ಇಡೀ ದೇಶದ ರಾಜಕೀಯವನ್ನು ಗಮನಿಸಿದರೆ, ಮುಖ್ಯವಾಗಿ ಎಂ.ಎಲ್.ಎ., ಎಂ.ಪಿ. ಮೇಲ್ಪಟ್ಟ ಅಧಿಕಾರದ ಪಟ್ಟವನ್ನು ಹೆಚ್ಚೆಂದರೆ ದೇಶದ ೫೦೦ ಮನೆತನಗಳು ಹಿಡಿತದಲ್ಲಿಟ್ಟುಕೊಂಡಿವೆ.
`ಒಳ್ಳೆಯ ಉದ್ದೇಶ, ಸತ್ಯಸಂಧತೆ ಮತ್ತು ಅನಂತ ಪ್ರೇಮ ಇವು ಜಗತ್ತನ್ನೇ ಗೆಲ್ಲಬಲ್ಲವು. ಈ ಸದ್ಗುಣಗಳನ್ನು ಹೊಂದಿದ ಒಂದೇ ಒಂದು ವ್ಯಕ್ತಿ ಕೋಟ್ಯಂತರ ದುಷ್ಟರ ದುರುಳರ ಕಪಟ ಜಾಲವನ್ನು ನಾಶಮಾಡಬಹುದು.’
– ಸ್ವಾಮಿ ವಿವೇಕಾನಂದ
ದೇಶದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಯುವಕರ ಪಾಲ್ಗೊಳ್ಳುವಿಕೆ ಅಧಿಕವಿದೆ. ಆದರೆ ರಾಜಕೀಯದಲ್ಲಿ ಆ ಮಟ್ಟದಲ್ಲಿ ಕಂಡುಬರುವುದಿಲ್ಲ. ಕಾರಣ ಇದಕ್ಕೆ ಬೇರೆ ಬೇರೆ ವಿಷಯಗಳು ತಳಕುಹಾಕಿಕೊಂಡಿವೆ. ಒಂದು, ಇಂದು ರಾಜಕೀಯವೆನ್ನುವುದು career option ಆಗಿಲ್ಲ – ಎಂಬುದು. Science and Technology ಗಳಂತಹ ಕ್ಷೇತ್ರಗಳು ಯುವಕರಿಗೆ ಆಕರ್ಷಕವಾಗಿ ಕಾಣುತ್ತವೆ. ಏಕೆಂದರೆ, ಅದರಲ್ಲಿ ಒಳ್ಳೆಯ ಸಂಬಳ ಇರುತ್ತದೆ, ಒಳ್ಳೆಯ ಜೀವನ ಇರುತ್ತದೆ. ಮುಖ್ಯವಾಗಿ ಇಂತಹ ಕ್ಷೇತ್ರಗಳಲ್ಲಿ ಆ ಸಾಧನೆಗೆ ಡಿeತಿಚಿಡಿಜ ಇರುತ್ತದೆ. ಅದು ಸವಲತ್ತುಗಳ ರೂಪದಲ್ಲಿರಬಹುದು, ಸಂಬಳ, ಗುರುತಿಸುವಿಕೆಯ ರೂಪದಲ್ಲಿರಬಹುದು.
ಉದಾಹರಣೆಗೆ ಒಬ್ಬ ಐ.ಎ.ಎಸ್. ಮಾಡಬೇಕು ಎಂದು ಇಟ್ಟುಕೊಳ್ಳಿ. ಅವನು ಐ.ಎ.ಎಸ್. ಆಗಬೇಕೆಂದೇ ಪ್ರಯತ್ನಪಡುತ್ತಾನೆ. ಹಾಗಾದಾಗ ಐ.ಎ.ಎಸ್. ಆಗದಿದ್ದರೂ ಕೊನೆಯ ಪಕ್ಷ ಅವನು ಐ.ಪಿ.ಎಸ್., ಕೆ.ಪಿ.ಎಸ್. ಆದರೂ ಆಗಿಯೇ ಆಗುತ್ತಾನೆ. ಅಂದರೆ ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇದ್ದು ಪ್ರಯತ್ನಹಾಕಿದರೆ ನಿಮಗೆ ಫಲ ನಿಶ್ಚಿತ, sure shot.. ಮತ್ತು ಜೀವನ ಕೂಡಾ ಚೆನ್ನಾಗಿರುತ್ತದೆ. ಆದರೆ ರಾಜಕೀಯದಲ್ಲಿ ಹಾಗಲ್ಲ.
ಅಡ್ಡಗೋಡೆ
ಇನ್ನು ಹೊಸಬರು ರಾಜಕೀಯಕ್ಕೆ ಬರುವುದಿಲ್ಲ ಎಂಬ ವಾದವಿದೆ. ಇದು ಸುಳ್ಳಲ್ಲ. ಏಕೆಂದರೆ, ರಾಜಕೀಯ ಎನ್ನುವುದು ಒಂದು ರೀತಿಯ ಮಾಫಿಯಾ. ಈ ಮಾಫಿಯಾದ ಒಳಗಡೆ ಅವರು ಯಾರನ್ನೂ ಬಿಟ್ಟುಕೊಳ್ಳುವುದಿಲ್ಲ. ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಪುರಸಭೆ, ಕಾರ್ಪೋರೇಷನ್ಗಳಿಂದ ಹಿಡಿದು ಎಲ್ಲ ಚುನಾವಣೆಗೂ ಟಿಕೆಟ್ ಆಕಾಂಕ್ಷಿಗೆ ಅರ್ಹತೆ ಎನ್ನುವುದು ಮಾನದಂಡವಾಗಿಯೇ ಇಲ್ಲ. ನೀವೊಬ್ಬ ವಿದ್ಯಾವಂತ, ಸಭ್ಯಸ್ಥ, ಸಮಾಜದ ಜೊತೆ ಒಂದು commitment ಇದೆ ಎಂದರೂ ಇವಾವುದೂ ಕೂಡ ರಾಜಕಾರಣದಲ್ಲಿ ಟಿಕೆಟ್ ತೆಗೆದುಕೊಳ್ಳಲಿಕ್ಕಿರುವ ಅರ್ಹತೆಗಳಲ್ಲ. ರಾಜಕಾರಣದ ಮಾನದಂಡವೇನೆಂದರೆ, ನಿಮಗೆ ಯಾವ ರಾಜಕಾರಣಿ ಗೊತ್ತಿದೆ, ಯಾವ ನೇತಾರನ ಜೊತೆ ನಿಮಗೆ ಸಂಬಂಧ ಇದೆ – ಎಂಬುದು. ನ್ಯಾಯಾಂಗದಲ್ಲಿ ಒಂದು ಮಾತಿದೆ: “You are a good advocate, if you know the law; you are a great advocate, if you know the judge” ಅಂತ. ಕಾನೂನು ಗೊತ್ತಿರುವವರೆಲ್ಲ ವಕೀಲರಾಗುತ್ತಾರೆ. ಆದರೆ ಒಬ್ಬ ಪರಿಣಾಮಕಾರಿ ವಕೀಲ ಯಾರೆಂದರೆ ಅವನು ನ್ಯಾಯಾಧೀಶರಿಗೆ ಗೊತ್ತಿರುವವನು! ಅದೇ ರೀತಿ ನಿಮಗೆ ಯಾವ ಮಂತ್ರಿ ಗೊತ್ತು, ಯಾವ ಶಾಸಕ, ಸಂಸದ ನಿಮಗೆ ಗೊತ್ತು ಎನ್ನುವುದರ ಮೇಲೆ ನಿಮ್ಮ ರಾಜಕೀಯ ಭವಿಷ್ಯ ನಿರ್ಧಾರವಾಗುತ್ತದೆ. ಅವನ ಹಿಂದೆ ಹೋದರೆ ನಿಮಗೆ ಎಂ.ಎಲ್.ಎ., ಕಾರ್ಪೋರೇಷನ್ ಅಥವಾ ತಾಲ್ಲೂಕು, ಜಿಲ್ಲಾ ಪಂಚಾಯತ್ಗಳ ಟಿಕೆಟ್ ಸಿಗುತ್ತದೆ. ಅಂದರೆ ಇಂದು ‘ಟಿಕೇಟ್ ತೆಗೆದುಕೊಳ್ಳುವುದು’ ಎನ್ನುವಂತಹದ್ದು ಬಹಳ ಹರಸಾಹಸದ ಕೆಲಸ.
ಒಬ್ಬ ವಿದ್ಯಾವಂತ, ಯಾವುದೋ ಒಂದು ಕ್ಷೇತ್ರದಲ್ಲಿ ಹೆಸರು ಗಳಿಸಿರುವವ ಅಥವಾ ಇಂಜಿನಿಯರಿಂಗ್, ಮೆಡಿಕಲ್ ಮುಂತಾದ ಉನ್ನತ ವ್ಯಾಸಂಗ ಮಾಡಿರುವ ಯುವಕನೊಬ್ಬ ಸಮಾಜಕ್ಕೆ ಸೇವೆ ಮಾಡಬೇಕು ಎಂದು ಇಚ್ಛಿಸಿದ್ದಾನೆ ಎಂದಿಟ್ಟುಕೊಳ್ಳಿ. ಅವನು ಟಿಕೇಟ್ಗೋಸ್ಕರ ಯಾರದೋ ಜೊತೆ ಹಲ್ಲುಕಿರಿಯುತ್ತಾ ನಿಲ್ಲಬೇಕು. ಅದಕ್ಕೆ ಆತ ತಯಾರಿಲ್ಲ. ಹೆಚ್ಚೆಂದರೆ ಕೇಳಬಹುದು, ಆದರೆ ಆತ ಚೇಲಾಗಿರಿ ಮಾಡಲಾರ. ಬುದ್ಧಿವಂತನಿಗೆ ಸ್ವಾಭಿಮಾನ ಇರುತ್ತದೆ; ಚೇಲಾಗಿರಿ ಮಾಡಲು ಅವನಿಗೆ ಸ್ವಾಭಿಮಾನ ಅಡ್ಡಬರುತ್ತದೆ. ಹೀಗಾಗಿ, ‘ಏನು ಪ್ರಯತ್ನ ಮಾಡಿದರೂ ಯಾರೂ ನನಗೆ ಟಿಕೇಟ್ ಕೊಡುವುದಿಲ್ಲ; ನನಗದು ಸಿಗಲಾರದು’ ಎಂಬ ಮೈಂಡ್ಸೆಟ್ ಸರ್ವೇಸಾಮಾನ್ಯವಾಗಿ ಎಲ್ಲೆಡೆ ಬಂದುಬಿಟ್ಟಿದೆ. ಹೀಗಾಗಿ ಸೇವೆ ಮಾಡಬೇಕು ಎಂಬ ಮನೋಭಾವವಿರುವ ಯುವಕರಿಗೂ ಕೂಡಾ ಇಂದಿನ ಈ ರಾಜಕೀಯ ವ್ಯವಸ್ಥೆ ಒಂದು ಭೂತವಾಗಿ ಕಾಡುತ್ತಿದೆ. ಇದು ಯುವಕರಿಗೆ ರಾಜಕೀಯಕ್ಕೆ ಬರಲು ಅಡ್ಡವಾಗಿ ನಿಂತಿದೆ.
ಇಡೀ ದೇಶದ ರಾಜಕೀಯವನ್ನು ಗಮನಿಸಿದರೆ, ಮುಖ್ಯವಾಗಿ ಎಂ.ಎಲ್.ಎ., ಎಂ.ಪಿ. ಮೇಲ್ಪಟ್ಟ ಅಧಿಕಾರದ ಪಟ್ಟವನ್ನು ಹೆಚ್ಚೆಂದರೆ ದೇಶದ ೫೦೦ ಮನೆತನಗಳು ಹಿಡಿತದಲ್ಲಿಟ್ಟುಕೊಂಡಿವೆ. ಅವರ ಮಕ್ಕಳು, ಮೊಮ್ಮಕ್ಕಳು, ದೊಡ್ಡಪ್ಪ, ಚಿಕ್ಕಪ್ಪ, ಅವರ ಮಕ್ಕಳು – ಹೀಗೆ ಯಾರುಬೇಕಾದರೂ ಕನೆಕ್ಟ್ಮಾಡಿಕೊಂಡು ಹೋಗಬಹುದು.
ಯುವಕರು ರಾಜಕೀಯಕ್ಕೆ ಬರಲು ತೊಡಕಾಗಿರುವುದು ಅವಕಾಶಗಳ ಕೊರತೆ ಮಾತ್ರ. ಅವಕಾಶ ಕೊಟ್ಟರೆ ಜನ ಯುವಕರನ್ನು ಸ್ವೀಕರಿಸುತ್ತಾರೆ. ಇದಕ್ಕೆ ನಾನೇ ಉದಾಹರಣೆ. ಕೊಡಗು ಮತ್ತು ಮೈಸೂರು ಕ್ಷೇತ್ರವನ್ನು ಮಾಜಿ ಮುಖ್ಯಮಂತ್ರಿ ಸದಾನಂದಗೌಡರು, ಮಾಜಿ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಅಂತಹವರು ತಿರಸ್ಕರಿಸಿದರು. ಮುಖ್ಯಮಂತ್ರಿಗಳ ತವರುಕ್ಷೇತ್ರ ಮಾತ್ರವಲ್ಲದೆ ಮೂರು ಜನ ಕ್ಯಾಬಿನೆಟ್ ಸಚಿವರೂ ಕೂಡಾ ಮೈಸೂರಿನವರೇ ಆಗಿದ್ದರು. ಹೀಗಾಗಿ ಇಲ್ಲಿ ಗೆಲ್ಲುತ್ತೇನೆ ಎಂಬ ಯಾವ ದೈರ್ಯವೂ ಇರಲಿಲ್ಲ. ಅಂತಹ ಸನ್ನಿವೇಶದಲ್ಲಿ ನನಗೆ ಇಲ್ಲೊಂದು ಅವಕಾಶ ಸೃಷ್ಟಿಯಾಯಿತು. ಜನ ನನ್ನನ್ನು ಸ್ವೀಕರಿಸಿದರು. ಹೀಗಾಗಿ ಕೊರತೆ ಇರುವುದು ಅವಕಾಶಗಳದ್ದು ಮಾತ್ರ.
ಸಿದ್ಧ ತಾಟು
ಮೊನ್ನೆ ಬೆಂಗಳೂರಿನಲ್ಲಿ ಕಾರ್ಪೋರೇಷನ್ ಚುನಾವಣೆ ನಡೆಯಿತು. ಎಷ್ಟು ಜನ ಯುವಕರಿಗೆ ಟಿಕೇಟ್ ಕೊಡಲಾಗಿದೆ? ರಾಷ್ಟ್ರೀಯ ಪಕ್ಷಗಳೂ ಕೂಡಾ ಟಿಕೇಟ್ ಹಂಚಿಕೆಯ ಸಂದರ್ಭದಲ್ಲಿ ಅವರು ಬೇರೆ ಬೇರೆ ಕ್ಷೇತ್ರಗಳಿಂದ ಬರಬೇಕು, ಹೊಸ ರಕ್ತ ಬರಬೇಕು ಎಂದು ಯೋಚನೆಯನ್ನೇ ಮಾಡುವುದಿಲ್ಲ. ಅಂದರೆ ಯಾವ ಪಕ್ಷಗಳೂ ಕೂಡ ಹೊಸಬರಿಗೆ, ಬೇರೆ ಕ್ಷೇತ್ರಗಳ ಅನುಭವಿಗಳಿಗೆ ಅವಕಾಶ ಕೊಡಲು ಸಿದ್ಧವಿಲ್ಲ.
ಒಮ್ಮೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಇಂಡಿಯನ್ ಎಕ್ಸ್ಪ್ರೆಸ್ ಆಫೀಸಿಗೆ ಹೋಗಿದ್ದೆ. ಕಾರ್ಯಕ್ರಮದಲ್ಲಿ ನಾನು, ಅನುಪ್ರಿಯಾ ಪಟೇಲ್, ಕೆ. ಕವಿತಾ ಇದ್ದೆವು. ಕಾರ್ಯಕ್ರಮದ ಆಯೋಜಕರು ನೀವೆಲ್ಲ ಯಂಗ್ ಎಂ.ಪಿ.ಗಳೂ ಹಾಗೆ… ಹೀಗೆ… ಎಂದರು. ನಾನು ಕೇಳಿದೆ: “How do you call us young MPs?” – ಎಂದು. “ಯಾಕೆ, ಕರೆಯಬಾರದಾ?” ಎಂದರು. ನೋಡಿ, ನೀವು ಅವರನ್ನು ಯಂಗ್ಸ್ಟರ್ ಎನ್ನುತ್ತೀರಲ್ಲ? ಅವರಿಗೆ ಹೇಗೆಂದರೆ ಕೆ. ಕವಿತಾ ಅವರ ತಂದೆ ರಾಜ್ಯವೊಂದರ (ತೆಲಂಗಾಣ) ಮುಖ್ಯಮಂತ್ರಿಗಳು, ಇನ್ನೊಬ್ಬರಿರುವ ಅನುಪ್ರಿಯಾ ಪಟೇಲ್ ಪಕ್ಷವೊಂದರ (ಅಪ್ನಾದಳ) ಅಧ್ಯಕ್ಷರ ಮಗಳು! ಇವರನ್ನೇಕೆ ನೀವು ಯುವಸಂಸದರು ಎನ್ನುತ್ತೀರಿ? ಇವರಿಗೆ ಟಿಕೇಟ್ ತೆಗೆದುಕೊಳ್ಳುವುದಕ್ಕೆ ಹೋರಾಟ ಮಾಡಬೇಕಿಲ್ಲ. ಚುನಾವಣಾ ಸ್ಟ್ರೆಟಜಿ ತಯಾರಿಸಬೇಕಂತಲೂ ಇಲ್ಲ, ಹಣಬಲವಂತೂ ಇದ್ದೇ ಇದೆ. ನಾಳೆ ನಾನು ಹೇಗೆ ಕ್ಯಾಂಪೇನ್ (ಚುನಾವಣಾ ಪ್ರಚಾರ) ಮಾಡಬೇಕು, ನಮ್ಮ ಕಾರ್ಯಕರ್ತರು ಬರುತ್ತಾರಾ; ಇಲ್ಲವಾ? – ಇವಾವುದನ್ನೂ ಅವರು ಯೋಚನೆ ಮಾಡಬೇಕಾಗಿಲ್ಲ. ಅಂದರೆ ಅವರಿಗೆ ಎಲ್ಲವೂ, ಪ್ರತಿಯೊಂದೂ ಕೂಡಾ ತಟ್ಟೆಯಲ್ಲಿ ಹಾಕಿ ಸಿದ್ಧವಾಗಿಯೇ ಸಿಗುತ್ತದೆ. ಇವರನ್ನು ಹೇಗೆ ನೀವು ಯಂಗ್ ಎಂ.ಪಿ.ಗಳು ಎಂದು ಕರೆಯುತ್ತೀರಿ? – ಎಂದು ಕೇಳಿದ್ದೆ.
ಮುಖ್ಯಮಂತ್ರಿ/ಮಂತ್ರಿಗಳ ಮಕ್ಕಳಾಗಿರುವುದರಿಂದ ಅವರಿಗೆ ರಾಜಕೀಯಕ್ಕೆ ಬರಬೇಕಾದರೆ ಯಾವ ಅರ್ಹತೆಯ ಅಗತ್ಯವೂ ಇರುವುದಿಲ್ಲ. ಕಾರ್ಯಕರ್ತರ ಮನಸ್ಸನ್ನು ಗೆಲ್ಲಬೇಕು, ಚುನಾವಣಾ ಪ್ರಚಾರಕ್ಕೆ ಹಣ ಹೊಂದಿಸಬೇಕು, ರಣತಂತ್ರ ರೂಪಿಸಬೇಕು – ಈ ರೀತಿಯ ಸಂಗತಿಗಳ ಅಗತ್ಯವಿಲ್ಲ. ಎಲ್ಲವನ್ನೂ ಕಾರ್ಯಕರ್ತರೇ ಮುಂದೆನಿಂತು ಮಾಡುತ್ತಾರೆ. ಈ ರೀತಿಯವರು ಇಂದು ಯುವಕರ ಹೆಸರಿನಲ್ಲಿ ರಾಜಕೀಯಕ್ಕೆ ಬರುತ್ತಿದ್ದಾರೆ. ಇವರನ್ನು ಯುವಸಂಸದರು ಎಂಬಂತೆ ಪರಿಗಣಿಸುವುದು ಅಸಮಂಜಸವಾದುದು. ಇದರಿಂದಾಗಿ ನಿಜವಾದ ಸಾಮರ್ಥ್ಯವಂತ, ವಿದ್ಯಾವಂತ ಯುವಕರಿಗೆ ಅವಕಾಶಗಳು ಕಡಮೆಯಾಗುತ್ತಿವೆ. ಇಂದಿನ ಲೋಕಸಭೆಯಲ್ಲಿ ಗೆದ್ದ ಯುವಕರಲ್ಲಿ ಬಹುತೇಕ ಎಲ್ಲರೂ ಒಂದಲ್ಲ ಒಂದು ರೀತಿಯ ರಾಜಕೀಯ ಕುಟುಂಬದಿಂದ ಬಂದವರೇ ಆಗಿದ್ದಾರೆ.
ಕಳೆದ ಚುನಾವಣೆಯಲ್ಲಿ ನಡೆದ ಮಹತ್ತ್ವದ ಸಂಗತಿಯೆಂದರೆ, ಬಿಜೆಪಿಯಲ್ಲಿ ಮಾತ್ರ ಬೇರೆಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರಿಗೆ ಟಿಕೇಟ್ ಕೊಡಲಾಗಿತ್ತು. ಉದಾಹರಣೆಗೆ ಕರ್ನಾಟಕದಲ್ಲಿ ನನಗೆ ಕೊಟ್ಟರು, ಈ ಹಿಂದೆ ಚಿತ್ರದುರ್ಗದಲ್ಲಿ ಜನಾರ್ದನಸ್ವಾಮಿಗೆ ಕೊಟ್ಟಿದ್ದರು. ಮುಂಬಯಿ ಕಮಿಷನರ್ ಆಗಿದ್ದ ಸತ್ಯಪಾಲ್ಸಿಂಗ್, ಕ್ಯಾಬಿನೆಟ್ ಸೆಕ್ರೆಟರಿಯಾಗಿದ್ದ ಆರ್.ವಿ. ಸಿಂಗ್, ಸೇನೆಯಲ್ಲಿ ಜನರಲ್ ಆಗಿದ್ದ ವಿ.ಕೆ. ಸಿಂಗ್, ಶೂಟರ್ ರಾಜವರ್ಧನಸಿಂಗ್ ರಾಥೋಡ್, ಸಿಂಗರ್ ಆಗಿದ್ದ ಬಾಬುಲ್ ಸುಪ್ರಿಯೊ, ಮಹಾರಾಷ್ಟ್ರದಲ್ಲಿರುವ ಕ್ಯಾನ್ಸರ್ತಜ್ಞ ಡಾ. ಸುಭಾಷ್ ಭಾಮರೆ – ಹೀಗೆ ವಿವಿಧ ಕ್ಷೇತ್ರದಲ್ಲಿರುವವರಿಗೆ ಟಿಕೇಟ್ ನೀಡಿದರು. ಅದೇ ಸಂದರ್ಭದಲ್ಲಿ ಪೂನಮ್ ಮಹಾಜನ್, ಪ್ರೀತಮ್ ಮುಂಡೇ – ಹೀಗೆ ಅಪ್ಪ-ಮಕ್ಕಳೂ ಇದ್ದಾರೆ. ಸಂಸತ್ನಲ್ಲಿರುವ ಯುವಸಂಸದರಲ್ಲಿ ಇಬ್ಬರು ಮಾತ್ರ ಯಾವುದೇ ಕೌಟುಂಬಿಕ ಹಿನ್ನೆಲೆಯಿಂದ ಬಂದವರಲ್ಲ – ನಾನು ಮತ್ತು ಟಿಎಂಸಿಯ ಅನುಪಮ್ ಹಾಜ್ರಾ. ಅಂದರೆ ನಾವಿಬ್ಬರು ಮಾತ್ರ ಯಾವುದೇ ಕೌಟುಂಬಿಕ ಹಿನ್ನೆಲೆಯಿಲ್ಲದೆ ಟಿಕೇಟ್ ತೆಗೆದುಕೊಂಡು ಗೆದ್ದಿರುವಂತಹವರು. ಪ್ರಸ್ತುತ ಭಾರತದ ರಾಜಕೀಯದಲ್ಲಿರುವ ಯುವಸಂಸದರು ಎಲ್ಲರೂ ಒಂದಲ್ಲ ಒಂದು ಕೌಟುಂಬಿಕ ಹಿನ್ನೆಲೆಯಿಂದ ಬಂದಿರುವಂತಹವರೇ ಆಗಿದ್ದಾರೆ. ಹೀಗಾಗಿ ನನಗೇನೂ ರಾಜಕೀಯ ಬದಲಾವಣೆಗೆ ತೆರೆದುಕೊಳ್ಳುತ್ತದೆ ಎಂದು ಕಾಣಿಸುತ್ತಿಲ್ಲ.
ಆದರೆ ಯಾವುದೇ ಹಿನ್ನೆಲೆಯಿಲ್ಲದೆ ರಾಜಕೀಯಕ್ಕೆ ಬಂದು ಮಂತ್ರಿ, ಮುಖ್ಯಮಂತ್ರಿ, ಪ್ರಧಾನಿಯಾದ ಉದಾಹರಣೆ ಬಿಜೆಪಿಯಲ್ಲಿದೆ. ಫಡ್ನವೀಸ್, ಮನೋಹರ್ಲಾಲ್ ಕಟಿಯಾರ್, ಕಲ್ಯಾಣ್ಸಿಂಗ್, ಶಾಂತಕುಮಾರ್ ಇರಬಹುದು. ಇವರೆಲ್ಲ ಮುಖ್ಯಮಂತ್ರಿಯಾದಾಗ ಅವರಿಗೆಲ್ಲ ಯಾವ ರಾಜಕೀಯ ಹಿನ್ನೆಲೆಯೂ ಇರಲಿಲ್ಲ. ಆಡ್ವಾಣಿ, ಮೋದಿಗೂ ಯಾವ ಹಿನ್ನೆಲೆಯಿದೆ? ಅವರ ಸಾಮರ್ಥ್ಯ ಗುರುತಿಸಿ ಟಿಕೇಟ್ ನೀಡಿದರು, ಹಾಗಾಗಿ ಅವರು ಇಂದು ಈ ಸ್ಥಾನದಲ್ಲಿದ್ದಾರೆ.
ತಮಿಳುನಾಡಿನ ಅಣ್ಣಾ-ಡಿ.ಎಂ.ಕೆ.ಯ ಜಯಲಲಿತಾ ‘ಟಿಕೇಟ್ ಇಲ್ಲ’ ಎಂದರೆ ಮುಗಿಯಿತು. ಆದರೆ ಭಾರತೀಯ ಜನತಾ ಪಾರ್ಟಿಯಲ್ಲಿ ಅಮಿತ್ ಷಾ ಒಬ್ಬರೇ ನಿರ್ಣಯ ತೆಗೆದುಕೊಳ್ಳುವುದಿಲ್ಲ. ಅಮಿತ್ ಷಾ ಟಿಕೇಟ್ ನಿರಾಕರಿಸಿದರೂ ಇತರರು ಒತ್ತಾಯಿಸಿದರೆ ಟಿಕೇಟ್ ಕೊಡಬೇಕಾಗಬಹುದು. ಅಂದರೆ ಒಂದು ಸಾರ್ವತ್ರಿಕ ಸರ್ವಸಮ್ಮತ ನಿರ್ಧಾರಗಳನ್ನು ತೆಗೆದುಕೊಳ್ಳುವ ಪದ್ಧತಿ ಬಿಜೆಪಿಯಲ್ಲಿದೆ. ಕಾಂಗ್ರೆಸ್ನಲ್ಲಿ ಸೋನಿಯಾಗಾಂಧಿಯ ಹೆಸರು ಹೇಳದೆ ಯಾರಿಗೂ ಟಿಕೇಟ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅಂದರೆ ವ್ಯಕ್ತಿ-ಆಧಾರಿತ ಪಕ್ಷಗಳಲ್ಲಿ ಇಂದು ಹೊಸಬರು ಬರುವುದು ಸುಲಭವಲ್ಲ. ಆದರೆ ಬಿಜೆಪಿಯಲ್ಲಿ ಹಾಗಿಲ್ಲ. ಬಿಜೆಪಿಯಲ್ಲಿ ಸಂಘಪರಿವಾರದ ಅನ್ಯಾನ್ಯ ಕ್ಷೇತ್ರಗಳಲ್ಲಿ ಕೆಲಸಮಾಡಿದ ಅನುಭವ ಇರುವವರು ರಾಜಕೀಯಕ್ಕೆ ಬರಲು ಸಹಜ ಅವಕಾಶ ಇರುತ್ತದೆ. ಬಿಜೆಪಿಯ ಈ ಚಿಂತನೆಯು ಬದಲಾವಣೆಯ ಆಶಾಕಿರಣವಾಗಿದೆ. ಬಿಜೆಪಿ ಇಂತಹ ಪ್ರಯತ್ನವನ್ನು ಮುಂದಿನ ಚುನಾವಣೆಯಲ್ಲೂ ಮುಂದುವರಿಸಬೇಕು.
ಮುಖ್ಯಮಂತ್ರಿ/ಮಂತ್ರಿಗಳ ಮಕ್ಕಳಿಗೆ ರಾಜಕೀಯಕ್ಕೆ ಬರಬೇಕಾದರೆ ಯಾವ ಅರ್ಹತೆಯ ಅಗತ್ಯವೂ ಇರುವುದಿಲ್ಲ. ಕಾರ್ಯಕರ್ತರ ಮನಸ್ಸನ್ನು ಗೆಲ್ಲಬೇಕು, ಚುನಾವಣಾ ಪ್ರಚಾರಕ್ಕೆ ಹಣ ಹೊಂದಿಸಬೇಕು, ರಣತಂತ್ರ ರೂಪಿಸಬೇಕು – ಈ ರೀತಿಯ ಸಂಗತಿಗಳ ಅಗತ್ಯವಿಲ್ಲ. ಎಲ್ಲವನ್ನೂ ಕಾರ್ಯಕರ್ತರೇ ಮುಂದೆನಿಂತು ಮಾಡುತ್ತಾರೆ.
ವ್ಯಕ್ತಿಗಳಿಗಷ್ಟೇ ಅಲ್ಲ, ಪಕ್ಷಗಳಿಗೂ ವಯಸ್ಸಾಗುತ್ತದೆ
ಯುವಕರು ರಾಜಕೀಯಕ್ಕೆ ಬರಲು ಹೊಸ ಪಕ್ಷಗಳಲ್ಲಿ ತೆರೆದ ಹಾದಿಯಿರುತ್ತದೆ. ಆದರೆ ೫೦-೬೦ ವರ್ಷಗಳಷ್ಟು ಹಳೆಯ ಪಕ್ಷಗಳಲ್ಲಿ ಇದು ಕಷ್ಟಸಾಧ್ಯ. ಏಕೆಂದರೆ ಅಲ್ಲಿ ಈಗಾಗಲೇ ಒಂದಷ್ಟು ಮಂದಿ ರಾಜಕಾರಣಿಗಳು ತಯಾರಾಗಿರುತ್ತಾರೆ. ಅವರು ಪಕ್ಷವನ್ನು ಕಟ್ಟಿಬೆಳೆಸಿದವರೂ ಆಗಿರುತ್ತಾರೆ. ಹೀಗಾಗಿ ಒಂದು ಹಳೆಯ ಪಕ್ಷ ಈ ಬಂಧದಿಂದ ಬಿಡಿಸಿಕೊಂಡು ಒಬ್ಬ ಯುವಕನಿಗೆ ಅವಕಾಶ ನೀಡುವುದು ಬಹಳ ಕಷ್ಟ. ಆದರೆ ಹೊಸದಾಗಿ ಪ್ರಾರಂಭಗೊಂಡ `ಆಮ್ ಆದ್ಮಿ’, `ಪ್ರಜಾಸತ್ತಾ’ದಂತಹ ಪಕ್ಷಗಳಿಗೆ ಇನ್ನು ಕೆಲವು ವರ್ಷ ಈ ಸಮಸ್ಯೆ ಇರುವುದಿಲ್ಲ.
ಇನ್ನು ತಮಿಳುನಾಡಿನ ಡಿ.ಎಂ.ಕೆ. ಪಕ್ಷದಲ್ಲಿ ೮೦ ದಾಟಿದ ಕರುಣಾನಿಧಿಯಿಂದ ಬಿಡಿಸಿಕೊಂಡು ಸ್ವತಂತ್ರವಾಗಿ ಯೋಚಿಸುವ ಅಧಿಕಾರ ೬೦ ದಾಟಿರುವ ಸ್ಟಾಲಿನ್ಗಿನ್ನೂ ಸಾಧ್ಯವಾಗಿಲ್ಲ. ಇತ್ತ ಕರ್ನಾಟಕದ ಜೆ.ಡಿ.ಎಸ್.ನ ದೇವೇಗೌಡರಿಂದ ಬಿಡಿಸಿಕೊಳ್ಳಲು ಕುಮಾರಸ್ವಾಮಿ, ರೇವಣ್ಣರಿಗೆ ಸಾಧ್ಯವಾಗುತ್ತಿಲ್ಲ ಎನ್ನುವುದು ಒಂದೆಡೆಯಾದರೆ, ಇದಕ್ಕೆ ಭಿನ್ನವಾದ ಸನ್ನಿವೇಶ ಉತ್ತರಪ್ರದೇಶ ಹಾಗೂ ಬಿಹಾರದ ರಾಜಕಾರಣದಲ್ಲಿ ಕಂಡುಬರುತ್ತದೆ. ಬಿಹಾರದ ಆರ್.ಜೆ.ಡಿ.ಯ ಲಲ್ಲುಪ್ರಸಾದ್ನ ಮಗ ತೇಜಸ್ವಿ ಯಾದವ್ ೨೬ನೇ ವರ್ಷದಲ್ಲೇ ಉಪಮುಖ್ಯಮಂತ್ರಿಯಾಗಿರುವುದು ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂಸಿಂಗ್ ಯಾದವ್ರ ಮಗ ಅಖಿಲೇಶ್ ಯಾದವ್ ೪೦ನೇ ವಯಸ್ಸಿನಲ್ಲೇ ಮುಖ್ಯಮಂತ್ರಿಯಾಗಿರುವುದನ್ನೂ ಕಾಣಬಹುದು. ಆದರೆ ಇದು ರಾಜಕೀಯಕ್ಕೆ ಯೋಗ್ಯವಾದುದಲ್ಲ. ಇವರ ರಾಜಕೀಯ ಪ್ರವೇಶವೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾಗುವ ಮೂಲಕ ಆಗಿದೆ. ಇದು ಯುವಕರಿಗೆ ಕೊಟ್ಟ ಪ್ರಾತಿನಿಧ್ಯವೆನಿಸುವುದಿಲ್ಲ. ರಾಜಕೀಯ ಅನುಭವ, ವಿದ್ಯಾರ್ಹತೆ, ಹೋರಾಟ ಯಾವುದೂ ಇಲ್ಲದೆ ಮುಖ್ಯಮಂತ್ರಿ, ರಾಜ್ಯಾಧ್ಯಕ್ಷ ಪಟ್ಟವನ್ನು ಅಲಂಕರಿಸುವುದೂ ಕೂಡ ಸಂಗತವಾದದ್ದಲ್ಲ. ಸಹಜವಾಗಿ ಯುವಕರ ಪ್ರವೇಶವಾಗಬೇಕು. ಹಂತಹಂತವಾಗಿ ಬೆಳವಣಿಗೆಯಾಗುತ್ತ ಅಥವಾ ಅವರ ಸ್ವಂತದ ಸಾಮರ್ಥ್ಯದಿಂದ ಉನ್ನತಸ್ಥಾನಕ್ಕೆ ತಲಪಬೇಕು.
ಕುಮಾರಸ್ವಾಮಿ, ಸ್ಟಾಲಿನ್ರಂಥವರು ಇನ್ನೂ ಅಪ್ಪನ ನೆರಳಿನಿಂದ ಬಿಡಿಸಿಕೊಳ್ಳಲಾಗುತ್ತಿಲ್ಲ. ಯಾಕೆಂದರೆ ಅವರು ಗೆದ್ದಿರುವುದು ಅಪ್ಪನ ಸ್ಥಾನಬಲದಿಂದಲೇ. ಯಾವಾಗ ಅವರು ಅಪ್ಪನ ನೆರಳಿನಿಂದ ಟಿಕೇಟ್ ತೆಗೆದುಕೊಳ್ಳದೆ ಸ್ವತಂತ್ರವಾಗಿ ಗೆದ್ದುಬರುತ್ತಾರೋ ಆಗ ಅವರಿಗೆ ಅದು ಸಾಧ್ಯವಾಗುತ್ತದೆ. ಹಾಗೆಂದು ನನ್ನ ಮಗಳ ಹತ್ತಿರ ರಾಜಕೀಯಕ್ಕೆ ಬರಬೇಡ ಎಂದು ಹೇಳಲಾಗುವುದಿಲ್ಲ. ಅವಳು ಯೋಗ್ಯತೆಯಿಂದ ತೆಗೆದುಕೊಂಡರೆ ಸರಿ. ನನ್ನ ಮಗಳು ಎಂಬ ಕಾರಣಕ್ಕೆ ಟಿಕೇಟ್ ತೆಗೆದುಕೊಂಡರೆ ಆಗ ಅವಳು ಅರ್ಹತೆಯ ಮೇಲೆ ತೆಗೆದುಕೊಂಡಂತಾಗುವುದಿಲ್ಲ.
ಮಂಗಳೂರಿನ ಸಂಸದ ನಳಿನ್ಕುಮಾರ್ ಕಟೀಲ್ ಎರಡನೇ ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಯಾವ ಕೌಟುಂಬಿಕ ಹಿನ್ನೆಲೆಯೂ ಇಲ್ಲ, ಶಿಕ್ಷಣವೂ ಕಡಮೆ. ಆದರೆ ಅವರಲ್ಲಿ ಗಣನೀಯ ಕಮಿಟ್ಮೆಂಟ್ ಇದೆ. ಒಬ್ಬ ಮನುಷ್ಯನಿಗೆ ಎಜುಕೇಷನ್, ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ – ಇವೇ ಬೇಕೆಂದಿಲ್ಲ. ಸಮಾಜಕ್ಕೆ ಒಳ್ಳೆಯದು ಮಾಡಬೇಕು ಎಂಬ ಕಮಿಟ್ಮೆಂಟ್ ಇದೆಯಲ್ಲ. ಅದು ಸಾಕಷ್ಟು ಕೆಲಸವನ್ನು ಮಾಡಿಸಿಬಿಡುತ್ತದೆ. ಕಮಿಟ್ಮೆಂಟ್ ಇರುವುದಕ್ಕಾಗಿ ಸಾಮಾನ್ಯನಾಗಿದ್ದ ನಳಿನ್ ಎಂ.ಪಿ. ಆದರು, ಎರಡನೇ ಬಾರಿಯೂ ಆಯ್ಕೆಯಾದರು. ಇಂದು ಸಂಸದರ ನಿಧಿ ಬಳಕೆಯಲ್ಲಿ ನಳಿನ್ ನಂ. ೧ ಸ್ಥಾನದಲ್ಲಿದ್ದಾರೆ. ಅಂದರೆ ಸಮಾಜದ ಬಗ್ಗೆ ಕಾಳಜಿ ಇರುವವನು ಏನನ್ನೂ ಮಾಡಬಲ್ಲ ಎಂಬುದಕ್ಕೆ ನಳಿನ್ಕುಮಾರ್ ಉದಾಹರಣೆ. ಕೊಲಂಬಿಯಾ ಯುನಿವರ್ಸಿಟಿಯಲ್ಲಿ ಓದಿ ಬಂದವರೂ ಕೂಡ ಕಾರ್ಯಚಟುವಟಿಕೆಯಲ್ಲಿ ನಳಿನ್ಕುಮಾರ್ರನ್ನು ಮ್ಯಾಚ್ ಮಾಡಲಾಗುತ್ತಿಲ್ಲ.
ಬದಲಾವಣೆ ಸುಲಭವಲ್ಲ
ಕಮಿಟ್ಮೆಂಟ್, ಡೆಡಿಕೇಷನ್ ಇರುವಂತಹವರು ರಾಜಕೀಯಕ್ಕೆ ಬರಬೇಕಾದರೆ ಅವರಿಗೆ ಅವಕಾಶಗಳು ಸೃಷ್ಟಿಯಾಗಬೇಕು. ಅವಕಾಶಗಳು ಯಾವಾಗ ಸೃಷ್ಟಿಯಾಗುತ್ತವೆಯೆಂದರೆ, ಒಂದು ರಾಜಕೀಯ ಪಕ್ಷವಾಗಿ ನಾಲ್ಕು ಜನರಿಗೆ ಒಳ್ಳೆಯದು ಮಾಡಬೇಕು. ಹೊಸಬರು ಬರಬೇಕು – ಎಂಬುದನ್ನು ಮನಗಂಡು, ಅವರ ಈಗಿನ ಮೂಲ ಮನಃಸ್ಥಿತಿ ಬದಲಾದಾಗ ಮಾತ್ರ ಸಾಧ್ಯ. ಹಾಗೆ ಬರಲು ಈ ವ್ಯಕ್ತಿ-ಆಧಾರಿತ ಪಕ್ಷಗಳಲ್ಲಿ ಸಾಧ್ಯವಿಲ್ಲ. ಹೀಗಾಗಿ ರಾಜಕಾರಣದಲ್ಲಿ ಅಷ್ಟು ಸುಲಭವಾಗಿ ಬದಲಾವಣೆ ಬರಲಾರದು.
ರಾಜಕಾರಣದಲ್ಲಿ ಹಣವಿಲ್ಲದಿದ್ದರೆ ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬ ಮನಃಸ್ಥಿತಿಯಿದೆ. ಜನರಿಗೆ ಅದು ಕೊಡಬೇಕು, ಇದು ಕೊಡಬೇಕು – ಎನ್ನುತ್ತಾರೆ. ಆದರೆ ನಾನು ಎಂ.ಪಿ. ಯಾಗಿ ೧೮ ತಿಂಗಳು ಕಳೆದರೂ ಯಾರ ಮದುವೆ, ಮುಂಜಿಗೂ ಹಣ ಕೊಟ್ಟಿಲ್ಲ. ಹಾಗಂತ ನನ್ನಲ್ಲಿ ಕೇಳಲೂ ಯಾರೂ ಬಂದಿಲ್ಲ. ಪ್ರಾರಂಭದಲ್ಲಿ ಗಣೇಶನಹಬ್ಬ ಮುಂತಾದವುಗಳಿಗೆ ಕೇಳಲು ಬಂದಿದ್ದರು. ಆಗ ನಾನು ಹೇಳಿದೆ, ನೋಡ್ರಪ್ಪ, ನಿಮಗೆ ಹೀಗೆ ಕೊಡಬೇಕು ಎಂದರೆ ನಾನು ಭ್ರಷ್ಟಾಚಾರಕ್ಕೆ ಇಳಿಯಬೇಕಾಗುತ್ತದೆ. ನಾನು ಭ್ರಷ್ಟಾಚಾರಕ್ಕೆ ಇಳಿಯಬೇಕು ಎನ್ನುವುದಾದರೆ ನನ್ನನ್ನೇಕೆ ಗೆಲ್ಲಿಸಿದಿರಿ? ಹಿಂದಿನವರೂ ಒಳ್ಳೆಯ ಕೆಲಸ ಮಾಡಿದ್ದರಲ್ಲ? ಎಂದು ಕೇಳಿದ್ದೆ. ಹಾಗೆ ಕೇಳಿದ ಮೇಲೆ ನನ್ನ ಹತ್ತಿರ ಯಾರೂ ಕೇಳಲು ಬಂದಿಲ್ಲ. ಕ್ಷಮೆ ಕೇಳಿ, ಕಣ್ಣಲ್ಲಿ ನೀರು ಹಾಕಿ ಹೋದ ಉದಾಹರಣೆಗಳಿವೆ. ಇಂದಿಗೂ ಜನ ಸಜ್ಜನರನ್ನು ಗೌರವಿಸುತ್ತಾರೆ. ಅದೇ ನಾನು ಲೂಟಿ ಮಾಡಿ ಇಟ್ಟುಕೊಂಡಿದ್ದೇನೆ ಎಂದುಕೊಳ್ಳಿ. ಆಗ ಅದೇ ಜನ “ಏನೋ ಅವನಪ್ಪನ ಮನೆಯಿಂದ ತಂದುಕೊಡತಾನಾ ಅವ್ಹಾ? ಕೊಡಲಿ ಬಿಡಿ” – ಎನ್ನುತ್ತಾರಷ್ಟೆ.
ನಮ್ಮ ಎಂ.ಎಲ್.ಎ.ಯು ಎಂ.ಪಿ.ಯಾದಾಗ ಅವನು ಆ ಸ್ಥಾನವನ್ನು ಅಧಿಕಾರ ಎಂದು ಭಾವಿಸಿಕೊಳ್ಳುತ್ತಾನೆ. ಆದರೆ, ಅದನ್ನು ಒಂದು ಜವಾಬ್ದಾರಿ ಎಂದು ಭಾವಿಸಬೇಕು. “Great power comes with great responsibility” ಎಂಬ ಹೇಳಿಕೆ ಖ್ಯಾತ ಚಲನಚಿತ್ರವೊಂದರಲ್ಲಿದೆ. ಅಂದರೆ ಎಂ.ಎಲ್.ಎ. ಎಂ.ಪಿ. ಎಂಬ ಸ್ಥಾನವಿರುವುದು ಜವಾಬ್ದಾರಿಯನ್ನು ನಿರ್ವಹಿಸಲೇ ಹೊರತು ಅದು ಅಧಿಕಾರ ಚಲಾಯಿಸುವ ಗದ್ದುಗೆಯಲ್ಲ. ಗೆದ್ದ ನಂತರ ಅಧಿಕಾರ ಬರುತ್ತದೆ. ಜನರಿಗೆ ಒಳ್ಳೆಯದನ್ನು ಮಾಡುವುದಕ್ಕಾಗಿ ಸದ್ಬಳಕೆ ಮಾಡುವುದಕ್ಕಾಗಿ ಮಾತ್ರ ಆ ಅಧಿಕಾರವಿರುವುದ. ಅದು ನನ್ನ ದರ್ಪವನ್ನು ಪ್ರದರ್ಶನ ಮಾಡುವುದಕ್ಕೆ ಇರುವ ಸ್ಥಾನವಲ್ಲ. ಜನರಿಗೆ ಅನುಕೂಲ ಮಾಡಿಕೊಡಲಿರುವ ಸ್ಥಾನ. ಅದನ್ನು ಕಲಿತರೆ ಬಹಳಷ್ಟು ಒಳ್ಳೆಯ ಕೆಲಸವನ್ನು ಮಾಡಬಹುದು.
ನಾನು ನನ್ನ ಆಫೀಸಿನಲ್ಲಿ ‘ನಾಳೆ ಬಾ’ ಎಂಬುದನ್ನು ಇಟ್ಟುಕೊಂಡಿಲ್ಲ. ಬಂದವರೆಲ್ಲರ ಅಹವಾಲು ಆಲಿಸಿ ಕೂಡಲೇ ಸಂಬಂಧಪಟ್ಟವರಿಗೆ ಸೂಚಿಸುತ್ತೇನೆ. ಹಾಗಾಗಿ ಕಾನ್ಫಿಡೆನ್ಸ್, ಗುಡ್ವಿಲ್, ಇನ್ಸ್ಟೆಂಟ್ ರಿಯಾಕ್ಷನ್ ಇದೆ. ಇದರಿಂದ ನಾನು ನನ್ನ ಕ್ಷೇತ್ರದ ಜನರ ವಿಶ್ವಾಸ ಗಳಿಸಿದ್ದೇನೆ. ಮತ್ತು ನನ್ನ ಬಗೆಗೆ positive opinion ಸೃಷ್ಟಿಯಾಗಿದೆ ಎಂದುಕೊಂಡಿದ್ದೇನೆ.
ಭರವಸೆಯ ಒಸರು
ನನಗೆ ಜನರನ್ನು ಮತ್ತು ರಾಜಕಾರಣವನ್ನು ನೋಡುವ ದೃಷ್ಟಿ ಬದಲಾಯಿಸುವ ಒಂದು ಘಟನೆ ಚುನಾವಣಾ ಸಂಧರ್ಭದಲ್ಲಿ ನಡೆಯಿತು. ನಾನು ಹುಣಸೂರಿನ ಹಳ್ಳಿಯೊಂದರಲ್ಲಿ ಎಲೆಕ್ಷನ್ ಕ್ಯಾಂಪೇನ್ಗೆ ಹೋಗಿದ್ದೆ. ಅದು ಸಂಜೆ ೭ ಗಂಟೆಯ ಸಮಯವಿರಬಹುದು. ಭಯಂಕರ ಗಲೀಜು ಮೆತ್ತಿಕೊಂಡಿದ್ದ ಒಬ್ಬ ಮಹಾನ್ ಕೊಳಕ (ಅವನು ಹೊಲದಿಂದ ಕೆಲಸ ಮಾಡಿ ಬಂದಿರಬೇಕು) ನಾನು ಕಾರು ಇಳಿದ ಕೂಡಲೇ ನನ್ನ ಕೈ ಹಿಡಿದುಕೊಂಡ. ಕೈ ನೋವಾಗುವಷ್ಟು ಬಿಗಿಯಾಗಿ ಹಿಡಿದುಕೊಂಡ. ಆತ ಕೈಯನ್ನು ಬಿಡುತ್ತಾ ಇನ್ನೊಂದು ಕೈಯಿಂದ ಬೆನ್ನು ತಟ್ಟಿ “ಹೋಗು ಹೋಗು, ನೀನು ಗೆದ್ದುಬಿಡುತ್ತೀಯಾ” ಎಂದ. ಯಾಕೋ ನೋವಾಗಿದೆಯಲ್ಲಾ ಎಂದು ಕೈ ನೋಡಿದರೆ ಆತ ಕೈಯೊಳಗಡೆ ಏನೋ ಇಟ್ಟಿದ್ದ. ಅದು ೫೦ ರೂಪಾಯಿ. ಆಗ ನನಗನಿಸಿತು, ನಾನು ಎಲೆಕ್ಷನ್ ಗೆಲ್ಲುತ್ತೇನೆ ಎಂದು. ಯಾಕೆಂದರೆ, ನಮ್ಮ ಜನ ೫೦೦, ೧೦೦೦ ರೂಪಾಯಿ, ಬಾಟಲಿ ಎಷ್ಟು ಬಂತು ನೋಡಿ ವೋಟ್ ಹಾಕುತ್ತಾರೆ ಎನ್ನುವಂತಹ ಒಂದು ಭಾವನೆ ಜನಜನಿತವಾಗಿರುವ ಸಂದರ್ಭದಲ್ಲಿ ದುಡಿದ ದೇಹ ಸ್ವಚ್ಛವಿಲ್ಲದಿದ್ದರೂ ಮನಸ್ಸು ಸ್ವಚ್ಛವಿರುವ ಇಂತಹ ಜನರ ಆಶೀರ್ವಾದ ನನಗಿದೆ, ನಾನು ಗೆಲ್ಲುತ್ತೇನೆ – ಎಂದು ನನಗನಿಸಿತು.
ಈ ಘಟನೆ ನನಗೆ ಬಹಳ ಧೈರ್ಯ ಕೊಟ್ಟಿತು. ನಮ್ಮ ಜನ ಹಾಳಾಗಿಲ್ಲ; ನಮ್ಮ ಜನರನ್ನು ನಾವೇ ಹಾಳು ಮಾಡಿದ್ದೇವೆ. ನಮ್ಮ ಜನರು ಇಂದಿಗೂ ಭ್ರಷ್ಟಾಚಾರಿಗಳಲ್ಲ. ನಮ್ಮ ಜನರನ್ನು ಕರಪ್ಟ್ ಮಾಡಿರುವುದು ನಮ್ಮ ರಾಜಕೀಯ ವ್ಯವಸ್ಥೆ ಮತ್ತು ರಾಜಕಾರಣಿಗಳು. ಒಳ್ಳೆಯ ಕೆಲಸ ಮಾಡದ ರಾಜಕಾರಣಿಗಳು ಹಣದ ಆಮಿಷ ತೋರಿಸಿ ಜನರನ್ನು ಭ್ರಷ್ಟರನ್ನಾಗಿಸುತ್ತಾರೆ. ಆದರೆ ಒಳ್ಳೆಯ ವ್ಯಕ್ತಿಗಳನ್ನು ಪ್ರೋತ್ಸಾಹಿಸುವ ಗುಣ ನಮ್ಮ ಜನರಿಗೆ ಇದ್ದೇ ಇದೆ. ಹೀಗಾಗಿಯೇ ನಮ್ಮ ದೇಶ ಅರಾಜಕತೆಯತ್ತ ಸಾಗಿಲ್ಲ. ಅಂದು ನನಗೆ ಈ ಭರವಸೆ ಕಾಣಿಸಿತು.
Comments are closed.