ಯಾರು ‘ಜನಪರ’ ಮತ್ತು ಯಾರು ‘ಜನಪರ’ ಅಲ್ಲ (ಅಥವಾ ‘ಜನವಿರೋಧಿ’) ಎಂಬ ಬಗ್ಗೆ ನಮ್ಮ ರಾಜಕಾರಣಿಗಳ ನಡುವೆ ಮಾತ್ರವಲ್ಲ; ಸಮಾಜದಲ್ಲಿ ಕೂಡ ಒಂದು ಬಗೆಯ ಸ್ಪರ್ಧೆಯೇ ಏರ್ಪಟ್ಟಿರುವುದನ್ನು ಕಾಣುತ್ತೇವೆ. ಈ ವಿಭಜನೆ ಹೇಗಿರುತ್ತದೆಂದರೆ ‘ಜನಪರ’ ಅಲ್ಲದವರೆಲ್ಲ ‘ಜನವಿರೋಧಿ’ ಆಗಿರಲೇಬೇಕು; ಇದಕ್ಕೆ ಹೊರತಾಗಿ ಬೇರೆರೀತಿಯ ಜನ ಇರಲು ಸಾಧ್ಯವೇ ಇಲ್ಲ ಎಂಬಂತಿರುತ್ತದೆ. ಇದರಲ್ಲಿ ಸಾಮಾನ್ಯವಾಗಿ ನಾನು ಅಥವಾ ನನ್ನ ಗುಂಪು ‘ಜನಪರ’; ಉಳಿದವರೆಲ್ಲ ‘ಜನವಿರೋಧಿ’ಗಳು. ಬಹುತೇಕ ಎಲ್ಲರೂ ‘ಜನಪರ’ ಎಂಬ ಹಣೆಪಟ್ಟಿಯ ಕೆಳಗೆ ಸೇರಿಕೊಳ್ಳುವ ತವಕದಲ್ಲಿರುವುದರಿಂದ ಇದರ ನಿರ್ಣಯವೂ ಕಷ್ಟವೇ. ಮೂರನೆಯವರು ಅದನ್ನು ತೀರ್ಮಾನಿಸಲು ಹೊರಟರೆ ದೊಡ್ಡ ರಾದ್ಧಾಂತ ಆಗುವುದು ನಿಶ್ಚಯ. ಆದರೆ ಪತ್ರಿಕೆಗಳು, ಮುಖ್ಯವಾಗಿ ದಿನಪತ್ರಿಕೆಗಳ ವಿಷಯದಲ್ಲಿ ಹಾಗಿಲ್ಲ. ಒಂದು ದಿನಪತ್ರಿಕೆಯ ‘ವಾಚಕರವಾಣಿ’, ‘ಜನತಾವಾಣಿ’ ಅಥವಾ ‘ಸಂಪಾದಕರಿಗೆ ಪತ್ರ’ ವಿಭಾಗವನ್ನು ಗಮನಿಸಿ ಆ ಪತ್ರಿಕೆ ಜನಪರವೋ ಅಲ್ಲವೋ ಎಂಬುದನ್ನು ನಾವೇ ತೀರ್ಮಾನಿಸಬಹುದು. ಅಂತಹ ನಿರ್ಧಾರ ಕೈಗೊಳ್ಳಲು ಇದು ಸರಿಯಾದ ಮಾನದಂಡ ಆಗಿರುತ್ತದೆ.
ಪುಸ್ತಕ: ಪತ್ರ ಸಂಭವ
ಲೇಖಕರು: ಸತ್ಯಬೋಧ
ಪ್ರಕಾಶಕರು: ವ್ಯಾಸ ಭಂಡಾರ
೫೩, ೩ನೆಯ ಅಡ್ಡರಸ್ತೆ
ಹೊಸಕೆರೆಹಳ್ಳಿ ಬಡಾವಣೆ
ಬೆಂಗಳೂರು ೫೬೦ ೦೮೫
ಪುಟಗಳು: ೧೩೬
ಆಕಾರ: ೧/೮ ಕ್ರೌನ್
ಬೆಲೆ: ರೂ. ೭೫
ಒಂದು ಪತ್ರಿಕೆ (ಮುಖ್ಯವಾಗಿ ದಿನಪತ್ರಿಕೆ) ಓದುಗರ ಪತ್ರಗಳಿಗೆ ಎಷ್ಟು ಜಾಗವನ್ನು ಕೊಡುತ್ತದೆ? ತನ್ನಲ್ಲಿಗೆ ಬರುವ ಎಲ್ಲಬಗೆಯ ಪತ್ರಗಳನ್ನು ಮುಕ್ತವಾಗಿ ಪ್ರಕಟಿಸುತ್ತದೆಯೆ ಅಥವಾ ತನಗೆ ಇಷ್ಟವಾಗುವ, ಅಂದರೆ ತನ್ನ ಧೋರಣೆಗೆ ಪೂರಕವಾದ ಪತ್ರಗಳನ್ನು ಮಾತ್ರ ಪ್ರಕಟಿಸುತ್ತದೆಯೆ? ಆ ಮೂಲಕ ಓದುಗರ ಅಭಿಪ್ರಾಯಗಳಿಗೆ ಮುಕ್ತ ವೇದಿಕೆಯನ್ನು ಒದಗಿಸದೆ ಪರ್ಯಾಯವಾಗಿ ಯಾವುದೋ ಒಂದು ಅಭಿಪ್ರಾಯವನ್ನು ಓದುಗ ಜನರ ಮೇಲೆ ಹೇರುತ್ತದೆಯೆ? ಓದುಗರ ನಡುವೆ ಪರಸ್ಪರ ನಡೆಯಬಹುದಾದ ಚರ್ಚೆ-ವಾಗ್ವಾದಗಳನ್ನು ಮುಕ್ತವಾಗಿ ಪೋಷಿಸುತ್ತದೆಯೆ ಅಥವಾ ತಾನು ಯಾವುದೋ ಒಂದು ಪಕ್ಷದ (ಗುಂಪಿನ) ಪರವಾಗಿ ನಿಂತು ಮುಕ್ತವೈಚಾರಿಕತೆಯನ್ನು ಹತ್ತಿಕ್ಕುತ್ತದೆಯೆ ಎಂಬುದೆಲ್ಲ ಇಲ್ಲಿ ಗಮನಕ್ಕೆ ಬರುವ ಅಂಶಗಳು. ಒಂದು ನಾಲ್ಕು ಪತ್ರಿಕೆಗಳಿಗೆ ತಲಾ ೩-೪ ಪತ್ರಗಳನ್ನು ಬರೆಯುವಷ್ಟರಲ್ಲಿ ಸಂವೇದನಶೀಲನಾದ ಒಬ್ಬ ಓದುಗನಿಗೆ ಇದೆಲ್ಲ ಅರ್ಥವಾಗಿಬಿಡುತ್ತದೆ. ಆದ್ದರಿಂದ ಪ್ರಕಟವಾಗಬೇಕಿದ್ದರೆ ಯಾವ ಪತ್ರಿಕೆಗೆ ಎಂತಹ ಪತ್ರವನ್ನು ಕಳುಹಿಸಬೇಕು ಎಂಬುದು ಕೂಡ ತಿಳಿದಿರುತ್ತದೆ. ಅಂದರೆ ಇದರಲ್ಲಿ ಸಂಪಾದಕರ ಮರ್ಜಿ ಹಿಡಿಯುವ ಒಂದು ಅಂಶ ಕೂಡ ಇದೆ. ಹೇಳುವುದಕ್ಕೆ ‘ವಾಚಕರವಾಣಿ ಲೇಖಕ’ ಎನ್ನುವ ಲಘುವಾದ ಮಾತು ಇದಕ್ಕೆ ಸಲ್ಲುತ್ತಿದ್ದರೂ ಕೂಡ ಒಬ್ಬಾತ ಈ ಕ್ಷೇತ್ರದಲ್ಲಿ ದೀರ್ಘಕಾಲ ಉಳಿಯಬೇಕಿದ್ದರೆ ಒಂದು ಎರಡು-ಮೂರಾದರೂ ವಿಶಿಷ್ಟ ಗುಣಸ್ವಭಾವಗಳು ಆತನಲ್ಲಿ ಇರಲೇಬೇಕಾಗುತ್ತದೆ.
ಆ ರೀತಿಯಲ್ಲಿ ದೀರ್ಘಕಾಲದಿಂದ ಈ ಕ್ಷೇತ್ರದಲ್ಲಿ ಇರುವವರಲ್ಲಿ ಒಬ್ಬರು ಸತ್ಯಬೋಧ, ಬೆಂಗಳೂರು ಅವರು. ಎಚ್.ಎಸ್. ಸೂರ್ಯನಾರಾಯಣ, ಕಡೂರು, ಕೋಟೇಶ್ವರ ಸೂರ್ಯನಾರಾಯಣರಾವ್, ಬೆಂಗಳೂರು ಅವರಂತೆಯೇ ಇವರದೂ ಒಂದು ಹೆಸರು. ತಮ್ಮ ಪ್ರಕಟಿತ ಪತ್ರಗಳದ್ದೇ ಒಂದು ಪುಸ್ತಕವನ್ನು ಪ್ರಕಟಿಸುವ ಮೂಲಕ ಸತ್ಯಬೋಧ, ಬೆಂಗಳೂರು ಈಗ ಇತರರಿಗಿಂತ ಒಂದು ಹೆಜ್ಜೆ ಮುಂದಿರಿಸಿದ್ದಾರೆ. ಪುಸ್ತಕಕ್ಕೆ ‘ಪತ್ರಸಂಭವ’ ಎಂಬ ಹೆಸರನ್ನು ಕೊಟ್ಟಿದ್ದಾರೆ. (ಪ್ರಕಾಶನ – ವ್ಯಾಸಭಂಡಾರ, ಬೆಂಗಳೂರು – ೮೫) ಪುಸ್ತಕದಲ್ಲಿ ಸುಮಾರು ೧೯೯೦ರ ದಶಕದ ಮಧ್ಯಭಾಗದಿಂದ ಇಂದಿನ ತನಕ – ಅಂದರೆ ಎರಡು ದಶಕಗಳ ಕಾಲ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಅವರ ಆಯ್ದ ಪತ್ರಗಳಿವೆ. ಒಟ್ಟು ೧೨೫ ಪತ್ರಗಳು ಇಲ್ಲಿವೆ. ಎರಡು ದಶಕಗಳಿಂದ ಇವರು ಈ ಕ್ಷೇತ್ರದಲ್ಲಿ ನಿರಂತರ ಕ್ರಿಯಾಶೀಲವಾಗಿ ಉಳಿದುಕೊಂಡಿದ್ದಾರೆಂದರೆ ಇದು ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್ ಮಾಡಿದಂಥದೇ ಸಾಧನೆ ಎಂದರೆ ತಪ್ಪಲ್ಲ.
ದಿನಪತ್ರಿಕೆಗಳಲ್ಲಿ ಪತ್ರಗಳದ್ದು ಪ್ರಮುಖ ಅಂಗವಾದರೂ ಕೂಡ ಅಲಕ್ಷಿತ ಅಂಗವೂ ಹೌದು. ಪ್ರಮುಖ ಕನ್ನಡ ದೈನಿಕಗಳು ನಮ್ಮ ಇತಿಹಾಸದತ್ತ ಒಮ್ಮೆ ಕಣ್ಣು ಹಾಯಿಸಿದರೆ ಅದು ಬಹಳಷ್ಟು ರೋಚಕ ಅನುಭವಗಳನ್ನು ಒಳಗೊಂಡಿರಲು ಸಾಧ್ಯ. ಒಂದು ಅಂಶವೆಂದರೆ ಇವುಗಳ ಹಿಂದೆ ಅಪಾರ ತುಡಿತವಿರುತ್ತದೆ. ಮುಂದೆ ದೊಡ್ಡ ಲೇಖಕರಾಗುವ ಸಾಕಷ್ಟು ಜನರ ಬರವಣಿಗೆ ಇಲ್ಲಿಂದಲೇ ಆರಂಭವಾಗುತ್ತದೆ. ತನ್ನ ಪತ್ರ ತನ್ನ ಇಷ್ಟದ ಪತ್ರಿಕೆಯಲ್ಲಿ ಪ್ರಕಟವಾಗುವುದೋ ಇಲ್ಲವೋ ಎಂಬ ಅಳುಕಿನಿಂದಲೇ ಹೊಸದಾಗಿ ಲೇಖನಿ ಹಿಡಿದ ಒಬ್ಬಾತ ಪತ್ರಿಕೆಗೆ ಇದನ್ನು ಕಳುಹಿಸಿರುತ್ತಾನೆ; ಅಂತಹ ಸ್ಥಿತಿಯಲ್ಲಿ ಪತ್ರ ಪ್ರಕಟವಾಯಿತೆಂದರೆ ಆಗುವ ಸಂತೋಷ, ರೋಮಾಂಚನ ವರ್ಣಿಸಲಸದಳ; ಇದರಿಂದ ಆತ ಇನ್ನಷ್ಟು ಬರೆದು ಪದೋನ್ನತಿ ಹೊಂದುತ್ತಾ ಹೋಗಬಹುದು. ಇನ್ನೊಂದು ತುಡಿತ ಆ ಪತ್ರದ ವಿಷಯಕ್ಕೆ ಸಂಬಂಧಿಸಿದ್ದು. ಅದು ತನ್ನ ಪರಿಸರದ ಯಾವುದೋ ಸಮಸ್ಯೆಗೆ ಸಂಬಂಧಿಸಿರಬಹುದು ಅಥವಾ ಯಾವುದೋ ಪ್ರಸ್ತುತ ಸಾಮಾಜಿಕ – ರಾಜಕೀಯ ವಿಷಯದ ಬಗೆಗಿನ ತನ್ನ ಕಳಕಳಿ-ಕಳವಳ ಇರಬಹುದು. ಸತ್ಯಬೋಧ ಇಂತಹ ತುಡಿತವನ್ನು ಧಾರಾಳ ಹೊಂದಿದ್ದಾರೆ.
ಪತ್ರಿಕಾ ವೃತ್ತಿಗೆ ಸಂಬಂಧಿಸಿ Nose for news (ಸುದ್ದಿಯ ಗ್ರಹಣ ಶಕ್ತಿ) ಎನ್ನುವ ಮಾತನ್ನು ಕೇಳುತ್ತೇವೆ. ಒಬ್ಬ ಪತ್ರಕರ್ತ ಯಾವುದು ಸುದ್ದಿ ಎಂಬುದನ್ನು ತಕ್ಷಣ ಗ್ರಹಿಸಬಲ್ಲವನಾಗಿರಬೇಕು. ಓದುಗರ ಪತ್ರದಲ್ಲಿ ಕೂಡ ಸುದ್ದಿಯ ಅಂಶಗಳಿದ್ದು, ಅದರ ಲೇಖಕನೂ ಪತ್ರಕರ್ತನ ಈ ಗುಣವನ್ನು ಹೊಂದಿರಬೇಕಾಗುತ್ತದೆ. ಪತ್ರಿಕಾ ವೃತ್ತಿಯಲ್ಲಿ ವಿಳಂಬಕ್ಕೆ ಅವಕಾಶವಿಲ್ಲ. ಇತರರು ಗುರುತಿಸಿ ಹೇಳಿದ ಮೇಲೆ ಒಬ್ಬಾತ ಎಚ್ಚೆತ್ತುಕೊಳ್ಳುವುದಾದರೆ ಆತ ಈ ಕ್ಷೇತ್ರಕ್ಕೆ ಅನರ್ಹ; ಮತ್ತು ಬಹಳಷ್ಟು ಸಂದರ್ಭಗಳಲ್ಲಿ ಸಮಸ್ಯೆಗಳನ್ನು ಶೀಘ್ರಾತಿಶೀಘ್ರವಾಗಿ ಗುರುತಿಸುವುದು ಕೂಡ ತುಂಬ ಮುಖ್ಯವಾಗಿರುತ್ತದೆ.
ಸುತ್ತಲಿನ ಸಮಸ್ಯೆಯಂತೆಯೇ ತನ್ನ ಊರು, ರಾಜ್ಯ, ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸುದ್ದಿಗಳಿಗೆ ಪ್ರತಿಕ್ರಿಯಿಸುವುದು ಕೂಡ ಓದುಗರಪತ್ರದ ಪ್ರಮುಖ ಭಾಗವಾಗಿರುತ್ತದೆ. ಆ ನಿಟ್ಟಿನಲ್ಲಿ ಸತ್ಯಬೋಧ ಅವರು ತಮ್ಮ ಪುಸ್ತಕದ ಶೀರ್ಷಿಕೆ ‘ಪತ್ರಸಂಭವ’ದ ಜೊತೆಗೆ ‘ಕೈಗೆ ಸಿಕ್ಕಲ್ಲ; ಕಚ್ಚೋದು ಬಿಡಲ್ಲ’ ಎನ್ನುವ ಉಪಶೀರ್ಷಿಕೆಯನ್ನು ನೀಡಿರುವುದು ತುಂಬ ಅರ್ಥಪೂರ್ಣವಾಗಿದೆ. ಯಾವ್ಯಾವುದೋ ಊರು – ಪ್ರಾಂತಗಳ ಈ ಸುದ್ದಿ – ಘಟನೆಗಳು ಕೈಗೆಸಿಗುವ ಸರಕುಗಳಲ್ಲ. ಹಾಗೆಂದು ಅವುಗಳ ಬಗೆಗೆ ಕಚ್ಚದೆ ಇರಲು ಸಾಧ್ಯವಾಗುವುದಿಲ್ಲ. ಈ ಮಾತು ತನ್ನ ಊರಿನ ಒಂದು ವಿದ್ಯಮಾನಕ್ಕೆ ಅಥವಾ ಸಮಸ್ಯೆಗೆ ಕೂಡ ಅನ್ವಯವಾಗಬಹುದು. ಇಲ್ಲಿ ‘ಕೈಗೆ ಸಿಕ್ಕಲ್ಲ’ ಎನ್ನುವ ಮಾತಿನಲ್ಲಿ ಸ್ವಲ್ಪಮಟ್ಟಿನ ಅಸಹಾಯಕತೆ ಇದೆ; ಆದರೆ ಕಚ್ಚುವುದನ್ನು (ಟೀಕಿಸುವುದು, ಪ್ರತಿಭಟಿಸುವುದು) ಬಿಡುವುದಿಲ್ಲ; ಬಿಡಲು ಸಾಧ್ಯವಾಗುವುದಿಲ್ಲ ಎಂಬುದು ಪತ್ರ ಲೇಖಕನಾದ ಪ್ರಜೆ ಒಡ್ಡುವ ಸವಾಲು.
ಆದರೆ ಕೆಲವು ಸಲ ಕಚ್ಚಿದಾಗ ಆಕಸ್ಮಾತ್ ಕೈಗೆ ಸಿಗುವುದೂ ಇದೆ. ಅಂತಹ ಒಂದು ಸಂದರ್ಭವನ್ನು ಪುಸ್ತಕದಲ್ಲಿ ಸೇರಿಸಿದ್ದಾರೆ. ‘ಪ್ರಜಾವಾಣಿ’ಯ ವಾಚಕರವಾಣಿಯಲ್ಲಿ ಕೆಲವು ವರ್ಷಗಳ ಹಿಂದೆ ಸತ್ಯಬೋಧ ಅವರ ‘ಬರೆದು ಕೊಡಲಿ’ ಎಂಬ ಪತ್ರ ಪ್ರಕಟವಾಗಿತ್ತು. ಬೆಂಗಳೂರಿನಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಬಂದಾಗ ಅದರಿಂದ ಬರುವ ಹೆಚ್ಚುವರಿ ಆದಾಯ ನಗರಪಾಲಿಕೆ ಮಹಾಪೌರರು (ಮೇಯರ್) ಮತ್ತು ಸದಸ್ಯರ ವಿದೇಶ ಪ್ರವಾಸಕ್ಕೆ ಖರ್ಚಾಗುವ ಸಾಧ್ಯತೆ ಕಂಡುಬಂದಿತ್ತು. ಆಗ ಸತ್ಯಬೋಧ ಅದನ್ನು ‘ಹಾವನ್ನು ಹೊಡೆದು ಹದ್ದಿಗೆ ಹಾಕಿದಂತೆ’ ಎಂಬ ಹೋಲಿಕೆ ನೀಡಿ, ಕೆಲವುಕಾಲ ನಗರಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳನ್ನು ವಿದೇಶಕ್ಕೆ ಕಳುಹಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಬೇಕೆಂದು ಸೂಚಿಸಿದ್ದರು. ಅದಕ್ಕೆ ಸ್ಪಂದಿಸಿದ ಮೇಯರ್ ಎಂ. ರಾಮಚಂದ್ರಪ್ಪ ೧೦೦ರೂ. ಮೌಲ್ಯದ ಛಾಪಾಕಾಗದದ ಮೇಲೆ ವಿದೇಶ ಪ್ರವಾಸ ಮಾಡುವುದಿಲ್ಲವೆಂದು ಬರೆದುಕೊಟ್ಟು ಪತ್ರಿಕಾಗೋಷ್ಠಿಯಲ್ಲಿ ಅದನ್ನು ಪ್ರಕಟಿಸಿದ್ದರು; ಉಪಮೇಯರ್ ಪದ್ಮಾ ಗೋಪಾಲರೆಡ್ಡಿ ಕೂಡ ಹಾಗೆಯೇ ಮಾಡಿದ್ದರು. ಇದೊಂದು ವಿರಳಾತಿ ವಿರಳ ಪ್ರಸಂಗ ಎನ್ನಬಹುದು. ಆದರೆ ಉತ್ತಮ ಆಡಳಿತ ನೀಡಬಯಸುವ ಯಾವುದೇ ಉನ್ನತಸ್ಥಾನದಲ್ಲಿರುವವರು ಪ್ರಮುಖ ಪತ್ರಿಕೆಗಳ ಓದುಗರ ಅಂಕಣವನ್ನು ಗಮನಿಸದೆ ಇರುವಂತಿಲ್ಲ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ ಓದುಗರ ಪತ್ರಗಳ ಆಧಾರದಲ್ಲಿ ಕ್ರಮಕ್ಕೆ ಆದೇಶ ನೀಡುತ್ತಿದ್ದರಂತೆ.
ಏನಿದ್ದರೂ ಜನಾಭಿಪ್ರಾಯ ರೂಪಿಸುವಲ್ಲಿ ಓದುಗರ ಪತ್ರಗಳು ಖಂಡಿತವಾಗಿಯೂ ಪ್ರಭಾವ ಬೀರುತ್ತವೆ; ಇದು ಇಂದಿಗೂ ಸತ್ಯ. ಇಂಗ್ಲಿಷ್ ದೈನಿಕಗಳ ಓದುಗರು ಪತ್ರಿಕೆಗಳಲ್ಲಿ ಪ್ರಕಟವಾಗುವ ಎಲ್ಲ ಸುದ್ದಿ-ಲೇಖನಗಳಿಗೆ ಪ್ರತಿಕ್ರಿಯಿಸುವ ಜೀವಂತಿಕೆಯನ್ನು ಮೆರೆದರೆ ನಮ್ಮ ಕನ್ನಡದ ಪ್ರಮುಖ ದೈನಿಕಗಳಲ್ಲಿ ಜನಾಭಿಪ್ರಾಯ ರೂಪಿಸಬಲ್ಲ ಬೆರಳೆಣಿಕೆಯ ಪತ್ರ ಲೇಖಕರಾದರೂ ಇದ್ದಾರೆ. ಸತ್ಯಬೋಧ ಅಂಥವರಲ್ಲೊಬ್ಬರು. ಯಾವುದೇ ಪಕ್ಷ-ಪಂಗಡಗಳಿಗೆ ಸೇರದೆ ಜನಕ್ಕೆ-ಸಮಾಜಕ್ಕೆ ಒಳಿತಾಗಬೇಕು; ರಾಷ್ಟ್ರದ ಹಿತಸಾಧನೆಯಾಗಬೇಕು ಎನ್ನುವ ಏಕೈಕ ನಿಷ್ಠೆಯಿಂದ ಬರೆದ ಅದೆಷ್ಟೋ ಪತ್ರಗಳು ಪತ್ರಸಂಭವದಲ್ಲಿವೆ; ಇವು ಪ್ರಕಟವಾದ ಹೊತ್ತಿನಲ್ಲಿ ಇವರಂತೆ ಚಿಂತಿಸುವ, ಸಮಾಜಹಿತಕ್ಕೆ ಸ್ಪಂದಿಸುವ ಕೆಲವರಿಗಾದರೂ ಪ್ರೇರಣೆ ನೀಡಿರಲೇಬೇಕು.
ಸಾಂದರ್ಭಿಕವಾಗಿ ಹೇಳುವುದಾದರೆ, ಸತ್ಯಬೋಧ ಓರ್ವ ಕಥೆಗಾರರು. ಇವರ ಮೂರು ಕಥಾಸಂಕಲನಗಳು ಪ್ರಕಟವಾಗಿ ಓದುಗರ ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿವೆ. ಇದರಿಂದ ಆಗಿರುವ ಲಾಭವೆಂದರೆ, ವಿಷಯ ಗಹನವಿದ್ದರೂ ಸಂಕ್ಷಿಪ್ತವಾಗಿ, ಮನಮುಟ್ಟುವಂತೆ ಹೇಳುವ ಕಲೆ ಇವರಿಗೆ ಸಿದ್ಧಿಸಿದೆ. ‘ಸಂಯುಕ್ತ ಕರ್ನಾಟಕ’ದಲ್ಲಿ ೨೦೦೪ರ ಆಗಸ್ಟ್ನಲ್ಲಿ ಪ್ರಕಟವಾದ ‘ಗಾಂಧಿಯನ್ನು ಯಾರು ಕೊಂದರು?’ ಎನ್ನುವ ಒಂದು ಪುಟ್ಟ ಪತ್ರ ಹೀಗಿದೆ:
ಗಾಂಧಿಯ ಕೊಲೆಗೆ ಆರ್ಎಸ್ಎಸ್ ಕಾರಣವಲ್ಲ ಎಂದು ಸುಪ್ರೀಂಕೋರ್ಟ್ ಈ ವಿವಾದಕ್ಕೆ ಅಂತ್ಯ ಹೇಳಿದೆ.
ಹೀಗಿದ್ದರೂ ಮಾನವಸಂಪನ್ಮೂಲ ಸಚಿವರು ಮತ್ತೆ ಹಳೇರಾಗ ಹಾಡುತ್ತಿದ್ದಾರೆ. ಒಬ್ಬ ಕೇಂದ್ರ ಸಚಿವರ ಈ ಮಾತು ಕೋರ್ಟಿನ ತೀರ್ಮಾನವನ್ನೇ ಧಿಕ್ಕರಿಸಿದಂತಲ್ಲವೆ? ಮತ್ತು ಗಾಂಧಿತತ್ತ್ವಗಳನ್ನು ಕೊಂದವರಾರು ಎನ್ನುವುದೇ ಇಂದು ಹೆಚ್ಚು ಪ್ರಸ್ತುತ. ಏಕೆಂದರೆ ದೊಡ್ಡವರು ಅವರ ತತ್ತ್ವಗಳಲ್ಲಿ ಬದುಕಿರುತ್ತಾರೆ.
ಇಂತಹ ಅದೆಷ್ಟೋ ಪತ್ರಗಳು ಪುಸ್ತಕದಲ್ಲಿವೆ. ಪತ್ರಿಕೆಗಳು ಸಮಾಜದಲ್ಲಿನ ಕೆಟ್ಟದನ್ನು ವೈಭವೀಕರಿಸುತ್ತವೇ ಹೊರತು ಒಳ್ಳೆಯದನ್ನು ಬರೆಯುವುದಿಲ್ಲ ಎನ್ನುವ ಒಂದು ಆರೋಪವಿದೆ. ಅದು ಬಹಳಷ್ಟು ನಿಜ ಕೂಡ. ಏಕೆಂದರೆ ನಮ್ಮ ಪತ್ರಿಕೋದ್ಯಮದ ಸ್ವರೂಪವೇ ಆ ರೀತಿ ಇದೆ. ಚಾನೆಲ್ಗಳ ಟಿಆರ್ಪಿಯಂತೆಯೇ ಪ್ರಸಾರಕ್ಕಾಗಿ ಪತ್ರಿಕೆಗಳು ಕೂಡ ಏನೇನೋ ಮಾಡುತ್ತಿರುತ್ತವೆ. ಆದರೆ ಸತ್ಯಬೋಧ ಇಷ್ಟವಾದುದನ್ನು ಮೆಚ್ಚಿಬರೆದು ಗಮನ ಸೆಳೆದಿದ್ದಾರೆ.
ಪುಸ್ತಕದಲ್ಲಿ ಸತ್ಯಬೋಧ ಅವರು ೧೯೯೬ ಅಕ್ಟೋಬರಲ್ಲಿ ಪತ್ರಿಕೆಗಳಿಗೆ ಬರೆಯಲು ಆರಂಭಿಸಿದೆ. ಪ್ರಕಟವಾದ ಪತ್ರಗಳೇ ಬರಹದಲ್ಲಿ ಆಸಕ್ತಿ ಉಳಿಯಲು ಅಗತ್ಯವಾದ ವಿಶ್ವಾಸ ತುಂಬುತ್ತಾ, ಪ್ರೋತ್ಸಾಹಿಸುವ ಗೆಳೆಯನಾಗಿ, ಬರವಣಿಗೆಯನ್ನು ತಿದ್ದುವ ಗುರುವಾಗಿ ಪ್ರೋತ್ಸಾಹಿಸಿದವು…. ಪತ್ರಕ್ಕೆ ದೈನಿಕಗಳೇ ಆಸರೆ. ಪ್ರಕಟಣೆಯ ಮೇಲೆ ಪತ್ರ ಬರೆಯುವವನ ಉತ್ಸಾಹ ನಿಂತಿದೆ. ಪತ್ರಿಕೆಗಳ ಸತತ ಪ್ರೋತ್ಸಾಹದಿಂದ ಈಗಲೂ ಆರಂಭದ ದಿನದ ಉತ್ಸಾಹದಿಂದಲೇ ಬರೆಯುತ್ತಿದ್ದೇನೆ ಎಂದಿದ್ದಾರೆ. ಅಂತಹ ಸಂಪಾದಕರಿಗೆ ನಮ್ಮ ಕೃತಜ್ಞತೆಗಳೂ ಸಲ್ಲುತ್ತವೆ; ವಿಷಯ ಚೆನ್ನಾಗಿದ್ದು ಬರೆದ ಭಾಷೆ, ಶೈಲಿ ಚೆನ್ನಾಗಿಲ್ಲದಿದ್ದಾಗ ಮೂಲಕ್ಕೆ ಚ್ಯುತಿಯಾಗದಂತೆ ಸ್ವತಃ ಅವುಗಳನ್ನು ಪೂರ್ತಿ ತಿದ್ದಿಬರೆದು (ರೀರೈಟ್ಮಾಡಿ) ಪ್ರಕಟಿಸುವ ಸಂಪಾದಕವರ್ಯರೂ ಇದ್ದಾರೆ. ಅಂಥವರ ತೆರೆಯ ಹಿಂದಿನ ಕೆಲಸ ಸದಾ ಗೌರವಾರ್ಹ.
ಕನ್ನಡ ದೈನಿಕಗಳ ಓದುಗರ ಪತ್ರ ವಿಭಾಗಗಳು ಬದಲಾದ ಇಂದಿನ ದಿನಮಾನದಲ್ಲಿ ತಾವು ಕೂಡ ಬದಲಾಗಿವೆಯೆ ಎನ್ನುವ ಒಂದು ಪ್ರಶ್ನೆ ಇಲ್ಲಿ ಅಂಕುರಿಸಬಹುದು; ಇಲ್ಲ ಎಂದು ಹೇಳುವ ಧೈರ್ಯ ಯಾರಲ್ಲೂ ಇರಲಾರದು. ಈ ಅಂಕಣದಲ್ಲಿ ಸಾಹಿತ್ಯಿಕ ಸಾಂಸ್ಕೃತಿಕವಾದ ಗಂಭೀರ ಚರ್ಚೆಗಳು ನಡೆದುದನ್ನು ಕನ್ನಡ ಓದುಗರು ಕಂಡಿದ್ದಾರೆ. ಯಾವುದೇ ಸ್ಥಾಪಿತ ಹಿತಾಸಕ್ತಿಗಳನ್ನು ಕೆಣಕಬಲ್ಲ ದಿಟ್ಟತನದ ಪತ್ರಗಳು ಪ್ರಕಟವಾಗುವುದಿತ್ತು; ಸಮಾಜದ ದೋಷ – ಅನಿಷ್ಟಗಳನ್ನು ದೂರೀಕರಿಸಬಲ್ಲ ‘ದೂರುಗಂಟೆ’ಗಳಿಗೆ ಸಂಪಾದಕರು ತುಂಬ ಜಾಗ ಕೊಡುತ್ತಿದ್ದ ದಿನಗಳಿದ್ದವು.
ಈಗಿನ ಬದಲಾವಣೆಗೆ ಕಾರಣ ಏನಿರಬಹುದು ಎನ್ನುವ ಪ್ರಶ್ನೆಗೆ ಸ್ವಲ್ಪಮಟ್ಟಿನ ಉತ್ತರ ಪುಸ್ತಕಕ್ಕೆ ಪತ್ರಕರ್ತ ಎನ್.ಎಸ್. ಶ್ರೀಧರ ಮೂರ್ತಿ ಅವರು ಬರೆದ ಮಾತುಗಳಲ್ಲಿ (ಮುನ್ನುಡಿ?) ಸಿಗುತ್ತದೆ: ಪತ್ರಿಕೆಗಳು ಕೂಡ ಈಗ ಸಂಕ್ರಮಣ ಕಾಲಘಟ್ಟದಲ್ಲಿವೆ; ದೃಶ್ಯಮಾಧ್ಯಮದ ಪ್ರಬಲ ಪೈಪೋಟಿ ಎದುರಿಸುತ್ತಿವೆ. ಓದುಗರಿಗಿಂತಲೂ ಜಾಹೀರಾತುದಾರರ ಮರ್ಜಿ ಈಗ ಪ್ರಬಲವಾಗಿದೆ; ಪತ್ರಿಕೆಯ ಮೇಲೆ ಕೂಡ ಪಂಥಗಳ ಕರಿನೆರಳು ಬಿದ್ದಿದ್ದು ಸ್ವತಂತ್ರ ಚಿಂತನೆಗೆ ಇಲ್ಲಿ ಅವಕಾಶ ಕಡಮೆಯಾಗುತ್ತಿದೆ…. ಪುರವಣಿಗಳು ಜಾಹೀರಾತನ್ನು ಕಡಮೆ ಬೆಲೆಯಲ್ಲಿ ಪ್ರಕಟಿಸಲು ಚೌಕಾಸಿ ಮಾಡಲು ಅಗತ್ಯವಾದ ಸ್ಥಳಗಳಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಸೆನ್ಸೇಷನ್ ಮಾಡುವ ಪ್ರವೃತ್ತಿಗೆ ಈಗ ಮನ್ನಣೆ ದೊರಕಿದೆ ಎಂದವರು ಹೇಳುತ್ತಾರೆ. ಇದಕ್ಕೆ ಕಾರಣವೂ ಇದೆ. ಓದುಗರಿಗಿಂತ ಜಾಹೀರಾತುದಾರರ ಮರ್ಜಿ ಪ್ರಬಲವಾಗಲು ಕಾರಣವೆಂದರೆ, ಈ ಪತ್ರಿಕೆಗಳ ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ಅವುಗಳ ಮಾರಾಟದಿಂದ ಬರುವ ಹಣ ಏನೇನೂ ಸಾಲದು; ಅಂದರೆ ಜಾಹೀರಾತಿನ ಆದಾಯವೇ ಆಧಾರ. ಪತ್ರಿಕೆಯ ಜಾಗವೆಲ್ಲ ದುಡ್ಡಿನ ಲೆಕ್ಕಾಚಾರದಲ್ಲೇ ನಡೆಯುತ್ತಿದ್ದು ಓದುಗರ ಪತ್ರಕ್ಕೆ ಸಿಗುವ ಸ್ಥಳ ಕಡಮೆಯಾಗುತ್ತಲೇ ಇದೆ. ಮಾಲೀಕರ ಮುಂದೆ ಓದುಗರ ಪರವಾಗಿ ವಾದಿಸಿ ಜಾಗ ಗಿಟ್ಟಿಸಿಕೊಳ್ಳುವವರು ಯಾರು? ಎಲ್ಲವೂ ಕಮರ್ಷಿಯಲ್ ಆದಾಗ ಹೊಡೆತ ಬೀಳುವುದು ಇಂಥದಕ್ಕೇ ಅಲ್ಲವೆ?
ಸತ್ಯಬೋಧರ ಆಸಕ್ತಿ ಮತ್ತು ಕಾಳಜಿಗಳ ವೈಶಾಲ್ಯ ಪುಸ್ತಕದುದ್ದಕ್ಕೂ ಗಮನ ಸೆಳೆಯುತ್ತವೆ. ಕನ್ನಡನಾಡಿನಿಂದ ದೀರ್ಘಕಾಲದಿಂದ ದೂರವಿರುವ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡಿಸ್ ಅಚ್ಚಗನ್ನಡದಲ್ಲಿ ಭಾಷಣ ಮಾಡಿದರೆಂದು ಇವರು ಖುಷಿಪಟ್ಟು ಹೊಗಳುತ್ತಾರೆ; ಕನ್ನಡ ಧಾರಾವಾಹಿಗಳಲ್ಲಿ ಪದ್ಯಗಳು ಇಲ್ಲದ್ದರಿಂದ ಸಂಗೀತ ಕಾಣೆಯಾಗುತ್ತಿದೆ ಎನ್ನುತ್ತಾರೆ. ಧಾರಾವಾಹಿಗಳು ಉದ್ದವಾದವು ಎನ್ನುತ್ತಾರೆ Carnatic Music ಎನ್ನಬಾರದು; Karnataka ಸಂಗೀತ ಎಂದು ಕರೆಯಬೇಕೆಂದು ಆಗ್ರಹಿಸುತ್ತಾರೆ. ಓದುವ ಆಂದೋಲನ ಆಗಬೇಕೆಂದು ಮಂತ್ರಿಗಳು ಕರೆಕೊಟ್ಟಾಗ ಗ್ರಂಥಾಲಯಗಳ ದುಃಸ್ಥಿತಿಯ ಕಡೆಗೆ ಗಮನ ಸೆಳೆಯುತ್ತಾರೆ; ಅಪೇಕ್ಷಿತರ (ಉದಾ- ಡಿ.ಆರ್. ನಾಗರಾಜ್) ಕೃತಿಗಳು ಗ್ರಂಥಾಲಯದಲ್ಲಿ ಇಲ್ಲವೆಂದು ಟೀಕಿಸುತ್ತಾರೆ. ಕವಿ ಸಿದ್ದಲಿಂಗಯ್ಯನವರು (ಶಾಸಕರಾದಾಗ) ತನಗೆ ಸರ್ಕಾರದ ಮನೆ ಬೇಡ ಎಂದಾಗ, ನಟಿ ಲಕ್ಷ್ಮೀ ಚಂದ್ರಶೇಖರ್ ಅವರು (ಪತಿ ಸಚಿವರಾಗಿರುವ ಕಾರಣ) ಅಕಾಡೆಮಿ ಗೌರವ ಸದಸ್ಯತ್ವ ನಿರಾಕರಿಸಿದಾಗ ಅದನ್ನು ಮೆಚ್ಚಿ ದಾಖಲಿಸಿದ್ದಾರೆ.
ಒಂದು ಕಾಲಘಟ್ಟದ ಮರುಸ್ಮೃತಿಯ ಪ್ರಯತ್ನದಲ್ಲಿ ಈ ಪತ್ರಗಳ ಪಾತ್ರ ವಿಶಿಷ್ಟ ಎನ್ನಿಸಿತು. ಇವು ಕಾಲದ ದಾಖಲೆಗಳೂ ಹೌದು. ಅನೇಕ ಪತ್ರಗಳು ಇಂದೂ ಅಷ್ಟೇ ಪ್ರಸ್ತುತವಾಗಿರುವುದು ನೋಡಿದರೆ ಆಶ್ಚರ್ಯವಾಗುತ್ತದೆ ಎನ್ನುವ ಸತ್ಯಬೋಧರ ಮಾತಿಗೆ ನಾವೂ ದನಿಗೂಡಿಸಬಹುದು. ಇದೆಲ್ಲದರ ನಡುವೆ ಕಾಗುಣಿತ ಮತ್ತು ಮುದ್ರಣ ದೋಷಗಳು ಪತ್ರಸಂಭವದ ಓದುಗರನ್ನು ಬಾಧಿಸುವುದು ನಿಜ. ತಪ್ಪಿಲ್ಲದೆ ಬರೆಯುವುದು, ಮುದ್ರಿಸುವುದು ನಮ್ಮ ಕನ್ನಡ ಪ್ರೀತಿಯ ಮೊದಲ ಲಕ್ಷಣವಾಗಬೇಕು ಎನ್ನುವುದಾದರೆ ಅದೊಂದು ಲೋಪ ಪುಸ್ತಕದಲ್ಲಿ ಉಳಿದಿದೆ. ಒಟ್ಟಿನಲ್ಲಿ ಒಂದೆಡೆ ಸಾಮಾಜಿಕ ಮಾಧ್ಯಮಗಳು ಪ್ರಬಲವಾಗುತ್ತಿರುವಾಗ ಪತ್ರಿಕೆಗಳ ಈ ವಿಭಾಗವನ್ನು ಬಲಪಡಿಸುವ ಪ್ರಸ್ತುತ ಪ್ರಯತ್ನ ಸ್ವಾಗತಾರ್ಹ.