ಇಲ್ಲಿ ತಿಳಿಸಿದ ಘಟನೆಗಳು ಕೇವಲ `ಟಿಪ್ ಆಫ್ ದಿ ಐಸ್ಬರ್ಗ್’ ಅಷ್ಟೆ!
ಕೆಲಸದ ಮೇಲಾಗಲೀ ಅಥವಾ ವಿಹಾರಕ್ಕೆ ಎಂದಾಗಲೀ ನಮ್ಮ ದೇಶ ಬಿಟ್ಟು ಹೊರದೇಶಗಳಿಗೆ ಹೋದಾಗ ನಾವು ಯಾವುದಾದರೊಂದು ರೀತಿಯಲ್ಲಿ ಪರದಾಡುವುದಂತೂ ತಪ್ಪಿದ್ದಲ್ಲ! ಈ ಪರದಾಟಗಳಿಗೆ ಮೂಲಕಾರಣಗಳೆಂದರೆ: ನಮ್ಮ ಕೆಲವು ಹುಟ್ಟುಗುಣಗಳು; ಅವರ ಅರ್ಥವಾಗದ ಭಾಷೆ ಮತ್ತು ಸಂಸ್ಕೃತಿ ಹಾಗೂ ಅಲ್ಲಿಯ `ಹೈಟೆಕ್’ ಪ್ರಪಂಚ.
ನಮ್ಮದೊಂದು ಕೆಟ್ಟ ಬುದ್ಧಿಯೆಂದರೆ, ಹೊರಗಡೆ ಡಾಲರ್ ನೋಟನ್ನು ಖರ್ಚು ಮಾಡುವಾಗ ಅದು ಎಷ್ಟು ರೂಪಾಯಿಗಳಿಗೆ ಸಮಾನ ಎಂದು ಬೆಲೆಕಟ್ಟೋದು. `ಅಯ್ಯೋ! ಒಂದು ಕಾಫಿಗೆ ನೂರ ಇಪ್ಪತ್ತು ರೂಪಾಯಿಗಳನ್ನು ತೆತ್ತಬೇಕೇ’ ಅಂತ ಉದ್ಗಾರ ತೆಗೆಯೋದು.
ನಾನು ೧೯೭ಂನೇ ಇಸವಿಯಲ್ಲಿ ನನ್ನ ಮೊದಲ ವಿದೇಶ ಪ್ರಯಾಣ ಮಾಡಿದೆ. ಆಗ ನಮ್ಮ ಸರ್ಕಾರ ನನಗೆ ದಿನಕ್ಕೆ ೧೬ ಡಾಲರ್ ಬಡ್ತಿ ಕೊಡ್ತಿತ್ತು! ಮುಂಬಯಿನಿಂದ ಏರ್ ಇಂಡಿಯಾ ವಿಮಾನದಲ್ಲಿ ಪ್ಯಾರಿಸ್ಗೆ ಹೊರಟಿದ್ದ ನನ್ನ ವಿಮಾನ ಈಜಿಪ್ಟ್ನ ಕೈರೋ ನಗರದಲ್ಲಿ ಮೊದಲು ನಿಂತಿತು. ನಾನು ಅಲ್ಲಿಯ ಏರ್ಪೋರ್ಟ್ನಲ್ಲಿ ಇಳಿದು ಶೌಚಾಲಯದ ಒಳಗೆ ಹೋಗಿ ನನ್ನ ಕೆಲಸ ಮುಗಿಸಿಕೊಂಡು ಹೊರಬರುತ್ತಿದ್ದಾಗ ಬಾಗಿಲಲ್ಲಿ ಒಬ್ಬ ರಾಕ್ಷಸಾಕಾರದ ವ್ಯಕ್ತಿ, ಈಜಿಪ್ಟಿನವನೇ, ಸಾಂಪ್ರದಾಯಕ ಕಾಸ್ಟ್ಯೂಮ್ ಅನ್ನೇ ತೊಟ್ಟಿದ್ದ, ನನ್ನನ್ನು ಅಡ್ಡ ಕಟ್ಟಿದ. “ಗಿವ್ ಮೀ ಎ ಡಾಲರ್!” ಅಂತ ಕೇಳಿದ. ನಾನು ನನ್ನ ಜೇಬಿನಲ್ಲಿದ್ದ ಮೂರೋ ನಾಲ್ಕೋ ಚಿಲ್ಲರೇ ಡಾಲರ್ ನೋಟ್ಗಳನ್ನ ಭದ್ರವಾಗಿ ಅಮುಕಿ ಹಿಡ್ಕೊಂಡಿದ್ದೆ. ಶೌಚಾಲಯದ ಬಳಕೆ ಬಿಟ್ಟಿ ಅಂತ ಗೊತ್ತಿತ್ತು. ಅದಕ್ಕೆ ನಾನು “ನೋ” ಅಂತ ಅಂದೆ. ಅವನು “ಎಸ್” ಅಂತ ಗುಡುಗಿದ. ನಾನು ಇನ್ನೊಮ್ಮೆ “ನೋ” ಅಂದೆ. ಅವನು “ಎಸ್ ಎಸ್…..” ಅಂತ ಇನ್ನೂ ಜೋರು ಧ್ವನಿಯಲ್ಲೆ ಕೂಗಿದ. ಅಷ್ಟು ಹೊತ್ತಿಗೆ ನನಗೆ ಹೆದರಿಕೆ ಆಯ್ತು. ಇವನು ನನ್ನ ಯಾವುದಾದರೂ ಪಿರಮಿಡ್ ಒಳಗೆ ಪೆಟ್ಟಿಗೇಲಿ ಮಲಗಿಸಿಬಿಟ್ಟರೆ ಗತಿ ಏನೂ ಅಂತ ಒಂದು ಡಾಲರ್ ಅವನ ಕೈಗೆ ತುರುಕಿ ಹೊರಗೆ ಓಡಿ ಬಂದೆ. ನನ್ನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಫಾರಿನ್ ಎಕ್ಸ್ ಚೈಂಜ್ ಖರ್ಚು ಮಾಡಿದ್ದು ಈ ಪುಣ್ಯಾತ್ಮನ ಮೇಲೆ, ಅದೂ ಶೌಚಾಲಯದಲ್ಲಿ! ಇಷ್ಟು ವರುಷಗಳಾದರೂ ಇನ್ನೂ ಆ ಡಾಲರ್ ನೋಟು ನನ್ನನ್ನು ಬಾಧಿಸುತ್ತಲೇ ಇದೆ.
ಮೋನಾಲಿಸಾ ಹಾಳಾಗಿಹೋಗಲಿ!
ಪ್ಯಾರಿಸ್ನಲ್ಲಿ ಒಂದು ಶನಿವಾರ ಬಿಡುವಾಗಿದ್ದಾಗ ನನ್ನ ಸ್ನೇಹಿತನಿಗೆ ಅಲ್ಲಿಯ ವಿಶ್ವವಿಖ್ಯಾತ ಲೂವ್ರ್ ಮ್ಯೂಸಿಯಮ್ಗೆ ಹೋಗೋಣ ಬಾ ಅಂತ ಕರೆದೆ. ಅವನು ಅಲ್ಲೇನಿದೆ? ಅಂತ ಕೇಳಿದ. ನಾನು ನನಗೆ ತಿಳಿದಿದ್ದಷ್ಟು ಹೇಳಿ ಹಾಗೇನೇ ಲಿಯನಾರ್ಡೋ ಡಾವಿನ್ಸಿ ಪೈಂಟ್ ಮಾಡಿರೋ ಮೋನಾಲಿಸಾನೂ ನೋಡಬಹುದು ಅಂತ ಅಂದೆ. ಅದಕ್ಕೆ ಅವನು ಯಾರು ಅವರಿಬ್ಬರು? ಅಂತ ಕೇಳಿದ. ಸರಿ, ಈ ಪ್ರಾಣಿಯ ಜೊತೆ ನಾನು ಮ್ಯೂಸಿಯಮ್ ನೋಡಿದಹಾಗೇ ಅಂತ ಅಂದ್ಕೊಂಡು, “ನೋಡು, ನಾನು ಒಬ್ಬನೇ ಒಳಗೆ ಸುತ್ತಾಡಿಕೊಂಡು ಬರ್ತೇನೆ. ನೀನು ಇಲ್ಲೇ ಉದ್ಯಾನವನದಲ್ಲಿ ಅಡ್ಡಾಡ್ತಿರು” ಅಂತ ಹೇಳಿ ನಾನು ಮ್ಯೂಸಿಯಮ್ ಹೊಕ್ಕಿದೆ. ಮೂರು ಗಂಟೆಗಳ ಕಾಲ ಆದ ಮೇಲೆ ನಾನು ಹೊರಗೆ ಬಂದು ನೋಡಿದ್ರೆ ಅವನು ಅಲ್ಲಿದ್ದ ಒಂದು ಬೆಂಚ್ ಮೇಲೆ ಸಪ್ಪೆಮುಖಹಾಕಿಕೊಂಡು ಕೂತಿದ್ದ. ಏನಾಯ್ತು ಅಂತ ಕೇಳಿದೆ.
ಒಬ್ಬಳು ಹುಡುಗಿ ಕೈನಲ್ಲಿ ಒಂದು ಕ್ಯಾಮರಾ ಹಿಡ್ಕೊಂಡು ನನ್ನ ಹತ್ತಿರ ಬಂದು “ಫೋಟೋ….. ಫೋಟೋ?” ಅಂತ ಕೇಳಿದಳು. ನಾನು “ನಹಿ, ನಹಿ ಚಲೇ ಜಾವ್!” ಅಂತ ಹೊಡ್ಕೊಂಡೆ. ಆದ್ರೂ ಅವಳು ಕ್ಲಿಕ್, ಕ್ಲಿಕ್ ಅಂತ ಫೋಟೋ ತೆಗೆದೇಬಿಟ್ಲು. ಸ್ವಲ್ಪ ಹೊತ್ತಾದಮೇಲೆ ಫೋಟೋ ಪ್ರಿಂಟ್ಗಳನ್ನೂ ತಂದು ನನ್ನ ಕೈಯಲ್ಲಿ ಇಟ್ಟಳು. ನಾನು ಥ್ಯಾಂಕ್ಸ್ ಅಂದೆ. ಅದಕ್ಕೆ ಅವಳು “ಥ್ಯಾಂಕ್ಸ್, ನೊ. ಗಿವ್ ೩ಂಂ ಫ್ರಾಂಕ್ಸ್” ಅಂದಳು. ನಾನು ಹಿಂದೀನಲ್ಲೇ ಚೆನ್ನಾಗಿ ರೇಗಿದೆ. ಓಕೆ, ೧ಂಂ ಫ್ರಾಂಕ್ಸ್ ಅಂದಳು. ಸರಿ ನಾನು ಅವಳಿಗೆ ಹಂಡ್ರೆಡ್ ಫ್ರಾಂಕ್ಸ್ ಹೋಮ ಮಾಡಿದೆ ಅಂತ ರೋದಿಸಿದ. ಸಮಾಧಾನ ಮಾಡುವುದಕ್ಕೆ ನಾನು “ಹೋಗಲಿ ಬಿಡು, ಈ ಫೋಟೋಗಳನ್ನು ನೀನು ನಿಮ್ಮ ಮನೆಗೆ ಹೋದಾಗ ತೋರಿಸಿ, ನಾನೂ ಮೋನಾಲಿಸಾ ನೋಡಿದೆ ಅಂತ ಜಂಬ ಕೊಚ್ಚಿಕೋ” ಅಂದೆ. ಅವನು “ನಿನ್ನ ಮೋನಾಲಿಸಾ ಹಾಳಾಗಿಹೋಗಲಿ! ಯಾವಳು ಅವಳೂ ಅಂತೀನಿ? ಈ ಫೋಟೋಗಳನ್ನು ನಾನು ಮನೇಲೂ ತೋರಿಸೋಹಾಗಿಲ್ಲ. ನನ್ನ ಕೈನಲ್ಲಿ ಇರೋ ಸಿಗರೇಟ್ ಎಲ್ಲಾ ಪ್ರಿಂಟ್ಗಳಲ್ಲೂ ಕಾಣುತ್ತೆ. ನಾನು ಪ್ಯಾರಿಸ್ಗೆ ಬಂದು ಸಿಗರೇಟ್ ಸೇದಿದೆ ಅಂತ ನಮ್ಮಪ್ಪನಿಗೆ ಗೊತ್ತಾದರೆ ನನ್ನ ಚಮಡ ಸುಲಿಯುತ್ತಾರೆ! ನೂರು ಫ್ರಾಂಕ್ಸ್ ಅಂದರೆ, ನಮ್ಮ ರೂಮಿನ ಎರಡು ದಿನಗಳ ಬಾಡಿಗೆ….” ಅಂತ ಇನ್ನಷ್ಟು ಗೋಳಾಡಿದ.
ಆಯುಷ್ಕರ್ಮ ಅವಾಂತರ
ಡಾಲರ್ ಉಳಿಸಿಕೊಳ್ಳೋ `ಕಂತ್ರಿ’ ಬುದ್ಧಿಯಿಂದಾಗಿ ನಾನು ಮೂರು ತಿಂಗಳುಗಳ ಕಾಲ ತಲೆ ಕ್ಷೌರ ಮಾಡಿಸಿಕೊಳ್ಳದೇ ಓಡಾಡುತ್ತಿದ್ದೆ. ತಲೆಕೂದಲು ಹುಚ್ಚುಹುಚ್ಚಾಗಿ ಬೆಳೆದು ನಿಂತಾಗ, ಮುಜುಗರ ತಡೆಯಲಾರದೆ ಆಮ್ಸ್ಟರ್ಡ್ಯಾಮ್ನಲ್ಲಿ ನಾನಿದ್ದ ಹೋಟೆಲ್ ಮ್ಯಾನೇಜರ್ ಬಳಿ ಹೋಗಿ ಇಲ್ಲೆಲ್ಲಾದರೂ ಸೆಲೂನ್ ಇದೆಯಾ? ಅಂತ ವಿಚಾರಿಸಿದೆ. ಅದಕ್ಕೆ ಅವನು, “ಅಯ್ಯೋ! ಅದಕ್ಕೆ ಯಾಕೆ ಅಲ್ಲೀ ಇಲ್ಲೀ ಹೋಗ್ತೀರಾ? ಇಲ್ಲಿಗೇ ಒಬ್ಬ ಬಾರ್ಬರ್ನ ಕರೀತೀನಿ” ಅಂತ ಒಂದು ಫೋನ್ ಹೊಡೆದ. ಸ್ವಲ್ಪ ಹೊತ್ತಿಗೆ ಒಬ್ಬ ಕೈನಲ್ಲಿ ಪೆಟ್ಟಿಗೆ ಹಿಡ್ಕೊಂಡು ಅಲ್ಲಿಗೆ ಬಂದ. ನನ್ನ ರೂಮಿನಲ್ಲೇ ಒಂದು ಪೇಪರ್ನ ನೆಲದ ಮೇಲೆ ಹರಡಿ, ಅದರ ಮೇಲೆ ಒಂದು ಕುರ್ಚಿ ಇಟ್ಟು ನನ್ನನ್ನ ರಾಜಮರ್ಯಾದೆಯಿಂದ ಅದರಲ್ಲಿ ಕೂರಿಸಿದ. ನನ್ನ ಭುಜದ ಮೇಲೆ ಒಂದು ಬಿಳೀ ಬಟ್ಟೆ ಹೊದಿಸಿದ. ನಾನು “ಕಟ್ ಇಟ್ ವೆರಿ ಶಾರ್ಟ್, ವೆರಿ ವೆರಿ ಶಾರ್ಟ್ ಓಕೇ?” ಅಂದೆ (ಇನ್ನೊಂದು ಮೂರು ತಿಂಗಳುಗಳು ಹೇರ್ ಕಟ್ ದುಡ್ಡು ಉಳಿಸುವುದಕ್ಕೆ!). ನನ್ನ ತಲೆಕೂದಲನ್ನು ಎಳೆಎಳೆಯಾಗಿ ಪರೀಕ್ಷೆಮಾಡುತ್ತಾ, “ಮೈ ಗಾಡ್! ವಾಟ್ ಎ ವಂಡರ್ ಫುಲ್ ಬ್ಯೂಟಿಫುಲ್ ಬ್ಲ್ಯಾಕ್ ಹೇರ್! ಇಟ್ ಇಸ್ ಎ ಶೇಮ್ ಟು ಕಟ್ ಸಚ್ ಲೌವ್ಲೀ ಹೇರ್” ಅಂತ ಅಂದ. ನನಗೆ ರೇಗಿತು. “ಲುಕ್, ಇಟ್ ಹ್ಯಾಪನ್ಸ್ ಟು ಬಿ ಮೈ ಹೇರ್ ಓಕೇ? ದೇರ್ ಆರ್ ಹಂಡ್ರೆಡ್ ಮಿಲಿಯನ್ ಹೆಡ್ಸ್ ಲೈಕ್ ಮೈನ್ ಇನ್ ಇಂಡಿಯಾ. ನೌ, ಸ್ಟಾರ್ಟ್ ಕಟ್ಟಿಂಗ್” ಅಂತ ಗಡುಸಾಗೇ ಹೇಳಿದೆ. ಅವನು ಲೊಚ್ ಲೊಚ್ ಅಂತ ಅಸಮಾಧಾನದ ಶಬ್ದ ಮಾಡುತ್ತಾ ಕತ್ತರಿ ತಗೊಂಡು, ಟಿಕ್ ಟಿಕ್ ಅಂತ ಅಲ್ಲೀ ಇಲ್ಲೀ ಹತ್ತು ಸಲಾನೋ ಏನೋ ಕತ್ತರಿಸಿದ ಶಾಸ್ತ್ರ ಮಾಡಿ, ನನಗೆ ಹೊದ್ದಿಸಿದ್ದ ಬಟ್ಟೆಯನ್ನು ಸರಕ್ಕನೆ ಎಳೆದು ಮಡಿಸುತ್ತಾ, “ದೇರ್ ಯೂ ಅರ್ ಸರ್! ನೈನ್ ಡಾಲರ್ಸ್ ಪ್ಲೀಸ್!” ಅಂದ. ಅವನನ್ನು ಮನಸಾ ಶಪಿಸುತ್ತಾ ದುಡ್ಡು ಕೊಟ್ಟೆ. ಅದರಲ್ಲಿ ಎರಡು ಡಾಲರ್ಗಳು ಆ ಹೋಟೆಲ್ ಮ್ಯಾನೇಜರ್ಗೆ ಹೋಯ್ತು ಅಂತ ನನ್ನ ಗುಮಾನಿ. ಇದಾದ ಮೇಲೆ ಎಷ್ಟೋ ಸಲ ನನ್ನ ಪ್ರಯಾಣಗಳಲ್ಲಿ ನಾನು `ಸೆಲ್ಫ್ ಕಟ್’ಗೂ ಪ್ರಯತ್ನಪಟ್ಟಿದ್ದೀನಿ!
ಇದೇ ರೀತಿಯ ದಿನಕ್ಕೆ `ಹದಿನಾರು ಡಾಲರ್ ಟ್ರಿಪ್’ನಲ್ಲಿ ವಾಷಿಂಗ್ಟನ್ನಲ್ಲಿ ನಾನು ಯಾವುದೋ ತಿಳಿಯದ ಜಾಗದಲ್ಲಿದ್ದ ಒಂದು ಆಫೀಸಿಗೆ ಹೋಗಬೇಕಾಗಿತ್ತು. ಅದಕ್ಕೆ ನಾನು ನನ್ನ ಹೋಟೆಲ್ನಿಂದಲೇ ಒಂದು ಟ್ಯಾಕ್ಸಿಯಲ್ಲಿ ಕೂತು ಡ್ರೈವರ್ಗೆ ಅಡ್ರೆಸ್ಸ್ ಕೊಟ್ಟೆ. `ಓಕೆ!’ ಅಂತ ಹೊರಟ. ಕಾಲು ಗಂಟೆ ಆಯ್ತು, ಅರ್ಧ ಗಂಟೆ ಆಯ್ತು, ಪುಣ್ಯಾತ್ಮ ಎಲ್ಲೋ ಹೋಗ್ತಾನೇ ಇದ್ದ. ನನ್ನ ಗಮನವೆಲ್ಲಾ, ಇನ್ನೆಲ್ಲಿ? ಅವನ ಟ್ಯಾಕ್ಸಿ ಮೀಟರ್ ಮೇಲೇ ಇತ್ತು! ಚಾರ್ಜು ಹತ್ತು ಡಾಲರ್ಸ್ಗೆ ಏರಿತ್ತು. ಕೊನೆಗೂ ಆ ಅಡ್ರೆಸ್ಸ್ ತಲಪಿದರೆ ಆ ಬಿಲ್ಡಿಂಗ್ನಲ್ಲಿ ಬೇರೆ ಯಾವುದೋ ಕಂಪೆನಿ ಇತ್ತು! (ನಾನು ನೋಡಬೇಕಾದವರು ನನ್ನ ಇಂಡಿಯಾ ಅಡ್ರೆಸ್ಸ್ಗೆ ಫ್ಯಾಕ್ಸ್ ಕಳಿಸಿದ್ದರಂತೆ. ಪ್ರಯಾಣದಲ್ಲಿದ್ದ ನನಗೆ ಅದು ಸಿಕ್ಕಿರಲಿಲ್ಲ!) ನಾನು ತಬ್ಬಿಬ್ಬಾದೆ. ಆ ಡ್ರೈವರ್ಗೆ ನನ್ನ ಪರಿಸ್ಥಿತಿ ಅರ್ಥವಾಯಿತು. `ವೈಟ್ ಎ ಮೊಮೆಂಟ್’ ಅಂತ ಅವನು ಅವನ ಕಂಪೆನಿಗೆ ಫೋನ್ ಮಾಡಿದ. ಅವರು ಎರಡೇ ನಿಮಿಷಗಳಲ್ಲಿ ಅವನಿಗೆ ಹೊಸ ಅಡ್ರೆಸ್ಸ್ ಕೊಟ್ಟರು. ಅದು ನಾವು ಬಂದ ದಿಕ್ಕಿಗೆ ತದ್ವಿರುದ್ಧವಾದ ದಿಕ್ಕಿನಲ್ಲಿ ಇರಬೇಕೇ! ಅಲ್ಲಿಗೆ ಹೋಗಿ ಸೇರಿದಾಗ ಮೀಟರ್ ಇಪ್ಪತ್ತು ಡಾಲರ್ ತೋರಿಸುತ್ತಿತ್ತು. ಬಹಳ ದುಃಖದಿಂದ ನಾನು ನನ್ನ ಪರ್ಸ್ ಹೊರಗೆ ತೆಗೆದೆ. ಅಷ್ಟರಲ್ಲಿ ಅವನು “ನೋ, ನೋ ಪೇಮೆಂಟ್ ಪ್ಲೀಸ್! ದಿಸ್ ಇಸ್ ನಾಟ್ ಯುವರ್ ಮಿಸ್ಟೇಕ್. ಮೈ ಕಂಪನಿ ಹ್ಯಾಸ್ ಗಿವನ್ ಯೂ ಎ ಫ್ರೀ ರೈಡ್” ಅಂದ! ನನಗೋ ಎಲ್ಲಿಲ್ಲದ ಆಶ್ಚರ್ಯ. ಆದರೂ ಅವನ ಕೈಗೆ ಧಾರಾಳವಾಗಿ ಹತ್ತು ಡಾಲರ್ ನೋಟ್ ಕೊಟ್ಟು ನನ್ನ ಧನ್ಯವಾದಗಳನ್ನು ಅರ್ಪಿಸಿದೆ.
ಲಾಸ್ ಏಂಜಲೀಸ್ ನೋಡುವುದಕ್ಕೆ ಒಂದು ಟೂರಿಸ್ಟ್ ಬಸ್ ಹತ್ತಿದ್ದೆ. ಡ್ರೈವರ್ ಪಕ್ಕದಲ್ಲೇ ನನ್ನ ಸೀಟ್ ಇತ್ತು. ಅವನು ಡ್ರೈವರ್ ಕಮ್ ಟೂರಿಸ್ಟ್ ಗೈಡ್. “ಎಲ್ಲಿಂದ ಬಂದಿದ್ಯಾ?” ಅಂತ ಕೇಳಿದ. ನಾನು “ಇಂಡಿಯಾ” ಅಂದೆ. “ಯಾಕೆ ಒಂದು ತರಹ ಕೂತಿದ್ದೀಯಾ? ಸರಿಯಾಗಿ ಕೂತ್ಕೋ” ಅಂದ. ನಾನು “ಇವತ್ತು ಬೆಳಗ್ಗೆಯಿಂದ ನನ್ನ ಪೃಷ್ಠದ ಮೇಲೆ ಒಂದು ದೊಡ್ಡ ಕುರು ಎದ್ದಿದೆ. ಹೇಗೆ ಕೂತರೂ ನೋಯುತ್ತಿದೆ” ಅಂದೆ. ಅವನು “ಡೋಂಟ್ ವರಿ. ಐ ವಿಲ್ ಟೇಕ್ ಕೇರ್ ಆಫ್ ಇಟ್” ಅಂದ! ಬಸ್ ಯೂನಿವರ್ಸಲ್ ಸ್ಟೂಡಿಯೋಗೆ ಹೋಗುತ್ತಿತ್ತು. ದಾರಿಯಲ್ಲಿ ಒಂದು ಡ್ರಗ್ ಸ್ಟೋರ್ ಮುಂದೆ ನಿಲ್ಲಿಸಿದ. “ಗೋ, ಗೆಟ್ ಎನ್ ಆಯಿಂಟ್ಮೆಂಟ್ ದೇರ್, ಗೋ ಟು ದಿ ರೆಸ್ಟ್ ರೂಮ್, ಅಪ್ಲೈ ಲಿಬರಲೀ, ಪುಟ್ ಎ ಸ್ಟಿಕರ್ ಬ್ಯಾಂಡೇಜ್ ಆನ್ ಇಟ್ ಎಂಡ್ ಕಮ್ ಬ್ಯಾಕ್!” ಅಂದ. ನಾನು ಹಾಗೇ ಮಾಡಿದೆ. “ಗುಡ್, ನೌ ರಿಲಾಕ್ಸ್” ಅಂತ ಬಸ್ ಹೊರಡಿಸಿದ. ಯಾಕಿವನು ಇಲ್ಲಿ ನಿಲ್ಲಿಸಿದ್ದ ಅಂತ ಮಿಕ್ಕ ಪ್ರವಾಸಿಗಳಿಗೆ ಈಗಲೇ ಅರ್ಥವಾಯಿತು. ಎಲ್ಲರೂ ಡ್ರೈವರ್ಗೆ `ಗುಡ್ ಶೋ’ ಅಂತ ಅಭಿನಂದಿಸಿದ್ರು. ನನ್ನ ಕುರು ಪ್ರಾಬ್ಲಂ ಮಂಗಮಾಯ ಆಯ್ತು.
`ದಿ ಚೈಲ್ಡ್ ಹ್ಯಾಸ್ ಗ್ರೋನ್ ಅಪ್’
ಒಮ್ಮೆ ಸೈಂಟ್ ಲೂಯಿಸ್ನಲ್ಲಿ ನನ್ನ ಸ್ನೇಹಿತರೊಬ್ಬರ ಜೊತೆಗೆ ಒಂದು ಹೋಟೆಲ್ನಲ್ಲಿ ಒಂದು ವಾರ ತಂಗಿದ್ದೆವು. ದಿನಾ ಬೆಳಗ್ಗೆ ಅಲ್ಲೇ ನಮ್ಮ ಬ್ರೇಕ್ಫಾಸ್ಟ್ ಮಾಡ್ತಿದ್ವಿ. ಪ್ರತಿ ದಿನವೂ ಒಬ್ಬ ಅಮೆರಿಕದ ಯುವತಿ ನಮಗೆ ಸರ್ವ್ ಮಾಡೋಳು. ನಾನು ತಿಂದಾದಮೇಲೆ ಯಾವಾಗಲೂ ಕಾಫಿಗೆ ಹೇಳುತ್ತಿದ್ದೆ. ನನ್ನ ಸ್ನೇಹಿತರು ಹಾಲು ಕುಡಿಯೋರು. ಆ ಹುಡುಗಿಗೆ ಇದ್ಯಾಕೋ ತಮಾಷೆಯಾಗಿ ಕಂಡಿತು. ದಿನಾನೂ ಅವರಿಗೆ ಕೆಟಲ್ನಲ್ಲಿ ಬಿಸಿ ಹಾಲು, ಕಪ್ ಸಾಸರ್ ತಂದಿಟ್ಟು “ಹಿಯರ್ ಇಸ್ ಯುವರ್ ಮಿಲ್ಕ್ ಡಿಯರ್, ಹ್ಯಾವ್ ಅ ನೈಸ್ ಡೇ ಬೇಬಿ” ಅಂತ ಚುಡಾಯಿಸುತ್ತಿದ್ದಳು. ಕೊನೆಯ ದಿನ ನಾನು ಒಂದು ಬದಲಾವಣೆ ಆಗಲಿ, ಇವತ್ತು ಕಾಫಿ ಕುಡೀರಿ ಅಂತ ಸೂಚಿಸಿದೆ. ಅವರು ಹೌದು ಹೌದು ಅಂತ ಆ ಹುಡುಗಿಗೆ `ಕಾಫಿ ಫಾರ್ ಮಿ’ ಅಂತ ಆರ್ಡರ್ ಮಾಡಿದರು. ಅವಳು ನಾಟಕೀಯವಾಗಿ ದಿಗ್ಭ್ರಮೆ ಆದವಳ ಹಾಗೆ ನಟಿಸಿ, “ಓ ಮೈ ಗಾಡ್! ದಿ ಚೈಲ್ಡ್ ಹ್ಯಾಸ್ ಗ್ರೋನ್ ಅಪ್” ಅಂತ ಚಪ್ಪಾಳೆ ತಟ್ಟಿ ಕಾಫಿ ತಂದಿಟ್ಟಳು.
ಇತ್ತೀಚೆಗೆ ಅಲಬಾಮಾದ ಮಾಂಟಿಗೋಮರಿಯಲ್ಲಿ ನಾನು ನನ್ನ ನಾಲ್ಕು ಸಹೋದ್ಯೋಗಿಗಳೊಡನೆ ಇದ್ದೆ. ಆವತ್ತು ರಾತ್ರಿ ಊಟ ಆದಮೇಲೆ ನಮ್ಮ ರೂಮಿನಲ್ಲಿ ಹರಟೆ ಕೊಚ್ಚುತ್ತಾ ಕೂತಿದ್ದೆವು. ಆಗ ಒಬ್ಬ ಮನೆಯವರ ಹತ್ತಿರ ಮಾತನಾಡಬೇಕು ಅಂತ ಫೋನ್ ಎತ್ತಿ ಇಂಡಿಯಾ ಕೋಡ್ ೯-೧೧ಗೆ ಡಯಲ್ ಮಾಡಿದ. ಯಾಕೋ ಕಾಲ್ ಹೋಗಲಿಲ್ಲ. ಅವನು ಮೊದಲು ೦ ಒತ್ತಿ ಇಂಟರ್ನ್ಯಾಶನಲ್ ಕನೆಕ್ಷನ್ನಿಗೆ ಮಾಡಿರಲಿಲ್ಲ. ಹದಿನೈದು ನಿಮಿಷವೂ ಕಳೆದಿರಲಿಲ್ಲ. ಯಾರೋ ನಮ್ಮ ರೂಮಿನ ಬಾಗಿಲನ್ನು ತಟ್ಟಿದರು. ತೆಗೆದರೆ ಹೊರಗಡೆ ಇಬ್ಬರು ಪೊಲೀಸಿನವರು! ಅದರಲ್ಲಿ ಒಬ್ಬಳು ದೈತ್ಯಾಕಾರದ ಬ್ಲ್ಯಾಕ್ ಲೇಡಿ! ಜೊತೆಗೆ ಹೋಟೆಲ್ ಮ್ಯಾನೇಜರ್ ಬೇರೆ ನಿಂತಿದ್ದ. ಅವಳು “ಎನಿ ಪ್ರಾಬ್ಲಂ ಗೈಸ್?” ಅಂತ ಕೇಳಿದ್ಲು. ನಾವು ಒಕ್ಕೊರಳಿನಲ್ಲಿ `ನೋ, ನೋ’ ಅಂತ ತೊದಲಿದೆವು. “೯-೧೧ ಇಸ್ ಎನ್ ಎಮರ್ಜೆನ್ಸೀ ನಂಬರ್. ವೈ ಡಿಡ್ ಯು ಕಾಲ್ ಆನ್ ದಟ್?” ಅಂತ ಕೇಳಿದಳು. ಪರಿಸ್ಥಿತಿ ಅರ್ಥವಾಗಿ ನನ್ನ ಸ್ನೇಹಿತ ಅವನು ಮಾಡಿದ ನಂಬರ್ ಕಥೆ ಹೇಳಿ, “ಐ ಯಾಮ್ ವೆರಿ ಸಾರಿ” ಅಂದ. ಅವರು ನಮ್ಮ ಕಥೇನ ನಂಬಿದರು ಅಂತ ಕಾಣುತ್ತೆ. “ಓಕೆ. ನೆಕ್ಸ್ಟ್ ಟೈಮ್ ಡೈಯಲ್ ಜ಼ೀರೋ ಎಂಡ್ ದೆನ್ ಯುವರ್ ಕಂಟ್ರಿ ಕೋಡ್. ಗುಡ್ ನೈಟ್!” ಅಂತ ಅಲ್ಲಿಂದ ಹೊರಟರು. ಬಾಗಿಲು ಮುಚ್ಚಿಕೊಂಡು ಹೊರಡುವುದಕ್ಕೆ ಮುಂಚೆ ಆ ಮ್ಯಾನೇಜರ್ ನಮ್ಮನ್ನೆಲ್ಲಾ ದುರುದುರು ಅಂತ ನೋಡಿ ದಿಢೀರ್ ಅಂತ ಬಾಗಿಲು ಬಡ್ಕೊಂಡು ಹೋದ!
ಸಸ್ಯಾಹಾರ ಗೋಪುರ
ಇನ್ನೊಂದು ಟ್ರಿಪ್ನಲ್ಲಿ ನಾನೂ ನನ್ನ ಸ್ನೇಹಿತರೊಬ್ಬರು ಚಿಕಾಗೋನಿಂದ ವಾಷಿಂಗ್ಟನ್ಗೆ ಹೋಗಲೇ ಬೇಕಿತ್ತು. ಯಾವುದೋ ತುರ್ತುಪರಿಸ್ಥಿಯಿಂದ ನಮ್ಮ ಫ್ಲೈಟ್ಗಳನ್ನೆಲ್ಲಾ ರದ್ದು ಮಾಡಿದ್ರು. ಆಗತಾನೆ ಕೊನೆಯ ಬಾರಿಗೆ ಹೊರಡಲಿದ್ದ ಅಮೆರಿಕನ್ ಏರ್ಲೈನ್ಸ್ ಫ್ಲೈಟ್ನಲ್ಲಿ ಸೀಟಿರಲಿಲ್ಲ. ಆದರೂ ಅವರ ಕೌಂಟರ್ಗೆ ಹೋಗಿ ಹೇಗಾದರೂ ನಮ್ಮನ್ನ ಕರೆದುಕೊಂಡು ಹೋಗಿ ಅಂತ ಬೇಡಿಕೊಂಡ್ವಿ. ಅಲ್ಲಿದ್ದ ಸಿಬ್ಬಂದಿಗೆ ನಮ್ಮ ಮೇಲೆ ಕರುಣೆ ಬಂತು ಅಂತ ಕಾಣುತ್ತದೆ. `ವೈಟ್ ಎ ಮೊಮೆಂಟ್’ ಅಂತ ಯಾರುಯಾರಿಗೋ ಫೋನ್ ಮಾಡಿ ನಮಗೆ ಎರಡು ಬೋರ್ಡಿಂಗ್ ಪಾಸ್ಗಳನ್ನು ಕೊಟ್ಟು `ಹಿಯರ್ ಯೂ ಗೋ; ಹ್ಯಾವ್ ಎ ಗುಡ್ ಫ್ಲೈಟ್’ ಅಂದ. ನಮ್ಮ ವಿಮಾನದ ಕ್ಯಾಬಿನ್ ಒಳಗೆ ಹೋದಾಗ ನಮ್ಮ ಸೀಟ್ಗಳು ಫಸ್ಟ್ಕ್ಲಾಸ್ನಲ್ಲಿ ಇದ್ದವು! ನಾನು ಗಗನ ಸಖಿಗೆ ನಾವು ಎಕಾನಮಿ ಟಿಕೆಟ್ನವರು. ಫಸ್ಟ್ಕ್ಲಾಸ್ಗೆ ದುಡ್ಡು ಕೊಟ್ಟಿಲ್ಲ ಅಂದೆ. ಅದಕ್ಕೆ ಅವಳು “ಡೋಂಟ್ ವರಿ. ಅಮೇರಿಕನ್ ಏರ್ಲೈನ್ಸ್ ಹ್ಯಾಸ್ ಪುಟ್ ಯೂ ಇನ್ ಫಸ್ಟ್ ಕ್ಲಾಸ್” ಅಂದಳು! ರಾತ್ರಿ ಡಿನ್ನರ್ ಸಮಯವಾಯಿತು. ನಮ್ಮಿಬ್ಬರನ್ನು ಬಿಟ್ಟು ಮಿಕ್ಕವರಿಗೆಲ್ಲಾ ಅವಳು ಡಿನ್ನರ್ ಪ್ಲೇಟ್ಗಳನ್ನು ತಂದಿಟ್ಟಳು. ನಾವಿಬ್ಬರು ಶಾಖಾಹಾರಿಗಳು. ಅದು ನಮ್ಮ ಟಿಕೆಟ್ ಮೇಲೂ ಬರೆದಿತ್ತು. ಸಾಧಾರಣವಾಗಿ ಶಾಖಾಹಾರ ಡಿನ್ನರ್ಗೆ ಇಪ್ಪತ್ತನಾಲ್ಕು ಗಂಟೆಗಳ ಕಾಲ ಮುಂಗಡವಾಗಿಯೇ ಬುಕ್ ಮಾಡಬೇಕಿತ್ತು. ಹಾಗಾಗಿ ನಾನು ನನ್ನ ಸ್ನೇಹಿತರಿಗೆ ಇವತ್ತು ನಮಗೆ ಉಪವಾಸ ಅಂತ ಕಾಣುತ್ತೆ ಅಂತ ಉಸುರಿದೆ. ನಮ್ಮ ಪಕ್ಕದವರೆಲ್ಲಾ ತಿಂದು ಮುಗಿಸುವ ಹೊತ್ತಿಗೆ ಅವಳು ನಮ್ಮ ಸೀಟ್ಗಳಿಗೆ ಎರಡು ಪ್ಲೇಟ್ಗಳನ್ನು ತಂದಿಟ್ಟು `ಹಿಯರ್ ಆರ್ ಯುವರ್ ವೆಜಿಟೇರಿಯನ್ ಮೀಲ್ಸ್. ಎಂಜಾಯ್’ ಅಂತ ಹೇಳಿ ಹೋದಳು! ನಾವು ಮೇಲೆ ಹೊದೆಸಿದ್ದ ನ್ಯಾಪ್ಕಿನ್ ಪಕ್ಕಕ್ಕೆ ಸರಿಸಿ ಒಳಗೇನಿದೆ ಅಂತ ನೋಡಿದ್ವಿ. ಮಧುರೈ ಮೀನಾಕ್ಷಿ ಗೋಪುರದ ಹಾಗೆ, ತಟ್ಟೇಲಿ ಬರೀ ಬೇಯಿಸಿದ ಕೆಲವು ತರಕಾರಿಗಳನ್ನು ಪೇರಿಸಿ ಇಟ್ಟಿದ್ದಳು! ಅಷ್ಟೇ, ನನ್ನ ಪಕ್ಕದಲ್ಲಿ ಕೂತಿದ್ದ ಅಮೇರಿಕನ್ ಒಬ್ಬ “ಹೇ, ಇಟ್ ಲುಕ್ಸ್ ಲೈಕ್ ಎ ವೆಜಿಟಬಲ್ ಗಾರ್ಡನ್” ಅಂದ! ನಾನು “ಎಸ್, ಎಂಡ್ ಐ ಫೀಲ್ ಲೈಕ್ ಅ ಕೌ” ಅಂತ ಅದನ್ನೇ ತಿನ್ನುವುದಕ್ಕೆ ಶುರುಮಾಡಿದೆ.
ಬ್ರಿಟನ್ನ ಬ್ರಿಗ್ಟನ್ನಲ್ಲಿ ನಾವು ಕೆಲವರು ಭಾರತದಿಂದ ಯಾವುದೋ ಕಾನ್ಫರೆನ್ಸ್ಗೆ ಅಂತ ಹೋಗಿ ಅಲ್ಲಿ ಸಮುದ್ರ ತೀರದಲ್ಲೇ ಇದ್ದ ಪ್ರಖ್ಯಾತ ಕ್ವೀನ್ಸ್ ಹೋಟೆಲ್ನಲ್ಲಿ ಇಳಿದುಕೊಂಡಿದ್ದೆವು. ಒಂದು ರಾತ್ರಿ ಸಮುದ್ರದಿಂದ ಒಂದು ಚಂಡಮಾರುತ ಬೀಸಿತು. ಗಾಳಿ ಮಳೆ ಸಿಡಿಲು ಗುಡುಗುಗಳ ರಭಸದಲ್ಲಿ ರಸ್ತೆಗಳಲ್ಲಿದ್ದ ಮರ-ಗಿಡಗಳೂ ಲೈಟ್ ಕಂಬಗಳೂ ಉರುಳುತ್ತಿದ್ದವು. ನಮ್ಮ ರೂಮಿನ ಕಿಟಕಿಗಳ ಗಾಜುಗಳು ಒಡೆದು ಬಿದ್ದವು. ವಿದ್ಯುತ್ ಬೇರೆ ಕಡಿತವಾಯಿತು. ನಮ್ಮ ಹೋಟೆಲ್ ಮ್ಯಾನೇಜರ್, ಕೈನಲ್ಲಿ ಒಂದು ಕ್ಯಾಂಡಲ್ ಹಿಡಿದುಕೊಂಡು ಎಲ್ಲರ ರೂಮುಗಳಿಗೂ ಬಂದು, “ಇದು ಎಮರ್ಜೆನ್ಸಿ. ಈಗಲೇ ನೀವೆಲ್ಲಾ ರೂಮಿನಿಂದ ಹೊರ ಬಂದು ನಮ್ಮ ಬೇಸ್ ಮೆಂಟ್ನಲ್ಲಿ ಮಲಗಿಕೊಳ್ಳಿ. ಅಲ್ಲಿ ನಿಮಗೆ ದಿಂಬು ಹೊದಿಕೆ ಕಾಫಿ ಒದಗಿಸುತ್ತೇವೆ” ಅಂತ ನಮ್ಮನ್ನೆಲ್ಲಾ ಕೆಳಗೆ ಅಟ್ಟಿದ. ಆದರೂ ಅಲ್ಲಿ ನಮಗೆ ನಿದ್ರೆ ತಾನೇ ಹೇಗೆ ಬರಬೇಕು ಹೇಳಿ? ನಡುಗುತ್ತಾ ಕೂತಿದ್ದೆವು. ತಕ್ಷಣ ಒಂದು ಭಾರಿ ಸಿಡಿಲು ಹೋಟೆಲ್ ಹತ್ತಿರವೇ ಹೊಡೆಯಿತು. ನಾವೆಲ್ಲಾ ಬೆಚ್ಚಿಬಿದ್ದೆವು. ಅಲ್ಲಿದ್ದ ಅನೇಕರು `ಓ ಗಾಡ್, ಸೇವ್ ಅಸ್’ ಅಂತ ದೇವರ ಮೊರೆಹೊಕ್ಕರು. ನಮ್ಮ ಮ್ಯಾನೇಜರ್ ಧೃತಿಗೆಡಲಿಲ್ಲ. ಅವನು ಎಲ್ಲರನ್ನೂ ಉದ್ದೇಶಿಸಿ, “ಡೋಂಟ್ ವರಿ ಫ್ರೆಂಡ್ಸ್, ಇಂಡಿಯನ್ ಗಾಡ್ ಗಣೇಶ ವಿಲ್ ಸೇವ್ ಫ್ರಮ್ ಎನಿ ಡೈಂಜರ್. ವಿ ಹ್ಯಾವ್ ಸಮ್ ಇಂಡಿಯನ್ ಗೆಸ್ಟ್ಸ್ ವಿತ್ ಅಸ್. ದೇ ಕೆನ್ ಕಮ್ಮ್ಯೂನಿಕೇಟ್ ವಿತ್ ಹಿಮ್ ಡೈರೆಕ್ಟ್ಲೀ” ಅಂದ! ಎಲ್ಲರೂ ನಕ್ಕರು. ನಾವೂನೂ, `ಸಿದ್ಧಿ ವಿನಾಯಕ, ನಮ್ಮನ್ನ ಕಾಪಾಡಪ್ಪ’ ಅಂತ ಮನಸಾರೆ ಬೇಡಿಕೊಂಡೆವು. ಗಣೇಶನಿಗೆ ನಮ್ಮ ಇಂಟರ್ನ್ಯಾಶನಲ್ ಮೊರೆ ಕೇಳಿಸ್ತೋ ಏನೋ, ಒಂದೆರಡು ಗಂಟೆಗಳಾದ ಮೇಲೆ ಅಬ್ಬರವೆಲ್ಲಾ ಕಮ್ಮಿ ಆಯಿತು!
ಕಳೆದು ಹೋದ ಹೆಂಡತಿ
ವಿದೇಶ ಪ್ರವಾಸದಲ್ಲಿ ಯಾವಾಗಲಾದರೂ ನಿಮ್ಮ ಹೆಂಡತಿ ಕಳೆದುಹೋಗಿ ನೀವು ತಾಪತ್ರಯದಲ್ಲಿ ಸಿಕ್ಕಿ ಹಾಕಿಕೊಂಡಿದ್ರಾ? ನಮ್ಮ ಸ್ನೇಹಿತರಿಗೆ ಇದೂ ಆಯ್ತು! ಬೆಂಗಳೂರಿನಿಂದ ಹಾಂಗ್ಕಾಂಗ್ಗೆ ಬಂದಿದ್ದ ಸುಮಾರು ಇಪ್ಪತ್ತೈದು ಜನರಿದ್ದ ನಮ್ಮ ಗುಂಪನ್ನು ಅಲ್ಲಿಯ ಗೈಡ್ ನಮ್ಮನ್ನು ಡಿಸ್ನೀ ಲ್ಯಾಂಡ್ಗೆ ಕರೆದುಕೊಂಡುಹೋದ. ಬೆಳಗ್ಗೇನೆ ನಮ್ಮನ್ನು ಅಲ್ಲಿ ಬಿಟ್ಟು ಸಂಜೆ, “ಆರು ಗಂಟೆಗೆ ಒಂದು ಜಾಗದಲ್ಲಿ ನಮ್ಮ ಬಸ್ ನಿಂತಿರುತ್ತೆ. ಅಲ್ಲಿಗೆ ನೀವು ತಪ್ಪದೇ ಸಮಯಕ್ಕೆ ಸರಿಯಾಗಿ ಬನ್ನಿ. ಹುಷಾರು! ಇಲ್ಲಿ ಜನ ಜಾಸ್ತಿ. ನೀವು ಒಮ್ಮೊಮ್ಮೆ ಕಳೆದುಹೋಗಬಹುದು. ಅದಕ್ಕೆ ನಿಮಗೆಲ್ಲರಿಗೂ ಈ ಬಣ್ಣದ ಟೋಪಿ ಕೊಟ್ಟಿರುತ್ತೀನಿ. ತಪ್ಪದೇ ಈ ಟೋಪೀನ ನೀವು ಯಾವಾಗಲೂ ಹಾಕಿಕೊಂಡಿರಿ. ಕಳೆದುಹೋದರೆ ದೂರದಿಂದಲೇ ನಿಮ್ಮ ತಲೇನಾದರೂ ಕಾಣುತ್ತೆ. ಹುಡುಕುವವರಿಗೆ ಅನುಕೂಲ ಆಗುತ್ತೆ” ಅಂತ ಮಕ್ಕಳಿಗೆ ಹೇಳುವ ಹಾಗೆ ಹೇಳಿ ಹೋದ. ಸರಿ ಸಂಜೆ ಆಗಿ ಇನ್ನೇನು ಹೊರಡುವ ಸಮಯ ಬಂತು. ನಮ್ಮ ಜೊತೆಯಲ್ಲಿದ್ದ ವೃದ್ಧರೊಬ್ಬರು ನನ್ನ ಹತ್ತಿರ ಏದುಸಿರುಬಿಡುತ್ತಾ ಬಂದು ನನ್ನ ಹೆಂಡತಿ ಎಲ್ಲೂ ಕಾಣಿಸ್ತಿಲ್ಲಾ ಅಂದರು! ನಾನೂ ಗಾಬರಿ ಆದೆ. ನೀವು ಈ ಬೆಂಚ್ ಮೇಲೆ ಇಲ್ಲೇ ಕೂತಿರಿ. ಆಮೇಲೆ ನಿಮ್ಮನ್ನೂ ನಾವು ಹುಡುಕಬೇಕಾಗುತ್ತೆ. ನಾನು ಒಂದು ಸುತ್ತು ಹಾಕಿ ನಿಮ್ಮ ಹೆಂಡತಿಯನ್ನು ಪತ್ತೆ ಹಚ್ಚುತ್ತೇನೆ ಅಂತ ಹುಡುಕಾಟಕ್ಕೆ ಹೊರಟೆ. ಪುಣ್ಯಾತ್ಗಿತ್ತಿ, ಎಲ್ಲೂ ನನ್ನ ಕಣ್ಣಿಗೇ ಬೀಳಲಿಲ್ಲ! ಅಲ್ಲೇ ಇದ್ದ ಒಂದು ಸೆಕ್ಯೂರಿಟಿ ಆಫೀಸ್ಗೆ ಹೋಗಿ ಆ ಮುದುಕರ ಮೊಬೈಲ್ನಲ್ಲಿ ಇದ್ದ ಆಕೆ ಫೋಟೋನೂ ಕೊಟ್ಟು ದಯವಿಟ್ಟು ಇದನ್ನು ನಿಮ್ಮ ಸೆಕ್ಯೂರಿಟಿಯವರಿಗೆಲ್ಲಾ ಟೀವಿಯಲ್ಲಿ ತಿಳಿಸಿ ಪತ್ತೆಹಚ್ಚೋಕೆ ಹೇಳಿ ಅಂದೆ. ಅವರೂ ಅದೂ ಮಾಡಿದ್ರು. ನಾನೂ ಅಷ್ಟು ಹೊತ್ತಿಗೆ ಸುಸ್ತಾಗಿ ಬಳಲಿದ್ದೆ. ಈಗ ಏನು ಮಾಡಲಿ ಅಂತ ಯೋಚಿಸ್ತಿದ್ದೆ. ತಕ್ಷಣ ದೂರದಲ್ಲಿ ನಮ್ಮ ಕಲರ್ ಟೋಪಿ ಗುಂಪೊಂದು ಕಾಣಿಸಿತು. ಅಲ್ಲಿಗೆ ಓಡಿ ಹೋಗಿ ಆಕೇನಾ ಎಲ್ಲಾದರೂ ಕಂಡಿದ್ರಾ ಅಂತ ಕೇಳಿದೆ. ಅದರಲ್ಲಿ ಒಬ್ಬರು, ಯಾರು? ಆಕೇನೇ? ಇಲ್ಲೇ ಇದಾರಲ್ಲಾ! ಅಂತ ಅವರ ಜೊತೆಗಿದ್ದ ಆ ಹೆಂಗಸನ್ನ ತೋರಿಸಬೇಕೇ! ಸರಿ, ನಾನು ಆ ವೃಧ್ದರ ಹತ್ತಿರ ಓಡಿ ಹೋಗಿ ಅವರನ್ನ ಎಳೆದುಕೊಂಡು ಬಂದೆ. ಅವರು ನಿಟ್ಟುಸಿರು ಬಿಡುತ್ತಾ, “ಎಲ್ಲಿ ಹೊರಟುಹೋದೆ? ನಿನ್ನನ್ನು ಹುಡುಕಿ ಹುಡುಕಿ ಸಾಕಾಗಿ, ಪಾಪ, ಇವರಿಗೂ ತೊಂದರೆ ಕೊಟ್ಟೆ” ಅಂತ ರೇಗಿದರು. ಆಕೆ “ನಿಮಗೆ ಬೇರೇ ಕೆಲಸ ಇಲ್ಲ. ನನ್ನನ್ನ ಯಾಕೆ ಹುಡುಕುವುದಕ್ಕೆ ಹೋದ್ರಿ? ಈ ಗುಂಪಿನಲ್ಲೇ ಇದ್ದೆ” ಅಂತ ಜಗಳಕ್ಕೇ ನಿಂತರು. ಪಾಪ, ಆತ “ಅಲ್ಲಾ, ನೀನು ಯಾಕೆ ಅವರು ಕೊಟ್ಟ ಆ ಬಣ್ಣದ ಟೋಪಿ ಹಾಕಿಕೊಂಡಿಲ್ಲ? ಅದಕ್ಕೇ ನಾನು ಹೀಗೆ ಹುಡುಕಿದ್ದು” ಅಂತ ಸಮರ್ಥಿಸಿಕೊಂಡರು. ಆಕೆ “ಸರಿ, ಅವರು ಕೊಟ್ಟರು ಅಂತ ನಾನು ಆ ಬಣ್ಣದ ಟೋಪಿ ಹಾಕ್ಕೊಳ್ಳೋಕ್ಕೆ ಆಗುತ್ತೇನ್ರಿ? ನನಗೆ ನಾಚಿಕೆ ಗೀಚಿಕೆ ಇಲ್ಲವೇನೂ? ನೀವೂ ಸರೀನೇ” ಅಂತ ಬಯ್ದು, ಗಂಡನ ಕಡೆಗೆ ತಿರುಗಿಯೂ ನೋಡದೆ ಆ ಗುಂಪಿನ ಜೊತೆಗೆ ಹೊರಟೇ ಹೋದ್ರು! ನಾನು ಆಗಿದ್ದು ಆಯ್ತು, ಬನ್ನಿ ಸರ್, ಹೋಗೋಣ ಅಂತ ಅಲ್ಲಿದ್ದ ಒಂದು ಸ್ನ್ಯಾಕ್ ಬಾರ್ನಲ್ಲಿ ಅವರಿಗೆ ಜ್ಯೂಸ್ ಬೇರೆ ಕುಡಿಸಿ ನಿಧಾನವಾಗಿ ಹೊರಗೆ ಕರೆದುಕೊಂಡು ಬಂದು ಬಸ್ ಹತ್ತಿಸಿದೆ. ನಿಮಗೆ ಬಹಳ ಥ್ಯಾಂಕ್ಸ್. ತುಂಬಾ ತೊಂದರೆ ಕೊಟ್ಟೆ. ಬೆಂಗಳೂರು ತಲಪಿದಮೇಲೆ ನನ್ನ ಕ್ಲಬ್ನಲ್ಲಿ ನಿಮಗೆ ಒಂದು ಡಿನ್ನರ್ ಹೋಸ್ಟ್ ಮಾಡುತ್ತೀನಿ ಅಂತ ಬೇರೆ ಆಶ್ವಾಸನೆ ಕೊಟ್ಟರು. ಆದರೆ ಬೆಂಗಳೂರು ತಲಪಿದ ಮೇಲೆ ಅವರ ಆಮಂತ್ರಣವೇನೂ ನನಗೆ ಬರಲಿಲ್ಲ. ಅದಕ್ಕೂ ಅವರ ಹೆಂಡತಿ ಹತ್ತಿರ ಬಯ್ಯಿಸಿಕೊಂಡ್ರು ಅಂತ ನನಗೆ ಅನುಮಾನ.
ಬೆಂಗಳೂರು ಮಂದಿ!
ಇನ್ನೊಂದು ಸಲ ಒಂದು ಗುಂಪಿನೊಡನೆ ಶ್ರೀಲಂಕಾ ಪ್ರವಾಸ ಮಾಡ್ತಿದ್ದೆವು. ದಿನಾ ಬೆಳಗ್ಗೆ ನಾವು ಇಳಿದುಕೊಂಡಿದ್ದ ಹೋಟೆಲ್ನಲ್ಲೇ ಬ್ರೇಕ್ ಫಾಸ್ಟ್ ಮುಗಿಸಿ ಅವತ್ತಿನ ಸುತ್ತಾಟಕ್ಕೆ ಬಸ್ನಲ್ಲಿ ಹೊರಟು ರಾತ್ರಿ ಇನ್ನೊಂದು ಜಾಗಕ್ಕೆ ಸೇರಿ ಅಲ್ಲಿ ಬೇರೊಂದು ಹೋಟೆಲ್ನಲ್ಲಿ ಇಳಿದುಕೊಳ್ಳುವುದು ನಮ್ಮ ದಿನಚರಿ ಆಗಿತ್ತು. ಮಧ್ಯಾಹ್ನದ ಊಟ ಎಲ್ಲಾದರೂ ದಾರಿಯಲ್ಲೇ ಆಗುತ್ತಿತ್ತು. ನಮ್ಮ ಬಸ್ನಲ್ಲಿ ಬೆಳಗ್ಗೆ ಹೋಟೆಲ್ನಿಂದ ಹೊರಟ ತಕ್ಷಣ ಒಬ್ಬಾಕೆ ಒಂದು ದೊಡ್ಡ ಬ್ಯಾಗ್ನಿಂದ ಒಂದು ಐದು ಲಿಟರ್ ಎಲೆಕ್ಟ್ರಿಕ್ ಕುಕ್ಕರ್ ಹೊರಗೆ ತೆಗೆಯುತ್ತಿದ್ದರು. ಒಳಗೆ ಬಿಸಿಬಿಸಿಯಾದ ಉಪ್ಪಿಟ್ಟೋ ಅವಲಕ್ಕೀನೋ ತಿಂಡಿ ಇರೋದು; ಜೊತೆಗೆ ಅನ್ನ ಎಲ್ಲಾ ಇರೋದು. ಅದೇ ಬ್ಯಾಗ್ನಿಂದ ಉಪ್ಪಿನಕಾಯಿ, ಆ ಗೊಜ್ಜು ಈ ಗೊಜ್ಜು ಅಂತ ಬಾಟಲ್ಗಳೂ ಹೊರಕ್ಕೆ ಬರೋವು. ಕೊನೇಗೆ ಒಂದು ಚಿಕ್ಕ ತಟ್ಟೇನೂ ಪ್ರತ್ಯಕ್ಷವಾಗುತ್ತಿತ್ತು. ಸೀಟ್ನಲ್ಲಿ ಕೂತುಕೊಂಡೇ ಅಚ್ಚುಕಟ್ಟಾಗಿ ತಿಂಡಿ ತಿನ್ನೋರು. ಮಧ್ಯಾಹ್ನ ಹೀಗೇನೇ ಅವರ ಊಟದ ಸಮಾರಾಧನೆಯೂ ನಡೆಯುತ್ತಿತ್ತು. ಆಕೆ ಬಹಳ ಮಡಿವಂತರಂತೆ. ಹೊರಗಡೆ ತಯಾರಾದ ಯಾವ ಆಹಾರವನ್ನೂ ತಿನ್ನೋಲ್ವಂತೆ. ಅದಕ್ಕೆ ಬೇಕಾದ ಅಡುಗೆಸಾಮಗ್ರಿಗಳನ್ನು ಬೆಂಗಳೂರಿನಿಂದಲೇ ತಂದು, ರಾತ್ರಿ (ಹೋಟೆಲ್ನವರಿಗೆ ಸುಳಿವು ಸಿಕ್ಕದ ಹಾಗೆ) ತಮ್ಮದೇ ಆಹಾರ ತಯಾರಿ ಮಾಡುತ್ತಿದ್ದರಂತೆ. ನಾವು ಅವರ ಭಂಡತನವನ್ನ ಬಹಳ ಮೆಚ್ಚಿಕೊಂಡಿದ್ದೆವು. ಇಂತಹ ಕೆಲಸವನ್ನು ನಮ್ಮ ಬೆಂಗಳೂರು ಮಂದಿ ಅಲ್ಲದೆ ಪ್ರಪಂಚದಲ್ಲಿ ಬೇರೆ ಯಾರು ತಾನೇ ಮಾಡ್ತಾರೆ ಹೇಳಿ?
ಗೊಜ್ಜು, ಉಪ್ಪಿನಕಾಯಿ ಅಂದೆ ಅಲ್ಲವೆ? ಇವುಗಳ ರುಚಿ ನಾವು ಯಾವ ದೇಶದಲ್ಲೇ ಇರಲಿ ಅದು ನಮ್ಮ ನಾಲಿಗೆಯನ್ನು ಬಿಟ್ಟುಹೋಗಲು ಸಾಧ್ಯವೇ? ಅದರ ಚಪಲ ಎಲ್ಲಿದ್ದರೂ ಕಾಡುತ್ತದೆ. ನಮ್ಮ ಒಂದು ಚೀನಾ ಪ್ರವಾಸದಲ್ಲಿ ನಮ್ಮ ಗೈಡ್ ಮಧ್ಯಾಹ್ನದ ವೇಳೆ ಒಳ್ಳೆಯ ಚೈನೀಸ್ ರೆಸ್ಟೋರೆಂಟ್ಗೆ ಕರೆದುಕೊಂಡು ಹೋಗಿ ವೆಜಿಟೇರಿಯನ್ ಲಂಚ್ ಆರ್ಡರ್ ಮಾಡ್ತಿದ್ದ. ಅಲ್ಲಿ ನಮ್ಮನ್ನೆಲ್ಲ ಬಹಳ ಆದರದಿಂದ ಸ್ವಾಗತಿಸಿ ಮ್ಯಾನೇಜರ್, ವೈಟ್ರೆಸ್ಗಳು ಒಂದು ವೃತ್ತಾಕಾರದ ತಿರುಗುವ ಡೈನಿಂಗ್ ಟೇಬಲ್ ಸುತ್ತಲೂ ಕೂರಿಸಿ, ಚೀನಾ ಟೀ, ಹತ್ತು ಹನ್ನೆರಡು ಬಗೆಯ ತರಕಾರಿಗಳು, ಸೂಪ್, ಬೇಕಾದಷ್ಟು ಅನ್ನ ಎಲ್ಲವನ್ನೂ ಮೇಲಿಂದ ಮೇಲೆ ತಂದು ಉಪಚಾರ ಮಾಡುತ್ತಿದ್ದರು. ಇಂತಹ ರಸದೂಟದಲ್ಲೂ ನಮ್ಮಲ್ಲಿ ಕೆಲವರಿಗೆ ಗೊಜ್ಜು, ಉಪ್ಪಿನಕಾಯಿ ನೆನಪು ಬರಬೇಕೆ? ಸರಿ ಮೆಲ್ಲಗೆ ತಮ್ಮ ಪರ್ಸ್ಗಳಿಂದ ಚಿಕ್ಕ ಚಿಕ್ಕ ಬಾಟಲ್ಗಳನ್ನು ಹೊರಗೆ ತೆಗೆಯೋರು. ಬಾಟಲ್ಗಳು ಒಬ್ಬರ ಕೈನಿಂದ ಇನ್ನೊಬ್ಬರಿಗೆ ಟೇಬಲ್ ಸುತ್ತಲೂ ಓಡಾಡುತ್ತಿದ್ದವು. ಎಲ್ಲರೂ ಕೈನಲ್ಲೇ ಅನ್ನದ ಜೊತೆ ಕಲಸಿಕೊಂಡು ಬಾಯಿ ಚಪ್ಪರಿಸಿದ್ದೂ ಚಪ್ಪರಿಸಿದ್ದೇ! ಈ ದೃಶ್ಯವನ್ನು ಅಲ್ಲಿಯ ಮ್ಯಾನೇಜರ್, ವೈಟ್ರೆಸ್ಗಳು ನಿಬ್ಬೆರಗಾಗಿ ನೋಡುತ್ತಿದ್ದರು. ಹೊರಗಿನಿಂದ ತರುವ ಆಹಾರವನ್ನು ಅಂತಹ ಕಡೆ ಸೇವಿಸುವುದು ಒಳ್ಳೆಯ ಲಕ್ಷಣವಲ್ಲ. ಆದರೂ ನಮ್ಮ ಬೆಂಗಳೂರು ಬುದ್ಧಿಯನ್ನು ನಾವು ಮರೆಯುವುದಕ್ಕೆ ಆಗುತ್ಯೆ?
ನಾನು ತಿಳಿಸಿದ ಘಟನೆಗಳು ಕೇವಲ ಟಿಪ್ ಆಫ್ ದಿ ಐಸ್ಬರ್ಗ್ ಅಷ್ಟೆ! ಏನೇ ಆಗಲಿ, ನಾನು ಪರದೇಶಕ್ಕೆ ಹೊರಡುವವರಿಗೆ ಗುಟ್ಟಿನಲ್ಲಿ ಒಂದು ಸೂಚನೆ ಕೊಡಬಯಸುತ್ತೇನೆ. ಅದೇನು ಅಂದರೆ, ಪರದೇಶಗಳಲ್ಲಿ ಅನ್ಯಥಾ ನಿಮ್ಮನ್ನು ಬದಲಾಯಿಸಿಕೊಳ್ಳಲು ಹೋಗಬೇಡಿ. ಅದರಿಂದ ನಿಮಗೆ ಅನವಶ್ಯ ಟೆನ್ಶನ್ ಆಗುತ್ತದೆ. ನೀವು ನಿಮ್ಮ ತರಹಾನೆ ಇದ್ದರೆ, ಅಲ್ಲಿಯ ದೇಶದವರೇ ನಿಮ್ಮೊಂದಿಗೆ ಹೇಗೋ `ಅಡ್ಜಸ್ಟ್’ ಮಾಡಿಕೊಳ್ತಾರೆ!