ರಮೀತ್ ಇದ್ದಕ್ಕಿದ್ದಂತೆ ಎದ್ದು ನಿಂತ. ಅವನ ಮೋರೆಯಲ್ಲೊಂದು ನಿಸ್ಸೀಮ ನಿರ್ಧಾರವಿದ್ದಂತಿತ್ತು. ಅದು ಅಚಲವೆನ್ನಿಸಿತು.
ಯಾವುದೇ ಯಂತ್ರಗಿಂತ್ರ ಮಂತ್ರ-ತಂತ್ರವಿತ್ಯಾದಿ ಸುಡುಗಾಡಿಲ್ಲದೆ ನೇರ ವಿಷಯಕ್ಕೆ ಬರುತ್ತೇನೆ.
ಈವೊತ್ತು, ಆಫೀಸಿನಲ್ಲಿ ನನ್ನ ಮೇಜಿನ ಬದಿಗಿರುವ ದೊಡ್ಡ ಸ್ಲೈಡಿಂಗ್ ವಿಂಡೋದಾಚೆ, ಕೆಲಸದ ನಡುವಿನಿಂದೆದ್ದು ಸುಮ್ಮನೆ ಹೊರಗಿನ ರಸ್ತೆಯಲ್ಲಿ ಕಣ್ಣಿಕ್ಕುವಾಗ, ಬಲು ಅಜೀಬಿನದೇನೋ ಗೋಚರಿಸಿತು. ಅರ್ಥಾತ್, ಈ ತನಕ ದಿನವೂ ಕಾಣಿಸುತ್ತಿದ್ದ ನೋಟದಲ್ಲಿ ಫಕ್ಕನೆ ಗುರುತಿಸಲಾಗದಂತಹ ಪುಟ್ಟ ಬದಲಾವಣೆ. ಢಾಳಾಗಿ ಕಾಣಿಸುವಂತಹದ್ದಲ್ಲದಿದ್ದರೂ, ಮುಖ್ಯವಾದುದು.
ಅದೇನಂತ ನಿಖರವಾಗಿ ಆಡಲಿಕ್ಕೆ ಮೊದಲೊಂದಿಷ್ಟು ಪೀಠಿಕೆಯಾಗಲೇಬೇಕು.
ನನ್ನ ಆಫೀಸಿರುವುದು ಎರಡು ರಸ್ತೆಗಳ ನಡುವಿರುವ ಮೂಲೆಯಲ್ಲಿ. ಅಸಲಿನಲ್ಲಿ, ಕೆಳಗೆ ಮನೆ; ಮೇಲೆ ಆಫೀಸು. ಈ ಊರಿನಲ್ಲಿ, ಇತ್ತಿತ್ತಲಾಗಿ ಅಸಾಧ್ಯ ಟ್ರಾಫಿಕುಂಟಾಗಿ, ಕೆಲಸಕ್ಕೆ ಹೋಗಿಬರುವುದೆಂದರೆ ರಸ್ತೆಯಲ್ಲಿ ಇದ್ದಲ್ಲೇ ಲಾಳಿ ಹೊಡೆಯುವುದೆಂತಾದ ಮೇಲೆ, ಹೊರಹೋಗುವ ಜಂಜಾಟವೇ ಬೇಡವೆಂದು ಮೂರೂವರೆ ವರ್ಷಗಳ ಹಿಂದೆ- ಮನೆಯ ಮೇಲೆಯೆ ಆಫೀಸು ಕಟ್ಟಿಕೊಂಡು, ತಕ್ಕ ಮಟ್ಟಿಗೆ ತಣ್ಣಗಿದ್ದೇನೆ. ಕ್ಲಯಂಟುಗಳಿಗೆ ಇಲ್ಲಿಯೇ ಬಂದು ಕಾಣಿರೆಂದು ತಾಕೀತು ಮಾಡುತ್ತೇನೆ. ಸೈಟುಗಳಲ್ಲಿ ಮೀಟಿಂಗಿದ್ದರೆ ಮಾತ್ರ ಹೋಗುತ್ತೇನೆ; ಅದೂ ಸೂರಿಗೆ ಕಾಂಕ್ರೀಟು ಹೊಯ್ಯುತ್ತಿದ್ದಾರೆನ್ನುವ ಬಲು ಅವಶ್ಯ ಮತ್ತು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ. ಉಳಿದಂತೆ, ನೀವೇ ಒಂದು ಹೆಜ್ಜೆ ಹೋಗಿ ಬನ್ನಿರಂತ, ಜೂನಿಯರುಗಳನ್ನು ಅಟ್ಟುತ್ತೇನೆ. ಹೀಗಾಗಿಯೆ ದಿನಗಟ್ಟಲೆ ಕಾಲ, ನಾನು ನನ್ನ ಬಿಲ್ಡಿಂಗಿನಾಚೆ ಹೋಗುವುದೇ ಕಡಮೆ. ಎಂತಲೇ- ನನಗೂ, ಹೊರಜಗತ್ತಿಗೂ ಸಂಬಂಧವೇ ಇಲ್ಲವೆಂದು ಮತ್ತು ಸ್ವಾನುಕೂಲಕ್ಕಾಗಿ ಅದು ಬೇಡವೆಂದು ನನ್ನಷ್ಟಕ್ಕೆ ಸುಮ್ಮಗಿದ್ದುಬಿಟ್ಟಿದ್ದೇನೆ.
ಆಫೀಸು, ಮನೆಗಳು ಒಂದಕ್ಕೊಂದು ಅಂಟಿಕೊಂಡಿರುವಾಗ, ಊರೊಳಗಿನ ಪ್ರಯಾಣದಷ್ಟು ಸಮಯವುಳಿಯುತ್ತದಾದರೂ, ತನ್ನಿಮಿತ್ತ ಆಗುವ ಅನಾನುಕೂಲಗಳಿಲ್ಲದೇನಿಲ್ಲ. ಆಫೀಸಿನಲ್ಲಿಲ್ಲದಿದ್ದರೆ ಮನೆಯಲ್ಲಿರುತ್ತೇನೆಂದು ಗೊತ್ತಿರುವ ಮಂದಿ, ಮುಂಚಿತವಾಗಿ ಫೋನು ಮಾಡದೆ, ಅಪಾಯಿಂಟ್ಮೆಂಟಿಲ್ಲದೆ, ಕಂಡಕಂಡಾಗಲೆಲ್ಲ ಬಂದೊದಗುತ್ತಾರೆ. ವಕ್ಕರಿಸುತ್ತಾರೆ.
ಆಫೀಸು, ಮನೆಗಳಿರುವುದು ಎರಡು ರಸ್ತೆಗಳು ಸಂಧಿಸುವ ಮೂಲೆ ಅಂದೆನಲ್ಲ, ಅದು ನಿಜವಾಗಿ ಒಂದೇ ರಸ್ತೆ. ಒಂಬತ್ತನೇ ಮೇಯ್ನ್ನಿಂದ ಸುರುಗೊಳ್ಳುವ ಹದಿನಾಲ್ಕನೇ ಕ್ರಾಸೇ- ನನ್ನ ಮನೆಯ ಕಟ್ಟಡದ ಈಶಾನ್ಯದಲ್ಲಿ, ಉತ್ತರಕ್ಕೆ ತಿರುಗಿ ಹನ್ನೆರಡನೇ ಮುಖ್ಯರಸ್ತೆಯಾಗಿ ಮುಂದುವರೆಯುತ್ತದೆ. ಅಂದರೆ ಒಂದು ಬದಿಯ ಬೀದಿ ಮನೆಯ ಮೂಲೆಯಲ್ಲಿ ಹೊರಳಿದ್ದೇ, ಏಕ್ದಮ್, ಇನ್ನೊಂದಾಗಿಬಿಡುತ್ತದೆ! ಇದು ನಿಜದಲ್ಲೊಂದು ನಮೂನೆ ಡೆಡ್ಡೆಂಡ್ ಸಂದರ್ಭ ಅಷ್ಟೆ. ಇನ್ನು, ಉತ್ತರಕ್ಕಿರುವ ರಸ್ತೆಯನ್ನು ಆತುಕೊಂಡಿರುವ ಹಾಗೊಂದು ದೊಡ್ಡ ದೇವಸ್ಥಾನವಿದೆ. ಹಾಗೇ ಪೂರ್ವಕ್ಕೆ, ಇಡೀ ಶಹರದಲ್ಲಿ ಹೆಸರುವಾಸಿಯಾಗಿದ್ದು, ತಿಂಗಳಿಗೇ ಲಕ್ಷ ದುಡ್ಡು ಫೀಸು ಕಕ್ಕಿಸುವ, ಭಾರೀ ದುಬಾರೀ ಸ್ಕೂಲೊಂದಿದೆ. ದೇವಸ್ಥಾನದ ಕಂಪೋಂಡು ಶಾಲೆಯದರೊಡನೆ ಸಂಧಿಸುವ `ಮಹಾ’ಕೂಟದಲ್ಲಿ ಎರಡು ಕೆಮೆರಾಗಳನ್ನು ಹೂಡಲಾಗಿದೆ. ಒಂದನ್ನು ದೇವಸ್ಥಾನದವರೂ, ಇನ್ನೊಂದನ್ನು ಶಾಲೆಯವರೂ, ತಂತಮ್ಮ ಗಡಿಗೋಡೆಗಳ ಮೇಲೆ, ನೆಲದಿಂದ ಹದಿನೈದು ಅಡಿಯೆತ್ತರಕ್ಕೆ, ತಂತಮ್ಮ ಬೀದಿಗಳ ಮೇಲೆ ಸದಾ ನಿಗಾವಹಿಸುವ ಹಾಗೆ, ಅಳವಡಿಸಿದ್ದಾರೆ. ನಿಜಾರ್ಥದಲ್ಲಿ ಇವುಗಳ ಕಣ್ಗಾವಲೊಳಗೆ ನಾನು ಅವಿರತ, ಅನವರತ ಇದ್ದೇನೆ. ಒಳಪಟ್ಟಿದ್ದೇನೆ. ಅಂದರೆ, ನನ್ನ ಮನೆಗೆ ಆಫೀಸಿಗೆ ಬರುವ ಎಲ್ಲರನ್ನೂ, ಎಲ್ಲವನ್ನೂ- ಸದರಿ ಇಲೆಕ್ಟ್ರಾನಿಕ್ಕಣ್ಣುಗಳು ನೋಡುತ್ತವೆ. ಸೆರೆ ಹಿಡಿಯುತ್ತವೆ. ಹೀಗಾಗಿಯೇ ನಾನು, ಇಡೀ ಆಫೀಸಿಗೆ ಆಫೀಸನ್ನೇ ಹೆಚ್ಚು ಗೋಡೆಗಳಿಲ್ಲದೆ ಮತ್ತು ಎಲ್ಲೆಲ್ಲೂ ಗಾಜೇ ಇರುವ ಹಾಗೆ, ವಿನ್ಯಾಸ ಮಾಡಿಕೊಂಡಿದ್ದೇನೆ. ಎಷ್ಟರಮಟ್ಟಿಗೆಂದರೆ, ಇಡೀ ಬಡಾವಣೆಯಲ್ಲಿ ನನ್ನ ಮನೆ(ಆಫೀಸು) ಶೀಷೆಯ ಮಹಲೆಂದೇ ಹೆಸರಾಗಿದೆ!
ಇನ್ನೂ ವಿಶೇಷವೆಂದರೆ, ನನ್ನ ಮನೆ ಮತ್ತು ಆಫೀಸೆರಡಕ್ಕು, ಕಿಟಕಿಗಳನ್ನೂ ಒಳಗೊಂಡಂತೆ, ಎಲ್ಲೂ ಗ್ರಿಲ್ಲುಗಳಿಲ್ಲ. ಅಂದರೆ, ಯಾವುದೇ ಅತಿಕ್ರಮವನ್ನು ತಡೆಯುವ ಹಾಗೆ, ಅಡ್ಡಡ್ಡ ಉದ್ದುದ್ದದ ಸರಳುಗಳಿಲ್ಲ. ಮನೆಯನ್ನು ಕಟ್ಟುವ ಸುಮಾರಿನಲ್ಲಿ, ನನ್ನ ಹೆಂಡತಿ ಮತ್ತು ಅಮ್ಮ ಈ ಕುರಿತು ತಕರಾರೆತ್ತಿದರಾದರೂ, ಈಗ ಪರಿಸ್ಥಿತಿಗೆ ತಕ್ಕುದಾಗಿ ಒಗ್ಗಿಹೋಗಿದ್ದಾರೆ. ಅಡ್ಜಸ್ಟಾಗಿಬಿಟ್ಟಿದ್ದಾರೆ. ಇಷ್ಟಿದ್ದೂ, ಆಗೊಮ್ಮೆ ಈಗೊಮ್ಮೆ ಪಿರಿಪಿರಿ ಮಾಡಿದರೆಂದರೆ, `ಹೆದರಿಕೋತೀರಿ ಯಾಕೆ? ಹೊರಗೆ – ಎರಡೂ ಕಂಪೋಂಡಿನ ಮೇಲೆ ಕೆಮೆರಾ ಇದೆಯಲ್ಲ, ಯಾರು ತಾನೇ ಒಳನುಗ್ಗಿಯಾರು?!’ ಎಂದು ಸಮಜಾಯಿಷಿ ಕೊಡುತ್ತೇನೆ. ಇಳಿವಯಸ್ಸಿನ ನನ್ನ ಅಮ್ಮ, `ಏನೋಪ್ಪ! ಹಾಳು ಕ್ಯಾಮರಾನ ನೆಚ್ಚಿಕೊಂಡಿದ್ದೀಯಲ್ಲ… ಅದೆಷ್ಟು ದಿವಸ ಶಾಶ್ವತ ಹೇಳು! ಗುಡಿಯೊಳಗಿರೋ ತಿಮ್ಮಪ್ಪನೇ ನಮ್ಮನ್ನ ಕಾಯಬೇಕು ಅಷ್ಟೆ!’ ಎಂದು, ತಾನು ದಿನವೂ ತಪ್ಪದೆ ಹೋಗಿನೋಡುವ, ಬದಿಗುಡಿಯೊಳಗಿನ ಶ್ರೀಮದ್ವೆಂಕಟನಾಥನ ಮೇಲೆ, ತನ್ನಷ್ಟೂ ಸುರಕ್ಷೆಯ ಜಿಮ್ಮೇದಾರಿ ಹೊರಿಸಿ ಸುಮ್ಮಗಾಗುತ್ತಾಳೆ. ಇನ್ನು, ನೆರೆಹೊರೆಯವರು ನನ್ನೀ ವರಸೆಯನ್ನು ಕೇಳಿ, ನಾನು ಭಂಡನೆಂದೂ, ಜಗಮೊಂಡ ಧೈರ್ಯವಿದೆಂದೂ ಬಣ್ಣಿಸುತ್ತಾರೆ! ಹೂ ಕೇರ್ಸ್?!
ಇಷ್ಟಾಗಿ ನಮಗೆ, ಈವರೆಗೆ ಯಾವುದೇ ಬಗೆಯಲ್ಲಿ ಸೆಕ್ಯುರಿಟಿಯ ಸಮಸ್ಯೆಯಾಗಿಲ್ಲವಾದರೂ, ಏಕ್ದಮ್ ಸಮಸ್ಯೆಯಿಲ್ಲವೇ ಇಲ್ಲವೆಂದೇನೂ ಅಲ್ಲ. ಟೆಕ್ನಾಲಜಿಯೆಂದ ಮೇಲೆ, ಸಣ್ಣಪುಟ್ಟ ಸಮಸ್ಯೆಗಳಾದರೂ ದಿನವೂ ಇದ್ದೇ ಇದೆ! ಕೂರುವಲ್ಲಿ, ನಿಲ್ಲುವಲ್ಲಿ, ಎಲ್ಲೆಲ್ಲೂ ಸುತ್ತ ಗಾಜಿರುವುದಾಗಿ, ನನ್ನ ಒಳಬದುಕಷ್ಟೂ ಹೊರಗಿನವರಿಗೆ ಸಾಫು ಸಾಫು ಗೋಚರಿಸುವುದಿದ್ದಿದ್ದೇ ಎಂಬುದೊಂದಾದರೆ, ಅದಕ್ಕಿಂತ ಘೋರವಾದುದು- ನಾನೂ ಸದಾಸರ್ವದಾ, ಹೊರಗಿರುವ ಕೆಮೆರಾಗಣ್ಣುಗಳ ದುರಿತ ನಿರುಕುಗಳೊಳಕ್ಕೆ ನಿರತವಾಗಿ ಏರ್ಪಟ್ಟಿರುವುದು! ಯಾಕೆಂದರೆ, ಹೊರಗಿರುವ ಎರಡೂ ಕೆಮೆರಾಗಳ ಆಲಿಗಳ ಎತ್ತರವು ನನ್ನ ಆಫೀಸಿನ ಸೂರಿಗಿಂತ ತುಸುವೇ ಕೆಳಕ್ಕೆ ಮತ್ತು ನೆಲದಿಂದ ಸಾಕಷ್ಟು ಮೇಲಕ್ಕೆ ಇರುವುದು! ಅಂದರೆ, ನಾನು ಅವುಗಳತ್ತ ಬೆನ್ನು ಮಾಡಿದರೆ ಸಾಕು, ನನ್ನ ಹಿಂದಲೆಯಲ್ಲಿ ಕೂದಲುದುರಿ ಉಂಟಾಗಿರುವ ಬೋಳುಬಾಣಲಿಯು ಹಳೆಯ ಹುಣಿಸೆಯಲ್ಲಿ ಬೆಳಗಿದ ತಾಮ್ರದ ಪಾತ್ರೆಯ ಹಾಗೆ, ಫಳಫಳ ಹೊಳೆದು ತೋರುವುದು! ಬರೇ ತೋರಿದರಾದರೂ ಓಕೆ, ಕೆಮೆರಾಕ್ಕೆ ತೋರಿದ್ದೆಂದುಕೊಂಡು ಸುಮ್ಮನಾಗಬಹುದು. ಆದರೆ ಹಿಂದಲೆಯ ಬಾಣಲಿ, ಕೆಮೆರಾದ ಬಿಂಬಗಳಲ್ಲಿ ಕಣ್ಣಿಕ್ಕಿದವರಿಗೆಲ್ಲ ಢಾಳಾಗಿ ತೋರಿಬರುವುದು! ಥತ್ತ್… ಅಸಹ್ಯ ತಾನೆ? ಅಲ್ಲದೆ, ಯಾರೂ ಇಲ್ಲವೆಂದುಕೊಂಡು, ನೋಡುತ್ತಿಲ್ಲವೆಂದು ಬಗೆದು, ಕಂಡಲ್ಲಿ ತುರಿಸಿಕೊಳ್ಳುವಂತಿಲ್ಲ. ಮೂಗೊಳಕ್ಕೆ ಬೆರಳಿಕ್ಕಿ ಬಗೆಯುವಂತಿಲ್ಲ. ಕಿವಿಯೊಳಗಿನ ಗುಗ್ಗೆ ಕಲಕೆತ್ತುವಂತಿಲ್ಲ…. ಸಾಕು ತಾನೆ?! ಒಟ್ಟಿನಲ್ಲಿ ಬದುಕಿಗೆ ಬದುಕೇ ಬಯಲಲ್ಲಿ ಬೆತ್ತಲಾದಷ್ಟು ನಗ್ನವಾಗಿಬಿಟ್ಟಿದೆ!
ಇನ್ನು, ಆಫೀಸೊಳಗಿನ ಸುರಕ್ಷೆಯ ಬಗೆಗೂ ನನಗೆ ಯೋಚನೆಯಿಲ್ಲವೆಂದೇನಲ್ಲ. ಇಷ್ಟಕ್ಕು ಕಣ್ಗಾವಲಿನ ಕಾಲವಿದು. ಯಾರ ಮೇಲೂ ಯಾರೂ ನಿಗಾವಿಡಬಹುದು. ಹಾಗೇ ನನ್ನ ಮೇಲೆ ನಾನೂನೂ. ಉದಾಹರಣೆಗೆ, ನನ್ನದೇ ಆಫೀಸಿನೊಳಗಿನದನ್ನು ಕಾಯುವುದಕ್ಕೆ, ಹುಡುಗರ ಮೇಲೊಂದು ಕಣ್ಣಿಡುವುದಕ್ಕೆ, ಮೂರು ಕೆಮೆರಾಗಳಿವೆ ಎಂಬುದೂ ನಿಜವೇ ಹೌದು. ಯಾರೂ ಯಾರನ್ನೂ ಕಾಯಬಲ್ಲ ಸಂದರ್ಭದಲ್ಲಿ, ನಾನು ನನ್ನನ್ನು ಕಾಯ್ದುಕೊಳ್ಳದಿದ್ದರೆ ಹೇಗೆ?!
ಇರಲಿ. ಇವೊತ್ತು ಬೆಳಗ್ಗೆ, ಯಾವನೋ ಕ್ಲಯಂಟು ನೋಡಲು ಬಂದನೆಂದು, ಆತನ ಸಲುವಾಗಿ ಟಿಪ್ಪಣಿಸಿಕೊಂಡು, ಬದಿಮೇಜಿನಲ್ಲಿ ಇಟ್ಟುಕೊಂಡಿದ್ದ ಪೇಪರು ಕಾಣಿಸದೆ, ಆಚೀಚೆ ನೋಡಿದರೆ – ಅದು, ನನ್ನ ಕುರ್ಚಿಯ ಹಿಂದೆಯೇ ಹಾರಿಬಿದ್ದಿತ್ತಾಗಿ, ಎತ್ತಿಕೊಳ್ಳಲೆಂದು ಕುಳಿತಲ್ಲಿಂದೆದ್ದರೆ, ಅನುದ್ದೇಶಿತವಾಗಿ ನನ್ನ ಕಣ್ಣುಗಳು ಬೀದಿಯಾಚೆಗಿನ ಎರಡೂ ಗಡಿಗೋಡೆಗಳ ಮೇಲೆ ಹಾದು, ಒಮ್ಮೆಗೇ ಅಲ್ಲಿದ್ದ ಎರಡೂ ಕೆಮೆರಾಗಳ ಮೇಲೆ, ಕಗ್ಗಪ್ಪು ಬಣ್ಣದ ಬಟ್ಟೆ ಸುತ್ತಿದ್ದುದು ಗಮನಕ್ಕೆ ಬರುವುದೆ? ಸಣ್ಣಗೆ ಹೌಹಾರುವುದಾಯಿತು. ಅಚ್ಚರಿಯೂ ಆಯಿತು. ಯಾಕೆ, ಏನು, ಎತ್ತವಿತ್ಯಾದಿಗಳುದಿಸಿ ತಲೆ ಕಲಕಿದವಾದರೂ, ಆ ಕುರಿತು ಉಸಾಬರಿಗಿಳಿಯುವಷ್ಟು ಪುರುಸೊತ್ತಿರಲಿಲ್ಲ. ಎಂತಲೇ ಹಿಂದೆಮುಂದೆ ಯೋಚಿಸದೆ, ಕ್ಲಯಂಟೆದುರು ಅತ್ಯುದಾರವಾಗಿ ತೊಡಗಿಕೊಂಡೆ.
****
ಎರಡೂವರೆಯ ಹೊತ್ತಿಗೆ, ಟೌನ್ಹಾಲಿನೆದುರು ಇನ್ನೊಬ್ಬ ಕ್ಲಯಂಟನ್ನು ಭೇಟಿ ಮಾಡುವುದಿತ್ತಾಗಿ ದಡಬಡಿಸಿಕೊಂಡು ಹೊರಟೆ. ಜೇಸೀರೋಡಿನಲ್ಲೋ, ಅಸಾಧ್ಯ ಟ್ರಾಫಿಕ್ಕು. ಬೈಕು ಕಾರು ಬಸ್ಸು ಆಟೋಗಳ ಮಿನಿಗಡಲು! ಮಿನರ್ವ ಬಳಿಕದ ಸಿಗ್ನಲಿನಲ್ಲಿ ಮುಕ್ಕಾಲು ತಾಸು ಜಡಿದುಕೊಂಡಿದ್ದಾಯಿತು. ಅವಧಿ ಮೀರುತ್ತಿದೆಯೆಂದು ನೆನಪಿಸಲು ಕ್ಲಯಂಟು ಎರಡನೆಯ ಸರ್ತಿ ಕರೆದ. `ಡ್ರೈವರಿದ್ದಾನಲ್ಲವಾ? ವೈ ಡೋಂಟ್ಯು ಡು ಒನ್ಥಿಂಗ್? ಅಲ್ಲೇ ಇಳಕೊಂಡು ನಡಕೊಂಡು ಬಂದುಬಿಡಿ. ದೂರ ಏನಿಲ್ಲವಲ್ಲ…’ ಎಂದು ಸಲಹೆಯಿತ್ತ. ಸೈಯಂತಂದೆ. ಸೀದಾ ಟೌನ್ಹಾಲಿನ ಬದಿ ನಿಲ್ಲಿಸಿಕೊಂಡು, ಫೋನು ಮಾಡಂತ- ಡ್ರೈವರಿಗೆ ಸೂಚಿಸಿ, ಕಾರಿನಿಂದಿಳಿದು ಎಡಗಡೆಯ ಪೇವುಮೆಂಟಿನ ಮೇಲೆ ನಡೆಯತೊಡಗಿದೆ.
ಸದರಿ ಜೇಸಿರೋಡಿನ ಅದಿಬದಿಯ ಚಹರೆಗಳನ್ನು ಕಾಲ್ನಡಿಗೆಯಲ್ಲಿದ್ದು ಗಮನಿಸಿ ವರ್ಷಗಳೇ ಆಗಿದ್ದವೇನೋ. ಕಾರೊಳಗಿನ ಕಣ್ಣುಗಳಲ್ಲಿ ಊರು ನೋಡುವುದಕ್ಕು, ನಡೆನಡೆದು ನಿಧಾನವಾಗಿ ನೋಡುವುದಕ್ಕು ಇರುವ ವ್ಯತ್ಯಾಸದ ನಿಜವೇನೆಂದು ಈಗ ಗೊತ್ತಾಯಿತು. ಇನ್ನೊಂದು ಸಿಗ್ನಲು ಕ್ರಮಿಸುತ್ತಿರುವಾಗ, ಆಫೀಸೆದುರಿನ ಗಡಿಗೋಡೆಗಳ ಮೇಲೆ ಬಟ್ಟೆ ಮುಸುಕಿಕೊಂಡಿದ್ದ ಕೆಮೆರಾಗಳು, ಇದ್ದಕ್ಕಿದ್ದಂತೆ ನೆನಪಿಗೆ ಬಂದವು. ಕೂಡಲೆ, ಆಫೀಸಿಗೆ ಫೋನುಗೈದು, ನನ್ನ ಸೆಕ್ರೆಟರಿ ರೀನಾಗೆ, ಹೊರಗೆ ಹೋಗಿ ಯಾಕಂತ ವಿಚಾರಿಸಿಕೋ ಎಂದು ತಿಳಿಹೇಳಲು ಯತ್ನಿಸಿದೆ. ಹವಣಿದ್ದಷ್ಟೆ. ಟ್ರಾಫಿಕ್ಗೌಜಿನ ನಡುವೆ ಇಬ್ಬರಿಗೂ, ಒಬ್ಬರಿಗೊಬ್ಬರು ಆಡಿದ್ದು ಕೇಳಬರದೆ, ಫೋನು ಮಗುಚಿದ್ದಾಯಿತು. ರೀನಾ, ಬಳಿಕ ಪದೇಪದೇ ವಾಪಸು ಕರೆದಿದ್ದು, ಆಮೇಲೆ ಗೊತ್ತಾಯಿತು. ಸದ್ದಿನ ನಡುವೆ ಕೇಳಿಸಲೇ ಇಲ್ಲ. ಆ ಹೊತ್ತಿಗೆ ಶಿವಾಜಿ ಟಾಕೀಸಿನೆದುರಿಗಿದ್ದೆ.
ನಿಜ ಹೇಳುತ್ತೇನೆ- ಆ ಹತ್ತಿರದಲ್ಲಿ ಮತ್ತು ಎತ್ತರದಲ್ಲಿ, ನಾನು ಶಿವಾಜಿ ಟಾಕೀಸನ್ನು ನೋಡಿದ್ದೇ ಇಲ್ಲ! ನೋಡಿದ್ದರೂ ವರ್ಷಗಳೇ ಆದವೇನೋ, ನೆನಪಿಲ್ಲ. ಚಿಕ್ಕಂದಿನಲ್ಲಿ, ಜೇಸೀರೋಡಿನ್ನೂ ಟೂವೇಯಾಗಿರದ ಸಮಯದಲ್ಲಿ, ಇಲ್ಲೆಲ್ಲ ನಿರಾತಂಕವಾಗಿ ಅಡ್ಡಾಡಿದ್ದಿದೆ. ವಿಷ್ಣುವರ್ಧನ್-ರಜನೀಕಾಂತರ `ಸಹೋದರರ ಸವಾಲ’ನ್ನು ನೋಡಿದ್ದು ಇದೇ ಟಾಕೀಸಿನಲ್ಲೆಂದು ಅಂದುಕೊಳ್ಳುವಾಗ `ಓ ನಲ್ಲನೆ ಸವಿಮಾತೊಂದ ನುಡಿವೆಯಾ…’ ಹಾಡೂ ತಂತಾನೇ ಗುನುಗುನುಗಿಕೊಂಡು ಬಂದಿತು. ಶಿವಾಜಿ ಟಾಕೀಸನ್ನು ಈಗ ಗಮನಿಸಿದೆನಾದರೆ, ಅರೆರೇ… ಕಟ್ಟಡವನ್ನು ರಸ್ತೆಗೆ ಲಂಬರೇಖೆಯೊಂದರ ನೇರಕ್ಕೆ- ಉದ್ದುದ್ದವಾಗಿ ಸೀಳಲಾಗಿದೆ! ನಂಬಲಾಗಲಿಲ್ಲ. ಕಣ್ಣಿಕ್ಕಿ ಆಮೂಲಾಗ್ರ ನೋಡಿದೆ. ಹೌದು, ಟಾಕೀಸಿನ ಒಂದರ್ಧ ಮಾತ್ರ ಉಳಿದುಕೊಂಡಿದೆ ಮತ್ತು, ಅದರ ನಿವೇಶನದ ಉಳಿದರ್ಧದಲ್ಲಿ- ಗ್ಲ್ಯಾಸು, ಅಲುಕೋ ಪ್ಯಾನಲುಗಳಿರುವ ಹೊಸ ಕಾಲದ ಕಟ್ಟಡವೊಂದು ತಲೆಯೆತ್ತಿಕೊಂಡಿದೆ!! ಬಹುಶಃ, ಟಾಕೀಸಿನ ಓನರಿಕೆಯಿರುವ ಅಣ್ಣತಮ್ಮಂದಿರು ಪಾಲುಮಾಡಿಕೊಂಡಿರಬೇಕು ಅಂದುಕೊಂಡೆ. ಎಂತಲೇ, ಹಳೆಯ ಟಾಕೀಸಿನ ಹಿಸ್ಸೆಯಾಗಿ ಇನ್ನೂ ಉಳಿದಿರುವ ಅರ್ಧವು- ತಾನು, ಹಿಂಜರುಗಿ ಸಂದುಹೋದ ಕಾಲಮಾನದ್ದೇ ಒಂದು ವಿಚಿತ್ರ ಅಳವೆನ್ನುವ ಹಾಗೆ, ಪಳೆಯುಳಿದಿದೆ. ಮಿಕ್ಕುಕೊಂಡಿದೆ! ಹಾಳುಹಂಪೆಯಲ್ಲಿ ಮನಸ್ಸು ಮಮ್ಮಲಿಸುವ ಹಾಗೆ, ಸುಮಾರು ಸುಮ್ಮನುಳಿದು ನೋಡಿಯೇ ನೋಡಿದೆ. ಎಲ್ಲವೂ ಅರ್ಧರ್ಧ. ಒಳಗಿನ ಬಾಲ್ಕನಿ ಅರ್ಧ. ಸೂರೂ ಅರ್ಧ. ಕಡೆಗೆ ಹೊರಗಿನ ಪೋರ್ಚೂ ಅರ್ಧ! ಪುಣ್ಯಕ್ಕೆ, ಪೋರ್ಚಿನ ಮೇಲುಗಡೆಯ ಗೋಡೆಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಭಂಗಿ ಮಾತ್ರ, ಯಾಕೋ ಏನೋ, ಅನರ್ಧ ಮಿಕ್ಕಿಕೊಂಡಿದೆ. ಅಲಾ… ಈ ಮೂರ್ತಿಯನ್ನೂ ಅರ್ಧರ್ಧ ಸೀಳಿ ಹಂಚಿಕೊಂಡಿದ್ದಿದ್ದರೆ ಎಂತಿರುತ್ತಿತ್ತು? ನನ್ನ ಯೋಚನೆಗೆ ನನಗೇ ನಗುವುಗ್ಗಿ ಬಂತು. ಒಂದೆರಡು ಮಿನಿಟು ತಡೆದುನಿಂತು, ಮತ್ತೆ ಮತ್ತೆ ಕಟ್ಟಡವನ್ನು ತದೇಕ ನಿಟ್ಟಿಸಿದೆ.
ಈ ಉಳಿದರ್ಧ ಯಾರದಿರಬಹುದು? ಯಾಕೆ, ಇಷ್ಟು ಕಾಲ ಇದನ್ನು ಒಡೆಯದೇ, ರಿಯಲೆಸ್ಟೇಟಿಗೆ ಹೂಡಿ ದುಡ್ಡೆಣಿಸಿಕೊಳ್ಳದೆ ಉಳಿಸಿಕೊಂಡಿದ್ದಾರೆ? ಏನಾದರೂ ಲಿಟಿಗೇಶನಿದ್ದೀತೆ? ಕೌಟುಂಬಿಕ ವ್ಯಾಜ್ಯಗಳ ಮೇರೆಗೆ, ಇಂತಹ ಭಗ್ನ ನಿಶಾನೆಗಳು ಒಳವೂರುಗಳಲ್ಲಿ ಸುಭದ್ರ ಮಿಕ್ಕುಬಿಡುತ್ತಾವಲ್ಲ, ಯಾಕೆ? ಯಾರಿಗಾಗಿ? ಯಾವ ಸೌಭಾಗ್ಯದ ಸಲುವಾಗಿ? ಪ್ರಶ್ನೆಗಳೆದ್ದವು. ಇವುಗಳಿರುವುದೇ, ನಮ್ಮ ಗತವನ್ನು ನೆನಪಿಸಲು. ನಮ್ಮ ನೆನಪುಗಳೊಟ್ಟಿಗೆ ಮುಖಾಮುಖಿಯಾಗಲು… ಅನ್ನಿಸಿತು.
ಅಷ್ಟರಲ್ಲಿ ಕ್ಲಯಂಟು ಕರೆದನಾಗಿ ಹೆಜ್ಜೆ ದೌಡಾಯಿಸುವುದಾಯಿತು.
****
ಸಂಜೆ ಆರೂವರೆಯಿಂದ ಏಳರ ಸುಮಾರಿನಲ್ಲಿ, ನನ್ನ ಮೇಜಿನ ಸುತ್ತ ವಿಪರೀತ ರಶ್ಷಿರುತ್ತದೆ. ಹುಚ್ಚೇ ಹುಚ್ಚಿನ ರಶ್ಷು. ಜೂನಿಯರುಗಳಷ್ಟೂ, ಆಗಲೇ ಆಫೀಸಿನಿಂದ ಹೊರಹೋಗುವ ಮೊದಲು, ಆವೊತ್ತಿನ ಕೆಲಸದ ಕುರಿತಾಗಿ ಅಂಕಿಅಂಶವೊಪ್ಪಿಸುವುದು ವಾಡಿಕೆ. ಒಬ್ಬೊಬ್ಬರೂ ತಂತಮ್ಮ ನಕಾಶೆಗಳನ್ನು ಹರವಿ, ಅವುಗಳಲ್ಲಿನ ತಪ್ಪೊಪ್ಪುಗಳನ್ನು ನಿಷ್ಕರ್ಷಿಸಿ, ಆಯಾ ಪ್ರಾಜೆಕ್ಟುಗಳಲ್ಲಿನ ನಾಳೆಗಳನ್ನು ಯೋಜಿಸುವುದೂ, ಎಂತು ಮುಂದುವರಿಸುವುದೆಂದು ಯೋಚಿಸುವುದೂ- ಪ್ರತಿ ಸಂಜೆಯಲ್ಲೂ ಒಂದು ರೂಢಿ. ಅಲ್ಲದೆ, ಆಫೀಸಿನಿಂದ ಹೊರಹೋಗಲಿಕ್ಕಿರುವ ಡ್ರಾಇಂಗುಗಳ ಮೇಲೆ, ನನ್ನಿಂದ ಸಹಿಯಿಕ್ಕಿಸಿಕೊಳ್ಳುವುದೂ, ಬೇರೆ ಬೇರೆ ಸೈಟುಗಳಿಂದ ಒದಗಿದ ಮಾಹಿತಿಯನ್ನೂ, ಯಾಚನೆಗಳನ್ನೂ- ಎದುರಿಟ್ಟು, ಮುಂದೇನೆಂತೆಂದು ನಿರ್ಣಯಿಸುವುದೂ, ಆವಾಗಲೇನೆ. ಇವಿಷ್ಟೂ, ನಾವು ಆರ್ಕಿಟೆಕ್ಟುಗಳಿಗೆ ಎಷ್ಟು ಮುಖ್ಯವೆಂದರೆ, ಈ ಹೊತ್ತಿನಲ್ಲಿನ ನಿರ್ಧಾರಗಳ ಮೇರೆಗಷ್ಟೇ ಈ ಪ್ರಾಜೆಕ್ಟುಗಳ ಮಾಲೀಕರ ಮತ್ತು ಅವುಗಳಲ್ಲಿ ತೊಡಗಿರುವ ಕಸುಬುಗಾರರ ಭವಿಷ್ಯಗಳೂ, ನಾಳಿನ ಕೂಳುಗಳು ಜರುಗುತ್ತವೆ. ನಿರ್ಣಯಿಸಲ್ಪಡುತ್ತವೆ! ಒಂದರ್ಥದಲ್ಲಿ, ನಾವು ವಿನ್ಯಾಸಕಾರರಿಗೆ ಇವರೆಲ್ಲರನ್ನೂ ಪೋಷಿಸುವ, ಸಂಗೋಪಿಸುವ ಬರೆದಿಡದ ಹೊಣೆಗಾರಿಕೆ ಎಂದಿಗೂ ಇದ್ದಿದೇ.
ಇನ್ನು, ನನ್ನೊಡನಿರುವ ಕೆಲಸಗಾರರಿಗೆ, ಈ ಹೊತ್ತು ಮುಳುಗಿದ ಹೊತ್ತಿನಲ್ಲಿನ ತುರ್ತಾದರೂ ಎಂತೆಂದರೆ- ಯಾವಾಗ ಮನೆ ತಲಪಿಯೇನೋ ಅಂತೆಂಬ ದುಸ್ಸಾಧ್ಯ ಓಘವಿಟ್ಟುಕೊಂಡಿರುತ್ತಾರೆ. ಮನೆ ತಲಪುವ ಮೊದಲು ಮಬ್ಬುಪಬ್ಬುಗಳಲ್ಲಿ ಮೂಡೆತ್ತರಿಸಿಕೊಳ್ಳುವ ಉಮೇದೂ ಇದ್ದಿರುತ್ತದೆ. ಹಾಗಾಗಿಯೇ, ನನ್ನೊಡನೆಯ ಮಾತು ಬೇಗ ಬೇಗ ಮುಗಿದಷ್ಟೂ ಒಳಿತೆನ್ನುವ ಹುರುಪಿನಲ್ಲಿ ಕುದಿಯುವ ಸಾರಿನೋಪಾದಿ ಥಕಪಕಿಸುತ್ತಾರೆ. ಇಂತಹ ಮುಹೂರ್ತದಲ್ಲಿ ಯಾರೇ ಕರೆದರೂ, ಫೋನುಗೈದರೂ, ನನ್ನ ಮಟ್ಟಿಗೆ ಪ್ರಾಣವಾಯುವನ್ನು ತಡೆದಷ್ಟು ಅಡಚಣೆಯೆ. ನನ್ನ ಹೆಂಡತಿ, ಅಮ್ಮಂದಿರು ನಡುವೆ ಬಂದರೂ ತರಿದು ಬದಿಗಿಕ್ಕುವ ಅವಸರದಲ್ಲಿ ನಾನೂ ಇರುತ್ತೇನೆ. ಎಂತಲೇ, ಈ ಸಮಯದಲ್ಲಿ ಯಾರೇ ಫೋನು ಮಾಡಿದರೂ ಕೊಡಬೇಡವೆಂದು, ಮೋದಿ ಸಾಹೇಬರೇ ಬಂದರೂ ಒಳಬಿಡಕೂಡದೆಂದು ರೀನಾಳಿಗೆ ತಾಕೀತು ಮಾಡಿರುತ್ತೇನೆ.
ಈವೊತ್ತು ಸಂಜೆ, ಹೀಗೆ ನಾನು ಎಲ್ಲರೊಡನೆ ಮೀಟಿಂಗಿನಲ್ಲಿರುವಾಗ, ರೀನಾ, ನಾನಿರುವಲ್ಲಿ ಬಂದು, ಮರೆಯಲ್ಲಿ ನಿಂತು, ಒಂದೆರಡು ಸಲ ಇಣಿಕಿ, ಹಿಂದೆಯೇ ಎರಡು ಸಲ ಕೆಮ್ಮಿದಳು. ಕೂಡಲೆ, ವಿಷಯವು ಗಹನವೆಂದುಕೊಂಡು, ಮಾಡುತ್ತಿದ್ದ ಮೊಟುಕಿ, ಏನಂತ ಕೇಳಿದೆ. `ಸರ್, ಯಾರೋ ಶಾರ್ದೂಲ ಅಂತಲಂತೆ… ನಿಮ್ಮ ಹಳೆಯ ಸ್ಟೂಡೆಂಟಂತೆ. ಈಗಲೇ ಮೀಟ್ ಮಾಡಬೇಕು ಅಂತಿದ್ದಾನೆ’ ಅಂತ ಅನುಮಾನಿಸುತ್ತ ಮಾತೊಪ್ಪಿಸಿದಳು. ತಕ್ಷಣವೇ, ಕಾದ ಕಾವಲಿಯನ್ನು ಇಳಿನೀರಿನ ನಲ್ಲಿಯ ಕೆಳಗಿರಿಸಿದ ಹಾಗೆ ಭುಸ್ಸೆಂದುಬಿಟ್ಟೆ! `ಆಗಲ್ಲ ಅಂತ ಹೇಳಮ್ಮ… ಸುಮ್ಮನೆ ಬಂದುಬಿಟ್ಟಾಂತ ಬಿಟ್ಟುಬಿಡೋಕಾಗುತ್ಯೇ?’ ಕನಲಿದೆ.
ನಾನು ಶಹರದಲ್ಲಿನ ಕೆಲವು ಡಿಸೈನು ಶಾಲೆಗಳಲ್ಲಿ ಆಗಿಂದಾಗ ಅಧ್ಯಾಪಿಸುತ್ತೇನಾಗಿ, ಹೀಗೆ, ನನ್ನನ್ನು ಹುಡುಕಿಕೊಂಡು ಬರುವ ವಿದ್ಯಾರ್ಥಿಗಳ ಹಿಂಡೇ ಇದೆ. `ಇಲ್ಲೇ ಬಂದಿದ್ದೆ… ಹೊಕ್ಕು ನಿಮ್ಮನ್ನು ಮಾತಾಡಿಸೋಣ ಅಂದುಕೊಂಡು ಬಂದೆ….’ ಎಂದು, ಹೊತ್ತುಗೊತ್ತಿಲ್ಲದೆ ಬರುವವರು ಯಾವಾಗಲೂ ಇದ್ದಿದ್ದೆ. ತೀರಾ ಹತ್ತಿರದಿಂದ ಗೊತ್ತಿರುವ ಹುಡುಗ-ಹುಡುಗಿಯರಾದರೆ, ಯಾವತ್ತೂ ಒಲ್ಲೆ ಅನ್ನುವಂತಿಲ್ಲ. ಎಷ್ಟೇ ಲಹರಿಭಂಗವೆನಿಸಿದರೂ, ಕರೆದು ಅಷ್ಟಿಷ್ಟು ಮಾತನಾಡಿದ ಶಾಸ್ತ್ರಗೈದು ಸಾಗುಹಾಕುವುದೂ ಇದೆ. ಆದರೆ ಈವೊತ್ತು, ಈ ರಮೀತ್ ಅಂತೆಂಬ ಹುಡುಗನಿರಲಿ, ಹಾಗೊಂದು ಗಂಡುಹೆಸರನ್ನು ಈ ಮೊದಲು ಕೇಳಿದ್ದೂ ನನಗೆ ನೆನಪಾಗಲಿಲ್ಲ.
`ಹೇಳಿದೆ, ಸರ್… ಬಟ್ ಹಿ ಡಸ್ನ್ಟ್ ಮೈಂಡ್ ವೇಯ್ಟಿಂಗ್. ಎಷ್ಟು ಹೊತ್ತಾದರೂ ಪರವಾಗಿಲ್ಲ ಅಂತಿದಾನೆ…’
ಅಯ್ಯೋ ದೇವರೆ! ಅಂತಹ ತುರ್ತೇನಿದ್ದೀತು? ಯಾರಿರಬಹುದು? -ಎಂದೆಲ್ಲ ಯೋಚಿಸಿ, `ಸರಿ… ಇರಲಿಕ್ಕೆ ಹೇಳು…’ ಅಂತಂದು, ನನಗೋ, ಮನುಷ್ಯ ಹೆಸರುಗಳ ಬಗ್ಗೆ ವಿಚಿತ್ರ ಕುತೂಹಲವಿದೆಯಲ್ಲ, ರೀನಾ ಹೇಳಿದ ಹೆಸರು ಬಲು ಕೌತುಕದ್ದೆನಿಸಿ, ತಡೆದು, `ಸರಿ… ಏನು ಹೆಸರೂಂತ ಹೇಳಿದೆ?’ ಎಂದು ಕೇಳಿದೆ. ಪುನರುಚ್ಚರಿಸಿದಳು.
ಶಾರ್ದೂಲವೆ?! ವಿಚಿತ್ರವಾಗಿದೆಯಲ್ಲ! ಇದೇನು ನರಪ್ರಾಣಿಗೆ ಇಡಬಹುದಾದ ಹೆಸರೇ? ಫಕ್ಕನೆ, ಬದಿಯ ದೇವಸ್ಥಾನದಲ್ಲಿ ದಿನವೂ, ಎಮ್ಮೆಸ್ಸ್ ಸುಬ್ಬುಲಕ್ಷ್ಮಿ- ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾನ್ವಿತಂ… ಎಂದು ಪದೇಪದೇ ಹಾಡುವುದು ನೆನಪಾಗಿ, ಅಂದರೆ ಮನುಷ್ಯರಲ್ಲಿ ಶಾರ್ದೂಲನೆನಿಸಿರುವ ಶ್ರೀರಾಮ ಅಂತೆಲ್ಲ? ನನ್ನನಗೇ ಅರ್ಥೈಸಿಕೊಂಡು, ಅದಿರಲಿ, ಹುಲಿ ಸಿಂಹಗಳ ಜಾತಿಯ ಹೆಸರಿಟ್ಟುಕೊಂಡಿರುವ ಈ ಹುಡುಗ ಯಾರೆಂದು ನೆನಪಿಸಿಕೊಳ್ಳಹತ್ತಿದೆ. ಊಹ್ಞೂಂ… ಯಾರೂ ಜ್ಞಾಪಕಕ್ಕೆ ಬರಲಿಲ್ಲ. ಅಲ್ಲದೆ, ಈವರೆಗೆ ಇಂತಹ ಗಂಡುಹೆಸರನ್ನೇ ಕೇಳಿಲ್ಲವೆ… ಅಜೀಬೆನಿಸಿತು. ಯಾರಿರಬಹುದೆನ್ನುವ ಕುತೂಹಲವೂ ಹೆಚ್ಚಿತು.
ಯಾರಂತ ನೋಡೇಬಿಡುವಾ ಅಂದುಕೊಂಡು, ಕೈಯಲ್ಲಿದ್ದ ಪೆನ್ಸಿಲು ಬದಿಗಿಕ್ಕಿ, ಮೌಸಾಡಿಸಿ, ಕಂಪ್ಯೂಟರಿನಲ್ಲಿರುವ ಕೆಮೆರಾ ಸಾಫ್ಟ್ವೇರನ್ನು ತೆರೆದು ಆನುಮಾಡಿದೆ. ತೆರೆಯಿತಾದರೂ, ಆಫೀಸಿನಲ್ಲಿರುವ ಮೂರೂ ಕೆಮೆರಾಗಳಲ್ಲಿನ ಚಿತ್ರಗಳು, ಮಾನಿಟರಿನಲ್ಲಿ ಒಡಮೂಡಿಬರದೆ, ಮಬ್ಬು ಮಬ್ಬುಗಾಗಿ ತೋರತೊಡಗಿದವು. ಥತ್ತ್ ತೇರಿ… ಏನಾಯಿತಪ್ಪ… ಇದ್ದಕ್ಕಿದ್ದಂತೆ ಮೂರೂ ಎಕ್ಕುಟ್ಟಿದವೋ ಹೇಗೆ… ಅಂತನ್ನಿಸಿ, ಹಿಂದೆಯೇ ಹೊರಗೆ, ಬೀದಿಯಲ್ಲಿನ ಕೆಮೆರಾಗಳ ಮೇಲೆ ಹೊದೆಸಿದ್ದ ಕರಿಬಟ್ಟೆಯ ಮುಸುಕುಗಳೂ ನೆನಪಾಗಿ, `ರೀನಾ, ಆಫೀಸಿನ ಕೆಮೆರಾಗಳು ವರ್ಕಾಗುತಿಲ್ಲ ಅನ್ನಿಸುತ್ತೆ… ನಾಳೆಯೇ ಕಂಪೆನಿಯವರಿಗೆ ಬರಹೇಳು. ಹಾಗೇ, ಹೊರಗೆ ಬೀದಿಯಲ್ಲಿರೋ ಕೆಮೆರಾಗಳ ಮೇಲೆ ಯಾರೊ ಬಟ್ಟೆ ಮುಚ್ಚಿಟ್ಟಿದ್ದಾರೆ ಅನಿಸುತ್ತೆ… ಯಾತಕ್ಕೂ ಒಮ್ಮೆ ನೋಡು…’ ಅಂತಂದೆ. ಕೂಡಲೆ, ನನ್ನೆದುರು ನೆರೆದಿದ್ದ ಹುಡುಗರಲ್ಲೊಬ್ಬ, ನನ್ನ ಬೆನ್ನಿನ ಹಿಂದಕ್ಕೆ ಸರಿದು, ಗಾಜಿನಾಚೆ ಇಣಿಕಿ, `ಸರ್… ಏನೂ ಕಾಣಿಸುತ್ತಿಲ್ಲ!’ ಅಂತಂದ. ತಕ್ಷಣ, ನಾನೂ ಕುಳಿತಲ್ಲಿಂದಲೆದ್ದು ಹೊರಗಿನ ಕೆಮೆರಾಗಳತ್ತ ನೋಡಿದೆ. ಬೀದಿದೀಪಗಳು ಕೆಮೆರಾಗಳಿಗಿಂತ ಕೆಳಗಿನೆತ್ತರದಲ್ಲಿವೆಯಾಗಿ, ಮಬ್ಬುಗತ್ತಲಿನಲ್ಲಿ ಏನೂ ಕಾಣಬರಲಿಲ್ಲ. ಯಾತಕ್ಕು, ನಾನೇ ಆಮೇಲಿನಿಂದ ಕೆಳಗಿಳಿದುಕೊಂಡು ಬೀದಿಗೆ ಹೋಗಿ ಕೆಮೆರಾಗಳನ್ನು ನೋಡಿ, ದೇವಸ್ಥಾನದವರ ಬಳಿ ವಿಚಾರಿಸುವುದೆಂದು ನನ್ನನಗೇ ಆಡಿಕೊಂಡೆ. `ಕೆಳಗೆ ಹೋಗಿ ಒಂದು ಸಲ ಚೆಕ್ಕ್ ಮಾಡಿಬಿಡು, ರೀನಾ…’ ಎಂದು ರೀನಾಳಿಗೆ ಆಜ್ಞಾಪಿಸಿದೆ.
ಮರಳಿ ಮೇಜಿನೊಳಗಿನ ಮಾತಿನಲ್ಲಿ ಮನಸ್ಸು ಹೂಡಲು ಬಲು ತ್ರಾಸಾಯಿತು. ದೇವರೆ, ಕಡಿದ ಲಹರಿಯನ್ನು ಪುನಃ ಸ್ಥಾಪಿಸುವುದೆಷ್ಟು ಕಷ್ಟ! ಪಿಸಿದಿದ್ದ ಎಳೆಯನ್ನಿನ್ನೂ ಆಡಲು ಹೆಕ್ಕಿದ್ದೆನಷ್ಟೆ, ಕೆಳಗಿನಿಂದ ಅಮ್ಮ- ಮೊಬೈಲಿಗೆ, ಒಂದೇ ಸಮ ಕರೆಯತೊಡಗಿದಳು. ನಾಲ್ಕಾರು ರಿಂಗಾದ ಮೇಲೆ, ಒಲ್ಲದ ಮನಸ್ಸಿನಿಂದ ತೆಗೆದುಕೊಂಡರೆ, `ಏ… ನಿಂಗೆ ನೆನಪಿದೆ ಅಲ್ಲವಾ? ಕಡೇ ಮನೇಲಿ ಪ್ರಕೃತಿ ಅಂತ ಒಬ್ಬರಿದ್ದಲ್ಲ… ಅದೇ ಸಿಂಗಾರವೇಲು ಮನೇಲಿ…’ ಎಂದು, ಹೆಲೋ ಕೂಡ ಹೇಳದೆ, ಸುರುಹಚ್ಚಿಕೊಂಡಳು.
`ಅಮ್ಮಾ… ಆಮೇಲೆ ಮಾತಾಡುತ್ತೀನಿ…’ ಅಂದರೆ, `ಅದೇ ಕಣೋ, ನೆನಪಿಸಿಕೋ… ಎರಡು ಮಕ್ಕಳಿದ್ದರು. ಒಂಡು ಗಂಡು, ಒಂದು ಹೆಣ್ಣು. ನಮ್ಮನೆಗೆ ಬರುತ್ತಾ ಇದ್ದರು ನೋಡು. ನೀನು ಇಬ್ಬರಿಗೂ ಟ್ಯೂಷನ್ ಹೇಳಿಕೊಡುತಿದ್ದೆಯಲ್ಲೋ, ಹುಡುಗ… ಏನೋ ಆ ಹುಡುಗರ ಹೆಸರು? ಬೆಳಗ್ಗೆಯಿಂದ ಜ್ಞಾಪಿಸಿಕೊಳ್ಳೋಕೆ ಟ್ರೈ ಮಾಡುತ್ತಿದ್ದೀನಿ. ನೆನಪೇ ಆಗುತ್ತಿಲ್ಲ… ಅದೇ ಕಣೋ, ಅವರಮ್ಮ ಪ್ರಕೃತಿ ಯಾರನ್ನೋ ಕಟ್ಟಿಕೊಂಡು ಓಡಿಹೋದಳು, ನೋಡು… ಗೊತ್ತಾಗಲಿಲ್ಲವಾ?’ ಅನ್ನುತ್ತ, ಮಾತುದ್ದಗೈದು, ಸೀದಾ ಮಸ್ತಿಷ್ಕದೊಳಕ್ಕೆ ಬೆರಳಿಕ್ಕಿ ನೆನಪಿನ ಪದರಗಳನ್ನು ಕಲಕತೊಡಗಿದಳು.
`ಥತ್ತ್…. ಏನಮ್ಮಾ ನೀನು?!’ ಸಿಡುಕಿದೆ. `ಇದನ್ನ ಹೇಳಕ್ಕೆ ಫೋನು ಮಾಡಿದೆಯಾ?’
ಇಳಿವಯಸ್ಸಿನಲ್ಲಿರುವ ಈ ಅಮ್ಮನಿಗಾದರೂ, ಮಗನಾದ ನನ್ನ ನಡುವಯಸ್ಸಿನ ಅರ್ಜುಸರ್ಜುಗಳು ಅರ್ಥವಾಗುವುದೇ ಇಲ್ಲ. ಆರ್ಕಿಟೆಕ್ಟಿಕೆಯೆಂಬ ಕೆಲಸ ಮತ್ತು ಹಣಕಾಸಿನ ಹೊಣೆಗಾರಿಕೆಯ ತಲೆಗೇಡು ತಿಳಿಬರುವುದಿಲ್ಲ. ಹೊತ್ತುಗೊತ್ತಿಲ್ಲದೆ ಕರೆಯುತ್ತಾಳೆ. ಕೆದಕೆದಕಿ ವಿಷಯ ಹುಟ್ಟಿಸುತ್ತಾಳೆ. ಮಾತು ಗಿಟ್ಟಿಸುತಾಳೆ. ಹೇಗೆ ತಿಳಿಹೇಳುವುದಂತ ಗೊತ್ತಾಗುವುದಿಲ್ಲ. ಅಸಲಿನಲ್ಲಿ, ಒಂದು ಮಹಡಿಯ ಅಂತರದಲ್ಲಿಯಷ್ಟೆ, ನಮ್ಮಿಬ್ಬರ ಅನುದಿನದ ಬದುಕು ಸಂದುತ್ತಿದೆ. ಅವಳು ಸದಾ ಕೆಳಗೆ, ನಾನು ಸರ್ವದಾ ಮೇಲೆ. ನಮ್ಮ ನಮ್ಮ ಕೋಶಗಳಲ್ಲಿ. ನಮ್ಮ ನಮ್ಮ ಉಮೇದುಸಾಬರಿಗಳಲ್ಲಿ. ದಿನವಿಡೀ, ಎಲ್ಲ ಪತ್ರಿಕೆಗಳಲ್ಲಿನ ಪದರಂಗ-ಸುಡೂಕೊ ಬಿಡಿಸಿಕೊಂಡು ಹೊತ್ತು ನೂಕುತ್ತಾಳೆ. ಕೆಲವೊಮ್ಮೆ ಯಾವುದೋ ಪದ ಹೊಳೆಯಲಿಲ್ಲವೆಂದು ಫೋನು ಹಚ್ಚುತ್ತಾಳೆ. `ನಾಲ್ಕಕ್ಷರ. ಮೇಲಿಂದ ಕೆಳಕ್ಕೆ. ಮೊದಲಕ್ಷರ ಕ -ಬಂದಿದೆ. ಕಡೆಯಲ್ಲಿ- ರ….’ ಎಂದು ಪದಸೂಚಿಯನ್ನುದ್ಧರಿಸಿ ಮಾತು ಬೆಳೆಸುತ್ತಾಳೆ. `ತುಂಬಾ ತಲೆ ಕೆಡಿಸಿಕೊಂಡೆ ಕಣೋ, ಪುಟ್ಟ… ತಿಳಿಯುತ್ತಲೇ ಇಲ್ಲ…’ ಎಂದು ಪದ ಊಹಿಸಹೇಳುತ್ತಾಳೆ! ಕೆಲಸದ ನಡುವೆ ಇವಳ ಸಲುವಾಗಿ ಪದ ಟಂಕಿಸಿಕೊಂಡಿರಲಾದೀತೆ? `ನಿನಗೆ ಕನ್ನಡ ಚಂದ ಗೊತ್ತೂಂತ ಲೋಕವೇ ಕೊಂಡಾಡುತ್ತಲ್ಲಪ್ಪಾ, ಅದಕ್ಕೇ ಕೇಳಿದ್ದು… ಹೇಳು- ಹಾಲುಗಡಲಿಗೆ ಸಂಸ್ಕೃತ ಪರ್ಯಾಯ ಅಂತಿದೆ. ಏನೋ ಹಾಗಂದರೆ?’ ಎಂದು ಇನ್ನೊಂದು ಕೊಸರು ಹೇಳುತ್ತಾಳೆ. ದಿನವಿಡಿ ಎದುರುಸಿಗದ ನನ್ನನ್ನು, ಮಾತನಾಡಿಸುವ ಸಲುವಾಗಿ, ಹೀಗೆಲ್ಲ ನೆಪ ಹೂಡುತ್ತಾಳೋ ಹೇಗೆಂದು ಒಮ್ಮೊಮ್ಮೆ ಯೋಚನೆಯಾಗುತ್ತದೆ.
ನಾನು ಸದಾ ಮೇಲೆ, ಅಮ್ಮ ಸರ್ವದಾ ಕೆಳಗೆ- ಅಂದೆನಲ್ಲ, ಅದನ್ನು ಕೊಂಚ ವಿಸ್ತರಿಸಲೇಬೇಕು. ವಯಸ್ಸಾದ ಅವಳಿಗೆ ಮೇಲಿರುವ ನನ್ನ ತನಕವೇರಲಾಗುವುದಿಲ್ಲ. ನನಗೆ ಕೆಳಗಿಳಿಯುವಷ್ಟು ಪುರುಸೊತ್ತಿರುವುದಿಲ್ಲ. ಇದು ಸಮಸ್ಯೆ. ಏನು ತಾನೇ ಮಾಡುವುದು? ಕೆಲವೊಮ್ಮೆ ದಿನಗಟ್ಟಲೆ ಮಾತೂ ಜರುಗುವುದಿಲ್ಲ. ಇದಕ್ಕೇ ಏನೋ, ಆಗಿಂದಾಗ ಫೋನು ಹಚ್ಚಿ, ತಲೆಕೆಡಿಸುತ್ತಾಳೆ. `ಅದೆಂಥ ಕೆಲಸಾರೀ ನಿಮ್ಮದು… ದಿನಾ ಒಂದು ಹತ್ತು ನಿಮಿಷ ನಿಮ್ಮಮ್ಮನ ಜೊತೆ ಇದ್ದು ಕಾಲ ಕಳೆಯಬಾರದಾ? ನಿಮ್ಮನ್ನೆಷ್ಟು ಮಿಸ್ಸ್ ಮಾಡುತ್ತಾರೆ, ಗೊತ್ತಾ?’ ನನ್ನ ಹೆಂಡತಿ ಆಗಾಗ ನನಗೆ ಸಲಹೆ ಕೊಡುವುದಿದ್ದಿದ್ದೆ. ಬಿಡುವಾಗುವುದೇ ಇಲ್ಲ.
`ಬ್ಯುಸಿ ಇದ್ದೀಯಾ? ಸರಿ…’ ರೇಗಿದೆನೆಂದು ಅಮ್ಮ ಪೆಚ್ಚಾದಳನಿಸುತ್ತದೆ, `ನನಗೆ ಗೊತ್ತಾಗಲಿಲ್ಲ. ರೇಗಬೇಡ ಆಯಿತಾ? ನೆನಪಾದರೆ ಆಮೇಲಿಂದ ಹೇಳು…’ ಎಂದು ಫೋನು ಥಟಕ್ಕನೆ ಕಡಿದಳು. ನಾನೂ ಪೆಚ್ಚಾಗಿಹೋದೆ.
ನಿಲ್ಲಿಸಿದಲ್ಲಿಂದಲೇ ಮಾತು ಹೊಂಚುವುದು ಮರಳಿ ದುಸ್ತರವೇ ಆಯಿತು.
****
ಅಮ್ಮ ಇದ್ದಕ್ಕಿದ್ದಂತೆ, ಸುಮಾರು ಇಪ್ಪತ್ತಿಪ್ಪತ್ತೈದು ವರ್ಷಗಳ ಹಿಂದಿನ ನೆನಪೊಂದನ್ನು ಸುತ್ತಿಸುಳಿದು ಜೀಕುತ್ತಿದ್ದಾಳೆಂದು, ಕೆಲಸದ ಹುಡುಗರೊಟ್ಟಿಗಿನ ಮಾತಿನ ನಡುವೆಯೂ ಯೋಚನೆಯಾಯಿತು. ಅವಳು ಹೇಳಿದ ಪ್ರಕೃತಿ ಮತ್ತು ಅವಳೆರಡು ಮಕ್ಕಳೂ ನೆನಪಾಗಿಬಂದರು.
ಆರ್ಕಿಟೆಕ್ಚರೋದುತ್ತಿದ್ದ ದಿವಸಗಳಲ್ಲಿ, ಅಪ್ಪ ಸಣ್ಣಪುಟ್ಟ ಖರ್ಚಿಗೆಂದು ಕೊಡುತ್ತಿದ್ದ ಕಿಸೆದುಡ್ಡು ಸಾಲದೆಂದು, ನಾನು ಬೀದಿಯಲ್ಲಿನ ಹೈಸ್ಕೂಲ್ ಮಕ್ಕಳಿಗೆ ಟ್ಯೂಷನು ಕಲಿಸಿ, ತಕ್ಕ ಮಟ್ಟಿಗೊಂದಿಷ್ಟು ಮೇಲುಸಂಪಾದನೆ ಮಾಡುತ್ತಿದ್ದೆ. ಸೈನ್ಸು-ಮ್ಯಾತ್ಸುಗಳನ್ನು ಹೇಳಿಕೊಡುತ್ತಿದ್ದೆ. ಹೈಸ್ಕೂಲಿನಲ್ಲಿರುವವರಲ್ಲದೆ ಪೀಯೂಸಿಯ ಹುಡುಗರೂ ನನ್ನಲ್ಲಿಗೆ ಬಂದು, ಕ್ಯಾಲ್ಕ್ಯುಲಸಿತ್ಯಾದಿ ಗಣಿತವನ್ನು ಕಲಿಸಿಕೊಳ್ಳುವುದಿತ್ತು. ತಿಂಗಳಿಗೆ ಸಾವಿರದಷ್ಟು ದುಡ್ಡೆಂದರೆ, ಆ ಕಾಲಕ್ಕೆ ಕಡಮೆಯೆ? ಒಮ್ಮೊಮ್ಮೆ ನನ್ನ ಓದಿನ ಖರ್ಚೂ ಕೂಡ ಇದರಿಂದಲೇ ಗಿಟ್ಟುತ್ತಿತ್ತು. ಅಲ್ಲದೆ, ಎಲ್ಲದಕ್ಕು ಅಪ್ಪನಿಂದ ದುಡ್ಡು ಪೋಲು ಮಾಡಿಸುತ್ತಿಲ್ಲವೆಂದು ಹೆಮ್ಮೆ ಬೇರೆ. ಅವೇ ದಿನಗಳಲ್ಲಿ, ರಮೀತನೆಂತೊಬ್ಬ ಹುಡುಗ, ತಂಗಿ ಶೀತಲೆಯೆಂಬಳೊಟ್ಟಿಗೆ, ನನ್ನಲ್ಲಿ ಟ್ಯೂಷನ್ನಿಗೆ ಬರುತ್ತಿದ್ದ. ಮಹಾ ಮಹಾ ಶತದಡ್ಡ. ನನ್ನಿಂದ ಕಲಿಸಿಕೊಂಡಿದ್ದಕ್ಕಿಂತ, ತಪ್ಪು ಮಾಡಿ ಹೊಡೆಸಿಕೊಂಡಿದ್ದೇ ಹೆಚ್ಚು. ಪದೇಪದೇ ಹೇಳಿಕೊಟ್ಟಿದ್ದನ್ನೇ ಹೇಳಿಕೊಡುವುದೆಂದರೆ, ಯಾರಿಗಾದರೂ ತ್ರಾಸು ತಾನೇ? ಮೂರನೇ ಚಾಪ್ಟರಿಗೆ ಹೋಗುವ ಹೊತ್ತಿಗೆ, ಮೊದಲನೆಯದಷ್ಟೂ ಗೋತಾ ಅಂತಂದರೆ ಏನು ತಾನೇ ಹೇಳುವುದು? ಶಾಲೆಯ ಟೆಸ್ಟುಗಳಲ್ಲಿ ಪ್ರತಿ ಸಲವೂ ಫೇಲಾಗಿ, ಹಲವೊಮ್ಮೆ ಸೊನ್ನೆ ಸುತ್ತಿಸಿಕೊಂಡು ಬರುತ್ತಿದ್ದ. ಗಣಿತದಲ್ಲಿ, ನನಗೆ ಗೊತ್ತಿರುವ ಹಾಗೆ, ಅವನು ಹತ್ತು ದಾಟಿದ್ದೇ ಇಲ್ಲ. ತಕ್ಕುದಾಗಿ ಅವನ ಅಮ್ಮ ಪ್ರಕೃತಿ, ಮಗನನ್ನು ಹೇಗಾದರೂ ಮಾಡಿ ಉದ್ಧಾರ ಮಾಡು… ಅಂತ ಅತ್ತುಕೊಂಡು, ನಪಾಸಾದಾಗಲೆಲ್ಲ ಗೋಗರೆದು ದುಂಬಾಲು ಬೀಳುವಳು. ತನ್ನ ಹುಡುಗನ ಬಂಡವಾಳವಿಷ್ಟೇ ಅಂತ ಗೊತ್ತಿದ್ದೂ, ಕೆಲವೊಮ್ಮೆ, ನಾನು ಸರಿಯಾಗಿ ಕಲಿಸುತ್ತಿಲ್ಲವೆಂದು ಅವರಿವರಲ್ಲಿ ಗಾಸಿಪು ಮಾಡುವಳು. ಈ ಅವರಿವರ ಮಕ್ಕಳೂ ನನ್ನಲ್ಲಿಯೇ ಟ್ಯೂಷನಿಗೆ ಬರುತ್ತಿದ್ದರಾಗಿ, ಆಕೆಯ ಸಡಿಲಮಾತುಗಳು ಬೇಡವೆಂದರೂ ನನ್ನ ಕಿವಿಗೆ ಬೀಳುವವು. ಬೇಜಾರಾಗುತ್ತಿತ್ತು. ಹೀಗೆ ಬೇಸರವಾದಾಗಲೆಲ್ಲ, ಈ ರಮೀತ್ ಮಾಡುವ ಸಣ್ಣಪುಟ್ಟ ತಪ್ಪಿಗೂ- ಹೊಡೆದು, ತೊಡೆ ಜಿಗುಟಿ, ಕಿವಿ ಹಿಂಡಿ… ಹೀಗೆಲ್ಲ ಶಿಕ್ಷಿಸಿ ರೆಚ್ಚು ತೀರಿಕೊಳ್ಳುವೆನು! ಹಾಗಂತ, ಇದು ಬರೇ ಸೇಡಿನ ಮೇರೆಗಿನ ಶಿಕ್ಷೆಯಾಗಿತ್ತಂತಲೂ ಅಲ್ಲ. ಒಂಬತ್ತನೇ ತರಗತಿಯ ಹುಡುಗನಿಗೆ, ಆಗಾಗ ಇಂಟುವಿಗೂ ಪ್ಲಸ್ಸಿಗೂ ವ್ಯತ್ಯಾಸ ತಿಳಿಬರದೆ ಗುಣಿಸುವಲ್ಲಿ ಕೂಡಿಯೂ, ಕೂಡುವಲ್ಲಿ ಗುಣಿಸಿಯೂ, ತಪ್ಪು ಲೆಕ್ಕ ತಂದೊಪ್ಪಿಸಿದರೆ ಏನು ತಾನೇ ಮಾಡುವುದು? ಅವನಿಗೆ `ಬಾಡ್ಮಾಸ್’ ರೂಲನ್ನು ತಿಳಿಹೇಳುವಷ್ಟರಲ್ಲಿ, ನನ್ನ ಟೀಚರಿಕೆಯೇ ಡುಮುಕಿ ಹೊಡೆದಿತ್ತನ್ನಬೇಕು!
ರಮೀತ್ ದಪ್ಪನೆಯ ಗಾಜು ತೊಡುತ್ತಿದ್ದ. ಅವನ ಕನ್ನಡಕದ ಗಾಜಿನ ದಪ್ಪವನ್ನು ನೋಡಿದರೆ, ನಾನೇ ಕೆಲವೊಮ್ಮೆ ದಂಗುಬಡಿದು ಹೋಗುತ್ತಿದ್ದೆ. ಆ ಗಾಜುಗಳ ಮೂಲಕ ಕಾಣಿಸುವ ಅವನ ಕಣ್ಣುಗಳು, ಎಷ್ಟು ಪುಟ್ಟದಾಗಿ, ಅತ್ತಿತ್ತಲಾಡುವಾಗ ಎಷ್ಟು ವಕ್ರವಾಗಿ ತೋರುವವೆಂದರೆ- ಬಹುಶಃ, ಅವು ಸಂಕಲನ ಗುಣಾಕಾರಗಳನ್ನು ತಪ್ಪೆಣಿಸುವವೋ ಅಂತಲೂ ಒಮ್ಮೊಮ್ಮೆ ಅಂದುಕೊಂಡಿದ್ದು ಹೌದು. ಆದರೆ, ಉಳಿದಂತೆ ಅವನಿಗೆ ಲೋಕವು ನಿಚ್ಚಳವಾಗಿ ಕಾಣುತ್ತದೆಂದು ಗೊತ್ತಾಗಿದ್ದೇ, ನನ್ನ ಹಿಂಸೆಯ ಪ್ರಮಾಣವೂ ಹೆಚ್ಚುತ್ತಿತ್ತು.
ಹದಿನಾಲ್ಕನೇ ಕ್ರಾಸಿನಲ್ಲಿ ನಾವಿರುವ ಮನೆಯಿಂದ ಎಣಿಸಿಕೊಂಡು ಹೋದರೆ, ಐದನೆಯ ಕಟ್ಟಡದ ಮೇಲೆ- ಸಿಂಗಾರುವೇಲು ಎಂದು ಮಾರ್ಬಲಿನಲ್ಲಿ ಕೊರೆದಕ್ಷರಗಳ ಫಲಕವೊಂದಿತ್ತು. ಇವೊತ್ತಿಗೂ ಇದೆ; ಆ ಬಿಲ್ಡಿಂಗಿನಲ್ಲಿ ಎರಡನೇ ಮಹಡಿಯಲ್ಲಿ, ಟೆರೇಸಿಗೆ ತೆರೆದುಕೊಳ್ಳುವ ಎರಡು ರೂಮುಗಳ ಪುಟ್ಟ ಮನೆ ರಮೀತನದು. ಬಾಡಿಗೆಮನೆ; ಮುಂದೆ ತೆರಹಿನ ತಾರಸಿಯಿಟ್ಟುಕೊಂಡು, ಹಿಂದಿನರ್ಧದಲ್ಲಿ ಮಾತ್ರ ಇದ್ದಿತಾಗಿ, ಬೀದಿಯಿಂದ ನೋಡಿದರೆ ಇರುವುದೇ ಕಾಣುತ್ತಿದ್ದಿಲ್ಲವೆಂಬುದು ಇಲ್ಲಿ ಸುಮ್ಮಗೊಂದು ಮೆನ್ಶನು ಮಾತ್ರ.
ಇನ್ನು, ರಮೀತನ ಅಮ್ಮ ಪ್ರಕೃತಿ- ನನಗೆ ನೆನಪಿರುವ ಹಾಗೆ, ಅಪ್ರತಿಮ ಚೆಲುವೆ. ಚೆನ್ನೆನ್ನಲಿಕ್ಕೆ ಯಾವ ಯಾವ ಅವಯವಗಳು ಎಲ್ಲೆಲ್ಲಿ ಎಷ್ಟೆಷ್ಟು ಸಪ್ರಮಾಣವಿರಬೇಕೋ, ಅಷ್ಟಷ್ಟೇ ಇದ್ದು, ಎರಡು ದೊಡ್ಡ ಮಕ್ಕಳಿದ್ದರೂ, ಮಾಧುರಿ ದೀಕ್ಷಿತಳನ್ನು ನಾಚಿಸುವಷ್ಟು ಚೆಲುವು ಹೊಂದಿದ್ದಳು. ತನ್ನ ಗಂಡನ ಬದಿಯಲ್ಲಿ ನಡೆಯುವಾಗ, ನೋಡಿದವರು ಆತನ ಮಗಳೆನ್ನಬೇಕು, ಹಾಗಿದ್ದಳು. ಆಕೆಯನ್ನು ನಾನು ಆಂಟಿ ಅನ್ನುತ್ತಿದ್ದೆನಾದರೂ, ನನ್ನೊಳಗಿನ ರಸಾಯನವು ಮಾತ್ರ- ಅವಳನ್ನು ಹಾಗೆ ಕಲ್ಪಿಸಿಕೊಳ್ಳುವುದು ಅಪಚಾರವೆಂದೇ ಬಗೆಯುತ್ತಿತ್ತು! ಒಮ್ಮೆ ಅವಳು, ನನ್ನಲ್ಲಿ ಬಂದು, `ಲಿಡೋ ಥೇಟರಿನಲ್ಲಿ ಮಿಸ್ಟರ್ ಇಂಡಿಯಾ ಬಂದಿದೆ… ನನ್ನ ಮಕ್ಕಳನ್ನು ಕರಕೊಂಡು ಹೋಗಿಬರುತ್ತೀಯಾ, ಪ್ಲೀಸ್. ನಿನಗೂ ಸೇರಿಸಿ ಇವರಿಬ್ಬರಿಗೂ ಆಗುವಷ್ಟು ದುಡ್ಡು ಕೊಡುತ್ತೀನಿ…’ ಎಂದು ನೂರೈವತ್ತು ರುಪಾಯಿ ಕೊಟ್ಟಿದ್ದಳು. ಬಿಟ್ಟಿಯೊಲಿದ ಲಕ್ಷ್ಮಿ! ಯಾರಿಗುಂಟು ಯಾರಿಗಿಲ್ಲ?! ಆ ಭಾನುವಾರ, ರಮೀತ್-ಶೀತಲೆಯರನ್ನು ದಿನವಿಡೀ ಊರು ಸುತ್ತಿಸಿಕೊಂಡು ಬಂದಿದ್ದಾಯಿತು. ಸಿನೆಮಾದಲ್ಲಿ, ಶ್ರೀದೇವಿ ತೆಳ್ಳನೆಯ ಶಿಫಾನುಟ್ಟುಕೊಂಡು- `ಕಾಟೇ ನಹೀ ಕಟತೇ – ಯೆ ದಿನ್ ಯೆ ರಾತ್…’ ಎಂದು, ಸೊಂಟ ಕುಲುಕಿ ಬಳುಕುವಾಗ, ಈ ಪ್ರಕೃತಿಯೇ ನನ್ನೆದುರು ತಳೆದುಬಂದಂತಾಗಿತ್ತು!
ಇಂತಹ ಪ್ರಕೃತಿ, ಇದ್ದಕ್ಕಿದ್ದಂತೆ ಮನೆ ಬಿಟ್ಟುಹೋದಳೆಂದು- ನಾವಿರುವ ಬೀದಿಯಲ್ಲೊಂದು ಬೇಸಿಗೆಯಲ್ಲಿ ಗುಲ್ಲಾಯಿತು. ರಮೀತ್ ನನ್ನಲ್ಲಿಗೆ ಪಾಠಕ್ಕೆ ಬರುವಾಗಲೆಲ್ಲ, ರಸ್ತೆಯ ಕೊನೆಯಲ್ಲಿ ಅಂಗಡಿಯಿಟ್ಟುಕೊಂಡಿರುವ ಮಂಗಳೂರು ಕಡೆಯ ಅಕ್ಕಸಾಲಿಯೊಬ್ಬ, ಸದರಿ ಸಿಂಗಾರುವೇಲು-ಮನೆಯ ಕೊನೆಯ ಮಹಡಿಯೇರುತ್ತಿದ್ದನೆಂದೂ, ಇದೇ ಗುಮಾನಿಯ ನಡುವೆ ಗೊತ್ತುಗುರಿಯಿಲ್ಲದೆ ಆಡಲಾಯಿತು. `ಹೇಗಿದ್ದರೂ ರೋಡಿನಿಂದ ನೋಡಿದರೆ ಮನೆಯಿರೋದೇ ಕಾಣಿಸುಲ್ಲ… ಏನೇನು ಮಾಡುತಿದ್ದಳೋ…’ ಅನ್ನುವುದೂ, ಇದೇ ಮೇರೆಗೆ ಮುಂದುವರಿಸಿದ ಕೊಸರೇ ಅನ್ನಬೇಕು.
ಇವೆಲ್ಲ ಆದಮೇಲೆ, ನಾನು ರಮೀತನನ್ನು ನೋಡಿದ ನೆನಪಿಲ್ಲ.
****
ಅಫೀಸಿನ ಎಲ್ಲ ಹುಡುಗರನ್ನೂ ಬೀಳ್ಕೊಟ್ಟ ಮೇಲೆ, ರೀನಾ, ನಾನು ಸಹಿ ಮಾಡಲಿಕ್ಕಿದ್ದ ಒಂದಷ್ಟು ಕಾಗದಪತ್ರಗಳನ್ನೂ, ಚೆಕ್ಕುಗಳನ್ನೂ ತಂದು ಮೇಜಿನಲ್ಲಿರಿಸಿದಳು. `ಆ ಹುಡುಗ ಇನ್ನೂ ಇದ್ದಾನಾ?’ ಎಂದು ಶಾರ್ದೂಲನ ಬಗ್ಗೆ ಕೇಳಿದೆ. `ಇಲ್ಲ ಸರ್… ಒಂದು ಹತ್ತು ನಿಮಿಷ ಬಿಟ್ಟು ಬರುತ್ತೀನೀಂತ ಹೋದ. ಇನ್ನೂ ಬಂದಿಲ್ಲ….’ ಅಂದಳು. `ಆಗಲೇ ಎಂಟಾಗುತ್ತ ಬಂತು… ಈವೊತ್ತಾಗಲ್ಲ ಅಂತ ಹೇಳಿಬಿಡಬೇಕಿತ್ತು…’ ಎಂದು, ಕೈವಾಚು ನೋಡಿಕೊಂಡು ಹೇಳಿದೆ.
`ಮೋಸ್ಟ್ಲೀ ಬರಲ್ಲ ಅನಿಸುತ್ತೆ, ಸರ್… ಅಲ್ಲದೆ ಅವನ ನಂಬರಿಸಕೊಂಡಿದ್ದೀನಿ. ಬೇಕಿದ್ದರೆ, ಫೋನು ಮಾಡಿ ಈವೊತ್ತು ಬೇಡ ಅಂತ ಹೇಳಿಬಿಡುತ್ತೀನಿ…’ ರೀನಾ ಹೇಳಿದ್ದಕ್ಕೆ ಪ್ರತಿಕ್ರಿಯಿಸದೆ, `ಕೆಳಗೆ ಹೋಗಿ ಬೀದಿಯಲ್ಲಿರೋ ಕೆಮೆರಾಗಳನ್ನ ನೋಡಿದೆಯಾ?’ ಚೆಕ್ಕುಗಳ ಮೇಲೆ ಸೈನುಗೈಯುತ್ತ ಕೇಳಿದೆ.
`ಇಲ್ಲ ಸರ್… ಮನೆಗೆ ಹೋಗುವಾಗ ನೋಡುತ್ತೀನಿ. ಹಾಗೇನಾದರೂ ಪ್ರಾಬ್ಲೆಮಿದ್ದರೆ, ಕೆಳಗಿಂದಲೇ ನಿಮಗೆ ಫೋನು ಮಾಡುತ್ತೀನಿ…’
`ಹಾಗೇ, ನಾಳೆ ಆಫೀಸಿನ ಕೆಮರಾಗಳನ್ನೊಮ್ಮೆ ಚೆಕ್ ಮಾಡಿಸಿಬಿಡು…’ ಎಂದು, ರುಜುವಿಕ್ಕಿದ ಕಾಗದಪತ್ರಗಳನ್ನು, ರೀನಾಳಿಗೆ ವಾಪಸಿತ್ತು ಹೇಳಿದೆ. ಯೆಸ್ಸರ್ ಅನ್ನುತ್ತ ರೀನಾ ಸರಿದುಹೋದಳು.
ಈ ನಡುವೆ, ಅಮ್ಮನಿಗೆ ಫೋನುಗೈದು- ರಮೀತ್ ಮತ್ತು ಶೀತಲೆಯರ ಬಗ್ಗೆ ಆಡಬೇಕೆಂದು ಡಯಲಿಸಿದೆ. ಎಷ್ಟು ರಿಂಗಾದರೂ ಅವಳು ಫೋನೆತ್ತಲಿಲ್ಲ. ಕೂಡಲೆ, ನನ್ನ ಹೆಂಡತಿಗೆ ಫೋನು ಮಾಡಿದೆ. `ಒಂದೈದು ನಿಮಿಷಾರೀ, ಒಲೇ ಮೇಲೆ ಹಾಲಿಟ್ಟಿದ್ದೀನಿ… ವಾಪಸು ಮಾಡುತ್ತೀನಿ…’ ಎಂದು ಕಡಿದಳು.
`ಸರ್… ಈ ಗ್ಲಾಸ್ ಡೋರನ್ನ ಕ್ಲೋಸ್ ಮಾಡಿಕೊಂಡು ಹೋಗಲಾ?’ ಎಂದು ರೀನಾ, ಕೆಳಗಿನಿಂದಲೇ ಕೂಗಿ ಕೇಳಿದಳು. `ಓಪನ್ನಿರಲಿ ಬಿಡು. ನಾನೂ ಕೆಳಗೆ ಹೋಗುತ್ತಿದ್ದೀನಿ… ಐ ನೀಡ್ಟು ಸೀ ಮೈ ಮದರ್…’ ಅಂತಂದು ರೀನಾಳನ್ನು ಸಾಗಹಾಕಿದೆ.
****
ಕಂಪ್ಯೂಟರಾಫುಗೈದು, ಮೇಜಿನ ಮೇಲೆ ನೇರಬೆಳಕೀಯುವ ಲೈಟುಗಳನ್ನೂ ನಂದಿಸಿ, ಮನೆಗೆ ಹೋಗೋಣವೆಂದುಕೊಂಡು ಮೊಬೈಲು ಹೆಕ್ಕಿಕೊಂಡೆನಷ್ಟೆ, ಯಾರದೋ ಮೆಸೇಜು ಬೀಪಿಸಿಬಂತು. ವಾಟ್ಸ್ಯಾಪು. ಇನ್ನೇನು ತೆರೆದು ಓದಬೇಕೆನ್ನುವಷ್ಟರಲ್ಲಿ, ಮೇಜಿನಾಚೆಯಿಂದ- `ಗುಡೀವನಿಂಗ್ ಸರ್…’ ಎಂದು ಗಂಡುದನಿಯಾಯಿತು. ಯಾರಂತ ಕಾಣಬರಲಿಲ್ಲ. ಕಣ್ಣಿಡುಕಿ ದಿಟ್ಟಿಸಿದೆ. ಯಾರೀತ? ಶಾರ್ದೂಲನೆಂಬಾತನೆ? ಈ ಹೊತ್ತಿನಲ್ಲಿ ವಕ್ಕರಿಸುವುದೆ? ಥತ್ತ್… ಇನ್ನೊಂದು ತಾಸು ಎಕ್ಕುಟ್ಟಿದಂತೆಯೇ ಸೈ… ಅಂತೆಲ್ಲ ಮನಸ್ಸಿನಲ್ಲೇ ಅಂದುಕೊಂಡು, ಒಳಗೆ ಬಂದಾದವನನ್ನು ಹೋಗೆನ್ನುವುದು ತರವಲ್ಲವೆಂದು ಬಗೆದು, ಎದ್ದು ನಿಂತಿದ್ದವನು ವಾಪಸು ಕುಳಿತು, `ಕಮ್ಮ್ ಕಮ್ಮ್…’ ಎಂದು, ಒತ್ತಾಯದ ನಗೆ ತಾಳಿ, ಬರಮಾಡಿಕೊಂಡೆ. ತುಸುಯೆತ್ತರದ ತೆಳ್ಳಗಿನ ಆಸಾಮಿ, ದಪ್ಪ ಗಾಜು ತೊಟ್ಟು ಬಳಿಸಾರಿದ್ದೇ, ಫಕ್ಕನೆ ಗುರುತು ಹತ್ತಿತು. ಹೌದು. ರಮೀತ್!
ಅಬ್ಬಾ… ಇದೇನು ಕಾಕತಾಳೀಯವೆ? ಅಮ್ಮ ಅನುಭವಿಸಿದ ದೇಜಾವೂ ಹಕೀಕತೆ? ಕಣ್ಕಟ್ಟೆ? ಇದೇನಿದು? ನಿಖರವಾಗಿ ಏನು? ಇವನೇ ಶಾರ್ದೂಲನೆ? ನೆನೆಯಲಾಕ್ಷಣ ಬಂದೊದಗಬಲ್ಲ ಪುರುಷೋತ್ತಮನೆ? ಪ್ರಶ್ನೆಗಳೊಟ್ಟಿಗೆ ಕಟ್ಟಚ್ಚರಿಯೂ ತುಂಬಿ ತುಳುಕಿತು.
ರಮೀತ್, ಗಡ್ಡ ಬಲಿತ ವಯಸ್ಕನಂತೆ ಕಾಣಿಸಿದನೇ ಹೊರತು, ಮುಖದ ಚಹರೆಯಲ್ಲೇನೂ ಬದಲಾವಣೆ ಕಾಣಲಿಲ್ಲ. ಅದೇ ಚೂಪುಗದ್ದದ ಮೋರೆ. ಅದೇ ದಪ್ಪ ಗಾಜು ಮತ್ತು ತನ್ಮೂಲಕ ವಕ್ರೀಭವಿಸಿ ತೋರುವ- ಅವವೇ ಚಿಕ್ಕಚಿಕ್ಕನೆ ಕಣ್ಣುಗಳು. `ನಮಸ್ಕಾರ, ಸರ್ರ್… ಡು ಯು ರಿಮೆಂಬರ್ ಮಿ?’ ಎಂದು ನಲಿದುಕೊಂಡು ಆಡಿದ. `ಅಯಾಮ್ ರಮೀತ್… ನಿಮ್ಮಲ್ಲಿ ಸೈನ್ಸು ಮ್ಯಾತ್ಸು ಕಲಿಯೋಕೆ ಬರುತ್ತಿದ್ದೆ…’ ಎಂದು ಬಲಗೈ ನೀಡಿ, ಕುಲುಕುವ ನಡುವೆ ಹೇಳಿದ. ಕುಲುಕಿನಷ್ಟೇ ಕರಗ್ರಹಣವೂ ಅಳ್ಳಕವೆನ್ನಿಸಿತು. `ಕೂತುಕೊಳ್ಳಯ್ಯಾ… ಹೇಗಿದ್ದೀ ನೀನು?’ ಎನ್ನುತ್ತ, ಅವನ ಬಡಕಲು ಮೈಯಾಯವನ್ನು ತದೇಕ ನೋಡಿ ವಿಚಾರಿಸಿಕೊಂಡೆ. `ಏನು ಮಾಡುತಿದ್ದೀ? ಎಲ್ಲಿ ಕೆಲಸದಲ್ಲಿದ್ದೀ? ಶೀತಲ್ ಹೇಗಿದ್ದಾಳೆ? ಹಾಗೇ ನಿನ್ನ ಅಪ್ಪ?’ ದಡಬಡಿಸಿ ಆಡುವಾಗ, `ನಿನ್ನ ಅಮ್ಮ?’ ಅಂತೆಂಬ ಪ್ರಕೃತಿಯವರೆಗಿನ ಮಾತನ್ನು, ಮನಸ್ಸಿನೊಳಗೇ ರಾಜಕೀಯ ನಡೆಸಿ ತಡೆದೆ.
ಒಂದಷ್ಟು ಕುಶಲೋಪರಿಗಳ ಬಳಿಕ ಮಾತಿಗಿಳಿದ.
`ಏನು ಮಾಡೋದು ಹೇಳಿ, ಸರ್… ನಾನು ನಿಮ್ಮಷ್ಟು ಬುದ್ಧಿವಂತನಲ್ಲ. ಬದುಕು ಎಲ್ಲದರಲ್ಲೂ ನನಗೆ ಮೋಸ ಮಾಡಿಬಿಟ್ಟಿತು. ಹಾಗೂ ಹೀಗೂ ಪಿಯೂಸಿ ಪಾಸು ಮಾಡಿದೆ. ಆಮೇಲೆ ಬೀಬೀಎಮ್ಮಂತ ಸುರುಹಚ್ಚಿಕೊಂಡೆ. ಮುಗಿಸಲಿಲ್ಲ. ಒಟ್ಟಿನಲ್ಲಿ ಅದೃಷ್ಟ ನನ್ನ ಪರವಿಲ್ಲ ಅಷ್ಟೆ…’ ನಿಡುಸುಯ್ದ. `ಯಾವುದೋ ನಂಬಿಕೆಯ ಮೇರೆಗೆ ಇದ್ದೀನಿ… ಹೀಗೆ ಬದುಕಿದ್ದೀನಿ…’ ಎಂದು ತನ್ನ ತಾನು ನೋಡಿಕೊಂಡು, ಭುಜ ಕುಲುಕಿದ.
`ಏಯ್ಯ್… ಎಷ್ಟು ವಯಸ್ಸೋ ನಿನಗೆ? ಒಳ್ಳೇ ವಿರಾಗಿಗಳ ಹಾಗೆ ಮಾತಾಡುತ್ತೀ…’ ಥಟಕ್ಕನೆ ಗದರಿದೆನಾದರೂ, ಸಂದುಹೋದ ಕಾಲವನ್ನು ಗಣಿಸಿ, ಇಬ್ಬರ ವಯಸ್ಸಿನ ಅಂತರವನ್ನು ಎಣಿಸಿ, ತಾಳೆಗೈದು, ಇವನಿಗೂ ಮೂವತ್ತೈದಿದ್ದೀತೆಂದು ಅಂದುಕೊಂಡೆ.
`ಇನ್ನೇನು, ಸರ್, ಮಾಡಲಿ… ಇನ್ನೂ ಮದುವೆಯಾಗಿಲ್ಲ. ಶೀತಲ್ಗೆ ಗಂಡು ಹುಡುಕುತ್ತಾ ಇದ್ದೀವಿ. ಯಾವುದೂ ಸೆಟ್ಟಾಗುತ್ತಾ ಇಲ್ಲ. ಬಂದೋರೆಲ್ಲ ನನ್ನ ಅಮ್ಮನ ವಿಷಯ ತಿಳಿಯುತ್ತಲೇ ಬೇಡ ಅಂದುಬಿಡುತ್ತಾರೆ… ಸಾಲದುದಕ್ಕೆ ನನ್ನ ಅಮ್ಮ ಕೂಡ ವಾಪಸು ಬಂದು ನಮ್ಮ ಜೊತೇನೇ ಇದ್ದಾಳೆ. ಅಪ್ಪನಿಗೂ ವಯಸ್ಸಾಯಿತು… ವರ್ಷದ ಹಿಂದಿನವರೆಗೂ ಒಂದು ಕೆಲಸದಲ್ಲಿದ್ದೆ. ಮಾರ್ಕೆಟಿಂಗಿನಲ್ಲಿ. ಏನೋ ತಪ್ಪು ಲೆಕ್ಕ ಮಾಡಿ, ದೊಡ್ಡ ರಖಮು ಮೈಮೇಲೆ ಬಂದುಬಿಟ್ಟಿತು. ಬಿಡಬೇಕಾಯಿತು… ಈವೊತ್ತಿಗೂ ನನಗೆ ಗಣಿತ ಬರಲ್ಲ, ಗೊತ್ತಾ!’ ಅನ್ನುತ್ತ ವಿಷಣ್ಣವಾಗಿ ನಕ್ಕ.
`ಹೋಗಲಿ ಬಿಡು… ಇನ್ನೇನು ವಿಷಯ?!’ ಪಿಚ್ಚೆನಿಸಿ, ಮಾತು ಬದಲಿಸುವತ್ತ ವಿಷಯ ಹೊಂಚಿ ಕೇಳಿದೆ.
`ವಿಷಯ ಸಾಕಷ್ಟಿದೆ, ಸರ್… ಹೇಗೆ ಹೇಳಬೇಕೂಂತ ಗೊತ್ತಾಗುತ್ತಿಲ್ಲ…’
`ಹೇಳು ಪರವಾಗಿಲ್ಲ…’
`ಒಂದು ಮನೆ ಕಟ್ಟಬೇಕೂಂತಿದ್ದೀನಿ… ಅದಕ್ಕೇ ನಿಮ್ಮಲ್ಲಿಗೆ ಬಂದಿದ್ದು…’
`ಹೇಳು. ಎಲ್ಲಿ? ಎಷ್ಟು ದೊಡ್ಡ ಸೈಟು…’
`ಒಂದು ದೊಡ್ಡ ಸ್ವಿಮ್ಮಿಂಗ್ ಪೂಲು ಕಟ್ಟಬೇಕು, ಕೊನೇ ಮಹಡಿಯಲ್ಲಿ… ಅಗುತ್ತಾ ಸರ್? ನಲವತ್ತಡಿ ಉದ್ದ, ಇಪ್ಪತ್ತಡಿ ಅಗಲದ್ದು… ಆಗುತ್ತಾ ಹೇಳಿ…’
`ಆಗುತ್ತೆ ಕಣಯ್ಯ… ಆದರೆ ಅದಕ್ಕೆ ಬೇಕಾಗೋ ನೀರೆಲ್ಲಿಂದ ಹೊಂಚುತ್ತೀಯಾ? ಈ ಊರಿನಲ್ಲಿ ಮಳೆಯಿಲ್ಲ. ನೆಲದೊಳಗೆ ಜಲ ಇಲ್ಲ. ಕೆರೆಗಳೆಲ್ಲ ಬತ್ತಿ ಹೋಗಿವೆ… ನೀ ಹೇಳೋ ಅಳತೆಯ ಕೊಳ ಅಂದರೆ ಲಕ್ಷ ಲೀಟರು ನೀರು ಬೇಕು. ಎಲ್ಲಿಂದ ತರುತ್ತೀಯ ಹೇಳು. ಅದನ್ನ ತರೋದು ಹೆಚ್ಚಲ್ಲ, ಅದನ್ನ ಮೇಂಟೇನು ಮಾಡೋದು ಕಷ್ಟ…’
`ಕ್ಲೋರಿನ್ ಹಾಕಬಹುದಲ್ಲವಾ, ಸರ್… ನನ್ನ ಅಪ್ಪನಿಗೆ ಈಜೋದೂಂದರೆ ಬಲು ಇಷ್ಟ. ಬದುಕಿನಲ್ಲಂತೂ ಮುಳುಗಿಬಿಟ್ಟಿವಿ. ಹೀಗಾದರೂ ಈಸಿಕೊಂಡಿರಬಹುದಲ್ಲವಾ ಅಂತಾರೆ!’
`ಸರಿ ಹೋಯಿತು… ಈಗೇನಾಗಿದೆ ಅಂತ ಹೀಗೆಲ್ಲ ಮಾತಾಡುತ್ತೀಯಾ? ಈಸಿಟ್ಟೆನ್ ಆಬ್ಲಿಗೇಶನ್ ಟು ಲಿವ್? ಬದುಕೋದು ನಿನ್ನ ಹಕ್ಕು ಕಣಯ್ಯಾ… ಅದಕ್ಕೆ ಸಮಾಜಾಯಿಷಿ ಯಾಕೆ? ಮುಲಾಜೇಕೆ?’ ಎಂದು ಫಿಲಸಫಿಗೆ ತೊಡಗಿದವನು, ಬೇಡವೆಂದು ನನ್ನಾನೇ ತಡೆದು, `ಅದಿರಲಿ… ಎಷ್ಟು ದೊಡ್ಡ ಸೈಟೂಂತ ಮೊದಲು ಹೇಳು. ಬಡ್ಜೆಟ್ಟೆಷ್ಟಿದೆ?’ ಎಂದು ಕೇಳಿದೆ.
`ಹದಿನೈದು ಕೋಟಿ ಇದೆ, ಸರ್ರ್… ಐ ಮೀನ್ ಇಲ್ಲ… ಆದರೆ ಬರೋದಿದೆ…’
`….!!!’
`ನಿಮಗೆ ಶಿವಾಜಿ ಟಾಕೀಸ್ ಗೊತ್ತಲ್ಲ, ಅದೇ ಜೇಸೀರೋಡಿನಲ್ಲಿದೆಯಲ್ಲ… ಅದು. ಇಷ್ಟು ದಿವಸ ಲಿಟಿಗೇಷನ್ನಿನಲ್ಲಿತ್ತು… ಈಗ ಎಲ್ಲ ಕ್ಲಿಯರಾಗೋ ಹಾಗಿದೆ…’
`ವ್ವಾಟ್?!’ ಬೆಳಗ್ಗೆಯಷ್ಟೇ ನೋಡಿದ, ಟಾಕೀಸಿನ ಅರ್ಧಂಬರ್ಧ ಹಿಸ್ಸೆಗಳು ಮರಳಿ ಮೂಡಿಬಂದವು. ರಮೀತ್ ನನ್ನ ಉದ್ಗಾರವನ್ನು ಅವಗಣಿಸಿ ಮುಂದುವರಿಸಿದ. `…ಅಷ್ಟು ದುಡ್ಡು ಬಂದರೆ, ಒಂದೈದು ಕೋಟಿ ಸಾಲ ಇದೆ… ತೀರಿಸಿಬಿಟ್ಟು, ಉಳಿದಿದ್ದರಲ್ಲಿ ಒಂದು ಸೈಟು ತಗೊಂಡು, ಒಂದು ಮೂರು ಕೋಟಿ ಹೂಡಿ, ಮನೆ ಮಾಡಿ ಆರಾಮಾಗಿರಬೇಕೂ ಅನ್ನೋ ನಂಬಿಕೆ ಇದೆ… ಐ ಮೀನ್ ಆಲಪ್ಫಸ್ ಆರ್ ಚೇಸಿಂಗ್ ದಿಸ್ ಹೋಪ್ ದಟ್- ಇಟ್ ವಿಲ್ಲಾಲ್ ಬಿ ಬೆಟರ್, ಯು ನೋ….’
ನನ್ನ ಆಶ್ಚರ್ಯವೂ, ಅವಾಕ್ಕೂ ಒಮ್ಮೆಗೇ ದುಪ್ಪಟ್ಟಾದವು. `ಹುಹ್ಹ್… ಏನೋ ಅಂದುಕೊಂಡಿದ್ದೆ… ಅವೆಲ್ಲ ಬಂದ ಮೇಲೆ ನನ್ನನ್ನು ಬಂದು ನೋಡು…’ ಎಂದು ಮಾತು ಮೊಗೆದು ಕೂಡಿಕೊಂಡು, ಖಡಕ್ಕಾಗಿ ಆಡಿದೆ. `ಐ ಮೀನ್, ನಿನ್ನ ನಂಬಿಕೆ ವಾಸ್ತವವಾಗುವ ಹೊತ್ತಿನಲ್ಲಿ ನೀನು ಭೇಟಿ ಮಾಡೋದು ಒಳ್ಳೇದು…’
`ಇಷ್ಟು ವರ್ಷ ಆಗಿಹೋದವಲ್ಲ, ಸರ್, ಏನೋ ನೀವು ಬದಲಾಗಿರುತ್ತೀರಿ- ಅಂದುಕೊಂಡಿದ್ದೆ. ಬಟ್ ಯು ಆರ್ ದಿ ಸೇಮ್… ಉಳ್ಳವರು ಇಲ್ಲದವರ ಬಗ್ಗೆ ಮಾತಾಡೋದು ಹೀಗೇನೆ… ಆದರೆ ನನ್ನ ಬಳಿ ಈ ಕನಸಿದೆ, ಸರ್… ಕೈಗೂಡಿಯೇ ಕೂಡುತ್ತೆ.. ಅಯಾಮ್ ಚೇಸಿಂಗ್ ದಟ್ ಹೋಪ್ ಅಂದೆನಲ್ಲ…’ ಎಂದು ನಿಧಾನವಾಗಿ ದನಿ ತಗ್ಗಿಸಿ ಆಡಿ, ಇದ್ದಕ್ಕಿದ್ದಂತೆ, `ಹ್ಞಾಂ ಸರ್… ನಿಮಗೆ ಗೊತ್ತಿಲ್ಲ ಅನ್ನಿಸುತ್ತೆ. ನಾನೊಂದು ಸೆಕ್ಯುರಿಟಿ ಸಿಸ್ಟಮ್ಸ್ ಏಜೆನ್ಸಿ ನಡೆಸುತ್ತೀನಿ… ಈ ಬೀದಿಯಲ್ಲಿ, ಟೆಂಪಲ್ ಮತ್ತು ಈ ಸ್ಕೂಲಿನಲ್ಲಿರೋ ಕೆಮೆರಾಗಳನ್ನೆಲ್ಲ ನಿಭಾಯಿಸುತ್ತಿರೋನು ನಾನೇ…’ ಅಂತಂದ.
ಎಂತಹ ಆಘಾತಕಾರಿ ವಿಷಯ! ಹೌಹಾರಿಹೋದೆ.
`ಯೆಸ್ಸರ್…. ನೀವು ನನ್ನನ್ನ ನೋಡಿಲ್ಲದಿದ್ದರೂ ನಾನು ನಿಮ್ಮನ್ನ ಆಗಿಂದಾಗ ನಿಮ್ಮನ್ನ ನೋಡುತ್ತಾನೇ ಇರುತೀನಿ… ಐ ಮೀನ್ ವೆನ್ನೆವರ್ ಐ ಕಮ್ಮ್ ಫಾರ್ ಮೇಂಟೆನೆನ್ಸ್… ನಿಮ್ಮ ಚಲನವಲನ, ನಿಮ್ಮ ಗತ್ತು, ಸಿಟ್ಟು ಸೆಡಹು… ಇವೆಲ್ಲ ನನಗೆ ಚೆನ್ನಾಗಿ ಗೊತ್ತು. ಕಳೆದ ಮೂರು ವರ್ಷಗಳಿಂದ ನಿಮ್ಮ ಈ ಆಫೀಸಿನಲ್ಲಿ ಏನೇನಾಗುತ್ತೆ ಅಂತ ನನಗೆ ಚೆನ್ನಾಗಿ ಗೊತ್ತು….’
`ಏನಯ್ಯಾ, ಹೆದರಿಸುತ್ತಿದ್ದೀಯೆ?’ ಎಂದು, ಮೇಲೆ ತಮಾಷೆ ಮಾಡಿದರೂ, ಒಳಗೇ ಕಸಿವಿಸಿಯಿಟ್ಟುಕೊಂಡು, ಒತ್ತಾಯಕ್ಕೆ ನಕ್ಕೆ.
`ಯೆಸ್ಸ್… ಐ ಹ್ಯಾವ್ ಬೀನ್ ವಾಚಿಂಗ್ ಯು… ನಿಮ್ಮನ್ನು ನೋಡಿದಾಗಲೆಲ್ಲ, ನೀವು ಇಪ್ಪತ್ತೆರಡು ಇಪ್ಪತ್ತು ಮೂರು ವರ್ಷಗಳ ಹಿಂದೆ, ನನಗೆ ಕೊಡುತ್ತಿದ್ದ ಶಿಕ್ಷೆ ಮತ್ತು ಹಿಂಸೆ ನೆನಪಾಗುತ್ತೆ… ಹೇಗೆ ಕೈಯ ಗಿಣ್ಣಿನ ಮೇಲೆ ಹೊಡೀತಿದ್ದಿರಿ ಅಲ್ಲಾ? ಹೇಗೆ ತೊಡೆ ಹಿಂಡಿ ಜಿಗುಟುತಿದ್ದಿರಿ… ನೆನಪಿದೆಯಾ, ನಿಮಗೆ?’ ಈಗ ರಮೀತನ ಧ್ವನಿ ಗಡಸಾಗಿತ್ತು.
`ರಮೀತ್… ನೀನು ಬಂದಿದ್ದು ಇದನ್ನೆಲ್ಲ ನೆನಪಿಸಲಿಕ್ಕಾ, ಹೇಳು. ಇವೆಲ್ಲ ಯಾರದೇ ಬೆಳವಣಿಗೆಯಲ್ಲಿ ಒಂದು ಸ್ಥಿತಿ ಅಷ್ಟೇ ಅಲ್ಲವಾ? ಇದನ್ನೆಲ್ಲ ಯಾಕೆ ನೆನಪಿನಲ್ಲಿಟ್ಟುಕೊಂಡಿದ್ದೀ? ಯಾಕೆ ನನ್ನೆದುರು ಹೇಳುತಿದ್ದೀ…’
`ಸರ್… ನಿಮಗೆ ಅರ್ಥ ಆಗಲ್ಲ. ನನ್ನ ಅಮ್ಮ ನನ್ನನ್ನ ನಿಮ್ಮ ಹತ್ತಿರ ಕಳಿಸುತ್ತಿದ್ದಿದ್ದು ಪಾಠ ಹೇಳಿಸಲಿಕ್ಕಲ್ಲ… ನನ್ನನ್ನ ಇಲ್ಲಿ ಕಳಿಸಿ ತಾನು ಮಜಾ ಮಾಡಲಿಕ್ಕೆ… ನಿಮಗೆ ಗೊತ್ತಾ, ನಾನೂ ಶೀತಲ್ ಏನೇನೆಲ್ಲ ಅನುಭವಿಸಿದ್ದೀವೀಂತ… ಮನೆಗೆ ಹೋದರೆ ಅಲ್ಲೊಂದು ಬಗೆಯ ಹಿಂಸೆ. ಇಲ್ಲಿ ಬಂದರೆ ಇಲ್ಲೂ ಇನ್ನೊಂದು ಹಿಂಸೆ…’
`ಛೇ… ಸ್ಸ್… ಸ್ಸಾರಿ ಕಣಯ್ಯಾ… ಅವನ್ನೆಲ್ಲ ಮನಸ್ಸಿನಲ್ಲಿಟ್ಟುಕೋಬೇಡ… ಈಗ ಏನೋ ಸ್ವಿಮ್ಮಿಂಗ್ ಪೂಲ್ ಬಗ್ಗೆ ಆಡಿದೆಯಲ್ಲ, ಅದನ್ನ ಮುಂದುವರಿಸು…. ಪ್ಲೀಸ್…’
`ನೋ ವೇ…’ ಕುಹಕದ ನಗು ನಕ್ಕ. ಅದು ಗಹಗಹಿಸಿ ದೊಡ್ಡದಾದಂತನ್ನಿಸಿತು. `ನೀವೇ ಹೇಳಿದಿರಲ್ಲ, ಸರ್… ನಂಬಿದ್ದು ನಿಜವಾಗುವ ಸಮಯದಲ್ಲಿ ಮಾತ್ರ ಅದನ್ನು ಆಡಬೇಕು…’
ರಮೀತನೇಕೋ ಸಂತುಲನೆ ತಪ್ಪಿದ್ದಾನಂತನ್ನಿಸಿತು. ಗಾಜೊಳಗಿನ ಕಣ್ಣುಗಳು ಜೋಲಿ ಹೊಡೆಯುತ್ತಿದ್ದವು. `ಸರಿ… ಇನ್ನು ನೀನು ಹೊರಡು, ರಮೀತ್, ಇನ್ನೊಂದು ಸಲ ನಿನ್ನ ಮೂಡು ಚೆನ್ನಾಗಿದ್ದಾಗ ಬಂದು ನೋಡು…’ ಅಂತಂದೆ.
ಅಷ್ಟರಲ್ಲಿ ಮೊಬೈಲು ರಿಂಗಾಯಿತು. ಅಮ್ಮನ ಕರೆ. ಇವನ್ನು ಸಾಗಹಾಕಿ ಮಾತನಾಡೋಣವಂತ, ಸೈಲೆಂಟು ಮಾಡಿದೆ.
`ಸರ್… ನಿಮಗಿನ್ನೊಂದು ವಿಷಯ ಹೇಳಬೇಕಿತ್ತು… ನಿಮ್ಮ ಆಫೀಸೊಳಗಿನ ಕೆಮೆರಾಗಳೂ ಅಲ್ಲದೆ, ಬೀದಿಯಲ್ಲಿರೋವು ಕೂಡ ಆಫಾಗಿದೆ ಅಂತ ನಿಮಗೆ ಗೊತ್ತಾ? ವೆಲ್ಲ್… ದಿಸೀಸ್ ಜಸ್ಟೆನ್ ಇನ್ಫೋ…’ ಜೋರಾಗಿ ನಕ್ಕ. ಹೌದು. ಅದು ಗಹಗಹನೇ! ವಿಕಟಾಟ್ಟಹಾಸ!!
ನಿಜಕ್ಕು ದಂಗುಬಡಿದಿತ್ತು. `ಯೂ ಮೀನ್….’ ಶುರುಗೈದ ಮಾತು ಮುಂದೆ ಹೊರಳಲಿಲ್ಲ. ಅಬ್ಬಾ! ಎಂತಹ ಹಿಂಸೆ. ಸಣ್ಣಗೆ ಬೆವರತೊಡಗಿದೆ. ದೇವರೆ, ಇದೇನಿದು ಕ್ರೌರ್ಯ! ಇವನ ಉದ್ದೇಶವಾದರೂ ಏನು?
ರಮೀತ್ ಇದ್ದಕ್ಕಿದ್ದಂತೆ ಎದ್ದು ನಿಂತ. ಅವನ ಮೋರೆಯಲ್ಲೊಂದು ನಿಸ್ಸೀಮ ನಿರ್ಧಾರವಿದ್ದಂತಿತ್ತು. ಅದು ಅಚಲವೆನ್ನಿಸಿತು. ಅವನ ಗಾಜುಗಣ್ಣುಗಳಲ್ಲೂ ಅಂಥದೇ ಇನ್ನೊಂದು ಝಲಕು. ಸೆಳಕು. ನೋಡುನೋಡುತ್ತಲೇ ಕಿಸೆಯಿಂದಲೇನೋ ಎಳೆದ. ಎರಡೂ ಕೈಯಲ್ಲಿ ತಳೆದ. ಪಿಸ್ತೂಲು ಹಿಡಿದು ಗುರಿಯಿಡುವ ಪೋಸುಗೈದ. ಕೈಯೆರಡೂ ನೀಡಿಕೊಂಡು, ನನ್ನೆದುರು ಪಾಇಂಟ್ ಬ್ಲ್ಯಾಂಕಾಗಿ ಉಳಿದ. ಅಯ್ಯೋ… ನನ್ನ ಹಣೆಗೂ ಅವನ ಇಗ್ಗೈಯ ಮುಷ್ಟಿಬಂಧಕ್ಕೂ ಅಂತರವೇ ಇದ್ದಂತನಿಸಲಿಲ್ಲ. ಅದೇನು ಬರಿಗೈಯ ಭಂಗಿಯೆ? ಒಳಗಿದ್ದುದೇನು ಆಯುಧವೇ? ಅಥವಾ ನಿಜಕ್ಕು ಪಿಸ್ತೂಲೆ? ಅಯ್ಯಮ್ಮ… ದೇವರೇ… ಇದೇನಿದು? ಇವನೇನು ಕಣ್ಣೆದುರೆ ಅವತರಿಸಿದ ಸಾವೆ? ಥರಥರನೆ ನಡುಗಿದೆ. ದಳಬಳನೆ ಬೆವರಾಗಿ ಇಳಿದೆ.
ಇದ್ದಕ್ಕಿದ್ದಂತೆ ಕರೆಂಟು ಕಡಿದು ಕತ್ತಲಡರಿತು.
ಕುದುರೆ ಮೀಟಿದ್ದು ಸಣ್ಣಗೆ ಕೇಳಿಸಿತು. ಕತ್ತಲೇ ಮಿಡಿಯಿತೋ ಹೇಗೆ? ಅಲ್ಲಲ್ಲ… ಸಿಡಿದಿದ್ದೇನು? ಧಡಮ್ಮನೇನೋ ಸದ್ದಾಯಿತು… ಅಷ್ಟೆ.
ಮುಂದಿನದೇನೂ ಗೊತ್ತಾಗಲಿಲ್ಲ. ಕೇಳಿಸಲೂ ಇಲ್ಲ.
Comments are closed.