ಇಂದಿನ ಯುವಜನಾಂಗ `ಕ್ಷಣಿಕ ಆಕರ್ಷಣೆ’ಯ ಹಣ-ಅಧಿಕಾರ-ಅಂತಸ್ತುಗಳ ಬೆನ್ನುಹತ್ತಿ ಬಂಗಾರದ ಜಿಂಕೆಯ ಬೆನ್ನುಹತ್ತಿದ ಸೀತೆಯಂತಾಗದೆ. ಧ್ಯೇಯವಾದದ ಜ್ಞಾನತೇಜದ ಬೀಜ ಬಿತ್ತಿ ಬೆಳೆವ ನಿಜದ ಕೃಷಿಕರಾಗಬೇಕಾದ ಅಗತ್ಯ ಇದೆ.
`ಒಳ್ಳೆಯ ಶೀಲವಂತರಾದ, ಬುದ್ಧಿವಂತರಾದ, ತಮ್ಮ ಸರ್ವಸ್ವವನ್ನೂ ತ್ಯಾಗಮಾಡುವಂತಹ, ವಿಧೇಯರಾಗಿರುವ, ನನ್ನ ಭಾವನೆಗಳನ್ನು ಕಾರ್ಯರೂಪಕ್ಕೆ ತರಲು ತಮ್ಮ ಪ್ರಾಣವನ್ನೇ ಅರ್ಪಿಸಬಲ್ಲ ಯುವಕರ ಮೇಲೆ ನನ್ನ ಭವಿಷ್ಯದ ಹಾರೈಕೆಯೆಲ್ಲಾ ನಿಂತಿದೆ. ಅದರಿಂದ ದೇಶಕ್ಕೂ ಅವರಿಗೂ ಕಲ್ಯಾಣವಾಗುವುದು.’
– ಸ್ವಾಮಿ ವಿವೇಕಾನಂದ
`ನ ಹಿ ಜ್ಞಾನೇನ ಸದೃಶಂ’ ಎಂಬುದು ಶ್ರೀಮದ್ಭಗವದ್ಗೀತೆಯ ಮಂತ್ರ. ಮೈಸೂರು ವಿಶ್ವವಿದ್ಯಾನಿಲಯದ ಧ್ಯೇಯವಾಕ್ಯ. `ಜನನಿ ತಾನೆ ಮೊದಲ ಗುರು’, `ಒಂದಕ್ಷರವಂ ಕಲಿಸಿದಾತಂ ಗುರು’ ಎಂದು ಭಾವಿಸಿದ ದೇಶ ನಮ್ಮದು. ನಮ್ಮ ಪೂರ್ವಜರು ಭಾರತವನ್ನು `ಜ್ಞಾನ’ದ ಬಲದಿಂದ ಅವಿನಾಶಿಯಾಗಿ ರೂಪಿಸಿದ್ದಾರೆ. `ಅಕ್ಷರ’ ಎಂಬ ಪದದ ಅರ್ಥವೇ ಅವಿನಾಶಿ ಎಂದು. ಮನುಷ್ಯ, ಜೀವರಾಶಿ, ಜಗತ್ತು ಸರ್ವವೂ `ಅಮೃತ’ವೆಂದು ಜಗತ್ತಿಗೆ ಸಾರಿದವರು ನಾವು. `ದುಡ್ಡು ದೊಡ್ಡಪ್ಪ, ವಿದ್ಯೆ ಅದರಪ್ಪ’ ಎಂಬುದು ನಮ್ಮ ಜನಪದರ ದರ್ಶನ. ಭಾರತದ ಯುವಜನ ಒಂದು ಕೈಂiಲ್ಲಿ ಗ್ಲೋಬು ಮತ್ತೊಂದು ಕೈಯಲ್ಲಿ ಲಾಟೀನು ಹಿಡಿದು ಹಳ್ಳಿಹಳ್ಳಿಗೆ ಕೊಳಚೆಗೇರಿಗೆ ಹೋಗಬೇಕು. ದೇಶದೆಲ್ಲೆಡೆ ಶಿಕ್ಷಣವನ್ನು ಪಸರಿಸಬೇಕು. ಭಾರತ ಗುಡಿಸಲುಗಳಲ್ಲಿದೆ. ಗುಡಿಸಲುಗಳು ಉದ್ಧಾರವಾದಾಗ ಭಾರತವೂ ಉದ್ಧಾರವಾಗುತ್ತದೆ. `ದರಿದ್ರನಾರಾಯಣದೇವೋ ಭವ’ ನಮ್ಮ ಧರ್ಮ. ಭಾರತದ ಯುವಜನರು ಪ್ರಪಂಚದ ಎಲ್ಲ ದೇಶಗಳಿಗೆ ಹೋಗಬೇಕು, ಆದರೆ ಭಿಕ್ಷುಕರಂತಲ್ಲ; ಬೋಧಿಸುವ ಗುರುಗಳಾಗಿ ಹೋಗಬೇಕು – ಎಂಬುದು ಸ್ವಾಮಿ ವಿವೇಕಾನಂದರ ಮಹಾಕನಸು. ಭಾರತದ ಯುವಜನರು ಗುರುಗಳಾದಾಗ ಭಾರತ ಜಗದ್ಗುರುವಾಗುತ್ತದೆ. ಲೌಕಿಕ-ಅಲೌಕಿಕ; ಪ್ರಾಥಮಿಕ-ಉನ್ನತ-ಅತ್ಯುನ್ನತ ಎಲ್ಲ ಹಂತಗಳ ಶಿಕ್ಷಣದ ಪ್ರಸಾರದ ಹೊಣೆ, ಅಧಿಕಾರ, ಅನುಭವ ನಮ್ಮ ಯುವಜನರದ್ದಾದಾಗ ಭಾರತ ನಿಜವಾದ ಅರ್ಥದಲ್ಲಿ ಜಗದ್ಗುರುವಾಗುತ್ತದೆ.
ಸಿದ್ಧಾರ್ಥ ಜಗದ್ಗುರುವಾದದ್ದು ಬುದ್ಧನಾದದ್ದರಿಂದಲೇ ಹೊರತು ರಾಜನಾದದ್ದರಿಂದಲ್ಲ; ಮಹಾಧನಿಕನಾದದ್ದರಿಂದಲ್ಲ. ಇಂದಿಗೂ ಜಗತ್ತು ಭಾರತಕ್ಕೆ ನಮಿಸುವುದು ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಹಾಗೂ ಕಣಾದ, ಪತಂಜಲಿ, ಪಾಣಿನಿಯರಂಥ ಗುರುವರ್ಯರ ಜ್ಞಾನದ ಬೆಳಕಿಗೆ ಎಂಬುದು ಸಾರ್ವತ್ರಿಕ ಹಾಗೂ ಸಾರ್ವಕಾಲಿಕ ಸತ್ಯ.
ಇಂಥ ಜ್ಞಾನದ ಜ್ಞಾನಿಗಳ ನೆಲದಲ್ಲಿ ಪ್ರತಿಭಾವಂತ ಯುವಜನರು ಶಿಕ್ಷಕವೃತ್ತಿಗೆ ಬಂದು ಶಿಕ್ಷಣಕ್ಷೇತ್ರವನ್ನು ಸಮೃದ್ಧಗೊಳಿಸುವ ಕಾರ್ಯಕ್ಕೆ ಮುಂದಾಗುತ್ತಿಲ್ಲ ಎಂಬ ಆತಂಕ ದೇಶದೆಲ್ಲೆಡೆ ಕೇಳಿಬರುತ್ತಿದೆ. ನಮ್ಮ ಯುವಜನರು ಐದಾರು ಅಂಕಿಯ ಲಕ್ಷಾಂತರ ಸಂಬಳದ ಬೆನ್ನುಹತ್ತಿದ್ದಾರೆ. ಹಾಗಾಗಿ ಅವರು ದ್ವಿತೀಯ ಪಿ.ಯು.ಸಿ.ಯ ಹಂತದಲ್ಲೇ ಮೂಲಜ್ಞಾನಕ್ಕೆ ಬೆನ್ನುಕೊಟ್ಟು ತಾಂತ್ರಿಕ, ವೈದ್ಯಕೀಯ ಮೊದಲಾದ ಹೆಚ್ಚು ಹಣ ತಂದುಕೊಡುವ ಕಡೆಗೆ ಮುಖಮಾಡಿದ್ದಾರೆ. ವಿದೇಶಗಳಲ್ಲಿ ನೆಲೆ ಕಂಡುಕೊಳ್ಳತೊಡಗಿದ್ದಾರೆ. ಅವರಿಗೆ ಶಿಕ್ಷಕ-ಪ್ರಾಧ್ಯಾಪಕ-ಸಂಶೋಧಕ ರಂಗಗಳು ಆಕರ್ಷಣೀಯವಾಗಿಲ್ಲ. ಅವರನ್ನು ಶಿಕ್ಷಣಕ್ಷೇತ್ರದತ್ತ ಸೆಳೆಯಬೇಕು ಎಂಬ ಕಾರಣದಿಂದಾಗಿಯೇ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು ೨೦೦೬ರ ಯು.ಜಿ.ಸಿ. ವೇತನವನ್ನು ಗಣನೀಯವಾಗಿ ಹೆಚ್ಚಿಸಿ ಶಿಕ್ಷಕವೃತ್ತಿ-ಶಿಕ್ಷಣಕ್ಷೇತ್ರವನ್ನು ಆಕರ್ಷಣೀಯಗೊಳಿಸುವ ಕೆಲಸ ಮಾಡಿದೆ. ಅದು ಸಫಲವಾಗಿದೆಯೇ ಎಂಬುದು ಅಧ್ಯಯನಯೋಗ್ಯ.
ಅಳಿಸಬೇಕಿದೆ ಜಾಗತೀಕರಣದ ಪ್ರಭಾವ
ಶಿಕ್ಷಕವೃತ್ತಿ ಅಧಿಕ ಆದಾಯ ತಂದುಕೊಡುವ ವೃತ್ತಿಯಲ್ಲ; ಕತ್ತಲಲ್ಲಿ ಹಣತೆ ಹಚ್ಚುವ ಆತ್ಮತೃಪ್ತಿಯ ವೃತ್ತಿ. ಆದರೆ ಜಾಗತೀಕರಣದ ವ್ಯಾಪಾರಿಮನೋಭಾವದ ಲಾಭಕೋರತನವೇ ಧ್ಯೇಯವಾಗಿರುವ ಹೊತ್ತಿನಲ್ಲಿ ಜ್ಞಾನ-ಜ್ಞಾನಿ; ಶಿಕ್ಷಣ-ಶಿಕ್ಷಕ ಪ್ರವಾಹದ ಎದುರು ಈಜಬೇಕಾದ ಜೀವಂತ ಮತ್ಸ್ಯಗಳಾಗಬೇಕಿದೆ. ಹಾಗೆ ಆಗಬಲ್ಲ ಶಕ್ತಿ ನಮ್ಮ ಯುವಜನರಿಗಿದೆ. ಆ ಶಕ್ತಿಯನ್ನು ಜಾಗೃತಗೊಳಿಸಬೇಕಾದ ತುರ್ತು ಹೊತ್ತಿನಲ್ಲಿ ತಂದೆ-ತಾಯಿ; ಗುರು-ಹಿರಿಯರು; ಹಾಗೂ ಸರ್ಕಾರ-ಸಮಾಜ ಇದೆ. ಶಿಕ್ಷಕ-ಶಿಕ್ಷಣದಲ್ಲಿ ಉತ್ಸಾಹ ನಾಶವಾದರೆ ದೇಶದ ಸಂಸ್ಕೃತಿಯ ಉಸಿರು ಕಟ್ಟಲಾರಂಭಿಸುತ್ತದೆ. ತನ್ನ ಸಂಸ್ಕೃತಿಯನ್ನು ಕಳೆದುಕೊಂಡ ದೇಶ ಹೆಣಕ್ಕೆ ಮಾಡಿದ ಸಿಂಗಾರದಂತೆ ಕಾಣಬಹುದೇ ಹೊರತು ಹಸೆಮಣೆ ಏರಿದ ಮದುಮಗಳಂತೆ ಮದುಮಗನಂತೆ ಅಥವಾ ಜಾತ್ರೆಯ ಮೇರುತೇರಿನ ದೇವರಂತೆ ಕಂಗೊಳಿಸಲಾರದು. ಹಾಗಾಗಿ ಯುವಜನರ ದೇಹ-ಮನಸ್ಸು-ಬುದ್ಧಿ-ಆತ್ಮಗಳು ಶಿಕ್ಷಣಕ್ಷೇತ್ರದತ್ತ ಪ್ರವಹಿಸಲಿ.
ಎಂ.ಎಚ್.ಆರ್.ಡಿ.ಯ ಅಖಿಲಭಾರತ ಉನ್ನತಶಿಕ್ಷಣ ಸಮೀಕ್ಷಾವರದಿ ೨೦೧೩ರ ಪ್ರಕಾರ ನಮ್ಮ ದೇಶದಲ್ಲಿ ೬೪೨ ವಿಶ್ವವಿದ್ಯಾನಿಲಯಗಳು, ೩೪,೯೦೮ ಕಾಲೇಜುಗಳಿವೆ. ಇಡೀ ದೇಶದಲ್ಲೇ ಬೆಂಗಳೂರು ಜಿಲ್ಲೆ ಅತಿ ಹೆಚ್ಚು ಅಂದರೆ ೯೨೪ ಕಾಲೇಜುಗಳನ್ನು ಹೊಂದಿದ ಮೊದಲ ಸ್ಥಾನ ಪಡೆದ ಜಿಲ್ಲೆಯಾಗಿದೆ. ೫೪೪ ಕಾಲೇಜುಗಳಿಂದ ಕೂಡಿರುವ ರಾಜಸ್ಥಾನದ ಜೈಪುರ ಜಿಲ್ಲೆ ಎರಡನೆಯ ಸ್ಥಾನದಲ್ಲಿದೆ. ದೇಶದಲ್ಲಿ ಅಂದಾಜು ೨.೮೬ ಕೋಟಿ ವಿದ್ಯಾರ್ಥಿಗಳು ಉನ್ನತಶಿಕ್ಷಣ ಪಡೆಯುತ್ತಿದ್ದಾರೆ. ಅವರಲ್ಲಿ ೧.೫೯ ಕೋಟಿ ಹುಡುಗರು ಮತ್ತು ೧.೨೭ ಕೋಟಿ ಹುಡುಗಿಯರು. ವಿದ್ಯಾರ್ಥಿನಿಯರ ಪ್ರಮಾಣ ಶೇಕಡ ೪೪.೪ರಷ್ಟಿದೆ. ಕಾಲೇಜುಗಳಲ್ಲಿ ಶೇ. ೭೩ರಷ್ಟು ಖಾಸಗಿ ಕಾಲೇಜುಗಳಾಗಿವೆ. ಅವುಗಳಲ್ಲಿ ೫೮% ಅನುದಾನರಹಿತ, ೧೫% ಅನುದಾನಿತ ಖಾಸಗಿ ಶಿಕ್ಷಣಸಂಸ್ಥೆಗಳು. ಸರ್ಕಾರಿ ಕಾಲೇಜುಗಳ ಪ್ರಮಾಣ ಕೇವಲ ೨೭.೨% ಮಾತ್ರ. ಆದರೆ ಈ ಸರ್ಕಾರಿ ಕಾಲೇಜುಗಳು ೩೮.೯%ದಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿವೆ. ಅನುದಾನ ಪಡೆಯುವ ಕಾಲೇಜುಗಳು ೨೩.೨% ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದರೆ, ಅನುದಾನರಹಿತ ಕಾಲೇಜುಗಳು ಕೇವಲ ೩೭.೯% ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿವೆ. ಒಟ್ಟಾರೆ ೬೨.೧% ವಿದ್ಯಾರ್ಥಿಗಳು ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣಸಂಸ್ಥೆಗಳಲ್ಲಿ ವಿದ್ಯೆ ಪಡೆಯುತ್ತಿದ್ದಾರೆ. ಇವರು ೫೮%ದಷ್ಟಿರುವ ದುಬಾರಿಶುಲ್ಕದ ಕಾಲೇಜುಗಳಲ್ಲಿ ಕಲಿಯಲಾಗದ ಬಡ ಹಾಗೂ ಮಧ್ಯಮವರ್ಗದ ವಿದ್ಯಾರ್ಥಿಗಳು. ಇವರಿಗೆ ಉತ್ತಮ ಶಿಕ್ಷಕರನ್ನು ಒದಗಿಸುವವರು ಯಾರು? ಪ್ರತಿಭಾವಂತ ವಿದ್ಯಾರ್ಥಿಗಳು ಅಧ್ಯಾಪಕರಾಗಿ ಶಿಕ್ಷಣಕ್ಷೇತ್ರಕ್ಕೆ ಬರದಿದ್ದರೆ ದೇಶದ ೬೨.೧%ದಷ್ಟು ವಿದ್ಯಾರ್ಥಿಗಳಿಗೆ ನಾವು ಮೋಸಮಾಡಿದಂತೆ ಆಗುವುದಿಲ್ಲವೆ?
ಯಾರು ಹೊಣೆ?
ದೇಶದಲ್ಲಿ ಒಟ್ಟು ೮೩ ತಾಂತ್ರಿಕ ವಿಶ್ವವಿದ್ಯಾನಿಲಯಗಳು, ೩೩ ಕೃಷಿ ವಿಶ್ವವಿದ್ಯಾನಿಲಯಗಳು, ೨೪ ವೈದ್ಯಕೀಯ ವಿಶ್ವವಿದ್ಯಾನಿಲಯಗಳು, ೧೭ ಕಾನೂನು ವಿಶ್ವವಿದ್ಯಾನಿಲಯಗಳು, ೧೦ ಪಶುವೈದ್ಯಕೀಯ ವಿಶ್ವವಿದ್ಯಾನಿಲಯಗಳು ಇವೆ. ಆದರೆ, ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾನಿಲಯ ದೇಶದಲ್ಲಿ ಒಂದೇ ಒಂದು! ಹಳ್ಳಿಗಳ ದೇಶ ನಮ್ಮದು. ರೈತ ಭಾರತದ ಬೆನ್ನೆಲುಬು ಎಂದೆಲ್ಲಾ ಹೇಳುವ ನಾವು ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾನಿಲಯ ಸ್ಥಾಪಿಸಿರುವುದು ಬರೀ ಒಂದು! ಇದನ್ನು ಸರಿಪಡಿಸುವ ಅವಕಾಶ ಇಂದಿನ ಯುವಜನರ ಮುಂದಿದೆ. ಸಂಸದರಾಗಿದ್ದ ನಾನಾಜಿ ದೇಶಮುಖ್ ತಮಗೆ ೬೦ ವರ್ಷವಾಯ್ತು ಎಂದು ರಾಜಕೀಯ ತ್ಯಜಿಸಿ ಚಿತ್ರಕೂಟದಲ್ಲಿ ಖಾಸಗಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾನಿಲಯ ಸ್ಥಾಪಿಸಿ ಸಾಮಾಜಿಕ ಕ್ರಾಂತಿಗೆ ಕಾರಣರಾಗಿದ್ದಾರೆ. ಇಂಥ ಹತ್ತಾರು ಮಾದರಿಗಳಿರುವಾಗ ಯುವಜನರಿಗೆ ಅದನ್ನು ಪರಿಚಯಿಸಬೇಕಾದವರು ಯಾರು?
ದೇಶದ ಉನ್ನತಶಿಕ್ಷಣವು ಪ್ರಾದೇಶಿಕ ಅಸಮತೋಲನದಿಂದ ಅಲ್ಲಾಡುತ್ತಿದೆ. ಅತಿಹೆಚ್ಚು ಕಾಲೇಜುಗಳು ಕೇವಲ ಎಂಟು ರಾಜ್ಯಗಳಲ್ಲಿ ಕೇಂದ್ರೀಕೃತವಾಗಿವೆ: (ಅವಿಭಜಿತ) ಆಂಧ್ರಪ್ರದೇಶ ೪೮೧೪, ಉತ್ತರಪ್ರದೇಶ ೪೮೪೯, ಮಹಾರಾಷ್ಟ್ರ ೪೬೦೩, ಕರ್ನಾಟಕ ೩೨೮೧, ರಾಜಸ್ಥಾನ ೨೬೫೨, ತಮಿಳುನಾಡು ೨೩೦೯, ಮಧ್ಯಪ್ರದೇಶ ೨೦೬೧, ಗುಜರಾತ್ ೧೮೦೫. ಈ ರಾಜ್ಯಗಳಂತೆಯೇ ಉಳಿದ ರಾಜ್ಯಗಳ ಮಕ್ಕಳಿಗೆ ಅವರವರ ರಾಜ್ಯಗಳಲ್ಲಿಯೇ ಉತ್ತಮ ಶಿಕ್ಷಣ ಸಿಗುವಂತೆ ಮಾಡುವ ಶಿಕ್ಷಣಸಂಸ್ಥೆಗಳು ಮತ್ತು ಶಿಕ್ಷಕರ ಅಗತ್ಯತೆ ದೇಶದ ಮುಂದಿದೆ. ಅದನ್ನು ಪೂರೈಸುವ ಶಕ್ತಿಯನ್ನು ನಮ್ಮ ಯುವಜನರಲ್ಲಿ ಕಾಣದೆ ಮತ್ತೆಲ್ಲಿ ಹುಡುಕಲು ಸಾಧ್ಯ? ಕೇವಲ ಅಮೆರಿಕಾದಿ ದೇಶಗಳಿಗೆ ಆಕಾಶದಲ್ಲಿ ಹಾರಿ ದೊಡ್ಡವರಾದರಷ್ಟೆ ಸಾಲದು; ಒಂದೂ ಕಾಲೇಜಿಲ್ಲದಂಥ ಲಕ್ಷದ್ವೀಪದಂತಹ ಪ್ರದೇಶಗಳಿಗೂ ಅತಿ ಕಡಮೆ ಕಾಲೇಜುಗಳನ್ನು ಹೊಂದಿರುವ ಅಸ್ಸಾಂ, ಬಿಹಾರ, ಛತ್ತೀಸ್ಗಢ, ಪಶ್ಚಿಮಬಂಗಾಳ, ಉತ್ತರಖಂಡ, ಪಂಜಾಬ್ ಮೊದಲಾದ ರಾಜ್ಯಗಳಲ್ಲಿಯೂ ಶಿಕ್ಷಣಕ್ಷೇತ್ರದಲ್ಲಿ ಸುಧಾರಣೆಯಾಗಬೇಕಾಗಿದೆ. ಶಿಕ್ಷಣ ಮಾಫಿಯಾಕ್ಕೂ ತಡೆಯನ್ನು ಒಡ್ಡಬೇಕಾಗಿದೆ. ಈ ಸವಾಲು ಆಯಾ ರಾಜ್ಯಗಳ ಮತ್ತು ದೇಶದ ಯುವಜನರನ್ನು ಕೈಬೀಸಿ ಕರೆಯುತ್ತಿದೆ. ಅಂಥ ಕರೆಗೆ ಓಗೊಟ್ಟು ಶಿಕ್ಷಕರೇ ಶಿಕ್ಷಣಸಂಸ್ಥೆ ಪ್ರಾರಂಭಿಸಿ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ಹಲವು ಸಂಸ್ಥೆಗಳೂ ದೇಶದಲ್ಲಿವೆ. ಉದಾಹರಣೆಗೆ ಒಡಿಸ್ಸಾದ ಭುವನೇಶ್ವರದ ಶಿಕ್ಷಾ ಔರ್ ಅನುಸಂಧಾನ್ ವಿಶ್ವವಿದ್ಯಾನಿಲಯ, ಕರ್ನಾಟಕದ ಮೈಸೂರಿನ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ ಅಷ್ಟೇ ಅಲ್ಲದೆ, ಈ ಶತಮಾನದ ಪ್ರಾರಂಭದಿಂದಲೂ ಕರ್ನಾಟಕದ ಮಠ-ಮಾನ್ಯಗಳು ನೀಡುತ್ತಾ ಬಂದಿರುವ ಶೈಕ್ಷಣಿಕ ಸೇವೆ ಅವಿಸ್ಮರಣೀಯ. ಬಾಗಲಕೋಟೆಯ ಬಸವೇಶ್ವರ ವಿದ್ಯಾಸಂಸ್ಥೆ, ತುಮಕೂರಿನ ಸಿದ್ಧಗಂಗಾ ಮಠ, ಮೈಸೂರಿನ ಸುತ್ತೂರು ಮಠ, ಮಲ್ಲಾಡಿಹಳ್ಳಿಯ `ತಿರುಕ’ ಕಾವ್ಯನಾಮದ ರಾಘವೇಂದ್ರಸ್ವಾಮಿಜೀಗಳ ಪ್ರಯತ್ನ ಇಂತಹ ಸಾವಿರಾರು ಉದಾಹರಣೆಗಳು ದೇಶದ ಶಿಕ್ಷಣಕ್ಷೇತ್ರದ ಬೆಳವಣಿಗೆಯ ರಾಜಮಾರ್ಗಗಳಾಗಿವೆ. ಅಂತಹ ಸಂಸ್ಥೆಗಳಿಂದ ಅಕ್ಷರ ಕಲಿತ ನಾವು ಸಮಾಜಕ್ಕೆ, ಶಿಕ್ಷಣಕ್ಕೆ ಬಾರದೆ ಓಡಿಹೋಗುವುದು ಸರಿಯೆ?
ಪ್ರಶ್ನೆಗಳ ಸರಮಾಲೆ
ಸರ್ಕಾರಗಳೂ ಕೂಡ ಉನ್ನತಶಿಕ್ಷಣದ ಜವಾಬ್ದಾರಿಯಿಂದ ಪಲಾಯನ ಮಾಡುತ್ತಿರುವುದು ಮುಂದಿನ ನಾಗರಿಕ ದಂಗೆಗಳಿಗೆ ಕಾರಣವಾಗಲಿದೆ. ೧೯೮೬ರಲ್ಲಿ ಶಿಕ್ಷಣಕ್ಷೇತ್ರದಲ್ಲಿ ಖಾಸಗೀಕರಣವನ್ನು ತಡೆಯಬೇಕೆಂಬ ನೀತಿಯಿತ್ತು. ೧೯೯೪ರ ಜಾಗತೀಕರಣದ ತರುವಾಯ ಯು.ಜಿ.ಸಿ.ಯ ಹತ್ತು – ಹನ್ನೊಂದನೇ ಯೋಜನೆಗಳ ಹೊತ್ತಿಗೆ ಸರ್ಕಾರಿ ಕಾಲೇಜು, ವಿಶ್ವವಿದ್ಯಾನಿಲಯಗಳಿಗೂ ವಿದ್ಯಾರ್ಥಿಗಳಿಂದಲೇ ಸ್ವಯಂ ಸಂಪನ್ಮೂಲ ಕ್ರೋಡೀಕರಿಸಬೇಕೆಂಬ ನಿರ್ಧಾರ ಸ್ವೇಚ್ಛಾಚಾರಕ್ಕೆ ದಾರಿಮಾಡಿಕೊಟ್ಟಂತಾಗಿದೆ. ಅಲ್ಲದೆ ಶೇ. ೭೩ರಷ್ಟು ಖಾಸಗೀಯವರ `ಶಿಕ್ಷಣದ ವ್ಯಾಪಾರ’ಕ್ಕೆ ಅನುವುಮಾಡಿಕೊಟ್ಟಿದೆ. ಈ ಖಾಸಗೀ ಶಿಕ್ಷಣಸಂಸ್ಥೆಗಳು ಪ್ರಧಾನವಾಗಿ ಕೋಟಿಗಟ್ಟಲೆ ಆದಾಯ ತಂದುಕೊಡುವಂತಹ ಇಂಜಿನಿಯರಿಂಗ್, ಮೆಡಿಕಲ್, ಮ್ಯಾನೇಜ್ಮೆಂಟ್ ಕಾಲೇಜುಗಳನ್ನು ನಡೆಸುತ್ತಿದ್ದಾರೆಯೇ ವಿನಾ ಮಾನವಿಕವಿಷಯಗಳಾದ ಇತಿಹಾಸ, ಸಮಾಜಶಾಸ್ತ್ರ ಅಥವಾ ವಿಜ್ಞಾನ ಕಾಲೇಜುಗಳನ್ನಲ್ಲ. ಆದರೆ ದೇಶದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುತ್ತಿರುವುದು ಕಲಾ ವಿಷಯದಲ್ಲಿ. ಅವರ ಪ್ರಮಾಣ ಶೇ. ೩೩.೭೯. ಕಡು ಬಡ ಮಕ್ಕಳು, ಗ್ರಾಮೀಣ ಪ್ರದೇಶದವರು ಹೆಚ್ಚಿರುವ ಈ ಮಾನವಿಕ ವಿಷಯಗಳಿಗೆ ಪ್ರಾಶಸ್ತ್ಯ ಕಡಮೆ ಮಾಡಿ ಕಡೆಗಣಿಸಲಾಗಿದೆ. ಕಲಾವಿದ್ಯಾರ್ಥಿಯೆಂದರೆ ಯಾತಕ್ಕೂ ಬೇಡದವರೆಂಬ ಧೋರಣೆ ಶಿಕ್ಷಣಕ್ಷೇತ್ರದಲ್ಲಿಯೇ ಶಿಕ್ಷಕರಲ್ಲಿಯೇ ಮೂಡಿದೆ. ದೇಶದ ಒಟ್ಟು ವಿದ್ಯಾರ್ಥಿಗಳಲ್ಲಿ ೩೭.೯೭% ಮಕ್ಕಳನ್ನು ಕಡೆಗಣಿಸಿದ ದೇಶದಲ್ಲಿ ಸಮಾನತೆಯನ್ನೂ, ಸಹೋದರತ್ವವನ್ನೂ, ಸಹಬಾಳ್ವೆಯನ್ನೂ ಸಾಧಿಸಲು ಸಾಧ್ಯವೆ? ಬಿ.ಎ. ಓದುವ ಮಕ್ಕಳು ದೇಶದ ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಕ ನೇತೃತ್ವವನ್ನು ನೀಡಬಲ್ಲವರು. ಕೆಳಸ್ತರದ ಬುಡಕಟ್ಟು, ಕೊಳಚೆಪ್ರದೇಶ, ಹಳ್ಳಿಗಾಡುಗಳಿಂದ ಬಂದವರು. ಅಲ್ಲಿನ ಭಾರತವನ್ನು ಮೇಲೆತ್ತಬೇಕಾದವರು. ಅವರಿಗೆ ಉತ್ತಮ ಕಾಲೇಜುಗಳು ಬೇಡವೆ? ಉತ್ತಮ ಶಿಕ್ಷಕರು ಬೇಡವೆ?
ಕಲೆಯ ನಂತರದ ಸ್ಥಾನ ಇಂಜಿನಿಯರಿಂಗ್ ಹಾಗೂ ಟೆಕ್ನಾಲಜಿ ಕಾಲೇಜುಗಳಿಗೆ ಸೇರುತ್ತಿರುವ ವಿದ್ಯಾರ್ಥಿಗಳದ್ದು. ಅವರ ಸಂಖ್ಯೆ ಶೇ. ೧೮.೮೯. ಕಾಮರ್ಸ್ ಓದುವವರು ೧೪.೫೧%, ವಿಜ್ಞಾನ ಓದುವವರು ೧೧.೯೪%, ವೈದ್ಯಕೀಯ ವಿದ್ಯಾರ್ಥಿಗಳು ೨.೭೫%, ಭಾರತೀಯ ಭಾಷೆಗಳನ್ನು ಓದುತ್ತಿರುವವರು ೧.೧೮% ಆದರೆ, ಕೃಷಿವಿಜ್ಞಾನ ಓದುತ್ತಿರುವವರು ೦.೩೫% ಮಾತ್ರ. ಅಂದರೆ ನಮ್ಮಲ್ಲಿ ಅಧ್ಯಯನದ ವಿಷಯವಾರು ಪ್ರಮಾಣದ ಚಿತ್ರಣವೂ ಅಸಮತೋಲದಿಂದ ಕೂಡಿದೆ. ಕೃಷಿ ನಮ್ಮ ದೇಶದ ಆತ್ಮ. ಅದನ್ನು ಓದುತ್ತಿರುವ ವಿದ್ಯಾರ್ಥಿಗಳ ಪ್ರಮಾಣ ಬರೀ ೦.೩೫%! ಈ ಚಿತ್ರಣ ಬದಲಾಗಬೇಕಲ್ಲವೆ? ಆ ಬದಲಾವಣೆ ತರುವ ಸಾಮರ್ಥ್ಯ ಯಾರಲ್ಲಿದೆ? ಇದ್ದರೆ ಅದು ಇಂದಿನ ಯುವಜನರಲ್ಲಿ ಮಾತ್ರ. ಆದರೆ ಅವರನ್ನು ಆ ದಿಕ್ಕಿನಲ್ಲಿ ಕೊಂಡೊಯ್ಯಬೇಕಾದವರು ಯಾರು? ಉನ್ನತಶಿಕ್ಷಣವು ಕೈಗಾರಿಕೋದ್ಯಮಿಗಳು, ವ್ಯಾಪಾರೋದ್ಯಮಿಗಳು, ರಾಜಕಾರಣಿಗಳ ಕಬಂಧಬಾಹುಗಳಿಂದ ಹೊರಬಂದು ನಿಜವಾದ ಶಿಕ್ಷಣತಜ್ಞರ, ಶಿಕ್ಷಕರ, ವಿದ್ಯಾರ್ಥಿಗಳ – ಸಂಸ್ಕೃತಿಚಿಂತಕರ ಆತ್ಮದಾಳದಲ್ಲಿ ಮರುಹುಟ್ಟು ಪಡೆಯಬೇಕಾಗಿದೆ.
ಶಿಕ್ಷಕರಿಲ್ಲದೆ ಬಡವಾಯಿತಯ್ಯಾ ಶಿಕ್ಷಣಕ್ಷೇತ್ರ
ನವೆಂಬರ್ ೨೦೦೮ರಲ್ಲಿ ಯು.ಜಿ.ಸಿ. ಪ್ರಕಟಿಸಿರುವ – ` Higher Education in India’ (Issues related to Expansion, Inclusiveness, Quality and Finance) – ಕೃತಿಯಲ್ಲಿ ಅhಚಿಜಚಿ Chada G.K., Sudhanshu Bhushan, Muralidhar ಅವರು ಪ್ರಸ್ತುತ ನಮ್ಮ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿರುವ ಅಧ್ಯಾಪಕರ ಅಂಕಿ-ಅಂಶಗಳ ಚಿತ್ರಣವನ್ನು ನೀಡಿದ್ದಾರೆ. ೨೦೦೭-೦೮ನೆಯ ಶೈಕ್ಷಣಿಕ ಸಾಲಿನ ಪ್ರಕಾರ ಸಮೀಕ್ಷಾವರದಿಯು ಹೇಳುವಂತೆ – ೪೪-೪೫ ಸಂಸ್ಥೆಗಳಲ್ಲಿ – ಪ್ರೊಫೆಸರ್ ಹುದ್ದೆಗಳು ೨೪೬೯ ಮಂಜೂರಾಗಿದ್ದರೆ ಅವುಗಳಲ್ಲಿ ತುಂಬಿರುವುದು ೧೩೬೭; ಖಾಲಿಯಿರುವ ಹುದ್ದೆಗಳು ೧೧೦೨. ಅಂದರೆ ೪೪.೬೩% ಪ್ರಾಧ್ಯಾಪಕ ಹುದ್ದೆಗಳು ಖಾಲಿಯಿವೆ. ರೀಡರ್ ಹುದ್ದೆಗಳು ೪೫೦೬ ಮಂಜೂರಾಗಿದ್ದರೆ, ಅವುಗಳಲ್ಲಿ ತುಂಬಿರುವುದು ೨೧೯೪. ಖಾಲಿಯಿರುವ ರೀಡರ್ ಹುದ್ದೆಗಳು ೨೩೧೨. ಅಂದರೆ ೫೧.೩೧% ರೀಡರ್ ಹುದ್ದೆಗಳು ಖಾಲಿಯಿದ್ದವು. ಮಂಜೂರಾದ ಲೆಕ್ಚರರ್ ಹುದ್ದೆಗಳು ೯೬೦೪. ಅವುಗಳಲ್ಲಿ ತುಂಬಿರುವುದು ೪೫೦೩. ಖಾಲಿಯಿರುವುದು ೫೧೦೧ – ಅಂದರೆ ೫೩.೧೧%. ಒಟ್ಟು ಮಂಜೂರಾದ ಬೋಧಕವರ್ಗದ ಹುದ್ದೆಗಳು ೧೬೫೭೯; ತುಂಬಿರುವುದು ೮೦೬೪. ಖಾಲಿಯಿರುವುದು ೮೫೧೫. ಅಂದರೆ ೫೧.೩೬%ದಷ್ಟು ಬೋಧಕವರ್ಗದ ಹುದ್ದೆಗಳು ವಿಶ್ವವಿದ್ಯಾಲಯಗಳಲ್ಲಿ ಹಾಗೂ ಕಾಲೇಜುಗಳಲ್ಲಿ ಖಾಲಿಯಿವೆ. ಆ ಕಾರ್ಯಭಾರವನ್ನು ಅತಿಥಿ ಉಪನ್ಯಾಸಕರಿಂದ ಪಡೆದುಕೊಳ್ಳಲಾಗುತ್ತಿದೆ. ಸರ್ಕಾರಿ ವಿಶ್ವವಿದ್ಯಾನಿಲಯ, ಕಾಲೇಜುಗಳ ಕಥೆಯೇ ಹೀಗಾದರೆ ಶೇ. ೭೩ರಷ್ಟಿರುವ ಖಾಸಗಿ ಸಂಸ್ಥೆಗಳಲ್ಲಿನ ಅಧ್ಯಾಪಕರ ಸ್ಥಿತಿ-ಗತಿಗಳು ಹೇಗಿವೆಯೋ!
ಒಟ್ಟಾರೆ ಸರ್ಕಾರ ಹಾಗೂ ಖಾಸಗಿರಂಗ ಎರಡೂ ಉನ್ನತಶಿಕ್ಷಣಕ್ಷೇತ್ರವನ್ನು `ಸಮಾಜಕಲ್ಯಾಣ’ `ಕಲ್ಯಾಣರಾಜ್ಯ’ ನಿರ್ಮಾಣದ ಮೂಲಕೇಂದ್ರಗಳೆಂಬುದನ್ನು ಸಂಪೂರ್ಣವಾಗಿ ಮರೆತು ಅದನ್ನು ಲಾಭ-ನಷ್ಟದ ಉದ್ಯಮವನ್ನಾಗಿ ಪರಿಗಣಿಸಿರುವುದರಿಂದಾಗಿ ಉನ್ನತಶಿಕ್ಷಣ ಹಾಗೂ ಉನ್ನತಶಿಕ್ಷಕರಾದಿಯಾಗಿ ಕುಲಪತಿಯವರೆಗೂ `ಹಣ’ದ ಮೂಲಗಳನ್ನೇ ಹುಡುಕುತ್ತಿದ್ದಾರೆ. ಕಟ್ಟಡ ಕಟ್ಟಿಸುವುದರಲ್ಲಿರುವ ಉತ್ಸಾಹ ವ್ಯಕ್ತಿತ್ವ ನಿರ್ಮಿಸುವುದರತ್ತ ಇಲ್ಲ. ಈ ಎಲ್ಲ `ಇಲ್ಲ’ಗಳ ಮಧ್ಯೆ `ಇದೆ’ ಎಂಬ ಆತ್ಮವಿಶ್ವಾಸ ತುಂಬಬಲ್ಲ ಯುವಜನರು ಧ್ಯೇಯವಾದಿ ಶಿಕ್ಷಕರಾಗಿ “ಸಾಕ್ಷರಾ ವಿಪರೀತಶ್ಚೇತ್ ರಾಕ್ಷಸಾಃ” ಎಂಬಂತಾಗಿರುವ ಸಂದರ್ಭದ ವಿರುದ್ಧ ಜ್ಞಾನಝಾಂಗಟೆಯನ್ನು ಮೊಳಗಿಸಬೇಕಾದ ಅಗತ್ಯವಿದೆ.
೨.೮ ಕೋಟಿ ವಿದ್ಯಾರ್ಥಿಗಳ ವ್ಯಕ್ತಿತ್ವನಿರ್ಮಾಣದ ಬಹುದೊಡ್ಡ ಅವಕಾಶ, ಶಕ್ತಿ ಹಾಗೂ ಪ್ರತಿಭೆ ಮತ್ತು ಪ್ರೀತಿ ಪಾಂಡಿತ್ಯಗಳನ್ನುಳ್ಳ ಶಿಕ್ಷಕರಾಗುವವರ ಮುಂದಿದೆ. ಶಿಕ್ಷಕರ ಮಾದರಿ ಪುಸ್ತಕದಲ್ಲಿ ದೊರೆಯುವುದಿಲ್ಲ. ಅವರವರ ಅಚ್ಚುಮೆಚ್ಚಿನ ಶಿಕ್ಷಕರೇ ಅವರ ಮಾದರಿಯಾಗಿರುತ್ತಾರೆ. ಸಮಾಜದಲ್ಲಿ ಉತ್ತಮ ಶಿಕ್ಷಕರ ಕೊರತೆ ಎದುರಾದರೆ ಅದಕ್ಕೆ ಹಿಂದಿನ ಶಿಕ್ಷಕರೇ ಜವಾಬ್ದಾರರಾಗಬೇಕಾಗಿದೆ. ಅಂತೆಯೇ ಇಂದಿನ ಯುವಜನಾಂಗ `ಕ್ಷಣಿಕ ಆಕರ್ಷಣೆ’ಯ ಹಣ-ಅಧಿಕಾರ-ಅಂತಸ್ತುಗಳ ಬೆನ್ನುಹತ್ತಿ ಬಂಗಾರದ ಜಿಂಕೆಯ ಬೆನ್ನುಹತ್ತಿದ ಸೀತೆಯಂತಾಗದೆ. ಧ್ಯೇಯವಾದದ ಜ್ಞಾನತೇಜದ ಬೀಜ ಬಿತ್ತಿ ಬೆಳೆವ ನಿಜದ ಕೃಷಿಕರಾಗಬೇಕಾದ ಅಗತ್ಯ ಇಂದಿನ ಕಾಲದ ಕರೆಯಾಗಿದೆ. `ರಾಜ ಅವನ ರಾಜ್ಯದಲ್ಲಿ ಮಾತ್ರ ಪೂಜಿತನಾದರೆ, ವಿದ್ವಾಂಸ ಸರ್ವತ್ರವೂ ಪೂಜಿತನಾಗುತ್ತಾನೆ.’ ಅಂತಹ ಪೂಜಿತ ಯುವಜನರಿಂದ ಭಾರತವೂ ಪೂಜಿತವಾಗುತ್ತದೆ, ಜಗದ್ಗುರುವಾಗುತ್ತದೆ. `ಒಂದು ರಾಷ್ಟ್ರ ನಾಲ್ಕು ಗೋಡೆಯ ನಡುವಿನ ತರಗತಿಯಲ್ಲಿ ನಿರ್ಮಾಣವಾಗುತ್ತದೆ’ ಎಂಬುದು ಎಸ್. ರಾಧಾಕೃಷ್ಣನ್ ಅವರ ಮಾತು ಹಾಗೂ `ಒಂದು ರಾಷ್ಟ್ರದ ಸಮ್ಮಾನ ಶಿಕ್ಷಕರ ಕೈಯಲ್ಲಿರುತ್ತದೆ’ ಎಂಬುದು ಚಾಣಕ್ಯನ ಮಾತು. ನವಯುವಜನಾಂಗ ಶಿಕ್ಷಣಕ್ಷೇತ್ರದೆಡೆಗೆ ಬಂದು ಅತ್ಯುತ್ತಮ ಶಿಕ್ಷಕರಾಗುವ ಮೂಲಕ ಭಾರತ ದೇಶವನ್ನೂ ಅತ್ಯುತ್ತಮವಾಗಿಸಲಿ. ರಾಧಾಕೃಷ್ಣನ್ ಹಾಗೂ ಚಾಣಕ್ಯರ ಮಾತುಗಳು ಎಲ್ಲ ಶಿಕ್ಷಕರ ಎದೆಯ ದನಿಯಾಗಲಿ.
Comments are closed.