ಇಪ್ಪತ್ತು ವರ್ಷಗಳ ಅವಧಿಯಲ್ಲಿ ಒಬ್ಬ ಒಳ್ಳೆಯ ಮನುಷ್ಯ ಕೆಟ್ಟವನಂತೂ ಆಗಬಲ್ಲ!
ಗಸ್ತುಹಾಕುತ್ತಿದ್ದ ಪೊಲೀಸಿನವ ಠೀವಿಯಿಂದ ರಸ್ತೆಯಲ್ಲಿ ಹೋಗುತ್ತಿದ್ದ. ಅವನ ಈ ಗತ್ತು ತೋರ್ಪಡಿಕೆಗಾಗಿ ಇರದೆ ಸಹಜವಾಗಿತ್ತು. ಯಾಕೆಂದರೆ ಅಲ್ಲಿ ಅವನನ್ನು ನೋಡಲು ಹೆಚ್ಚು ಜನರಿರಲಿಲ್ಲ. ರಾತ್ರಿಯ ಹತ್ತು ಗಂಟೆಯಾಗಿತ್ತು. ಆದರೆ ಮಳೆಯ ಸೂಚನೆಯೊಂದಿಗೆ ವೇಗವಾಗಿ ಬೀಸುತ್ತಿದ್ದ ತಣ್ಣನೆ ಗಾಳಿಯಿಂದಾಗಿ ರಸ್ತೆ ಬಿಕೋ ಎನ್ನುತ್ತಿತ್ತು.
ಪೊಲೀಸಿನವ ಬಾಗಿಲುಗಳನ್ನು ನೋಡುತ್ತಾ, ತನ್ನ ದೊಣ್ಣೆಯನ್ನು ವಿಚಿತ್ರವಾಗಿ ಮತ್ತು ಕಲಾತ್ಮಕವಾಗಿ ಹೊರಳಿಸುತ್ತಾ, ಬರಿದಾದ ರಸ್ತೆಯಲ್ಲಿ ತನ್ನ ಪರೀಕ್ಷಕ-ದೃಷ್ಟಿಯನ್ನು ಹರಿಸುತ್ತಾ ದೊಡ್ಡ-ದೊಡ್ಡ ಹೆಜ್ಜೆಗಳನ್ನು ಹಾಕುತ್ತಿದ್ದ; ಅವನು ಶಾಂತಿಯ ಜೀವಂತ ಪ್ರತಿಮೆಯಂತೆ ತೋರುತ್ತಿದ್ದ. ಆ ಪ್ರದೇಶದಲ್ಲಿ ಬೇಗನೆ ಶೂನ್ಯ ಆವರಿಸುತ್ತಿತ್ತು. ಅಲ್ಲೊಂದು ಇಲ್ಲೊಂದು ಸಿಗಾರ್ ಅಂಗಡಿಗಳು ಅಥವಾ ರಾತ್ರಿಯಿಡೀ ತೆರೆದಿರುವ ಹೊಟೇಲ್ಗಳ ದೀಪಗಳು ಕಾಣಿಸುತ್ತಿದ್ದವು. ಉಳಿದ ಅಂಗಡಿಗಳ ಬಾಗಿಲುಗಳು ಬಹು ಬೇಗನೇ ಮುಚ್ಚುತ್ತಿದ್ದವು.
ಒಂದು ಬ್ಲಾಕಿನ ರಸ್ತೆಯನ್ನು ದಾಟಿದ ಪೊಲೀಸಿನವ ಅಕಸ್ಮಾತ್ ತನ್ನ ನಡಿಗೆಯನ್ನು ಮಂದಗೊಳಿಸಿದ. ಒಂದು ಕಬ್ಬಿಣದ ಅಂಗಡಿಯೆದುರು, ಕತ್ತಲಿನಲ್ಲಿ ಒಬ್ಬ ವ್ಯಕ್ತಿ ತನ್ನ ಬಾಯಿಯಲ್ಲಿ ಹೊತ್ತಿಸದ ಸಿಗಾರನ್ನು ಸಿಗಿಸಿಕೊಂಡು ಸ್ವಲ್ಪ ಬಾಗಿ ನಿಂತಿರುವುದನ್ನು ನೋಡಿದ. ಅವನ ಬಳಿಗೆ ಹೋದಾಗ ಆ ವ್ಯಕ್ತಿ ಹೇಳಿದ, ಸಾರ್, ವಿಶೇಷವೇನೂ ಇಲ್ಲ, ನಾನು ನನ್ನ ಸ್ನೇಹಿತನೊಬ್ಬನನ್ನು ಕಾಯುತ್ತಿದ್ದೇನೆ. ಇವತ್ತಿಗೆ ಇಪ್ಪತ್ತು ವರ್ಷಗಳ ಹಿಂದೆ ನಾವು ಇಲ್ಲಿ ಭೇಟಿಯಾಗುವುದಾಗಿ ಶಪಥ ಮಾಡಿದ್ದೆವು. ನಂತರ ಆ ವ್ಯಕ್ತಿ ಪೊಲೀಸಿಗೆ ನಂಬಿಕೆಯನ್ನುಂಟು ಮಾಡಲು ಹೇಳಿದ, ನಾನು ತಮಾಷೆ ಮಾಡ್ತಿದ್ದೀನಿ ಅಂತ ನೀವು ತಿಳಿಯಬಹುದು. ನಿಮಗೆ ನಂಬಿಕೆ ಬರಲು, ಇಪ್ಪತ್ತು ವರ್ಷಗಳ ಹಿಂದೆ ಈ ಅಂಗಡಿ ಇದ್ದ ಸ್ಥಳದಲ್ಲಿ ಬ್ರೆಡಿಯ ‘ಬಿಗ್ ಜೋ’ ರೆಸ್ಟೋರೆಂಟ್ ಇತ್ತು ಎಂಬ ವಿಷಯವನ್ನು ನಿಮ್ಮ ಗಮನಕ್ಕೆ ತರುತ್ತೇನೆ.
ಹೌದು, ಅದು ಇವತ್ತಿಗೆ ಐದು ವರ್ಷಗಳವರೆಗೂ ಇತ್ತು. ಕಡೆಗೆ ಅದನ್ನು ಕೆಡುವಲಾಯಿತು.
ಅಂಗಡಿಯೆದುರು ನಿಂತ ಆ ವ್ಯಕ್ತಿ ಬೆಂಕಿಕಡ್ಡಿ ಗೀರಿ ತನ್ನ ಸಿಗಾರನ್ನು ಹೊತ್ತಿಸಿದ. ಬೆಂಕಿಕಡ್ಡಿಯ ಬೆಳಕಿನಲ್ಲಿ ಪೊಲೀಸಿನವ ಆ ವ್ಯಕ್ತಿಯ ಅಗಲ ದವಡೆಯ ಹಳದಿ ಮುಖ, ತೀಕ್ಷ್ಣ ಕಣ್ಣುಗಳು ಮತ್ತು ಬಲ ಭುಜದ ಕೆಳಗೆ ಗಾಯದ ಒಂದು ಬಿಳಿ ಗುರುತನ್ನು ನೋಡಿದ. ಅವನ ಟೈ-ಪಿನ್ನಲ್ಲಿ ಒಂದು ದೊಡ್ಡ ವಜ್ರವನ್ನು ಪೋಣಿಸಲಾಗಿತ್ತು.
ಆ ವ್ಯಕ್ತಿ ತನ್ನ ಮಾತನ್ನು ಮುಂದುವರಿಸಿದ, “ಇಪ್ಪತ್ತು ವರ್ಷಗಳ ಹಿಂದೆ ಇದೇ ರಾತ್ರಿ ನಾನು ಬಿಗ್ ಜೋ ರೆಸ್ಟೋರೆಂಟಿನಲ್ಲಿ ಜಿಮಿ ವೇಲ್ಸ್ನೊಂದಿಗೆ ಊಟ ಮಾಡಿದ್ದೆ. ಜಿಮಿ ನನ್ನ ಮಿತ್ರನಾಗಿದ್ದು ಅವನು ಜಗತ್ತಿನ ಅತ್ಯಂತ ಒಳ್ಳೆಯ ಮನುಷ್ಯನಾಗಿದ್ದ. ನಾನು ಅವನೊಂದಿಗೆ ಇದೇ ನ್ಯೂಯಾರ್ಕಿನಲ್ಲಿ ಸಹೋದರನಂತೆ ಬೆಳೆದೆ. ಆಗ ನನ್ನ ವಯಸ್ಸು ಹದಿನೆಂಟು, ಜಿಮಿಗೆ ಇಪ್ಪತ್ತು. ಮರುದಿನವೇ ನಾನು ಹಣ ಸಂಪಾದಿಸಲು ಪಶ್ಚಿಮದೆಡೆಗೆ ಹೋಗುವವನಿದ್ದೆ. ಆದರೆ ಜಿಮಿ ನ್ಯೂಯಾರ್ಕ್ ಬಿಡಲು ಸಿದ್ಧನಿರಲಿಲ್ಲ. ಅವನ ಪ್ರಕಾರ ಜಗತ್ತಿನಲ್ಲಿ ಒಳ್ಳೆಯ ಸ್ಥಳವೆಂದರೆ ನ್ಯೂಯಾರ್ಕ್ ಆಗಿತ್ತು. ಸರಿ, ಅಂದು ರಾತ್ರಿ ನಾವಿಬ್ಬರು, ‘ಸರಿಯಾಗಿ ಇಪ್ಪತ್ತು ವರ್ಷಗಳ ನಂತರ ಇದೇ ಸ್ಥಳದಲ್ಲಿ ಎಂಥದ್ದೇ ಪರಿಸ್ಥಿತಿಯಲ್ಲೂ, ಎಷ್ಟೇ ದೂರದಲ್ಲಿದ್ದರೂ ಇಲ್ಲಿಗೆ ಬಂದು ಭೇಟಿಯಾಗೋಣ’ ಎಂದು ನಿರ್ಧರಿಸಿದೆವು. `ಇಪ್ಪತ್ತು ವರ್ಷಗಳಲ್ಲಿ ನಾವು ನಮ್ಮನಮ್ಮ ಜೀವನವನ್ನು ರೂಪಿಸಿಕೊಳ್ಳುತ್ತೀವಿ, ಅದು ಹೇಗಾದರೂ ಇರಲಿ’ ಎಂದೂ ನಿಶ್ಚಯಿದೆವು.
ಈಗ ಪೊಲೀಸಿನವ ಅವನನ್ನೇ ಗಮನಿಸುತ್ತಾ ಹೇಳಿದ, ವಿಷಯ ತುಂಬಾ ಮಜವಾಗಿದೆ, ಆದರೆ ಭೇಟಿಯ ಅವಧಿ ತುಂಬಾ ದೀರ್ಘವಾಯಿತೆಂದು ನನಗೆ ಅನ್ನಿಸುತ್ತದೆ… ನೀವು ಅಗಲಿದ ಮೇಲೆ ನಿಮಗೆ ನಿಮ್ಮನಿಮ್ಮ ಬಗ್ಗೆ ಮಾಹಿತಿ ಸಿಗಲಿಲ್ಲವೇ?
ನಮ್ಮಿಬ್ಬರಲ್ಲಿ ಕೆಲವು ದಿನಗಳವರೆಗೆ ಪತ್ರವ್ಯವಹಾರ ನಡೆಯಿತು. ಆದರೆ ಒಂದೆರೆಡು ವರ್ಷಗಳ ನಂತರ ನಮ್ಮ ಸಂಪರ್ಕ ಕಡಿದುಹೋಯಿತು. ಪಶ್ಚಿಮ ಜಗತ್ತು ತುಂಬಾ ವಿಶಾಲವಾಗಿದೆ ಎಂಬುದು ನಿಮಗೆ ತಿಳಿದಿದೆ. ನಾನು ಆ ಜಗತ್ತಿನಲ್ಲಿ ಮೈಮರೆತಿದ್ದವನು. ಆದರೆ ಜಿಮಿ ಬದುಕಿದ್ದರೆ ಅವನು ಖಂಡಿತ ನನ್ನನ್ನು ಭೇಟಿಯಾಗಲು ಬರುತ್ತಾನೆ ಎಂಬುದು ನನಗೆ ಗೊತ್ತಿದೆ. ಯಾಕೆಂದರೆ ಜಿಮಿಯಂಥ ಪ್ರಾಮಾಣಿಕ ಮತ್ತು ದೃಢ ನಿರ್ಧಾರದ ಮನುಷ್ಯ ಜಗತ್ತಿನಲ್ಲಿ ಮತ್ತೊಬ್ಬ ಇರಲಾರ. ಅವನೆಂದೂ ನಮ್ಮ ನಡುವಿನ ಷರತ್ತನ್ನು ಮರೆಯಲಾರ. ನಾನು ಇಲ್ಲಿಗೆ ಈಗ ಒಂದು ಸಾವಿರ ಮೈಲಿ ದೂರದಿಂದ ಬಂದಿದ್ದೇನೆ. ನನ್ನ ಹಳೆಯ ಸ್ನೇಹಿತ ಬಂದರೆ ನಾನು ಬಂದದ್ದು ಸಾರ್ಥಕವಾಗುತ್ತದೆ.
ಆ ವ್ಯಕ್ತಿ ಒಂದು ಸುಂದರ ಗಡಿಯಾರವನ್ನು ಹೊರತೆಗೆದ. ಅದರ ಮುಚ್ಚಳದ ಮೇಲೆ ವಜ್ರವನ್ನು ಅಳವಡಿಸಲಾಗಿತ್ತು. ಅವನು ಅದನ್ನು ನೋಡಿ ಹೇಳಿದ, ಹತ್ತು ಗಂಟೆಯಾಗಲು ಮೂರು ನಿಮಿಷಗಳಿವೆ! ನಾವು ಹತ್ತು ಗಂಟೆಗೆ ಸರಿಯಾಗಿ ಆ ರೆಸ್ಟೋರೆಂಟಿನ ದ್ವಾರದಿಂದ ಅಗಲಿದ್ದೆವು.
ಪಶ್ಚಿಮ ದೇಶದಲ್ಲಿ ನೀವು ಸಾಕಷ್ಟು ಹಣವನ್ನು ಸಂಪಾದಿಸಿದ್ದೀರ, ಅಲ್ವಾ?
ಹೌದು, ಜಿಮಿಯೂ ಸಹ ನನ್ನ ಅರ್ಧದಷ್ಟು ಹಣವನ್ನು ಖಂಡಿತ ಸಂಪಾದಿಸಿರಬಹುದು ಎಂದು ನಾನು ದೃಢವಾಗಿ ಹೇಳ್ತೀನಿ. ಅವನು ಪ್ರಾಮಾಣಿಕನಾಗಿದ್ದ, ಆದರೆ ತುಂಬಾ ಶ್ರಮಜೀವಿಯಾಗಿದ್ದ. ನಾನು ನನ್ನ ಹಣವನ್ನು ಸಂಪಾದಿಸಲು ಬುದ್ಧಿವಂತರನ್ನು ಎದುರಿಸಬೇಕಾಯಿತು. ನ್ಯೂಯಾರ್ಕ್ನಲ್ಲಿದ್ದರಂತೂ ಮನುಷ್ಯ ಮಂದವಾಗುತ್ತಾನೆ, ಪಶ್ಚಿಮಕ್ಕೆ ಹೋದಾಗ ತಡಬಡಿಸುತ್ತಾನೆ.
ಪೊಲೀಸಿನವ ತನ್ನ ದೊಣ್ಣೆಯನ್ನು ಹೊರಳಿಸಿ, ಎರಡು ಹೆಜ್ಜೆ ಮುಂದೆ ಬಂದು ಹೇಳಿದ, ನಾನು ನನ್ನ ಡ್ಯೂಟಿಗೆ ಹೋಗುತ್ತಿದ್ದೇನೆ. ನಿಮ್ಮ ಸ್ನೇಹಿತ ಸರಿಯಾದ ವೇಳೆಗೆ ಬರುತ್ತಾನೆ ಎಂದು ಅನ್ನಿಸುತ್ತದೆ. ನೀವು ಹತ್ತು ಗಂಟೆಯವರೆಗೆ ಕಾಯುತ್ತೀರಲ್ಲ?
ಇಲ್ಲ, ನಾನು ಅವನಿಗೆ ಇನ್ನೂ ಅರ್ಧ ಗಂಟೆ ಅವಕಾಶ ಕೊಡ್ತೀನಿ. ಒಂದು ವೇಳೆ ಜಿಮಿ ಬದುಕಿದ್ದರೆ, ಅಷ್ಟರಲ್ಲಿ ಬರ್ತಾನೆ. ಅಲ್ಲಿಯವರೆಗಂತೂ ನಾನು ಖಂಡಿತ ಕಾಯುವೆ.
ಸರಿ, ಗುಡ್ ನೈಟ್ ಪೊಲೀಸಿನವ ಅಂಗಡಿಗಳ ಬಾಗಿಲುಗಳನ್ನು ನೋಡುತ್ತಾ ಹೊರಟು ಹೋದ.
ಗಾಳಿಯ ರಭಸ ತೀವ್ರವಾಗಿತ್ತು. ತಣ್ಣನೆ ತುಂತುರು ಹನಿಗಳು ಬೀಳಲು ಪ್ರಾರಂಭಿಸಿತ್ತು. ಕೆಲವು ದಾರಿಹೋಕರು ತಮ್ಮತಮ್ಮ ಓವರ್ಕೋಟಿನ ಕಾಲರ್ ಎತ್ತಿಕೊಂಡು, ಜೇಬುಗಳಲ್ಲಿ ಕೈಗಳನ್ನು ತೂರಿಸಿಕೊಂಡು, ವೇಗವಾಗಿ ಹೋಗುತ್ತಿದ್ದರು. ಪ್ರಾಯದ ದಿನಗಳಲ್ಲಿ ತನ್ನ ಸ್ನೇಹಿತನಿಗೆ ಕೊಟ್ಟ ಮಾತನ್ನು ಈಡೇರಿಸಲು ಸಾವಿರ ಮೈಲುಗಳಷ್ಟು ದೂರದಿಂದ ಬಂದಿದ್ದ ಆ ವ್ಯಕ್ತಿ ಕಬ್ಬಿಣದ ಅಂಗಡಿಯೆದುರು ನಿಂತು ಸಿಗಾರ್ ಸೇದುತ್ತಾ ಅವನಿಗಾಗಿ ಕಾಯುತ್ತಿದ್ದ.
ಸುಮಾರು ಇಪ್ಪತ್ತು ನಿಮಿಷಗಳ ನಂತರ, ಗಲ್ಲಿಯ ಮತ್ತೊಂದು ತಿರುವಿನಿಂದ ಎತ್ತರದ ವ್ಯಕ್ತಿಯೊಬ್ಬ ತನ್ನ ಉದ್ದನೆಯ ಓವರ್ಕೋಟಿನ ಕಾಲರನ್ನು ಕಿವಿಗಳವರೆಗೆ ಎಳೆದುಕೊಂಡು ವೇಗವಾಗಿ ಅವನೆಡೆಗೆ ಬರುತ್ತಿರುವುದನ್ನು ಆ ವ್ಯಕ್ತಿನೋಡಿದ. ಕಡೆಗೆ ಎತ್ತರದ ವ್ಯಕ್ತಿ ನೇರವಾಗಿ ಅವನ ಬಳಿಗೆ ಬಂದ.
ತಾವು ಯಾರು? ಅವನು ಅನುಮಾನದಿಂದ ಕೇಳಿದ.
ನೀನು ಜಿಮಿ ವೇಲ್ಸ್? ಕಾಯುತ್ತಿದ್ದ ವ್ಯಕ್ತಿ ಖುಷಿಯಿಂದ ಕುಣಿದ.
ಆಗಂತುಕ ತನ್ನೆರಡೂ ಕೈಗಳಿಂದ ಅವನ ಕೈಗಳನ್ನು ಅದುಮುತ್ತಾ ಹೇಳಿದ, ವಾಹ್! ಬಾಬ್ ನೀನೇ!! ನೀನು ಬದುಕಿದ್ದರೆ ಖಂಡಿತ ಇಲ್ಲಿಗೆ ಬಂದು ನನ್ನನ್ನು ಭೇಟಿಯಾಗ್ತೀಯ ಅಂತ ನನಗೆ ದೃಢವಾದ ನಂಬಿಕೆಯಿತು. ನೀನು ಬಂದಿದ್ದು ತುಂಬಾ ಒಳ್ಳೆಯದಾಯ್ತು, ಬಾಬ್! ಇಪ್ಪತ್ತು ವರ್ಷಗಳು ಎಂದರೆ ತುಂಬಾ ದೀರ್ಘ ಅವಧಿ. ಹಳೆಯ ರೆಸ್ಟೋರೆಂಟ್ ಈಗಿಲ್ಲ. ಅದು ಇದ್ದಿದ್ದರೆ ಚೆಂದವಿತ್ತೆಂದು ನನ್ನ ಬಯಕೆಯಾಗಿತ್ತು. ಅದಿದ್ದರೆ, ಈಗ ಅಲ್ಲಿ ಮತ್ತೊಮ್ಮೆ ಊಟ ಮಾಡಬಹುದಿತ್ತು. ಸರಿ, ಪಶ್ಚಿಮ ದೇಶ ನಿನಗೆ ಹೇಗೆನ್ನಿಸಿತು, ಹೇಳು?
ನನಗೆ ತುಂಬಾ ಹಿಡಿಸಿತು! ನಾನು ಬಯಸಿದ್ದೆಲ್ಲಾ ಸಿಕ್ಕಿತು. ಆದರೆ ಜಿಮಿ, ನೀನು ತುಂಬಾ ಬದಲಾಗಿದ್ದೀಯ. ನೀನು ಎರಡು-ಮೂರಿಂಚು ಮತ್ತೂ ಉದ್ದವಾಗ್ತೀಯ ಅಂತ ನಾನಂತೂ ಯೋಚಿಸಿರಲಿಲ್ಲ.
ಹೂಂ, ಇಪ್ಪತ್ತನ್ನು ದಾಟಿದ ಮೇಲೆ ನನ್ನ ಉದ್ದ ಸ್ವಲ್ಪ ಹೆಚ್ಚಿತು.
ಸರಿ, ನೀನು ನ್ಯೂಯಾರ್ಕ್ನಲ್ಲಿ ಸುಖವಾಗಿದ್ದೀಯಲ್ಲ?
ಹೌದು. ನಾನು ಸಿಟಿ ಡಿಪಾರ್ಟ್ಮೆಂಟಿನಲ್ಲಿ ನೌಕರಿ ಮಾಡ್ತೀನಿ. ನಡಿ ಹೋಗೋಣ, ನಿನ್ನನ್ನು ಒಂದು ಒಳ್ಳೆಯ ಜಾಗಕ್ಕೆ ಕರೆದುಕೊಂಡು ಹೋಗ್ತೀನಿ. ಅಲ್ಲಿ ಕೂತು ಕಳೆದುಹೋದ ದಿನಗಳ ಬಗ್ಗೆ ಹರಟೋಣ.
ಇಬ್ಬರೂ ಪರಸ್ಪರ ಬಳಸಿಕೊಂಡು ಹೊರಟರು. ಪಶ್ಚಿಮದಿಂದ ಬಂದ ವ್ಯಕ್ತಿ ತನ್ನ ಯಶಸ್ಸಿನ ಕಥೆಯನ್ನು ಹೇಳಲು ಆರಂಭಿಸಿದ. ಓವರ್ಕೋಟ್ನಲ್ಲಿ ಮುದುಡಿಕೊಂಡ ವ್ಯಕ್ತಿ ಕುತೂಹಲದಿಂದ ಕೇಳಲಾರಂಭಿಸಿದ.
ಗಲ್ಲಿಯ ಮೂಲೆಯಲ್ಲಿ ಒಂದು ಔಷಧಿ ಅಂಗಡಿಯಿತ್ತು. ಅದು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿತ್ತು. ಇಬ್ಬರೂ ಅದರ ಬೆಳಕಿಗೆ ಬಂದಾಗ ತಮ್ಮತಮ್ಮ ಮುಖವನ್ನು ಪರಸ್ಪರ ನೋಡಿಕೊಂಡರು.
ಪಶ್ಚಿಮದಿಂದ ಬಂದ ವ್ಯಕ್ತಿ ಅಕಸ್ಮಾತ್ ನಿಂತ. ಅವನು ಇನ್ನೊಬ್ಬನ ಕೈಯನ್ನು ಬಿಟ್ಟ.
ನೀನು ಜಿಮಿ ವೇಲ್ಸ್ ಅಲ್ಲ ಅವನು ಗದರಿಸಿ ಹೇಳಿದ, ಇಪ್ಪತ್ತು ವರ್ಷಗಳ ಅವಧಿ ದೀರ್ಘ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಒಬ್ಬರ ಚೂಪು ಮೂಗು ಚಪ್ಪಟೆ ಆಗಲಾರದು.
ಎತ್ತರದ ವ್ಯಕ್ತಿ ಹೇಳಿದ, ಆದರೆ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಒಬ್ಬ ಒಳ್ಳೆಯ ಮನುಷ್ಯ ಕೆಟ್ಟವನಂತೂ ಆಗಬಲ್ಲ! ಮಿಸ್ಟರ್ ಬಾಬ್, ನೀವು ಹತ್ತು ನಿಮಿಷಗಳಿಂದ ನನ್ನ ವಶದಲ್ಲಿದ್ದೀರಿ. ನೀವು ಇಲ್ಲಿಯೇ ಎಲ್ಲೋ ಇದ್ದೀರಿ ಎಂಬುದು ಶಿಕಾಗೋ ಪೊಲೀಸರ ಅಭಿಪ್ರಾಯವಾಗಿತ್ತು. ನೀವು ಬೇಕಾಗಿದ್ದೀರಿ ಎಂದು ಅವರು ನನಗೆ ಟೆಲಿಗ್ರಾಂ ಮೂಲಕ ತಿಳಿಸಿದ್ದಾರೆ. ನೀವೀಗ ನೆಟ್ಟಗೆ ನನ್ನೊಂದಿಗೆ ಬರ್ತೀರೋ, ಇಲ್ಲವೋ? ಆದರೆ ಪೊಲೀಸ್ ಸ್ಟೇಷನ್ಗೆ ಬರುವುದಕ್ಕೂ ಮೊದಲು ಈ ಪತ್ರವನ್ನು ಓದಿ. ಇದನ್ನು ಇನ್ಸ್ಪೆಕ್ಟರ್ ಜಿಮಿ ವೇಲ್ಸ್ ಅವರು ಕೊಟ್ಟಿದ್ದಾರೆ.
‘ಬಾಬ್, ಮಾತಿನಂತೆ ನಾನು ಸರಿಯಾದ ವೇಳೆಗೆ ಆ ಸ್ಥಳಕ್ಕೆ ಬಂದಿದ್ದೆ. ನೀನು ಸಿಗಾರ್ ಹೊತ್ತಿಸಲು ಬೆಂಕಿಕಡ್ಡಿಯನ್ನು ಗೀರಿದಾಗ, ಈ ವ್ಯಕ್ತಿಯನ್ನು ಶಿಕಾಗೋ ಪೊಲೀಸರು ಹುಡುಕುತ್ತಿದ್ದಾರೆ ಎಂಬುದು ನನ್ನ ಅರಿವಿಗೆ ಬಂತು. ಆದರೆ ಯಾಕೋ, ಏನೋ ನಾನು ನಿನ್ನನ್ನು ಬಂಧಿಸದಾದೆ. ಹೀಗಾಗಿ ಬರಿಗೈಯಲ್ಲಿ ಹೊರಟು ಬಂದೆ. ಈಗ ಈ ಕೆಲಸಕ್ಕೆ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಕಳುಹಿಸುತ್ತಿದ್ದೇನೆ.’
Comments are closed.