸೂರ್ಯನಾಥ ಕಾಮತ್ (ಜನನ: ೨೬.೪.೧೯೩೭) `ಉತ್ಥಾನ’ದ ಪ್ರಥಮ ಸಂಪಾದಕರು. `ಉತ್ಥಾನ’ ಪತ್ರಿಕೆಯ ಪ್ರಕಟಣೆ ಆರಂಭವಾದದ್ದು ಅಕ್ಟೋಬರ್ ೧೯೬೫ರಲ್ಲಿ. ಮಾರ್ಚ್ ೧೯೬೬ರವರೆಗೆ ಸಂಪಾದಕತ್ವವನ್ನು ಡಾ| ಸೂರ್ಯನಾಥ ಕಾಮತ್ ನಿರ್ವಹಿಸಿದರು.
ಕರ್ನಾಟಕದ ಇತಿಹಾಸವನ್ನು ಅಂಗೈನೆಲ್ಲಿಯಷ್ಟು ಕರಾರುವಾಕ್ಕಾಗಿ ಬಲ್ಲ, ರಚಿಸಿ ಪ್ರಚುರಪಡಿಸಿದ ಬೆರಳೆಣಿಕೆಯ ಜನರಲ್ಲಿ ಡಾ| ಕಾಮತ್ ಒಬ್ಬರು. ಇತಿಹಾಸಕ್ಕೆ ತಮ್ಮನ್ನು ಪೂರ್ಣವಾಗಿ ಅರ್ಪಿಸಿಕೊಂಡ ಅವರನ್ನು ಕರ್ನಾಟಕ ಇತಿಹಾಸದ `ಜಂಗಮ ವಿಶ್ವಕೋಶ’ (moving encyclopaedia) ಎಂದು ಅನೇಕರು ಗುರುತಿಸಿದ್ದಾರೆ. ಪ್ರಖರ ಚಿಂತನೆ, ಸ್ಪಷ್ಟ ಮಾತುಗಳಿಗೆ ಹೆಸರಾಗಿದ್ದ ಡಾ| ಕಾಮತ್ ಹಿಡಿದ ಕೆಲಸವನ್ನು ಪಟ್ಟುಹಿಡಿದು ಸಾಧಿಸುತ್ತಿದ್ದರು. ವ್ಯರ್ಥಮಾತುಗಳಲ್ಲಿ ಕಾಲಕಳೆಯುವ ಆರಾಮಕುರ್ಚಿ ವಿದ್ವಾಂಸರು ಅವರಲ್ಲ. ಡಾ| ಕಾಮತ್ ಧ್ವನಿವರ್ಧಕದ ಮುಂದೆ ಬಂದರೆಂದರೆ ವಿಚಾರದ ಜ್ಯೋತಿ ಹೊತ್ತಿಕೊಳ್ಳುತ್ತಿತ್ತು; ಕೇಳುಗರ ಕಿವಿ ಅರಳುತ್ತಿದ್ದವು.
ಕರ್ನಾಟಕ ಸರ್ಕಾರದ ಗೆಜೆಟಿಯರ್ ನಿರ್ದೇಶಕರಾಗಿ (೧೯೮೧-೧೯೯೫) ರಾಜ್ಯದ ಗೆಜೆಟಿಯರ್ ಮುಖ್ಯ ಸಂಪುಟಗಳನ್ನು ಹೊರತಂದದ್ದು ಸೂರ್ಯನಾಥ ಕಾಮತರ ದೊಡ್ಡ ಸಾಧನೆ. `ಕರ್ನಾಟಕದ ಸಂಕ್ಷಿಪ್ತ ಇತಿಹಾಸ’, `ಕರ್ನಾಟಕದ ಕೈಪಿಡಿ’ ಮುಂತಾದ ಹಲವು ಆಕರಗ್ರಂಥಗಳನ್ನೂ ಅವರು ನಾಡಿಗೆ ನೀಡಿದ್ದಾರೆ. `ಕರ್ನಾಟಕ ಇತಿಹಾಸ ಅಕಾಡೆಮಿ’ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಡಾ| ಕಾಮತ್ ಅದರ ಮೂಲಕ ಇತಿಹಾಸಕಾರರನ್ನು ನಿರ್ಮಿಸಿದರು, ಸಂಘಟಿಸಿದರು. ಅಕಾಡೆಮಿಯ ನೇತೃತ್ವದಲ್ಲಿ ಸಮ್ಮೇಳನಗಳನ್ನು ನಡೆಸಿ ಇತಿಹಾಸದ ಅಧ್ಯಯನ, ಸಂಶೋಧನೆಗಳ ಉನ್ನತಿಗೆ ಶ್ರಮಿಸಿದರು.
ಅಗಲಿದ ತನ್ನ ಆದ್ಯ ಸಂಪಾದಕರಿಗೆ `ಉತ್ಥಾನ’ ಗೌರವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತದೆ.
– ಸಂಪಾದಕ
Comments are closed.